Niruta Publications
  • Home
  • About Us
    • Ramesha's Profile
  • Publication With Us
    • Inviting Authors
    • Promote Your Books
  • Niruta Book Club
  • Our Services
  • Leaders Talk
  • HR Blog
    • Inviting Articles
  • Books / Online Store
  • Media Mentions
    • Photos
  • Join Our Online Groups
  • Contact Us
  • Home
  • About Us
    • Ramesha's Profile
  • Publication With Us
    • Inviting Authors
    • Promote Your Books
  • Niruta Book Club
  • Our Services
  • Leaders Talk
  • HR Blog
    • Inviting Articles
  • Books / Online Store
  • Media Mentions
    • Photos
  • Join Our Online Groups
  • Contact Us
Niruta Publications

ಬಿಸ್ಕೆಟ್‍ಗಾಗಿ ಪೀಡಿಸುವ ಆಪೆಲ್ ವ್ಯಾಲಿಯ ಮಕ್ಕಳು!

6/20/2017

0 Comments

 
ನನ್ನ ಸ್ನೇಹಿತ ದಿನೇಶ ನಾಲ್ಕು ವರ್ಷಗಳಿಂದ ಉದ್ಯೋಗನಿಮಿತ್ತವಾಗಿ ಪಂಜಾಬ್‍ನ ರೂಪಾರ್ (ರೂಪನಗರ್) ಎಂಬಲ್ಲಿ ನೆಲೆಸಿದ್ದಾನೆ. ಅಂದಿನಿಂದಲೇ ಅವನು, ನೀವೊಮ್ಮೆ ಇಲ್ಲಿಗೆ ಬನ್ನಿ. ಕಾಶ್ಮೀರ,ಪಂಜಾಬ್ ಎಲ್ಲಾ ನೋಡಿಕೊಂಡು ಹೋಗಬಹುದು ಎಂದು ಆಹ್ವಾನಿಸುತ್ತಲೇ ಇದ್ದ. ದೂರದ ಪ್ರಯಾಣ, ದುಬಾರಿ ಖರ್ಚುಗಳ ಕಾರಣದಿಂದಾಗಿ ನಾನು ಮುಂದೂಡುತ್ತಲೇ ಇದ್ದೆ. 2011ರಲ್ಲಿ ಒಂದೇ ವಾರದಅಂತರದಲ್ಲಿ ನಾವಿಬ್ಬರೂ ಒಂದೇ ತೆರನಾದ ಕಾರುಗಳನ್ನು ಖರೀದಿಸಿದ್ದೆವು. ಅದಾಗಿ ಆರೇಳು ತಿಂಗಳ ನಂತರ, ದಿನೇಶ ಒಂದು ದಿನ ಪೋನ್ ಮಾಡಿ, ಈಗಲಾದರೂ ಬಂದರೆ, ನನ್ನ ಕಾರಿನಲ್ಲೇ ಕಾಶ್ಮೀರಎಲ್ಲಾ ಸುತ್ತಬಹುದು. ಮುಂದೆ ನನಗೆ ಟ್ರಾನ್ಸ್‍ಫರ್ ಆದರೆ, ಇಲ್ಲೆಲ್ಲಾ ಸ್ವಂತ ಕಾರಿನಲ್ಲಿ ಸುತ್ತಲು ಆಗುವುದಿಲ್ಲ ಎಂದಿದ್ದ. ಕಾಶ್ಮೀರದ ಕಣಿವೆಗಳಲ್ಲಿ ಕಾರು ಡ್ರೈವ್ ಮಾಡುವ ಮೋಹದಿಂದ ನಾನುತಪ್ಪಿಸಿಕೊಳ್ಳಲಾಗಲಿಲ್ಲ. ಮುಂದಿನ ಎರಡೇ ತಿಂಗಳಲ್ಲಿ ಕಾಶ್ಮೀರ ಪ್ರವಾಸ ನಿರ್ಧಾರವಾಗಿಬಿಟ್ಟಿತ್ತು.
