ಮಾನವ ಸಂಪತ್ತಿನ ಗುಣಮಟ್ಟವನ್ನು ಹೆಚ್ಚಿಸಲು ಇರುವ ಮಾರ್ಗಗಳಲ್ಲಿ ಶಿಕ್ಷಣ ಅತೀ ಮುಖ್ಯವಾದುದು. ಶಿಕ್ಷಣವೇ ಶಕ್ತಿ ಎಂದು ಹೇಳುವಂತೆ ಶಿಕ್ಷಣ ಮಾನವನ ನಿಪುಣತೆ ಮತ್ತು ಸಾಮರ್ಥ್ಯವನ್ನ ಹೆಚ್ಚಿಸುವಲ್ಲಿ ಮಹತ್ವಪೂರ್ಣ ಸ್ಥಾನ ಪಡೆದಿದೆ. ಶೈಕ್ಷಣಿಕ ಪ್ರಗತಿ ಸಾಧಿಸಿರುವ ಯಾವುದೇ ದೇಶವಾದರೂ ಅತಿ ಸುಲಭವಾಗಿ ಮುಂದುವರಿಯುತ್ತದೆ. ಇಂದು ಜಗತ್ತಿನಲ್ಲಿ ನಾವು ನೋಡುತ್ತಿರುವ ಅನೇಕ ಹಿಂದುಳಿದ ರಾಷ್ಟ್ರಗಳು ಶಿಕ್ಷಣದಲ್ಲಿ ಹಿಂದುಳಿದವುಗಳಾಗಿವೆ. ಹಾಗಾಗಿ ಶಿಕ್ಷಣದ ರಕ್ಷಣೆಯಷ್ಟೇ ಮುಖ್ಯ ಎಂದು ಖ್ಯಾತ ಶಿಕ್ಷಣ ತಜ್ಞ ಡಾ|| ಹೆಚ್.ನರಸಿಂಹಯ್ಯರವರು ಹೇಳುತ್ತಿದ್ದರು. ಶಿಕ್ಷಣವು ಅಭಿವೃದ್ಧಿಯ ಮೂಲ ಮಂತ್ರ ಹಾಗೂ ಸಾಮಾಜಿಕ ಪರಿವರ್ತನೆಯ ಮೂಲ ಸಾಧನ. ಶಿಕ್ಷಣವನ್ನ ಅಲಕ್ಷಿಸಿ ಯಾವುದೇ ದೇಶ ಮುಂದುವರಿಯುವುದು ಸಾಧ್ಯವಿಲ್ಲ. ಶಿಕ್ಷಣವೆಂದರೆ ಪ್ರಾಣಿ ರೂಪದಲ್ಲಿರುವ ಮಾನವನನ್ನು ಮಾನವತ್ವದೆಡೆಗೆ ಒಯ್ಯುವ ಸಾಧನವಾಗಿದೆ. ಒಟ್ಟಾರೆಯಾಗಿ ಇಡೀ ಭಾರತವನ್ನು ಮತ್ತು ನಿರ್ದಿಷ್ಟವಾಗಿ ಗ್ರಾಮೀಣ ಭಾರತವನ್ನು ಕಾಡುತ್ತಿರುವ ಸಮಸ್ಯೆಗಳಲ್ಲಿ ಅನಕ್ಷರತೆಯು ಕೂಡ ಒಂದಾಗಿದೆ. ಭಾರತದ ದುರ್ಬಲ ವರ್ಗಗಳು ಮತ್ತು ಮಹಿಳೆಯರನ್ನ ಬೆನ್ನಟ್ಟಿರುವ ಸಮಸ್ಯೆಗಳು ಅವರಲ್ಲಿರುವ ವ್ಯಾಪಕ ಅನಕ್ಷರತೆಯಿಂದಾಗಿಯೇ ಉಲ್ಬಣಗೊಂಡಿದೆ. ಸಹಸ್ರಾರು ವರ್ಷಗಳಿಂದ ಧರ್ಮ ಮತ್ತು ಶಿಕ್ಷಣಗಳ ನಡುವೆ ಉಳಿದು ಬಂದಿರುವ ಪುರಾತನವಾದ ಸಂಬಂಧವು ವ್ಯಾಪಕ ಅನಕ್ಷರತೆಗೆ ಏಕಮೇವ ಕಾರಣವಾಗಿದೆ ಎಂಬ ಅಂಶವನ್ನು ಅಲ್ಲಗಳಿಯುವಂತಿಲ್ಲ. ಲೋಕ ಶಿಕ್ಷಣ ಭಂಡಾರಕ್ಕೆ ಭಾರತವು ನೀಡಿರುವ ಕೊಡುಗೆಯು ಜಗತ್ತಿನಲ್ಲಿನ ಯಾವುದೇ ರಾಷ್ಟ್ರದ ಕೊಡುಗೆಗಿಂತ ಕಡಿಮೆ ಇಲ್ಲ. ಭಾರತೀಯ ಮಹಾನ್ ವಿದ್ವಾಂಸರುಗಳು ಧಾರ್ಮಿಕ-ರಾಜಕೀಯ ಸಿದ್ದಾಂತಗಳಿಗೆ ವೇದ, ಉಪನಿಷತ್ತು, ಗೀತಾಗಳಿಗೆ ದಾರ್ಶನಿಕ ಕೊಡುಗೆ ನೀಡಿದ್ದಾರೆ. ಮನು ಧರ್ಮಶಾಸ್ತ್ರ ಮತ್ತು ಶುಕ್ರನೀತಿಸಾರಗಳು ನ್ಯಾಯಶಾಸ್ತ್ರ ವಿಜ್ಞಾನಕ್ಕೆ ನೀಡಿರುವ ಕೊಡುಗೆಗಳಾಗಿವೆ. ಕೌಟಿಲ್ಯನ ಅರ್ಥಶಾಸ್ತ್ರವು ರಾಜಕೀಯ, ಆರ್ಥಿಕ ಸಿದ್ದಾಂತಗಳಿಗೆ ನೀಡಿರುವ ಮೂಲ ಸ್ವರೂಪದ ಕೊಡುಗೆಯಾಗಿದೆ. ಇದೇ ರೀತಿ ಅಬ್ದುಲ್ಫಜಲ್ನ ಐನ್-ಇ-ಅಕ್ಬರಿಯ ರಾಜ್ಯಾಡಳಿತ ಸಾಹಿತ್ಯಕ್ಕೆ ನೀಡಿರುವ ಪ್ರಧಾನ ಕೊಡುಗೆ ಎಂದು ಪರಿಗಣಿತವಾಗಿದೆ. ಭಾರತೀಯ ವಿದ್ವಾಂಸರು ಲೋಕ ಶಿಕ್ಷಣಕ್ಕೆ ನೀಡಿರುವ ಅಮೂಲ್ಯವಾದ ಕೊಡುಗೆಗಳನ್ನು ಅವಲೋಕಿಸುವಾಗ ಸಹಜವಾಗಿಯೇ ಬೃಹತ್ ಪ್ರಮಾಣದ ಪ್ರಶ್ನೆಗಳು ಎದುರಾಗುತ್ತವೆ. ವಿಫುಲವಾದ ಸಾಹಿತ್ಯ ಪರಂಪರೆಯನ್ನು ಹೊಂದಿರುವ ಭಾರತದಂತಹ ದೇಶದಲ್ಲಿ ಇತ್ತೀಚಿನವರೆವಿಗೂ ಜನಸಂಖ್ಯೆಯ ಬಹು ಭಾಗವು ಅನಕ್ಷರತೆಯ ಅಂಧಕಾರದಲ್ಲಿ ಬದುಕಿದಿದ್ದು ಹೇಗೆ ಎಂಬುದು ಪ್ರಶ್ನೆಯಾಗಿದೆ? ಈ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳಬೇಕಾದರೆ ನಮ್ಮ ಭಾರತೀಯ ಇತಿಹಾಸದ ವಿವಿಧ ಕಾಲಘಟ್ಟಗಳಲ್ಲಿ ಅನುಸರಿಸಿದ ಶಿಕ್ಷಣನೀತಿಯೇ ಆಗಿದೆ. ಇದಕ್ಕೆ ಪರ್ಯಾಯವಾಗಿ ಶಿಕ್ಷಣವನ್ನು ಸಾರ್ವತ್ರೀಕರಿಸಲು ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಲಿಂಗಭೇದವನ್ನು ತೊಡೆದು ಹಾಕಲು ಬ್ರಿಟೀಷ್ ಸರ್ಕಾರವು ಕೈಗೊಂಡ ಕ್ರಮಗಳು ಭಾರತೀಯ ಇತಿಹಾಸದಲ್ಲಿ ಮಹತ್ವದ ಸಾಧನಗಳಾಗಿವೆ.
