ಸಮುದಾಯ ಎಂದರೆ ಒಂದು ಜನಸಮೂಹ. ಅವರು ಒಂದು ಭೌಗೋಲಿಕ ಪ್ರದೇಶದಲ್ಲಿ ಒಕ್ಕಟ್ಟಾಗಿ ಜೀವಿಸುತ್ತಾರೆ. ಆ ಸಮುದಾಯದ ಎಲ್ಲಾ ಸದಸ್ಯರಿಗೆ ಅನ್ವಯವಾಗುವಂತೆ, ತಮ್ಮದೇ ಆದ ಸಂಸ್ಕೃತಿ ಮತ್ತು ಆಚಾರ-ವಿಚಾರಗಳನ್ನು ಹೊಂದಿದವರಾಗಿರುತ್ತಾರೆ. ಅವುಗಳಿಗೆ ತಕ್ಕಂತೆ ಹಲವಾರು ಪದ್ಧತಿಗಳನ್ನು ಸೃಷ್ಟಿಸಿಕೊಂಡು, ಮೌಲ್ಯಗಳನ್ನು ರೂಢಿಸಿಕೊಂಡು, ಇತರರಿಗಿಂತ ಭಿನ್ನವಾದ ಒಂದು ಜೀವನಪದ್ಧತಿಯನ್ನು ರೂಪಿಸಿಕೊಂಡಿರುತ್ತಾರೆ. ಅವರು ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವಲ್ಲಿ ಒಗ್ಗಟ್ಟನ್ನು ಪ್ರದರ್ಶಿಸುತ್ತಾರೆ. ತಮ್ಮ ಸಾಮೂಹಿಕ ಜೀವನಕ್ಕೆ ಒತ್ತುಕೊಟ್ಟು ಒಂದು ಶಾಶ್ವತತೆ-ಸ್ಥಿರತೆಯನ್ನು ಸ್ಥಾಪಿಸಿಕೊಂಡಿರುತ್ತಾರೆ. ತಮ್ಮ ಜನರ ಮೇಲೆ ಪ್ರತ್ಯಕ್ಷ-ಪರೋಕ್ಷ ನಿಯಂತ್ರಣವನ್ನು ಸಾಧಿಸಿಕೊಂಡಿರುತ್ತಾರೆ. ತಾವೆಲ್ಲಾ ಒಂದೇ ಗುಂಪಿನ, ಒಂದೇ ಜನಾಂಗದ ಸದಸ್ಯರು ಎಂಬ ಭಾವನಾತ್ಮಕ ಸಂಬಂಧವನ್ನು ಅಭಿವೃದ್ಧಿಪಡಿಸಿಕೊಂಡಿರುತ್ತಾರೆ. ಈ ಎಲ್ಲಾ ಅಂಶಗಳನ್ನು ಒಳಗೊಂಡಂತೆ ಒಂದು ರಾಚನಿಕ ವ್ಯವಸ್ಥೆಯನ್ನು ತಮ್ಮದನ್ನಾಗಿಸಿಕೊಂಡಿರುತ್ತಾರೆ. ಇದು ಒಂದು ಸಮುದಾಯದ ಪರಿಕಲ್ಪನೆ. ಇಂತಹ ಸಮುದಾಯದ ಪರಿಕಲ್ಪನೆಯ ಹಿನ್ನೆಲೆಯಲ್ಲಿ ಭೌಗೋಲಿಕ, ಕ್ರಿಯಾತ್ಮಕ, ಭಾವನಾತ್ಮಕ, ಜನಾಂಗೀಯ ಅಂಶಗಳನ್ನು ಆಧರಿಸಿ ಸಮುದಾಯದಲ್ಲಿ ಅನೇಕ ಪ್ರಕಾರಗಳನ್ನು ಗುರುತಿಸಬಹುದಾಗಿದೆ.
ಪ್ರೊ. ಮುರ್ರೇ ಜಿ. ರೋಸ್ ಅವರು ಇಂತಹ ಎರಡು ಪ್ರಕಾರದ ಸಮುದಾಯಗಳನ್ನು ಗುರುತಿಸಿದ್ದಾರೆ. ಮೊದಲನೆಯದು ಭೌಗೋಲಿಕ ಸಮುದಾಯ. ಇಲ್ಲಿ ಸದಸ್ಯರು ಒಂದು ನಿಗದಿತ ಭೌಗೋಲಿಕ ಪ್ರದೇಶದಲ್ಲಿ ವಾಸಮಾಡುತ್ತಾರೆ. ಅದಕ್ಕೆ ಗ್ರಾಮ, ಪಟ್ಟಣ, ನಗರ, ನೆರೆಹೊರೆ, ಜಿಲ್ಲೆ, ರಾಜ್ಯ, ದೇಶ, ಪ್ರಪಂಚ, ಈ ಘಟಕಗಳ ಉದಾಹರಣೆಯನ್ನು ಕೊಡುತ್ತಾರೆ. ಈ ಎಲ್ಲಾ ಘಟಕಗಳು ಒಂದಲ್ಲ ಒಂದು ಭೌಗೋಲಿಕ ವ್ಯಾಪ್ತಿಗೆ ಸಂಬಂಧಪಟ್ಟಿವೆ. ಕೆಲವು ವ್ಯಾಪ್ತಿಯಲ್ಲಿ ಚಿಕ್ಕವು, ಇನ್ನು ಕೆಲವು ವ್ಯಾಪ್ತಿಯಲ್ಲಿ ದೊಡ್ಡವು. ಭಾರತೀಯ ಸಮಾಜವನ್ನು ದೃಷ್ಟಿಯಲ್ಲಿಟ್ಟುಕೊಂಡು ಹೇಳುವುದಾದರೆ ಹಳ್ಳಿ, ಊರು, ಹಳ್ಳಿಗೊಂಚಲು, ಫಿರ್ಕಾ, ತಾಲೂಕು, ಇತ್ಯಾದಿ ಘಟಕಗಳನ್ನೂ ಈ ಪಟ್ಟಿಗೆ ಸೇರಿಸಬಹುದು. ಈ ಹಿಂದೆ ನಾವು ನೋಡಿದ ಹಾಗೆ ಸಮಯ-ಸಂದರ್ಭಕ್ಕೆ ತಕ್ಕಂತೆ ಸಮುದಾಯದ ಅರ್ಥವ್ಯಾಪ್ತಿ ಬದಲಾಗುತ್ತಾ ಹೋಗುತ್ತದೆ. ಸಾಮಾನ್ಯ ಅರ್ಥದಲ್ಲಿ ಒಂದು ಹಳ್ಳಿ, ಗ್ರಾಮ, ಊರು, ಚಿಕ್ಕ ಪಟ್ಟಣ ಮುಂತಾದುವುಗಳನ್ನು ಸಮುದಾಯ ಎಂದು ಕರೆಯುವುದು ವಾಡಿಕೆ. ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸುವಾಗ ಒಂದೇ ತರಹದ ಹಳ್ಳಿಗಳನ್ನು ಕೂಡಿಸಿ ಹಳ್ಳಿಗೊಂಚಲು, ವಲಯ, ಫಿರ್ಕಾಗಳೆಂದು ಕರೆದು, ಅವುಗಳನ್ನು ಒಂದು ಸಮುದಾಯ-ಒಂದು ಘಟಕ ಎಂದು ಗುರುತಿಸಿ, ಅಲ್ಲಿನ ಸಮಸ್ಯೆಗಳಿಗೆ ತಕ್ಕಂತೆ, ಯೋಜನೆಗಳನ್ನು ರೂಪಿಸುವುದೂ ಒಂದು ಪದ್ಧತಿ. ಇದೇ ತತ್ವವನ್ನು ಇನ್ನೂ ದೊಡ್ಡ ಘಟಕಗಳಾದ ಜಿಲ್ಲೆ, ರಾಜ್ಯ, ಅಂತರಾಜ್ಯ ಹಾಗೂ ದೇಶಕ್ಕೂ ಅನ್ವಯಿಸುವುದುಂಟು. ಇಡೀ ವಿಶ್ವದ ಸಮಸ್ಯೆಗಳನ್ನು ಚರ್ಚಿಸುವಾಗ, ಯೋಚಿಸುವಾಗ ವಿಶ್ವ ಸಮುದಾಯ ಎಂದು ಪ್ರಸ್ಥಾಪಿಸುವುದುಂಟು. ಹೀಗೆ ಸಮುದಾಯದ ಭೌಗೋಲಿಕ ವ್ಯಾಪ್ತಿಯನ್ನು ಆಧಾರವಾಗಿಟ್ಟುಕೊಂಡು ಸಮುದಾಯಗಳನ್ನು ಗುರುತಿಸುತ್ತಾರೆ. ಪ್ರೊ. ರೋಸ್ ಗುರುತಿಸುವ ಇನ್ನೊಂದು ಸಮುದಾಯದ ಪ್ರಕಾರವೆಂದರೆ ಕ್ರಿಯಾತ್ಮಕ ಸಮುದಾಯಗಳು. ಸಮುದಾಯದ ಸದಸ್ಯರು ತಮ್ಮ ಸಾಮಾನ್ಯ ಅಭಿರುಚಿ, ವೃತ್ತಿ, ಉದ್ದೇಶ, ಒಟ್ಟುಗೂಡುವ ಪ್ರವೃತ್ತಿ ಮುಂತಾದ ಅಂಶಗಳ ಆಧಾರದ ಮೇಲೆ ಜನರು ಒಟ್ಟುಗೂಡಿ ಜೀವಿಸುತ್ತಾರೆ, ಇಲ್ಲವೇ ಒಟ್ಟು ಗೂಡಿ ಕೆಲಸ ಮಾಡುತ್ತಾರೆ. ಇಂತಹ ಸಮುದಾಯಗಳು ಕ್ರಿಯಾತ್ಮಕ ಸಮುದಾಯಗಳು. ಕೃಷಿ, ಶಿಕ್ಷಣ, ಧರ್ಮ, ವಯಸ್ಕರ ಶಿಕ್ಷಣ, ಮನರಂಜನೆ, ವಸತಿ ಇನ್ನೂ ಮುಂತಾದ ಕ್ಷೇತ್ರಗಳ ಉದಾಹರಣೆಯನ್ನು ಅವರು ಕೊಡುತ್ತಾರೆ. ಇಲ್ಲಿ ಸಮುದಾಯದ ಸದಸ್ಯರನ್ನು ಭೌಗೋಲಿಕ ವ್ಯಾಪ್ತಿಯಲ್ಲಿ ಬರುವ ಜನರನ್ನು ಹೆಚ್ಚಾಗಿ ಗಮನಿಸದೆ ಅವರು ಮಾಡುವ ಕೆಲಸ, ಅವರ ಪ್ರವೃತ್ತಿ, ಅವರ ಒಟ್ಟುಗೂಡುವಿಕೆಯ ಉದ್ದೇಶ, ಇಂತಹ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳುತ್ತಾರೆ. ಕೃಷಿ ಮಾಡುವ ರೈತರು ಇದಕ್ಕೆ ಒಂದು ಉದಾಹರಣೆ. ಈ ರೈತರು ಒಂದೇ ಭೌಗೋಲಿಕ ಸಮುದಾಯಕ್ಕೆ ಸೇರಿರಬಹುದು, ಇಲ್ಲವೆ ವಿಭಿನ್ನ ಭೌಗೋಲಿಕ ಸಮುದಾಯಗಳಿಗೆ ಸೇರಿರಬಹುದು. (ಹಳ್ಳಿಗಳನ್ನು, ಗ್ರಾಮಗಳನ್ನು, ಊರುಗಳನ್ನು ಇತ್ಯಾದಿ ಪ್ರತಿನಿಧಿಸುತ್ತಿರಬಹುದು.) ಹಾಗಾಗಿ ನಾವು ಅಭಿವೃದ್ಧಿಯ ಬಗ್ಗೆ ಮಾತನಾಡುವಾಗ, ರೈತರ ಬಗ್ಗೆ ಚರ್ಚಿಸುವಾಗ, ಆ ರೈತರು ಯಾವೆಲ್ಲಾ ಭೌಗೋಲಿಕ ಸಮುದಾಯಗಳ ವ್ಯಾಪ್ತಿಗೆ ಸೇರಿದ್ದಾರೆ ಎಂದು ಸ್ಪಷ್ಟ ಪಡಿಸುವುದು ಅವಶ್ಯವಾಗುತ್ತದೆ. ಹಾಗಾದಾಗ ಮಾತ್ರ ಅಭಿವೃದ್ಧಿ ಯೋಜನೆಗಳು ಅರ್ಹ ಸಮುದಾಯಗಳಿಗೆ, ಅರ್ಹ ಫಲಾನುಭವಿಗಳಿಗೆ ಅನ್ವಯವಾಗುತ್ತವೆ. ಪ್ರೊ. ರೋಸ್ ಅವರು ಕ್ರಿಯಾತ್ಮಕ ಸಮುದಾಯಗಳ ಬಗ್ಗೆ ಮಾತನಾಡುವಾಗ, ಕಿಬುಟ್ಸ್ ಬಗ್ಗೆ ಹೇಳುತ್ತಾರೆ. ಕಿಬುಟ್ಸ್ ಅಂದರೆ ಇಸ್ರೇಲಿನ ಸಮುದಾಯಿಕ ವ್ಯವಸಾಯ ಕೇಂದ್ರ ವ್ಯವಸ್ಥೆ. ಈ ಸಮುದಾಯಗಳಲ್ಲಿ ಸಮುದಾಯಿಕ ಸದಸ್ಯರು ಒಟ್ಟುಗೂಡಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾರೆ. ಉತ್ಪಾದನೆ-ಆದಾಯಗಳನ್ನು ಸಮನಾಗಿ ಹಂಚಿಕೊಳ್ಳುತ್ತಾರೆ. ಅದರಂತೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಸಮುದಾಯಗಳನ್ನು ಅವರು ಉದಾಹರಿಸುತ್ತಾರೆ.1 ಅದರಂತೆಯೇ ಪ್ರೊ. ಆರ್ಥರ್ ಡನ್ಹ್ಯಾಮ್ ಅವರು ವಿವಿಧ ಅಂಶಗಳನ್ನು ಆಧಾರವಾಗಿಟ್ಟುಕೊಂಡು ಸಮುದಾಯಗಳನ್ನು ಸ್ತೂಲವಾಗಿ ನಾಲ್ಕು ವಿಭಾಗಗಳಲ್ಲಿ ವಿಂಗಡಿಸುತ್ತಾರೆ.
