ಅಧ್ಯಾಯ-ಒಂದು ಗುಣತ್ರಯಗಳು ಮತ್ತು ಜೀವನ ಪದ್ಧತಿ ಪೀಠಿಕೆ ಯಾವುದೇ ಸಮಾಜದಲ್ಲಿ ಆಗಲಿ ಅನೇಕ ರೀತಿಯ ಜನರನ್ನು ನಾವು ಗುರುತಿಸುತ್ತೇವೆ. ಕೆಲವರು ತುಂಬಾ ಮೃದು ಸ್ವಭಾವದವರಾಗಿರುತ್ತಾರೆ. ಜ್ಞಾನವಂತರಾಗಿರುತ್ತಾರೆ. ತುಂಬಾ ಸರಳ ಜೀವನ ನಡೆಸುತ್ತಿರುತ್ತಾರೆ. ಸರಳ ಜೀವನ ಮತ್ತು ಉದಾತ್ತ ಧ್ಯೇಯ ಹೊಂದಿದವರಾಗಿರುತ್ತಾರೆ. ನೇರ ನಡೆ -ನೇರ ನುಡಿ ಅವರ ಜೀವನದ ಮಂತ್ರವಾಗಿರುತ್ತದೆ. ಅಂತಹವರು ತುಂಬಾ ಸುಸಂಸ್ಕೃತ ಕುಟುಂಬದಿಂದ, ಪರಿಸರದಿಂದ ಬಂದವರಾಗಿರುತ್ತಾರೆ. ಅವರು ಹೆಚ್ಚಿನ ತಿಳುವಳಿಕೆಯಿಂದ ಕೂಡಿದ್ದು ಇನ್ನೊಬ್ಬರಿಗೆ ಸಹಾಯ ಮಾಡುವ ಮನೋಭಾವವನ್ನು ಹೊಂದಿದವರಾಗಿರುತ್ತಾರೆ. ಅವರು ಎಲ್ಲರಿಗೂ ಬೇಕಾದವರಾಗಿರುತ್ತಾರೆ. ಅಂತಹವರು ಎಲ್ಲರನ್ನೂ ಪ್ರೀತಿಸುವ, ಎಲ್ಲರನ್ನೂ ಆತ್ಮೀಯತೆಯಿಂದ ಕಾಣುವ ಪ್ರವೃತ್ತಿಯವರಾಗಿರುತ್ತಾರೆ. ಅಂತಹವರ ಸಂಪರ್ಕ ಸಂತೋಷವನ್ನೂ ಹಾಗೂ ಸಮಾಧಾನವನ್ನೂ ತರುತ್ತದೆ. ಅವರು ಸಮಷ್ಟಿ ಹಿತವನ್ನು ಕಾಪಾಡುವಲ್ಲಿ ಆಸಕ್ತಿಯನ್ನು ಹೊಂದಿದವರಾಗಿರುತ್ತಾರೆ. ಅದಕ್ಕೆ ವಿರುದ್ಧವಾಗಿ ಇನ್ನೂ ಕೆಲವರು ಒರಟು ಸ್ವಭಾವದವರಾಗಿರುತ್ತಾರೆ. ಅಂತಹವರಿಗೆ ಜೀವನದಲ್ಲಿ ಬಯಕೆಗಳು ಹೆಚ್ಚಾಗಿರುತ್ತವೆ. ಸಂಪತ್ತು, ಸುಖ ಮುಂತಾದವುಗಳಿಗಾಗಿ ಹಂಬಲಿಸುತ್ತಾರೆ. ಅದು ಬೇಕು, ಇದು ಬೇಕು ಎಂದು ಹಾತೊರೆಯುತ್ತಿರುತ್ತಾರೆ. ಅವರು ಸ್ವಾರ್ಥ ಮನೋಭಾವದವರಿದ್ದು ಐಹಿಕ ಸುಖ, ಜೀವನದಲ್ಲಿ ಹೆಚ್ಚು ಆಸಕ್ತಿ ಹೊಂದಿದವರಾಗಿರುತ್ತಾರೆ. ಅಂತಹವರಿಗೆ ವಿಷಯ ಸುಖದಲ್ಲಿ ಆಸಕ್ತಿ ಬಹಳ. ಅದನ್ನು ಪಡೆಯಲು ವಾಮ ಮಾರ್ಗವನ್ನು ಹಿಡಿಯಲೂ ಹಿಂಜರಿಯುವುದಿಲ್ಲ. ತಮ್ಮ ತಮ್ಮ ವೃತ್ತಿಗಳಲ್ಲಿ ಸ್ಪರ್ಧೆಯ ಹೆಸರಿನಲ್ಲಿ ತುಂಬಾ ಪ್ರಭಾವಯುತವಾಗಿ ಸುಳ್ಳು ಹೇಳಬಲ್ಲರು. ಮೋಸ ಮಾಡಬಲ್ಲರು. ಅಂತಹವರಿಗೆ ಮುಖ್ಯವಾಗುವುದು ಫಲಿತಾಂಶ. ಆ ಫಲಿತಾಂಶವನ್ನು ಪಡೆಯಲು ಅನುಸರಿಸುವ ಮಾರ್ಗ ಅಲ್ಲ. ಈ ಪ್ರವೃತ್ತಿಯವರು ತಮ್ಮ ಜೀವನದಲ್ಲಿ ಸಣ್ಣ ಪುಟ್ಟ ಯಶಸ್ಸನ್ನು ಕಂಡರೂ ಒಟ್ಟಾರೆ ಜೀವನದಲ್ಲಿ ಹೆಚ್ಚಾಗಿ ನೋವು-ದುಃಖಗಳನ್ನು ನೋಡುವಂತಾಗುತ್ತದೆ.
ಸಮಾಜದಲ್ಲಿ ಇನ್ನೊಂದು ಗುಂಪಿನವರಿದ್ದಾರೆ. ಅವರ ಸ್ವಭಾವ ತುಂಬಾ ಕ್ರೂರ. ಅಂತಹವರು ತಮ್ಮ ಪ್ರಪಂಚದಲ್ಲೇ ತಾವಿರುತ್ತಾರೆ. ಅವರು ಇನ್ನೊಬ್ಬರ ಮಾತನ್ನು ಕೇಳುವುದಿಲ್ಲ. ವಸ್ತುಸ್ಥಿತಿಯನ್ನು ಒಪ್ಪಿಕೊಳ್ಳುವುದಿಲ್ಲ. ಅವರು ಅಜ್ಞಾನ, ಮೊಂಡತನ, ಮದ, ಭ್ರಾಂತಿ, ಹುಚ್ಚು, ಸೋಮಾರಿತನ, ನಿರುತ್ಸಾಹ, ಸ್ವಾರ್ಥ ಮನೋಭಾವ ಮುಂತಾದವುಗಳನ್ನು ತಮ್ಮ ಆಸ್ತಿಯನ್ನಾಗಿ ಮಾಡಿಕೊಂಡಿರುತ್ತಾರೆ. ಅಂತಹವರು ಅಜ್ಞಾನದಿಂದ ಇಲ್ಲವೇ ವಿಪರೀತ ಜ್ಞಾನದಿಂದ ಕೂಡಿದವರಾಗಿರುತ್ತಾರೆ. ಮೊಂಡ ಸ್ವಭಾವದವರಾಗಿರುತ್ತಾರೆ. ಅವರಿಗೆ ತಮ್ಮ ಮಾತಿಗೇ ಪ್ರಾಶಶ್ತ್ಯ ಸಿಗಬೇಕೆನ್ನುತ್ತಾರೆ. ಅವರಿಗೆ ಆತ್ಮ ಕೇಂದ್ರದ ಹುಚ್ಚು ಆವರಿಸಿಕೊಂಡಿರುತ್ತದೆ. ಇಂತಹವರು ಸೋಮಾರಿಗಳೂ ಹಾಗೂ ನಿರುತ್ಸಾಹಿಗಳೂ ಆಗಿದ್ದು, ತುಂಬಾ ಸ್ವಾರ್ಥ ಮನೋಭೂಮಿಕೆಯನ್ನು ಹೊಂದಿದವರಾಗಿರುತ್ತಾರೆ. ಇವರಿಗೆ ನಿದ್ರೆಯಲ್ಲಿ ಆಸಕ್ತಿ. ತಮ್ಮ ಹಿತಕ್ಕಾಗಿ ಸಮಷ್ಟಿ ಹಿತವನ್ನು ಬಲಿ ಕೊಡುತ್ತಾರೆ. ನಾಸ್ತಿಕತೆ, ಅಶಿಸ್ತುಬದ್ಧ ಜೀವನ ಮುಂತಾದವುಗಳೇ ಅವರ ಆಸ್ತಿ. ಇವರು ಹೆಚ್ಚಾಗಿ ಕಾಮಪ್ರವೃತ್ತಿಯವರಾಗಿರುತ್ತಾರೆ. ಈ ರೀತಿ ಯಾವುದೇ ಸಮಾಜದಲ್ಲಿ ವಿವಿಧ ರೀತಿಯ ಜನರಿರುತ್ತಾರೆ. ಅವರವರ ಸ್ವಭಾವ-ಪ್ರವೃತ್ತಿಗೆ ತಕ್ಕಂತೆ ತಮ್ಮ ತಮ್ಮ ಜೀವನಶೈಲಿಯನ್ನು ಕಂಡುಕೊಂಡಿರುತ್ತಾರೆ. ಅದರಂತೆಯೇ ಬೇರೆ ಬೇರೆಯದೇ ಆದ ಆಹಾರ ಪದ್ಧತಿಗಳನ್ನು ಅಳವಡಿಸಿಕೊಂಡಿರುತ್ತಾರೆ. ಪ್ರತಿಯೊಬ್ಬರಿಗೂ ಬದುಕಲು ಆಹಾರ ಬೇಕು. ಅವರು ಯಾವುದೇ ಕುಟುಂಬದಿಂದ ಬಂದಿರಲಿ, ಯಾವುದೇ ಸಮುದಾಯಕ್ಕೆ ಸೇರಿರಲಿ, ಯಾವುದೇ ದೇಶದಲ್ಲಿರಲಿ, ಗಂಡಾಗಿರಲಿ ಇಲ್ಲವೇ ಹೆಣ್ಣಾಗಿರಲಿ, ಬಾಲ್ಯ ಆಗಿರಲಿ ಇಲ್ಲವೇ ವೃದ್ಧರಾಗಿರಲಿ, ಯಾವುದೇ ವೃತ್ತಿ ಮಾಡುತ್ತಿರಲಿ, ಆರೋಗ್ಯವಂತರಾಗಿರಲಿ ಇಲ್ಲವೇ ರೋಗಿಷ್ಟರಾಗಿರಲಿ, ವ್ಯಕ್ತಿ ಏನಾದರೂ ಇರಲಿ ಬದುಕಿಗೆ ಆಹಾರ ಅತಿ ಅವಶ್ಯ. ಗಾಳಿ ಮತ್ತು ನೀರಿನ ತರುವಾಯ, ಎಲ್ಲರಿಗೂ ಇರುವ ದೈನಂದಿನ ಅವಶ್ಯಕತೆ ಎಂದರೆ ಆಹಾರ. ನಮ್ಮ ಆರ್ಥಿಕ ಪರಿಸ್ಥಿತಿ, ಸಮುದಾಯದ ಆಚಾರ-ವಿಚಾರಗಳು, ಪದ್ಧತಿ-ಸಂಪ್ರದಾಯಗಳು, ವಯಸ್ಸು, ಲಿಂಗ, ಆಹಾರದ ಲಭ್ಯತೆ, ನಮ್ಮ ಇಷ್ಟ, ಕಾಲ ಮತ್ತು ದೇಶ, ಜಾಡ್ಯ ಮುಂತಾದ ಅಂಶಗಳ ಆಧಾರದ ಮೇಲೆ ನಮ್ಮ ಆಹಾರ ಹೀಗಿರಬೇಕು ಎಂದು ನಿರ್ಣಯವಾಗುತ್ತದೆ. ಕೆಲವರಿಗೆ ಧಾನ್ಯಗಳು, ತರಕಾರಿಗಳು, ಹಣ್ಣು, ಹಾಲು, ಇತ್ಯಾದಿಗಳು ಪ್ರಿಯವಾಗುತ್ತವೆ. ಇನ್ನೂ ಕೆಲವರಿಗೆ ಉಪ್ಪು, ಹುಳಿ, ಖಾರ, ಇತ್ಯಾದಿಗಳು ಬೇಕು ಅನ್ನಿಸುತ್ತವೆ. ಇವುಗಳ ಗೂತೆಗೆ ಮೀನಿನ ಸಾರು ಅಥವಾ ಮಂಸದ ಸಾಂಬಾರೋ ಬೇಕಾಗುತ್ತದೆ. ಜೊತೆಗೆ ಒಂದು ಪೆಗ್ ಇದ್ದರೆ. ಎಷ್ಟು ಮಜ ಇರುತ್ತದೆ ಎನ್ನಿಸುತ್ತದೆ ಮತ್ತು ಕೆಲವರು ಹಸಿಮಾಂಸವನ್ನು ಬಯಸುತ್ತಾರೆ. ತಂಗಳಾದದ್ದು, ಹಳಸಿದ್ದು ಅವರಿಗೆ ರುಚಿಸುತ್ತದೆ. ಆಹಾರ ಪದಾರ್ಥಗಳನ್ನು ತಂಗಳು ಮಾಡಿಕೊಂಡು ತಿನ್ನುತ್ತಾರೆ. ಹೀಗೆ ಬೇರೆ ಬೇರೆ ಸ್ವಭಾವದ ಜನರಿಗೆ ಬೇರೆ ಬೇರೆ ತರಹದ ಆಹಾರ ಮೆಚ್ಚಿಕೆಯಾಗುತ್ತದೆ. ಇದು ಯಾಕೆ ಹೀಗೆ. ಒಬ್ಬರಿಗೆ ಮೆಚ್ಚಿಕೆಯಾದದ್ದು ಇನ್ನೊಬ್ಬರಿಗೆ ಮೆಚ್ಚಿಕೆಯಾಗಲ್ಲ, ಏಕೆ ? ಒಬ್ಬರಿಗೆ ಇಷ್ಟವಾದದ್ದು ಇನ್ನೊಬ್ಬರಿಗೆ. ತೀರಾ ಸಪ್ಪೆಯಾಗುತ್ತದೆ. ಅದರಂತೆಯೇ ಒಬ್ಬರಿಗೆ ಬೇಡವಾದದ್ದು ಮತ್ತೊಬ್ಬರಿಗೆ ತುಂಬಾ ಇಷ್ಟವಾಗುತ್ತದೆ. ಇದಕ್ಕೆ ಮೂಲ ಕಾರಣ ಅವರವರ ಹಿನ್ನಲೆ ಮತ್ತು ಸ್ವಭಾವ. ಹಿನ್ನೆಲೆ ಎಂದರೆ ಧಾರ್ಮಿಕ ಹಿನ್ನೆಲೆ, ಸಾಂಸ್ಕೃತಿಕ ಹಿನ್ನೆಲೆ, ಸಾಮಾಜಿಕ ಹಿನ್ನೆಲೆ, ಕೌಟುಂಬಿಕ ಮತ್ತು ಸಂತತಿಯ ಹಿನ್ನೆಲೆ. ಇವುಗಳು ಅವರ ಆಲೋಚನೆಗಳ ಮೇಲೆ ಸ್ವಭಾವ ಬೀರುತ್ತವೆ. ಮನುಷ್ಯನ ಸ್ವಭಾವಗಳು ಮನುಷ್ಯನ ಈ ಸ್ವಭಾವಗಳನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ. ಅವೇ ಸತ್ವ (ಸಾತ್ವಿಕ), ರಜಸ್ಸು (ರಾಜಸ) ಮತ್ತು ತಮಸ್ಸು (ತಾಮಸ). ಹಿಂದೂ ಧರ್ಮದ ಪವಿತ್ರ ಗ್ರಂಥ ಭಗವದ್ಗೀತೆ ಈ ಗುಣತ್ರಯಗಳ ಬಗ್ಗೆ ವಿವರವಾಗಿ ಹೇಳಲಾಗಿದೆ. ಸತ್ವಂ ರಜಸ್ತಮ ಇತಿಗುಣಾ: ಪ್ರಕೃತಿಸಂಭವಾ:| ನಿಭನ್ನಂತಿ ಮಹಾಭಾಹೋ ದೇಹೇ ದೇಹೀನಮವ್ಯಯಮ್ || (ಗೀತೆ 14.5)1 ಐಹಿಕ ಪ್ರಕೃತಿಗಳಲ್ಲಿ ಮೂರು ಗುಣಗಳಿವೆ-ಸತ್ವ, ರಜಸ್ಸು, ತಮಸ್ಸು. ನಿತ್ಯನಾದ ಜೀವಿಯು ಪ್ರಕೃತಿಯೊಡನೆ ಸಂಪರ್ಕ ಪಡೆದಾಗ ಅವನು ಆ ಗುಣಗಳ ಬಂಧನಕ್ಕೆ ಸಿಕ್ಕಿಕೊಳ್ಳುತ್ತಾನೆ.2 ಜೀವನು (ಆತ್ಮನು) ನಿತ್ಯ. ಆತ್ಮಕ್ಕೆ ಸಾವಿಲ್ಲ. ದೇಹಕ್ಕೆ ಅಂತ್ಯ ಇದೆ. ಹುಟ್ಟು ಮತ್ತು ಸಾವು ಜೀವಿಯ ನಿರಂತರ ಜೀವನ ಪ್ರವಾಹವನ್ನು ಒಂದು ಅಧ್ಯಾಯದಿಂದ ಇನ್ನೊಂದು ಅಧ್ಯಾಯಕ್ಕೆ ಕೊಂಡೊಯ್ಯುವ ಹಂತಗಳು. ವೇದೋಪನಿಷತ್ತಿನ ಕಾಲದಲ್ಲಿಯೂ ನಾವು ಇದ್ದೆವು. ಈಗಲೂ ನಾವಿದ್ದೇವೆ. ಇನ್ನು ಮುಂದೆಯೂ ನಾವು ಇರುತ್ತೇವೆ. ಹುಟ್ಟು ಮತ್ತು ಸಾವು ಆತ್ಮನ ನಿರಂತರ ಬದುಕಿನ ಅವಿಭಾಜ್ಯ ಅಂಗಗಳು. ಆತ್ಮನು ಸಾವಿನಲ್ಲಿ ಒಂದು ದೇಹ ತ್ಯಜಸಿ, ಅವನ ಕರ್ಮಫಲಕ್ಕೆ ಅನುಸಾರವಾಗಿ, ಹುಟ್ಟಿನಿಂದ ಇನ್ನೊಂದು ದೇಹ ಪಡೆಯುತ್ತಾನೆ. ಈ ಪ್ರಕ್ರಿಯೆ ಒಂದು ಕರಾರುವಾಕ್ಕು ಲೇಕ್ಕಾಚಾರದಂತೆ ನಿರಂತರವಾಗಿ ಸಾಗುತ್ತದೆ. ಆದರೆ ಆತ್ಮನು ಇಲ್ಲಿದ್ದಾಗ ಜಗತ್ತಿನಿಂದ ಬಂಧಿತನಾಗಿರುತ್ತಾನೆ, ಬದ್ಧನಾಗಿದ್ದಾನೆ. ಆದ್ದರಿಂದ ಅವನು ಗುಣತ್ರಯಗಳ ಪ್ರಭಾವದಲ್ಲಿ ವರ್ತಿಸುತ್ತಾನೆ. ಇದರ ಜೊತೆಗೆ ಅವನ ಸಂಚಿತವೂ-ಪ್ರಾರಬ್ಧವೂ ಸೇರಿಕೊಳ್ಳುತ್ತದೆ. ಅವನ ಸುಖ ದುಖಃಗಳ ವೈವಿಧ್ಯಕ್ಕೆ ಇವು ಕಾರಣ. ಅವನು ಹಿಂದಿನ ಜನುಮಗಳಲ್ಲಿ ಮಾಡಿದ ಒಳ್ಳೆಯ ಇಲ್ಲವೆ ಕೆಟ್ಟ ಕೆಲಸಗಳ ಫಲವಾಗಿ, ಈ ಜನುಮದಲ್ಲಿ ಒಳ್ಳೆಯ ಇಲ್ಲವೆ ಒಳ್ಳೆಯದಲ್ಲದ ಜೀವನವನ್ನು ಪಡೆಯುತ್ತಾನೆ. ಅವನು ಹಿಂದೆ ಮಾಡಿದ ಪಾಪ ಇಲ್ಲವೆ ಪುಣ್ಯ ಕಾರ್ಯದ ಆಧಾರದ ಮೇಲೆ ಒಳ್ಳೆಯ, ಸುಸಂಸ್ಕೃತ ಇಲ್ಲವೆ ಅಸಂಸ್ಕೃತ ಕುಟುಂಬದಲ್ಲಿ ಜನಿಸುವ ಮೂಲಕ ಆಯಾ ಫಲವನ್ನು ಅವನೇ ಅನುಭವಿಸಬೇಕು. ಇದು ಒಂದು ರೀತಿಯ ಪೂರ್ವನಿಯೋಜಿತ ಪ್ರಕ್ರಿಯೆಯಂತೆ ನಡೆಯುತ್ತದೆ. ಸತ್ವ ಗುಣ | ಸಾತ್ವಿಕ ಗುಣ :- ಇನ್ನು ಒಂದೋದಾಗಿ ಸತ್ವ, ರಜ ಮತ್ತು ತಮೋಗುಣಗಳ ವಿವರಗಳನ್ನು ತಿಳಿದುಕೊಳ್ಳೋಣ. ತತ್ರ ಸತ್ವಂ ನಿರ್ಮಲತ್ವಾತ್ ಪ್ರಕಾಶಕಮನಾಮಯಮ್| ಸುಖ ಸಂಗೇನ ಬಧ್ನಾತಿ ಜ್ಞಾನ ಸಂಘೇನ ಚಾನಘು|| (ಗೀತೆ 14.6)3 ಸಾತ್ವಿಕ ಗುಣ ಇತರ ಗುಣಗಳಿಗಿಂತ ನಿರ್ಮಲವಾದುದು. ಆ ಕಾರಣದಿಂದ ಅದು ಪ್ರಕಾಶಮಾನವಾದದ್ದು. ಅದು ಮನುಷ್ಯನ ಎಲ್ಲಾ ಪಾಪಕರ ಕ್ರಿಯೆಗಳಿಂದ ಬಿಡುಗಡೆ ಮಾಡುತ್ತದೆ. ಈ ಗುಣಗಳನ್ನು ಹೊಂದಿದವರನ್ನು ಸುಖ ಮತ್ತು ಜ್ಞಾನಗಳ ಪ್ರಭೆಯು ಬಂದಿಸುತ್ತದೆ.4 ಸಾತ್ವಿಕ ಗುಣ ರಾಜಸ ಮತ್ತು ತಮಸ್ಸಿಗಿಂತ ನಿರ್ಮಲವಾದದ್ದು, ಶುದ್ಧವಾದದ್ದು. ಸಾತ್ವಿಕ ವ್ಯಕ್ತಿಯ ವ್ಯಕ್ತಿತ್ವ ಪ್ರಕಾಶಮಯವಾಗಿರುತ್ತದೆ. ಇದು ಜೀವಿಯು/ ವ್ಯಕ್ತಿಯು ಮಾಡಿದ ಕೆಲಸಗಳಿಂದ ಬಿಡುಗಡೆ ಮಾಡುತ್ತದೆ. ಸಾತ್ವಿಕ ಗುಣವನ್ನು ರೂಡಿಸಿಕೊಂಡರೆ ಅದು ರಾಜಸ ಮತ್ತು ತಾಮಸ ಗುಣಗಳಿಂದ ಅವನನ್ನು ಪಾರು ಮಾಡುತ್ತದೆ. ಅವನಿಗೆ ಸಾತ್ವಿಕ ಜ್ಞಾನವನ್ನು ತಂದು ಕೊಡುತ್ತದೆ. ಸಾತ್ವಿಕ ಗುಣದ ಬಗ್ಗೆ ಮನುಸ್ಮೃತಿಯ ವಿವರ ಈ ಕೆಳಗಿನಂತಿದೆ. ತತ್ರ ಯತ್ಪ್ರೀತಿ ಸಂಯುಕ್ತಂ ಕಿಂಚಿದಾತ್ಮನಿ ಲಕ್ಷಯೇತ್ | ಪ್ರಶಾಂತಮಿವ ಶುದ್ಧಾಭಂ ಸತ್ವಂ ತದುಪಧಾರಯೇತ್||5 ಆ ಆತ್ಮನಲ್ಲಿ ಯಾವ ಜ್ಞಾನವು ಪ್ರೀತಿಯಿಂದ ಕೂಡಿ ಪ್ರಶಾಂತವೂ, ಶುದ್ಧವೂ ಆಗಿರುವಂತೆ ಕಾಣುವುದೋ, ಅದನ್ನು ಸತ್ವವೆಂದು ಅರಿಯಬೇಕು.6 ಸತ್ವ ಸುಸಂಸ್ಕೃತ ವ್ಯಕ್ತಿಯ ಲಕ್ಷಣ. ಅವನನ್ನು ನೋಡಿದ ತಕ್ಷಣವೇ ಅವನು ಸಾತ್ವಿಕ ಎಂದು ತಿಳಿಯುತ್ತದೆ. ಅವನ ಸಂಪರ್ಕ ಸಂತೋಷವನ್ನು ಮತ್ತು ಸಮಾಧಾನವನ್ನು ತಂದುಕೊಡುತ್ತದೆ. ಸಾತ್ವಿಕ ವ್ಯಕ್ತಿಯ ಜೊತೆಗೆ ಸಂಪರ್ಕವನ್ನಿಟ್ಟುಕೊಳ್ಳುವುದು ಖುಷಿಯನ್ನು ತಂದುಕೊಡುತ್ತದೆ. ಅವನ ಒಡನಾಡ ಸಂತಸವನ್ನು ತಂದುಕೊಡುತ್ತದೆ. ರಾಜಸ ಗುಣ:- ಇನ್ನು ರಾಜಸ ಗುಣಗಳಿರುವ ವ್ಯಕ್ತಿಯ ಪರಿಚಯವನ್ನು ಮಾಡಿಕೊಳ್ಳೋಣ. ರಜೋ ರಾಗಾತ್ಮಕಂ ವಿದ್ಧಿ ತೃಷ್ಣಾ ಸಂಗಸುಮುದ್ಭವಮ್| ತನ್ನಿಭದ್ನಾತಿ ಕೌಂತೇಯ ಕರ್ಮ ಸಂಗೇನ ದೇಹಿನಮ್|| (ಗೀತೆ 14-7)7 ಕುಂತಿಯ ಮಗನೇ (ಅರ್ಜುನನೇ), ರಜೋಗುಣವು ಮಿತಿಯಿಲ್ಲದ ಆಸೆಗಳು ಮತ್ತು ಬಯಕೆಗಳಿಂದ ಹುಟ್ಟುತ್ತದೆ. ಇದರಿಂದಾಗಿ ದೇಹಧಾರಿಯಾದ ಜೀವಿಯು ಐಹಿಕ ಕಾಮ್ಯ ಕರ್ಮಗಳಲ್ಲಿ ಸಿಕ್ಕಿಕೊಳ್ಳುತ್ತಾನೆ.8 ವಿಪರೀತ ಆಸೆಯೇ ರಜೋಗುಣದ ಪ್ರಭಾವ. ಜೀವನದಲ್ಲಿ ಅದು ಬೇಕು, ಇದು ಬೇಕು, ಮತ್ತೊಂದು ಬೇಕು, ಎಂದು ಹಾತೊರೆಯುವುದೇ ರಜಸ್ಸಿನ ಸ್ವಭಾವ. ಮಿತಿ ಮೀರಿದ ಆಸೆಗೆ ಕೊನೆ ಎಲ್ಲಿ ? ಸ್ತ್ರೀ ಪುರುಷರ ಅಪರಿಮಿತ ಆಕರ್ಷಣೆ - ಸಂಪರ್ಕ ರಜೋಗುಣದ ಲಕ್ಷಣ. ಸುಂದರವಾದ ಹೆಂಡತಿ, ಸಂಪಾದಿಸುವ ಮಕ್ಕಳು, ಕಾರು, ಬಂಗಲೆ, ಆಳು-ಕಾಳು, ಐಹಿಕ ಸುಖಜೀವನ ಇವು ರಜಸ್ಸಿನ ಪರಿಣಾಮ. ಇವೆಲ್ಲವೂ ಬದುಕಿಗೆ ಬೇಕಾದಷ್ಟು ಮಾತ್ರ ಇರಬೇಕು. ಮಿತಿ ಮೀರಿದರೆ ಅದು ರಾಜಸ. ಇಲ್ಲಿ ಸಮಸ್ಯೆಯೆಂದರೆ ಆ ಮಿತಿಯನ್ನು ಕಂಡುಕೊಳ್ಳುವುದು. ವಿದ್ಯೆ, ಕೆಲಸ, ಕುಟುಂಬ, ಸಮುದಾಯ ಮುಂತಾದ ಅಂಶಗಳ ಆಧಾರದ ಮೇಲೆ ಆ ಮಿತಿಯನ್ನು ಕಂಡುಕೊಳ್ಳಬೇಕು. ವಿಷಯ ಸುಖದ ಸ್ವಭಾವವೇನೆಂದರೆ ಇದ್ದಷ್ಟೂ ಇನ್ನಷ್ಟು ಬೇಕೆಂಬುದು. ಆ ಇನ್ನಷ್ಟು ಸಂಪಾದಿಸಲು ವಾಮಮಾರ್ಗ ಹಿಡಿಯಬೇಕಾಗುತ್ತದೆ. ಸುಳ್ಳು ಹೇಳಬೇಕಾಗುತ್ತದೆ. ಮೋಸ ಮಾಡಬೇಕಾಗುತ್ತದೆ. ತಪ್ಪಿಸಿಕೊಳ್ಳಲು ಕೆಟ್ಟ ಮಾರ್ಗಗಳನ್ನು ಅನುಸರಿಸಬೇಕಾಗುತ್ತದೆ. ಒಂದು ಸುಳ್ಳಿಗೆ ಇನ್ನೊಂದು ಸುಳ್ಳು. ಒಂದು ಕೆಟ್ಟ ಕೆಲಸವನ್ನು ಮುಚ್ಚಿ ಹಾಕಲು ಇನ್ನೊಂದು ಅಂತಹುದೇ ಕೆಲಸ. ಇದು ಒಂದು ವಿಷವರ್ತುಲವಾಗಿ ಪರಿಣಮಿಸುತ್ತದೆ. ಇದು ರಾಜಸದ ಲಕ್ಷಣ. ಯಾವುದೇ ಸಮಾಜದಲ್ಲಿ ಬಹು ಸಂಖ್ಯೆಯ ಜನರಿರುವುದು ಈ ಗುಂಪಿನಲ್ಲಿ. ಬದುಕಲು ಹಣ ಸಂಪಾದಿಸಬೇಕು. ಅದಕ್ಕೊಂದು ವೃತ್ತಿ ಬೇಕು. ಹೆಂಡತಿ, ಮಕ್ಕಳು, ಸಂಸಾರ ಎಲ್ಲಾ ಬೇಕು. ವರಮಾನ ಒಂದು ನ್ಯಾಯಯುತ ಮಾರ್ಗದಿಂದ ಸಂಪಾದಿಸಿದ್ದಾಗಿರಬೇಕು. ಅದಕ್ಕೊಂದು ಮಿತಿ ಬೇಕು. ಒಂದು ಹಿಡಿತ ಬೇಕು. ಹಾಗಾಗದಿದ್ದರೆ ಅದು ರಾಜಸ. ಮನುಸ್ಮೃತಿ ರಾಜಸ ಗುಣದ ಬಗ್ಗೆ ಹೀಗೆ ಹೇಳುತ್ತದೆ. ಯತ್ತು ದುಃಖಸಮಾಯುಕ್ತ ಮಪ್ರೀತಿಕರಮಾತ್ಮನ:| ತದ್ರಜೋ ಪ್ರತಿತಂ ವಿದ್ಯಾತ್ಸತತಂ ಹಾರಿ ದೇಹಿನಾಮ್||9 ಆತ್ಮನ ಯಾವ ಸಂವೇದನೆಯು (ತಿಳಿವು) ದುಃಖದಿಂದ ಕೂಡಿ ತನಗೆ ಪ್ರೀತಿಂನ್ನು ಉಂಟು ಮಾಡಲಾರದೊ ಮತ್ತು ದೇಹಿಗಳಿಗೆ ಯಾವಾಗಲೂ ವಿಷಯಗಳಲ್ಲಿ ಆಸೆಯನ್ನು ಉಂಟುಮಾಡುವುದೊ ಅದು ಸತ್ವಕ್ಕೆ ವಿರುದ್ಧವಾದ ರಜಸ್ಸೆಂದು ತಿಳಿಯಬೇಕು.10 ಸಂತೋಷ ತರುವುದು ಸಾತ್ವಿಕ. ದು:ಖ ತರುವುದು ರಾಜಸ. ಪ್ರೀತಿಯನ್ನು ಉಂಟುಮಾಡುವುದು ಸಾತ್ವಿಕ. ಉಂಟು ಮಾಡಲಾರದ್ದು ರಾಜಸ. ವಿಷಯದಲ್ಲಿ ಅತಿ ಆಸೆ ರಾಜಸ. ಇದರ ಫಲ ಕೆಡಕು. ಕೆಡಕಿನಿಂದ ದುಃಖ. ಪ್ರಾರಂಭದಲ್ಲಿ ಸ್ವಲ್ಪ ಸುಖ ಸಿಕ್ಕಾಹಾಗೆ ಕಾಣುತ್ತದೆ. ಆದರೆ ಅಂತಿಮವಾಗಿ ದುಃಖವೇ ಲಬಿಸುತ್ತದೆ. ಬದುಕಿನಲ್ಲಿ ವಿಷಯ ಸುಖದಲ್ಲಿ ಒಂದು ಔಚಿತ್ಯಪೂರ್ಣ ಮಿತಿ ಇದ್ದರೆ ಅದು ರಾಜಸ ಆಗಿದ್ದರೂ ಹಿತವೇ. ಆ ಮಿತಿ ಮೀರಿದರೆ ದುಃಖ ದುಮ್ಮಾನಗಳೇ ರಾಜಸದ ಪರಿಣಾಮ. ತಾಮಸ ಗುಣ:- ಈಗ ತಾಮಸ ಗುಣ ಇರುವ ವ್ಯಕ್ತಿಯ ಲಕ್ಷಣಗಳೇನು? ನೋಡೋಣ. ತಮಸ್ತ್ವ ಜ್ಞಾನಜಂ ವಿದ್ಧಿ ಮೋಹನಂ ಸರ್ವದೇಹಿನಾಮ್ | ಪ್ರಮಾದಾಲಸ್ಯ ನಿದ್ರಾಬಿಸ್ತನ್ನಿಭಧ್ನಾತಿ ಭಾರತ|| (ಗೀತೆ 14-8)11 ಭಾರತ (ಅರ್ಜುನ), ಅಜ್ಞಾನದಿಂದ ಹುಟ್ಟಿದ ತಮೋಗುಣವು ದೇಹಧಾರಿಗಳಾದ ಎಲ್ಲ ಜೀವಿಗಳ ಭ್ರಮೆ. ಈ ಗುಣದ ಪರಿಣಾಮವೆಂದರೆ ಹುಚ್ಚು, ಪ್ರಮಾದ ಮತ್ತು ನಿದ್ರೆ. ಇವು ಬದ್ಧ ಆತ್ಮನನ್ನು ಬಂದಿಸುತ್ತವೆ.12 ತಮೋಗುಣವು ಸತ್ವಕ್ಕೆ ವಿರುದ್ಧವಾದುದು. ತಮೋಗುಣವು ವಾಸ್ತವವನ್ನು ಅರ್ಥಮಾಡಿಕೊಳ್ಳುವುದಿಲ್ಲ. ತಮೋಗುಣದ ವ್ಯಕ್ತಿ ತನ್ನ ಪ್ರಪಂಚದಲ್ಲೇ ತಾನಿರುತ್ತಾನೆ. ಅವನು ಹುಚ್ಚು ಸ್ವಭಾವದವನಾಗಿರುತ್ತಾನೆ. ವಸ್ತುಸ್ಥಿತಿಯನ್ನು ಒಪ್ಪಿಕೊಳ್ಳುವುದಿಲ್ಲ. ಅವನು ಅಜ್ಞಾನದ ಪ್ರಭಾವದಿಂದ ಆವೃತನಾಗಿರುತ್ತಾನೆ. ಆಧ್ಯಾತ್ಮಿಕ ತಿಳುವಳಿಕೆಯಿಂದ ಮುಂದುವರೆಯಲು ಉತ್ಸುಕ ಆಗಿರುವುದಿಲ್ಲ. ತಮೋಗುಣ ಪ್ರಧಾನದ ವ್ಯಕ್ತಿ ಸೋಮಾರಿಯಾಗಿರುತ್ತಾನೆ. ಅಗತ್ಯಕ್ಕಿಂತ ಹೆಚ್ಚು ನಿದ್ರೆ ಮಾಡುತ್ತಾನೆ, ಸದಾ ನಿರುತ್ಸಾಹಿಯಾಗಿರುತ್ತಾನೆ. ಕುಂಬಕರ್ಣನಂತೆ. ಕ್ರೂರಿಯಾಗಿರುತ್ತಾನೆ, ದುರ್ಯೋಧನನಂತೆ. ಸಮಾಜ ಒಪ್ಪಿಕೊಂಡಂತಹ ಪದ್ಧತಿಗಳಿಂದ ವಿಮುಖನಾಗಿರುತ್ತಾನೆ, ಶಕುನಿಯಂತೆ. ತಾಮಸಗುಣದ ಬಗ್ಗೆ ಮನುಸ್ಮೃತಿ ಹೀಗೆ ಹೇಳುತ್ತದೆ. ಯತ್ತು ಸ್ಯಾನ್ಮೋಹ ಸಂಯುಕ್ತಮವ್ಯಕಂ ವಿಷಯಾತ್ಮಕಮ್| ಅಪ್ರತಕ್ರ್ಯಮವಿಜ್ಞೇಯಂ ತಮಸ್ತದುಪಧಾರಯೇತ್|| 13 ಯಾವುದು ಮೋಹದಿಂದ ಕೂಡಿ ಅಸ್ಪಷ್ಟವಾಗಿಯೂ, ವಿಷಯಾತ್ಮಕವಾಗಿಯೂ ಇದ್ದು, ಅದರ ಸ್ವಭಾವವನ್ನು ಅಂತಃಕರಣ ಬಹಿಃಕರಣಗಳಿಂದ ಊಹಿಸಲು ಮತ್ತು ತಿಳಿಯಲು ಸಾಧ್ಯವಿಲ್ಲವೋ ಅದನ್ನು ತಾಮಸ ಎಂದು ತಿಳಿಯಬೇಕು.14 ಮೋಹದಿಂದ ಕೂಡಿದ ಕೆಲಸ ತಾಮಸಿಕ. ಅದು ವಿಷಯ ಜನ್ಯ. ಒಂದು ಸಾಮಾಜಿಕ ಒಳಿತಿಗೆ ಬದ್ಧತೆಗೆ ಒಪ್ಪಿಕೊಳ್ಳುವಂತಹುದಲ್ಲ. ಅದು ಸಮಷ್ಟಿಹಿತವನ್ನು ಕಾಪಾಡುವುದಿಲ್ಲ. ಗುಣಗಳ ಕಾರುಬಾರು:- ಮನುಸ್ಮೃತಿ ಹಾಗೂ ಭಗವದ್ಗೀತೆ ಹೀಗೆ ಸತ್ವ, ರಜಸ್ಸು ಮತ್ತು ತಮೋಗುಣಗಳ ವಿವರಗಳನ್ನು ತಿಳಿಸುತ್ತಾ ಹೋಗುತ್ತವೆ. ಈ ಗುಣತ್ರಯಗಳ ಸ್ವಭಾವ, ಲಕ್ಷಣ, ಅವು ಸೂಚಿಸುವ ಕಾರ್ಯಗಳನ್ನು ಸಾರಾಂಶರೂಪವಾಗಿ ಹೀಗೆ ಹೇಳಬಹುದು.
ಯಾವ ಕೆಲಸ ಮಾಡಿದರೆ ತಲೆ ತಗ್ಗಿಸಬೇಕೊ ಅದು ತಾಮಸ. ಯಾವ ಕೆಲಸ ಮಾಡಿ ಯಶಸ್ಸು ಪಡೆಯದೆ ದುಃಖ ಪಡೆಯುತ್ತಾನೋ ಅದು ರಾಜಸ. ಯಾವ ಜ್ಞಾನ ಪಡೆಯಲು ಮತ್ತು ಯಾವ ಕೆಲಸ ಮಾಡಲು ನಾಚಿಕೆ ಪಡಬೇಕಾಗಿಲ್ಲವೊ ಅದು ಸಾತ್ವಿಕ. ಸತ್ವ ಧರ್ಮ ಪ್ರಧಾನ. ಇದು ಮನುಷ್ಯನನ್ನು ಸುಖವಾಗಿರುತ್ತದೆ. ರಜಸ್ಸು ಅರ್ಥ ಪ್ರಧಾನ. ಇದು ಕಾಮ್ಯ ಕರ್ಮಗಳನ್ನು ಮಾಡಲು ಪ್ರಚೋದಿಸುತ್ತದೆ. ತಮಸ್ಸು ಕಾಮ ಪ್ರಧಾನ. ಇದು ಮನುಷ್ಯನನ್ನು ಹುಚ್ಚನನ್ನಾಗಿ ಮತ್ತು ಧೂರ್ತನನ್ನಾಗಿ ಮಾಡುತ್ತದೆ. ಎಲ್ಲಾ ವ್ಯಕ್ತಿಗಳಲ್ಲಿಯೂ ಈ ಮೂರೂ ಗುಣಗಳಿರುತ್ತವೆ. ಆದರೆ ಸಾಮಾನ್ಯವಾಗಿ ಯಾವ ಗುಣ ಪ್ರಧಾನವಾಗಿದೆ ಎನ್ನುವುದರ ಮೇಲೆ ವ್ಯಕ್ತಿಯ ವ್ಯಕ್ತಿತ್ವವನ್ನು ಗುರುತಿಸಲಾಗುತ್ತದೆ. ಅದರ ಜೊತೆಗೆ ಒಬ್ಬ ವ್ಯಕ್ತಿಯಲ್ಲಿ ಕೆಲವೊಮ್ಮೆ ಸತ್ವಗುಣ, ಕೆಲವೊಮ್ಮೆ ರಜೋಗುಣ ಮತ್ತು ಕೆಲವೊಮ್ಮೆ ತಮೋಗುಣ ಪ್ರಕಟವಾಗುತ್ತದೆಯೆಂದೂ ಹೇಳಲಾಗುತ್ತದೆ. ಪ್ರತಿ ವ್ಯಕ್ತಿಯಲ್ಲೂ ಈ ಗುಣಗಳು ಪರಸ್ವರ ಸ್ಪರ್ಧೆಗಿಳಿಯುತ್ತವೆ. ಸ್ಪರ್ಧೆಯಲ್ಲಿ ಯಾವುದು ಗೆಲ್ಲುತ್ತದೆಯೋ ಅದು ಉಳಿದೆರಡನ್ನು ಹಿಂದೆ ತಳ್ಳುತ್ತದೆ. ಈ ಮಾತನ್ನು ಭಗವದ್ಗೀತೆಯಲ್ಲಿ ಬಹಳ ನೇರವಾಗಿ ಹೇಳಲಾಗಿದೆ. ರಜಸ್ತಮಶ್ವಾಬಿಭೂಯ ಸತ್ತ್ವಂ ಭವತಿ ಭಾರತ| ರಜಃಸತ್ವಂ ತಮಶ್ಛೈವ ತಮಃ ಸತ್ತ್ವಮ್ ರಜಸ್ತಥಾ|| (ಗೀತೆ 14-10)15 ಭಾರತ (ಅರ್ಜುನನೆ), ಒಮ್ಮೊಮ್ಮೆ, ಸತ್ವಗುಣವು ರಜೋಗುಣವನ್ನೂ, ತಮೋಗುಣವನ್ನೂ, ಸೋಲಿಸಿ ತಾನು ಪ್ರಬಲವಾಗುತ್ತದೆ. ಕೆಲವೊಮ್ಮೆ ರಜೋಗುಣವು ಸತ್ವ ಮತ್ತು ತಮೋಗುಣಗಳನ್ನು ಸೋಲಿಸುತ್ತದೆ. ಇನ್ನೂ ಕೆಲವು ಬಾರಿ ತಮೋಗುಣವು ಸತ್ವ ಮತ್ತು ರಜೋಗುಣಗಳನ್ನು ಸೋಲಿಸುತ್ತದೆ. ಈ ರೀತಿ ಮೇಲುಗೈಯಾಗಲು ಸದಾ ಸ್ಪರ್ಧೆಯಿರುತ್ತದೆ.16 ಈ ರೀತಿ ಗುಣತ್ರಯಗಳು ಜೀವಿಯನ್ನು ಸಮಾನವಾಗಿ ಬಂದಿಸಿರುವಾಗ, ಇದರಲ್ಲಿ ಯಾವುದೇ ಒಂದು ಗುಣ ಹೇಗೆ ಪ್ರಬಲವಾಗುತ್ತದೆ ಎಂಬ ಪ್ರಶ್ನೆ ಇಲ್ಲಿ ಹುಟ್ಟುತ್ತದೆ. ಅದಕ್ಕೆ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳು ಉತ್ತರಿಸಿ, ಅದು ಪರಮಾತ್ಮನ ಇಚ್ಛೆಯಿಂದ ಎಂದು ಹೇಳುತ್ತಾರೆ. ಪರಮಾತ್ಮನ ಇಚ್ಛೆಯಿಂದ ಸತ್ವಗುಣವು ಉತ್ಕಟವಾದಾಗ (ಹೆಚ್ಚಾದಾಗ) ರಜೋಗುಣ ತಮೋಗುಣಗಳ ಕಾರ್ಯಶಕ್ತಿಯನ್ನು ತಡೆದು ತನ್ನ ಕಾರ್ಯವನ್ನು ಮಾಡಲು ಸಮರ್ಥವಾಗುತ್ತದೆ. ಹಾಗೆಯೇ ರಜೋಗುಣವು ಉತ್ಕಟವಾದಾಗ ತಮೋಗುಣ, ಸತ್ವಗುಣಗಳ ಕಾರ್ಯಶಕ್ತಿಯನ್ನು ತಡೆದು ತನ್ನ ಕಾರ್ಯವನ್ನು ಮಾಡಲು ಸಮರ್ಥವಾಗುತ್ತದೆ. ತಮೋಗುಣವು ಉತ್ಕಟವಾದಾಗ ರಜೋಗುಣ, ಸತ್ವಗುಣಗಳ ಕಾರ್ಯ ಸಾಮರ್ಥ್ಯವನ್ನು ತಡೆದು ತನ್ನ ಕಾರ್ಯ ಮಾಡುತ್ತದೆ. ಹಾಗಾದರೆ ಭಗವಂತನ ಇಚ್ಛೆಯನ್ನು ನಮ್ಮ ಒಳಿತಿಗೆ ಪೂರಕ ಆಗುವ ಹಾಗೆ ಮಾಡಿಕೊಳ್ಳುವುದು ಹೇಗೆ? ಅದು ಜ್ಞಾನ, ಭಕ್ತಿ ಮತ್ತು ವೈರಾಗ್ಯಗಳಿಂದ ಒಡಗೂಡಿದ ಆರಾಧನೆಯಿಂದ ಎಂದು ಜ್ಞಾನಿಗಳು ಹೇಳುತ್ತಾರೆ. ಈ ಸತ್ವ, ರಜಸ್ಸು ಮತ್ತು ತಮೋಗುಣಗಳನ್ನು ಮನುಷ್ಯರಲ್ಲಿ ಗುರುತಿಸಬಹುದು. ನೀವು ಸೂಕ್ಷ್ಮ ಮತ್ತು ಅವಲೋಕನ ಪ್ರವೃತ್ತಿ ಉಳ್ಳವರಾಗಬೇಕು ಅಷ್ಟೆ. ಗುಣಗಳನ್ನು ಗುರುತಿಸುವ ಬಗೆ:- ಮನುಷ್ಯನ ಶರೀರದಲ್ಲಿ ಈ ಗುಣಗಳನ್ನು ಗುರುತಿಸುವ ಬಗೆ ಹೇಗೆ? ಗೀತೆಯಲ್ಲಿ ಇದಕ್ಕೆ ಮಾರ್ಗದರ್ಶನವಿದೆ. ಸರ್ವದ್ವಾರೇಷು ದೇಹಿಸ್ಮಿನ್ ಪ್ರಕಾಶ ಉಪಜಾಯತೆ| ಜ್ಞಾನಂ ಯಥಾ ತದಾ ವಿದ್ಯಾದ್ ವಿವೃದ್ದಂ ಸತ್ತ್ವಮಿತ್ಯುತ|| (ಗೀತೆ 14-11)18 ಈ ದೇಹದಲ್ಲಿ ಸರ್ವದ್ವಾರಗಳಲ್ಲಿ ಶಬ್ಧಾದಿ ಜ್ಞಾನರೂಪವಾದ ಪ್ರಕಾಶ ಮತ್ತು ಸುಖ ಯಾವಾಗ ಉಂಟಾಗುತ್ತದೆಯೋ, ಆಗ ಸತ್ವ ಗುಣವು ಉತ್ಕಟವಾಗಿದೆಯೆಂದು ತಿಳಿಯಬೇಕು.19 ಮಾನವನ ದೇಹದಲ್ಲಿ ಒಂಬತ್ತು ದ್ವಾರಗಳಿವೆ. ಅವುಗಳು ಯಾವುವೆಂದರೆ, ಎರಡು ಕಣ್ಣುಗಳು, ಎರಡು ಕಿವಿಗಳು, ಎರಡು ಮೂಗಿನ ಹೊಳ್ಳೆಗಳು, ಬಾಯಿ, ಜನನಾಂಗ ಮತ್ತು ಗುದ. ಬದುಕು ಹಸನುಗೊಳ್ಳಲು ಈ ಅಂಗಗಳು ತಮ್ಮ ತಮ್ಮ ಕೆಲಸವನ್ನು ಮಾಡಬೇಕು. ಆ ಕೆಲಸಗಳು ಪ್ರಾಮಾಣಿಕವಾಗಿರಬೇಕು, ಸ್ವಾರ್ಥ ರಹಿತವಾಗಿರಬೇಕು, ನೈತಿಕವಾಗಿರಬೇಕು. ಕಣ್ಣುಗಳು ಸತ್ಯವನ್ನು ನೋಡುವಂತಾಗಬೇಕು. ಕಿವಿಗಳು ಸತ್ಯವನ್ನು ಕೇಳುವಂತಾಗಬೇಕು. ಬಾಯಿಯು ಸತ್ಯವನ್ನು ಹೇಳುವಂತಾಗಬೇಕು. ಇವು ಅಸತ್ಯವನ್ನು ನೋಡಬಾರದು, ಕೇಳಬಾರದು, ಉಸುರಬಾರದು. (ಮಹಾತ್ಮ ಗಾಂದಿಜಿ ಹೇಳಿದ ಮೂರು ಕೋತಿಗಳ ಕಥೆ ನೆನಪಿಗೆ ಬರುತ್ತದೆ). ಅದರಂತೆಯೇ ವಿಷಯ ಸುಖದ ವಿಷಯದಲ್ಲಿಯೂ ನ್ಯಾಯ ಸಮ್ಮತವಾದದನ್ನು ಧರ್ಮವಾದದನ್ನು ಅವಶ್ಯವಿದ್ದಷ್ಟು, ಮಿತವಾಗಿ, ಹಿತವಾಗಿ ತೊಡಗಿಸಿಕೊಳ್ಳಬೇಕು. ಸಂತಾನೋತ್ಪತ್ತಿಯೇ ವಿಷಯ ಸುಖದ ಪ್ರಧಾನ ಆಶಯವಾಗಬೇಕು. ಹೀಗೆ ಈ ಎಲ್ಲಾ ಅಂಗಗಳೂ ತಮ್ಮ ತಮ್ಮ ಪಾಲಿನ ಕೆಲಸವನ್ನು ನ್ಯಾಯಯುತವಾಗಿ ಧರ್ಮಮಾರ್ಗದಲ್ಲಿ, ಹಿತವಾಗಿ, ಮಿತವಾಗಿ ಮಾಡುವಂತಾಗಬೇಕು. ಅತಿ ಸರ್ವತ್ರ ವರ್ಜಯೇತ್. ಅತಿ ಎಲ್ಲಿಯೂ ಕೂಡದು. ಹಾಗಾದಾಗ ಮಾತ್ರ ಪ್ರತಿಯೊಂದು ದ್ವಾರವೂ ಸತ್ವ ಗುಣದ ಲಕ್ಷಣಗಳಿಂದ ಕೂಡಿರುತ್ತದೆ. ಸತ್ವಗುಣದಲ್ಲಿ ಮನುಷ್ಯನು ವಸ್ತುಗಳನ್ನು ಸರಿಯಾದ ಸ್ಥಿತಿಯಲ್ಲಿ ಕಾಣಬಲ್ಲ, ವಸ್ತುಗಳನ್ನು ಸರಿಯಾದ ಸ್ಥಿತಿಯಲ್ಲಿ ಕೇಳಬಲ್ಲ. ವಸ್ತುಗಳನ್ನು ಸರಿಯಾದ ಸ್ಥಿತಿಯಲ್ಲಿ ರುಚಿ ನೋಡಬಲ್ಲ (ಗುರುತಿಸಬಲ್ಲ). ಇದರಿಂದ ಮನುಷ್ಯನ ಅಂತರಂಗ ಮತ್ತು ಬಹಿರಂಗಗಳಲ್ಲಿ ಪರಿಶುದ್ಧನಾಗುತ್ತಾನೆ. ಪ್ರತಿಯೊಂದು ದ್ವಾರದಲ್ಲಿಯೂ ಸುಖದ ಲಕ್ಷಣಗಳಿರುತ್ತವೆ. ಅದು ಸತ್ವದ ಸ್ಥಿತಿ.20 ಲೋಭ: ಪ್ರವೃತ್ತಿರಾರಂಭ: ಕರ್ಮಣಾಮಶಮ: ಸ್ಪೃಹಾ| ರಜಸ್ಸೇತಾನಿ ಜಾಯಂತೇ ವಿವೃದ್ದೇ ಭರತರ್ಷಭ|| (ಗೀತೆ 14-12)21 ರಜೋಗುಣವು ಹೆಚ್ಚಾದಾಗ, ಅತಿಮೋಹ, ಫಲಾಪೇಕ್ಷೆ ಇರುವ ಕರ್ಮ, ಅದಿಕ ಶ್ರಮ, ತಡೆಯಲಾಗದ ಬಯಕೆ ಮತ್ತು ಹಂಬಲ ಈ ಲಕ್ಷಣಗಳು ಹೆಚ್ಚುತ್ತವೆ.22 ರಜೋಗುಣವು ಹೆಚ್ಚಾದಾಗ ಮೋಹ ಜಾಸ್ತಿಯಾಗುತ್ತದೆ. ಹೆಂಡತಿ / ಗಂಡ - ಮಕ್ಕಳ ಮೋಹ, ಆಸ್ತಿ-ಪಾಸ್ತಿಯ ಮೋಹ, ಅದಿಕಾರ ಸ್ಥಾನಗಳ ಮೋಹ, ಹೆಸರು - ಪ್ರಸಿದ್ಧಿಯ ಮೋಹ ಇತ್ಯಾದಿ. ಇವು ಮನುಷ್ಯನನ್ನು ಇನ್ನೂ ಹೆಚ್ಚಾಗಿ ಬಂದಿಸುತ್ತವೆ. ಎಷ್ಟು ಇದ್ದರೂ ತೃಪ್ತಿಯಿಲ್ಲ. ಇನ್ನೂ ಹೆಚ್ಚಿನ ಬಯಕೆ ಆವರಿಸಿಕೊಳುತ್ತದೆ. ಅದರಿಂದ ಇನ್ನೂ ಹೆಚ್ಚಾಗಿ ಲೋಕ ವ್ಯವಹಾರಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತಾನೆ. ಹೆಚ್ಚು ಹೆಚ್ಚು ಇಂದ್ರಿಯ ತೃಪ್ತಿಗಾಗಿ ಹಂಬಲಿಸುತ್ತಾನೆ. ಆದರೆ ಇಂದ್ರಿಯ ತೃಪ್ತಿಗೆ ಕೊನೆ ಎಂಬುದಲ್ಲ. ಇಂದ್ರಿಯದ ಬಯಕೆಗಳನ್ನು ತೃಪ್ತಿ ಪಡಿಸಲು ಸಾಧ್ಯವಿಲ್ಲ. ಅದಕ್ಕಾಗಿ ಸುಖ ಕೊಡುಬಹುದಾದ ಹೆಂಡತಿ, ಮಕ್ಕಳು, ಸಂಸಾರ, ಕಳ್ಳುಬಳ್ಳಿ, ವೃತ್ತಿ, ವ್ಯವಹಾರ, ಸಂಪಾದನೆ, ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಹೀಗೆ ಮನುಷ್ಯ ಒಂದು ವಿಷವರ್ತುಲದಲ್ಲಿ ಸಿಲುಕಿಕೊಳ್ಳುತ್ತಾನೆ. ಇದು ರಜೋಗುಣದ ಲಕ್ಷಣ. ಈ ಎಲ್ಲವೂ ಒಂದು ಮಿತಿಯಲ್ಲಿದ್ದರೆ ಒಳ್ಳೆಯದು. ಮಿತಿ ಮೀರಿದರೆ ಆಪತ್ತು. ಅಪ್ರಕಾಶೋಪ್ರವೃತ್ತಿಶ್ಛ ಪ್ರಮೊದೊ ಮೋಹ ಏವ ಚ | ತಮಸ್ಸೇತಾನಿ ಜಾಯಂತೇ ವಿವೃದ್ದೇ ಕುರುನಂದನ || (ಗೀತೆ 14-13)23 ತಮೋಗುಣವು ವೃದ್ಧಿಯಾದಾಗ ಕತ್ತಲು - ಶಬ್ಧಾದಿ ಜ್ಞಾನದ ಅಭಾವ, ಜಡತ್ವ - ಸತ್ಕಾರ್ಯದಲ್ಲಿ ತೊಡಗದಿರುವಿಕೆ, ಹುಚ್ಚು, ಅನವಧಾನತೆ ಮತ್ತು ಭ್ರಾಂತಿ - ವಿಪರೀತ ಜ್ಞಾನ ಇವುಗಳು ಕಾಣಿಸಿಕೊಳ್ಳುತ್ತವೆ24. ತಮೋಗುಣವು ಜಾಸ್ತಿಯಾದಾಗ ಅಂಧಕಾರ ಇರುತ್ತದೆ. ಅಂಧಕಾರ ಇದ್ದಲ್ಲಿ ಪ್ರಕಾಶವಿರುವುದಿಲ್ಲ. ಪ್ರಕಾಶ ಇಲ್ಲದಿದ್ದಲ್ಲಿ ಜ್ಞಾನ ಇರುವುದಿಲ್ಲ. ಪ್ರಕಾಶ ಜ್ಞಾನದ ಪ್ರತೀಕ. ಅಪ್ರವೃತ್ತಿ ಎಂದರೆ ನಿಷ್ಕ್ರಿಯತೆ, ಜಡತ್ವ. ಒಂದು ಶಿಸ್ತಿಗೆ ಒಳಪಟ್ಟು ಕೆಲಸ ಮಾಡಲು ಆಗದಿರುವಂತಹ ಪ್ರವೃತ್ತಿ. ಸತ್ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಆಗುವುದಿಲ್ಲ. ಇನ್ನೊಂದು ಪ್ರವೃತ್ತಿ ಹುಚ್ಚು. ತನ್ನ ಮನಸ್ಸೇಚ್ಚೆ ಕೆಲಸ ಮಾಡುತ್ತಾನೆ. ಯಾರ ಮಾತನ್ನೂ ಕೇಳುವುದಿಲ್ಲ. ಅವಧಾನ ಎಂದರೆ ಮುತ್ಸದ್ಧಿತನ, ಅನವಧಾನ ಎಂದರೆ ಕೆಲಸದಲ್ಲಿ ಮುತ್ಸದ್ದಿತನ ಇಲ್ಲದೆ ಇರುವುದು. ಮತ್ತೊಂದು ಪ್ರವೃತ್ತಿ ಭ್ರಾಂತಿ, ತಪ್ಪುಗ್ರಹಿಕೆ, ವಿಪರೀತ ಜ್ಞಾನ. ಕೆಲಸ ಮಾಡಲು ಶಕ್ತಿ ಇದ್ದರೂ ಮಾಡದಿರುವಿಕೆ. ಬದುಕಿನಲ್ಲಿ ನಿರೀಕ್ಷಿತ ಚಟುವಟಿಕೆ ಇಲ್ಲದಿರುವುದು. ಇವು ತಮೋಗುಣದಲ್ಲಿ ಇರುವವನ ಲಕ್ಷಣಗಳು. ಈ ಗುಣತ್ರಯಗಳ ಸ್ವಭಾವ, ಲಕ್ಷಣ, ಫಲ ಇತ್ಯಾದಿಗಳನ್ನು ಸಾರಾಂಶರೂಪವಾಗಿ ಹೀಗೆ ಹೇಳಬಹುದು. ಸಾತ್ತ್ವೀಕ ಗುಣ ನಿರ್ಮಲ ಸ್ವಭಾವದ್ದು, ಪ್ರಕಾಶಮಯವಾದದ್ದು, ಜ್ಞಾನಪ್ರದವಾದದ್ದು. ಸಾತ್ತ್ವಿಕ ಕರ್ಮಾಚರಣೆಯ ಫಲ ಸುಖ ಮತ್ತು ಶಾಂತಿ. ಇದು ಸಮಸ್ಯಾರಹಿತ, ಸ್ವಾರ್ಥರಹಿತ, ಸಾತ್ತ್ವಿಕ ಕರ್ಮಾಚರಣೆ ಸಮಷ್ಟಿ ಹಿತವನ್ನು ಕಾಪಾಡುವಂತಹದು. ರಾಜಸ ಗುಣ ಕಾಮ ಕ್ರೋಧಗಳಿಂದ ಕೂಡಿರುವಂತಹದು. ಇದು ಆವೇಶ ಮತ್ತು ಅತಿರೇಕಗಳಿಂದ ಕೂಡಿರುವಂತಹದು. ಇದು ಕರ್ಮಪ್ರವೃತ್ತಿಯನ್ನು ಪ್ರಚೋದಿಸುವಂತಹದು. ರಾಜಸ ಕರ್ಮಾಚರಣೆಯ ಫಲ ಉದ್ವೇಗ, ವಿವಿಧ ತೃಷೆ ಮತ್ತು ಪರಿಭ್ರಮಣೆ. ತಾಮಸಗುಣ ಮೋಹದಿಂದ ಕೂಡಿರುವಂತಹದು. ಇದರ ಲಕ್ಷಣ ಅಪ್ರವೃತ್ತಿ. ಅಬಿರುಚಿ ಇಲ್ಲದೆ ಇರುವಂತಹದು. ಅಜ್ಞಾನದಿಂದ ಕೂಡಿರುವಂತದು. ಕ್ರ್ರೋಧದಿಂದ ಒಳಗೊಂಡಿರುವಂತಹದು. ಇದರ ಫಲ ಆಲಸ್ಯ, ನಿದ್ರೆ, ಪ್ರಮಾದ ಮತ್ತು ಪರಿಣಾಮವಾಗಿ ದುಃಖ. ಸತ್ವ ಶ್ರೇಷ್ಟ. ಆದರ್ಶಪ್ರಾಯ ಸಮಷ್ಟಿ ಹಿತದ್ದು, ಆಚರಣೆ ಯೋಗ್ಯ.25 ಭಗವದ್ಗೀತೆ ಮುಂದುವರೆದು ಮನುಷ್ಯನ ಸ್ವಭಾವದಂತೆಯೇ ಮನುಷ್ಯನ ಶ್ರದ್ಧೆ ಇರುತ್ತದೆ ಎಂದೂ ತಿಳಿಸುತ್ತದೆ. ಸ್ವಭಾವಕ್ಕನುಗುಣವಾಗಿ ಶ್ರದ್ಧೆ ಇರುತ್ತದೆ ಎಂದೂ ತಿಳಿಸುತ್ತದೆ. ಸ್ವಭಾವಕ್ಕನುಗುಣವಾಗಿ ಸಾತ್ವಿಕ, ರಾಜಸ ಮತ್ತು ತಾಮಸ ಶ್ರದ್ಧೆಯಿರುತ್ತದೆ ಮತ್ತು ಅದರಂತೆ ಅವರ ದಿನಚರಿ ಮತ್ತು ಆರಾಧನಾ ಪದ್ಧತಿ ಇರುತ್ತದೆಯೆಂದೂ ಹೇಳಲಾಗುತ್ತದೆ [ಗೀತೆ 17-2, 3, 4,]. ಅದರಂತೆಯೇ ಸಾತ್ವಿಕ, ರಾಜಸ ಮತ್ತು ತಾಮಸ ಗುಣಗಳು ಇರುವವರು, ಅವರ ಸ್ವಭಾವಕ್ಕೆ ತಕ್ಕಂತೆ ಸಾತ್ವಿಕ, ರಾಜಸ ಮತ್ತು ತಾಮಸ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ನಿಯಮಿತವಾಗಿ ಯಾವ ಮೋಹವಿಲ್ಲದೆ, ರಾಗದ್ವೇಷಗಳಿಲ್ಲದೆ ಮತ್ತು ಕರ್ಮ ಫಲಾಪೇಕ್ಷೆಯಿಲ್ಲದೆ ಮಾಡಿದ ಕೆಲಸ ಸಾತ್ವಿಕ ಎಂದು ಹೇಳಲಾಗುತ್ತದೆ. ತನ್ನ ಕಾಮನೆಗಳನ್ನು ತೃಪ್ತಿಪಡಿಸಲು ಮಾಡಿದ ಕೆಲಸಗಳು, ಮಿಥ್ಯಾಹಂಕಾರದಿಂದ ಮಾಡಿದ ಕರ್ಮಗಳು ರಾಜಸ ಎಂದು ಕರೆಯಲಾಗುತ್ತದೆ. ಧರ್ಮ ಗ್ರಂಥಗಳಲ್ಲಿ ಹೇಳಿರುವ ಮೌಲ್ಯಗಳನ್ನು ಅಲಕ್ಷಿಸಿ, ಮಾಯಾವಶನಾಗಿ, ಕರ್ಮದ ಮುಂದಿನ ಬಂಧನವನ್ನಾಗಲೀ, ಹಿಂಸೆಯನ್ನಾಗಲೀ, ಇತರರಿಗೆ ಉಂಟು ಮಾಡುವ ಯಾತನೆಯನ್ನು ಅಲಕ್ಷಿಸಿ ಮಾಡಿದ ಕೆಲಸ ತಾಮಸ ಎಂದು ಹೇಳಲಾಗುತ್ತದೆ [ಗೀತೆ, 18-23, 24, 25]. ಭಗವದ್ಗೀತೆಯ ಮೂರನೇ ಅಧ್ಯಾಯದ 33ನೇ ಶ್ಲೋಕದಲ್ಲಿಯೂ ಈ ಗುಣಗಳ ಬಗ್ಗೆ ಪ್ರಸ್ತಾಪಿಸಲಾಗಿದೆ. ಪ್ರತಿಯೊಬ್ಬ ವ್ಯಕ್ತಿಯೂ ತಾನು ಸಾತ್ವಿಕ ಅಥವಾ ರಾಜಸ ಅಥವಾ ತಾಮಸ ಗುಣಗಳಿಂದ, ಸ್ವಭಾವಕ್ಕೆ ಅನುಗುಣವಾಗಿ ನಡೆದುಕೊಳ್ಳತ್ತಾನೆ. ಜ್ಞಾನಿಯೂ, ತಿಳುವಳಿಕೆ ಉಳ್ಳವನೂ ಕೂಡಾ ಇದಕ್ಕೆ ಹೊರತಲ್ಲ, ಅವನು ಎಷ್ಟೇ ಬುದ್ಧಿವಂತನಿದ್ದರೂ ತನ್ನ ಮೂಲ ಸ್ವಭಾವಕ್ಕೆ ಅನುಗುಣವಾಗಿ ನಡೆದುಕೊಳ್ಳತ್ತಾನೆ. ಇಂತಹ ಸಮಯದಲ್ಲಿ ಅವನ ಕಾರ್ಯಪ್ರವೃತ್ತಿಗೆ ಪ್ರಚೋದನೆ ನೀಡುವುದು ಅವನ ಜ್ಞಾನ, ಬುದ್ಧಿವಂತಿಕೆ ಅಲ್ಲ, ಆದರೆ ಅವನ ಮೂಲ ಸ್ವಭಾವ. ತನ್ನ ಮೂಲ ಸ್ವಭಾವವನ್ನು ಬದಲಾಯಿಸಿಕೊಳ್ಳಬೇಕೆನ್ನುವವನು ಭಕ್ತಿಯಿಂದ ದೇವರನ್ನು ಮೊರೆ ಹೋಗಬೇಕು. ಇದೊಂದೇ ಮನುಷ್ಯನಲ್ಲಿ ಬದಲಾವಣೆ ತರಬಲ್ಲದು. ಅವನಿಗೆ ಸನ್ಮಾರ್ಗ ತೋರಿಸಬಲ್ಲದು. ತಾಮಸಗುಣವುಳ್ಳ ಮನುಷ್ಯ ಪ್ರಯತ್ನಪಟ್ಟು ರಾಜಸ ಗುಣಗಳನ್ನು ರೂಡಿಸಿಕೊಳ್ಳಬಹುದು. ಅದರಂತೆಯೇ ರಾಜಸ ಗುಣ ಉಳ್ಳವನು ಸಾತ್ತ್ವಿಕನಾಗಬಹುದು. ಸಾತ್ತ್ವಿಕ ಗುಣಗಳುಳ್ಳ ಮನುಷ್ಯ ದೃಢ ಸಂಕಲ್ಪ ಮತ್ತು ಸತತ ಪ್ರಯತ್ನದಿಂದ ಸಾತ್ವಿಕವನ್ನು ಮೀರಿ ಸ್ಥಿತಪ್ರಜ್ಞನಾಗಬಹುದು. ಸ್ಥಿತಪ್ರಜ್ಞ ಅಂದರೆ ಯಾರು ? ಅವನ ಗುಣಲಕ್ಷಣಗಳೇನು? ತಿಳಿದುಕೊಳ್ಳೋಣ. ಸ್ಥಿತ ಪ್ರಜ್ಞನ ಲಕ್ಷಣಗಳು:- ಭಗವದ್ಗೀತೆಯಲ್ಲಿ ಸ್ಥಿತಪ್ರಜ್ಞನ ಲಕ್ಷಣಗಳನ್ನು ಬಹಳ ವಿವರವಾಗಿ ಕೊಡಲಾಗಿದೆ. ಗೀತೆಯ ಅಧ್ಯಾಯ ಎರಡರಲ್ಲಿ 55 ನೇ ಶ್ಲೊಕದಿಂದ 72 ನೇ ಶ್ಲೋಕದವರೆಗೆ ಈ ವಿವರಗಳು ಹರಡಿಕೊಂಡಿದೆ. ಗೀತೆಯಲ್ಲಿ ಸ್ಥಿತಪ್ರಜ್ಞ ಶಬ್ಧಕ್ಕೆ ಪರ್ಯಾಯವಾಗಿ ಸಮಾದಿಸ್ಥ, ಸ್ಥಿರ ಬುದ್ಧಿ, ಎಂಬ ಪದಗಳನ್ನೂ ಉಪಯೋಗಿಸಲಾಗಿದೆ. ಅದರಂತೆಯೇ ಅವನನ್ನು ಅಪರೋಕ್ಷ ಜ್ಞಾನಿ ಎಂದೂ ಕರೆಯಲಾಗಿದೆ. ಸ್ಥಿತ ಪ್ರಜ್ಞನ ಲಕ್ಷಣಗಳ ಬಗ್ಗೆ ಒಟ್ಟು ಹತ್ತೊಂಬತ್ತು ಶ್ಲೋಕಗಳಿದ್ದರೂ ಅವುಗಳಲ್ಲಿ ಕೆಲವನ್ನು ಆಯ್ದು ಇಲ್ಲಿ ಅರ್ಥೈಸಲಾಗಿದೆ. ಪ್ರಜಾಹತಿ ಯದಾಕಾಮನ್ ಸರ್ವಾನ್ ಪಾರ್ಥ ಮನೋಗತಾನ್| ಆತ್ಮನ್ನೇವಾತ್ಮನಾ ತುಷ್ಟಃ ಸ್ಥಿತಪ್ರಜ್ಞಸ್ತದೋಚ್ಯತೇ|| (ಗೀತೆ 2-55)26 ಯಾವಾಗ ಮನಸ್ಸಿನಲ್ಲಿರುವ ಕಾಮಕ್ರೋಧಾದಿ ದುರ್ಗುಣಗಳೆಲ್ಲವನ್ನು ಬಿಟ್ಟು ಬಿಡುತ್ತಾನೊ, ಯಾವಾಗ ಪರಮಾತ್ಮನಲ್ಲೇ ಏಕಾಗ್ರಚಿತ್ತನಾಗಿ, ಪರಮಾತ್ಮನ ಪ್ರಸಾದದಿಂದ ಸಂತೃಪ್ತಿಯಿಂದ ಇರುವನೋ, ಆಗ ಅವನು ಅಪರೋಕ್ಷ ಜ್ಞಾನಿ27. ಈ ಶ್ಲೋಕವನ್ನು ಮೂರು ಭಾಗ ಮಾಡಿ ಅರ್ಥೈಸಿಕೊಳ್ಳಬಹುದು. ಮೊದಲನೆಯದಾಗಿ, ಯಾರು ಕಾಮ ಕ್ರೋಧಾದಿ ಗುಣಗಳೆಲ್ಲವನ್ನೂ ಬಿಟ್ಟು ಬಿಡುತ್ತಾನೊ ಎನ್ನುವುದು. ಮನುಷ್ಯನು (ಜೀವಿ, ಸಾಧಕ) ಸ್ಥಿತಪ್ರಜ್ಞನಾಗಬೇಕಾದರೆ ಮೊದಲು ಕಾಮ, ಕ್ರೋಧ, ಲೋಭ, ಮೋಹ, ಮದ ಮತ್ತು ಮತ್ಸರಗಳೆಂಬ ಅರಿಷಡ್ವರ್ಗಗಳನ್ನು ದೂರವಿಡಬೇಕು. ಅರಿಷಡ್ವರ್ಗಗಳು :- ವಿಚಾರಗಳಿಂದ, ವಸ್ತುಗಳಿಂದ, ಲೈಂಗಿಕ ವಿಷಯಾಸಕ್ತಿ ಮತ್ತು ಇತರ ವಿಷಯ ಸುಖಗಳಿಂದ ಕೂಡಿರುವುದೇ ಕಾಮ. ಧರ್ಮಮಾರ್ಗದಿಂದ ಗಳಿಸಿದ, ಪಡೆದ ವಿಷಯಾಸಕ್ತಿಗೆ ಸನಾತನ ಧರ್ಮದಲ್ಲಿ ವಿರೋಧವಿಲ್ಲ. ಮಿತಿಮೀರಿದ ಮತ್ತು ಅಧರ್ಮದಿಂದ ಗಳಿಸಿದ ವಿಷಯಾಶಕ್ತಿಯೇ ಒಂದು ದುರ್ಗಣವಾಗುತ್ತದೆ. ತನ್ನ ಮೇಲೆ ಹತೋಟಿಯಿಲ್ಲದೆ ಯಾವ ಮನೋವಿಕಾರದಿಂದ ಇತರರಿಗೆ ನೋವುಂಟಾಗುವಂತೆ ಮಾಡಲಾಗುತ್ತದೆಯೋ ಅದು ಕ್ರೋಧ. ಸಿಟ್ಟಿನಿಂದ ಬುದ್ಧಿ ಕೆಡುತ್ತದೆ. ವಿವೇಕ ಅಳಿಯುತ್ತದೆ. ತನಗೆ ಎಲ್ಲವೂ ಬೇಕು ಮತ್ತು ತನ್ನಲ್ಲೇ ಅದು ಉಳಿಯಬೇಕು. ಇದೇ ಲೋಭ. ತನ್ನ ಹೆಂಡತಿ, ತನ್ನ ಮಕ್ಕಳು, ತನ್ನ ಬಂಧು-ಬಾಂಧವರು, ತನಗೆ ಬೇಕಾದ ವಸ್ತುಗಳು ಇವುಗಳನ್ನು ಬಿಟ್ಟು ಹೋಗದಿರುವುದೇ ಮೋಹ. ತಾನು ತನ್ನದು ಎಂಬ ಸ್ವಾರ್ಥ, ಅಹಂಕಾರಗಳಿಂದ ಕೂಡಿದ ಸುಖ, ಮುಂತಾದ ದುರ್ಗುಣಗಳ ಒಕ್ಕೂಟವೇ ಮದ. ಇತರರ ಸುಖ, ಪ್ರಗತಿ ಇವುಗಳ ಬಗ್ಗೆ ಒಳ್ಳೆಯ ಭಾವನೆ ತಾಳದಿರುವುದೇ ಮತ್ಸರ. ಇವುಗಳನ್ನು ಪ್ರಯತ್ನಪೂರಕವಾಗಿ ನಿಗ್ರಹಿಸಬೇಕು. ಅವುಗಳನ್ನು ಗೆಲ್ಲಬೇಕು. ಇದು ಮನುಷ್ಯ ಮಾಡಬೇಕಾದ ಮೊದಲನೆಯ ಕೆಲಸ. ಎರಡನೆಯದು ಪರಮಾತ್ಮನಲ್ಲಿ ಏಕಾಗ್ರಚಿತ್ತನಾಗುವುದು. ಭಗವಂತನ ಸಾಕ್ಷಾತ್ಕಾರಕ್ಕಾಗಿ ಯೋಗಸಾಧನೆಯನ್ನು ಮಾಡುವುದು. ಯೋಗಸಾಧನೆಗೆ ಸನಾತನ ಧರ್ಮ ನಾಲ್ಕು ಮಾರ್ಗಗಳನ್ನು ಹೇಳಿದೆ. ಅವೇ ಕರ್ಮಯೋಗ, ಜ್ಞಾನಯೋಗ, ರಾಜಯೋಗ ಮತ್ತು ಭಕ್ತಿಯೋಗ. ಯೋಗ ಮಾರ್ಗಗಳು :- ಕರ್ಮಯೋಗದಲ್ಲಿ ಕೆಲಸಕ್ಕೆ ಪ್ರಾಧಾನ್ಯತೆ. ಒಳ್ಳೆಯ ಕೆಲಸಕ್ಕೆ ಒಳ್ಳೆಯ ಫಲ. ಕೆಟ್ಟ ಕೆಲಸಕ್ಕೆ ಕೆಟ್ಟ ಫಲ. ಹೀಗಾಗಿ ಮನುಷ್ಯ ಹುಟ್ಟು ಸಾವು ಎಂಬ ಜೀವನ ಚಕ್ರಕ್ಕೆ ಸಿಲುಕಿದ್ದಾನೆ. ಇದರಿಂದ ಬಿಡಿಸಿಕೊಳ್ಳಲು ಮನುಷ್ಯ ಕರ್ಮಯೋಗದ ಮೊರೆಹೋಗಬೇಕು. ಸಂಕ್ಷಿಪ್ತವಾಗಿ ಕರ್ಮಯೋಗವೆಂದರೆ ಜಗತ್ತಿನ ಕರ್ಮಗಳನ್ನು ಯೋಗಯುಕ್ತವಾಗಿ ಮಾಡುತ್ತ ಭಗವಂತನ ಸಾಕ್ಷಾತ್ಕಾರವನ್ನು ಹೊಂದುವುದು. ಕರ್ಮವನ್ನು ನಿಷ್ಕಾಮ ಭಾವನೆಯಿಂದ ಮಾಡುವುದು. ಕೆಲಸ ಮಾಡಲು ನಾನು ಅದಿಕಾರಿ (ಕರ್ಮಣ್ಯೇದಿಕಾರಸ್ಥೆ) ಎಂದು ತಿಳಿದು ಮಾಡುವುದು. ಕರ್ಮಫಲದಲ್ಲಿ ಆಸಕ್ತಿ ತಾಳದೆ ಮಾಡುವುದು. ಸ್ವಾರ್ಥ ತ್ಯಾಗ ಮಾಡಿ ಕೆಲಸ ಮಾಡುವುದು. ಪ್ರಾಮಾಣಿಕವಾಗಿ ಕೆಲಸ ಮಾಡುವುದು. ಬಂದ ಫಲವನ್ನು ಭಗವಂತನಿಗೇ ಅರ್ಪಿಸುವುದು. ಜೊತೆ ಜೊತೆಗೆ ಬಂದ ಫಲವನ್ನು, `ವಸುಧೈವ ಕುಟುಂಬಕಮ್ ಎಂದು ಹಂಚಿಕೊಂಡು ಬಾಳುವುದು. ಇದನ್ನು ನಾನು ಮಾಡಿದೆ ಎಂಬ ಅಹಂಕಾರ ತಾಳದಿರುವುದು. ಇದು ಕರ್ಮಯೋಗದ ತಿರುಳು. ಮತ್ತೊಂದು ಜ್ಞಾನಯೋಗ. ಜ್ಞಾನ ಎಂದರೆ ತಿಳುವಳಿಕೆ. ವಿಚಾರ ವಿವೇಕಗಳ ಮೂಲಕ ಜೀವಾತ್ಮನು ಜೀವನ ಬಂಧನಗಳಿಂದ ಮುಕ್ತನಾಗಿ ಸಾಧನಾ ಮಾರ್ಗದ ಮೂಲಕ ಮೋಕ್ಷವನ್ನು ಪಡೆಯುವುದು. ಇಲ್ಲಿ ಜ್ಞಾನಕ್ಕೆ ಪ್ರಾಶಸ್ತ್ಯ. ಜ್ಞಾನಯೋಗದ ಸಾಧಕನು ಭಾವುಕತೆ, ಭಯ, ದಾಕ್ಷಿಣ್ಯ ಸ್ವಭಾವ ಇತ್ಯಾದಿಗಳನ್ನು ಬಿಡಬೇಕು. ದೃಢ ಸಂಕಲ್ಪ, ಚುರುಕು ಬುದ್ಧಿ, ಆಳವಾದ ಶ್ರದ್ಧೆ, ಅಚಲವಾದ ಆತ್ಮ ವಿಶ್ವಾಸ, ಇವುಗಳನ್ನು ರೂಡಿಸಿಕೊಳ್ಳಬೇಕು. ಪ್ರತಿ ವಿಚಾರ, ಸನ್ನಿವೇಶ, ಸಂಗತಿಗಳನ್ನು ವಿಚಾರಮಾಡಿ ಒಪ್ಪಿಕೊಳ್ಳಬೇಕು. ಸಾಧಕನು ವಿವೇಕ, ವೈರಾಗ್ಯ, ಶಮಾದಿಷಟ್ಕ ಸಂಪತ್ತು ಮತ್ತು ಮುಮುಕ್ಷತ್ವ ಈ ಅಂಶಗಳನ್ನು ಚೆನ್ನಾಗಿ ಅರಿತಿರಬೇಕು. ವಿವೇಕವೆಂದರೆ ನಿತ್ಯಾನಿತ್ಯವಸ್ತು ವಿವೇಕ. ಜಗತ್ತಿನಲ್ಲಿ ನಿತ್ಯ ವಸ್ತುವಾವುದು, ಅನಿತ್ಯ ವಸ್ತುವಾವುದು. ಈ ಪ್ರಪಂಚದ ಆಗುಹೋಗುಗಳಿಗೆ ಹಿನ್ನಲೆ ಏನು. ಅದರ ಹಿಂದಿನ ತತ್ವ ಏನು, ಇವುಗಳನ್ನು ಯಥಾರ್ಥವಾಗಿ ತಿಳಿಯುವುದು. ವೈರಾಗ್ಯ ಎಂದರೆ ಜಗತ್ತಿನಲ್ಲಿ ಇಂದ್ರಿಯ ಸುಖಗಳ ಬಗ್ಗೆ ಆಕರ್ಷಣೆ ಇಲ್ಲದಿರುವುದು. ಅಷ್ಟೇ ಅಲ್ಲ, ಎಲ್ಲಾ ಸುಖಭೋಗಗಳ ಆಸಕ್ತಿ ಇಲ್ಲದಿರುವುದೇ ವೈರಾಗ್ಯ. ಮುಂದಿನದು ಶಮದಮಾದಿ ಷಟ್ ಸಂಪತ್ತುಗಳು. ಶಮ, ದಮ, ಉಪರತಿ, ತಿತಿಷ್ಟಾ, ಶ್ರದ್ಧಾ ಮತ್ತು ಸಮಾಧಾನ ಇವೇ ಆರು ಸಂಪತ್ತುಗಳು. ಇಂದ್ರಿಯ ಸಂಬಂಧವಾದ ವಿಷಯ ವಸ್ತುಗಳಿಂದ ಮನಸ್ಸನ್ನು ನಿಗ್ರಹಿಸುವುದು ಶಮ. ಆಂತರಿಕವಾಗಿಯೂ ಆಸೆಗಳು ನಿರ್ಮೂಲವಾಗಿ ಇಂದ್ರಿಯಗಳು ಬಾಹ್ಯವಸ್ತುಗಳ ಕಡೆ ಹರಿಯದಿರುವುದೇ ದಮ. ಶಮ ದಮಗಳನ್ನು ರೂಡಿಸಿಕೊಂಡು ವಿಷಯ ವೃತ್ತಿಗಳಿಂದ ಸಂಪೂರ್ಣವಾಗಿ ವಿಮುಖರಾಗುವುದೇ ಉಪರತಿ. ಮಾನ - ಅಪಮಾನ, ಶೀತ - ಉಷ್ಣ, ಸಿಹಿ - ಕಹಿ, ಕಷ್ಟ - ನಷ್ಟಗಳನ್ನೆಲ್ಲಾ ಸಹಿಸಿಕೊಳ್ಳುವುದೇ ತಿತಿಕ್ಷೆ. ಮುಂದಿನದೇ ಶ್ರದ್ಧೆ, ಶಾಸ್ತ್ರವಾಕ್ಯಗಳಲ್ಲಿ ಮತ್ತು ಗುರೋಪದೇಶದಲ್ಲಿ ಶ್ರದ್ಧೆಯನ್ನು ಬೆಳೆಸಿಕೊಳ್ಳುವುದು. ಆ ನಂತರ ಸಮಾಧಾನ. ಮನಸ್ಸಿನಲ್ಲಿ ಯಾವ ಆಲಸ್ಯವೂ ಇರಬಾರದು. ಅಶುದ್ಧತೆಯೂ ಇರಬಾರದು. ಶ್ರದ್ಧೆಯಿಂದ ಮತ್ತು ಸ್ಥಿರ ಚಿತ್ತದಿಂದ ವೇದಾದಿ ಶಾಸ್ತ್ರವಾಕ್ಯಗಳನ್ನು ಗುರು ಭೋಧೆಯನ್ನು ಶ್ರವನ, ಮನನ, ಮಾಡುತ್ತಾ ಮನಸ್ಸನ್ನು ದೈವಚಿಂತನೆಯಲ್ಲಿ ನೆಲೆಗೊಳಿಸುವುದೇ ಸಮಾಧಾನ. ಮುಂದಿನದೇ ಮುಮುಕ್ಷತ್ವ, ಮೇಲೆ ತಿಳಿಸಿದ ಗುಣಗಳನ್ನು ರೂಡಿಸಿಕೊಂಡು ಸಾಧನೆಗೈದು ಮೋಕ್ಷ ಬೇಕು, ಮೋಕ್ಷ ಬಿಟ್ಟು ಬೇರೇನೂ ಬೇಡ ಎಂಬ ಅತ್ಯಂತ ಕಾತರತೆಯಿಂದಿರುವುದೇ ಮುಮಕ್ಷತ್ವ. ಜ್ಞಾನ ಯೋಗದ ಸಾಧಕನು ಈ ಸಾಧನ ಚತುಷ್ಟಯ ಎಂಬ ನಾಲ್ಕು ಗುಣಗಳನ್ನು ರೂಡಿಸಿಕೊಂಡಾಗ ಯೋಗ ಸಾಧನೆಗೆ ಅರ್ಹನಾಗುತ್ತಾನೆ. ಜ್ಞಾನಯೋಗದ ಮಾರ್ಗದಲ್ಲಿ ಶ್ರವಣ, ಮನನ ಮತ್ತು ನಿದಿಧ್ಯಾಸನ ಎಂದು ಮೂರು ಹಂತಗಳನ್ನು ಗುರುತಿಸುತ್ತಾರೆ. ಅಹಂ ಬ್ರಹ್ಮಾಸ್ಮಿ, ತತ್ವಮಸಿ ಇತ್ಯಾದಿ ತತ್ವಗಳನ್ನು ಗುರುಮುಖೇನ ತಿಳಿದು ಸಾಧನೆ ಮಾಡಬೇಕೆಂದು ಹೇಳುತ್ತಾರೆ. ಯೋಗ ಮಾರ್ಗದಲ್ಲಿ ಇನ್ನೊಂದು ರಾಜಯೋಗ. ಮನಸ್ಸಿನ ಏಕಾಗ್ರತೆಯ ಮೂಲಕ ಬ್ರಹ್ಮಜ್ಞಾನವನ್ನು ಯಾರು ಬೇಕಾದರೂ ಪಡೆಯಬಹುದು ಎನ್ನುತ್ತದೆ ರಾಜಯೋಗ. ಶರೀರದ ದೃಢತೆ, ಪರಿಶುದ್ಧತೆ, ಉಸಿರಾಟದ ನಿಯಂತ್ರಣ, ಮನಸ್ಸಿನ ಏಕಾಗ್ರತೆ ಇತ್ಯಾದಿ ವಿಚಾರಗಳಿಂದ ಈ ಯೋಗಮಾರ್ಗ ರೂಪಗೊಂಡಿದೆ. ಈ ರಾಜಯೋಗದಲ್ಲಿ ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಮತ್ತು ಸಮಾದಿ ಎಂದು ಎಂಟು ಅಂಗಗಳನ್ನು ಗುರುತಿಸಲಾಗಿದೆ. ಇದೇ ಅಷ್ಟಾಂಗ ಯೋಗ. ಯಮದಲ್ಲಿ ಅಹಿಂಸೆ, ಸತ್ಯ, ಅಸ್ತೇಯ (ಇತರರ ವಸ್ತುಗಳನ್ನು ಆಶಿಸದಿರುವುದು, ಕಸಿಯದಿರುವುದು). ಬ್ರಹ್ಮಚರ್ಯ, ಅಪರಿಗ್ರಹ (ಸಂಗ್ರಹ ಮಾಡದೆ ಇರುವುದು) ಸೇರುತ್ತವೆ. ನಿಯಮದಲ್ಲಿ ಶೌಚ, ಸಂತೋಷ, ತಪಸ್ಸು, ಸ್ವಾಧ್ಯಾಯ (ಆತ್ಮವಿಧ್ಯೆ), ಈಶ್ವರ ಪ್ರಣೀಧಾನಗಳು ಸೇರುತ್ತವೆ. ಆಸನ ದೇಹದ ವಿವಿಧ ಅಂಗಗಳಿಗೆ ಆರೋಗ್ಯ ಮತ್ತು ಲಘುತ್ವವನ್ನು ಕೊಡುತ್ತವೆ. ಪ್ರಾಣಾಯಾಮ ಎಂದರೆ ಕ್ರಮಬದ್ಧ ಉಸಿರಾಟ, ಉಸಿರಿನ ವಿಸ್ತಾರ ಮತ್ತು ಸಂಕೋಚ. ಉಸಿರನ್ನು ಒಳಕ್ಕೆ ತೆಗೆದುಕೊಳ್ಳುವುದು, ಅಲ್ಲಿ ನಿಲ್ಲಿಸುವುದು ಮತ್ತು ಹೊರ ಬಿಡುವುದು. ಇವನ್ನು ಪೂರಕ, ಕುಂಬಕ ಮತ್ತು ರೇಚಕಗಳೆಂದು ಕರೆಯುತ್ತಾರೆ. ಇದರಿಂದ ಮನೋನಿಗ್ರಹ ಸಾಧ್ಯ ಎಂಬುದು ಅನುಭವ ಸಿದ್ಧವಾದದ್ದು. ಪ್ರತ್ಯಾಹಾರವೆಂದರೆ ಇಂದ್ರಿಯಗಳ ನಿಗ್ರಹ. ಧಾರಣವೆಂದರೆ ತಲ್ಲೀನತೆಯಿಂದ ಮನಸ್ಸನ್ನು ಸ್ಥಿರಗೊಳಿಸುವುದು. ಧ್ಯಾನವು ಇನ್ನೂ ಹೆಚ್ಚಿನ ತಲ್ಲೀನತೆಯನ್ನು, ತದಾತ್ಮಭಾವವನ್ನು ತಂದು ಕೊಡುತ್ತದೆ. ಸಮಾದಿ ಯೋಗದ ಅಂತಿಮ ಹಂತ. ಈ ಹಂತದಲ್ಲಿ ಸಾಧಕನು ತನ್ನ ಪ್ರಜ್ಞೆಯನ್ನು ಕಳೆದುಕೊಂಡು (ಮರೆತು) ಪರಮಾತ್ಮನ ಇರುವನ್ನು ಅನುಭವಿಸುತ್ತಾನೆ. ತನ್ನ ಸ್ವರೂಪಾನಂದವನ್ನು ಅನುಭವಿಸುತ್ತಾನೆ. ಇದು ಪರಮಾತ್ಮನ ಸಾಕ್ಷಾತ್ಕಾರಕ್ಕೆ ದಾರಿಮಾಡಿಕೊಡುತ್ತದೆ. ಯೋಗದಲ್ಲಿ ಕೊನೆಯದು ಭಕ್ತಿಯೋಗ. ಭಕ್ತಿ ಎಂದರೆ ಪ್ರೀತಿ. ಭಗವಂತನನ್ನು ಪ್ರೀತಿಸುವುದು, ಸಕಲ ಕಾರ್ಯಗಳನ್ನು ದೇವರ ಸೇವೆ ಎಂದು ನಿರ್ವಹಿಸಿ, ಕೊನೆಗೆ ಪ್ರೀತಿಯ ಮೂಲಕವೇ ಭಗವಂತನನ್ನು ಸೇರುವುದು. ನಾವು ಪತಿ - ಪತ್ನಿ, ಸೋದರ-ಸೋದರಿ, ಬಂಧು-ಬಳಗ, ಗೆಳೆಯ-ಗೆಳತಿ, ಹಾಗೆಯೇ ಮನೆ -ಮಠ, ಆಸ್ತಿ-ಪಾಸ್ತಿ ಇತ್ಯಾದಿಗಳನ್ನು ಪ್ರೀತಿಸುತ್ತೇವೆ. ಇದು ತಾತ್ಕಾಲಿಕ, ಬದಲಾಗುವಂತಹದು, ಅಶಾಶ್ವತವಾದದ್ದು, ಶಾಶ್ವತವಾದದ್ದು ಭಗವಂತ ಒಂದೆ. ಏಕಂ ಸತ್, ವಿಪ್ರಾ ಬಹುದಾವದಂತಿ. ದೇವರು ಒಬ್ಬನೆ, ಅವನನ್ನು ನಾವು ಅನೇಕ ಹೆಸರುಗಳಿಂದ ಕರೆಯುತ್ತೇವೆ. ಭಗವಂತನ ಮೇಲಿನ ಪರಮ ಪ್ರೇಮವೇ ಭಕ್ತಿ, ಈಶ್ವರನಲ್ಲಿ ಪರಮ ಅನುರಾಗವೇ ಭಕ್ತಿ. ಭಕ್ತಿಯೋಗವು ಪ್ರೀತಿಯಿಂದ ಪ್ರಾರಂಭಗೊಂಡು, ಪ್ರೀತಿಯಿಂದ ಮುಂದುವರೆದು, ಪ್ರೀತಿಯಿಂದಲೇ ಪರಿಪೂರ್ಣತೆಯನ್ನು ಕಾಣುವ ಯೋಗಸಾಧನ. ಭಕ್ತಿ ಯೋಗದ ಸಾಧಕನು ತನ್ನಲ್ಲಿ ರೂಡಿಸಿಕೊಳ್ಳಬೇಕಾದ ಗುಣಗಳು ಏಳು, ಅವು ಯಾವುವೆಂದರೆ ವಿವೇಕ, ವಿಮೋಕ, ಅಭ್ಯಾಸ, ಕ್ರಿಯೆ, ಕಲ್ಯಾಣ, ಅನವಸಾದ ಮತ್ತು ಅನುದ್ಧರ್ಷ. ವಿವೇಕವೆಂದರೆ ಯುಕ್ತಾಯುಕ್ತ ವಿವೇಕ. ಯಾವುದು ಉತ್ತಮ, ಹಿತ, ಶುದ್ಧ ಎಂದು ತಿಳಿಯುವುದು. ಯಾವುದು ಉತ್ತಮವಲ್ಲದ್ದು ಅಹಿತ, ಅಶುದ್ಧ ಅವುಗಳನ್ನು ಬಿಡುವುದು. ಇದು ಆಚಾರ, ಆಹಾರ-ವಿಚಾರಗಳಿಗೆ ಅನ್ವಯಿಸುವಂತಹದು. ವಿಮೋಕ ಎಂದರೆ ಇಂದ್ರಿಯ ನಿಗ್ರಹ. ವಿಷಯ ನಿಗ್ರಹ. ಕಾಮ ಕ್ರೋಧಾದಿ ಅರಿಷಡ್ವರ್ಗಗಳ ನಿಗ್ರಹ. ಅಭ್ಯಾಸವೆಂದರೆ ಭಗವಂತನಲ್ಲಿ ನಿಶ್ಛಲವಾದ ಭಕ್ತಿ. ಅವನು ಬೇಕೆಂಬ ತೀವ್ರ ವ್ಯಾಕುಲತೆ. ಕ್ರಿಯೆ ಎಂದರೆ ಭಗವಂತನ ಮೇಲಿನ ಪ್ರೀತಿ. ಕಲ್ಯಾಣವೆಂದರೆ ತ್ರಿಕರಣ ಶುದ್ಧಿ. ಶರೀರ ಶುದ್ಧಿ ಮತ್ತು ಪವಿತ್ರತೆ, ಮಾನಸಿಕ ಶುದ್ಧಿ ಮತ್ತು ವಾಚಕ ಶುದ್ಧಿ. ಕಲ್ಯಾಣದಲ್ಲಿ ಸತ್ಯ, ಪ್ರಾಮಾಣಿಕತನ, ದಯ, ಅಹಿಂಸೆ, ದಾನ ಇವು ಸೇರಿವೆ. ಅನವಸಾದ ಎಂದರೆ ಸಂತೃಪ್ತಿಯ ಮಂದಹಾಸ, ಅಲ್ಪ ತೃಪ್ತಿಯ ಮಂದಹಾಸ. ಅನುರ್ದಷ್ಟವೆಂದರೆ ಅತಿ ಸಂತೋಷ - ಪಡದೆ ಇರುವುದು. ಅತಿ ಆನಂದ, ಅತಿ ಸಂತೋಷ, ಅತಿ ನಗು ಇರದೆ ಇರುವುದು. ಇವು ಚಂಚಲತೆಯನ್ನು ತರುತ್ತವೆ ಎನ್ನುವುದರಿಂದ. ಭಕ್ತಿಯೋಗದ ಸಾಧಕನು ಇವುಗಳನ್ನು ತನ್ನ ಜೀವನದಲ್ಲಿ ಅಳವಡಿಸಿಕೊಂಡು ಸಾಧನೆಗೆ ಅರ್ಹನಾಗುತ್ತಾನೆ. ಭಕ್ತಿಯೋಗದಲ್ಲಿ ಅಪರಾ (ಗೌಣ) ಮತ್ತು ಪರಾ ಭಕ್ತಿ ಎಂದು ಎರಡು ವಿಧ. ಗೌಣ ಭಕ್ತಿಯಲ್ಲಿ ಮತ್ತೆ ಮೂರು ಹಂತ. ಬಾಹ್ಯ ಭಕ್ತಿ, ಅನನ್ಯ ಭಕ್ತಿ ಮತ್ತು ಏಕಾಂತ ಭಕ್ತಿ. ದೇವರ ಸಾಕಾರ ಪೂಜೆ, ತೀರ್ಥಯಾತ್ರೆ ಇತ್ಯಾದಿ ಬಾಹ್ಯ ಭಕ್ತಿ. ದೇವರೊಬ್ಬನೇ ನನಗೆ ಗತಿ ಮತ್ತು ಆಶ್ರಯ. ಅವನನ್ನು ಬಿಟ್ಟು ಬದುಕಿಗೆ ಇನ್ನೊಬ್ಬನಿಲ್ಲ ಎಂದು ಧ್ಯಾನಿಸುವುದು ಅನನ್ಯ ಭಕ್ತಿ. ನನಗೆ ದೇವರಲ್ಲದೆ ಬೇರೇನೂ ಬೇಡ ಎಂದು ಚಿಂತಿಸುತ್ತಾ, ಈ ಪರಿಕಲ್ಪನೆಯನ್ನು ಅನುಷ್ಟಾನಕ್ಕೆ ತರುವುದು ಏಕಾಂತ ಭಕ್ತಿ. ಈ ಮೂರು ಹಂತಗಳನ್ನು ಸಾಧನಾಪೂರ್ವಕ ದಾಟಿದರೆ ಮುಂದೆ ಸಿಗುವುದೇ ಕೊನೆಯ ಹಂತವಾದ ಪರಾಭಕ್ತಿ. ಪರಾಭಕ್ತಿಯಲ್ಲಿ ಒಂಬತ್ತು ತರಹದ ಸಾಧನಾಂಶಗಳು ಎಂದು ಶ್ರೀ ಮದ್ಭಾಗವತದ ಸಪ್ತಮ ಸ್ಕಂದದದಲ್ಲಿ ಹೇಳಿದೆ. ಶ್ರವಣಂ ಕೀರ್ತನಂ ವಿಷ್ಣೋಃ ಸ್ಮರಣಂ ಪಾದಸೇವನಂ| ಅರ್ಚನಂ ವಂದನಂ ದಾಸ್ಯಂ ಸಖ್ಯಂ ಆತ್ಮ ನಿವೇದನಂ||29 ಅವುಗಳು ಯಾವುವೆಂದರೆ, ಶ್ರವಣ ಭಕ್ತಿ, ಕೀರ್ತನಭಕ್ತಿ, ಸ್ಮರಣಭಕ್ತಿ, ಪಾದಸೇವನ ಭಕ್ತಿ, ಅರ್ಚನ ಭಕ್ತಿ, ವಂದನ ಭಕ್ತಿ, ದಾಸ್ಯಭಕ್ತಿ, ಸಖ್ಯ ಭಕ್ತಿ ಮತ್ತು ಆತ್ಮ ನಿವೇದನ ಭಕ್ತಿ. ಭಗವಂತನ ಅನಂತ ಗುಣಗಳನ್ನು ಪುರಾಣ ಕೀರ್ತನೆ ಮುಂತಾದವುಗಳ ಮೂಲಕ ಕೇಳುವುದೇ ಶ್ರವಣ ಭಕ್ತಿ. ಭಗವಂತನ ಈ ಅನಂತ ಗುಣಗಳನ್ನು ಹೇಳುವುದು, ಕೀರ್ತಿಸುವುದು, ಸ್ತುತಿಸುವುದು ಕೀರ್ತನ ಭಕ್ತಿ. ಈ ರೀತಿ ಸಂಗ್ರಹಿಸಿದ ನಾಮ ರೂಪ ಗುಣಾದಿಗಳನ್ನು ನೆನಪಿಸಿಕೊಳ್ಳುವುದು ಸ್ಮರಣ ಭಕ್ತಿ. ನಿರ್ಮಲ ಮನಸ್ಸಿನಿಂದ ಭಗವಂತನ ಮತ್ತು ಗುರುಗಳ ಪಾದಗಳನ್ನು ಸೇವಿಸುವುದು ಪಾದಸೇವನ ಭಕ್ತಿ. ಭಗವಂತನನ್ನು ಪತ್ರಂ, ಪುಷ್ಪಂ, ಫಲಂ, ತೋಯಂ, ಧೂಪ, ದೀಪ, ಗಂಧ, ಅಕ್ಷತೆ, (ಎಲೆ, ಹೂ, ಹಣ್ಣು, ನೀರು) ಇತ್ಯಾದಿಗಳಿಂದ ಪೂಜಿಸುವುದೇ ಅರ್ಚನಭಕ್ತಿ. ಭಗವಂತನಿಗೆ ಕಾಯಾ, ವಾಚಾ, ಮನಸಾ, ನಮಸ್ಕರಿಸುವುದೇ ವಂದನ ಭಕ್ತಿ. ಭಗವಂತನಲ್ಲಿ ಮತ್ತು ಗುರುಗಳಲ್ಲಿ ಸ್ವಾಮಿ ಬೃತ್ಯಭಾವವಿರುವುದು ದಾಸ್ಯ ಭಕ್ತಿ. ಭಗವಂತನ್ನು ಭಕ್ತ, ತನ್ನ ಗೆಳೆಯನೆಂದು ಭಾವಿಸಿ ಆರಾದಿಸುವುದು ಸಖ್ಯ ಭಕ್ತಿ ಮತ್ತು ಭಗವಂತನಿಗೆ ಭಕ್ತ ತನ್ನನ್ನು ತಾನೇ ಅರ್ಪಿಸಿಕೊಳ್ಳುವುದು ಆತ್ಮ ನಿವೇದನ ಭಕ್ತಿ. ಎಲ್ಲವೂ ಆ ಪರಮಾತ್ಮನಿಗೆ ಮೀಸಲು ಎಂಬ ಭಾವನೆಯಿಂದ ಬದುಕುವುದು ಆತ್ಮ ನಿವೇದನ. ಹೀಗೆ ಒಂದೊಂದು ಹಂತದಲ್ಲಿಯೂ ಭಕ್ತನು ಸಾಧನೆಯನ್ನು ಮಾಡುತ್ತಾ ಕೊನೆಗೆ ತನ್ನನ್ನು ತಾನೇ ಭಗವಂತನಿಗೆ ಅರ್ಪಿಸಿಕೊಳ್ಳುತ್ತಾನೆ. ಪರಾಭಕ್ತಿಯಲ್ಲಿ ಐದು ವಿಧ ಎಂದು ಪ್ರಾಜ್ಞರು ಹೇಳುತ್ತಾರೆ. ಸಾಧಕನು ಇವುಗಳಲ್ಲಿ ಒಂದೊಂದರ ಮೂಲಕವೂ ಸಾಧನೆ ಮಾಡಿ ಕೊನೆಗೆ ಭಗವಂತನನ್ನು ಸೇರಬಹುದಾಗಿದೆ. ಇವುಗಳನ್ನು ಭಾವಗಳೆಂದೂ ಕರೆಯಲಾಗಿದೆ. ಅವುಗಳೇ ಶಾಂತ ಭಾವ, ದಾಸ್ಯ ಭಾವ, ಸಖ್ಯ ಭಾವ, ವಾತ್ಸಲ್ಯ ಭಾವ ಮತ್ತು ಮಧುರ ಭಾವ. ಜಗತ್ತಿನಲ್ಲಿನ ಯಾವ ಗೊಂದಲಗಳಲ್ಲಿಯೂ ತನ್ನನ್ನು ತೊಡಗಿಸಿಕೊಳ್ಳದೆ ಭಗವಂತನನ್ನು ಪ್ರೀತಿಸುತ್ತಾ ಸಾಧನೆಗೈಯುವುದೇ ಶಾಂತ ಭಾವ. ಭಗವಂತನು ಒಡೆಯ, ತಾನು ಸೇವಕ ಎಂಬ ಭಾವನೆಯನ್ನು ರೂಢಿಸಿಕೊಳ್ಳುವುದೇ ದಾಸ್ಯ ಭಾವ. ಭಗವಂತ ಆತ್ಮೀಯ, ಸ್ನೇಹಿತ, ಹಿತಕಾರಿ, ಸಹಕಾರಿ, ಎಂಬ ಭಾವನೆಯನ್ನು ತಳೆಯುವುದೇ ಸಖ್ಯಭಾವ. ಭಗವಂತನನ್ನು ತನ್ನ ಮಗು ಎಂದು ಪರಿಗಣಿಸಿ, ತಾಯಿ ಮಗುವಿನಲ್ಲಿ ತೋರಿಸುವ ಪ್ರೀತಿಯಂತೆಯೇ ಪ್ರೀತಿಸುವುದು ವಾತ್ಸಲ್ಯ ಭಾವ. ಇದು ಪರಿಶುದ್ಧ ಪ್ರೀತಿಯನ್ನು ಪ್ರತಿನಿದಿಸುತ್ತದೆ. ಕೊನೆಯದೇ ಮಧುರಭಾವ. ಮಧುರ ಎಂದರೆ ಸಿಹಿಯಾದದ್ದು, ಹಿತವಾದದ್ದು, ಭಗವಂತನನ್ನು ಪ್ರೀತಿಸುವುದು ಎಂದರೆ ಅವನನ್ನು ಆರಾದಿಸುವುದು. ಇದು ಮಧುರ ಭಾವ.30 ಈ ಐದೂ ಗುಣಗಳು ಮೇಲೆ ತಿಳಿಸಿದ ನವವಿಧ ಭಕ್ತಿಯಲ್ಲಿ ಪ್ರಕಟಗೊಳ್ಳುತ್ತವೆ. ಹೀಗೆ ಭಕ್ತನು ಭಗವಂತನನ್ನು ತಿಳಿದುಕೊಳ್ಳುತ್ತಾ, ಪೂಜಿಸುತ್ತಾ, ಆರಾದಿಸುತ್ತಾ, ಹಂತ ಹಂತವಾಗಿ ಮೇಲೆರುತ್ತಾ ಕೊನೆಗೆ ತನ್ನನ್ನು ತಾನೇ ಸಮರ್ಪಿಸಿಕೊಳ್ಳುತ್ತಾನೆ. ಈ ಭಕ್ತಿ ಪ್ರಕ್ರಿಯೆಯ ಅಂತಿಮ ಫಲವೇ ಭಗವಂತನ ಸಾಕ್ಷಾತ್ಕಾರ. ಯೋಗ ಸಮನ್ವಯ:- ಈಗ ನಾಲ್ಕೂ ತರಹದ ಸಾಧನಾ ಮಾರ್ಗಗಳನ್ನು ನೋಡಲಾಯಿತು. ಜ್ಞಾನಯೋಗದಲ್ಲಿ ಜ್ಞಾನಕ್ಕೆ, ಕರ್ಮಯೋಗದಲ್ಲಿ ಕೆಲಸಕ್ಕೆ, ರಾಜಯೋಗದಲ್ಲಿ ಮನಸ್ಸಿಗೆ ಮತ್ತು ಭಕ್ತಿಯೋಗದಲ್ಲಿ ಭಕ್ತಿಗೆ ಪ್ರಾಧನ್ಯತೆ ಇದೆ. ಅಂದಮಾತ್ರಕ್ಕೆ ಒಂದು ಮಾರ್ಗದಲ್ಲಿ ಇನ್ನೊಂದಕ್ಕೆ ಅವಕಾಶ ಇಲ್ಲ ಎಂದು ಭಾವಿಸಲಾಗದು. ಒಂದು ಯೋಗ ಮಾರ್ಗದಲ್ಲಿ ಇನ್ನೊಂದರ ಪ್ರಭಾವ ಇರುತ್ತದೆ. ಕರ್ಮಯೋಗಿಗೆ ತನ್ನ ಕರ್ಮದಲ್ಲಿ ತೊಡಗಿಸಿಕೊಳ್ಳಲು ಚಿತ್ತದ ಏಕಾಗ್ರತೆ ಬೇಕಾಗುತ್ತದೆ. ಕರ್ಮದ ಫಲವನ್ನು ದೇವರಿಗೆ ಮತ್ತು ಸಮಾಜಕ್ಕೆ ಅರ್ಪಿಸುವಾಗ ಭಕ್ತಿ ಬೇಕಾಗುತ್ತದೆ. ಭಕ್ತಿಗೆ ಜ್ಞಾನದ ಮತ್ತು ಮನಸ್ಸಿನ ಚಿತ್ತದ ಅವಶ್ಯಕತೆ ಇದೆ. ಭಗವಂತ ಎಲ್ಲೆಲ್ಲೂ ಇದ್ದಾನೆ. ಲೋಕಕ್ಕೆ ಅಂದರೆ ದರಿದ್ರ ನಾರಾಯಣರಿಗೆ (ದರಿದ್ರರಿಗೆ, ಬಡವರಿಗೆ, ದೀನರಿಗೆ, ದಲಿತರಿಗೆ) ಮಾಡುವ ಸೇವೆಯೇ, ಅವರ ಪ್ರಗತಿಗೆ ಶ್ರಮಿಸುವುದೇ ಕರ್ಮಯೋಗದ ತಿರುಳು. ಲೋಕಸೇವೆಯೇ ಈಶಸೇವೆ ಎಂದು ತಿಳಿಯುವುದೇ ಜ್ಞಾನಯೋಗ. ಹೀಗೆ ಮನುಷ್ಯನು ಒಂದೇ ಯೋಗಮಾರ್ಗವನ್ನು ಅನುಸರಿಸಬೇಕಾಗಿಲ್ಲ, ಹಾಗೆ ಅನುಸರಿಸಲು ಆಗುವುದೂ ಇಲ್ಲ. ಆದುದರಿಂದಲೇ ಯೋಗಿಗಳು, ಸಾಧಕರು ಯೋಗ ಸಮನ್ವಯದ ಹಾದಿಯನ್ನು ಕಂಡುಕೊಂಡರು. ಈ ಹಿನ್ನೆಲೆಯಲ್ಲಿಯೇ ಹರಿದಾಸರು ಮುಕ್ತಿಗೆ, ಜ್ಞಾನ, ಭಕ್ತಿ ಮತ್ತು ವೈರಾಗ್ಯಗಳು ಬೇಕೆಂದರು. ಜ್ಞಾನ ಯತಾರ್ಥ ಜ್ಞಾನವಾಗಿರಬೇಕು. ವಿಪರೀತ ಜ್ಞಾನ ಆಗಿರಬಾರದು. ಯತಾರ್ಥ ಎಂದರೆ ಇದ್ದದನ್ನು, ಸತ್ಯವನ್ನು ಇದ್ದಂತೆಯೇ ಹೇಳುವುದು. ಜ್ಞಾನ ದೇವರ ಬಗ್ಗೆ, ಜೀವರ ಬಗ್ಗೆ, ಜಗತ್ತಿನ ಬಗ್ಗೆ, ಪಂಚ ಭೇದಗಳ (ವ್ಯತ್ಯಾಸಗಳು) ಬಗ್ಗೆ, ಸಾಧನೆಯ ಬಗ್ಗೆ, ಮುಕ್ತಿಯ ಬಗ್ಗೆ, ಇಂತಹ ಜ್ಞಾನ ಬೇಕು ಸಾಧಕನಿಗೆ. ಸಾಧನೆಗೆ ಭಕ್ತಿ ಬೇಕು. ಭಕ್ತಿಯ ವಿವಿಧ ಮಜಲುಗಳನ್ನು ಈಗಾಗಲೇ ಮೇಲೆ ನೋಡಿದ್ದೇವೆ. ಇವುಗಳ ಜೊತೆಗೆ ಪ್ರಾಪಂಚಿಕ ಜೀವನದ ಬಗ್ಗೆ ವೈರಾಗ್ಯ. ಇವು ಸಾಧಕನ ಸಾಧನೆಗೆ ಅವಶ್ಯಕವಾದವುಗಳು. ಮನುಷ್ಯನು-ಸಾಧಕನು, ಅರಿಷಡ್ವರ್ಗಗಳನ್ನು ದೂರವಿರಿಸಿ, ಸಾಧನೆಗೆ ತನಗೆ ಸರಿಕಂಡ ಮಾರ್ಗವೊಂದನ್ನು ಅನುಸರಿಸಿ ಇಲ್ಲವೇ ಯೋಗ ಸಮನ್ವಯದ ಹಾದಿಯಲ್ಲಿ ಕ್ರಮಿಸಿ, ಸಾಧನೆಗೈಯಬೇಕು. ಪರಮಾತ್ಮನಲ್ಲಿ ಏಕಾಗ್ರಚಿತ್ತನಾಗಲಿಕ್ಕೆ ಬೇಕಾದ ಸಾಧನಾ ಮಾರ್ಗಗಳಿವು. ಇನ್ನು ವಿಮರ್ಶಗೆ ಒಳಪಡಬೇಕಾಂದ ಕೊನೆಯ ಅಂಶ, ಪರಮಾತ್ಮನ ಪ್ರಸಾದದಿಂದ ಸಂತೃಪ್ತಿಯಿಂದ ಇರುವುದು. ನಾವು ಯಾವುದೇ ಕೆಲಸ ಮಾಡಿದಾಗ ಕೆಲಸಕ್ಕೆ ತಕ್ಕ ಪ್ರತಿಫಲ ಬರುತ್ತದೆ. ಒಳ್ಳೆಯ ಕೆಲಸ ಮಾಡಿದಾಗ ಒಳ್ಳೆಯ ಫಲ. ಕೆಟ್ಟ ಕೆಲಸ ಮಾಡಿದಾಗ ಕೆಟ್ಟ ಫಲ. ಕೆಲವೊಮ್ಮೆ ನಾವು ಪ್ರಾಮಾಣಿಕವಾಗಿಯೇ ಕೆಲಸ ಮಾಡಿರಬಹುದು. ನಿರ್ವಂಚನೆಯಿಂದಲೂ ಕೆಲಸ ಮಾಡಿರಬಹುದು. ಆದರೂ ನಿರೀಕ್ಷಿತ ಫಲ ದೊರೆಯುವುದಿಲ್ಲ. ಅದನ್ನು ದುರ್ದೈವ ಎಂದುಕೊಳ್ಳಬಹುದು. ಆದರೆ ಈ ಪರಿಸ್ಥಿತಿಗೆ ಧಾರ್ಮಿಕ ಕಾರಣ ಪ್ರಾರಬ್ಧ. ಹಿಂದೆಂದೋ (ಪೂರ್ವ ಜನುಮಗಳಲ್ಲಿ) ಮಾಡಿರಬಹುದಾದ ಕೆಟ್ಟ ಕೆಲಸದ ಪ್ರತಿಫಲ ಇದು. ಅದಕ್ಕಾಗಿ ಗೀತೆ ಸ್ಪಷ್ಟ ಉತ್ತರ ನೀಡುತ್ತದೆ. ನೀನು ಕೆಲಸ ಮಾಡುವಾಗ ಪ್ರಾಮಾಣಿಕವಾಗಿ, ಯಾವ ಅಪೇಕ್ಷೆಯೂ ಇಲ್ಲದೆ ಕೆಲಸ ಮಾಡು. ಬಂದ ಫಲವನ್ನು ದೇವರ ಪ್ರಸಾದ ಎಂದುಣ್ಣು ಎಂಬುದೇ ಉತ್ತರ. ನಿನ್ನ ಕೆಲಸಕ್ಕೆ ತಕ್ಕಂತೆ ಪ್ರತಿಫಲ ಬಂದಿಲ್ಲದಿರಬಹುದು. ಆದರೆ ಅದು ಅವನು ಕೊಟ್ಟ ಪ್ರಸಾದ. ಅದರಲ್ಲೇ ತೃಪ್ತಿಯನ್ನು ಕಾಣು. ಇದು ನಿರಾಶಾವಾದವಲ್ಲ, ಆದರೆ ಇದು ವಸ್ತುಸ್ಥಿತಿ. ಸ್ಥಿತಪ್ರಜ್ಞನ ಲಕ್ಷಣ. ಮನಸ್ಸನ್ನು ಮಾಗಿಸುವ ಪ್ರಕ್ರಿಯೆ. ಸ್ಥಿತ ಪ್ರಜ್ಞನ ಲಕ್ಷಣಗಳ ಬಗ್ಗೆ ಗೀತೆ ಇನ್ನೂ ಹೆಚ್ಚಿನ ವಿವರಗಳನ್ನು ತಿಳಿಸುತ್ತದೆ. ದುಃಖೇಷ್ವನುದ್ವಿಗ್ನ ಮನಾಃ ಸುಖೇಷು ವಿಗತಸ್ಪೃಹಃ| ವೀತರಾಗ ಭಯಕ್ರೋದ: ಸ್ಥಿತದಿರ್ಮುನಿರುಚ್ಯತೆ || [ಗೀತೆ 2-56]31 ಅಪರೋಕ್ಷ ಜ್ಞಾನಿಯ ಮನಸ್ಸು ದುಃಖ ಬಂದಾಗ ಉದ್ದೇಗಕ್ಕೆ ಒಳಗಾಗುವುದಿಲ್ಲ. ಅವನಿಗೆ ಪ್ರಾಪಂಚಿಕ ಸುಖದ ಬಗ್ಗೆ ಆಸಕ್ತಿಯೂ ಇರುವುದಿಲ್ಲ. ಆಸೆ, ಭಯ, ಕೋಪಗಳೂ ಅವನಿಗಿರುವುದಿಲ್ಲ. ಇಂತಹ ಜ್ಞಾನಿಯು ಸ್ಥಿತಪ್ರಜ್ಞನೆನಿಸುತ್ತಾನೆ.32 ಸ್ಥಿತಿಪ್ರಜ್ಞನಾದವನು ದುಃಖ ಬಂದಾಗ ಕುಗ್ಗುವುದಿಲ್ಲ. ಅದರಂತೆಯೇ ಸುಖ ಬಂದಾಗ ಹಿಗ್ಗುವುದಿಲ್ಲ. ಅವನಿಗೆ ಹೆಂಡತಿ, ಮಕ್ಕಳು, ಬಂಧು ಬಾಂಧವರು ಸಂಸಾರ, ಮನೆ, ಆಸ್ತಿ, ಮುಂತಾದ ಪ್ರಾಪಂಚಿಕ ಸುಖದ ಆಸಕ್ತಿಯೂ ಇರುವುದಿಲ್ಲ. ಯಾವ ಪ್ರಾಪಂಚಿಕ ವಸ್ತುಗಳ ಮೇಲೆ ಆಸೆ ಇರುವುದಿಲ್ಲ. ಯಾರನ್ನು ನೋಡಿದರೂ ಅವನಿಗೆ ಭಯ ಇರುವುದಿಲ್ಲ. ಯಾರ ಮೇಲೂ ಕೋಪಿಸಿಕೊಳ್ಳುವುದಿಲ್ಲ. ಅವನ ಗಮನವೆಲ್ಲಾ ಭಗವಂತನ ಮೇಲೆ. ಭಗವಂತನನ್ನು ಒಲಿಸಿಕೊಳ್ಳುವುದರಲ್ಲಿಯೇ ಅವನ ಆಸಕ್ತಿ. ಭಗವಾರಾಧನೆಯಲ್ಲಿಯೇ ಯಾವಾಗಲೂ ತನ್ನನ್ನು ತೊಡಗಿಸಿಕೊಂಡಿರುತ್ತಾನೆ. ಇದು ಅಪರೋಕ್ಷ ಜ್ಞಾನಿಯ ಪರಿಸ್ಥಿತಿ. ಪ್ರಜ್ಞಾನಾದವನು ಒಳಿತು-ಕೆಡಕುಗಳಿಗೆ ಅತಿಯಾಗಿ ಅಂಟಿಕೊಳ್ಳುವುದಿಲ್ಲ. ಒಳಿತಿನ ಬಗ್ಗೆ ಸಂತೋಷವಿಲ್ಲ. ಕೆಡುಕಿನ ಬಗ್ಗೆ ವ್ಯಾಕುಲತೆಯಿಲ್ಲ [ಗೀತೆ 2-57]. ಆಮೆ ಕಷ್ಟ ಬಂದಾಗ ತನ್ನ ಅಂಗಾಗಗಳನ್ನು ಒಳಕ್ಕೆ ಎಳೆದುಕೊಳ್ಳುವ ಹಾಗೆ, ಅಪರೋಕ್ಷ ಜ್ಞಾನಿಯು ಇಂದ್ರಿಯಗಳನ್ನು ವಿಷಯಗಳಿಂದ ಸೆಳೆದುಕೊಳ್ಳಬಲ್ಲ [ಗೀತೆ 2-58]33. ಮನುಷ್ಯ ವಿಷಯ ವಸ್ತುಗಳನ್ನೇ ನೆಚ್ಚಿಕೊಂಡರೆ ಏನಾಗುತ್ತದೆ ಎಂದು ಈ ಕೆಳಗಿನ ಶ್ಲೋಕಗಳು ಹೇಳುತ್ತವೆ. ಧ್ಯಾಯತೇ ವಿಷಯಾನ್ ಪುಂಸಃ ಸಂಗಸ್ತೇಷೂಪಜಾಯತೇ| ಸಂಗಾತ್ ಸಂಜಾಯತೇ ಕಾಮಃ ಕಾಮಾತ್ ಕ್ರೋಧೋಬಿಜಾಯತೇ || ಕ್ರೋಧಾತ್ ಭವತಿ ಸಮ್ಮೋಹಃ ಸಮ್ಮೋಹಾತ್ ಸ್ಮೃತಿ ವಿಭ್ರಮಃ| ಸ್ಮೃತಿಬ್ರಂಶಾದ್ ಬುದ್ಧಿನಾಶೋ ಬುದ್ಧಿನಾಶಾತ್ ವಿನಶ್ಯತಿ|| [ಗೀತೆ 2-62, 63]34 ವಿಷಯ ವಸ್ತುಗಳನ್ನೇ ಧ್ಯಾನಮಾಡುವವನಿಗೆ ಅವುಗಳಲ್ಲಿಯೇ ಆಸಕ್ತಿಯು ಬೆಳೆಯುತ್ತದೆ. ಆಸಕ್ತಿಯಿಂದ ಅವುಗಳ ಕಾಮನೆ ಅದಿಕಗೊಳ್ಳುತ್ತದೆ. ಕಾಮನೆಗೆ ತಡೆ ಬಂದಾಗ ಸಿಟ್ಟುಬರುತ್ತದೆ. ಸಿಟ್ಟಿನಿಂದಾಗಿ ಮಾಡಬಾರದ್ದನ್ನು ಮಾಡುವ ಮನಸ್ಸಾಗುತ್ತದೆ. ಇದರಿಂದ, ಇಂತಹ ಕೆಟ್ಟ ಕೆಲಸ ಮಾಡಬಾರದು ಎಂಬ ನಿಷೇಧವು ಸ್ಮರಣೆಗೇ ಬರುವುದಿಲ್ಲ. ಈ ವಿಸ್ಮೃತಿಯಿಂದ ಇದು ತಪ್ಪು ಎಂಬ ಪ್ರಜ್ಞೆ ನಾಶವಾಗುತ್ತದೆ. ಇದರಿಂದಾಗಿ ನಿಷಿದ್ಧವನ್ನು ಮಾಡಿ ನರಕಾದಿ ಅನರ್ಥಕ್ಕೆ ಈಡಾಗುತ್ತಾನೆ35. ಭಗವದ್ಗೀತೆಯ ಎರಡನೇ ಅಧ್ಯಾಯದ 62 ಮತ್ತು 63ನೇ ಶ್ಲೋಕಗಳಲ್ಲಿ ವಿಷಯ ಪದಾರ್ಥಗಳ ಸಂಪರ್ಕ ಮಾಡಿದಾಗ ಆಗುವ ಅನಾಹುತವನ್ನು ಬಹಳ ಸ್ಪಷ್ಟವಾಗಿ ಹೇಳಲಾಗಿದೆ. ನಮ್ಮ ಗಮನವನ್ನು ವಿಷಯ ಪದಾರ್ಥಗಳ ಕಡೆಗೆ ಹರಿಸಿದರೆ ಅವುಗಳಲ್ಲೇ ನಮಗೆ ಆಸಕ್ತಿ ಬೆಳೆಯುತ್ತದೆ ಮತ್ತು ಆಸಕ್ತಿ ಅವುಗಳ ಮೇಲೆ ಉಳಿಯುತ್ತದೆ. ಪುನಃ ಪುನಃ ಅವುಗಳ ಸ್ಮರಣೆ ಬರುತ್ತದೆ ಮತ್ತು ಆ ಸ್ಮರಣೆ ಅಲ್ಲೇ ಗಟ್ಟಿಗೊಳ್ಳುತ್ತದೆ. ಈ ಆಸಕ್ತಿಯಿಂದ ಅವುಗಳ ಕಾಮನೆ-ಪಡೆಯಬೇಕೆಂಬ ಅಬಿಲಾಷೆ-ಜಾಸ್ತಿಯಾಗುತ್ತದೆ. ಇಂತಹ ಕಾಮನೆಗಳನ್ನು ಪಡೆಯಬೇಕೆಂದು ಪ್ರಯತ್ನಿಸಿದಾಗ, ಅದನ್ನು ತಡೆ ಒಡ್ಡಿದವರ ಮೇಲೆ ಸಿಟ್ಟು ಬರುತ್ತದೆ. ಈ ಸಿಟ್ಟಿನಿಂದಾಗಿ ಮಾಡಬಾರದ್ದನ್ನೂ ಮಾಡುವ ಮನಸ್ಸಾಗುತ್ತದೆ. ಮಾಡುತ್ತಿರುವ ಕೆಲಸ ಒಳ್ಳೆಯದೇ ಅಥವಾ ಕೆಟ್ಟದ್ದೇ ಎಂದು ಆಲೋಚಿಸಲು ಮನಸ್ಸು ಒಪ್ಪುವುದಿಲ್ಲ. ಇಂತಹ ಕೆಟ್ಟ ಕೆಲಸಗಳನ್ನು [ವಿಷಯದ ಕಾಮನೆಗಳನ್ನು ಪ್ರಚೋದಿಸುವಂತ ಕೆಲಸಗಳು] ಮಾಡಬಾರದು ಎಂಬ ನಿಷೇಧ ನೆನಪಿಗೆ ಬರುವುದೇ ಇಲ್ಲ. ಇರಲೇಳು, ಮುಂದೆ ಬಂದಾಗ ನೋಡಿಕೊಳ್ಳೋಣ ಎಂದು ಕಾಮನಾಯುಕ್ತ ಕೆಲಸಗಳಲ್ಲಿ ತೊಡಗುವಂತಾಗುತ್ತದೆ. ಈ ತರಹದ ವಿಸ್ಮೃತಿಯಿಂದ, ಇದು ತಪ್ಪು, ಇದನ್ನು ಮಾಡಬಾರದು ಎಂಬ ಯುಕ್ತಾಯುಕ್ತ ವಿವೇಕ ನಾಶವಾಗುತ್ತದೆ. ಈ ಮರೆವಿನಿಂದ ತಿಳಿಗೇಡಿತನ ಉಂಟಾಗುತ್ತದೆ. ತಿಳಿಗೇಡಿತನದಿಂದ ಸರ್ವನಾಶ. ಇದರಿಂದ ಅಧೋಗತಿಗೆ ಇಳಿಯಬೇಕಾಗುತ್ತದೆ. ವಿಷಯ ವಸ್ತುಗಳ ಕಾಮನೆ ಇಷ್ಟೆಲ್ಲಾ ಮಾಡಿಸುತ್ತದೆ. ಆದ್ದರಿಂದ ವಿಷಯ ವಸ್ತುಗಳ ಧ್ಯಾನವನ್ನೇ ದೃಢಸಂಕಲ್ಪದಿಂದ ಬಿಟ್ಟುಬಿಡಬೇಕು. ಈ ವಿಷಯಧ್ಯಾನವನ್ನು ಬಿಡುವುದರ ಮೂಲಕ ರಾಗದ್ವೇಷಗಳು ಹುಟ್ಟದಂತೆ ನೋಡಿಕೊಳ್ಳಬೇಕು. ಇಲ್ಲಿ ಒಂದು ಅನುಮಾನ ಬರುತ್ತದೆ. ಯೋಗಿಗಳು ವಿಷಯ ಸುಖದಿಂದ ದೂರವಿರುವುದನ್ನು ಕಲಿತಿರಬಹುದು. ಆದರೆ ಜನಸಾಮಾನ್ಯರ ಪಾಡೇನು? ಜನ ಸಾಮಾನ್ಯರಿಗೆ ವಿಷಯಸುಖ ಬೇಡವೆ. ಅದಕ್ಕೂ ಗೀತೆಯಲ್ಲಿ ಉತ್ತರ ಕೊಡಲಾಗಿದೆ. ಯಾರ ಮನಸ್ಸು ನಿಗ್ರಹದಲ್ಲಿರುತ್ತದೆಯೋ, ಯಾರ ಇಂದ್ರಿಯಗಳು ರಾಗ ದ್ವೇಷರಹಿತವಾಗಿರುತ್ತದೆಯೋ ಅಂತಹ ವ್ಯಕ್ತಿಯು ವಿಷಯ ವಸ್ತುಗಳನ್ನು ಕೇವಲ ದೇಹಧಾರಣೆಯ ಉದ್ದೇಶದಿಂದ ನಿರ್ಲಿಪ್ತನಾಗಿ ಅನುಭವಿಸುತ್ತಾನೆ. ಅದನ್ನು ಪ್ರಸಾದವೆಂಬಂತೆ ಸೀಕರಿಸುತ್ತಾನೆ [ಗೀತೆ 2-64-]36. ಭಾರತೀಯ ಸಾನತನ ಗ್ರಂಥಗಳಲ್ಲಿ ಇಂದ್ರಿಯ ನಿಗ್ರಹಕ್ಕೆ ಹೆಚ್ಚಿನ ಪಾಶಸ್ತ್ಯವನ್ನು ಕೊಡಲಾಗಿದೆ. ಇಂದ್ರಿಯ ನಿಗ್ರಹಕ್ಕೆ ನೆರವು ನೀಡಬಲ್ಲ ವಸ್ತುವೆಂದರೆ (ಸಾಧನ) ಮನಸ್ಸು. ಈ ನಿಟ್ಟಿನಲ್ಲಿ ಮನಸ್ಸನ್ನು ತರಬೇತಿಗೊಳಿಸಿಬೇಕು. ಮನಸ್ಸು ಪಕ್ವಗೊಳ್ಳದವನಿಗೆ ಜ್ಞಾನವಿಲ್ಲ. ಮನಸ್ಸು ತಿಳಿಗೊಳ್ಳದವನಿಗೆ, ಧ್ಯಾನವಿಲ್ಲದವನಿಗೆ ಭಗವಂತನ ಸಾಕ್ಷಾತ್ಕಾರವಿಲ್ಲ. ಅದಿಲ್ಲದವನಿಗೆ ಎಲ್ಲಿಯ ಸುಖ, ಎಲ್ಲಿಯ ಮೋಕ್ಷ. ಭಗವದ್ದೀತೆಯ ಆರನೇ ಅಧ್ಯಾಯದ ಏಳು ಮತ್ತು ಎಂಟನೇ ಶ್ಲೋಕಗಳಲ್ಲಿಯೂ ಅಪರೋಕ್ಷ ಜ್ಞಾನಿಯ ಲಕ್ಷಣಗಳನ್ನು ವಿವರಿಸಲಾಗಿದೆ. ಜಿತಾತ್ಮನಃ ಪ್ರಶಾಂತಸ್ಯ ಪರಮಾತ್ಮಾ ಸಮಾಹಿತಃ | ಶೀತೋಷ್ಣ ಸುಖದುಃಖೇಷು ತಥಾ ಮಾನೋಪಮಾನಯೋಃ || ಜ್ಞಾನ ವಿಜ್ಞಾನ ತೃಪ್ತಾತ್ಮಾ ಕೂಟಸ್ಥೊ ಜಿತೇಂದ್ರಿಯಃ| ಯುಕ್ತ ಇತ್ಯುಚ್ಚತೇ ಯೋಗಿ ಸಮಲೋಷ್ಟಾಶ್ಮ ಕಾಂಚನಃ|| [ಗೀತೆ, 6-7.8]37 ಮನೋನಿಗ್ರಹವುಳ್ಳ, ಭಕ್ತಿಯಿಂದ ಭಗವಂತನನ್ನು ವಶಪಡಿಸಿಕೊಂಡ, ಸ್ವತಃ ವಿಷಯ ಪದಾರ್ಥಗಳಲ್ಲಿ ಪ್ರವೃತ್ತಿಯಿಲ್ಲದ ಮನಸ್ಸುಳ್ಳ ಸಾಧಕನಿಗೆ ಭಗವಂತನು ಹೃದಯದಲ್ಲಿ ಸನ್ನಿಹಿತನಾಗುತ್ತಾನೆ. ಸಾಧಕನು ಅಪರೋಕ್ಷ ಜ್ಞಾನಿಯಾಗುತ್ತಾನೆ. ಶಾಸ್ತ್ರದಿಂದ ಪಡೆದ ಭಗವಂತನ ಸರ್ವೋತ್ತಮತ್ವ ಜ್ಞಾನ ಮತ್ತು ಭಗವನ್ಮಾತ್ಮ್ಯವಿಷಯಕ ವಿಶೇಷ ಜ್ಞಾನ ಅಥವಾ ಶಾಸ್ತ್ರ ಶ್ರವಣದಿಂದ ಉಂಟಾದ ಪರೊಕ್ಷಜ್ಞಾನ ಮತ್ತು ಅಪರೋಕ್ಷಜ್ಞಾನ ಎಂಬ ವಿಶೇಷ ಜ್ಞಾನ ಇವುಗಳಿಂದ ತೃಪ್ತಿಯನ್ನು ಹೊಂದಿ, ಭೋಗ್ಯ ವಸ್ತುಗಳಲ್ಲಿ ಆಸಕ್ತಿಯಿಲ್ಲದ, ಇಂದ್ರಿಯ ನಿಗ್ರಹವುಳ್ಳ, ಶೀತ-ಉಷ್ಣ, ಸುಖ-ದುಃಖ, ಮಾನ-ಅಪಮಾನ ಮುಂತಾದ ದ್ವಂದ್ವಗಳಲ್ಲಿ ನಿರ್ವಿಕಾರವಾಗಿರುವ, ಕಲ್ಲು, ಮಣ್ಣು, ಚಿನ್ನಗಳನ್ನು ಸಮಾನವಾಗಿ ಕಾಣುವ, ಧ್ಯಾನ ಮಾಡುವ ಸಾಧಕನು ಧ್ಯಾನದ ಪರಿಪಕ್ವತೆಯನ್ನು ಪಡೆದು ಅಪರೋಕ್ಷ ಜ್ಞಾನಿಯಾಗುತ್ತಾನೆ.38 ಈ ಎರಡು ಶ್ಲೋಕಗಳಲ್ಲಿ, ಭಗವದ್ಗೀತೆಯ ಬೇರೆ ಬೇರೆ ಭಾಗಗಳಲ್ಲಿ ಹೇಳಿದ ಸ್ಥಿತಪ್ರಜ್ಞನ ಲಕ್ಷಣಗಳನ್ನು ಇನ್ನೊಂದು ರೀತಿಯಲ್ಲಿ ಹೇಳಲಾಗಿದೆ. ಸಾಧಕನು ವೇದಾದಿ ಶಾಸ್ತ್ರ ಶ್ರವಣವನ್ನು ಮಾಡುತ್ತಾನೆ. ಭಗವಂತನೇ ಸರ್ವೋತ್ತಮ ಎನ್ನುವ ಜ್ಞಾನವನ್ನು ಹೊಂದಿದವನಾಗುತ್ತಾನೆ. ಅವನು ವಿಷಯ ಪದಾರ್ಥಗಳಲ್ಲಿ ಪ್ರವೃತ್ತಿಯನ್ನು ಉಳಿಸಿಕೊಳ್ಳುವುದಿಲ್ಲ. ಅರಿಷಡ್ವರ್ಗಗಳನ್ನು (ಕಾಮ, ಕ್ರೋಧ, ಲೋಭ, ಮೋಹ, ಮದ ಮತ್ತು ಮತ್ಸರ) ಜಯಿಸಿರುತ್ತಾನೆ. ಇಂದ್ರಿಯ ನಿಗ್ರಹದಿಂದ ಕೂಡಿದ್ದು, ತನ್ನ ಮನಸ್ಸನ್ನು ಸಂಪೂರ್ಣವಾಗಿ ಹಿಡಿತದಲ್ಲಿ ಇಟ್ಟುಕೊಂಡಿರುತ್ತಾನೆ. ಇಂತಹ ಸಾಧಕ ನಿರಂತರ ಸಾಧನೆಗೈದು, ಭಕ್ತಿಯಿಂದ ಭಗವಂತನ್ನು ಒಲಿಸಿಕೊಂಡಿರುತ್ತಾನೆ. ಇಂಥಹವನು ಶೀತ-ಉಷ್ಣ, ಸುಖ-ದುಃಖ, ಮಾನ-ಅಪಮಾನಗಳನ್ನು ನಿರ್ವಿಕಾರ ಚಿತ್ತದಿಂದ ಸಮಾನವಾಗಿ ಸ್ವೀಕರಿಸುತ್ತಾನೆ. ಈ ಪರಿಸ್ಥಿತಿಯಲ್ಲಿ ನಿರ್ಲಿಪ್ತತೆಯ ಮನೋಭಾವ ತಾಳುತ್ತಾನೆ. ಇವು ಅಪರೋಕ್ಷ ಜ್ಞಾನಿಯ ಲಕ್ಷಣಗಳು. ಇದು ಗೀತೆಯಲ್ಲಿ ಭಗವಂತನು ತೋರಿಸಿದ ಹಾದಿ. ಇದು ಸಾಧಕನು ಅನುಸರಿಸಬೇಕಾದ ಹಾದಿ. ಇದು ಸ್ಥಿತಪ್ರಜ್ಞನು ನಡೆಯುವ ಹಾದಿ. ಭಗವದ್ಗೀತೆಗೆ ಹತ್ತಾರು ವ್ಯಾಖ್ಯಾನಗಳಿವೆ. ಆಚಾರ್ಯತ್ರಯರ ವ್ಯಾಖ್ಯಾನಗಳಿವೆ. ಆಯಾ ಆಚಾರ್ಯರ ಅನುಯಾಯಿಗಳೂ ಬರೆದ ಟೀಕೆ ಟಿಪ್ಪಣಿಗಳು ಇವೆ. ಇತರೆ ವಿದ್ವಾಂಸರ ಅರ್ಥವಿವರಣೆಗಳೂ ಇವೆ. ಇವರಲ್ಲಿ ಪ್ರತಿಯೊಬ್ಬರೂ ತಮ್ಮ ಪಂಥಗಳ ತಾತ್ವಿಕ ಹಿನ್ನೆಲೆಗೆ ಅನುಸಾರವಾಗಿ ವಿಮರ್ಶೆ ಮಾಡಿದ್ದಾರೆ. ಆದರೆ ಅವರೆಲ್ಲರೂ ಸ್ಥಿತಪ್ರಜ್ಞನ ಗುಣಲಕ್ಷಣಗಳನ್ನು ವಿವರಿಸುವಾಗ ಹೆಚ್ಚಿನ ಅಬಿಪ್ರಾಯ ಬೇಧವನ್ನು ವ್ಯಕ್ತಪಡಿಸಿಲ್ಲ. ಆ ತರಹದ ವ್ಯಾಖ್ಯಾನಗಳಲ್ಲಿ ಶ್ರೀ ಮಧ್ವಾಚಾರ್ಯರ ಅಷ್ಟಮಠಗಳಲ್ಲಿ ಒಂದಾದ ಪೇಜಾವರ ಮಠದ ಪ್ರಸ್ತುತ ಪೀಠಾದಿಶ ಪೂಜ್ಯ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಬರೆದಿರುವ ಗೀತಾಸಾರೋದ್ಧಾರವೂ ಒಂದು. ಶ್ರೀ ಪಾದರು ಸ್ಥಿತಪ್ರಜ್ಞನ ಬಗ್ಗೆ ಬಹಳ ಸರಳ ವಿವರಣೆ ಕೊಟ್ಟಿದ್ದಾರೆ. ಅದರ ಸಾರಾಂಶ ಈ ಕೆಳಗಿನಂತಿದೆ. ಕಾಮವರ್ಜಿತನೂ ಭಗವದೇಕನಿಷ್ಟನೂ ಆದ ವ್ಯಕ್ತಿಯೇ ಸ್ಥಿತಪ್ರಜ್ಞನು. ರಾಗ, ದ್ವೇಷ, ಭಯ ಮೊದಲಾದ ಮನೋದೋಷಗಳು ಈತನಲ್ಲಿರುವುದಿಲ್ಲ. ಸುಖ-ದುಃಖಗಳೆರಡರಲ್ಲೂ ನಿರ್ವಿಕಾರನಾಗಿವನು. ಅಪರೋಕ್ಷ ಜ್ಞಾನಕ್ಕೆ ಪೂರ್ವಭಾವಿಯಾಗಿಯೂ ಇವೆಲ್ಲಾ ಸದ್ಗುಣಗಳು ನಮಗೆ ಅವಶ್ಯಕವೇ ಆಗಿವೆ. ಆದರೆ ಸ್ಥಿತಪ್ರಜ್ಞನಲ್ಲಿ ಈ ಗುಣಗಳು ಸ್ವಭಾವಸಿದ್ಧವಾಗಿ ಇರುತ್ತದೆ....ಇಂದ್ರಿಯಗಳ ಮೇಲೆ ಹಿಡಿತವಿರುವುದರಿಂದಲೇ ಯಾವ ಲೌಕಿಕ ಆಕರ್ಷಣೆಗೂ ಒಳಗಾಗದೆ ಕಾಮ, ಕ್ರೋಧ ಮೊದಲಾದ ಉಪದ್ರವಗಳಿಂದ ರಹಿತವಾದ ಜೀವನವನ್ನು ಅವನು ನಡೆಸುತ್ತಾನೆ....ಅವನಿಗೆ ವೈಷಯಿಕ ಸಂಬಂಧವನ್ನು ಹಿಡಿಯುವುದೂ ಬಿಡುವುದೂ ಎರಡೂ ಸುಲಭ. ಇಂದ್ರಿಯಗಳನ್ನು ವಿಷಯಗಳ ಕಡೆಗೆ ಓಡಿಸುವುದು ದೊಡ್ಡದಲ್ಲ. ಅವುಗಳನ್ನು ನಮಗೆ ಬೇಕೆನಿಸಿದಾಗ ಹಿಂತಿರುಗಿಸುವುದರಲ್ಲೇ ನಮ್ಮ ಜೀವನದ ಯಶಸ್ಸು ಅಡಗಿದೆ.39 ವ್ರತ, ಉಪವಾಸಗಳಿಂದ ನಾವೇನೋ ಭೋಗವಸ್ತುಗಳ ಸಂಬಂಧವನ್ನು ಬಿಡಲು ಪ್ರಯತ್ನಿಸುತ್ತೇವೆ. ಆದರೆ ಮಾನಸಿಕವಾಗಿ ಅದನ್ನು ಬಿಡಲು ನಮ್ಮಿಂದ ಆಗುವುದಿಲ್ಲ. ನಮ್ಮ ಮಾನಸಿಕ ರಾಗ ನಿವೃತ್ತಿಗೆ ನಾವು ಶ್ರಮಿಶಬೇಕು. ಇದು ಪರಮಾತ್ಮನ ಸಾಕ್ಷಾತ್ಕಾರದಿಂದಲೇ ಸಾಧ್ಯ ಎಂದು ಹೇಳುತ್ತಾರೆ. ನಾವು ಬೋಗ ಪದಾರ್ಥಗಳ ಬೆನ್ನು ಹತ್ತದೆ ಭಗವತ್ ಪ್ರೇಮ ಮತ್ತು ಅವನ ಧ್ಯಾನದಿಂದ ಆನಂದವನ್ನು ಕಂಡುಕೊಳ್ಳಬೇಕು ಎಂದು ತಿಳಿಸುತ್ತಾರೆ. ಇಂದ್ರಿಯಗಳನ್ನು ನಿಗ್ರಹಿಸುವುದೆಂದರೆ ಅವುಗಳನ್ನು ಹಿಂಸಿಸುವುದಲ್ಲ. ಅವುಗಳ ಶಕ್ತಿಯನ್ನೇ ಕುಂಠಿತಗೊಳಿಸುವುದಲ್ಲ. ಇಂದ್ರಿಯಗಳನ್ನು ಯೋಗ್ಯರೀತಿಯಿಂದ ಬಳಸುವುದರಿಂದ ಯೋಗ್ಯ ವಿಷಯಗಳ ಕಡೆಗೆ ಅವುಗಳನ್ನು ಹರಿಸುವುದರಿಂದ ನಾವು ಇಂದ್ರಿಯ ನಿಗ್ರಹವನ್ನು ಸಾದಿಸಿದಂತಾಗುವುದು. ಯೋಗ್ಯದಾರಿಯಲ್ಲಿ ಇಂದ್ರಿಯಗಳು ಪ್ರವೃತ್ತವಾಗುವಂತೆ ಮಾಡುವುದೇ ನಿಜವಾದ ಇಂದ್ರಿಯ ನಿಗ್ರಹವೆಂದು ಅರ್ಥೈಸುತ್ತಾರೆ. ಸ್ಥಿತಪ್ರಜ್ಞನು ವಿಷಯಪದಾರ್ಥಗಳನ್ನು ಸ್ವೀಕರಿಸಿದರೂ ಅವನಲ್ಲಿ ಏನೂ ವಿಕಾರವಾಗಲಾರದು. ಅವು ಇಲ್ಲದಿದ್ದರೂ ಅವನು ಕೊರಗಲಾರನು. ಸಮುದ್ರದಂತೆ ಆತ ಅಚಲ ನಿಷ್ಠನಾಗಿರುವನು ಎಂದು ಹೇಳುತ್ತಾರೆ. ವಿಷಯ ಸುಖಕ್ಕಾಗಿ ನಾವು ಬೆಂಬತ್ತಿ ಓಡಿದರೆ ನಮಗೆ ಅದು ಕೊನೆಯವರೆಗೂ ಸಿಗುವುದಿಲ್ಲ. ಆದರೆ ಆಶೆಯನ್ನು ತೊರೆದು ಪರಮಾತ್ಮನ ಕಡೆಗೆ ಓಡುವಾ. ಸಹಜವಾಗಿ ನಮ್ಮ ಬೆನ್ನ ಹಿಂದೆ ಅವೆಲ್ಲಾ ಪದಾರ್ಥಗಳು ಓಡಿ ಬರುವವು. ವ್ಯಕ್ತಿಯು ಬೋಗಲಾಲನೆಯಿಂದ ಅತೀತನಾಬೇಕು. ಅಂತಃಕರಣ ಶುದ್ಧಿಯನ್ನು ಮಾಡಿಕೊಳ್ಳಬೇಕು. ಸತ್ಕರ್ಮಾಚರಣೆಯ ಜೀವನವನ್ನು ರೂಡಿಸಿಕೊಳ್ಳಬೇಕು. ಭಗವನ್ನಿಷ್ಠ ಬದುಕನ್ನು ತನ್ನದನ್ನಾಗಿಸಿಕೊಳ್ಳಬೇಕು. ಧ್ಯಾನ-ಸಾಕ್ಷಾತ್ಕಾರಗಳಲ್ಲಿ ನಡೆಯಬೇಕು. ಇದು ವ್ಯಕ್ತಿಯನ್ನು ಬ್ರಾಹ್ಮೀ ಸ್ಥಿತಿಗೆ ಮುಟ್ಟಿಸುತ್ತದೆ ಎಂದು ಮಾರ್ಗದರ್ಶನ ಮಾಡುತ್ತಾರೆ.40 ಮಹಾತ್ಮಾ ಗಾಂದಿಜಿ ಒಬ್ಬ ಮಹಾನ್ ದೇಶಭಕ್ತರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮುಂದಾಳತ್ವವನ್ನು ವಹಿಸಿಕೊಂಡಂತಹವರು. ಸಾರ್ವಜನಿಕ ಜೀವನದಲ್ಲಿ ಆದರ್ಶಪ್ರಾಯರಾಗಿದ್ದವರು. ಸ್ವಾತಂತ್ರ್ಯ ಸಂಗ್ರಾಮಕ್ಕೆ ಕೊಟ್ಟ ಪ್ರಾಶಸ್ತ್ಯವನ್ನೇ ಸಾಮಾಜಿಕ ಜೀವನಕ್ಕೂ ಕೊಟ್ಟಿದ್ದರು. ಸಪ್ತ ಸಾಮಾಜಿಕ ಪಾತಕಗಳನ್ನು [ತತ್ವರಹಿತ ರಾಜಕೀಯ, ದುಡಿಮೆ ಇಲ್ಲದ ಸಂಪತ್ತು, ನೀತಿಹೀನ ವಾಣಿಜ್ಯ, ಶೀಲವಿಲ್ಲದ ಶಿಕ್ಷಣ, ಆತ್ಮಸಾಕ್ಷಿ ರಹಿತ ಭೋಗ, ಮಾನವತಾ ಶೂನ್ಯ ವಿಜ್ಞಾನ ಮತ್ತು ತ್ಯಾಗವಿಲ್ಲದ ಪೂಜೆ] ಪ್ರಚುರ ಪಡಿಸಿದವರು. ಇದರ ಜೊತೆಗೆ ಸನಾತನ ಧರ್ಮದ ಏಕಾದಶ (ಹನ್ನೊಂದು) ವ್ರತಗಳನ್ನು ತಾವು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದರ ಜೊತೆಜೊತೆಗೆ ಮೌಲ್ಯಗಳ ಬಗ್ಗೆ ಪ್ರಚಾರ ಮಾಡಿದರು. ತಮ್ಮ ಆಶ್ರಮದ ಪ್ರಾರ್ಥನೆಯಲ್ಲಿ ಅವುಗಳನ್ನು ಸೇರಿಸಿ, ಅವರ ಪ್ರಭಾವಕ್ಕೆ ಒಳಗಾದ ಎಲ್ಲರಿಂದಲೂ ಆ ವ್ರತವನ್ನು ಆಚರಿಸುವಂತೆ ನೋಡಿಕೊಂಡರು. ಅಹಿಂಸಾ, ಸತ್ಯ, ಅಸ್ತೇಯ, ಬ್ರಹ್ಮಚರ್ಯ, ಅಸಂಗ್ರಹ, ಶರೀರಶ್ರಮ, ಆಸ್ವಾದ, ಸರ್ವತ್ರ ಭಯವರ್ಜನ, ಸರ್ವಧರ್ಮ ಸಮಾನತ್ವ, ಸ್ವದೇಶಿ ಸ್ವರ್ಶಭಾವನ, ಇವೇ ಆ ಹನ್ನೊಂದು ವ್ರತಗಳು. ಸಮಾಜದ ಪ್ರಗತಿಗೆ ರಚನಾತ್ಮಕ ಕಾರ್ಯಕ್ರಮಗಳನ್ನು ಜಾರಿಗೆ ತಂದರು. ಬದುಕಿನ ಎಲ್ಲಾ ಕ್ಷೇತ್ರಗಳಲ್ಲಿ ಆದರ್ಶಪ್ರಾಯರಾಗಿ ಬದುಕಿದರು. ಒಬ್ಬ ಸಂತನಂತೆ ಬದುಕಿದರು. ಅವರು ಯಾವಾಗಲೂ ತಾವೊಬ್ಬ ಧಾರ್ಮಿಕ ವ್ಯಕ್ತಿ ಎಂದು ಭಾವಿಸಿಕೊಂಡಿದ್ದರು. ಅವರಿಗೆ ಭಗವದ್ಗೀತೆಯ ಮೇಲೆ ತುಂಬಾ ಆದರ. ಗೀತೆಯ ಮಾರ್ಗದರ್ಶನದಲ್ಲಿ ತಮ್ಮ ಬದುಕನ್ನು ಒಂದು ಪ್ರಯೋಗವನ್ನಾಗಿಸಿಕೊಂಡರು. ಗೀತೆಯನ್ನು ಗೀತಾಮಾತೆ ಎಂದು ಕರೆದರು. ಯಾವಾಗಲಾದರೂ ನಾನು ಎದುರಿಸುವ ಸಮಸ್ಯೆ ತುಂಬಾ ಜಟಿಲವಾದಾಗ ನಾನು ಆ ಪ್ರಶ್ನೆಗಳಿಗೆ ಉತ್ತರವನ್ನು ಭಗದ್ಗೀತೆಯಲ್ಲಿ ಕಂಡುಕೊಂಡಿದ್ದೇನೆಂದು ಹೇಳಿದ್ದಾರೆ. ಗೀತೆಯ ಎರಡನೇ ಅಧ್ಯಾಯದಲ್ಲಿ ಬರುವ ಸ್ಥಿತಪ್ರಜ್ಞನ ಲಕ್ಷಣಗಳನ್ನು ತಾವು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರು. ತಮ್ಮ ಸಾಬರಮತಿ ಆಶ್ರಮದ ಸಂಜೆಯ ಪ್ರಾರ್ಥನೆಯಲ್ಲಿ ಗೀತೆಯ ಆ ಭಾಗವನ್ನು ಸೇರಿಸಿಕೊಂಡರು. ಅದನ್ನು ಸರಳವಾಗಿ ಹಿಂದಿಯಲ್ಲಿ ಮತು ಗುಜರಾತಿಯಲ್ಲಿ ತರ್ಜುಮೆ ಮಾಡಿ ಎಲ್ಲರಿಗೂ ತಿಳಿಯುವಂತೆ ಮಾಡಿದರು. ಮಹಾತ್ಮಾ ಗಾಂದಿಜಿಯ ಅನುಯಾಯಿಗಳಾದ ಮತ್ತು ಸೇವಾಗ್ರಾಮದಲ್ಲಿ ಗಾಂದಿಜಿಗೆ ಕೊಟ್ಟ ವಚನಕ್ಕೆ ಬದ್ಧರಾದ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಶ್ರೀ ನರಸಿಂಹ ದಾಬಡೆಯವರು ಆಶ್ರಮದ ಪ್ರಾರ್ಥನೆಯನ್ನು ಕನ್ನಡಕ್ಕೆ ಭಾಷಾಂತರ ಮಾಡಿ ಮಹದುಪಕಾರ ಮಾಡಿದ್ದಾರೆ. ಸದ್ರಿ ಪ್ರಾರ್ಥನೆಯಲ್ಲಿ ಸ್ಥಿತಪ್ರಜ್ಞನ ಗುಣ-ಲಕ್ಷಣಗಳ ಬಗ್ಗೆ ವಿವರಣೆ ಇದೆ. ಅದರ ಆಯ್ದ ಭಾಗ ಈ ಕೆಳಗಿನತಿಂದೆ. ಮನದೊಳಿರುವ ಸಕಲ ಕಾಮಗಳನು ತೊರೆಯುವಾತನು| ತನ್ನ ಮನಸ್ಸಿನೊಳಗೆ ತಾನೆ ಶಾಂತಿ ಪಡೆಯುವಾತನು|| ದುಃಖ ಬರಲು ಮರುಗನವನು ಯಾವ ಸುಖವ ಬಯಸನು | ಮೋಹ ಬಿತಿಕೋಪವಿಲ್ಲದವನೆ ಸ್ಥಿತಪ್ರಜ್ಞನು.|| ಅಶುಭದಲ್ಲಿ ಕುಗ್ಗನವನು ಶುಭವು ಬರಲು ಹಿಗ್ಗನು| ದ್ವೇಷ ಮೋಹಗಳನು ತೊರೆದು ಅಚಲನಾಗಿ ನಡೆವನು|| ಇಂದ್ರಿಯಗಳೆಲ್ಲವನ್ನು ಆಚಲ ಬುದ್ಧಿ ಯೋಗಿಯು| ಆಮೆ ದೇಹ ಮುದುಡುವಂತೆ ವಿಷಯದಿಂದ ಸೆಳೆವನು || ಬಾಹ್ಯವಿಷಯವು ಅಳಿಯಬಲ್ಲದು ನಿರಾಹಾರದಿಂದಲೆ| ವಿಷಯವಾಸನೆ ಕುಗ್ಗಲಾರದು ಆತ್ಮದುಶನವಿಲ್ಲದೆ|| ಜ್ಞಾನಿಮನುಜ ಮನಸಿನಿಂದ ಯತ್ನ ಮಾಡುತ್ತಿದ್ದರೂ| ಮಂಗ ಇಂದ್ರಿಯಂಗಳು ಮರಳಿ ಮಡುವುಗೆಳವವು|| ಇಂದ್ರಿಯಂಗಳನ್ನು ಗೆದ್ದು ನನ್ನ ನೆನೆಯುತಿರುವನು| ಅವುಗಳನ್ನು ಜಯಸಿದವನೆ ಅಚಲಬುದ್ಧಿ ಯೋಗಿಯು|| ವಿಷಯ ಚಿಂತನೆಗೈಯಲು ಸಂಗ ಲಬಿಸುವುದವನಿಗೆ| ಸಂಗದಲಿ ತಾ ಕಾಮವು ಕಾಮದಿಂದಲೆ ಕ್ರೋಧವು|| ಇಂತು ಕ್ರೋಧದಿ ಮೋಹವು ಮೋಹದಿಂದ ವಿವೇಕವು| ಅವಿವೇಕದಿಂದಲೇ ಬುದ್ಧಿ ನಶಿಸಿ ಸರ್ವನಾಶವು ತಪ್ಪದು|| ರಾಗದ್ವೇಷಾದಿಗಳ ಬಿಟ್ಟು ದೇಹಧಾರಣೆಗಾಗಿಯೇ| ವಿಷಯ ಸೇವಿಸುತಿರುವಗೆ ಚಿತ್ತಶಾಂತಿಯು ದೊರೆವುದು|| ಮಾಯವಾಗುವುದೆಲ್ಲ ದುಃಖವು ಚಿತ್ತಶುದ್ಧಿಯು ದೊರೆಯಲು| ಲಬಿಸಿದಂತೆಯೆ ಶುದ್ಧಿಯು ಸ್ಥಿರತೆ ಬುದ್ಧಿಗೆ ದೊರೆವುದು|| ಸ್ಟೈರ ನರನಿಗೆ ಬುದ್ಧಿಯಿರದು ಭಾವನೆಯು ತಾದೂರವು| ಇಂಥ ನರನಿಗೆ ಶಾಂತಿಸಿಗದು ಶಾಂತಿ ಇರದೆ ಸುಖವು ಎಂತು|| ಚಲಿಸುವಿಂದ್ರಿಯಗಳಂತೆ ನರನ ಮನವು ಚಲಿಸುತೆ| ಸೆಳೆದವನ ಬುದ್ಧಿಯನ್ನು ಗಾಳಿ ನಾವೆಯಂತೆಯೇ|| ಇಂದ್ರಿಯಗಳನ್ನು ವಿಷಯ ಮೋಹದಿಂದ ಸೆಳೆವನು| ಸೆಳೆದು ವಶದೊಳಿಡಲು ಪಾರ್ಥ ಅವನೆ ಸ್ಥಿತಪ್ರಜ್ಞನು|| ಸಕಲ ಜೀವಿಗಳಿಗೆ ರಾತ್ರಿ ಇಹುದು ಹಗಲು ಯೋಗಿಗೆ| ಸಕಲ ಜೀವಿಗಳಿಗೆ ಹಗಲು ಇಹುದು ರಾತ್ರಿ ಯೋಗಿಗೆ|| ಸಾಗರವು ಸೇರಿದರು ಬಹು ಮುಖದಿ ನೀರು ಚಲಿಸದದು ತಾನು ಮರ್ಯಾದೆ ಬಿಡದು| ಜ್ಞಾನಿಯಲಿ ಕಾಮಾದಿ ಸೇರಿದರು ಶಾಂತಿಯನು ತಾ ಪಡವನಲ್ಲದೆ ಭೋಗಿ ತಾನಲ್ಲ|| ನಾನು ನನ್ನದು ನನಗೆ ಎನ್ನದೆ ಯಾವ ಮನುಜನು ನಡೆವನೋ| ಅವನೇ ಕಾಮಾದಿಗಳ ತೊರೆದು ಶಾಂತಿ ಸುಖವನು ಪಡೆವನು|| ಇದುವೆ ಬ್ರಾಹ್ಮೀಸ್ಥಿತಿಯು ಪಾರ್ಥ ಪಡೆಯೆ ಮೊಹವು ಮುಸುಕದು| ಕೊನೆಯವರಿಗೀ ಸ್ಥಿತಿಯೊಳಿದ್ದು ಬ್ರಹ್ಮಭಾವವ ಪಡೆವನು||41 ಭಗವದ್ಗೀತೆಯ ಎರಡನೇ ಅಧ್ಯಾಯದ 55ನೇ ಶ್ಲೋಕದಿಂದ 72 ನೇ ಶೋಕದವರೆಗೆ ಬರುವ 18 ಸಂಸ್ಕೃತ ಶ್ಲೋಕಗಳನ್ನು ಗಾಂದಿಜಿಯವರು ಹಿಂದಿಗೆ ತರ್ಜುಮೆ ಮಾಡಿ ಆಶ್ರಮದ ಸಂಜೆ ಪ್ರಾರ್ಥನೆಯಲ್ಲಿ ಸೇರಿಸಿದರು. ಅವುಗಳ ಕನ್ನಡವಾದದ ಈ ಸಾಲುಗಳನ್ನು ಗಾಂದಿ ಅನುಯಾಯಿಗಳು ತಮ್ಮ ಸಂಘ ಸಂಸ್ಥೆಗಳಲ್ಲಿ ಸಂಜೆಯ ಪ್ರಾರ್ಥನೆಯಲ್ಲಿ ಸೇರಿಸಿಕೊಂಡಿದ್ದಾರೆ. ಅನುವಾದ ತುಂಬಾ ಸರಳವಾಗಿರುವುದರಿಂದ ಇದಕ್ಕೆ ಯಾವ ವಿವರಣೆಯೂ ಬೇಕಿಲ್ಲ. ಮಹಾತ್ಮಾ ಗಾಂದಿಜಿಯವರು, ನನಗೆ ಅದ್ವೈತದಲ್ಲಿ ಆಸ್ಥೆ ಎಂಬ ಮಾತನ್ನು ಹೇಳಿಕೊಂಡಿದ್ದಾರೆ. ಹಾಗಾಗಿ ಪರಂ ದೃಷ್ಟ್ವಾ ನಿವರ್ತತೇ ಎಂಬಲ್ಲಿ ಆತ್ಮ ದರ್ಶನವಿಲ್ಲದೆ ಎಂದು ಭಾಷಾಂತರಿಸಿದ್ದಾರೆ. ದ್ವೈತಿಗಳು ಆ ಮಾತಿಗೆ ಪರಮಾತ್ಮನ ದರ್ಶನವಿಲ್ಲದೆ ಎಂದು ವ್ಯಾಖ್ಯಾನಿಸುತ್ತಾರೆ. ಇದನ್ನು ಓದುಗರು ಗಮನಿಸಬೇಕು. (ಈಗಾಗಲೇ ಮೇಲೆ ತಿಳಿಸಿದ ಹಾಗೆ ಗೀತೆಗೆ ಅನೇಕ ವ್ಯಾಖ್ಯಾನ, ಟೀಕೆ, ಟಿಪ್ಪಣಿ, ವಿವರಣೆಗಳಿವೆ. ಓದುಗರು ಹೆಚ್ಚಿನ ವಿವರಗಳಗೆ ಮಾನ್ಯ ಬನ್ನಂಜೆ ಗೋವಿಂದಾಚಾರ್ಯರ ಭಗವಂತನ ನಲ್ನುಡಿ (ಪ್ರ.ಶ್ರೀಪುತ್ತಿಗೆ ಮಠ, ಉಡುಪಿ), ಪೂಜ್ಯ ಡಿ.ವಿ. ಗುಂಡಪ್ಪನವರ ಜೀವನಧರ್ಮಯೋಗ (ಪ್ರ.ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ನೃಪತುಂಗರಸ್ತೆ, ಬೆಂಗಳೂರು), ಮುಂತಾದ ಪುಸ್ತಕಗಳನ್ನು ನೋಡಬಹುದಾಗಿದೆ). ಅಡಿಟಿಪ್ಪಣಿಗಳು:-
ಅಧ್ಯಾಯ - 3, ಭಾಗ - 1 ಆಹಾರ ಮನುಷ್ಯನ ದೇಹವು ಆರೋಗ್ಯದಿಂದಿದ್ದು ಚತುರ್ವಿಧ ಪುರುಷಾರ್ಥಗಳನ್ನು [ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ] ಪಡೆಯಲು ನಾವು ಯಾವೆಲ್ಲ ಪದಾರ್ಥಗಳನ್ನು ಸೇವಿಸುತ್ತೇವೆಯೋ ಅವೆಲ್ಲವನ್ನು ಆಹಾರ ಎಂದು ಕರೆಯಬಹುದು. ಶರೀರಕ್ಕೆ ಹಿತವಾಗುವಂತಹ ಯಾವ ಸತ್ವಯುತ ದ್ರವ್ಯಗಳನ್ನು ನಾವು ಬಾಯಿ ಮೂಲಕ ಸ್ವೀಕರಿಸುತ್ತೇವೆಯೋ ಅವುಗಳ ಒಟ್ಟು ಸಮೂಹಕ್ಕೆ ಆಹಾರವೆಂದು ಕರೆಯಬಹುದು. ಅವುಗಳು ಘನ, ದ್ರವ, ಲೇಹ್ಯ, ಮಿಶ್ರ ಮುಂತಾದ ರೂಪದಲ್ಲಿರಬಹುದು. ಪಂಚಭೂತಗಳಿಂದಾದ ಶರೀರದ ಉತ್ಪತ್ತಿ ಮತ್ತು ವಿಕಾಶ ಆಹಾರದಿಂದಲೇ ಆಗುತ್ತದೆ. ನಾವು ತಿನ್ನುವ ಆಹಾರಕ್ಕೆ ಅನೇಕ ರೂಪಗಳಿದ್ದರೂ ಅವುಗಳೆನ್ನೆಲ್ಲಾ ಒಟ್ಟಾಗಿ ಸೇರಿಸಿ ಅನ್ನ ಎಂದು ಕರೆಯುವುದು ವಾಡಿಕೆ. ಸಕಲ ಜೀವಿಗಳ ಹುಟ್ಟು, ಬೆಳವಣಿಗೆ, ಸ್ಥಿತಿ, ಕ್ಷೀಣಿಸುವುದು, ಲಯ ಹೊಂದುವುದು ಮುಂತಾದ ಹಲವು ಹತ್ತು ಚಟುವಟಿಕೆಗಳು ನಡೆಯುವುದು ಅನ್ನದಿಂದ. ತಾಯಿಯ ಗರ್ಭದಲ್ಲಿ ಗರ್ಭಕೋಶ ಅಂಕುರಗೊಳ್ಳುವುದರಿಂದ ಪ್ರಾರಂಭಗೊಂಡು, ತಂದೆಯ ದೇಹದಲ್ಲಿ ವೀರ್ಯಾಣು/ಜೀವಕೋಶ ಉತ್ಪತ್ತಿಯಾಗುವುದರಿಂದ ಮೊದಲ್ಗೊಂಡು, ಗರ್ಭಧಾರಣೆ, ಬೆಳವಣಿಗೆ, ಹೆರಿಗೆ, ಜನನ, ಬೆಳವಣಿಗೆ, ಸ್ಥಿತಿ, ಲಯ, ಹೀಗೆ ಮನುಷ್ಯನ ಹುಟ್ಟಿನ ಪೂರ್ವದಿಂದ ಜೀವನದ ಅಂತ್ಯದವರೆಗೆ ನಡೆಯುವ ಎಲ್ಲಾ ಚಟುವಟಿಕೆಗಳಿಗೆ ಅನ್ನ ಕಾರಣವಾಗುತ್ತದೆ. ಸಕಲ ಜೀವರಾಶಿಗಳಿಗೂ ಅನ್ನವೇ ಆಧಾರ. ಅನ್ನ {ಆಹಾರ} ಇಲ್ಲದಿದ್ದರೆ ಜೀವ ಇಲ್ಲ. ನಾವು ಉಣ್ಣುವ ಅನ್ನದಿಂದ ನಮಗೆ ನಮ್ಮ ದೈನಂದಿನ ಚಟುವಟಿಕೆಗಳಿಗೆ ಬೇಕಾಗುವ ಬಲ ಸಿಗುತ್ತದೆ. ಆಹಾರ ಸೇವಿಸಿದ ಮನುಷ್ಯ ಉತ್ಸಾಹಭರಿತನಾಗುತ್ತಾನೆ. ಅವನ ಮುಖ ಕಾಂತಿಯಿಂದ ಕೂಡಿರುತ್ತದೆ. ಆಹಾರ ಅವನಿಗೆ ಅವಶ್ಯವಾಗುವ ಉತ್ತಮ ಸತ್ವವನ್ನು ಒದಗಿಸುತ್ತದೆ. ಬುದ್ಧಿಯನ್ನು ನೀಡುತ್ತದೆ. ಆಹಾರವನ್ನು ಸೇವಿಸದಿದ್ದರೆ ಮನುಷ್ಯ ಶಕ್ತಿಹೀನನಾಗುತ್ತಾನೆ. ಅವನ ಉತ್ಸಾಹ ಕುಂದಿಹೊಗುತ್ತದೆ. ಅವನ ಮುಖ ಕಾಂತಿಹೀನವಾಗುತ್ತದೆ. ಜೀವನ ನಿಸ್ಸಾರವೆನಿಸುತ್ತದೆ. ಇಂದ್ರಿಯಗಳು ಕೆಲಸ ಮಾಡುವುದಿಲ್ಲ. ಆಹಾರವನ್ನು ದೀರ್ಘಕಾಲ ಸೇವಿಸದಿದ್ದರೆ ಸಾವನ್ನಪ್ಪುತ್ತಾನೆ. ಇದು ನಮಗೆ ಅನ್ನದಿಂದಾಗುವ ಪ್ರಾಭಾವ/ಉಪಯೋಗ. ಮನುಷ್ಯನ ಸ್ಥೂಲಶರೀರ ಪಂಚಭೂತಗಳು, ಸಪ್ತಧಾತಗಳು, ಷಡ್ವಿಕಾರಗಳು ಮತ್ತು ದಶ ದೋಷಗಳಿಂದ ಕೂಡಿದೆ. ಇವುಗಳ ಜೊತೆಗೆ ವಾತ, ಪಿತ್ತ, ಕಫಗಳೆಂಬ ದೋಷಗಳೂ ಇವೆ. ಅದರಂತೆಯೇ ಸೂಕ್ಷ್ಮಶರೀರ, ಪಂಚತನ್ಮಾತ್ತಾ, ಪಂಚ ಜ್ಞಾನೇಂದ್ರಿಯಗಳು, ಪಂಚ ಕರ್ಮೇಂದ್ರಿಯಗಳು, ಪಂಚ ಪ್ರಾಣಗಳು, ಮನಸ್ಸು, ಬುದ್ಧಿ, ಚಿತ್ತ, ಅಹಂಕಾರಗಳಿಂದ ಕೂಡಿದೆ. ಇವೆಲ್ಲವುಗಳ ಜೊತೆಗೆ ಮನುಷ್ಯ ಶರೀರದಲ್ಲಿ ಜೀವನಿದ್ದಾನೆ. ಈ ಎಲ್ಲಾ ಅಂಗಗಳು ಸೇರಿ ಮನುಷ್ಯ ರೂಪಗೊಂಡಿದ್ದಾನೆ. ಈ ಎಲ್ಲಾ ಅಂಶಗಳು, ಅಂಗಗಳು ಬೆಳೆಯಬೇಕು, ಸ್ಥಿರವಾಗಿರಬೇಕು, ಶಿಥಿಲಗೊಳ್ಳಬಾರದು. ಅವುಗಳು ತಮ್ಮ ತಮ್ಮ ಕೆಲಸಗಳನ್ನು ಮಾಡಬೇಕು, ತಮ್ಮ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಬೇಕು. ಮನಸ್ಸು, ಬುದ್ಧಿ, ಚಿತ್ತ, ಅಹಂಕಾರಗಳು ಈ ಅಂಗಗಳನ್ನು ತಮ್ಮ ಹತೋಟಿಯಲ್ಲಿಟ್ಟುಕೊಂಡು ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕ ಸಾಮರಸ್ಯವನ್ನು ಕಾಪಾಡಿಕೊಳ್ಳಬೇಕು. ಈ ಎಲ್ಲಾ ಚಟುವಟಿಕೆಗಳಿಗೆ ಆಹಾರ ಬೇಕು. ಪಂಚಭೂತಗಳು, ಸಪ್ತಧಾತುಗಳು, ದಳದೋಷಗಳು, ಇಂದ್ರಿಯಗಳು, ಮನಸ್ಸು ಇತ್ಯಾದಿಗಳು ಮನುಷ್ಯ ಜೀವನದ ಆಧಾರ ಸ್ಥಂಭಗಳು. ಇವುಗಳೊಂದಿಗೆ ವಾತ, ಪಿತ್ತ, ಕಫಗಳನ್ನೂ ಸೇರಿಸುವುದು ರೂಡಿ. ಇವುಗಳ ಜೊತೆಗೆ ಆಹಾರ, ಬ್ರಹ್ಮಚರ್ಯ ಮತ್ತು ನಿದ್ದೆಗಳನ್ನು ಸೇರಿಸಿ, ಇವಕ್ಕೆ ಉಪಸ್ಥಂಭಗಳೆಂದು ಆಯುರ್ವೇದ ಶಾಸ್ತ್ರ ಕರೆದಿದೆ. ನಾವು ಸಾಮಾನ್ಯವಾಗಿ ಹಸಿವೆಯಾದಾಗ ಊಟಮಾಡುತ್ತೇವೆ. ಸಾಧಾರಣವಾಗಿ ಈ ರೀತಿಯ ಆಹಾರಸೇವನೆ ಒಂದು ನಿಯತಕಾಲಿಕ ಪ್ರಕ್ರಿಯೆಯಾಗಿರುತ್ತದೆ. ದೇಶ, ಕಾಲ, ಸಮುದಾಯ, ಬೋಕ್ತೃವಿನ ವಯಸ್ಸು, ಲಿಂಗ, ಕೆಲಸ, ಸಂಪ್ರದಾಯ, ಪದ್ಧತಿ ಮುಂತಾದ ಅಂಶಗಳ ಆಧಾರದ ಮೇಲೆ ಆಹಾರದ ಆಯ್ಕೆ, ಪ್ರಮಾಣ, ಸೇವನಾ ವಿಧಾನಗಳು ನಿರ್ಣಯವಾಗುತ್ತವೆ. ನಾವು ಸೇವಿಸುವ ಆಹಾರ ಶುದ್ಧ ಮತ್ತು ಸಮತೋಲನವಾಗಿದ್ದರೆ ನಮಗೆ ನಿರೀಕ್ಷಿತ ಫಲಸಿಗುತ್ತದೆ. ಅನ್ಯಥಾ ರೋಗ ರುಜಿನಗಳಿಗೆ ನಾವೇ ಆಹ್ವಾನವಿತ್ತಂತೆ. ಇದನ್ನು ಪ್ರತಿಯೊಬ್ಬರೂ ತಿಳಿದಿರಬೇಕು. ನಾವು ಸೇವಿಸುವ ಆಹಾರ ಪ್ರಾಣವಾಯುವಿನ ಆಕರ್ಷಣೆಯಿಂದ ಬಾಯಿ, ಕುತ್ತಿಗೆ, ಅನ್ನನಾಳದ ಮುಖಾಂತರ ಜಠರವನ್ನು ಸೇರುತ್ತದೆ. ಅದು ಪಚನಾಂಗಗಳಲ್ಲಿ ಸೇರಿ ಪಚನವಾಗುತ್ತದೆ. ಇಂತಹ ಆಹಾರ ಮಧುರ ರಸವಾಗಿ ಪರಿರ್ವತನೆ ಹೊಂದುತ್ತದೆ. ನಂತರ ಕೆಳಗಿಳಿದು ಆಹಾರವು ಪಾಚಕ ಪಿತ್ತದ ಉಷ್ಣತೆಯಿಂದ ಪರಿಪಾಕಹೊಂದಿ [ಸಂಪೂರ್ಣವಾಗಿ ಪಕ್ವವಾಗುವುದು] ಅಮ್ಲರಸಯುಕ್ತವಾಗುತ್ತದೆ. ಅಲ್ಲಿರುವ ಪಾಚಕ ಪಿತ್ತ ರೂಪವಾದ ಅಗ್ನಿಯು ಆಹಾರವನ್ನು ಪೂರ್ಣ ಪಕ್ವ ಮಾಡುವುದು. ಆಗ ಅದು ಕಟು (ಖಾರ) ರಸದಿಂದ ಕೂಡಿದ್ದು ಪೂರ್ಣ ಪಕ್ವವಾದ ಮೇಲೆ ಕೊನೆಗೆ ಮಧುರ ರಸದಿಂದೊಡಗೂಡಿ ಸ್ನಿಗ್ಧತೆಯನ್ನು ಹೊಂದುತ್ತದೆ. ಈ ರೀತಿಯಾದ ಆಹಾರದ ಸಾರವೇ ರಸ ಎಂಬ ಸಂಜ್ಞೆಯನ್ನು ಹೊಂದುತ್ತದೆ1. ಇಂತಹ ರಸವೇ ಸಮಾನ ವಾಯುವಿನ ಸಹಾಯದಿಂದ ಹೃದಯವನ್ನು ಸೇರುತ್ತದೆ. ವ್ಯಾನವಾಯುವಿನ ಸಹಕಾರದಿಂದ ಶರೀರದ ಎಲ್ಲಾ ಭಾಗಗಳಲ್ಲಿರುವ ಸಪ್ತಧಾತುಗಳನ್ನು ಸೇರುತ್ತದೆ. ಈ ರಸವು ಹೃದಯ, ಯಕೃತ್ತು, ಪ್ಲೀಹಗಳಿಗೆ (ಗುಲ್ಮ) ಪೋಷಣೆ ನೀಡಿ, ರಂಜಕ ಪಿತ್ತದ ಉಷ್ಣತೆಯಿಂದಾಗಿ ಪಕ್ವವಾಗಿ ರಕ್ತವಾಗುತ್ತದೆ. ರಕ್ತವು ಮಾಂಸವನ್ನು ಪೋಷಿಸುತ್ತದೆ. ಮಾಂಸದಿಂದ ಮೇಧಸ್ಸು (ಕೊಬ್ಬು), ಮೇಧಸ್ಸಿನಿಂದ ಅಸ್ಥಿ (ಎಲಬು), ಅಸ್ಥಿಯಿಂದ ಮಜ್ಜ (ಜಡ್ಡಿನಿಂದ ಕುಡಿದ ಒಂದು ವಿಧವಾದ ರಸ) ಮುಂದೆ ಶುಕ್ರವಾಗಿ (ವೀರ್ಯ) ಪರಿಣಮಿಸುತ್ತದೆ2. ಹೀಗೆ ನಾವು ತಿಂದ ಆಹಾರ ಬೇರೆ ಬೇರೆ ರೂಪ ಹೊಂದಿ ನಮ್ಮ ದೇಹವನ್ನು ಪೋಷಿಸುತ್ತದೆ. ನಾವು ತಿನ್ನುವ ಆಹಾರ ಎರಡು ಭಾಗಗಳಾಗಿ ವಿಂಗಡಣೆಯಾಗುತ್ತದೆ. ಉಪಯುಕ್ತವಾದ ಸಾರಭಾಗ ಮೇಲೆ ಹೇಳಿದಂತೆ ಶರೀರವನ್ನು ಪೋಷಿಸುತ್ತದೆ. ಉಳಿದದ್ದು ನಿರುಪಯುಕ್ತ ಕಿಟ್ಟಭಾಗ ಎಂದೆನಿಸಿಕೊಳ್ಳುತ್ತದೆ. ಇದು ಮಲ, ಮೂತ್ರ, ಬೆವರುಗಳ ಮುಖಾಂತರ ದೇಹದಿಂದ ಹೊರದೂಡಲ್ಪಡುತ್ತದೆ. ಸಾರಭಾಗವಾದ ರಸ ಪದಾರ್ಥವು ಓಜಸ್ಸು ಎಂದೆನಿಸಿ ಬಲ, ಪುಷ್ಟಿ, ಕಾಂತಿ, ತೇಜಸ್ಸು, ರೋಗ ನಿರೋಧಕ ಶಕ್ತಿ ಮುಂತಾದವುಗಳನ್ನು ನೀಡುತ್ತದೆ. ಇದು ದೇಹದಲ್ಲಿನ ಜೀವಕೋಶಗಳ ಜೀವಧಾರಣೆ ಮಾಡುತ್ತದೆ. ಜೀವಕೋಶಗಳ ರಚನೆ ಮತ್ತು ಕಾರ್ಯ ಎರಡನ್ನೂ ಉತ್ತಮಗೊಳಿಸುತ್ತದೆ3. ಈ ಕಾರಣಗಳಿಗಾಗಿ ನಮಗೆ ಆಹಾರ ಬೇಕಾಗುತ್ತದೆ. ಆಹಾರ ಅವಶ್ಯಕತೆ:- ಅನೇಕ ಕಾರಣಗಳಿಗಾಗಿ ನಮಗೆ ಆಹಾರ ಬೇಕು. ನಾವು ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುತ್ತೇವೆ. ನಾವು ಪ್ರತಿದಿನ ಅನೇಕ ಕೆಲಸಗಳನ್ನು ಮಾಡುತ್ತೇವೆ. ಓಡಾಡುವುದು, ಅವಶ್ಯವಿದ್ದಾಗ ಓಡುವುದು, ಜಿಗಿಯುವುದು, ನೋಡುವುದು, ಮುಟ್ಟುವುದು, ನಮ್ಮನ್ನು ರಕ್ಷಿಸಿಕೊಳ್ಳುವುದು, ಓದುವುದು, ಬರೆಯುವುದು, ಆಲೋಚಿಸುವುದು, ಕೆಲಸ ಮಾಡುವುದು ಇತ್ಯಾದಿ ಚಟುವಟಿಕೆಗಳಿಗೆ ನಮಗೆ ಶಕ್ತಿಬೇಕು. ಆ ಶಕ್ತಿ ನಮಗೆ ಆಹಾರದಿಂದ ಒದಗುತ್ತದೆ. ನಮ್ಮ ದೇಹ ಕೋಟಿ ಕೋಟಿ ಜೀವಕೋಶಗಳಿಂದ ಕೂಡಿದೆ. ಪ್ರತಿಕ್ಷಣವು ಜೀವಕೋಶಗಳು ಬೇರೆ ಬೇರೆ ಕಾರಣಗಳಿಗಾಗಿ ಬಲಹೀನವಾಗುತ್ತವೆ. ಕೆಲವೊಮ್ಮೆ ಸಾಯಲೂಬಹುದು. ಅವುಗಳ ಜಾಗದಲ್ಲಿ ಹೊಸ ಜೀವಕೋಶಗಳು ಹುಟ್ಟಿಕೊಳ್ಳುತ್ತವೆ. ಹೀಗೆ ಈ ಜೀವಕೋಶಗಳ ಪುನಃಶ್ಚೇತನ ಮುಂತಾದ ಚಟುವಟಿಕೆಗಳು ನಿಂರತರವಾಗಿ ನಡೆಯಲಿಕ್ಕೆ ನಮಗೆ ಆಹಾರ ಬೇಕು. ನಮ್ಮ ದೇಹದ ಮೇಲೆ ಏನಾದರೂ ಗಾಯಗಳಾದರೆ ನಾವು ಮಲಾಮು ಹಚ್ಚುತ್ತೇವೆ ಮತ್ತು ಮಾತ್ರೆ ನುಂಗುತ್ತೇವೆ. ನಾವು ಈ ಉಪಚಾರವನ್ನು ಮಾಡಿಕೊಳ್ಳದಿದ್ದರೂ ಗಾಯಗಳು ಮಾಯುತ್ತವೆ. ಅಂದರೆ ನಮ್ಮ ದೇಹದಲ್ಲಿಯೇ ಅಂತಹ ಗಾಯವನ್ನು ಗುಣಪಡಿಸುವ ಶಕ್ತಿ ಇದೆ ಅಂದಂತಾಯಿತು. ಆ ಶಕ್ತಿ ಬರುವುದು ಆಹಾರದಿಂದ. ದೇಹದಲ್ಲಿನ ಜೀವಕೋಶಗಳು, ಆರೋಗ್ಯಪೂರ್ವವಾಗಿರಬೇಕು, ಶಕ್ತಿಶಾಲಿಯಾಗಿರಬೇಕು. ಜೀವಕೋಶಗಳ ಒಳಗಿರುವ ಜೀವರಸಗಳು ಅತ್ಯುತ್ತಮವಾಗಿರಬೇಕು, ಸದೃಢವಾಗಿರಬೇಕು. ಅದರ ಫಲರೂಪವಾಗಿ ಧಾತುಗಳು ಪುಷ್ಟಿಯಾಗಿರುತ್ತವೆ. ಹಾಗಾದರೆ ಅವುಗಳಲ್ಲಿರುವ ಸಾರರೂಪವಾದ ಓಜಸ್ಸು ಉತ್ಕೃಷ್ಟವಾಗಿರುತ್ತದೆ. ಈ ರೀತಿ ಓಜಸ್ಸು ಸತ್ವಯುತವಾಗಿದ್ದರೆ ದೇಹ ರೋಗ ನಿರೋಧಕ ಶಕ್ತಿಯನ್ನು ಪಡೆಯುತ್ತದೆ. ಈ ತರಹದ ಶಕ್ತಿ ಬರುವುದು ಸತ್ವಯುತ ಆಹಾರದಿಂದ. ಇವುಗಳ ಜೊತೆಗೆ ನಮ್ಮ ಅಂಗಾಗಗಳ ಬೆಳವಣಿಗೆ ಆಹಾರದಿಂದ ಆಗುತ್ತದೆ. ನಮ್ಮ ಕೈಕಾಲುಗಳು, ಇತರೆ ಅಂಗಗಳು, ಇವುಗಳ ಹತೋಟಿ ಆಹಾರದಿಂದ ಆಗುತ್ತದೆ. ನಾವು ಉಪವಾಸ ಇದ್ದರೆ ನಮ್ಮ ದೇಹದಲ್ಲಿ ಶಕ್ತಿ ಕುಂದುತ್ತದೆ. ನಮ್ಮ ಅಂಗಾಂಗಗಳು ನಮ್ಮ ಹಿಡಿತದಲ್ಲಿ ಇರುವುದಿಲ್ಲ. ಆಹಾರ ನಮ್ಮ ಹಸಿವನ್ನು ಹಿಂಗಿಸುತ್ತದೆ. ತೃಪ್ತಿಯನ್ನು ಕೊಡುತ್ತದೆ. ನಮ್ಮ ಮನಸ್ಸು ಉಲ್ಲಾಸಮಯವಾಗುತ್ತದೆ. ಸದೃಢ ಮನಸ್ಸು ತನ್ನ ಕೆಲಸಮಾಡುತ್ತದೆ. ಮನುಷ್ಯ ಆಹಾರ ಸೇವಿಸದೆ ಇದ್ದರೆ ಅವನು ನಿಶ್ಯಕ್ತನಾಗುತ್ತಾನೆ. ಯಾವ ಅಂಗಗಳೂ ಅವನು ಹೇಳಿದ ಕೆಲಸವನ್ನು ಮಾಡುವುದಿಲ್ಲ. ಅವನ ಕೋಪತಾಪಗಳು ಹೆಚ್ಚಾಗುತ್ತವೆ. ಜೀವನ ದುರ್ಭರವಾಗುತ್ತದೆ. ಅನ್ನ ಬ್ರಹ್ಮ:- ಸಕಲ ಜೀವಿಗಳ ಸೃಷ್ಟಿ, ಸ್ಥಿತಿ, ಲಯಗಳಿಗೆ ಅನ್ನ ಕಾರಣ. ಹಾಗಾಗಿ ಅನ್ನವನ್ನು ಬ್ರಹ್ಮ ಎಂದು ಕರೆಯುತ್ತಾರೆ. ಇಲ್ಲಿ ಬ್ರಹ್ಮನನ್ನು ಭಗವಂತ ಎಂದು ಅನುಸಂಧಾನ ಮಾಡಬೇಕು. ಅನ್ನ ಶಬ್ದಕ್ಕೆ ಅನೇಕ ಅರ್ಥಗಳಿವೆ. ಅನ್ನ ಅಂದರೆ ಬೇಯಿಸಿದ ಅಕ್ಕಿ ಅಂತ ಒಂದು ಅರ್ಥವಾದರೆ ಅನ್ನಕ್ಕೆ ಒಟ್ಟಾರೆಯಾಗಿ ಆಹಾರ ಎನ್ನುವ ಅರ್ಥವೂ ಇದೆ. ಇವುಗಳ ಜೊತೆಗೆ ಅನ್ನ ಶಬ್ದಕ್ಕೆ ವಿಷ್ಣು ಎಂಬ ಅರ್ಥವೂ ಇವೆ.