Picture
ನಾನು, ನನ್ನ ಹೆಂಡತಿ ಮಗಳು ಮತ್ತು ನಮ್ಮ ಅಂಕಲ್ ಇಲ್ಲಿಂದ ನೇರವಾಗಿ ವಿಮಾನದಲ್ಲಿ ಶ್ರೀನಗರಕ್ಕೆ ಬರುವುದೆಂತಲೂ, ಆತ ರೂಪಾರಿನಿಂದ ಶ್ರೀನಗರಕ್ಕೆ ತನ್ನ ಹೆಂಡತಿ ಮಗಳೊಂದಿಗೆ ಕಾರಿನಲ್ಲಿ ಬರುವುದೆಂತಲೂ ನಿರ್ಧಾರವಾಯಿತು. ಇಬ್ಬರಿಗೂ ಡ್ರೈವಿಂಗ್ ಗೊತ್ತಿರುವುದರಿಂದ ಹೆಚ್ಚಿನ ತೊಂದರೆ ಏನಿಲ್ಲ ಎಂದು, ಕಾರಿನಲ್ಲಿ ಹೋಗುವುದಕ್ಕೆ ಆತಂಕಪಟ್ಟ ಮನೆಯವರಿಗೆ ಸಮಾಧಾನ ಮಾಡಿದ್ದೆವು. ಅದಕ್ಕೆ ಸಿದ್ಧತೆಗಳೂ ಆರಂಭವಾದವು.

ಕಾಡಿದ ಕಾಶ್ಮೀರ ಎಂಬ ಗುಮ್ಮ!
ನಾವು ಕಾಶ್ಮೀರಕ್ಕೆ ಪ್ರವಾಸಕ್ಕೆ ಹೋಗುತ್ತೇವೆ ಎಂದಾಕ್ಷಣ, ನಮ್ಮ ಮನೆಗಳವರು ಅಲ್ಲಿ ದಿನ ನಿತ್ಯ ಗಲಾಟೆ ಇರುತ್ತದಂತೆ, ಭಯೋತ್ಪಾದಕರ ಕಾಟ ಎಂದು ಆತಂಕ ವ್ಯಕ್ತಪಡಿಸಿದರೂ, ನಾವು ಅವರನ್ನು ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದೆವು. ಕೆಲವು ಸ್ನೇಹಿತರಂತೂ, ಅಲ್ಲಿ ಹಾಗೆ, ನಮ್ಮವರೊಬ್ಬರು ಹೋಗಿದ್ದಾಗ ಹೀಗಾಯಿತು, ಇತ್ಯಾದಿ ಇತ್ಯಾದಿ ಸುದ್ದಿಗಳನ್ನು ಹೇಳುತ್ತಲೇ ಇದ್ದರು. ಆ ದಿನಗಳಲ್ಲಿ ಮಾದ್ಯಮಗಳಲ್ಲೂ ಶ್ರೀನಗರದ ಒಂದೆರಡು ಕಡೆ ಗುಂಡಿನ ಧಾಳಿ ನಡೆದ ಬಗ್ಗೆ ವರದಿಗಳು ಬಂದಿದ್ದವು. ಭಾರತದಿಂದ ಕಾಶ್ಮೀರವನ್ನು ಎಂದೂ ಬೇರ್ಪಡಿಸಿ ನೋಡಿರದ ನನ್ನ ಮನಸ್ಸು, ನಮ್ಮದೇ ದೇಶದ ಒಂದು ಭಾಗಕ್ಕೆ ಹೋಗಿ ಬರುವುದಕ್ಕೆ ಏಕಿಷ್ಟು ಆತಂಕ? ನಾನು ಹೋಗಿಯೇ ಬರುತ್ತೇನೆ ಎಂದು ದಂಗೆಯೇಳುತ್ತಿತ್ತು. ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚೆಕ್-ಇನ್‍ಗಾಗಿ ಸರದಿಯಲ್ಲಿ ನಿಂತಿದ್ದಾಗ, ಸ್ನೇಹಿತರಾದ ಪ್ರಕಾಶ್ ಹೆಗ್ಗಡೆಯವರು ಸಿಕ್ಕಿದರು. ಅವರೂ ಸಿಮ್ಲಾಗೆ ಹೊರಟಿದ್ದರು. ನಾವು ಶ್ರೀನಗರಕ್ಕೆ ಹೋಗುತ್ತಿದ್ದೇವೆ ಎಂದು ತಿಳಿದಾಕ್ಷಣ ಅವರೂ ಆತಂಕಕ್ಕೆ ಒಳಗಾದರು. ನನಗೆ ಅಲ್ಲಿ ಪರಿಚಿತರೊಬ್ಬರು ಒಳ್ಳೆಯ ಪೊಸಿಷನ್ನಿನಲ್ಲಿದ್ದಾರೆ. ಅಲ್ಲಿ ನಿಮಗೇನಾದರೂ ತೊಂದರೆಯಾದರೆ ತಿಳಿಸಿ ಎಂದು ಮತ್ತೆ ಮತ್ತೆ ಹೇಳಿದ್ದಲ್ಲದೆ, ಪೋನ್ ನಂಬರನ್ನೂ ಸಹ ಎಸ್.ಎಂ.ಎಸ್. ಮಾಡಿದ್ದರು. ನನ್ನ ಮನಸ್ಸು ಪ್ರಶಾಂತವಾಗಿತ್ತು. ಆದರೆ ನನ್ನ ಹೆಂಡತಿ ಏನು ಇವರೆಲ್ಲಾ ಹೀಗೆ ಹೇಳುತ್ತಾರೆ? ಎಂದು ಆತಂಕಗೊಂಡಿದ್ದಳು. ಆದರೆ ನನ್ನ ಮಗಳು ಮಾತ್ರ ಅವಳ ಮೊದಲ ವಿಮಾನಯಾನದ ಖುಷಿಯನ್ನು ಸಂಭ್ರಮಿಸಲು ಸಿದ್ಧಳಾಗಿ, ಅಲ್ಲಿರುವ ತನ್ನ ಸ್ನೇಹಿತೆ ಸಾನಿಧ್ಯಳ ಜೊತೆ ತಾನು ಆಡಬೇಕಾದ ಆಟಗಳು, ಹೇಳಬೇಕಾದ ಕತೆಗಳು ಎಲ್ಲವನ್ನೂ ನೆನಪು ಮಾಡಿಕೊಳ್ಳುತ್ತಿದ್ದಳು.

ಮಷಿನ್ ಗನ್ನುಗಳ ಸ್ವಾಗತ!
ಮುಂಬಯಿಯಲ್ಲಿ ವಿಮಾನ ಬದಲಿಸಿ, ಶ್ರೀನಗರಕ್ಕೆ ಹೊರಡಲಿದ್ದ ವಿಮಾನವನ್ನೇರಿದ ಮೇಲೆ ಕ್ಷಣಗಣನೆ ಆರಂಭವಾಯಿತು. ದಾರಿಯುದ್ದಕ್ಕೂ, ಅಲ್ಲಲ್ಲಿ, ಬಿಸಿಲು ಚೆನ್ನಾಗಿದ್ದುದರಿಂದಲೂ, ಮೋಡ ಮುಸುಕಿಲ್ಲದಿದ್ದುದರಿಂದಲೂ ಕೆಳಗೆ ಕಾಣಿಸುತ್ತಿದ್ದ ನಗರಗಳು, ನದಿಗಳು, ನದಿ ಸಂಗಮ ಎಲ್ಲವನ್ನೂ ನೋಡುತ್ತಾ, ಮಗಳಿಗೆ ತೋರಿಸುತ್ತಾ ಕಾಲ ಕಳೆಯುತ್ತಿದ್ದೆ. ಹಿಮಾಲಯ ಶ್ರೇಣಿಯ ಹಿಮಾಚ್ಛಾದಿತ ಪರ್ವತ ಶಿಖರಗಳು ಕಣ್ಣ ದೃಷ್ಟಿ ಹರಿಸಿದುದ್ದಕ್ಕೂ ಕಾಣಿಸಿಕೊಂಡವು. ಇನ್ನೊಂದರ್ಧ ಗಂಟೆಯಲ್ಲಿ ಶ್ರೀನಗರದಲ್ಲಿ ಇಳಿಯುತ್ತೇವೆ ಎಂದುಕೊಂಡು, ಮೇಲಿನಿಂದ ನೋಡಿದಾಗ ಶ್ರೀನಗರ ಹೇಗೆ ಕಾಣಬಹುದು ಎಂಬ ಕಾತರದಿಂದ ಕೆಳಗೆ ನೋಡುತ್ತಿದ್ದೆವು. ನಗರ ಪ್ರದೇಶ ಆರಂಭವಾಗಿ ವಿಮಾನ ಲ್ಯಾಂಡಿಂಗ್ ಆಗುವ ಸೂಚನೆಗಳು ಕಂಡವು. ಕಾತರದಿಂದ ಹೊರಗೆ, ಕೆಳಗೆ ನೋಡುತ್ತಿದ್ದ ನಮ್ಮ ಕಣ್ಣಿಗೆ ಮೊದಲು ಬಿದ್ದಿದ್ದು, ಮಷಿನ್ ಗನ್ನುಗಳನ್ನು ಹೊತ್ತು ನಿಂತಿದ್ದ ಮಿಲಿಟರಿ ಜೀಪುಗಳು, ಟ್ರಕ್ಕುಗಳು! ಮಷಿನ್ ಗನ್ನುಗಳ ಮೂತಿಗಳೂ ನಮ್ಮ ವಿಮಾನದ ಕಡೆಗೆ ಗುರಿಯಿಟ್ಟು ನಿಂತಂತೆ ಕಾಣುತ್ತಿದ್ದವು. ಸಹಜವಾಗಿ ನಮಗೆ ಆತಂಕವೂ ಶುರುವಾಯಿತು. ಆದರೆ ಮುಂದಿನ ಮೂವತ್ತು ನಿಮಿಷದಲ್ಲಿ ಸುರಕ್ಷಿತವಾಗಿ ಇಳಿದು, ಲಗ್ಗೇಜು ತೆಗೆದಕೊಂಡು, ವಿಮಾನ ನಿಲ್ದಾಣದ ಹೊರಗೆ ಟ್ಯಾಕ್ಸಿ ಸ್ಟ್ಯಾಂಡಿನ ಬಳಿ ನಿಂತಿದ್ದೆವು. ಹೆಜ್ಜೆ ಹೆಜ್ಜೆಗೂ ಪೋಲೀಸಿನವರಿದ್ದರು. ಎಲ್ಲರ ಕೈಯಲ್ಲೂ ಮಷಿನ್ ಗನ್ನುಗಳಿದ್ದವು. ನಾವು ಒಂದು ಟ್ಯಾಕ್ಸಿ ಹಿಡಿದು ಹೊರಟ ನಂತರ ಮೊದಲು ಕೇಳಿದ ಪ್ರಶ್ನೆಯೇ ಯಾಕಿಷ್ಟು ಜನ ಪೊಲೀಸು? ಎಂದು. ಅದಕ್ಕೆ ಟ್ಯಾಕ್ಸಿ ಡ್ರೈವರ್ ಇದೆಲ್ಲಾ ಇಲ್ಲಿ ನಿತ್ಯ ಇರುವಂತದ್ದೆ ಎಂದು ನಿರ್ಲಿಪ್ತನಾಗಿ ನುಡಿದ. ಪ್ರೀಪೇಯ್ಡ್ ಸಿಮ್ಮುಗಳೆಲ್ಲಾ ಕೆಲಸ ನಿಲ್ಲಿಸಿಬಿಟ್ಟಿದ್ದವು. ನಾವು ದಿನೇಶನನ್ನು ಕಾಂಟ್ಯಾಕ್ಟ್ ಮಾಡಲು ಆ ಡ್ರೈವರನೇ ತನ್ನ ಮೊಬೈಲ್ ನೀಡಿ ಸಹಕರಿಸಿದ. ನಮ್ಮ ಟ್ಯಾಕ್ಸಿ ದಾಲ್ಲೇಕ್ ಕಡೆ ಸಾಗುತ್ತಿರಬೇಕಾದರೆ, ಡ್ರೈವರ್ ಇದೇ ಶ್ರೀನಗರದ ಲಾಲ್ಚೌಕ್ ಎಂದು ತೋರಿಸಿದ. ನಾನು ಚಿಕ್ಕವನಿದ್ದಾಗಿಲಿಂದಲೂ, ಪ್ರತಿನಿತ್ಯ ರೇಡಿಯೋದಲ್ಲಿ ಕೇಳುತ್ತಿದ್ದ, ಲಾಲ್ಚೌಕವನ್ನು ಅಚ್ಚರಿಯಿಂದ ಕಣ್ಣು ತುಂಬಿಸಿಕೊಂಡೆ.

ಆಪೆಲ್ ವ್ಯಾಲಿಯ ಅಮಲು!
ಮೊದಲ ದಿನದ ಅರ್ಧದಿನವಲ್ಲದೆ, ಶ್ರೀನಗರದಲ್ಲಿ ಇನ್ನೂ ಎರಡು ದಿನ ಇರುವುದೆಂದು ತೀರ್ಮಾನವಾಗಿತ್ತು. ಅದರಲ್ಲಿ ಒಂದು ದಿನ ಲೋಕಲ್, ಇನ್ನೊಂದು ದಿನ ಗುಲ್ಮಾರ್ಗ್‍ ನೋಡಿದೆವು. ಗುಲ್ಮಾರ್ಗ್‍ ಮಾರ್ಗದ ಕಣಿವೆಗಳಲ್ಲಿ ಕಾರು ಚಲಾಯಿಸಿದ್ದು ನನಗೆ ಅತ್ಯಂತ ಖುಷಿಕೊಟ್ಟ ಕ್ಷಣವಾಗಿತ್ತು. ಗುಲ್ಮಾರ್ಗ್‍ ಹಿಮಪರ್ವತದ ಮೇಲೆ, ಆಮ್ಲಜನಕದ ಕೊರತೆಯಿಂದ ನಮ್ಮ ಅಂಕಲ್ ಸುಸ್ತಾಗಿದ್ದು ಆತಂಕಕ್ಕೆ ಕಾರಣವಾಗಿತ್ತು. ಅವರು ಸುಧಾರಿಸಿಕೊಳ್ಳಲು ಸುಮಾರು ಮೂರ್ನಾಲ್ಕು ಗಂಟೆಗಳೇ ಬೇಕಾದವು. ಶ್ರೀನಗರದಲ್ಲಿ ಹಾಗೂ ಗುಲ್ಮಾರ್ಗ್‍ ಮಾರ್ಗದಲ್ಲಿ ಎಲ್ಲೆಲ್ಲಿ ಪೊಲೀಸ್ ಠಾಣೆಗಳಿದ್ದವೊ ಅಲ್ಲೆಲ್ಲ ತುಂಬಾ ಜನರ ಗುಂಪನ್ನು ಬೆಳಿಗ್ಗೆ ಬೆಳಿಗ್ಗೆಯೇ ನೋಡಿದೆವು. ಸಂಜೆ ಬೋಟ್ ಹೌಸ್ ಮಾಲೀಕನನ್ನು ಅದರ ಬಗ್ಗೆ ಕೇಳಿದಾಗ, ಅವರೆಲ್ಲಾ, ದಿನನಿತ್ಯ, ವಾರಕ್ಕೊಮ್ಮೆ ಪೊಲೀಸ್ ಠಾಣೆಗೆ ಹಾಜರಾಗಿ ಸಹಿ ಮಾಡಬೇಕಾದವರು. ಅದೊಂದು ಇಲ್ಲಿನ ಹೆಚ್ಚಿನವರಿಗೆ ಅಂಟಿದ ಶಾಪ ಎಂದ ವಿಷಾದದಿಂದ ನುಡಿದಿದ್ದ.

