ಪ್ರಿಯ ಬಂಧುಗಳೇ, ಹಿರಿಯವರಾದ ಡಾ.ದೊರೆಸ್ವಾಮಿಯವರೇ, ಡಾ. ಪ್ರಭುದೇವ ಅವರೇ, ಸ್ನೇಹಿತರಾದ ಪ್ರೊ. ಭೈರಪ್ಪನವರೇ, ಡಾ.ಬೈರೇಗೌಡರೇ, ಮತ್ತಿತರ ಹಿತವರೆ. ನಾನು ಮಾತನಾಡುವ ಅಗತ್ಯವಿಲ್ಲವೆಂದರೂ ನಾಲ್ಕಾರು ಮಾತು ಆಡಲೇಬೇಕಾಗಿದೆ. ನನ್ನ ಬಗ್ಗೆ ಬರೆದ ಈ ಕೃತಿಯು ತಯಾರಾಗುತ್ತಿದ್ದಂತೆಯೇ ಓದುತ್ತಾ ಹೋದೆ, ಮುಗಿದ ಮೇಲೆಯೂ ಓದಿದೆ. ಒಂದಾದ ಮೇಲೆ ಒಂದು, ಎರಡು ಪ್ರಶ್ನೆಗಳನ್ನು ಲೇಖಕರಿಗೆ ಹಾಕಿದೆ. ಈ ಪುಸ್ತಕದಲ್ಲಿ ಚಿತ್ರಿತವಾದ ವ್ಯಕ್ತಿ ನಾನೇ ಹೌದೇ? ಎಂಬುದು ನನ್ನ ಮೊದಲ ಪ್ರಶ್ನೆ. ಇದಕ್ಕೆ ಅವರ ಉತ್ತರ 'ಹೌದು' ಎಂದು. ಹಾಗಾದರೆ ನಾನು ಇದಕ್ಕೆ ಅರ್ಹನೇ? ಎಂಬುದು ನನ್ನ ಎರಡನೆಯ ಪ್ರಶ್ನೆ. ಇದಕ್ಕೂ ಅವರು ತುಂಬಾ ಔದಾರ್ಯದಿಂದ 'ಹೌದು' ಎಂದರು. ಆದರೆ, ಸಾಮಾನ್ಯವಾಗಿ ಪ್ರತಿಯೊಬ್ಬ ಮನುಷ್ಯನಲ್ಲಿ ಗುಣಗಳು ಇದ್ದಂತೆ ದೌರ್ಬಲ್ಯಗಳೂ ಇರುತ್ತವೆ. ಇಲ್ಲಿ ಚಿತ್ರಿತವಾದ ವ್ಯಕ್ತಿಯಲ್ಲಿ ದೌರ್ಬಲ್ಯಗಳು ಕಾಣಿಸುತ್ತಲೇ ಇಲ್ಲವಲ್ಲ, ಯಾಕೆ? ಆತ್ಮಚರಿತ್ರೆಯಲ್ಲಾಗಲೀ, ಇತರರು ಬರೆದ ವ್ಯಕ್ತಿ ಚರಿತ್ರೆಯಲ್ಲಾಗಲೀ ಗುಣ ದೌರ್ಬಲ್ಯಗಳ ಪ್ರಸ್ತಾಪವಿದ್ದರೂ ಪಾಶ್ಚಾತ್ಯ-ಪ್ರಾಚ್ಯ ಸಮಾಜ ಸಂಸ್ಕೃತಿಯ ಹಿನ್ನೆಲೆಯಲ್ಲಿ ನೋಡಿದಾಗ ಪಾಶ್ಚಾತ್ಯ ಬರಹಗಳಲ್ಲಿ ಹೆಚ್ಚು ವಾಸ್ತವತೆ ಕಂಡಂತೆ ದೌರ್ಬಲ್ಯಗಳನ್ನು ಆದಷ್ಟೂ ಕಾಣಿಸದಂತೆ ನೋಡಿಕೊಳ್ಳಲಾಗುತ್ತದೆ. ಹಾಗೆ ನೋಡಿದರೆ ಗಣ ದೌರ್ಬಲ್ಯಗಳು ನೋಡುಗರ, ಅರ್ಥೈಸಿಕೊಳ್ಳುವವರ, ಮನೋಪರಿಪಾಕವನ್ನು ಅವಂಬಿಸಿರುತ್ತದೆ. ಜೊತೆಗೆ, ಇವೆಲ್ಲವೂ ಸಾಪೇಕ್ಷವಾದ ಅಂಶಗಳೇ ಎಂಬುದು ತಮಗೆ ತಿಳಿದವುಗಳೇ. ನನ್ನ ಸಂದರ್ಶನ ಮಾಡಿದ ಪ್ರಸಂಗವನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಸಂದರ್ಭದಲ್ಲಿ ನಾನು ನನ್ನ ಜೀವನವನ್ನು Eernest Hemingway ಬರೆದ ಮುದುಕ ಮತ್ತು ಸಾಗರ ಅಥವಾ ಸಮುದ್ರ (‘The old man and the sea’) ಪುಸ್ತಕದಲ್ಲಿನ ವ್ಯಕ್ತಿಗೆ ಹಾಗೂ ಪ್ರಸಂಗಕ್ಕೆ ಹೋಲಿಸಿಕೊಂಡಿದ್ದೇನೆ. ಇದರ ಪ್ರಕಾರ ಮೀನು ಹಿಡಿಯಲು ಹೋದ ಮುದುಕನು ತಾನು ಹಾಕಿದ ಗಾಳಕ್ಕೆ ಸಿಕ್ಕ ದೊಡ್ಡ ಮೀನು ಅವನನ್ನು ಸಾಗರದಲ್ಲೆಲ್ಲಾ ಎಳೆದುಕೊಂಡು ಒಯ್ಯುತ್ತದೆ. ಮುದುಕನಿಗೆ ಖುಷಿಯೋ ಖುಷಿ ತನಗೆ ಬಹುದೊಡ್ಡ ಮೀನು ಸಿಕ್ಕಿದೆ ಎಂದು. ಮೀನಿನ ಸೆಳೆತಕ್ಕೆ ಸಿಕ್ಕು ಅವನ ಹಸ್ತಗಳು ರಕ್ತಸಿಕ್ತವಾಗುತ್ತವೆ. ಕೊಟ್ಟ ಕೊನೆಗೆ ಸಾಗರದ ದಡಕ್ಕೆ ತೇಲಿಸಿಕೊಂಡು ಹೋದ ಮೀನಿನ ಮನುಷ್ಯ ಕಂಡದ್ದೇನು? ಮೀನಿನ ಅಸ್ಥಿಪಂಜರ! ಅದರ ಮಾಂಸ, ರಕ್ತ, ಬೇರೆ ಪ್ರಾಣಿಗಳ ಒಡಲನ್ನೋ ಸಾಗರದ ಒಡಲನ್ನೋ ಸೇರಿ ಸೋರಿ ಹೋಗಿರುತ್ತವೆ. ಇದು ಅವನಿಗೆ ಸಹಜವಾಗಿಯೇ ಬಹು ದೊಡ್ಡ ಆಘಾತದ ಪರಿಣಾಮವೇ. ಸಮಾಜಕಾರ್ಯ ಸಾಗರದ ನನ್ನ ಯಾತ್ರೆಯ ಕೊನೆಗೆ ದೊರೆತ ಪರಿಣಾಮವೇನೋ ಇದು ಅನ್ನಿಸುತ್ತದೆ. ಇದು ನನ್ನ ಜೀವನದ ಮೊದಲ ಘಟ್ಟ. ನನ್ನ ಕೃತಿಗಳ ಸಾಂಕೇತಿಕ ಶೀರ್ಷಿಕೆಗಳು ಹೀಗಿವೆ: 'ಕೆದರಿದ ಕೆಂಡ' 'ಸಾವಿನ ಸೆಳೆಯಲ್ಲಿ' ವಿಷಬಿಂದು' ಆದರೆ, ನನ್ನ ಜೀವನದ ಎರಡನೆಯ ಘಟ್ಟದಲ್ಲಿ ಇತ್ಯಾತ್ಮಕತೆಯು ಪ್ರವೇಶಿಸುತ್ತದೆ. ಮುದುಕನ ನಿರಾಸೆಯನ್ನು ತೊರೆದು ಮೀನಿನೊಡನೆ ಮತ್ತೆ ಸಾಗರ ಯಾನ ಶುರು ಮಾಡಿ ತನ್ನ ಆಯನದಲ್ಲಿ ಮೀನಿನ ಅಸ್ಥಿಪಂಜರವು ಸಾಗರದ ಜೀವ ದ್ರವ್ಯಗಳನ್ನು ತುಂಬಿಕೊಂಡು ಮತ್ತೆ ದಷ್ಟ ಪುಷ್ಟವಾಗುತ್ತವೆ. ಇದು ಪುನರ್ ಜೀವನದ ಪ್ರಕ್ರಿಯೆ (Resuscicative