ಹಾಗಾಗಿ ವಿಷ್ಣುವು ಅನ್ನನಾಮಕನಾದ ಅನಿರುದ್ದರೂಪಿ ಭಗವಂತ. ಅನ್ನ ಭಗವಂತನ ವಿಶಿಷ್ಟ ಗುಣ ಪ್ರತಿಪಾದನೆಯನ್ನು ಮಾಡುತ್ತದೆ. ತೈತ್ತಿರೇಯೋಪನಿಷತ್ತಿನಲ್ಲಿ ಅನ್ನನಾಮಕ ಭಗವಂತನ ಬಗ್ಗೆ ಉಲ್ಲೇಖವಿದೆ. ಅನ್ನಂ ಬ್ರಹ್ಮೇತಿ ವ್ಯಜಾನಾತ್| ಅನ್ಯಾದ್ಧ್ವೇವ ಖಲ್ವಿಮಾನಿ ಭೂತಾನಿ ಜಾಯಂತೇ | ಅನ್ನೇನ ಜಾತಾನಿ ಜೀವಂತಿ | ಅನ್ನಂ ಪ್ರಯಂತ್ಯಬಿಸಂ ವಿಶಂತೀತಿ| [ತೈತ್ತರೇಯ. ಬೃ 3.2] ಅನ್ನನಾಮಕ ಭಗವಂತನಿಂದಲೇ ಅಲ್ಲವೇ ಈ ಎಲ್ಲ ಜೀವರು ಹುಟ್ಟುವುದು. ಅನ್ನನಾಮಕ ಭಗವಂತನಿಂದ ಹುಟ್ಟಿ ಕ್ರಿಯಾಶಿಲರಾಗುವರು. ಪ್ರಳಯ ಸಮಯದಲ್ಲಿ ಅನ್ನನಾಮಕ ಭಗವಂತನಲ್ಲೇ ಲಯ ಹೊಂದುವರು. ಮೋಕ್ಷದಲ್ಲಿ ಅವನನ್ನೇ ಪಡೆಯುವರು.4 ಭಗವಂತ ಅನ್ನರೂಪಿ. ಅನ್ನ ಭಗವದ್ರೂಪಿ. ಅನ್ನವಿಲ್ಲದೆ ಬದುಕಿಲ್ಲ. ತೈತ್ತಿರೇಯೋಪನಿಷತ್ತಿನ ಇನ್ನೊಂದು ಶ್ಲೋಕ ಹೀಗಿದೆ. ಅನ್ನಂ ನ ನಿಂದ್ಯಾತ್ | ತದ್ವ್ರತಂ | ಪ್ರಾಣೋವಾ ಅನ್ನಂ| ಶರೀರಮನ್ನಾದಂ | ಪ್ರಾಣೇ ಶರೀರಂ ಪ್ರತಿಷ್ಟತಂ | ಶರೀರೆ ಪ್ರಾಣ: ಪ್ರತಿಷ್ಟಿತಃ | ತದೇತದನ್ನಮನ್ನೇ ಪ್ರತಿಷ್ಟಿತಂ | ಸ ಯ ಏತದನ್ನಮನ್ನೇ ಪ್ರತಿಷ್ಟತಂ ವೇದ ಪ್ರತಿತಿಷ್ಟತಿ | ಅನ್ನವಾದನ್ನಾದೋ ಭವತಿ | ಮಹಾನ್ ಭವತಿ ಪ್ರಜಯಾ ಪಶುಬಿಬ್ರ್ರಹ್ಮವರ್ಚಸೇನ | ಮಹಾನ್ ಕೀರ್ತ್ಯಾ | [ತೈತ್ತಿರೇಯ. ಬೃ 3.8] ಅನ್ನನಾಮಕ ಭಗವಂತನನ್ನು ನಿಂದಿಸಬೇಡಿ. ಅದೊಂದು ವ್ರತವನ್ನಾಗಿ ಸ್ವೀಕರಿಸಿ. ಭೋಗ್ಯ ಅಂದರೆ ಸುಖಾನುಭವಕ್ಕೆ-ಊಟಕ್ಕೆ ಯೋಗ್ಯವಾದ ವಸ್ತು. ಭೊಜ್ಯ ಅಂದರೆ ತಿನ್ನಲು ಯೋಗ್ಯವಾದ, ತಿನ್ನಬಹುದಾದ ಆಹಾರ ಪದಾರ್ಥ. ಭೊಗ್ಯ-ಭೋಜ್ಯ ಎರಡೂ ಒಂದೆ. ಭೋಕ್ತೃ ಅಂದರೆ ಆಹಾರವನ್ನು ತಿನ್ನುವವನು, ಅನುಭವಿಸುವವನು. ಶರ ಅಂದರೆ ಜೀವ. ಅವನನ್ನು ಪ್ರೇರೇಪಿಸುವವನು ಪರಮಾತ್ಮನು. ಶರ ಈರಯತಿ ಎಂಬ ವ್ಯುತ್ಪತ್ತಿಯನ್ನು ಅನುಸರಿಸಿ [ಭಗವಂತ] ಶರೀರ ಶಬ್ದವಾಚ್ಯನಾಗಿದ್ದಾನೆ. ಭೋಗ್ಯ ಅಂದರೆ ಸುಖದ ಅನುಭವ ಕೊಡುವ ವಸ್ತು ಎಂದು ಕೂಡಾ ಅರ್ಥವಾಗುತ್ತದೆ. ನಮ್ಮ ಶರೀರದಲ್ಲಿ ಪ್ರಾಣ ಇದೆ. ಪ್ರಾಣದಲ್ಲಿ ಪ್ರಾಣನಾಮಕ ವಿಷ್ಣು ಇದ್ದಾನೆ. ಇವನು ಭೋಗ್ಯನು. ಸುಖದ ಅನುಭವವನ್ನು ಕೊಡುವ ವಸ್ತು-ಪರಿಕಲ್ಪನೆ. ಹಾಗೇನೆ ಭಗವಂತ ಜೀವನನ್ನು ಪ್ರೇರಿಸುವ [ಪ್ರಚೋದಿಸು] ಕಾರಣ ಶರೀರ ಶಬ್ದವಾಚ್ಯನಾದ ಭಗವಂತನು ಭೋಕ್ತೃವು [ಅನುಭವಿಸುವವನು]. ಪ್ರಾಣಾಖ್ಯ ಭಗವದ್ರೂಪವು ಭೋಗ್ಯವಾಗಿರುವಾಗ ಶರೀರಾಖ್ಯ ಭಗವದ್ರೂಪವು ಭೋಕ್ತೃವಾಗಿರುವುದು. ಶರೀರನಾಮಕ ಭಗವಂತನು ಭೋಗ್ಯವಾಗಿರುವಾಗ ಪ್ರಾಣನಾಮಕ ಭಗವಂತನು ಭೋಕ್ತೃವಾಗಿರುವನು. ಹೀಗೆ ಪ್ರಾಣ ಶರೀರ ನಾಮಕ ಭಗವದ್ರೂಪಗಳೆರಡೂ ಅನ್ನ ಮತ್ತು ಅನ್ನಾದ ಎಂದರೆ ಭೋಗ್ಯವೂ ಭೋಕ್ತೃವೂ ಆಗಿರುವುದರಿಂದ ಅನ್ನವು ಅನ್ನದಲ್ಲಿ ಭೋಕ್ತೃವಾಗಿ ಪ್ರತಿಷ್ಟಿತವಾಗಿದೆಯೆಂದು ತಿಳಿಯತಕ್ಕದ್ದು. ಯಾರು ಹೀಗೆ ಅನ್ನವು ಅನ್ನದಲ್ಲಿ ಭೋಕ್ತೃವಾಗಿ ಪ್ರತಿಷ್ಟಿತವಾಗಿದೆಯೆಂದು ತಿಳಿಯುವನೋ ಅವನು ಭಗವಂತನನ್ನು ಆಶುಯಿಸುವನು.5 ಅಂತಹವರನ್ನು ಭಗವಂತ ರಕ್ಷಿಸುತ್ತಾನೆ. ಅವರಿಗೆ ಜ್ಞಾನ, ತೇಜಸ್ಸು, ಕೀರ್ತಿ ಲಬಿಸುತ್ತದೆ. ಅನ್ನಂ ನ ನಿಂದ್ಯಾತ್| ಇದಕ್ಕೆ ಇನ್ನೊಂದು ಅರ್ಥವನ್ನೂ ಹೇಳಲಾಗುತ್ತದೆ. ಉಣ್ಣುವ ಅನ್ನವನ್ನು [ಆಹಾರ ಪದಾರ್ಥಗಳನ್ನೂ] ನಿಂದಿಸಬೇಡಿ. ತದ್ವ್ರತಂ, ಅದನ್ನು ಒಂದು ವ್ರತವೆಂದು ತಿಳಿಯಿರಿ. ವ್ರತ ಅಂದರೆ ಒಂದು ಶಿಸ್ತಿಗೆ ಒಳಪಡುವುದು. ಆ ಶಿಸ್ತನ್ನು ಮೀರದಿರುವುದು. ತಿನ್ನುವ ಅನ್ನದ ಬಗ್ಗೆ ಲಘುವಾಗಿ ಮಾತನಾಡುವುದು, ಅನ್ನವನ್ನು ನಿಂದಿಸುವುದುನ್ನು ಎಂದೂ ಮಾಡಬೇಡಿ. ಅನ್ನವನ್ನು ಪೂಜ್ಯಭಾವನೆಯಿಂದ ಕಾಣಿರಿ. ಅನ್ನವನ್ನು, ಆಹಾರವನ್ನು ಹಾಳು ಮಾಡಬೇಡಿ, ಚೆಲ್ಲಬೇಡಿ. ಬೇಕಾದಷ್ಟನ್ನೇ ಹಾಕಿಸಿಕೊಂಡು ಊಟಮಾಡಿ. ಹೆಚ್ಚಾಗಿ ಹಾಕಿಸಿಕೊಂಡು ತಿನ್ನಲಾಗದು ಎಂದು ಎಲೆಯಲ್ಲೇ ಬಿಡಬೇಡಿ. ಅನ್ನದ ಸದುಪಯೋಗ ಆಗಲಿ. ಇದು ಉಪನಿಷತ್ತಿನ ಆಶಯ. ಆಹಾರದ ವರ್ಗೀಕರಣ:- ಇನ್ನು ಆಹಾರದ ವರ್ಗೀಕರಣ. ನಾವು ಸೇವಿಸಿವ ಆಹಾರ ಒಂದೇ ತರವಾಗಿರುವುದಿಲ್ಲ. ವೈವಿಧ್ಯತೆಯಿಂದ ಕೂಡಿರುತ್ತದೆ. ಆಹಾರದ ಪ್ರವೃತ್ತಿ, ಸ್ವಭಾವ, ತಾತ್ವಿಕ ಮೂಲ, ರಸ, ಗುಣ, ರಸಾಯನಿಕ ಸಂಯೋಗ, ಅದು ಮಾಡುವ ಕೆಲಸ, ಹೊಂದಿರುವ ಪೋಷಕತ್ವ ಮುಂತಾದ ಅಂಶಗಳ ಆಧಾರದ ಮೇಲೆ ಆಹಾರವನ್ನು ವರ್ಗೀಕರಿಸಲಾಗಿದೆ. ಈ ವರ್ಗೀಕರಣ ಸನಾತನ ಧರ್ಮದ ಭಾಗವಾಗಿರುವ ಆಯುರ್ವೇದ ಶಾಸ್ತ್ರದಲ್ಲಿ ವಿಶದವಾಗಿ ಕೊಡಲಾಗಿದೆ. ಅದರಂತೆಯೇ ಅತ್ಯಾಧುನಿಕ ಆರೋಗ್ಯ ಶಾಸ್ತ್ರ-ಆಹಾರ ಶಾಸ್ತ್ರಗಳಲ್ಲಿಯೂ ವಿವರಿಸಲಾಗಿದೆ. ಮೊದಲನೆಯ ಅಧ್ಯಾಯದಲ್ಲಿ ಮನುಷ್ಯನಿಗೆ ಸಾತ್ವಿಕ, ರಾಜಸ ಮತ್ತು ತಾಮಸ ಸ್ವಭಾವಗಳು ಇರುತ್ತವೆ ಎಂಬ ಅಂಶವನ್ನು ನೋಡಿದ್ದೇವೆ. ಪ್ರತಿಯೊಬ್ಬ ವ್ಯಕ್ತಿಯೂ ಈ ಅಂಶಗಳ ಆಧಾರದ ಮೇಲೆ ಪ್ರವರ್ತಿಸುತ್ತಾನೆ. ಅದರಂತೆಯೇ ಸಾತ್ವಿಕ, ರಾಜಸ ಮತ್ತು ತಾಮಸ ಎಂಬ ಮೂರು ವಿಧವಾದ ಮಂದಿಗೆ ಪ್ರಿಯವಾಗುವ ಆಹಾರವೂ ಮೂರು ವಿಧ. ಆಹಾರಸ್ತ್ವಪಿ ಸರ್ವಸ್ಯ ತ್ರಿವಿಧೊ ಭವತಿ ಪ್ರಿಯ: (ಗೀತೆ 17.7) ಎಂಬ ಗೀತೆಯ ಮಾತೇ ಇದೆ. ಸಾತ್ವಿಕ, ರಾಜಸ, ತಾಮಸ ಪ್ರವೃತ್ತಿಯ ವ್ಯಕ್ತಿಗಳು ಉಪಯೋಗಿಸುವ ಆಹಾರದಲ್ಲಿಯೂ ಮೂರು ವಿಧ ಎಂದು ಗೀತೆಯಲ್ಲಿ ಹೇಳಲ್ಪಟ್ಟಿದೆ. ಸಾತ್ವಿಕ ಆಹಾರ:- ಆಯುಸ್ಸತ್ತ್ವ ಬಲಾರೋಗ್ಯಸುಖಪ್ರೀತಿವರ್ಧನಾಃ| ರಸ್ಯಾಃ ಸ್ನಿಗ್ಧಾಃ ಸ್ಥಿರಾ ಹೃದ್ಯಾ ಆಹಾರಾಃ ಸಾತ್ತ್ವಿಕಪ್ರಿಯಾಃ || {ಗೀತೆ 17.8} ಆಯುಸ್ಸು, ಮನಸ್ಸಿನ ನೈರ್ಮಲ್ಯ, ಬಲ, ಆರೋಗ್ಯ, ಸುಖ, ಪ್ರೀತಿ ಇವುಗಳನ್ನು ವೃದ್ದಿಗೊಳಿಸುವ ರಸ ಭೂಮಿಷ್ಟವಾದ ಸ್ನೇಹ ಗುಣವನ್ನು ಹೊಂದಿರುವ ಬಹುಕಾಲ ಗುಣ ನೀಡುವ ಮನೋಹರ ಆಹಾರವು ಸಾತ್ವಿಕರಿಗೆ ಪ್ರೀಯವಾದುದು6. ಸಾತ್ವಿಕ ಆಹಾರ ಸೇವಿಸುವುದರಿಂದ ಶರೀರವು ಆರೋಗ್ಯ ಪೂರ್ಣವಾಗಿರುತ್ತದೆ. ಮನಸ್ಸು ಶಾಂತವಾಗಿರುತ್ತದೆ. ಇಂತಹ ಆಹಾರ ಸೇವನೆಯಿಂದ ವ್ಯಕ್ತಿಗೆ ಸಂತೋಷವಾಗುತ್ತದೆ. ಅಕ್ಕಿ, ಗೋದಿ, ಹೆಸರು, ಹುರಳಿಕಾಯಿ, ಹೆಸರುಕಾಳು, ದಂಟುಸೊಪ್ಪು, ಹಾಲು, ಸಿಹಿ ತಾಜಾಮಜ್ಜಿಗೆ ಮುಂತಾದವುಗಳು ಸಾತ್ವಿಕ ಆಹಾರ ಪದಾರ್ಥಗಳು. ದಾಳಿಂಬೆ, ಕಿತ್ತಳೆ, ದ್ರಾಕ್ಷಿ, ಬಾಳೆ ಮುಂತಾದ ತಾಜಾ ಹಣ್ಣುಗಳು ಸಾತ್ವಿಕ ಆಹಾರದ ಪಟ್ಟಿಯಲ್ಲಿ ಸೇರಿವೆ. ಇಂತಹ ಆಹಾರ ಸಪ್ತ ಧಾತುಗಳಿಗೆ ಪುಷ್ಟಿಯನ್ನು ನೀಡುತ್ತವೆ. ರೋಗಗಳನ್ನು ದೂರವಿಡುತ್ತವೆ7. ರಾಜಸ ಆಹಾರ:- ಕಟ್ಟಾಮ್ಲಲವಣಾತ್ಯುಷ್ಣತೀಷ್ಣರೂಕ್ಷವಿದಾಹಿನಃ| ಆಹಾರಾ ರಾಜಸಸ್ಸೇಷ್ಟಾ ದುಃಖಶೋಕಾಮಯಪ್ರದಾಃ| {ಗೀತೆ 17-9} ಖಾರ, ಹುಳಿ, ಉಪ್ಪು ಇವುಗಳು ಅತಿಯಾಗಿರುವ ಬಹು ಉಷ್ಣವಾದ, ತೀಷ್ಣ, ನೀರಸವಾದ, ಕರಕಲಾದ, ಅಥವಾ ಉರಿಯನ್ನುಂಟುಮಾಡುವ, ದುಃಖ, ಮಾನಸಿಕ ಉದ್ವೇಗ, ರೋಗ ಇವುಗಳಿಗೆ ಕಾರಣವಾದ ಆಹಾರಗಳು ರಾಜಸ ಸ್ವಭಾವದವರಿಗೆ ಪ್ರೀಯವಾದುದು8. ಹೆಚ್ಚು ಉಪ್ಪು, ಖಾರ, ಹುಳಿ ಇರುವಂತೆ ತಯಾರಿಸಿದ ಆಹಾರ ಪದಾರ್ಥಗಳು, ಕರಿದ ತಿಂಡಿ ತಿನಿಸುಗಳು, ವಿಪರೀತ ಮಸಾಲೆ ಹಾಕಿ ಮಾಡಿರುವ ಅಡಿಗೆಗಳು, ಕಟುರಸ ಜಾಸ್ತಿ ಇರುವ ತಿಂಡಿಗಳು, ನೀರಸ ಪದಾರ್ಥಗಳು, ದುಃಖ ಉಂಟುಮಾಡುವ, ಕಣ್ಣಿನಲ್ಲಿ ನೀರು ತರಿಸುವ, ಮನಸ್ಸಿನ ಉದ್ವೇಗಕ್ಕೆ, ರೋಗಗಳಿಗೆ ಕಾರಣವಾಗುವ ಪದಾರ್ಥಗಳನ್ನು ಈ ಗುಂಪಿಗೆ ಸೇರಿಸಬಹುದು. ಮೆಣಸು, ಹಸಿ-ಕೆಂಪು ಮೆಣಸಿನಕಾಯಿ, ಸಾಸಿವೆ, ನಿಂಬೆ ಹಣ್ಣು, ಮೆಣಸಿನಕಾಯಿ ಬಜ್ಜಿ / ಬೊಂಡ, ಕೆಂಪು ಚಟ್ನಿ, ಈರುಳ್ಳಿ, ಬೆಳ್ಳುಳ್ಳಿ, ಉಪ್ಪಿನಕಾಯಿ, ಮಾಂಸ, ಕಾಪಿ, ಟೀ, ಮಧ್ಯ, ಮುಂತಾದ ಪದಾರ್ಥಗಳು, ರಾಜಸ ಆಹಾರವೆನಿಸುತ್ತವೆ. ದುಃಖ, ಮಾನಸಿಕ ಉದ್ವೇಗ, ಕಾಮ ಪ್ರಚೋದನೆ, ಇಂತಹ ಭಾವನೆಗಳನ್ನು ಕೆರಳಿಸುವ ಆಹಾರ ರಾಜಸ ಎಂದು ಹೇಳಿದರೂ ಮೆಣಸು, ಮೆಣಸಿನಕಾಯಿ, ಸಾಸಿವೆ, ನಿಂಬೆಹಣ್ಣು, ಟೀ, ಕಾಪಿ ಮುಂತಾದವನ್ನು ಅಲ್ಪ ಪ್ರಮಾಣದಲ್ಲಿ ಸೇವಿಸಿದರೆ (ರುಚಿಗೆ ತಕ್ಕಷ್ಟು ಅವಶ್ಯಕತೆಗೆ ತಕ್ಕಷ್ಟು ಮಾತ್ರ) ಅವು ಸಾತ್ವೀಕವೇ ಆಗುತ್ತವೆ ಎಂಬುದು ಒಂದು ಅಬಿಪ್ರಾಯ. ಆದರೆ ಬೆಳ್ಳುಳ್ಳಿ ಮುಂತಾದ ಪದಾರ್ಥಗಳನ್ನು ಅವಶ್ಯವಿದ್ದಾಗ ಔಷಧೋಪಾದಿಯಲ್ಲಿ ತೆಗೆದುಕೊಳ್ಳುವುದೂ ಉಂಟು. ಈ ರಾಜಸ ಪದಾರ್ಥಗಳ ಮಿತಿಯನ್ನು ಕಂಡುಕೊಳ್ಳುವುದೇ ಒಂದು ಸಮಸ್ಯೆ. ಇದು ವ್ಯಕ್ತಿ ವ್ಯಕ್ತಿಗೂ ಬಿನ್ನವಾಗಿರುತ್ತದೆ. ಹಾಗಾಗಿ ಅವರವರೇ ತಮ್ಮ ತಮ್ಮ ಮಿತಿಯನ್ನು ಕಂಡುಕೊಳ್ಳಬೇಕು. ತಾಮಸ ಆಹಾರ:- ಯಾತಯಾಮಂ ಗತರಸಂ ಪೂತಿ ಪರ್ಯೂಷಿತಂ ಚ ಯತ್ | ಉಚ್ಛಿಷ್ಟಮತಿ ಚಾಮೇಧ್ಯಂ ಭೋಜನಂ ತಾಮಸಪ್ರೀಯಂ || {ಗೀತೆ 17.10} ತಯಾರಿಸಿ ಯಾಮ ಕಳೆದಿರುವ, ರಸ ನಷ್ಟವಾಗಿರುವ, ದುರ್ಗಂಧ ಯುಕ್ತವಾದ, ಹಳಸಿದ, ಬೇರೆಯವರು ತಿಂದು ಉಳಿದ ಅಶುಚಿಯಾದ ಆಹಾರವು ತಾಮಸಮಂದಿಗೆ ಇಷ್ಟವಾದುದು9. ಯಾಮ ಅಂದರೆ ಮೂರು ತಾಸು. ಅಡಿಗೆ ಮಾಡಿದ ಮೇಲೆ ಮೂರು ತಾಸು ಆಗಿದ್ದರೆ ಅದು ತಾಮಸ ಅನ್ನಿಸಿಕೊಳ್ಳುತ್ತದೆ. ತನ್ನ ರಸವನ್ನು (ರುಚಿ- ಸಾರ) ಕಳೆದುಕೊಂಡಿರುತ್ತದೆ. ಕೆಲವು ಪದಾರ್ಥಗಳು ತಯಾರಿದ ನಂತರ ಬಹಳ ಹೊತ್ತಾದರೆ ಕೆಟ್ಟವಾಸನೆ ಬರುತ್ತವೆ ಇಲ್ಲವೇ ಹಳಸುತ್ತವೆ. ಇವುಗಳೆಲ್ಲಾ ತಾಮಸ ಆಹಾರಗಳಾಗುತ್ತವೆ. ದಿನಗಟ್ಟಲೆ ಶೀತಕ ಯಂತ್ರದಲ್ಲಿಟ್ಟು ಮಾಂಸ, ತತ್ತಿ, ತಂಗಳ ಸಾರು ಮತ್ತು ಅವುಗಳನ್ನು ಬಿಸಿಮಾಡಿ ತಿನ್ನುವುದು, ಮುಂತಾದವೆಲ್ಲಾ ತಾಮಸ ಎಂದೆನಿಸಿಕೊಳ್ಳುತ್ತವೆ. (ಶೀತಕ ಯಂತ್ರದಲ್ಲಿಟ್ಟು ಉಪಯೋಗಿಸಬಹುದಾದ ಪದಾರ್ಥಗಳೆಂದರೆ ಹಾಲು, ಮೊಸರು, ಬೆಣ್ಣೆ, ತುಪ್ಪ, ಜೇನು, ತರಕಾರಿಗಳು, ಹಣ್ಣುಗಳು, ಸೊಪ್ಪುಗಳು ಇತ್ಯಾದಿ). ಇವುಗಳ ಜೊತೆಗೆ ತುಂಬಾ ಎಣ್ಣೆ ಇರುವ ಪದಾರ್ಥಗಳು, ಜೀರ್ಣಿಸಿಕೊಳ್ಳಲು ಕಷ್ಟವಾಗುವ ಪದಾರ್ಥಗಳು, ತೀರಾ ತಣ್ಣಗಿರುವ ಮತ್ತು ಡಬ್ಬಿಗಳಲ್ಲಿ ಶೇಖರಿಸಿಟ್ಟ ಪದಾರ್ಥಗಳು ತಾಮಸ ಆಹಾರವಾಗಿರುತ್ತವೆ. ಮೊಸರು, ಉದ್ದು, ಕಬ್ಬಿನ ಹಾಲು ಮುಂತಾದವು ತಾಮಸಿಕ. ತಾಮಸಿಕ ಆಹಾರದಿಂದ ಕೋಪ, ತಾಪ, ನಿದ್ದೆ, ಸೋಮಾರಿತನ ಇಂತಹವುಗಳೇ ಜಾಸ್ತಿ. ಈ ಮೂರು ತರಹದ ಆಹಾರ ಪದಾರ್ಥಗಳ ಬಗ್ಗೆ ಸರಿಯಾಗಿ ತಿಳಿದುಕೊಂಡು ನಮ್ಮ ಆಹಾರವನ್ನು ನಿರ್ಣಯಿಸಿಕೊಳ್ಳಬೇಕು. ಪಂಚಭೂತಗಳನ್ನಾಧರಿಸಿ ಆಹಾರದ ವರ್ಗೀಕರಣ ವಿಶ್ವದ ಸೃಷ್ಟಿಗೆ ಕಾರಣವಾದ ಪಂಚಮಹಾಭೂತಗಳೇ ಆಹಾರದ ಸೃಷ್ಟಿಗೂ ಕಾರಣವಾಗಿವೆ. ಆದ್ದರಿಂದ ಆಯುರ್ವೇದದಲ್ಲಿ ಪಂಚಮಹಾಭೂತಗಳಿಗೆ ಅನುಗುಣವಾಗಿ ಆಹಾರವನ್ನು ವರ್ಗೀಕರಿಸಲಾಗಿದೆ. ಪೃಥ್ವಿ (ಭೂಮಿ), ಅಪ್ಪು (ಜಲ), ತೇಜ (ಅಗ್ನಿ), ವಾಯು (ಗಾಳಿ), ಮತ್ತು ಆಕಾಶ (ನಭ) ಇವುಗಳು ಪಂಚಭೂತಗಳು. ಜಗತ್ತಿನ ಸೃಷ್ಟಿ ಈ ಪಂಚಭೂತಗಳಿಂದಾಗಿದೆ. ಅದರಂತೆಯೇ ಸಕಲ ಜೀವಿಗಳಿಗೆ ಬೇಕಾಗುವ ಆಹಾರವೂ ಪಂಚಭೂತಗಳಿಂದೇ ಆಗಿದೆ. ಒಂದೊಂದು ಭೂತವೂ ಒಂದೊಂದು ತರಹದ ಆಹಾರದ ಉತ್ಪತ್ತಿಗೆ ಕಾರಣವಾಗಿದೆ. ವಿವರಗಳು ಈ ಕೆಳಗಿನಂತಿವೆ:- 1. ಪಾರ್ಥಿವ:- ಇದು ಭೂ ತತ್ವವನ್ನು ಒಳಗೊಂಡದು. ದೇಹದ ಪಾರ್ಥಿವಾಂಶವನ್ನು ನೋಡಿಕೊಳ್ಳುವಂತಹದು. ದೇಹದಲ್ಲಿರುವ ಜೀವಕೋಶಗಳು ದೇಹದ ರಚನೆಗೆ ಕಾರಣವಾದ ಮಾಂಸಖಂಡಗಳು ಮತ್ತು ಮೂಳೆಗಳಿಗೆ ಸಂಬಂಧಪಟ್ಟಿರುವಂತಹದು. ಈ ಗುಂಪಿಗೆ ಘನ ಪದಾರ್ಥಗಳು ಸೇರುತ್ತವೆ. ಇವು ಅದಿಕ ಸಿಹಿ, ಸ್ವಲ್ಪ ಒಗರು ಮತ್ತು ವಾಸನೆಯಿಂದ ಕೂಡಿರುತ್ತವೆ. ಅಕ್ಕಿ, ಗೋದಿ, ಜೋಳ, ಕಾಳುಗಳು, ತರಕಾರಿ ಮುಂತಾದವು ಈ ವರ್ಗಕ್ಕೆ ಸೇರುತ್ತವೆ. ಇವುಗಳ ಸೇವನೆಯಿಂದ ಶರೀರಕ್ಕೆ ದೃಢತೆ, ಬಲ, ತೂಕ, ಪೋಷಣೆಗಳು ಸಿಗುತ್ತವೆ. 2. ಅಪ್ಯ:- ಇದು ಜಲ (ಅಪ್ಪು) ತತ್ವವನ್ನು ಪ್ರತಿನಿದಿಸುವಂತಹದು. ಎಲ್ಲಾ ದ್ರವಾಹಾರಗಳು ಈ ಗುಂಪಿಗೆ ಸೇರುತ್ತವೆ. ತಂಪು, ಅಂಟು, ಭಾರ, ಚಲನೆ, ಘನತ್ವ, ಮೃದುತ್ವ ಮತ್ತು ಜಾರುವ ಗುಣವನ್ನು ಹೊಂದಿರುತ್ತವೆ. ಈ ಪದಾರ್ಥಗಳು ಹೆಚ್ಚು ಸಿಹಿ, ಸ್ವಲ್ಪ ಒಗರು ಮತ್ತು ಉಪ್ಪಿನ ರುಚಿ ಹೊಂದಿರುತ್ತವೆ. ಎಲ್ಲಾ ಆಹಾರ ಪದಾರ್ಥಗಳಿಗೆ ರುಚಿ ಗುಣವನ್ನು ನೀಡುವುದೇ ಅಪ್ ಮಹಾಭೂತವಾಗಿರುತ್ತದೆ. ಸ್ನಿಗ್ಧತೆ, ತೇವಾಂಶ, ದೃಢತೆಯನ್ನು ದೇಹಕ್ಕೆ ತಂದುಕೊಡುತ್ತದೆ. ರಕ್ತ, ಇತರ ದ್ರವ ಪದಾರ್ಥಗಳು, ಶುಕ್ರ, ಆರ್ತವ, ಸ್ಟೇದ ಮುಂತಾದವುಗಳಲ್ಲಿ ಈ ಗುಣವೇ ಹೆಚ್ಚಾಗಿ ಕಂಡುಬರುತ್ತವೆ. ದ್ರವ ಪದಾರ್ಥಗಳಾದ ನೀರು, ಹಾಲು, ಮಜ್ಜಿಗೆ, ಹಣ್ಣಿನ ರಸ, ತುಪ್ಪ, ತರಕಾರಿ, ಗಂಜಿ (ಸೂಪ್) ಮುಂತಾದವು ಈ ವರ್ಗಕ್ಕೆ ಸೇರಿದ ಪದಾರ್ಥಗಳಾಗಿವೆ. 3. ಆಗ್ನೇಯ :- ಇದು ಅಗ್ನಿ ತತ್ವದಿಂದ ಕೂಡಿದ್ದು ಗುಣದಲ್ಲಿ ಬಿಸಿಯಾಗಿರುತ್ತದೆ. ಈ ಗುಂಪಿಗೆ ಸೇರಿದ ಪದಾರ್ಥಗಳು ಹೆಚ್ಚಾಗಿ ಖಾರ ರುಚಿ ಹೊಂದಿದ್ದು ಸ್ವಲ್ಪ ಭಾಗ ಹುಳಿಯಾಗಿಯೂ ಇರುತ್ತದೆ. ಇವುಗಳನ್ನು ಸೇವಿಸುವುದರಿಂದ ಶರೀರದಲ್ಲಿ ಶಾಖ ಉತ್ಪತ್ತಿಯಾಗುತ್ತದೆ. ಜೀರ್ಣಶಕ್ತಿ ಹೆಚ್ಚಾಗುತ್ತದೆ. ಶರೀರಕ್ಕೆ ಕಾಂತಿ, ದೃಷ್ಟಿ ಮತ್ತು ಬಣ್ಣ ಬರುತ್ತವೆ. ಮೆಣಸು, ಹಸಿರು - ಕೆಂಪು ಮೆಣಸಿನಕಾಯಿ, ಹಿಪ್ಪಲಿ, ಶುಂಠಿ ಮುಂತಾದವು ಈ ಆಹಾರ ಸಮೂಹಕ್ಕೆ ಸೇರುತ್ತವೆ. 4. ವಾಯುವ್ಯ:- ಈ ಗುಂಪಿಗೆ ಗಾಳಿಯ ಗುಣವಿರುವ ಪದಾರ್ಥಗಳನ್ನು ಸೇರಿಸುತ್ತಾರೆ. ಒರಟು, ಒಣಗುವುದು, ಶೀತ, ಸೂಕ್ಷ್ಮ ಮತ್ತು ಸ್ಪಷ್ಟ ಗುಣಗಳನ್ನು ಈ ಗುಂಪಿನ ಪದಾರ್ಥಗಳು ಹೊಂದಿರುತ್ತವೆ. ಹೆಚ್ಚಾಗಿ ಒಗರು ಮತ್ತು ಸ್ವಲ್ಪಮಟ್ಟಿಗೆ ಸಿಹಿ ಗುಣಗಳನ್ನು ಹೊಂದಿರುತ್ತವೆ. ಇವುಗಳ ಸೇವನೆಯಿಂದ ಶರೀರದ ಲಘುತ್ವ, ಒಣಗುವಿಕೆ, ಒರಟುತನ, ಚಲನ, ಶುಚಿತ್ವ ಮತ್ತು ಸ್ವಲ್ಪ ಸುಸ್ತು ಉಂಟಾಗುತ್ತದೆ. ದೇಹದಲ್ಲಿ ಈ ತತ್ವವು ಚರ್ಮ, ಮೂಳೆ, ನರಗಳು ಮತ್ತು ಪಂಚೇಂದ್ರಿಯಗಳಲ್ಲಿ ಇರುತ್ತವೆ. ಕಾಳುಗಳು ಮತ್ತು ಎಲ್ಲ ಹಳದಿ ಬಣ್ಣದ ಕಾಳುಗಳು ಈ ವರ್ಗಕ್ಕೆ ಸೇರಿವೆ ಎಂದು ಹೇಳಲಾಗಿದೆ. 5. ಆಕಾಶೀಯ :- ಇದು ಆಕಾಶ ತತ್ವಕ್ಕೆ ಸೇರಿದ್ದಾಗಿದೆ. ಈ ವರ್ಗಕ್ಕೆ ಸೇರಿದ ಪದಾರ್ಥಗಳು ವಿಶಾಲತೆಯನ್ನು ಪಡೆದಿರುತ್ತವೆ. ಮೃದುತ್ವ, ಲಘುತ್ವ, ಸ್ಪಷ್ಟತೆಯನ್ನು ಹೊಂದಿರುತ್ತವೆ. ಈ ಪದಾರ್ಥಗಳ ಮುಖ್ಯಗುಣ ಶಬ್ದ ಎಂದು ಗ್ರಹಿಸಲಾಗಿದೆ. ಆಕಾಶ ಅಂದರೆ ಅವಕಾಶ, ಶರೀರದಲ್ಲಿಯ ಜೀವಕೋಶಗಳಲ್ಲಿನ ರಂಧ್ರಗಳಲ್ಲಿ ಆಕಾಶ ತತ್ವವಿದೆ. ಎಲ್ಲಾ ಹುರಿದ ಪದಾರ್ಥಗಳು ಈ ಗುಂಪಿಗೆ ಸೇರುತ್ತವೆ. ರಸ ಆಧಾರಿತ ವರ್ಗೀಕರಣ:- ಆಹಾರ ಪದಾರ್ಥಗಳಲ್ಲಿರುವ ರಸಗಳನ್ನು ಆಧಾರವಾಗಿಟ್ಟುಕೊಂಡು ಆಹಾರ ದ್ರವ್ಯಗಳನ್ನು ವರ್ಗೀಕರಿಸಬಹುದಾಗಿದೆ. ಆಹಾರವು ರಸ ಪ್ರಧಾನ. ರಸ ಇಲ್ಲದೆ ಇರುವ ಆಹಾರ ಪದಾರ್ಥ ಇರುವುದಿಲ್ಲ. ಪ್ರತಿಯೊಂದು ಪದಾರ್ಥದಲ್ಲಿಯೂ ಒಂದಿಲ್ಲೊಂದು ಅಥವಾ ಒಂದಕ್ಕಿಂತ ಹೆಚ್ಚು ರಸಗಳು ಇರುತ್ತವೆ. ರಸಗಳು ಪಂಚಮಹಾಭೂತಗಳಿಂದ ಉದ್ಭವವಾಗಿವೆ ಎಂದು ಹೇಳಲಾಗಿದೆ. ಪ್ರತಿಯೊಂದು ರಸವೂ ಎರಡೆರಡು ಭೂತಗಳಿಂದ ಆಗಿರುತ್ತದೆ. ಅವುಗಳ ವಿವರ (ಭೂತಗಳು ಮತ್ತು ರಸಗಳು) ಈ ಕೆಳಗಿನಂತಿವೆ. ಪೃಥ್ವಿ ಮತ್ತು ಜಲ ಮಹಾಭೂತ - ಮಧುರ ರಸ (ಸಿಹಿ) ಪೃಥ್ವಿ ಮತ್ತು ತೇಜ ಮಹಾಭೂತ - ಆಮ್ಲ ರಸ (ಹುಳಿ) ಅಪ್ ಮತ್ತು ತೇಜ ಮಹಾಭೂತ - ಲವಣ ರಸ (ಉಪ್ಪು) ಆಕಾಶ ಮತ್ತು ವಾಯು ಮಹಾಭೂತ - ತಿಕ್ತ ರಸ (ಕಹಿ) ತೇಜ ಮತ್ತು ವಾಯು ಮಹಾಭೂತ - ಕಟು ರಸ (ಖಾರ) ಪೃಥ್ವಿ ಮತ್ತು ವಾಯು ಮಹಾಭೂತ - ಕಷಾಯ (ಒಗರು) ಈ ಎಲ್ಲಾ ರಸಗಳೂ ಮನುಷ್ಯ ಶರೀರದ ಜೀವಕೋಶಗಳ ಪೋಷಣೆಯನ್ನು ಮಾಡುತ್ತವೆ. ಪ್ರತಿಯೊಂದು ರಸವೂ ತನ್ನದೇ ಆದ ಬಿನ್ನ ಕಾರ್ಯವನ್ನು ಮಾಡುತ್ತದೆ. ಒಂದರ ಕಾರ್ಯ ಇನ್ನೊಂದು ರಸ ಮಾಡುವುದಿಲ್ಲ. ಆದ್ದರಿಂದ ಪ್ರತಿಯೊಂದು ರಸ ಸಿಗುವ ಹಾಗೆ ಆಹಾರವನ್ನು ತಯಾರಿಸಿಕೊಳ್ಳಬೇಕು. ಕೆಲವರಿಗೆ ಸಿಹಿ ತುಂಬಾ ಪ್ರೀತಿ. ಇನ್ನೂ ಕೆಲವರಿಗೆ ಖಾರದ ಪದಾರ್ಥಗಳು ಬೇಕು ಅನ್ನಿಸುತ್ತದೆ. ಮತ್ತೆ ಕೆಲವರು ಹುಳಿಯನ್ನು ಅಪೇಕ್ಷೆಪಡುತ್ತಾರೆ. ಆದರೆ ನಮ್ಮ ಶರೀರದಲ್ಲಿನ ಜೀವಕೋಶಗಳಿಗೆ ಉತ್ತಮ ಪೋಷಣೆ ಸಿಗಬೇಕೆಂದರೆ ಸಿಹಿ, ಖಾರ, ಹುಳಿ, ಉಪ್ಪು, ಕಹಿ ಮತ್ತು ಕಷಾಯ ರುಚಿ ಇರುವಂತಹ ಎಲ್ಲಾ ಆಹಾರ ಪದಾರ್ಥಗಳೂ ಬೇಕು. ಅದರಂತೆಯೇ ಪ್ರತಿಯೊಂದು ರಸಕ್ಕೂ ತನ್ನದೇ ಆದಂತಹ ರುಚಿ ಇದೆ. ಹಾಗಾಗಿ ಯಾವ ರಸಕ್ಕೂ ಬೇರಾವ ರಸವೂ ಪರ್ಯಾಯ ಅಲ್ಲ. ಪ್ರತಿಯೊಂದು ರಸವೂ ಮಾಡುವ ಕೆಲಸ, ಜೀವಕೋಶಗಳ ಮೇಲೆ ಬೀರುವ ಪ್ರಭಾವ ಮತ್ತು ರುಚಿ ಬಿನ್ನವಾಗಿಯೇ ಇರುತ್ತದೆ. ಇದನ್ನು ಹಿನ್ನಲೆಯಾಗಿಟ್ಟುಕೊಂಡು ಪ್ರತಿಯೊಂದು ರಸದ ಗುಣವಿಶೇಷಗಳನ್ನು ತಿಳಿದುಕೊಳ್ಳಬೇಕು. ಮಧುರ ರುಚಿ (ಸಿಹಿ) : ಸಿಹಿ ಎಂದಾಕ್ಷಣ ಎಲ್ಲರ ಬಾಯಿಯಲ್ಲೂ ನೀರು ಬರುತ್ತದೆ. ಎಲ್ಲಾ ವಯಸ್ಸಿನವರೂ, ಹಾಗೇನೇ ಸ್ತ್ರೀ ಪುರುಷ ಬೇಧವೆನ್ನದೆ ಸಿಹಿಯನ್ನು ಇಷ್ಟಪಡುತ್ತಾರೆ. ಸಿಹಿಯನ್ನು ತಿಂದರೆ ಎಲ್ಲರಿಗೂ ಸಂತೋಷವಾಗುತ್ತದೆ. ವಿಶೇಷವಾಗಿ ಮಕ್ಕಳು ಸಿಹಿ ತಿನ್ನಲು ಇಚ್ಛಿಸುತ್ತಾರೆ. ಆಸೆ ಹುಟ್ಟಿಸುವಂತಹ ಗುಣ ಮಧುರರಸಕ್ಕಿದೆ. ಈ ರಸದಲ್ಲಿ ಪೃಥ್ವಿ ಮತ್ತು ಆಪ ಮಹಾಭೂತಗಳ ಸಂಯೋಗವಾಗಿರುತ್ತದೆ. ಮಧುರ ರಸ ರಕ್ತ, ಮಾಂಸ, ಮೇಧಸ್ಸು, ಮೂಳೆ, ಶುಕ್ರ (ವೀರ್ಯ), ಆರ್ತವ (ಋತುಸ್ರಾವ) ಹಾಗೂ ಓಜಸ್ಸುಗಳಿಗೆ ಮೂಲಾಧಾರವಾಗಿದೆ. ಈ ರಸದಿಂದ ಮೈಕಾಂತಿ, ಚರ್ಮ, ಕೂದಲು, ಇವುಗಳು ವೃದ್ಧಿಯಾಗುತ್ತವೆ. ಈ ರಸದಿಂದ ವ್ಯಕ್ತಿಗಳು ದಪ್ಪಗಾಗುತ್ತಾರೆ. ಇದು ಜೀವಿತಾವದಿಯನ್ನು ಹೆಚ್ಚಿಸುತ್ತದೆ. ಪಿತ್ತ ಮತ್ತು ವಾತ ದೋಷಗಳನ್ನು ನಿವಾರಿಸುತ್ತದೆ. ಬಾಯಾರಿಕೆಯನ್ನು ಮತ್ತು ತಲೆ ತಿರುಗುವುದನ್ನು ವಾಸಿಮಾಡುತ್ತದೆ. ಸ್ತ್ರೀಯರಲ್ಲಿ ಎದೆಹಾಲನ್ನು ಹೆಚ್ಚಿಸುತ್ತದೆ. ಗಾಯವನ್ನು ಬೇಗ ಗುಣಪಡಿಸುತ್ತದೆ (ಮಧುಮೇಹ ಇರುವವರನ್ನು ಹೊರತು ಪಡಿಸಿ). ಈ ರಸವುಳ್ಳ ಪದಾರ್ಥಗಳನ್ನು ಹೆಚ್ಚು ತಿಂದಲ್ಲಿ ಕಫದ ಸಮಸ್ಯೆ ಜಾಸ್ತಿಯಾಗುತ್ತದೆ. ಸ್ಥೂಲದೇಹ, ಆಲಸ್ಯ, ಮೈಭಾರ, ಜಾಸ್ತಿನಿದ್ದೆ ಮುಂತಾದವುಗಳಿಗೆ ಕಾರಣವಾಗುತ್ತದೆ. ಸಿಹಿ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಿದರೆ ಮೂತ್ರ ಪಿಂಡಗಳ ತೊಂದರೆ, ಅಂಗೈ ಅಂಗಾಲು ಉರಿ, ತಲೆಸುತ್ತು, ಕಣ್ಣಿನ ದೋಷ ಮುಂತಾದವುಗಳು ಕಾಣಿಸುತ್ತವೆ-ಇದ್ದರೆ ಉಲ್ಬಣಗೊಳ್ಳುತ್ತವೆ. ಈ ರಸದ ಅತಿ ಸೇವನೆ ಮಧುಮೇಹಕ್ಕೆ ಕಾರಣವಾಗುತ್ತದೆ. ಸಕ್ಕರೆ, ಸಿಹಿ ತಿಂಡಿಗಳು, ಬೆಲ್ಲ, ಜೇನು, ತುಪ್ಪ, ಬ್ರೇಡ್, ಅಕ್ಕಿ, ಗೋದಿ, ಎಣ್ಣೆ, ಐಸ್ಕ್ರಿಮ್ ಮುಂತಾದವುಗಳಲ್ಲಿ ಮಧುರ ರಸ ಹೆಚ್ಚಾಗಿರುತ್ತದೆ. ಆಮ್ಲ ರಸ [ಹುಳಿ]:- ಅಮ್ಲರಸದಲ್ಲಿ ಪೃಥ್ವಿ ಮತ್ತು ಅಗ್ನಿ ಮಹಾಭೂತಗಳು ಸಂಯೋಜನೆ ಗೊಂಡಿರುತ್ತವೆ. ಆಮ್ಲರಸ ಇರುವ ಪದಾರ್ಥಗಳು ಹುಳಿರುಚಿಯನ್ನು ಕೊಡುತ್ತವೆ. ಇದು ಹಸಿವು ಮತ್ತು ಜೀರ್ಣಕ್ರಿಯಗೆ ಸಹಕಾರಿ. ಇದು ದೇಹಕ್ಕೆ ಶಕ್ತಿಯನ್ನು ಕೊಡುತ್ತದೆ. ಇದು ಶಾಖ ಮತ್ತು ಸೂಕ್ಷ್ಮ ಗುಣಗಳನ್ನು ಹೊಂದಿರುವಂತಹದು. ಈ ರಸವಿರುವ ಆಹಾರದಿಂದ ಪಿತ್ತ ಕಫ ಜಾಸ್ತಿಯಾಗುತ್ತದೆ. ತೃಪ್ತಿ ಉಂಟಾಗುತ್ತದೆ. ವಾತವನ್ನು ನಿಗ್ರಹಿಸುತ್ತದೆ. ದಾಹವನ್ನು ಕಡಿಮೆ ಮಾಡುತ್ತದೆ. ದೇಹದ ಮೇಲಿನ ಗಾಯಗಳು ಬೇಗ ವಾಸಿಯಾಗುತ್ತದೆ. ಧಾತುಗಳಿಗೆ ಶಕ್ತಿ ವರ್ಧಕ. ಇದರ ರಸದಿಂದ ಗಂಟಲಿನಲ್ಲಿನ ಕಫದ ಸಾಂಧ್ರತೆ ಕಡಿಮೆಯಗುತ್ತದೆ. ಶರೀರ ಸಡಿಲಗೊಳ್ಳತ್ತದೆ. ಸ್ಥೂಲ ದೇಹಿಗಳು ಈ ರಸವನ್ನು ಹೆಚ್ಚಾಗಿ ಸೇವಿಸಿದರೆ ಸ್ಥೂಲ ಶರೀರ ಕಡಿಮೆಯಾಗಿ ಕೃಶವಾಗುತ್ತಾರೆ. ದುರ್ಬಲರು, ಶಕ್ತಿಹೀನರು ಈ ರಸವನ್ನು ಸೇವಿಸಿದರೆ ಮೈಯಲ್ಲಿ ಊತ ಉಂಟಾಗಬಹುದು. ಇದು ಜೀವಕೋಶಗಳಿಗೆ ಶಕ್ತಿ ನೀಡಿ, ರೋಗ ನಿರೊಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಆದರೆ ಇದು ಜಾಸ್ತಿಯಾದರೆ ಎದೆ ಉರಿತ ಉಂಟಾಗುತ್ತದೆ. ಆಮ್ಲರಸದಲ್ಲಿ ಸಿ ಜೀವಸತ್ವ ಇದೆ. ನಿಂಬೆಹಣ್ಣು, ಹುಣುಸೇಹಣ್ಣು, ನೆಲ್ಲಿಕಾಯಿ, ದಾಳಿಂಬೆ, ಕಿತ್ತಳೆ, ಮಾವಿನಕಾಯಿ ಮುಂತಾದ ಪದಾರ್ಥಗಳಲ್ಲಿ ಸಿ ಜೀವಸತ್ವ ಹೇರಳವಾಗಿ ಸಿಗುತ್ತದೆ. ಉವಣ ರಸ [ಉಪ್ಪು]:- ಉವಣ ರಸ ಎಂದರೆ ಉಪ್ಪು ರುಚಿ. ಇದು ಅಗ್ನಿ ಮತ್ತು ಆಪ್ ಮಹಾಭೂತಗಳಿಂದ ಕೂಡಿದ್ದಾಗಿದೆ. ತಾಯಿಗಿಂತ ಬಂಧುವಿಲ್ಲ, ಉಪ್ಪಿಗಿಂತ ರುಚಿಯಿಲ್ಲ ಎಂಬ ನಾನ್ನುಡಿಯೇ ಇದೆ. ಇದು ಹೆಚ್ಚಿನ ಆಹಾರ ಪದಾರ್ಥಗಳಿಗೆ ರುಚಿಯನ್ನು ಒದಗಿಸುತ್ತದೆ. ಉಪ್ಪು ನೀರಿನ ದಾಹವನ್ನು ಹೆಚ್ಚಿಸುತ್ತದೆ. ಉಪ್ಪುತಿಂದವ ನೀರು ಕುಡಿಯಲೇಬೇಕು ಎಂದು ಗಾದೆ ಮಾತಿದೆ. ಇದು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ಮೈಯನ್ನು ಬೆವರಿಸುತ್ತದೆ. ಇದಕ್ಕೆ ಕಫವನ್ನು ನಿವಾರಿಸುವ ಶಕ್ತಿ ಇದೆ. ಇದು ಹಸಿವನ್ನು ಉಂಟುಮಾಡುತ್ತದೆ. ಪಿತ್ತವನ್ನು ಹೆಚ್ಚಿಸುತ್ತದೆ. ಇದು ಸ್ವಲ್ಪ ಹೆಚ್ಚಾದರೂ ಇತರ ರುಚಿಗಳನ್ನು ಮಂಕುಗೊಳಿಸುತ್ತದೆ. ಉಪ್ಪನ್ನು ಹೆಚ್ಚಾಗಿ ಸೇವಿಸಿದರೆ ಪಿತ್ತ ಜಾಸ್ತಿಯಾಗುತ್ತದೆ. ರಕ್ತ ವಿಕಾರಗೊಳ್ಳುತ್ತದೆ. ಬಾಯಾರಿಕೆ ಜಾಸ್ತಿಯಾಗುತ್ತದೆ. ತಲೆ ಸುತ್ತುತ್ತದೆ. ತಲೆಸುತ್ತು, ಕುಷ್ಟರೋಗ, ರಕ್ತದೊತ್ತಡ, ಇಸುಬು ಮುಂತಾದವುಗಳನ್ನು ಹೆಚ್ಚಿಸುತ್ತದೆ. ಹಲ್ಲುಗಳು ಬೇಗ ಶಿಥಿಲಗೊಳ್ಳುತ್ತವೆ. ಪುರುಷತ್ವ ಕಡಿಮೆಯಾಗುತ್ತದೆ. ಚರ್ಮದ ಸುಕ್ಕು, ಬಿಳಿಕೂದಲು ಮುಂತಾದವುಗಳಿಗೆ ಕಾರಣವಾಗುತ್ತದೆ. ಸೈಂಧವ ಲವಣ, ಉಪ್ಪು, ಸೀಸ ಮುಂತಾದ ಪದಾರ್ಥಗಳು ಲವಣರಸವನ್ನು ಹೊಂದಿರುತ್ತವೆ. ಅಧಿಕ ರಕ್ತದೊತ್ತಡ ಇರುವವರು ಈ ರಸವನ್ನು ಕಡಿಮೆ ಬಳಸುವುದು ಒಳಿತು. ಕಟುರಸ [ಖಾರ]:- ಕಟುರಸ ಖಾರದ ರುಚಿಯನ್ನು ಕೊಡುತ್ತದೆ. ಇದು ಅಗ್ನಿ ಮತ್ತು ವಾಯು ಮಹಾಭೂತಗಳ ಸಂಯೋಜನೆಯಾಗಿರುತ್ತದೆ. ಇದು ನಾಲಿಗೆಯನ್ನು ಕೆರಳಿಸುತ್ತದೆ. ಇದರ ಸೇವನೆಯಿಂದ ದೇಹದಲ್ಲಿ ಶಾಖ ಮತ್ತು ಸೂಕ್ಷ್ಮಗುಣಗಳು ಅನುಭವವಾಗುತ್ತವೆ. ಖಾರ ಆಹಾರಕ್ಕೆ ರುಚಿಯನ್ನು ಒದಗಿಸುತ್ತದೆ. ಈ ರಸದಿಂದ ಹಸಿವು ಜಾಸ್ತಿಯಾಗುತ್ತದೆ. ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ಶಕ್ತಿಯನ್ನು ಒದಗಿಸುತ್ತದೆ. ಈ ರಸ ಜೀರ್ಣಕ್ರಿಯೆಗೆ ಸಹಕಾರಿ. ಖಾರದ ಪದಾರ್ಥಗಳು ತೃಪ್ತಿಯ ಭಾವವನ್ನು ನೀಡುತ್ತವೆ. ವಾತವನ್ನು ಕಡಿಮೆ ಮಾಡುತ್ತದೆ. ಆದರೆ ಪಿತ್ತ, ಕಫಗಳನ್ನು ಹೆಚ್ಚಿಸುತ್ತದೆ. ಈ ರಸದ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಿದರೆ ಬಾಯಾರಿಕೆ, ಹೊಟ್ಟೆಯಲ್ಲಿ ಉರಿತ, ಹಲ್ಲುಗಳ ಉರಿ ಮುಂತಾದವುಗಳು ಉಂಟಾಗುತ್ತವೆ. ರಕ್ತ ದೋಷಗಳ ವಿಕಾರತೆ, ಶರೀರದ ಸಡಿಲತೆ, ಕೃಶತೆ ಮುಂತಾದವುಗಳಿಗೆ ಎಡೆಮಾಡಿಕೊಡತ್ತದೆ. ಶಕ್ತಿಹೀನರು ಹಾಗೂ ದುರ್ಬಲರು ಈ ರಸವನ್ನು ಹಿಚ್ಚಾಗಿ ಸೇವಿಸಿದರೆ ಮೈಊತ ಕಂಡುಬರುತ್ತದೆ. ಗಂಟಲು, ಎದೆ ಮತ್ತು ಹೊಟ್ಟೆಗಳಲ್ಲಿ [ಜೀರ್ಣಾಂಗ ವ್ಯವಸ್ಥೆಯಲ್ಲಿ] ಉರಿಯನ್ನುಂಟುಮಾಡುತ್ತದೆ. ಮೆಣಸು, ಹಸಿರು-ಕೆಂಪು ಮೆಣಸಿನಕಾಯಿ, ಶುಂಠಿ ಮುಂತಾದ ಪದಾರ್ಥಗಳಲ್ಲಿ ಈ ರಸವು ಯಥೇಚ್ಚವಾಗಿ ಸಿಗುತ್ತದೆ. ತಿಕ್ತ ರಸ [ಕಹಿ]:- ತಿಕ್ತರಸ ಕಹಿ ರುಚಿ ಇರುವಂತಹದು. ಇದು ಆಕಾಶ ಮತ್ತು ವಾಯು ಮಹಾಭೂತಗಳಿಂದ ಕೂಡಿರುವಂತಹದು. ಇದು ತಾನಾಗಿಯೇ ರುಚಿಕರ ಪದಾರ್ಥವಲ್ಲ. ಆದರೆ ಇದರ ಮಿಶ್ರಣದಿಂದ ಬೇರೆ ಆಹಾರ ರುಚಿಕರವಾಗುತ್ತದೆ. ಈ ರುಚಿ ನಾಲಿಗೆ ಮೇಲೆ ಬಿದ್ದರೆ, ಬೇರೆ ರುಚಿಗಳ ಮೇಲೆ ಬಿದ್ದರೆ ಬೇರೆ ರುಚಿಗಳ ಅನುಭವ ಗೊತ್ತಾಗುವುದಿಲ್ಲ. ಶೀತ, ಲಘು ಮತ್ತು ಸೂಕ್ಷ್ಮತ್ವ ಈ ರಸದ ಗುಣಗಳು. ಇದು ಕರುಳಿನ ರೋಗ ಕ್ರಿಮಿಗಳನ್ನು ಹೊರ ಹಾಕುವುದೆಂದು ಹೇಳಲಾಗಿದೆ. ಇದು ತಲೆಸುತ್ತನ್ನು ನಿವಾರಿಸುತ್ತದೆ. ಬಾಯಾರಿಕೆಯನ್ನು ತಡೆಗಟ್ಟುತ್ತದೆ. ಚರ್ಮರೋಗಗಳನ್ನು ನಿವಾರಿಸುತ್ತದೆ. ಜೀರ್ಣಕ್ಕೆ ಹಿತಕಾರಿ. ಎದೆ ಹಾಲನ್ನು, ದೂಷಿತ ರಕ್ತವನ್ನು ಶುದ್ಧಿಗೊಳಿಸುತ್ತದೆ. ಬುದ್ಧಿಯನ್ನು ಚುರುಕುಗೊಳಿಸುತ್ತದೆ. ಬಾಯಿಯನ್ನು ಸ್ವಚ್ಛಗೊಳಿಸುತ್ತದೆ. ಇದರಿಂದ ಕಫ ನಿವಾರಣೆಯಾಗುತ್ತದೆ. ಇದನ್ನು ಹೆಚ್ಚಾಗಿ ಬಳಸಿದಲ್ಲಿ ಧಾತುಗಳನ್ನು ಒಣಗಿಸುತ್ತದೆ. ಶಕ್ತಿಯನ್ನು ಕಡಿಮೆ ಮಾಡುತ್ತದೆ. ಮಾನಸಿಕ ಅಸಮತೋಲನ, ವಾತ, ವಿಕಾರಗಳನ್ನು ಉಂಟುಮಾಡುತ್ತದೆ. ಹಾಗಲಕಾಯಿ, ಬೇವು, ಪಡುವಲ, ಅರಿಷಿಣ ಮುಂತಾದ ಪದಾರ್ಥಗಳಲ್ಲಿ ತಿಕ್ತರಸ ಹೆಚ್ಚು. ಕಷಾಯ ರಸ (ಒಗರು):- ಇದು ಒಗರು ರುಚಿ ಇರುವಂತಹದು. ಇದರಲ್ಲಿ ಪೃಥ್ವಿ ಮತ್ತು ವಾಯು ಮಹಾಭೂತಗಳು ಸಂಯೋಗಗೊಂಡಿವೆ. ಇದು ನಾಲಿಗೆಯ ಸಂಪರ್ಕಕ್ಕೆ ಬಂದರೆ ನಾಲಿಗೆ ಚಲಿಸದೆ ಸ್ಥಿರಗೊಂಡ ಅನುಭವವಾಗುತ್ತದೆ. ಇದು ಮಲಬದ್ಧತೆಯನ್ನು ಉಂಟುಮಾಡುತ್ತದೆ. ನಿದ್ರೆಯನ್ನು ಬರಿಸುತ್ತದೆ. ಧಾತುಗಳ ದ್ರವಾಂಶವನ್ನು ಹೀರುತ್ತದೆ. ಇದರ ಹೆಚ್ಚಿನ ಬಳಕೆ ಬಾಯಿಯನ್ನು ಒಣಗಿಸುತ್ತದೆ. ನೀರಿನ ದಾಹ ಉಂಟಾಗುತ್ತದೆ. ಹೃದಯ ಬೇನೆಯನ್ನು ಹೆಚ್ಚಿಸುತ್ತದೆ. ಸ್ವರ ಕುಗ್ಗುತ್ತದೆ. ಚಲನೆಯನ್ನು ಕುಗ್ಗಿಸುತ್ತದೆ. ಚರ್ಮದ ಕಪ್ಪನ್ನು ಹೆಚ್ಚಿಸುತ್ತದೆ. ಲೈಂಗಿಕ ಬಲಹೀನತೆಯನ್ನು ಉಂಟುಮಾಡುತ್ತದೆ. ಮಾಂಸಖಂಡಗಳ ಸಂಕೋಚ, ಮುಖದ ಪಾಶ್ರ್ವವಾಯು ಉಂಟಾಗುತ್ತದೆ. ಖರ್ಜೂರ, ಬೇಲದ ಹಣ್ಣು ಮುಂತಾದವು ಒಗರುರಸ ಪ್ರಧಾನ ಆಹಾರ ಪದಾರ್ಥಗಳು. ಪ್ರತಿಯೊಂದು ರಸಕ್ಕೂ ತನ್ನದೇ ಆದ ಒಂದು ರುಚಿಯಿದೆ. ಅದನ್ನು ಸೇವಿಸಿದಾಗ ಆಗುವ ಅನುಕೂಲಗಳಿವೆ. ಹೆಚ್ಚಾಗಿ ಸೇವಿಸಿದಾಗ ಉಂಟಾಗುವ ತೊಂದರೆಗಳಿವೆ. ಪ್ರತಿಯೊಂದು ರಸಕ್ಕೂ ತನ್ನದೇ ಆದ ಗುಣಗಳಿವೆ ಹಾಗೂ ದೋಷಗಳಿವೆ. ಆರೋಗ್ಯವಂತ ವ್ಯಕ್ತಿಗೆ ತನ್ನ ಆರೋಗ್ಯವನ್ನು ಕಾಪಾಡಿಕೊಳ್ಳಲು ಈ ಆರೂ ರಸಗಳೂ ಬೇಕು. ಒಂದೇ ರಸ ಮನುಷ್ಯನಿಗೆ ಬೇಕಾದ ಪೋಷಕಾಂಶಗಳನ್ನು ಒದಗಿಸುವುದಿಲ್ಲ. ಹಾಗಾಗಿ ಎಲ್ಲಾ ರಸಗಳನ್ನು ಒದಗಿಸುವಂತಹ ಆಹಾರ ಪದಾರ್ಥಗಳನ್ನು ತಯಾರಿಸಿಕೊಂಡು ಸೇವಿಸಬೇಕು. ದಕ್ಷಿಣ ಭಾರತದಲ್ಲಿ ಈ ಆರೂ ರಸಗಳುಳ್ಳ ಆಹಾರ ಪದಾರ್ಥಗಳನ್ನು ತಯಾರು ಮಾಡಿಕೊಂಡು ಉಣ್ಣುವುದನ್ನು ರೂಡಿಸಿಕೊಂಡಿದ್ದಾರೆ. ಗೊಜ್ಜು, ಹುಳಿ, ಸಾರು, ಪಲ್ಯ, ಚಟ್ನಿ ಅನ್ನ, ರೊಟ್ಟಿ, ಮುದ್ದೆ, ಚಪಾತಿ, ಪಾಯಸ, ಮಜ್ಜಿಗೆ ಮುಂತಾದವುಗಳು ಇರುವಂತಹ ಊಟ, ಈ ಆರೂ ರಸಗಳನ್ನು ಒದಗಿಸುವಂತಹ ಒಂದು ಊಟದ ಮಾದರಿ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನ ಒಂದಿಲ್ಲೊಂದು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಅಂತಹವರು ತಮ್ಮಲ್ಲಿ ಯಾವರಸ ಕಡಿಮೆ ಇದೆ - ಇಲ್ಲವೆ ಯಾವರಸ ಹೆಚ್ಚಿದೆ ಎಂದು ತಿಳಿದುಕೊಂಡು ಆ ಪರಿಸ್ಥಿತಿಗೆ ಹೊಂದಿಕೊಳ್ಳುವಂತೆ ಆಹಾರ ಪದಾರ್ಥಗಳನ್ನು ತಯಾರಿಸಿಕೊಂಡು ಊಟಮಾಡಬೇಕು. ಗುಣ ಆಧಾರಿತ ಆಹಾರದ ವರ್ಗೀಕರಣ:- ನಾವು ತಿನ್ನುವ ಪ್ರತಿಯೊಂದು ಆಹಾರ ಪದಾರ್ಥಕ್ಕೂ ತನ್ನದೇ ಆದ ಗುಣ ಇರುತ್ತದೆ. ಕೆಲವೊಂದು ಆಹಾರ ಪದಾರ್ಥಗಳನ್ನು ಸೇವಿಸಿದರೆ ತೂಕ ಜಾಸ್ತಿಯಾಗುತ್ತದೆ. ಆದರೆ ಮತ್ತೆ ಕೆಲವು ಪದಾರ್ಥಗಳನ್ನು ತಿಂದರೆ ದೇಹ ತೆಳ್ಳಗಾಗುತ್ತದೆ. ಕೆಲವು ಆಹಾರ ಶೀತ ಪ್ರಕೃತಿಯನ್ನು ಉಂಟು ಮಾಡುತ್ತದೆ. ಮತ್ತೆ ಕೆಲವು ಉಷ್ಣ ಪ್ರಕೃತಿಯನ್ನು. ಕೆಲವು ಪದಾರ್ಥಗಳು ಗಟ್ಟಿ. ಇನ್ನೂ ಕೆಲವು ದ್ರವರೂಪಿ. ಆಹಾರ ಪದಾರ್ಥಗಳ ರೂಪ, ರಸ, ಗುಣ, ಪ್ರಭಾವ ಮುಂತಾದ ಅಂಶಗಳು ಈ ಕೆಳಗಿನಂತಿವೆ .
