ಕನ್ನಡದಲ್ಲಿ ಸಮಾಜಕಾರ್ಯ ಸಾಹಿತ್ಯ ಎಂದ ಕೂಡಲೇ ನೆನಪಾಗುವುದು ಪ್ರೊ.ಎಚ್.ಎಂ.ಮರುಳಸಿದ್ಧಯ್ಯನವರು. `ಸಮಾಜಕಾರ್ಯ' ಎಂಬ ಪದವನ್ನು ಟಂಕಿಸಿ ಪ್ರಯೋಗಕ್ಕೆ ತಂದು ಅದು ಜನಸಾಮಾನ್ಯರ ಆಡು ಭಾಷೆಗೆ ಬರುವಂತೆ ಮಾಡಿದವರು ಪ್ರೊ.ಎಚ್.ಎಂ.ಎಂ. ಇಂದು ಸಮಾಜಕಾರ್ಯ ಕ್ಷೇತ್ರದಲ್ಲಿರುವ ಸಾವಿರಾರು ಕ್ರಿಯಾಶೀಲರ ಪ್ರೀತಿಯ ಮೇಷ್ಟ್ರು ನಮ್ಮ ಎಚ್.ಎಂ.ಮರುಳಸಿದ್ಧಯ್ಯನವರು. ಈ ಮೇಷ್ಟ್ರು ಬರಿದೆ ಪಾಠ ಮಾಡಲಿಲ್ಲ, ವಿದ್ಯಾರ್ಥಿಗಳನ್ನು ಕ್ಷೇತ್ರ ಕಾರ್ಯಕ್ಕೆ ಒಡ್ಡಿದರು, ವಿದ್ಯಾರ್ಥಿಗಳೊಡನೆ ತಾವೂ ಕ್ಷೇತ್ರ ಕಾರ್ಯದಲ್ಲಿ ಸುತ್ತಾಡಿದರು, ಚಿಂತಕರೊಡನೆ ಕುಳಿತು ಚರ್ಚೆ ಮಾಡಿದರು, ಸಮುದಾಯಗಳೊಡನೆ ಸಂವಾದ ಮಾಡಿದರು ಅಷ್ಟೇ ಅಲ್ಲ ಇವೆಲ್ಲವನ್ನೂ ಅರ್ಥವಾಗುವ ರೀತಿಯಲ್ಲಿ ಸೊಗಸಾದ ಶೈಲಿಯಲ್ಲಿ ದಾಖಲಿಸಿದರು. ಹೀಗಾಗಿ ಸಮಾಜಕಾರ್ಯ ವಿದ್ಯಾರ್ಥಿಗಳಿಗೆ ಮತ್ತು ಸಮಾಜಕಾರ್ಯದ ಕ್ಷೇತ್ರದಲ್ಲಿರುವವರಿಗೆ ಪ್ರೊ.ಎಚ್.ಎಂ.ಮರುಳಸಿದ್ಧಯ್ಯನವರ ಕೃತಿಗಳು ಕೈದೀವಟಿಗೆಗಳಾಗಿವೆ. ಪ್ರೊ.ಎಚ್.ಎಂ. ಮರುಳಸಿದ್ಧಯ್ಯನವರ ಕೃತಿಗಳ ಬಗ್ಗೆ ಮಾತನಾಡುವಾಗ ಹಿಂದೊಮ್ಮೆ ನಾನು ಹೇಳಿದ್ದು, `ಸಮಾಜಕಾರ್ಯ ಶಿಕ್ಷಣ, ಪ್ರಯೋಗಗಳಿಗೆ ನಮ್ಮ ಮೇಷ್ಟ್ರು ಬರದಿದ್ದರೆ, ಅವರು ಕವಿ, ಕತೆಗಾರ, ಕಾದಂಬರಿಕಾರರಾಗುತ್ತಿದ್ದರೇನೋ. ಆಗ ನಮ್ಮ ಸಮುದಾಯಗಳ ಸೊಗಡಿನ ಹಿನ್ನೆಲೆಯಲ್ಲಿ ಸಮಾಜಕಾರ್ಯದ ಬಗ್ಗೆ ಸರಳವಾಗಿ ಬರೆಯುವವರನ್ನು ನಾವು ಕಳೆದುಕೊಳ್ಳುತ್ತಿದ್ದೆವು. ಪುಣ್ಯವಶಾತ್ ಸಾಹಿತ್ಯದ ಜಾಡಿನೊಂದಿಗೆ, ವೈಜ್ಞಾನಿಕ ಮನೋಭಾವವಿರುವ ಹಾಗೂ ಸಮಾಜಕಾರ್ಯದಲ್ಲಿ ಅತ್ಯಾವಶ್ಯವಿರುವ ಅನುಭೂತಿಯೊಂದಿಗೆ ಮರುಳಸಿದ್ಧಯ್ಯನವರು ಸಾಹಿತ್ಯ ಕೃಷಿ ನಡೆಸುತ್ತಿರುವುದರಿಂದ ಯಾರಿಗೂ ನಷ್ಟವಾಗಲಿಲ್ಲ. ಎಂದು. ಮರುಳಸಿದ್ಧಯ್ಯನವರು ಕತೆ, ಕಾವ್ಯ, ಕಾದಂಬರಿ, ವಚನ ಸಾಹಿತ್ಯದ ಪರಿಚಯ ವಿಮರ್ಷೆ, ಅನುವಾದಗಳು, ಹೊಸ ವಿಷಯಗಳ ಮೇಲೆ ಬೆಳಕು ಚೆಲ್ಲುವ ಟೀಕೆ, ಸಮಾಜಕಾರ್ಯದ ವಿವಿಧ ಆಯಾಮಗಳ ಪರಿಚಯ ಬಿಡಿ ಲೇಖನಗಳು, ಸಮಗ್ರ ವಿಷಯ ಪರಿಚಯ ನೀಡುವ ಪುಸ್ತಕಗಳು ಮೊದಲಾದವುಗಳನ್ನು ರಚಿಸಿದ್ದಾರೆ. ಈ ಎಲ್ಲದರಲ್ಲೂ ಮೇಲಿಂದ ಮೇಲೆ ಕಾಣುವುದು ಚಿಕಿತ್ಸಾತ್ಮಕ ಮತ್ತು ಅನುಭೂತಿಯೊಡಗೂಡಿದ ವಿಶ್ಲೇಷಣೆಗಳು ಮತ್ತು ವಿವರಣೆಗಳು. ಡಾ.ಮರುಳಸಿದ್ಧಯ್ಯನವರು ಹೇಳುವಂತೆ ಅಧ್ಯಯನ, ಸಂಶೋಧನೆಯೆಂದರೆ ಕೇವಲ ಅವರಿವರು ಬರೆದುದನ್ನು ಓದಿ ಬರೆಯುವುದಷ್ಟೇ ಅಲ್ಲ. ಸ್ವಂತ ಪ್ರಯೋಗ, ಚಿಂತನೆ, ವಿಚಾರ ಅಭಿವೃದ್ಧಿ, ತರ್ಕ, ಸರಿತಪ್ಪ್ಪುಗಳ ವಿಮರ್ಶೆ, ಇತರರೊಡನೆ ಅನುಭವ ಅನುಭಾವಗಳ ಹಂಚಿಕೆ, ಅಭಿವೃದ್ಧಿ ಪ್ರಯೋಗಗಳು ನಡೆದ ಕ್ಷೇತ್ರಗಳ ಭೇಟಿ, ಉತ್ತಮ ಕೆಲಸ ಮಾಡುತ್ತಿರುವವರಿಗೆ ಪ್ರೋತ್ಸಾಹ ಈ ಎಲ್ಲವೂ ಇರಬೇಕು. ಇಲ್ಲಿ ತಿಳಿದ ವಿಚಾರಗಳನ್ನು ಸಮಾಜ ಕಾರ್ಯದ ವಿದ್ಯಾರ್ಥಿಗಳಿಗಾಗಿ, ಕ್ಷೇತ್ರ ಕಾರ್ಯಕರ್ತರಿಗಾಗಿ, ಸಂಶೋಧಕರಿಗಾಗಿ ಸಹಾಯ ಮಾಡಲು ಜತನದಿಂದ ದಾಖಲಿಸಿ ಸಮಾಜಕಾರ್ಯ ಕ್ಷೇತ್ರದ ಬೆಳವಣಿಗೆಗೆ ಸಹಾಯ ಮಾಡಬೇಕೆಂಬುದು ಇವರ ಇನ್ನೊಂದು ವಿಚಾರ. ಈಗ ನಡೆದುದನ್ನು ದಾಖಲಿಸುತ್ತಲೇ ಮುಂದೇನು