ಸಮಾಜಕಾರ್ಯವು ಒಂದು ವೃತ್ತಿ ಮಾತ್ರ ಆಗಿರದೆ ವಿಜ್ಞಾನವೂ ಹೌದು. ಮತ್ತು ಒಂದು ಕಲೆಯೂ ಹೌದು ಎಂಬ ಮಾನ್ಯತೆ ಪಡೆದಿದೆ. ಸಮಾಜಕಾರ್ಯವನ್ನು ಒಂದು ಸ್ವತಂತ್ರ ಅಧ್ಯಯನಶಾಸ್ತ್ರವೆಂದು ಪರಿಗಣಿಸುವುದಾದರೂ ಅದು ಪೂರ್ಣನೆಲೆಯಲ್ಲಿ ಸ್ವತಂತ್ರವಾಗಿರಲಾರದು. ಸಮಾಜಕಾರ್ಯವನ್ನು ವಾಸ್ತವಿಕ ನೆಲೆಯಲ್ಲಿ ವಿಶ್ಲೇಷಿಸುವುದಾದರೆ, ಅದು ಮಾನವನ ಜೀವನವನ್ನು ಸಮಗ್ರವಾಗಿ ಕಂಡು ಆತನ ಸಮಸ್ಯೆ, ತೊಂದರೆ ತೊಡಕುಗಳನ್ನು ಪೂರ್ಣವಾಗಿ ಪರೀಕ್ಷಿಸಿ ಅವುಗಳಿಗೆ ಪೂರ್ಣ ರೂಪದ ಪರಿಹಾರಗಳನ್ನು ಕಂಡುಕೊಳ್ಳುವ ಕಾರ್ಯದಲ್ಲಿ ನಿರತವಾಗಿರುವುದರಿಂದ ಮಾನವನ ಸಾಮಾಜಿಕ ಜೀವನದೊಂದಿಗೆ, ಇತರ ಹಲವು ಬಗೆಯ ವಿಜ್ಞಾನಗಳೊಂದಿಗೆ ಹಾಗೂ ಕಲೆಗಳೊಂದಿಗೆ ಸಂಬಂಧ ಹೊಂದಿರುವುದು ಅವಶ್ಯವಾಗಿದೆ. ತನ್ನ ಉದ್ದೇಶ ಸಾಧನೆಗಾಗಿ ಅದು ಇತರ ವಿಜ್ಞಾನ ಕಲೆ, ಹಾಗೂ ವೃತ್ತಿಗಳ ನೆರವನ್ನು ಪಡೆಯಲೇ ಬೇಕಾಗುತ್ತದೆ. ಅಂತೆಯೇ, ಅದು ಇತಿಹಾಸ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಮಾನವಶಾಸ್ತ್ರ, ಸಮಾಜಶಾಸ್ತ್ರ, ನೀತಿಶಾಸ್ತ್ರ, ಮನೋವಿಜ್ಞಾನ, ಧರ್ಮಶಾಸ್ತ್ರ, ಶಿಕ್ಷಣಶಾಸ್ತ್ರ, ಕಾನೂನುಶಾಸ್ತ್ರ, ವೈದ್ಯಕೀಯಶಾಸ್ತ್ರ, ಮಾನವ ಭೂಗೋಳಶಾಸ್ತ್ರ, ಸೃಜನಾತ್ಮಕ ಸಾಹಿತ್ಯ ಮುಂತಾದ ಅಧ್ಯಯನಶಾಸ್ತ್ರಗಳ ಜೊತೆಗೆ ವೈದ್ಯವೃತ್ತಿ, ಮಾನಸೋಪಚಾರ, ನ್ಯಾಯವೃತ್ತಿ, ವಾಸ್ತುಶಿಲ್ಪ, ಶಿಕ್ಷಣ ಇತ್ಯಾದಿ ವೃತ್ತಿಗಳಿಂದ ಕೂಡ ನೆರವನ್ನು ಪಡೆಯಬೇಕಾಗುತ್ತದೆನೀ ಎಲ್ಲಾ ಅಧ್ಯಯನಶಾಸ್ತ್ರಗಳ ಮತ್ತು ವೃತ್ತಿಗಳ ಸಹಾಯದಿಂದ ಹಾಗೂ ಸಹಕಾರದಿಂದ ವಿಶಾಲವಾದ ದೃಷ್ಟಿಯನ್ನು ಸ್ಪಷ್ಟವಾದ ಕಾರ್ಯಕ್ಷೇತ್ರವನ್ನು, ವ್ಯಾವಹಾರಿಕ ಪದ್ಧತಿಯನ್ನೂ, ಪರಿಣಾಮಕರವಾದ ತಂತ್ರೋಪಾಯಗಳನ್ನು, ಮಾನವ ಬಾಂಧವ್ಯದ ಕೌಶಲ ಕಲೆಯನ್ನು ಸಮಾಜಕಾರ್ಯವು ತನ್ನಲ್ಲೇ ಅಳವಡಿಸಿಕೊಳ್ಳಲು ಸಾಧ್ಯವಾಗುತ್ತದೆ. ಈ ಮೇಲೆ ಸೂಚಿಸದಂತೆ ಸಮಾಜಕಾರ್ಯವು ಹಲವಾರು ವಿಜ್ಞಾನಗಳು, ವೃತ್ತಿಗಳು ಹಾಗೂ ಕಲೆಗಳೊಂದಿಗೆ ತನ್ನ ಸಂಬಂಧವನ್ನು ಹೊಂದಿದ್ದರೂ ನೇರವಾಗಿ ಸಮಾಜವನ್ನು ಕುರಿತಾದ ಸಮಾಜ ವಿಜ್ಞಾನಗಳೊಂದಿಗಿನ ಅದರ ಸಂಬಂಧವು ಹೆಚ್ಚು ನಿಟಕವಾದುದು ಎಂದೆನ್ನಬಹುದು. ಅಂತೆಯೇ, ಅದು ಸಮಾಜಶಾಸ್ತ್ರ ಅರ್ಥಶಾಸ್ತ್ರ, ಇತಿಹಾಸ, ರಾಜ್ಯಶಾಸ್ತ್ರ, ಮನೋವಿಜ್ಞಾನ ಹಾಗೂ ತತ್ವಶಾಸ್ತ್ರಗಳೊಂದಿಗೆ ಹೆಚ್ಚು ಹತ್ತಿರದ ಸಂಬಂಧ ಹೊಂದಿದೆ. ಆದಾಗ್ಯೂ ಈ ಸಂಬಂಧದಲ್ಲಿ ಸಮಾಜಕಾರ್ಯವು ಯಾವುದೋ ಒಂದು ಶಾಸ್ತ್ರದೊಂದಿಗೆ ಮಾತ್ರ ಸೀಮಿತವಾದ ಸಂಬಂಧವನ್ನು ಹೊಂದಿದೆ ಎಂಬ ಸ್ಥಿತಿಯಿರುವುದಿಲ್ಲ. ವಿಜ್ಞಾನಗಳೂ ಕೂಡ ಸಮಾಜಕಾರ್ಯವನ್ನು ಹೆಚ್ಚು ಅರ್ಥಪೂರ್ಣವಾಗಿಸಲು ಹಾಗೂ ಎಲ್ಲಾ ಪರಿಣಾಮಕಾರಿಯಾಗಿ ಮಾಡಲು ತಮ್ಮ ಕೊಡುಗೆಗಳನ್ನು ನೀಡಿವೆ ಮತ್ತು ನೀಡುತ್ತಲಿವೆ. ಈ ಹಿನ್ನೆಲೆಯಲ್ಲಿ ಪ್ರೊಫೆಸರ್ ಫ್ರೀಡ್ಲ್ಯಾಂಡರ್ರವರು ಹೇಳಿರುವ ಮಾತುಗಳು ಉಲ್ಲೇಖನೀಯವಾಗಿವೆ. ಸಮಾಜಕಾರ್ಯವು ರಾಜ್ಯಶಾಸ್ತ್ರ, ಮನೋವಿಜ್ಞಾನ, ಸಮಾಜಶಾಸ್ತ್ರ, ಅರ್ಥಶಾಸ್ತ್ರ, ವೈದ್ಯಕೀಯಶಾಸ್ತ್ರ, ಮನಸೋಪಚಾರ, ಮಾನವಶಾಸ್ತ್ರ, ಜೀವಶಾಸ್ತ್ರ, ಇತಿಹಾಸ, ಶಿಕ್ಷಣಶಾಸ್ತ್ರ ಮತ್ತು ದರ್ಶನಶಾಸ್ತ್ರ, ಇವೆಲ್ಲವುಗಳಿಂದಲೂ ಜ್ಞಾನವನ್ನು ಮತ್ತು ಒಳನೋಟಗಳನ್ನು ಪಡೆದಿದೆ. ಆದರೆ, ಅದೆಲ್ಲವನ್ನು ಅದು ಸಮನ್ವಯಗೊಳಿಸುವುದರ ಮೂಲಕ ತಾನೇ ಒಂದು ವಿಜ್ಞಾನವಾಗಿ ಬೆಳೆದು ಬಂದಿದೆ. ಸಮಾಜಕಾರ್ಯವು ಒಂದು ವೃತ್ತಿಯಾಗಿ ಈ ಇತರ ಸಮಾಜ ವಿಜ್ಞಾನವಾಗಿ ಬೆಳೆದು ಬಂದಿದೆ. ಸಮಾಜಕಾರ್ಯವು ಒಂದು ವೃತ್ತಿಯಾಗಿ ಈ ಇತರ ಸಮಾಜ ವಿಜ್ಞಾನಗಳು ಒದಗಿಸಿದಂತಹ ಜ್ಞಾನವನ್ನು ಆಧರಿಸಿ ನಿಂತಿದೆ.
