Niruta Publications
  • Home
  • About Us
    • Ramesha's Profile
  • Publication With Us
    • Inviting Authors
    • Niruta's Read & Write Initiative
    • Leaders Talk
    • Inviting Articles
    • Promote Your Books
  • Our Services
  • Collaborate with Niruta Publications
  • HR Blog
    • Editor's Blog
    • Blog
    • English Articles
    • Kannada Articles
  • Books / Online Store
  • Media Mentions
    • Photos
    • Videos
  • Join Our Online Groups
  • Contact Us
  • Home
  • About Us
    • Ramesha's Profile
  • Publication With Us
    • Inviting Authors
    • Niruta's Read & Write Initiative
    • Leaders Talk
    • Inviting Articles
    • Promote Your Books
  • Our Services
  • Collaborate with Niruta Publications
  • HR Blog
    • Editor's Blog
    • Blog
    • English Articles
    • Kannada Articles
  • Books / Online Store
  • Media Mentions
    • Photos
    • Videos
  • Join Our Online Groups
  • Contact Us
Niruta Publications

ಡಾ.ನಾರಾಯಣರೆಡ್ಡಿ: ಸಾವಯವ ಕೃಷಿಯ ಚೇತನ

6/26/2017

1 Comment

 
Picture
ಭುಕ್ತಿ ನಿನಗೆಲ್ಲಿಯದು ? ಭತ್ತ ತಾನೆಲ್ಲಿಯದೋ!
ಎತ್ತಲಿನಗೊಬ್ಬರವೋ ! ಎತ್ತಲಿನ ನೀರೋ!
ಭಾಕ್ತಾವಾರಾರ ದುಡಿತದಿನೊ ನಿನಗಾಗಿಹುದು! 
ಗುಪ್ತಗಾಮಿನಿಯೊ ಋಣ  ಮಂಕುತಿಮ್ಮ
 
ನಮ್ಮೆಲ್ಲರ ಪ್ರಾಣ ಪಕ್ಷಿಗೆ ಪ್ರಾಣವಾಗಿರುವ ಅನ್ನದ, ಅದನ್ನು ತನ್ನ ಬೆವರಿನ ಶ್ರಮದಿಂದ ಬೆಳೆದು ಕೊಡುವ ರೈತನ ಮೇಲೆ ನಮಗಿರುವ ಋಣವನ್ನು ಜಾಗೃತಗೊಳಿಸುವ ಕಗ್ಗದ ಈ ಸಾಲುಗಳು ನಮ್ಮೆಲ್ಲರನ್ನೂ ಸದಾ ಕೃಷಿ, ರೈತಸ್ನೇಹಿಗಳನ್ನಾಗಿಸುತ್ತವೆ.
ಬೆಳಗಾಗಿ ನಾನೆದ್ದು ಯಾರ್ಯಾರ ನೆನೆಯಲಿ, ಎಳ್ಳು ಜೀರಿಗೆ ಬೆಳೆಯೋಳ ಭೂಮ್ತಾಯೀನ ಒಂದರೆಕ್ಷಣ ನೆನೆಯೋಣ. ಇದು ನಮ್ಮ ಹಿರೀಕರು ರೂಢಿಸಿಕೊಂಡು ಬಂದ ಪದ್ಧತಿ! ಅನ್ನನೀಡುವ ಭೂಮಿ ಎಲ್ಲರಿಗೂ ತಾಯಿಯಂತೆ, ಅವಳೊಂದಿಗೆ ಭಾವನಾತ್ಮಕ ಸಂಬಂಧವಿಟ್ಟುಕೊಂಡಿದ್ದ ರೈತನನ್ನೂ ಅನ್ನದಾತನೆಂದು ಗೌರವಿಸಿ ಜನಮಾನಸದಲ್ಲಿ ಅತ್ಯುನ್ನತ ಸ್ಥಾನ ಕೊಟ್ಟಿದ್ದ ಸಮಾಜ ನಮ್ಮದು. ಭೂಮಿಯನ್ನೇ ನಂಬಿ ಬದುಕುತ್ತಿದ್ದ ಜನ, ನೆಮ್ಮದಿಯಿಂದ ಬಾಳುವ ಕಾಲವೊಂದಿತ್ತು.

ಆದರೆ, ಇಂದು ಕೃಷಿಯೆಂಬುದು ಅನಕ್ಷರಸ್ಥರ, ಎಲ್ಲೂ ಸಲ್ಲದವರ ಕೊನೆಯ ಆಯ್ಕೆಯಾಗಿ ಉಳಿದಿದೆ. ಮೊದಲೇ ಅನಿಶ್ಚಿತತೆಯ ತಳಹದಿ ಮೇಲೆ ನಿಂತಿರುವ ಕೃಷಿಗೆ ಮಾನವ ನಿರ್ಮಿತ ಅನಾಚಾರಗಳೂ ಸೇರಿ ಏನಾದರಾಗು ಕೃಷಿಕನಾಗಬೇಡವೆನ್ನುವಂತಾಗಿದೆ. ಕೃಷಿಯೆಂದರೆ, ನಷ್ಟ, ನೋವು, ಕೀಳರಿಮೆ, ಹೀಗೆ ನಕಾರಾತ್ಮಕತೆಯನ್ನೇ ಮೈತುಂಬಿಕೊಂಡ ಕೃಷಿಕ ಸಮಾಜ, ಪವಿತ್ರ ವೃತ್ತಿಗೆ ವಿದಾಯ ಹೇಳುತ್ತಿರುವುದು ವಿಪರ್ಯಾಸವೇ ಸರಿ.

ಇಂಥ ಸಂದಿಗ್ಧ ಪರಿಸ್ಥಿತಿಯಲ್ಲೂ  ಕೃಷಿಯೆಂದರೆ ಸಂಸ್ಕೃತಿ, ಕೃಷಿಯು ನಮ್ಮ ಸನಾತನ ಮೌಲ್ಯ, ನೆಮ್ಮದಿ ಕೊಡುವ ಜೀವನ ಮಾರ್ಗವೆಂದು ನಂಬಿ ಸಾವಯವ ಕೃಷಿಯ ಜೊತೆಯಲ್ಲಿಯೇ ಸಾವಯವ ಜೀವನ ನಡೆಸುತ್ತಿರುವ ಹಲವು ನೇಗಿಲಯೋಗಿಗಳು ನಮ್ಮಲ್ಲಿದ್ದಾರೆ. ಗಾಂಧೀಮಾರ್ಗದಿಂದ ಒಂದಿಂಚೂ ಅಕ್ಕಪಕ್ಕ ಸರಿಯದ ಚಾರ್ವಾಕ ರಾಮರಾಯರು, ತಾನುಂಟು  ತನ್ನ ಎಂಟು ಎಕರೆ ಭೂಮಿಯುಂಟೆಂದು ಗೆಯ್ಯುತ್ತಿರುವ ಜಕ್ಕೇನಹಳ್ಳಿಯ ಶ್ರೀ ಶಿವಪ್ಪನವರು, ಮಣ್ಣಿನ ಕಣಕಣವನ್ನು ಅರಿತು ಬೇಸಾಯದಲ್ಲೇ ಸಾರ್ಥಕತೆ ಕಾಣುತ್ತಿರುವ ಶಿವನಾಪುರದ ರಮೇಶ್...ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇವರೆಲ್ಲರ ನಡುವೆ ಕಾಯಕವೇ ಕೈಲಾಸವೆಂದು ನಂಬಿ, ಸಾವಯವ ಕೃಷಿಯನ್ನು ಪಾಲನೆ ಮಾಡುತ್ತಾ, ಇತರರಿರೂ ಮಾದರಿಯಾಗಿದ್ದು ಬಿರುದಿಗೆ ತಕ್ಕಂತೆ ನಾಡೋಜ ರಾಗಿರುವ ಡಾ.ಎಲ್. ನಾರಾಯಣರೆಡ್ಡಿಯವರು ವಿಶಿಷ್ಟವಾಗಿ ಕಾಣುತ್ತಾರೆ. ಪ್ರಕೃತಿಯ ಮಡಿಲಿನಲ್ಲಿ ಮಗುವಾಗಿ, ನೇಗಿಲಿಗೆ ದಾಸನಾಗಿ, ಮಾನವೀಯ ಮೌಲ್ಯಗಳಿಗೆ ಒಡೆಯನಾಗಿದ್ದರೆ, ಸುಖದ ಜೀವನ ಸಾಧ್ಯವೆಂದು ಸಾರುವ ರೆಡ್ಡಿಯವರು ಅಂತೆಯೇ ಬದುಕಿ ತೋರಿಸಿದ್ದಾರೆ. ಹಳ್ಳಿಯ ಕೂಡುಕುಟುಂಬವೊಂದರಲ್ಲಿ ಹುಟ್ಟಿದ ರೆಡ್ಡಿ, ಬಾಲ್ಯದಲ್ಲೇ ಮನೆ ತೊರೆದು, ಹೋಟೆಲ್ ಮಾಣಿ, ಕಛೇರಿ ಸೇವಕ, ಲಾರೀ ಕಂಪೆನಿಯ ಮ್ಯಾನೇಜರ್, ಹೀಗೆ ವಿವಿಧ ವೇಷಗಳನ್ನು ತೊಟ್ಟು ಮರಳಿ ಮಣ್ಣಿಗೆ (ವ್ಯವಸಾಯಕ್ಕೆ) ಬಂದು ವಿಶ್ವವಿಖ್ಯಾತರಾದ ರೋಚಕ ಕಥನವನ್ನು ತಿಳಿಯುವುದೇ ಹೆಮ್ಮೆಯ ಸಂಗತಿ. ಆ ಹಿರಿಯ ಚೇತನದ ಬದುಕಿನ ಮೇಲೆ ಬೆಳಕು ಚೆಲ್ಲುವ ಲೇಖನ ಇಲ್ಲಿದೆ.
Picture
ಬಾಲ್ಯ ವಿದ್ಯಾಭ್ಯಾಸ :
ಎಲ್. ನಾರಾಯಣರೆಡ್ಡಿಯವರು ಮೂಲತಃ ಬೆಂಗಳೂರು ಪೂರ್ವದ ವರ್ತೂರಿನ ಸೋರಹುಣಸೆ ಗ್ರಾಮದ 94 ಜನರು ತುಂಬಿ ತುಳುಕುತ್ತಿದ್ದ ಕುಟುಂಬವೊಂದರಲ್ಲಿ ಹುಟ್ಟಿದ್ದು 18 ಸೆಪ್ಟೆಂಬರ್ 1935 ರಲ್ಲಿ. ತಂದೆ ಶಿಸ್ತಿನ ಸಿಪಾಯಿಯೆನಿಸಿಕೊಂಡಿದ್ದ ಶ್ರೀ ಲಕ್ಷ್ಮಯ್ಯರೆಡ್ಡಿ; ತಾಯಿ ಶ್ರೀಮತಿ ಯಲ್ಲಮ್ಮರವರ 18 ಮಕ್ಕಳಲ್ಲಿ 14ನೆಯವರೇ ಎಲ್. ನಾರಾಯಣರೆಡ್ಡಿ. ಬೆಳೆದದ್ದೆಲ್ಲಾ ತನ್ನ ಚಿಕ್ಕಮ್ಮ ಶ್ರೀಮತಿ ಮುತ್ತಮ್ಮ ಅವರ ಮಡಿಲಲ್ಲಿ. ಕುಟುಂಬವು ಕೃಷಿ ಪ್ರಧಾನವಾದ್ದರಿಂದ ಯಾವ ಕೈಗಳಿಗೂ ಬಿಡುವಿರಲಿಲ್ಲ. ಮಕ್ಕಳು-ಮರಿಯೆನ್ನದೇ ಎಲ್ಲರೂ ಗೆಯ್ಯಲೇಬೇಕು. ಪರಿಣಾಮ 18 ಮಕ್ಕಳಲ್ಲಿ ಯಾರೂ ಶಾಲೆಯ ಮೆಟ್ಟಿಲು ಹತ್ತುವಂತಿರಲಿಲ್ಲ. ತಂದೆಯೇ ಶಿಕ್ಷಕ, ಹೊಲವೇ ಶಾಲೆಯೆಂಬಂತೆ ಅಲ್ಲಿಯೇ ಎಲ್ಲರಿಗೂ ಕೃಷಿ ತರಬೇತಿ. ಆದರೆ ಬಾಲಕ ನಾರಾಯಣನನ್ನು ಮಾತ್ರ ತಂದೆಯವರಿಗೆ ಶಾಲೆಗೆ ಕಳುಹಿಸೋಣವೆಂದು ಅನಿಸಿತು. ಇದಕ್ಕೆ ಕಾರಣ ಹುಡುಗ ಚೂಟಿಯಾಗಿದ್ದಾನೆಂದಾಗಲೀ, ಈ ನೆಲದ ಪಾಡು ಅವನಿಗೇಕೆಂಬ ಔದಾರ್ಯವೂ ಅಲ್ಲ. ಬದಲಿಗೆ, ಕೈ ಕಾಲು ಸಣ್ಣ ಹೊಟ್ಟೆ ಡುಮ್ಮಣ್ಣನಾಗಿದ್ದ ನಾರಾಯಣನಲ್ಲಿ ಕೃಷಿ ಕಾರ್ಯಗಳಿಗೆ ಅಗತ್ಯವಿದ್ದ ತಾಕತ್ತು ಇರಲಿಲ್ಲ. ಆದ್ದರಿಂದ ಸುಮ್ಮನೆ ಮನೆಯಲ್ಲಿ ಕೂರುವುದಕ್ಕಿಂತ ಶಾಲೆಯಲ್ಲಾದರೂ ಪುಸ್ತಕ ತಿರುವಿಹಾಕಿಕೊಂಡಿರಲಿ ಎಂದು ತನ್ನ ಮತ್ತೊಬ್ಬ ಅಂಗವಿಕಲ ಮಗನ ಜೊತೆ ಇವರನ್ನು ಶಾಲೆಗೆ ಕಳುಹಿಸಿದರು.

ಅಂದಿನ ವಿದ್ಯಾಭ್ಯಾಸ ಪ್ರಕೃತಿಯ ಮಡಿಲಲ್ಲಿ ನುರಿತ ಶಿಕ್ಷಕರೊಂದಿಗೆ ನಡೆಯುತ್ತಿದ್ದುದರಿಂದ, ಬಾಲಕ ನಾರಾಯಣರು ತೀವ್ರ ಆಸಕ್ತಿಯಿಂದ ಕಲಿಯತೊಡಗಿದರು. ಶಾಲೆಯಲ್ಲಿ ಎಲ್ಲರಿಗಿಂತ ಚುರುಕು. ಪ್ರತೀ ಪರೀಕ್ಷೆಯಲ್ಲೂ ಹೆಚ್ಚು ಅಂಕ ಪಡೆದು ಪಾಸಾಗುತ್ತಾ ಬಂದರು. 5ನೆಯ ಇಯತ್ತೆಗೆ (ತರಗತಿ) ಬಂದ ರೆಡ್ಡಿಯವರಿಗೆ ಅಕ್ಷರ ಬರೆಯಲು ನೋಟ್ ಪುಸ್ತಕ ಬೇಕಾಯಿತು. ಆದರೆ, ಇವರ ಬಗ್ಗೆ ವಿಚಿತ್ರ ಕ್ಲೀಷೆ ಹೊಂದಿದ್ದ ಅಂಗವಿಕಲ ಸೋದರ, ತಂದೆಗೆ ಹೇಳಿ ಪುಸ್ತಕ ಕೊಡಿಸದೇ ಇರಲು ನೋಡಿಕೊಂಡಿದ್ದ. ಆದ್ದರಿಂದ ಶಾಲೆಯ ಪಕ್ಕದಲ್ಲಿದ್ದ ಮಿಠಾಯಿ ಅಂಗಡಿಗೆ ಹೋದ ರೆಡ್ಡಿಯವರು, ಶ್ರೀಮಂತ ಮಕ್ಕಳು ಅರ್ಧಂಬರ್ಧ (ಅಪೂರ್ಣ) ಬರೆದು ಬಿಸಾಡಿದ್ದ ನೋಟ್ ಪುಸ್ತಕವನ್ನು ಅಂಗಡಿಯವನಿಂದ ಪಡೆದು ತಂದು, ಅದರಲ್ಲೇ ಬರೆದುಕೊಂಡು, ಶಿಕ್ಷಕರ ಹೊಡೆತದಿಂದ ತಪ್ಪಿಸಿಕೊಂಡಿದ್ದರು. ಆದರೂ, ಅವರು ಉನ್ನತ ದರ್ಜೆಯಲ್ಲಿ ಪಾಸಾದರು.!

ನಂತರ ಫ್ರೌಢಶಾಲೆಗೆ ಪ್ರವೇಶ. ಪರಿಸ್ಥಿತಿ ಯಥಾಸ್ಥಿತಿ ಅಲ್ಲಿಯೂ ಪಾಸು! ಮನೆಯವರಿಗೆ ಆಶ್ಚರ್ಯ, ಈ ರೋಗಿಷ್ಠ ದೊರೆಗೆ ಹೇಗಾದರೂ ವಿದ್ಯೆ ಅಂಟುತ್ತದೆ! ಎಂದು, ಎಸ್.ಎಸ್.ಎಲ್.ಸಿ. ಯಲ್ಲೂ ರೆಡ್ಡಿಯವರು ಪಾಸಾದಾಗ ಇಡೀ ಸುತ್ತು ಮುತ್ತಲ ಊರುಗಳಲ್ಲಿ ಯಾರೂ ಓದಿಕೊಂಡಿರದಿದ್ದ ದೊಡ್ಡ ಓದಾಗಿದ್ದರಿಂದ ಎಲ್ಲರೂ ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದರು. ಇದೆಲ್ಲಾ ತಂದೆಗೇನು ಗೊತ್ತು? ಮಗಾ ಓದಿದ್ದು ಸಾಕು, ವ್ಯವಸಾಯಕ್ಕೆ ನಡೆ ಎಂದು ಆದೇಶಿಸಿಯೇ ಬಿಟ್ಟರು. ರೆಡ್ಡಿಯವರಿಗೇನೂ ಬೇಸರವಾಗಲಿಲ್ಲ. ಅವರು ಅಂದುಕೊಂಡಿದ್ದದ್ದೂ ಅದೇ. ಆದರೆ, ವಿಧಿಯ ಆಟ ಬೇರೆಯದೇ ಇತ್ತು. ಶಾಲೆಯ ಋಣ ಇನ್ನೂ ತೀರಿರಲಿಲ್ಲ. ಇವರ ಹಿರಿಯ ಅಣ್ಣ ಶ್ರೀ ರಾಮಯ್ಯರೆಡ್ಡಿಯವರಿಗೆ ಅದೇಕೋ ನಾವ್ಯಾರೂ ಶಾಲೆಯ ಮಖ ಕಂಡವರಲ್ಲ. ಇವನು ಚೆನ್ನಾಗಿ ಓದಿ ಎಸ್.ಎಸ್.ಎಲ್.ಸಿ  ಪಾಸಾಗಿದ್ದಾನೆ. ಮುಂದೆ ಓದಿ ಒಳ್ಳೆಯ ಇಂಜಿನಿಯರ್ ಆಗಿ ಮನೆತನಕ್ಕೆ ಗೌರವ ತರಲಿ ಎಂದು, ಬಗೆದು ಅದೇನೇ ಕಷ್ಟ ಬಂದರೂ ಸರಿ. ರೆಡ್ಡಿಯವರನ್ನು ಇಂಜಿನಿಯರ್ ಮಾಡಿಸಲೇಬೇಕೆಂದು ಶಪಥ ಮಾಡಿದರು. ಈ ಬಯಕೆಯನ್ನು ತಂದೆಯ ಬಳಿ ಹೇಳಿದರು. ಅವರು ಹಿರಿಯ ಮಗನ ಮಾತಿಗೆ ಇಲ್ಲವೆನ್ನಲಾಗಲಿಲ್ಲ. ವಿರೋಧಿಸದಿರಲಿಕ್ಕೆ ಮತ್ತೊಂದು ಕಾರಣವಿತ್ತು: ನಮ್ಮ ಮನೆಯಲ್ಲಿ ಯಾರಿಗೂ ಇಂಗ್ಲಿಷ್ ಓದಲು ಬರುವುದಿಲ್ಲ, ಇವನಾದರೂ ಓದಿಕೊಂಡರೆ, ನನಗೆ ಒರಿಸ್ಸಾ, ತಮಿಳುನಾಡಿನ ಹಸುಗಳ ಮಾಲೀಕರಿಂದ ಬರುವ ಪತ್ರಗಳನ್ನಾದರೂ ಓದಿ ಹೇಳಿಯಾನು ಎಂದು ಬಗೆದು ಸರಿ, ನಿನ್ನಿಷ್ಟದಂತೆ ಮಾಡು ಎಂದು ಒಪ್ಪಿಗೆಯಿತ್ತರು.

ಅಣ್ಣ ಶ್ರೀ ರಾಮಯ್ಯರೆಡ್ಡಿಯವರು, ತಮ್ಮ ನಾರಾಯಣನನ್ನು ತಂದು ಬೆಂಗಳೂರಿನ ವಿಜ್ಞಾನ ಕಾಲೇಜಿಗೆ ಸೇರಿಸಿದರು. ವಾಸಕ್ಕೆ ಸಂಬಂಧಿಕರ ಮನೆಯೆಂದು ನಿರ್ಧಾರವಾಯಿತು. ಅವರು ಬಹು ದೊಡ್ಡ ವಿಜ್ಞಾನಿ. ಮುತುವರ್ಜಿಯಿಂದ ಯುವಕ ನಾರಾಯಣರ ಓದಿನ ಕಡೆ ಗಮನವಿತ್ತರು. ಆದರೆ ದುರದೃಷ್ಟವಶಾತ್ ಅವರಿಗೆ ದೆಹಲಿಗೆ ವರ್ಗವಾದ್ದರಿಂದ, ನಾರಾಯಣರು ನೆಲೆಯಿಲ್ಲದವರಾದರು. ಮತ್ತೆ ಓಡಿ ಬಂದ ಅಣ್ಣ, ರೆಡ್ಡಿಯವರನ್ನು ಪರಿಚಯದ ಎಲೆ ವ್ಯಾಪಾರಿ ಮನೆಯಲ್ಲಿರಿಸಿದರು.


ಆ ವ್ಯಾಪಾರಿಗಿದ್ದ ಒಬ್ಬನೇ ಮಗನ ಕೈ ಸ್ವಚ್ಛವಿಲ್ಲದ್ದರಿಂದ, ಅವನ ಬದಲಿಗೆ ಕಂಡದ್ದೇ ನಿಯತ್ತಿನ ವ್ಯಕ್ತಿ ನಾರಾಯಣರು. ಕಾಲೇಜಿಗೆ ಹೋಗುವುದಕ್ಕಿಂತ ಮುಂಚೆ ಒಂದೆರಡು ಗಂಟೆ ಅಂಗಡಿಯಲ್ಲಿ ಕೂತಿದ್ದು ಹೋಗು ಎಂಬ ವಿನಂತಿಭರಿತ ಆದೇಶಕ್ಕೇ ತಲೆಬಾಗಿದ ರೆಡ್ಡಿಯವರು ಅದನ್ನೇ ಅರೆ ವೃತ್ತಿಯಾಗಿಸಿಕೊಂಡರು. ಒಂದೊಂದು ದಿನ 11-12 ಗಂಟೆಯವರೆಗೂ ಬಾರದಿದ್ದ ಮಾಲೀಕರಿಂದ ಕಾಲೇಜಿಗೆ ಹೋಗುವುದು ಕಷ್ಟವಾಯಿತು. ತಡವಾಗಿ ಹೋಗಿ ಬೈಸಿಕೊಂಡದ್ದು ಆಯ್ತು. ಕಾಲೇಜಿನ ಒಣ ಪಾಠ ಪ್ರವಚನಗಳಿಗಿಂತ, ಅಂಗಡಿಯಲ್ಲಿ ಕೂತು ಬಂದು ಹೋದವರನ್ನೆಲ್ಲಾ ಮಾತಾಡಿಸಿಕೊಂಡು, ಮಾಲೀಕ ನೀಡುವ ನಾಲ್ಕಾಣೆಗೆ ದೋಸೆ ತಿಂದು, ಸಿನಿಮಾ ನೋಡಿಕೊಂಡು ಪೋಲಿಯಾಗಿ ಅಲೆದಾಡಿಕೊಂಡಿರುವುದೇ ಹಿತವೆಂದು ಬಗೆದ ರೆಡ್ಡಿಯವರು, ಕಾಲೇಜಿಗೆ ದರ್ಶನ ನೀಡುವುದು ಅಪರೂಪವಾಯಿತು.
Picture
ನಾರಾಯಣರೆಡ್ಡಿ ಅವರೊಂದಿಗೆ ಡಾ. ಎಚ್.ಎಂ.ಎಂ., ಪ್ರೊ. ಕೆ. ಭೈರಪ್ಪ ಮತ್ತು ನಿರಾತಂಕ ಬಳಗ
Picture
ಕಾಲಕಳೆದಂತೆ, ರೆಡ್ಡಿಯವರಿಗೆ ಕಾಲೇಜು ಮರೆತ್ಹೋಯಿತು, ಮೋಜು ಹೆಚ್ಚಾಯಿತು. ಹಣ ಸಾಲದಾದಾಗ ಪುಸ್ತಕ ಮಾರಿದ್ದೂ ಆಯ್ತು. ಅದೂ ಕಡಿಮೆಯೆನಿಸಿದಾಗ ಬೀದಿಬದಿಯ ಹಳೆ ಪುಸ್ತಕದ ವ್ಯಾಪಾರಿಯಿಂದ ಪುಸ್ತಕ ಕದ್ದು ಪೊಲೀಸ್ ನಿಂದ ಕಪಾಳಮೋಕ್ಷ ಮಾಡಿಸಿಕೊಂಡದ್ದೂ ಉಂಟು.

