Niruta Publications
  • Home
  • About Us
    • Ramesha's Profile
  • Publication With Us
    • Inviting Authors
    • Promote Your Books
  • Niruta Book Club
  • Our Services
  • Leaders Talk
  • HR Blog
    • Inviting Articles
  • Books / Online Store
  • Media Mentions
    • Photos
  • Join Our Online Groups
  • Contact Us
  • Home
  • About Us
    • Ramesha's Profile
  • Publication With Us
    • Inviting Authors
    • Promote Your Books
  • Niruta Book Club
  • Our Services
  • Leaders Talk
  • HR Blog
    • Inviting Articles
  • Books / Online Store
  • Media Mentions
    • Photos
  • Join Our Online Groups
  • Contact Us
Niruta Publications

ಅರ್ಕಾವತಿ ನದಿ ಪುನಶ್ಚೇತನ ಕನಸು...ಇನ್ನೂ ಜಿನುಗುತ್ತಿದೆ

9/5/2017

0 Comments

 
Picture
ಅರ್ಕಾವತಿ ನದಿ ಪುನಶ್ಚೇತನದ ಕನಸಿಗೆ 14 ವರ್ಷಗಳಾದವು. 2003ರ ಏಪ್ರಿಲ್ 22 ರಂದು ಡಾ.ರಾಜೇಂದ್ರ ಸಿಂಗ್ ಅವರ ಕರ್ನಾಟಕ ಜಲಚೇತನ ಯಾತ್ರೆಯ ಭಾಗವಾಗಿ ದೊಡ್ಡಬಳ್ಳಾಪುರದ ರಾಮಾಂಜನೇಯ ಚತ್ರದಲ್ಲೊಂದು ದೊಡ್ಡ ಸಭೆ ನಡೆಯಿತು. ಆಗಲೇ ಜಲ ಸಂರಕ್ಷಣೆಯಲ್ಲಿ, ಕೈಗಾರಿಕಾ ಮಾಲಿನ್ಯ ತಡೆಯುವ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ದೊಡ್ಡಬಳ್ಳಾಪುರದ ಜನತೆಗೆ ಜಲಸಂರಕ್ಷಣೆಯ ಕಾರ್ಯವು ಇಡೀ ನದಿ ಜಲಾನಯನದಲ್ಲಿ ನಡೆಯಬೇಕು, ಮಳೆ ನೀರನ್ನು ಭೂಮಿಗೆ ಇಂಗಿಸಿ ಜಲಚೇತನ ಮಾಡಬೇಕು ಎಂದು ಸಿಂಗ್ ಅವರು ಕರೆ ಕೊಟ್ಟರು. ಅಂದು ಆರಂಭವಾದ ಪುನಶ್ಚೇತನದ ಪ್ರಯತ್ನಕ್ಕೆ ಮುಂದೆ ಸರಕಾರವೂ ಕೂಡ ಸ್ಪಂದಿಸುವಂತೆ ಆಯಿತು. ಆದರೆ ಒಂದು ಹೆಜ್ಜೆ ಮುಂದಿಟ್ಟ ಸರಕಾರ ಎರಡು ಹೆಜ್ಜೆ ಹಿಂದೆ ಇಟ್ಟಿದೆ. ಆದರೆ ನಾಗರೀಕರು ಸುಮ್ಮನಿರುವಂತಿಲ್ಲ. ನದಿ ಪುನಶ್ಚೇತನ ಸಾಧ್ಯ ಎಂಬುದು ಹಲವರ ನಂಬಿಕೆ. ಹಾಗೆ ನಂಬಲೇಬೇಕು. ಯಾಕೆಂದರೆ ಜೀವನಕ್ಕೆ ನೀರು ಬೇಕೆ ಬೇಕು ಎಂದಾದರೆ ಜಲವನ್ನು, ಜಲ ಮೂಲವನ್ನು ಉಳಿಸಲೇಬೇಕಲ್ಲವೇ!
ಅರ್ಕಾವತಿ ನದಿ-ನೀರಿನ ಪರಿಸ್ಥಿತಿ
ಕಾವೇರಿಯ ಉಪನದಿಯಾದ ಅರ್ಕಾವತಿಯು ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗಡಿ ಭಾಗದಲ್ಲಿರುವ ನಂದಿ ಗಿರಿಸಾಲಿನಲ್ಲಿ ಹುಟ್ಟಿ ದಕ್ಷಿಣಾಭಿಮುಖವಾಗಿ ಬೆಂಗಳೂರು ನಗರದಿಂದ ಅನತಿ ದೂರದಲ್ಲಿ ಸಾಗಿ ರಾಮನಗರ ಜಿಲ್ಲೆಯಲ್ಲಿ ಹರಿದು ಸಂಗಮದಲ್ಲಿ ಕಾವೇರಿಯನ್ನು ಸೇರುತ್ತದೆ. ಅರ್ಕಾವತಿ ನದಿಯ ಮುಖ್ಯ ಪಾತ್ರದ ಉದ್ದ ಸುಮಾರು 190 ಕಿ.ಮೀ. ನದಿಯ ಒಟ್ಟು ಜಲಾನಯನ ಪ್ರದೇಶ 4253 ಚದರ ಕಿಲೋ ಮೀಟರ್. ಬೆಂಗಳೂರು ನಗರದ ಮೂರನೇ ಒಂದು ಭಾಗವು ಅರ್ಕಾವತಿ ಜಲಾನಯನಕ್ಕೆ ಸೇರಿದ್ದಾಗಿದೆ. ಅರ್ಕಾವತಿ ನದಿಗೆ ಕುಮುದ್ವತಿ, ವೃಷಭಾವತಿ, ಸುವರ್ಣಮುಖಿ, ಕುಟ್ಟೆ ಹೊಳೆ ಮುಂತಾದ ಉಪನದಿಗಳಿವೆ. ಅರ್ಕಾವತಿ ನದಿ ಎಂದರೆ ಕೆರೆ ತೊರೆಗಳ ಜಾಲ. ಈ ನದಿ ಜಲಾನಯನದಲ್ಲಿ 1775 ಕೆರೆಗಳಿವೆ. ಹಿಂದೆ ಬೆಂಗಳೂರು ನಗರಕ್ಕೆ ಕುಡಿಯುವ ನೀರಿನ ಮೂಲವಾಗಿದ್ದ ಹೆಸರಘಟ್ಟ ಕೆರೆ ಮತ್ತು ತಿಪ್ಪಗೊಂಡನಹಳ್ಳಿ ಜಲಾಶಯಗಳು ಈಗ ಬತ್ತಿ ಹೋಗಿವೆ. ಈಗ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಬರುವ ಅಲ್ಪ ಸ್ವಲ್ಪ ನೀರು ಕಲುಷಿತಗೊಂಡಿದೆ. ಜಲಾಶಯದ 1453 ಚದರ ಕಿಲೋ ಮೀಟರ್ ವಿಸ್ತೀರ್ಣದ ಜಲಾನಯನ ಅಂದರೆ ಅರ್ಕಾವತಿ ನದಿಯ ಉತ್ತರ ಭಾಗ ಒಣಗಿ ಮರುಭೂಮಿಯಂತಾಗಿದೆ. ಉಪನದಿಯಾದ ವೃಷಭಾವತಿಯೂ ಸೇರಿದಂತೆ ನದಿಯ ಜಲಾನಯನದ ದಕ್ಷಿಣ ಭಾಗದಲ್ಲಿ ನೀರಿದ್ದರೂ ಅದು ಕೊಳಚೆಯಾಗಿದೆ.