Period). ಆಗಿನ ನನ್ನ ಬರಹಗಳ ಶೀರ್ಷಿಕೆಗಳು ಹೀಗಿವೆ: 'ಕಪ್ಪು ಮೋಡದಲ್ಲೊಂದು ಬೆಳ್ಳಿ ರೇಖೆ' 'ಸಮುದಾಯ ಸಂಘಟನೆ' 'ಮಾನವ ಸಂಪನ್ಮೂಲ ಸಂಘಟನೆ' 'ಗ್ರಾಮೋನ್ನತಿ' ಇತ್ಯಾದಿ. ಈ ಅಂಶವನ್ನು ಸೂಕ್ಷ್ಮಮತಿಗಳಾದ ನನ್ನ ಚರಿತ್ರೆಕಾರರು ಗಮನಿಸಿ ದಾಖಲಿಸಿದ್ದಾರೆ. ಈ ಅಂಶವು ನನ್ನ ಗಮನಕ್ಕೆ ಬಂದದ್ದು ಅವರ ಚಿತ್ರಣವನ್ನು ನೋಡಿದ ಮೇಲೆಯೇ, ಎಂದು ನಾನು ಪ್ರಾಂಜಲ ಮನಸ್ಸಿನಿಂದ ಒಪ್ಪಿಕೊಳ್ಳುತ್ತೇನೆ. ಸಾಹಿತ್ಯದಿಂದ ಸಮಾಜಶಾಸ್ತ್ರಕ್ಕೆ, ಅಲ್ಲಿಂದ ಸಮಾಜಕಾರ್ಯಕ್ಕೆ ಸಾಗಿದ ನನ್ನ ಪ್ರಯಾಣವನ್ನು ಅವರು ಕಂಡುಕೊಂಡು ನನಗೆ ತೋರಿಸುತ್ತಾ 'ನಿನ್ನ ಪಯಣ ಹೀಗಿದೆ ನೋಡು' ಎಂದು ತೋರಿದಂತೆ ಕಾಣುತ್ತದೆ. ನನ್ನನ್ನು ನಾನು ಕಾಣುವಂತೆ ಮಾಡಿದ ಇಬ್ಬರು ತರುಣ ಮಿತ್ರರಿಗೆ ನಾನು ಕೃತಜ್ಞನಾಗಿದ್ದೇನೆ.
ನನ್ನ ಕುರಿತ ಈ ಪುಸ್ತಕದಲ್ಲಿ ನನ್ನನ್ನು ನೆಪವಾಗಿ ಇಟ್ಟುಕೊಂಡು ಸಮಾಜಕಾರ್ಯವನ್ನು ಭಾರತದ ಹಿನ್ನೆಲೆಯಲ್ಲಿ ವಿವರಿಸಿರುವುದು ನನಗೆ ಒಂದು ರೀತಿ ಸಮಾಧಾನವನ್ನು ತಂದಿದೆ. ಇದರಿಂದಲೂ ನಾನು ಒಂದು ಚರಿತ್ರೆಯ ವಸ್ತುವಾಗಬಲ್ಲೆನೆಂದು ಕೆಲವಾದರೂ ಪರಿಗಣಿಸಿರುವುದರಿಂದ ನಾನು ಅವರಿಗೆ ಕೃತಜ್ಞನಾಗಿದ್ದೇನೆ. ಜೊತೆಗೆ ಇದನ್ನು ಪ್ರಕಟಿಸುತ್ತಿರುವ ಪ್ರಗತಿ ಗ್ರಾಫಿಕ್ಸ್ನವರಿಗೂ, ಈ ಪುಸ್ತಕದ ಬಿಡುಗಡೆಯಲ್ಲಿ ಪಾಲ್ಗೊಂಡಿರುವವರೆಗೂ, ಈ ಕಾರ್ಯಕ್ರಮವನ್ನು ರೂಪಿಸಿ ನಡೆಸುತ್ತಿರುವವರಿಗೂ, ಮಾಧ್ಯಮ ಮಿತ್ರರಿಗೂ ನಾನು ಋಣಿಯಾಗಿದ್ದೇನೆ. ಈ ಕಾರ್ಯಕ್ರಮಕ್ಕೆ ರಾಜ್ಯದ ನಾನಾ ಕಡೆಗಳಿಂದ ಸಹೃದಯರು ಆಗಮಿಸಿದ್ದಾರೆ. ಭಾರತದ ಮತ್ತು ವಿದೇಶದ ಸ್ನೇಹಿತರು, ಸಮಾಜಕಾರ್ಯಕರ್ತರು ಶುಭಕೋರಿರುತ್ತಾರೆ. ಇವೆಲ್ಲರಿಗೂ ನಾನು ಹೃತ್ಪೂರ್ವಕ ವಂದನೆಗಳನ್ನು ಅರ್ಪಿಸುತ್ತೇನೆ. ಇಂದಿನ ನಮ್ಮ ಸಮಾಜಕಾರ್ಯದ ಸ್ಥಿತಿಗತಿಯ ಬಗ್ಗೆ ಒಂದೆರಡು ಅನಿಸಿಕೆಗಳನ್ನು ಹಂಚಿಕೊಳ್ಳಲು ಅಪೇಕ್ಷಿಸುತ್ತೇನೆ. ವೃತ್ತೀಯ ಸಮಾಜಕಾರ್ಯ ಪ್ರಶಿಕ್ಷಣವು ಈ ಎಪ್ಪತ್ತೈದು ವರ್ಷಗಳಲ್ಲಿ ವಿಸ್ತಾರಗೊಂಡಿದೆ. ಅಗಾಧವಾಗಿಯೇ ವಿಸ್ತಾರಗೊಂಡಿದೆ, ಎಂದರೂ ಸಂದೀತು. ಆದರೆ, ಇದರ ಗುಣಮಟ್ಟ ಏರುವ ಬದಲು ಕುಸಿಯುತ್ತಿದೆ; ಭಾರತೀಯತೆಯನ್ನು ಮೈಗೂಡಿಸಿಕೊಂಡಿಲ್ಲ; ಜಾಗತೀಕರಣದ ನೆಪದಲ್ಲಿ ಹುಲ್ಲು-ಬೇರುಗಳನ್ನು ಮರೆಯಲಾಗಿದೆ; ಬಾಹ್ಯ ದಾಸ್ಯವು ಆಂತರಿಕವಾಗಿದೆ, ವೃತ್ತಿಯ ಲಕ್ಷಣಗಳು ಮರೆಯಾಗಿ ವೃತ್ತಿಯ ಅಸ್ಥಿಪಂಜರವಷ್ಟೇ ಉಳಿದುಕೊಂಡಿದೆ. ಈ ಅಸ್ಥಿಪಂಜರಕ್ಕೆ ವೃತ್ತಿಸತ್ತ್ವವನ್ನು ತುಂಬಬೇಕಾಗಿದೆ. ಕುಲಪತಿಯವರು ಉಪಸ್ಥಿತರಿರುವುದರಿಂದ ಒಂದೆರಡು ಅವಶ್ಯತೆಗಳನ್ನು ಮಂಡಿಸಲು ಬಯಸುತ್ತೇನೆ. ಅಂಕೆ ಮೀರಿ ವಿಸ್ತಾರಗೊಳ್ಳುತ್ತಿರುವ ಸಮಾಕಾರ್ಯ ಶಾಲೆಗಳ ಮೇಲೆ ನಿಯಂತ್ರಣ ಹೇರಿ ಅವುಗಳ ಗುಣಮಟ್ಟದ ಸುಧಾರಣೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಕರ್ನಾಟಕದ ಎಲ್ಲ ವಿಶ್ವವಿದ್ಯಾಲಯಗಳಲ್ಲೂ ಸಮಾಜಕಾರ್ಯ ನಿಕಾಯಗಳನ್ನು, ಫ್ಯಾಕಲ್ಟಿಗಳನ್ನು ಸ್ಥಾಪಿಸಿ ವಿಚಕ್ಷಣ ದಳಗಳನ್ನು ರೂಪಿಸಿ ಪ್ರಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಬೇಕಾಗಿದೆ. ಜೊತೆಗೆ, ಸಮಾಜಕಾರ್ಯ ಪ್ರಶಿಕ್ಷಣವು ಕನ್ನಡದಲ್ಲೂ ಇರಬೇಕಾಗಿದೆ. ಕರ್ನಾಟಕದಲ್ಲಿ ಸಮಾಜಕಾರ್ಯದ ಎಲ್ಲ ಪ್ರಶಿಕ್ಷಣಾರ್ಥಿಗಳು ಕರ್ನಾಟಕದ ಸಮಾಜಕಾರ್ಯದ ಪರಿಸ್ಥಿತಿಯನ್ನು ಐತಿಹಾಸಿಕವಾಗಿಯೂ ಅಧ್ಯಯನವನ್ನು ಕಡ್ಡಾಯವಾಗಿ ಮಾಡಬೇಕಾಗಿದೆ. ಇದನ್ನು ವಿಶ್ವವಿದ್ಯಾಲಯಗಳು ನಡೆಸಿಕೊಡಬೇಕೆಂಬುದು ನನ್ನ ಕಳಕಳಿಯ ಭಿನ್ನಹ. ಸಮಾಜಕಾರ್ಯದಲ್ಲಿ ಪ್ರಶಿಕ್ಷಣ ಪಡೆದವರ ಸಂಖ್ಯೆಯು ಸಾಕಷ್ಟಿದ್ದರೂ ಸರಕಾರವು ಮತ್ತು ಕೆಲವು ಖಾಸಗಿ ಸಂಸ್ಥೆಗಳು ಪ್ರಶಿಕ್ಷಣ ಪಡೆಯದ ಕಾರ್ಯಕರ್ತರನ್ನು ನೇಮಿಸಿಕೊಳ್ಳುತ್ತಿರುವುದನ್ನು ನಿಲ್ಲಿಸಿ ವೃತ್ತಿಪರ ತರಬೇತಿ ಪಡೆದವರನ್ನೇ ನೇಮಿಸಿಕೊಂಡು ಸಮಾಜಕಾರ್ಯ ವೃತ್ತಿಗೆ ಗಾಂಭೀರ್ಯವನ್ನೂ ಪ್ರೌಢಿಮೆಯನ್ನೂ ತಂದುಕೊಡಬೇಕಾಗಿದೆ. ಶಿಥಿಲಗೊಳ್ಳುತ್ತಿರುವ ಸಮಾಜದ ಶರೀರಕ್ಕೆ ಚೈತನ್ಯವನ್ನು ತರುವ ಸಾಮರ್ಥವುಳ್ಳ ಈ ಸಮಾಜಕಾರ್ಯವನ್ನು ಉತ್ತೇಜಿಸಬೇಕಲ್ಲವೇ? ಧರ್ಮವನ್ನು ರಕ್ಷಿಸಿದರೆ ಧರ್ಮವು ನಿನ್ನನ್ನು ರಕ್ಷಿಸುತ್ತದೆ. ಎಂಬ ಮಾತು ಇದೆ, ಅಲ್ಲವೇ? ಅಂತೆಯೇ 'ಸಮಾಜಕಾರ್ಯವನ್ನು ನಾವು ರಕ್ಷಿಸಿದರೆ ನಮ್ಮ ಸಮಾಜದ ಜೀವನವನ್ನು ಸಮಾಜಕಾರ್ಯವು ರಕ್ಷಿಸುತ್ತದೆ' ಎಂಬುದು ನನ್ನ ದೃಢ ವಿಶ್ವಾಸ. ಇದು ಅನ್ಯರಂಗಗಳಂತೆಯೇ ಅಧೋಗತಿಗೆ ಕುಸಿದರೆ ಗತಿಯೇನು! ಹರಕೊಲ್ಲಲ್ ಪರಕಾಯ್ವನೇ ಸಮಾಜಕಾರ್ಯವನ್ನು ಸಂರಕ್ಷಿಸುವ ಕೆಲಸವು ಎಲ್ಲ ನಿಟ್ಟುಗಳಿಂದ ಆಗಬೇಕೆಂದು ಅಪೇಕ್ಷಿಸುತ್ತೇನೆ. ಈ ಮುದುಕನಿಗೆ ಮತ್ತೇನು ಆಸೆ ಇದ್ದೀತು. ಎಲ್ಲರಿಗೂ ನನ್ನ ಹೃತ್ಪೂರ್ವಕ ನಮನಗಳು. ಡಾ.ಎಚ್.ಎಮ್.ಮರುಳಸಿದ್ದಯ್ಯ
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
SITE MAP
SiteTRAININGJOB |
HR SERVICESOTHER SERVICESnIRATHANKA CITIZENS CONNECT |
NIRATHANKAPOSHOUR OTHER WEBSITESSubscribe |
MHR LEARNING ACADEMY
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|