ಅನಕ್ಷರತೆ ನಿರ್ಮೂಲನಾ ಪ್ರಯತ್ನಗಳು ಸ್ವಾತಂತ್ರ್ಯ ಬಂದ ನಂತರವು ಹೆಚ್ಚಿನ ಉತ್ಸಾಹ-ಹುಮ್ಮಸ್ಸುಗಳಿಂದ ಮುಂದುವರಿದುದಕ್ಕೆ ಗಾಂಧೀಜಿ ಮತ್ತು ಪಂಡಿತ್ ಜವಹಾರ್‍ಲಾಲ್ ನೆಹರುರವರಂತಹ ಪ್ರಜ್ಞಾವಂತ ನಾಯಕರುಗಳ ದೂರದರ್ಶಿತ್ವಕ್ಕೆ ಕೃತಜ್ಞರಾಗಿರಬೇಕಾಗಿರುತ್ತದೆ. ಆದಾಗ್ಯೂ ಸಮಗ್ರ ಶಿಕ್ಷಣ ವ್ಯವಸ್ಥೆಯು ಗಂಭೀರ ತರನಾದ ಲೋಪಗಳಿಂದ ಸೊರಗಿತು. ಮೂಲ ಶಿಕ್ಷಣಕ್ಕೆ ಬದಲಾಗಿ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಲಾಯಿತು. ಅನಕ್ಷರತೆ ನಿವಾರಣೆ ಕಾರ್ಯಗತಿಯು ಇರಬೇಕಾಗಿದಷ್ಟು ತ್ವರಿತವಾಗಿರಲಿಲ್ಲ ಪರಿಣಾಮವಾಗಿ ಇಂದಿಗೂ ದುರ್ಬಲ ವರ್ಗಗಳು ಮತ್ತು ಮಹಿಳೆಯರಲ್ಲಿ ಅನಕ್ಷರತೆಯ ಪ್ರಮಾಣವು ಅಪಾಯಕಾರಿ ಪ್ರಮಾಣದಲ್ಲಿಯೇ ಮುಂದುವರಿದಿದೆ. ಮೂಲ ಶಿಕ್ಷಣದ ಬೆಲೆ ತೆತ್ತು ಉನ್ನತ ಶಿಕ್ಷಣಕ್ಕೆ ಉತ್ತೇಜನ ನೀಡುವಂತಹ ಸಮತೂಕದ ಶಿಕ್ಷಣ ನೀತಿಯು ಭಾರತದ ಸಮತೂಕ ಬೆಳವಣಿಗೆ ಮೇಲೆ ಆತಂಕಕಾರಿ ಪರಿಣಾಮ ಉಂಟು ಮಾಡುತ್ತಿದೆ. ಎಂಬ ಅಂಶವು ನಿಯಮ ರೂಪಿಸುವವರ ಕಣ್ಣು ತೆರೆಸಿದೆ. ಹಾಗಾಗೀ ಭಾರತದಾದ್ಯಂತ ತ್ವರಿತವಾಗಿ ಸಾಕ್ಷರತೆಯನ್ನು ಹರಡಲು ಸಮರೋಪಾದಿಯಲ್ಲಿ ಕಾರ್ಯಕ್ರಮಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಮ್ಮಿಕೊಳ್ಳುತ್ತಿವೆ. ಅದರಲ್ಲಿಯೂ ಮುಖ್ಯವಾಗಿ 2010-12 ರ ವರೆಗಿನ ಸಾಕ್ಷರ್ ಭಾರತ್-ಸಾಕ್ಷರ ಕರ್ನಾಟಕ ಕಾರ್ಯಕ್ರಮ ಮಹತ್ವ ಪೂರ್ಣವಾಗಿದೆ. ಸಾಕ್ಷರ್ ಭಾರತ್-ಸಾಕ್ಷರ ಕರ್ನಾಟಕ ಸಾಕ್ಷರತಾ ಆಂದೋಲನ ದೇಶಾದ್ಯಂತ ಜಾರಿಗೊಂಡ ನಂತರದಲ್ಲಿ ಸಾಕ್ಷರತಾ ಪ್ರಮಾಣ ಹೆಚ್ಚಳವಾಗಿ ಆ ಮೂಲಕ ಹಲವಾರು ಬಗೆಯ ಪ್ರಗತಿಯನ್ನು ಕಂಡಿದ್ದೇವೆ. ಆದರೂ ನಿರೀಕ್ಷೆಯಂತೆ ಕಾಲ ಮಿತಿಯೊಳಗೆ ಆಗಬೇಕಾಗಿದ್ದ ಸಾಕ್ಷರತೆಯ ಪ್ರಮಾಣ ಆಗಿಲ್ಲದಿರುವುದು ಬಹಳಷ್ಟು ಕಡೆ ಕಂಡು ಬಂದಿದೆ. ಕರ್ನಾಟಕವು ಪ್ರಗತಿ ಪಥದಲ್ಲಿ ಮುನ್ನಡೆಯುತ್ತಿರುವ ರಾಜ್ಯ 2001 ರ ಜನಗಣತಿಯ ಪ್ರಕಾರ ರಾಜ್ಯದ ಸಾಕ್ಷರತಾ ಪ್ರಮಾಣ ಶೇ. 66.64. ಮಹಿಳಾ ಸಾಕ್ಷರತಾ ಪ್ರಮಾಣ ಶೇ. 56.87 ಪುರುಷರ ಸಾಕ್ಷರತಾ ಪ್ರಮಾಣ ಶೇ. 76.10 ರಷ್ಟಿದ್ದು ಮಹಿಳಾ ಮತ್ತು ಪುರುಷರ ಸಾಕ್ಷರತಾ ಪ್ರಮಾಣದಲ್ಲಿ ಶೇ.19.23 ರಷ್ಟು ಅಂತರವಿದೆ. ಈ ಅಂತರವನ್ನು ಹೋಗಲಾಡಿಸಲು 15+ ವಯೋಮಾನದ ಗ್ರಾಮೀಣ ಭಾಗದ ಅನಕ್ಷರಸ್ಥರು ವಿಶೇಷವಾಗಿ ಮಹಿಳೆ, ಪರಿಶಿಷ್ಟ ಜಾತಿ ಮತ್ತು ಪಂಗಡ, ಅಲ್ಪಸಂಖ್ಯಾತ ಅನಕ್ಷರಸ್ಥರ ಕಲಿಕೆಗೆ ಆದ್ಯತೆ ನೀಡಲು ಸಾಕ್ಷರ್ ಭಾರತ್ ಕಾರ್ಯಕ್ರಮವನ್ನು ಜಾರಿಗೊಳಿಸಲಾಗಿದೆ. ಸಾಕ್ಷರ್ ಭಾರತ್ ಜನ ಸಮುದಾಯದ ಕಾರ್ಯಕ್ರಮವಾಗಿದ್ದು, ಕರ್ನಾಟಕದ 18 ಜಿಲ್ಲೆ, 107 ತಾಲ್ಲೋಕು, 3451 ಗ್ರಾಮ ಪಂಚಾಯಿತಿಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. 15 ವರ್ಷಕ್ಕಿಂತ ಹೆಚ್ಚಿನ ವಯೋಮಾನದ 36,000,00 ಗ್ರಾಮೀಣ ಪ್ರದೇಶದ ಅನಕ್ಷರಸ್ಥರಿಗೆ ಹಾಗೂ ವಿಶೇಷವಾಗಿ ಮಹಿಳಾ ಸಾಕ್ಷರತಾ ಪ್ರಮಾಣ ಶೇ. 50 ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಹಾಗೂ ಶೋಷಿತ ವರ್ಗದವರಿಗೆ ಓದು ಬರಹ ಕಲಿಸಿ ಕಲಿಕಾ ಸಮಾಜ ನಿರ್ಮಾಣವಾಗಬೇಕಾಗಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಸಾಕ್ಷರತಾ ಮಿಷನ್ ಸಾಕ್ಷರ್ ಭಾರತ್ ಕಾರ್ಯಕ್ರಮವನ್ನು ಬಲಪಡಿಸಲು ಮಹಿಳಾ ಸಾಕ್ಷರತೆಗೆ ವಿಶೇಷ ಒತ್ತು ನೀಡಿ ಸಾಕ್ಷರತೆಯ ಜೊತೆ ಜೊತೆಗೆ ವೃತ್ತಿ ಕೌಶಲ್ಯವನ್ನು ಒಳಗೊಂಡು ಅಭಿವೃದ್ಧಿಯತ್ತ ಹೆಜ್ಜೆ ಹಾಕಲು ಹೊರಟಿದೆ. ಈ ಉದ್ದೇಶದ ಫಲವಾಗಿ ರಾಜ್ಯ ಸಂಪನ್ಮೂಲ ಕೇಂದ್ರವು ಕರ್ನಾಟಕ ರಾಜ್ಯದ ಸಾಕ್ಷರ ಭಾರತ್ ಕಾರ್ಯಕ್ರಮಕ್ಕಾಗಿ ದಿನಾಂಕ: 22.06.2009 ರಿಂದ 27.06.2009 ರವರೆಗೆ ಗುಲ್ಬರ್ಗಾ ಜಿಲ್ಲೆಯ ಕಮಲಾಪುರದ ಮೈರಾಡ ಸಂಸ್ಥೆಯ ಸಹಯೋಗದೊಂದಿಗೆ ಕಾರ್ಯಗಾರ ನಡೆಸಿ ಭಾಷಾ-ಭಿನ್ನತೆಯ ಹಿನ್ನೆಲೆಯಲ್ಲಿ ಇಡೀ ರಾಜ್ಯಕ್ಕೆ ಹೊಂದಿಕೆಯಾಗುವಂತೆ ಬಾಳಿಗೆ ಬೆಳಕು ಪಠ್ಯಪುಸ್ತಕವನ್ನು ಸಿದ್ದಪಡಿಸಿ ನಂತರ ಚನ್ನೈನಲ್ಲಿ ದೆಹಲಿಯ ವಯಸ್ಕರ ಶಿಕ್ಷಣ ನಿರ್ದೇಶನಾಲಯವು ಪಠ್ಯವನ್ನು ಪರಿಷ್ಕರಣೆಗೆ ಒಳಪಡಿಸಿ ಅಲ್ಲಿ ಬಂದ ಸಲಹೆಗಳ ಮೇರೆಗೆ ವಿನೂತನ ಪುಸ್ತಕವನ್ನು ಹೊರ ತರಲಾಗಿದೆ. ಸಾಕ್ಷರ್ ಭಾರತ್ ಕಾರ್ಯಕ್ರಮದ ಮೂಲ ಉದ್ದೇಶ: ಸಾಕ್ಷರ ಭಾರತ್ ಕಾರ್ಯಕ್ರಮವು 15 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನ ಅನಕ್ಷರಸ್ಥರಿಗೆ ಮತ್ತು ನವಸಾಕ್ಷರರಿಗಾಗಿ ರೂಪಿತವಾದ ಹೊಸ ಕಾರ್ಯಕ್ರಮವಾಗಿದೆ. ಸಾಕ್ಷರ್ ಭಾರತ್ ಕಾರ್ಯಕ್ರಮದಲ್ಲಿ ಅನಕ್ಷರಸ್ಥರಿಗಾಗಿ ಕ್ರಿಯಾತ್ಮಾಕ ಸಾಕ್ಷರತೆ, ಶಿಕ್ಷಣ ಮುಂದುವರಿಸಲು ಬಯಸುವ ನವಸಾಕ್ಷರರಿಗೆ ಸಮಾನ ಶಿಕ್ಷಣ, ಕಲಿಕಾರ್ಥಿಗಳ ಜೀವನಮಟ್ಟ ಸುಧಾರಣೆಗೆ ವೃತ್ತಿ ಕೌಶಲ್ಯ ಮತ್ತು ಜೀವನ ಪರ್ಯಂತ ಕಲಿಕೆಗೆ ಮುಂದುವರಿಕೆ ಶಿಕ್ಷಣ ನೀಡುವ ಉದ್ದೇಶ ಹೊಂದಲಾಗಿದೆ. ಸಾಕ್ಷರ್ ಭಾರತ್ ಕಾರ್ಯಕ್ರಮದಡಿ ಸಾಕ್ಷರ ಕರ್ನಾಟಕವನ್ನಾಗಿಸುವುದು ನಮ್ಮ ದ್ಯೇಯ ಸಾಕ್ಷರ ಭಾರತ ಕಾರ್ಯಕ್ರಮಕ್ಕಾಗಿ ಬಾಳಿಗೆ ಬೆಳಕು ಪ್ರಾಥಮಿಕೆಯನ್ನು ರಚಿಸಲಾಗಿದೆ. ಇಲ್ಲಿ ಲಿಂಗ ಸಮಾನತೆ, ಮಹಿಳಾ ಸಬಲೀಕರಣ, ಸರ್ಕಾರದ ಯೋಜನೆಗಳ ಬಗ್ಗೆ ತಿಳುವಳಿಕೆ ಹಾಗೂ ಅಭಿವೃದ್ಧ್ದಿ ಅಂಶಗಳನ್ನು ಆದರಿಸಿ ಐಪಿಸಿಎಲ್ ಮಾದರಿ ಅನುಸಾರ ರಚಿಸಲಾಗಿದೆ. ಸಾಕ್ಷರತೆ:- ಓದು-ಬರಹ ಮತ್ತು ಲೆಕ್ಕಾಚಾರ ಕೌಶಲವನ್ನು ಪಡೆದು ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳುವುದೇ ಸಾಕ್ಷರತೆಯಾಗಿದೆ. ಯುನೆಸ್ಕೋ ಸಂಘಟನೆಯು ಅಕ್ಷರಸ್ಥರನ್ನು ತನ್ನ ದೈನಂದಿನ ಬದುಕಿನಲ್ಲಿ ಚಿಕ್ಕ ಮತ್ತು ಸರಳ ವ್ಯಾಖ್ಯೆಗಳನ್ನು ಅರ್ಥ ಮಾಡಿಕೊಂಡು ಓದುವವನು ಮತ್ತು ಬರೆಯ ಬಲ್ಲವನು ಎಂದು ವ್ಯಾಖ್ಯಾನಿಸಿದೆ. ಭಾರತದಲ್ಲಿ ವ್ಯಕ್ತಿಯು ಅನಕ್ಷರಸ್ಥನೇ ಅಥವಾ ಅಲ್ಲವೇ ಎಂದು ನಿರ್ಧರಿಸಲು ಅಂಚೆ ಕಾರ್ಡನ್ನು ಓದುವ ಮತ್ತು ಬರೆಯುವ ಸಾಮಥ್ರ್ಯವು ಮಾನದಂಡವಾಗಿದೆ. ಯುನೆಸ್ಕೋ 1991ರಲ್ಲಿ ಭಾರತೀಯ ಜನಗಣತಿಯ ಕಮಿಷನ್ ಅಕ್ಷರಸ್ಥರನ್ನು ಯಾವುದೇ ಭಾರತೀಯ ಭಾಷೆಯಲ್ಲಿ ಅರ್ಥಮಾಡಿಕೊಳ್ಳುವುದರೊಂದಿಗೆ ಓದಬಲ್ಲವನು ಬರೆಯಬಲ್ಲವನು ಎಂದು ವ್ಯಾಖ್ಯಾನಿಸಿದೆ. ಆದ ಕಾರಣ ಓದಬಲ್ಲವರಾಗಿದ್ದು, ಬರೆಯಲಾಗದಿದ್ದವರು ಅಕ್ಷರಸ್ಥರಾಗುವುದಿಲ್ಲ. ಸಾಕ್ಷರತೆಯ ನಿರ್ಧಾರಕ್ಕೆ ಸಾಂಪ್ರದಾಯಿಕ ಶಾಲಾ ಶಿಕ್ಷಣವು ಸಹ ಕಡ್ಡಾಯವಾಗಿರುವುದಿಲ್ಲ. ಸ್ವಯಂ ಸೇವಕರ ಪಾತ್ರ ಮತ್ತು ನಿರ್ವಹಣೆ:- ಸಾಕ್ಷರ್ ಭಾರತ್ ಕಾರ್ಯಕ್ರಮವನ್ನು ಬಲಪಡಿಸುವಲ್ಲಿ ಸ್ವಪ್ರೇರಣೆಯಿಂದ ಅನಕ್ಷರಸ್ಥರಿಗೆ ಓದು-ಬರಹ ಕಲಿಸಲು ಸ್ವಯಂ ಸೇವಕರಾಗಿ ಮುಂದೆ ಬರುವುದು ಸಂತೋಷಕರ ವಿಷಯ. ಕಾರಣ ಅನಕ್ಷರಸ್ಥರಿಗೆ ಕಲಿಸುವುದರಿಂದ ಅವರು ಅಕ್ಷರಸ್ಥರಾಗಿ ಮನೆ ಮಕ್ಕಳಿಗೆ ಓದು ಬರಹ ಕಲಿಸ ಬಲ್ಲರು. ಇದರಿಂದ ಗ್ರಾಮದ ಮನೆ ಮಂದಿಗೆಲ್ಲಾ ಸಾಕ್ಷರಸ್ಥರನ್ನಾಗಿಸುವ ಶ್ರೇಯಸ್ಸು ನಿಮ್ಮದಾಗುವುದು. ಹಸಿದವನಿಗೆ ಅನ್ನದಾನ ಮಾಡಿದರೆ ಆ ಕ್ಷಣ ಹಸಿವು ನೀಗಬಲ್ಲದು ಆದರೆ ಅಕ್ಷರದಾನ ಮಾಡಿದರೆ ಇಡೀ ಬದುಕೆ ಹಸನಾಗಬಹುದು ಇಂತಹ ಪವಿತ್ರ ಕಾರ್ಯದಲ್ಲಿ ನೀವು ತೊಡಗಿಕೊಳ್ಳುವುದರಿಂದ ನಿಮ್ಮ ಆಲೋಚನೆ, ಕ್ರಿಯಾಶೀಲತೆ ಕೌಶಲಗಳು ವೃದ್ಧಿಗೊಂಡು ಜನ ಸಮುದಾಯದ ಮೆಚ್ಚುಗೆಗೆ ಪಾತ್ರರಾಗುವುದು ಮಾತ್ರವಲ್ಲದೆ ಮಾನವ ಸಂಪನ್ಮೂಲ ಅಭಿವೃದ್ಧಿಗೆ ಸೇವೆ ಸಲ್ಲಿಸಿದಂತಾಗುವುದು. ಕಲಿಯುವಾಗ ಕಲಿಯುವುದಕ್ಕಿಂತ ಕಲಿಸುವಾಗ ಕಲಿಯುವುದು ಹೆಚ್ಚು ಪಡೆದ ಜ್ಞಾನ ಬಳಸದಿದ್ದರೆ ನಶಿಸುವುದು. ಬಳಸಿದರೆ ವೃದ್ಧಿಸುವುದು. ನೀವು ಪಡೆದ ಜ್ಞಾನವನ್ನು ನಿಮ್ಮ ಗ್ರಾಮದ ಕಲಿಕಾ ಕೇಂದ್ರದಲ್ಲಿ ಬಳಸಿ ಅನಕ್ಷರಸ್ಥರಿಗೆ ಕಲಿಸುವುದರ ಮೂಲಕ ವೃದ್ಧಿಸಿಕೊಳ್ಳಬಹುದಾಗಿದೆ. ಪ್ರಜ್ಞಾವಂತ ನಾಗರೀಕರ ಜವಬ್ದಾರಿಗಳು:-
ರಾಜಶೇಖರ್. ಸಿ (ಕೋಟಿ) ಶೆಟ್ಟಹಳ್ಳಿ ಗ್ರಾಮ ಮತ್ತು ಅಂಚೆ, ಮಳವಳ್ಳಿ ತಾಲ್ಲೂಕು, ಮಂಡ್ಯ ಜಿಲ್ಲೆ-57143
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
|
|
|
|
SITE MAP
SitePOSH |
NIRATHANKAOUR OTHER WEBSITESSubscribe |
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |