ಭಾರತದಂತಹ ಬೃಹತ್ ರಾಷ್ಟ್ರದಲ್ಲಿ ಯಾವುದೇ ಒಂದು ಕಾಯಿದೆ/ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿ ಮಾಡುವುದು ಸುಲಭದ ಕೆಲಸವಲ್ಲ. ಸಂಪನ್ಮೂಲ, ನುರಿತ ತಜ್ಞರು ಮತ್ತು ತಾಂತ್ರಿಕತೆಯ ಲಭ್ಯತೆ ಎಷ್ಟೇ ಇದ್ದರೂ ಕೂಡ ಸಂಬಂಧಿಸಿದ ಯೋಜನೆಯ ಬಗ್ಗೆ ಶ್ರೀಸಾಮಾನ್ಯರಲ್ಲಿ ಅರಿವಿಲ್ಲದಿದ್ದಲ್ಲಿ ನಿಗದಿತ ಯೋಜನೆ ಯಶಸ್ವಿಯಾಗಲಾರದು. ಒಂದು ವೇಳೆ ಈ ಮೇಲಿನ ಅಂಶಗಳಿಂದ ಅಭಿವೃದ್ಧಿ ಸಾಧ್ಯವಾಗಿದ್ದರೆ ಅಥವಾ ದೇಶದ ಸ್ಥಿತಿಗತಿಗಳು ಬದಲಾಗುವಂತಿದ್ದರೆ "Incredible India" ಎಂಬ ಘೋಷಣೆಯನ್ನು ಇಂದು ನಾವು ಕೇವಲ ಜಾಹಿರಾತುಗಳಲ್ಲಿ ನೋಡುವಂತಹ ಸ್ಥಿತಿ ಬರುತ್ತಿರಲಿಲ್ಲ. ಮಕ್ಕಳ ಹಕ್ಕುಗಳ ಒಡಂಬಡಿಕೆಗೆ ಭಾರತ ಒಪ್ಪಿ ಸಹಿ ಮಾಡಿ ಸುಮಾರು 18 ವರ್ಷಗಳೇ ಸಂದಿವೆ. ಆದರೆ ಭಾರತದಲ್ಲಿರುವ ಮಕ್ಕಳ ಸ್ಥಿತಿಗತಿಗಳು ಹೇಳಿಕೊಳ್ಳುವಂತಹ ಸುಧಾರಣೆಯೇನನ್ನು ಕಂಡಿಲ್ಲ. ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿ, ಮಕ್ಕಳ ಶೋಷಣೆ ಮತ್ತು ಸಾಗಾಣಿಕೆಯ ನಿರ್ಮೂಲನೆಗಾಗಿ ಜಾರಿಗೆ ಬಂದ ಕಾನೂನುಗಳು ಕಡತಗಳಿಗೆ ಸೀಮಿತವಾಗಿವೆಯೇ ವಿನಃ ಪರಿಣಾಮಕಾರಿಯಾಗಿ ಜಾರಿಗೆ ಬರುತ್ತಿಲ್ಲ. ಅಸ್ತಿತ್ವದಲ್ಲಿರುವ ಕಾನೂನು ಮತ್ತು ಯೋಜನೆಗಳು ನೇರವಾಗಿ ನಿರ್ದಿಷ್ಟ ಪದ್ಧತಿಯನ್ನು ತೊಲಗಿಸುವ ಉದ್ದೇಶದಿಂದ ಜಾರಿಗೆ ಬಂದರೂ ಅವುಗಳ ತೀಕ್ಷ್ಣತೆ ಕೇವಲ ಕಡತಗಳಲ್ಲಿ ಕೇಳಿಬರುತ್ತಿದೆಯೇ ಹೊರತು ಆಚರಣೆಯಲ್ಲಿ ಅಲ್ಲ. ಕಾನೂನುಗಳು ಯಾವುದೇ ಪದ್ಧತಿಯನ್ನು ಖಂಡಿಸುವುದಕ್ಕಿಂತ ಅದರ ನಿರ್ಮೂಲನೆಗಾಗಿ ಪರ್ಯಾಯ ಮಾರ್ಗಗಳನ್ನು ಕಂಡುಕೊಂಡಲ್ಲಿ ಕಾನೂನಿನ ಉದ್ದೇಶ ಈಡೇರುವುದರ ಜೊತೆಗೆ ಸಮಾಜದಲ್ಲಿ ಬೇರುಬಿಟ್ಟಿರುವ ದುಷ್ಟ ಪದ್ಧತಿಗಳನ್ನು ಕಿತ್ತೊಗೆಯಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ "ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆ 2009 ಮತ್ತು ಭಾಗ್ಯಲಕ್ಷ್ಮಿ ಯೋಜನೆ"ಗಳು ಬಹಳ ಸೂಕ್ತವಾಗಿವೆ ಎನ್ನುವುದರಲ್ಲಿ ಎರಡು ಮಾತಿಲ್ಲ. 6-14 ವಯೋಮಾನದ ಪ್ರತಿಯೊಂದು ಮಗುವಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡುವ ಮುಖ್ಯ ಗುರಿಯನ್ನು ಹೊಂದಿರುವ ಈ ಕಾಯಿದೆಯ ಜೊತೆಗೆ ಬಾಲಕಾರ್ಮಿಕ, ಬಾಲ್ಯವಿವಾಹ, ಮಕ್ಕಳ ಸಾಗಾಣಿಕೆ ಮತ್ತು ದೌರ್ಜನ್ಯಗಳನ್ನು ತಡೆಯುವಂತಹ ಮಹದೋದ್ದೇಶವನ್ನೂ ಹೊಂದಿದೆ ಎಂದರೆ ಅತಿಶಯೋಕ್ತಿಯಾಗಲಾರದು. ಕಾರಣ 6-14 ವಯೋಮಾನದ ಎಲ್ಲಾ ಮಕ್ಕಳು ಶಾಲೆಯಲ್ಲಿದ್ದರೆ ಮಕ್ಕಳ ಹಕ್ಕುಗಳ ಉಲ್ಲಂಘನೆ ಮತ್ತು ಮಕ್ಕಳ ಮೇಲಾಗುವಂತಹ ದೌರ್ಜನ್ಯಗಳು ಮುಂದುವರೆಯಲು ಸಾಧ್ಯವಿಲ್ಲ. ಸಂವಿಧಾನದ 21(ಎ) ವಿಧಿಯ ಪ್ರಕಾರ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕಡ್ಡಾಯ ಶಿಕ್ಷಣ ನೀಡಬೇಕೆಂದಿದ್ದರೂ, ಇದು ಮಕ್ಕಳ ಮೂಲಭೂತ ಹಕ್ಕುಗಳಲ್ಲಿ ಒಂದಾಗಿದ್ದರೂ ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯಿದೆ ಲೋಕಸಭೆಯಲ್ಲಿ ಮಂಡಣೆಯಾಗಿ ಜಾರಿಗೆ ಬರಲು ಸುಮಾರು ಆರು ವರ್ಷಗಳೇ ಬೇಕಾದವು. ಈ ಕಾಯಿದೆ ಆಗಸ್ಟ್ 2009ರಲ್ಲಿಯೇ ಸಾಂಕೇತಿಕವಾಗಿ ಜಾರಿಯಾದರೂ ಸಹ ಇದರ ಪರಿಣಾಮಕಾರಿ ಜಾರಿ ಇನ್ನಷ್ಟೇ ಆಗಬೇಕಿದೆ. ಒಂದು ಕಡೆ ಕಾಯಿದೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಹಲವಾರು ಸಂಘಸಂಸ್ಥೆಗಳು ಶ್ರಮಿಸುತ್ತಿದ್ದರೆ ಮತ್ತೊಂದೆಡೆ ಕಾನೂನನ್ನು ಜಾರಿಗೆ ತರಬೇಕಿರುವ ಶಿಕ್ಷಣ ಸಂಸ್ಥೆಗಳೇ ಪ್ರಮುಖವಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳು ಇದನ್ನು ಉಲ್ಲಂಘಿಸುತ್ತಿವೆ. ಅಲ್ಲದೆ ಕೆಲ ಅವಕಾಶವಾದಿಗಳು ಇದಕ್ಕೆ ಅಡ್ಡಿಪಡಿಸುತ್ತಿರುವುದು ನಮ್ಮೆಲ್ಲರಿಗೂ ತಿಳಿದ ವಿಷಯವೇ, ಇದು ನಿಜಕ್ಕೂ ಖಂಡನೀಯವಾದದ್ದು.
ಈ ಕಾಯಿದೆಯಲ್ಲಿ 25%ರಷ್ಟು ಸೀಟುಗಳು ಸ್ಥಳೀಯ ಹಿಂದುಳಿದ ವರ್ಗಗಳಾದ ಎಸ್.ಸಿ/ಎಸ್.ಟಿ ಗೆ ಮೀಸಲು ಎಂದು ಸ್ಪಷ್ಟವಾಗಿ ತಿಳಿಸಿದ್ದರೂ ಸಹ ರಾಜ್ಯ ಸರ್ಕಾರಗಳು ಮತ್ತು ಖಾಸಗಿ ಶಾಲೆಗಳು ಈ ನೀತಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿರುವುದು ಕಾಯಿದೆಗೆ ಎಸಗಿರುವ ದೊಡ್ಡ ಅವಮಾನ. ಇನ್ನು 2009ರ ಶಿಕ್ಷಣ ಕಾಯಿದೆಯು 6ಕ್ಕಿಂತ ಕಡಿಮೆ ಮತ್ತು 14 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಮಕ್ಕಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿರುವುದು ಈ ಕಾಯಿದೆಯ ಬಹು ದೊಡ್ಡ ತೊಡಕು. ಒಮ್ಮೆ ಭಾರತವು ಮಕ್ಕಳ ಹಕ್ಕುಗಳ ಒಡಂಬಡಿಕೆಗೆ ಸಹಿ ಹಾಕಿದ ಮೇಲೆ ಮಕ್ಕಳ ನಡುವಿನ ಈ ರೀತಿಯ ಇಬ್ಬಗೆಯ ನೀತಿ ಅನುಸರಿಸುತ್ತಿರುವುದು ನಿಜಕ್ಕೂ ಮಕ್ಕಳ ಹಕ್ಕುಗಳಿಗೆ ಮಾಡುತ್ತಿರುವ ಅವಮಾನವೇ ಸರಿ. ಹೌದು, ವಿಶೇಷವಾಗಿ ಆರು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗಾಗಿಯೇ ಎಂದು "ಸಮಗ್ರ ಮಕ್ಕಳ ಅಭಿವೃದ್ಧಿ ಯೋಜನೆ" (ಐ.ಸಿ.ಡಿ.ಎಸ್)ಯು ಜಾರಿಗೊಳ್ಳುತ್ತಿದೆ, ಆದ ಕಾರಣ ಈ ಕಾಯಿದೆಯಲ್ಲಿ ಬಾಲವಾಡಿಗೆ ಹೋಗುವ ಮಕ್ಕಳ ಬಗ್ಗೆ ಚಿಂತಿಸುವ ಅವಶ್ಯಕತೆ ಇಲ್ಲವೆಂಬುದು ಕೆಲವರ ವಾದ. ಸರಿ ಇದನ್ನು ಒಪ್ಪೋಣ, ಆದರೆ ಇದರ ಜಾರಿಯಲ್ಲಿನ ಪರಿಣಾಮಕಾರಿತನದ ಬಗ್ಗೆ ಚಿಂತಿಸಿದಾಗ ಪ್ರಾಥಮಿಕ ಪೂರ್ವಶಿಕ್ಷಣದ ಆಗು-ಹೋಗುಗಳ ಬಗ್ಗೆಯೂ ಶಿಕ್ಷಣ ಕಾಯಿದೆಯಲ್ಲಿ ಚಿಂತಿಸುವ ಅವಶ್ಯಕತೆಯಿದೆ ಎಂದು ನಮಗರಿವಾಗುತ್ತದೆ. ಉಳಿದಂತೆ 14 ರಿಂದ 18ರ ವಯೋಮಾನದ ಮಕ್ಕಳ ಸಮಸ್ಯೆಯೇ ಬೇರೆ. ಈ ಕಾಯಿದೆಯಂತೆ ಕೇವಲ 14 ವರ್ಷ ಅಂದರೆ ಸರಿಸುಮಾರು 8ನೇ ತರಗತಿಯವರೆಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣದ ನಂತರ ಆ ಮಗುವಿನ ಭವಿಷ್ಯವೇನು? ಪ್ರಪಂಚದ ಯಾವ ರಾಷ್ಟ್ರ 8ನೇ ತರಗತಿ ವಿದ್ಯಾಭ್ಯಾಸ ಮಾಡಿದವರಿಗೆ ಉದ್ಯೋಗ ಭರವಸೆ ನೀಡುತ್ತಿದೆ? 