`ಚಿನ್ಮಯ' ಕೃಷ್ಣಶಾಸ್ತ್ರಿಗಳ ಅಭಿಮಾನಿಗಳು ಅವರಿಗೆ 1979 ರಲ್ಲಿ ಅರ್ಪಿಸಿದ ಸಂಭಾವನಾಗ್ರಂಥ. ಪ್ರೊ.ಎಂ.ವಿ. ಶ್ರೀನಿವಾಸ್ ಮತ್ತು ಡಾ.ಕೃಷ್ಣಮೂರ್ತಿ ಹಾನೂರು ಈ ಗ್ರಂಥದ ಸಂಪಾದಕರು. ಪುಸ್ತಕವನ್ನು ಕುರಿತ ಪತ್ರಿಕೆಗಳು ತಮ್ಮ ಪ್ರಶಂಸೆಯನ್ನು ವ್ಯಕ್ತಪಡಿಸಿವೆ.ಡಾ.ಹಾಮಾನಾಯಕರು `ಕಾಡು ಬೆಳದಿಂಗಳು' ಎಂಬ ಸೊಗಸಾದ ಲೇಖನವನ್ನು ಬರೆದು ಬೆಳಗೆರೆ ಕೃಷ್ಣಶಾಸ್ತ್ರಿಗಳ ಸೇವೆಯನ್ನುಶ್ಲಾಘಿಸಿದ್ದಾರೆ. ಬೆಳಗೆರೆ ಕೃಷ್ಣಶಾಸ್ತ್ರಿಗಳು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಬೆಳಗೆರೆ ಗ್ರಾಮದಲ್ಲಿ 1916ರಲ್ಲಿ ಜನಿಸಿದರು, ಅವರ ತಂದೆ ಚಂದ್ರಶೇಖರ ಶಾಸ್ತ್ರಿಗಳು ಪ್ರಸಿದ್ದ ಆಶುಕವಿಗಳು, ದಾರ್ಶನಿಕರೂ ಆಗಿದ್ದರು, ಅವರ ಸರಳತೆ, ಸಾಹಿತ್ಯಾಸಕ್ತಿ ಮುಗ್ಧ ಮನೋಭಾವ ಹೊಂದಲು ಅವಕಾಶಮಾಡಿಕೊಟ್ಟಿದ್ದಿತು. ಕೃಷ್ಣಶಾಸ್ತ್ರಿಗಳ ತಾತ ಅಪ್ಪಣ್ಣ ಭಟ್ಟರು ಪ್ರಸಿದ್ಧ ಸಂಸ್ಕೃತ ವಿದ್ವಾಂಸರಾಗಿ ವಿದ್ವತ್ ಸಭೆಗಳಲ್ಲಿ ಸನ್ಮಾನವನ್ನು ಗಳಿಸಿಕೊಂಡಿದ್ದರು. ಕೃಷ್ಣಶಾಸ್ತ್ರಿಗಳು ಹೈಸ್ಕೂಲು ವಿದ್ಯಾಭ್ಯಾಸವನ್ನು ಮುಗಿಸಿ ಸ್ವಲ್ಪಕಾಲ ಬೆಂಗಳೂರಿನ ಎಚ್.ಎ.ಎಲ್. ಸಂಸ್ಥೆಯಲ್ಲಿ ಕೆಲಸ ಮಾಡಿದರು. ಆದರೆ ಶಿಕ್ಷಣ ವೃತ್ತಿ ಅವರನ್ನು ಕೈಬೀಸಿ ಕರೆದಾಗ ಬೆಂಗಳೂರಿನಿಂದ ಹಿಂದಿರುಗಿ ಚಳ್ಳಕೆರೆ ತಾಲ್ಲೂಕಿನ ಹೆಗ್ಗೆರೆಯಲ್ಲಿ ಉಪಾಧ್ಯಾಯರಾಗಿ ನೇಮಕಗೊಂಡರು. 22ನೆಯ ವಯಸ್ಸಿನಲ್ಲಿ ಕೃಷ್ಣಶಾಸ್ತ್ರಿಗಳಿಗೆ ವಿವಾಹವಾಯಿತು. ಆದರೆ ಅವರ ವೈವಾಹಿಕ ಜೀವನ ಬಹು ಬೇಗ ಕೊನೆಗೊಂಡಿತು. ಪತ್ನಿ ತೀರಿಕೊಂಡರು. ಈ ದುರಂತ ಅವರ ಜೀವನದಲ್ಲೇ ಒಂದು ತಿರುವು ಉಂಟಾಗುವಂತೆ ಮಾಡಿತು. ಕೃಷ್ಣಶಾಸ್ತ್ರಿಗಳು ಮರು ಮದುವೆ ಮಾಡಿಕೊಳ್ಳುವಂತೆ ಮನೆಯವರು ಒತ್ತಾಯಿಸಿದರೂ, ಅದನ್ನು ನಿರಾಕರಿಸಿದರು. ಬೇರೊಂದು ಲೋಕ ಅವರನ್ನು ಕೈಬೀಸಿ ಕರೆಯಿತು. ಅಂದಿನಿಂದ ಸಾಹಿತ್ಯವೇ ಅವರ ಸಂಗಾತಿಯಾಯಿತು. ಗ್ರಾಮ ಸಮಾಜವೇ ಅವರ ಸಂಸಾರವಾಯಿತು.
ಬೆಳಗೆರೆ ಕೃಷ್ಣಶಾಸ್ತ್ರಿಗಳು ನಮ್ಮ ನಡುವಿನ ಬಲು ಅಪರೂಪದ ದಾರ್ಶನಿಕರು. ಲೇಖಕರಾಗಿ, ಸುಧಾರಕರಾಗಿ, ಶಿಕ್ಷಕರಾಗಿ ಅವರು ಸಲ್ಲಿಸಿರುವ ಸೇವೆ ಅನುಪಮವಾದದ್ದು. ಊರಿನ ಜನರು ಅವರನ್ನು `ಮೇಷ್ಟ್ರು' ಎಂದು ಕರೆಯುತ್ತಾರೆ. ಸಣ್ಣ ಹಳ್ಳಿಯೊಂದರಲ್ಲಿ ಉಪಾಧ್ಯಾಯನಾಗಿ ಒಬ್ಬ ವ್ಯಕ್ತಿ ಏನೆಲ್ಲ ಮಾಡಬಹುದು, ಹೇಗೆ ಸಾಮಾಜಿಕ ಪರಿವರ್ತನೆ, ಶಿಕ್ಷಣ ಸುಧಾರಣೆ, ಪರಿಸರ ಸಂರಕ್ಷಣೆಯಲ್ಲಿ ಅಸಾಧ್ಯವಾದುದ್ದನ್ನು ಸಾಧಿಸಬಹುದೆಂಬುದು ಅವರ ಜೀವನ ಸಾಧನೆಯಿಂದ ತಿಳಿದುಬರುತ್ತದೆ. ಕೃಷ್ಣಶಾಸ್ತ್ರಿಗಳ ಸಾಧನೆಗಳಲ್ಲಿ ಒಂದು ಗ್ರಾಮೀಣ ಜನತೆಯ ಸೇವೆಯಾದರೆ ಮತ್ತೊಂದು ಸಾಹಿತ್ಯ ರಚನೆ. ಇವೆರಡೂ ಭಿನ್ನವಾಗಿರದೆ ಒಂದರ ಪ್ರಭಾವ ಮತ್ತೊಂದರ ಮೇಲೆ ಕಂಡುಬರುತ್ತದೆ. ಅವರ ಸಾಹಿತ್ಯ ರಚನೆ ಹಾಗೂ ಸಮಾಜ ಸುಧಾರಣೆ ಒಂದಕ್ಕೊಂದು ಪೂರಕವಾಗಿವೆ. ಅವರು ಬರೆದ ಕವನಗಳು, ನಾಟಕಗಳು, ಮತ್ತು ಇತರ ಕೃತಿಗಳು ಸಮಾಜಸುಧಾರಣೆಗೆ ಸಹಾಯಕವಾಗಿವೆ. ಹಾಗೆಯೇ ಅವರ ಜೀವನದ ಅನುಭವ ಸಾಧನೆಗಳು ಸಾಹಿತ್ಯ ರಚನೆಗೆ ಸಾಮಗ್ರಿಯನ್ನು ಒದಗಿಸಿವೆ. ಕೃಷ್ಣಶಾಸ್ತ್ರಿಗಳ ಹಿರಿಯ ಸಹೋದರಿ ಜಾನಕಮ್ಮ ಪ್ರತಿಭಾವಂತ ಕವಯತ್ರಿ. ತಂಗಿ ಪಾರ್ವತಮ್ಮ ಹೆಸರಾಂತ ಲೇಖಕಿ. ಇಂಥ ಪ್ರತಿಭಾವಂತ ಕುಟುಂಬದಲ್ಲಿ ಜನಿಸಿದ ಕೃಷ್ಣಶಾಸ್ತ್ರಿಗಳು ಸ್ವಲ್ಪ ಕಾಲ ಸರ್ಕಾರಿ ನೌಕರಿಯಲ್ಲಿದ್ದು, ಆನಂತರ ಉಪಾಧ್ಯಾಯ ವೃತ್ತಿಯನ್ನು ಆರಂಭಿಸಿದರು. ಹಲವಾರು ಹಳ್ಳಿಗಳಲ್ಲಿ ಉಪಾಧ್ಯಾಯರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. ವೃತ್ತಿಯಲ್ಲೂ, ನಿವೃತ್ತಿಯಲ್ಲೂ ಅವರ ಸೇವಾಕ್ಷೇತ್ರ ಬಹು ವಿಶಾಲವಾಗಿದ್ದಿತು. ವೈವಿಧ್ಯಮಯವಾಗಿದ್ದಿತು. ಬೆಳಗೆರೆ ಕೃಷ್ಣಶಾಸ್ತ್ರಿಗಳ ಜೀವನ ಒಂದು ತೆರೆದ ಪುಸ್ತಕ. ಎಲ್ಲರೂ ಒದಲೇಬೇಕಾದ ಉಪಯುಕ್ತ ಪುಸ್ತಕ. ಅವರು ಅಧಿಕಾರ, ಹಣ, ಪ್ರಭಾವ, ಒತ್ತಾಯ, ಯಾವುದೂ ಇಲ್ಲದೆ, ಮಹತ್ವದ ಸಾಧನೆ ಮಾಡಿದ್ದಾರೆ. ಅವರಿಗೆ ಎಲ್ಲರೂ ಪ್ರೀತಿ ಗೌರವವನ್ನು ಸೂಚಿಸಿ, ಪೂರ್ಣ ಬೆಂಬಲ ನೀಡಿದ್ದಾರೆ. ಸರ್ಕಾರದಿಂದ ಅಥವಾ ಯಾವುದೇ ಸಂಸ್ಥೆಯಿಂದ ನೆರವು ಪಡೆದು ಸಂಸ್ಥೆಯನ್ನು ಕಟ್ಟಿದವರಲ್ಲ. ಅವರು ನಡೆದು ಬಂದ ದಾರಿ, ಶಿಕ್ಷಣ ಕ್ಷೇತ್ರದಲ್ಲಿನ ಸೇವೆ ಸಾಧನೆ, ವಿಶಿಷ್ಟವಾದುದು ವಿಭಿನ್ನವಾದುದು. ಬೆಳಗೆರೆ ಕೃಷ್ಣಶಾಸ್ತ್ರಿಗಳ ವ್ಯಕ್ತಿತ್ವವನ್ನು ಮತ್ತು ಅವರ ಸಾಧನೆಗೆ ಕಾರಣವಾದ ಅಂಶಗಳನ್ನು ಹೀಗೆ ಗುರುತಿಸಬಹುದು: ಆಚಾರ ವಿಚಾರಗಳಲ್ಲಿ ಪರಿಶುದ್ಧತೆ, ಸರಳ ನಿಸ್ವಾರ್ಥ ಜೀವನ ತಮ್ಮದೆಲ್ಲವನ್ನು ಶಾಲೆಗೆ, ವಿದ್ಯಾರ್ಥಿಗಳಿಗೆ ನೀಡಿದ್ದಾರೆ. ತನ್ನವರು, ತನ್ನದು ಎನ್ನುವುದು ಏನೂ ಇಲ್ಲ. ಶಿಕ್ಷಕರಾಗಿ ಅವರು ಹಚ್ಚಿದ ಜ್ಞಾನದ ಹಣತೆಗಳು ಇಂದು ನಾಡಿನಲ್ಲೆಲ್ಲಾ ಬೆಳಗುತ್ತಿವೆ. ಹಳ್ಳಿಯ ಮಕ್ಕಳಿಗೆ ಅಕ್ಷರ ಕಲಿಸುವುದು ಮಾತ್ರವಲ್ಲ ಅವರಲ್ಲಿ ಕನ್ನಡ ಸಾಹಿತ್ಯ, ಜನಪದ ಕಲೆಗಳಲ್ಲಿ ಆಸಕ್ತಿಯನ್ನು ಮೂಡಿಸಿದ್ದಾರೆ. ಗಾಮೀಣ ಸಮಾಜದಲ್ಲಿ ಸದಾ ಸಂತಸ, ಸಾಮರಸ್ಯ ನೆಲೆಸುವಂತೆ ಮಾಡಲು ಶ್ರಮಿಸಿದ್ದಾರೆ. ನಮ್ಮ ಗ್ರಾಮಗಳಲ್ಲಿ ಅನೇಕ ರೀತಿಯ ಮೂಲಭೂತ ಸೌಲಭ್ಯಗಳ ಕೊರತೆ, ದೂರದ ಊರಿನಲ್ಲಿ ಹೂಸಜನರ ಮಧ್ಯೆ ಒಂಟಿಜೀವನ, ನಮ್ಮ ಹಳ್ಳಿಗಳಲ್ಲಿನ ಅಜ್ಞಾನ, ಅವ್ಯವಸ್ಥೆ, ದಾರಿದ್ರ್ಯ ಇವುಗಳ ನಡುವೆ ಒಂಟಿಯಾಗಿ ಬಾಳು ಸವೆಸುವುದು ಇಂಥ ಪರಿಸ್ಥಿತಿಯಲ್ಲಿ ಬೆಳಗೆರೆ ಕೃಷ್ಣಶಾಸ್ತ್ರಿಯವರು ತಮಗೆದುರಾದ ಸಮಸ್ಯೆಗಳನ್ನು ನೋಡಿ ಹೆದರಿ ಓಡಿಹೋಗಲಿಲ್ಲ. ಅದಕ್ಕೆ ಬದಲಾಗಿ ಅದನ್ನು ಸವಾಲಾಗಿ ಸ್ವೀಕರಿಸಿ ದೃಢಮನಸ್ಸಿನಿಂದ ಎಲ್ಲಾ ಕಷ್ಟಗಳನ್ನು ಎದುರಿಸಿ ತಮ್ಮೆಲ್ಲಾ ಶಕ್ತಿ, ಸಾಮಥ್ರ್ಯವನ್ನು ಉಪಯೋಗಿಸಿ ಆ ಗ್ರಾಮವನ್ನು ಪರಿವರ್ತಿಸುವ ಕಾರ್ಯವನ್ನು ಕೈಗೊಂಡರು. ಸತತ ಪ್ರಯತ್ನದಿಂದ ಪರಿಸ್ಥಿತಿ ಸುಧಾರಿಸಿತು. ಶಿಕ್ಷರರಾಗಿ ಒಂದು ಹಳ್ಳಿಗೆ ವರ್ಗವಾದಾಗ ಕೃಷ್ಣಶಾಸ್ತ್ರಿಗಳು ಯಾವುದೇ ಸಿದ್ದತೆ ಮಾಡಿಕೊಂಡಿರಲಿಲ್ಲ. ನಿರ್ದಿಷ್ಟವಾದ ಯೋಜನೆ ಹಾಕಿಕೊಂಡಿರಲಿಲ್ಲ. ಶುದ್ಧ ಅಂತಃಕರಣದಿಂದ ಮಕ್ಕಳಿಗೆ ಅಕ್ಕರೆಯಿಂದ ಅಕ್ಷರ ಕಲಿಸಿದರು. ಊರಿನ ಜನರಿಗೆ ಸೌಜನ್ಯ, ಸಾಮರಸ್ಯ, ಸಮಾನತೆ, ಸೌಭ್ರಾತೃತ್ವವನ್ನು ತೋರಿಸಿಕೊಟ್ಟರು, ಊರಿನಲ್ಲಿ ಜನರ ಮನಸಿನಲ್ಲಿದ್ದ ಕಲ್ಮಷಗಳನ್ನು ತೊಡಿದು ಹಾಕಿ ಹಳ್ಳಿಯ ಜನರ ಬಾಳು ಹಸನಾಗುವಂತೆ ಮಾಡಿದರು. ಮತ್ತೊಮ್ಮೆ ಬೇರೊಂದು ಊರಿಗೆ ವರ್ಗ ಒಂದು ಬ್ಯಾಗಿನಲ್ಲಿ ಒಂದೆರಡು ಬಟ್ಟೆ, ಒಂದೆರಡು ಪುಸ್ತಕ ತುಂಬಿಕೊಂಡು ಮುಂದಿನ ಹಳ್ಳಿಯತ್ತ ನಡೆದರು. ಅವರು ಹೋದ ಕಡೆಯಲ್ಲೆಲ್ಲ ಅಜ್ಞಾನ, ಅನಾಚಾರ, ಅನ್ಯಾಯ, ಅಸತ್ಯವನ್ನು ತೊಡೆದು ಹಾಕಲು ಪ್ರಯತ್ನಪಟ್ಟರು. ಹೋದಕಡೆಯಲ್ಲೆಲ್ಲಾ ಸಂಚಲನವನ್ನುಂಟು ಮಾಡಿದರು. ಇತರರ ಸುಖದಲ್ಲಿ ತಮ್ಮ ಸುಖವನ್ನು ಕಂಡರು. ಅವರಿಂದ ವಿದ್ಯೆಕಲಿತವರು, ಉಪಕಾರವನ್ನು ಪಡೆದವರು. ಇಂದು ಕೃಷ್ಣಶಾಸ್ತ್ರಿಗಳು ಸ್ಥಾಪಿಸಿದ ಶಾಲೆಗೆ ಸಹಾಯ ನೀಡಲು ಬಂದಿದ್ದಾರೆ. ನಮ್ಮ ಗ್ರಾಮಗಳಲ್ಲಿನ ಶಿಕ್ಷಣ ವ್ಯವಸ್ಥೆ, ಶಾಲೆಗಳ ಸ್ಥಿತಿ ಅಷ್ಟು ಸಮರ್ಪಕವಾದುದ್ದಲ್ಲ. ಮೂಲಭೂತ ಸೌಕರ್ಯಗಳ ಅಭಾವ, ಸಂಪರ್ಕ ಸಾಧನಗಳ ಕೊರತೆಗಳಿಂದ ಹಳ್ಳಿಯಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯುತ್ತಿಲ್ಲ. ಇಂತಹ ಹಳ್ಳಿಗಳಿಗೆ ವರ್ಗವಾದಾಗ ಅದೊಂದು ಕ್ರೂರ ಶಿಕ್ಷೆ ಎಂದೇ ಭಾವಿಸುತ್ತಿದ್ದುದು ಸಾಮಾನ್ಯ. ಆ ಹಳ್ಳಿಗಳಿಂದ ಸಾಹಸಪಟ್ಟು ವರ್ಗ ಮಾಡಿಸಿಕೊಳ್ಳಲು ಅನೇಕ ಉಪಾಧ್ಯಾಯರು ಪ್ರಯತ್ನಿಸುತ್ತಿದ್ದರು. ಇಂತಹ ಪರಿಸ್ಥಿತಿಯಲ್ಲಿ ಪ್ರತಿಯೊಂದು ಹಳ್ಳಿಗೆ ವರ್ಗವಾದಾಗಲೂ ಅದನ್ನು ಸವಾಲೆಂದು ಸ್ವೀಕರಿಸಿ ಶಾಲೆಗಳಲ್ಲಿ ಹಾಗೂ ಗ್ರಾಮಗಳಲ್ಲಿ ಪವಾಡ ಸದೃಶ ಪರಿವರ್ತನೆಯನ್ನುಂಟು ಮಾಡುತ್ತಾ ಬಂದ ಬೆಳಗೆರೆ ಕೃಷ್ಣಶಾಸ್ತ್ರಿಗಳು ಎಲ್ಲರ ಗೌರವಾದರಗಳಿಗೆ ಪಾತ್ರರಾಗಿದ್ದಾರೆ. ಬೆಳಗೆರೆ ಕೃಷ್ಣಶಾಸ್ತ್ರಿಗಳನ್ನು ಗೌರವಿಸಿ ಆದರಿಸಲು ಅವರ ಸಾಹಿತ್ಯಪ್ರೇಮ, ವಿದ್ವತ್ತು, ಲೋಕಾನುಭವ ಮಾತ್ರವಲ್ಲದೆ ಅವರ ಶುದ್ಧ ಅಂತಃಕರಣ ಸೇವಾಮನೋಭಾವ, ಪಾರದರ್ಶಕವಾದ ಪ್ರಾಮಾಣಿಕತೆ ಮುಖ್ಯಕಾರಣವೆಂದು ಹೇಳಬಹುದು. ಉತ್ತಮ ಉಪಾಧ್ಯಾಯನಾದವನು ಉತ್ತಮನಾದ ವ್ಯಕಿಯೂ ಆಗಿರಬೇಕು. ತನ್ನ ಸನ್ನಡತೆ ಸಚ್ಚಾರಿತ್ರ್ಯದಿಂದ ಭೇದ ಭಾವವಿಲ್ಲದೆ ಸರ್ವರಲ್ಲೂ ಬೆರೆತು ಸೇವೆ ಮಾಡುವ ಮನೋಭಾವದವನಾಗಿರಬೇಕು. ಕೃಷ್ಣಶಾಸ್ತ್ರಿಗಳ ಸರಳತೆ, ಸಜ್ಜನಿಕೆ ಮಾನವ ಪ್ರೇಮ ಹಳ್ಳಿಯ ಜನರ ಮೇಲೆ ಗಾಢವಾದ ಪ್ರಭಾವವನ್ನು ಬೀರಿತು. ಅವರು ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದಂತೆ ಹಳ್ಳಿಯ ಜನರಿಗೂ ಸನ್ಮಾರ್ಗವನ್ನು ತೋರಿದ ಗುರುವಾಗಿ ಆದರಣೀಯರಾದರು. ಅವರ ತಂದೆಯವರಾದ ಬೆಳೆಗೆರೆ ಚಂದ್ರಶೇಖರ ಶಾಸ್ತ್ರಿಗಳು ಆಶುಕವಿಗಳಾಗಿ, ಕಲಾರಸಿಕರಾಗಿ ಗ್ರಾಮಸ್ಥರ ಪ್ರೀತ್ಯಾದರಗಳಿಗೆ ಪಾತ್ರರಾಗಿದ್ದರು. ಬೆಳಗೆರೆ ಕೃಷ್ಣಶಾಸ್ತ್ರಿಗಳು ಅದೇ ಮಾರ್ಗದಲ್ಲಿ ಮುಂದುವರೆದು ಸಮಾಜದ ಗೌರವಾದರಗಳಿಗೆ ಪಾತ್ರರಾದರು. ಚಂದ್ರಶೇಖರ ಶಾಸ್ತ್ರಿಗಳದ್ದು ಅಧ್ಯಾತ್ಮ ಮನೋವೃತ್ತಿಯ ಮಹಾಚೇತನ. ಅವರ ಹಾಸ್ಯ ಮನೋವೃತ್ತಿ, ಆಶುಕವನ ರಚನೆ ನಾಡಿನ ಪ್ರಮುಖ ಸಾಹಿತಿಗಳ ಪ್ರಶಂಸೆಗೂ ಪಾತ್ರವಾಗಿತ್ತು. ಚಳ್ಳಕೆರೆಯ ಆಸುಪಾಸಿನ ಗ್ರಾಮಗಳಲ್ಲಿ ಅವರು ``ಕಡಲೇಕಾಯಿ ಶಾಸ್ತ್ರಿ''ಗಳೆಂದು ಖ್ಯಾತರಾಗಿದ್ದರು. ಹಳ್ಳಿಯ ಜನರೊಡನೆ ಅವರಲ್ಲಿ ಒಬ್ಬರಾಗಿ ಹಾಡು,ಕುಣಿತ ಸರಸ, ಸಲ್ಲಾಪಗಳಲ್ಲಿ ಭಾಗವಹಿಸಿ ಅವರ ಮನಸ್ಸನ್ನು ರಂಜಿಸಿ ಅವರು ತಮ್ಮ ಕಷ್ಟ ಕಾರ್ಪಣ್ಯಗಳನ್ನು ಮರೆಯುವಂತೆ ಮಾಡಿದರು. ಬೆಳಗೆರೆ ಕೃಷ್ಣಶಾಸ್ತ್ರಿಗಳು ಆರಂಭದ ಕಾಲದಿಂದಲೂ ಸಾತ್ವಿಕ ಮನೋವೃತ್ತಿಯುಳ್ಳವರಾಗಿದ್ದು, ಆಧ್ಯಾತ್ಮಿಕ ವಿಚಾರಗಳನ್ನು ಮೈಗೂಡಿಸಿಕೊಂಡಿದ್ದರು. ಹಲವಾರು ದಾರ್ಶನಿಕರ, ಸಂತರ ಬೋಧೆಯಿಂದ ಪ್ರಭಾವಿತರಾಗಿದ್ದರು. ರಮಣ ಮಹರ್ಷಿಗಳ ಆಶ್ರಮಕ್ಕೆ ಹೋಗಿ ಅಲ್ಲಿ ಅನೇಕ ತಿಂಗಳು ನೆಲೆಸಿದ್ದು ರಮಣಾಮೃತಧಾರೆಯಿಂದ ಪ್ರಭಾವಿತರಾಗಿದ್ದರು. ಹಾಗೆಯೇ ದೇಶದ ನಾನಾ ಧರ್ಮಕ್ಷೇತ್ರಗಳನ್ನು, ಸಾಂಸ್ಕೃತಿಕ ಕೇಂದ್ರಗಳನ್ನು ಸಂದರ್ಶಿಸಿ ಸ್ಪೂರ್ತಿ ಪಡೆದಿದ್ದರು. ಈ ಹಿನ್ನಲೆಯಲ್ಲಿ ಈ ಅನುಭವದ ಪರಿಣಾಮವಾಗಿ ಬೆಳಗೆರೆ ಕೃಷ್ಣಶಾಸ್ತ್ರಿಗಳ ಕಾರ್ಯ ಕ್ಷೇತ್ರ ವಿಸ್ತಾರಗೊಂಡಿದ್ದುದು ಸ್ವಾಭಾವಿಕವೇ ಆಗಿದ್ದಿತು. ಅವರು ತಮ್ಮ ಚಟುವಟಿಕೆಗಳನ್ನು ನಾಲ್ಕು ಗೋಡೆಗಳ ಮಧ್ಯಕ್ಕೇ ಮೀಸಲಾಗಿರಿಸದೆ ತಮ್ಮ ಮನಸ್ಸನ್ನು, ಹೃದಯವನ್ನು ತೆರೆದು ಜನಮಾನಸದಲ್ಲಿ ಬೆರೆತು ಹೋದರು. ಹಳ್ಳಿಗಳಲ್ಲಿ ಕವನ ವಾಚನ, ಗಾಯನ, ಜಾನಪದ ಕಲೆಗಳ ಪ್ರೋತ್ಸಾಹ ಮುಂತಾದ ಚಟುವಟಿಕೆಗಳಿಂದ ತಾವು ಹೋದ ಗ್ರಾಮಗಳಲ್ಲೆಲ್ಲಾ ಸಂಚಲನವನ್ನುಂಟು ಮಾಡಿದರು. ಮುಕುಂದೂರು ಸ್ವಾಮಿಗಳೆಂಬ ಒಬ್ಬ ಮಹಿಮಾವಂತ ಅವಧೂತರನ್ನು ಲೋಕಕ್ಕೆ ತೋರಿಸಿಕೊಟ್ಟದ್ದು ಬೆಳಗೆರೆ ಕೃಷ್ಣಶಾಸ್ತ್ರಿಗಳ ಅಮೂಲ್ಯವಾದ ಕೊಡುಗೆ. ಚಿಕ್ಕಮಗಳೂರು ಜಿಲ್ಲೆಯಲ್ಲಿದ್ದ ಈ ಅಪರೂಪದ ಸಂತ ಸ್ವಾಮಿಯೊಡನೆ ನಿಕಟವಾದ ಸಂಪರ್ಕವನ್ನು ಹೊಂದಿದ್ದ ಬೆಳಗೆರೆ ಕೃಷ್ಣಶಾಸ್ತ್ರಿಗಳು ಅವರ ಅಚ್ಚುಮೆಚ್ಚಿನ ಶಿಷ್ಯರಾಗಿದು,್ದ ಅವರ ಅಮೂಲ್ಯ ಬೋಧೆಗಳನ್ನು, ಸಂದೇಶಗಳನ್ನು ಸಂಗ್ರಹಿಸಿ ಅವುಗಳನ್ನು ನಮಗೆ ನೀಡಿದ್ದಾರೆ. ಮುಕುಂದೂರು ಸ್ವಾಮಿಗಳನ್ನು ಕುರಿತು ಕೃಷ್ಣಶಾಸ್ತ್ರಿಗಳು ಬರೆದಿರುವ `ಯೇಗ್ದಾಗೆಲ್ಲ ಐತೆ' ಎನ್ನುವ ಗ್ರಂಥವು ಈ ಮಹಾಚೇತನದ ಸುಂದರ ಚಿತ್ರಣವನ್ನೇ ನೀಡುವ ರಸಮಯ ಕೃತಿಯಾಗಿದೆ. ಕನ್ನಡದಲ್ಲಿ ಅತ್ಯಂತ ಹೆಚ್ಚು ಬಾರಿ ಅಚ್ಚಾಗಿರುವ ಗ್ರಂಥಗಳಲ್ಲಿ ಈ ಕೃತಿಯನ್ನು ಸೇರಿಸಬಹುದು. ಹಾಗೆಯೇ ಕೃಷ್ಣಶಾಸ್ತ್ರಿಗಳು `ಸಾಹಿತಿಗಳ ಸ್ಮೃತಿ' ಎಂಬ ಪುಸ್ತಕವನ್ನು ಬರೆದಿದ್ದಾರೆ. ಇದರಲ್ಲಿ ಕನ್ನಡ ಸಾಹಿತ್ಯದ ದಿಗ್ಗಜರನ್ನು ಭೇಟಿ ಮಾಡಿ ಅವರೊಡನೆ ಕಳೆದ ರಸನಿಮಿಷಗಳನ್ನು ಅತ್ಯಾಕರ್ಷಕವಾಗಿ ವಿವರಿಸಿದ್ದಾರೆ. `ದುಂಬಿ' ಎಂಬ ಅವರ ಕವನ ಸಂಕಲನ ಕಾವ್ಯರಸಿಕರ ಮನಗೆದ್ದ ಮತ್ತೊಂದು ಕೃತಿ. ಈ ರೀತಿಯ ಸಾಹಿತ್ಯ, ಸಂಸ್ಕೃತಿ, ದರ್ಶನ ಮುಂತಾದ ಶ್ರೇಷ್ಠ ಪರಂಪರೆಗಳನ್ನು ಮೈಗೂಡಿಸಿಕೊಂಡ ಕೃಷ್ಣಶಾಸ್ತ್ರಿಗಳು ತಾವು ಹೋದ ಕಡೆಯಲ್ಲೆಲ್ಲಾ ಜನರಲ್ಲಿ ಕಾವ್ಯಾನುಭವವನ್ನುಂಟು ಮಾಡಲು, ಸಾಹಿತ್ಯಾಸಕ್ತಿಯನ್ನು ಉದ್ದೀಪನಗೊಳಿಸಲು ಪ್ರಯತ್ನಿಸುತ್ತಾ ಬಂದಿದ್ದಾರೆ. ಹಳ್ಳಿಗಳಲ್ಲಿ ನಾಟಕ ತಂಡಗಳನ್ನು ಕಟ್ಟಿ ಜನರಲ್ಲಿ ರಂಗ ಕಲೆಯ ಅಭಿವೃದ್ಧಿಯಾಗುವಂತೆ ಮಾಡುವುದು ಮಾತ್ರವಲ್ಲದೆ ತಮ್ಮ ನಾಟಕ ಪ್ರದರ್ಶನಗಳಿಂದ ಹಳ್ಳಿಗಳಲ್ಲಿ ಸಹ ಜೀವನ, ಸೇವಾ ಮನೋಭಾವ, ಪ್ರಾಮಾಣಿಕತೆ ಮುಂತಾದ ಸದ್ಗುಣಗಳನ್ನು ಬೆಳೆಸುವ ಪ್ರಯತ್ನ ಮಾಡಿದ್ದಾರೆ. ಇವರು ಬರೆದ `ಹಳ್ಳಿಮೇಷ್ಟ್ರು' ನಾಟಕ ಅತ್ಯಂತ ಜನಪ್ರಿಯವಾದ ಕೃತಿಯಾಗಿದ್ದು ರಾಷ್ಟ್ರ ಪ್ರಶಸ್ತಿಗೆ ಪಾತ್ರವಾದ ಕೃತಿ. ಗ್ರಾಮೀಣ ಪರಿಸರದಲ್ಲಿ ಶಿಕ್ಷಕನಾದವನು ಅನುಭವಿಸುವ ಸಮಸ್ಯೆಗಳೇನು ? ಉಪಾಧ್ಯಾಯನು ವಿದ್ಯಾರ್ಥಿಗಳಿಗೆ ಜ್ಞಾನವನ್ನು ನೀಡುವಂತೆ ಆ ಪ್ರದೇಶದ ಜನಗಳಿಗೂ ಮಾರ್ಗದರ್ಶನ ಮಾಡುವಂತಿರಬೇಕು. ಅವರು ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತೊಡಗುವಂತೆ ಅವರನ್ನು ಪ್ರೇರೇಪಿಸಬೇಕು, ಎಂಬುದು ಈ ಕೃತಿಯನ್ನು ಓದಿದಾಗ ಸ್ಪಷ್ಟವಾಗುತ್ತದೆ. ಬೆಳಗೆರೆ ಕೃಷ್ಣಶಾಸ್ತ್ರಿಗಳು ಹಳ್ಳಿ ಹಳ್ಳಿಯಲ್ಲೂ ಸಂಚರಿಸುವಾಗ ಗ್ರಾಮೀಣ ಜನರ ಕಲಾಭಿರುಚಿಯನ್ನು ಬೆಳೆಸಿ ಅವರು ತಮ್ಮ ಪ್ರಾಚೀನ ಕಾಲದ ಪರಂಪರೆಯಿಂದ ಅನುಸರಿಸಿಕೊಂಡು ಬರುತ್ತಿರುವ ಕಲೆಗಳನ್ನು ರಕ್ಷಿಸಿ, ಪೋಷಿಸಿಕೊಂಡು ಬರಬೇಕೆಂಬ ಸಂದೇಶವನ್ನು ಒತ್ತಿ ಹೇಳಿದ್ದಾರೆ. ಜಾನಪದ ನೃತ್ಯಗಳಿಗೆ ಪ್ರೋತ್ಸಾಹ ನೀಡಿದ್ದು ಗಾಯನ, ಜನಪದ ನೃತ್ಯ, ಮೊದಲಾದ ಆಧುನಿಕ ಯುಗದಲ್ಲಿ ನಶಿಸಿ ಹೋಗುತ್ತಿದ್ದ ಕಲೆಯನ್ನು ಪೋಷಿಸಿಕೊಂಡು ಬರುವುದರಲ್ಲಿ ಕೃಷ್ಣಶಾಸ್ತ್ರಿಗಳು ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಅವರು ಜನಪದ ಸಾಹಿತ್ಯದಲ್ಲಿ ನಿಪುಣರಾದ ಅನೇಕ ಗ್ರಾಮಸ್ಥರು ತಮ್ಮ ಕಲೆಗಳನ್ನು ರಕ್ಷಿಸಿ ಪೋಷಿಸಿಕೊಂಡು ಬರಲು ನೆರವಾಗಿದ್ದಾರೆ. ಅದರಲ್ಲೂ ಜನಪದ ಕವಿಗಳ ಕಾವ್ಯಸಂಗ್ರಹರಲ್ಲಿ ಅವರ ಕೊಡುಗೆ ಅತ್ಯಮೂಲ್ಯವಾದುದು. ಅವರ ಹಳ್ಳಿಗೆ ಸಮೀಪದಲ್ಲಿ ಇದ್ದ ಬೆಳೆಗೆರೆ ಸಿರಿಯಜ್ಜಿ ಎಂಬ ಪ್ರತಿಭಾನ್ವಿತ ಜನಪದ ಗಾಯಕಿಯನ್ನು ಗುರುತಿಸಿ, ವಿದ್ವಾಂಸರು ಆಕೆಯ ಅಧಿಕ ಸಂಖ್ಯೆಯ ಕಾವ್ಯಗಳನ್ನು ಸಂಗ್ರಹಿಸಲು ಏರ್ಪಾಡು ಮಾಡಿದವರು ಕೃಷ್ಣಶಾಸ್ತ್ರಿಗಳು. ಹಾಗೆಯೇ ಆಕೆಗೆ ಸೂಕ್ತವಾದ ಸನ್ಮಾನ, ಬಹುಮಾನ, ಜೀವನಾಂಶಗಳೂ ದೊರಕುವಂತೆ ಮಾಡುವಲ್ಲಿ ಶ್ರಮಿಸಿದ್ದಾರೆ. ಅದೇ ರೀತಿಯಲ್ಲಿ ಗ್ರಾಮಸ್ಥರ ಕುಂದುಕೊರತೆ, ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸಿ ಅವರಿಗೆ ಸೂಕ್ತ ಸೌಲಭ್ಯ, ಪರಿಹಾರ, ನೆರವು ದೊರಕಿಸಿಕೊಡಲು ಶ್ರಮಿಸಿದ್ದಾರೆ. ನಮ್ಮ ನಾಡಿನ ಗ್ರಾಮೀಣ ಶಾಲೆಗಳ ದುಸ್ಥಿತಿ, ಸರಕಾರದ ನಿರ್ಲಕ್ಷ್ಯ ಸರ್ವವಿದಿತವಾದುದು. ಆದರೆ, ಅನೇಕ ಹಳ್ಳಿಗಳಲ್ಲಿ ಈ ಮೂಲಭೂತ ಸೌಕರ್ಯಗಳನ್ನು ನಿವಾರಿಸಿಕೊಳ್ಳುವ ಸಾಮಥ್ರ್ಯವಾಗಲಿ, ಸಂಘಟನೆಗಳಾಗಲಿ, ಇಲ್ಲದಿದ್ದುದರಿಂದ ಅವರು ಅನಾನುಕೂಲ, ಅವ್ಯವಸ್ಥೆಗಳ ನಡುವೆ ಬಾಳು ಸವೆಸಬೇಕಾಗಿದ್ದಿತು. ಬೆಳಗೆರೆ ಕೃಷ್ಣಶಾಸ್ತ್ರಿ ಊರು ಹೊಕ್ಕ ಮೇಲೆ ಇಂತಹ ಕೊರತೆಗಳು, ಕಷ್ಟ ಕಾರ್ಪಣ್ಯಗಳು ಒಂದೊಂದೆ ಮರೆಯಾಗುತ್ತಾ ಬಂದವು. ಅವರು ಶಿಕ್ಷಕರಾಗಿ ಹೋದ ಗ್ರಾಮಗಳಲ್ಲಿ ಶಾಲಾ ಕಟ್ಟಡ ವಸತಿ ಮೊದಲಾದ ತೊಂದರೆಗಳಿದ್ದವು. ಸರ್ಕಾರದ ಅನುದಾನಕ್ಕಾಗಿ ಕಾದು ಕುಳಿತುಕೊಳ್ಳುವುದರಿಂದ ಪ್ರಯೋಜನವಿರಲಿಲ್ಲ ಆದ್ದರಿಂದ ಹಳ್ಳಿಯಲ್ಲಿ ಶಾಲೆಯನ್ನು ಗ್ರಾಮದ ಜನರ ನೆರವಿನಿಂದಲೇ ನಿರ್ಮಿಸಿಕೊಡುವ ಕಾರ್ಯವನ್ನು ಆರಂಭಿಸಿದರು. ಇವರ ನಿರ್ಧಾರಕ್ಕೆ ಊರಿನ ಜನ ಉತ್ಸಾಹದಿಂದ ಬೆಂಬಲ ನೀಡಿದರು. ಶಾಲಾ ಕಟ್ಟಡವನ್ನು ಕಟ್ಟಲು ಕಾರ್ಯಾರಂಭ ಮಾಡಿದಾಗ ಊರಿಗೆ ಊರೇ ಅವರ ಜತೆ ಕೈಜೋಡಿಸಿತು. ಕೆಲವರು ಭೂಮಿಯನ್ನು ದಾನವಾಗಿ ಕೊಟ್ಟರೆ, ಕೆಲವರು ಇಟ್ಟಿಗೆ, ಸಿಮೆಂಟ್, ಹೆಂಚು ಹೀಗೆ ಅನೇಕ ಸಾಮಾಗ್ರಿಗಳನ್ನು ಶಾಲಾ ನಿರ್ಮಾಣಕ್ಕೆ ದಾನ ಮಾಡಿದರು. ಚಳ್ಳಕೆರೆ ತಾಲ್ಲೂಕಿನ ಮೀರಾಸಾಬಹಳ್ಳಿಯಲ್ಲಿ ಗ್ರಾಮಸ್ಥರ ನೆರವಿನಿಂದ ಒಂದು ಶಾಲೆ, ಉಪಾಧ್ಯಾಯರ ವಸತಿ ಗೃಹಗಳು ಮತ್ತು ಒಂದು ಆಸ್ಪತ್ರೆಯನ್ನು ಕಟ್ಟಿಸಿದರು. ಊರಿನ ಜನರ ಶ್ರಮದಾನ ಹಾಗೂ ಧನಸಹಾಯದಿಂದ ಈ ಕಟ್ಟಡಗಳು ಮೇಲೆದ್ದು ನಿಂತವು. ಹಾಗೆಯೇ ಹೆಗ್ಗೆರೆಯಲ್ಲಿಯೂ ದೊಡ್ಡ ಶಾಲಾ ಕಟ್ಟಡ ಹಾಗೂ ವಸತಿಗೃಹಗಳನ್ನು ನಿರ್ಮಿಸಿಕೊಟ್ಟರು. ಬೆಳೆಗೆರೆಯಲ್ಲಿ ತಾವು ವಾಸಿಸುತ್ತ್ತಿದ್ದ ವಿಶಾಲವಾದ ಮನೆಯನ್ನು ಊರಿನ ಶಾಲೆಗೆಂದು ಬಿಟ್ಟುಕೊಟ್ಟು ತಾವು ಒಂದು ಗುಡಿಸಲನ್ನು ಕಟ್ಟಿಕೊಂಡು ಅಲ್ಲೇ ನಿವೃತ್ತಿಯ ನಂತರ ನೆಲೆಸಿ ಸೇವಾಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಕೃಷ್ಣಶಾಸ್ತ್ರಿಗಳ ಮಾರ್ಗದರ್ಶನದಲ್ಲಿ ನಿರ್ಮಿತವಾದ ಈ ಶಾಲೆ ಆಸ್ಪತ್ರೆಗಳು ಕೇವಲ ಇಟ್ಟಿಗೆ ಮಣ್ಣಿನ ಗೂಡುಗಳಾಗಿರಲಿಲ್ಲ. ಅವು ಪ್ರೀತಿ, ಪ್ರೇಮ, ಶ್ರದ್ಧೆ ಸೇವೆಯ ಸಂಕೇತಗಳಾಗಿ ಕಂಗೊಳಿಸಿದವು. ಬಹುಬೇಗ ಅವು ವಿದ್ಯಾ ಕೇಂದ್ರಗಳಾಗಿದ್ದಂತೆ, ಹಳ್ಳಿಯ ಸಾಂಸ್ಕೃತಿಕ ಚಟುವಟಿಕೆಯ ಕೇಂದ್ರ ಬಿಂದುಗಳಾದವು. ನಾಟಕ, ಪ್ರವಚನ, ಸಾಹಿತಿಗಳ ಉಪನ್ಯಾಸಗಳನ್ನು ಏರ್ಪಡಿಸಿ ಹಳ್ಳಿಗಳಲ್ಲಿ ಜಾಗೃತಿಯನ್ನುಂಟು ಮಾಡುವಲ್ಲಿ ಈ ಶಾಲೆ ಪ್ರಮುಖ ಪಾತ್ರವಹಿಸಿತು. ಇಂತಹ ಕಾರ್ಯಕ್ರಮಗಳು ಗ್ರಾಮೀಣ ಜನರು ಕ್ಷಣ ಕಾಲ ತಮ್ಮ ಕಷ್ಟ ಕಾರ್ಪಣ್ಯಗಳನ್ನು ಮರೆತು ನಕ್ಕು ನಲಿಯುವಂತೆ ಮಾಡಿದ್ದೇನೋ ನಿಜ ಆದರೆ ಬೆಳಗೆರೆ ಕೃಷ್ಣಶಾಸ್ತ್ರಿಗಳ ಕಾರ್ಯಕ್ಷೇತ್ರ ವಿಸ್ತರಿಸುತ್ತಾ ಹೋಗಿ ಅವು ಜನರಲ್ಲಿ ಜೀವನೋತ್ಸಾಹ ಕರ್ತವ್ಯ ಪ್ರಜ್ಞೆಯನ್ನು ಮೂಡಿಸುತ್ತಾ ಹೋದುದು, ಕೆಲವು ಪಟ್ಟಭದ್ರ ನಾಯಕರಿಗೆ ತಡೆಯಲಾಗಲಿಲ್ಲ. ಹಳ್ಳಿಗಳಲ್ಲಿ ತಲೆತಲಾಂತರರಿಂದ ಪಾಳೆಗಾರಿಕೆ ಮಾಡಿಕೊಂಡು ಮುಗ್ಧ ಜನರನ್ನು ಶೋಷಿಸುತ್ತಿದ್ದ ಭಂಡ ನಾಯಕರಿಗೆ ಕೃಷ್ಣಶಾಸ್ತ್ರಿಗಳ ಗ್ರಾಮೋದ್ಧಾರ ಶೈಕ್ಷಣಿಕ ಸೇವೆ ಹಿಡಿಸಲಿಲ್ಲ. ಊರಿನಲ್ಲಿ ಕ್ಷುದ್ರ ರಾಜಕಾರಣ, ಅತಿಯಾದ ಶೋಷಣೆ, ದೀನ ದಲಿತರ ತುಳಿತ, ಮೊದಲಾದವುಳಿಂದ ಜೀವನ ಸಾಗಿಸುತ್ತಿದ್ದ ಕಪಟ ನಾಯಕರಿಗೆ ಈ ಹಳ್ಳಿಮೇಷ್ಟ್ರು ಮಾಡುತ್ತಿದ್ದ ಸಮಾಜಸೇವೆ ತಮ್ಮ ಗುರಿ ಸಾಧಿಸಲು ಅಡ್ಡಿಯಾದಂತಾಯಿತು. ಅವರ ಮೇಲೆ ಅನೇಕ ಸುಳ್ಳು ಆರೋಪಗಳನ್ನು ಮಾಡಿ ಕೇಸು ದಾಖಲಿಸಲಾಯಿತು. ಹಳ್ಳಿಗಳಲ್ಲಿ ನಡೆದ ಗುಂಪುಘರ್ಷಣೆಗಳಲ್ಲಿ ಕೃಷ್ಣಶಾಸ್ತ್ರಿಗಳು ಕಸರತ್ತು ನಡೆಸಿದ್ದಾರೆ ಎಂದು ದೂರು ನೀಡಲಾಯಿತು. ಅವರು ಕೋರ್ಟು ಮೆಟ್ಟಿಲೇರಬೇಕಾಗಿ ಬಂದಿತು. ಹೀಗೆ ಯಾವ ತಪ್ಪೂ ಮಾಡದ ಕೃಷ್ಣಶಾಸ್ತ್ರಿಗಳು ಸಂಕುಚಿತ ವ್ಯಕ್ತಿಗಳ ಕೀಳು ರಾಜಕೀಯ ದಳ್ಳುರಿಗೆ ಸಿಕ್ಕಿ ಪರಿತಪಿಸಬೇಕಾಗಿ ಬಂದರೂ ಈ ಅಗ್ನಿ ಪರೀಕ್ಷೆಯಲ್ಲಿ ಜಯ ಗಳಿಸಿ ಪರಿಶುದ್ಧರಾಗಿ ಹೊರಹೊಮ್ಮಿದರು. ಬೆಳಗೆರೆ ಎಂಬ ಸಣ್ಣ ಗ್ರಾಮಕ್ಕೆ ಒಂದು ಬೌದ್ಧಿಕ ಮಹತ್ವ ಬರುವಂತೆ ಮಾಡಿದವರಲ್ಲಿ ಕೃಷ್ಣಶಾಸ್ತ್ರಿಗಳು ಬಹಳ ಮುಖ್ಯರಾದವರು. ಅವರ ಕುಟುಂಬದವರೆಲ್ಲ ಒಂದಲ್ಲ ಒಂದು ಕಾರಣಕ್ಕಾಗಿ ಸಾರಸ್ವತ ಲೋಕದಲ್ಲಿ ಹೆಸರು ಮಾಡಿದವರು. ಕನ್ನಡ ನಾಡಿನ ಪ್ರತಿಷ್ಠಿತ ಸಾಹಿತಿಗಳಲ್ಲನೇಕರು ಬೆಳೆಗೆರೆಗೆ ಬಂದು ಬೆಳಗೆರೆ ಕೃಷ್ಣಶಾಸ್ತ್ರಿ ಅವರ ಬಳಿ ವಿಚಾರ ವಿನಿಮಯ ನಡೆಸಿದ್ದಾರೆ. ಬೆಳಗೆರೆಯ ನಿಸರ್ಗ ರಮಣೀಯತೆಯಿಂದ ಸ್ಫೂರ್ತಿ ಪಡೆದಿದ್ದಾರೆ. ಅನೇಕ ವಿದ್ವಾಂಸರು, ಸಾಹಿತಿಗಳು, ಕೃಷ್ಣಶಾಸ್ತ್ರಿ ಅವರಿಂದ ಮಾಹಿತಿ, ವಿಚಾರ, ಅಭಿಪ್ರಾಯಗಳನ್ನು ಪಡೆದುಕೊಂಡು ಗ್ರಂಥಗಳನ್ನು ರಚಿಸಿದ್ದಾರೆ. ತಮ್ಮೆಲ್ಲ ಶಕ್ತಿ, ಸಾಮಥ್ರ್ಯ, ಸಂಪತ್ತು, ಸಮಯವನ್ನು ಜನಸೇವೆಗೆ ಮುಡಿಪಾಗಿಟ್ಟು ತಮಗಾಗಿ ಏನನ್ನೂ ಬಯಸದೇ ನಿ:ಸ್ವಾರ್ಥ ಜೀವನವನ್ನು ಸಾಗಿಸುತ್ತಿರುವ ಬೆಳಗೆರೆ ಕೃಷ್ಣಶಾಸ್ತ್ರಿಗಳು ನಮ್ಮ ನಡುವಿನ ಅಪರೂಪದ ಜನಸೇವಕರು. ಬೆಳಗೆರೆಯಲ್ಲಿ ಅವರು ಮತ್ತು ಅವರ ಕುಟುಂಬದವರು ಕಟ್ಟಿ ಬೆಳೆಸಿರುವ ಶಾಲೆ ಕೃಷ್ಣಶಾಸ್ತ್ರಿಗಳ ಪ್ರೀತಿ, ತ್ಯಾಗ, ಸೇವೆಯ ಸಂಕೇತ. ಒಂದು ಹಳ್ಳಿಯಲ್ಲಿ ಅಷ್ಟು ದೊಡ್ಡ ಶಾಲೆಯನ್ನು ನಿರ್ಮಿಸಿ ನಡೆಸುವುದು ಸುಲಭದ ಮಾತಲ್ಲ. ಅದರೊಂದಿಗೆ ಶಾಲೆಯಲ್ಲಿ ಉಚಿತ ವಸತಿನಿಲಯವನ್ನು ಸ್ಥಾಪಿಸಿ ನೂರಾರು ಜನರಿಗೆ ವಿದ್ಯೆ, ವಸತಿ, ಆಹಾರವನ್ನು ನೀಡುತ್ತಿರುವುದು ನಿಜಕ್ಕೂ ಒಂದು ಮಹತ್ವದ ಸಾಧನೆ. ತಮ್ಮ ಸಂಪತ್ತಿನ ಬಹುಪಾಲು ಗ್ರಾಮೀಣ ಜನರ ಬದುಕನ್ನು ಹಸನು ಮಾಡಲು ವಿನಿಯೋಗಿಸಿರುವ ಕೃಷ್ಣಶಾಸ್ತ್ರಿಗಳ ಶ್ರಮದ ಫಲವಾಗಿ ಬೆಳೆಗೆರೆಯ ಶಾಲೆ ಎದ್ದು ನಿಂತಿದೆ. ತಮ್ಮ ಪುಸ್ತಕಗಳ (ಯೇಗ್ದಾಗೆಲ್ಲ ಐತೆ) ಮಾರಾಟದಿಂದ ಬಂದ ಹಣದಿಂದ ತಮ್ಮ ಊರಿನ ಶಾಲೆ ಮತ್ತು ವಸತಿ ನಿಲಯವನ್ನೂ ನಡೆಸುತ್ತಿದ್ದಾರೆ. ಬಹುಮುಖ ಪ್ರತಿಭೆಯ, ಬಹು ವಿಧವಾದ ಕಾರ್ಯಕ್ರಮಗಳಿಂದ ಮಾನವ ಸೇವೆಯಲ್ಲಿ ತೊಡಿಗಿಸಿಕೊಂಡಿರುವ ಕೃಷ್ಣಶಾಸ್ತ್ರಿಗಳು ತಮ್ಮ ಸುತ್ತಲಿರುವ ಜನರ ಬಾಳಿನಲ್ಲಿ ಅಲ್ಪವಾದರೂ ಸಂತಸವನ್ನು ತರಲು ಶ್ರಮಿಸಿದ್ದಾರೆ. ಹಳ್ಳಿಯಾಗಲಿ, ಪಟ್ಟಣವಾಗಲಿ ತಾವು ಹೋದ ಕಡೆ ಸಮಾಜದಲ್ಲಿ ನೆಲೆಸಿದ ಕಲ್ಮಷಗಳನ್ನು ತೊಡೆದು ಹಾಕಿ ಶಾಂತಿ, ನೆಮ್ಮದಿ, ಸಂತಸ ನೆಲೆಸುವಂತೆ ಮಾಡುತ್ತಾ ಬಂದಿದ್ದಾರೆ. ಗ್ರಾಮೀಣ ಜನರನ್ನು ಉದ್ಧಾರ ಮಾಡುವುದಾಗಿ ಸದಾ ಘೋಷಿಸಿಕೊಳ್ಳುವ ಮುಖಂಡರಿಗೆ, ಅಧಿಕಾರಿಗಳಿಗೆ ಕೃಷ್ಣಶಾಸ್ತ್ರಿಗಳ ಜೀವನ ಮತ್ತು ಸಾಧನೆ ಒಂದು ಆದರ್ಶವಾಗಿ ನಿಲ್ಲಬಲ್ಲದು. ಪ್ರಾಮಾಣಿಕ, ಪಾರದರ್ಶಕ ಜೀವನ ಪರಿಶುದ್ಧ ವ್ಯಕ್ತಿತ್ವ ಸುತ್ತಲಿನ ಜನರ ಬಾಳನ್ನು ಹಸನು ಮಾಡುವ ಗುರಿ ಬೆಳಗೆರೆ ಕೃಷ್ಣಶಾಸ್ತ್ರಿಗಳ ಜೀವನದ ಸಾರಾಂಶವೆನ್ನಬಹುದು. ಸಮಾಜ ಪರಿವರ್ತನೆಯಲ್ಲಿ ಅದೆಷ್ಟೋ ವ್ಯಕ್ತಿಗಳು, ಸಂಸ್ಥೆಗಳು ನಿರತವಾಗಿವೆ. ತಮ್ಮದೇ ಆದ ರೀತಿಯಲ್ಲಿ ಮನುಷ್ಯನ ಬದುಕಿನ ದುಗುಡ ದುಮ್ಮಾನಗಳನ್ನು ದೂರಮಾಡಿ ಸಂತಸವನ್ನು ತರಲು ಶ್ರಮಿಸುತ್ತಿದ್ದಾರೆ. ಅಧ್ಯಯನ ಬೋಧನೆ, ಸಾಹಿತ್ಯರಚನೆ ಗ್ರಾಮೋದ್ಧಾರ ಅವರ ದಿನಚರಿಯಾಯಿತು, ಬೆಳಗೆರೆ ಕೃಷ್ಣಶಾಸ್ತ್ರಿಗಳು ಹದಿನಾರಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ, ಅವುಗಳಲ್ಲಿ ಮುಖ್ಯವಾದುವು ಹೀಗಿವೆ. 1.ತುಂಬಿ (ಕವನ ಸಂಕಲನ) 2.ಹಳ್ಳಿ ಚಿತ್ರ 3.ಹಳ್ಳಿ ಮೇಷ್ಟ್ರು 4.ಪದ್ಮಿನಿ 5.ಸಾಹಿತಿಗಳ ಸ್ಮೃತಿ 6.ಚಿನ್ಮಯ ಸಂಭಾವನಾ ಗ್ರಂಥ 7.ಯೇಗ್ದಾಗೆಲ್ಲಾ ಐತೆ 8.ಮರೆಯಲಾದೀತೆ 9.ಎಲೆಮರೆಯ ಅಲರು 10.ಅಂತಧ್ರ್ವನಿ 11.ಆತ್ಮಜ್ಞಾನ 12.ಪಾಶುಪತಾಸ್ತ್ರ 13.ಏಕಲವ್ಯ 14.ಸೋಹ್ರಾಬ್ ರುಸ್ತುಂ 15.ಹಿಂಗೂ ಮಾಡಿ ನೋಡ್ರಿ `ಚಿನ್ಮಯ' ಕೃಷ್ಣಶಾಸ್ತ್ರಿಗಳ ಅಭಿಮಾನಿಗಳು ಅವರಿಗೆ 1979 ರಲ್ಲಿ ಅರ್ಪಿಸಿದ ಸಂಭಾವನಾಗ್ರಂಥ. 350 ಪುಟಗಳ ಈ ಗ್ರಂಥದಲ್ಲಿ ಎರಡು ಭಾಗಗಳಿವೆ 1) ಕೃಷ್ಣಶಾಸ್ತ್ರಿಗಳನ್ನು ಕುರಿತ ಲೇಖನಗಳು 2) ವೈಚಾರಿಕ ಲೇಖನಗಳು ಪ್ರೊ.ಎಂ.ವಿ. ಶ್ರೀನಿವಾಸ್ ಮತ್ತು ಡಾ. ಕೃಷ್ಣಮೂರ್ತಿ ಹಾನೂರು ಈ ಗ್ರಂಥದ ಸಂಪಾದಕರು. ಪುಸ್ತಕವನ್ನು ಕುರಿತ ಪತ್ರಿಕೆಗಳು ತಮ್ಮ ಪ್ರಶಂಸೆಯನ್ನು ವ್ಯಕ್ತಪಡಿಸಿವೆ. ಡಾ.ಹಾಮಾನಾಯಕರು `ಕಾಡು ಬೆಳದಿಂಗಳು' ಎಂಬ ಸೊಗಸಾದ ಲೇಖನವನ್ನು ಬರೆದು ಕೃಷ್ಣಶಾಸ್ತ್ರಿಗಳ ಸೇವೆಯನ್ನು ಶ್ಲಾಘಿಸಿದ್ದಾರೆ. ಕೃಷ್ಣಶಾಸ್ತ್ರಿಗಳು ಸಾಹಿತ್ಯ ರಚನೆಯಲ್ಲಿ ತೊಡಗಿಕೊಳ್ಳಲು ಒಂದು ಸ್ವಾರಸ್ಯಕರವಾದ ಮಗ್ಗಲೂ ಇದೆ. ಅವರು ಹಳ್ಳಿಗಳಿಗೆ ಹೋದಾಗ ಅಲ್ಲಿ ಶಾಲಾ ಶಿಕ್ಷಕರ ವಸತಿ ಗೃಹಗಳನ್ನು ಕಟ್ಟಿಸುತ್ತಿದ್ದರು. ಕಟ್ಟಡದ ನಿರ್ಮಾಣದಲ್ಲಿ ಗ್ರಾಮಸ್ಥರು ಶ್ರಮದಾನ ಮಾಡುತ್ತಿದ್ದರು. ಕಬ್ಬಿಣ, ಸಿಮೆಂಟ್, ಕಲ್ಲು ಇತ್ಯಾದಿಗಳಿಗೆ ಹಣಬೇಕಾಗುತ್ತಿತ್ತು. ಅದಕ್ಕಾಗಿ ಕೃಷ್ಣಶಾಸ್ತ್ರಿಗಳು ನಾಟಕಗಳ ರಚನೆಯನ್ನು ಕೈಗೊಂಡರು. ಆ ನಾಟಕಗಳ ಪ್ರದರ್ಶನವನ್ನು ಏರ್ಪಡಿಸಿ ಬೆನಿಫಿಟ್ ಶೋ ಮೂಲಕ ಸಾಕಷ್ಟು ಹಣವನ್ನು ಸಂಗ್ರಹಿಸಿತು. ಸಾಹಿತಿಗಿರುವ ಸ್ವಾಭಾವಿಕವಾದ ತುಡಿತದೊಂದಿಗೆ ಸಾಮಾಜಿಕ ಸೇವೆಯು ಅವರ ಗುರಿಯಾಗಿದ್ದಿತು. ಶಿಕ್ಷಕರಾಗಿ ಸಾರ್ಥಕ ಸೇವೆಯನ್ನು ಸಲ್ಲಿಸಿ ನಿವೃತ್ತಿಯಾದ ಮೇಲೆ ಗ್ರಾಮ ಸೇವೆಗೆಂದೇ ತಮ್ಮ ಜೀವನವನ್ನು ಮುಡಿಪಾಗಿಟ್ಟುಕೊಂಡಿದ್ದ ಕೃಷ್ಣಶಾಸ್ತ್ರಿಗಳು ಕೈಕಟ್ಟಿಕೊಂಡು ಕುಳಿತುಕೊಳ್ಳುವುದು ಸಾಧ್ಯವಿರಲಿಲ್ಲ. ಅವರ ತಂದೆಯವರಾದ ಚಂದ್ರಶೇಖರ ಶಾಸ್ತ್ರಿಗಳು ಬೆಳಗೆರೆಯಲ್ಲಿ ಒಂದು ಶಾಲೆಯನ್ನು ಕಟ್ಟಿಸಿ ಕೊಡುವಂತೆ ತಮ್ಮ ಮಕ್ಕಳಿಗೆ ಸೂಚಿಸಿದ್ದರು. ಕೃಷ್ಣಶಾಸ್ತ್ರಿಗಳ ಅಣ್ಣನವರಾದ ಪ್ರಸಿದ್ದ ಸಾಹಿತಿ ಬಿ.ಸೀತಾರಾಮಶಾಸ್ತ್ರಿಗಳು ಒಂದು ಶಾಲೆ ಸ್ಥಾಪಿಸಲು ಹಣ ನೀಡಿದರು. 1966 ರಲ್ಲಿ ಸಣ್ಣ ಗಿಡವಾಗಿ ಪ್ರಾರಂಭವಾದ ಈ ಶಾಲೆ ಇಂದು ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯೆ ನೀಡುವ ಹೆಮ್ಮರವಾಗಿ ಬೆಳೆದಿದೆ. ಕೃಷ್ಣಶಾಸ್ತ್ರಿಗಳ ಪುಸ್ತಕ "ಯೇಗ್ದಾಗೆಲ್ಲಾ ಐತೆ" ಕೃತಿಯ ಮಾರಾಟದಿಂದ ಬಂದ ಹಣದಿಂದ ಶಾಲೆ ಮತ್ತು ಉಚಿತ ವಸತಿ ನಿಲಯವನ್ನು ನಡೆಸಲು ಸಾಧ್ಯವಾಗಿದೆ. ಬೆಳಗೆರೆ ಕೃಷ್ಣಶಾಸ್ತ್ರಿಗಳ ಅಭಿಮಾನಿಗಳೂ, ಶಿಷ್ಯರು, ಶಾಲೆಗೆ ಉದಾರವಾಗಿ ದಾನ ದೇಣಿಗೆ ನೀಡಿ ಗ್ರಾಮೀಣ ಭಾಗದಲ್ಲಿ ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಡಾ. ಎಂ.ವಿ. ಶ್ರೀನಿವಾಸ
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
SITE MAP
SiteTRAININGJOB |
HR SERVICESOTHER SERVICESnIRATHANKA CITIZENS CONNECT |
NIRATHANKAPOSHOUR OTHER WEBSITESSubscribe |
MHR LEARNING ACADEMY
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|