ಅರ್ಕಾವತಿ ಜಲಾನಯನದ ಸುಮಾರು ಅರ್ಧದಷ್ಟು ಭೂ ಪ್ರದೇಶದಲ್ಲಿ ಕೃಷಿ ಇದೆ. ಸುಮಾರು 500 - 600 ವರ್ಷಗಳ ಹಿಂದೆ ಕಟ್ಟಲ್ಪಟ್ಟ ಇಲ್ಲಿನ ಕೆರೆಗಳು ಮಳೆಗಾಲದ ನಂತರದ, ಕೆರೆಯ ಅಚ್ಚುಕಟ್ಟು ಪ್ರದೇಶದ ಬೆಳೆಗಳಿಗೆ ನೀರುಣಿಸುತ್ತಿದ್ದವು. ಕೊಳವೆ ಬಾವಿಗಳ ಮೂಲಕ ಇಲ್ಲಿನ ಅಂತರ್ಜಲವನ್ನು ಬಳಸಿ ನೀರಾವರಿ ಬೆಳೆಗಳನ್ನು ಬೆಳೆವ ಪದ್ಧತಿ ಆರಂಭವಾಗಿದ್ದು ಸುಮಾರು 70 - 80 ರ ದಶಕಗಳಲ್ಲಿ.  ಈಗ ಅಂತರ್ಜಲ ಬರಿದಾಗಿದೆ. ನೀರಿನ ಅಭಾವದದಿಂದ ಕೃಷಿ ಚಟುವಟಿಕೆಗಳಲ್ಲಿ ಏರು ಪೇರಾಗಿದೆ. ಇಲ್ಲಿನ ರೈತರು ಎಲ್ಲಾದರೂ ನೀರು ಸಿಗಬಹುದೇನೋ ಎಂದು ಹುಡುಕುತ್ತಾ ಮತ್ತಷ್ಟು ಕೊಳವೆ ಬಾವಿಗಳನ್ನು ತೋಡಲು ಹೋಗಿ ಸಾಲಗಾರರಾಗಿದ್ದಾರೆ.

ಅಂತರ್ಜಲವನ್ನೇ ಅವಲಂಬಿಸಿದ್ದ ಅರ್ಕಾವತಿ ಜಲಾನಯನದ ಕಾರ್ಖಾನೆಗಳು ನೀರಿನ ಕೊರತೆಯನ್ನು ಎದುರಿಸುತ್ತಿವೆ. ಕಾರ್ಖಾನೆಗಳು ನೀರಿನ ವ್ಯಾಪಾರಿಗಳಿಂದ ನೀರನ್ನು ಖರೀದಿಸಿ ಕಾರ್ಖಾನೆಗಳನ್ನು ನಡೆಸುವಂತಾಗಿದೆ. ಕಾರ್ಖಾನೆಗಳಿಗೆ ನೀರು ಸರಬರಾಜು ಮಾಡುವ  ವ್ಯವಹಾರದಿಂದ ಅಂತರ್ಜಲ ಇನ್ನಷ್ಟು ಬರಿದಾಗಿ ಸ್ಥಳೀಯರಿಗೆ ಮತ್ತಷ್ಟು ತೊಂದರೆಯಾಗಿದೆ. ಕೆಲವು ರೈತರೂ ನೀರಿನ ವ್ಯಾಪಾರಕ್ಕೆ ಇಳಿದಿರುವುದು ದುರಂತದ ಸಂಗತಿಯಾಗಿದೆ. ಹಳ್ಳಿಗಳಲ್ಲಿ ಕುಡಿಯುವ ನೀರಿನ ತೀವ್ರ ಅಭಾವವಿದೆ. ಪಂಚಾಯತ್ಗಳು, ನಗರಾಡಳಿತಗಳು ಜನರಿಗೆ ಕುಡಿಯುವ ನೀರು ಒದಗಿಸಲು ಹರಸಾಹಸಪಡುತ್ತಿವೆ.
 
2003 ರ ತಿಪ್ಪಗೊಂಡನಹಳ್ಳಿ ಜಲಾಶಯದ ಜಲಾನಯನ ಸಂರಕ್ಷಣೆಯ ಅಧಿಸೂಚನೆ
ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ನೀರಿನ ಒಳಹರಿವು ಕಡಿಮೆಯಾಗಿರುವುದಕ್ಕೆ ಕಾರಣವನ್ನು ತಿಳಿಯಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವಿನಂತಿಯಂತೆ ಇಸ್ರೋ ಸಂಸ್ಥೆಯು ಇನ್ನೊಂದು ಖಾಸಗಿ ಸಂಸ್ಥೆಯ ಜೊತೆಗೂಡಿ ಒಂದು ಅಧ್ಯಯನವನ್ನು ಮಾಡಿತು. ಇಸ್ರೋ ಪ್ರಕಾರ ಬೆಳೆಯುತ್ತಿರುವ ಬೆಂಗಳೂರಿನ ನಗರೀಕರಣದ ಪ್ರಭಾವದಿಂದ ಮತ್ತು ವಾಣಿಜ್ಯ ಕೃಷಿಯಿಂದಾಗಿ ಆದ ಭೂ ಬಳಕೆಯಲ್ಲಿನ ಬದಲಾವಣೆಯಿಂದಲೇ ಸಮಸ್ಯೆ ಉದ್ಭವವಾಗಿದೆ. ಇಸ್ರೋ ವರದಿಯ ಆಧಾರದ ಮೇಲೆ ಕರ್ನಾಟಕ ರಾಜ್ಯ ಸರಕಾರವು ತಿಪ್ಪಗೊಂಡನಹಳ್ಳಿ ಜಲಾಶಯದ ಜಲಾನಯನದಲ್ಲಿ ಭೂಬಳಕೆಯನ್ನು ನಿಯಂತ್ರಿಸುವ ಮತ್ತು ಮಾಲಿನ್ಯವನ್ನು ತಡೆಗಟ್ಟುವ ಉದ್ದೇಶದಿಂದ ಅಧಿಸೂಚನೆಯೊಂದನ್ನು ಹೊರಡಿಸಿತ್ತು. (ಇ.ಎನ್.ವಿ.2000 ದಿನಾಂಕ 18.11.2003) ಈ ಅಧಿಸೂಚನೆಯು ಅರ್ಕಾವತಿ ನದಿ ಮೂಲವಾದ ನಂದಿ ಬೆಟ್ಟ, ಶಿವಂಗೆ ಮತ್ತು ತಿಪ್ಪಗೊಂಡನಹಳ್ಳಿ ಜಲಾಶಯ ನಡುವಿನ 1450 ಚದರ ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಕೆಲವು ಚಟುವಟಿಕೆಗಳನ್ನು ನಿರ್ಬಂಧ ಮಾಡಿದೆ. ಅಧಿಸೂಚನೆಯಂತೆ ಅರ್ಕಾವತಿ ಜಲಾನಯನ ಪ್ರದೇಶದಲ್ಲಿ ಎಲ್ಲೆಂದರಲ್ಲಿ ಕಸ ಸುರಿಯುವಂತಿಲ್ಲ. ಕೈಗಾರಿಕೆಗಳ ತ್ಯಾಜ್ಯವನ್ನು ಶುದ್ಧೀಕರಿಸದೆ ಹೊರ ಬಿಡುವಂತಿಲ್ಲ. ಹೊಸ ಗಣಿಗಾರಿಕೆ, ಕಲ್ಲುಪುಡಿ ಮಾಡುವ ಜಲ್ಲಿ ಕ್ರಷರ್ಗಳಿಗೆ ಅನುಮತಿ ನೀಡುವಂತಿಲ್ಲ. ಅಂತರ್ಜಲ ಬಳಕೆಯನ್ನು ನಿಯಂತ್ರಿಸಬೇಕು. ಮಳೆ ನೀರು ಕೊಯ್ಲು ಮತ್ತು ಸಾವಯವ ಕೃಷಿಯನ್ನು ಪ್ರೋತ್ಸಾಹಿಸಬೇಕು. ಈ ಅಧಿಸೂಚನೆಯಲ್ಲಿ ತಿಪ್ಪಗೊಂಡನಹಳ್ಳಿ ಜಲಾಶಯದ ಜಲಾನಯನ ಪ್ರದೇಶದಲ್ಲಿ ನದಿ ಪಾತ್ರದ ಅಕ್ಕ ಪಕ್ಕದಲ್ಲಿ ಮಾಲಿನ್ಯಕಾರಕ ಕಾರ್ಖಾನೆಗಳನ್ನು ಸ್ಥಾಪಿಸುವುದನ್ನು, ಬಹುಮಹಡಿ ಕಟ್ಟಡಗಳನ್ನು ಕಟ್ಟುವುದನ್ನು ನಿಯಂತ್ರಣ ಮಾಡಬೇಕೆಂದು ಕೂಡಾ ಸೂಚಿಸಲಾಗಿದೆ.

ಆದರೆ ಈ ಅಧಿಸೂಚನೆಯನ್ನು ಅನುಷ್ಟಾನಕ್ಕೆ ತರಬೇಕಾದ ಸರಕಾರದ ಅಂಗಸಂಸ್ಥೆಗಳು ಈ ನಿಟ್ಟಿನಲ್ಲಿ ಕೆಲಸ ಮಾಡಲೇ ಇಲ್ಲ. ಸಂಘಟನೆಗಳ ಹೋರಾಟದಿಂದ ಕೆಲವು ಕಡೆಗಳಲ್ಲಿ ಮಾಲಿನ್ಯ ನಿಯಂತ್ರಣ ಮಾಡಲು, ಗಣಿಗಾರಿಕೆ ತಡೆಯಲು, ಮರಳು ಗಣಿಗಾರಿಕೆ ತಡೆಲು ಸಾಧ್ಯವಾಯಿತು. ಈ ಅಧಿಸೂಚನೆಯ ಅನುಷ್ಠಾನ ಕುರಿತಂತೆ ಅರ್ಕಾವತಿ ಮತ್ತು ಕುಮುದ್ವತಿ ನದಿಗಳ ಇಕ್ಕೆಲಗಳಲ್ಲಿ ಅಕ್ರಮವಾಗಿ ತಲೆ ಎತ್ತಿದ್ದ ಕೆಲವು ಕಾರ್ಖಾನೆಗಳು, ಕಟ್ಟಡಗಳ ಮಾಲೀಕರು ಮತ್ತು ಸರಕಾರದ ನಡುವಿನ ವ್ಯಾಜ್ಯವು ನ್ಯಾಯಾಲಯಕ್ಕೆ ಹೋಗಿದ್ದರಿಂದ ವ್ಯಾಜ್ಯವನ್ನು ಪರಿಹರಿಸುವ ಸಲುವಾಗಿ ಕರ್ನಾಟಕ ಸರಕಾರವು 2014ರ ಜುಲೈನಲ್ಲಿ ಅಧಿಸೂಚನೆಯನ್ನೇ ಹಿಂಪಡೆದು ಹೊಸ ಅಧಿಸೂಚನೆಯನ್ನು ಹೊರಡಿಸಿತು. ಆದರೆ ಕರ್ನಾಟಕ ಉಚ್ಛನ್ಯಾಯಾಲವು ತಾನೇ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಿಕೊಂಡು ಸರಕಾರವು ಅಧಿಸೂಚನೆಯನ್ನು ಹಿಂಪಡೆಯುವುದಕ್ಕೆ ತಡೆಯಾಜ್ಞೆ ನೀಡಿತ್ತು. ಈ ಮೊಕದ್ದಮೆಯಲ್ಲಿ ಅಮಿಕ್ಕಸ್ ಕ್ಯೂರಿಯಾಗಿ ನೇಮಕವಾದ ಹಿರಿಯ ವಕೀಲ ಸಜ್ಜನ್ ಪೂವಯ್ಯ ಅವರ ಶಿಫಾರಸು ಮತ್ತು ನ್ಯಾಯಾಲಯದ ಆದೇಶದ ಮೇರೆಗೆ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನ ಸಂಸ್ಥೆಯು (EMPRI) ಅಧಿಸೂಚನೆಯ ಅನುಷ್ಠಾನದ ಬಗ್ಗೆ ಅಧ್ಯಯನ ಮಾಡಿ ವರದಿ ನೀಡಿದೆ. ವರದಿ ಮತ್ತು ಅದರ ಶಿಫಾರಸುಗಳ ಬಗ್ಗೆ ಸರಕಾರದ ನಿಲುವನ್ನು ತಿಳಿಸಲು ನ್ಯಾಯಾಲಯವು ತಿಳಿಸಿದ್ದರೂ ಸರಕಾರವು ಮೌನವಾಗಿದೆ. ಆದರೆ ನ್ಯಾಯಾಲಯವೂ ಸುಮ್ಮನಾಗಿರುವುದು ದುರಂತದ ಸಂಗತಿ.
 