ಎಂದು ತುದಿಗಾಲಲ್ಲಿ ನಿಂತು ನೋಡುವ ಮೂಲಕ ನಿಜವಾದ ಅರ್ಥದಲ್ಲಿ ಮರುಳಸಿದ್ಧಯ್ಯನವರು ಪ್ರಾಧ್ಯಾಪಕರಾಗಿದ್ದಾರೆ. ಈ ಪ್ರಾಧ್ಯಾಪಕ ತನ್ನ ಬರಹಗಳ ಮೂಲಕ ಕೇವಲ ತಿಳಿಸಿ ಅಷ್ಟಕ್ಕೇ ನಿಲ್ಲಲಿಲ್ಲ. ತನ್ನೊಡನೆ ಈ ಚಿಂತನೆಯಲ್ಲಿ ಕೈಗೂಡಿಸುವವರ ಜೊತೆಗೆ ಹೆಜ್ಜೆ ಹಾಕಿ, ಪ್ರಯೋಗಿಸಿ ನೋಡಿ ಎಂದೂ ತಮ್ಮ ಪ್ರಯೋಗಗಳು, ಲೇಖನಗಳು, ಪುಸ್ತಕಗಳ ಮೂಲಕ ಕರೆಯಿತ್ತಿದ್ದಾರೆ. ಈ ಎಲ್ಲ ಪುಸ್ತಕಗಳು, ಲೇಖನಗಳ ಒಟ್ಟು ಸಂಗ್ರಹ ರೂಪ `ಸಮಾಜಕಾರ್ಯ' ಸಮಗ್ರ ಸಂಪುಟ. `ಅರಿವಿನ ಆಳ' ಮೊದಲ ಸಂಪುಟವಾಗಿಯೂ, `ಅನುಷ್ಠಾನದ ಹರವು' ಎರಡನೆಯ ಸಂಪುಟವಾಗಿಯೂ ಈಗ ನಮ್ಮೆದುರು ಬರಲಿದೆ. ಅರಿವಿನ ಆಳ ಪ್ರೊ.ಎಚ್.ಎಂ. ಮರುಳಸಿದ್ಧಯ್ಯನವರು ಹೋದಡೆ ಬಂದಡೆ ಸಭೆಗಳಲ್ಲಿ ಸಮ್ಮೇಳನಗಳಲ್ಲಿ ಮಾತನಾಡುತ್ತಲೇ ಇದ್ದಾರೆ. ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದಾಗ ನಂತರ ನಿವೃತ್ತರಾಗಿದ್ದಾಗ ಸಮುದಾಯ ಅಭಿವೃದ್ಧಿ ವಿಚಾರ ಕುರಿತು ಯಾರೇ ಕರೆಯಲಿ, ಎಷ್ಟೇ ದೂರದಲ್ಲಿರಲಿ ಮಾತನಾಡಲು ತಾನು ಸಿದ್ಧ ಎಂದು ಹೊರಟು ಬರುತ್ತಾರೆ. ತಾವೊಬ್ಬರೇ ಮಾತನಾಡುವುದಿಲ್ಲ. ಬಂದವರನ್ನೆಲ್ಲಾ ಮಾತನಾಡಿಸುತ್ತಾರೆ. ಇಲ್ಲಿ ನಾವು ಗಮನಿಸಬೇಕಾದ ಪ್ರಮುಖ ಅಂಶ, ಎಲ್ಲೇ ಮಾತನಾಡಲು ಹೋಗಲಿ, ಮರುಳಸಿದ್ಧಯ್ಯನವರು ಆ ಕುರಿತು ಚಿಂತಿಸಿ ಬರೆಯುತ್ತಾರೆ. ಸಭೆ ನಡೆಸಿದ ಮೇಲೆ ತಾವು ಮೊದಲು ಬರೆದುದ್ದನ್ನು ಪರಿಷ್ಕರಿಸಿ ದಾಖಲಿಸುತ್ತಾರೆ. ಇದೇ ನಿಜವಾದ ಪಠ್ಯ ವಿಚಾರಗಳು. ಇದರಲ್ಲೇ ನಿಜವಾದ ಅನುಭವಗಳು ಮತ್ತು ಮುಂದೆ ದಾರಿ ತೋರುವ ದೀವಟಿಗೆಗಳು. ಮೊದಲ ಸಂಪುಟ ಅರಿವಿನ ಆಳದಲ್ಲಿ ಮರುಳಸಿದ್ಧಯ್ಯನವರ ಒಟ್ಟು ಎಂಟು ಕೃತಿಗಳು ಸೇರಿವೆ. ಸಮಾಜಕಾರ್ಯದ ವಿದ್ಯಾರ್ಥಿಗಳಾಗಿ ನಾವು ಈ ಮೊದಲ ಸಂಪುಟವನ್ನು ಗಮನಿಸಬೇಕು. ಸಮಾಜಕಾರ್ಯಕ್ಕೆ ಪ್ರವೇಶಿಕೆ ಇದು. ಈ ಕ್ಷೇತ್ರದ ಪರಿಚಯ ಮಾಡಿಸುತ್ತಾ, ವ್ಯಕ್ತಿಗಳೊಡನೆ, ಗುಂಪುಗಳೊಡನೆ ಮತ್ತು ಸಮುದಾಯಗಳೊಡನೆ ಎಂತಹ ಕೆಲಸವನ್ನು ಮಾಡಬೇಕು, ಒಬ್ಬ ಸಮಾಜಕಾರ್ಯಕರ್ತ ಗಮನಿಸಬೇಕಾದ ಮತ್ತು ಮೈಗೂಡಿಸಿಕೊಳ್ಳಬೇಕಾದ ಗುಣಲಕ್ಷಣಗಳನ್ನು ಈ ಸಂಪುಟ ತೆರೆದಿಡುತ್ತದೆ. ಈ ಮೊದಲ ಸಂಪುಟದಲ್ಲಿ ಒಂದು ಅನುವಾದ ಕೃತಿಯೂ ಇದೆ. `ಗಾಂಧೀಯ ಅರ್ಥಶಾಸ್ತ್ರ'. ಡಾ.ಡೇವಿಡ್ ಎಫ್.ರಾಸ್ ಮತ್ತು ಡಾ.ಮಹೇಂದ್ರ ಎಸ್. ಕಂಠಿಯವರು 1983ರಲ್ಲಿ ಮೊದಲ ಬಾರಿಗೆ ರಚಿಸಿದ ಕೃತಿಯ ಕನ್ನಡ ಅನುವಾದ ಅಷ್ಟೇನು ಸುಲಭದ ಕೆಲಸವಲ್ಲ. ಆದರೆ, ಈ ಕೃತಿಯನ್ನು ಓದುತ್ತಿದ್ದಾಗ, ಮರುಳಸಿದ್ಧಯ್ಯನವರ ಭಾಷೆಯ ಬಲದಿಂದಾಗಿ ಇದು ಮೂಲ ಕನ್ನಡ ಕೃತಿಯೇ ಎಂದೆನಿಸುತ್ತದೆ. ಸಮಾಜಕಾರ್ಯ ವಿದ್ಯಾರ್ಥಿಗಳಿಗಂತೂ ಈ ಸಂಪುಟ ಅತ್ಯಂತ ಆವಶ್ಯವಾಗಿರುವ ಆಕರ ಗ್ರಂಥ. ಅನುಷ್ಠಾನದ ಹರವು ಮೊದಲ ಸಂಪುಟ ಅರಿವಿನ ಆಳ ಸಮಾಜಕಾರ್ಯದ ಸೈದ್ಧಾಂತಿಕ ಪರಿಚಯ ಮಾಡಿಕೊಡುವಾಗ ಸಹಜವಾಗಿ ಪ್ರಶ್ನೆಗಳು ಮನಸ್ಸಿನಲ್ಲಿ ಮೂಡುತ್ತವೆ. ಈ ಎಲ್ಲ ತತ್ವಗಳ ಜಾರಿ ಸಾಧ್ಯವೆ? ಸಮುದಾಯಕ್ಕೆ ಇವೆಲ್ಲಾ ಬೇಕೇನು? ಸಮುದಾಯದ ಮನೋಭಾವನೆಗಳನ್ನು ಬದಲಿಸಲು ಸಾಧ್ಯವೆ? ಎಲ್ಲಿ ಇವುಗಳನ್ನು ಪ್ರಯೋಗಿಸಿದ್ದಾರೆ? ಇತ್ಯಾದಿ. ಇವುಗಳಿಗೆ ಉತ್ತರಗಳೋ ಎಂಬಂತೆ ಎಚ್.