ಸಮಾಜಕಾರ್ಯಕರ್ತರು ಸಮುದಾಯಗಳ ರಚನೆ, ಕ್ರಿಯಾಶೀಲತೆ, ಸಮುದಾಯದ ವೈಲಕ್ಷಣಗಳು, ಸಮುದಾಯದ ಪ್ರಕಾರಗಳನ್ನು ತಿಳಿದುಕೊಂಡ ನಂತರ ಸಮುದಾಯಗಳಲ್ಲಿರುವ ಸಮಸ್ಯೆಗಳ ಬಗ್ಗೆಯೂ ಸ್ವಲ್ಪಮಟ್ಟಿಗೆ ತಿಳಿಯುವುದು ಒಳಿತು. ಇಲ್ಲಿ ಪಟ್ಟಿ ಮಾಡಿದ ಸಮಸ್ಯೆಗಳು ಎಲ್ಲಾ ಸಮುದಾಯಗಳಲ್ಲಿ ಇರುತ್ತವೆ ಎಂದು ಹೇಳಲಾಗುವುದಿಲ್ಲ. ಆದರೆ ಅಂತಹ ಸಮಸ್ಯೆಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ಇದ್ದರೆ, ಸಮಾಜಕಾರ್ಯಕರ್ತರು ತಾವು ಕೆಲಸ ಮಾಡುವ ಸಮುದಾಯಗಳಲ್ಲಿ ಸಮಸ್ಯೆ ಎದುರಾದಾಗ, ವಿಚಲಿತಗೊಳ್ಳದೆ, ತಮ್ಮ ಕಾರ್ಯವೈಖರಿಯನ್ನು ರೂಪಿಸಿಕೊಳ್ಳಲು ಸಹಾಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ, ನಗರ ಮತ್ತು ಬುಡಕಟ್ಟು ಸಮುದಾಯಗಳ ಕೆಲವು ಆಯಾ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸಲಾಗಿದೆ.
1 Comment
ಸಮುದಾಯ ಎಂದರೆ ಒಂದು ಜನಸಮೂಹ. ಅವರು ಒಂದು ಭೌಗೋಲಿಕ ಪ್ರದೇಶದಲ್ಲಿ ಒಕ್ಕಟ್ಟಾಗಿ ಜೀವಿಸುತ್ತಾರೆ. ಆ ಸಮುದಾಯದ ಎಲ್ಲಾ ಸದಸ್ಯರಿಗೆ ಅನ್ವಯವಾಗುವಂತೆ, ತಮ್ಮದೇ ಆದ ಸಂಸ್ಕೃತಿ ಮತ್ತು ಆಚಾರ-ವಿಚಾರಗಳನ್ನು ಹೊಂದಿದವರಾಗಿರುತ್ತಾರೆ. ಅವುಗಳಿಗೆ ತಕ್ಕಂತೆ ಹಲವಾರು ಪದ್ಧತಿಗಳನ್ನು ಸೃಷ್ಟಿಸಿಕೊಂಡು, ಮೌಲ್ಯಗಳನ್ನು ರೂಢಿಸಿಕೊಂಡು, ಇತರರಿಗಿಂತ ಭಿನ್ನವಾದ ಒಂದು ಜೀವನಪದ್ಧತಿಯನ್ನು ರೂಪಿಸಿಕೊಂಡಿರುತ್ತಾರೆ. ಅವರು ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವಲ್ಲಿ ಒಗ್ಗಟ್ಟನ್ನು ಪ್ರದರ್ಶಿಸುತ್ತಾರೆ. ತಮ್ಮ ಸಾಮೂಹಿಕ ಜೀವನಕ್ಕೆ ಒತ್ತುಕೊಟ್ಟು ಒಂದು ಶಾಶ್ವತತೆ-ಸ್ಥಿರತೆಯನ್ನು ಸ್ಥಾಪಿಸಿಕೊಂಡಿರುತ್ತಾರೆ. ತಮ್ಮ ಜನರ ಮೇಲೆ ಪ್ರತ್ಯಕ್ಷ-ಪರೋಕ್ಷ ನಿಯಂತ್ರಣವನ್ನು ಸಾಧಿಸಿಕೊಂಡಿರುತ್ತಾರೆ. ತಾವೆಲ್ಲಾ ಒಂದೇ ಗುಂಪಿನ, ಒಂದೇ ಜನಾಂಗದ ಸದಸ್ಯರು ಎಂಬ ಭಾವನಾತ್ಮಕ ಸಂಬಂಧವನ್ನು ಅಭಿವೃದ್ಧಿಪಡಿಸಿಕೊಂಡಿರುತ್ತಾರೆ. ಈ ಎಲ್ಲಾ ಅಂಶಗಳನ್ನು ಒಳಗೊಂಡಂತೆ ಒಂದು ರಾಚನಿಕ ವ್ಯವಸ್ಥೆಯನ್ನು ತಮ್ಮದನ್ನಾಗಿಸಿಕೊಂಡಿರುತ್ತಾರೆ. ಇದು ಒಂದು ಸಮುದಾಯದ ಪರಿಕಲ್ಪನೆ.
ಸಮಾಜಶಾಸ್ತ್ರದಲ್ಲಿ ಪ್ರಸ್ತಾಪವಾಗುವ ಅನೇಕ ಮೂಲ ಕಲ್ಪನೆಗಳಲ್ಲಿ ಸಮುದಾಯವೂ ಒಂದು. ಸಮಾಜಶಾಸ್ತ್ರಜ್ಞರು, ಮಾನವಶಾಸ್ತ್ರಜ್ಞರು, ಅರ್ಥಶಾಸ್ತ್ರಜ್ಞರು, ಸಮಾಜಕಾರ್ಯಕರ್ತರು, ರಾಜಕಾರಣಿಗಳು, ಯೋಜಕರು, ಯೋಜನೆಗಳ ಅನುಷ್ಟಾನ ನಿಪುಣರು, ಹೀಗೆ ಹಲವು ಹತ್ತು ಜನ ಸಮುದಾಯವೆಂಬ ಶಬ್ದವನ್ನು ಉಪಯೋಗಿಸುತ್ತಾರೆ. ಹಾಗಾಗಿ ಒಂದೊಂದು ಗುಂಪಿನವರೂ ಸಮುದಾಯ ಶಬ್ದಕ್ಕೆ ಒಂದೊಂದು ಅರ್ಥವನ್ನು ಕಲ್ಪಿಸುತ್ತಾರೆ. ನಾವಿಲ್ಲಿ ಸಮುದಾಯ ಸಂಘಟನೆಯ ಹಿನ್ನೆಲೆಯಲ್ಲಿ ಸಮುದಾಯ ಶಬ್ದವನ್ನು ಅರ್ಥಮಾಡಿಕೊಳ್ಳಬೇಕಾಗಿದೆ.
|
|