ಈ ದೇಶದಲ್ಲಿ ಹಸಿರು ಕ್ರಾಂತಿಯಾಗಬೇಕು ಎಂಬ ಆಂದೋಲನ ಪ್ರಾರಂಭಿಸಿದಂತೆ ಅಕ್ಷರ ಕ್ರಾಂತಿಯ ಆಂದೋಲನವನ್ನು ಪ್ರಾರಂಭಿಸಬೇಕು. - ಜಯದೇವಿ ತಾಯಿ ಲಿಗಾಡೆ. ಭಾರತಕ್ಕೆ ಸ್ವತಂತ್ರ ಬಂದ ಹೊಸತರಲ್ಲಿ ಈ ದೇಶದ ಜನತೆಯನ್ನು ನೂರಾರು ಸಮಸ್ಯೆಗಳು ಕಾಡಿದವು. ಮೂಲಭೂತ ಅವಶ್ಯಕತೆಗಳಾದ ಅನ್ನ, ಅರಿವೆ, ಆಸರೆ, ಶಿಕ್ಷಣ ಮುಂತಾದವುಗಳನ್ನು ಒದಗಿಸುವುದೇ ದುಸ್ತರವಾಗಿತ್ತು. ಸ್ವತಂತ್ರ ಬಂದ ಆರಂಭದದ ದಶಕದಲ್ಲಿ ಪರಕೀಯರು ಬಿಟ್ಟು ಹೋದ ಪಳಯುಳಿಕೆಗಳೇ ನಮ್ಮನ್ನು ಆಳುತ್ತಿದ್ದವು. ನಮ್ಮದೇ ಆದ ನೆಲೆಯಲ್ಲಿ ನಮಗೆ ಸರಿ ಹೊಂದುವಂತಹ ಸಾಮಾಜಿಕ ಬದುಕನ್ನು ರೂಪಿಸಿಕೊಳ್ಳುವುದು ಅಷ್ಟು ಸುಲಭದ ಸಂಗತಿಯಾಗಿರಲಿಲ್ಲ. ಫ್ರಭುತ್ವ ಮತ್ತು ಸಂಸ್ಕೃತಿ ಒಟ್ಟಿಗೇ ನಡೆಯಲಾರವು. ಪ್ರಭುತ್ವ ಬಲಿಷ್ಟವಾದಂತೆ ಸಂಸ್ಕೃತಿ ಬರಡಾಗುತ್ತದೆ. ಸಂಸ್ಕೃತಿ ಬರಡಾದಂತೆ ಒಂದು ನಾಡಿನ ಭಾಷೆ, ಜರ ಬದುಕು ಸೊರಗುತ್ತದೆ. ಎಂದು ಜರ್ಮನ್ ದಾರ್ಶನಿಕ ನೀಷೆ ಅಭಿಪ್ರಾಯಪಡುತ್ತಾನೆ. ಒಂದು ನಾಡಿನ ಸಂಸ್ಕೃತಿ ಬಲಿಷ್ಟವಾಗಬೇಕಾದರೆ, ಅಲ್ಲಿ ಅಕ್ಷರಾಂದೋಲನ ಆಗಬೇಕು. ಇಂಥದೊಂದು ಆಂದೋಲನದ ಹವಣಿಕೆಯಲ್ಲಿದ್ದ ಸ್ವತಂತ್ರ ಭಾರತದ ನೇತಾರರಿಗೆ, ತಳ ಮಟ್ಟದಿಂದ ಮೌಲ್ಯಾಧಾರಿತವಾದ ಉತ್ತಮ ಶಿಕ್ಷಣ ಬುನಾದಿ ಹಾಕುವುದು ದೊಡ್ಡ ಸವಾಲಾಗಿ ಪರಣಮಿಸಿತು. ಈ ಕಟು ಸತ್ಯವನ್ನು ಅರಿತ ಅಸಂಖ್ಯಾತ ಶಿಕ್ಷಣ ಪ್ರೇಮಿಗಳು ಅಕ್ಷರ ಕ್ರಾಂತಿಯ ಆಂದೋಲನಕ್ಕೆ ಕಂಕಣ ತೊಟ್ಟು ನಿಲ್ಲುತ್ತಾರೆ. ಇದರ ಫಲವಾಗಿಯೇ ಈ ನಾಡಿನ ಮಠಮಾನ್ಯಗಳು, ಶಿಕ್ಷಣ ಪ್ರೇಮಿಗಳು ಸರ್ಕಾರಕ್ಕೆ ಹೆಗಲೆಣೆಯಾಗಿ ನಿಂತು ಅಸಂಖ್ಯಾತ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಅಕ್ಷರ ಬೀಜವನ್ನು ಬಿತ್ತಿ ಉತ್ತಮ ಫಸಲನ್ನು ಈ ನಾಡಿಗೆ ನಿರಂತರವಾಗಿ ಧಾರೆ ಎರೆಯುತ್ತಾ ಬರುತ್ತಿದ್ದಾರೆ. ನಮ್ಮ ನಾಡಿನಲ್ಲಿ ಶಿಕ್ಷಣ ಸಂಸ್ಥೆಗಳನ್ನು ಕಟ್ಟುವ ಆರಂಭಿಕ ಪ್ರಯತ್ನಗಳು ಗುಣಾತ್ಮಕ ಹಾದಿಯನ್ನು ಕಂಡುಕೊಂಡಿವೆ. ಅಲ್ಲಿ ಈ ನಾಡಿನ ಸಮಗ್ರತೆ, ಸಾಮಾಜಿಕ ಕಳಕಳಿ, ಶಿಕ್ಷಣ ಪ್ರೇಮ, ನಿಸ್ವಾರ್ಥ ಮನೋಭಾವನೆ, ಶಿಕ್ಷಣದ ಮೂಲಕ ಗ್ರಾಮಗಳ ಅಭಿವೃದ್ಧಿ ಮುಂತಾದ ಉದಾತ್ತ ಧ್ಯೇಯಗಳನ್ನು ಕಾಣುತ್ತೇವೆ.
20 ನೆಯ ಶತಮಾನದ ಮಧ್ಯ ಭಾಗದಿಂದ ಶಿಕ್ಷಣ ಸಂಸ್ಥೆಗಳು ತಮ್ಮ ಉದಾತ್ತ ಧ್ಯೇಯ ಧೋರಣೆಗಳನ್ನು ಬದಿಗೆ ಸರಿಸಿ ವ್ಯಾಪಾರೀ ಮನೋಭಾವನೆ ತಾಳಿವೆ. ಉಳ್ಳವರು ಶಿವಾಲಯ ಮಾಡುವರು, ನಾನೇನ ಮಾಡಲಿ ಬಡವನಯ್ಯ. ಎಂಬ ಶರಣರ ವಾಣಿಯಂತೆ ಉನ್ನತ ವ್ಯಾಸಂಗ ಉಳ್ಳವರ ಪಾಲಾಗುತ್ತಿದೆ. ಸಾಮಾಜಿಕ ಸಮಾನತೆ ಭಾರತದಂತಹ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಮರೀಚಿಕೆಯಾಗಿದೆ. ನಿಜವಾದ ಪ್ರತಿಭೆಗಳು ಐರೋಪ್ಯ ರಾಷ್ಟ್ರಗಳತ್ತ ಮುಖಮಾಡಿವೆ. ಇಲ್ಲಿ ನಿರಂತರ ಪ್ರತಿಭಾ ಪಲಾಯನವಾಗುತ್ತಿದೆ. ಇಂತಹ ಅಪಾಯ ಮತ್ತು ಅಸಂಗತಗಳ ಮಧ್ಯೆ 21 ನೆಯ ಶತಮಾನದ ಸಂದರ್ಭದಲ್ಲೂ ದೇಶೀಯ ಚಿಂತನೆ, ಜನ ಶಿಕ್ಷಣ, ಗ್ರಾಮೀಣ ಭಾಗದಲ್ಲಿ ಶಿಕ್ಷಣದ ಚಿಂತನೆ, ಪರಿಶಿಷ್ಟ ಜಾತಿ / ಪಂಗಡಗಳ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅನುಕೂಲತೆಯನ್ನು ಮಾಡಿಕೊಡುವ ನಿಟ್ಟಿನಲ್ಲಿ ಚಿಂತನೆ ಮಾಡುತ್ತಿರುವ ಬೆರಳಿಕೆಯಷ್ಟು ಮಂದಿಯಲ್ಲಿ ಜಗಳೂರಿನ ವಿದ್ಯಾರತ್ನ ಡಾ|| ಟಿ. ತಿಪ್ಪೇಸ್ವಾಮಿಯವರು ಮುಖ್ಯವಾಗಿ ಕಾಣಬರುತ್ತಾರೆ. ಡಾ|| ಟಿ. ತಿಪ್ಪೇಸ್ವಾಮಿಯವರ ಬಗ್ಗೆ ಬರೆಯುತ್ತಾ ಹೆಸರು ಬಯಸದ ಉಸಿರು ಎಂಬ ಗೋ.