ನಮ್ಮ ಶರೀರದ ಪ್ರಮಾಣ ಎಂತಹದು, ದೇಹಪ್ರಕೃತಿ ಯಾವುದು, ನಮ್ಮ ಸ್ವಭಾವ ಎಂತಹದು, ಮುಂತಾದ ಅಂಶಗಳನ್ನು ತಜ್ಞರಿಂದ ಸರಿಯಾಗಿ ತಿಳಿದುಕೊಂಡು, ನಮ್ಮ ದೇಹಕ್ಕೆ, ಪ್ರಕೃತಿಗೆ, ಸ್ವಭಾವಕ್ಕೆ ಹೊಂದುವಂತಹ ಆಹಾರ ಪದಾರ್ಥಗಳನ್ನು ಆರಿಸಿಕೊಂಡು ಸೇವಿಸಬೇಕು.14 ರಾಸಾಯನಿಕ ಸಂಯೋಜನೆ ಮತ್ತು ಆಹಾರ ಮಾಡುವ ಕೆಲಸವನ್ನು ಆಧರಿಸಿ ಆಹಾರ ಪದಾರ್ಥಗಳ ವರ್ಗೀಕರಣ. ನಾವು ಅನೇಕ ಉದ್ದೇಶಗಳಿಗಾಗಿ ಆಹಾರವನ್ನು ಸೇವಿಸುತ್ತೇವೆ. ನಮಗೆ ಹಸಿವೆಯಾಗುತ್ತದೆ. ಅದಕ್ಕಾಗಿ ಊಟ ಮಾಡುತ್ತೇವೆ. ನಾವು ಊಟ ಮಾಡುವುದು ಹೊಟ್ಟೆ ತುಂಬಲು, ಶಕ್ತಿಬರಲು ಎಂದಷ್ಟೇ ಹೇಳಿದರೆ ಸಾಲದು. ನಾವು ನಮ್ಮ ದೇಹದ ಎಲ್ಲಾ ತರಹದ ಅವಶ್ಯಕತೆಗಳಿಗೆ ತಕ್ಕಂತೆ ಆಹಾರವನ್ನು ಸೇವಿಸಬೇಕು. ನಮ್ಮ ದೇಹದಲ್ಲಿ ಕೋಟಿ ಕೋಟಿ ಜೀವಕೋಶಗಳಲ್ಲಿ ಕೆಲವು ಅನೇಕ ಕಾರಣಗಳಿಗಾಗಿ ಕ್ಷಣ ಕ್ಷಣಕ್ಕೂ ಸಾಯುತ್ತಿರುತ್ತವೆ, ಅಂತೆಯೇ ಆ ಸ್ಥಾನದಲ್ಲಿ ಬೇರೆ ಜೀವಕೋಶಗಳು ಹುಟ್ಟುತ್ತಿರುತ್ತವೆ, ಬೆಳೆಯುತ್ತಿರುತ್ತವೆ. ಈ ಕ್ರಿಯೆ ನಿರಂತರವಾಗಿ ನಡೆಯುತ್ತಿರುತ್ತದೆ. ಈ ರೀತಿಯ ಬೆಳವಣಿಗೆಯನ್ನು ಕಾಣಬೇಕು. ಇದರ ಜೊತೆಗೆ ನಮಗೆ ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ನಮಗೆ ಶಕ್ತಿಬೇಕು. ನಮ್ಮ ದೇಹದ ಅಂಗಗಳು ದಿನಕಳೆದಂತೆ ಸವೆಯಬಾರದು. ಹಾಗೆ ಸವೆತರೆ ಹಾಗೆ ಸವೆದ ಭಾಗಗಳು ಸರಿಹೋಗಬೇಕು. ಇವೆಲ್ಲವುಗಳ ಜೊತೆಗೆ ನಮ್ಮನ್ನು ರೋಗಗಳಿಂದ ರಕ್ಷಿಸಿಕೊಳ್ಳಬೇಕು. ಈ ಎಲ್ಲಾ ಉದ್ದೇಶಗಳಿಗಾಗಿ ನಾವು ಆಹಾರವನ್ನು ಸೇವಿಸುತ್ತೇವೆ. ನಾವು ಪ್ರತಿನಿತ್ಯ ತಿನ್ನುವ ಆಹಾರ ಪದಾರ್ಥಗಳಲ್ಲಿ ಈ ಎಲ್ಲಾ ಪೋಷಕಾಂಶಗಳು ಇರುವುದಿಲ್ಲ. ಕೆಲವು ಪದಾರ್ಥಗಳಲ್ಲಿ ಕೆಲವು ಅಂಶಗಳು ಇರಬಹುದು, ಇನ್ನು ಕೆಲವು ಅಂಶಗಳು ಇಲ್ಲದಿರಬಹುದು ಅಥವಾ ಕಡಿಮೆ ಇರಬಹುದು. ಕೆಲವು ಆಹಾರ ಪದಾರ್ಥಗಳು (ಕರಿದ ತಿಂಡಿಗಳು, ಉಪ್ಪಿನಕಾಯಿ, ತೊಕ್ಕು, ಇತರೆ) ರುಚಿಯಾಗಿರಬಹುದು, ಆದರೆ ಅಂತಹ ಆಹಾರ ಪದಾರ್ಥಗಳಲ್ಲಿ ತೊಂದರೆ ಕೊಡುವ ಅಂಶಗಳೇ ಹೆಚ್ಚಾಗಿರುತ್ತವೆ. ತುಂಬಾ ರುಚಿಯಾಗಿದೆ ಎಂದು ತಿಂದರೆ ಅನಾರೋಗ್ಯ ಕಟ್ಟಿಟ್ಟ ಬುತ್ತಿ. ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನಾವು ಆಹಾರ ಪದಾರ್ಥಗಳನ್ನು ಸೇವಿಸಬೇಕು. ಹಾಗಾದರೆ ನಮ್ಮ ಉತ್ತಮ ಆರೋಗ್ಯಕ್ಕೆ ಬೇಕಾಗಿರುವ ಪೋಷಕಾಂಶಗಳನ್ನು ಒದಗಿಸುವ ಆಹಾರ ಪದಾರ್ಥಗಳು ಯಾವುವು ಮತ್ತು ಅವುಗಳನ್ನು ಎಷ್ಟು ವಿಭಾಗಗಳಾಗಿ ವಿಂಗಡಿಸಬಹುದು ಎಂಬ ಪ್ರಶ್ನೆಗೆ ಉತ್ತರ ಕೊಡಬೇಕಾಗುತ್ತದೆ. ನಮ್ಮ ಆರೋಗ್ಯ ಪೂರ್ಣ ಶರೀರಕ್ಕೆ ಮುಖ್ಯವಾಗಿ ಬೇಕಾಗುವ ಪೋಷಕಾಂಶಗಳನ್ನು ಸಾರಜನಕ, ಶರ್ಕರ ಪಿಷ್ಟ, ಮೇದಸ್ಸು, ಜೀವಸತ್ವಗಳು, ಖನಿಜಗಳು ಮತ್ತು ನೀರು ಎಂದು ವಿಂಗಡಿಸಬಹುದು. ಈ ಪೋಷಕಾಂಶಗಳು ಮಾಡುವ ಕೆಲಸದ ಆಧಾರದ ಮೇಲೆ ರಚನಾತ್ಮಕ (ದೇಹದ ರಚನೆಗೆ ಸಹಾಯವಾಗುವಂತಹವು), ಶಕ್ತಿದಾಯಕ (ಶಕ್ತಿಯನ್ನು ಕೊಡುವಂತಹವು) ಮತ್ತು ರಕ್ಷಣಾತ್ಮಕ (ರೋಗ ರುಜಿನ ಇತ್ಯಾದಿಗಳಿಂದ ರಕ್ಷಣೆಯನ್ನು ಒದಗಿಸುವಂತಹವು) ಆಹಾರ ದ್ರವ್ಯಗಳು ಎಂದು ಮುಖ್ಯವಾಗಿ ಮೂರು ಗುಂಪುಗಳಲ್ಲಿ ವಿಂಗಡಿಸಬಹುದು. ಕೆಲವು ಆಧಾರ ಪದಾರ್ಥಗಳು ರಚನಾತ್ಮಕ ಮಾತ್ರವಲ್ಲದೆ ಶಕ್ತಿದಾಯಕವೂ ಆಗಿರುತ್ತವೆ. ಈ ರೀತಿ ಕೆಲವು ಆಹಾರ ದ್ರವ್ಯಗಳು ಒಂದಕ್ಕಿಂತ ಹೆಚ್ಚು ಕೆಲಸವನ್ನು ಮಾಡುತ್ತವೆ. ಇಷ್ಟನ್ನು ಹಿನ್ನಲೆಯಾಗಿಟ್ಟುಕೊಂಡು ಈಗ ವಿವರಗಳನ್ನು ನೋಡೋಣ. ರಚನಾತ್ಮಕ:- ನಮ್ಮ ಶರೀರ ಅಸಂಖ್ಯ ಜೀವಕೋಶಗಳಿಂದ ಕೂಡಿದೆ. ಈ ಜೀವಕೋಶಗಳ ಅಸ್ತಿತ್ವಕ್ಕೆ ಸಾರಜನಕ (ಪ್ರೋಟಿನ್) ಅವಶ್ಯ, ನಮ್ಮ ಶರೀರದಲ್ಲಿ ಎಲುಬು, ಹಲ್ಲು, ಚರ್ಮ, ಕೂದಲು, ಉಗುರು, ರಕ್ತ, ಮಾಂಸಖಂಡ, ಅವುಗಳು ಸಾರಜನಕದಿಂದ ಕೂಡಿದ್ದಾಗಿವೆ. ಜೀವಿಗಳು ಅಂಗ ಮತ್ತು ಅಂಗರಚನಾ ಸಾಮಗ್ರಿಯಲ್ಲಿರುವ ಜೈವಿಕ ಸಂಯುಕ್ತ ಪದಾರ್ಥಕ್ಕೆ ಸಾರಜನಕ ಎಂದು ಕರೆಯುತ್ತಾರೆ. ನಮ್ಮ ದೇಹದ ಬೆಳವಣಿಗೆಗೆ ಬೇಕಾಗಿರುವ ಅತಿ ಅವಶ್ಯವಾದ ಅಂಶವೆಂದರೆ ಪ್ರೋಟಿನು. ಈ ಪ್ರೋಟಿನುಗಳು ಅಮೈನೋ ಆಮ್ಲ ಎನ್ನುವ ಒಂದು ದ್ರವದಿಂದ ರಚಿತವಾಗಿವೆ. ಹಾಗಾಗಿ ಈ ಅಮೈನೋ ಆಮ್ಲದ ಪೂರೈಕೆಗೆ ನಾವು ಆಹಾರ ಸೇವಿಸಬೇಕಾಗುತ್ತದೆ. ಉತ್ತಮವಾದ ಪ್ರೋಟೀನು ಒದಗಬಹುದಾದ ಆಹಾರ ಪದಾರ್ಥಗಳೆಂದರೆ ಹಾಲು, ಎಣ್ಣೆಕಾಳು, ಗೋದಿ, ಇತ್ಯಾದಿ. ಇವುಗಳ ಜೊತೆಗೆ ಅಕ್ಕಿ, ಜೋಳ, ರಾಗಿ, ಬೇಳೆಕಾಳು ಬೀಜಗಳಲ್ಲಿಯೂ ತುಂಬಾ ಹೆಚ್ಚಲ್ಲದಿದ್ದರೂ, ಅವಶ್ಯವಿರುವಷ್ಟು ಪ್ರೋಟಿನು ಇರುತ್ತದೆ. ಮೊಟ್ಟೆ ಮತ್ತು ಮಾಂಸಗಳಲ್ಲಿಯೂ ಪ್ರೋಟೀನಿನ ಅಂಶಗಳು ಹೆಚ್ಚಾಗಿರುತ್ತವೆ. ಆದರೆ ಇವುಗಳಲ್ಲಿ ತಾಮಸ ಗುಣ ಹೆಚ್ಚಾಗಿ ಇರುವುದರಿಂದ ನಾವು ಶಾಖಾಹಾರವನ್ನೇ ಅವಲಂಬಿಸುವುದು ಒಳಿತು. ಇದರ ಜೊತೆಗೆ ಪ್ರೋಟೀನಿನಿಂದ ಶಕ್ತಿಯೂ ಬರುತ್ತದೆ. ಶಕ್ತಿದಾಯಕ:- ನಮ್ಮ ದೇಹಕ್ಕೆ ಶಕ್ತಿ ಅತಿ ಅವಶ್ಯ. ನಮ್ಮ ದೈನಂದಿನ ಎಲ್ಲಾ ಚಟುವಟಿಕೆಗಳಿಗೂ ಶಕ್ತಿ ಬೇಕು. ನಮ್ಮ ದೇಹದಲ್ಲಿ ಎರಡು ತರಹದ ಚಟುವಟಿಕೆಗಳು ನಡೆಯುತ್ತವೆ. ಒಂದು, ನಮ್ಮ ಗಮನಕ್ಕೆ ಹೆಚ್ಚಾಗಿ ಬರುವಂತಹ ಚಟುವಟಿಕೆಗಳು. ಕೆಲಸ ಮಾಡುವುದು, ನಡೆದಾಡುವುದು, ಸೈಕಲ್ಲು ತುಳಿಯುವುದು, ತಿನ್ನುವುದು, ಓದುವುದು, ಬರೆಯುವುದು, ಆಟವಾಡುವುದು, ಪಾಠ ಮಾಡುವುದು ಇತ್ಯಾದಿಗಳನ್ನು ಈ ಗುಂಪಿಗೆ ಸೇರಿಸಬಹುದು. ಇನ್ನೊಂದು ತರಹದ ಚಟುವಟಿಕೆಗಳು ನಮ್ಮ ದೇಹದಲ್ಲಿ ನಡೆಯುತ್ತಿದ್ದರೂ, ಹೆಚ್ಚಾಗಿ ನಮ್ಮ ಗಮನಕ್ಕೆ ಬರುವುದಿಲ್ಲ. ನಾವು ಶ್ವಾಸಕೋಶಗಳಿಂದ ಉಸಿರಾಡುತ್ತೇವೆ. ತಿಂದ ಆಹಾರವನ್ನು ಜೀರ್ಣಿಸಿಕೊಳ್ಳುತ್ತೇವೆ. ನಮ್ಮ ಮೆದುಳನ್ನು ನಮ್ಮ ಎಲ್ಲಾ ಚಟುವಟಿಕೆಗಳಿಗೆ ಉಪಯೋಗಿಸುತ್ತೇವೆ. ನಮ್ಮ ಹೃದಯ ನಮ್ಮ ದೇಹದ ಎಲ್ಲಾ ಭಾಗಗಳಿಗೂ ಶುದ್ಧ ರಕ್ತವನ್ನು ಸರಬರಾಜು ಮಾಡುತ್ತದೆ. ಅಶುದ್ಧ ರಕ್ತವನ್ನು ಎಲ್ಲಾ ಕಡೆಯಿಂದಲೂ ತರಿಸುತ್ತದೆ ಮತ್ತು ಶ್ವಾಸ ಕೋಶಗಳಲ್ಲಿ ಅದು ಶುದ್ಧೀಕರಿಸಲ್ಪಡುತ್ತದೆ. ಮೂತ್ರಕೋಶಗಳು ದೇಹಕ್ಕೆ ಬೇಡವಾದ ತ್ಯಾಜ್ಯವನ್ನು ಹೊರಹಾಕುತ್ತವೆ. ಮಾಂಸಖಂಡಗಳು ತಮ್ಮ ಕೆಲಸವನ್ನು ಮಾಡುತ್ತವೆ. ಹೀಗೆ ಶರೀರದ ಎಲ್ಲಾ ಅಂಗಗಳು ತಮ್ಮ ತಮ್ಮ ಕೆಲಸವನ್ನು ಮಾಡುತ್ತವೆ. ಆದರೂ ಅದು ನಮ್ಮ ಗಮನಕ್ಕೆ ಬರುವುದಿಲ್ಲ. ಈ ಎಲ್ಲಾ ಅವಯವಗಳು ತಮ್ಮ ಕೆಲಸವನ್ನು ಮಾಡಲು ಶಕ್ತಿ ಬೇಕು. ಈ ಶಕ್ತಿ ನಮಗೆ ಆಹಾರದಿಂದ ಬರುತ್ತದೆ. ನಮಗೆ ಮುಖ್ಯವಾಗಿ ಶಕ್ತಿಯನ್ನು ಒದಗಿಸುವ ಪೋಷಕಾಂಶಗಳೆಂದರೆ ಶರ್ಕರ ಪಿಷ್ಟ / ಕಾರ್ಬೋಹೈಡ್ರೇಟ್ ಮತ್ತು ಮೇಧಸ್ಸು. ಪ್ರೋಟೀನುಗಳಿಂದ ನಮಗೆ ಶಕ್ತಿ ಬರುತ್ತದೆ. ನಿಜ, ಆದರೆ ಪ್ರೋಟೀನುಗಳಿಗೆ ಶರೀರದ ರಚನೆ / ಬೆಳವಣಿಗೆಯ ಕೆಲಸವನ್ನೂ ಮಾಡುತ್ತವೆ. ಅದಕ್ಕಾಗಿ ನಾವು ನಮಗೆ ಬೇಕಾದ ಶಕ್ತಿಯನ್ನು ಪಡೆಯಲು ಹೆಚ್ಚಾಗಿ ಪ್ರೋಟೀನನ್ನು ಅವಲಂಬಿಸದೆ, ಇತರೆ ಶಕ್ತಿದಾಯಕವಾದ ಆಹಾರಾಂಶಗಳನ್ನು (ಶರ್ಕರ ಪಿಷ್ಟ ಮತ್ತು ಮೇಧಸ್ಸು) ಒದಗಿಸುವ ಆಹಾರವನ್ನು ಸೇವಿಸಬೇಕು. ನಾವು ಸೇವಿಸಿದ ಆಹಾರ ಕರಗಿ ಗ್ಲೊಕೊಜನ್ ರೂಪದಲ್ಲಿ ಲೀವರ್ ಮತ್ತು ಮಾಂಸಖಂಡದಲ್ಲಿ ಶೇಖರಣೆಯಾಗುತ್ತದೆ. ನಮಗೆ ಶಕ್ತಿಯ ಅವಶ್ಯಕತೆ ಇದ್ದಾಗಲೆಲ್ಲಾ ಈ ರೀತಿ ಶೇಖರಣೆಯಾದ ಗ್ಲೊಕೋಜನ್ ಗ್ಲುಕೋಸ್ ಆಗಿ ಪರಿವರ್ತನೆ ಹೊಂದಿ ಇನ್ಸುಲಿನ್ ಸಹಾಯದಿಂದ ಉರಿದು ನಮಗೆ ಶಕ್ತಿಯನ್ನು ಒದಗಿಸುತ್ತದೆ. ಈ ಅಂಶಗಳು ಸಾಮಾನ್ಯವಾಗಿ ಎಲ್ಲಾ ಶಾಖಾಹಾರ ಮತ್ತು ಮಾಂಸಾಹಾರ ಪದಾರ್ಥಗಳಲ್ಲಿ ಇರುತ್ತದೆ. ಶರ್ಕರ ಪಿಷ್ಟ (ಕಾರ್ಬೋಹೈಡ್ರೇಟ್) ವನ್ನು ಮುಖ್ಯವಾಗಿ ಒದಗಿಸುವ ಪದಾರ್ಥಗಳೆಂದರೆ ಸಕ್ಕೆರೆ, ಬೆಲ್ಲ, ಜೇನುತುಪ್ಪ, ಸಿಹಿ ತಿಂಡಿಗಳು, ಏಕದಳ ಧಾನ್ಯಗಳು, ಅವುಗಳಿಂದ ಮಾಡಿದ ರೊಟ್ಟಿ, ಬ್ರೆಡ್, ಬನ್ನು, ಇತ್ಯಾದಿ. ಬಾಳೆ, ಸೇಬು, ಗೆಣಸು, ಆಲೂಗಡ್ಡೆ, ಹಲಸು, ಸುವರ್ಣ ಗಡ್ಡೆ ಮುಂತಾದವುಗಳಲ್ಲಿ ಕಾರ್ಬೋಹೈಡ್ರೇಟ್ ಅಂಶ ಇರುತ್ತದೆ. ಮೇದಸ್ಸು:- ನಮ್ಮ ಶರೀರದ ಪೋಷಣೆಗೆ ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್ ಗಳಂತೆಯೇ ಮೇದಸ್ಸೂ ಅವಶ್ಯಕ. ಕೊಬ್ಬು ಮತ್ತು ಎಣ್ಣೆಗಳು ಈ ಗುಂಪಿಗೆ ಸೇರಿದ ಆಹಾರಗಳಾಗಿವೆ. ಇದರಲ್ಲಿಯೂ ಅನೇಕ ವಿಧಗಳಿವೆ. ಸ್ಯಾಚುರೇಟೆಡ್ ಎಣ್ಣೆ, ಮನೋ ಅನ್ಸಾಚುರೇಟಡ್ ಎಣ್ಣೆ, ಪಾಲಿ ಅನ್ಸ್ಯಾಚುರೇಟಡ್ ಎಣ್ಣೆ ಮುಂತಾದವುಗಳು ಈ ಗುಂಪಿಗೆ ಸೇರಿವೆ. ಸ್ಯಾಚುರೇಟೆಡ್ ಎಣ್ಣೆಗಳಲ್ಲಿ ಕೊಲೆಸ್ಟ್ರಾಲ್ (ಕೊಬ್ಬು) ಅಂಶ ಜಾಸ್ತಿ ಇರುತ್ತವೆ. ಹಾಗಾಗಿ ಅವುಗಳನ್ನು ಮಿತವಾಗಿ ಬಳಸಿದರೆ ಹಿತವಿರುತ್ತದೆ. ಈ ತರಹದ ಸ್ಯಾಚುರೇಟೆಡ್ ಎಣ್ಣೆ ಹಾಲಿನ ಕೆನೆ, ಬೆಣ್ಣೆ, ತುಪ್ಪ ಮತ್ತು ವನಸ್ಪತಿ, ಎಣ್ಣೆಗಳಾದ ಸಂಸ್ಕರಿಸಿದ ಡಾಲ್ಡಾ, ತೆಂಗಿನೆಣ್ಣೆ, ಪಾಮ್ ಆಯಿಲ್ ಮುಂತಾದವುಗಳಲ್ಲಿ ಸಿಗುತ್ತವೆ. ಮಾಂಸ, ಮೊಟ್ಟೆ ಮುಂತಾದವುಗಳಲ್ಲಿಯೂ ಸಿಗುತ್ತದೆ. ಸ್ವಲ್ಪ ಮಟ್ಟಿನ ಕೊಬ್ಬು ನಮ್ಮ ಶರೀರಕ್ಕೆ ಅವಶ್ಯಕ. ನಮ್ಮ ದೇಹಕ್ಕೆ ಬೇಕಾಗಿರುವ ಕೆಲವು ಹಾರ್ಮೋನುಗಳನ್ನು ತಯಾರಿಸಲು, ನಮ್ಮ ಮಿದುಳು ಬೆಳೆಯಲು ಕೊಬ್ಬು ಬೇಕಾಗುತ್ತದೆ. ಈ ಕೊಬ್ಬಿನಾಂಶ ದೇಹದಲ್ಲಿ ಹೆಚ್ಚಾದರೆ ಹೃದಯರೋಗ, ಮಧುಮೇಹ, ಬೆನ್ನುನೋವು, ಕಿವಿನೋವು, ಅತಿ ತೂಕ ಮುಂತಾದ ಕಾಯಿಲೆಗಳು ಬರುತ್ತವೆ ಮತ್ತು ಈಗಾಗಲೇ ಈ ಕಾಯಿಲೆ ಇರುವವರು ತಮ್ಮ ಆಹಾರ ಪದಾರ್ಥಗಳಲ್ಲಿ ಕೊಬ್ಬಿನಂಶ ಕಡಿಮೆ ಇರುವ ಹಾಗೆ ನೋಡಿಕೊಳ್ಳುವುದು ಅವಶ್ಯ. ಮಾನೋ ಮತ್ತು ಪಾಲಿ ಅನ್ಸ್ಯಾಚುರೇಟಡ್ ಎನ್ನುವ ಇನ್ನೊಂದು ತರಹದ ಎಣ್ಣೆಯೂ ಮನುಷ್ಯನ ದೇಹಕ್ಕೆ ಬೇಕಾಗುತ್ತದೆ. ಸಸ್ಯ ಉತ್ತನ್ನಗಳಾದ ಕಡಲೆಕಾಯಿ ಎಣ್ಣೆ. ಎಳ್ಳೆಣ್ಣೆ, ಕುಸುಬಿ ಎಣ್ಣೆ, ಸೂರ್ಯಕಾಂತಿ ಎಣ್ಣೆ ಮುಂತಾದವುಗಳಲ್ಲಿ ಮತ್ತು ಮೀನಿನೆಣ್ಣೆ, ವೇಲ ಎಣ್ಣೆ ಮುಂತಾದ ಪ್ರಾಣಿಗಳಿಂದ ತಯಾರಿಸಿದ ಎಣ್ಣೆಗಳನ್ನು ಈ ಗುಂಪಿಗೆ ಸೇರಿಸಬಹುದಾಗಿದೆ. ಇದರ ಪೂರೈಕೆ ಕಡಿಮೆ ಆದರೆ ಒಂದು ರೀತಿಯ ಚರ್ಮದ ಕಾಯಿಲೆ ಬರುತ್ತದೆಯೆಂದು ಹೇಳಲಾಗಿದೆ. ಒಟ್ಟಾರೆಯಾಗಿ ಈ ಮೇಧಸ್ಸಿನಿಂದ ನಮಗೆ ಬಹಳ ಅನುಕೂಲಗಳಿವೆ. ಇವುಗಳು ನಮಗೆ ಶಕ್ತಿಯನ್ನು ಒದಗಿಸುತ್ತವೆ. ನಮ್ಮ ದೇಹದ ಉಷ್ಣವನ್ನು ಕಾಪಾಡುತ್ತವೆ. ಮೆದುಳಿನ ಮತ್ತು ಹಾರ್ಮೋನುಗಳ ಬೆಳವಣಿಗೆಗೆ ಸಹಾಯ ಮಾಡುತ್ತವೆ. ಇವು ಅತಿಯಾದ ಉಷ್ಣ ಅಥವಾ ಸೀತದಿಂದ ನಮ್ಮನ್ನು ರಕ್ಷಿಸುತ್ತವೆ. ಪ್ರಾಣಿಜನ್ಯ ಎಣ್ಣೆಗಳು ಎ ವಿಟಮಿನ್ ಅನ್ನು ಕೊಡುತ್ತವೆ. ಸಸ್ಯ ಜನ್ಯ ಎಣ್ಣೆಗಳು ಕೆರೋಟಿನ್ ಅನ್ನು ಕೊಡುತ್ತವೆ. ಹೀಗೆ ಇನ್ನೂ ಅನೇಕ ಕೆಲಸಗಳನ್ನು ಮೇಧಸ್ಸು ಮಾಡುತ್ತದೆ. ರಕ್ಷಣಾತ್ಮಕ:- ಆಹಾರದಿಂದ ನಮ್ಮ ದೇಹದ ಬೆಳವಣಿಗೆಯಾಗುತ್ತದೆ. ಆಹಾರ ನಮ್ಮ ದೇಹಕ್ಕೆ ಬೇಕಾದ ಶಕ್ತಿಯನ್ನು ಒದಗಿಸುತ್ತದೆ. ಆದರೆ ಇಷ್ಟೇ ಸಾಲದು. ನಮ್ಮ ದೇಹವನ್ನು ಅನೇಕ ಶತೃಗಳಿಂದ ರಕ್ಷಿಸಬೇಕು. ನಮ್ಮ ಕಣ್ಣಿಗೆ ಕಾಣಿಸದೇ, ತುಂಬಾ ಸೂಕ್ಷರೂಪದಲ್ಲಿದ್ದು, ನಮಗೆ ಕಾಯಿಲೆಗಳನ್ನು ತರುವ ಶತೃಗಳೆಂದರೆ ಬ್ಯಾಕ್ಟೀರಿಯ ಮತ್ತು ವೈರಸ್ಗಳು. ಇವುಗಳಿಂದ ನಮಗೆ ಸೂಕ್ತವಾದ ರಕ್ಷಣೆ ಬೇಕಾಗುತ್ತದೆ. ಇವುಗಳ ಜೊತೆಗೆ ನಮ್ಮ ದೇಹದ ಸೂಕ್ತ ಬೆಳವಣಿಗೆಗೆ, ಕಿಣ್ವಗಳ ರಚೆನೆಗೆ ಇನ್ನೂ ಕೆಲವು ಆಹಾರಾಂಶಗಳು ಬೇಕು. ಅವುಗಳನ್ನು ಜೀವಸತ್ವಗಳು (ವಿಟಮಿನ್ನುಗಳು) ಮತ್ತು ಖನಿಜ ಲವಣಗಳೆಂದು (ಮಿನರಲ್ಸ್) ಕರೆಯುತ್ತಾರೆ. ಮಾನವನ ದೇಹದ ಸರ್ವತೋಮುಖ ಬೆಳವಣಿಗೆಗೆ ಇವುಗಳು ಬೇಕೇ ಬೇಕು. ಜೀವಸತ್ವಗಳಲ್ಲಿ [ವಿಟಮಿನ್ನುಗಳಲ್ಲಿ] ಎರಡು ವಿಧ. ಒಂದು, ಕೊಬ್ಬಿನಲ್ಲಿ ಕರಗುವ ವಿಟಮಿನ್ನುಗಳು. ಎ.ಡಿ.ಇ.ಕೆ, ಜೀವಸತ್ವಗಳು ಈ ಗುಂಪಿಗೆ ಸೇರಿವೆ. ಇನ್ನೊಂದು. ನೀರಿನಲ್ಲಿ ಕರಗುವ ವಿಟಮಿನ್ನುಗಳು. ಧೈಮಿನ್, ರೈಬೊಫ್ಲೇವೀಸ್, ಪೋಲಿಕ್ ಆ್ಯಸಿಡ್, ಪೆರಸಾಕ್ಸಿನ್ ಫಾಸ್ಟೇಟ್ ಮತ್ತು ನಿಕೊಟೀನ್ ಆ್ಯಸಿಡ್. ಇವುಗಳು ಈ ಎರಡನೇ ಗುಂಪಿಗೆ ಸೇರಿವೆ. ವಿಟಮಿನ್ ಎ ದಿಂದ ನಮ್ಮ ಕಣ್ಣಿನ ದೃಷ್ಟಿ ಶಕ್ತಿ ಚೆನ್ನಾಗಿರುತ್ತದೆ. ಸೊಪ್ಪು ತರಕಾರಿಗಳಲ್ಲಿ ಈ ವಿಟಮಿನ್ ಎ ಧಾರಾಳವಾಗಿ ಸಿಗುತ್ತದೆ. ವಿಟಮಿನ್ ಡಿ ಧಾರಾಳವಾಗಿ ನಮ್ಮ ಮೂಳೆಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ನಾವು ಸೂರ್ಯನ ಬೆಳಕಿನಲ್ಲಿ ಹೋದಾಗ, ಸೂರ್ಯನ ಕಿರಣಗಳು ನಮ್ಮ ಮೈಮೇಲೆ ಬೀಳುತ್ತದೆ. ನಮ್ಮ ಚರ್ಮವು ತನ್ನಲ್ಲಿರುವ 7-ಡಿ ಹೈಡ್ರೊ ಕೊಲೆಸ್ಟ್ರಾಲ್ ಎಂಬ ಅಂಶವನ್ನು ಸೂರ್ಯನ ಕಿರಣಗಳ ಸಹಾಯದಿಂದ ಡಿ ವಿಟಮಿನ್ನನ್ನೂ ತಯಾರಿಸಿ ದೇಹಕ್ಕೆ ಕೊಡುತ್ತದೆ. ನಮ್ಮ ದೇಹಕ್ಕೆ ಬೇಕಾದ ವಿಟಮಿನ್ ಇ ಕೂಡ ಗೋದಿ ಮೊಳಕೆ, ಹಸಿರು ಸೊಪ್ಪು, ಕೆಲವು ಎಣ್ಣೆಕಾಳು-ಬೀಜಗಳಿಂದ ಪಡೆಯಬಹುದು. ಅದರಂತೆಯೇ ವಿಟಮಿನ್ ಕೆ ನಮ್ಮ ದೇಹಕ್ಕೆ ಬೇಕಾಗುವ ಇನ್ನೊಂದು ಜೀವಸತ್ವ. ಇದರಲ್ಲಿ ರಕ್ತ ಹೆಪ್ಪುಗಟ್ಟಿಸುವಂತಹ ಗುಣವಿದೆ. ನಮಗೆ ಗಾಯಗಳಾದಾಗ ರಕ್ತ ಹೆಚ್ಚಾಗಿ ದೇಹದಿಂದ ಹರಿದು ಹೋಗದಂತೆ ತಡೆಯಲು, ಗಾಯದ ಮುಂಭಾಗದಲ್ಲಿ ರಕ್ತ ಹೆಪ್ಪುಗಟ್ಟಿ ರಕ್ತ ಸ್ರಾವ ನಿಲ್ಲುತ್ತದೆ. ಈ ತರಹದ ಜೀವಸತ್ವಗಳು [ವಿಟಮಿನ್ನುಗಳು] ನಮಗೆ ಬಹಳ ಕಡಿಮೆ ಪ್ರಮಾಣದಲ್ಲಿ ಇದ್ದರೂ ಸಾಕಾಗುತ್ತದೆ. ಇವುಗಳು ಸಾಮಾನ್ಯವಾಗಿ ಹಸಿರು ಸೊಪ್ಪು ಮತ್ತು ತರಕಾರಿಗಳಲ್ಲಿ ಸಿಗುತ್ತವೆ. ಜೀವಸತ್ವಗಳಲ್ಲಿ ಇನ್ನೂಂದು ತರಹದ ಜೀವಸತ್ವಗಳಿವೆ. ಅವುಗಳು ನೀರಿನಲ್ಲಿ ಕರಗುತ್ತವೆ. ವಿಟಮಿನ್ ಸಿ ಮತ್ತು ಬಿ ಈ ಗುಂಪಿಗೆ ಸೇರಿವೆ. ವಿಟಮಿನ್ ಬಿ ನಲ್ಲಿ ಪುನಃ ಅನೇಕ ಒಳಗುಂಪುಗಳಿವೆ. ಇವುಗಳಲ್ಲಿ ಮೊದಲನೆಯದು ಥೈಮಿನ್. ನಮ್ಮ ದೇಹದಲ್ಲಿರುವ ಕಾರ್ಬೋಹೈಡ್ರೇಟ್ಗಳನ್ನು ಪೂರ್ಣವಾಗಿ ಬಳಸಿಕೊಳ್ಳಲು, ನಮಗೆ ಹಸಿವೆಯುಂಟಾಗಲು, ಮಾಂಸಖಂಡಗಳ ಸ್ಥಿರತೆಗೆ, ಆರೋಗ್ಯಕರ ನರಗಳಿಗೆ ಇದು ಬೇಕಾಗುತ್ತದೆ. ಇವುಗಳ ಕೊರತೆಯಿಂದ ಹೃದಯದ ತೊಂದರೆಗಳು, ನರಗಳ ದೌರ್ಬಲ್ಯ, ಮಾಂಸಖಂಡಗಳ ನೋವು, ಆಯಾಸ, ಏಕಾಗ್ರತೆಯ ಕೊರತೆ, ನಿರಾಶಕ್ತಿ ಮುಂತಾದ ತೊಂದರೆಗಳು ಕಾಣಿಸುತ್ತವೆ. ಈ ಸಮಸ್ಯೆಗೆ ಬೆರಿಬೆರಿ ಎಂದು ಕರೆಯುತ್ತಾರೆ. ಹುರಳಿ, ಬಟಾಣಿ, ಸೋಯ, ಅವರೆ, ಶೇಂಗಾಬೀಜ, ಮೊಳಕೆ ಕಾಳು ಮುಂತಾದವನ್ನು ಸೇವಿಸುವುದರ ಮೂಲಕ ಇದನ್ನು ತಡೆಗಟ್ಟಬಹುದು. ಅದರಂತೆಯೇ ರೈಬೊಫ್ಲೇಮಿನ್ ಇನ್ನೊಂದು ಅಂಶ ಈ ವಿಟಮಿನ್ನಿನಲ್ಲಿ ಇದ್ದು, ಇದು ಆಮೈನೊ ಆಮ್ಲ, ಕೊಬ್ಬು ಮತ್ತು ಕಾರ್ಬೋಹೈಡ್ರೇಟ್ಗಳ ಪಚನಕ್ರಿಯೆಗೆ ಬೇಕಾಗುತ್ತವೆ. ಇದರ ಕೊರತೆಯಿಂದ ಬಾಯಿಯ ತುದಿಗಳು ಒಣಗುವುದು, ಕಣ್ಣು ಕೆಂಪಾಗುವುದು, ನಾಲಿಗೆ ಕೆಂಪಾಗುವುದು, ಉರಿ, ನವೆ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಹಾಲು ಮತ್ತು ಅವುಗಳ ಉತ್ಪನ್ನಗಳಿಂದ ಇವುಗಳನ್ನು ತಡೆಗಟ್ಟಬಹುದು. ನಿಕೋಟಿನ್ ಆಮ್ಲ ಎನ್ನುವ ಇನ್ನೊಂದು ಅಂಶವೂ ಈ ಗುಂಪಿಗೆ ಸೇರಿದೆ. ಇದು ಪಚನಕ್ರಿಯೆಗೆ ಸಹಕಾರಿಯಾಗಿದೆ. ಇದರ ಕೊರತೆಯಿಂದ ನರಗಳ ದೌರ್ಬಲ್ಯ, ಶೀಘ್ರ ಕೋಪ, ತಲೆಸುತ್ತು ಮುಂತಾದವು ಕಾಣಿಸಿಕೊಳ್ಳುತ್ತವೆ. ಮೀನು, ಮಾಂಸ ಮುಂತಾದ ಆಹಾರಗಳಿಂದ ಇದನ್ನು ತಡೆಗಟ್ಟಬಹುದೆಂದು ಹೇಳಲಾಗಿದೆ. ಶಾಖಾಹಾರಿಗಳು ಆಹಾರ ತಜ್ಞರನ್ನು ಕಂಡು ಅವರ ಸಲಹೆ ಪಡೆಯುವುದು ಉಚಿತವಾಗಿದೆ. ಮನುಷ್ಯನ ದೇಹಕ್ಕೆ ಬೇಕಾಗುವ ಇನ್ನೊಂದು ಅವಶ್ಯಕವಾದ ಅಂಶವೆಂದರೆ ವಿಟಮಿನ್ ಸಿ. ಇದು ನಮ್ಮ ದೇಹದಲ್ಲಿ ಸಿಮೆಂಟಿನಂತೆ ಕೆಲಸ ಮಾಡುತ್ತದೆ. ಇದು ನಮ್ಮ ಜೀವಕೋಶಗಳನ್ನು ಬಂದಿಸಿಡಲು ಸಹಾಯ ಮಾಡುತ್ತದೆ. ಇದರ ಕೊರತೆಯಿಂದ ಸ್ಕರ್ವೆ ಎಂಬ ಕಾಯಿಲೆ ಬರುತ್ತದೆ. ನೆಲ್ಲಿಕಾಯಿ, ಹಸಿರು ಸೊಪ್ಪು, ಮೊಳಕೆಕಾಳು ಮುಂತಾದವುಗಳಲ್ಲಿ ಸಿ ವಿಟಮಿನ್ ಧಾರಾಳವಾಗಿ ಸಿಗುತ್ತವೆ. ಮೊಂಸಂಬಿ, ಕಿತ್ತಳೆ, ನಿಂಬೆಹಣ್ಣು, ಚಕ್ಕೋತ ಮುಂತಾದವುಗಳಲ್ಲಿ ವಿಟಮಿನ್ ಸಿ ಸಿಗುತ್ತದೆ. ಇವುಗಳಲ್ಲಿ ನೆಲ್ಲಿಕಾಯಿ ಶ್ರೇಷ್ಟ. ಖನಿಜ ಲವಣಗಳು:- ಮನುಷ್ಯನ ದೇಹಕ್ಕೆ ಬೇಕಾಗುವ ಅವಶ್ಯಕ ಅಂಶಗಳಲ್ಲಿ ಖನಿಜ ಲವಣಗಳೂ ಸೇರಿವೆ. ನಮ್ಮ ಒಟ್ಟು ದೇಹದ ಶೇಕಡ ನಾಲ್ಕರಷ್ಟು ಭಾಗ ಖನಿಜಗಳಿರುತ್ತವೆ ಎಂದು ಅಂದಾಜಿಸಲಾಗಿದೆ. ಪೌಷ್ಟಿಕ ಆಹಾರದ ದೃಷ್ಟಿಯಿಂದ ಕ್ಯಾಲ್ಸಿಯಂ, ಕಬ್ಬಿಣ ಮತ್ತು ಪೂಟ್ಯಾಸಿಯಂಗಳು ದೇಹಕ್ಕೆ ಬೇಕಾಗಿದ್ದರೂ ಅವುಗಳ ಕೊರತೆ ಬರಲಾರದು ಎಂದು ಭಾವಿಸಲಾಗಿದೆ. ಸಾಮಾನ್ಯವಾಗಿ ನಾವು ತಿನ್ನುವ ಆಹಾರ ಪದಾರ್ಥಗಳಲ್ಲಿ ಇವು ಇರುತ್ತವೆ ಮತ್ತು ಇವು ಕ್ಯಾಲ್ಸಿಯಂ ಮಾಡುವ ಕೆಲಸವನ್ನೇ ಮಾಡುತ್ತವೆ ಎಂದು ಹೇಳಲಾಗಿದೆ. ಹಾಗಾಗಿ ಕ್ಯಾಲ್ಸಿಯಂ, ಕಬ್ಬಿಣ ಮತ್ತು ಪೊಟ್ಯಾಸಿಯಂಗಳ ಬಗ್ಗೆಯೇ ಹೆಚ್ಚಿನ ಗಮನಹರಿಸಲಾಗಿದೆ. ಕ್ಯಾಲ್ಸಿಯಂ-ನಮ್ಮ ದೇಹದಲ್ಲಿ ಶೇಖರ ಆಗಿರುವ ಒಟ್ಟು ಖನಿಜದ ಶೇ. 99 ರಷ್ಟು ಭಾಗ ನಮ್ಮ ಮೂಳೆ ಮತ್ತು ಹಲ್ಲುಗಳಲ್ಲಿವೆ. ಉಳಿದದ್ದು ರಕ್ತ ಮತ್ತು ಉಳಿದ ದ್ರವ್ಯಭಾಗದಲ್ಲಿವೆ. ಇದು ರಕ್ತ ಹೆಪ್ಪುಗಟ್ಟಲು, ಸ್ನಾಯು ಮತ್ತು ನರಗಳು ಸಾಮಾನ್ಯವಾಗಿ ಪ್ರತಿಕ್ರಿಯಿಸಲು, ಹೃದಯದ ಬಡಿತ ಸಾಮಾನ್ಯವಾಗಿರಲು ಇದು ಬೇಕು. ಇದರ ಕೊರತೆಯಿಂದ ಎಲುಬುಗಳು ತಮ್ಮ ಶಕ್ತಿಯನ್ನು ಕಳೆದುಕೊಳ್ಳುತ್ತವೆ. ಇದನ್ನು ಜನಸಾಮಾನ್ಯರ ಭಾಷೆಯಲ್ಲಿ ಎಲುಬಿನ ಕಾಯಿಲೆ ಎಂದು ಕರೆಯುತ್ತಾರೆ. ಸ್ವಲ್ಪ ಪೆಟ್ಟಿಗೂ, ಘರ್ಷಣೆಗೂ ಎಲುಬು ಮುರಿಯುವ ಅವಕಾಶ ಇರುತ್ತದೆ. ಹಾಲು, ಮೊಸರು, ಐಸ್ಕ್ರೀಂ, ರಸಗುಲ್ಲ, ಪಾಯಸ, ಮೆಂತ್ಯಸೊಪ್ಪು, ಇತರೆ ದಂಟಿನ ಸೊಪ್ಪು, ನುಗ್ಗೆ, ಧಾನ್ಯಗಳಾದ ರಾಗಿ ಮತ್ತು ಗುರಳ್ಳು (ಹುಚ್ಚೆಳ್ಳು), ಮುಂತಾದವುಗಳಲ್ಲಿ ಕ್ಯಾಲ್ಸಿಯಂ ಅಂಶ ಹೆಚ್ಚಾಗಿರುತ್ತದೆ. ಇವುಗಳ ಉಪಯೋಗದಿಂದ ಕ್ಯಾಲ್ಸಿಯಂನ ನ್ಯೂನತೆಯನ್ನು ಸರಿಪಡಿಸಬಹುದು. ಕಬ್ಬಿಣ-ಪೂರ್ಣವಾಗಿ ಬೆಳೆದ ಮತ್ತು ಆರೋಗ್ಯಪೂರ್ಣ ದೇಹದಲ್ಲಿ ಸುಮಾರು ಮೂರರಿಂದ ಐದು ಗ್ರಾಂ ಕಬ್ಬಿಣ ಇರಬಹುದೆಂದು ಅಂದಾಜಿಸಲಾಗಿದೆ. ಇದರ ಹೆಚ್ಚಿನಾಂಶ ರಕ್ತದಲ್ಲಿ ಮತ್ತು ಉಳಿದದ್ದು ಮಾಂಸಖಂಡ, ಲಿವರ್, ಮೂತ್ರಪಿಂಡ, ಮೂಳೆಗಳ ಮಜ್ಜ ಮುಂತಾದವುಗಳಲ್ಲಿ ಇರುತ್ತದೆ. ಇದು ಶ್ವಾಸಕೋಶದಲ್ಲಿ ಇರುವ ಆಮ್ಲಜನಕವನ್ನು ಹೀರಿಕೊಂಡು ಆಕ್ಸಿ ಹಿಮೋಗ್ಲೋಬಿನ್ ಆಗುತ್ತದೆ. ಇದು ದೇಹದಲ್ಲಿ ಸಂಚರಿಸಿ ಅಲ್ಲಿನ ಜೀವಕೋಶಗಳಗೆ ಆಮ್ಲಜನಕವನ್ನು ಒದಗಿಸುತ್ತವೆ. ಇದರ ಜೊತೆಗೆ ನಮ್ಮ ದೈನಂದಿನ ಅನೇಕ ಚಟುವಟಿಕೆಗಳಿಗೆ ಇದು ಸಹಾಯ ಮಾಡುತ್ತದೆ ಎಂದು ಹೇಳಲಾಗಿದೆ. ದೇಹದಲ್ಲಿ ಹಿಮೋಗ್ಲೋಬಿನ್ ಕಡಿಮೆಯಾದರೆ ರಕ್ತಹೀನತೆ ಉಂಟಾಗುತ್ತದೆ. ಇದೇ ಅನೀಮಿಯ. ಪಾಲಿಷ್ ಮಾಡಿದ ಮತ್ತು ಸಂಸ್ಕರಿಸಿದ ಆಹಾರ ಪದಾರ್ಥಗಳಲ್ಲಿ ಕಬ್ಬಿಣಾಂಶವು ಕಡಿಮೆ ಇರುತ್ತದೆ. ದಂಟಿನ ಸೊಪ್ಪು, ನೆಲ್ಲಿಕಾಯಿ, ಮೊಟ್ಟೆ ಮುಂತಾದವುಗಳಲ್ಲಿ ಕಬ್ಬಿಣಾಂಶವು ಇರುತ್ತದೆ. ಇವುಗಳ ಸೇವನೆಯಿಂದ ಅನೀಮಿಯಾವನ್ನು ತಡೆಯಬಹುದು. ಅಯೋಡಿನ್:- ಅಯೋಡಿನ್ ನಮ್ಮ ದೇಹಕ್ಕೆ ಬೇಕಾದ ಇನ್ನೊಂದು ಲವಣ. ಇತ್ತೀಚಿನ ದಿನಗಳಲ್ಲಿ ಅಯೋಡಿನ್ಯುಕ್ತ ಉಪ್ಪಿನ ಜಾಹೀರಾತುಗಳು ಸಾಕಷ್ಟು ಬರುತ್ತಿವೆ. ನಮ್ಮ ದೇಹದಲ್ಲಿ ಥೈರಾಯಿಡ್ ಗ್ರಂಥಿಯಲ್ಲಿ ಅಯೋಡಿನ್ ಹೆಚ್ಚಾಗಿ ಶೇಖರವಾಗುತ್ತದೆ ಎಂದು ಗ್ರಹಿಸಲಾಗಿದೆ. ಇದು ನಮ್ಮ ಬೌದ್ಧಿಕ ಬೆಳವಣಿಗೆಗೆ ಬೇಕಾದ ಥೈರಾಕ್ಸಿನ್ ಎನ್ನುವ ಹಾರ್ಮೋನನ್ನು ಉತ್ಪಾದಿಸಲು ನೆರವಾಗುತ್ತದೆ. ಅಯೋಡಿನ್ ಕೊರತೆಯಿಂದ ಬೌದ್ಧಿಕ ಬೆಳವಣಿಗೆ ಕಡಿಮೆ ಆಗುತ್ತದೆ. ಕೆಲಸ ಕಾರ್ಯಗಳಲ್ಲಿ ಅನಾಸಕ್ತಿ, ಆಯಾಸ, ನಿಶ್ಯಕ್ತಿ ಮುಂತಾದ ಸಮಸ್ಯೆಗಳು ಉಂಟಾಗುತ್ತವೆ. ಬುದ್ಧಿಮಾಂದ್ಯತೆ, ಕೈಕಾಲುಗಳಲ್ಲಿ ನಿಯಂತ್ರಣ ತಪ್ಪುವುದು, ಕುಬ್ಜತನ, ನರಗಳಲ್ಲಿ ನಿಶ್ಯಕ್ತಿ ಮುಂತಾದ ಸಮಸ್ಯೆಗಳು ಉಂಟಾಗುತ್ತವೆ. ಇವುಗಳನ್ನು ದೂರವಿಡಲು ಅಯೋಡಿನ್ ಮಿಶ್ರಿತ ಉಪ್ಪನ್ನು ಸೇವಿಸಿದರೆ ಸಾಕು. ದೇಹಕ್ಕೆ ಅಯೋಡಿನ್ ಹೆಚ್ಚಾಗಿ ಸಿಗಲೆಂದು ಹೆಚ್ಚು ಉಪ್ಪನ್ನು ಬಳಸುವುದೂ ತಪ್ಪು. ಒಂದು ದಿನಕ್ಕೆ ಪ್ರತಿಯೊಬ್ಬರಿಗೆ 150 ರಿಂದ 200 ಮೈಕ್ರೊಗ್ರಾಮ್ ಅಯೋಡಿನ್ ಸಾಕೆಂದು ಹೇಳಲಾಗಿದೆ. ಹಾಗಾಗಿ ಪ್ರತಿದಿನ ಪ್ರತಿಯೊಬ್ಬರಿಗೆ ಒಂದು ಚಿಟಿಕೆ ಉಪ್ಪು ಸಾಕು15. ನೀರು:- ಗಾಳಿಯ ನಂತರ ಮನುಷ್ಯನಿಗೆ ಅತಿ ಅವಶ್ಯವಾಗಿ ಬೇಕಾಗುವ ವಸ್ತು ಎಂದರೆ ನೀರು. ನಮ್ಮ ದೇಹದಲ್ಲಿನ ಬಹುತೇಕ ಅಂಗಗಳಿಗೆ ಅವು ಚಟುವಟಿಕೆಯಿಂದ ಇರಲು, ರೋಗ ರಹಿತವಾಗಿರಲು ನೀರು ಬೇಕು. ನಮ್ಮ ದೇಹದ ತೂಕದ ಮುಕ್ಕಾಲು ಭಾಗ ನೀರೇ ಇರುತ್ತದೆ. ರಕ್ತದ ಶೇ. 80 ಭಾಗ, ಮಿದುಳಿನ ಶೇ. 70 ಭಾಗ ಮತ್ತು ಸ್ನಾಯುಗಳ ಶೇ. 70 ಭಾಗ ನೀರೇ ಇರುತ್ತದೆ16. ನಮ್ಮ ಶರೀರದ ಅಂಗಾಗಗಳು ಸಮರ್ಪಕವಾಗಿ ಕೆಲಸ ಮಾಡಲು ನೀರು ಅವಶ್ಯ. ನೀರು ದೇಹದ ಉಷ್ಣತೆ ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ. ಜೀವಕೋಶಗಳಿಗೆ ಬೇಕಾಗುವ ಪೋಷಕಾಂಶಗಳನ್ನು ಹಾಗೂ ಆಮ್ಲಜನಕವನ್ನು ಪೂರೈಸುತ್ತದೆ. ಯಕೃತ್ತು ಮತ್ತು ಮೂತ್ರ ಕೋಶಗಳು ಕೆಡದಂತೆ ಅಪಾಯಕರವಾದ ರಸಾಯನಿಕಗಳನ್ನು ಹೊರ ಹಾಕುತ್ತದೆ. ಬೆವರಿನ ಮೂಲಕ ತ್ಯಾಜ್ಯ ಕಲ್ಮಶಗಳನ್ನು ಹೊರ ಚೆಲ್ಲುತ್ತದೆ. ಹೃದಯದ ಬಡಿತವನ್ನು ಸಮಸ್ಥಿತಿಯಲ್ಲಿಡುತ್ತದೆ. ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತದೆ. ಹೊಟ್ಟೆ ನೋವು, ಗ್ಯಾಸ್ ತೊಂದರೆ, ಕೀಲು ನೋವು, ಸಕ್ಕರೆ ಕಾಯಿಲೆ, ಹೆಂಗಸರ ಮುಟ್ಟು ದೋಷ, ಇನ್ನೂ ಮುಂತಾದ ಅನೇಕ ಆರೋಗ್ಯದ ಸಮಸ್ಯೆಗಳು ಹೇರಳವಾಗಿ ನೀರು ಕುಡಿಯುವುದರಿಂದ ಕಡಿಮೆಯಾಗುತ್ತದೆ. ನಾವು ತಿಂದ ಆಹಾರ ಪಚನಗೊಳ್ಳಲು ನೀರು ಬೇಕು. ಅಲ್ಲಿಂದ ದೇಹದ ಇತರ ಅಂಗಗಳ ಸಹಾಯದಿಂದ ಶಕ್ತಿಗೆ ಮೂಲವಾದ ಗ್ಲುಕೋಸ್ ಆಗಲು ನೀರು ಬೇಕು. ಈ ರೀತಿ ತಯಾರಾದಂತಹ ಗ್ಲುಕೋಸ್ ದೇಹದ ಬೇರೆ ಬೇರೆ ಭಾಗಗಳಿಗೆ ರವಾನೆ ಆಗಬೇಕಾದರೆ ನೀರು ಬೇಕು. ಮೆದುಳು ಸ್ನಾಯುಗಳು, ನರಮಂಡಲ ವ್ಯವಸ್ಥೆ, ರಕ್ತದ ಸಂಚಲನೆ, ಆಹಾರ ಜೀರ್ಣಗೊಳ್ಳುವುದು, ಅನುಪಯುಕ್ತ ತ್ಯಾಜ್ಯಗಳನ್ನು ಹೊರಹಾಕುವುದು, ಇನ್ನೂ ಮುಂತಾದ ಅನೇಕ ಚಟುವಟಿಕೆಗಳಿಗೆ ನೀರು ಬೇಕು. ಇದರ ಜೊತೆಗೆ ಬೊಜ್ಜನ್ನು ಕರಗಿಸಲು, ಮೂತ್ರಕೋಶದಲ್ಲಿನ ಕಲ್ಲನ್ನು ಕರಗಿಸಲು/ಹೊರಹಾಕಲು (ಸಾಮಾನ್ಯವಾಗಿ), ಮಲಬದ್ಧತೆಯನ್ನು ತಡೆಯಲು, ಗ್ಯಾಸ್ ತೊಂದರೆಯಿಂದ ಬಿಡುಗಡೆ ಪಡೆಯಲು, ಸಂದಿವಾತದಿಂದ ದೂರವಿಡಲು, ದೇಹದ ಒಳ ಮತ್ತು ಹೊರ ಅಂಗಗಳನ್ನು ಸ್ವಚ್ಛವಾಗಿಡಲು ನೀರು ಬೇಕು. ಒಂದು ಅಂದಾಜಿನ ಪ್ರಕಾರ ಪ್ರತಿಯೊಬ್ಬ ಆರೋಗ್ಯಪೂರ್ಣ ವಯಸ್ಕನಿಗೆ ಎರಡರಿಂದ ಮೂರು ಲೀಟರ್ ನೀರು ಒಂದು ದಿನಕ್ಕೆ ಬೇಕಾಗುತ್ತದೆ. ನೀರನ್ನು ಪ್ರೀತಿಸಿ. ನೀರು ನಿಮ್ಮನ್ನು ಪ್ರೀತಿಸುತ್ತದೆ. ನೀರಿನೊಂದಿಗೆ ಆತ್ಮೀಯತೆ ಬೆಳಸಿಕೊಳ್ಳಿ. ನೀರು ದೇಹವನ್ನು ಕಾಯುತ್ತದೆ. ನೀರು ಪಾಪನಾಶನಿ ಮತ್ತು ರೋಗನಾಶನಿಯೂ ಆಗಿದೆ. ವೈವಿಧ್ಯತೆಯನ್ನಾಧರಿಸಿ ಆಹಾರದ ವರ್ಗೀಕರಣ:- ಆಹಾರ ಪದಾರ್ಥಗಳನ್ನು ಅವುಗಳ ರೂಪ, ಪ್ರಮಾಣ, ರುಚಿ, ಗುಣ, ಸ್ವಭಾವ, ಪ್ರಭಾವ, ಮುಂತಾದ ಆಂಶಗಳನ್ನು ಆಧರಿಸಿ ಇನ್ನೊಂದು ರೀತಿಯಲ್ಲಿಯೂ ವಿಭಾಗಿಸಬಹುದು. ಅವುಗಳ ವಿವರ ಈ ಕೆಳಕಂಡಂತಿದೆ.