ಅರ್ಕಾವತಿ ನದಿ ಯಾಕೆ ಬತ್ತಿ ಹೋಯಿತು?
ತಿಪ್ಪಗೊಂಡನಹಳ್ಳಿಗೆ ನೀರೇಕೆ ಹರಿದು ಬರುತ್ತಿಲ್ಲ ಎಂದು ಅನೇಕ ಸಂಶೋಧನೆಗಳಾಗಿವೆ. ಇಸ್ರೋ - ಇನ್ರಿಮ್ಟ್ ಸಂಸ್ಥೆಗಳು ಮಾಡಿರುವ ಅಧ್ಯಯನ ವರದಿಯ ಪ್ರಕಾರ ತಿಪ್ಪಗೊಂಡನಹಳ್ಳಿ ಜಲಾಶಯದ ಜಲಾನಯನದ 85% ಭಾಗವು 3% ಕ್ಕಿಂತಲೂ ಕಡಿಮೆ ಇಳಿಜಾರನ್ನು ಹೊಂದಿರುವ ಸಮತಟ್ಟಾದ ಪ್ರದೇಶವಾಗಿದ್ದು ಇಲ್ಲಿ ಮಳೆ ನೀರು ಹರಿದು ಮುಂದೋಡುವುದಕ್ಕೆ ಪೂರಕವಾಗಿಲ್ಲ. ಜಲಾನಯನವು ಕೃಷಿ ಪ್ರಧಾನವಾಗಿದ್ದು ಭೂ ಬಳಕೆಯಲ್ಲಿ ತೀವ್ರ ಬದಲಾವಣೆಗಳಾಗಿವೆ, ರಸ್ತೆ-ಕಟ್ಟಡಗಳನ್ನು ಹೆಚ್ಚು ಕಟ್ಟಲಾಗಿದೆ. ಕೃಷಿ ಪ್ರದೇಶ ಕಡಿಮೆಯಾಗಿದೆ. ವಾಣಿಜ್ಯ ಬೆಳೆ ಅಧಿಕವಾಗಿದೆ. ಅರಣ್ಯ ಹಾಗೂ ನಿರುಪಯುಕ್ತ ಜಮೀನು ಕಡಿಮೆಯಾಗಿ ವಸತಿ ಪ್ರದೇಶ ಹೆಚ್ಚಾಗಿದೆ. ಮಳೆಯ ಪ್ರಮಾಣ ಮತ್ತು ಮಳೆ ಬೀಳುವ ಕ್ರಮದಲ್ಲಿ ಏರು ಪೇರಾಗಿದೆ. ಕೊಳವೆ ಬಾವಿಗಳಿಂದ ಹೆಚ್ಚು ನೀರು ಬಳಸಿರುವುದರಿಂದ ಬಂದ ಮಳೆ ನೀರು ಭೂಮಿಗೆ ಇಂಗುತ್ತದೆ, ಮುಂದೆ ಹರಿಯುವುದಿಲ್ಲ. ಮೇಲಿನ ಕೆರೆಗಳು ತುಂಬದೇ ಇರುವುದರಿಂದ ತಿಪ್ಪಗೊಂಡನಹಳ್ಲಿ ಜಲಾಶಯಕ್ಕೆ ನೀರು ಹರಿದು ಬರುತ್ತಿಲ್ಲ.

2010ರಲ್ಲಿ ಝೂಮ್ ಟೆಕ್ ನವರು ಮಾಡಿರುವ ಅಧ್ಯಯನ ವರದಿಯ ಪ್ರಮುಖ ಅಂಶಗಳು ಹೀಗಿವೆ:
  • ಮಳೆಯಿಂದ ಬರುವ ನೀರಲ್ಲಿ ಸರಾಸರಿ 17% ಹರಿದು ಹೋಗುತ್ತಿದ್ದು ಇದು ಕೆಲವು ವರ್ಷಗಳಿಂದ 12.5% ಗೆ ಕಡಿಮಯಾಗಿದೆ.
  • ಇಳಿಜಾರು ಕಡಿಮೆ ಇರುವುದರಿಂದ ಮಣ್ಣಿನ ಗುಣಲಕ್ಷಣಗಳ ಕಾರಣಗಳಿಗೆ ಹೆಚ್ಚಿನ ನೀರು ಭೂಮಿಗೆ ಇಂಗುತ್ತದೆ
  • ವಾಣಿಜ್ಯ ಬೆಳೆಗಳು ಹೆಚ್ಚಾಗಿದ್ದು ಕೃಷಿಗೆ ನೀರಿನ ಬಳಕೆ ಹೆಚ್ಚಾಗಿದೆ.
  • ಬೇರೆ ಬೇರೆ ಉದ್ದೇಶಗಳಿಗೆ ಅಂತರ್ಜಲವನ್ನು ಅತಿ ಬಳಕೆ ಮಾಡುತ್ತಿರುವದರಿಂದ ಹೆಚ್ಚಿನ ನೀರು ಭೂಮಿಗೆ ಹೀರಿಕೊಳ್ಳುತ್ತದೆ.
  • ಮಳೆಯಿಂದ ಅಥವಾ ನೀರಾವರಿಯಿಂದಾಗುವ ಮಣ್ಣಿನ ತೇವಾಂಶವೆಲ್ಲ ಬೆಳೆಗಿಡ ಮರಗಳ ಬಾಷ್ಪೀಕರಣದ ಅಗತ್ಯಕ್ಕಷ್ಟೇ ಸಾಕಾಗುತ್ತಿದ್ದು ನೀರು ಆವಿಯಾಗುತ್ತಿರುತ್ತದೆ.
2013 - 16 ರ ನಡುವೆ ಅಶೋಕ ಪರಿಸರ ಮತ್ತು ಪರಿಸರ ವಿಜ್ಞಾನ ಸಂಶೋಧನ ಸಂಸ್ಥೆಯ ಅಧ್ಯಯನ ವರದಿಯಂತೆ ಈ ಕೆಳಗಿನವು ನದಿ ಬತ್ತಲು ಕಾರಣಗಳು:
  • ಹೆಚ್ಚಿನವರು ತಿಳಿದುಕೊಂಡಿರುವಂತೆ ಹವಾಮಾನ ಬದಲಾವಣೆಯಾಗಲೀ ಅಥವಾ ನಗರೀಕರಣವಾಗಲೀ ಅರ್ಕಾವತಿ ಬತ್ತುವುದಕ್ಕೆ ಮುಖ್ಯ ಕಾರಣವಲ್ಲ. ನೀರು ಬತ್ತಿ ಹೋಗುವಷ್ಟು ಮಳೆಯ ಕೊರತೆಯೂ ಆಗಿಲ್ಲ. ಒತ್ತುವರಿಯು ಕೂಡ ಬಹಳ ಮುಖ್ಯವಾದ ಕಾರಣವಲ್ಲ. ಚೆಕ್ ಡ್ಯಾಮ್‍ಗಳಿಂದಾಗಿ ನೀರಿನ ಹರಿವು ಕಡಿಮೆಯಾಗಿದ್ದರೂ ಅವುಗಳಿಂದ ಭೂಮಿಗೆ ಇಂಗುವ ನೀರನ್ನು ರೈತರು ಬಳಸುತ್ತಿದ್ದಾರೆ. ಚೆಕ್ ಡ್ಯಾಮ್‍ಗಳಲ್ಲಿ ನೀರು ನಿಲ್ಲುವುದರಿಂದ ನೀರು ಸ್ವಲ್ಪ ಮಟ್ಟಿಗೆ ಆವಿಯಾಗುತ್ತಲೂ ಇದೆ. 
  • ತಿಪ್ಪಗೊಂಡನಹಳ್ಳಿ ಜಲಾಶಯದ 20% ಜಲಾನಯನದಲ್ಲಿ ನೀಲಗಿರಿ ಇರುವುದರಿಂದ ಮತ್ತು ನೀರಾವರಿ ಬೆಳೆಗಳಿಗಾಗಿ ಅಂತರ್ಜಲ ಬಳಸಿರುವುದರಿಂದ ನೀರು ಖಾಲಿಯಾಗಿದೆ.
  • ಕೊಳವೆ ಬಾವಿಗಳಿಂದ ನೀರು ಎತ್ತಿರುವುದರಿಂದ ಜಲ ಮಟ್ಟ ಕೆಳಗೆ ಹೋಗಿದೆ. ಜಲ ಮಟ್ಟ ಕೆಳಗೆ ಹೋಗಿರುವುದರಿಂದ ಒರೆತದ ನೀರು ಉಂಟಾಗುತ್ತಿಲ್ಲ. ಮಳೆ ಹೋದ ಬಳಿಕ ಕೆರೆ ಕಾಲುವೆಗಳಿಗೆ ಒರೆತದ ನೀರು ಬರುತ್ತಿಲ್ಲ. ಮಳೆಯಾದಾಗ ಇರುವ ತೇವಾಂಶವನ್ನು ನೀಲಗಿರಿ ಮರಗಳು ಮತ್ತು ಇತರ ಬೆಳೆ-ಗಿಡ ಮರಗಳು ಹೀರಿಕೊಳ್ಳುತ್ತವೆ.
 
ನದಿ ಪುನಶ್ಚೇತನವೆಂದರೆ
ನದಿ ಪುನಶ್ಚೇತನವೆಂದರೆ ಜಲಾನಯನದಲ್ಲಿ ನೀರು ಉಕ್ಕಿಸಿ ತಿಪ್ಪಗೊಂಡನಹಳ್ಳಿಗೆ ತುಂಬಿಸುವುದಲ್ಲ. ಅಥವಾ ಕೆರೆ ಕಾಲುವೆಗಳನ್ನು ದುರಸ್ಥಿ ಮಾಡುವುದಷ್ಟೇ ಅಲ್ಲ. ಇಲ್ಲಿ ನದಿ ಪುನಶ್ಚೇತನದ ಗುರಿಯನ್ನು ಮತ್ತು ದಾರಿಯನ್ನು ಸಮಗ್ರವಾಗಿ ಗ್ರಹಿಸಬೇಕಾಗುತ್ತದೆ. ಇತ್ತೀಚಿನ ತಿಳುವಳಿಕೆ ಪ್ರಕಾರ ಬಯಲು ಸೀಮೆಯ ಈ ನದಿಯ ಪುನಶ್ಚೇತನವೆಂದರೆ ಜಲಾನಯನದ ನಂದಿಬೆಟ್ಟ-ಶಿವಗಂಗೆಯಿಂದ ಸಂಗಮದವರೆಗೂ ಇರುವ ಬಾವಿ, ಕೆರೆ, ಕಟ್ಟೆ, ಕಾಲುವೆ, ನದಿಗಳಲ್ಲಿ ನೀರಿರುವಂತೆ, ಎಲ್ಲಾ ಊರುಗಳಲ್ಲೂ ಕುಡಿಯಲು, ಕೃಷಿಗೆ, ಕೈಗಾರಿಕೆಗೆ ಬೇಕಾದ ಕನಿಷ್ಟ ನೀರಿನ ಲಭ್ಯತೆ ಇರುವಂತೆ ನೋಡಿಕೊಳ್ಳುವುದಾಗಿದೆ. ನದಿಯ ಪುನಶ್ಚೇತನವೆಂದರೆ ಇಲ್ಲಿ ಇರುವ ಅಂತರ್ಜಲ, ಮಳೆಯಾಗಿ ಬೀಳುವ ನೀರು ಮತ್ತು ಇತರ ಮೂಲಗಳಿಂದ ಜಲಾನಯನದ ಒಳಗೆ ಹರಿದು ಬರುವ ನೀರು (ಬೇರೆ ನದಿಗಳಿಂದ ಕುಡಿಯುವ ಉದ್ದೇಶಕ್ಕಾಗಿ ನೀರನ್ನು ತರುವ ಯೋಜನೆಗಳಿಂದ ಕೆಲವು ಕೆರೆಗಳಿಗೆ ನೀರು ಬಂದರೆ, ಹೊಸ ಬಡಾವಣೆಗಳಿಗೆ ಕಾವೇರಿ ನೀರು ಸರಬರಾಜು ಆದರೆ) ಒಟ್ಟಾರೆಯಾಗಿ ಲಭ್ಯವಾಗುವ ಅಷ್ಟೂ ನೀರನ್ನು ಮುಂದಿನ ಅನೇಕ ದಶಕಗಳ ಕಾಲ ಮತ್ತೆ ಬರ ಕಾಡದಂತೆ, ಕೊಳಚೆಯಾಗದಂತೆ ವ್ಯವಸ್ಥಿತವಾಗಿ-ಸೂಕ್ತವಾಗಿ, ಸುಸ್ಥಿರವಾಗಿ ಬಳಸುವುದು, ನಿರ್ವಹಣೆ ಮಾಡುವುದೇ ಆಗಿದೆ. 
 