ರು. ಚನ್ನಬಸಪ್ಪನವರ ಅಭಿಪ್ರಾಯದಂತೆ ತಿಪ್ಪೇಸ್ವಾಮಿಯವರು ಇಂದಿಗೂ ಅದೇ ಆಗಿದ್ದಾರೆ. ಹಿರಿಯ ತರಳಬಾಳು ಜಗದ್ಗುರು ಡಾ|| ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ ಮೆಚ್ಚಿನ ಅಂತರಂಗದ ಶಿಷ್ಯರಾಗಿ ಹಳ್ಳಿ ಹಳ್ಳಿಗಳಲ್ಲಿ ಶಾಲೆಗಳನ್ನು ತೆರೆದು ಅಕ್ಷರಾಂದೋಲನಕ್ಕೆ ನಾಂದಿ ಹಾಡಿ ಯಶದ ಶಿಖರ ಮುಟ್ಟಿದಂತೆ ತಿಪ್ಪೇಸ್ವಾಮಿಯವರು ಸ್ಥಾವರವಾಗದೆ ಜಂಗಮವಾಗಿ ಆ ಕಾಲಕ್ಕೆ ಪದವಿ ಶಿಕ್ಷಣ ಮುಗಿಸಿ, ಒದಗಿ ಬಂದ ಎಷ್ಟು ಅವಕಾಶಗಳನ್ನು ಬದಿಗೆ ಸರಿಸಿ, ಗುರು ಹಾಕಿದ ಮಾರ್ಗದಲ್ಲಿ ನಡೆದು ಶಿಕ್ಷಣಾಂದೋಲನಕ್ಕೆ ಕಂಕಣ ಕಟ್ಟಿ ನಿಲ್ಲುತ್ತಾರೆ. ಹೀಗೆ ನಿಂತ ತಿಪ್ಪೇಸ್ವಾಮಿಯವರು ತಮ್ಮ ಕಾರ್ಯಕ್ಷೇತ್ರವನ್ನು ಆಯ್ದುಕೊಂಡದ್ದು ಪಟ್ಟಣ ಪ್ರದೇಶವನ್ನಲ್ಲ, ತಮಗೆ ಜನ್ಮ ನೀಡಿ ಬೆಳೆಸಿ, ರೂಪಿಸಿದ ಮಾತೃ ನೆಲವಾದ ಜಗಳೂರನ್ನು. ತಿಪ್ಪೇಸ್ವಾಮಿಯವರು ಪದವಿ ಮುಗಿಸಿದ ಕಾಲಕ್ಕೆ ಜಗಳೂರು ಕೇವಲ ಹೆಸರಿಗಷ್ಟೆ ಕೇಂದ್ರವಾಗಿತ್ತು. ಪರಿಶಿಷ್ಟ ಜಾತಿ / ಪಂಗಡದವರೇ ಹೆಚ್ಚಿನ ಸಂಖ್ಯೆಯಲ್ಲಿರುವ ಜಗಳೂರು ಇಂದಿಗೂ ಹಿಂದುಳಿದ ತಾಲ್ಲೂಕು ಎಂಬ ಹಣೆ ಪಟ್ಟಿಯಿಂದ ಹೊರಬಂದಿಲ್ಲ. ಶಿಕ್ಷಣದ ಕೊರತೆ, ಕಿತ್ತು ತಿನ್ನುವ ಬಡತನ, ಮೂಲ ಸೌಲಭ್ಯಗಳ ಕೊರತೆ, ಕುಡಿಯುವ ನೀರಿಗೂ ತತ್ವಾರ ಪಡುವಂತಹ ಈ ಭಾಗದಲ್ಲಿ - ಸರ್ವೇ ಸಾಮಾನ್ಯವಾಗಿ ವಿಚಾರಶೀಲರು ಸಮಾಜಕ್ಕೆ ತಕ್ಕಂತೆ ತಮ್ಮನ್ನು ಹೊಂದಿಸಿಕೊಳ್ಳುತ್ತಾರೆ. ಆದರೆ, ಕೆಲವರು ಸಮಾಜವೇ ತಮಗೆ ಹೊಂದಿಕೊಳ್ಳಬೇಕೆಂಬ ಹಟ ಹಿಡಿಯುತ್ತಾರೆ. ಇಂತದ್ದೊಂದು ಹಠಕ್ಕೆ ಬಿದ್ದು ತಿಪ್ಪೇಸ್ವಾಮಿಯವರು