ಎಂ.ಎಂ. ತಮ್ಮ ಎರಡನೇ ಸಂಪುಟದಲ್ಲಿ ನಮ್ಮನ್ನು ಪ್ರಯೋಗಗಳ ಕ್ಷೇತ್ರಕ್ಕೆ ಕರೆದೊಯ್ಯುತ್ತಾರೆ. ಕಪ್ಪು ಮೋಡದಲ್ಲೊಂದು ಬೆಳ್ಳಿರೇಖೆ, ಕುಟುಂಬ ಯೋಜನೆ , ಹುಲ್ಲು ಬೇರುಗಳ ನಡುವೆ, ಗ್ರಾಮೋನ್ನತಿ, ನಿರ್ಮಲ ಕರ್ನಾಟಕ ಪಂಚಮುಖಿ ಅಭ್ಯುದಯ ಮಾರ್ಗ, ಮಾನವ ಸಂಪನ್ಮೂಲ ಸಂವರ್ಧನೆ, ಹೊತ್ತು ಹೋಗದ ಮುನ್ನ ಎಂಬ ಒಟ್ಟು ಎಂಟು ಕೃತಿಗಳು ಇದರಲ್ಲಿದೆ. ಸಿದ್ಧಾಂತಗಳನ್ನೋದುವುದಕ್ಕೆ ಮನಸ್ಸು ಬಾರದಿದ್ದರೆ, ಪ್ರಯೋಗಗಳನ್ನು ನೋಡಿ ತಿಳಿಯಿರಿ ಎಂದು ಈ ಸಂಪುಟ ಪ್ರಚೋದಿಸುತ್ತದೆ. ಕೆಲವು ಕಡೆ ಸಿದ್ಧಾಂತಗಳನ್ನು ಪ್ರಶ್ನಿಸುವ, ಅವುಗಳಿಗೆ ಸವಾಲೊಡ್ಡುವ ಮತ್ತು ಹೊಸ ಸಿದ್ಧಾಂತಗಳನ್ನು ನಿರೂಪಿಸುವ ದಿಶೆಯಲ್ಲಿ ಇಲ್ಲಿನ ನಿರೂಪಣೆಗಳು ಇವೆ. ಪ್ರತಿಯೊಂದು ಹಂತದಲ್ಲೂ ಅನುಭವಗಳ ಉದಾಹರಣೆಗಳು ನಮ್ಮೆದುರು ಬಂದು ನಿಲ್ಲುತ್ತವೆ. ಬೆಂಗಳೂರು ಸಮೀಪದ ದೊಡ್ಡಾಲದ ಮರದ ಬಳಿ ಇರುವ ಲಕ್ಷ್ಮೀಪುರದಲ್ಲಿ ವಿದ್ಯಾರ್ಥಿಗಳೊಂದಿಗೆ ನಡೆಸಿದ ಪ್ರಯೋಗಗಳು, ತಮ್ಮ ಹುಟ್ಟೂರಾದ ಬಳ್ಳಾರಿಯ ಕೂಡ್ಲಿಗಿ ತಾಲೂಕಿನ ಹಿರೇಕುಂಬಳಗುಂಟೆಯ ಸುತ್ತಮುತ್ತಲಿನ ಹಳ್ಳಿಗಳ ಸಮುದಾಯಗಳೊಡನೆ ಮುಂದುವರೆಯುತ್ತಿರುವ ಸಮುದಾಯ ಸಂಘಟನೆಯ ಕೆಲಸಗಳಿರಬಹುದು, ದೂರದ ಸ್ವೀಡನ್ ಪ್ರವಾಸದಲ್ಲಿದ್ದಾಗ ಗಮನಿಸಿದ ವಿಚಾರಗಳು, ನಮ್ಮ ನೆರೆಯ ರಾಜ್ಯಗಳಲ್ಲಾಗುತ್ತಿರುವ ಬೆಳವಣಿಗೆಗಳು, ಒಂದೇ ಎರಡೇ. ಈ ಎಲ್ಲ ಉದಾಹರಣೆಗಳ ಮೂಲಕ ಸಿದ್ಧಾಂತಗಳನ್ನು ಹೇಳುವಾಗ, ಸಮಾಜಕಾರ್ಯವೆಂಬುದು ಪಶ್ಚಿಮದಿಂದ ಬಂದ ಕಲ್ಪನೆ ಎಂಬುದು ಮರತೇ ಹೋಗುತ್ತದೆ. ಇದು ನಮ್ಮದೇ ಸಂಸ್ಕೃತಿಯ ಭಾಗವಲ್ಲವೆ ಎಂದು ಭಾವಿಸುವಂತಾಗುತ್ತದೆ. ಈ ಎರಡು ಕೃತಿಗಳೊಡನೆ ಎಚ್.