ಅರ್ಕಾವತಿ ನದಿ ಪುನಶ್ಚೇತನದ ಪ್ರಯತ್ನಗಳು:
ಅರ್ಕಾವತಿ ನದಿಯ ಪುನಶ್ಚೇತನಕ್ಕೆ ಹಲವಾರು ರೀತಿಯಲ್ಲಿ ಪ್ರಯತ್ನ ನಡೆದಿದೆ. ಕೆರೆಗಳನ್ನು ಪುನಶ್ಚೇತನಗೊಳಿಸುವ, ಚೆಕ್ ಡ್ಯಾಮ್‍ಗಳನ್ನು ಕಟ್ಟುವ, ಜಲಾನಯನ ಅಭಿವೃದ್ಧಿ ಮಾಡುವ, ಬಾವಿ ಕಲ್ಯಾಣಿಗಳನ್ನು ದುರಸ್ಥಿಗೊಳಿಸುವ, ಮಾಲಿನ್ಯ ತಡೆಯುವ, ಮಳೆ ಕೊಯ್ಲು ಮಾಡುವ, ಸ್ಥಳೀಯ ಆಡಳಿತಗಳು ಜಲ ಸ್ನೇಹಿಯಾಗುವಂತೆ ಒತ್ತಡ ತರುವ ಪ್ರಯತ್ನಗಳನ್ನು ಅರ್ಕಾವತಿ ಜಲಚೇತನ ಸಮಿತಿ, ದೊಡ್ಡಬಳ್ಳಾಪುರ ಅಭಿವೃದ್ಧಿ ಸಮಿತಿ, ಆಕಾಶ್, ಜನ ಜಾಗೃತಿ ಸಮಿತಿ, ನವಚೇತನ ಟ್ರಸ್ಟ್, ನೆಮ್ಮದಿ ಟ್ರಸ್ಟ್, ಚನ್ನರಾಯಸ್ವಾಮಿ ಜಲ ಸಂಪನ್ಮೂಲ ಅಭಿವೃದ್ಧಿ ಸಮಿತಿ, ನಾಗದಳ, ಕುಮದ್ವತಿ ನೆಲ ಜಲ ಸಂರಕ್ಷಣ ಸಮಿತಿ, ಕುಮುದ್ವತಿ ನದಿ ಪುನಶ್ಚೇತನ ಸಮಿತಿ, ಅರ್ಕಾವತಿ ಕುಮುದ್ವತಿ ನದಿ ಪುನಶ್ಚೇತನ ಸಮಿತಿ, ಆರ್ಟ್ ಆಫ್ ಲಿವಿಂಗ್ ಮುಂತಾದ ಸಂಘ ಸಂಸ್ಥೆಗಳು ಮತ್ತು ಸ್ವಯಂಸೇವಕರ ಗುಂಪುಗಳು ಅವರವರ ಶಕ್ತಿ-ಮಿತಿಗಳಿಗನುಸಾರವಾಗಿ ಬೇರೆ ಬೇರೆ ಕಾಲ ಘಟ್ಟದಲ್ಲಿ ಸಕ್ರಿಯರಾಗಿದ್ದು ಮಾಡಿದ್ದಾರೆ, ಮಾಡುತ್ತಿದ್ದಾರೆ. ಕೆಲವು ಸಂಘಟನೆಗಳು ಈಗಲೂ ಸಕ್ರಿಯವಾಗಿವೆ. 1998-99ರಲ್ಲೇ ಎನ್ವಿರಾನ್ಮೆಂಟ್ ಸಪೋರ್ಟ್ ಗ್ರೂಪ್, ಸನ್ಮತಿ ಮತ್ತು ಮಾಜಿ ಸಚಿವ ಎ.ಲಕ್ಷ್ಮೀಸಾಗರ್ ಅವರನ್ನೂ ಒಳಗೊಂಡು ಸಾರ್ವಜನಿಕರು ತಿಪ್ಪಗೊಂಡನಹಳ್ಳಿ ಜಲಾಶಯದ ಸುತ್ತ ತಲೆ ಎತ್ತಲಿದ್ದ ವಸತಿ ಸಮುಚ್ಛಯ ನಿರ್ಮಾಣವನ್ನು ತಡೆಯಲು ಯತ್ನ ನಡೆಸಿದ್ದು,  2000-2005ರ ಅವಧಿಯಲ್ಲಿ ದೊಡ್ಡಬಳ್ಳಾಪುರದ ಕೈಗಾರಿಕಾ ಮಾಲಿನ್ಯವನ್ನು ತಡೆಯಲು ಕರ್ನಾಟಕ ವಿಮೋಚನಾ ರಂಗ, ಕನ್ನಡ ಪರ ಸಂಘಟನೆಗಳು, ಸಂವಾದ, ಜನಧ್ವನಿ ಯುವ ವೇದಿಕೆ, ಜನಜಾಗೃತಿ ಸಮಿತಿಗಳ ನಾಯಕತ್ವದಲ್ಲಿ ಕೈಗಾರಿಕಾ ಮಾಲಿನ್ಯದ ವಿರುದ್ದ ಯಶಸ್ವಿ ಹೋರಾಟ ನಡೆಸಿದ್ದು, 2006ರಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಚನ್ನರಾಯಸ್ವಾಮಿ ಬೆಟ್ಟ ಪ್ರದೇಶದಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆಯನ್ನು ನಿಲ್ಲಿಸಿದ್ದು ಪ್ರಮುಖ ಘಟನೆಗಳು. 2006ರಲ್ಲಿ ಕೇಂದ್ರ ಸರಕಾರದ ನೆರವಿನ ಯೋಜನೆಯಲ್ಲಿ (NPRRR) ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೆರೆಗಳ ಹೂಳು ತೆಗೆಯುವ ಕಾರ್ಯ ನಡೆಯಿತು. ಇದರಲ್ಲಿ  ಅರ್ಕಾವತಿ ನದಿ ಜಲಾನಯನದ ಕೆರೆಗಳೂ ಸೇರಿದ್ದವು. ಆದರೆ ಕಾಮಗಾರಿ ಕಳಪೆಯಾಗಿ ನಡೆಯಿತು. 2010ರಲ್ಲಿ ಯಲಹಂಕ ಶಾಸಕ ಶ್ರೀ.ಎಸ್.ಆರ್.ವಿಶ್ವನಾಥ್ ಅವರ ನೇತೃತ್ವದಲ್ಲಿ ನಂದಿಬೆಟ್ಟದಿಂದ ತಿಪ್ಪಗೊಂಡನಹಳ್ಳಿಯವರೆಗೆ ಪಾದಯಾತ್ರೆ ನಡೆದುದರಿಂದ ಆಗಿನ ಸರಕಾರದ ಗಮನ ಸೆಳೆಯುವಂತಾಯಿತು.
 
