Niruta Publications
  • Home
  • About Us
    • Ramesha's Profile
  • Publication With Us
    • Inviting Authors
    • Promote Your Books
  • Niruta Book Club
  • Our Services
  • Leaders Talk
  • HR Blog
    • Inviting Articles
  • Books / Online Store
  • Media Mentions
    • Photos
  • Join Our Online Groups
  • Contact Us
  • Home
  • About Us
    • Ramesha's Profile
  • Publication With Us
    • Inviting Authors
    • Promote Your Books
  • Niruta Book Club
  • Our Services
  • Leaders Talk
  • HR Blog
    • Inviting Articles
  • Books / Online Store
  • Media Mentions
    • Photos
  • Join Our Online Groups
  • Contact Us
Niruta Publications

ಕರ್ನಾಟಕದ ಬುಡಕಟ್ಟುಗಳ ಸಮಾಜೋ-ಸಾಂಸ್ಕೃತಿಕ ಜೀವನದ ಮೇಲೆ ಜಾಗತೀಕರಣದ ಪ್ರಭಾವ: ಆಯ್ದ ಬುಡಕಟ್ಟುಗಳ ಅಧ್ಯಯನ

12/19/2019

0 Comments

 
Picture
ಪೀಠಿಕೆ:
ಭಾರತೀಯ ಬುಡಕಟ್ಟು ಸಮುದಾಯಗಳು ಇಂದು ಕವಲುದಾರಿಯಲ್ಲಿವೆ. ಬುಡಕಟ್ಟು ಜನರು ತಮ್ಮ ಸಮಾಜದ ಅರಿವು ಮತ್ತು ಸಾಂಸ್ಕೃತಿಕ ಸಮನ್ವಯದ ನಡುವೆ ಉಭಯ ಸಂಕಟಕ್ಕೊಳಗಾಗಿದ್ದಾರೆ. ತಮ್ಮ ಸಂಸ್ಕೃತಿಯ ಮೇಲೆ ಪರಕೀಯ ಸಂಸ್ಕೃತಿಯ ಒತ್ತಡಗಳಿಂದ ರಕ್ಷಿಸಿಕೊಳ್ಳುವ ಸಮಸ್ಯೆ ಒಂದು ಕಡೆಯಾದರೆ, ಇವರು ತಮ್ಮನ್ನು ತಾವು ಭಾರತೀಯ ಸಮಾಜದ ಮುಖ್ಯವಾಹಿನಿಯಲ್ಲಿ ಒಗ್ಗೂಡುವಿಕೆಯ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುತ್ತಿರುವುದು ಮತ್ತೊಂದು ಕಡೆಯಾಗಿದೆ. ಬುಡಕಟ್ಟು ಜನರಿಗೆ ರಾಷ್ಟ್ರೀಯ ಮುಖ್ಯವಾಹಿನಿ ಎಂದರೇನು? ಹಿಂದೂ ಮುಖ್ಯವಾಹಿನಿ ಎಂದರೇನು? ಎಂಬ ಬಗ್ಗೆಯೇ ಗೊಂದಲವಿದೆ. ಭಾರತದ ಸಂವಿಧಾನದ ಪ್ರಕಾರ ಧರ್ಮನಿರಪೇಕ್ಷತೆಯು ಮುಖ್ಯವಾಹಿನಿಯಾದರೆ ಬುಡಕಟ್ಟು ಜನರ ಪೌರಜೀವನ ಏನಾಗಬಹುದು? ಬುಡಕಟ್ಟು ಜನರ ಪರಂಪರೆ ಪದ್ಧತಿಗಳು, ನಂಬಿಕೆಗಳು ಅವರದೇ ಆದ ವಿಧಿವಿಧಾನಗಳಿಂದ ಕೂಡಿದ ಜೀವನ ಶೈಲಿಯನ್ನೇ ತ್ಯಜಿಸಿ, ಈ ದೇಶದ ವಿಭಿನ್ನ ಸಂಸ್ಕೃತಿಗಳೊಡನೆ ಏಕೀಕರಣಗೊಂಡರೆ ಇವರು ತಮ್ಮ ಅನನ್ಯತೆಯನ್ನು ತಮ್ಮತನವನ್ನು ಕಳೆದುಕೊಳ್ಳಬೇಕಾಗುತ್ತದೆ. ಇಂತಹ ಪರಿಸ್ಥಿತಿಗಳನ್ನು ಎದುರಿಸುತ್ತಿರುವ ಬುಡಕಟ್ಟು ಜನರಲ್ಲಿ ಹಲವಾರು ಸಂದಿಗ್ಧತೆಗಳು ಜಿಜ್ಞಾಸೆಗಳು ಉಂಟಾಗಿ ಹತ್ತು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಜೊತೆಗೆ ಬದಲಾಗುತ್ತಿರುವ ಆರ್ಥಿಕ ಮತ್ತು ಸಾಮಾಜಿಕ-ರಾಜಕೀಯ ವ್ಯವಸ್ಥೆಯಲ್ಲಿ ಸಾಮಾನ್ಯ ಉತ್ಪಾದನಾ ಸಂಘಟನೆ ಮತ್ತಿತರ ಪ್ರಕ್ರಿಯೆಗಳೊಂದಿಗೆ ರಾಜಿ ಮಾಡಿಕೊಳ್ಳಬೇಕಾಗುತ್ತದೆ. ಸಾಂವಿಧಾನಿಕವಾಗಿ ಬದಲಾದ ಜಾತ್ಯಾತೀತ ಪ್ರಜಾಪ್ರಭುತ್ವ ವ್ಯವಸ್ಥೆಯ ಚೌಕಟ್ಟಿನಲ್ಲಿಯೂ ಭಾಗವಹಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಬುಡಕಟ್ಟುಗಳ ಸಮಾಜೋ-ಸಾಂಸ್ಕೃತಿಕ ಜೀವನದ ಮೇಲೆ ಅನ್ಯ ಸಂಸ್ಕೃತಿಗಳ ಪ್ರಭಾವ ಮತ್ತು ಪರಿಣಾಮಗಳು ಜಾಗತೀಕರಣ ಪ್ರಕ್ರಿಯೆ ಮೂಲಕ ಹೇಗೆ ಕಾರ್ಯೋನ್ಮುಖವಾಗುತ್ತಿವೆ ಮತ್ತು ಕರ್ನಾಟಕದ ಬುಡಕಟ್ಟು ಸಮುದಾಯಗಳು ಪ್ರಸ್ತುತತೆಯಲ್ಲಿ ಎತ್ತ ಸಾಗುತ್ತಿವೆ? ಇವುಗಳ ಭವಿಷ್ಯದ ದಿಕ್ಕುಗಳಾವುವು? ಎಂಬುದನ್ನು ಕುರಿತಾದ ಸೂಕ್ಷ್ಮ ಮತ್ತು ಸಮಗ್ರ ಅಧ್ಯಯನಗಳ ಅವಶ್ಯಕತೆ ಇರುವುದರಿಂದ ಪ್ರಸ್ತುತ ಅಧ್ಯಯನದಲ್ಲಿ ಇಂತಹ ಒಂದು ಪ್ರಯತ್ನ ಮಾಡಲಾಗಿದೆ.

ಸಾಹಿತ್ಯ ವಿಮರ್ಶೆ
ಬುಡಕಟ್ಟು ಜನರ ಸಮಸ್ಯೆಗಳು ಸರಳವಾದವುಗಳಲ್ಲ. ಇವರ ಸಮಸ್ಯೆಗಳು ಒಂದು ಬುಡಕಟ್ಟಿನಿಂದ ಮತ್ತೊಂದು ಬುಡಕಟ್ಟಿಗೆ, ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಭಿನ್ನವಾಗಿರುತ್ತವೆ. ಎಸ್.ಸಿ. ದುಬೆರವರು ಬುಡಕಟ್ಟು ಸಮಸ್ಯೆಗಳ ನೈಜ ಸ್ವರೂಪವನ್ನು ವಿವರಿಸುತ್ತಾ, ತೀವ್ರವಾಗಿ ಬದಲಾಗುತ್ತಿರುವ ರಾಷ್ಟ್ರೀಯ ಜೀವನ ಪಥದಲ್ಲಿ ಪ್ರತ್ಯೇಕವಾಗಿಯೇ ಇದ್ದ ಇವರನ್ನು ಸ್ಪರ್ಧಾತ್ಮಕ ರಾಜಕೀಯದ ಸುಳಿಗೆ ಎಸೆಯಲ್ಪಟ್ಟಿದ್ದಾರೆ. ಇದರ ಪರಿಣಾಮವಾಗಿ ಅನೇಕ ಬುಡಕಟ್ಟು ಪ್ರದೇಶಗಳಲ್ಲಿ ಪರಿಣಾಮಕಾರಿ ರಾಜಕೀಯ ಗಣ್ಯರ ಉದಯವಾಗಿದೆ ಎಂದು ಹೇಳುತ್ತಾರೆ.

ಕೆ.ಎಸ್. ಮಾಥುರ್:- ಸಮಕಾಲೀನ ಭಾರತದಲ್ಲಿ ಬುಡಕಟ್ಟು ಯಾವುದೇ ಸಾಂಸ್ಕೃತಿಕ ಅಥವಾ ಸಾಮಾಜಿಕ ಅರ್ಥವನ್ನು ಹೊಂದಿಲ್ಲ. ಇದು ರಾಷ್ಟ್ರದ ಒಂದು ನಿರ್ದಿಷ್ಟ ಜನ ಸಮೂಹದ ರಾಜಕೀಯ ಪ್ರಜ್ಞೆಯ ಸಂಕೇತವೂ ಆಗಿದೆ. ಜಾತಿಪ್ರಜ್ಞೆ, ಭಾಷಾ ಪ್ರಜ್ಞೆ, ಅಥವಾ ಪ್ರಾಂತೀಯ ಪ್ರಜೆಗಳಂತೆ ಬುಡಕಟ್ಟು ಪ್ರಜ್ಞೆಯೂ ಕೂಡಾ ಒಂದು ರಾಜಕೀಯ ಸಾಧನವಾಗುತ್ತಿದೆ.

ಬೆತೆಯವರ ಅಭಿಪ್ರಾಯದಂತೆ ಬುಡಕಟ್ಟು ಸಮುದಾಯಗಳಲ್ಲಿನ ಸ್ವಲ್ಪಮಟ್ಟಿನ ಪ್ರಭೇದ ಹಾಗೂ ವಿಶೇಷ ನೈಪುಣ್ಯತೆಗಳು ಕಂಡು ಬಂದರೂ, ಅವು ವಿಶಿಷ್ಟ ಸ್ವರೂಪದ್ದಾಗಿರುತ್ತವೆ. ಅವು ಜೈವಿಕ ಅಂಶಗಳಾದ ವಯಸ್ಸು, ಲಿಂಗ ಮತ್ತು ಬಂಧುತ್ವಗಳನ್ನು ಆಧರಿಸುತ್ತವೆ. ನಿರ್ದಿಷ್ಟ ಕುಶಲತೆಗೆ ಸಂಬಂಧಿಸಿದಂತೆ ನೈಪುಣ್ಯತೆ ಇರಬಹುದಾದರೂ, ಅದು ನಿರಂತರವಾಗಿ ಮುಂದುವರಿಯುವ ಸಮೂಹಗಳಿಗೆ ಹಾಗೂ ವರ್ಗಗಳಿಗೆ ಸಂಬಂಧಿಸಿರದೆ ವ್ಯಕ್ತಿಗಳಿಗೆ ಸಂಬಂಧಿಸಿರುತ್ತದೆ. ಈ ನೈಪುಣ್ಯತೆಯ ಅಭಾವವೇ ಬುಡಕಟ್ಟಿನ ಆರ್ಥಿಕ ವ್ಯವಸ್ಥೆಯ ಸಾಪೇಕ್ಷವಾಗಿ ಹಿಂದುಳಿದಿರುವ ಸ್ವರೂಪ ಹಾಗೂ ಬುಡಕಟ್ಟು ಸಮಾಜದಲ್ಲಿ ಸ್ತರವಿನ್ಯಾಸದ ಅಭಾವಗಳಿಗೆ ಕಾರಣವಾಗಿದೆ ಎಂದು ಹೇಳಬಹುದು.

ಆರ್.ಸಿ. ವರ್ಮರವರ ಅಭಿಪ್ರಾಯದಂತೆ ಪ್ರಬಲ ಹಿಂದೂ ಸಮಾಜದಲ್ಲಿ ಅವರನ್ನು ಲೀನಗೊಳಿಸುವ ಪ್ರಯತ್ನಗಳ ಬಗ್ಗೆಯೂ ಬುಡಕಟ್ಟು ಜನರು ಅತೃಪ್ತರಾಗಿದ್ದಾರೆ. ಇಂತಹ ಪ್ರಯತ್ನಗಳು ಅವರ ಸಾಂಪ್ರದಾಯಿಕ ಸಂಸ್ಕೃತಿ ಮತ್ತು ಜೀವನ ಶೈಲಿಗಳ ವಿನಾಶಕ್ಕೆ ಕಾರಣವಾಗುತ್ತವೆ ಮತ್ತು ಅವರು ಹಿಂದೂ ಏಣಿಶ್ರೇಣಿ ವ್ಯವಸ್ಥೆಯ ಕೆಳಹಂತಗಳ ಸ್ಥಾನವನ್ನು ಪಡೆಯುತ್ತಾರೆ. ಈ ಕಾರಣದಿಂದ ಹೆಚ್ಚಿನ ಬುಡಕಟ್ಟುಗಳ ಜನರು ಇಂತಹ ಪ್ರಯತ್ನವನ್ನು ವಿರೋಧಿಸುತ್ತಾರೆ.

ವಿ. ಸುಂದರಂ ಹೇಳುವಂತೆ ಜಾಗತೀಕರಣ ಎಂಬುದು ಗಡಿದಾಟುವಿಕೆಯ ಚಟುವಟಿಕೆಗಳು, ಅಂತರರಾಷ್ಟ್ರೀಯ ಹೂಡಿಕೆ, ವ್ಯಾಪಾರ, ಉತ್ಪಾದಿತ ಬೆಳವಣಿಗೆ ಮಾರುಕಟ್ಟೆಯ ಮೂಲಗಳು, ಸಾಮಾಜಿಕ-ಸಾಂಸ್ಕೃತಿಕ ವಿದ್ಯಮಾನಗಳು ಇವೆಲ್ಲವುಗಳನ್ನು ಒಳಗೊಂಡಿರುವ ಪ್ರಕ್ರಿಯೆಯಾಗಿದೆ.

ಖಿ.ಡಿ. ಶರ್ಮಾ ತಮ್ಮ ಪತ್ರಿಕಾ ಮಂಡನೆಯಲ್ಲಿ ಹೇಳುವಂತೆ ಬುಡಕಟ್ಟು ಸಮುದಾಯಗಳ ಧ್ವನಿಯನ್ನು ಜಾಗತೀಕರಣವು ಕ್ಷೀಣಿಸುತ್ತಿದೆ ಮತ್ತು ಜಾಗತಿಕ ಮಾರುಕಟ್ಟೆಯಿಂದ ಅವರನ್ನು ಕಣ್ಮರೆಯಾಗಿಸುತ್ತಿದೆ. ಜಾಗತೀಕರಣ ಬುಡಕಟ್ಟುಗಳನ್ನು ಕೇವಲ ಸೀಮಾಂತೀಕರಣಗೊಳಿಸುತ್ತಿದೆ ಎಂಬ ಪ್ರಶ್ನೆಯಲ್ಲ, ಬದಲಾಗಿ ಇದು ಬಹು ವಿಸ್ತಾರಿತ ದಬ್ಬಾಳಿಕೆಯನ್ನು, ಸವಾಲುಗಳನ್ನು ಒಡ್ಡುವ ಪ್ರಕ್ರಿಯೆಯಾಗಿದೆ. ಇದರಿಂದ ಬುಡಕಟ್ಟುಗಳ ಅಸ್ತಿತ್ವ ಮತ್ತು ಜೀವನಕ್ಕೆ ಒಂದು ಗಂಡಾಂತರವಾಗಿದೆ ಎನ್ನಬಹುದು.

ಮಹೇಶ್ ಎಸ್.ಜಿ. ಇವರ ಅಧ್ಯಯನದಲ್ಲಿ ಹೇಳುವಂತೆ ಚಾಮರಾಜನಗರ ಬೆಟ್ಟದ ಬುಡಕಟ್ಟು ಮತ್ತು ಹೆಗ್ಗಡದೇವನಹಳ್ಳಿ ಕೋಟೆಯ ನಾಯಕ ಬುಡಕಟ್ಟುಗಳನ್ನು ಕೇಂದ್ರೀಕರಿಸಿಕೊಂಡು ಮಾಡಿರುವ ಅಧ್ಯಯನದಲ್ಲಿ ಹೊಸ ತಂತ್ರಜ್ಞಾನಗಳಾದ ಕಂಪ್ಯೂಟರ್ ಇಂಟರ್ನೆಟ್ ಹಾಗೂ ಪೂರಕ ಸಂಪರ್ಕ ಸಾಧನಗಳ ಬಳಕೆ ಮತ್ತು ಲಭ್ಯತೆ ಸಂಪೂರ್ಣವಾಗಿ ಅಥವಾ ಭಾಗಶಃವಾಗಿ ಸಾಧ್ಯವಾಗುತ್ತಿಲ್ಲ. ಪ್ರಾಥಮಿಕವಾಗಿ ಮೂಲಭೂತ ಸೌಲಭ್ಯಗಳ ಕೊರತೆಯೇ ಹೆಚ್ಚಾಗಿರುವಾಗ ಆಧುನಿಕ ತಂತ್ರಾಂಶಗಳು ಹಾಗೂ ಜಾಗತೀಕರನ ಸೌಲಭ್ಯಗಳು ಹೇಗೆ ಸುಲಭವಾಗಿ ಮತ್ತು ಸರಳವಾಗಿ ಪಡೆಯಲು ಸಾಧ್ಯ. ಬುಡಕಟ್ಟುಗಳನ್ನು ಸಮಾನವಾಗಿ ಪರಿಗಣಿಸಿದಾಗ ಮತ್ತು ಅವರಲ್ಲಿನ ವಿಶಿಷ್ಟ ಗುರುತುಗಳನ್ನು ಗೌರವಿಸಿದಾಗ ಮಾತ್ರ ಅವರು ಅಭಿವೃದ್ಧಿ ಯೋಜನೆ ಮತ್ತು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಇಚ್ಛಿಸುತ್ತಾರೆ.

ಪ್ರಿಯಾಂಕ ನಯಲ್ ತಮ್ಮ ಸಂಶೋಧನಾ ಅಧ್ಯಯನ ಓಡಿಶಾದ ಕಾಲಾಂದಿ, ಬೊಲಂಗಿರ್, ಮತ್ತು ಕೊರಕ್ಪುತ್ ಜಿಲ್ಲೆಗಳ ಆದಿವಾಸಿ/ಬುಡಕಟ್ಟು ಅಧ್ಯಯನಗಳಲ್ಲಿ ಕಂಡುಕೊಂಡಿರುವಂತೆ ಜಾಗತೀಕರಣದ ಪ್ರಭಾವದಿಂದಾಗಿ ಬುಡಕಟ್ಟು ಸಾಂಸ್ಕೃತಿಕ ಜೀವನಶೈಲಿಯ ಮೇಲೆ ಸಕಾರಾತ್ಮಕ ಮತ್ತು ನಕಾರಾತ್ಮಕ ಪರಿಣಾಮಗಳು ಉಂಟಾಗಿವೆ. ಸಂಸ್ಕೃತಿಯ ಬದಲಾವಣೆ, ಭಾಷೆ, ಕಲಾ ಪ್ರದರ್ಶನ ಇವೆಲ್ಲವೂ ಜಾಗತಿಕ ಮಟ್ಟದಲ್ಲಿ ಪರಿಚಿತಗೊಳ್ಳುತ್ತಿವೆ ಎಂದಿದ್ದಾರೆ.
 
ಅಧ್ಯಯನದ ಉದ್ದೇಶಗಳು
  1. ಕರ್ನಾಟಕದ ಬುಡಕಟ್ಟುಗಳ ಜೀವನ ಮತ್ತು ಸಮಸ್ಯೆಗಳನ್ನು ಪರಿಶೀಲಿಸುವುದು.
  2. ಬುಡಕಟ್ಟುಗಳ ಸಮಾಜೋ-ಸಾಂಸ್ಕೃತಿಕ ಜೀವನ ಮೇಲೆ ಜಾಗತೀಕರಣವು ಹೇಗೆ ಪ್ರಭಾವ ಬೀರಿದೆ ಎಂಬುದನ್ನು ಪರಿಶೋಧಿಸುವುದಾಗಿದೆ.
  3. ಜಾಗತೀಕರಣದ ಸವಾಲುಗಳನ್ನು ಬುಡಕಟ್ಟುಗಳು ಹೇಗೆ ಎದುರಿಸಬೇಕೆಂಬುದರ ಬಗ್ಗೆ ಪರ್ಯಾಯ ಸಲಹೆಗಳನ್ನು ನೀಡುವುದು.
 
ಕರ್ನಾಟಕ ಬುಡಕಟ್ಟುಗಳ ಜೀವನ ಶೈಲಿ ಮತ್ತು ಸಮಸ್ಯೆಗಳು
ಸಂವಿಧಾನದ (ಪರಿಶಿಷ್ಟ ಪಂಗಡಗಳು) ತಿದ್ದುಪಡಿ ಕಾಯ್ದೆ 2003ರಂತೆ ಕರ್ನಾಟಕವು ಪ್ರಕಟಣೆಗೊಳಿಸಿರುವಂತೆ ಪ್ರಸ್ತುತ 50 ಬುಡಕಟ್ಟುಗಳನ್ನು ಗುರ್ತಿಸಲಾಗಿದೆ. 2011 ರ ಜನಗಣತಿಯಂತೆ. ಇವುಗಳ ಜನಸಂಖ್ಯಾ ಪ್ರಮಾಣ 42,48,978, ರಾಜ್ಯದ ಒಟ್ಟು ಜನಸಂಖ್ಯೆಯ ಶೇಕಡ 6.95 ರಷ್ಟು ಗಾತ್ರವನ್ನು ಬುಡಕಟ್ಟು ಸಮುದಾಯವನ್ನು ಕಾಣಬಹುದು. ಹಿಂದಿನ ಜನಗಣತಿ 2001ರಲ್ಲಿ ಶೇ. 6.6ರಷ್ಟು ಪ್ರಮಾಣದಿಂದ ಇಂದು ಗಣನೀಯವಾಗಿ ಏರಿಕೆಯನ್ನು ಕಂಡಿದೆ. ಬುಡಕಟ್ಟುಗಳ ಜನಾಂಗೀಯ ಸಮೂಹಗಳನ್ನು ಪ್ರಮುಖವಾಗಿ ಬಳ್ಳಾರಿ, ರಾಯಚೂರು, ಮೈಸೂರು, ಚಿತ್ರದುರ್ಗ, ಬೆಳಗಾವಿ, ದಾವಣಗೆರೆ ಮತ್ತು ತುಮಕೂರು ಜಿಲ್ಲೆಗಳಲ್ಲಿ ಕಾಣಬಹುದಾಗಿದೆ. ರಾಜ್ಯದ ಒಟ್ಟು ಬುಡಕಟ್ಟು ಜನಸಂಖ್ಯೆಯ ಶೇಕಡ 52ರಷ್ಟು ಪ್ರಮಾಣವನ್ನು ಈ ಏಳು ಜಿಲ್ಲೆಗಳಲ್ಲಿ ಕಂಡುಬಂದರೆ ಉಳಿದ ಶೇ. 48ರಷ್ಟು ಬುಡಕಟ್ಟು ಜನಸಂಖ್ಯೆ 23 ಜಿಲ್ಲೆಗಳಲ್ಲಿ ಕಾಣಬಹುದಾಗಿದೆ. ಇವರಲ್ಲಿನ ಲಿಂಗಾನುಪಾತ 1000 ಪುರುಷರಿಗೆ 990 ಸ್ತ್ರೀಯರಿದ್ದಾರೆ. ಇದು ಅಖಿಲ ಭಾರತ ಲಿಂಗಾನುಪಾತಕ್ಕಿಂತ ಹೆಚ್ಚು ಪ್ರಮಾಣದಲ್ಲಿದೆ. ಭಾರತದ ಒಟ್ಟು ಲಿಂಗಾನುಪಾತ 964, ಕರ್ನಾಟಕ ರಾಜ್ಯದ ಲಿಂಗಾನುಪಾತ 973, ಕರ್ನಾಟಕದ ಬುಡಕಟ್ಟು ಲಿಂಗಾನುಪಾತ ಗ್ರಾಮ ಮತ್ತು ನಗರ ಪ್ರದೇಶಗಳಲ್ಲಿ ನೋಡಿದಾಗ ಕ್ರಮವಾಗಿ 990 ಮತ್ತು 993, ಪ್ರತಿ ಸಾವಿರ ಪುರುಷರಿಗೆ, ಇಂತಹ ಬೆಳವಣಿಗೆಯು 1991 ರಿಂದ ಹೆಚ್ಚು ಪ್ರಗತಿಯಲ್ಲಿದೆ. ಈ ಅವಧಿಯಲ್ಲಿ ಬುಡಕಟ್ಟು ಲಿಂಗಾನುಪಾತ 961 ಪ್ರತಿ ಸ್ತ್ರೀಯರು 1000 ಪುರುಷರಿಗೆ.
 
ಕರ್ನಾಟಕದ ಬುಡಕಟ್ಟುಗಳ ಜೀವನ ಶೈಲಿ
ಕಾಲಕಾಲಕ್ಕೆ ಜಾರಿಯಾಗಿರುವ ಅರಣ್ಯ ಕಾಯ್ದೆಗಳು, ಸಂರಕ್ಷಣಾತ್ಮಕ ಕ್ರಮಗಳು ಮತ್ತು ಇತರೆ ಪೂರಕನೀತಿ ನಿಯಮಗಳಿಂದಾಗಿ, ಕರ್ನಾಟಕದ ಬಹುಪಾಲು ಬುಡಕಟ್ಟುಗಳು ನಿರ್ದಿಷ್ಟ ವಾಸಸ್ಥಾನದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಉದಾಹರಣೆಗೆ ಶಿವಮೊಗ್ಗ, ಮೈಸೂರು, ಉತ್ತರ ಈಶಾನ್ಯ ಅಥವಾ ಪಶ್ಚಿಮ ಜಿಲ್ಲೆಗಳಲ್ಲಿರುವ ಗೋಂಡಾ, ಗೌಡ್ಲು, ಕುಟ್ಟ ನಾಯಕನ್, ಹಸಲಾರು ಇವರುಗಳ ವಾಸ್ತವ್ಯಗಳು ಬಹುಪಾಲು ಸ್ಥಿತ್ಯಂತರದ ಸ್ಥಿತಿಗಳಲ್ಲಿದ್ದು ಇಲ್ಲಿರುವ ಅರಣ್ಯಸಂಪತ್ತು, ಭೂ ಪ್ರದೇಶಗಳನ್ನು ನಿರಂತರವಾಗಿ ಒಕ್ಕಲೆಬ್ಬಿಸುತ್ತಿರುವ ಪ್ರಕರಣಗಳು ಸರ್ವೇಸಾಮಾನ್ಯವಾಗುತ್ತಿರುವುದು ಒಂದು ಆತಂಕದ ಸ್ಥಿತಿಯೇ ಆಗಿದೆ.
 
ಭಾಷಾ ಸ್ಥಿತ್ಯಂತರತೆ
ಕೇರಳ ಮತ್ತು ತಮಿಳುನಾಡು ರಾಜ್ಯಗಳ ಗಡಿಗಳಲ್ಲಿರುವ ಮೈಸೂರು ಜಿಲೆಯ ಹೆಗ್ಗಡದೇವನಕೋಟೆ, ಹುಣಸೂರು, ಚಾಮರಾಜನಗರ ಜಿಲ್ಲೆಯ ಯಳಂದೂರು, ಗುಂಡ್ಲುಪೇಟೆ, ಕೊಳ್ಳೇಗಾಲ ಪ್ರಾಂತ್ಯಗಳಲ್ಲಿರುವ ಬುಡಕಟ್ಟು ಸಮುದಾಯಗಳ ಭಾಷೆ ಸಾಕಷ್ಟು ಸುಧಾರಿತವಾಗಿದ್ದು, ತಮಿಳು, ಮಲೆಯಾಳಿ ಹಾಗೂ ಕನ್ನಡ ಭಾಷೆಗಳೊಂದಿಗೆ ಸಂಮಿಲನಗೊಂಡು ಆಧುನೀಕರಣ ಪ್ರಕ್ರಿಯೆಗೆ ಹೊಂದಿಕೊಂಡಿವೆ. ಉತ್ತರ ಕನ್ನಡ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿರುವ ಬಿಲ್ಲರು ಸ್ಥಳೀಯ ಭಾಷೆಯನ್ನು ಮಾತನಾಡುತ್ತಾ, ಹೊಂದಾಣಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಯಾದಗಿರಿ ಮತ್ತು ಕೋಲಾರ ಜಿಲ್ಲೆಗಳಲ್ಲಿನ ಚೆಂಚು ಬುಡಕಟ್ಟುಗಳು ಪಕ್ಕದ ಆಂಧ್ರ ಪ್ರದೇಶದ ಪ್ರಭಾವಗಳಿಂದಾಗಿ ತೆಲುಗು ಮಿಶ್ರಿತ ಬುಡಕಟ್ಟು ಮತ್ತು ಕನ್ನಡ ಭಾಷೆಯನ್ನಾಡುವ ಶೈಲಿ ಹೊಂದಿದ್ದಾರೆ. ಕೊಪ್ಪಳ ಜಿಲ್ಲೆಯ ಪ್ರಾಂತ್ಯಗಳಲ್ಲಿ ಹರಡಿರುವ ಗ್ರಾಮೀಣ ಬುಡಕಟ್ಟಗಳು (ಇವರನ್ನು ಗಮಿಟ್, ಗವಿಟ್, ಮೌಚ್ಬಿ ಮತ್ತು ಪಂಡ್ವಿ) ಎಂಬ ಹೆಸರುಗಳಿಂದ ಕರೆಯಲಾಗಿದೆ. ಇವರು ತಮ್ಮ ಗಮಿತ್ ಭಾಷೆಯ ಬಳಕೆ ಜೊತೆಗೆ ಸ್ಥಳೀಯ ಭಾಷಾ ಸಂಪರ್ಕವನ್ನು ಪಡೆದಿದ್ದಾರೆ. ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿರುವ ಹಲವಾರು ಬುಡಕಟ್ಟುಗಳು ತುಳು ಭಾಷಾ ಮಾತನಾಡುವುದರ ಜೊತೆಗೆ ತಮ್ಮ ಮೂಲ ಭಾಷೆಯ ಸ್ಥಿತ್ಯಂತರತೆಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
 
ಸಾಮಾಜಿಕ - ಆರ್ಥಿಕ ಜೀವನಶೈಲಿ
ಕರ್ನಾಟಕದ ಬಹುಸಂಖ್ಯಾತ ಬುಡಕಟ್ಟುಗಳು ಸ್ಥಳೀಯವಾಗಿರುವ ಭೌಗೋಳಿಕ ವಾತಾವರಣ, ಆರ್ಥಿಕ ಸ್ಥಿತಿ, ಸಾಂಸ್ಕೃತಿಕ, ರಾಜಕೀಯ, ಧಾರ್ಮಿಕ ಹಿನ್ನೆಲೆಯನ್ನು ಹೊಂದಿದ್ದು, ಅವರೆಲ್ಲರೂ ಇತರೆ ಬಹುಸಂಖ್ಯಾತ ಸಮೂಹಗಳ ಸಂಪರ್ಕಗಳಿಂದ ಸಂಪೂರ್ಣವಾಗಿ ಮುಕ್ತರಾಗದೆ, ಪ್ರತ್ಯೇಕತೆಯನ್ನು ಹೊಂದದೆ; ಕಂದಾಯ ಗ್ರಾಮಗಳ ಸ್ವಾಯತ್ತತೆಯನ್ನು ಪಡೆದಿರುವ, ಪಡೆಯಲು ಪ್ರಯತ್ನಿಸುತ್ತಿರುವ ಜನಸಮುದಾಯಗಳೇ ಆಗಿವೆ. ಮೈಸೂರು ಜಿಲ್ಲೆ ಗಡಿ ಪ್ರದೇಶಗಳಾದ ಕೇರಳ ಪ್ರಾಂತ್ಯದ ಆದಿಯಾನ್ ಬುಡಕಟ್ಟುಗಳು ಕೃಷಿ ಕಾರ್ಮಿಕರಾಗಿದ್ದು, ಹೆಚ್ಚು ಬಡತನ ಮತ್ತು ಕಡಿಮೆ ಸಾಕ್ಷರತಾ ಮಟ್ಟ ಹೊಂದಿರುವ ಬುಡಕಟ್ಟು ಸಮೂಹವಾಗಿದೆ. ಹಾಗೆಯೇ ಮೈಸೂರು, ಕೊಡಗು ಮತ್ತು ಚಾಮರಾಜನಗರ ಜಿಲ್ಲೆಗಳ ಪ್ರಾಂತ್ಯದಲ್ಲಿ ಗುರ್ತಿಸಿಕೊಂಡಿರುವ ಹಿಂದಿನ ಪದಬಳಕೆ ಕುರುಂಬದಿಂದ ಈಗ ಕಟ್ಟು ನಾಯಕರ್ ಎಂಬ ಮೂಲ ಆದಿವಾಸಿಗಳು ಪ್ಲಾಂಟೇಷನ್ಗಳಲ್ಲಿ ದಿನಗೂಲಿ ಕಾರ್ಮಿಕರಾಗಿದ್ದಾರೆ. ಇವರು ಅಷ್ಟು ಸುಲಭವಾಗಿ ಇತರೆ ಬುಡಕಟ್ಟು ಸಮುದಾಯದವರೊಂದಿಗೆ ಸಂಪರ್ಕ ಪಡೆಯಲು ಇಚ್ಛಿಸುವುದಿಲ್ಲ. ಕರ್ನಾಟಕದ ಪಶ್ಚಿಮ ಘಟ್ಟಗಳಾದ ನಾಗರಹೊಳೆ ಮತ್ತು ಕಾಕನಕೋಟೆ ಅರಣ್ಯ ಪ್ರದೇಶಗಳಲ್ಲಿರುವ ಕಾಡುಕುರುಬ ಸಮುದಾಯವು ಅರಣ್ಯ ಉತ್ಪನ್ನ ಸಂಗ್ರಹಣೆ, ಹೈನು ಉತ್ಪನ್ನ ಮತ್ತು  ಹೈನು ಸಾಕಾಣಿಕೆ, ಕೆಲವೇ ಕುಟುಂಬಗಳು ಭೂ ಒಡೆಯರಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕೊಳ್ಳೆಗಾಲ ತಾಲ್ಲೂಕಿನಲ್ಲಿರುವ ಕಮ್ಮಾರ, ಕಮ್ಮಾರಿಕೆ, ಬಡಗಿ, ಕುಟುಂಬಗಳು ಕೃಷಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದನ್ನು ಕಾಣಬಹುದು.

ಗುಜರಾತ್ನಲ್ಲಿ ಭಾರತ ಸರ್ಕಾರದಿಂದ ಅಂಗೀಕೃತವಾಗಿ ಗುರ್ತಿಸಿಕೊಂಡಿರುವ ಕಾಥೋಡಿ ಎಂಬ ಮೂಲ ನಿವಾಸಿ ಬುಡಕಟ್ಟುಗಳು, ದಕ್ಷಿಣ ಭಾರತದ ತಮಿಳುನಾಡು, ಕೇರಳ, ಪಾಂಡಿಚೇರಿ ಮತ್ತು ಕರ್ನಾಟಕದ ಹಲವಾರು ಕಡೆಗಳಲ್ಲಿ ಹಂಚಿಕೆಯಾಗಿದ್ದು, ಸ್ಥಿರವಾಸ್ತವ್ಯವನ್ನು ಹೊಂದಿದ್ದಾರೆ. ಇವರು ಗ್ರಾಮ ಮತ್ತು ಪಟ್ಟಣಗಳ ಸಂಪರ್ಕದೊಂದಿಗೆ ಸಣ್ಣಪುಟ್ಟ ವ್ಯಾಪಾರಗಳಲ್ಲಿ ತೊಡಗಿದ್ದಾರೆ ಹಾಗೂ ವಾಣಿಜ್ಯಿಕ ಕೆಲಸ ಕಾರ್ಯಗಳಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಮಲೈಕುಡಿ ಎಂಬ ಬುಡಕಟ್ಟುಗಳು ಕರ್ನಾಟಕದ ಒಂದು ಜನಾಂಗೀಯ ಸಮೂಹವಾಗಿದ್ದು ಸಹ್ಯಾದ್ರಿ, ಪರ್ವತ ಶ್ರೇಣಿಯಲ್ಲಿ, ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕಂಡುಬಂದಿರುತ್ತಾರೆ. ಇವರ ಸಮಾಜೋ-ಆರ್ಥಿಕ ಜೀವನವು ಹೆಚ್ಚು ಸಂಪ್ರದಾಯವಾದಿಗಳು ಹಾಗೂ ತೋಟಗಳಲ್ಲಿ ದಿನಗೂಲಿ ಕಾರ್ಮಿಕರಾಗಿ ದುಡಿಯುತ್ತಾ ಇಂದಿಗೂ ಬಡತನದ ಸ್ಥಿತಿಯಲ್ಲಿರುವುದನ್ನು ಕಾಣಬಹುದು.
 
ಜಾಗತೀಕರಣ ಮತ್ತು ಬುಡಕಟ್ಟು ಸಮಸ್ಯೆಗಳು
  1. ಅರಣ್ಯ ಕಾನೂನುಗಳು ಮತ್ತು ಬುಡಕಟ್ಟು ಸ್ಥಾನಪಲ್ಲಟ
  2. ನೂತನ ಶೋಷಕ ವರ್ಗದ ಉದಯ
  3. ಪುನರ್ವರ್ಗೀಕರಣದ ಸಮಸ್ಯೆ
  4. ಪ್ರಾದೇಶಿಕ ಸ್ವಾಯತ್ತತೆ
  5. ಬುಡಕಟ್ಟುಗಳಲ್ಲದವರ/ಡೋಂಗಿ ಬುಡಕಟ್ಟುಗಳ ಪ್ರಭಾವಗಳು
  6. ಬುಡಕಟ್ಟುಗಳ ವಿರುದ್ಧ ದೌರ್ಜನ್ಯಗಳು
 
ಬುಡಕಟ್ಟುಗಳ ಸಮಾಜೋ-ಸಾಂಸ್ಕೃತಿಕ ಜೀವನದ ಮೇಲೆ ಜಾಗತೀಕರಣದ ಪ್ರಭಾವ
ಎಸ್.ಎಲ್.ದೇಷಿ - ಭಾರತೀಯ ಬುಡಕಟ್ಟುಗಳು ಅನುಭವಿಸುತ್ತಿರುವ ಸಾಮಾಜಿಕ ಬದಲಾವಣೆಯ ತೀಕ್ಷ್ಣ ವೇದನೆ ಹೊಸದೇನಲ್ಲ. ಈ ದೇಶದ ಮೂಲ ನಿವಾಸಿಗಳಾದ ಇವರು ಮೊದಲಿನಿಂದಲೂ ಅನೇಕ ಸಾಮ್ರಾಜ್ಯಗಳ ಉದಯ ಮತ್ತು ಅವನತಿಯನ್ನು ಕಂಡಿದ್ದಾರೆ. ಅನೇಕ ಯುದ್ಧಗಳಲ್ಲಿ ಸ್ಥಳೀಯ ಆಡಳಿತಗಾರರಿಗೆ ಬೆಂಬಲವಾಗಿ ಇಲ್ಲವೇ ಅವರ ಎದುರಾಳಿಯಾಗಿ ಭಾಗವಹಿಸಿದ್ದಾರೆ. ಹೀಗಾಗಿ ಸಮಾಜದ ಬದಲಾವಣೆ ಪ್ರಕ್ರಿಯೆಯು ಜಗತ್ತಿನಾದ್ಯಂತ ಬುಡಕಟ್ಟು ಜನರ ಜೀವನ ಸಂಗಾತಿಯೇ ಆಗಿದೆ ಎಂದಿದ್ದಾರೆ.
​
ಮ್ಯಾಲಿನೋವಸ್ಕಿಯವರ ಅಧ್ಯಯನದ ಟ್ರೊಬಿಯಾಂಡರ್ಸ್ರಾಗಲಿ, ಪ್ರಿಚರ್ಡ್ರವರ ಅಧ್ಯಯನದ ಆಫ್ರಿಕಾದ ಅಜೆಂಡಾಗಳಾಗಲಿ ಅಥವಾ ನ್ಯೂಯರ್ಸ್ರಾಗಲಿ ಇವರೆಲ್ಲರೂ ಆಧುನೀಕರಣ ಪ್ರಕ್ರಿಯೆಗೆ ಒಳಪಟ್ಟಿದ್ದಾರೆ, ಇವರ ಆರ್ಥಿಕ, ರಾಜಕೀಯ, ಧಾರ್ಮಿಕ ವ್ಯವಸ್ಥೆಗಳು ಬದಲಾಗಿದೆ. ಹಾಗೆಯೇ ಭಾರತೀಯ ಬುಡಕಟ್ಟುಗಳೂ ಸಹ ಸಾಮಾಜಿಕ-ಸಾಂಸ್ಕೃತಿಕ ಪರಿವರ್ತನೆಯ ಹೊಸ್ತಿಲಲ್ಲಿದ್ದಾರೆ. ಇಂದಿನ ಪರಿಸ್ಥಿತಿಯಲ್ಲಿ ಯಾವ ಬುಡಕಟ್ಟು ಸಮುದಾಯಗಳೂ ಪ್ರತ್ಯೇಕವಾಗಿರಲು ಸಾಧ್ಯವಿಲ್ಲ. ಒಂದಲ್ಲ ಒಂದು ರೀತಿಯಲ್ಲಿ ಇತರೆ ಸಮುದಾಯ ಮತ್ತು ಸಂಸ್ಕೃತಿಗಳೊಡನೆ ಸಂಪರ್ಕವನ್ನು ಹೊಂದಿರಲೇಬೇಕಾಗಿದೆ. ಈ ಸಂಪರ್ಕ ಸಾಂಸ್ಕೃತಿಕ ಬದಲಾವಣೆಯನ್ನುಂಟು ಮಾಡುತ್ತದೆ. ಪ್ರಸ್ತುತ ಅಧ್ಯಯನವು ಜಾಗತೀಕರಣ ಮತ್ತು ಬುಡಕಟ್ಟುಗಳ ಸಮಾಜೋ-ಸಾಂಸ್ಕೃತಿಕ ಜೀವನ ಶೈಲಿ ಇವುಗಳ ಪರಸ್ಪರತೆ, ಪರಿಣಾಮ ಮತ್ತು ಫಲಿತಾಂಶಗಳನ್ನು ಕೇಂದ್ರೀಕರಿಸಿ ಪ್ರಾಥಮಿಕ ಮತ್ತು ಮಾಧ್ಯಮಿಕ ಮಾಹಿತಿಯ ಮೇಲೆ ರಚಿತವಾಗಿದ್ದು, ಹತ್ತು ಹಲವು ಭಿನ್ನತೆಯ ಅಂಶಗಳನ್ನು ಕುರಿತಾಗಿ ವಿಶ್ಲೇಷಿಸಲಾಗಿದೆ.
 
ಕರ್ನಾಟಕದ ಬುಡಕಟ್ಟುಗಳ ಸಾಂಸ್ಕೃತಿಕ ಮತ್ತು ಧಾರ್ಮಿಕ ಆಚರಣೆಗಳ ಮೇಲೆ ಜಾಗತೀಕರಣದ ಪ್ರಭಾವ
ಸಿನಿಮಾ ಮತ್ತು ದೂರದರ್ಶನದ ಮೂಲಕ ಬುಡಕಟ್ಟುಗಳ ಕುಟುಂಬ ಮತ್ತು ಸಂಪ್ರದಾಯಗಳು ಬದಲಾಗುತ್ತಿರುವ ಬಗ್ಗೆ ದಕ್ಷಿಣ ಕರ್ನಾಟಕದ ಬುಡಕಟ್ಟು ಪ್ರದೇಶಗಳಾದ ಚಿಕ್ಕಮಗಳೂರು, ಚಿತ್ರದುರ್ಗ, ಬೆಂಗಳೂರು ನಗರ, ಮೈಸೂರು, ರಾಮನಗರ, ಚಾಮರಾಜನಗರ ಜಿಲ್ಲೆಗಳ ವ್ಯಾಪ್ತಿಯಲ್ಲಿರುವ ಮಲಸಾರ, ನಾಯಕ, ಪಾಳೆಗಾರ, ಕುರುಮಾಸ್, ಮಲೇರು ತೋಡಾ, ಸೋಲಿಗರು, ಬವಾಚ ಮುಂತಾದ ಶಿಕ್ಷಿತ ಬುಡಕಟ್ಟುಗಳ ಕುಟುಂಬಗಳು, ನಗರ, ಗ್ರಾಮಗಳ ನಿರಂತರ ಸಂಪರ್ಕ ಹೊಂದಿರುವವರು ಸಿನಿಮಾ ಮತ್ತು ದೂರದರ್ಶನ ವೀಕ್ಷಣೆಯ ಪ್ರಭಾವದಿಂದಾಗಿ ತಮ್ಮ ಸಾಮಾಜಿಕ ಸಂಸ್ಕಾರಗಳಲ್ಲಿ ಕೌಟುಂಬಿಕ ವಿಧಿವಿಧಾನಗಳಲ್ಲಿ ಆಧುನೀಕರಣದ ಪ್ರಭಾವವನ್ನು ಕಾಣಬಹುದಾಗಿದೆ. ಯಾದೃಚ್ಛಿಕ ನಮೂನೆ ವಿಧಾನವನ್ನು ಬಳಸಿಕೊಂಡು ಬೆಂಗಳೂರು ನಗರ, ರಾಮನಗರ ಹಾಗೂ ಮೈಸೂರು ಜಿಲ್ಲೆಗಳ ಪ್ರದೇಶಗಳಲ್ಲಿ ಹಂಚಿಕೆಯಾಗಿರುವ ಬುಡಕಟ್ಟುಗಳನ್ನು ಪ್ರಾಥಮಿಕ ಮಾಹಿತಿಗಾಗಿ ಅಧ್ಯಯನಕ್ಕೆ ಒಳಪಡಿಸಲಾಗಿದೆ.
Picture
ಅಧ್ಯಯನಕ್ಕಾಗಿ ಸಂಶೋಧಕರ ಕಾಲ, ದೈನಂದಿನ ಕಾರ್ಯ, ಅನುಕೂಲಕರ ಶ್ರಮ ಇವುಗಳನ್ನು ಗಮನದಲ್ಲಿರಿಸಿಕೊಂಡು ಬೆಂಗಳೂರು ನಗರ ವ್ಯಾಪ್ತಿಯಲ್ಲಿರುವ ಒಟ್ಟು ಮೂರು ಬುಡಕಟ್ಟುಗಳಿಂದ 90 ಕುಟುಂಬಗಳನ್ನು ರಾಮನಗರ ವ್ಯಾಪ್ತಿಯಲ್ಲಿರುವ ಎರಡು ಬುಡಕಟ್ಟುಗಳಲ್ಲಿ 125 ಕುಟುಂಬಗಳನ್ನು ಹಾಗೂ ಮೈಸೂರು ಜಿಲ್ಲಾ ವ್ಯಾಪ್ತಿಯ ಒಂದು ಬುಡಕಟ್ಟು ಸಮುದಾಯದ 25 ಕುಟುಂಬಗಳು ಒಟ್ಟು 250 ಕುಟುಂಬಗಳನ್ನು ಪ್ರಾಥಮಿಕ ಮಾಹಿತಿಗಾಗಿ ಆಯ್ಕೆ ಮಾಡಿಕೊಂಡು ಈ ಕೆಳಕಂಡ ವಿಶ್ಲೇಷಣೆ ಮಾಡಲಾಗಿದೆ.
Picture
Picture
ಆಯ್ಕೆ ಮಾಡಿಕೊಂಡಿರುವ ಬುಡಕಟ್ಟು ಸಮುದಾಯಗಳ ಕುಟುಂಬಗಳ ಸಂದರ್ಶಿತರನ್ನು ಭೇಟಿಮಾಡಿ ಸಂಗ್ರಹಿಸಿರುವ ಮಾಹಿತಿಯಂತೆ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಕಂಡು ಬಂದಿರುವ ಚೊದ್ರು, ಗೌಡ್ಲು ಮತ್ತು ಕುಟ್ಟ ನಾಯಕನ್ ಇವರುಗಳ 1) ಕುಟುಂಬ ಮತ್ತು ಧಾರ್ಮಿಕ ಸಂಪ್ರದಾಯಗಳ ಮೇಲೆ ಸಿನಿಮಾ ಮತ್ತು ಧಾರಾವಾಹಿಗಳು ಬದಲಾವಣೆ ಪ್ರಭಾವ ಬೀರಿವೆ ಎಂಬುದನ್ನು 132 (ಶೇ.52.8) ಕುಟುಂಬಗಳು ಹೌದು ಎಂದು ಒಪ್ಪಿಕೊಂಡಿವೆ. ಕಾರಣ ನಿರಂತರ ನಗರ ಸಂಪರ್ಕಗಳಿಂದಾಗಿ ಮೂಲ ಸಾಂಸ್ಕೃತಿಕ, ಧಾರ್ಮಿಕ ಸಂಪ್ರದಾಯಗಳನ್ನೂ ಪಾಲಿಸಲಾಗುತ್ತಿಲ್ಲ. ತಮ್ಮ ಮೂಲ ಮನರಂಜನೆಯನ್ನು ಕಳೆದುಕೊಳ್ಳುತ್ತಿರುವ ಇವರಿಗೆ ಸಿನಿಮಾ ಮತ್ತು ದೂರದರ್ಶನಗಳೇ ಪರ್ಯಾಯ ಮನರಂಜನಾ ಸಾಧನಗಳಾಗುತ್ತಿವೆ. ಉಳಿದಂತೆ ಮೈಸೂರಿನ ಜೇನು ಕುರುಬ, ರಾಮನಗರದ ಹಕ್ಕಿಪಿಕ್ಕಿ ಮತ್ತು ಇರುಳಿಗರಿಗೆ ಯಾವುದೇ ರೀತಿಯ ಪ್ರಭಾವ ಇಲ್ಲ ಎಂದು 118 (ಶೇ. 47.2) ಕುಟುಂಬಗಳು ತಿಳಿಸಿವೆ.

2) ಜಾಗತೀಕರಣದ ಪ್ರಕ್ರಿಯೆಗಳಾದ ಆಧುನೀಕರಣದಿಂದಾಗಿ ಬುಡಕಟ್ಟು ಆಚರಣೆಗಳು ಕಣ್ಮರೆಯಾಗುತ್ತಿವೆ ಎಂಬುದನ್ನು ಪ್ರಶ್ನಿಸಿ ಅವಲೋಕಿಸಿದಾಗ ಕಂಡುಬಂದಿರುವ ಪ್ರತಿಕ್ರಿಯೆಗಳೆಂದರೆ ಆಯ್ಕೆ ಮಾಡಿಕೊಂಡಿರುವ ಆರು ಬುಡಕಟ್ಟು ಸಮುದಾಯಗಳು ಒಟ್ಟು 80 ಕುಟುಂಬಗಳು (ಶೇ.32.00) ಯಾವುದೇ ಪ್ರತಿಕ್ರಿಯೆ ನೀಡಿರುವುದಿಲ್ಲ. ಕಾರಣ ಇದೂ ಅವರ ವೈಯಕ್ತಿಕ ಮತ್ತು ಸಾಮುದಾಯಿಕ ಸಂರಕ್ಷಣೆಗೆ ಅಡಚಣೆಯಾಗಬಹುದೆಂಬ ಪೂರ್ವಾಲೋಚನೆಯಿಂದಾಗಿ ಪ್ರತಿ ಉತ್ತರ ನೀಡಿರುವುದಿಲ್ಲ. ಉಳಿದಂತೆ 40 (ಶೇ. 16.00) ಕುಟುಂಬಗಳು ವಿವಾಹದ ಮೇಲೆ ಹಳೆಯ ಆಚರಣೆಗಳು ಕಣ್ಮರೆಯಾಗುತ್ತಿವೆ ಎಂದರೆ, ಧಾರ್ಮಿಕ ಸಂಸ್ಕಾರಗಳು ಆಧುನೀಕರಣಗೊಳ್ಳುತ್ತಿವೆ ಎಂಬುವವರು 20 (ಶೇ. 08.00) ಕುಟುಂಬಗಳು. ಬಹುಮುಖ್ಯವಾಗಿ ಬೆಂಗಳೂರು ನಗರ ಮತ್ತು ರಾಮನಗರ ವ್ಯಾಪ್ತಿಯಲ್ಲಿರುವ ಬುಡಕಟ್ಟುಗಳಲ್ಲಿ ಜನನ-ಮರಣಗಳಿಗೆ ಸಂಬಂಧಿಸಿದಂತೆ ಯಾವುದೇ ಹಳೆಯ ಕಾಲದ ಸಂಪ್ರದಾಯಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿಲ್ಲ ಮತ್ತು ಕ್ರಮೇಣ ಆಧುನೀಕರಣಗೊಳ್ಳುತ್ತಿವೆ ಎಂದು ಹೇಳುವ ಕುಟುಂಬಗಳು 50 (ಶೇ.2.00). ಇನ್ನೂ ಸಾಂಸ್ಕೃತಿಕ ಚಟುವಟಿಕೆಗಳು, ಜಾನಪದೀಯ ಕಲೆ, ನೃತ್ಯ, ಮತ್ತಿತರೆಗಳು ಕಣ್ಮರೆಯಾಗುತ್ತಿವೆ ಎನ್ನುವ ಕುಟುಂಬಗಳು 45 (ಶೇ. 18.00). ಕೃಷಿಗೆ ಸಂಬಂಧಿಸಿದಂತೆ, ಕೃಷಿ ಚಟುವಟಿಕೆಗಳ ಮೇಲೆ ಜಾಗತೀಕರಣ ಪ್ರಭಾವವಾಗುತ್ತಿವೆ ಎನ್ನುವ ಕುಟುಂಬಗಳು 15 (ಶೇ.6.00).