ಜಾತಿ-ಪಂಥ-ಧರ್ಮಗಳ ಆಧಾರದ ಮೇಲೆ ರೂಪಗೊಂಡ ಸಮುದಾಯಗಳು:- ನಮಗೆಲ್ಲಾ ತಿಳಿದಿರುವಂತೆ ಭಾರತೀಯ ಸಮಾಜ ಜಾತಿ-ಪಂಥ-ಜನಾಂಗ-ಧರ್ಮಗಳ ಆಧಾರದ ಮೇಲೆ ವಿಭಜನೆಗೊಂಡಿದೆ. ಒಂದು ಅಂದಾಜಿನ ಪ್ರಕಾರ ಭಾರತದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಜನಾಂಗೀಯ ಸಮುದಾಯಗಳಿವೆ. ವ್ಯಕ್ತಿಗಳ ಗುಣ ಮತ್ತು ಅವರು ಮಾಡುವ ಕರ್ಮಗಳ ಆಧಾರದ ಮೇಲೆ ಸ್ಥೂಲವಾಗಿ ನಾಲ್ಕು ಪ್ರಮುಖ ಗುಂಪುಗಳನ್ನು ಗುರುತಿಸಿದರೂ, ಆ ಪ್ರಕ್ರಿಯೆ ಅಲ್ಲಿಗೆ ನಿಲ್ಲದೆ, ನೂರಾರು ಜಾತಿಗಳಾಗಿ-ಜನಾಂಗಗಳಾಗಿ-ಪಂಥಗಳಾಗಿ ರೂಪಗೊಂಡಿವೆ. ಸಮುದಾಯದಲ್ಲಿ ನೋಡುವ ಎಲ್ಲಾ ಲಕ್ಷಣಗಳು ಈ ಜಾತಿ-ಪಂಥಗಳಲ್ಲಿ ಕಾಣಸಿಗುತ್ತವೆ. ಹಾಗಾಗಿ ಈ ಜಾತಿ-ಜನಾಂಗ-ಪಂಥಗಳು ಸಮುದಾಯಗಳೆಂದೇ ಕರೆಯಲ್ಪಡುತ್ತಿವೆ. ಇಂತಹ ಸಮುದಾಯದ ಸದಸ್ಯತ್ವ ವ್ಯಕ್ತಿಗಳಿಗೆ ಅವರ ಹುಟ್ಟಿನಿಂದಲೇ ಬರುತ್ತದೆ. ಮದುವೆ, ಮುಂಜಿ, ಇತ್ಯಾದಿ ಕಾರ್ಯಕ್ರಮಗಳು, ಹಬ್ಬ-ಹುಣ್ಣಿಮೆ, ತೇರು-ಜಾತ್ರೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳನ್ನು ತಮ್ಮ ತಮ್ಮ ಸಮುದಾಯಗಳಲ್ಲೇ ಮಾಡಿಕೊಳ್ಳುವುದು ಹೆಚ್ಚು. ಹಾಗಾಗಿ ತಾಯಿ-ತಂದೆ, ಗಂಡ-ಹೆಂಡತಿ, ಅಣ್ಣ-ತಮ್ಮ, ಅಕ್ಕ-ತಂಗಿ, ಅತ್ತೆ-ಮಾವ, ಹಿರಿಯ-ಗೆಳೆಯ, ಬಂಧು-ಬಳಗ ಮುಂತಾದ ಸಂಬಂಧಗಳು ಆಯಾ ಸಮುದಾಯಕ್ಕೇ ಸೀಮಿತಗೊಂಡಿರುತ್ತವೆ. ತಮ್ಮ ತಮ್ಮ ಸಮುದಾಯಕ್ಕೆ ಗುರುಗಳನ್ನು ಆಯ್ಕೆ ಮಾಡಿಕೊಂಡಿರುತ್ತಾರೆ. ಶಿಕ್ಷಣ ಸಂಸ್ಥೆಗಳನ್ನು, ಸೇವಾ ಸಂಸ್ಥೆಗಳನ್ನು, ಅನುದಾನ ಸಂಸ್ಥೆಗಳನ್ನು, ವಿದ್ಯಾರ್ಥಿ ನಿಲಯಗಳನ್ನು, ಆಸ್ಪತ್ರೆಗಳನ್ನು ಇನ್ನೂ ಮುಂತಾದ ಸಂಘ-ಸಂಸ್ಥೆಗಳನ್ನು ಸ್ಥಾಪಿಸಿಕೊಂಡು, ತಮ್ಮ ಸಮುದಾಯದ ಸದಸ್ಯರ ಪ್ರಗತಿಗೆ ಶ್ರಮಿಸುತ್ತಾರೆ. ಪರಿಣಾಮವಾಗಿ ಆಯಾ ಸಮುದಾಯಗಳ ಸದಸ್ಯರು ತಮ್ಮ ಶಿಕ್ಷಣ, ಕೆಲಸ (ಶೈಕ್ಷಣಿಕ, ಆರ್ಥಿಕ) ಮತ್ತು ಸಾಮಾಜಿಕ, ಸಾಂಸ್ಕೃತಿಕ ಅವಶ್ಯಕತೆಗಳಿಗೆ ತಮ್ಮ ಸಮುದಾಯವನ್ನು ಹೆಚ್ಚು ಅವಲಂಬಿಸುವಂತಾಗಿದೆ. ಈ ಪ್ರಕ್ರಿಯೆಯಲ್ಲಿ ಸಮುದಾಯ ಮತ್ತು ಸದಸ್ಯರು ಪರಸ್ಪರ ಅವಲಂಬಿಸಿರುತ್ತಾರೆ. ಅಂತಹ ಸಮುದಾಯದ ಸದಸ್ಯರು ಚಿಕ್ಕವರಿದ್ದಾಗ ತಮ್ಮ ಸಮುದಾಯದವರು ನಡೆಸುವ ಶಿಕ್ಷಣ ಸಂಸ್ಥೆಗಳಲ್ಲಿ ಓದುತ್ತಾರೆ. ವಸತಿ ನಿಲಯಗಳಲ್ಲಿ ಆಶ್ರಯ ಪಡೆಯುತ್ತಾರೆ. ಶಿಷ್ಯವೇತನಗಳನ್ನು ಸ್ವೀಕರಿಸುತ್ತಾರೆ. ಆನಂತರ ತಾವು ದುಡಿಯುವಾಗ ಅಂಥಹ ಸಂಸ್ಥೆಗಳನ್ನು ಮುನ್ನಡೆಸುತ್ತಾರೆ, ಇಲ್ಲವೇ ಮುನ್ನಡೆಸಲು ಸಹಾಯ ಮಾಡುತ್ತಾರೆ, ದೇಣಿಗೆ ಕೊಡುತ್ತಾರೆ. ಹೀಗೆ ಅವರು ಪರಸ್ಪರ ಅವಲಂಬಿತರಾಗುವುದರ ಜೊತೆಗೆ, ಪರಸ್ಪರ ನಿಯಂತ್ರಿತರೂ ಆಗಿರುತ್ತಾರೆ. ಭಾರತೀಯ ಸಂದರ್ಭದಲ್ಲಿ ಎಲ್ಲಾ ಜಾತಿ-ಜನಾಂಗಗಳಲ್ಲಿ ಇಂತಹ ವಾತಾವರಣ ಇರದಿದ್ದರೂ, ಹೆಚ್ಚಿನ ಸಮುದಾಯಗಳಲ್ಲಿ ಇದನ್ನು ನೋಡಬಹುದಾಗಿದೆ. ಈ ತತ್ತ್ವ ಮತ್ತು ಪ್ರಕ್ರಿಯೆಗಳು ಎಲ್ಲಾ ಧರ್ಮದವರಿಗೂ ಅನ್ವಯವಾಗುತ್ತದೆ. ಹಿಂದೂ, ಮುಸಲ್ಮಾನ, ಕ್ರೈಸ್ತ, ಬೌದ್ಧ, ಸಿಖ್, ಪಾರ್ಸಿ ಮುಂತಾದ ಧರ್ಮಾವಲಂಬಿಗಳು ಭಾರತ ದೇಶದಲ್ಲಿದ್ದು ಅವುಗಳನ್ನು ಬೇರೆ ಬೇರೆ ಸಮುದಾಯಗಳೆಂದು ಗುರುತಿಸಲಾಗುತ್ತಿದೆ. ಈ ಸಮುದಾಯಗಳವರು ತಮ್ಮದೇ ಆದ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಸಂಸ್ಥೆಗಳನ್ನು ಕಟ್ಟಿಕೊಂಡು ನಡೆಸುತ್ತಿದ್ದಾರೆ. ತಮ್ಮದೇ ಆದ ಸಂಪನ್ಮೂಲಗಳ ಮುಖಾಂತರ ಹಣ ಸಂಗ್ರಹಿಸಿ, ಅದನ್ನು ಅನುದಾನ, ಶಿಷ್ಯವೇತನ, ವಸತಿ ನಿಲಯ ಮುಂತಾದವುಗಳ ಮೂಲಕ ತಮ್ಮ ಸಮುದಾಯದ ಸದಸ್ಯರ ಹಿತವನ್ನು ಕಾಪಾಡುವಲ್ಲಿ ಶ್ರಮಿಸುತ್ತಿದ್ದಾರೆ. ಭಾರತೀಯ ಸಂದರ್ಭದಲ್ಲಿ ಸಮುದಾಯ ಪರಿಕಲ್ಪನೆಯನ್ನು ಅರ್ಥ ಮಾಡಿಕೊಳ್ಳಲು ಇವು ಉತ್ತಮ ಉದಾಹರಣೆಗಳಾಗಿವೆ. ಸಮಾಜಕಾರ್ಯಕರ್ತನು ಯಾವ ಧರ್ಮವನ್ನೂ ಬೆಂಬಲಿಸಬಾರದು. ಎಲ್ಲಾ ಧರ್ಮಗಳ ಸದಸ್ಯರನ್ನೂ ಸಮಾನವಾಗಿ ಕಾಣಬೇಕು. ಸರ್ವಧರ್ಮ ಸಮಾನತೆ ಅವನ ಮನೋಭೂಮಿಕೆಯಾಗಬೇಕು. ಆದರೆ ಭಾರತೀಯ ಸಮಾಜದ ಈ ಪರಿಸ್ಥಿತಿಯ ಅರಿವು ಅವನಿಗಿರಬೇಕು. ಭೌಗೋಲಿಕ ಮತ್ತು ಕ್ರಿಯಾತ್ಮಕ ಸಮುದಾಯಗಳು ಭೌಗೋಲಿಕ ಸಮುದಾಯಗಳು ಒಂದು ಭೂಪ್ರದೇಶದ ಆಧಾರದ ಮೇಲೆ ನಿರ್ಧಾರಿತ ಆದವುಗಳು. ಒಂದು ಜಾಗ, ಒಂದು ಪ್ರದೇಶ, ಒಂದು ವಲಯ, ಒಂದು ಭೌಗೋಲಿಕ ವ್ಯಾಪ್ತಿಗೆ ಒಳಪಟ್ಟು ಸಮುದಾಯಗಳನ್ನು ಇದರ ವ್ಯಾಪ್ತಿಗೆ ಸೇರಿಸಬಹುದಾಗಿದೆ. ಒಂದು ಹಳ್ಳಿ, ಗ್ರಾಮ, ಊರು, ಹಳ್ಳಿಗೊಂಚಲು, ಗ್ರಾಮಪಂಚಾಯಿತಿ, ಫಿರ್ಕಾ, ತಾಲೂಕು, ಜಿಲ್ಲಾ, ರಾಜ್ಯ, ದೇಶ, ಪ್ರಪಂಚ, ವಲಯ, ಪಟ್ಟಣ, ನಗರ, ಮಹಾನಗರ ಇಂತಹವುಗಳನ್ನು ಭೌಗೋಲಿಕ ಸಮುದಾಯಗಳಿಗೆ ಉದಾಹರಿಸಬಹುದಾಗಿದೆ. ಕ್ರಿಯಾತ್ಮಕ ಸಮುದಾಯಗಳು ಮತ್ತೊಂದು ಬಗೆಯವು. ಧರ್ಮ, ಜಾತಿ, ಜನಾಂಗ, ಭೌಗೋಲಿಕ ಪ್ರದೇಶ ಇಂತಹ ಅಂಶಗಳನ್ನು ಹೊರತುಪಡಿಸಿ, ಅವರು ಮಾಡುವ ವೃತ್ತಿ, ಕೆಲಸ ಮತ್ತು ಅಭಿರುಚಿಯ ಆಧಾರದ ಮೇಲೆ ರಚನೆಗೊಂಡ ಸಮುದಾಯಗಳು. ಕೃಷಿ, ತೋಟಗಾರಿಕೆ, ಕೂಲಿ ಕೆಲಸ, ಕೈಗಾರಿಕೆಗಳಲ್ಲಿ ಕೆಲಸ, ವ್ಯಾಪಾರ, ಬ್ಯಾಂಕಿಂಗ್ ಕೆಲಸ, ಶಿಕ್ಷಣ, ವಕೀಲವೃತ್ತಿ, ಕ್ಷೌರಿಕ ವೃತ್ತಿ, ಕಮ್ಮಾರ, ಕುಂಬಾರ, ಕ್ರಿಕೆಟ್, ಚೆಸ್, ಕಲೆ, ಹೀಗೆ ಹಲವು ಹತ್ತು ವೃತ್ತಿಗಳಲ್ಲಿ, ಕೆಲಸಗಳಲ್ಲಿ, ಅಭಿರುಚಿಗಳಲ್ಲಿ ತೊಡಗಿರುವವರ ಗುಂಪುಗಳು ಕ್ರಿಯಾತ್ಮಕ ಸಮುದಾಯಗಳು, ರೈತರು, ಉದ್ಯೋಗಿಗಳು, ವ್ಯಾಪಾರಸ್ಥರು, ಶಿಕ್ಷಕರು, ವಕೀಲರು, ಕ್ಷೌರಿಕರು, ಕಮ್ಮಾರರು, ಕುಂಬಾರರು ವಿವಿಧ ಆಟಗಾರರು, ಕಲಾವಿದರು ಮುಂತಾದ ಗುಂಪಿಗೆ ಸೇರಿದವರು ಕ್ರಿಯಾತ್ಮಕವಾಗಿ ಬೇರೆ ಬೇರೆಯಾಗಿ ಜೀವಿಸುತ್ತಾರೆ. ತಮ್ಮದೇ ಆದ ವೃತ್ತಿ, ಪ್ರವೃತ್ತಿ, ಅಭಿರುಚಿಗಳನ್ನು ಹೊಂದಿದವರಾಗಿರುತ್ತಾರೆ. ಇವು ಕ್ರಿಯಾತ್ಮಕ ಸಮುದಾಯಗಳು. ಇವರು ತಮ್ಮ ವೃತ್ತಿ, ಪ್ರವೃತ್ತಿ, ಅಭಿರುಚಿಗಳಿಗೆ ಅನುಸಾರವಾಗಿ ತಮ್ಮ ಸಮುದಾಯಗಳ ಅಭಿವೃದ್ಧಿಗಾಗಿ ಸಂಸ್ಥೆಗಳನ್ನು ಕಟ್ಟಿಕೊಂಡು, ಪೋಷಿಸುತ್ತಾರೆ. ಅಂತಹ ಸಂಸ್ಥೆಗಳಿಂದ ಸಹಾಯ ಪಡೆಯುತ್ತಾರೆ. ರೈತ ಸಂಘ, ಶಿಕ್ಷಕರ ಸಂಘ, ವಕೀಲರ ಸಂಘ, ಕ್ರಿಕೆಟ್ ಆಟಗಾರರ ಸಂಘ, ಮೇದಾರರ ಸಂಘ, ಕುಂಬಾರರ ಸಂಘ, ಸಮಾಜಕಾರ್ಯಕರ್ತರ ಸಂಘ ಮುಂತಾದವುಗಳನ್ನು ಇದಕ್ಕೆ ಉದಾಹರಿಸಬಹುದು.3 ಗ್ರಾಮೀಣ, ನಗರ ಹಾಗೂ ಆದಿವಾಸಿ ಸಮುದಾಯಗಳು ಗ್ರಾಮ ಸಮುದಾಯ ಭಾರತೀಯ ಸಮಾಜದ ಆಧಾರ ಸ್ತಂಭಗಳು ಗ್ರಾಮ ಸಮುದಾಯಗಳು. ಒಂದು ಅಂದಾಜಿನ ಪ್ರಕಾರ ಇಡೀ ದೇಶದಲ್ಲಿ ಐದು ಲಕ್ಷಕ್ಕೂ ಹೆಚ್ಚು ಗ್ರಾಮಗಳಿವೆ. ಈ ಹಿನ್ನೆಲೆಯಲ್ಲಿಯೇ ಇಡೀ ಭಾರತದ ಅಭ್ಯುದಯ ನಮ್ಮ ಗ್ರಾಮಗಳನ್ನು ಅವಲಂಬಿಸಿದೆ ಎಂದು ಮಹಾತ್ಮಾಗಾಂಧೀಜಿ ಹೇಳಿದ್ದು. ಪ್ರತಿಯೊಂದು ಗ್ರಾಮ ಸಮುದಾಯಕ್ಕೆ ತನ್ನದೇ ಆದ ಒಂದು ಚಾರಿತ್ರಿಕ ಹಿನ್ನಲೆ ಇರುತ್ತದೆ. ಗ್ರಾಮ ಸಮುದಾಯ ಒಂದು ಸೀಮಿತ ಭೂಪ್ರದೇಶದಲ್ಲಿ ವ್ಯಾಪಿಸಿಕೊಂಡಿರುತ್ತದೆ. ಕುಟುಂಬಗಳು ಹಾಗೂ ಜನಸಂಖ್ಯೆ ಕಡಿಮೆಯಿರುತ್ತದೆ. ಅಂತಹ ಸಮುದಾಯದ ಸದಸ್ಯರು ಒಂದು ಸಾಮಾನ್ಯ ಆಸಕ್ತಿ (ಕೃಷಿ ಇಲ್ಲವೇ ಕೃಷಿ ಆಧಾರಿತ)ಯನ್ನು ಹಾಗೂ ಜೀವನ ಮಾರ್ಗಗಳನ್ನು ಹೊಂದಿರುತ್ತಾರೆ. ಅವರ ಜೀವನ ಕೃತ್ರಿಮತೆಯಿಂದ ಕೂಡಿರದೆ, ತುಂಬಾ ಸರಳವಾಗಿರುತ್ತದೆ. ಎ. ಡಬ್ಲ್ಯೂ. ಗ್ಲೀನ್ ಅವರ ಪ್ರಕಾರ, ``ಸೀಮಿತ ಭೂಮಿತಿಯೊಳಗೆ ಸಾಮಾನ್ಯ ಜೀವನ ವಿಧಾನವನ್ನು ಹಂಚಿಕೊಂಡು ಬದುಕುವ ಒಂದು ಗುಂಪು ಜನರನ್ನು ಹಳ್ಳಿ ಅಥವಾ ಗ್ರಾಮ ಸಮುದಾಯ ಎಂದು ವ್ಯಾಖ್ಯಾನಿಸಬಹುದಾಗಿದೆ. ಗ್ರಾಮ ಸಮುದಾಯದ ವೈಲಕ್ಷಣ್ಯಗಳು
ಗ್ರಾಮ ಸಮುದಾಯಗಳ ವೈವಿಧ್ಯತೆ ಗ್ರಾಮ ಸಮುದಾಯಗಳಲ್ಲಿಯೂ ವೈವಿಧ್ಯತೆಯನ್ನು ಕಾಣಬಹುದಾಗಿದೆ. ಜನಸಂಖ್ಯೆ, ವೃತ್ತಿ, ಜೀವನ ಮುಂತಾದ ಅಂಶಗಳನ್ನು ಆಧರಿಸಿ ಅಂತಹ ಸಮುದಾಯಗಳನ್ನು ವಿಂಗಡಿಸಬಹುದಾಗಿದೆ. ಜನಸಂಖ್ಯೆಯನ್ನು ಆಧರಿಸಿ ಸಣ್ಣ, ಮಧ್ಯಮ, ದೊಡ್ಡ ಮತ್ತು ಅತಿ ದೊಡ್ಡ ಗ್ರಾಮ ಸಮುದಾಯಗಳನ್ನು ಗುರುತಿಸಬಹುದು. 1991ನೇ ಜನಗಣತಿಯ ಆಧಾರದಂತೆ 5000ಕ್ಕೂ ಕಡಿಮೆ ಜನಸಂಖ್ಯೆ ಇರುವ ಗ್ರಾಮಗಳನ್ನು ಒಟ್ಟಾರೆಯಾಗಿ `ಗ್ರಾಮ ಸಮುದಾಯ ಎಂಬ ವ್ಯಾಖ್ಯೆಯಡಿ ತರಬಹುದಾಗಿದೆ. ಅದರಂತೆಯೇ ಸಮುದಾಯದ ಸದಸ್ಯರು ಮಾಡುವ ವೃತ್ತಿಯನ್ನಾಧರಿಸಿ ರೈತ ಸಮುದಾಯ, ಮೀನುಗಾರರ ಸಮುದಾಯ, ಕಮ್ಮಾರ, ಕುಂಬಾರ, ಬಳೆಗಾರ, ಕಂಚುಗಾರ, ಕ್ಷೌರಿಕರ ಸಮುದಾಯ ಮುಂತಾದವುಗಳನ್ನು ಗುರುತಿಸಬಹುದಾಗಿದೆ. ಸಮುದಾಯದ ಸದಸ್ಯರು ಒಂದು ಜಾಗದಲ್ಲಿ ನೆಲೆ ನಿಲ್ಲುವ ಸಮಯದ ಆಧಾರದ ಮೇಲೆ ವಲಸೆ ಸಮುದಾಯ, ಅರೆಶಾಶ್ವತ ಹಾಗೂ ಶಾಶ್ವತ ಸಮುದಾಯಗಳೆಂದೂ ವಿಂಗಡಿಸಬಹುದಾಗಿದೆ. ಇವು ಗ್ರಾಮಾಂತರ ಪ್ರದೇಶಗಳಲ್ಲಿ ಕಾಣುವ ಹಾಗೂ ವೈವಿಧ್ಯತೆಯಿಂದ ಕೂಡಿದ ಗ್ರಾಮ ಸಮುದಾಯಗಳಾಗಿವೆ. ನಗರ ಸಮುದಾಯ ಸಮಾಜಶಾಸ್ತ್ರದ ಲಕ್ಷಣಗಳು ಹಾಗೂ ಗಾತ್ರದ ದೃಷ್ಟಿಯಿಂದ, ಗ್ರಾಮೀಣ ಸಮುದಾಯಕ್ಕಿಂತ ತುಂಬಾ ಭಿನ್ನವಾದ, ಸಮುದಾಯದ ಇನ್ನೊಂದು ಪ್ರಕಾರವೆಂದರೆ ನಗರ ಸಮುದಾಯ. ನಗರ ಸಮುದಾಯಗಳನ್ನು ಗಾತ್ರ ಮತ್ತು ಜನಸಾಂಧ್ರತೆಯ ಮಾಪನಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಪಟ್ಟಣ, ದೊಡ್ಡ ಪಟ್ಟಣ, ನಗರ, ಮಹಾನಗರ ಎಂದು ವಿಂಗಡಿಸುವುದುಂಟು. ಸಾಮಾನ್ಯವಾಗಿ ತಾಲೂಕು ಕೇಂದ್ರಸ್ಥಾನದ ಪ್ರದೇಶಗಳನ್ನು ಪಟ್ಟಣಗಳೆಂದೂ, ಜಿಲ್ಲಾ ಕೇಂದ್ರ ಪ್ರದೇಶಗಳನ್ನು ನಗರಗಳೆಂದೂ, ಇನ್ನೂ ದೊಡ್ಡ ನಗರೀಕರಣಗೊಂಡ ಪ್ರದೇಶಗಳನ್ನೂ ಮಹಾನಗರಗಳೆಂದೂ ಕರೆಯುವುದು ಪದ್ಧತಿ. ಇದಕ್ಕೆ ಅಪವಾದಗಳೂ ಇವೆ. ಇವುಗಳ ಜೊತೆಗೆ ಸಮುದಾಯದ ಸದಸ್ಯರ ವೈವಿಧ್ಯತೆ, ಅವರ ಜೀವನದ ಗುಣಮಟ್ಟ, ಆರ್ಥಿಕ ಸ್ಥಿತಿಗತಿ, ಅವೈಯಕ್ತಿಕತೆ, ಮಾಧ್ಯಮಿಕ ಸಂಬಂಧಗಳು, ಉತ್ತಮ ಸಂಚಾರವ್ಯವಸ್ಥೆ, ಮನರಂಜನಾ ವ್ಯವಸ್ಥೆ, ಉನ್ನತ ಶಿಕ್ಷಣ ಸಂಸ್ಥೆಗಳು, ಕೈಗಾರಿಕಾ ಸಂಸ್ಥೆಗಳು ಇನ್ನೂ ಮುಂತಾದ ವೈಲಕ್ಷಣ್ಯಗಳನ್ನು ಗಮನದಲ್ಲಿರಿಸಿಕೊಂಡು ನಗರ ಸಮುದಾಯಗಳನ್ನು ಗುರುತಿಸಬಹುದಾಗಿದೆ. ಗ್ರಾಮೀಣ ಸಮುದಾಯಗಳಲ್ಲಿ ಪ್ರಾಥಮಿಕ ಸಂಬಂಧಗಳು, ಪ್ರಾಮಾಣಿಕ ವರ್ತನೆಗಳು ಮುಂತಾದ ಗುಣಗಳನ್ನು ನೋಡಬಹುದಾದರೆ, ನಗರ ಸಮುದಾಯಗಳಲ್ಲಿ ಮಾಧ್ಯಮಿಕ ಸಂಬಂಧಗಳು, ವ್ಯಾವಹಾರಿಕ ವರ್ತನೆಗಳು ಮುಂತಾದವುಗಳನ್ನು ಗುರುತಿಸಬಹುದಾಗಿದೆ. ಕೇಂದ್ರ ಸರಕಾರ ಜನಸಂಖ್ಯೆ ಮತ್ತು ಇತರೆ ಮಾಪಕಗಳನಿಟ್ಟುಕೊಂಡು ನಗರ ಪ್ರದೇಶದ ಅರ್ಥವ್ಯಾಪ್ತಿಯನ್ನು ಪರಿಷ್ಕರಿಸುತ್ತಾ ಬಂದಿದೆ. ಅದರಂತೆ 2001ರ ಜನಗಣತಿಯಂತೆ, ಒಂದು ಪ್ರದೇಶವನ್ನು ನಗರ ಪ್ರದೇಶವೆಂದು ಘೋಷಿಸಲು ಈ ಕೆಳಕಂಡ ಅಂಶಗಳನ್ನು ಪರಿಗಣಿಸಬೇಕೆಂದು ಹೇಳುತ್ತಾರೆ.