ಅಕ್ಕಿ, ಗೋಧಿ, ರಾಗಿ, ಜೋಳ, ಸೆಜ್ಜೆ ಮುಂತಾದ ಏಕದಳ ಧಾನ್ಯಗಳನ್ನು ಆಹಾರಕ್ಕೆ ಬಳಸುತ್ತೇವೆ. ಇವುಗಳಲ್ಲಿ ಸಾರಜನಕ, ಜೀರ್ಣಶಕ್ತಿಗೆ ಉಪಯೋಗವಾಗುವ ಗಂಜಿ ಮತ್ತು ಬಿ ಜೀವಸತ್ವ ಇವೆಯೆಂದು ಹೇಳಲಾಗುತ್ತದೆ. ಅಕ್ಕಿಯನ್ನು ಉಪಯೋಗಿಸುವಾಗ ಪಾಲಿಷ್ ಮಾಡದೆ ಇರುವ ಅಕ್ಕಿಯನ್ನು ಬಳಸಿದರೆ ಉತ್ತಮ. ಪಾಲಿಷ್ ಮಾಡಿದ ಅಕ್ಕಿಯಲ್ಲಿ ನಾರಿನಾಂಶ ಇರುವುದಿಲ್ಲ. ಪಾಲಿಷ್ ಮಾಡಿದ ಅಕ್ಕಿ ನೋಡಲಿಕ್ಕೆ ಬೆಳ್ಳಗೆ, ಚೆನ್ನಾಗಿ ಕಂಡರೂ ಪೋಷಕಾಂಶಗಳು ಕಡಿಮೆ. ಅದರಂತೆ ಗೋಧಿ ಬಳಸುವಾಗಲೂ ಈ ಅಂಶವನ್ನು ಗಮನಿಸಬೇಕು. ಗೋಧಿಯನ್ನು ಜಿನ್ನಿಗೆ ಹಾಕಿಸಿದ ಮೇಲೆ ಜರಡಿ ಹಿಡಿದು ತೌಡು ಬಿಸಾಕಬಾರದು. ಆ ತೌಡಿನಲ್ಲೇ ನಾರಿನಾಂಶ ಹೆಚ್ಚು. ಅದನ್ನೂ ಸೇರಿಸಿ ಬಳಸಬೇಕು. ರಾಗಿಯಲ್ಲಿ ಕಬ್ಬಿಣಾಂಶ ಮತ್ತು ಸುಣ್ಣದ ಅಂಶಗಳು ಇರುತ್ತವೆ. ಜೋಳದಲ್ಲಿ ಕಡಿಮೆ ಪ್ರೋಟೀನ್ ಇದ್ದರೂ ತಿನ್ನಲು ಉಪಯೋಗಿಸಬಹುದು. ಪೌಷ್ಠಿಕಾಂಶಗಳು ಹೆಚ್ಚಾಗಿ ಇರುವ ಇನ್ನೊಂದು ಬಗೆಯ ಧಾನ್ಯ ಅಂದರೆ ಸಿರಿ ಧಾನ್ಯಗಳು. ರಾಗಿ, ನವಣೆ, ಹಾರಕ, ಸಾವೆ, ಸಜ್ಜೆ, ಈ ಗುಂಪಿನಲ್ಲಿವೆ. ಇವುಗಳಲ್ಲಿ ಪ್ರೋಟೀನ್, ಜೀವಸತ್ವ ಮತ್ತು ಖನಿಜಗಳು ಇರುತ್ತವೆಂದು ಹೇಳಲಾಗಿದೆ. ಇವುಗಳಿಗೆ ಕ್ಷುದ್ರ [ಸಣ್ಣ ಆಕಾರ] ಧಾನ್ಯಗಳೆಂದೂ ಕರೆಯುವುದು ವಾಡಿಕೆ. ಬೇಳೆಕಾಳುಗಳು ಹೆಚ್ಚಿಗೆ ಪ್ರೋಟೀನ್ ಅನ್ನು ಒದಗಿಸುತ್ತವೆ. ತೊಗರಿ, ಹೆಸರು, ಕಡಲೆ, ಬಟಾಣಿ, ಉದ್ದು, ಹುರುಳಿ ಮುಂತಾದವು ಈ ವರ್ಗಕ್ಕೆ ಸೇರಿವೆ. ಇವನ್ನು ಇಡಿಯಾಗಿ, ಬೇಳೆಮಾಡಿ, ಪುಡಿಮಾಡಿ ಸೇವಿಸಬಹುದು. ಇವುಗಳನ್ನು ಸಿಪ್ಪೆಸಹಿತ ಉಪಯೋಗಿಸಿದರೆ ಒಳ್ಳೆಯದು. ಇವುಗಳನ್ನು ಮೊಳಕೆ ಬರಿಸಿ ತಿನ್ನುವುದು ಒಳ್ಳೆಯದು. ಶೇಂಗ, ಎಳ್ಳು, ಕುಸುಬೆ, ಸೋಯಾ, ಅವರೆ, ಸಾಸುವೆ, ಸೂರ್ಯಕಾಂತಿ ಮುಂತಾದ ಎಣ್ಣೆಕಾಳುಗಳು ದೇಹಕ್ಕೆ ಬೇಕಾದ ಜಿಡ್ಡು/ಕೊಬ್ಬನ್ನು ಪ್ರೋಟೀನ್ನ್ನು ಮತ್ತು ಬಿ ಜೀವಸತ್ವವನ್ನು ಒದಗಿಸುತ್ತವೆಂದು ಶಿಫಾರಸ್ಸು ಮಾಡಲಾಗಿದೆ. ಅದರಂತೆಯೇ ಆಲೂಗಡ್ಡೆ, ಗೆಣಸು, ಮೂಲಂಗಿ, ಗೆಜ್ಜರಿ, ಸೌತೆ, ಬದನೆ, ಚವಳೆ, ಹುರಳಿ, ಎಲೆಕೋಸು, ಹೂಕೋಸು ಮುಂತಾದ ತರಕಾರಿಗಳು ಶರೀರಕ್ಕೆ ಪೋಷಕಾಂಶಗಳನ್ನು ಒದಗಿಸುತ್ತವೆ. ತರಕಾರಿಗಳಲ್ಲಿ ರೋಗ ನಿರೋಧಕ ಶಕ್ತಿ, ಇಂದ್ರಿಯಗಳಿಗೆ ಶಕ್ತಿ, ಚರ್ಮಕ್ಕೆ ಕಾಂತಿಯನ್ನು ಕೊಡುತ್ತವೆಯೆಂದು ಹೇಳಲಾಗಿದೆ. ಪ್ರತಿಯೊಂದು ತರಕಾರಿಯಲ್ಲಿ ಯಾವ ಪೋಷಕಾಂಶ ಇವೆ, ಯಾವ ದೈಹಿಕ ಪ್ರಕೃತಿಗೆ ಯಾವ ತರಕಾರಿ ಸರಿ, ಪ್ರಮಾಣ ಎಷ್ಟು ಮುಂತಾದ ಅಂಶಗಳನ್ನು ತಿಳಿದುಕೊಂಡು ತರಕಾರಿಗಳನ್ನು ಬಳಸುವುದು ಉತ್ತಮ. ರಾಜಗಿರಿ, ಮೆಂತ್ಯ, ಪಾಲಕ್, ಹರಿವೆ, ಬಸಳೆ, ಪುದೀನ ಮುಂತಾದ ಸೊಪ್ಪುಗಳನ್ನು ಬಳಸುವುದು ಉತ್ತಮ. ಸೊಪ್ಪುಗಳು ಜೀವಸತ್ವಗಳು, ರಂಜಕ, ಕಬ್ಬಿಣಾಂಶ, ಸುಣ್ಣ, ಮುಂತಾದ ಪೋಷಕಾಂಶಗಳನ್ನು ತಂದು ಕೊಡುತ್ತವೆ. ಸೊಪ್ಪುಗಳು ಜೀರ್ಣಾಂಗಗಳನ್ನು ಸದಾಕಾಲ ಶುಚಿಯಾಗಿಡುತ್ತವೆ. ಅದೇ ತರಹ ಪ್ರತಿದಿನವು ಒಂದಿಲ್ಲೊಂದು ಹಣ್ಣನ್ನು ತಿನ್ನುವ ಅಭ್ಯಾಸ ಮಾಡಿಕೊಳ್ಳಬೇಕು. ಮಾವು, ಹಲಸು, ಮೂಸಂಬಿ, ಕಿತ್ತಳೆ, ದಾಕ್ಷಿ, ಕಜರ್ುರ, ಸೀಬೆ, ಪಪ್ಪಾಯ, ಸೇಬು, ಸಪೋಟ, ಸೀತಾಫಲ ಮುಂತಾದ ಹಣ್ಣುಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಹಣ್ಣುಗಳಲ್ಲಿ ಸಿಹಿ, ಹುಳಿ, ಒಗರು ಮುಂತಾದ ರಸಗಳು ಇರುತ್ತವೆ. ನಿಮ್ಮ ಆರೋಗ್ಯ, ಅನಾರೋಗ್ಯ, ನಿಮ್ಮ ದೈಹಿಕ ಪ್ರಕೃತಿ, ಹಣ, ಲಭ್ಯತೆ ಮುಂತಾದ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಹಣ್ಣುಗಳನ್ನು ಸೇವಿಸಬೇಕು. ಆಹಾರ ಪದಾರ್ಥಗಳನ್ನು ಶಾಖಾಹಾರ ಹಾಗೂ ಮಾಂಸಾಹಾರ ಎಂದು ಅವುಗಳ ಉತ್ಪತ್ತಿ ಮೂಲದಿಂದಲೂ ವಿಂಗಡಿಸಬಹುದು18. ಇದರ ಜೊತೆಗೆ ಅವುಗಳನ್ನು ಸೇವಿಸುವ ವಿಧಾನವನ್ನು ಅನುಸರಿಸಿಯೂ ವಿಭಾಗ ಮಾಡಬಹುದು. ಅವುಗಳಲ್ಲಿ ಐದು ವಿಧ.
ಮನುಷ್ಯನ ಪ್ರಕೃತಿಗಳಿಗೆ ತಕ್ಕಂತೆ ಆಹಾರ : ಎಲ್ಲಾ ವ್ಯಕ್ತಿಗಳೂ ಒಂದೇ ತರಹ ಇರುವುದಿಲ್ಲ. ಪ್ರತಿಯೊಬ್ಬ ವ್ಯಕ್ತಿಯ ಪ್ರಕೃತಿಯೂ ಬೇರೆಯಾಗಿರುತ್ತದೆ. ವ್ಯಕ್ತಿಗಳ ಆಕಾರ, ಗಾತ್ರ, ಎತ್ತರ, ಬಣ್ಣ, ದೈಹಿಕ ರಚನೆ, ಸ್ವಭಾವ, ಆಸೆ ಆಕಾಂಕ್ಷೆಗಳು, ರೀತಿ-ನೀತಿಗಳು, ಬೇಕು-ಬೇಡಗಳು, ಒಂದೇ ತೆರನಾಗಿರುವುದಿಲ್ಲ. ಹಾಗಾಗಿ ಪ್ರತಿಯೊಬ್ಬ ವ್ಯಕ್ತಿಯ ಆಹಾರವನ್ನು ನಿರ್ಣಯಿಸುವಾಗ ಈ ಅಂಶಗಳನ್ನು ಗಮನದಲ್ಲಿರಿಸಿಕೊಳ್ಳಬೇಕಾಗುತ್ತದೆ. ಅಂದರೆ ಒಬ್ಬರಿಗೆ ಹಿತವನ್ನು ಕೊಡುವ ಆಹಾರ ಇನ್ನೊಬ್ಬರಿಗೆ ಹಿತವನ್ನು - ಸುಖವನ್ನು ಕೊಡಲಿಕ್ಕಿಲ್ಲ ಅಥವಾ ಅಹಿತವನ್ನೆ ಉಂಟುಮಾಡಬಹುದು. ಇದನ್ನು ದೃಷ್ಟಿಯಲ್ಲಿಟ್ಟುಕೊಂಡೇ ಒಬ್ಬನ ಆಹಾರ ಇನ್ನೊಬ್ಬನ ವಿಷ ಎಂಬ ನಾಣ್ಣುಡಿ ಬಳಕೆಯಲ್ಲಿದೆ. ಅಂದರೆ ಮನುಷ್ಯನ ಪ್ರಕೃತಿಗೆ ತಕ್ಕಂತೆ ಆಹಾರವನ್ನು ನಿರ್ಣಯಿಸಬೇಕಾಗುತ್ತದೆ. ಪ್ರಕೃತಿ ಎಂಬ ಪರಿಕಲ್ಪನೆ ಎರಡು ಅಂಶಗಳನ್ನು ಒಳಗೊಂಡಿದೆ. ಒಂದು ದೈಹಿಕ ಪ್ರಕೃತಿ, ಇನ್ನೊಂದು ಮಾನಸಿಕ ಪ್ರಕೃತಿ. ಅವುಗಳನ್ನು ಪುನಃ ಎರಡು ಭಾಗಗಳನ್ನಾಗಿ ಮಾಡಬಹುದು. ಒಂದು, ವಯಸ್ಸಿಗೆ ಅನುಸಾರವಾಗಿ ದೈಹಿಕ ಪ್ರಕೃತಿ. ಮನುಷ್ಯನಿಗೆ (ಸ್ತ್ರೀ ಮತ್ತು ಪುರುಷ) ಬಾಲ್ಯಾವಸ್ಥೆ, ಮಧ್ಯಮಾವಸ್ಥೆ ಮತ್ತು ಜೀರ್ಣಾವಸ್ಥೆ ಎಂದು ಮೂರು ಹಂತಗಳು. ಬಾಲ್ಯಾವಸ್ಥೆ ಬೆಳವಣಿಗೆಯ ಹಂತ. ಶರೀರ ಚೆನ್ನಾಗಿ ಬೆಳೆದು ದಷ್ಟಪುಷ್ಟವಾಗಬೇಕು. ಈ ಹಂತದಲ್ಲಿ ಪೋಷಕಾಂಶಗಳ ಅವಶ್ಯಕತೆ ಹೆಚ್ಚಿರುತ್ತದೆ. ಎರಡನೆಯದು ಮಧ್ಯಮಾವಸ್ಥೆ. ಈ ಹಂತದಲ್ಲಿ ದೇಹ ಪ್ರಕೃತಿಗೆ ತಕ್ಕಂತೆ ಬೆಳೆದಿರುತ್ತದೆ. ಜೀವನ ವಿವಿಧ ರಂಗಗಳಲ್ಲಿ ಏನನ್ನಾದರೂ ಸಾದಿಸಬೇಕು ಎಂದು ಹಾತೊರೆಯುವ ಹಂತ. ಈ ಘಟ್ಟದಲ್ಲಿ, ಬಲ, ವೀರ್ಯ, ಪೌರುಷ, ಪರಾಕ್ರಮ, ಶಕ್ತಿ, ಆದರ್ಶ ಮುಂತಾದವುಗಳು ಉನ್ನತ ಮಟ್ಟದಲ್ಲಿರುತ್ತವೆ. ಈ ಹಂತದಲ್ಲಿ ದೇಹದ ಬೆಳವಣಿಗೆ ಇರದಿದ್ದರೂ ದೈನಂದಿನ ಕೆಲಸಗಳಿಗೆ ಮತ್ತು ಬೌದ್ಧಿಕ ಕಸರತ್ತಿಗೆ ಶಕ್ತಿಯುತ ಆಹಾರ ಬೇಕು. ಮೂರನೆಯದು ಜೀರ್ಣಾವಸ್ಥೆ ಅಥವಾ ವೃದ್ಧಾವಸ್ಥೆ. ಈ ಹಂತದಲ್ಲಿ ಬಲ, ಶಕ್ತಿ ಇತ್ಯಾದಿಗಳು ಕುಂದುತ್ತಾ ಬರುತ್ತವೆ. ಶರೀರ ಬಹುಬೇಗ ರೋಗಗಳಿಗೆ ತುತ್ತಾಗುತ್ತದೆ. ವಾತ ದೋಷಗಳು ಹೆಚ್ಚಾಗುತ್ತವೆ. ಪ್ರತಿಯೊಬ್ಬರೂ ಈ ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಶರೀರದ ರಚನೆಗೆ ಅನುಸಾರವಾಗಿಯೂ ಪ್ರಕೃತಿಯು ಬೇರೆ ಬೇರೆ ಆಗಿರುತ್ತದೆ. ಸ್ಥೂಲ, ಕೃಶ ಮತ್ತು ಮಧ್ಯಮ ಎಂದು ಮೂರು ಪ್ರಕಾರಗಳು. ಸ್ಥೂಲ ಪ್ರಕೃತಿಯವರು ದಪ್ಪಗಿರುತ್ತಾರೆ. ದೇಹದಲ್ಲಿ ಮಾಂಸಖಂಡಗಳು, ಕೊಬ್ಬು ಹೆಚ್ಚಾಗಿದ್ದು ಯಾವುದೇ ಕೆಲಸವನ್ನು ಮಾಡಲು ತುಂಬಾ ಒದ್ದಾಡುತ್ತಿರುತ್ತಾರೆ. ಕೃಶ ಪ್ರಕೃತಿಯವರು ತೆಳ್ಳಗಿರುತ್ತಾರೆ. ಕಡಿಮೆ ಶಕ್ತಿ ಉಳ್ಳವರಾಗಿರುತ್ತಾರೆ. ಕೆಲಸ ಮಾಡಲು ಉಬ್ಬಸ ಪಡುತ್ತಿರುತ್ತಾರೆ. ಹಸಿವು, ನೀರಡಿಕೆ, ಭಾರ ಹೊರುವುದು, ಗಾಳಿ, ಮಳೆ, ಚಳಿ, ಬಿಸಿಲು ಮುಂತಾದವುಗಳನ್ನು ಸಹಿಸಿಕೊಳ್ಳಲು ಕಷ್ಟಪಡುತ್ತಾರೆ. ಇವರಲ್ಲಿ ರೋಗ ನಿರೋಧ ಶಕ್ತಿ ಕಡಿಮೆ ಇರುತ್ತದೆ. ಮೂರನೆಯದ್ದು ಮತ್ತು ಉತ್ತಮವಾದದ್ದು ಮಧ್ಯಮ ಪ್ರಕೃತಿ. ಇದು ಆದರ್ಶ ಪ್ರಕೃತಿ. ತುಂಬಾ ದಪ್ಪವೂ ಅಲ್ಲದ ಹಾಗೇನೇ ಕೃಶವೂ ಅಲ್ಲದ ದೇಹಪ್ರಕೃತಿ ಉಳ್ಳವರು. ಕಾಲಕ್ಕೆ ತಕ್ಕಂತೆ [ಮಳೆಗಾಲ, ಚಳಿಗಾಲ, ಬೇಸಿಗೆಕಾಲ] ಹೊಂದಿಕೊಳ್ಳುತ್ತಾರೆ ಸ್ಥೂಲದೇಹಿಗಳಿಗಾಗಲೀ, ಕೃಶ ಶರೀರ ಉಳ್ಳವರಿಗಾಗಲೀ ಅಥವಾ ಮಧ್ಯಮ ಪ್ರಕೃತಿ ಉಳ್ಳವರಿಗಾಗಲೀ, ಅವರ ದೈಹಿಕ ಪ್ರಕೃತಿಗೆ ಸರಿಹೊಂದುವ ಆಹಾರವನ್ನು ಕೊಡಬೇಕು. ಸ್ಥೂಲದೇಹಿಗಳು ಸಿಹಿ ಮತ್ತು ಕೊಬ್ಬಿನ ಪದಾರ್ಥಗಳನ್ನು ಬಿಡಬೇಕಾಗುತ್ತದೆ. ಆದರೆ ಕೃಶದೇಹಿಗಳಿಗೆ ಇವು ಬೇಕಾಗುತ್ತದೆ. ಮಧ್ಯಮ ಪ್ರಕೃತಿ ಉಳ್ಳವವರಿಗೆ ಎಲ್ಲಾ ಪೋಷಕಾಂಶಗಳೂ ಮಿತ್ರಪ್ರಮಾಣದಲ್ಲಿ ಬೇಕಾಗುತ್ತವೆ. ಅಡಿಟಿಪ್ಪಣಿಗಳು
ಅಧ್ಯಾಯ - 4 ದಿನಚರಿ ದಿನಚರಿ ಎನ್ನುವ ಶಬ್ಧಕ್ಕೆ ಎರಡು ಅರ್ಥಗಳಿವೆ. ನಾವು ಪ್ರತಿದಿನ ಮಾಡುವ ಕೆಲಸಗಳಿಗೆ ದಿನಚರಿ ಎಂದು ಕರೆಯುತ್ತಾರೆ. ಕೆಲವರಿಗೆ ತಾವು ಪ್ರತಿನಿತ್ಯ ಮಾಡುವ ಕೆಲಸಗಳ ಬಗ್ಗೆ ಬರೆದಿಡುವ ಹವ್ಯಾಸವಿರುತ್ತದೆ. ಹಾಗೆ ಬರೆದಿಡುವುದನ್ನೂ ದಿನಚರಿ ಎಂದು ಹೇಳುತ್ತಾರೆ. ನಾವು ಇಲ್ಲಿ ದಿನಚರಿಯನ್ನು ಮೊದಲನೆಯ ಅರ್ಥದಲ್ಲಿ ಬಳಕೆ ಮಾಡೋಣ. ನಾವು ಪ್ರತಿದಿನ ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ಅನೇಕ ಕೆಲಸಗಳನ್ನು ಮಾಡುತ್ತೇವೆ. ಇವುಗಳಲ್ಲಿ ಕೆಲವು ಪ್ರತಿನಿತ್ಯ ಮಾಡುವಂತಹವು. ಕೆಲವು ಆಯಾ ಕೆಲಸಗಳು ಬಂದಾಗ ಮಾಡುವಂತಹವು. ಇಲ್ಲಿ ನಾವು ಪ್ರತಿನಿತ್ಯ ಮಾಡುವ ಕೆಲಸಗಳ ಬಗ್ಗೆ ಗಮನಹರಿಸೋಣ. ಸಾಮಾನ್ಯವಾಗಿ, ರೋಗ ರಹಿತ ಒಬ್ಬ ವ್ಯಕ್ತಿ ಬೆಳಗ್ಗೆ ತಾನು ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ಅನುಕ್ರಮವಾಗಿ ಮಲ-ಮೂತ್ರ ವಿಸರ್ಜನೆ, ಮುಖ ತೊಳೆಯುವುದು, ಕಾಪಿ-ಟೀ ಕುಡಿಯುವುದು, ಸ್ನಾನ, ಪೂಜೆ, ಕೆಲಸ/ವೃತ್ತಿ, ಊಟ ಮಾಡುವುದು, ಕಾಪಿ-ಟೀ ಕುಡಿಯುವುದು, ದಿನಪತ್ರಿಕೆ ಓದುವುದು, ರಾತ್ರಿ ಊಟ, ಹೀಗೆ ಅನೇಕ ಕೆಲಸಗಳನ್ನು ಮಾಡುತ್ತಾನೆ. ಒಬ್ಬ ಮನುಷ್ಯ ತಾನು ಆರೋಗ್ಯದಿಂದಿರಬೇಕಾದರೆ, ಸಂತೋಷ-ಸಮಾಧಾನದಿಂದ ಇರಬೇಕಾದರೆ ಈ ಪಟ್ಟಿಗೆ ಇನ್ನಷ್ಟು ಅಂಶಗಳನ್ನು ಸೇರಿಸಿಕೊಳ್ಳಬೇಕು. ಉಷಃಪಾನ, ಚಂಕ್ರಮಣ [ಗಾಳಿ ಸಂಚಾರ, ನಡೆಯುವುದು], ಕಷಾಯ ಕುಡಿಯುವುದು, ವ್ಯಾಯಾಮ, ಯೋಗಾಸನ, ಮುದ್ರಾ, ಪ್ರಾಣಾಯಾಮ, ಪ್ರತ್ಯಾಹಾರ, ಅಭ್ಯಂಜನ, ಪ್ರಾರ್ಥನೆ, ಧಾರಣ, ಧ್ಯಾನ, ಪೂಜೆ, ಸದಾಚಾರ, ಸನ್ನಡತೆ, ಉಪವಾಸ ಮುಂತಾದ ಇನ್ನೂ ಕೆಲವು ಅಂಶಗಳನ್ನು ತನ್ನ ದಿನಚರಿಯಲ್ಲಿ ಸೇರಿಸಿಕೊಳ್ಳಬೇಕು. ಆಗ ಅವನ ಬದುಕು ಬದಲಾಗುತ್ತದೆ. ದಿನಚರಿಯಲ್ಲಿ ಒಂದು ಶಿಸ್ತು ಮೂಡುತ್ತದೆ. ಅವನ ಜೀವನ ಆದರ್ಶಪ್ರಾಯವಾಗುತ್ತದೆ. ಈ ಅಧ್ಯಾಯದಲ್ಲಿ ಇಂತಹ ಆದರ್ಶ ವ್ಯಕ್ತಿಯ ದಿನಚರಿ ಮುಖ್ಯ ಅಂಶಗಳನ್ನು ನೋಡೋಣ. ಏಳುವುದು : ಬ್ರಾಹ್ಮೀ ಮುಹೂರ್ತದಲ್ಲಿ ಏಳುವುದು ಒಂದು ಸನಾತನ ವಿದಿ. ಬ್ರಾಹ್ಮಿ ಮುಹೂರ್ತವೆಂದರೆ ಸೂರ್ಯೋದಯಕ್ಕಿಂತ ಒಂದರಿಂದ ಎರಡು ತಾಸು ಮೊದಲು. ಬೇಸಿಗೆ ಕಾಲದಲ್ಲಿ ಹಗಲು ಜಾಸ್ತಿ, ಚಳಿಗಾಲದಲ್ಲಿ ರಾತ್ರಿಕಾಲ ಜಾಸ್ತಿ. ಹಾಗಾಗಿ ಸೂರ್ಯೋದಯವು ಪ್ರತಿದಿನವೂ ಒಂದೇ ಸಮಯಕ್ಕೆ ಆಗುವುದಿಲ್ಲ. ಬೇಸಿಗೆಯಲ್ಲಿ ಬೇಗ ಸೂರ್ಯೋದಯವಾಗಿ ಸೂರ್ಯಾಸ್ತ ತಡವಾಗಿ ಆಗುತ್ತದೆ. ಚಳಿಗಾಲದಲ್ಲಿ ಇದಕ್ಕೆ ವಿರುದ್ಧವಾದ ಪರಿಸ್ಥಿತಿ. ಸಾಮಾನ್ಯವಾಗಿ ಸೂರ್ಯೋದಯ ಬೆಳಿಗ್ಗೆ ಆರು ಘಂಟೆಗೆ ಆಗುತ್ತದೆ ಎಂದಾದರೆ ಬೆಳಗಿನ ಜಾವ ಐದು ಘಂಟೆಗೆ ಏಳುವುದು ಹಿತಕರ. ಕನಿಷ್ಠ ಆರು ಘಂಟೆಗಾದರೂ ಏಳಬೇಕು. ಬ್ರಾಹ್ಮೀಮುಹೂರ್ತದಲ್ಲಿ ವಾತಾವರಣ ಪ್ರಶಾಂತವಾಗಿರುತ್ತದೆ. ದೈನಂದಿನ ಚಟುವಟಿಕೆಗಳು, ಸಂಚಾರದ ಗದ್ದಲ, ದಿನನಿತ್ಯದ ಜಂಜಾಟ ಪ್ರಾರಂಭವಾಗಿರುವುದಿಲ್ಲ. ಬಿಸಿಲಿನ ಝಳ ಇರುವುದಿಲ್ಲ. ಪ್ರಕೃತಿ ಚೈತನ್ಯದಾಯಕವಾಗಿರುತ್ತದೆ. ಗಿಡಗಳು ಇಂಗಾಲದ ಡೈಯಾಕ್ಸೈಡನ್ನು ತಾವು ಹೀರಿ ಶುದ್ಧ ಆಮ್ಲಜನಕವನ್ನು ಹೊರಗೆ ಹಾಕಿರುತ್ತವೆ. ಬ್ರಾಹ್ಮೀ ಮುಹೂರ್ತದಲ್ಲಿ ದೇವತೆಗಳು ಆಕಾಶದಲ್ಲಿ ಸಂಚರಿಸುತ್ತಾರೆಂದು ಸನಾತನ ಧರ್ಮ ನಂಬುತ್ತದೆ. ಆರೋಗ್ಯಪೂರ್ಣ ಜೀವನವನ್ನು ಅಪೇಕ್ಷೆ ಪಡುವವರೆಲ್ಲರೂ ಇಂತಹ ಬ್ರಾಹ್ಮೀ ಮುಹೂರ್ತದಲ್ಲಿ ಏಳುವುದು ಶ್ರೇಯಸ್ಕರ. ಆಯುರ್ವೇದ ತಜ್ಞರಾದ ವಾಗ್ಭಟಾಚಾರ್ಯರು ಬ್ರಾಹ್ಮೀಮುಹೂರ್ತದಲ್ಲಿ ಏಳುವ ಬಗ್ಗೆ ಹೀಗೆ ಹೇಳುತ್ತಾರೆ. ಬ್ರಾಹ್ಮೀ ಮುಹೂರ್ತಿತ್ತಿಷ್ಟೇತ್ ಸ್ವಸ್ಥೋರಕ್ಷಾರ್ಥ ಮಾಯುಷಃ |1 ಬ್ರಾಹ್ಮೀ ಮುಹೂರ್ತದಲ್ಲಿ ಎದ್ದವರಿಗೆ ಸ್ವಸ್ತ ಆರೋಗ್ಯ, ಧನ, ದಿರ್ಘಾಯುಷ್ಯ ಪ್ರಾಪ್ತಿಯಾಗುತ್ತವೆ. Early to bed and early to rise makes a man healthy, wealthey and wise ಎಂಬ ಆಂಗ್ಲ ಸುಭಾಷಿತವೇ ಇದೆ.ರಾತ್ರಿ ಬೇಗ ಮಲಗಿ ಬೆಳಿಗ್ಗೆ ಬೇಗ ಎದ್ದಂತಹವರಿಗೆ ಆರೋಗ್ಯ,ಸಂಪತ್ತು ಮತ್ತು ಜ್ಞಾನಗಳು ಲಬಿಸುತ್ತವೆ. ಬೆಳಗಿನ ಆ ಸಮಯ ವ್ಯಾಯಾಮ, ಯೋಗಾಸನ, ಪ್ರಾಣಾಯಾಮ, ಮುದ್ರಾ, ಧ್ಯಾನ, ಜ್ಞಾನಾರ್ಜನೆ, ಮಂತ್ರ ಪಠನ, ಸಂಗೀತಾಭ್ಯಾಸ ಮುಂತಾದ ಚಟುವಟಿಕೆಗಳಿಗೆ ತುಂಬಾ ಒಳ್ಳೆಯದು. ಸಾಧಕರು ತಮ್ಮ ಸಾಧನೆಗಾಗಿ ಇಂತಹ ಸುಮುಹೂರ್ತಗಳನ್ನೇ ಅವಲಂಬಿಸುತ್ತಾರೆ. ಈ ಸಮಯದಲ್ಲಿನ ಚಟುವಟಿಕೆ ಓಜೋದಾಯಕ ಮತ್ತು ರೋಗ ನಿರೋಧಕವೆಂದು ಹೇಳಲಾಗುತ್ತದೆ. ಬೆಳಿಗ್ಗೆ ಏಳುವಾಗ ಬಲ ಮಗ್ಗುಲಾಗಿ ಏಳುವುದು ಸಂಪ್ರದಾಯ. ಎದ್ದ ತಕ್ಷಣ ದೇವರ ಪ್ರಾರ್ಥನೆ ಮಾಡಬೇಕು. ಉತ್ತಿಷ್ಟೋತ್ತಿಷ್ಟ ಗೋವಿಂದ.... ಮುಂತಾದ ಮಂತ್ರಗಳನ್ನು ಹೇಳಬೇಕು. ಎರಡೂ ಕೈಗಳನ್ನು ತಿಕ್ಕಿಕೊಂಡು ಸಂಪತ್ತು-ಸಂವೃದ್ಧಿಗೆ ಅದಿದೇವತೆಯಾದ ಶ್ರೀ ಲಕ್ಷ್ಮೀದೇವಿ, ಜ್ಞಾನಕ್ಕೆ ಅದಿದೇವತೆಯಾದ ಶ್ರೀ ಸರಸ್ವತೀ ಮತ್ತು ಶಕ್ತಿ ಸ್ವರೂಪಿಣಿಯಾದ ಶ್ರೀ ಗೌರಿ ಇವರುಗಳನ್ನು ಪ್ರತಿನಿದಿಸುವ ಎರಡೂ ಅಂಗೈಗಳ ಅಗ್ರಭಾಗ (ಮುಂಭಾಗ), ಮಧ್ಯಭಾಗ ಮತ್ತು ಮೂಲಭಾಗಗಳನ್ನು ನೋಡಿ, ಕೈಗಳನ್ನು ಕಣ್ಣಿಗೆ ಒತ್ತಿಕೊಳ್ಳಬೇಕು. ಆ ಸಮಯದಲ್ಲಿ ಕರಾಗ್ರೇ ವಸತೇ ಲಕ್ಷ್ಮೀ ಕರಮದ್ಧೇ ಸರಸ್ವತೀ, ಕರಮೂಲೆ ಸದಾಗೌರಿ ಪ್ರಭಾತೇ ಕರದರ್ಶನಂ ಎಂಬ ಮಂತ್ರವನ್ನು ಹೇಳಬೇಕು. ಆನಂತರ ಇಷ್ಟ ದೈವ, ವಾಯುದೇವರು, ಗುರುಗಳು ಮುಂತಾದವರ ಮಂತ್ರಗಳನ್ನು ಹೇಳಬೇಕು. ದೇವರ ಮೂರ್ತಿ ಇಲ್ಲವೇ ಚಿತ್ರಪಟ ಮುಂತಾದವುಗಳನ್ನು ನೋಡಬೇಕು. ಶುಭಸೂಚಕ ದ್ರವ್ಯಗಳಾದ ಕನ್ನಡಿ, ಹೂವಿನ ಹಾರ, ತುಳಸಿ ಮುಂತಾದವುಗಳನ್ನು ನೋಡಬೇಕು ಹಾಗೂ ಸ್ಪರ್ಶ ಮಾಡಬೇಕು. ಹಿಂದಿನ ದಿನಗಳಲ್ಲಿ ಕಟ್ಟಿಗೆಮಂಚಕ್ಕೆ ಕನ್ನಡಿಯನ್ನು ಅಂಟಿಸಿರುತ್ತಿದ್ದರು. ಬೆಳಿಗ್ಗೆ ಎದ್ದಾಗ ಕನ್ನಡಿಯನ್ನು ನೋಡಲು ಅದು ಅನುಕೂಲವಾಗುತ್ತಿತ್ತು. ಆನಂತರ ಭೂದೇವಿಯನ್ನು ಮುಟ್ಟಿ ನಮಸ್ಕರಿಸಬೇಕು. ಗೋವನ್ನು ನೋಡಬೇಕು. ಆನಂತರವೇ ನಮ್ಮ ದೈನಂದಿನ ಚಟುವಟಿಕೆಗಳನ್ನು ಪ್ರಾರಂಬಿಸಬೇಕು. ಬ್ರಾಹ್ಮೀಮುಹೂರ್ತದಲ್ಲಿ ಏಳುವುದು ಆರೋಗ್ಯಪೂರ್ಣ ವ್ಯಕ್ತಿಗಳಿಗೆ ಕಡ್ಡಾಯ. ಆದರೆ ಇದಕ್ಕೆ ಕೆಲವರಿಗೆ ವಿನಾಯಿತಿಯೂ ಇದೆ. ಅನಾರೋಗ್ಯದಿಂದ ನರಳುತ್ತಿರುವವರು, ಚಿಕ್ಕಮಕ್ಕಳು, ವೃದ್ಧರು, ರಾತ್ರಿಪಾಳಿ/ವೇಳೆ ಕೆಲಸ ಮಾಡುತ್ತಿರುವವರು, ಬೇರೆ ಬೇರೆ ಕಾರಣಗಳಿಂದ ರಾತ್ರಿ ತುಂಬಾ ತಡವಾಗಿ ಮಲಗಿದವರು ಇಂಥಹವರಿಗೆ ವಿನಾಯಿತಿ ಇದೆ. ಅಂತಹ ವ್ಯಕ್ತಿಗಳು ತಮ್ಮ ಕೆಲಸ, ಕೆಲಸದ ಸಮಯ, ಕೆಲಸದ ಸ್ವಭಾವ, ಅನಾರೋಗ್ಯದ ವಿವರ, ವೈದ್ಯರ ಶಿಫಾರಸು, ಮುಂತಾದವುಗಳ ಆಧಾರದ ಮೇಲೆ ನಿದ್ರೆಯ ಸಮಯ, ನಿದ್ರೆಯ ಪ್ರಮಾಣ, ನಿದ್ರೆಯ ಜಾಗ ಮುಂತಾದವುಗಳನ್ನು ನಿರ್ಣಯಿಸಿ ಕೊಳ್ಳಬೇಕು. ನಿದ್ರೆಯ ಬಗ್ಗೆ ಮುಂದೆ ಹೇಳಲಾಗುತ್ತದೆ. ತುಂಬಾ ತಡವಾಗಿ ಏಳುವುದು ಅನೇಕ ರೋಗಗಳಿಗೆ ಆಹ್ವಾನವಿತ್ತಂತೆ. ಹೆಚ್ಚು ಹೊತ್ತು ಮಲಗುವುದರಿಂದ ಶರೀರ ಸ್ಥೂಲವಾಗುತ್ತದೆ. ತೂಕ ಹೆಚ್ಚಾಗುತ್ತದೆ. ಬುದ್ಧಿ ಮಂದವಾಗುತ್ತದೆ. ಮಲ-ಮೂತ್ರಗಳನ್ನು ಬೆಳಗ್ಗೆ ಹೊರಹಾಕದಿದ್ದರೆ ಅನೇಕ ರೋಗಗಳು ಅಂಟಿಕೊಳ್ಳುತ್ತವೆ. ಇವೆಲ್ಲವುಗಳಿಂದ ಪಾರಾಗಬೇಕೆನ್ನುವವರು ಪ್ರತಿದಿನ ಕನಿಷ್ಟ ಸೂರ್ಯೋದಯಕ್ಕಿಂತ ಮುಂಚೆ ಏಳಬೇಕು. ಶೌಚಕ್ರಿಯ:- ಬೆಳಗಿನ ಸಮಯದಲ್ಲಿ ನಾವು ಮಾಡಬೇಕಾದ ಮೊದಲಿನ ಕೆಲಸ ಮಲ-ಮೂತ್ರ ವಿಸರ್ಜನೆ ಮಾಡುವುದು. ಇದನ್ನು ಅನಿವಾರ್ಯ ಕಾರಣಗಳಿಲ್ಲದಿದ್ದಲ್ಲಿ ಸರ್ವಧಾ ಮುಂದೂಡಬಾರದು. ಎದ್ದ ನಂತರ ಶೌಚಕ್ರಿಯೆಯನ್ನು ಆದ್ಯತೆಯ ಆಧಾರದ ಮೇಲೆ ಮಾಡಿ ಮುಗಿಸಬೇಕು. ಮುಂಜಾನೆಯ ಸಮಯದಲ್ಲಿ ಮಲ-ಮೂತ್ರ ವಿಸರ್ಜನೆಯಾದರೆ ಆಯಸ್ಸು ರಕ್ಷಣೆಯಾಗುತ್ತದೆಯೆಂದು ಆಯುರ್ವೇದ ಶಾಸ್ತ್ರ ಹೇಳುತ್ತದೆ. ಶೌಚಕ್ರಿಯೆ ಚೆನ್ನಾಗಿ ಆಗುವುದರಿಂದ ಹೊಟ್ಟೆಯ ಭಾರವು ಕಡಿಮೆಯಾಗುತ್ತದೆ. ಹೊಟ್ಟೆಯಲ್ಲಿ ಗುಡು ಗುಡು ಶಬ್ಧ ಹೋಗುತ್ತದೆ. ವ್ಯಾಯಾಮ ಅಥವಾ ಯೋಗಾಸನ ಮಾಡುವವರು ಬಹಿರ್ದೇಶಕ್ಕೆ ಹೋಗಿ ಬಂದ ನಂತರವೇ ಅವುಗಳನ್ನು ಪ್ರಾರಂಬಿಸಬೇಕು. ಕೆಲವರು ಸಮಯ ಸಿಕ್ಕಾಗ/ಪುರಸೊತ್ತಿದ್ದಾಗ ಶೌಚಕ್ರಿಯೆಗೆ ಹೋಗುತ್ತಾರೆ. ಇದು ತಪ್ಪು. ಇನ್ನೂ ಕೆಲವರು ಮಲ-ಮೂತ್ರ ವಿಸರ್ಜನೆ ಮಾಡುವಾಗ ದಿನಪತ್ರಿಕೆ ಓದುವುದುಂಟು. ಹಾಗೆ ಮಾಡಲೇಬಾರದು. ಆ ಸಮಯದಲ್ಲಿ ಓದುವುದು, ಹಾಡುವುದು, ಚಿಂತಿಸುವುದು ಮುಂತಾದವುಗಳನ್ನು ಮಾಡಬಾರದು. ವಿಸರ್ಜನ ಕ್ರಿಯೆ ಮುಗಿದ ನಂತರ ಚೆನ್ನಾಗಿ ನೀರು ಹಾಕಿ ತೊಳೆದುಕೊಳ್ಳಬೇಕು. ಸೋಪನ್ನು ಉಪಯೋಗಿಸಿ ಕೈತೊಳೆದುಕೊಳ್ಳಬೇಕು. ತುಂಬಾ ಪುಡಿಯಾದ ಮಣ್ಣಿನಿಂದಲೂ ಚೆನ್ನಾಗಿ ಕೈ ತೊಳೆಯಬಹುದು. ಅದೇ ಸಮಯದಲ್ಲಿ ಹಿಮ್ಮಡಿ ಸಹಿತ ಕಾಲನ್ನೂ ಸ್ವಚ್ಛವಾಗಿ ತೊಳೆದುಕೊಳ್ಳಬೇಕು. ಒಬ್ಬ ಆರೋಗ್ಯಪೂರ್ಣ ವ್ಯಕ್ತಿ ಪ್ರತಿದಿನ ಆರರಿಂದ ಎಂಟುಬಾರಿ ಮೂತ್ರಕ್ಕೆ ಹೋಗಬೇಕಾಗಬಹುದು. ಆಗಲೂ ಚೆನ್ನಾಗಿ ತೊಳೆದುಕೊಳ್ಳಬೇಕು. ಮೂತ್ರವನ್ನು ಏನೇನೋ ಕಾರಣ ಹೇಳಿ ಮುಂದೂಡಬಾರದು. ಮೂತ್ರವನ್ನು ತಡೆಯುವುದರಿಂದ ಶಿಶ್ನ ನೋವು. ಮೈ ನೋವು, ಸ್ತ್ರೀಯರಲ್ಲಿ ಕಿಟ್ಟೊಟ್ಟೆ ನೋವು, ತಲೆನೋವು ಮುಂತಾದವುಗಳು ಕಾಣಿಸಿಕೊಳ್ಳುತ್ತವೆ. ಅದರಂತೆ ಮಲವಿಸರ್ಜನೆಯನ್ನೂ ತಡೆಯಬೇಡಿ. ಸೂಕ್ತ ಸಮಯದಲ್ಲಿ ಮಲವಿಸರ್ಜನೆ ಮಾಡುವುದರಿಂದ ಗುದಮಾರ್ಗ ಶುದ್ಧಿಯಾಗುತ್ತದೆ. ಆಯಸ್ಸು ಹೆಚ್ಚಾಗುತ್ತದೆ. ದೇಹ ಹಗುರಾಗುತ್ತದೆ ಮತ್ತು ನಿರಾಳವಾಗುತ್ತದೆ. ದಂತಧಾವನ:- ಮಲ-ಮೂತ್ರ ವಿಸರ್ಜನೆ ಮಾಡಿದ ನಂತರ ಮಾಡಬೇಕಾದ ಮತ್ತೊಂದು ಕೆಲಸ ದಂತಧಾವನ, ಅಂದರೆ ಹಲ್ಲುಜ್ಜುವುದು. ಈ ಕೆಲಸಕ್ಕೆ ಕಡ್ಡಿ, ಪುಡಿ ಮತ್ತು ಪೇಸ್ಟಗಳನ್ನು ಬಳಸುವುದು ಪದ್ಧತಿ. ಇವುಗಳಲ್ಲಿ ಕಡ್ಡಿ ಶ್ರೇಷ್ಠ. ಬೇವು, ಮಾವು, ಕಗ್ಗಲಿ, ಹೊಂಗೆ ಮುಂತಾದ ಗಿಡಗಳ ಕಡ್ಡಿಯಿಂದ ಹಲ್ಲುಗಳನ್ನು ಉಜ್ಜುವುದು ಪರಿಣಾಮಕಾರಿ. ಅದರಲ್ಲಿಯೂ ಬೇವು, ಮಾವು ತುಂಬಾ ಒಳ್ಳೆಯದು. ಕಡ್ಡಿ ಎಂಟರಿಂದ ಹತ್ತು ಅಂಗಲ ಉದ್ದ ಮತ್ತು ಕಿರುಬೆರಳು ದಪ್ಪ ಇರಬೇಕು. ಮುಂಭಾಗದಲ್ಲಿ ಜಜ್ಜಿ ಕುರುಚಲು ಮಾಡಿಕೊಂಡಿರಬೇಕು. ಹಲ್ಲಿನಿಂದಲೇ ಕಡಿದು ಹಾಗೆ ಮಾಡಿಕೊಳ್ಳಬೇಕು. ಅಂತಹ ಕಡ್ಡಿಗಳಿಂದ ಒಂದೊಂದಾಗಿ ಹಲ್ಲುಗಳನ್ನೂ ಉಜ್ಜಬೇಕು. ಬೇವಿನ ಕಡ್ಡಿಯಿಂದ ಬಾಯಿಯಲ್ಲಿ ಇರಬಹುದಾದ ಅಪಾಯಕಾರಿ ಕ್ರಿಮಿಗಳು ಸಾಯುತ್ತವೆ. ಕಡ್ಡಿಯನ್ನೂ ಆನಂತರ ಚೆನ್ನಾಗಿ ತೊಳೆದು ಒದ್ದೆಬಟ್ಟೆಯಲ್ಲಿ ಸುತ್ತಿಟ್ಟು ಮರುದಿನ ಉಪಯೋಗಿಸುವವರನ್ನೂ ನೋಡಿದ್ದೇನೆ. ಹಾಗೆ ಹೆಚ್ಚು ಕಡ್ಡಿ ಬಳಕೆಯಾಗದೆ ಪರಿಸರ ರಕ್ಷಣೆಯಾಗುತ್ತದೆ. ಚೂರ್ಣಗಳಿಂದಲೂ ಹಲ್ಲುಜ್ಜಬಹುದು. ಚೂರ್ಣ [ಹಲ್ಲುಪುಡಿ]ಗಳನ್ನು ನೀವೇ ತಯಾರಿಸಿಕೊಳ್ಳಬಹುದು. ನಾವು ಚಿಕ್ಕವರಾಗಿದ್ದಾಗ ನಮ್ಮ ಮನೆಗಳಲ್ಲಿ ನಾವೇ ಹಲ್ಲುಪುಡಿಯನ್ನು ತಯಾರಿಸಿಕೊಳ್ಳುತ್ತಿದ್ದೆವು. ಆಗಿನ ದಿನಗಳಲ್ಲಿ ಅವಲಕ್ಕಿಯನ್ನು ಮನೆಯಲ್ಲೇ ತಯಾರಿಸುತ್ತಿದ್ದರು. ಆ ಸಮಯದಲ್ಲಿ ಬಂದ ತೌಡನ್ನು ಒಂದು ಕಬ್ಬಿಣ ಪುಟ್ಟಿಗೆ ಸ್ವಚ್ಛ ಮಾಡಿ ಹಾಕಿ, ಮಧ್ಯಭಾಗದಲ್ಲಿ ಸ್ವಲ್ಪ ತಗ್ಗುಮಾಡಿ ಕೆಂಡವನ್ನು ಹಾಕಬೇಕು. ಅದು ಒಂದೆರಡು ದಿನಗಳಲ್ಲಿ ಚೆನ್ನಾಗಿ ಸುಟ್ಟಿರುತ್ತದೆ. ಆನಂತರ ಅದನ್ನು ಕೈಯಿಂದ ಚೆನ್ನಾಗಿ ಪುಡಿಮಾಡಿ ಜರಡಿ ಹಿಡಿಯಬೇಕು. ಆ ಪುಡಿಗೆ ಉಪ್ಪು, ಪಚ್ಚಕರ್ಪೂರ, ಶುಂಠಿ, ಹಿಪ್ಪಲಿ, ಮೆಣಸು ಇವುಗಳಲ್ಲಿ ನಿಮಗೆ ಬೇಕಾದವನ್ನು ಸೇರಿಸಿ ಒಂದು ಸೀಶೆಯಲ್ಲಿ ಸಂಗ್ರಹಿಸಿಟ್ಟು, ಪ್ರತಿ-ದಿನವು ಉಪಯೋಗಿಸಬಹುದು. ಉಪ್ಪು ಮತ್ತು ಪಚ್ಚಕರ್ಪೂರ ಸಾಮಾನ್ಯವಾಗಿ ಎಲ್ಲರೂ ಸೇರಿಸುವ ಪದಾರ್ಥಗಳು. ಉಳಿದವು ತಮ್ಮ ತಮ್ಮ ಅವಶ್ಯಕತೆಗೆ ತಕ್ಕಂತೆ ಮಿಶ್ರಣವನ್ನು ಬದಲಿಸಬಹುದು. ಇಂತಹ ತೌಡಿನ ಬದಲು ಇದ್ದಲಿ ಪುಡಿಯನ್ನು ಬಳಸುವವರು ಈಗಲೂ ಸಿಗುತ್ತಾರೆ. ಇದು ಅತ್ಯಂತ ಪರಿಣಾಮಕಾರಿ ಮತ್ತು ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದು. ಅಗ್ಗ ಕೂಡಾ. ಮಾರುಕಟ್ಟೆಯಲ್ಲಿ ತಯಾರಿಸಿದ ಹಲ್ಲುಪುಡಿಗಳೂ ಸಾಕಷ್ಟು ಸಿಗುತ್ತವೆ. ಕಾಲ್ಗೇಟ್, ಡಾಬರ್, ಆಯುರ್ವೈದ್ಯ ಶಾಲಾ, ಕೊಟ್ಟೇಕಲ್ (ಕೇರಳ), ವಿಕೊ, ಪತಂಜಲಿ ಕೇಂದ್ರ, ಚರಕ, ಇನ್ನೂ ಮುಂತಾದ ಅನೇಕ ಕಂಪನಿಗಳವರು, ಸಂಸ್ಥೆಗಳವರು ಉತ್ತಮ ಹಲ್ಲಿನಪುಡಿಯನ್ನು ಹೊರತಂದಿದ್ದಾರೆ. ಅವುಗಳನ್ನೂ ಉಪಯೋಗಿಸ ಬಹುದು. ಹಲ್ಲು ಉಜ್ಜಿದ ನಂತರ ಆ ಪುಡಿಯಿಂದ ಒಸಡುಗಳನ್ನು ಹಗುರವಾಗಿ ತಿಕ್ಕಬೇಕು. ಹಾಗೆ ಮಾಡುವುದರಿಂದ ಒಸಡುಗಳು ಗಟ್ಟಿಗೊಳ್ಳುತ್ತವೆ. ಇವೆರಡನ್ನೂ ಉಪಯೋಗಿಸಲು ಮನಸ್ಸಿಲ್ಲದವರು ಪೇಸ್ಟನ್ನು ಉಪಯೋಗಿಸ ಬಹುದು. ಹತ್ತಾರು ಪ್ರಸಿದ್ಧ ಕಂಪನಿಗಳವರು ಹಲವಾರು ರೀತಿಯ ಟೂತ್ ಪೇಸ್ಟ ಹೊರ ತಂದಿದ್ದಾರೆ. ಅವುಗಳಲ್ಲಿ ಕೆಲವು ಆಯುರ್ವೇದ ಕಂಪನಿ ಇಲ್ಲವೇ ವೈದ್ಯಶಾಲೆಗಳಿಂದ ತಯಾರಿಸಲ್ಪಟ್ಟಂತಹವು. ನಿಮ್ಮ ಆರೋಗ್ಯ, ನಿಮ್ಮ ಹಲ್ಲಿನ ಸ್ಥಿತಿ, ವೈದ್ಯರ ಶಿಫಾರಸ್ಸು ಮುಂತಾದ ಅಂಶಗಳನ್ನು ಆಧರಸಿ ನೀವು ಉತ್ತಮವಾದ ಪೇಸ್ಟನ್ನು ಆರಿಸಿಕೊಳ್ಳಬಹುದು. ಬ್ರಷ್ನಿಂದ ಹಲ್ಲುಜ್ಜುವಾಗ ಬ್ರಷನ್ನು ಹಲ್ಲಿನ ಸಾಲಿಗೆ ಅಡ್ಡವಾಗಿ ತಿಕ್ಕುವುದಕ್ಕಿಂತ ಉದ್ದವಾಗಿ ಮೇಲಿನಿಂದ ಕೆಳಗೆ ತಿಕ್ಕಿದರೆ ಹೆಚ್ಚು ಪರಿಣಾಮಕಾರಿ ಮತ್ತು ಕಡಿಮೆ ಅಪಾಯಕಾರಿ ಎಂದು ಹೇಳಲಾಗುತ್ತದೆ. ಅದನ್ನು ಗಮನಿಸಿ. ಅದರಂತೆ ನಿಮ್ಮ ಹಲ್ಲುಜ್ಜುವ ಅಭ್ಯಾಸವನ್ನು ರೂಡಿಸಿಕೊಳ್ಳಬೇಕು. ಪ್ರತಿದಿನ ಬೆಳಿಗ್ಗೆ ಮತ್ತು ರಾತ್ರಿ ಮಲಗುವುದಕ್ಕಿಂತ ಮುಂಚೆ ಹಲ್ಲುಜ್ಜಬೇಕು. ಬೆಳಿಗ್ಗೆ ಬ್ರಷಿನಿಂದ ಇಲ್ಲವೇ ಕಡ್ಡಿಯಿಂದ ಹಾಗೂ ಸಂಜೆ ಪುಡಿಯಿಂದ ಹೀಗೆ ಬೇರೆ ಬೇರೆ ವಿಧಾನಗಳನ್ನು ಅಳವಡಿಸಿಕೊಳ್ಳಬಹುದು. ಪ್ರತಿದಿನ ಎರಡು ಬಾರಿ ಮಾತ್ರಾ ಹಲ್ಲುಜ್ಜಬೇಕು. ಇದಕ್ಕಿಂತ ಜಾಸ್ತಿ ಸಾರಿ ಹಲ್ಲುಜ್ಜಿದರೆ ಹಲ್ಲುಗಳು ಬೇಗ ಸವೆಯುತ್ತವೆ. ಬಾಯಿ ತೊಳೆಯುವುದು. ಹಲ್ಲುಜ್ಜಿದ ನಂತರ ತಣ್ಣೀರಿನಿಂದ ಚೆನ್ನಾಗಿ ಬಾಯಿ ಮುಕ್ಕಳಿಸಬೇಕು. ತೋರು ಬೆರಳಿನಿಂದ ವಸಡುಗಳನ್ನು ಮೃದುವಾಗಿ ತಿಕ್ಕಬೇಕು. ನಾಲಿಗೆಯನ್ನೂ ಬಂಗಾರ /ಬೆಳ್ಳಿ/ಸ್ಟೀಲು ಕಡ್ಡಿಯಿಂದ ಇಲ್ಲವೇ ಬ್ರಷ್ನಿಂದ, ಕೈಬೆರಳುಗಳಿಂದ ನಾಲಿಗೆಯನ್ನು ತಿಕ್ಕಿ ತೊಳೆಯಬೇಕು. ಜಲನೇತಿ ಮಾಡುವವರು ಅದನ್ನೂ ಮಾಡಬಹುದು. ಅದೇ ಸಮಯದಲ್ಲಿ ಕಣ್ಣು, ಮೂಗು, ಕಿವಿಗಳನ್ನು ತಣ್ಣೀರಿನಿಂದ ತೊಳೆದುಕೊಳ್ಳ ಬೇಕು. ಹತ್ತಾರು ಬಾರಿ ಬಾಯಿ ಮುಕ್ಕಳಿಸಿ, ಬಾಯಿ ಸ್ವಚ್ಛಮಾಡಿಕೊಳ್ಳಬೇಕು. ಮುಖ ತೊಳೆಯುವುದು. ಎಲ್ಲಾ ಕಾಲದಲ್ಲೂ ತಣ್ಣೀರಿನಿಂದ ಮುಖ ತೊಳೆಯುವುದು ಶ್ರೇಷ್ಟ. ಇದರಿಂದ ರಕ್ತ ಪಿತ್ತ ಕಡಿಮೆಯಾಗುತ್ತದೆಯೆಂದು ಹೇಳಲಾಗಿದೆ. ಮುಖದ ಚರ್ಮ ಸುಕ್ಕುರಹಿತವಾಗುತ್ತದೆ ಮತ್ತು ಗಟ್ಟಿಗಾಗುತ್ತದೆ. ಇದರಿಂದ ವಾತ, ಕಫ ದೋಷಗಳು ನಿವಾರಣೆಯಾಗುತ್ತದೆ. ಒಣಗಿದ ಚರ್ಮವಿದ್ದರೆ ಒಣಗುವಿಕೆ ಕಡಿಮೆಯಾಗುತ್ತದೆ. ಚರ್ಮ ಮೃದುವಾಗುತ್ತದೆ. ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ಮೂರು-ನಾಲ್ಕು ಬಾರಿ ತಣ್ಣೀರಿನಿಂದ ಮುಖ ತೊಳೆಯುವುದು ಹಿತಕಾರಿ. ಬದುಕಿನ ಜಂಜಾಟದಲ್ಲಿ ಮತ್ತು ವೃತ್ತಿಯಲ್ಲಿ ಹುಟ್ಟಿಕೊಂಡ ವ್ಯಾಕುಲತೆ, ಉದ್ವಿಗ್ನತೆ ಕಡಿಮೆಯಾಗುತ್ತದೆ. ಮನಸ್ಸಿಗೆ ಮತ್ತು ಮುಖಕ್ಕೆ ಹೊಸತನ ಮೂಡುತ್ತದೆ. ಮನುಷ್ಯ ಚಟುವಟಿಕೆಯಿಂದ ಇರಲು ಸಹಾಯವಾಗುತ್ತದೆ. ಉಷಃಪಾನ ಉಷಃಪಾನ ಎಂದರೆ ಬೆಳಗಿನ ಸಮಯದಲ್ಲಿ ನೀರು ಕುಡಿಯುವುದು. ಈ ವಿಷಯಕ್ಕೆ ಸಂಬಂದಿಸಿದಂತೆ ಎರಡು ರೀತಿಯ ಚಿಕಿತ್ಸಾ ಪದ್ಧತಿಗಳಿವೆ. ಒಂದು: ಬೆಳಗಿನ ಸಮಯದಲ್ಲಿ ಮಲ-ಮೂತ್ರ ವಿಸರ್ಜನೆ ಮಾಡಿ ಮುಖ ತೊಳೆದುಕೊಂಡು ಒಂದೂ ಕಾಲು ಲೀಟರ್ ನೀರನ್ನು ಒಂದೇಸಾರಿ ಕುಡಿಯುವುದು. ಮೊದಲನೆ ದಿನ ಅರ್ಧಲೀಟರ್ ಕುಡಿದು, ಪ್ರತಿದಿನ ಸ್ವಲ್ಪ ಸ್ವಲ್ಪ ಹೆಚ್ಚಿಸುತ್ತಾ ಒಂದು ವಾರದಲ್ಲಿ ಒಂದೂಕಾಲು ಲೀಟರ್ ಕುಡಿಯುವಂತಾಗಬೇಕು. ಈ ರೀತಿ ಮಾಡುವುದರಿಂದ ಬಾಯಿಯಿಂದ ಗುದದ್ವಾರದವರೆಗೆ ಅನ್ನನಾಳ, ಜಠರ, ಸಣ್ಣಕರುಳು, ದೊಡ್ಡಕರುಳು, ಗುದದ್ವಾರ ಮುಂತಾದ ಅಂಗಗಳ ಒಳಪದರು ಸ್ವಚ್ಛವಾಗುತ್ತದೆ. ಇದರಿಂದ ಅಜೀರ್ಣ, ಮೈಕೈ ನೋವು, ರಕ್ತದೊತ್ತಡ, ಮಧುಮೇಹ, ಬೊಜ್ಜು, ಅದಿಕಾಮ್ಲತೆ, ಮೂಲವ್ಯಾದಿ, ಕಣ್ಣುನೋವು, ರಕ್ತಪಿತ್ತ ಮುಂತಾದ ಅನೇಕ ಸಮಸ್ಯೆಗಳು ನಿವಾರಣೆಯಾಗುತ್ತವೆ. ಇದರಿಂದ ಒಂದು ಸಣ್ಣ ಅಡಚಣೆಯಿದೆ. ಬೆಳಿಗ್ಗೆ ನೀರು ಕುಡಿದಾಗಿನಿಂದ ಎರಡು-ಮೂರು ತಾಸಿನಲ್ಲಿ ಎರಡು-ಮೂರು ಬಾರಿ ಮೂತ್ರಕ್ಕೆ ಹೋಗಬೇಕಾಗುತ್ತದೆ, ಅಷ್ಟೆ. ಮತ್ತೇನೂ ತೊಂದರೆಯಿಲ್ಲ. ಪ್ರಯಾಣ ಮಾಡುವಾಗ ಹೀಗೆ ನೀರು ಕುಡಿಯುವುದನ್ನು ಬಿಡಬಹುದು. ಉಳಿದಂತೆ ಈ ಪದ್ಧತಿ ಒಳ್ಳೆಯದು. ಈ ರೀತಿ ನೀರು ಕುಡಿದ ಮೇಲೆ ಒಂದು ತಾಸು ಯೋಗಾಸನ ಮಾಡುವಂತಿಲ್ಲ. ವಾಕಿಂಗ್ ಹೋಗಿ ಬರಬಹುದು. ಇನ್ನೊಂದು ಪದ್ಧತಿಯಿದೆ. ಈ ಪದ್ಧತಿಯಂತೆ ಬೆಳಗ್ಗೆ ಮಲಮೂತ್ರ ವಿಸರ್ಜನೆಯ ನಂತರ ಅರ್ಧ ಲೀಟರ್ ನೀರು ಕುಡಿಯುವುದು. ಅದಾದ ಅರ್ಧತಾಸಿನ ನಂತರ ಯೋಗಾಸನ ಮಾಡಬಹುದು. ಈ ಎರಡೂ ಪದ್ಧತಿಗಳಲ್ಲಿ ಕುಡಿಯುವ ನೀರು ಶುದ್ಧವಾಗಿರಬೇಕು. ರಾತ್ರಿ ಒಂದು ತಾಮ್ರದ ಕೊಡದಲ್ಲಿ ಶುದ್ಧ, ಸೋಸಿದ ನೀರು ತುಂಬಿ ಮೂರು ನಾಲ್ಕು ತುಳಸಿದಳ ಹಾಕಿ ಮುಚ್ಚಿಡಬೇಕು. ಬೆಳಿಗ್ಗೆ ಆ ನೀರು ಕುಡಿಯಲು ಯೋಗ್ಯ. ಇದರಿಂದ ಮೇಲೆ ತಿಳಿಸಿದ ಅನೇಕ ಆರೋಗ್ಯದ ಸಮಸ್ಯೆಗಳು ಬಗೆಹರಿಯುತ್ತವೆ. ಈ ಎರಡು ಉಪಚಾರ ಪದ್ಧತಿಗಳಲ್ಲಿ ನಿಮಗೆ ಸರಿಹೊಂದುವ ಯಾವುದಾದರೂ ಒಂದು ಪದ್ಧತಿಯನ್ನು ಆರಿಸಿಕೊಂಡು ನಿರಂತರವಾಗಿ ಮಾಡಬೇಕಷ್ಟೇ. ಇದನ್ನು ರೋಗಿಗಳಷ್ಟೇ ಮಾಡಬೇಕೆಂದೇನೂ ಇಲ್ಲ. ಎಲ್ಲಾರೂ ಮಾಡಬಹುದು. ಬೆಳಗಿನ ಪಾನೀಯ ಸಾಮಾನ್ಯವಾಗಿ ಎಲ್ಲರೂ ಬೆಳಗಿನ ಸಮಯದಲ್ಲಿ ಕಾಪಿ ಇಲ್ಲವೇ ಟೀ ಕುಡಿಯುವುದುಂಟು. ಇವೆರಡೂ ಪಾನೀಯಗಳು ನಿಮ್ಮಲ್ಲಿ ಚೈತನ್ಯವನ್ನು ತುಂಬಬಹುದು. ಆದರೆ ಕಾಪಿ ಮತ್ತು ಟೀ ಹೆಚ್ಚು ಕುಡಿಯಬಾರದು. ಇವುಗಳು ತುಂಬಾ ರುಚಿಕರ, ಶಕ್ತಿದಾಯಕ ಎಂದು ಅನೇಕ ಟಿ.ವಿ. ಪ್ರಕಟಣೆಗಳನ್ನು ಕೊಡುತ್ತಾರೆ. ಆದರೆ ವಾಸ್ತವಿಕ ಸಂಗತಿಯೇನೆಂದರೆ ಕಾಪಿಯಲ್ಲಿ ಕೆಪಿನ್ ಮತ್ತು ಟೀಯಲ್ಲಿ ನಿಕೋಟಿನ್ ಎಂಬ ಪದಾರ್ಥಗಳು ಇರುತ್ತವೆಯೆಂದೂ, ಅವುಗಳು ಹೆಚ್ಚಾದಲ್ಲಿ ಆರೋಗ್ಯಕ್ಕೆ ಹಾನಿಕಾರಕವೆಂದೂ ಹೇಳಲಾಗುತ್ತದೆ. ಈ ಹಿನ್ನೆಲೆಯಲ್ಲಿ ಕಾಪಿ, ಟೀಗಳನ್ನು ಸೇವಿಸುವುದು ಒಂದು ಮಿತಿಯಲ್ಲಿದ್ದರೆ ಹಿತಕರ. ಅವುಗಳ ಜಾಗದಲ್ಲಿ ಹಾಲು, ಕಷಾಯ, ನಿಂಬೆ ನೀರು, ನೀರು ಮತ್ತು ಜೇನು, ಎಳೆನೀರು ಮುಂತಾದವುಗಳನ್ನು ಉಪಯೋಗಿಸುವುದು ತುಂಬಾ ಒಳ್ಳೆಯದು. ಬೆಡ್ ಕಾಪಿಯ ಅಭ್ಯಾಸವಂತೂ ಅಶಿಸ್ತಿನ ಲಕ್ಷಣ. ಅಂತಹ ದುರಭ್ಯಾಸಗಳನ್ನು ದೃಢ ಮನಸ್ಸಿನಿಂದ, ಪ್ರಯತ್ನಪೂರ್ವಕವಾಗಿ ಬಿಟ್ಟು ಬಿಡಬೇಕು. ಕಷಾಯಗಳು ಹಿತಕಾರಿ. ದೇಹದ ಮೇಲೆ ಒಳ್ಳೆಯ ಪರಿಣಾಮವನ್ನು ಬೀರುತ್ತದೆ. ಜೀರಿಗೆ ಕಷಾಯ, ಶುಂಠಿ ಕಷಾಯ, ಮಿಶ್ರ ಕಷಾಯ ಹೀಗೆ ಕಷಾಯಗಳಲ್ಲಿಯೂ ವೈವಿಧ್ಯತೆಯಿದೆ. ಯಾವ ಸಮಸ್ಯೆಗೆ ಯಾವ ಕಷಾಯ ಒಳ್ಳೆಯದು ಎಂದು ತಜ್ಞರಿಂದ ತಿಳಿದುಕೊಂಡು ಉಪಯೋಗಿಸುವುದು ಹೆಚ್ಚು ಪರಿಣಾಮಕಾರಿ. ಇತ್ತೀಚಿಗೆ ಮಾರುಕಟ್ಟೆಯಲ್ಲಿ ಕಷಾಯದ ಪುಡಿಗಳು ಸಿಗುತ್ತವೆ. ಅಂತಹವುಗಳನ್ನು ಉಪಯೋಗಿಸಬಹುದು. ಬೆಳಗಿನ ಸಮಯದಲ್ಲಿ ಹಾಲು ಕುಡಿಯಬಹುದು. ಲಭ್ಯವಿದ್ದರೆ ಎಳೆನೀರು ಕುಡಿಯಬಹುದು. ನಿಂಬೆಹಣ್ಣು-ನೀರು ಬೆರೆಸಿ ಕುಡಿಯಬಹುದು. ನೀರು-ಜೇನುತುಪ್ಪ ಬೆರೆಸಿ ಕುಡಿಯಬಹುದು. ಬಿಸಿ ನೀರಿನ ಲಿಂಬು ಪಾನಕ ಕುಡಿಯಬಹುದು. ನಿಮ್ಮ ನಿಮ್ಮ ಆರೋಗ್ಯವನ್ನು ಆಧರಿಸಿ ಏನು ಕುಡಿದರೆ ಒಳ್ಳೆಯದು, ಏನು ಕುಡಿಯಬಾರದು ಎಂಬುದನ್ನು ನೀವೇ ನಿರ್ಣಯಿಸಿ ಕೊಳ್ಳಬಹುದು. ರಾಗಿ ಗಂಜಿ ಕುಡಿಯಬಹುದು. ನಿಮ್ಮ ಆಥರ್ಿಕ ಪರಿಸ್ಥಿತಿಯನ್ನು ಅವಲಂಬಿಸಿ ನಿಯತಕಾಲಿಕವಾಗಿ ಇಲ್ಲವೇ ಆಗಾಗ್ಗೆ ಹಣ್ಣಿನ ರಸ ಕುಡಿಯಬಹುದು. ಒಟ್ಟಾರೆಯಾಗಿ ನೀವು ಕುಡಿಯುವ ಪಾನೀಯ ನಿಮಗೆ ಹಿತಕಾರಿ ಆಗಿರಬೇಕು. ಚಂಕ್ರಮಣ:- ಚಂಕ್ರಮಣ ಅಂದರೆ ತಿರುಗಾಟ, ಸಂಚಾರ, ವಾಯುವಿಹಾರ. ಆಂಗ್ಲ ಭಾಷೆಯ ವಾಕಿಂಗ್. ಬೆಳಿಗ್ಗೆ ಮತ್ತು ಸಂಜೆ ಹೊರಗಡೆ ತಿರುಗಾಡಿಕೊಂಡು ಬರುವುದು. ನಿಮ್ಮ ಆರೋಗ್ಯ, ಸಮಯ, ಅವಕಾಶ, ಶಕ್ತಿ ಇವುಗಳನ್ನಾಧರಿಸಿ ಒಂದರಿಂದ ಮೂರು ಕಿಲೋಮೀಟರ್ ತನಕ ಅಡ್ಡಾಡಿಕೊಂಡು ಬರುವುದು ಹಿತಕಾರಿ. ವೃದ್ಧರು, ಸ್ತ್ರೀಯರು, ರೋಗದಿಂದ ಬಳಲಿದವರು ತಮ್ಮ ಶಕ್ತಿಗನುಗುಣವಾಗಿ ಓಡಾಡಿಕೊಂಡು ಬರಬಹುದು. ಚಂಕ್ರಮಣ ಒಂದು ಸುಲಭವಾದ ಮತ್ತು ಎಲ್ಲಾರೂ ಮಾಡಬಹುದಾದಂತಹ ವ್ಯಾಯಾಮ. ಬೆಳಗಿನ ಸಮಯದಲ್ಲಿ ವಾಯು ವಿಹಾರಕ್ಕೆ ಹೋಗಿಬರುವುದು ಒಂದು ಒಳ್ಳೆಯ ಅಭ್ಯಾಸ. ಆ ಸಮಯದಲ್ಲಿ ಪ್ರಕೃತಿ ತುಂಬಾ ಶುದ್ಧವಾಗಿರುತ್ತದೆ. ಸಂಚಾರದ ಶಬ್ಧಮಾಲಿನ್ಯ ಇರುವುದಿಲ್ಲ. [ಪಟ್ಟಣ, ನಗರಗಳಲ್ಲಿ ಬೆಳಿಗ್ಗೆ ನಾಲ್ಕು ಘಂಟೆಯಿಂದಲೇ ವಾಹನಗಳ ಸಂಚಾರ ಆರಂಭವಾಗಿರುತ್ತದೆ]. ಗಾಳಿ ತಂಪಾಗಿರುತ್ತದೆ ಮತ್ತು ನಿರ್ಮಲವಾಗಿರುತ್ತದೆ. ಗಿಡಗಳು ರಾತ್ರಿಯೆಲ್ಲಾ ನಾವು ಬಿಟ್ಟ ಇಂಗಾಲದ ಡೈಯಾಕ್ಸೈಡನ್ನು ಹೀರಿಕೊಂಡು, ಕಲ್ಮಶರಹಿತ ಆಮ್ಲಜನಕವನ್ನು ಪ್ರಕೃತಿಯಲ್ಲಿ ತುಂಬಿರುತ್ತವೆ. ಇಂತಹ ಸಮಯ ಚಂಕ್ರಮಣಕ್ಕೆ ಬಹಳ ಒಳ್ಳೆಯದು. ಚಂಕ್ರಮಣಕ್ಕೆ ಹೋಗುವಾಗ ಚಪ್ಪಲಿ ಹಾಕಿಕೊಳ್ಳುವುದಕ್ಕಿಂತ ದಾರದಿಂದ ಕಟ್ಟಿಕೊಳ್ಳುವಂತಹ ಷೂ ಒಳ್ಳೆಯದು. ಚಂಕ್ರಮಣಕ್ಕಾಗಿಯೇ ಉಪಯೋಗಿಸಬಹುದಾದಂತಹ ಷೂಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಅವುಗಳನ್ನು ಉಪಯೋಗಿಸುವುದು ಒಳ್ಳೆಯದು. ಹಾಗೆ ನಡೆಯುವಾಗ ದೇಹವನ್ನು ಸಡಿಲು ಬಿಟ್ಟಿರಬೇಕು. ಮೂಗಿನಿಂದ ಮಾತ್ರ ಉಸಿರಾಟ ಮಾಡುತ್ತಿರಬೇಕು. ಬಾಯಿಯಿಂದ ಉಸಿರಾಡಬಾರದು. ಮಾತನಾಡಬಾರದು. ಸಾಧಾರಣಕ್ಕಿಂತ ಸ್ವಲ್ಪ ವೇಗವಾಗಿ ದೊಡ್ಡ ಹೆಜ್ಜೆಗಳನ್ನು ಹಾಕುತ್ತಾ ಎರಡೂ ಕೈಗಳನ್ನು ಬೀಸುತ್ತಾ ನಡೆಯಬೇಕು. ಬಿಸಿಲಿಗೆ ಅಬಿಮುಖವಾಗಿ ನಡೆದರೆ ಇನ್ನೂ ಒಳ್ಳೆಯದು. ಅದು ಸಾಧ್ಯವಾಗದಿದ್ದರೆ ಕಡೆಪಕ್ಷ ಬಿಸಿಲು ಮೈಮೇಲೆ ಬೀಳುವಂತೆ ನೋಡಿಕೊಳ್ಳಬೇಕು. ಚಂಕ್ರಮಣ ಮುಗಿಸಿಕೊಂಡು ಬಂದ ಮೇಲೆ ತತ್ಕ್ಷಣ ನೀರು ಕುಡಿಯಬಾರದು. ಸ್ನಾನ ಮಾಡಬಾರದು. ಸ್ವಲ್ಪ ಹೊತ್ತು ಕುಳಿತು ಸುಧಾರಿಸಿಕೊಳ್ಳಬೇಕು. ಚಂಕ್ರಮಣವನ್ನು ಶಿಸ್ತುಬದ್ಧವಾಗಿ ಮಾಡಿದರೆ ದೇಹದಲ್ಲಿ ಇಂದ್ರಿಯಗಳ ಲವಲವಿಕೆ ಹೆಚ್ಚುತ್ತದೆ. ಜೀರ್ಣಶಕ್ತಿ ಜಾಸ್ತಿಯಾಗುತ್ತದೆ. ಬಲ, ಬುದ್ಧಿ ಶಕ್ತಿ ವೃದ್ಧಿಸುತ್ತವೆ. ಸ್ಥೂಲದೇಹವಿದ್ದರೆ ಕಡಿಮೆಯಾಗುತ್ತದೆ. ಮಧುಮೇಹ ಹಿಡಿತದಲ್ಲಿರುತ್ತದೆ. ರಕ್ತದೊತ್ತಡ ಕಡಿಮೆಯಾಗುತ್ತದೆ. ಚಂಕ್ರಮಣವನ್ನು ಅಭ್ಯಾಸ ಮಾಡಿಕೊಂಡ ವ್ಯಕ್ತಿಗಳು ದಿರ್ಘಾಯುಷಿಯಾಗುತ್ತಾರೆ. ನಿಮ್ಮ ನಿಮ್ಮ ಶಕ್ತ್ಯಾನುಸಾರ ಇತಿಮಿತಿಗಳನ್ನು ಗಮನದಲ್ಲಿಟ್ಟುಕೊಂಡು ಚಂಕ್ರಮಣ ಮಾಡಬೇಕು. ವ್ಯಾಯಾಮ:- ಯಾವ ಚಟುವಟಿಕೆಗಳಿಂದ ದೇಹವು ಗಟ್ಟಿಯಾಗುವುದೋ ಮತ್ತು ಬಲ ಹೆಚ್ಚಾಗುವುದೋ ಅದನ್ನು ವ್ಯಾಯಮ ಎಂದೂ ಆಚಾರ್ಯ ಚರಕರು ಹೇಳುತ್ತಾರೆ. ಯಾವುದೇ ವ್ಯಾಯಾಮವಾಗಲೀ ಶಿಸ್ತುಬದ್ಧವಾಗಿ ಮಾಡಬೇಕು ಮತ್ತು ಹಿತಪ್ರಮಾಣದಲ್ಲಿ ಮಾಡಬೇಕು. ಶಿಸ್ತನ್ನು ತಪ್ಪಿದರೆ ಮತ್ತು ವ್ಯಾಯಾಮದ ಪ್ರಮಾಣ ತಪ್ಪಿದರೆ ದೇಹ ಬಳಲುತ್ತದೆ. ನಿರೀಕ್ಷಿತ ಫಲತಾಂಶವು ಬರುವುದಿಲ್ಲ. ಯಾವುದೇ ತರಹದ ವ್ಯಾಯಾಮವೇ ಆಗಲಿ ಅದಕ್ಕೆ ಒಂದು ಪದ್ಧತಿಯಿರುತ್ತದೆ. ಅದನ್ನು ತಜ್ಞರಿಂದ ತಿಳಿದು ಮಾಡಬೇಕು. ಅದರಂತೆಯೇ ವ್ಯಾಯಾಮದ ಪ್ರಮಾಣವೂ ಹೆಚ್ಚು ಕಡಿಮೆ ಆಗದೆ ತಕ್ಕ ಪ್ರಮಾಣದ್ದಾಗಿರಬೇಕು. ಪ್ರಮಾಣ ಹೆಚ್ಚಾದರೆ ದೇಹ ದಣಿಯುತ್ತದೆ. ಪ್ರಮಾಣ ಕಡಿಮೆಯಾದರೆ ನಿಶ್ಚಿತ ಫಲಿತಾಂಶ ದೊರೆಯುವುದಿಲ್ಲ. ನಿಮ್ಮ ವಯಸ್ಸು, ಲಿಂಗ, ಪರಿಸರ, [ಉಷ್ಣವಲಯ, ಶೀತವಲಯ.], ಲಭ್ಯವಿರುವ ಸಮಯ, ಆರೋಗ್ಯ-ಅನಾರೋಗ್ಯ, ಸೇವಿಸುವ ಆಹಾರ, ಮಾಡುವ ಕೆಲಸ ಮುಂತಾದ ಅಂಶಗಳನ್ನು ಆಧರಿಸಿ, ನುರಿತ ವಿಷಯತಜ್ಞರ ಸೂಕ್ತ ಮಾರ್ಗದರ್ಶನದಲ್ಲಿ ಪ್ರಮಾಣವನ್ನು ನಿರ್ಣಯಿಸಬೇಕು. ಪ್ರಾರಂಭದ ದಿನಗಳಲ್ಲಿ ಸ್ವಲ್ಪ ಸಮಯದಿಂದ ಪ್ರಾರಂಬಿಸಿ ದಿನ ಕಳೆದಂತೆಲ್ಲಾ ಒಂದು ನಿಗದಿತ ಪ್ರಮಾಣಕ್ಕೆ ಮುಟ್ಟಬೇಕು. ವ್ಯಾಯಾಮದಿಂದ ಶರೀರದಲ್ಲಿನ ಕೊಬ್ಬು ಕರಗುತ್ತದೆ. ಹಸಿವು ಹೆಚ್ಚಾಗುತ್ತದೆ. ದೇಹಕ್ಕೆ ಒಂದು ದೃಢವಾದ ಆಕಾರ ಬರುತ್ತದೆ. ಕೆಲಸ ಮಾಡಲು ಶಕ್ತಿ ಬರುತ್ತದೆ. ದೇಹಕ್ಕೆ ಲಘುತ್ವ ಒದಗುತ್ತದೆ. ಮುಖದಲ್ಲಿ ಕಾಂತಿಯುಂಟಾಗುತ್ತದೆ. ಇಂದ್ರಿಯಗಳು ಮತ್ತು ಮನಸ್ಸು ಚೈತನ್ಯಗೊಳ್ಳುತ್ತವೆ. ಯೋಗಾಸನ:- ಅಷ್ಟಾಂಗಯೋಗ [ರಾಜಯೋಗ]ದಲ್ಲಿ ಯೋಗಾಸನ ಮೂರನೆಯ ಹಂತ. ಯಮ ಮತ್ತು ನಿಯಮಗಳ ನಂತರ ಬರುವುದು ಆಸನ. ಅಹಿಂಸಾ, ಸತ್ಯ, ಅಸ್ತೇಯ, ಬ್ರಹ್ಮಚರ್ಯ, ಅಪರಿಗ್ರಹ ಇವು ಐದು ಜೀವನದ ನೈತಿಕ ಸೂತ್ರಗಳು. ಇವು ಯಮದ ಭಾಗಗಳು. ಶೌಚ, ಸಂತೋಷ, ತಪಸ್ಸು, ಸ್ವಾದ್ಧಾಯ, ಈಶ್ವರ ಪ್ರಣೀಧಾನ ಇವು ಐದು ವೈಯಕ್ತಿಕ ನಡತೆಯ ಸೂತ್ರಗಳು. ಇವೈದು ನಿಯಮ ಅನ್ನಿಸಿಕೊಳ್ಳುತ್ತವೆ. ಈ ಯಮ, ನಿಯಮಗಳ ನಂತರ ಬರುವುದು ಆಸನ-ಯೋಗಾಸನ. ಒಟ್ಟಾರೆಯಾಗಿ ಅಂದಾಜು 200 ಆಸನಗಳು 600 ಭಂಗಿಗಳು ಇವೆಯೆಂದು ಯೋಗಾಚಾರ್ಯ ಬಿ.ಕೆ.ಎಸ್. ಅಯ್ಯಂಗಾರ್ ಹೇಳುತ್ತಾರೆ. ಇವುಗಳನ್ನೆಲ್ಲಾ ಮಾಡುವುದು ಅವ್ಯವಹಾರಿಕ ಮತ್ತು ಕಷ್ಟಸಾಧ್ಯ. ಅದರ ಅವಶ್ಯಕತೆಯೂ ಇಲ್ಲ. ಆದರೆ ಆಸನಗಳನ್ನು ಎರಡು ಗುಂಪುಗಳಲ್ಲಿ ವಿಂಗಡಿಸುತ್ತಾರೆ. ಮೊದಲನೆಯ ಗುಂಪು-ಪ್ರಾರಂಭದಲ್ಲಿ ಸರಳ ಆಸನಗಳನ್ನು ಮಾಡುವುದು. ಆನಂತರ ಸ್ವಲ್ಪ ಕಷ್ಟಕರ ಆಸನಗಳನ್ನು ಕಲಿತುಕೊಳ್ಳುವುದು. ಅವುಗಳನ್ನು ಸಾದಿಸಿದ ಮೇಲೆ ಕೊನೆಗೆ ತುಂಬಾ ಕಷ್ಟಕರ ಆಸನಗಳನ್ನು ಕಲಿಯುವುದು. ಇದು ಯುವಕರಿಗೆ ಮತ್ತು ಹಠಯೋಗಾಭ್ಯಾಸಿಗಳಿಗೆ ಸಾಧ್ಯವಾಗುವ ಮಾತು. ಎರಡನೆಯ ಗುಂಪು- ಈ ಗುಂಪಿನಲ್ಲಿ ನಿಮ್ಮ ವಯಸ್ಸು, ಲಿಂಗ, ಆರೋಗ್ಯದ ಸಮಸ್ಯೆಗಳು, ದೀರ್ಘಕಾಲಿನ ಜಾಡ್ಯಗಳು ಮುಂತಾದ ಅಂಶಗಳನ್ನು ಆಧರಿಸಿ ಹಾಕಬಹುದಾದಂತಹ ಆಸನಗಳು. ಈ ಗುಂಪಿನಲ್ಲಿ ಬರುವ ಒಟ್ಟು ಆಸನಗಳನ್ನು ಎಂಬತ್ನಾಲ್ಕು ಉಪಗುಂಪುಗಳಾಗಿ ಬಿ.ಕೆ.ಎಸ್. ಅಯ್ಯಂಗಾರ್ ವಿಭಾಗಿಸಿದ್ದಾರೆ. ರಕ್ತದೊತ್ತಡ, ಮಧುಮೇಹ, ಆಮ್ಲೋತ್ಪತ್ತಿ, ಕ್ಷಯ, ಬೆನ್ನುನೋವು, ಗೂರಲು-ಉಬ್ಬಸ, ಉಸಿರು, ಜ್ಞಾಪಕಶಕ್ತಿ, ಶ್ವಾಸನಾಳ, ಎದೆಬೇನೆ, ನೆಗಡಿ, ಕೆಮ್ಮು, ಕರುಳಿನೂತ, ಹೃದಯದ ವಿಸ್ತಾರ, ಗರ್ಭಕೋಶ, ಆಮಶಂಕೆ, ಕಣ್ಣುಬೇನೆ, ಸಂದಿ ವಾತ, ಪಿತ್ತ, ಕಫದೋಷಗಳ ನಿವಾರಣೆ, ನಿರ್ವೀರ್ಯತನ, ಪೋಲಿಯೊ ಮುಂತಾದ ಅನೇಕ ಆರೋಗ್ಯದ ಸಮಸ್ಯೆಗಳಿಗೆ ಬೇರೆ ಬೇರೆ ಆಸನಗಳನ್ನು ನಿಗದಿಗೊಳಿಸಿದ್ದಾರೆ. ಅವುಗಳನ್ನು ನುರಿತ ಯೋಗ ಗುರುವಿನಿಂದ ತಿಳಿದುಕೊಂಡು ಮಾಡಬೇಕು. ಪ್ರತಿ ನಿತ್ಯ ಯೋಗಾಸನ ಮಾಡುವವರಿಗೆ ಕೆಲವು ಉಪಯುಕ್ತ ಸಲಹೆಗಳು. ಪ್ರಾರಂಭದಲ್ಲಿ ಸೂರ್ಯ ನಮಸ್ಕಾರ ಮುಂತಾದವುಗಳನ್ನು ಮಾಡಬಹುದು. ನಿಮ್ಮ ಆರೋಗ್ಯ-ಅನಾರೋಗ್ಯಗಳನ್ನು ಗಮನದಲ್ಲಿಟ್ಟುಕೊಂಡು, ನಿಮ್ಮ ಶಕ್ತಿ, ಸಮಯಗಳನ್ನಾಧರಿಸಿ ನೀವು ಮಾಡಬಹುದಾದ ಆಸನಗಳನ್ನು ಕಲಿತು ಕೊಳ್ಳಬೇಕು. ನೀವು ಯಾವ ದೀರ್ಘಕಾಲಿಕ ಆರೋಗ್ಯ ಸಮಸ್ಯೆಗಳಿಂದ ತೊಂದರೆಗಳನ್ನು ಅನುಭವಿಸುತ್ತಿದ್ದೀರಿ ಎನ್ನುವ ವಿಷಯದ ಆಧಾರದ ಮೇಲೆ ನೀವು ಯಾವ ಯಾವ ಆಸನಗಳನ್ನು ಎಷ್ಟು ಬಾರಿ ಮಾಡಬೇಕು ಎನ್ನುವುದನ್ನು ತಿಳಿದುಕೊಂಡು ಮಾಡಬೇಕು. ನೀವು ನಿರಂತರವಾಗಿ ಯೋಗಾಸನ ಮಾಡುವುದರಿಂದ ನಿಮ್ಮ ದೇಹ ಹಗುರವಾಗುತ್ತದೆ. ಶರೀರ ಭಾರವೆನಿಸುವುದಿಲ್ಲ. ನಿಮ್ಮ ದೇಹದ ತೂಕ ಕಡಿಮೆಯಾಗುತ್ತದೆ. ಸ್ಥೂಲತೆ ಕ್ಷೀಣಿಸುತ್ತದೆ. ಶರೀರ ದೃಢವಾಗುತ್ತದೆ. ಜೀರ್ಣಶಕ್ತಿ ವೃದ್ಧಿಸುತ್ತದೆ. ದೇಹದಲ್ಲಿ ಚೈತನ್ಯ ಮೂಡುತ್ತದೆ. ರೂಪ ಕಾಂತಿಯುತವಾಗುತ್ತದೆ. ಇಂದ್ರಿಯಗಳಲ್ಲಿ ಸ್ಥಿರತೆ ಮೂಡಿ ಇಂದ್ರಿಯ ನಿಗ್ರಹ ಸುಲಭವಾಗುತ್ತದೆ. ಮನಸ್ಸು ನಿರ್ಮಲವಾಗುತ್ತದೆ ಮತ್ತು ನಿಯಂತ್ರಣದಲ್ಲಿರುತ್ತದೆ. ಇಂದ್ರಿಯ ಚಾಂಚಲ್ಯ ಕಡಿಮೆಯಾಗುತ್ತದೆ. ಶೀತೋಷ್ಣ ಸಹಿಷ್ಣುತೆ ಸುಲಭವಾಗುತ್ತದೆ. ಯೋಗಾಸನ ನಿಗದಿತ ಸಮಯಕ್ಕಿಂತ ಕಡಿಮೆ ಮಾಡಿದರೆ ಪೂರ್ವ ನಿರ್ಧಾರಿತ ಫಲಿತಾಂಶ ದೊರೆಯುವುದಿಲ್ಲ ಇಲ್ಲವೇ ತಡವಾಗುತ್ತದೆ. ನಿಗದಿತ ಸಮಯಕ್ಕಿಂತ ಹೆಚ್ಚು ಮಾಡಿದರೆ ದೇಹ ವಿನಾಕಾರಣ ಬಳಲುತ್ತದೆ. ಶಕ್ತಿ ಹ್ರಾಸವಾಗುತ್ತದೆ. ಚೈತನ್ಯ ಕುಂದುತ್ತದೆ. ಆದಕಾರಣ ಯೋಗಾಸನ ಸಮ ಪ್ರಮಾಣದಲ್ಲಿ ಮಾಡಬೇಕು. ನುರಿತ ಯೋಗ ಗುರುವಿನೊಡನೆ ಚರ್ಚಿಸಿ ಪ್ರಮಾಣವನ್ನು ನಿಗದಿ ಮಾಡಿಕೊಳ್ಳಬೇಕು. ಯಾವಾಗಲೂ ಆಸನಗಳನ್ನು ಶವಾಸನದ ಮೂಲಕ ಕೊನೆಗೊಳಿಸಬೇಕು. ಆಸನಗಳನ್ನು ಮಾಡುವುದರಿಂದ ದೇಹ ಬಳಲಿರುತ್ತದೆ. ಆಗ ಸ್ವಲ್ಪ ವಿಶ್ರಾಂತಿಯ ಅವಶ್ಯಕತೆ ಇದೆ. ಶವಾಸನ ಈ ವಿಶ್ರಾಂತಿಯನ್ನು ಒದಗಿಸುತ್ತದೆ. ಶವಾಸನ ಕನಿಷ್ಠ ಹತ್ತು ನಿಮಿಷ ಮಾಡಬೇಕು. ಪ್ರಾಣಾಯಾಮ :- ಆಸನಗಳ ನಂತರ ಪ್ರಾಣಾಯಮವನ್ನು ಮಾಡಬೇಕು. ಪ್ರಾಣಾಯಾಮ ಎನ್ನುವುದು ಎರಡು ಶಬ್ಧಗಳಿಂದ ಕೂಡಿದೆ. ಪ್ರಾಣ ಮತ್ತು ಆಯಾಮ. ಪ್ರಾಣ ಎಂದರೆ ಉಸಿರು. ಆಯಾಮ ಎಂದರೆ ವಿಸ್ತರಿಸು, ಉದ್ದ ಮಾಡು, ಹಿಗ್ಗಿಸು, ನೀಳಮಾಡು ಎಂದು ಅರ್ಥವಾಗುತ್ತದೆ. ನಮ್ಮ ಉಸಿರಾಟಕ್ಕೂ ನಮ್ಮ ಭಾವನೆಗಳಿಗೂ ಸಂಬಂಧವಿದೆ. ಭಾವನೆಗಳಲ್ಲಿ ಎರಡು ವಿಧ. ಒಂದು, ದುಃಖ ಸಂಕಟ, ಬಿತಿ, ಚಿಂತೆ, ಅಪಮಾನ ಮುಂತಾದ ಸಂದರ್ಭಗಳಲ್ಲಿ ನಮ್ಮ ಮನಸ್ಸು, ಭಾವನೆಗಳು ಮುದುಡಿಕೊಂಡಿರುತ್ತವೆ. ಆತಂಕದಿಂದ ಕೂಡಿರುತ್ತವೆ. ಇನ್ನೊಂದು, ಶಾಂತಿ, ಸಮಾಧಾನ, ಸಂತೋಷ, ನಿಶ್ಚಿಂತೆ, ನಿರ್ಭಯ, ಧೈರ್ಯ ಮುಂತಾದ ಸಂದರ್ಭಗಳಲ್ಲಿ ಮನಸ್ಸು, ಭಾವನೆಗಳು ಅರಳಿಕೊಂಡಿರುತ್ತವೆ. ಬುದ್ಧಿ ಚೆನ್ನಾಗಿ ಕೆಲಸ ಮಾಡುವುದು ಭಾವನೆಗಳು ವಿಕಶನಗೊಂಡಾಗ. ಹಾಗಾಗಿ ನಮ್ಮ ಉಸಿರಾಟಕ್ಕೆ ಮತ್ತು ಭಾವನೆಗಳಿಗೆ ಅವಿನಾ ಸಂಬಂಧವಿದೆ. ನಮ್ಮ ಉಸಿರಾಟವನ್ನು ಶಿಸ್ತುಬದ್ಧಗೊಳಿಸುವ ಮೂಲಕ ನಮ್ಮ ಭಾವನೆಗಳನ್ನು ಹತೋಟಿಯಲ್ಲಿಡಬಹುದು ಮತ್ತು ವ್ಯವಸ್ಥಿತಗೊಳಿಸಬಹುದು. ಸಾಮಾನ್ಯವಾಗಿ ನಾವೆಲ್ಲರೂ ಪ್ರತಿಕ್ಷಣವೂ ಉಸಿರಾಡುತ್ತೇವೆ. ಉಸಿರು ನಿಂತರೆ ಸಾವೇ ಫಲಿತಾಂಶ. ಈ ಉಸಿರಾಡುವ ಕ್ರಿಯೆಗೆ ಶ್ವಾಸೋಚ್ಛಾಸ ಎಂದು ಕರೆಯಲಾಗಿದೆ. ಈ ಪ್ರಕ್ರಿಯೆ ಎರಡು ಹಂತಗಳನ್ನು ಒಳಗೊಂಡಿದೆ. ಒಂದು, ನಾವು ಉಸಿರನ್ನು ಒಳಗೆ ಎಳೆದುಕೊಳ್ಳುವುದು. ಇದಕ್ಕೆ ಪೂರಕ ಎಂದು ಹೆಸರಿಸಲಾಗಿದೆ. ನಾವು ಗಾಳಿಯನ್ನು ದೇಹದೊಳಕ್ಕೆ ಎಳೆದುಕೊಂಡಾಗ, ಪ್ರಕೃತಿಯಲ್ಲಿರುವ ಆಮ್ಲಜನಕ ಗಂಟಲಿನ ಮುಖಾಂತರ ನಮ್ಮ ಪುಪ್ಪುಸಗಳಿಗೆ ಹೋಗುತ್ತದೆ. ಹೃದಯದಿಂದ ಅಲ್ಲಿಗೆ ಬಂದ ಅಶುದ್ಧ ರಕ್ತವನ್ನು ಈ ಆಮ್ಲಜನಕ ಶುದ್ಧಿಗೊಳಿಸುತ್ತದೆ. ಪುನಃ ಅಶುದ್ಧ ರಕ್ತ ಹೃದಯಕ್ಕೆ ಹೋಗಿ, ಅಲ್ಲಿಂದ ದೇಹದ ಎಲ್ಲಾ ಅಂಗಗಳಲ್ಲಿರುವ ಜೀವಕೋಶಗಳಿಗೆ ಹೋಗುತ್ತದೆ. ಆ ಜೀವಕೋಶಗಳು ಈ ಆಮ್ಲಜನಕವನ್ನು ಹೀರಿ ತಾವು ಜೀವದಿಂದಿರುವುದರ ಮೂಲಕ ತಮ್ಮ ತಮ್ಮ ಕೆಲಸವನ್ನು ನಿರ್ವಹಿಸುತ್ತವೆ. ಅದರ ಪರಿಣಾಮವಾಗಿ ನಾವು ಚೈತನ್ಯದಿಂದಿರಲು ಸಹಾಯವಾಗುತ್ತದೆ. ಇನ್ನೊಂದು, ಪುಪ್ಪುಸಗಳಲ್ಲಿ ರಕ್ತ ಶುದ್ಧೀಕರಣ ಪ್ರಕ್ರಿಯೆಯಲ್ಲಿ ಉತ್ಪಾದನೆಗೊಂಡ ಇಂಗಾಲಾಮ್ಲವನ್ನು ಹೊರ ಹಾಕುವುದು. ಇದನ್ನು ರೇಚಕ ಎಂದು ಕರೆಯಲಾಗಿದೆ. ಇದರಿಂದ ದೇಹದಲ್ಲಿ ಶೇಖರಗೊಂಡ ಅನುಪಯುಕ್ತ ಗಾಳಿ ರೇಚಕದ ಮೂಲಕ ಹೊರಹೋಗುತ್ತದೆ. ಗಾಳಿಯನ್ನು ಒಳಗೆ ಎಳೆದುಕೊಳ್ಳುವ ಕ್ರಿಯೆಗೆ ಉಚ್ಛ್ವಾಸ ಎಂತಲೂ, ಹಾಗೇನೇ ಗಾಳಿಯನ್ನು ಹೊರಹಾಕುವ ಕ್ರಿಯೆಗೆ ನಿಶ್ವಾಸ ಎಂತಲೂ ಕರೆಯಲಾಗುತ್ತದೆ. ಈ ಪೂರಕ ಮತ್ತು ರೇಚಕಗಳೆರಡೂ ದೀರ್ಘವಾಗಬೇಕಾದರೆ ಪ್ರಾಣಾಯಮವನ್ನು ಅಭ್ಯಾಸ ಮಾಡಬೇಕು. ಇವೆರಡಲ್ಲದೆ ಪ್ರಾಣಾಯಾಮದಲ್ಲಿ ಇನ್ನೊಂದು ಮಹತ್ವವಾದ ಹಂತವಿದೆ. ಅದನ್ನು ಕುಂಭಕ ಎಂದು ಕರೆಯುತ್ತಾರೆ. ಕುಂಭಕವೆಂದರೆ ಉಸಿರನ್ನು ಬಿಗಿ ಹಿಡಿಯುವುದು. ಪುನಃ ಕುಂಭಕದಲ್ಲಿ ಮೂರು ವಿಧ. ಒಂದು, ಉಸಿರನ್ನು ಒಳಕ್ಕೆ ಎಳೆದುಕೊಂಡು ಸ್ವಲ್ಪ ಹೊತ್ತು ಒಳಗೇ ತಡೆ ಹಿಡಿಯುವುದು. ಇದು ಅಂತರ ಕುಂಭಕ. ಎರಡು, ಉಸಿರನ್ನು ಸಂಪೂರ್ಣವಾಗಿ ಹೊರಕ್ಕೆ ಬಿಟ್ಟು ಅಲ್ಲಿ ತಡೆಹಿಡಿಯುವುದು. ಇದು ಬಾಹ್ಯ ಕುಂಭಕ. ಮೂರನೆಯದು ನಮ್ಮ ಪ್ರಯತ್ನವೇ ಇಲ್ಲದೆ ಶ್ವಾಸೋಚ್ಛ್ವಾಸ ಇಲ್ಲದಿರುವುದು. ಇದು ಸಹಜ ಕುಂಭಕ. ಪೂರಕ, ರೇಚಕ, ಕುಂಭಕ ಇವೆಲ್ಲವೂ ಪ್ರಾಣಾಯಾಮದ ವಿವಿಧ ಹಂತಗಳು. ಹಠಯೋಗಿಗಳನ್ನು ಹೊರತುಪಡಿಸಿ, ಜನಸಾಮಾನ್ಯರು ರೇಚಕಕ್ಕೆ [ಉಸಿರನ್ನು ಹೊರಕ್ಕೆ ಬಿಡುವುದಕ್ಕೆ] ಹೆಚ್ಚು ಮಹತ್ವವನ್ನು ಕೊಡಬೇಕೆಂದು ಯೋಗ ಪರಿಣಿತರು ಹೇಳುತ್ತಾರೆ. ಹಾಗೆ ಮಾಡಿದರೆ ಶ್ವಾಸಕೋಶ ಸಂಪೂರ್ಣವಾಗಿ ಬರಿದಾಗುತ್ತದೆ. ಶುದ್ಧ ಆಮ್ಲಜನಕವನ್ನು ಪುನಃ ತುಂಬಿಕೊಳ್ಳಲು ಅನುವು ಮಾಡಿಕೊಟ್ಟಂತಾಗುತ್ತದೆ. ಪ್ರಾಣಾಯಾಮದಲ್ಲಿ ಹತ್ತಾರು ವಿಧಾನಗಳಿವೆ. ಅನುಲೋಮ, ವಿಲೋಮ, ಉಜ್ಜಯೀ, ಭಸ್ತ್ರಿಕಾ, ಕಪಾಲಭಾತಿ, ಸೂರ್ಯ ಅನುಲೋಮ ವಿಲೋಮ, ಚಂದ್ರ ಅನುಲೋಮ ವಿಲೋಮ, ಸೂರ್ಯಭೇಧನ, ಚಂದ್ರಭೇಧನ, ನಾಡಿಶೋಧನ, ಭ್ರಾಮರಿ, ಶೀತಳಿ/ಶೀತಕಾರಿ ಮುಂತಾದ ಪದ್ಧತಿಗಳು ಪ್ರಚಲಿತವಿವೆ. ಇವುಗಳ ಜೊತೆಗೆ ಅನೇಕ ಯೋಗಗುರುಗಳು, ಸಂಶೋಧನೆಯ ಆಧಾರದ ಮೇಲೆ ಬೇರೆ ಬೇರೆ ಪದ್ಧತಿಗಳನ್ನೂ, ಬೇರೆ ಬೇರೆ ಪ್ರಾಣಾಯಾಮಗಳ ಸಂಯೋಗಗಳನ್ನೂ ಪ್ರಚಾರಕ್ಕೆ ತಂದಿದ್ದಾರೆ. ಅಂತಹವುಗಳು ಆರೋಗ್ಯ ಸಮಸ್ಯೆಗಳ ಪರಿಹಾರ ರೂಪವಾಗಿ ರೂಪುಗೊಂಡಿವೆ. ಆದಕಾರಣ ಪ್ರಾಣಾಯಾಮ ಮಾಡುವವರು ತಮ್ಮ ಆರೋಗ್ಯದ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು, ಯೋಗ ಪರಿಣಿತರನ್ನು ಕಂಡು, ಚರ್ಚಿಸಿ, ಅವರ ಮಾರ್ಗದರ್ಶನದಲ್ಲಿ ಕಲಿತುಕೊಂಡು ಮಾಡಬೇಕು. ಯೋಗಾಸನ ಮಾಡಿದರೆ ಯಾವ ಅನುಕೂಲಗಳಾಗುತ್ತವೆ ಎಂಬ ಅಂಶಗಳನ್ನು ಈ ಹಿಂದೆ ಹೇಳಿದೆ. ಆ ಎಲ್ಲಾ ಅನುಕೂಲಗಳು ಪ್ರಾಣಾಯಾಮದಿಂದಲೂ ಲಬಿಸುತ್ತವೆ. ಅವುಗಳ ಜೊತೆಗೆ ನಾಡಿಗಳೆಲ್ಲಾ ಶುದ್ಧವಾಗುತ್ತವೆ, ಚೈತನ್ಯಪೂರ್ಣ ವಾಗುತ್ತವೆ. ಇದು ಇಂದ್ರಿಯ ನಿಗ್ರಹಕ್ಕೆ ಸಹಾಯ ಮಾಡುತ್ತದೆ. ಯಮ, ನಿಯಮ, ಆಸನಗಳು, ಪ್ರಾಣಾಯಾಮಗಳನ್ನು ನಿಯತಕಾಲಿಕವಾಗಿ ಮಾಡಿದರೆ ಅವುಗಳ ಮುಂದಿನ ಹಂತವಾದ ಪ್ರತ್ಯಾಹಾರಕ್ಕೆ ಸುಲಭವಾಗಿ ಹೋಗಬಹುದು. ಮುದ್ರೆಗಳು:- ಯೋಗಾಸನ, ಪ್ರಾಣಯಾಮಗಳ ಜೊತೆಗೆ ಮುದ್ರೆಗಳನ್ನು ಹಾಕಬಹುದು. ಮುದ್ರೆಗಳನ್ನು ಯೋಗದ ಒಂದು ಭಾಗವೆಂದೇ ಪರಿಗಣಿಸಲಾಗಿದೆ. ಹಾಗಾಗಿ ಅವುಗಳನ್ನು ಯೋಗಮುದ್ರೆಗಳೆಂದೇ ಕರೆಯುತ್ತಾರೆ. ಮುದ್ರೆ ಎನ್ನುವ ಶಬ್ಧವನ್ನು ಮುದ ಮತ್ತು ದ್ರಾ ಎಂದು ಪದವಿಭಜನೆ ಮಾಡಬಹುದು. ಮುದ ಅಂದರೆ ಸಂತೋಷ, ಆನಂದ, ದ್ರಾ ಎಂದರೆ ಹೊರಗೆ ತರುವ ಎಂಬರ್ಥವಾಗುತ್ತದೆ. ಅಂದರೆ ಮುದ್ರೆಗಳು ಸಂತೋಷವನ್ನು, ಆನಂದವನ್ನು ಉಂಟುಮಾಡುವ ಸಾಧನಗಳು ಎಂದು ಪರಿಗಣಿಸಬಹುದು. ದೇಹದಲ್ಲಿರುವ ಚಕ್ರಗಳು ಮನುಷ್ಯನಿಗೆ ದೈಹಿಕ, ಮಾನಸಿಕ, ಬೌದ್ಧಿಕ, ಭಾವನಾತ್ಮಕ ಮತ್ತು ಪಾರಮಾರ್ಥಿಕ ಶಕ್ತಿಯನ್ನು ತಂದು ಕೊಡುತ್ತವೆ. ನಾವು ಹಾಕುವ ಮುದ್ರೆಗಳು ಈ ಶಕ್ತಿ ನಾಶವಾಗದಂತೆ ತಡೆದು ದೇಹದ ಬೇರೆ ಬೇರೆ ಅಂಗಗಳಿಗೆ ಅಂತಹ ಶಕ್ತಿಯನ್ನು ಒದಗಿಸುತ್ತವೆ. ಮುದ್ರೆಗಳಿಗೆ ಒಂದು ವೈಜ್ಞಾನಿಕ ಹಿನ್ನಲೆಯಿದೆ. ನಮ್ಮ ಶರೀರದಲ್ಲಿರುವ ಎಲೆಕ್ಟ್ರೊ ಮ್ಯಾಗ್ನೆಟಿಕ್ ಪವರ್ ಯಾ ಆಯಸ್ಕಾಂತೀಯ ಅಲೆಗಳು ಶರೀರದಿಂದ ಸತತವಾಗಿ ಹೊರ ಹೊಮ್ಮುತ್ತಿರುತ್ತವೆ. ಈ ಚೈತನ್ಯಶಕ್ತಿಯು ಕೈ ಬೆರಳುಗಳ ತುದಿ, ಮೂಗು, ತುಟಿ, ಕಿವಿಯ ತುದಿ ಮತ್ತು ಕಾಲುಬೆರಳುಗಳ ತುದಿ-ಈ ಅಗ್ರ ಭಾಗಗಳಿಂದ ಮಾತ್ರ ಹೊರವಲಯದಲ್ಲಿ ಹೊಮ್ಮುತ್ತಿರುತ್ತವೆ. ಅದರೆ ಕೈ ಬೆರಳುಗಳಿಂದ ಮಾತ್ರಾ ಮುದ್ರೆಗಳನ್ನು ಮಾಡಲು ಸಾಧ್ಯವಿದೆ. ಜ್ಞಾನವಾಹಿ ನಾಡಿಗಳ ತುದಿಗಳು ಅಗ್ರಭಾಗದ ತನಕ ಮುಟ್ಟಿವೆ.1 ಕೈ ಬೆರಳುಗಳಿಂದ ವಿವಿಧ ಮುದ್ರೆಗಳನ್ನು ಮಾಡಿದಾಗ ಈ ಚೈತನ್ಯಶಕ್ತಿ ಬಂಧಿಸಲ್ಪಟ್ಟು ಶರೀರಕ್ಕೆ ಮರುಕಳಿಸಬಹುದು, ಹೀಗೆ ಶಕ್ತಿಯನ್ನು ಮರುಕಳಿಸಿ ಪಂಚತತ್ವಗಳಲ್ಲಿ ಸಮತೋಲನ ಉಂಟು ಮಾಡಬಹುದು.2 ಹೆಬ್ಬೆಟ್ಟಿನ ತುದಿಗೆ ಇತರ ಬೆರಳುಗಳ ತುದಿಯನ್ನು ಜೋಡಿಸಿದಾಗ ಮುದ್ರೆಗಳು ಆಗುತ್ತವೆ. ಹೆಬ್ಬೆಟ್ಟಿನ ತುದಿಗೆ ಬೇರೆ ಬೇರೆ ಬೆರಳುಗಳ ತುದಿಯನ್ನು ಸೇರಿಸಿದಾಗ ಬೇರೆ ಬೇರೆ ಮುದ್ರೆಗಳಾಗುತ್ತವೆ ಮತ್ತು ಅವುಗಳಿಗೆ ಬೇರೆ ಬೇರೆಯ ಪರಿಣಾಮಗಳು ಉಂಟಾಗುತ್ತವೆ. ಮುದ್ರೆಗಳನ್ನು ಮಾಡುವಾಗ ಮಂತ್ರಗಳನ್ನು ಹೇಳುತ್ತಿದ್ದರೆ ಇನ್ನೂ ಒಳ್ಳೆಯದು. ಇದರಿಂದ ಮೆದುಳು ಪ್ರಚೋದನೆಗೊಳ್ಳುತ್ತದೆ. ಮೆದುಳಿನಿಂದ ದೇಹದ ಎಲ್ಲಾ ಭಾಗಗಳಿಗೆ ಸಂಪರ್ಕ ಇರುವುದರಿಂದ ಇಡೀ ದೇಹ ಮುದ್ರೆಗಳಿಂದ ಪ್ರಭಾವಿತಗೊಳ್ಳುತ್ತದೆ. ಮುದ್ರೆಗಳನ್ನು ಮಾಡುವುದು ಸುಲಭ, ತುಂಬಾ ಸರಳ. ಯೋಗಾಸನದಂತೆ ಬಹಳ ಕಷ್ಟಪಡಬೇಕಾಗಿಲ್ಲ. ಎಲ್ಲಾ ವಯೋಮಾನದವರು, ವೃದ್ಧರು, ಸ್ತ್ರೀಯರು, ರೋಗಿಗಳು, ಮಕ್ಕಳು, ಹೀಗೆ ಯಾರು ಬೇಕಾದರೂ ಮಾಡಬಹುದು. ಮಲಗಿಕೊಂಡು, ಕುಳಿತುಕೊಂಡು, ನಿಂತುಕೊಂಡು, ಓಡಾಡುತ್ತಾ, ಟಿವಿ ನೋಡುತ್ತಾ, ಇನ್ನೊಬ್ಬರೊಡನೆ ಮಾತನಾಡುತ್ತಾ, ಪ್ರಯಾಣ ಮಾಡುತ್ತಾ ಮತ್ತು ಇಂತಹ ಬೇರೆ ಸಂದರ್ಭಗಳಲ್ಲಿಯೂ ಮಾಡಬಹುದು. ಅನಾರೋಗ್ಯದ ಯಾವುದೇ ಸಮಸ್ಯೆಗಳಿದ್ದರೂ, ಸಂಬಂಧಪಟ್ಟ ಮುದ್ರೆ ಯಾವುದೆಂದು ತಿಳಿದುಕೊಂಡು ಮಾಡಬಹುದು. ದಿರ್ಘಕಾಲೀನ ಜಾಢ್ಯಗಳಿಗೂ ಮುದ್ರಾವಿಜ್ಞಾನದಲ್ಲಿ ಪರಿಹಾರವಿದೆ. ಇದಕ್ಕಾಗಿ ಯಾವ ಆಸ್ಪತ್ರೆಗೂ ದಾಖಲಾಗಬೇಕಾಗಿಲ್ಲ. ಹಣ ಖರ್ಚು ಮಾಡಬೇಕಾಗಿಲ್ಲ. ಶಸ್ತ್ರಚಿಕಿತ್ಸೆಯೊಂದನ್ನು ಹೊರತುಪಡಿಸಿ ಇತರೇ ಬೇರೆ ಯಾವುದೇ ಸಂದರ್ಭಗಳಲ್ಲಿಯೂ ನೀವು ಪರಿಹಾರಕ್ಕಾಗಿ ಮುದ್ರಾ ವಿಜ್ಞಾನವನ್ನು ಅವಲಂಬಿಸಬಹುದು. ಮುದ್ರೆಗಳಲ್ಲಿ ಎರಡು ವಿಧ. ಆರೋಗ್ಯ ಸಂವರ್ಧಕ ಮತ್ತು ಸಂರಕ್ಷಕ ಮುದ್ರೆಗಳು. ಇನ್ನೊಂದು ಆಧ್ಯಾತ್ಮಿಕ ಮತ್ತು ಉಪಾಸನಾ ಮುದ್ರೆಗಳು. ಮೊದಲಿನ ಗುಂಪಿನ ಮುದ್ರೆಗಳು ಅನಾರೋಗ್ಯವನ್ನು ಹೊಡೆದೋಡಿಸುತ್ತವೆ. ಸಾಧಕನನ್ನು ರಕ್ಷಿಸುತ್ತವೆ. ಉಪಾಸನಾ ಮತ್ತು ಆಧ್ಯಾತ್ಮಿಕ ಮುದ್ರೆಗಳು ಶರೀರದಲ್ಲಿನ ಕುಂಡಲಿನೀ ಶಕ್ತಿಯನ್ನು ಜಾಗೃತಗೊಳಿಸಿ ನಿಮ್ಮನ್ನು ಅಲೌಕಿಕ ಪ್ರಪಂಚಕ್ಕೆ ಕೊಂಡೊಯ್ಯುತ್ತವೆ. ಈ ಎರಡೂ ತರಹದ ಮುದ್ರೆಗಳು ಒಟ್ಟಾರೆಯಾಗಿ ರೋಗಗಳಿಂದ ಮುಕ್ತರನ್ನಾಗಿ ಮಾಡುತ್ತವೆ. ಶರೀರಕ್ಕೆ ಶಕ್ತಿ, ಚೈತನ್ಯಗಳನ್ನು ತಂದುಕೊಡುತ್ತವೆ. ಶಾಂತಿ, ಸಮಾಧಾನ, ಆನಂದಗಳನ್ನು ಅನುಭವಿಸುವಂತೆ ಮಾಡುತ್ತವೆ. ಅಂತಿಮವಾಗಿ ನಿಮ್ಮನ್ನು ಜೀವನ್ಮುಕ್ತನನ್ನಾಗಿಸುತ್ತವೆ. ಮುದ್ರೆಗಳಲ್ಲಿ ಅನೇಕ ವಿಧ. ಮನ ಮುದ್ರೆಗಳು, ಕಾಯ ಮುದ್ರೆಗಳು, ಬಂಧ ಮುದ್ರೆಗಳು, ಆಧಾರ ಮುದ್ರೆಗಳು ಮುಂತಾದವು. ಮುದ್ರೆಗಳನ್ನು ಮಾಡುವಾಗ ನಿಮ್ಮ ಆರೋಗ್ಯ-ಅನಾರೋಗ್ಯಗಳನ್ನು ಗಮನದಲ್ಲಿಟ್ಟುಕೊಂಡು, ನಿಮ್ಮ ಸಮಸ್ಯೆಗಳಿಗೆ ಯಾವ ಮುದ್ರೆಗಳು ಪರಿಹಾರ ಕೊಡುತ್ತವೆ ಎಂದು ತಿಳಿದುಕೊಂಡು, ಎಷ್ಟು ಹೊತ್ತು ಮುದ್ರೆಗಳನ್ನು ಮಾಡಬೇಕು ಎಂದು ಮುದ್ರೆ ವಿಜ್ಞಾನ ಪರಿಣಿತರೊಂದಿಗೆ ಚರ್ಚಿಸಿ ಮುದ್ರೆಗಳನ್ನು ಹಾಕಬೇಕು. ನಮ್ಮ ದೇಹ ಪಂಚಭೂತಗಳಿಂದಾಗಿದೆ. ಈ ಪಂಚಭೂತಗಳ ಸಮತೋಲನದಿಂದ ನಮ್ಮ ಆರೋಗ್ಯ ವ್ಯವಸ್ಥೆಗೊಂಡಿದೆ. ಇವುಗಳಲ್ಲಿ ಹೆಚ್ಚು-ಕಡಿಮೆ ಆದರೆ ನಮ್ಮನ್ನು ಯಾವುದಾದರೂ ಒಂದು ರೋಗ ಕಾಡುತ್ತದೆ. ನಮ್ಮ ಪ್ರತಿಯೊಂದು ಕೈಯಲ್ಲಿಯೂ ಐದು ಬೆರಳುಗಳಿವೆ. ಹೆಬ್ಬೆಟ್ಟು ಅಗ್ನಿಯನ್ನೂ, ತೋರುಬೆರಳು ವಾಯುವನ್ನೂ, ಮಧ್ಯದ ಬೆರಳು ಆಕಾಶವನ್ನೂ, ಅನಾಮಿಕ (ಉಂಗುರದ) ಬೆರಳು ಪೃಥ್ವಿಯನ್ನೂ ಮತ್ತು ಕಿರು ಬೆರಳು ಜಲವನ್ನೂ ಪ್ರತಿನಿದಿಸುತ್ತವೆ. ಹೆಬ್ಬೆರಳಿನೊಂದಿಗೆ ಇತರ ಬೆರಳುಗಳ ಅಗ್ರಭಾಗ ಜೋಡಿಸಿದಾಗ ಆಯಾ ತತ್ವವು ಸಮತೋಲನದಲ್ಲಿರುತ್ತವೆ. ಹೆಬ್ಬೆರಳಿನ ಬುಡದ ರೇಖೆಯ ಕೆಳಗೆ ಇತರ ಬೆರಳುಗಳ ಅಗ್ರಭಾಗ ಜೋಡಿಸಿದರೆ ಆಯಾ ತತ್ವ ಕಡಿಮೆ ಆಗುತ್ತದೆ. ಹೆಬ್ಬೆರಳಿನ ಅಗ್ರಭಾಗವನ್ನು ಇತರ ಬೆರಳುಗಳ ಬುಡದ ರೇಖೆಯ ಬಳಿ ತಾಗಿಸಿದಾಗ ಆಯಾ ತತ್ವವು ಹೆಚ್ಚುತ್ತದೆ. ಇವೇ ಎಲ್ಲಾ ಮುದ್ರೆಗಳ ಮಾರ್ಗದರ್ಶಕ ನಿಯಮಗಳು. ನಾವು ವಿವಿಧ ಮುದ್ರೆಗಳನ್ನು ಹಾಕುವುದರಿಂದ ಪಂಚಭೂತಗಳ ಸಮತೋಲನಕ್ಕೆ ಸಹಾಯವಾಗುತ್ತದೆ.3 ಯೋಗಮುದ್ರೆಗಳ ಬಗ್ಗೆ ಮಾರುಕಟ್ಟೆಯಲ್ಲಿ ಪುಸ್ತಕಗಳು ಸಿಗುತ್ತವೆ. ಅವುಗಳನ್ನು ಜ್ಞಾನಕ್ಕೋಸ್ಕರ ಓದಬಹುದು ಮತ್ತು ಆ ಮಾರ್ಗದರ್ಶನದಂತೆ ಮುದ್ರೆಗಳನ್ನು ಹಾಕಬಹುದು. ಸ್ನಾನ:- ಬೆಳಗಿನ ಹೊತ್ತು ಮಾಡಬೇಕಾದ ಇನ್ನೊಂದು ಮುಖ್ಯ ಕೆಲಸ ಸ್ನಾನ ಮಾಡುವುದು. ತಣ್ಣೀರಿನಿಂದ ಸ್ನಾನ ಮಾಡುವುದು ಶ್ರೇಷ್ಠ. ಚಳಿಗಾಲದಲ್ಲಿ ಮಾತ್ರಾ ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಬೇಕು. ಉಳಿದಂತೆಲ್ಲಾ ಸಾಮಾನ್ಯವಾಗಿ ತಣ್ಣೀರಿನಿಂದ ಸ್ನಾನ ಮಾಡುವುದೇ ಆರೋಗ್ಯಕರ. ನಾವು ಸಮಶೀತೋಷ್ಣ ವಲಯದಲ್ಲಿದ್ದರೂ ಬಿಸಿಲಿನ ದಿನಗಳೇ ಜಾಸ್ತಿ. ಹಾಗಾಗಿ ಬಿಸಿಲಿನ ತಾಪದಿಂದ ದೇಹ ಬಿಸಿಯಾಗಿರುತ್ತದೆ. ದೈಹಿಕ ಕಾರಣಗಳಲ್ಲದೆ ಮಾನಸಿಕ-ವ್ಯಾಕುಲತೆ ಕಾರಣಗಳಿಗಾಗಿಯೂ ಶರೀರ ಬಿಸಿಯಾಗುತ್ತದೆ. ಹಾಗಾಗಿ ತಣ್ಣೀರಿನ ಸ್ನಾನವೇ ಹೆಚ್ಚು ಹಿತಕರ. ತಣ್ಣೀರು ಸ್ನಾನ ಮಾಡುವುದರಿಂದ ದೇಹದ ಶಾಖ ಕಡಿಮೆಯಾದರೂ, ಆ ಉಷ್ಣ ಹೊಟ್ಟೆಭಾಗಕ್ಕೆ ಹೋಗಿ ಹಸಿವೆ ಜಾಸ್ತಿಯಾಗುತ್ತದೆ. ತುಂಬಾ ಬಿಸಿ ಇರುವ ನೀರಿನಿಂದ ಸ್ನಾನ ಮಾಡಿದರೆ ಬಳಲಿಕೆ ಜಾಸ್ತಿಯಾಗುತ್ತದೆ. ಸಮುದ್ರ, ನದಿ, ಕೊಳ, ಸರೋವರ, ಪುಷ್ಕರಣಿಗಳಲ್ಲಿ ತಲೆಯನ್ನು ಮೂರು ಸಾರೆ ಮುಳುಗಿಸಿ ಸ್ನಾನ ಮಾಡುವುದು ಶ್ರೇಯಸ್ಕರ. ಅದಾಗದಿದ್ದಾಗ ತಂಬಿಗೆಯಿಂದ ತಲೆಯ ಮೇಲೆ ನೀರು ಹಾಕಿಕೊಂಡು ಸ್ನಾನ ಮಾಡಬಹುದು. ಆ ಸಮಯದಲ್ಲೇ ಕಣ್ಣು, ಮೂಗು, ಕಿವಿಗಳ ಮೇಲೆ ನೀರು ಹಾಕಿಕೊಂಡು ಚೆನ್ನಾಗಿ ತೊಳೆದುಕೊಳ್ಳಬೇಕು. ಬೇರೆ ಸಮಯಗಳಲ್ಲಿ, ಕಛೇರಿಗಳಲ್ಲಿ, ಸಭೆಗಳಲ್ಲಿ, ಪ್ರಯಾಣ ಮಾಡುವಾಗ ಮೂಗು, ಕಿವಿಗಳನ್ನು ಸ್ವಚ್ಛ ಮಾಡಿಕೊಳ್ಳಬಾರದು. ಅದು ಅಸಭ್ಯ ವರ್ತನೆ ಎನ್ನಿಸುವುದು. ಸ್ನಾನದ ಕೋಣೆಯಲ್ಲಿದ್ದಾಗ ಆ ಕೆಲಸ ಮಾಡಿ ಮುಗಿಸಬೇಕು. ಆಯುರ್ವೇದದಲ್ಲಿ ಚರ್ಮವನ್ನು ಮೂರನೇ ಸ್ವಾಶಕೋಶ ಎಂದು ಪರಿಗಣಿಸಲಾಗಿದೆ. ಸ್ನಾನಕ್ಕೆ ಕಡ್ಲಿಹಿಟ್ಟು, ಸೀಗೆಕಾಯಿ, ಅಂಟಿವಾಳ ಕಾಯಿ, ಬುರುಗಿನ ಕಾಯಿ ಪುಡಿಗಳನ್ನು ಮಿಶ್ರಣಮಾಡಿ ಉಪಯೋಗಿಸಬಹುದು. ಸೋಪನ್ನೂ ಬಳಸಬಹುದು. ಸ್ನಾನ ಮಾಡುವಾಗ ದೇಹವನ್ನು ಅಂಗೈನಿಂದ ಚೆನ್ನಾಗಿ ತಿಕ್ಕಿ ತೊಳೆಯಬೇಕು. ಮಾರುಕಟ್ಟೆಯಲ್ಲಿ ಸೋಪ್ಸ್ಟೋನ್ ಅನ್ನುವ ಒಂದು ಸಾಧನ ಸಿಗುತ್ತದೆ. ಅದರಿಂದಲೂ ತಿಕ್ಕಬಹುದು. ಇತ್ತೀಚಿಗೆ ಮಹಿಳೆಯರು ಲೋಫಾ [ಸ್ಟಾಂಜ ಸಾಧನ] ಬಳಸುವುದನ್ನು ಕೇಳಿದ್ದೇನೆ. ನನ್ನ ತಾತ ಮೈ ತಿಕ್ಕಿಕೊಳ್ಳಲು ನಾಲ್ಕು ಅಂಗುಲ ಉದ್ದ, ಎರಡು ಅಂಗಲ ಅಗಲ, ಅರ್ಧ ಅಂಗುಲ ಗಾತ್ರವಿರುವ ಸಾಪಗಿರುವ ಬೆಣಚು ಕಲ್ಲನ್ನು [ಕ್ಟಾಟ್ರ್ಸ] ಉಪಯೋಗಿಸುತ್ತಿದ್ದುದನ್ನು ನಾನು ನೋಡಿದ್ದೇನೆ. ಚರ್ಮದ ಮೇಲೆ ಇರುವ ರಂಧ್ರಗಳು ಬೆವರಿನಿಂದ, ಇತರೆ ಕಲ್ಮಶಗಳಿಂದ ಮುಚ್ಚಿರುತ್ತದೆ. ದೇಹವನ್ನು ಚೆನ್ನಾಗಿ ತಿಕ್ಕಿ ತೊಳೆಯುವುದರಿಂದ ಆ ರಂಧ್ರಗಳ ಮೇಲಿರುವ ಕೊಳೆ ಹೋಗುತ್ತದೆ. ಸ್ನಾನ ಮಾಡುವುದರಿಂದ ದೇಹದ ಮೇಲಿರುವ ಹೊಲಸು ಹೋಗುತ್ತದೆ. ದೇಹದ ಉಷ್ಣ ಕಡಿಮೆಯಾಗುತ್ತದೆ. ಆಲಸ್ಯ ದೂರವಾಗುತ್ತದೆ. ಮೆದುಳು ಶಾಂತವಾಗುತ್ತದೆ. ಅವಯವ ಸಡಿಲವಾಗುತ್ತದೆ. ಬಲ ಹೆಚ್ಚಾಗುತ್ತದೆ. ಆಯುಷ್ಯ ಸ್ಥಿರವಾಗುತ್ತದೆ. ಬುದ್ಧಿ ಸೂಕ್ಷ್ಮವಾಗುತ್ತವೆ. ಆಯುಷ್ಯ ವೃದ್ಧಿಸುತ್ತದೆ. ಒಟ್ಟಾರೆಯಾಗಿ ದೇಹ-ಮನಸ್ಸು-ಬುದ್ಧಿ ಹುಮ್ಮಸ್ಸಿನಿಂದ ಉಲ್ಲಾಸದಿಂದ ಕೂಡಿರುತ್ತವೆ. ತಣ್ಣೀರಿನಿಂದ ಸ್ನಾನ ಮಾಡುವುದರಿಂದ ರಕ್ತಪಿತ್ತ ಕಡಿಮೆಯಾಗುತ್ತದೆ. ಬಿಸಿ ನೀರಿನಿಂದ ಸ್ನಾನ ಮಾಡಿದರೆ ವಾತ, ಕಫ ದೋಷಗಳು ನಿವಾರಣೆಯಾಗುತ್ತವೆ. ಬಿಸಿ ನೀರಿನಿಂದ ತಲೆಯೊಂದನ್ನು ಬಿಟ್ಟು ದೇಹದ ಸ್ನಾನ ಮಾಡಿದರೆ, ಬಲ ಸ್ಥಿರವಾಗುತ್ತದೆ. ಬಿಸಿ ನೀರಿನಿಂದ ತಲೆ ಸ್ನಾನ ಮಾಡಿದರೆ, ಸೋಪನ್ನು ತಲೆಗೆ ಹಚ್ಚಿದರೆ ಕೂದಲು ಉದುರುತ್ತದೆ. ಕಣ್ಣಿಗೆ ತೊಂದರೆಯಾಗುತ್ತದೆ. ನಿಶ್ಯಕ್ತಿಯಾಗುತ್ತದೆ. ಆದರೆ ಅಭ್ಯಂಜನ ಮಾಡುವಾಗ ತಲೆಗೆ ಬಿಸಿನೀರು ಹಾಕಿ ಸ್ನಾನ ಮಾಡಬಹುದು. ತೈಲಾಭ್ಯಂಗ :- ತೈಲ ಮತ್ತು ಅಭ್ಯಂಗ ಈ ಎರಡೂ ಶಬ್ಧಗಳು ಸೇರಿ ತೈಲಾಭ್ಯಂಗ ಶಬ್ದವಾಗಿದೆ. ತೈಲ ಎಂದರೆ ಎಣ್ಣೆ. ತಲೆ ಮತ್ತು ದೇಹಕ್ಕೆಲ್ಲಾ ಎಣ್ಣೆ ಹಚ್ಚಿಕೊಂಡು ಬಿಸಿ ನೀರಿನಿಂದ ಸ್ನಾನ ಮಾಡುವುದು ತೈಲಾಭ್ಯಂಗ ಎಂದು ಅನ್ನಿಸಿಕೊಳ್ಳುತ್ತದೆ. ನಮಗೆ ಬೇಕಾಗುವ ವಾತವು ಹೆಚ್ಚಾಗದೆ ಅಥವಾ ಕಡಿಮೆಯಾಗದೆ ಸಮ ಪ್ರಾಮಾಣದಲ್ಲಿ ಇರುವ ಹಾಗೆ ನೋಡಿಕೊಳ್ಳಬೇಕು. ಶರೀರದ ಇತರ ಅವಯವಗಳೂ ಸಮಪ್ರಮಾಣದಲ್ಲಿರಬೇಕು. ನಮ್ಮ ಚರ್ಮದಲ್ಲಿ ವಾಯುವಿದೆ. ನಮ್ಮ ದೇಹದ ಇತರ ಅಂಗಗಳಿಗೂ, ಅವುಗಳ ಚಟುವಟಿಕೆಗಳಿಗೆ ವಾಯುಬೇಕು. ಅಂತಹ ವಾಯುವನ್ನು [ಆಮ್ಲಜನಕವನ್ನು] ಬೇರೆ ಬೇರೆ ಅಂಗಗಳಿಗೆ ತಲುಪಿಸುವ ಕೆಲಸವನ್ನು ರಕ್ತ ಮಾಡುತ್ತದೆ. ತೈಲಾಭ್ಯಂಗದಿಂದ ಚರ್ಮ ಸ್ವಚ್ಛವಾಗಿ ಪ್ರಕೃತಿಯಲ್ಲಿನ ಆಮ್ಲಜನಕ ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಾಗುತ್ತದೆ. ಇದರಿಂದ ಶರೀರ ಚಟುವಟಿಕೆಯಿಂದಿರಲು ಸಹಾಯವಾಗುತ್ತದೆ. ತೈಲಾಭ್ಯಂಗಕ್ಕೆ ಬೇಸಿಗೆ ಕಾಲದಲ್ಲಿ ಔಡಲ ಎಣ್ಣೆ, ಕೊಬ್ಬರಿ ಎಣ್ಣೆ ಮುಂತಾದವುಗಳನ್ನು ಬಳಸಬಹುದು. ಮಾರುಕಟ್ಟೆಯಲ್ಲಿ ಎಣ್ಣೆ ಸ್ನಾನಕ್ಕಾಗಿ ತಯಾರಿಸಿದ ಬಾಹ್ಮೀ ತೈಲ, ಆಮಲಕೀ ತೈಲ, ಕ್ಷೀರಬಲ ತೈಲ ಮುಂತಾದವು ಲಭ್ಯವಿದೆ. ಚಳಿಗಾಲದಲ್ಲಿ ಸೂರ್ಯಕಾಂತಿ ಎಣ್ಣೆ, ಅಗಸಿ ಎಣ್ಣೆ ಉಪಯೋಗಿಸ ಬಹುದು. ಒಂದು ನೂರು ಮಿಲಿ ಲೀಟರ್ನಷ್ಟು ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ಉಪಯೋಗಿಸವುದು ರೂಡಿ. ಮೊದಲು ತಲೆಗೆ ಎರಡು ಚಮಚ ಎಣ್ಣೆ ಹಾಕಿ ಒತ್ತಬೇಕು, ವೃತ್ತಾಕರವಾಗಿ ತಿಕ್ಕಬೇಕು. ನಂತರ ಕಿವಿ, ಕುತ್ತಿಗೆಗೆ ಎಣ್ಣೆಹಚ್ಚಿ ತಿಕ್ಕಬೇಕು. ಆಮೇಲೆ ಬೆನ್ನು, ಎದೆ, ಹೊಟ್ಟೆ, ಕೈ, ಕಾಲು, ಅಂಗಾಲು ಮುಂತಾದ ಅಂಶಗಳಿಗೆ ಎಣ್ಣೆ ಹಚ್ಚಿ ತಿಕ್ಕಬೇಕು. ಮಂಡಿಗೆ ಎಣ್ಣೆ ಹಚ್ಚಿ ವೃತ್ತಾಕಾರವಾಗಿ ತಿಕ್ಕಬೇಕು. ಹೀಗೆ ಚೆನ್ನಾಗಿ ತಿಕ್ಕುವುದರಿಂದ ಎಣ್ಣೆಯ ಸ್ವಲ್ಪ ಪ್ರಮಾಣ ಶರೀರವನ್ನು ಸೇರುತ್ತದೆ. ಕಿವಿಗಳಿಗೆ ಮತ್ತು ಪಾದಗಳಿಗೆ ಎಣ್ಣೆಯನ್ನು ಚೆನ್ನಾಗಿ ಹಚ್ಚಿ ತಿಕ್ಕುವುದರಿಂದ ದೃಷ್ಟಿದೋಷಗಳು ನಿವಾರಣೆಯಾಗುತ್ತವೆ. ಎಣ್ಣೆಯನ್ನು ತಲೆಗೆ ಹೆಚ್ಚಾಗಿ ಹಾಕಿ ತಿಕ್ಕುವುದರಿಂದ ಕೂದಲು ಹುಲುಸಾಗಿ ಬೆಳೆಯುತ್ತವೆ. ಮೆದುಳಿನ ಶಕ್ತಿ ಹೆಚ್ಚುತ್ತದೆ. ಕೂದಲು ಉದುರುವುದು ಕಡಿಮೆಯಾಗುತ್ತದೆ. ಶರೀರ ಹಗುರವಾಗುತ್ತದೆ. ನಿದ್ರೆ ಚೆನ್ನಾಗಿ ಬರುತ್ತದೆ. ತಲೆ ಮತ್ತು ದೇಹಕ್ಕೆಲ್ಲಾ ಎಣ್ಣೆ ಹಚ್ಚಿದ ಮೇಲೆ ಇಪ್ಪತ್ತರಿಂದ ಮೂವತ್ತರಿಂದ ನಿಮಿಷ ನೆನೆಯಬೇಕು. ಆನಂತರ ಬಿಸಿ ನೀರಿನ ಸ್ನಾನ ಮಾಡಬೇಕು. ಸೀಗೆಕಾಯಿ ಪುಡಿ, ಅರಿಷಿಣ ಪುಡಿ, ಕಡ್ಲೆ ಹಿಟ್ಟು ಸಮಪ್ರಮಾಣದಲ್ಲಿ ಬೆರಿಸಿ ನೀರಿನಲ್ಲಿ ಕಲೆಸಿ ತಲೆಗೆ ಮತ್ತು ದೇಹಕ್ಕೆ ಚೆನ್ನಾಗಿ ತಿಕ್ಕಿ ತೊಳೆಯಬೇಕು. ಒಣ ಬಟ್ಟೆಯಿಂದ ಶರೀರದ ಎಲ್ಲಾ ಅವಯವಗಳನ್ನು ಹಿತವಾಗಿ ಒರೆಸಿಕೊಳ್ಳಬೇಕು. ತೈಲಾಭ್ಯಂಗ ಮಾಡುವಾಗ ಅಂಗಾಲಿಗೆ-ಪಾದಕ್ಕೆ ಚೆನ್ನಾಗಿ ಎಣ್ಣೆ ಹಾಕಿ ತಿಕ್ಕೆಬೇಕು. ಇದರಿಂದ ಹಿಮ್ಮಡಿ ಒಡೆಯುವುದು ಕಡಿಮೆಯಾಗುತ್ತದೆ. ಪಾದಗಳ ಚಲನೆ ಸುಲಭವಾಗುತ್ತದೆ. ಅಂಗಾಲು ಉರಿ ಕಡಿಮೆಯಾಗುತ್ತದೆ. ಮಧುಮೇಹ ಇರುವವರಿಗೆ ಅಂಗಾಲು ಉರಿ ಇರುತ್ತದೆ. ಅದು ಕಡಿಮೆಯಾಗುತ್ತದೆ. ತೈಲಾಭ್ಯಂಗದ ನಂತರ ಕೂದಲನ್ನು ಚೆನ್ನಾಗಿ ಒರೆಸಿ ಒಣಗಿಸಬೇಕು. ಕೊಬ್ಬರಿ ಎಣ್ಣೆಯನ್ನು ಹಚ್ಚಿಕೊಂಡು ಕೂದಲನ್ನು ಬಾಚಿಕೊಳ್ಳಬೇಕು. ಮಾರುಕಟ್ಟೆಯಲ್ಲಿ ಅನೇಕ ಉಪಯುಕ್ತ ಆಯುರ್ವೇದ ಕೇಶತೈಲಗಳು ಸಿಗುತ್ತವೆ. ಅವುಗಳನ್ನು ಬಳಸಬಹುದು. ಬಾಚಣಿಕೆಯಿಂದ ಕೂದಲುಗಳ ಮಧ್ಯೆ ಇರುವ ಕೊಳೆ ಹೋಗುತ್ತದೆ. ಕೂದಲು ಆಕಡೆ ಈ ಕಡೆ ತಿರುಗಿಸುವುದರಿಂದ ಅವುಗಳಿಗೆ ವ್ಯಾಯಾಮ ಆದಂತಾಗಿ ಬೆಳೆಯಲು ಅನುಕೂಲವಾಗುತ್ತದೆ. ತೈಲಾಭ್ಯಂಗಕ್ಕೆ ತೈಲಾಭ್ಯಂಜನ ಎಂದೂ ಕರೆಯುತ್ತಾರೆ. ತೈಲಾಭ್ಯಂಗಕ್ಕೆ ಶುಭಾಶುಭ ದಿನಗಳಿವೆ. ಸನಾತನ ಧರ್ಮದ ಶ್ಲೋಕವೊಂದು ಹೀಗಿದೆ. ಅರ್ಕೇ ತಾಪಂ ಕಾಂತಿರಿಂದೌ ನರಾಣಾಂ ಭೌಮೇ ಮೃತ್ಯುಃ ಸೋಮಜೇ ಪುತ್ರಲಾಭ| ಗುರೌ ರೋಗಃ ಭಾರ್ಗವೇ ವಿತ್ತಹಾನಿಃ ಮಂದೇಭ್ಯಂಗೋ ಹ್ಯಾಯುರಾರೋಗ್ಯ ವೃದ್ದಿ: || ತೈಲಾಭ್ಯಂಗ ಸ್ನಾನವನ್ನು ಭಾನುವಾರ ಮಾಡಿದರೆ ತಾಪವನ್ನು, ಸೋಮವಾರ ಕಾಂತಿಯನ್ನು, ಮಂಗಳವಾರ ಮರಣಭಯವನ್ನು, ಬುಧವಾರ ಪುತ್ರಾದಿ ಸಂಪತ್ತನ್ನು, ಗುರುವಾರ ರೋಗವನ್ನು, ಶುಕ್ರವಾರ ಧನಾಶಯವನ್ನು ತರುತ್ತದೆ. ಶನಿವಾರ ಸಕಲ ಸಂಪತ್ತಿನ ಲಾಭವೂ ಆಗುತ್ತದೆ. ಸ್ರೀಯರಿಗೆ ಮಂಗಳವಾರ ಮತ್ತು ಶುಕ್ರವಾರಗಳು ಅಭ್ಯಂಗ ಸ್ನಾನಕ್ಕೆ ಶುಭದಿವಸಗಳು. ಸಂಕ್ರಮಣ, ದಶಮಿ, ಏಕಾದಶಿ, ದ್ವಾದಶಿ [ದಿನತ್ರಯಗಳು], ಅಮಾವಾಸ್ಯಾದಿ ಪರ್ವದಿನಗಳಂದು ಅಭ್ಯಂಗವು ನಿಷಿದ್ಧವಾಗಿದೆ.4 ಹಬ್ಬ ಹರಿದಿನಗಳಲ್ಲಿ ಅಭ್ಯಂಗ ಸ್ನಾನ ಮಾಡಬಹುದು. ಇದನ್ನು ನಂಬುವವರು ಇದರಂತೆ ಆಚರಿಸಬಹುದು. ಆಯುಷ್ಕರ್ಮ ಆಯುಷ್ [ಆಯುಷ್ಯ] ಅಂದರೆ ಜೀವಿತಾವದಿ. ಒಬ್ಬ ವ್ಯಕ್ತಿ ಜೀವಿಸುವಷ್ಟು ಕಾಲ. ಕರ್ಮ ಅಂದರೆ ಕೆಲಸ. ಆಯುಷ್ಕರ್ಮ ಅಂದರೆ ಜೀವಿತಾವದಿಯನ್ನು ಹೆಚ್ಚು ಮಾಡುವ ಕೆಲಸ. ಆಯುಷ್ಕರ್ಮವನ್ನು ಉಚಿತವಾದ ದಿನ ಮತ್ತು ಕಾಲದಲ್ಲಿ ಮಾಡಿಸಿಕೊಂಡರೆ ಜೀವಿತಾವದಿ ಹೆಚ್ಚಾಗುತ್ತದೆ. ಇದು ಆಶ್ಚರ್ಯವಾದರೂ ಸತ್ಯ. ನಮ್ಮ ಹಿಂದಿನ ತಲೆಮಾರಿನವರು ಆಯುಷ್ಕರ್ಮವನ್ನು ನಿಗದಿತ ದಿನಗಳಲ್ಲಿ ಮಾಡಿಸಿಕೊಳ್ಳುತ್ತಿದ್ದರು. ಅದರಿಂದ ತಮ್ಮ ಜೀವಿತಾವದಿಯನ್ನು ಹೆಚ್ಚಿಸಿಕೊಳ್ಳುತ್ತಿದ್ದರು. ದೀರ್ಘಾಯುಷ್ಯಕ್ಕೆ ಮಾಡಬೇಕಾದ ಕೆಲಸಗಳಲ್ಲಿ ಇದೂ ಒಂದು. ನಿರ್ಣಯ ಸಿಂಧು ಗ್ರಂಥದಲ್ಲಿ ಒಂದು ಶ್ಲೋಕ ಹಿಗಿದೆ. ಏಕಾದಶ ಕ್ಷಪಯತಿ ಕ್ಷಿತಿಜಸ್ತು ಮಾಸಾನ್ ಸಪ್ತರ್ಕೆರೇಕಮ್ ಅಹಿಮದ್ಯುತಿರಾಯುಷಸ್ತು| ಜ್ಞ: ಪಂಚ ಸಪ್ತ ವಿಧುರಿಂದ್ರಗುರುಸ್ತ್ರಿಮಾಸಾನ್ ಏಕಾದಶಾಸುರಗುರುಶ್ಚ ವಿವರ್ಧಯಂತಿ|| ಮಂಗಳವಾರ ಕ್ಷೌರ ಮಾಡಿಸಿಕೊಂಡರೆ ಹನ್ನೊಂದು ತಿಂಗಳು, ಶನಿವಾರವು ಏಳು ತಿಂಗಳು, ಭಾನುವಾರವು ಒಂದು ತಿಂಗಳು ಆಯುಷ್ಯವನ್ನು ನಾಶಮಾಡುತ್ತದೆ. ಬುಧವಾರ ಐದು ತಿಂಗಳು, ಸೋಮವಾರ ಏಳು ತಿಂಗಳು ಗುರುವಾರ ಮೂರು ತಿಂಗಳು, ಶುಕ್ರವಾರ ಹನ್ನೊಂದು ತಿಂಗಳು ಆಯುಷ್ಯವು ಆಯಾಯ ದಿನದಂದು ಕ್ಷೌರ ಮಾಡಿಸಿಕೊಂಡರೆ ಅಬಿವೃದ್ಧಿಯಾಗುತ್ತದೆ.5 ಇದರ ಜೊತೆಗೆ ತಿಥಿಗಳನ್ನು ನೋಡಿ ಕ್ಷೌರ ಮಾಡಿಸಿಕೊಳ್ಳುವವರೂ ಇದ್ದಾರೆ. ಇದಕ್ಕೆ ಅಪವಾದಗಳೂ ಇವೆ. ತುರ್ತು ಪರಿಸ್ಥಿತಿಯಲ್ಲಿ ಬೇರೆ ದಿನಗಳಲ್ಲಿ ಕ್ಷೌರ ಮಾಡಿಸಿಕೊಂಡರೆ ಬೇಗನೇ ನಿಗದಿತ ದಿನಗಳಲ್ಲಿ ಇನ್ನೊಮ್ಮೆ ಕ್ಷೌರ ಮಾಡಿಸಿಕೊಳ್ಳಬೇಕು. ಕ್ಷೌರ ಮಾಡಿಸಿಕೊಳ್ಳುವವರು ದಿನದ ಮೊದಲಿನ ಅರ್ಧಭಾಗದಲ್ಲಿ, ಅಂದರೆ ಮಧ್ಯಾನ್ಹದ ಹನ್ನೆರಡು ಗಂಟೆಯ ಒಳಗೆ ಮಾಡಿಸಿಕೊಳ್ಳಬೇಕು. ಸಂಪ್ರದಾಯಸ್ತರು ಮುಖ ಕ್ಷೌರ ಗಡ್ಡ ಮೀಸೆ ಕತ್ತರಿಸಿಕೊಳ್ಳುವುದನ್ನು ಐದು ದಿನಕ್ಕೊಮ್ಮೆ ಮಾಡಿಸಿಕೊಳ್ಳುತ್ತಾರೆ. ನೌಕರಿ ಮಾಡುವವರು ಪ್ರತಿನಿತ್ಯ ಮುಖಕ್ಷೌರ ಮಾಡಿಸಿಕೊಳ್ಳುತ್ತಾರೆ. ಅಂತಹವರು ಸಂಕ್ರಮಣ, ಏಕಾದಶಿ, ಹುಣ್ಣಿಮೆ, ಅಮಾವಾಸ್ಯೆಗಳಂದು ಬಿಡುವುದು ಒಳ್ಳೆಯದು. ಅದರಂತೆಯೇ ಮೂಗಿನಿಂದ ಕೂದಲನ್ನು ಕತ್ತರಿಸಬಾರದು. ಹಾಗೆ ಮಾಡಿದರೆ ದೃಷ್ಟಿಗೆ ತೊಂದರೆಯಾಗುತ್ತದೆಯೆಂದು ಆಯುರ್ವೇದ ತಜ್ಞರು ಹೇಳುತ್ತಾರೆ. ವಸ್ತ್ರಧಾರಣೆ ಸ್ನಾನದ ನಂತರ ವಸ್ತ್ರವನ್ನು ಧಾರಣೆ ಮಾಡಬೇಕು. ಸಂಪ್ರದಾಯ ಶರಣರು ಮಡಿ ಉಟ್ಟುಕೊಂಡು ಸಂಧ್ಯಾವಂದನೆ, ಜಪ, ಧ್ಯಾನ, ಪೂಜೆ ಮುಂತಾದವುಗಳನ್ನು ಮಾಡುತ್ತಾರೆ. ಕಪ್ಪು ಒಂದನ್ನು ಬಿಟ್ಟು ಎಲ್ಲಾ ಬಣ್ಣದ ಮಡಿಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಬಿಳಿ, ಕೇಸರಿ, ಪಿತಾಂಬರಿ ಬಣ್ಣದ ಮಡಿಗಳನ್ನು ಬಳಸುವುದು ಹೆಚ್ಚು. ಆ ಸಮಯದಲ್ಲಿ ಧಾವಳಿ (ನಾರುಮಡಿ)ಯನ್ನೂ ಉಡಬಹುದು. ಬಿಳಿ ಶಾಂತಿಯ ಸಂಕೇತ, ಶುದ್ಧತೆಯ ಸಂಕೇತ. ಕೇಸರಿ ತ್ಯಾಗದ ಚಿಹ್ನೆ. ತ್ಯಾಗದ ಸಂಕೇತವಾಗಿ ಸನ್ಯಾಸಿಗಳು ಹೆಚ್ಚಾಗಿ ಕೇಸರಿಯನ್ನು ಬಳಸುತ್ತಾರೆ. ಪಿತಾಂಬರಿ ದೇವರ-ದೇವತೆಗಳ ವಸ್ತ್ರದ ಬಣ್ಣ. ದೇವರ ಕಲ್ಯಾಣೋತ್ಸವದ ಸಂದರ್ಭಗಳಲ್ಲಿ ಮೂರ್ತಿಗಳಿಗೆ ಪೀತಾಂಬರ ಬಣ್ಣದ ಮಡಿಗಳನ್ನು ಉಡಿಸಿರುತ್ತಾರೆ. ಕೆಂಪು ಕೋಪದ, ರೌದ್ರದ ಗುರುತು. ನೀಲಿ ಅನಂತವನ್ನು ಪ್ರತಿನಿಧಿಸುತ್ತದೆ. ಶ್ರೀಕೃಷ್ಣ, ಶ್ರೀ ಶಂಕರ ಇವರ ಮೈಬಣ್ಣ ನೀಲಿ. ಇವರುಗಳು ಅನಂತ ಎಂದು ತೋರಿಸಲು ಆ ಬಣ್ಣ. ಹಳದಿ ಜೊತೆಗೆ ನಸು ಕೆಂಪು ಸೌಭಾಗ್ಯದ ಸಂಕೇತ. ಅರಿಷಿಣ-ಕುಂಕುಮ ಮಂಗಳಕರ, ಒಳ್ಳೆಯ ಅದೃಷ್ಟದ ಗುರುತು. ಅದಕ್ಕೆಂದೇ ಕನ್ನಡಾಂಬೆಯ ಬಾವುಟ ಅರಿಷಿಣ-ಕುಂಕುಮ [ಕೆಂಪು]ದ ಬಣ್ಣಗಳಿಂದ ಮಾಡಿದ್ದಾಗಿರುತ್ತದೆ. ಅರಿಷಿಣ-ಕುಂಕುಮ ಸುಮಂಗಲಿಯ ಸಂಕೇತವೂ ಹೌದು. ಹಸಿರು ಸಮೃದ್ಧಿಯ ಕುರುಹು ಹಾಗೂ ಕಪ್ಪು ಮೋಸದ, ಕುತಂತ್ರದ ದ್ಯೋತಕ. ಶಕುನಿಯನ್ನು ನೆನೆಸಿಕೊಳ್ಳಿ. ವಸ್ತ್ರ ಧಾರಣೆಯ ನಂತರದ ಕ್ರಮ ಮುದ್ರಾಧಾರಣೆ. ಗೋಪಿಚಂದನವನ್ನು ದೇಹದ ನಿಗದಿತ ಜಾಗಗಳಿಗೆ ಹಚ್ಚಿಕೊಂಡು, ಹಣೆಯ ಮೇಲೆ ನಾಮ ಧರಿಸಿ ಮುದ್ರೆಗಳನ್ನು ಹಚ್ಚಿಕೊಳ್ಳುವುದು. ನಾರಾಯಣ, ಶಂಖ, ಚಕ್ರ, ಗಧೆ ಮತ್ತು ಪದ್ಮ ಮುದ್ರೆಗಳನ್ನು ಹಚ್ಚಿಕೊಳ್ಳಬೇಕು. ಯಾವ ಯಾವ ಮುದ್ರೆ ದೇಹದ ಯಾವ ಯಾವ ಭಾಗಗಳಲ್ಲಿ ಹಾಕಬೇಕೆನ್ನುವ ವಿಷಯವನ್ನು ಹಿರಿಯರಿಂದ ಕೇಳಿ ತಿಳದುಕೊಳ್ಳಬಹುದು. ಆ ವಿಷಯದ ಬಗ್ಗೆ ಪುಸ್ತಕಗಳೂ ಇವೆ. ಅವನ್ನೂ ಓದಬಹುದು. ಶ್ರೀ ಶಂಕರನ ಆರಾಧಕರು ವಿಭೂತಿಯನ್ನು ನಿಗದಿತ ಜಾಗಗಳಿಗೆ ಹಚ್ಚಿಕೊಳ್ಳಬೇಕು. ಆನಂತರ ತುಳಸಿಮಾಲೆ ಇಲ್ಲವೆ ರುದ್ರಾಕ್ಷಿ ಮಾಲೆ ಹಾಕಿಕೊಂಡು, ಸಂಧ್ಯಾವಂದನೆ ಇತ್ಯಾದಿಗಳನ್ನು ಮಾಡಬೇಕು. ಸಂಧ್ಯಾವಂದನೆ, ಜಪ, ಧಾನ್ಯ ದೇವತಾರ್ಚನೆ [ದೇವರ ಪೂಜೆ] ಮುಂತಾದವುಗಳನ್ನು ಅವರವರ ಸಮುದಾಯ-ಸಂಪ್ರದಾಯ, ಮನೆ ದೇವರು -ಇಷ್ಟ ದೈವ, ಗ್ರಾಮದೇವತೆ, ಗುರುವೃಂದ ಮುಂತಾದ ಅಂಶಗಳನ್ನು ಆಧರಿಸಿ ಬೇರೆ-ಬೇರೆ ಆಗಿರುತ್ತದೆ. ಅವರವರ ಸಂಪ್ರದಾಯ-ಪದ್ಧತಿಗಳನ್ನು ಅನುಸರಿಸಬೇಕು. ಸಂಧ್ಯಾವಂದನಾದಿಗಳನ್ನು ಮಾಡುವಾಗ ಪದ್ಮಾಸನ ಇಲ್ಲವೇ ಸಿದ್ಧಾಸನ ಇಲ್ಲವೇ ಸುಖಾಸನದಲ್ಲಿ ಮಾಡಬಹುದು. ಮೊದಲು ದರ್ಭಾಸನ [ದರ್ಭೆಯ ಚಾಪೆ]ವನ್ನು ಹಾಕಿಕೊಳ್ಳಬೇಕು. ಅದರ ಮೇಲೆ ಕೃಷ್ಣಾಜಿನ, ಅದರ ಮೇಲೆ ಧಾವಳಿ ಚೌಕ, ಈ ಮೂರನ್ನೂ ಹಾಕಿಕೊಂಡು ಕೂಡಬೇಕು. ಕೃಷ್ಣಾಜಿನ ಈಗ ದುರ್ಲಭ, ಬಿಟ್ಟು ಬಿಡಿ. ಉಳಿದವನ್ನು ಉಪಯೋಗಿಸಿ. ಧಾವಳಿ ಚೌಕ ಸಿಗದಿದ್ದರೆ ಬಟ್ಟೆ ಚೌಕ. ಕಟ್ಟಿಗೆಯ ಮಣೆಗಳನ್ನೂ ಉಪಯೋಗಿಸಬಹುದು. ಹೀಗೆ ಮಾಡುವುದರಿಂದ ನಿಮ್ಮ ಮತ್ತು ಭೂಮಿಯ ಸಂಪರ್ಕ ಕಡಿದು. ಧ್ಯಾನಕ್ಕೆ ಸಹಾಯವಾಗುತ್ತದೆ. ಅದೇ ಇವುಗಳನ್ನು ಹಾಕಿಕೊಳ್ಳುವುದರ ಉದ್ದೇಶ. ಸಂಧ್ಯಾವಂದನೆ ಗೊತ್ತಿರುವವರು ಮಾಡಿ. ಉಳಿದವರು ತಮ್ಮ ಇಷ್ಟದೇವತಾ ಪ್ರಾರ್ಥನೆ ಮಾಡಿ. ಈ ಪುಸ್ತಕದ ಕೊನೆಯಲ್ಲಿ ಕೆಲವು ಮಂತ್ರಗಳನ್ನು ಕೊಟ್ಟಿದ್ದೇನೆ. ಅವುಗಳಲ್ಲಿ ನಿಮಗೆ ಬೇಕಾದ ಕೆಲವು ಮಂತ್ರಗಳನ್ನು ಆರಿಸಿಕೊಂಡು ಒಂದು ಮಂತ್ರಗುಚ್ಚವನ್ನು ತಯಾರಿಸಿಕೊಳ್ಳಿ. ಇಲ್ಲಿರುವ ಮಂತ್ರಗಳ ಜೊತೆಗೆ ನಿಮಗೆ ಗೊತ್ತಿರುವ ಇತರೆ ಮಂತ್ರಗಳನ್ನು ಸೇರಿಸಿಕೊಂಡು, ಆ ಮಂತ್ರಗುಚ್ಚವನ್ನು ತಯಾರಿ ಮಾಡಿಕೊಳ್ಳಿ. ಅವುಗಳನ್ನು ಹೇಳಿ. ಅಷ್ಟಾಕ್ಷರ ಮಂತ್ರ, ಓಂ ನಮೋ ನಾರಾಯಣಾಯ, ಪಂಚಾಕ್ಷರಿ ಮಂತ್ರ , ಓಂ ನಮಃಶಿವಾಯ, `ಓಂ ಕೃಷ್ಣಾಯ ನಮಃ ಮುಂತಾದ ಮಂತ್ರಗಳ ಜಪ ಮಾಡಿ. ಬೇರೆ ಬೇರೆ ಧರ್ಮದವರು ತಮ್ಮ ಧರ್ಮದ ಮೂಲ ಮಂತ್ರಗಳನ್ನು ಅನ್ನಬಹುದು. ಅದಾದ ನಂತರ ಸ್ವಲ್ಪ ಹೊತ್ತು ಧ್ಯಾನ ಮಾಡಬಹುದು. ಧ್ಯಾನ ಒಂದು ದೀರ್ಘವಾದ ಪ್ರಕ್ರಿಯೆ. ಪ್ರಾಣಾಯಾಮದ ನಂತರ ಪ್ರತ್ಯಾಹಾರ. ಇಂದ್ರಿಯಗಳನ್ನು ಹಿಡಿತಕ್ಕೆ ತರುವುದು. ಇದು ನಾವಂದುಕೊಂಡಷ್ಟು ಸುಲಭದ ಕೆಲಸವಲ್ಲ. ಅದನ್ನು ಹಂತ ಹಂತವಾಗಿ ನಿಗ್ರಹಿಸಿ. ಪ್ರತ್ಯಾಹಾರದ ನಂತರ ಧಾರಣ. ಒಂದೇ ವಸ್ತುವಿನ ಮೇಲೆ ನಿಮ್ಮ ಗಮನವನ್ನು ಕೇಂದ್ರೀಕರಿಸುವುದು. ಈ ಪ್ರಕ್ರಿಯೆಯ ಮುಂದಿನ ಹಂತವೇ ಧ್ಯಾನ. ಮನಸ್ಸು ಏಕಾಗ್ರಗೊಳಿಸಿ ಭಗವಂತನನ್ನು ಚಿಂತಿಸುವುದು-ಧ್ಯಾನಿಸುವುದು. ಧ್ಯಾನದಲ್ಲಿ ಎರಡು ಬಗೆ, ಸಾಕಾರ, ನಿರಾಕಾರ. ಇತ್ತೀಚಿಗೆ ಅನೇಕ ಬಗೆಯ ಧ್ಯಾನಪದ್ಧತಿಗಳನ್ನು ಪ್ರಚಾರ ಮಾಡಲಾಗುತ್ತಿದೆ. ಧ್ಯಾನಾವಸ್ಥೆಯ ಅಂತಿಮ ಹಂತ ಸಮಾದಿ. ಸಾಧನಾ ಪ್ರಕ್ರಿಯೆಯ ಫಲರೂಪವಾಗಿ ಆನಂದವನ್ನು ಅನುಭವಿಸುವುದು. ಜೀವನ್ಮುಕ್ತಿಯನ್ನು ಪಡೆಯುವುದು. ಸಾಕ್ಷಾತ್ಕಾರವನ್ನು ಗಳಿಸುವುದು. ಧ್ಯಾನವನ್ನು ತಜ್ಞ ಗುರುಗಳಿಂದ ತಿಳಿದುಕೊಂಡು ಮಾಡುವುದು. ಊಟ:- ಊಟಕ್ಕೆ ಮುಂಚೆ ಚೆನ್ನಾಗಿ ಕೈ ಕಾಲು ಮುಖ ತೊಳೆದುಕೊಳ್ಳಬೇಕು. ಕೆಳಗೆ ಕೂತು ಊಟ ಮಾಡುವುದು ಒಳ್ಳೆಯದು. ಇತ್ತೀಚಿಗೆ ಮೇಜು ಊಟ ಜಾಸ್ತಿಯಾಗುತ್ತಿದೆ. ವೈದ್ಯರು ಕೆಳಗೆ ಕೂಡಬಾರದೆಂದು ಸಲಹೆ ಕೊಟ್ಟಿದ್ದರೆ ಮೇಜು ಊಟ ಅನಿವಾರ್ಯ. ಬಡಿಸುವ ವಿಧಾನ, ಊಟದ ಸಾಧನಗಳು, ಆಹಾರ ಪದಾರ್ಥಗಳು, ಊಟ ಮಾಡುವ ವಿಧಾನ ಮುಂತಾದ ವಿಷಯಗಳ ಬಗ್ಗೆ ಹಿಂದಿನ ಅಧ್ಯಾಯದಲ್ಲಿ ಚರ್ಚಿಸಿದ್ದೇವೆ. ಹಾಗಾಗಿ ಆ ವಿಷಯಗಳನ್ನು ಇಲ್ಲಿ ಪುನರಾವರ್ತನೆ ಮಾಡುವುದು ಬೇಡ. ವಿಶೇಷ ಕಾರಣವಿಲ್ಲದೆ ಊಟವಾದ ಮೇಲೆ ಸ್ನಾನ ಮಾಡಬಾರದೆಂದು ಮನು ಹೇಳುತ್ತಾನೆ. ಊಟದ ನಂತರ ನಿಧಾನವಾಗಿ ನೂರು ಹೆಜ್ಜೆ ನಡೆಯುವುದು ಹಿತಕಾರಿ. ಊಟವಾದ ಮೇಲೆ ಹೊಟ್ಟೆ ಬಿಗಿಯಾಗಿರುತ್ತದೆ. ಊಟವಾದ ಮೇಲೆ ನಡೆದರೆ ಮೈ ಸಡಿಲವಾಗುತ್ತದೆ. ಊಟ ಮಾಡಿದ ತತ್ಕ್ಷಣ ಮಧ್ಯಾನ್ಹ ಮಲಗಬಾರದು. ಬೇಸಿಗೆ ಕಾಲದಲ್ಲಿ ಸ್ವಲ್ಪ ಹೊತ್ತು ವಿರಮಿಸುವುದು ಒಳ್ಳೆಯದು. ಇದಕ್ಕೆ ಅಪವಾದವಿದೆ. ವೃದ್ಧರು, ರೋಗಿಗಳು, ಬಸುರಿ ಹೆಂಗಸರು, ಬಾಣಂತಿಯರು, ಮಕ್ಕಳು, ಬಹಳ ದಿನಗಳಿಂದ ಮಧ್ಯಾನ್ಹ ಮಲಗುವ ಹವ್ಯಾಸ ಇಟ್ಟುಕೊಂಡಿರುವವರು ಸ್ವಲ್ಪ ಹೊತ್ತು ನಿದ್ರೆ ಮಾಡಬಹುದು. ತಾಂಬೂಲ:- ಊಟವಾದ ನಂತರ ತಾಂಬೂಲ ಸೇವಿಸುವುದು ಒಳ್ಳೆಯದು. ವೀಳೆಯದೆಲೆ, ಅಡಿಕೆ, ಕರ್ಪೂರ, ಯಾಲಕ್ಕಿ, ಲವಂಗ, ಕಸ್ತೂರಿ, ಜಾಜಿಕಾಯಿ, ಒಣಕೊಬ್ಬರಿ ಮುಂತಾದ ಪದಾರ್ಥಗಳನ್ನು ಉಪಯೋಗಿಸುವುದು ರೂಡಿ. ಅನೇಕ ತರಹದ ವೀಳೆಯದೆಲೆ ಮಾರುಕಟ್ಟೆಯಲ್ಲಿ ಸಿಗುತ್ತವೆ. ಅಂಬಾಡಿ ಎಲೆ ಖಾರ ಕಡಿಮೆ ಇರುತ್ತವೆ. ಸಾದಾ ಎಲೆ ಖಾರ ಸ್ವಲ್ಪ ಜಾಸ್ತಿ. ಪಶ್ಚಿಮ ಬಂಗಾಳದಿಂದ ಬಂದ ಎಲೆ ಖಾರ ಇನ್ನೂ ಜಾಸ್ತಿ. ಅಡಿಕೆಯಲ್ಲೂ ಹತ್ತಾರು ವಿಧ. ಅಡಿಕೆಯನ್ನು ಅರ್ಧ ಭಾಗಮಾಡಿ ಚೆನ್ನಾಗಿ ಸಂಸ್ಕರಿಸಿದ ಅಡಿಕೆಯನ್ನು ಬಳಸುವುದು ಒಳ್ಳೆಯದು. ಸಂಸ್ಕರಿಸಿದ ಮತ್ತು ಸುಂಗಂಧ ದ್ರವ್ಯಗಳನ್ನು ಬೆರೆಸಿದ ವಾಸನೆಯುಕ್ತ ಅಡಿಕೆಯೂ ಈಗ ಅಂಗಡಿಗಳಲ್ಲಿ ಸಿಗುತ್ತವೆ. ಅವುಗಳಲ್ಲಿ ನಿಮಗೆ ಯಾವುದು ಹಿತವೆಂದು ತಿಳಿದು ಉಪಯೋಗಿಸಿ. ಶುದ್ಧ ಅಡಿಕೆಯನ್ನು ತಂದು ಮನೆಯಲ್ಲೇ ಕುಟ್ಟಿ ಪುಡಿ ಮಾಡಿ, ಯಾಲಕ್ಕಿ, ಲವಂಗ, ಪಚ್ಚಕರ್ಪೂರ, ಕಸ್ತೂರಿ, ಜಾಯಿಕಾಯಿ ಮುಂತಾದವುಗಳನ್ನು ಉಚಿತ ಪ್ರಮಾಣದಲ್ಲಿ ಬೆರೆಸಿ ನಿಮ್ಮ ಅವಶ್ಯಕತೆಗೆ ಬೇಕಾದ ಅಡಿಕೆ ಮಿಶ್ರಣವನ್ನು ನೀವೇ ತಯಾರಿಸಿಕೊಳ್ಳಬಹುದು. ಸಂಸ್ಕರಿಸಿದ ಸುಣ್ಣವೂ ಈಗ ಎಲ್ಲೆಡೆ ಲಭ್ಯ. ಹೀಗೆ ತಾಂಬೂಲಕ್ಕೆ ಪೂರ್ವತಯಾರಿ ಮಾಡಿಕೊಂಡಿದ್ದರೆ ಒಳ್ಳೆಯದು. ತಾಂಬೂಲಕ್ಕೆ ಹುಳಿಯೊಂದನ್ನು ಹೊರತುಪಡಿಸಿ ಉಳಿದ ಎಲ್ಲಾ ರಸಗಳನ್ನು (ಖಾರ, ಕಹಿ, ಮಧುರ, ಒಗರು, ಕ್ಷಾರ) ಉಂಟುಮಾಡುವ ಗುಣ ಹೊಂದಿರುತ್ತದೆ. ತಾಂಬೂಲದಿಂದ ಬಾಯಿಯಲ್ಲಿನ ಕ್ರಿಮಿಗಳು ನಾಶವಾಗುತ್ತದೆ. ಬಾಯಿಯ ದುರ್ಗಂಧ ನಾಶವಾಗುತ್ತದೆ. ಮುಖಕ್ಕೆ ಕಾಂತಿಯನ್ನು ತಂದುಕೊಡುತ್ತದೆ. ವಿಷಯ ಸುಖಕ್ಕೆ ಪ್ರಚೋದನೆ ನೀಡುತ್ತದೆ. ಕಫದ ತೊಂದರೆಗಳು ಕಡಿಮೆಯಾಗುತ್ತವೆ. ತಾಂಬೂಲ ಹಾಕಿಕೊಳ್ಳುವುದಕ್ಕೂ ಒಂದು ಪದ್ಧತಿಯಿದೆ ಎಂದು ಹೇಳಲಾಗುತ್ತದೆ. ಮೊದಲು ಅಡಿಕೆಯನ್ನು ಬಾಯಿಗೆ ಹಾಕಿಕೊಳ್ಳಬೇಕು. ಚೆನ್ನಾಗಿ ಸಂಸ್ಕರಿಸದ ಅಡಿಕೆ ಇದ್ದರೆ ಚಿಂತೆಯಿಲ್ಲ. ಸಂಸ್ಕರಿಸಿದ ಸಾದಾ ಅಡಿಕೆ ಇದ್ದರೆ ಅದನ್ನು ಬಾಯಿಗೆ ಹಾಕಿಕೊಂಡು ಚೆನ್ನಾಗಿ ನುರಿಸಬೇಕು. ಮೊದಲು ಬಂದ ರಸವನ್ನು ಉಗುಳಬೇಕು. ವೀಳೆಯದೆಲೆಯ ಮೇಲ್ತುದಿ, ಮಧ್ಯಭಾಗ, ಕೆಳಗಿನ ತುದಿ, ನಾರಿನ ಭಾಗ ತೆಗೆದು ಹಾಕಬೇಕು. ವೀಳೆದೆಲೆಯ ಕೊನೆಯ ಭಾಗವನ್ನು ತಿನ್ನುವುದರಿಂದ ವ್ಯಾದಿಯು ಉಂಟಾಗುತ್ತದೆ. ಮೊದಲ ಭಾಗವನ್ನು ತಿನ್ನುವುದರಿಂದ ಪಾಪ ಉಂಟಾಗುತ್ತದೆ. ಮಧ್ಯದ್ದನ್ನು ತಿನ್ನುವುದರಿಂದ ಆಯಸ್ಸು ಕ್ಷೀಣಿಸುತ್ತದೆ. ವೀಳೆದೆಲೆಯ ಮೇಲಿನ ಉಬ್ಬಿರುವ ನಾರುಗಳನ್ನು ತಿನ್ನುವುದರಿಂದ ಬುದ್ಧಿನಾಶವಾಗುತ್ತದೆ. ವೀಳೆದೆಲೆಯ ಅಗ್ರಭಾಗದಲ್ಲಿ ಆಯಸ್ಸು, ಕೊನೆಯ ಭಾಗದಲ್ಲಿ ಯಶಸ್ಸು ಹಾಗು ಮಧ್ಯಭಾಗದಲ್ಲಿ ಸಂಪತ್ತು ಆಸೀನವಾಗಿರುತ್ತದೆ. ಹಾಗಾಗಿ ವೀಳೆದೆಲೆಯನ್ನು ಸೇವಿಸುವಾಗ ಅದರ ಅಗ್ರಭಾಗ, ಕೊನೆಯ ಭಾಗ ಹಾಗೂ ಮಧ್ಯಭಾಗವನ್ನು ತೆಗೆಯಬೇಕು. ಆನಂತರ ಸಂಸ್ಕರಿಸಿದ ಸುಣ್ಣವನ್ನು ಹಿಂಭಾಗಕ್ಕೆ ಹಚ್ಚಿ, ಅಡಿಕೆಯ ಜೊತೆಗೆ ಸೇರಿಸಿಕೊಳ್ಳಬೇಕು. ಅವು ನುರಿತ ನಂತರ ಯಾಲಕ್ಕಿ, ಲವಂಗ ಇತ್ಯಾದಿಗಳನ್ನು ಸೇರಿಸಬೇಕು. ತಾಂಬೂಲವನ್ನು ಚೆನ್ನಾಗಿ ನುರಿಸಿ ನುಂಗಬೇಕು. ಸ್ವಲ್ಪ ಹೊತ್ತು ಬಿಟ್ಟು ಬಾಯಿ ತೊಳೆದುಕೊಳ್ಳಬೇಕು. ತಾಂಬೂಲವನ್ನು ವಿಶೇಷ ಸಂದರ್ಭಗಳಲ್ಲಿ ಸೇವಿಸಬಹುದು. ದಿನಾ ತಾಂಬೂಲ ಮೆಲ್ಲಬೇಕೆಂದರೆ ಒಂದು ಮಿತಿಯಲ್ಲಿರುವುದು ಒಳ್ಳೆಯದು. ನಿದ್ರೆ ಮಾಡುವುದು ಶುದ್ಧವಾದ ಗಾಳಿ, ಸ್ವಚ್ಛವಾದ ನೀರು ಮತ್ತು ಪೌಷ್ಟಿಕ ಆಹಾರಗಳ ನಂತರ ಮನುಷ್ಯನಿಗೆ ಬೇಕಾದ ಇನ್ನೊಂದು ಅವಶ್ಯಕತೆಯೆಂದರೆ ಸುಖವಾದ ನಿದ್ದೆ. ದಿನವಿಡೀ ಏನಾದರೊಂದು ಕೆಲಸ ಮಾಡಿದ ವ್ಯಕ್ತಿಗೆ ಸಂಜೆ ಹೊತ್ತೆಗೆ ದೇಹ, ಇಂದ್ರಿಯಗಳು ಮತ್ತು ಮನಸ್ಸು ಬಳಲಿರುತ್ತವೆ. ಹಾಗಾಗಿ ರಾತ್ರ್ರಿ ಊಟಮಾಡಿ ಮಲಗಿದರೆ ನಿದ್ದೆ ತಾನಾಗಿಯೇ ಬರುತ್ತದೆ. ನಿದ್ದೆ ದೇಹಕ್ಕಿಂತ ಹೆಚ್ಚು ಮನಸ್ಸನ್ನು ಅವಲಂಬಿಸುತ್ತದೆ ಎಂದು ಹೇಳಲಾಗಿದೆ. ದೇಹ ಬಳಲಿದಾಗ ನಿದ್ದೆ ಬರುತ್ತದೆ. ನಿಜ, ಆದರೆ ಮನಸ್ಸು ಬಳಲಿದಾಗ ನಿದ್ದೆ ಅತೀ ಅವಶ್ಯಕವಾಗುತ್ತದೆ. ಅದರಂತೆಯೇ ಮನಸ್ಸು ವ್ಯಾಕುಲಗೊಂಡಾಗ ಮತ್ತು ಉದ್ವಿಜ್ಞ ಸ್ಥಿತಿಯಲ್ಲಿರುವಾಗ ನಿದ್ರೆ ಬಾರದಿರುವುದೂ ಅಷ್ಟೇ ಸತ್ಯ. ನಿದ್ರಾಹೀನತೆಯನ್ನು ಒಂದು ರೋಗ ಎಂದು ಪರಿಗಣಿಸಲಾಗಿದೆ. ವೈದ್ಯರು ಅದಕ್ಕೆ ಇನ್ಸೋಮ್ನಿಯಾ ಎಂದು ಕರೆಯುತ್ತಾರೆ. ನಿದ್ರಾಭಂಗವಾದರೆ ತಲೆನೋವು ಬರುತ್ತದೆ. ತಲೆ ಭಾರವಾಗುತ್ತದೆ. ಮರುದಿನ ಸ್ವಸ್ಥ ಆರೋಗ್ಯ ಇರುವುದಿಲ್ಲ. ದೌರ್ಬಲ್ಯ ಉಂಟಾಗುತ್ತದೆ. ಸತ್ತ್ವ-ರಜ-ತಮೋ ಗುಣಗಳು ಸಮಾನವಾಗಿ ಇರಬೇಕೆಂದರೆ ಸುಖವಾದ ನಿದ್ರೆ ಆಗಬೇಕೆಂದು ಹೇಳುತ್ತಾರೆ. ನಿಗದಿತ ಪ್ರಮಾಣದಷ್ಟು ನಿದ್ರೆಯಾದರೆ ಮನಸ್ಸಿಗೆ ನೆಮ್ಮದಿ ಇರುತ್ತದೆ. ಉತ್ಸಾಹವಿರುತ್ತದೆ. ಬಲ ಬರುತ್ತದೆ. ಜ್ಞಾನ ಉಂಟಾಗಲು ಸಹಾಯಕವಾಗುತ್ತದೆ. ಮುಪ್ಪು ದೂರವಾಗುತ್ತದೆ. ವೀರ್ಯವಂತಿಕೆ ಉಂಟಾಗುತ್ತದೆ. ಹಾಗಂತ ಹೆಚ್ಚಾಗಿ ಮಲಗಬಾರದು. ಒಬ್ಬ ಆರೋಗ್ಯವಂತ ಮನುಷ್ಯನಿಗೆ ಆರರಿಂದ ಎಂಟು ತಾಸು ನಿದ್ರೆ ಬೇಕಾಗುತ್ತದೆ. ಮಾಡುವ ಕೆಲಸ, ಸಮಯ, ಕೆಲಸದ ಸ್ವಭಾವ, ದೈಹಿಕ ಮತ್ತು ಮಾನಸಿಕ ಬಳಲಿಕೆ, ಮಲಗುವ ಜಾಗ, ತಿನ್ನುವ ಆಹಾರ ಪದಾರ್ಥಗಳು, ಉಂಟಾಗುವ ಅಡಚಣೆಗಳು ಮುಂತಾದ ಅಂಶಗಳ ಆಧಾರದ ಮೇಲೆ ನಿದ್ದೆಯ ಪ್ರಮಾಣವನ್ನು ಆಯಾ ವ್ಯಕ್ತಿ ನಿರ್ಣಯಿಸಿಕೊಳ್ಳಬೇಕಾಗುತ್ತದೆ. ನಿದ್ರೆಗಳಲ್ಲಿ ಅನೇಕ ಪ್ರಕಾರಗಳಿವೆ. ಅವುಗಳ ವಿವರ ಹೀಗಿದೆ.7
ಮಲಗುವ ಕೋಣೆ ಸ್ವಚ್ಛವಾಗಿರಬೇಕು. ಗಾಳಿ, ಬೆಳಕು ಚೆನ್ನಾಗಿ ಬರುವಂತಿರಬೇಕು. ತುಂಬಾ ದಪ್ಪ ಅಲ್ಲದ, ತುಂಬಾ ತೆಳು ಅಲ್ಲದ ಶುಭ್ರವಾದ ಹಾಸಿಗೆ ಇರಬೇಕು. ಊಟ ಚೆನ್ನಾಗಿ ಆಗಿರಬೇಕು. ಮನಸ್ಸು ಪ್ರಸನ್ನವಾಗಿರಬೇಕು. ಚಿಂತೆಗಳನ್ನು ಬಿಟ್ಟು ಹಾಸಿಗೆ ಸೇರಬೇಕು. ಇದು ನಿದ್ರೆಯ ಪೂರ್ವ ತಯಾರಿ. ಮಲುಗುವಾಗ ದೇವತಾಪ್ರಾರ್ಥನೆಯನ್ನು ಮಾಡಬೇಕು. ದೇವರು ನಿಮಗೆ ಕೊಟ್ಟ ಜೀವನ, ಕೆಲಸ, ಆಹಾರ, ಅವಕಾಶಗಳಿಗಾಗಿ ಅವನಿಗೆ ಧನ್ಯವಾದಗಳನ್ನು ಮಂತ್ರಗಳ ಮೂಲಕ ಸಲ್ಲಿಸಿ ಎಡ ಮಗ್ಗಲಾಗಿ ಮಲಗಬೇಕು. ಮಾನವರ ನಾಬಿಯ ಮೇಲೆ ಎಡಗಡೆಗೆ ಜಠರಾಗ್ನಿಯು ಇರುತ್ತದೆ. ಹಾಗಾಗಿ ತಿಂದ ಆಹಾರ ಚೆನ್ನಾಗಿ ಜೀರ್ಣವಾಗಲು ಸಹಾಯವಾಗುತ್ತದೆ. ತಲೆ ಯಾವ ದಿಕ್ಕಿಗೆ ಇರಬೇಕು. ಯಾವ ದಿಕ್ಕಿಗೆ ತಲೆಮಾಡಿ ಮಲಗಿದರೆ ಶ್ರೇಯಸ್ಕರ ಎಂಬುದನ್ನೂ ಹಿಂದಿನವರು ಚಿಂತನೆ ಮಾಡಿ, ಒಂದು ನಿರ್ಣಯಕ್ಕೆ ಬಂದಿದ್ದಾರೆ. ಶ್ರೀಮಧ್ವಾಚಾರ್ಯರು ತಮ್ಮ ಸದಾಚಾರ ಸ್ಮೃತಿ ಗ್ರಂಥದಲ್ಲಿ ಇದಕ್ಕೆ ಉತ್ತರ ಕೊಟ್ಟಿದ್ದಾರೆ. ಪೂರ್ವದಿಕ್ಕಿಗೆ ತಲೆಮಾಡಿ ಮಲಗುವವನು ವಿದ್ಯೆಯನ್ನು, ದಕ್ಷಿಣ ದಿಕ್ಕಿಗೆ ತಲೆ ಇಟ್ಟು ಮಲಗುವವನು ಧರ್ಮ ಮತ್ತು ಆಯುಷ್ಯವನ್ನು, ಪಶ್ಚಿಮ ದಿಕ್ಕಿಗೆ ಮಲಗುವವನು ಪ್ರಬಲ ಚಿಂತೆಯನ್ನು, ಉತ್ತರ ದಿಕ್ಕಿಗೆ ತಲೆಹಾಕಿ ಮಲಗುವವನು ಹಾನಿ ಮತ್ತು ಮೃತ್ಯುವನ್ನು ಪಡೆಯುವನು.9 ಸದ್ವೃತ್ತ:- ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಗೆ ಒಳ್ಳೆಯ ವಿಚಾರಗಳನ್ನು ಮತ್ತು ಮೌಲ್ಯಗಳನ್ನು ತಿಳಿದುಕೊಂಡರೆ ಮಾತ್ರ ಆಗುವುದಿಲ್ಲ. ಅವುಗಳನ್ನು ಆಚರಣೆಗೆ ತರಬೇಕು. ಅದಕ್ಕಾಗಿ ನಿಗದಿತ ದಿನಚರಿಯ ಜೊತೆಗೆ ಒಳ್ಳೆಯ ಸದ್ವೃತ್ತವನ್ನೂ ಬೆಳೆಸಿಕೊಳ್ಳಬೇಕು. ಸದ್ವೃತ್ತವೆಂದರೆ ಸನ್ನಡತೆ, ಒಳ್ಳೆಯ ನಡತೆ. ಸದಾಚಾರ, ಎಲ್ಲರಿಗೂ ಒಳಿತನ್ನು ಮಾಡುವ ಆಚಾರ. ಸದ್ಭಾವನಾ ನಡವಳಿಕೆ. ಆಚರಣಾ ಶೀಲ ನಡವಳಿ. ಸುಸಂಸ್ಕೃತ ನಡತೆಯಿಂದ ವ್ಯಕ್ತಿಗೂ ಒಳ್ಳೆಯದು. ಸಮಾಜಕ್ಕೂ ಹಿತ. ವ್ಯಕ್ತಿಯ ನಡವಳಿಕೆಯನ್ನು ಮೂರು ಹಂತದಲ್ಲಿ ಗುರುತಿಸಬಹುದು. ಒಂದು, ವ್ಯಕ್ತಿಯ ವೈಯಕ್ತಿಕ ವಿಷಯಗಳ ಬಗ್ಗೆ ಅವನ ನಡೆ. ಎರಡು, ವ್ಯಕ್ತಿಯ ಕುಟುಂಬದಲ್ಲಿ, ಗುಂಪುಗಳಲ್ಲಿ, ಕೆಲಸದ ಜಾಗದಲ್ಲಿ, ಗೆಳೆಯರ ಬಳಗದಲ್ಲಿ ಅವನ ವ್ಯವಹಾರ. ಮೂರು, ವ್ಯಕ್ತಿ ಒಂದು ಸಮುದಾಯದಲ್ಲಿದ್ದಾಗ, ಸಮಾಜದಲ್ಲಿದ್ದಾಗ ಅವನ ಸದಾಚಾರ. ಈ ಮೂರೂ ಹಂತಗಳು ಬೇರೆ ಬೇರೆ ಸ್ವತಂತ್ರ ಅಸ್ಮಿತೆ ಇರುವಂತಹವುಗಳಲ್ಲ. ಅವು ಒಂದಕ್ಕೊಂದು ಬೆಸೆದು ಕೊಂಡಿರುವಂತಹವು. ಅಂತಹ ಗುಣಗಳನ್ನು ಸಂಕ್ಷಿಪ್ತವಾಗಿ ಒಂದು ಪಟ್ಟಿ ಮಾಡಬಹುದು. ದೈನಂದಿನ ಚಟುವಟಿಕೆಗಳಿಗೆ ಮತ್ತು ವ್ಯಕ್ತಿಗೆ ಸಂಬಂದಿಸಿದವು.
ಗುಂಪುಗಳು ಮತ್ತು ಇಡೀ ಸಮುದಾಯಕ್ಕೆ ಸಂಬಂದಿಸಿದವು.
ಅಡಿಟಿಪ್ಪಣಿಗಳು
2. ಡಾ. ವಿ.ಆರ್. ಪದ್ಮನಾಭರಾವ್-`ಆಯುರ್ವೇದದ ಆರೋಗ್ಯ ಸೂತ್ರಗಳು ಡಾ. ಸಿ.ಆರ್. ಗೋಪಾಲ್
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
|
|
|
|
SITE MAP
SiteTRAININGJOB |
HR SERVICESOTHER SERVICESnIRATHANKA CITIZENS CONNECT |
NIRATHANKAPOSHOUR OTHER WEBSITESSubscribe |
MHR LEARNING ACADEMY
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.