ಅಂತೂ, ಪರೀಕ್ಷೆ ದಿನ ಬಂತು. ಯಾವುದೇ ಸಿದ್ಧತೆಯಿಲ್ಲದೇ ಪರೀಕ್ಷೆಗೆ ಕುಳಿತ ರೆಡ್ಡಿಯವರು ಪರೀಕ್ಷೆ ಮುಗಿಯಲು ಇನ್ನೂ ಸಮಯ ಇರುವಾಗಲೇ ಖಾಲಿ ಹಾಳೆ ಕೊಟ್ಟು ಎದ್ದು ಬಂದರು. ಫಲಿತಾಂಶ ಫೇಲಾಗಿತ್ತು. ಎಂದೂ ಇರದಿದ್ದ ಭಯ, ಪಾಪಪ್ರಜ್ಞೆ ಆಗ ಕಾಡಲು ಶುರುವಾಯ್ತು. ಆದರೂ, ಅದೆಲ್ಲಾ ಕ್ಷಣಿಕ. ಅಡ್ಡದಾರಿಯನ್ನು ಹಿಡಿದಿದ್ದ ರೆಡ್ಡಿಯವರಿಗೆ ಅಣ್ಣನ ಹಿತನುಡಿ, ಅಭಿಲಾಷೆಯು ಎಂದೂ ಮನಸ್ಸಿನ ಕದ ತಟ್ಟಲಿಲ್ಲ. ಮುದ್ದು ತಮ್ಮ ಫೇಲಾದ ವಿಚಾರ ಇತರರಿಂದ ತಿಳಿದ ಅಣ್ಣನಿಗೆ ತೀವ್ರ ನಿರಾಶೆಯಾಯಿತು. ರೆಡ್ಡಿಯವರು ಆಡುತ್ತಿದ್ದ ಕಣ್ಣಾಮುಚ್ಚಾಲೆ ತಿಳಿದು ಮರುಗಿದರು. ಮನಸ್ಸಿನ ನೋವು ತಾಳಲಾರದೆ, ತೀವ್ರವಾಗಿ ಥಳಿಸಿದರೂ ಕೂಡ. ಆದರೆ, ಪರಿಸ್ಥಿತಿ ಕೈಜಾರಿ ಹೋಗಿತ್ತು.

ವಿಷಯ ತಿಳಿದ ತಂದೆಗೆ ಬೇಸರ/ನಿರಾಶೆಯೇನೂ ಆಗಲಿಲ್ಲ. ಅವರಿಗೆ ಖುಷಿಯೇ ಆಯ್ತು. ಕಾರಣ, ಮನೆಯಲ್ಲಿನ ಕತ್ತೆ, ಕುರಿ ಮೇಯಿಸಲು ಆಳೊಬ್ಬ ಸಿಕ್ಕಿದನೆಂದು. ಪ್ಯಾಂಟು ಪೈಜಾಮ ಹಾಕಿಕೊಂಡು ನೆರಳಿನಲ್ಲಿ ಓದಿ, ಬರೆದುಕೊಂಡಿರಬೇಕಾಗಿದ್ದ ರೆಡ್ಡಿಯವರು, ಕತ್ತೆಗಳ ಹಿಂದೆ ಕಟ್ಟಿಗೆಯಿಡಿದು ಓಡಾಡುತ್ತಿದ್ದರು. ಅದೂ ಸಹ ಬಹಳ ದಿನವೇನಲ್ಲ. ಆದರೆ, ಅದೊಂದು ದಿನ ಹಳ್ಳಿಯಿಂದ 8 ಕಿ.ಮೀ. ದೂರದಲ್ಲಿ ಓಡಾಡುವ ರೈಲನ್ನು ನೋಡುವ ಹಂಬಲದಿಂದ ಕುರಿ, ಕತ್ತೆಗಳ ದಂಡಿನೊಂದಿಗೆ ಹೋದ ರೆಡ್ಡಿಯವರು, ಮನೆ ತಲುಪಲು ಅರ್ಧಗಂಟೆ ತಡವಾಗಿತ್ತು. ಅಮ್ಮನ ಬರುವಿಕೆಗಾಗಿ ಕಾದು, ಕೂಗಿ ಗದ್ದಲಮಾಡುತ್ತಿದ್ದ ಕುರಿಮರಿಗಳ ಆಕ್ರಂದನ ಕಂಡು ನೊಂದು, ರೊಚ್ಚಿಗೆದ್ದ ತಂದೆ, ನಾರಾಯಣರನ್ನು ಹಿಗ್ಗಾಮುಗ್ಗಾ ಥಳಿಸಿ ಅಡಿ ಮೇಲಕ್ಕೆ ಎಸೆದರು. ಅದೃಷ್ಟವಶಾತ್ ಅಣ್ಣ ಹಿಡಿದುಕೊಂಡರು. ರೆಡ್ಡಿಯವರು ಪ್ರಾಣಸಹಿತ ಉಳಿದರು.

ಅಂದು ರಾತ್ರಿ ರೆಡ್ಡಿಯವರಿಗೆ ನಿದ್ದೆ ಬರಲಿಲ್ಲ. ಕಾರಣ ತಂದೆಯವರು ಹೊಡೆದರೆಂದಲ್ಲ, ಬದಲಿಗೆ ತನ್ನ ತಂದೆಯ ಹೊಡೆತಗಳನ್ನು ನೋಡಿ ಖುಷಿ ಅನುಭವಿಸಿದ್ದ ತನ್ನ ದಾಯಾದಿಗಳ ಮುಂದಿನ ಹಿಂಸಿಸುವ ಯೋಜನೆಯನ್ನು ಮನಗಂಡಿದ್ದ ರೆಡ್ಡಿಯವರು, ತೀವ್ರ ಅವಮಾನಕ್ಕೊಳಗಾದರು. ಮನೆಬಿಟ್ಟು ಓಡಿಹೋಗಲು ನಿರ್ಧರಿಸಿದರು. ಉಟ್ಟಬಟ್ಟೆಯಲ್ಲೇ ಮನೆಬಿಟ್ಟು ಹೊರಟ ರೆಡ್ಡಿಯವರು (1957), ತಲುಪಿದ್ದು ಮಾಯಾನಗರಿ ಬೆಂಗಳೂರಿಗೆ. ಗುರುತು ಪರಿಚಯವಿಲ್ಲದ ಜನ, ಗೊತ್ತುಗುರಿಯಿಲ್ಲದ ಜೀವನ, ಅನುಭವಿಸಿದ ನಿರಾಸೆ, ಹತಾಶೆ, ಹಿಂಸೆಗಳು ಅವರನ್ನು ಏನಾದರೂ ಆಗಲಿ, ಉದ್ಧಾರವಾಗಿಯೇ ಮನೆಗೆ ಹೋಗಬೇಕು ಎಂದು ನಿರ್ಧರಿಸುವಂತೆ ಮಾಡಿತು.
​
ಅದೊಂದು ದಿನ ಹಸಿವಿನಿಂದ ಬಳಲುತ್ತಿದ್ದ ರೆಡ್ಡಿಯವರಿಗೆ ತಮಿಳಿನ ವ್ಯಕ್ತಿಯೊಬ್ಬರು ಮಲ್ಲೇಶ್ವರಂ 8ನೆಯ ಅಡ್ಡರಸ್ತೆಯ ನಾರ್ಥೆಂಡ್ ಹೋಟೆಲ್ ನಲ್ಲಿ ಸೃಚ್ಛಗಾರನಾಗಿ ಕೆಲಸ ಕೊಡಿಸಿದರು. ಕೆಲಸದಲ್ಲಿನ ಶ್ರದ್ಧೆ, ಸಮಯ ಪರಿಪಾಲನೆ, ಸ್ವಚ್ಛತೆ, ತೀಕ್ಷ್ಣತೆಯನ್ನು ಗಮನಿಸಿದ ಮಾಲಿಕ, ರೆಡ್ಡಿಯವರು ಕೆಲಸಕ್ಕೆ ಸೇರಿದ 3 ಗಂಟೆಗಳಲ್ಲಿಯೇ ಅಡಿಗೆಯವರ ಸಹಾಯಕನಾಗಿ ಮೇಲ್ಬಡ್ತಿ ಪಡೆದರು. ಅಲ್ಲೂ, ತನ್ನ ಕೈಚಳಕ ತೋರಿಸಿ ಎಲ್ಲರ ಪ್ರೀತಿಯ ಭಟ್ಟರಾದರು. ಬಾಲ್ಯದಲ್ಲೇ ಉಳಿತಾಯ ಮನೋಭಾವ ಬೆಳಸಿಕೊಂಡಿದ್ದ ರೆಡ್ಡಿಯವರು ಕಡಿಮೆ ಪದಾರ್ಥಗಳಲ್ಲಿ ಹೆಚ್ಚು ರುಚಿಕರವಾದ ತಿಂಡಿಗಳಿಂದ 3 ತಿಂಗಳಲ್ಲೇ ಹೋಟೆಲಿನ ಆದಾಯ ದ್ವಿಗುಣಗೊಳ್ಳುವಂತೆ ಮಾಡಿದರು.
Picture
ಆದರೆ ಸೋದರ ಸಮಾನ, ಹಿತೈಷಿ ಶಂಕರ್ ನಾರಾಯಣ ರವರ ಪ್ರಭಾವಕ್ಕೊಳಗಾಗಿ ಹೋಟೆಲ್ ಉದ್ಯೋಗಕ್ಕೆ ಗುಡ್ ಬೈ ಹೇಳಬೇಕಾಯಿತು. ತಾನು ಗಳಿಸುತ್ತಿದ್ದ 6 ರೂ. ಸಂಬಳದಲ್ಲೇ 2 ರೂ ಉಳಿತಾಯ ಮಾಡಿ ಟೈಪಿಂಗ್, ಹಿಂದಿ ಪ್ರಥಮ, ಮಧ್ಯಮ, ಉನ್ನತ ದರ್ಜೆಯಲ್ಲಿ ಉತ್ತೀರ್ಣರಾದ ರೆಡ್ಡಿಯವರಿಗೆ ಓರ್ವ ಪೊಲೀಸ್ ನ ದಯೆಯಿಂದ ಲಾರಿ ಆಫೀಸ್ ನಲ್ಲಿ ಆಫೀಸ್ ಬಾಯ್ ಕೆಲಸ ಸಿಕ್ಕಿತು.

ಹೋಟೆಲ್ ನಿಂದ-ಲಾರಿಗೆ ಏರಿದ ವ್ಯಕ್ತಿ ಅಲ್ಲಿಂದ ಕಂಪೆನಿಯ ಮ್ಯಾನೇಜರ್ ಆಗಲಿಕ್ಕೆ ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ತನ್ನ ಚಾಕಚಕ್ಯತೆ, ಸ್ವಾಮಿನಿಷ್ಠೆ, ಬುದ್ಧಿವಂತಿಕೆ, ಮುಗ್ಧತೆ ನಿಃಸ್ವಾರ್ಥತೆಯಿಂದ ಎಲ್ಲರ ಮನಸ್ಸನ್ನು ದೋಚಿ ಅದೇ ಕಂಪನಿಯ ಮ್ಯಾನೇಜರ್ ಆದರು. ಮ್ಯಾನೇಜರ್ ಆದೊಡನೆ ಮನುಷ್ಯನಿಗೆ ಸಹಜವಾಗಿ ಬರುವ ಗರ್ವ, ಅಹಂಕಾರಗಳಾವುವೂ ರೆಡ್ಡಿಯವರ ಹತ್ತಿರಕ್ಕೂ ಸುಳಿಯಲಿಲ್ಲ. ಅಂದಿಗೂ ಅವರಿಗೆ ಆಫೀಸೇ ಮನೆ, ಅಲ್ಲಿನ ಕೆಲಸಗಾರರೇ ಕುಟುಂಬವರ್ಗ. ಬಿಡುವಿನ ರಾತ್ರಿ ಸಮಯದಲ್ಲಿ ದೇವಾಲಯದ ಇಕ್ಕೇಲಗಳಲ್ಲಿ ಮಲಗುತ್ತಿದ್ದ ಭಿಕ್ಷುಕರು, ಅನಾಥರಿಗೆ ಸಹಾಯ ಮಾಡುವ ದಾನಿಗಳಿಗೆ ನೆರವಾಗುವುದು. ಅವರ ಕಂಬನಿ ಹೊರೆಸುವ ಕಾಯಕ. ಅಷ್ಟೇ ಜೀವನ.

ರೆಡ್ಡಿಯವರು ಹಾಗೆಯೇ ಮುಂದುವರೆದಿದ್ದರೆ, ಇಂದಿಗೆ ಹಲವು ದೊಡ್ಡ ಲಾರಿ ಕಂಪನಿಗಳ ಒಡೆಯರಾಗುತ್ತಿದ್ದರು. ಆದರೆ, ವಿಧಿಯ ಲೆಕ್ಕಾಚಾರ ಬೇರೆಯೇ ಇತ್ತು. ಅದೊಂದು ದಿನ ಬಾಡಿಗೆಗೆ ಲಾರಿ ಬೇಕೆಂದು ಕಛೇರಿಗೆ ಬಂದಿದ್ದ ಅವರ ಅಣ್ಣನಿಗೆ ನಾರಾಯಣರು ಕಂಡರು. ಸೋದರ ಪ್ರೇಮ ಉಕ್ಕಿ ಹರಿದು ಆನಂದ ಬಾಷ್ಪ ಸುರಿಸಿದರು. ಮರಳಿ ಮನೆಗೆ ಕರೆದೊಯ್ದರು.

ಇತ್ತ, ನಾರಾಯಣ ಮನೆಬಿಟ್ಟು ಹೋದ ಮೇಲೆ, ತಂದೆ ತುಂಬಾ ನೊಂದುಕೊಂಡಿದ್ದರು. ಮಗನ ಮುಂದೆ ಮಂಡಿಯೂರಿ ಕ್ಷಮೆ ಕೇಳಲೂ ತಯಾರಿದ್ದರು. ಆದರೆ, ಮಗನ ಸುಳಿವೇ ಇರಲಿಲ್ಲ. ಕೊನೆಗೆ ಮಗು ಎಲ್ಲೋ ತೀರಿಹೋಗಿದ್ದಾನೆಂದು ತಿಳಿದು, ಆಸ್ತಿಯನ್ನೆಲ್ಲಾ ಉಳಿದ ಮಕ್ಕಳಿಗೆ ಭಾಗಮಾಡಿಕೊಟ್ಟರು. ಆದರೂ, ಎಂದೋ ಒಂದು ದಿನ ತನ್ನ ಮಗ ಹಿಂದಿರುಗಿ ಬರಬಹುದೆಂಬ ಕಿಂಚಿತ್ ಆಸೆಯಿಂದ ತಗ್ಗುದಿನ್ನೆಗಳಿಂದ ಕೂಡಿದ್ದ 1.5 ಎಕರೆ ಜಮೀನನ್ನು ನಾರಾಯಣರಿಗಾಗಿ ಮೀಸಲಿಟ್ಟಿದ್ದರು. ಅದು ಈಗ ನಾರಾಯಣರ ಜೀವನಕ್ಕೆ ಆಧಾರವಾಯಿತು.

ನಾರಾಯಣ ರೆಡ್ಡಿಯವರು ಅತ್ಯಂತ ಮಿತವ್ಯಯಿಯಾಗಿದ್ದು ಬರುತ್ತಿದ್ದ ಸಂಬಳದಲ್ಲಿ 90% ರಷ್ಟು ಉಳಿತಾಯ ಮಾಡಿ 6,000/- ರೂಗಳನ್ನು ಬ್ಯಾಂಕಿನ ಉಳಿತಾಯ ಖಾತೆಯಲ್ಲಿಟ್ಟಿದ್ದರು. ಆ ಹಣವನ್ನು ಈಗ ಬಳಸಿಕೊಳ್ಳಬಹುದೆಂದು ನಿರ್ಧರಿಸಿದರು. ಈ ಸಮಯಕ್ಕೇ ಸರಿಯಾಗಿ ಮನೆಯವರು ನಾರಾಯಣರೆಡ್ಡಿಯವರಿಗೆ ಮದುವೆ ಮಾಡಲು ಯೋಚಿಸುತ್ತಿದ್ದರು. ಯೌವ್ವನ/ಬಾಲ್ಯದಲ್ಲೆಲ್ಲೋ ಒಮ್ಮೆ ಪ್ರೀತಿ ಪ್ರೇಮದ ಗುಂಗು ಆವರಿಸಿದ್ದು ಬಿಟ್ಟರೆ, ಎಂದೂ ಮದುವೆ, ಹೆಂಡತಿಯ ಬಗ್ಗೆ ಚಿಂತನೆ ಮಾಡುವ ಪರಿಸ್ಥಿತಿ ಮತ್ತು ಸಮಯವಿಲ್ಲದ ರೆಡ್ಡಿಯವರಿಗೆ ವಯೋಸಹಜ ಬಯಕೆಯಾಯಿತು. ಆದರೆ ಹೆಣ್ಣು ಕೊಡುವವರಾರು? ಎಲ್ಲೇಕೆ ಹುಡುಕಬೇಕು? ಮನೆಯಲ್ಲಿಲ್ಲವೇ ಅಕ್ಕನ ಮಗಳು ಸರೋಜ. ಸರಿ, ನಾರಾಯಣ-ಸರೋಜರ ಮದುವೆಯು ವರ್ತೂರಿನಲ್ಲಿ ನಡೆಯಿತು. ಆ ಮೂಲಕ ಗೃಹಸ್ಥಾಶ್ರಮಕ್ಕೆ ಕಾಲಿಟ್ಟರು. ಸದ್ಗೃಹಸ್ಥೆಯ ಎಲ್ಲಾ ಲಕ್ಷಣಗಳನ್ನು ಹೊಂದಿದ್ದ ಸರೋಜಮ್ಮನವರು ಕೆಲಸದಲ್ಲಿ ಸದಾಮುಂದು. ಒಂದು ಕ್ಷಣವೂ ಸುಮ್ಮನೆ ವ್ಯರ್ಥ ಕಳೆಯುವ ಜೀವವಲ್ಲ ಅದು. ಆಕೆಯ ತಂದೆಯ ಮಾತಿನಲ್ಲೇ ಹೇಳಬೇಕೆಂದರೆ ಈಕೆ ಗಂಡಾಗಿ ಹುಟ್ಟಬೇಕಿತ್ತು, ಹಿರಿಯರೊಬ್ಬರು ನಾರಾಯಣರೆಡ್ಡಿಗೆ ಬಾಯಿದ್ದ ಹಾಗೆ, ಆಕೆಗೆ ಕಸುಬಿದೆ ಎಂದದ್ದು ಅರ್ಥಪೂರ್ಣವಾದ ಮಾತು.

ಅದರ ನಂತರವೂ ರೆಡ್ಡಿಯವರು ಲಾರಿ ಕಂಪೆನಿಗೆ ಕೆಲಸಕ್ಕೆ ಹೋಗುತ್ತಿದ್ದರು. ಆದರೆ ಹಳ್ಳಿ ಬಿಟ್ಟು ಎಲ್ಲೂ ಬರುವುದಿಲ್ಲ. ಇಲ್ಲೇ ಹಣಕೂಡಿಸಿ ಒಂದಷ್ಟು ಜಮೀನು ತೆಗೆದು ಕೃಷಿಮಾಡಿಕೊಂಡಿರಬಾರದೇ? ಎಂಬ ಮಡದಿಯ ಮಾತಿಗೆ ಬೆಲೆಕೊಟ್ಟು 6 ಎಕರೆ ಜಮೀನನ್ನು ಕೊಂಡರು, ವ್ಯವಸಾಯ ಆರಂಭಿಸಿದರು.

ಕೃಷಿಯೆಂಬುದು ರಕ್ತಗತವಾಗಿಯೇ ಮೈಗೂಡಿದ್ದ ರೆಡ್ಡಿಯವರಿಗೆ ಕೃಷಿಯ ಆಳಗಲಗಳನ್ನು ಅರಿಯುವುದು ಕಷ್ಟವಾಗಲಿಲ್ಲ. ಸತಿಪತಿಯರು ಶ್ರಮದಿಂದ ದುಡಿದು, ದಿನ್ನೆಗುಡ್ಡಗಳಿಂದ ಕೂಡಿದ್ದ ಭೂಮಿಯನ್ನು ಸಮಮಾಡಿದರು. ಉತ್ತು ಬಿತ್ತಿ ಬೆಳೆಯನ್ನು ತೆಗೆದರು. ಆಶ್ಚರ್ಯವೆಂಬಂತೆ, ಸುತ್ತಮುತ್ತಲಿನ ಗ್ರಾಮಗಳೆಲ್ಲ ರೈತರಿಗಿಂತ ಉತ್ತಮ ಫಸಲು ಇವರದಾಗಿತ್ತು. ಮುಂದಿನ ಬಾರಿ, ಇನ್ನೂ ಚೆನ್ನಾಗಿ ಕೃಷಿಮಾಡಿ, ಹೆಚ್ಚು ಬೆಳೆ ಬೆಳೆಯಬೇಕೆಂಬ ಹಠಕ್ಕೆ ದಂಪತಿಗಳಿಬ್ಬರೂ ಬಿದ್ದರು.

ಆ ವರ್ಷದ ಬೆಳೆ ರಾಗಿ. ಅತ್ಯಂತ ಶ್ರದ್ದೆ, ಭಕ್ತಿಯಿಂದ ಹೆಚ್ಚು ರಾಸಾಯನಿಕ ಕ್ರಿಮಿನಾಶಕ ಸಿಂಪಡಿಸಿ ಕೃಷಿಗೈದು ಮಳೆಯ ಆಶ್ರಯದಿಂದ ಬೆಳೆದ ರಾಗಿ 23 ಕ್ವಿಂಟಾಲ್! ಇಡೀ ಜಿಲ್ಲೆಯಲ್ಲಿಯೇ ಯಾರೂ ಬೆಳೆದಷ್ಟು ಉನ್ನತ. ವಿಷಯ ತಿಳಿದ ಕೃಷಿ ವಿಶ್ವವಿದ್ಯಾಲಯದವರು ವರ್ಷದ ಶ್ರೇಷ್ಠ ಕೃಷಿಕನೆಂಬ ಪಟ್ಟವನ್ನು ಕೊಟ್ಟರು. ರೆಡ್ಡಿಯವರು ಸಾಲಾಗಿ 1976,77,78ರಲ್ಲಿ ತಾಲ್ಲೂಕು, ಜಿಲ್ಲಾ, ರಾಜ್ಯ ಕೃಷಿಕ ಪ್ರಶಸ್ತಿಯನ್ನು ಪಡೆದರು. ಆನಂತರ, ಅಧಿಕಾರಿಗಳ ಹೊಗಳಿಕೆಗಳು ರೆಡ್ಡಿಯ ನೆತ್ತಿಗೇರಿತು. ಪ್ರಚಾರದ ಭರಾಟೆ ಹೆಚ್ಚಿತು. ಪರಿಣಾಮ ಮಡದಿ ಸರೋಜಮ್ಮನವರಿಗೆ ಸಂಸಾರದ, ಕೃಷಿಯ ಹೊರೆಯ ಜೊತೆಗೆ, ಅತಿಥಿಗಳ ಉಪಚಾರವೂ ಅಂಟಿಕೊಂಡಿತು.

ಅದೊಂದು ದಿನ ರೆಡ್ಡಿಯವರು ತನ್ನ ಬ್ಯಾಂಕ್ ಖಾತೆಯನ್ನು ತೆಗೆದು ನೋಡ್ತಾರೆ. ಉಳಿಸಿದ್ದ 3,000 ಮಾಯ! ಎಲ್ಲಿ ಹೋಯ್ತು? ಅದು ರಾಸಾಯನಿಕ ಗೊಬ್ಬರ ಕಂಪನಿಗಳ ತಿಜೋರಿ ಸೇರಿತ್ತು. ಅಧಿಕ ಇಳುವರಿಯ ಮಾಯೆಗೆ ಸಿಲುಕಿ, ಇದ್ದ ಅಲ್ಪ ಮೊತ್ತದ ಹಣವನ್ನು ಭೂಮ್ತಾಯಿಗೆ ವಿಷ ತಿನಿಸಲು ಖರ್ಚು ಮಾಡಿದ್ದರು. ಉಳಿತಾಯ ಮಾತ್ರ ಶೂನ್ಯ. ನಷ್ಟವನ್ನು ಎಂದೂ ಕಾಣದ ರೆಡ್ಡಿಯವರು ಸಹಜವಾಗಿಯೇ ಈ ಕೃಷಿಯ ಸಹವಾಸವೇ ಬೇಡ, ಲಾರಿ ವ್ಯಾಪಾರದಿಂದಲೇ ಕೈತುಂಬ ಹಣ ಸಂಪಾದಿಸಬಹುದೆಂದು ನಿರ್ಧರಿಸಿದರು. ಹೆಂಡತಿಯ ಹತ್ತಿರ ವಿಚಾರ ಪ್ರಸ್ತಾಪಿಸಿದಾಗ ಪೂರ್ವಿಕರಿಂದ ಬಳುವಳಿಯಾಗಿ ಬಂದ ವೃತ್ತಿ ಇದು. ಇದನ್ನು ನಂಬಿ ಕೆಟ್ಟವರಿಲ್ಲ. ಮತ್ತೆರಡು ವರ್ಷ ಕೃಷಿಯನ್ನೇ ಮುಂದುವರೆಸಿ ನೋಡೋಣವೆಂದು ಸಲಹೆಯಿತ್ತರು. ಮತ್ತೆರಡು ವರ್ಷ ಕೃಷಿ ಮುಂದುವರೆಸಿ ದುಡಿದದ್ದಾಯಿತು. ಯಾವುದೇ ಬೆಳವಣಿಗೆ ಕಾಣಲಿಲ್ಲ. ಕೊನೆಗೆ ಪತ್ನಿ ಸರೋಜಮ್ಮ ಗಂಡನ ಮಾತಿಗೆ ಸಮ್ಮತಿ ಸೂಚಿಸದೆ ವಿಧಿಯಿರಲಿಲ್ಲ.

ಆದರೆ, ವಿಧಿ ಬಿಡಬೇಕಲ್ಲಾ? ಅಂದು (1980) ಮುಂಜಾನೆ ಅಮೇರಿಕಾದಿಂದ ರೆಡ್ಡಿಯವರ ತೋಟ ನೋಡಲು ಹಿರಿಯರೊಬ್ಬರು ಬಂದರು ಅವರ ಹೆಸರು ಆಲ್ವಿನ್ ಟ್ರೆಕ್ಕರ್, ಅಮೇರಿಕಾದ ಪ್ರಖ್ಯಾತ ಬಾಹ್ಯಾಕಾಶ ಸಂಸ್ಥೆ NASA ದಲ್ಲಿ ವಿಜ್ಞಾನಿಯಾಗಿದ್ದವರು. ಕೈತುಂಬಾ ಸಂಬಳ, ಸವಲತ್ತುಗಳು. ಆದರೆ, ಅದೂಂದು ದಿನ ಅವರ ಮನಸ್ಸು ಸಾವಯವ ಕೃಷಿಯೆಡೆಗೆ ಸೆಳೆದಿತ್ತು. ಅಂದಿನಿಂದ ತನ್ನ ಜೀವನವನ್ನು ಭೂಮಿತಾಯಿಯ ಸೇವೆಗೆ ಮುಡಿಪಿಟ್ಟರು. ರೆಡ್ಡಿಯವರ ಪರಿಸ್ಥಿತಿ ಕಂಡು ಮರುಗಿದ ಅವರು ಸಾವಯವ ಕೃಷಿಯೆಡೆಗೆ ಮನಸೆಳೆಯಲೆತ್ನಿಸಿದರು. ಆದರೆ, ನಿರ್ಧಾರ ಸಡಿಲಿಸದ ರೆಡ್ಡಿಯವರು ಕೃಷಿಗೆ ವಿದಾಯ ಹೇಳಲು ನಿರ್ಧರಿಸಿದರು. ಪಟ್ಟು ಬಿಡದ ಆಲ್ಟಿನ್ ಕೊನೆಗೊಮ್ಮೆ 1000 ಡಾಲರ್ ಹಣವನ್ನು ಕಳುಹಿಸಿ, ರೆಡ್ಡಿ, ಇದು ನೀನು ಕೃಷಿಯಿಂದ ಅನುಭವಿಸಿದ ನಷ್ಠ/ಸಾಲ, ಹತಾಷೆ ಕಂಡಿದ್ದೇನೆ. ಆದರೆ ದಯಮಾಡಿ, ಕೃಷಿ ತೊರೆಯಬೇಡ, ನಿನ್ನಂತಹ ಶ್ರದ್ಧಾವಂತರು ದೂರಾದರೆ ಮತ್ತಾರು ಭೂಮ್ತಾಯಿಗೆ ಸೇವೆ ಮಾಡುತ್ತಾರೆ? ಇಗೋ ನನ್ನ ಉಳಿತಾಯದಲ್ಲಿ 1000 ಹಣವನ್ನು ಕಳುಹಿಸುತ್ತಿದ್ದೇನೆ. ಇದು ನಿನ್ನ ಕೊನೆಯ ಪ್ರಯತ್ನವೆಂಬಂತೆ ಶ್ರದ್ದೆಯಿಂದ ಕೃಷಿ ಮಾಡು. ಫಲ ಸಿಕ್ಕೇ ಸಿಗುತ್ತದೆ. ದುರದೃಷ್ಟವಶಾತ್ ಸಿಗದಿದ್ದರೆ, ನಿನ್ನ ದಾರಿ ನೀನು ಹಿಡಿ ಎಂದು ಬರೆದಿದ್ದರು. ಈ ಪತ್ರ ಓದಿ ರೆಡ್ಡಿಯವರ ಕಣ್ಣಲ್ಲಿ ನೀರು. ಯಾವುದೇ ದೇಶದ ಗೊತ್ತು ಪರಿಚಯವಿಲ್ಲದ ವ್ಯಕ್ತಿ, ನನ್ನನ್ನ ಸಾವಯವ ಕೃಷಿಯಲ್ಲಿ ತೊಡಗಿಸಲು ಇಷ್ಟೆಲ್ಲಾ ತ್ಯಾಗ ಮಾಡುತ್ತಿದ್ದಾರೆಂದರೆ, ನನ್ನಲ್ಲೇನೋ ಶಕ್ತಿಯಿದೆ. ನನ್ನಿಂದ ಏನೋ ಮಹತ್ತರ ಕೆಲಸ ಆಗಲಿಕ್ಕಿದೆಯೆಂದು  ಅಂದೇ ನಿರ್ಣಯಿಸಿದರು: ಬದುಕಿದರೆ, ಕೃಷಿಯಲ್ಲೇ ಬದುಕಬೇಕು ಎಂದು.

ಅಂದು ಮುನ್ನುಗ್ಗಿದ ರೆಡ್ಡಿಯವರು, ಎಂದೂ ಹಿಂದೆ ಹೆಜ್ಜೆ ಇಟ್ಟವರೇ ಅಲ್ಲ. ಕೃಷಿಯಲ್ಲಿ ಹಲವು ಪ್ರಯೋಗಗಳನ್ನು ನಡೆಸಿ, ಕೃಷಿಯು ಲಾಭದಾಯಕವನ್ನಾಗಿಸುವ ನಿಟ್ಟಿನಲ್ಲಿ ಶ್ರಮಿಸಿದ್ದಾರೆ. ತನ್ನ 8 ಎಕರೆ ಭೂಮಿಯಲ್ಲಿ ಹಲವು ರೀತಿಯ ಜೀವನಾಧಾರ ಬೆಳೆ ಬೆಳೆಯುವುದರ ಜೊತೆಗೆ ಸಪೋಟ, ಜ್ಯೂಸ್ ಪ್ರೂಟ್, ತೆಂಗು, ಕಾಫಿ, ಶುಂಠಿ, ನುಗ್ಗೆ ಬೆಳೆಯುತ್ತಾ ಹೊಲದ ಸುತ್ತಲೂ ಗಿಡಮರಗಳನ್ನು ಬೆಳೆಸಿ ತೋಟವನ್ನು ಸಾವಯವವಾಗಿಸಿ ಪರಿಪೂರ್ಣ ಕೃಷಿಯ ಪಾಠವನ್ನು ಕಲಿಸಿದ್ದಾರೆ.

ರೆಡ್ಡಿಯವರು ಇತರರಿಗಿಂತ ಭಿನ್ನವಾಗಿ ಕಾಣುವುದು, ತನ್ನ ಕಠೋರ ಶಿಸ್ತು, ಸಂಯಮ, ಸರಳತೆ, ನಿಃಸ್ವಾರ್ಥತೆಯಿಂದ. ರಾಜ್ಯದ ಪ್ರತಿಷ್ಠಿತ ಪ್ರಶಸ್ತಿಯಾದ ನಾಡೋಜ, ರಾಜ್ಯೋತ್ಸವದ ಜೊತೆ ಜಿಲ್ಲಾ ಮಟ್ಟದ ಪ್ರಶಸ್ತಿಗಳನ್ನು ಪಡೆದ ರೆಡ್ಡಿಯವರು ಎಂದೂ ಶ್ರೀಮಂತಿಕೆಯೆಡೆಗೆ ವಾಲಿದವರಲ್ಲ. ಇಂದೂ ಯಾರೋ ಕೊಟ್ಟ ಖಾದಿ ಪಂಚೆ, ಅಂಗಿ ಧರಿಸುವ ರೆಡ್ಡಿಯವರು ತನ್ನ ಜಮೀನಿನಲ್ಲೆಲ್ಲೂ ಚಪ್ಪಲಿಯನ್ನು ಧರಿಸದೆ ಓಡಾಡುತ್ತಾರೆ. ಶ್ರೀಮಂತಿಕೆಯೆನ್ನುವುದು ಜೀವನ ಮೌಲ್ಯಗಳಲ್ಲಿ ಇರಬೇಕೇ ಹೊರತು ಬಾಹ್ಯ ನೋಟದಲ್ಲಲ್ಲ ಎಂದು ಹೇಳುವ ರೆಡ್ಡಿಯವರು ದೊಡ್ಡ ಕಾರ್ಯಕ್ರಮಗಳಿಗೆ ಮುಖ್ಯ ಅತಿಥಿಗಳಾಗಿ ಹೋಗುವಾಗ ಸರ್ಕಾರಿ ಬಸ್ಸು, ಲಾರಿಗಳಲ್ಲೇ ಓಡಾಡುತ್ತಾರೆ. ಯಾಕೆ ರೆಡ್ಡಿಯವರೇ ಹೀಗೆ? ಎಂದು ಕೇಳಿದರೆ ಸ್ವಾಮಿ, ಅವರೇನೋ ಇವತ್ತೊಂದು ದಿನ ಕಾರುಗೀರು ಅಂತ ರೂಡಿ ಮಾಡ್ತಾರೆ. ನಾವು ರೈತರು ನಾಳೆಯಿಂದ ನಮಗೆ ಕಾರು ಕೊಡೋರು ಯಾರು? ಹೊಲ ಮಾರಲಿಕ್ಕಾಗುತ್ತಾ? ಎಂದು ಮುಗ್ದವಾಗಿ ನಗುತ್ತಾರೆ.

ಉಳಿತಾಯದ ಸಾಕಾರ ಮೂರ್ತಿಯೆಂದರೆ, ನಾರಾಯಣರೆಡ್ಡಿಯವರು. ಅನವಶ್ಯಕವಾಗಿ ಮಾಡುವ ಯಾವುದೇ ವೆಚ್ಚಕ್ಕೂ ಅವರ ವಿರೋಧವಿದೆ. ಯಾರು ಉಳಿತಾಯ ಮಾಡುವ (ಕನಿಷ್ಠ 20%) ಮನೋಭಾವ ಇರುವುದಿಲ್ಲವೋ ಅವರು ದುಡಿಯದೇ ಇರುವುದೇ ಲೇಸೆಂದು ಹೇಳುವ ರೆಡ್ಡಿ ತನಗೆ ಯಾರಾದರೂ ಸಂಭಾವನೆ ಕೊಟ್ಟರೆ, ಅದರಲ್ಲಿ ಕನಿಷ್ಠ ಪ್ರಮಾಣದ ಖರ್ಚು ಮಾಡಿ, ಉಳಿದದ್ದನ್ನು ಬ್ಯಾಂಕ್ ಖಾತೆಯಲ್ಲಿ ಇಡುತ್ತಾರೆ. ಆ ಹಣವನ್ನೇನೂ ತನ್ನ ಸ್ವಂತಕ್ಕೆ ಬಳಸಿಕೊಳ್ಳುವುದಿಲ್ಲ. ಬಡ ವಿದ್ಯಾರ್ಥಿಗಳ ಓದಿಗೆ ಉದಾರವಾಗಿ ದಾನ ಮಾಡುತ್ತಾರೆ! ಇದುವರೆಗೆ 30 ಜನ ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮಾಡಿ, ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಕೂಡಿಟ್ಟ ಪೈಸೆ ಪೈಸೆಯನ್ನು ಸೇರಿಸಿ, ರೈತರು, ವಿದ್ಯಾರ್ಥಿಗಳಿಗೆ ತರಬೇತಿ ನೀಡಲು 18 ಲಕ್ಷ ಖರ್ಚುಮಾಡಿ ತರಬೇತಿ ಕೇಂದ್ರವನ್ನು ತನ್ನ ತೋಟದ ನಡುವೆ ಕಟ್ಟಿದ್ದಾರೆ. ತನ್ನ ನಂತರ ತರಬೇತಿ ಕೇಂದ್ರವು ಉಸಿರಾಡಲಿದೆ. ಎಂಬುದು ಅವರ ನಂಬಿಕೆ.

ಉಳಿತಾಯವೆನ್ನುವುದು ಕೇವಲ ಹಣಕ್ಕೆ ಮಾತ್ರ ಮೀಸಲಿರಿಸದೆ, ಸಂಪನ್ಮೂಲಗಳಿಗೆ ಕೂಡ ಅನ್ವಯಿಸುತ್ತದೆಂದು ನಂಬಿರುವವರು ನಾರಾಯರೆಡ್ಡಿ. ಅದೊಮ್ಮೆ ನಾಡೋಜ ಪ್ರಶಸ್ತಿ ಸ್ವೀಕರಿಸಲು ಧಾರವಾಡದ ಹೋಟೆಲ್ ನಲ್ಲಿ ಉಳಿದುಕೊಂಡಿದ್ದಾಗ, ಬಿಸಿನೀರಿಗಾಗಿ ಒಂದು ಬಕೆಟ್ ನೀರನ್ನು ವ್ಯರ್ಥವಾಗಿ ಚೆಲ್ಲಬೇಕಾದಾಗ, ನನಗೆ ಬಿಸಿನೀರಿನ ಅವಶ್ಯಕತೆಯಿಲ್ಲವೆಂದು ಅಂತಹ ಚಳಿಯಲ್ಲೂ ತಣ್ಣೀರು ಸ್ನಾನ ಮಾಡಿ ನನ್ನ ಪಾಲು ಇಷ್ಟೇ ಎಂದು ಹೇಳಿದ ಆದರ್ಶ ವ್ಯಕ್ತಿ. ಇವರ ಉಳಿತಾಯದ ಪರಿ ಹೇಗಿರುತ್ತದೆಂದರೆ ತಮ್ಮ ಪ್ರತಿದಿನದ ಶೌಚಕ್ರಿಯೆಯನ್ನು ತೋಟದಲ್ಲಿ ನೆಟ್ಟ ಯಾವುದಾದರೂ ಗಿಡದ ಹತ್ತಿರ ಮುಗಿಸುವ ಪರಿಪಾಠ ಗಮನಿಸಬಹುದು.

ಇಂದಿನ ಕೃಷಿಕರ ಮನಃಸ್ಥಿತಿ / ಪರಿಸ್ಥಿತಿಗೆ ಮುಮ್ಮುಲ ಮರುಗುವ ರೆಡ್ಡಿಯವರು, ಈ ವ್ಯವಸ್ಥೆಗೆ ಕಾರಣರಾದ ಸರ್ಕಾರ, ವಿಶ್ವವಿದ್ಯಾಲಯಗಳು, ರೈತರ ಬಗ್ಗೆ ಕಿಡಿಕಾರುತ್ತಾರೆ. ಮುಗ್ದ ವ್ಯಕ್ತಿಯಂತೆ ಕಾಣುವ ರೆಡ್ಡಿ ಈ ವಿಚಾರದಲ್ಲಿ ಬೆಂಕಿಯ ಚೆಂಡಾಗುತ್ತಾರೆ. ಬಹುರಾಷ್ಟ್ರೀಯ ಕಂಪನಿಗಳ ಕೈಗೊಂಬೆಯಾಗಿರುವ ಸರ್ಕಾರ ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ ಕೈಗಾರಿಕೆಗಳಿಗೆ ರತ್ನಕಂಬಳಿ ಹಾಸಿ. ಬಡರೈತರ ಕಣ್ಣೊರೆಸಲು ಸಬ್ಸಿಡಿ, ಸಾಲ ಮನ್ನದಂತಹ ನಾಟಕ ಆಡುವುದನ್ನು ಖಂಡಿಸುತ್ತಾರೆ. ಕೃಷಿ ವಿಶ್ವವಿದ್ಯಾಲಯಗಳೂ ಈ ನಿಟ್ಟಿನಲ್ಲಿ ಕೈಜೋಡಿಸಿರುವುದು ನಾಚಿಕೆಗೇಡೆಂದು ಛೇಡಿಸುತ್ತಾರೆ. ಯಾವುದೇ ಕೃಷಿ ಸಮಾರಂಭಕ್ಕೆ ಹೋದರೂ. ಕೃಷಿ ವಿಶ್ವವಿದ್ಯಾಲಯ ವಿದ್ಯಾರ್ಥಿಗಳೊಂದಿಗೆ ಮುಖಾಮುಖಿಯಾಗುವ ರೆಡ್ಡಿಯವರು ಅನುಭವದಿಂದ ಮನಗಂಡ, ಜ್ಞಾನದಿಂದ ಕೃಷಿ ವಿಜ್ಞಾನಕ್ಕೇ ಸವಾಲೆಸೆಯುತ್ತಾರೆ. ವಿಜ್ಞಾನಿಗಳು ಪೂರ್ಣವಾಗಿ ಅವರ ವಾದವನ್ನು ಒಪ್ಪದಿದ್ದರೂ ತಿರಸ್ಕರಿಸುವಂತಿರುವುದಿಲ್ಲ. ಆದರೂ ವ್ಯವಸ್ಥೆಯಲ್ಲಿ ಸಿಕ್ಕಿ ತನ್ನ ಆತ್ಮಕ್ಕೆ ದ್ರೋಹ ಮಾಡಿಕೊಳ್ಳುತ್ತಿರುವ ಅಧಿಕಾರಿ, ವಿಜ್ಞಾನಿಗಳೆಡೆಗೆ ರೆಡ್ಡಿಯವರ ಕನಿಕರವಿದೆ.

ರೆಡ್ಡಿಯವರು ಸಮಯಪಾಲನೆಗೆ ಹೆಚ್ಚು ಮಹತ್ವ ನೀಡುತ್ತಾರೆ. ಅದರಲ್ಲೂ ರೈತರು ಕೃಷಿ ಕೆಲಸದಲ್ಲಿ ನಿರತರಾಗದೇ, ರಾಜಕೀಯ ವ್ಯಕ್ತಿಗಳ ಹಿಂದೆ, ಸೊಂಬೇರಿ ಕಟ್ಟೆಗಳ ಮೇಲೆ ಹರಟೆ ಹೊಡೆಯುತ್ತ ಕಾಲಾಲಾಪನೆ ಮಾಡುವ ರೈತರಿಗಂತೂ ರೆಡ್ಡಿಯವರನ್ನು ಕಂಡರೆ ದಿಗಿಲು ಲೋ ಮುಠ್ಠಾಳರ, ರಾಜಕೀಯ ವ್ಯಕ್ತಿಗಳು ಬಿಸಾಕುವ ಎಂಜಲು ಕಾಸಿಗೆ ಕೈಯೊಡ್ಡಿ, ಕೃಷಿಕರಿಗಿರುವ ಮಾನ ಹರಾಜ್ ಹಾಕ್ತೀರಾ? ನೀವೆಲ್ಲಾದರೂ ಹೊರಟು ನಿಂತಾಗ ಹೊಲ ಎಲ್ಲೋಗ್ತಿದ್ದೀಯಾ ಅಂತ ಕೇಳಲ್ಲ. ಪಾಪ, ನಿಮ್ಮನ್ನು ಕಟ್ಟಿಕೊಂಡ ತಪ್ಪಿಗೆ ಮಕ್ಕಳನ್ನು ಎದೆಗವಚಿಕೊಂಡು ಆ ಪುಣ್ಯಾತ್ಗಿತ್ತಿ (ಹೆಂಡತಿ) ಹೊಲದಲ್ಲಿ ಮೂಕವಾಗಿ ಗೆಯ್ಯುತ್ತಾಳೆ. ನೀವು ಹೀಗೆ ಕುಡಿತ, ಜೂಜು ಅಂತ ಹಾಳಾಗೋಗ್ತಿರ್ತೀರಾ. ನಿಮ್ಮ ಹೀನ ಪರಿಸ್ಥಿತಿಗೆ ನೀವೇ ಕಾರಣ. ಸ್ವಾಭಿಮಾನ ಇಲ್ಲ  ಎಂದು ತನ್ನ ಮನಸ್ಸಿನಾಳದ ಉರಿಯನ್ನು ಹೊರಗೆಡುವುತ್ತಾರೆ. ಇಲ್ಲಿ ಮಗು ದಾರಿ ತಪ್ಪುತ್ತಿದ್ದಾಗ ತಂದೆ, ಪ್ರೀತಿ ತುಂಬಿದ ದ್ವೇಷ, ದುಃಖ ದುಮ್ಮಾನಗಳನ್ನು ಹೊರಗೆಡವುವಂತಿರುತ್ತದೆ.

ನಾನು ಸಮಾಜಕಾರ್ಯ ವಿದ್ಯಾರ್ಥಿಗಳನ್ನು ನಾರಾಯಣರೆಡ್ಡಿಯವರ ತೋಟಕ್ಕೆ ಪರಿವೀಕ್ಷಣಾ ಭೇಟಿಗೆಂದು ಕರೆದೊಯ್ಯುತ್ತಿರುತ್ತೇನೆ. ನನ್ನುದ್ದೇಶ, ವಿದ್ಯಾರ್ಥಿಗಳೆಲ್ಲಾ ಕೃಷಿ ಕ್ಷೇತ್ರಕ್ಕಿಳಿಯಲಿ ಎಂದಲ್ಲ. ಕನಿಷ್ಠ, ಅವರ ಸರಳ, ಸಜ್ಜನಿಕೆ, ವ್ಯಕ್ತಿತ್ವದ ತೃಣಮಾತ್ರವಾದರೂ ರೂಢಿಸಿಕೊಂಡು ಕೃಷಿ, ಕೃಷಿಕರೆಡೆಗಿನ ಮನೋಭಾವನೆ ಸಕಾರಾತ್ಮತೆಗೊಳಿಕೊಳ್ಳಲಿ ಎಂದು. ಅಲ್ಲಿಗೆ ಕರೆದೊಯ್ದ ವಿದ್ಯಾರ್ಥಿಗಳಲ್ಲಿ ಪ್ರತಿಯೊಬ್ಬರು ಆ ಕೃಷಿಯೋಗಿಯ ಮಂತ್ರಸದೃಶ್ಯ, ಮುಗ್ಧತೆಗೆ ಮಾರುಹೋಗಿದ್ದಾರೆ. ಪ್ರಭಾವಿತರಾಗಿದ್ದಾರೆ. ಮಹತ್ತರವಾದ ಮಾರ್ಪಾಡುಗಳನ್ನು ಮಾಡಿಕೊಂಡಿದ್ದಾರೆ. ಅವರ ಪಾಠ ಹೇಳಿಕೊಡುವ ರೀತಿಯೂ ವಿಶೇಷವಾಗಿರುತ್ತದೆ. ಪ್ರತಿ ಗಿಡ, ಮರ, ಬೆಳೆಯ ಹತ್ತಿರ ಕರೆದೊಯ್ದು ಅದರ ಬಗ್ಗೆ ವಿವರವಾಗಿ ತಿಳಿಸಿಕೊಡುತ್ತಾರೆ. ಅದು ಮಕ್ಕಳ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತದೆ. ಅದೊಮ್ಮೆ, ಕನಕಪುರದ ಹತ್ತಿರ ಕೋಣಾಲದೊಡ್ಡಿ ಗ್ರಾಮದಲ್ಲಿ ಸಮಾಜಕಾರ್ಯ ಶಿಬಿರವನ್ನು ಏರ್ಪಡಿಸಿದ್ದೆವು. ಅದರಲ್ಲಿ ಸಾವಯವ ಕೃಷಿ, ಸಾವಯವ ಜೀವನ ಎಂಬುದರ ಬಗ್ಗೆ ಉಪನ್ಯಾಸವನ್ನು ನಾರಾಯಣ ರೆಡ್ಡಿಯವರಿಂದ ಕೊಡಿಸಬೇಕೆಂದು ನಮ್ಮ ಅಭಿಲಾಷೆಯಾಗಿತ್ತು. ಅಂದು ಬೆಳಿಗ್ಗೆ 5 ಗಂಟೆಗೆ ಮನೆಯಿಂದ ಹೊರಟ ರೆಡ್ಡಿಯವರು ದೊಡ್ಡಬಳ್ಳಾಪುರದಲ್ಲಿ ಬಸ್ ನಿಲ್ದಾಣದಲ್ಲಿ ಮಾರಾಟ ಮಾಡುತ್ತಿದ್ದ ಕಿತ್ತಳೆ ಹಣ್ಣನ್ನು ಕೊಂಡರು. ಅದರ ಸಿಪ್ಪೆ ಸುಲಿದು, ಒಂದೊಂದೇ ತೊಳೆ ಬಿಡಿಸುತ್ತಾ ಒಳಗಿರುವ ಬೀಜಗಳನ್ನು ಬಿಸಾಡದೆ, ತನ್ನ ಅಂಗಿಯ ಜೋಬಿನಲ್ಲಿ ಹಾಕಿಕೊಂಡರು. ಸುಮಾರು 15-20 ಬೀಜಗಳನ್ನು ಶೇಖರಿಸಿ, ಶಿಬಿರದಲ್ಲಿ ಉಪನ್ಯಾಸನೀಡುವ ಸಂದರ್ಭದಲ್ಲಿ, ನೋಡಿ, ಈ 15 ಬೀಜಗಳನ್ನು ನಾನು ಬಿಸಾಡಬಹುದಿತ್ತು, ಆದರೆ, ನಾವು ರೈತರು ಬುದ್ದಿವಂತಿಕೆಯಿಂದಿರಬೇಕು. ಈ ಬೀಜಗಳನ್ನು ನಮ್ಮ ತೋಟದಲ್ಲಿ ಸಸಿ ಮಾಡುತ್ತೇನೆ. ಗಿಡಗಳನ್ನು ಎಲ್ಲಿಂದಲೋ ಕೊಂಡು ತಂದು ನೆಡುವ ಬದಲು ಇವೇ ಗಿಡಗಳನ್ನು ನೆಡುತ್ತೇನೆ! ಎಂದು ಹೇಳುತ್ತಿದ್ದರೆ ಅಲ್ಲಿದ್ದವರೆಲ್ಲಾ ಹೀಗೂ ಉಂಟೆ ಎಂದು ನೋಡುತ್ತಿದ್ದರು. ಇದು ನಮಗೂ ಅನ್ವಯಿಸುತ್ತದೆ ಎಂದು ವಿದ್ಯಾರ್ಥಿಗಳು ಅಂದುಕೊಂಡದ್ದು ಕೇಳಿಸಿತು.

ರೆಡ್ಡಿಯವರ ಜೀವನದಲ್ಲಿ ಮರೆಯಲಾಗದ ಕ್ಷಣವೆಂದರೆ, ಜಪಾನಿನ ಪ್ರಸಿದ್ದ ಕೃಷಿ ತಜ್ಞ ಸಹಜ ಕೃಷಿಯ ಜನಕ ಪೂಕವೋಕರ ಭೇಟಿ. ಕೃಷಿಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡಿದ ಪೂಕವೋಕರು ಅದೊಮ್ಮೆ (1988) ಬೆಂಗಳೂರಿಗೆ ಬಂದಾಗ ಪ್ರಗತಿ ಪರ ರೈತ ನಾರಾಯಣರೆಡ್ಡಿಯವರನ್ನು ಹುಡುಕಿಕೊಂಡು ಮನೆಬಾಗಿಲಿಗೆ ಬಂದರು. ರೆಡ್ಡಿಯವರಿಗೆ ಒಂದು ಕ್ಷಣ ಏನು ಮಾಡಬೇಕೆಂದು ತೋಚಲಿಲ್ಲ. ಅವರ ಕಾಲಿಗೆ ಎರಗಿದರು. ಪ್ರೀತಿಯಿಂದ ಅಪ್ಪಿಕೊಂಡ ಪೂಕವೋಕ, ರೆಡ್ಡಿಯವರ ತೋಟದಲ್ಲೆಲ್ಲಾ ಓಡಾಡಿ, ಅಲ್ಲಿ ಮರಗಿಡಗಳು ಕಡಿಮೆಯಿರುವುದನ್ನು ಗಮನಿಸಿ ರೆಡ್ಡಿ, ನೀನೇಕೆ ದಿನಕ್ಕೊಂದು ಗಿಡ ನೆಡಬಾರದು? ಎಂದು ಪ್ರಶ್ನಿಸಿದರು. ಅದನ್ನು ಆಜ್ಞೆ ಎಂಬಂತೆ ತಿಳಿದ ರೆಡ್ಡಿಯವರು ಅಂದಿನಿಂದ, ಪ್ರತಿದಿನ ಒಂದು ಗಿಡ ನೆಟ್ಟು, ಕಾಡು ನಿರ್ಮಾಣದಲ್ಲಿ ತೊಡಗಿದ್ದಾರೆ. ತಾವೇ ಅಲ್ಲದೇ, ತನ್ನ ತೋಟಕ್ಕೆ ಬರುವ ಹಿರಿಯರೆಲ್ಲರಿಗೂ ಅದನ್ನು ಬೋಧಿಸುತ್ತಾರೆ. ಇವರ ವೃಕ್ಷಪ್ರೇಮಕ್ಕೆ ಮಾರುಹೋದ ಆಂಧ್ರಪ್ರದೇಶದ ಒಂದಷ್ಟು ಜನ ವಿದ್ಯಾರ್ಥಿಗಳು ತಮ್ಮ ಜನ್ಮದಿನದಂದು ವ್ಯರ್ಥ ಸಮಾರಂಭಗಳಿಗೆ ಹಣ ಖರ್ಚು ಮಾಡದೇ, ಬಡರೈತರ ಹೊಲಗಳಲ್ಲಿ ಗಿಡನೆಟ್ಟು, ಅದರ ಪಾಲನೆ ಪೋಷಣೆಗೆ ಹಣಕೊಟ್ಟು ಪ್ರಕೃತಿಗೆ ತಮ್ಮ ಪುಟ್ಟಕಾಣಿಕೆ ನೀಡಿದ್ದಾರೆ.

ರೆಡ್ಡಿಯವರಲ್ಲೊಬ್ಬ ಸಂಶೋಧಕ ಸದಾ ಜಾಗೃತನಾಗಿರುತ್ತಾನೆ. ಅವರ ಯಾವುದೇ ಊರಿನ ಹೊಲಗದ್ದೆಗಳಿಗೆ ಹೋದರೂ, ಒಂದು ಚಿಕ್ಕಬಳ್ಳಿಯನ್ನೋ, ಎಲೆಯನ್ನೋ ಬಾಯಲ್ಲಿ ಕಚ್ಚಿ ನೋಡುವ ಅಭ್ಯಾಸ ಅವರದು. ಅದರ ವಾಸನೆ ಮತ್ತು ರುಚಿಯಿಂದಲೇ ಅದರ ಗುಣ ವಿಶೇಷಗಳನ್ನು ಅಳೆಯುವ ರೆಡ್ಡಿ, ಅದನ್ನು ಯಾವ ಬೆಳೆಗೆ ಔಷಧಿಯಾಗಿ ಬಳಸಬಹುದೆಂದು ತಟ್ಟಂತ ಹೇಳುತ್ತಾರೆ. ಅದರ ಹಿಂದೆ ಅವರ ವಿಶಾಲ ಅನುಭವ, ಪ್ರಯೋಗಶೀಲತೆಯಿರುವುದು ಎದ್ದು ಕಾಣುತ್ತದೆ. ಈ ರೀತಿಯ ಅನ್ವೇಷಕ ಗುಣವು ಕರ್ನಾಟಕದ ಭತ್ತ ಕೃಷಿಯಲ್ಲಿ ಕ್ರಾಂತಿಯನ್ನೇ ಮಾಡಿದ ಶ್ರೀ ಪದ್ಧತಿಯ ಅಳವಡಿಕೆಗೆ ಕಾರಣವಾದದ್ದು ಒಂದು ಕೌತುಕ.

ಅದು ನಡೆದದ್ದು ಹೀಗೆ; 2001 ರಲ್ಲಿ ಯಾವುದೋ ಸೆಮಿನಾರ್ ಪ್ರಯುಕ್ತ ರೆಡ್ಡಿಯವರು ಪ್ರಾನ್ಸ್ ಗೆ ಹೋದರು. ಅಲ್ಲಿನ ನಿಯತಕಾಲಿಕದಲ್ಲಿ ಕಡಿಮೆ ನೀರು ಮತ್ತು ಖರ್ಚಿನಲ್ಲಿ ಭತ್ತದ ಇಳುವರಿ ದ್ವಿಗುಣಗೊಳ್ಳುವ ಶ್ರೀ ಪದ್ಧತಿಯೆಡೆಗೆ ಒಂದು ಲೇಖನ ಪ್ರಕಟವಾಗಿತ್ತು. ಭಾಷೆ ತಿಳಿಯದಿದ್ದ ರೆಡ್ಡಿಯವರು ಅದನ್ನು ಒಬ್ಬ ಪ್ರೊಫೆಸರ್ ಗೆ ತೋರಿಸಿ ಕೇಳಿ ತಿಳಿದುಕೊಂಡು, ಅದರಲ್ಲಿ ಬರೆದಿದ್ದ ಇ-ಮೇಲ್ (ಮಿಂಚೋಲೆ) ವಿಳಾಸ ಪಡೆದರು. ನಂತರ ಸ್ನೇಹಿತರ ಸಹಾಯದಿಂದ ಅಂತರ್ಜಾಲ ಜಾಲಾಡಿ ಮಡಗಾಸ್ಕರ್ ಅಥವಾ ಶ್ರೀ ಪದ್ದತಿಯ ಬಗ್ಗೆ ಮಾಹಿತಿ ಕಲೆ ಹಾಕಿದರು. ನೀರಿನ ಕೊರತೆಯಿರುವ ನಮ್ಮಂಥ ಪ್ರದೇಶಗಳಲ್ಲಿ ಈ ಪದ್ಧತಿ ಸೂಕ್ತವೆಂದು ಮನಗಂಡು, ತಾವೇ ಪ್ರಯೋಗಕ್ಕೆ ತೊಡಗಿದರು. ಆಶ್ಚರ್ಯವೆಂಬಂತೆ ಮೊದಲ ಬೆಳೆಯಲ್ಲೇ, ಕೇವಲ ಅರ್ಧ ಕಿಲೋ ಬೀಜ, 50% ಗೊಬ್ಬರ, 35% ನೀರು ಬಳಸಿ, ಅರ್ಧ ಎಕರೆ ಭೂಮಿಯಲ್ಲಿ 18.5 ಕ್ವಿಂಟಾಲ್ ಭತ್ತ ಬೆಳೆದರು! ದೇಶದ ವಿವಿಧ ಭಾಗಗಳಿಂದ ಆಗಮಿಸಿದ ರೈತರು, ಈ ಪದ್ದತಿಯನ್ನು ಕಲಿತು ತಮ್ಮ ಹೊಲಗಳಲ್ಲಿ ಅಳವಡಿಸಿಕೊಂಡರು. ನೀರಿನ ಉಳಿತಾಯ, ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭವನ್ನು ಗಳಿಸಿದರು.

ಹೀಗೆ, ಕೃಷಿ ಕ್ಷೇತ್ರದ ಹಲವು ಮೊದಲುಗಳಿಗೆ ಕಾರಣರಾದ ರೆಡ್ಡಿಯವರು ಯಾವುದನ್ನು ನಾನೇ ಮಾಡಿದ್ದು ಎಂದು ಹೇಳಿಕೊಳ್ಳುವುದಿಲ್ಲ. ಅದಕ್ಕಾಗಿ ಹಕ್ಕುಗಳನ್ನೂ ಚಲಾಯಿಸುವುದಿಲ್ಲ. ಯಾವುದೇ ಆಸಕ್ತ ರೈತರು ಬಂದರೂ ತನಗೆ ತಿಳಿದಿರುವ ಜ್ಞಾನವನ್ನು ಉಚಿತವಾಗಿ ಧಾರೆಯೆರೆಯುತ್ತಾರೆ. ಕೃಷಿಕ್ಷೇತ್ರದಲ್ಲಿ ಅವರ ಸಾಧನೆಯನ್ನು ಗುರ್ತಿಸಿದ ವಿಶ್ವದ ಹಲವು ವಿಶ್ವವಿದ್ಯಾಲಯಗಳು ತಮ್ಮ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡಲು ಕರೆಸಿಕೊಂಡಿವೆ. ಪ್ರಾನ್ಸ್, ನೆದರ್ಲ್ಯಾಂಡ್, ಕ್ಯೂಬಾ, ಡೆನ್ಮಾರ್ಕ್ ದೇಶದ ಕೃಷಿ ಸ್ನೇಹಿ ಜನರು ಇವರಿಂದ ತಮ್ಮ ಅನುಭವ ವಿಸ್ತರಿಸಿಕೊಂಡಿದ್ದಾರೆ. ಅಲ್ಲಿನ ವಿದ್ಯಾರ್ಥಿಗಳೂ ಈ ಚಲಿಸುವ ಕೃಷಿ ವಿಶ್ವವಿದ್ಯಾಲಯದ (ನಾರಾಯಣರೆಡ್ಡಿಯವರ) ಕಾರ್ಯಕ್ಷೇತ್ರದಲ್ಲಿ ಪ್ರಯೋಗ ನಡೆಸಿ ಸಂಶೋಧನೆ ಕೈಗೊಂಡಿದ್ದಾರೆ, ಈ ಮೂಲಕ ಭಾರತದ ಕೀರ್ತಿಪತಾಕೆಯನ್ನು ವಿಶ್ವದೆತ್ತರಕ್ಕೆ ಹಾರಿಸಿದ್ದಾರೆ.

ತಿಂಗಳಲ್ಲಿ ಬಹುಪಾಲು ದಿನಗಳು ದೇಶದ ಮೂಲೆಮೂಲೆಗಳಲ್ಲಿ ನಡೆಯುವ ವಿಚಾರ ಸಂಕಿರಣ, ಕಾರ್ಯಾಗಾರಗಳಿಗೆ ಧಾವಿಸುವ ರೆಡ್ಡಿಯವರು ಹೋದಲ್ಲೆಲ್ಲಾ ತನ್ನ ಯಶಸ್ಸಿಗೆ ಕಾರಣರಾದ ಮಡದಿ ಸರೋಜಮ್ಮರ ಬಗ್ಗೆ ಹೇಳುವುದು ಮರೆಯುವುದಿಲ್ಲ. ಆಕೆಯ ಕಷ್ಟಸಹಿಷ್ಣುತೆ, ಮುಗ್ಧತೆ, ಸಾಮಾಜಿಕ ಕಳಕಳಿಯನ್ನು ಮುಕ್ತಕಂಠದಿಂದ ಶ್ಲಾಘಿಸುವ ರೆಡ್ಡಿಯವರು, ತನಗೆ ಸಂದ ಪ್ರಶಸ್ತಿ, ಗೌರವಗಳೆಲ್ಲವೂ ಆಕೆಗೆ ಸೇರಬೇಕೆಂದು ಹೆಮ್ಮೆಯಿಂದ ಹೇಳುತ್ತಾರೆ.

ಒಟ್ಟಾರೆಯಾಗಿ ಹೇಳುವುದಾದರೆ ರೆಡ್ಡಿಯವರು ನಮ್ಮ ಪೂರ್ವಿಕರ ಕೊಡುಗೆ. ತನ್ನ ದಿಟ್ಟತನ, ನಿರಾಡಂಬರ, ಅಪಾರ ಜ್ಞಾನ, ನೇರಾನೇರಮಾತು, ಸರಳತೆ, ಸಚ್ಚಾರಿತ್ರ್ಯದಿಂದ ಎಲ್ಲರ ಗಮನ ಸೆಳೆಯುವ ಶಕ್ತಿ ಹೊಂದಿದ್ದಾರೆ. ಇಂದಿನ ಸರ್ಕಾರದ ನೀತಿ ರೈತರ ಕೃಷಿ ಪದ್ಧತಿಗಳ ಬಗ್ಗೆ ಅಸಮಾಧಾನ ಹೊಂದಿದ್ದರೂ, ಎಂದೋ ಒಂದು ದಿನ ರೈತ ಈ ಲೋಕದ ನಿಜವಾದ ಒಡೆಯನಾಗುತ್ತಾನೆಂದು ಬಲವಾದ ನಂಬಿಕೆ ಹೊಂದಿದ್ದಾರೆ. ಆ ನಿಟ್ಟಿನಲ್ಲಿ ತನ್ನ ಜೀವನವನ್ನು ಯುವ ಕೃಷಿಯೋಧರನ್ನು ತರಬೇತಿಗೊಳಿಸಲು, ತಾನು ಬೆವರು ಸುರಿಸಿ ಉಳಿಸಿದ ಹಣದಿಂದ ಪರಾಶರ ಕೃಷಿ ತರಬೇತಿ ಕೇಂದ್ರವನ್ನು ಕಟ್ಟಿದ್ದಾರೆ. ದೇಶದ ಭವಿಷ್ಯ, ಸಮೃದ್ಧಿಗಳು ಕೃಷಿಯ ಮೇಲೆ ನಿಂತಿದೆಎಂದು ಹೇಳುವ ರೆಡ್ಡಿಯವರು. ಆ ನಿಟ್ಟಿನಲ್ಲಿ ಕೃಷಿ ಕ್ಷೇತ್ರವನ್ನು ಸಬಲೀಕರಣಗೊಳಿಸಲು ಯುವ ಪೀಳಿಗೆಯನ್ನು ಕೈಬೀಸಿ ಕರೆಯುತ್ತಿದ್ದಾರೆ.
​
ಬನ್ನಿ, ಅನ್ನದಾತನ ಕಣ್ಣೀರೊರೆಸೋಣ. ಕೃಷಿಕ್ಷೇತ್ರವನ್ನು ಗೌರವಿಸೋಣ. ಆ ಹಿರಿಯ ಜೀವಕ್ಕೆ ನೆಮ್ಮದಿ ಕೊಡೋಣ.
 
ಆನಂದ್ ಎನ್.ಎಲ್. 
ಉಪನ್ಯಾಸಕರು, ಸಿಎಂಆರ್ ಕಾಲೇಜು, ಬೆಂಗಳೂರು
1 Comment
Shridhar yadav
2/6/2021 09:39:25 am

Sir
Excellant one
Kindly share more about dr.L.Narayanreddy sir.
Need savayava krishi chetana book.

Reply



Leave a Reply.


    Categories

    All
    ಇತರೆ
    ಎನ್‍ಜಿಓ
    ಪರಿಸರ
    ವ್ಯಕ್ತಿಚಿತ್ರಗಳು
    ಸಮಾಜಕಾರ್ಯ
    ಸಮುದಾಯ ಸಂಘಟನೆ
    ಸಂಪುಟ 1
    ಸಂಪುಟ 2
    ಸಂಪುಟ 3
    ಸಂಪುಟ 4
    ಸಂಪುಟ 5
    ಸಂಪುಟ 6
    ಸಂಪುಟ 7
    ಸಂಪುಟ 8
    ಸಂಪುಟ 9


    Picture

    Social Work Learning Academy

    Join WhatsApp Channel

    Picture
    For more details

    Picture
    For more details

    Picture
    For more details

    Picture
    For more details

    Niruta Publications

    Social Work Foot Prints

    Leaders Talk

    Ramesha Niratanka

    Picture
    Know More

    Picture
    WhatsApp

    Picture

    MHR LEARNING ACADEMY

    Get it on Google Play store
    Download App
    Online Courses

    Picture
    30,000 HR PROFESSIONALS ARE CONNECTED THROUGH OUR NIRATHANKA HR GROUPS.
    YOU CAN ALSO JOIN AND PARTICIPATE IN OUR GROUP DISCUSSIONS.
    Join HR Online Groups


    RSS Feed


SITE MAP


Site

  • HOME
  • ABOUT US
  • BLOG
  • COLLABORATE WITH NIRUTA PUBLICATIONS
  • EDITOR'S BLOG
  • HR BLOG
  • PUBLICATION WITH US
  • TRANSLATION & TYPING
  • VIDEOS

TRAINING

  • ​TRAINING PROGRAMMES

nIRATHANKA CITIZENS CONNECT

  • NIRATHANKA CITIZENS CONNECT

JOB

  • JOB PORTAL​
  • FREELANCE SPOKEN ENGLISH TRAINER
  • FREELANCE TRANSLATOR

HR SERVICES

  • ​COMPLIANCE SUPPORT
  • CONSULTING
  • CONTRACT LABOUR
  • CONTRACT LABOUR LICENCE & CONSULTING
  • DOMESTIC ENQUIRY
  • DRAFTING OF LEGAL DOCUMENTS
  • HR AND COMPLIANCE AUDIT
  • HUMAN RESOURCE PROCESS AND POLICY FORMULATION
  • ISO CERTIFICATION​
  • LEGAL ASSISTANCE
  • ORGANISATIONAL AND JOB DESIGNS
  • PAYROLL
  • RECRUITMENT & STAFFING SERVICES
  • STAFFING - WHITE & BLUE COLLAR
  • ​STANDING ORDERS CERTIFICATION
  • ​TRADEMARK

OTHER SERVICES

  • ​APARTMENT RESIDENTS WELFARE ASSOCIATION REGISTRATION
  • LICENCES AND NOCs FROM FIRE, AGRICULTURE, STATE EXCISE DEPARTMENTS
  • MSME REGISTRATION
  • ​NGO / TRUST / SOCIETY / ASSOCIATION, COOPERATIVE SOCIETY & PVT. LTD. COMPANY REGISTRATION
  • ​SHOPS & ESTABLISHMENT REGISTRATION​

NIRATHANKA

  • ​CSR
  • TREE PLANTATION PROJECT

POSH

  • OUR ASSOCIATES
  • OUR CLIENTS
  • POSH
  • POSH BLOG​
  • WANT TO BECOME AN EXTERNAL MEMBER FOR AN IC?

OUR OTHER WEBSITES

  • WWW.HRKANCON.COM
  • WWW.MHRSPL.COM
  • WWW.NIRATANKA.ORG​

Subscribe


Picture
For more details
Picture
For more details
Picture
For more details
Picture
For more details


30,000  HR AND SOCIAL WORK   PROFESSIONALS ARE CONNECTED THROUGH OUR NIRATHANKA HR GROUPS. 
​YOU CAN ALSO JOIN AND PARTICIPATE IN OUR GROUP DISCUSSIONS.
Picture
Follow Niruta Publications WhatsApp Channel
Follow Social Work Learning Academy WhatsApp Channel
Follow Social Work Books WhatsApp Channel
Picture



JOIN OUR ONLINE GROUPS


BOOKS / ONLINE STORE


Copyright Niruta Publications 2021,    Website Designing & Developed by: www.mhrspl.com