8ನೇ ತರಗತಿಯವರೆಗೆ ವ್ಯಾಸಂಗ ಮಾಡಿದ ಯಾವ ವಿದ್ಯಾರ್ಥಿ ತಾನೇ ತನ್ನ ಜೀವನದ ಬಗ್ಗೆ ಒಂದು ಒಳ್ಳೆಯ ನಿರ್ಣಯ ತೆಗೆದುಕೊಳ್ಳಲು ಸಾಧ್ಯ? ಮತ್ತು ಇದೇ ಕಾಯಿದೆಯಲ್ಲಿ ತಿಳಿಸಿರುವಂತೆ ವಿದ್ಯಾಭ್ಯಾಸವನ್ನು 14 ರ ನಂತರವೂ ಮುಂದುವರೆಸುವವರಿಗೆ ಸಹಾಯ ಮಾಡಬಹುದೆಂದು "ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ" ಹೇಳಿದೆಯೇ ಹೊರತು ಖಚಿತವಾಗಿ ತಿಳಿಸಿಲ್ಲ. ಇದು ಈ ಕಾಯಿದೆಯ ಮತ್ತೊಂದು ಲೋಪವೆಂದರೆ ತಪ್ಪಾಗದು. ಒಂದು ವೇಳೆ ನಾವು ಲೋಪಗಳಿಲ್ಲದ ಕಾನೂನು ಮತ್ತು ಯೋಜನೆಗಳನ್ನು ಹುಡುಕುತ್ತಾ ಹೋದಲ್ಲಿ ಬಹುಶಃ ನಮಗೆ ಕಾನೂನುಗಳ ಕೊರತೆ ಎದ್ದು ಕಾಣಬಹುದು. ಲೋಪಗಳಿಂದ ಕೂಡಿದ ಕಾನೂನುಗಳಲ್ಲಿ ಬಹಳಷ್ಟು ಒಳ್ಳೆಯ ಅಂಶಗಳಿರುವುದು ನಮಗೆ ತಿಳಿದಿರುವ ಸತ್ಯ ಸಂಗತಿ. ಕಾಯಿದೆಯಲ್ಲಿರುವ ಲೋಪಗಳನ್ನೇ ಗಮನದಲ್ಲಿಟ್ಟುಕೊಂಡು ಕಾಯಿದೆಯನ್ನು ಟೀಕಿಸುತ್ತಾ ಕುಳಿತರೆ ಏನನ್ನೂ ಸಾಧಿಸಲಾಗುವುದಿಲ್ಲ. ಇದರ ಬದಲು ಅನೇಕ ಬಡವರ್ಗದ ಮತ್ತು ಮಕ್ಕಳ ಕನಸನ್ನು ನನಸು ಮಾಡಲು ಈಗ ತಾನೇ ಜಾರಿಗೆ ಬಂದಿರುವ ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯಿದೆಯನ್ನು ಆದರದಿಂದ ಸ್ವಾಗತಿಸಿ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಎಲ್ಲಾ ಮಕ್ಕಳು ಶಾಲೆಯಲ್ಲಿರುವಂತೆ ಮಾಡುವುದು ಪ್ರತಿಯೊಬ್ಬ ಜವಾಬ್ದಾರಿಯುತ ವ್ಯಕ್ತಿಯಾಗಿ, ಒಂದು ಜವಾಬ್ದಾರಿಯುತ ಸಂಸ್ಥೆಯಾಗಿ ಮಾಡಬೇಕಿರುವ ಕೆಲಸವೆಂದರೆ ಈ ಕಾನೂನಿನ ಬಗ್ಗೆ ಶ್ರೀ ಸಾಮಾನ್ಯರಲ್ಲಿ ಅರಿವನ್ನು ಮೂಡಿಸುವುದಾಗಿದೆ. ಜೊತೆಗೆ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಶಾಲೆಯಲ್ಲಿರಿವಂತೆ ಪೋಷಕರಲ್ಲಿ ಪ್ರಮುಖವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಅರಿವು ಮೂಡಿಸುವುದರ ಅನಿವಾರ್ಯತೆ ಇದೆ. ಶಾಲಾಭಿವೃದ್ಧಿ ಸಮಿತಿ ಹಾಗೂ ಶಿಕ್ಷಕರು ಕಾಯಿದೆಯನ್ನು ಉಲ್ಲಂಘಿಸದಂತೆ ಎಚ್ಚರವಹಿಸಬೇಕಿದೆ. ಈ ಕಾಯಿದೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಆತಂಕವಿರುವುದು ಖಾಸಗಿ ಶಿಕ್ಷಣ ಸಂಸ್ಥೆಗಳಿಂದ. ಆದ್ದರಿಂದ ಈ ಸಂಸ್ಥೆಗಳಿಗೆ ಕಾನೂನನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮತ್ತು ಜಾರಿಗೆ ತರುವಂತೆ ತಾಕೀತು ಮಾಡಬೇಕು. ತಪ್ಪಿದ್ದಲ್ಲಿ ಅಂತಹ ಶಿಕ್ಷಣ ಸಂಸ್ಥೆ ಮತ್ತು ಸಂಬಂಧಪಟ್ಟವರಿಗೆ ಕಠಿಣ ಶಿಕ್ಷೆಯನ್ನು ನೀಡಲು ಸರ್ಕಾರಗಳು ಕ್ರಮ ಕೈಗೊಳ್ಳುವಂತೆ ಮಾಡಬೇಕು. ಕೊನೆಯದಾಗಿ ಈ ಕಾಯಿದೆಯನ್ನು ಜನರ ಮತ್ತು ಮಕ್ಕಳ ಸ್ನೇಹಿ ಕಾನೂನನ್ನಾಗಿ ರೂಪಿಸಲು ಬೋಧಕ ವರ್ಗದವರಿಗೆ ಉತ್ತಮ ತರಬೇತಿ ಮತ್ತು ಶಾಲೆಗೆ ಬೇಕಿರುವ ಮೂಲಭೂತ ಅವಶ್ಯಕತೆಗಳನ್ನು ಸಮುದಾಯದವರೇ ಈಡೇರಿಸಿಕೊಳ್ಳಲು ಅವರನ್ನು ಸಂಘಟಿಸಿ ಮಾರ್ಗದರ್ಶನ ನೀಡುವ ಕೆಲಸ ಆಗಬೇಕಿದೆ. ಆದ ಕಾರಣ ಸಮಾಜದಲ್ಲಿರುವ ಹಲವಾರು ಅನಿಷ್ಟ ಪದ್ಧತಿಗಳನ್ನು ತೊಡೆದು ಹಾಕಲು ಮತ್ತು ಸಮಾಜದ ಏಳಿಗೆಗಾಗಿ ಅಸ್ಥಿತ್ವಕ್ಕೆ ಬಂದಿರುವ ಸಂಘಸಂಸ್ಥೆಗಳು ಹಾಗು ಜವಾಬ್ದಾರಿಯುತ ನಾಗರೀಕರಾದಂತಹ ನಾವುಗಳು ಪ್ರತಿಜ್ಞೆ ಮಾಡಬೇಕಿದೆ. ಗಂಗಾಧರ ಎನ್.ಜಿ.ಒ. ಕನ್ಸಲ್ಟೆಂಟ್, ಬೆಂಗಳೂರು
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
|
|
|
|
SITE MAP
SiteTRAININGJOB |
HR SERVICESOTHER SERVICESnIRATHANKA CITIZENS CONNECT |
NIRATHANKAPOSHOUR OTHER WEBSITESSubscribe |
MHR LEARNING ACADEMY
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|