ಕರ್ನಾಟಕ ಸರಕಾರದ ಅರ್ಕಾವತಿ ನದಿ ಪುನಶ್ಚೇತನ ಯೋಜನೆ
ಜನಸಂಘಟನೆಗಳ ನಿರಂತರ ಒತ್ತಾಯದಿಂದ ಹಾಗೂ ಬೆಂಗಳೂರು ನಗರಕ್ಕೆ ನೀರು ಸರಬರಾಜು ಮಾಡುವ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಹರಿವ ನೀರಿನ ಪ್ರಮಾಣ ಹೆಚ್ಚಾಗಬಹುದೆಂಬ ಆಶಯದೊಂದಿಗೆ ಕರ್ನಾಟಕ ಸರಕಾರವು 2011-12ರಲ್ಲಿ ಅರ್ಕಾವತಿ ನದಿ ಪುನಶ್ಚೇತನ ಕಾಮಗಾರಿಯನ್ನು ಕೈಗೆತ್ತಿಕೊಂಡಿತು. ಮೊದಲ ಹಂತದಲ್ಲಿ 22.43 ಕೋಟಿ ರೂಪಾಯಿಗಳ ಅಂದಾಜು ವೆಚ್ಚದಲ್ಲಿ ಫೀಡರ್ ಕಾಲುವೆಗಳ ದುರಸ್ಥಿ ಕಾಮಗಾರಿ ಕೈಗೆತ್ತಿಕೊಳ್ಳಲಾಯಿತು.
​
ಕಾವೇರಿ ನೀರಾವರಿ ನಿಗಮದ ಉಸ್ತುವಾರಿಯಲ್ಲಿ ನಡೆದ ಈ ಯೋಜನೆಯಲ್ಲಿ  ನಂದಿ ಬೆಟ್ಟ - ಶಿವಗಂಗೆ - ತಿಪ್ಪಗೊಂಡನಹಳ್ಳಿ ಜಲಾಶಯದ ನಡುವೆ ಕೆರೆಗಳಿಗೆ ನೀರು ತರುವ 395 ಕಾಲುವೆಗಳನ್ನು ದುರಸ್ಥಿಗೊಳಿಸಲು ಉದ್ದೇಶಿಸಲಾಯಿತು. ಆದರೆ ಈ ಯೋಜನೆ ಸಮರ್ಪಕವಾಗಿ ಅನುಷ್ಠಾನವಾಗಲಿಲ್ಲ. ಕಾಲುವೆ ದುರಸ್ಥಿಗೆ ಮುನ್ನ ಕಂದಾಯ ಇಲಾಖೆಯು ಸರ್ವೇ ಮಾಡಬೇಕಿತ್ತು. ಆದರೆ ಸರ್ವೇ ಕಾರ್ಯ ನಡೆಯದಿದ್ದುದರಿಂದ ಬಹಳ ಕಡೆ ಕಾಮಗಾರಿ ನಡೆಯಲಿಲ್ಲ. ಅರ್ಕಾವತಿ ಕುಮುದ್ವತಿ ನದಿ ಪುನಶ್ಚೇತನ ಸಮಿತಿಯು 31,000 ಕರ ಪತ್ರಗಳ ಮೂಲಕ ಈ ಯೋಜನೆಯ ಕುರಿತ ಮಾಹಿತಿಯನ್ನು ಹಳ್ಳಿ ಹಳ್ಳಿಗೂ ತಲಪಿಸಿ ಕಾಮಗಾರಿ ನಡೆಯುವಾಗ ಜನರು ಭಾಗವಹಿಸುವಂತೆ ನೋಡಿಕೊಂಡಿತು. ಸಮಿತಿಯು ಕಾಮಗಾರಿಯ ಕಳಪೆ ಗುಣ ಮಟ್ಟದ ಕುರಿತು ನಿಗಮದ ನಿರ್ದೇಶಕರು ಮತ್ತು ಅಧಿಕಾರಿಗಳ ಜೊತೆಗೆ ಸಭೆಯನ್ನೂ ನಡೆಸಿತು. ಈ ಸಭೆ ಮತ್ತು ಕಾಮಗಾರಿಯನ್ನು ಸಮರ್ಪಕವಾಗಿ ನಡೆಸುವಂತೆ ನಿಗಮದ ಅಧಿಕಾರಿಗಳ ಮೇಲೆ ಹಳ್ಳಿಗಳ ಗ್ರಾಮಸ್ಥರು ಒತ್ತಡ ತಂದಿದ್ದರಿಂದಾಗಿ ಕಾಮಗಾರಿ ಸ್ವಲ್ಪ ಮಟ್ಟಿಗೆ ಅನುಷ್ಠಾನವಾಗಿದೆ. 2014ರಲ್ಲಿ ಅಧಿಕಾರಿಗಳು ನೀಡಿದ ಪತ್ರಿಕಾ ಹೇಳಿಕೆಯಂತೆ 70% ಕಾಮಗಾರಿ ಮುಗಿದಿದೆ. ಇತ್ತೀಚಿಗೆ ದೊರೆತ ಮಾಹಿತಿಯಂತೆ ಕಾಮಗಾರಿ ಅಪೂರ್ಣವಾದರೂ 90% ದಷ್ಟು ಹಣ ಕಾಂಟ್ರಾಕ್ಟುದಾರರಿಗೆ ಪಾವತಿಯಾಗಿದೆ.
 
ಈಗ ಏನಾಗಬೇಕಾಗಿದೆ?
ಅರ್ಕಾವತಿ ನದಿ ಪುನಶ್ಚೇತನವು ವಾಣಿಜ್ಯ ಕೃಷಿ, ಕೈಗಾರಿಕೆ, ನಗರೀಕರಣದ ಸವಾಲುಗಳನ್ನು ಒಳಗೊಂಡಿದೆ ಹಾಗೂ ಸರಕಾರದ ಹಲವು ಇಲಾಖೆಗಳ ಕಾರ್ಯಚಟುವಟಿಕೆಗಳು ನದಿ-ನೀರಿನ ಮೇಲೆ ಪರಿಣಾಮಗಳನ್ನು ಉಂಟು ಮಾಡಬಲ್ಲದು. ಜಲಾನಯನದಲ್ಲಿ ಜಲಕಾಯಗಳಿಗೆ ಸಂಬಂಧಪಟ್ಟ ಕಾಮಗಾರಿಗಳ ಯೋಜನೆ ಹಾಗೂ ಅನುಷ್ಠಾನದಲ್ಲಿ ಇಲಾಖೆಗಳ ನಡುವೆ ಸಮನ್ವಯದ ಕೊರತೆ ಇದೆ. ಅದಕ್ಕಾಗಿ ನಾಗರಿಕ ಗುಂಪುಗಳ ಒತ್ತಾಯ ಹಾಗೂ ಎಂಪ್ರಿ ಸಂಸ್ಥೆಯ ಶಿಪಾರಸಿನಂತೆ ಜಲಾನಯನ ಮಟ್ಟದ ಸಂಸ್ಥೆಯೊಂದನ್ನು ರೂಪಿಸಬೇಕು. ನದಿಯ ಪುನಶ್ಚೇತನಕ್ಕೆ ಸಮಗ್ರ ಯೋಜನೆ ರೂಪಿಸಬೇಕು. ಜನರ ಭಾಗವಹಿಸುವಿಕೆಯೊಂದಿಗೆ ಅನುಷ್ಠಾನಕ್ಕೆ ತರಬೇಕು. 2003 ರ ಅಧಿಸೂಚನೆಯನ್ನು ಇನ್ನಷ್ಟು ನದಿಪರ ಹಾಗೂ ಜನಪರವಾಗಿ ರೂಪಿಸಿ, ಅದನ್ನು ನಗರ ಯೋಜನೆಗಳ ಜೊತೆಗೆ ಸಮನ್ವಯಗೊಳಿಸಿ ಮಾಲಿನ್ಯ ತಡೆದು, ಕಲ್ಲು-ಮರಳು ಗಣಿಗಾರಿಕೆಯನ್ನು ನಿಲ್ಲಿಸಿ, ಭೂ ಬಳಕೆಯನ್ನು ನಿಯಂತ್ರಣಗೊಳಿಸಬೇಕು. ಜಲಾನಯದಲ್ಲಿ ಕೃಷಿ ಪ್ರದೇಶವನ್ನು ಗುರುತಿಸಿ ಅದನ್ನು ಸಂಪೂರ್ಣ ಸಾವಯವ ಕೃಷಿಗೆ ಪರಿವರ್ತಿಸಬೇಕು. ಕಡಿಮೆ ನೀರು ಬೇಡುವ ಬೆಳೆಗಳನ್ನು ಬೆಳೆಯಲು, ಸೂಕ್ತ ನೀರಾವರಿ ತಂತ್ರಜ್ಞಾನ ಅಳವಡಿಸಲು, ಕೃಷಿ ಪೂರಕ ಚಟುವಟಿಕೆಗಳ ಮೂಲಕ ಆದಾಯ ಹೆಚ್ಚಿಸಿಕೊಳ್ಳುವಂತೆ ಮಾಡಲು ರೈತರಿಗೆ ಮಾಹಿತಿ, ತರಬೇತಿ ಮತ್ತು ನೆರವು ನೀಡಬೇಕು. ವರ್ಷಕ್ಕೆ ಎರಡು ಬೆಳೆ ಸಿರಿಧಾನ್ಯಗಳನ್ನು ಬೆಳೆಯಲು, ಅವುಗಳನ್ನು ಸಂಸ್ಕರಣೆ ಮಾಡಲು ಮತ್ತು ಅರಣ್ಯ ಕೃಷಿ ಮಾಡಲು ಪ್ರೋತ್ಸಾಹ ನೀಡಬೇಕು. ಅರಣ್ಯ ಮತ್ತು ಸಾರ್ವಜನಿಕ ಭೂಮಿಯನ್ನು ಸಂರಕ್ಷಿಸಿ ಇನ್ನಷ್ಟು ಅರಣ್ಯೀಕರಣಗೊಳಿಸಬೇಕು. ನೀಲಗಿರಿ, ಅಕೇಷಿಯಾ ಮತ್ತು ಕ್ಯಾಸುರಿನಾದಂತಹ ಮರಗಳನ್ನು ಅರಣ್ಯ ಮತ್ತು ಖಾಸಗಿ ಭೂಮಿಗಳೆರಡರ್ಲೂ ನಿಷೇಧಿಸಿ ಪರ್ಯಾಯ ಮರ-ಬೆಳೆಗಳಿಗೆ ಪರಿವರ್ತಿಸಬೇಕು. ಕೆರೆ ಕಾಲುವೆ ಕಲ್ಯಾಣಿ ಮುಂತಾದ ಎಲ್ಲಾ ಜಲಕಾಯಗಳ ಒತ್ತುವರಿ ಬಿಡಿಸಿ ದುರಸ್ಥಿಗೊಳಿಸಬೇಕು. ಪಂಚಾಯತ್ ಮತ್ತು ನಗರಾಡಳಿತಗಳ ಮೂಲಕ ಕಸ ನಿರ್ವಹಣೆ ಮತ್ತು ಕೊಳಚೆ ನೀರಿನ ಸೂಕ್ತ ನಿರ್ವಹಣೆ ಮಾಡಬೇಕು. ಕಟ್ಟಡಗಳು ಮತ್ತು ಜಮೀನುಗಳಲ್ಲಿ ಮಳೆ ಕೊಯ್ಲು ವ್ಯವಸ್ಥೆಯನ್ನು ಜನರ ಭಾಗವಹಿಸುವಿಕೆಯೊಂದಿಗೆ ಮಾಡಬೇಕು. ಜಲಾನಯನ ಮಟ್ಟ ಮತ್ತು ಸ್ಥಳೀಯ ಮಟ್ಟದಲ್ಲಿ ಜಲ ಆಯ ವ್ಯಯದ ಪರಿಕಲ್ಪನೆಯೊಂದಿಗೆ ನೀರಿನ ವ್ಯವಸ್ಥಿತ ಮತ್ತು ಸಮಗ್ರ ನಿರ್ವಹಣೆ ಮಾಡಬೇಕು. ನದಿ ಪುನಶ್ಚೇತನವನ್ನು ಒಂದು ಸರಕಾರಿ ಕಾರ್ಯಕ್ರಮ ಮಾಡದೆ ಜನರು ಪಾಲ್ಗೊಳ್ಳುವ ಆಂದೋಲವನ್ನಾಗಿ ರೂಪಿಸಬೇಕು. ಇದರಲ್ಲಿ ಅಸಾಧ್ಯವಾದುದು ಯಾವುದೂ ಇಲ್ಲ. ಇಲ್ಲಿ ಪ್ರಸ್ತಾಪಿಸಿರುವ ಅನೇಕ ಅಂಶಗಳಿಗೆ ಸಂಬಂಧಪಟ್ಟಂತೆ ರಾಜ್ಯ ಸರಕಾರದ ಅನೇಕ ಯೋಜನೆಗಳಿವೆ, ಸಾಕಷ್ಟು ತಂತ್ರಜ್ಞಾನ ಲಭ್ಯವಿದೆ. ನದಿ ಜಲಾನಯನಕ್ಕಾಗಿ ಒಂದು ಸಂಸ್ಥೆಯನ್ನು ರೂಪಿಸುವ ಮಾದರಿ ಕೇರಳದಲ್ಲಿ ಯಶಸ್ವಿಯಾಗಿದೆ. ನದಿ ಪುನಶ್ಚೇತನವನ್ನು ಆಂದೋಲನವನ್ನಾಗಿಸಲು ಬೇಕಾದಷ್ಟು ಸಕ್ರಿಯ ನಾಗರಿಕ ಗುಂಪುಗಳಿವೆ. ಇನ್ನೇಕೆ ತಡ. ನದಿ ಪುನಶ್ಚೇತನಕ್ಕೆ ಇನ್ನಷ್ಟು ಮುಂದಾಗೋಣ.
 
ಜನಾರ್ದನ ಕೆಸರಗದ್ದೆ
ಸಮಾಜಕಾರ್ಯಕರ್ತರು ಮತ್ತು ಹೋರಾಟಗಾರರು, ಅರ್ಕಾವತಿ ನದಿ ಪುನಶ್ಚೇತನ ಸಮಿತಿ
0 Comments



Leave a Reply.


    Categories

    All
    ಇತರೆ
    ಎನ್‍ಜಿಓ
    ಪರಿಸರ
    ವ್ಯಕ್ತಿಚಿತ್ರಗಳು
    ಸಂಪುಟ 1
    ಸಂಪುಟ 2
    ಸಂಪುಟ 3
    ಸಂಪುಟ 4
    ಸಂಪುಟ 5
    ಸಂಪುಟ 6
    ಸಂಪುಟ 7
    ಸಂಪುಟ 8
    ಸಂಪುಟ 9
    ಸಮಾಜಕಾರ್ಯ
    ಸಮುದಾಯ ಸಂಘಟನೆ


    Picture

    Social Work Learning Academy

    Join WhatsApp Channel

    Niruta Publications

    Social Work Foot Prints

    Leaders Talk

    Ramesha Niratanka

    Picture
    WhatsApp

    Picture

    MHR LEARNING ACADEMY

    Get it on Google Play store
    Download App
    Online Courses

    Picture
    50,000 HR PROFESSIONALS ARE CONNECTED THROUGH OUR NIRATHANKA HR GROUPS.
    YOU CAN ALSO JOIN AND PARTICIPATE IN OUR GROUP DISCUSSIONS.
    Join HR Online Groups


    RSS Feed

Niruta Publications Books List
File Size: 672 kb
File Type: pdf
Download File

Social Work Books
File Size: 116 kb
File Type: pdf
Download File

HR Books
File Size: 87 kb
File Type: pdf
Download File

General Books
File Size: 195 kb
File Type: pdf
Download File



SITE MAP


Site

  • HOME
  • ABOUT US
  • BLOG
  • COLLABORATE WITH NIRUTA PUBLICATIONS
  • HR BLOG
  • PUBLICATION WITH US
  • TRANSLATION & TYPING
  • VIDEOS
  • HR & EMPLOYMENT LAW CLASSES - EVERY FORTNIGHT

POSH

  • OUR ASSOCIATES
  • OUR CLIENTS
  • POSH
  • POSH BLOG​
  • WANT TO BECOME AN EXTERNAL MEMBER FOR AN IC?

NIRATHANKA

  • ​CSR
  • TREE PLANTATION PROJECT

OUR OTHER WEBSITES

  • WWW.HRKANCON.COM
  • WWW.MHRSPL.COM
  • WWW.NIRATANKA.ORG​

Subscribe


Picture
More Details

Copyright Niruta Publications 2021,    Website Designing & Developed by: www.mhrspl.com