3) ಬುಡಕಟ್ಟು ಸಂಪ್ರದಾಯಗಳ ಆಚರಣೆಗಳ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತಿರುವ ಹೊಸ ತಲೆಮಾರುಗಳು ಇಲ್ಲ ಎನ್ನುವವರು 122 (ಶೇ.48.8). ಹೌದು ಎನ್ನುವವರು 128 (ಶೇ.51.2). ಕಾರಣ ನಿರಂತರ ನಗರೀಕರಣ, ವಲಸೆ, ಸಾರಿಗೆ-ಸಂಪರ್ಕಗಳ ಸಾಧನಗಳಿಂದಾಗಿ ಮೂಲ ಬುಡಕಟ್ಟು ಸಂಪ್ರದಾಯಗಳು ಬದಲಾದ ದಿನಗಳಲ್ಲಿ ಆಚರಣೆಗೆ ಒಳಪಡಿಸುವುದು ಒಂದು ಸವಾಲೇ ಸರಿ. ಇದರಿಂದಾಗಿ ಹೊಸ ತಲೆಮಾರುಗಳಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿರುವುದು ಸರ್ವೇ ಸಾಮಾನ್ಯ. ಇಂತಹ ಕುಟುಂಬಗಳು ಹೌದು ಎಂದು 128 (ಶೇ.51.2) ಹೇಳಿದರೆ, ಏನೇ ಆಧುನೀಕರಣಗೊಂಡರೂ, ವಲಸೆಗಳಲ್ಲಿ ಸಿಲುಕಿದರೂ, ನಮ್ಮ ಮೂಲ ಪುರುಷರ, ಜನಾಂಗದ ಆಚರಣೆಗಳ ಬಗ್ಗೆ ಆಸಕ್ತಿ ಕಳೆದುಕೊಳ್ಳುವುದಿಲ್ಲಾ ಎನ್ನುವ ಕುಟುಂಬಗಳು 122 (ಶೇ.48.8). ಇವರು ಬಹುಪಾಲು ಮೈಸೂರಿನ ಜೇನು ಕುರುಬ ಮತ್ತು ರಾಮನಗರದ ಬೆಟ್ಟದ ತಪ್ಪಲಿನಲ್ಲಿರುವ ಇರುಳಿಗರು. ಹೌದು ಎನ್ನುವರು ಗೌಡ್ಲು, ಚೊದ್ರು ಮತ್ತು ಕುಟ್ಟು ನಾಯಕನ್ ಇವರುಗಳು ಈಗಾಗಲೇ ನಗರಗಳಲ್ಲಿ ಲೀನವಾಗಿರುತ್ತಾರೆ.
​
4) ಯಾವ ಕಾರಣಗಳಿಗಾಗಿ ಯುವ ಪೀಳಿಗೆಗಳು ಧಾರ್ಮಿಕ ಆಚರಣೆಗಳ ಮೇಲೆ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ ಎಂಬುದನ್ನು ವಿಶ್ಲೇಷಿಸಿದರೆ ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡದ ಕುಟುಂಬಗಳು 62 (ಶೇ.24.8). ಹಳೆಯ ಆಚರಣೆಗಳನ್ನು ಅನ್ವಯಿಸುವುದಿಲ್ಲ ಎನ್ನುವ ಚೂದ್ರು, ಗೌಡ್ಲು ಮತ್ತು ಕುಟ್ಟನಾಯಕನ್ ಕುಟುಂಬದವರ ಸಂಖ್ಯೆ 35 (ಶೇ. 14.00). ಇವರು ಹೊಸ ಜೀವನಕ್ಕೆ ಹೊಂದಾಣಿಕೆಯಾಗಿರುವ ಕುಟುಂಬಗಳು 32 (ಶೇ.12.8). ಹೊಸ ಆಚರಣೆಗಳನ್ನು ಸ್ವೀಕರಿಸಲು ಕೀಳರಿಮೆ ಭಾವನೆ ವ್ಯಕ್ತಪಡಿಸಿರುವ ಇರುಳಿಗಾ ಮತ್ತು ಜೇನುಕುರುಬರ ಕುಟುಂಬಗಳ ಸಂಖ್ಯೆ 36 (ಶೇ. 14.4) ಮತ್ತು ಇದೇ ಬುಡಕಟ್ಟು ಸಮುದಾಯಗಳು ನವೀನ ಜೀವನಶೈಲಿಯನ್ನು ಹೊಂದಿಕೆ ಮಾಡಿಕೊಳ್ಳಬೇಕಾದರೆ ನನಗೆ ಹೆಚ್ಚು ದುಬಾರಿ [ಅಂದರೆ ಖರ್ಚು-ವೆಚ್ಚಗಳ, ಶ್ರಮ, ಕಾಲ ವ್ಯಯವಾಗುತ್ತದೆ] ಎನ್ನುವ ಕುಟುಂಬಗಳು 40 (ಶೇ.16.00). ಹಳೆಯದನ್ನು ಕೈಬಿಡಲಾಗದು ಮತ್ತು ಹೊಸದನ್ನು ಸ್ವೀಕರಿಸಲಾಗದಿರುವರ ಜೊತೆಗೆ ಕೀಳರಿಮೆ ಭಾವನೆ ಬೆಳೆಸಿಕೊಂಡಿರುವವರ ಕುಟುಂಬಗಳು ಹಕ್ಕಿಪಿಕ್ಕಿ, ಇರುಳಿಗಾ ಮತ್ತು ಜೇನುಕುರುಬರು 45 (ಶೇ. 18.00). ಅಂದರೆ ಜಾಗತೀಕರಣದ ಪ್ರಭಾವ ಸಮಾಜೋ-ಸಾಂಸ್ಕೃತಿಕ ಅಂಶಗಳ ಮೇಲೆ ಯಾವ ಪ್ರಮಾಣದಲ್ಲಿದೆ ಎಂಬುದೆಂದರೆ ಇದು ನಮಗೆ ಅನ್ವಯಿಸುವುದಿಲ್ಲ ಎನ್ನುವರು ಗರಿಷ್ಟ ಪ್ರಮಾಣದ ಕುಟುಂಬ ಶೇ.36 (14.4). ಅತಿ ಕಡಿಮೆ ಪ್ರಮಾಣದ 32 (ಶೇ. 12.8) ಕುಟುಂಬಗಳು ಮಾತ್ರ ಹೊಸ ಜೀವನಶೈಲಿಗೆ ಹೊಂದಾಣಿಕೆಯಾಗುತ್ತಿದ್ದಾರೆ ಎನ್ನುವುದನ್ನು ಈ ಅಧ್ಯಯನದಲ್ಲಿ ಕಾಣಬಹುದಾಗಿದೆ.

Picture
ಜಾಗತೀಕರಣವು ಜಗತ್ತಿನ ಪ್ರತಿ ಸಮುದಾಯಗಳ ಮೇಲೆ ಒಂದು ವಿಶೇಷ ಚಾಪು ಮೂಡಿಸುತ್ತಿದೆ. ಅಲ್ಲದೆ ಇದಕ್ಕೂ ಮುನ್ನ ಬದಲಾವಣೆ ಪ್ರಕೃತಿಯ ನಿಯಮ ಎಂಬಂತೆ ಕಾಲಾಂತರಗಳಲ್ಲಿ ಸಮುದಾಯಗಳಲ್ಲಿ ಅನೇಕ ಸ್ಥಿತ್ಯಂತರಗಳು ನಾಗರೀಕತೆಗಳ ಪ್ರಾರಂಭದಿಂದಲೂ ಘಟಿಸುತ್ತಿವೆ. ಇದಕ್ಕೆ ಪೂರಕವಾಗಿ ವಿಜ್ಞಾನ-ತಂತ್ರಜ್ಞಾನಗಳು, ಆಧುನಿಕತೆಯ ಭಿನ್ನ ರೂಪಗಳನ್ನು ಕಂಡುಕೊಂಡವು. ಇಂತಹ ರೂಪಗಳಲ್ಲಿ ಒಂದು ಹೊಸ ಪದ ಪ್ರಯೋಗವಾಗಿ 21ನೇ ಶತಮಾನದಲ್ಲಿ ಹೆಚ್ಚು ಪ್ರಭಾವಿತವಾಗಿರುವುದೇ ಜಾಗತೀಕರಣ ಪ್ರಕ್ರಿಯೆ, ಇದು ಎಲ್ಲಾ ನಾಗರೀಕ ಸಮಾಜಗಳಲ್ಲದೆ ಅನಾಗರೀಕತೆಯಿಂದ ವಿಕಸಿತಗೊಳ್ಳುತ್ತಿರುವ ಬುಡಕಟ್ಟು ಸಮುದಾಯಗಳ ಮೇಲೂ ಪ್ರಭಾವ ಬೀರತೊಡಗಿದೆ. ಇಂದೂ ಜಗತ್ತಿನಾದ್ಯಂತ ಭಾರತವನ್ನೂ ಒಳಗೊಂಡಂತೆ ಬುಡಕಟ್ಟು ಸಮುದಾಯಗಳು ಬದಲಾವಣೆಯತ್ತ, ಸಾಗುವ ಹಾದಿಯಲ್ಲಿವೆ. ತನ್ಮೂಲಕ ಶಿಕ್ಷಣ, ಅರಿವು, ಹಕ್ಕುಗಳಂತಹ ಸಾಧನಗಳಿಂದ ನಾಗರೀಕ ಸಮಾಜದ ಮುಖ್ಯವಾಹಿನಿಗೆ ಗುರ್ತಿಸಿಕೊಳ್ಳುವಂತಹ ದಾವಂತದಲ್ಲಿವೆ ಎಂದರೆ ತಪ್ಪಾಗಲಾರದು. ಈ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ಜೀವನಶೈಲಿ ಹೇಗೆ ಜಾಗತೀಕರಣದ ಪ್ರಕ್ರಿಯೆಗೆ ಹೊಂದಿಕೊಳ್ಳುತ್ತಿದೆ ಎಂಬುದನ್ನು ಅವಲೋಕಿಸಿದಾಗ ಕಂಡುಬಂದಿರುವ ಪ್ರತಿಕ್ರಿಯೆಗಳೆಂದರೆ, ಆಯ್ಕೆ ಮಾಡಿಕೊಂಡಿರುವ ಆರು ಬುಡಕಟ್ಟು ಸಮುದಾಯಗಳಲ್ಲಿ ಜೀವನಶೈಲಿ ಮಾರ್ಪಾಡಾಗುತ್ತಿದೆ ಎನ್ನುವ ಗರಿಷ್ಠ ಪ್ರಮಾಣದ 80 ಶೇ 32.00 ಕುಟುಂಬಗಳು ಕಂಡುಬಂದರೆ, ನಿರ್ದಿಷ್ಟವಾಗಿ ವ್ಯಾಖ್ಯಾನಿತವಾಗಿರದ ಎಲ್ಲಾ ಭಿನ್ನ ಅಂಶಗಳಲ್ಲಿ ಸೇರ್ಪಡೆಯಾಗಿರುವ ಜೀವನಶೈಲಿಯ ಅಂಶಗಳು ಕನಿಷ್ಠ 33 (ಶೇ. 13.02) ಕುಟುಂಬಗಳ ಪ್ರತಿಕ್ರಿಯಿಸಲಾಗಿದೆ.
Picture
ಜಾಗತೀಕರಣ ಪ್ರಭಾವ ಬುಡಕಟ್ಟು ಸಮುದಾಯಗಳು ರೂಢಿಸಿಕೊಂಡಿರುವ ತಮ್ಮದೇ ಆದ ಸಾಂಸ್ಕೃತಿಕ ಮೌಲ್ಯದ ಆಚರಣೆಗಳಾದ ನಡತೆಯ ಕ್ರಮಗಳು, ವಿಭಕ್ತತೆ, ಸಾಮೂಹಿಕ ಪ್ರಜ್ಞೆ, ಬಡತನ, ಮದ್ಯಪಾನೀಯತೆ ಮತ್ತು ಸ್ವಾರ್ಥತತೆ ಹಾಗೂ ಇತರೆ ಕಾರಣಗಳಿಂದಾಗಿ ತಮ್ಮ ಮೂಲ ಸ್ವರೂಪ ಬದಲಿಸಿಕೊಳ್ಳುತ್ತಿವೆ ಎಂಬುದನ್ನು ಕುರಿತು ಪ್ರತಿವರ್ತಿಗಳಿಂದ ಮಾಹಿತಿ ಸಂಗ್ರಹಣೆ ಮಾಡಿದಾಗ ಕಂಡುಬಂದಿರುವ ಅಂಶಗಳೆಂದರೆ, ಇರುಳಿಗ, ಹಕ್ಕಿಪಿಕ್ಕಿ ಮತ್ತು ಜೇನು ಕುರುಬ ಸಮುದಾಯಗಳ ಕುಟುಂಬಗಳು 62 ಶೇ (24.08) ಯಾವುದೇ ಬದಲಾವಣೆ ಜಾಗತೀಕರಣದಿಂದ ಆಗಿಲ್ಲ ಎಂದರೆ, ಗೌಡ್ಲು, ಚೋದ್ರು ಮತ್ತು ಕುಟ್ಟಾನಾಯಕನ್ ಬುಡಕಟ್ಟುಗಳಲ್ಲಿ ವರ್ತನೆಯಲ್ಲಿ ಬದಲಾವಣೆ ಆಗಿದೆ ಎಂದು 48 ಶೇ (19.02) ಕುಟುಂಬಗಳು, ವಿಭಕ್ತ ಕುಟುಂಬಗಳ ವಿಸ್ತರಣೆ 33 (ಶೇ. 13.2) ಕುಟುಂಬಗಳ ಅಭಿಪ್ರಾಯಪಡುತ್ತಾರೆ. ಉಳಿದಂತೆ ಬಡತನ, ಸ್ವಾರ್ಥತತೆ, ಮದ್ಯಪಾನೀಯತೆ ಮತ್ತಿತರೆ ಕಾರಣಗಳಿಂದಾಗಿ ಬುಡಕಟ್ಟು ಮೌಲ್ಯಗಳು ಕಣ್ಮರೆಯಾಗುತ್ತಿವೆ ಎನ್ನುವ ಅಭಿಪ್ರಾಯವನ್ನು ಇರುಳಿಗಾ ಹಕ್ಕಿಪಿಕ್ಕಿ ಮತ್ತು ಜೇನುಕುರುಬಗಳಲ್ಲಿ ಕಾಣಬಹುದಾಗಿದೆ. ಬುಡಕಟ್ಟು ಸಮುದಾಯಗಳಲ್ಲಿನ ಸಂಸ್ಕೃತಿ ಮತ್ತು ಧಾರ್ಮಿಕ ಅಂಶಗಳು ಪರಸ್ಪರ ಪೂರಕವಾಗಿವೆ. ಈ ಹಿನ್ನೆಲೆಯಲ್ಲಿ ಜಾಗತೀಕರಣ ಇವುಗಳ ಮೇಲೆ ಯಾವ ಪ್ರಮಾಣದಲ್ಲಿ ಹೇಗೆ ಪ್ರಭಾವಿತವಾಗಿದೆ ಎಂಬುದರ ವಿಶ್ಲೇಷಣೆಯೇ ಈ ಅಧ್ಯಯನದ ಮುಖ್ಯ ಉದ್ದೇಶವಾಗಿದೆ.
 
ಬುಡಕಟ್ಟುಗಳ ಮೇಲೆ ಜಾಗತೀಕರಣದ ಪ್ರಭಾವದ ಪ್ರತಿರೋಧಕ್ಕೆ ಸಲಹೆ ಮತ್ತು ಕೌಶಲ್ಯಗಳು
ಪ್ರಸ್ತುತ ಅಧ್ಯಯನವು ತಿಳಿಸಿರುವಂತೆ ಕರ್ನಾಟಕದ ಬುಡಕಟ್ಟು ಸಮುದಾಯಗಳ ಮೇಲೆ ಜಾಗತೀಕರಣ ಪ್ರಕ್ರಿಯೆಯು ಯಾವುದೇ ಭಿನ್ನಾಭಿಪ್ರಾಯಗಳಿಲ್ಲದೆ ಪ್ರತಿಕೂಲ (ಜೀವನೋಪಾಯದ) ಪರಿಣಾಮವನ್ನುಂಟುಮಾಡಿದೆ. ಜಾಗತೀಕರಣ ನೀತಿಯಿಂದಾಗಿ ಹೊಸ ಆರ್ಥಿಕ ಚಿಂತನೆ, ಅಭಿವೃದ್ಧಿ ಯೋಜನೆಗಳು, ಬುಡಕಟ್ಟುಗಳ ವಾಸ್ತವ್ಯವನ್ನು ಒಕ್ಕಲೆಬ್ಬಿಸುತ್ತಿವೆ. ಜೀವನೋಪಾಯಕ್ಕೆ ಮತ್ತು ಜೀವನೋದ್ಧಾರಕ್ಕೆ ಮೂಲವಾಗಿರುವ ಭೂಮಿಯ ಒಡೆತನ, ಸಾಗುವಳಿ, ಅರಣ್ಯ ಸಂಪತ್ತು, ಬಳಕೆಯ ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ಖಾಸಗಿ ಭೂ ಮಾಲೀಕರು, ಖಾಸಗಿ ವಲಯಗಳ ಸ್ಥಾಪನೆಯಿಂದಾಗಿ, ಜೀವನ ನಿರ್ವಹಣೆಗೆ ಬೇರೆ ದಾರಿಯಿಲ್ಲದೆ ಬಡತನದಲ್ಲಿಯೇ ಮುಂದುವರಿಯುವ ಸ್ಥಿತಿಯಲ್ಲಿದ್ದಾರೆ.

ಕೃಷಿಭೂಮಿಯು ವಾಣಿಜ್ಯ ಭೂಮಿಯಾಗಿ ಪರಿವರ್ತಿತವಾಗುತ್ತಿದ್ದು, ನಗರ ಪಟ್ಟಣಗಳ ವಿಸ್ತರಣೆ ನಿರಂತರವಾಗುತ್ತಿದೆ. ನಿರುದ್ಯೋಗದ ಸಮಸ್ಯೆ ಸೃಷ್ಟಿಯಾಗುತ್ತಿದ್ದು, ಆಧುನಿಕ ಉದ್ಯೋಗಗಳನ್ನು ಸ್ವೀಕರಿಸಲು ಸಾಧ್ಯವಾಗದಿರುವ ಅಥವಾ ಆಧುನಿಕ ಕೌಶಲ್ಯಗಳನ್ನು ರೂಢಿಗತ ಮಾಡುವಲ್ಲಿ ಹೆಚ್ಚು ಪ್ರಯಾಸವನ್ನು ಅನುಭವಿಸುತ್ತಿದ್ದಾರೆ.

ಭಾರತ ಸರ್ಕಾರವು ರೂಪಿಸಿರುವ ಜಾಗತೀಕರಣದ ನೀತಿಯು ಬುಡಕಟ್ಟು ಸಮುದಾಯಗಳಿಗೆ ಕೆಟ್ಟ ಮತ್ತು ಮಾರಕ ಪರಿಣಾಮವನ್ನುಂಟುಮಾಡುತ್ತಿದೆ. ಸ್ವಾಭಾವಿಕವಾಗಿರುವ ಪ್ರಶ್ನೆ ಏನೆಂದರೆ ಹೇಗೆ ಬುಡಕಟ್ಟುಗಳು ಅವರ ಜೀವನ ಸಂಸ್ಕೃತಿ, ಜೀವನೋಪಾಯಗಳು ಮತ್ತು ಜಾಗತೀಕರಣವನ್ನು ಎದುರಿಸುತ್ತಾರೆ ಎಂಬುದೇ ಆಗಿದೆ. ಅಲ್ಲದೆ ಪ್ರಸ್ತುತತೆಯಲ್ಲಿ ಜಾಗತೀಕರಣಕ್ಕೆ ಪ್ರತಿರೋಧವನ್ನೊಡ್ಡುವುದಕ್ಕೆ ಇರುವ ಪರ್ಯಾಯ ಮಾರ್ಗಗಳನ್ನು ಹೇಗೆ ರೂಪಿಸಿಕೊಳ್ಳುತ್ತಾರೆ. ಇಂತಹ ಪ್ರಶ್ನೆಗಳಿಗೆ ಈ ಅಧ್ಯಯನವು ಸಮರ್ಪಕ ಮತ್ತು ಸೂಕ್ತವಾದ ಉತ್ತರವನ್ನು ಕಂಡುಕೊಳ್ಳುವ ಪ್ರಯತ್ನ ಮಾಡಿದೆ. ಬುಡಕಟ್ಟು ಜನರೇ ಇಂತಹ ಪ್ರಶ್ನೆಗಳಿಗೆ ಅಭಿಪ್ರಾಯಗಳನ್ನು ನೀಡಿರುತ್ತಾರೆ. ಸಂದರ್ಶನ ಮತ್ತು ಏಕ ಘಟಕ ಅಧ್ಯಯನಗಳ ಮೂಲಕ ದತ್ತಾಂಶಗಳನ್ನು ಮಾಹಿತಿ ಸಂಗ್ರಹಣೆಯ ಮೂಲಕ ಮಾಡಲಾಗಿದೆ. ಅವರುಗಳು ನೀಡಿರುವ ಮಾಹಿತಿ ಮತ್ತು ದತ್ತಾಂಶಗಳ ವಿಶ್ಲೇಷಣೆ ಆಧಾರದ ಮೇಲೆ ಜಾಗತೀಕರಣದ ಪ್ರಭಾವಕ್ಕೆ ಪ್ರತಿರೋಧವನ್ನುಂಟುಮಾಡುವ ಕೆಲವು ಪರ್ಯಾಯ ಚಿಂತನ ಮಾರ್ಗಗಳ ಮತ್ತು ಸಲಹೆಗಳನ್ನು ಮಾಡಲಾಗಿದೆ ಅವುಗಳೆಂದರೆ,
  1. ಬುಡಕಟ್ಟುಗಳಿಗೆ ಭೂಮಿಯನ್ನು ಹಂಚಿಕೆ ಮಾಡುವುದು.
  2. ಆದಿವಾಸಿ ಅರಣ್ಯ ಕಾಯ್ದೆ 2006 ಇದನ್ನು ಜಾರಿಗೊಳಿಸುವುದು.
  3. ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವುದು.
  4. ಪಡಿತರ ಅಂಗಡಿಗಳ ಮೂಲಕ ಅವಶ್ಯಕ ವಸ್ತುಗಳ ಪೂರೈಕೆ
  5. ಬುಡಕಟ್ಟು ಸಂಸ್ಕೃತಿಯನ್ನು ಸಂರಕ್ಷಿಸಿವುದು.
 
ಅಧ್ಯಯನದ ಫಲಿತಾಂಶಗಳು ಅಥವಾ ನಿರ್ಣಯಗಳು
ಅಧ್ಯಯನಕ್ಕೆ ಆಯ್ಕೆ ಮಾಡಿಕೊಂಡಿರುವ ಆರು ಬುಡಕಟ್ಟು ಸಮುದಾಯಗಳನ್ನು ಅವಲೋಕಿಸಿ, ನಮೂನೆಗೆ ಆಯ್ಕೆ ಮಾಡಿಕೊಂಡಿರುವ 250 ಕುಟುಂಬಗಳ ಸಂದರ್ಶಿತರನ್ನು ಸಂದರ್ಶಿಸಿ, ಅವರುಗಳು ಅಭಿಪ್ರಾಯ ಹಾಗೂ ನೀಡಿರುವ ಮಾಹಿತಿಯನ್ನು ವಿಶ್ಲೇಷಿಸಿ ನೋಡಿದಾಗ ಕಂಡುಬಂದಿರುವ ನಿರ್ಣಯಗಳು;

1) ಬೆಂಗಳೂರು ನಗರ ವ್ಯಾಪ್ತಿಯಲ್ಲಿರುವ ಚೂದ್ರು, ಗೌಡ್ಲು, ಕುಟ್ಟಾನಾಯಕನ್ ಬುಡಕಟ್ಟುಗಳ ಜೀವನ ಶೈಲಿ, ಅವರ ಸಮಾಜೋ-ಸಾಂಸ್ಕೃತಿಕ ಜೀವನದಲ್ಲಿ ಸಾಧಾರಣ ಪ್ರಭಾವ ಕಂಡುಬಂದಿದೆ. ಕಾರಣ ಅವರಲ್ಲಿನ ಯುವ ಪೀಳಿಗೆಗಳು ಲಭ್ಯವಿರುವ ಶೈಕ್ಷಣಿಕ, ಆರ್ಥಿಕ ಅವಕಾಶಗಳ ಬಗ್ಗೆ ಗಮನಹರಿಸುತ್ತಿರುವುದನ್ನು ಕಾಣಬಹುದಾಗಿದೆ. ಏಕೆಂದರೆ ಈ ಸಮುದಾಯಗಳಿಗೆ ಮೂಲ ನೆಲೆಯನ್ನು ಕಂಡುಕೊಳ್ಳಲಾಗದೆ. ಅನಿವಾರ್ಯವಾಗಿ ಆಧುನೀಕರಣಕ್ಕೆ ಹೊಂದಿಕೆ ಮಾಡಬೇಕಾಗಿರುತ್ತದೆ.

2) ರಾಮನಗರ ಮತ್ತು ಮೈಸೂರು ಭಾಗದಲ್ಲಿನ ಹಕ್ಕಿಪಿಕ್ಕಿ ಇರುಳಿಗಾ ಮತ್ತು ಜೇನುಕುರುಬ ಸಮುದಾಯಗಳಿಗೆ ಜಾಗತೀಕರಣ ಯಾವುದೇ ಅನುಕೂಲಕರ ಪರಿಸ್ಥಿತಿಯನ್ನು ಮೂಡಿಸಿಲ್ಲ, ಬದಲಾಗಿ ಜೀವನವನ್ನು ಅತಂತ್ರ ಸ್ಥಿತಿಯತ್ತ ಸಾಗಿಸುತ್ತಿವೆ. ನಿರ್ದಿಷ್ಟ ನೆಲೆಯನ್ನು ಕಂಡುಕೊಳ್ಳಲಾಗದೇ ಅಲ್ಲಲ್ಲಿಯೇ ವಲಸೆಯಲ್ಲಿ ತೊಡಗಿದ್ದಾರೆ. ಬಹುಪಾಲು ಮಂದಿ ದಿನಗೂಲಿ ಕಾರ್ಮಿಕರಾಗಿ ಪೇಟೆಗಳತ್ತ ಮುಖಮಾಡಿದ್ದಾರೆ. ಬಡತನ, ನಿರುದ್ಯೋಗ, ಅನಾರೋಗ್ಯ ಮತ್ತು ಶಿಕ್ಷಣದಿಂದ ವಂಚಿನೆ ಸರ್ವೇ ಸಾಮಾನ್ಯವಾಗಿದೆ.

ಈ ಹಿನ್ನೆಲೆಯಲ್ಲಿ ಅಧ್ಯಯನದ ಫಲಿತಗಳು ಹಾಗೂ ಸಲಹೆಗಳು ಬುಡಕಟ್ಟು ಸಮುದಾಯಗಳ ಭವಿಷ್ಯದ ಸಂರಕ್ಷಣೆ ಮತ್ತು ಸಮಸ್ಯೆಗಳ ಪರಿಹಾರಕ್ಕೆ ತಾತ್ಕಾಲಿಕ ಮಾರ್ಗದರ್ಶನಗಾಗಿಯೇ ಅಥವಾ ಪರ್ಯಾಯ ಮಾರ್ಗಗಳಾಗಿಯೇ ಆಗಿರುತ್ತವೆ.

ಅ)  ಬುಡಕಟ್ಟುಗಳ ಜೀವನಶೈಲಿಗಳು, ಕಲೆ, ಕರಕುಶಲತೆ ಮತ್ತು ಧಾರ್ಮಿಕ ಆಚರಣೆಗಳನ್ನು ಸಂರಕ್ಷಿಸಬೇಕಾಗಿದೆ. ಇದಕ್ಕಾಗಿ ಬುಡಕಟ್ಟುಗಳ ಮೌಲ್ಯಗಳನ್ನು ಗುರ್ತಿಸುವಿಕೆ ಮತ್ತು ಅವರ ಸಂಸ್ಕೃತಿಯ ಬಗ್ಗೆ ಅಧ್ಯಯನಗಳು, ವಿಚಾರಗೋಷ್ಠಿಗಳು, ಸಂಕಿರಣಗಳು ತರಬೇತಿ ಕಾರ್ಯಕ್ರಮಗಳ ಮೂಲಕ ಸಮಾಜೋ-ಸಾಂಸ್ಕೃತಿಕ ಜೀವನ ಅಧ್ಯಯನದ ಅವಶ್ಯಕತೆ ಇದೆ.

ಆ)  ಬುಡಕಟ್ಟುಗಳ ಸಂಸ್ಕೃತಿ ಮತ್ತು ಸಾಂಸ್ಕೃತಿಕ ಪ್ರಕಾರಗಳನ್ನು ಶಾಲಾ ಪಠ್ಯಕ್ರಮಗಳಲ್ಲಿ ಸೇರ್ಪಡಿಸಿ ಶೈಕ್ಷಣಿಕ ವ್ಯವಸ್ಥೆ ಮೂಲಕ ಬುಡಕಟ್ಟುಗಳ ಸಂಸ್ಕೃತಿಯ ಸಂರಕ್ಷಣೆ ಸಾಧ್ಯವಿದೆ.

ಇ) ಬುಡಕಟ್ಟುಗಳ ವಾಸ್ತವದ ಪರಿಸರದ ಬಗ್ಗೆ ಪುನರ್ ವ್ಯಾಖ್ಯಾನ ಮಾಡಬೇಕಿದೆ. ಇದಕ್ಕಾಗಿ ಭೂಮಿ, ಮಣ್ಣು, ಮರಗಳು, ಅರಣ್ಯ ನೀರು ಮತ್ತು ಇತರೆ ಸ್ವಾಭಾವಿಕ ಸಂಪನ್ಮೂಲಗಳು ಇವರಿಗೆ ಲಭ್ಯವಾಗುವಂತೆ ಮುಕ್ತವಾಗಿರಿಸಬೇಕಾಗಿದೆ.

ಈ) ಅಭಿವೃದ್ಧಿ ಚಟುವಟಿಕೆಗಳು ಬುಡಕಟ್ಟುಗಳ ಸಾಂಪ್ರದಾಯಿಕ ಜೀವನ ಮತ್ತು ಸಂಸ್ಕೃತಿಗಳಿಗೆ ಅಡ್ಡಪರಿಣಾಮ ಉಂಟುಮಾಡದಂತೆ ನೋಡಿಕೊಳ್ಳಬೇಕಾಗಿದೆ.

ಉ) ಬುಡಕಟ್ಟಲ್ಲದವರಿಂದ ಉದ್ಯೋಗ, ಸ್ಥಾನಪಲ್ಲಟ, ಕೆಟ್ಟ ಮತ್ತು ಮಾರಕ ಪರಿಣಾಮವಾಗದಂತೆ ಹಾಗೂ ಇದಕ್ಕೆ ಪೂರಕ ಕಾನೂನುಗಳನ್ನು ಪುನರ್ ವ್ಯಾಖ್ಯಾನ ಮಾಡಬೇಕಾಗಿದೆ.
 
ಪರಾಮರ್ಶೆಗಳು
  1. Anthuvan, Victor Louis (2006), The Dynamics and the Impact of Globalization, Amirtham Publication, Madurai.
  2. Beteille, Andre, (1996), Caste, Class and Power, Changing Pattern of stratification in a Tanjore Village, Oxford, India.
  3. David James and John Desrochers CSC, (1998), Dimension of Globalization, Centre of Social Action, Bangalore.
  4. Dube SC, (1974), Antiquity to Modernity in Tribal  India, Vikas Publishing house, New Delhi.
  5. Demographic Status and Scheduled Tribe Population in India, (2013).
  6. Evans Pritchard, (1972), Social Anthropology, Rutledge and Kesan Paul Ltd. London.
  7. Ghosa Biswajit, (2011), Cultural Changes in Ear of Globalization.
  8. Mahesh SJ, (2014), Impact of Globalization on Weaker Section with Special reference to Tribal Community in Mysore District.
  9. Mujumdar D.N., (1974), An Introduction to Social Anthropology, Bombay.
  10. Sundaram V. (2006), Impact of Globalization on Indian Culture.
  11. Sushil Kumar Singh, (2011), Globalisation with Respect to its impact on Indian Culture.
  12. ಡಾ. ಚಿಂಗಾಮಣಿ, (1998), ಭಾರತೀಯ ಸಮಾಜದ ಸಮಾಜಶಾಸ್ತ್ರ, Archana Book House,Bangalore.
  13. ಡಾ.ಕೆ.ವಿ. ಕೃಷ್ಣಮೂರ್ತಿ, (2010), ಮಾನವಶಾಸ್ತ್ರ, Viswasri Publication,Kuvempunagara,Tumkur.
0 Comments



Leave a Reply.


    Categories

    All
    ಇತರೆ
    ಎನ್‍ಜಿಓ
    ಪರಿಸರ
    ವ್ಯಕ್ತಿಚಿತ್ರಗಳು
    ಸಂಪುಟ 1
    ಸಂಪುಟ 2
    ಸಂಪುಟ 3
    ಸಂಪುಟ 4
    ಸಂಪುಟ 5
    ಸಂಪುಟ 6
    ಸಂಪುಟ 7
    ಸಂಪುಟ 8
    ಸಂಪುಟ 9
    ಸಮಾಜಕಾರ್ಯ
    ಸಮುದಾಯ ಸಂಘಟನೆ


    Picture

    Social Work Learning Academy

    Join WhatsApp Channel

    Niruta Publications

    Social Work Foot Prints

    Leaders Talk

    Ramesha Niratanka

    Picture
    WhatsApp

    Picture

    MHR LEARNING ACADEMY

    Get it on Google Play store
    Download App
    Online Courses

    Picture
    50,000 HR PROFESSIONALS ARE CONNECTED THROUGH OUR NIRATHANKA HR GROUPS.
    YOU CAN ALSO JOIN AND PARTICIPATE IN OUR GROUP DISCUSSIONS.
    Join HR Online Groups


    RSS Feed

Niruta Publications Books List
File Size: 672 kb
File Type: pdf
Download File

Social Work Books
File Size: 116 kb
File Type: pdf
Download File

HR Books
File Size: 87 kb
File Type: pdf
Download File

General Books
File Size: 195 kb
File Type: pdf
Download File



SITE MAP


Site

  • HOME
  • ABOUT US
  • BLOG
  • COLLABORATE WITH NIRUTA PUBLICATIONS
  • HR BLOG
  • PUBLICATION WITH US
  • TRANSLATION & TYPING
  • VIDEOS
  • HR & EMPLOYMENT LAW CLASSES - EVERY FORTNIGHT

POSH

  • OUR ASSOCIATES
  • OUR CLIENTS
  • POSH
  • POSH BLOG​
  • WANT TO BECOME AN EXTERNAL MEMBER FOR AN IC?

NIRATHANKA

  • ​CSR
  • TREE PLANTATION PROJECT

OUR OTHER WEBSITES

  • WWW.HRKANCON.COM
  • WWW.MHRSPL.COM
  • WWW.NIRATANKA.ORG​

Subscribe


Picture
More Details

Copyright Niruta Publications 2021,    Website Designing & Developed by: www.mhrspl.com