ಎಂ.ಎಂ. ನಡೆಸಿರುವ ಮತ್ತೊಂದು ಪ್ರಯತ್ನ ಸಮಾಜಕಾರ್ಯ ಕ್ಷೇತ್ರಕ್ಕೆ ಹಲವಾರು ಪದಗಳನ್ನು ಕೊಡುಗೆಯಾಗಿ ನೀಡುವುದು. ಅವುಗಳೆಲ್ಲವನ್ನೂ ಸಂಗ್ರಹಿಸಿ ಒಂದು ಶಬ್ದಕೋಶವನ್ನೂ ಈ ಸಂಪುಟಗಳೊಡನೆ ನೀಡಿದ್ದಾರೆ. ಇದು ಕೇವಲ ವಿದ್ಯಾರ್ಥಿಗಳಿಗಾಗಿ ಅಲ್ಲ, ಸಮಾಜಕಾರ್ಯ ಕ್ಷೇತ್ರ ಕುರಿತು ಕನ್ನಡದಲ್ಲಿ ಬರೆಯುವ ಪ್ರತಿಯೊಬ್ಬರಿಗೂ ಇದು ಪ್ರಯೋಜನಕಾರಿ. ಈ ಎರಡೂ ಸಂಪುಟಗಳ ಒಟ್ಟು ಬೆಲೆ ಕೇವಲ 900/- (ಸುಮಾರು 1300 ಪುಟಗಳು, ಕ್ಯಾಲಿಕೋ ಬೈಂಡ್). ಪ್ರಕಾಶಕರು ವಿದ್ಯಾರ್ಥಿಗಳನ್ನು, ಸಮಾಜಕಾರ್ಯ ಪ್ರಶಿಕ್ಷಣ ಸಂಸ್ಥೆಗಳು ಮತ್ತು ಸಮಾಜಕಾರ್ಯ ಸಂಸ್ಥೆಗಳನ್ನು ಮನಸ್ಸಿನಲ್ಲಿಟ್ಟುಕೊಂಡೇ ಪ್ರಕಟಿಸಿರುವಂತೆ ಕಾಣುತ್ತದೆ. ಇದೊಂದು ಸಂಗ್ರಹ ಯೋಗ್ಯ ಹಾಗೂ ಪರಾಮರ್ಶನ ಗ್ರಂಥವಾಗಿದೆ.
ವಾಸುದೇವ ಶರ್ಮಾ ಎಂ.ಎಸ್.ಡಬ್ಲ್ಯು. ನಿರ್ದೇಶಕ, ಮಕ್ಕಳ ಹಕ್ಕುಗಳ ಟ್ರಸ್ಟ್
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
|
|
|
|
SITE MAP
SiteTRAININGJOB |
HR SERVICESOTHER SERVICESnIRATHANKA CITIZENS CONNECT |
NIRATHANKAPOSHOUR OTHER WEBSITESSubscribe |
MHR LEARNING ACADEMY
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|