ಸಮಾಜಕಾರ್ಯವು ಹಲವಾರು ವಿಜ್ಞಾನಗಳೊಂದಿಗೆ ಸಂಬಂಧವನ್ನು ಹೊಂದಿದ್ದರೂ ಇಲ್ಲಿನ ನಮ್ಮ ಉದ್ದೇಶಕ್ಕಾಗಿ ಅದು ಸಮಾಜಶಾಸ್ತ್ರ, ಅರ್ಥಶಾಸ್ತ್ರ, ಮನಃಶಾಸ್ತ್ರ ಮತ್ತು ಮನಸೋಪಚಾರಗಳಂತಹ ವಿಜ್ಞಾನಗಳ ಜೊತೆಗೆ ಎಂತಹ ಸಂಬಂಧವನ್ನು ಹೊಂದಿದೆ ಎಂಬಂಶವನ್ನು ಸಂಕ್ಷಿಪ್ತವಾಗಿ ಪರಿಶೀಲಿಸಬಹುದಾಗಿದೆ. 1. ಸಮಾಜಕಾರ್ಯ ಮತ್ತು ಸಮಾಜಶಾಸ್ತ್ರ ಸಮಾಜಕಾರ್ಯವು ಇತರೆಲ್ಲಾ ಸಮಾಜ ವಿಜ್ಞಾನಗಳೊಂದಿಗೆ ಹೊಂದಿರುವ ಸಂಬಂಧಕ್ಕಿಂತಲೂ ಸಮಾಜಶಾಸ್ತ್ರದೊಂದಿಗೆ ಹೊಂದಿರುವ ಸಂಬಂಧವು ಹೆಚ್ಚು ನಿಕಟವಾದುದು. ಸಾಮಾಜಿಕಕಾರ್ಯ ಮತ್ತು ಸಮಾಜಶಾಸ್ತ್ರಗಳ ನಡುವಿನ ಸಬಂಧ ಹಾಗೂ ವ್ಯತ್ಯಾಸಗಳನ್ನು ಈ ಕೆಳಗಿನಂತೆ ವಿಶ್ಲೇಷಿಸಬಹುದು. 1. ಸಮಾಜಶಾಸ್ತ್ರವು ಒಂದು ಸಮಾಜ ವಿಜ್ಞಾನವಾಗಿದ್ದರೆ ಸಮಾಜಕಾರ್ಯಕ್ಕೆ ಸಮಾಜ ವಿಜ್ಞಾನದ ಸ್ಥಾನಮಾನವನ್ನು ನೀಡಲಾಗಿಲ್ಲ. 2. ಸಮಾಜಶಾಸ್ತ್ರವು ಒಂದು ಶುದ್ಧ ವಿಜ್ಞಾನವಾಗಿದ್ದರೆ ಸಮಾಜಕಾರ್ಯವು ಅದಕ್ಕೆ ಸಂಬಂಧಿಸಿದ ಅನ್ವಯಿಕ ವಿಜ್ಞಾನವಾಗಿದೆ. 3. ಸಮಾಜಶಾಸ್ತ್ರ ಮತ್ತು ಸಮಾಜಕಾರ್ಯಗಳ ನಡುವಿನ ಐತಿಹಾಸಿಕ ಸಂಬಂಧಗಳ ಹೊರತಾಗಿಯೂ ಸಮಾಜಶಾಸ್ತ್ರ ಮತ್ತು ಸಮಾಜಕಾರ್ಯದ ಅಂತಹ ಸಂಬಂಧವು ಸಮಾಜಶಾಸ್ತ್ರಕ್ಕೆ ಮಾತ್ರ ಸೀಮಿತಗೊಂಡಿದೆ ಎನ್ನುವಂತಿಲ್ಲ. ಕಾರಣವೇನೆಂದರೆ, ಸಮಾಜಶಾಸ್ತ್ರದಿಂದ ಹೇಗೋ ಹಾಗೆ ಉಳಿದ ಸಮಾಜವಿಜ್ಞಾನಗಳ ಕಡೆಯಿಂದಲೂ ಸಾಮಾಜಿಕಕಾರ್ಯವು ಮಾರ್ಗದರ್ಶನವನ್ನು, ಸಹಾಯವನ್ನು, ಉಪಯುಕ್ತ ಕೌಶಲ್ಯಗಳನ್ನು ಪಡೆಯುತ್ತಾ ಬಂದಿದೆ. 4. ಸಮಾಜಶಾಸ್ತ್ರ ಮತ್ತು ಸಾಮಾಜಿಕಕಾರ್ಯ- ಇವೆರಡೂ ಕೂಡ ಜನರಲ್ಲಿ ಸಮೂಹ-ಸಮುದಾಯಗಳಲ್ಲಿ, ಜನರ ನಡುವಿನ ಅಂತಃಕ್ರಿಯೆಗಳ ಅಧ್ಯಯನದಲ್ಲಿ ಆಸಕ್ತಿ ಹೊಂದಿವೆ. ಇವೆರಡೂ ಕೂಡ ಸಮಾಜವನ್ನು ಮಾನವಾಂತಃಕ್ರಿಯೆಗಳ ಒಂದು ಸಮಷ್ಠಿ ಎಂದೇ ಪರಿಗಣಿಸುವುವು. ಆದಾಗ್ಯೂ ಅವುಗಳ ಕಾರ್ಯಶೈಲಿ ಬೇರೆ ಬೇರೆ. ಸಮಾಜಶಾಸ್ತ್ರವು ಸಮಾಜ ಹಾಗೂ ಅದರ ಸಮಸ್ಯೆಗಳ ಬಗ್ಗೆ ವೈಜ್ಞಾನಿಕ ವಿಶ್ಲೇಷಣೆಯನ್ನು ನೀಡುವುದು. ಈ ವಿಶ್ಲೇಷಣೆಯ ಸಹಾಯವನ್ನು ಪಡೆದುಕೊಂಡು ಸಾಮಾಜಿಕಕಾರ್ಯವು ಜನರ ಸಮಸ್ಯೆಗಳಿಗೆ ಹಾಗೂ ಅಗತ್ಯತೆಗಳಿಗೆ ಒಂದು ಸೀಮಿತ ಕಕ್ಷೆಯಲ್ಲಿ ಸೂಕ್ತ ರೀತಿಯ ಪರಿಹಾರವನ್ನು ಇಲ್ಲವೇ ಸ್ಪಂದನವನ್ನು ನೀಡುವುದು. 5. ಸಮಾಜಶಾಸ್ತ್ರದ ಅಧ್ಯಯನಶೈಲಿ ಹೆಚ್ಚು ತಾತ್ವಿಕ ಸ್ವರೂಪದದ್ದು. ಜನರ ಸಾಮಾಜಿಕ ವರ್ತನೆಗೆ ಸಂಬಂಧಿಸಿದಂತೆ ಏನು? ಏಕೆ? ಹೇಗೆ? ಎಂಬ ಪ್ರಶ್ನೆಗಳನ್ನು ಮುಂದಿರಿಸಿಕೊಂಡು ಅದು ತನ್ನ ಅಧ್ಯಯನ ನಡೆಸುವುದು. ಸಾಮಾಜಿಕ ಸಮಸ್ಯೆಗಳನ್ನು ಅಧ್ಯಯನ ಮಾಡುವ, ಸಂಶೋಧನೆಗಳನ್ನು ನಡೆಸುವ, ಸಾಮಾಜಿಕ ವಾಸ್ತವತೆಗಳ ಬಗ್ಗೆ ಇನ್ನಷ್ಟು-ಮತ್ತಷ್ಟು ಮಾಹಿತಿ ಸಂಗ್ರಹಿಸುವ ಪ್ರಯತ್ನ ಇಲ್ಲಿದೆ. ಸಮಾಜಕಾರ್ಯವು ಜನರನ್ನು ಕಾಡುವ ಸಾಮಾಜಿಕ-ಆರ್ಥಿಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಹೆಚ್ಚು ಉತ್ಸುಕವಾಗಿದೆ. ವ್ಯಕ್ತಿ ಮತ್ತು ಸಾಮಾಜಿಕ ಪರಿಸರಗಳ ನಡುವೆ ಸೂಕ್ತ ಹೊಂದಾಣಿಕೆಯುಂಟಾಗುವಂತೆ ಮಾಡಲು ಸಮಾಜಕಾರ್ಯತಜ್ಞನು ಸಹಾಯಕನಾಗಿದ್ದಾನೆ. ಸಮಾಜಕಾರ್ಯ ಸ್ವರೂಪದ ಸೇವೆ ನೀಡುವಲ್ಲಿ ಸಹಾಯಕವಾದ ವಿಜ್ಞಾನವಾಗಿದೆ. 2. ಸಮಾಜಕಾರ್ಯ ಮತ್ತು ಅರ್ಥಶಾಸ್ತ್ರ ಅರ್ಥಶಾಸ್ತ್ರವು ಒಂದು ಪ್ರಮುಖ ಸಮಾಜ ವಿಜ್ಞಾನವಾಗಿದ್ದು ಎಲ್ಲಕ್ಕಿಂತ ಮುಖ್ಯವಾಗಿ ಆರ್ಥಿಕ ಸಂಪತ್ತಿನ ಬಗ್ಗೆ ಹಾಗೂ ಅದಕ್ಕೆ ಸಂಬಂಧಿಸಿದಂತೆ ಮಾನವನ ಆರ್ಥಿಕ ಚಟುವಟಿಕೆಗಳ ಕುರಿತಾದ ಅಧ್ಯಯನಶಾಸ್ತ್ರವಾಗಿದೆ. ಮಾನವನು ಸಂಪತ್ತನ್ನು ಸಂಪಾದಿಸುವ, ಹಂಚುವ ಹಾಗೂ ಖರ್ಚು ಮಾಡುವ ಅಥವಾ ಅನುಭೋಗಿಸುವ ಕಾರ್ಯದಲ್ಲಿ ಹೇಗೆ ನಿರತನಾಗಿರುತ್ತಾನೆ ಎಂಬಂಶವನ್ನು ವಿಸ್ತೃತವಾಗಿ ವಿಶ್ಲೇಷಿಸುವ ಶಾಸ್ತ್ರವಿದು. ಆದರೆ, ಅಷ್ಟಕ್ಕೆ ಮಾತ್ರ ಅದರ ಉದ್ದೇಶ ಸೀಮಿತವಾಗಿಲ್ಲ. ಪ್ರಸಿದ್ಧ ಅರ್ಥಶಾಸ್ತ್ರಜ್ಞ ಪ್ರೊಫೆಸರ್ ಆಲ್ಫ್ರೆಡ್ ಮಾರ್ಷಲ್ ಹೇಳುವಂತೆ ಅರ್ಥಶಾಸ್ತ್ರವು ಒಂದು ಕಡೆ ಭೌತಿಕ ಸಂಪತ್ತನ್ನು ಅಧ್ಯಯನ ಮಾಡುವುದಿದ್ದರೂ ಇನ್ನೊಂದೆಡೆ ಮಾನವ ಸಂತೃಪ್ತಿಯ ಕುರಿತಾಗಿಯೂ ಅಧ್ಯಯನ ನಡೆಸುವುದು. ಮಾನವನ ಭೌತಿಕ ಅಗತ್ಯಗಳಾದ ಆಹಾರ, ವಸತಿ, ಬಟ್ಟೆ ಹೇಗೆ ಸಂತೃಪ್ತಿಗೊಳ್ಳುವುದು, ಆತನ ಇಚ್ಚೆಗಳು ಹೇಗೆ ಈಡೇರುವುವು ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ, ಆತನು ತನ್ನ ಆರ್ಥಿಕ ಸಮಸ್ಯೆಗಳನ್ನು ಹೇಗೆ ಎದುರಿಸುತ್ತಾನೆ ಎಂಬಂಶಗಳ ಬಗ್ಗೆ ಅದು ಹೆಚ್ಚಿನ ಬೆಳಕು ಚೆಲ್ಲುವುದು. ಸಮಾಜಕಾರ್ಯವು ಮಾನವನು ಎದುರಿಸುತ್ತಾ ಬಂದಿರುವ ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸೂಕ್ತವಾದ ಕಾರ್ಯವಿಧಾನ ಯಾವುದೆಂಬುದನ್ನು ಕಂಡುಕೊಳ್ಳುವ ಪ್ರಯತ್ನ ನಡೆಸುವುದು. ಸಾಮಾಜಿಕ ಸಮಸ್ಯೆಗಳು ಶೂನ್ಯದಿಂದ ಹೊರಹೊಮ್ಮಿದವುಗಳಲ್ಲ. ಹಲವಾರು ಅಂಶಗಳು ಹಾಗೂ ಶಕ್ತಿಗಳು ಅವುಗಳಿಗೆ ಕಾರಣವಾಗಿವೆ. ಅಂತಹ ಶಕ್ತಿಗಳಲ್ಲಿ ಆರ್ಥಿಕ ಶಕ್ತಿಗಳು ಬಹಳ ಮುಖ್ಯವಾದವುಗಳು. ಅಪರಾಧ, ಬಡತನ, ಅನಕ್ಷರತೆ, ಭಿಕ್ಷಾಟನೆ, ನಿರುದ್ಯೋಗ, ಬಾಲಕಾರ್ಮಿಕ ಸಮಸ್ಯೆ, ವೇಶ್ಯಾವಾಟಿಕೆ, ಜೀತದಾಳುಗಳ ಸಮಸ್ಯೆ, ಸ್ತ್ರೀಯರ ಶೋಷಣೆ ಮತ್ತು ಅವರ ಮೇಲೆ ಹಿಂಸಾಚಾರ-ಇವೆಲ್ಲವುಗಳ ಹಿನ್ನೆಲೆಯಲ್ಲಿ ಅಸಂತುಷ್ಠಿದಾಯಕವಾದ ಆರ್ಥಿಕ ಪರಿಸ್ಥಿತಿಗಳ ಪಾತ್ರವಿದೆ. ವ್ಯಕ್ತಿಗತ ಸಂತೃಪ್ತಿಯೂ ಎಷ್ಟೋ ಬಾರಿ ಆರ್ಥಿಕ ಪರಿಸ್ಥಿತಿಗಳನ್ನೇ ಹೊಂದಿಕೊಂಡಿರುತ್ತದೆ. ಸಮಾಜಕಾರ್ಯವು ಈ ಮೇಲೆ ಉಲ್ಲೇಖಿಸಿದ ಆರ್ಥಿಕ ಸಮಸ್ಯೆಗಳಿಗೆ ತತ್ಕ್ಷಣದದಲ್ಲಿ ಸೂಕ್ತ ಹಾಗೂ ಸಮಾಧಾನಕರವಾದ ಪರಿಹಾರವನ್ನು ಒದಗಿಸುವುದು ಎಂದು ಭಾವಿಸಕೂಡದು. ಆದರೆ ಸಮಾಜಕಾರ್ಯದಲ್ಲಿ ತೊಡಗುವ ಯಾವುದೇ ಕಾರ್ಯಕರ್ತನಾದೂ ಇಂತಹ ಆರ್ಥಿಕ ಮೂಲದ ಸಾಮಾಜಿಕ ಸಮಸ್ಯೆಗಳ ವ್ಯಾಪ್ತಿ ಮತ್ತು ತೀವ್ರತೆಯ ಪರಿವೆಯಿಲ್ಲದೇ ಇದ್ದರೆ ಆತನು ತನ್ನ ಕಾರ್ಯದಲ್ಲಿ ಯಶಸ್ಸನ್ನು ಕಾಣಲಾರ. ಮಾನವ ಸಂಬಂಧಗಳನ್ನು ಮತ್ತು ಮಾನವ ಸಂತೃಪ್ತಿಯನ್ನು ನಿರ್ಧರಿಸುವ ಅಂಶಗಳಲ್ಲಿ ಆರ್ಥಿಕ ಅಂಶಗಳ ಪಾತ್ರ ಮಹತ್ವದ್ದಾಗಿದೆ ಎಂಬ ಪ್ರಾಥಮಿಕ ಪಾಠವನ್ನು ಆತನು ಕಲಿತುಕೊಂಡೇ ಮುಂದೆ ಸಾಗಬೇಕಾಗುವುದು. ಈ ನಿಟ್ಟಿನಲ್ಲಿ ಅರ್ಥಶಾಸ್ತ್ರವು ಆತನಿಗೆ ಬಹಳಷ್ಟು ಮಾಹಿತಿಯನ್ನು ನೀಡಿ ಸಮಾಜಕಾರ್ಯಕ್ಕೆ ಸನ್ನದ್ಧನಾಗಲು ನೆರವಾಗುವುದು. 3. ಸಮಾಜಕಾರ್ಯ ಮತ್ತು ಮನೋವಿಜ್ಞಾನ ಮನಃಶಾಸ್ತ್ರವು ಮಾನವ ವರ್ತನೆಗೆ ಸಂಬಂಧಿಸಿದ ವಿಜ್ಞಾನವಾಗಿದೆ. ಒಬ್ಬ ಮನಶಾಸ್ತ್ರಜ್ಞನು ಮಾನವನ ವರ್ತನೆಯ ವೈಚಿತ್ರ್ಯಗಳನ್ನು ಅರ್ಥವಿಸಿಕೊಳ್ಳುವುದರಲ್ಲಿಯೇ ಸದಾ ಮಗ್ನನು. ಸಿಲ್ವರ್ಮನ್ ಎಂಬವರು ಹೇಳುವಂತೆ, ಮನಃಶಾಸ್ತ್ರವೆಂಬುದು ಮಾನವನ ಮತ್ತು ಇತರ ಕೆಲವು ಪ್ರಾಣಿಗಳ ವರ್ತನೆಯನ್ನು ಅಳೆಯುವ, ವ್ಯಾಖ್ಯಾನಿಸುವ ಮತ್ತು ಕೆಲವೊಮ್ಮೆ ಪರಿವರ್ತಿಸುವ ವಿಜ್ಞಾನವಾಗಿದೆ. ಪರಸ್ಪರ ಸಂಬಂಧ: ಸಮಾಜಕಾರ್ಯಕರ್ತ ಮತ್ತು ಮನೋವಿಜ್ಞಾನಿ-ಇವರಿಬ್ಬರೂ ಕೂಡ ಕೆಲವೊಮ್ಮೆ ಒಂದೇ ವೃತ್ತಿ ತಂಡದ ಸದಸ್ಯರಾಗಿರುತ್ತಾರೆ. ಈ ಎರಡೂ ವಿಜ್ಞಾನಗಳೂ ಸಾಮಾನ್ಯ ನೆಲೆಗಳ ಹಿನ್ನೆಲೆಯಲ್ಲಿ ಕಾರ್ಯ ನಡೆಸುವುದು ಅಗತ್ಯವಾಗಿರುವುದು. ಈ ಎರಡೂ ವಿಜ್ಞಾನಗಳು ಮಾನವ ವರ್ತನೆಗಳಲ್ಲಿ/ಸಂಬಂಧಗಳಲ್ಲಿ ಆಸಕ್ತವಿದ್ದರೂ ಮನಃಶಾಸ್ತ್ರಜ್ಞನು ವ್ಯಕ್ತಿಯ ವ್ಯಕ್ತಿಗತ ವರ್ತನೆಯ ಬಗ್ಗೆ ತನ್ನ ಗಮನವನ್ನು ಹೆಚ್ಚು ಕೇಂದ್ರೀಕರಣ ಮಾಡಿದರೆ ಸಮಾಜಕಾರ್ಯಕರ್ತನು ಸಾಮಾಜಿಕ ಕಾರ್ಯಶೀಲತೆಯ ಬಗ್ಗೆ ಹೆಚ್ಚಿನ ಮಹತ್ವ ನೀಡುತ್ತಾನೆ. ಎರಡೂ ವಿಜ್ಞಾನಗಳೂ ಕೂಡ ವ್ಯಕ್ತಿಗಳ ಚಿಂತನೆ ಮತ್ತು ಭಾವನೆಗಳ ಪ್ರಕ್ರಿಯೆಗಳನ್ನು ಅರ್ಥೈಸಿಕೊಳ್ಳುವ ಪ್ರಯತ್ನದಲ್ಲಿ ತೊಡಗಿರುತ್ತದೆ. ಪರಸ್ಪರ ವ್ಯತ್ಯಾಸಗಳು: ಈ ಎರಡೂ ವಿಜ್ಞಾನಗಳು ಪರಸ್ಪರ ಬೇರೆಯಾಗಿವೆ. ಒಬ್ಬ ಮನಃಶಾಸ್ತ್ರಜ್ಞನು ವ್ಯಕ್ತಿಗಳ ವಿಶಿಷ್ಟ ವರ್ತನೆಯನ್ನು ಅರ್ಥಮಾಡಿಕೊಳ್ಳುವುದಕ್ಕಾಗಿ ಅವರ ವ್ಯಕ್ತಿಗತ ಗುಣಗಳಿಗೆ ಹೆಚ್ಚಿನ ಮಹತ್ವ ನೀಡುವನು. ಕೆಲವೊಮ್ಮೆ ಮನೋವಿಜ್ಞಾನಿಗಳು, ಅದರಲ್ಲೂ ಚಿಕಿತ್ಸಕ ಮನೋವಿಜ್ಞಾನಿಗಳು ತಮ್ಮ ಸಾಮಾನ್ಯ ಅಧ್ಯಯನ ಹಂತದ ಪರಿಧಿಯನ್ನು ದಾಟಿ ಜನರೊಂದಿಗೆ ಸೇರಿಕೊಂಡು ಅವರಿಗೆ ನೆರವೀಯುವ ಪ್ರಕ್ರಿಯೆಯಲ್ಲಿ ಭಾಗಿಗಳಾಗುವರು. ಹಾಗೆ ಕೆಲಸ ಮಾಡುವಾಗ, ಈ ಎರಡು ಶಾಸ್ತ್ರಗಳ ಕಾರ್ಯಚಟುವಟಿಕೆಗಳು ಒಂದರ ಮೇಲೆ ಇನ್ನೊಂದರಂತೆ ಚಾಚಿಕೊಂಡಿರುಬಹುದಾಗಿದ್ದರೂ ಅವುಗಳ ಮುಖ್ಯ ಒತ್ತುಗಳಲ್ಲಿ ಅಥವಾ ಕೇಂದ್ರೀಕರಣದಲ್ಲಿ ವ್ಯತ್ಯಾಸವಿರುತ್ತದೆ. ಮನಃಶಾಸ್ತ್ರಜ್ಞನು ಸಾಮಾನ್ಯವಾಗಿ ವ್ಯಕ್ತಿಗಳೊಡನೆ ಬಹಳ ಆಳವಾದ ನೆಲೆಯಲ್ಲಿ ವ್ಯವಹರಿಸುತ್ತಾ ಕೆಲವೊಮ್ಮೆ ಮನಸೋಪಚಾರಕನೇ ಆಗಿ ಬಿಡುತ್ತಾನೆ. ಆದರೆ, ಸಮಾಜಕಾರ್ಯಕರ್ತನು ಮಾತ್ರ ತನ್ನ ಗಿರಾಕಿಗಳ ಸಾಮಾಜಿಕ ಕಾರ್ಯಶೀಲತೆ ಹಾಗೂ ಸಂಬಂಧಗಳಲ್ಲಿ ಮಾತ್ರ ಹೆಚ್ಚು ಆಸಕ್ತನಾಗಿರುತ್ತಾನೆ. ಜೊತೆಗೆ ವ್ಯಕ್ತಿಗಳ ವೈಯಕ್ತಿಕ ಹಾಗೂ ಸಮಸ್ಯೆಗಳನ್ನು ಪರಹರಿಸುವ ದೃಷ್ಟಿಯಿಂದ ಸಮುದಾಯದ ಸಂಪನ್ಮೂಲಗಳನ್ನು ಬಳಸಿಕೊಳ್ಳುವ ರೀತಿ ಹಾಗೂ ವಿಧಿ ವಿಧಾನಗಳ ಬಗ್ಗೆಯೂ ಆತ ಸಮಾನವಾದ ಆಸಕ್ತಿ ಹೊಂದಿರುತ್ತಾನೆ. 4. ಸಮಾಜಕಾರ್ಯ ಮತ್ತು ಮಾನಸೋಪಚಾರಶಾಸ್ತ್ರ ಮಾನಸೋಪಚಾರಶಾಸ್ತ್ರವೆಂಬುದು ವೈದ್ಯಕೀಯಶಾಸ್ತ್ರದ ಒಂದು ಶಾಖೆಯಾಗಿದ್ದು ಮನೋರೋಗಗಳ ಉಗಮ, ಅವುಗಳ ಪರೀಕ್ಷೆ ಹಾಗೂ ಚಿಕಿತ್ಸೆಯನ್ನು ಕುರಿತು ಅಧ್ಯಯನ ಮಾಡುವುದು. ಸರಳವಾಗಿ ಹೇಳುವುದಾದರೆ, ಮಾನಸೋಪಚಾರಶಾಸ್ತ್ರವೆಂಬುದು ಮಾನಸಿಕವಾಗಿ ಅಸ್ವಸ್ಥರಾಗಿರುವವರಿಗೆ ವೈದ್ಯಕೀಯವಾಗಿ ಪ್ರಶಿಕ್ಷಣ ಪಡೆದವರು ಚಿಕಿತ್ಸೆ ನೀಡವಂತಹ ಜ್ಞಾನ ಶಾಖೆಯಾಗಿದೆ ಪರಸ್ಪರ ಸಂಬಂಧ ಸಮಾಜಕಾರ್ಯ ಮತ್ತು ಮಾನಸೋಪಚಾರಶಾಸ್ತ್ರ ಇವು ಪರಸ್ಪರ ಸಂಬಂಧಿತವಾಗಿವೆ. ಅವೆರಡೂ ಕೂಡ ವೈಯಕ್ತಿಕ ಹಾಗೂ ಸಾಮಾಜಿಕ ಸಮಸ್ಯೆಗಳಿಂದ ತ್ರಸ್ತರಾದ ಜನರನ್ನು ತಮ್ಮ ಗುರಿಯಾಗಿ ಇರಿಸಿಕೊಂಡು ಕಾರ್ಯನಿರ್ವಹಿಸುವುವು. ಇತರರೊಂದಿಗೆ ತಾವು ಹೊಂದಿರುವ ಸಂಬಂಧಗಳನ್ನು ಹೇಗೆ ಸುಧಾರಿಸಿಕೊಳ್ಳಬೇಕೆಂಬ ಬಗ್ಗೆ ಅವು ಜನರಿಗೆ ಮಾರ್ಗದರ್ಶನ ನೀಡುತ್ತವೆ. ಜನರ ಸಂವೇದನಾಶೀಲತೆ, ಆಂತರಿಕಕ ಕ್ಷಮತೆ, ಭಾವನಾಪರತೆ ಮತ್ತು ಆವೇಗಗಳು ಇವುಗಳನ್ನು ಅರ್ಥೈಸಿಕೊಳ್ಳುವುದರಲ್ಲೂ ಅವು ಆಸಕ್ತಿ ತೋರಿಸುವುವು. ಪರಸ್ಪರ ವ್ಯತ್ಯಾಸಗಳು ಸಮಾಜಕಾರ್ಯ ಮತ್ತು ಮಾನಸೋಪಚಾರಶಾಸ್ತ್ರಗಳ ನಡುವೆಯೂ ಸಾಕಷ್ಟು ವ್ಯತ್ಯಾಸಗಳಿವೆ. ವಿದ್ವಾಂಸರೊಬ್ಬರು ಅಭಿಪ್ರಾಯಪಟ್ಟಿರುವಂತೆ ಮಾನಸೋಪಚಾರಶಾಸ್ತ್ರವು ವೈಯಕ್ತಿಕ ಹಾಗೂ ಸಾಮಾಜಿಕ ಸಮಸ್ಯೆಗಳ ಆಳಕ್ಕೆ ಇಳಿಯುವುದಿದ್ದರೆ, ಸಮಾಜಕಾರ್ಯವು ಅವುಗಳ ಅಗಲಗಳನ್ನು ಅರ್ಥಾತ್ ಮೇಲ್ಮುಖಗಳನ್ನು ಅಧ್ಯಯನ ಮಾಡುವುದು. ಮಾನಸೋಪಚಾರಶಾಸ್ತ್ರಜ್ಞನು ಅಧ್ಯಯನ ಮಾಡುತ್ತಾ ಹೋದಂತೆ ಆತನ ವ್ಯಕ್ತಿಯ ಅಂತರ್ ವ್ಯಕ್ತಿ ಸಂಬಂಧಗಳನ್ನು, ಆತನ ಸುಪ್ತಾವ್ಯವಸ್ಥೆಯಲ್ಲಿರುವ ಪ್ರೇರಣೆಗಳ ಪಾತ್ರ-ಮತ್ತಿತರ ಸಂಬಂಧಿತ ಅಂಶಗಳ ಕಡೆಗೆ ಆಳವಾದ ನೋಟವನ್ನು ಬೀರುತ್ತಾನೆ. ಆದರೆ, ಸಮಾಜಕಾರ್ಯಕರ್ತನು ವ್ಯಕ್ತಿಯ ಪ್ರಜ್ಞಾವಸ್ಥೆಯಲ್ಲಿನ ಕಾರ್ಯಚಟುವಟಿಕೆಗಳ ಅಥವಾ ವರ್ತನೆಯ ಬಗ್ಗೆ ಮಾತ್ರ ಗಮನ ಪರಿಹರಿಸುವವನಾಗಿದ್ದಾನೆ. ಈ ಹಿಂದೆ ತಿಳಿದಿರುವಂತೆ ತನ್ನ ಉದ್ದೇಶಗಳ ಸಾಧನೆಗಾಗಿ ಆತನ ಪರಿಸರದ ಹಾಗೂ ಸಮುದಾಯದ ಸಂಪನ್ಮೂಲಗಳನ್ನು ಕೂಡ ಬಳಸುತ್ತಾನೆ. ಮಾನಸೋಪಚಾರಶಾಸ್ತ್ರಜ್ಞನು ವೈದ್ಯಕೀಯ ನೆಲೆಯಲ್ಲಿ ತನ್ನ ರೋಗಿಗಳ ಜೊತೆಯಲ್ಲಿ ವ್ಯವಹರಿಸುವನು. ಆತ ರೋಗಿಯ ರೋಗಾವಸ್ಥೆಯ ಪರಿಸ್ಥಿತಿಗೆ ತಕ್ಕುದಾಗಿ ಔಷಧೋಪಚಾರ ಕ್ರಮವನ್ನು ವಿಧಿಸುತ್ತಾನೆ. ರೋಗಿಗಳನ್ನು ಆಸ್ಪತ್ರೆಗಳಿಗೆ ಸೇರಿಸಬೇಕಾದ ಪರಿಸ್ಥಿತಿ ಇದ್ದರೆ ಆ ಬಗ್ಗೆ ಸೂಚಿಸುತ್ತಾನೆ ಮತ್ತು ರೋಗಿಯ ಸುಪ್ತಾವಸ್ಥೆಯಲ್ಲಿ ಆತನ ರೋಗಕ್ಕೆ ಸಂಬಂಧಿಸಿದಂತೆ ಏನೆಲ್ಲಾ ಸಂಗತಿಗಳು ಹುದುಗಿವೆ ಎಂಬುದನ್ನು ಕೂಡ ಕಂಡುಕೊಳ್ಳಲು ಪ್ರಯತ್ನಿಸುವನು. ಮಾನಸೋಪಚಾರಶಾಸ್ತ್ರವು ರೋಗನಿದಾನಶಾಸ್ತ್ರದ ತಂತ್ರಗಳನ್ನು ಬಳಸಿಕೊಳ್ಳುತ್ತಾ ಮನೋ-ಸಾಮಾಜಿಕ ರೋಗಗಳ ತೀವ್ರತೆಯನ್ನು ತಗ್ಗಿಸುವ ಯತ್ನ ಮಾಡುತ್ತದೆ. ಚ.ನ. ಶಂಕರ್‍ರಾವ್ (ಸಮಾಜಕಾರ್ಯ ಪುಸ್ತಕದಿಂದ) ಸಮಾಜಶಾಸ್ತ್ರ ಉಪನ್ಯಾಸಕ (ನಿವೃತ್ತ), ಕೆನರಾ ಪದವಿ ಪೂರ್ವ ಕಾಲೇಜು, ಮಂಗಳೂರು-575003
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
SITE MAP
SiteTRAININGJOB |
HR SERVICESOTHER SERVICESnIRATHANKA CITIZENS CONNECT |
NIRATHANKAPOSHOUR OTHER WEBSITESSubscribe |
MHR LEARNING ACADEMY
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|