ಜನಸಂಖ್ಯೆಯನ್ನಾಧರಿಸಿ ನಗರ ಪ್ರದೇಶಗಳ ಈಗಿನ ವರ್ಗೀಕರಣ ಹೀಗಿದೆ.5 - 5000 ದಿಂದ 20000 ಜನಸಂಖ್ಯೆ - ಸಣ್ಣ ಪಟ್ಟಣ. - 20001 ದಿಂದ 50000 ಜನಸಂಖ್ಯೆ - ದೊಡ್ಡ ಪಟ್ಟಣ. - 50001 ದಿಂದ 100000 ಜನಸಂಖ್ಯೆ - ದೊಡ್ಡ ನಗರ - 100000 ಕ್ಕೂ ಹೆಚ್ಚಿನ ಜನಸಂಖ್ಯೆ - ಬೃಹತ್ ನಗರ - 5000000 ಕ್ಕೂ ಹೆಚ್ಚಿನ ಜನಸಂಖ್ಯೆ - ಮಹಾನಗರ ನಗರ ಸಮುದಾಯದ ಆಯ್ದ ಕೆಲವು ವ್ಯಾಖ್ಯೆಗಳು ಜನಸಂಖ್ಯೆ ಮತ್ತು ಇತರೆ ವೈಲಕ್ಷಣ್ಯಗಳನ್ನಾಧರಿಸಿ ಅನೇಕ ವಿದ್ವಾಂಸರು ನಗರ ಸಮುದಾಯದ ವ್ಯಾಖ್ಯೆಗಳನ್ನು ಕೊಟ್ಟಿದ್ದಾರೆ. ಅವುಗಳಲ್ಲಿ ವಿಶಾಲವಾದ ಅರ್ಥ ವ್ಯಾಪ್ತಿಯುಳ್ಳ ಕೆಲವು ವ್ಯಾಖ್ಯೆಗಳನ್ನು ಆರಿಸಿ ಇಲ್ಲಿ ಕೊಡಲಾಗಿದೆ. ಲೂಯಿಸ್ ವಿರ್ತ್‍ರವರ ಪ್ರಕಾರ ``ಸಾಮಾಜಿಕವಾಗಿ ಪ್ರಭೇದಗಳುಳ್ಳ ವ್ಯಕ್ತಿಗಳ ವಿಶಾಲವಾದ ಸಾಂಧ್ರತೆಯುಳ್ಳ ಮತ್ತು ಶಾಶ್ವತವಾದ ವಸತಿ ಪ್ರದೇಶವನ್ನು ನಗರವೆಂದು ವ್ಯಾಖ್ಯಾನಿಸಬಹುದಾಗಿದೆ. ಹೋವಾರ್ಡ್ ವುಲ್ಸ್ಟನ್ ಅವರು, ``ಒಂದು ಸ್ಥಳೀಯ ಸರಕಾರದ ಅಧಿಕಾರ ವ್ಯಾಪ್ತಿಗೆ ಒಳಪಟ್ಟಿರುವ, ಹಲವು ಸಮಾನ ಆಸಕ್ತಿಗಳನ್ನು ಮತ್ತು ಸಂಸ್ಥೆಗಳನ್ನು ಹೊಂದಿದ್ದು ಒಂದು ಸೀಮಿತ ಭೌಗೋಲಿಕ ಪ್ರದೇಶದಲ್ಲಿ ದಟ್ಟವಾಗಿ ನೆಲೆಸಿರುವ ಜನಸಮೂಹವನ್ನು ನಗರ ಎಂದು ಕರೆದಿದ್ದಾರೆ. ಇನ್ನೊಬ್ಬ ಸಮಾಜಶಾಸ್ತ್ರಜ್ಞ ಥಿಯಡೊರ್ಸನ್ ರವರ ಪ್ರಕಾರ, ``ನಗರ ಸಮುದಾಯವು ಅತಿಯಾದ ಜನಸಾಂಧ್ರತೆಯೊಂದಿಗೆ, ಕೃಷಿಯೇತರ ಉದ್ಯೋಗಗಳ ಪ್ರಧಾನ್ಯತೆಯನ್ನು ಹೊಂದಿರುವ, ಸಂಕೀರ್ಣ ಸ್ವರೂಪದ ಶ್ರಮ ವಿಭಜನೆಗೆ ಕಾರಣವಾಗಿರುವ ಅತ್ಯಧಿಕ ಮಟ್ಟದ ವಿಶೇಷ ಪರಿಣಿತಿ ಪಡೆದಿರುವ, ಹಾಗೂ ಔಪಚಾರಿಕ ಸ್ವರೂಪದ ಸ್ಥಳೀಯ ಸರಕಾರವನ್ನು ಒಳಗೊಂಡಿರುವ ಸಮುದಾಯವಾಗಿರುತ್ತದೆ. ಅದು ಅವೈಯಕ್ತಿಕ ಸ್ವರೂಪದ ಮಾಧ್ಯಮಿಕ ಸಂಬಂಧಗಳನ್ನು ಮತ್ತು ಔಪಚಾರಿಕ ಸ್ವರೂಪದ ನಿಯಂತ್ರಣ ವ್ಯವಸ್ಥೆಯನ್ನು ಹೊಂದಿರುವ ವ್ಯವಸ್ಥೆಯಾಗಿರುತ್ತದೆ.6 ಜೇಮ್ಸ್ ಎ. ಕ್ವೀನ್ ಅವರು ಹೇಳುವಂತೆ, ``ವ್ಯವಸಾಯೇತರ ಉದ್ಯೋಗವುಳ್ಳ ಜನರ ಸಂಕಲನವಾಗಿ, ವಿಶಿಷ್ಟತೆಯ ಸಂಗತಿಯಾಗಿ ನಗರವನ್ನು ಗಮನಿಸಬಹುದು. ಮೇಲಿನ ವ್ಯಾಖ್ಯೆಗಳಲ್ಲಿ ನಗರ ಸಮುದಾಯದ ವಿವಿಧ ಅಂಶಗಳನ್ನು ಪ್ರಸ್ಥಾಪಿಸಿದ್ದು, ಅವುಗಳನ್ನು ಹೀಗೆ ಪಟ್ಟಿಮಾಡಬಹುದಾಗಿದೆ.
ನಗರ ಸಮುದಾಯದ ವೈಲಕ್ಷಣ್ಯಗಳು
ನಗರ ಪ್ರದೇಶಗಳಲ್ಲಿ ಈ ವೈಲಕ್ಷಣ್ಯಗಳನ್ನು ಸಾಮಾನ್ಯವಾಗಿ ಕಾಣಬಹುದಾಗಿದೆ. ಇದಕ್ಕೆ ಅಪವಾದಗಳು ಉಂಟೆಂಬುದನ್ನು ನಾವು ಮರೆಯುವ ಹಾಗಿಲ್ಲ. ಬುಡಕಟ್ಟು ಸಮುದಾಯಗಳು ಗ್ರಾಮೀಣ ಮತ್ತು ನಗರ ಸಮುದಾಯಗಳಿಂದ ಭಿನ್ನವಾದ ಇನ್ನೊಂದು ಪ್ರಕಾರದ ಸಮುದಾಯಗಳಿವೆ. ಇಂತಹ ಪ್ರಕಾರದ ಸಮುದಾಯದ ಸದಸ್ಯರು ನಾಗರೀಕತೆಯಿಂದ ದೂರವಿದ್ದು, ಗುಡ್ಡಗಾಡು ಪ್ರದೇಶಗಳಲ್ಲಿ, ಗಿರಿ ಕಂದರಗಳಲ್ಲಿ, ಇಲ್ಲವೇ ಕಣಿವೆ-ಹಳ್ಳಗಳ ಬದಿಯಲ್ಲಿ ತಮ್ಮ ಜನರೊಂದಿಗೆ, ತಮ್ಮದೇ ಆದ ಹಟ್ಟಿಗಳನ್ನು, ತಾಂಡಗಳನ್ನು ಕಟ್ಟಿಕೊಂಡು ವಾಸವಾಗಿರುತ್ತಾರೆ. ಇವರು ಸಾಮಾನ್ಯವಾಗಿ ಸಾಂಪ್ರದಾಯಿಕ ವೃತ್ತಿಗಳನ್ನು ಅನುಸರಿಸುತ್ತಿರುತ್ತಾರೆ. ತಮ್ಮದೇ ಆದ ದೇವರುಗಳು, ಸಂಪ್ರದಾಯ ಪದ್ಧತಿಗಳನ್ನು ಹೊಂದಿರುತ್ತಾರೆ. ಇವರ ಭಾಷೆಯೂ ಭಿನ್ನವಾಗಿರುತ್ತದೆ. ಇವರು ತಾವೇ ಸೃಷ್ಟಿಸಿಕೊಂಡ ಒಂದು ಆರ್ಥಿಕ ವ್ಯವಸ್ಥೆಯನ್ನು ಅನುಸರಿಸುತ್ತಿರುತ್ತಾರೆ. ಇಂತಹ ಸಮುದಾಯಗಳಿಗೆ ಬುಡಕಟ್ಟು ಸಮುದಾಯಗಳು ಎಂದು ಕರೆಯುತ್ತಾರೆ. ಇಂತಹ ಬುಡಕಟ್ಟು ಸಮುದಾಯಗಳು ಭಾರತದ ಉದ್ದಗಲಕ್ಕೂ ಸಿಗುತ್ತವೆ. ಇವರನ್ನು ಮೂಲ ನಿವಾಸಿಗಳು, ಆದಿವಾಸಿಗಳು, ಗುಡ್ಡಗಾಡು ಜನರು, ಗಿರಿಜನರು ಮುಂತಾದ ಹೆಸರುಗಳಿಂದ ಕರೆಯುತ್ತಾರೆ. ಭಿಲ್ಲರು, ಗೊಂಡರು, ಸಂತಲರು, ಓರಾನರು, ಮುಂಡರು, ಖೊಂಡರು ಮುಂತಾದವರನ್ನು ಇದಕ್ಕೆ ಉದಾಹರಿಸಬಹುದಾಗಿದೆ. ಕರ್ನಾಟಕದಲ್ಲಿಯೂ ಇಂತಹ ಅನೇಕ ಬುಡಕಟ್ಟು ಸಮುದಾಯಗಳಿವೆ. ಗೊಲ್ಲರು, ಹೆಳವರು, ಹಕ್ಕಿಪಿಕ್ಕಿ ಜನಾಂಗ, ಜೇನು ಕುರುಬರು, ಕಾಡು ಕುರುಬರು, ಕೊರಗರು, ಮ್ಯಾಸ ನಾಯಕರು, ಸೋಲಿಗರು ಇತ್ಯಾದಿ ಬುಡಕಟ್ಟು ಜನಾಂಗಗಳು ಕನ್ನಡ ನಾಡಿನಲ್ಲಿ ಸಿಗುತ್ತವೆ. ಲಂಬಾಣಿ ಜನಾಂಗವನ್ನು ಸರಕಾರವು ಪರಿಶಿಷ್ಟ ಜಾತಿ ಎಂದು ಪರಿಗಣಿಸಿದರೂ ಅವರು ಸಮಾಜಶಾಸ್ತ್ರೀಯ ದೃಷ್ಟಿಯಿಂದ ಒಂದು ಬುಡಕಟ್ಟು ಸಮುದಾಯವಾಗಿದೆ. ಇವರು ತಮ್ಮ ಜೀವನಕ್ಕೆ ಹೆಚ್ಚಾಗಿ ಪ್ರಕೃತಿಯನ್ನು ಅವಲಂಬಿಸಿರುತ್ತಾರೆ. ಒಂದು ಜನಾಂಗವನ್ನು ಬುಡಕಟ್ಟು ಸಮುದಾಯಕ್ಕೆ ಸೇರಿಸಬೇಕಾದರೆ ಈ ಕೆಳಕಂಡ ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕೆಂದು ಆರ್.ಸಿ. ವರ್ಮ ಹೇಳುತ್ತಾರೆ.8
ಈ ಮಾನದಂಡವನ್ನು ಆಧಾರವಾಗಿಟ್ಟುಕೊಂಡು ಅನೇಕ ಸಮಾಜಶಾಸ್ತ್ರಜ್ಞರು ಬುಡಕಟ್ಟಿನ ವ್ಯಾಖ್ಯೆಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಕೆಲವನ್ನು ಇಲ್ಲಿ ನೋಡಬಹುದಾಗಿದೆ. ಜೆ.ಎಲ್. ಗಿಲಿನ್ ಮತ್ತು ಜೆ.ಎ. ಗಿಲಿನ್ ಅವರ ಅಭಿಪ್ರಾಯದಂತೆ, ``ಒಂದು ಸ್ಥಳದಲ್ಲಿ ವಾಸಿಸುತ್ತಾ ಒಂದೇ ಭಾಷೆಯನ್ನು ಮಾತನಾಡುವ ಮತ್ತು ಒಂದು ಸಂಸ್ಕೃತಿಯನ್ನು ಹೊಂದಿರುವ ಸ್ಥಳೀಯ ಸಮುದಾಯಗಳ ಸಮೂಹಕ್ಕೆ ಸಮುದಾಯ ಎನ್ನಬಹುದು. ಡಾ. ಡಿ.ಎಸ್. ಮಂಜುಮ್ದಾರ್ರವರ ಪ್ರಕಾರ, ``ಒಂದೇ ನಾಮಧೇಯವನ್ನು ಹೊಂದಿರುವ, ಒಂದೇ ಭೂನೆಲೆಯಲ್ಲಿ ವಾಸಿಸುವ, ಒಂದೇ ಭಾಷೆಯನ್ನಾಡುವ ಮತ್ತು ವಿವಾಹ-ಉದ್ಯೋಗಗಳಿಗೆ ಸಂಬಂಧಿಸಿದಂತೆ ಒಂದೇ ಬಗೆಯ ವಿಧಿ-ನಿಷೇಧಗಳಿಗೆ ಬದ್ಧವಾದ ಕುಟುಂಬಗಳ ಸಮೂಹವನ್ನು ಆದಿವಾಸಿ ಸಮೂಹ ಎಂದು ಕರೆಯಬಹುದು. ಭಾರತದ ಇಂಪೀರಿಯಲ್ ಗೆಜೆಟಿಯರ್ ಪ್ರಕಾರ, ``ಒಂದೇ ಹೆಸರನ್ನು ಹೊಂದಿರುವ, ಒಂದೇ ಭಾಷೆಯನ್ನು ಮಾತನಾಡುವ, ಒಂದೇ ಸ್ಥಳದಲ್ಲಿ ವಾಸಮಾಡುವ ಅಥವಾ ವಾಸಿಸಲು ಉದ್ಯುಕ್ತರಾಗಿರುವ, ಪೂರ್ವದಲ್ಲಿ ಒಳಪಂಗಡ ವಿವಾಹ ಪದ್ಧತಿಗೆ ಬದ್ಧವಾಗಿದ್ದಿರಬಹುದಾದರೂ ಈಗ ಹಾಗಿಲ್ಲದ ಕುಟುಂಬಗಳ ಸಮೂಹವನ್ನು ಆದಿವಾಸ ಸಮಾಜ ಎನ್ನಬಹುದು.9 ಬುಡಕಟ್ಟು ಸಮುದಾಯದ ಪ್ರಮುಖ ಲಕ್ಷಣಗಳು
ಅಡಿಟಿಪ್ಪಣಿಗಳು
ಡಾ. ಸಿ.ಆರ್. ಗೋಪಾಲ್ ನಿವೃತ್ತ ಸಹಾಯಕ ಪ್ರಧಾನ ವ್ಯವಸ್ಥಾಪಕರು, ಸ್ಮಯೋರ್ (SMIORE)
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
SITE MAP
SiteTRAININGJOB |
HR SERVICESOTHER SERVICESnIRATHANKA CITIZENS CONNECT |
NIRATHANKAPOSHOUR OTHER WEBSITESSubscribe |
MHR LEARNING ACADEMY
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|