ಈ ಭಾಗದಲ್ಲಿ ಒಂದು ಪರಿಪೂರ್ಣವಾದ ಶೈಕ್ಷಣಿಕ ಪರಿಸರವನ್ನು ನಿರ್ಮಾಣ ಮಾಡಬೇಕೆಂಬ ಭಗೀರಥ ಪ್ರಯತ್ನಕ್ಕೆ ಕೈ ಹಾಕುತ್ತಾರೆ. ತಿಪ್ಪೇಸ್ವಾಮಿಯವರು ಜಗಳೂರಿನಲ್ಲಿ ಶೈಕ್ಷಣಿಕ ಕೇಂದ್ರವನ್ನು ಸ್ಥಾಪಿಸಬೇಕೆಂಬ ತೀರ್ಮಾನಕ್ಕೆ ಬಂದದ್ದು ಒಂದೆಡೆ ಸಂಕ್ರಮಣ ಕಾಲವಾದರೆ ಮತ್ತೊಂದೆಡೆ ಸಂಕಷ್ಟದ ಕಾಲ. ಒಂದು ಕೈಯಲ್ಲಿ ಚಪ್ಪಾಳೆ ಹೊಡೆಯಲು ಸಾಧ್ಯವಿಲ್ಲ. ಹತ್ತು ಹಲವು ಕೈಗಳು ಕೈ ಜೋಡಿಸದೆ ಮಹತ್ತೊಂದನ್ನು ಸಾಧಿಸಲಾಗಿದೆ. ಎಂಬ ಕಟು ಸತ್ಯದ ನಡುವೆ ತಿಪ್ಪೇಸ್ವಾಮಿಯವರು ಒಂಟಿ ಕೈಯಲ್ಲಿ ಚಪ್ಪಾಳೆಯನ್ನು ತಟ್ಟಿ ಒಬ್ಬಂಟಿಯಾಗಿ ಜಗಳೂರಿನಂತಹ ಹಿಂದುಳಿದ ಭಾಗದಲ್ಲಿ ಅಮರ ಭಾರತಿ ಹೆಸರಿನಲ್ಲಿ ವಿದ್ಯಾ ಕೇಂದ್ರವನ್ನು ಸ್ಥಾಪಿಸಿ ಹೆಸರಿಗೆ ತಕ್ಕಂತೆ ಅದನ್ನು ಅಮರವಾಗಿಸಿದ್ದಾರೆ. ಇಂತಹ ಒಂದು ಸಾಧನೆಗೆ ಪ್ರಸನ್ನತೆ ಹಾಗೂ ಸಂಶಯಗಳಿಲ್ಲದ ಸ್ಥಿತಿಯಿಂದ ಒಳ್ಳೆಯ ಸಾಧನೆಯ ದಾರಿ ಕಂಡುಕೊಂಡಿದ್ದಾರೆ. ನಿಸ್ಸಾರ್ ಒಂದು ಕಡೆ ತಮ್ಮ ಕವನದಲ್ಲಿ ಕಳೆ ಎಷ್ಟಿದ್ದರೇನು ಕನಸಿದರದ ಬಾಳು ಬಾಳೇ ಎಂದು ಹೇಳುತ್ತಾರೆ. ತಿಪ್ಪೇಸ್ವಾಮಿಯವರು ಸಂಸಾರನೊಗ ಹೊತ್ತ ಕಾಲವದು. ಸಂಸಾರ ರಥ ಎಳೆಯಲು ಹಿರಿಯ ತರಳಬಾಳು ಜಗದ್ಗುರುಗಳು ಕೊಟ್ಟ ಶಿಕ್ಷಕರ ವೃತ್ತಿ ಆಕಾಂಕ್ಷೆ ಹೃದಯದ ಅಂತರಾಳದಲ್ಲಿ ಬಂದಾಗ ಅದು ಪರಿಶುದ್ಧವಾಗಿ ವಿಶೇಷವಾಗಿ ಶಕ್ತಿಯನ್ನು ಹೊಂದಿರುತ್ತದೆ ಎಂಬ ಸ್ವಾಮಿ ಶಿವಾನಂದರ ಮಾತಿನಂತೆ ತಿಪ್ಪೇಸ್ವಾಮಿಯವರ ಮನಸ್ಸಿನಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಬೇಕೆಂಬ ಆಕಾಂಕ್ಷೆ ಮೊಳೆಯುತ್ತಾ ಬಲಿತಂತೆ ಗುರು ಕೊಟ್ಟ ಶಿಕ್ಷಕ ವೃತ್ತಿಯನ್ನು ಬಿಟ್ಟು ಅವರ ಕೃಪಾಶಿರ್ವಾದ ಹೊತ್ತು, ಶಿಕ್ಷಣ ಸಂಸ್ಥೆ ಕಟ್ಟುವ ಕನಸು ಹೊತ್ತು ಜಗಳೂರಿಗೆ ಬಂದಾಗ ಎದುರಾದದ್ದು ಅವರ ಚೈತನ್ಯದ ಚಿಲುಮೆಗೆ ನೀರೆರೆಯುವ ಮನಸ್ಸುಗಳಲ್ಲ ಬದಲಾಗಿ ಕುಹಕ, ಅಸಡ್ಡೆ ತಾತ್ಸಾರ ತುಂಬಿದ ಮನಸ್ಸುಗಳು ಕಾಲೂರಲು ಬಂದ ಕಾಲುಗಳಿಗೆ ಮುಳ್ಳಾಗಿ ನಿಂತ ಸಂದರ್ಭಗಳೇ ಹೆಚ್ಚು. ಆ ಕಾಲಕ್ಕೆ ಜಗಳೂರಿನಲ್ಲಿ ಹೈಸ್ಕೂಲ್ ಹಂತದವರೆಗೆ ಮಾತ್ರ ಕಲಿಯಲು ಅವಕಾಶವಿತ್ತು. ಉನ್ನತ ಶಿಕ್ಷಣಕ್ಕೆ ಚಿತ್ರದುರ್ಗ, ದಾವಣಗೆರೆ ಮುಂತಾದ ದೂರದೂರುಗಳಿಗೆ ಹೋಗಬೇಕಿತ್ತು. ಹಿಂದುಳಿದವರು, ಬಡವರು, ಮಹಿಳೆಯರು, ಉನ್ನತ ಶಿಕ್ಷಣದಿಂದ ವಂಚಿತರಾಗಿದ್ದರು. ಶಿಕ್ಷಣದಿಂದ ವಂಚಿತರಾಗುವುದು ವ್ಯಷ್ಟಿಯ ನಷ್ಟವಾಗುವುದಿಲ್ಲ ಅದು ಸಮಷ್ಟಿಯ ಹಿನ್ನಡೆಯೆಂದು ಭಾವಿಸಿ ಶಿಕ್ಷಣದ ಸಸಿ ನೆಟ್ಟು ಅದನ್ನು ಪೊರೆಯಲು ಕಂಕಣ ಕಟ್ಟಿ ನಿಲ್ಲುತ್ತಾರೆ. ಸಂಸ್ಥಾಪಕ ಕಾರ್ಯದರ್ಶಿಯಾಗಿ ಡಾ|| ತಿಪ್ಪೇಸ್ವಾಮಿಯವರು ಅಮರ ಭಾರತಿ ವಿದ್ಯಾಕೇಂದ್ರದ ಅಡಿಯಲ್ಲಿ ಸ್ಥಾಪಿಸಿದ ಚೊಚ್ಚಲ ಕೂಸು ನಾಲಂದ ಪದವಿ ಪೂರ್ವ ಕಾಲೇಜು. ಇದರ ಹೆರಿಗೆ, ಬಾಣಂತನ, ಪಾಲನೆ, ಪೋಷಣೆ ಎಲ್ಲಾ ನಡೆದದ್ದು ಬಾಡಿಗೆ ಕಟ್ಟಡದಲ್ಲಿ, ಕಾಲೇಜಿನ ಸಂಸ್ಥಾಪಕ ಪ್ರಾಚಾರ್ಯರೂ ಆದ ತಿಪ್ಪೇಸ್ವಾಮಿಯವರು ಪ್ರಾರಂಭಿಸಿದ ಕಾಲೇಜಿನಲ್ಲಿ ಸೇರಿದ್ದು ಕೆಲವೇ ವಿದ್ಯಾರ್ಥಿಗಳು. ನುಡಿಯ ಶೂರತನ ನಡೆಯಲ್ಲಿ ಗೆಲುವಾಗಬೇಕು, ನುಡಿಯ ಶೌಚ ಹದುಳದಲ್ಲಿ ಹರಡಬೇಕು ಎಂಬ ದಾಸೀಮಯ್ಯನ ಮಾತಿನಂತೆ ತಿಪ್ಪೇಸ್ವಾಮಿಯವರು ನಡೆಯಲ್ಲಿ ಗೆದ್ದು ಹದುಳದಲ್ಲಿ ಹರಡಿ ಗೆದ್ದವರು. ತಿಪ್ಪೇಸ್ವಾಮಿಯವರದ್ದು ವ್ಯಾಪಕ ದೃಷ್ಟಿ, ಅಲ್ಲದೇ ಕಾಲ ದೇಶಗಳನ್ನು ಒಗ್ಗೂಡಿಸಿದ ಸಾಹಸ ಪ್ರವೃತ್ತಿ ಭಾರತೀಯ ಸಂಸ್ಕೃತಿಯನ್ನು ತಮ್ಮ ನರ ನಾಡಿಗಳಲ್ಲಿ ತುಂಬಿಕೊಂಡಿರುವ ಅವರು ಉತ್ತರ ಭಾರತದ ಪುರಾತನ ನಾಲಂದ ವಿಶ್ವವಿದ್ಯಾಲಯದ ಹೆಸರನ್ನು ತಮ್ಮ ಶಿಕ್ಷಣ ಸಂಸ್ಥೆಯಲ್ಲಿ ಪ್ರಾರಂಭವಾದ ಕಾಲೇಜಿಗೆ ಇಡುತ್ತಾರೆ. ಅಲ್ಲಿಂದ ಅಮರ ಭಾರತಿ ಅಡಿಯಲ್ಲಿ ಈ ನಾಡಿನ ಪಾರಂಪರಿಕ ಸಾಂಸ್ಕೃತಿಕ ಹಿರಿಮೆ ಗರಿಮೆಗಳನ್ನು ತಾವು ಸ್ಥಾಪಿಸಿದ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ಶಿಕ್ಷಣ ಬಯಸಿ ಬರುವ ವಿದ್ಯಾರ್ಥಿಗಳ ಮನದಾಳದಲ್ಲಿ ಬಿತ್ತಿ ಒಂದು ಮೌಲಿಕ ಶಿಕ್ಷಣದ ಮೈಲಿಗಲ್ಲಿನ ಅಡಿಪಾಯ ಹಾಕುತ್ತಾರೆ. ದಕ್ಷಿಣ ಭಾಗದಲ್ಲಿ ಈ 20-21 ನೆಯ ಶತಮಾನದ ಆಧುನಿಕ ಯುಗದಲ್ಲಿ ಆ ಪುರಾತನ ಚೈತನ್ಯವನ್ನು ಬಿತ್ತಿ ಬೆಳೆಯುವಲ್ಲಿ ನಿರತರಾಗಿದ್ದಾರೆ. ತಮ್ಮ ಸಂಸ್ಥೆಯಲ್ಲಿ ಸಾತ್ವಿಕ ಮತ್ತು ಸ್ವಾಸ್ಥ್ಯ ವ್ಯಕ್ತಿತ್ವವನ್ನು ಬೆಳೆಸುವ ಗಟ್ಟಿ ನೆಲೆಯನ್ನು ಒದಗಿಸುತ್ತಾರೆ. ಇಂದಿನ ಸನ್ನಿವೇಶದಲ್ಲಿ ಜನ ಶಿಕ್ಷಣಕ್ಕೆ ಪ್ರಭಾವ ಪೂರ್ಣವಾದ ಯಾವುದಾದರೂ ಒಂದು ಮಾಧ್ಯಮ ಇದ್ದರೆ ಅದು ವಚನ ಸಾಹಿತ್ಯ ಎಂಬುದನ್ನು ಮನಗಂಡ ತಿಪ್ಪೇಸ್ವಾಮಿಯವರು ತಮ್ಮ ಸಂಸ್ಥೆಯಲ್ಲಿ ವಚನ ಸಾಹಿತ್ಯದ ಪ್ರಾಮುಖ್ಯತೆಯನ್ನು ಅತ್ಯಂತ ಸಮರ್ಥವಾಗಿ ವಿದ್ಯಾರ್ಥಿಗಳ ಮನದಾಳದಲ್ಲಿ ತುಂಬುವ ಪ್ರಯತ್ನವನ್ನು ನಿರಂತರವಾಗಿಸಿದ್ದಾರೆ. ಒಂದು ಸಂಸ್ಥೆ ಏಕಾಏಕಿ ಬೃಹತ್ತಾಗಿ ಬೆಳೆದು ನಿಲ್ಲಲಾರದು. ಅದರ ಹಿಂದೆ ತ್ಯಾಗ, ಪರಿಶ್ರಮ, ಹೋರಾಟ, ಪ್ರೀತಿ ಶ್ರದ್ಧೆ ಕಾಳಜಿಗಳು ಒಳಗೊಂಡಿರುತ್ತವೆ. ಈ ಎಲ್ಲವನ್ನು ಧಾರೆ ಎರೆದ ನಿಷ್ಕಾಮ ವ್ಯಕ್ತಿತ್ವ. ಶ್ರಿ ತಿಪ್ಪೇಸ್ವಾಮಿಯವರದ್ದು ಲೌಕಿಕ ವಿದ್ಯಾ ಪ್ರಸರಣದಲ್ಲಿ ತಿಪ್ಪೇಸ್ವಾಮಿಯವರ ಪರಿಶ್ರಮ ಎಷ್ಟೊಂದು ಪ್ರಸ್ತುತವೋ, ಅಭಿನಂದನೀಯವೋ, ಅದೇ ರೀತಿಯಲ್ಲಿ ಬ್ರಹ್ಮ ವಿದ್ಯೆ ಪ್ರಸರಣದಲ್ಲಿ ತಿಪ್ಪೇಸ್ವಾಮಿಯವರ ಕೈಂಕರ್ಯ ಮೇಲ್ಮಟ್ಟದ್ದು ಮತ್ತು ಮೇರು ಮಟ್ಟದ್ದಾಗಿದೆ. ಶ್ರೀ ಅಚ್ಯುತ ಯೋಗ ವಿದ್ಯಾ ಕೇಂದ್ರದ ಮೂಲಕ ಪರಾ ಅಪರಾ ವಿದ್ಯೆಯ ಸಮೀಕರಣದಿಂದ ಸ್ಥೂಲ ಜೀವನ ದಿವ್ಯತ್ವಕ್ಕೇರಬಲ್ಲುದು ಎಂಬುದು ಅವರ ಸ್ಪಷ್ಟ ನಿಲುವು. ಸ್ಥೂಲದ ತಾಳ್ಮೆ, ಸೂಕ್ಷ್ಮದ ಮೇಲ್ಮೈಯ ಸುಸಂಗಮದ ಗುರಿ ಹೊಂದಿರುವ ಇವರು ಶ್ರೇಷ್ಟ ಆದರ್ಶಕ್ಕೆ ನಿದರ್ಶನವಾಗಿ ನಿಂತಿದ್ದಾರೆ. 1973 ರಲ್ಲಿ ಸ್ಥಾಪನೆಗೊಂಡ ಅಮರ ಭಾರತಿ ವಿದ್ಯಾಕೇಂದ್ರ ಇಂದು ಹೆಮ್ಮರವಾಗಿ ನಿಂತಿದೆ. ನಾಲ್ಕು ದಶಕಗಳನ್ನು ಪೂರೈಸಿದ ಈ ಸಂಸ್ಥೆ ಇಂದಿಗೂ ತಿಪ್ಪೇಸ್ವಾಮಿಯವರ ಸಮರ್ಥ ಮಾರ್ಗದರ್ಶನದಲ್ಲಿ ಏಳಿಗೆಯ ದಾರಿ ಹಿಡಿದಿದೆ. ತಿಪ್ಪೇಸ್ವಾಮಿಯವರ ವ್ಯಾಪಕ ದೃಷ್ಟಿ, ಕಾಲದೇಶಗಳನ್ನು ಒಗ್ಗೂಡಿಸುವ ಸಾಹಸ ಪ್ರವೃತ್ತಿ ಭಾರತೀಯ ಸಂಸ್ಕೃತಿಗಳನ್ನು ಪ್ರತಿಷ್ಟಾಪಿಸುವ ಅವರ ಕಳಕಳಿ ಕೇವಲ ನಾಲಂದ ಕಾಲೇಜಿಗೆ ಮಾತ್ರ ಸೀಮಿತಗೊಳ್ಳದೇ, ಅಮರ ಭಾರತಿಯ ಕೊಂಬೆ ಕೊಂಬೆಗಳಲ್ಲಿ ಮೈ ಚಾಚಿ ನಿಂತಿದೆ. ಇಂಥದ್ದೊಂದು ಪಾರಂಪರಿಕ ವೈಭವ ಅಮರ ಭಾರತಿಯ ಅಮಗ ಸಂಸ್ಥೆಗಳಾದ ಬಾಲ ಭಾರತಿ ಪ್ರಾಥಮಿಕ ಶಾಲೆ, ದಿವ್ಯ ಭಾರತಿ ಪ್ರೌಢ ಶಾಲೆ, ಬಸವ ಭಾರತಿ ಪದವಿ ಕಾಲೇಜು, ಸಿದ್ಧಾರ್ಥ ಶಿಕ್ಷಣ ಮಹಾವಿದ್ಯಾಲಯ, ನಾಲಂದ ಶಿಕ್ಷಕರ ತರಬೇತಿ ಕಾಲೇಜು, ನಾಲಂದ ಕಲಾ ಭಾರತಿ, ಚಿನ್ಮಯ ಭಾರತಿ ಅಂಗಳ ಹೀಗೆ ಭವ್ಯ ಭಾರತದ ವೈಭವ ಹೆಸರುಗಳಲ್ಲಿ ರಾರಾಜಿಸುವುದರೊಂದಿಗೆ ವರ್ತಮಾನದ ವಿದ್ಯಾರ್ಥಿಗಳ ಮನಸ್ಸುಗಳಲ್ಲಿ ಅವು ಬೆರೆತು ಅಲ್ಲೊಂದು ಅಖಂಡ ಭಾರತೀಯತೆಯ ಭಾವನೆಯನ್ನು ಬಿತ್ತುತ್ತಿವೆ. ಇಂಥದ್ದೊಂದು ಪ್ರಯೋಗಶೀಲ ಮನಸ್ಸು ತಿಪ್ಪೇಸ್ವಾಮಿಯವರದ್ದು. ಒಟ್ಟಾರೆಯಾಗಿ ಗ್ರಾಮೀಣ ಭಾಗದಲ್ಲಿ ತಮ್ಮ ಸಂಸ್ಥೆಯ ಮೂಲಕ ತಿಪ್ಪೆಸ್ವಾಮಿಯವರು ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಉನ್ನತ ಶಿಕ್ಷಣದ ಎಲ್ಲಾ ಸೌಕರ್ಯಗಳನ್ನು ಕಲ್ಪಿಸಿದ್ದಾರೆ. ಮೌಲಿಕ ಶಿಕ್ಷಣ ನೀಡುತ್ತಿದ್ದಾರೆ. ವರ್ಷವಿಡೀ ಸಂಸ್ಥೆಯ ಅಡಿಯಲ್ಲಿ ನಡೆಯುವ ಭಾರತ ದರ್ಶನದ ಉಪನ್ಯಾಸ ಮಾಲಿಕೆ, ಸಾಹಿತ್ಯ ಭಾರತೀಯ - ಶಾಲಾ ಅಂಗಳದಲ್ಲಿ ಸಾಹಿತ್ಯೋತ್ಸವ ಕಾರ್ಯಕ್ರಮ, ನಾಲಂದ ಕಲಾ ಭಾರತಿಯ ರಂಗ ತರಬೇತಿ ಶಿಬಿರ, ನಾಟಕ ಪ್ರದರ್ಶನಗಳು, ಒಂದು ಸಾಹಿತ್ಯಿಕ ಸಾಂಸ್ಕೃತಿಕ ವಿಚಾರವನ್ನು ಇಲ್ಲಿ ಮೂಡಿಸುತ್ತವೆ. ಎನ್.ಎಸ್.ಎಸ್. ಮತ್ತು ಎನ್.ಸಿ.ಸಿ. ಮುಂತಾದ ಘಟಕಗಳು ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವನೆ, ರಾಷ್ಟ್ರೀಯ ಮನೋಭಾವನೆಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುತ್ತಿವೆ. ಹೀಗೆ ಅಮರ ಭಾರತಿ ವಿದ್ಯಾ ಸಂಸ್ಥೆಯ ಮೂಲಕ ತಮ್ಮ ಶಿಕ್ಷಣದ ಕನಸುಗಳನ್ನು ಸಾಕಾರಗೊಳಿಸಿಕೊಂಡ ತಿಪ್ಪೇಸ್ವಾಮಿಯವರು ಬಯಲು ನಾಡಿನ ಶಿಕ್ಷಣದ ಭಗೀರಥ ಎಂದರೆ ಅತಿಶಯೋಕ್ತಿ ಆಗದು.
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
SITE MAP
SiteTRAININGJOB |
HR SERVICESOTHER SERVICESnIRATHANKA CITIZENS CONNECT |
NIRATHANKAPOSHOUR OTHER WEBSITESSubscribe |
MHR LEARNING ACADEMY
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|