ಮಾರನೆಯ ದಿನ ಮುಂಜಾನೆಯೇ ಹೊರಟು ಜಮ್ಮು-ಥಾವಿ ಮಾರ್ಗವಾಗಿ ಪಂಜಾಬ್ ಪ್ರವೇಶಿಸಿ, ಅಮೃತಸರ ತಲಪುವುದೆಂದು ತೀರ್ಮಾನಿಸಿದೆವು. ಆ ದಿನ ರಾತ್ರಿ ನಾವು ಉಳಿದುಕೊಂಡಿದ್ದ ಬೋಟ್ ಹೌಸ್ ಮಾಲೀಕ ನಮ್ಮೊಂದಿಗೆ ಮಾತನಾಡುತ್ತಿದ್ದ. ಕನ್ನಡವೂ ಸೇರಿದಂತೆ ಏಳೆಂಟು ಭಾಷೆ ಬಲ್ಲವನಾಗಿದ್ದ ಆತ ನಮ್ಮ ಮುಂದಿನ ಪ್ರಯಾಣದ ವಿಷಯ ತಿಳಿದಾಕ್ಷಣ, ನೀವು ಪೆಹಲ್ಗಾಂವ್ ಹೋಗಿ. ಅದು ಅತ್ಯಂತ ಸುಂದರವಾದ ಸ್ಥಳ ಎಂದು ಹೇಳಿದ. ನಮ್ಮ ಪ್ರವಾಸದ ಯೋಜನೆಯಲ್ಲಿ ಆ ಸ್ಥಳದ ಬಗ್ಗೆ ತಿಳಿದುಕೊಂಡಿದ್ದೆವು. ಆದರೆ ಅದಕ್ಕಾಗಿ ಒಂದಿಡೀ ದಿನವನ್ನು ಮೀಸಲಿಡಲು ನಮಗೆ ಸಾಧ್ಯವಾಗದೆ ಹಾಗೂ ಗುಲ್ಮಾರ್ಗ್‍ ಕಣಿವೆಗಳನ್ನು ನೋಡುವುದರಿಂದ ಮತ್ತೆ ಪೆಹಲ್ಗಾಂವ್ ನೋಡುವ ಅವಶ್ಯಕತೆ ಏನಿದೆ ಎಂದು ಕೈಬಿಟ್ಟಿದ್ದೆವು. ಬೋಟ್‍ಹೌಸ್ ಮಾಲೀಕ ಮಾತನಾಡುತ್ತ, ಗ್ರಾಮೀಣ ಕಾಶ್ಮೀರದ ಪರಿಚಯವಾಗಬೇಕೆಂದರೆ ಪೆಹಲ್ಗಾಂವ್ ನೋಡಲೇಬೇಕು. ಅಲ್ಲಿ ಸುಂದರವಾದ ನದಿ, ಪುರಾತನವಾದ ಮಾಮಲ್ಲ ದೇವಾಲಯ, ಆಪೆಲ್ ವ್ಯಾಲಿ ಎಲ್ಲಾ ಇದೆ ಎಂದು ಹೇಳಿದ. ನನ್ನ ಮತ್ತು ದಿನೇಶ ಇಬ್ಬರೂ ಒಟ್ಟಿಗೆ ಆಪೆಲ್ ವ್ಯಾಲಿಯಲ್ಲಿ ಆಪಲ್ ಮರಗಳಿದ್ದಾವ? ಅಲ್ಲಿ ಆಪಲ್ ಸಿಗುತ್ತವಾ? ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಹಾಕಿದೆವು. ಆತ ಹೌದು ಎಂದು ಹೇಳಿ, ಹೇಗೆ ಹೋಗಬೇಕು ಎಂಬುದನ್ನು ವಿವರವಾಗಿ ಹೇಳಿದ್ದಲ್ಲದೆ, ಒಂದು ಹಾಳೆಯಲ್ಲಿ ಬರೆದೂ ಕೊಟ್ಟ.

ಸ್ವರ್ಗದಲ್ಲಿಯೂ ತಪ್ಪದ ಭ್ರಷ್ಟಾಚಾರ!
ಮಾರನೆಯ ದಿನ ಬೆಳಿಗ್ಗೆ ಏಳು-ಏಳೂವರೆಯ ಹೊತ್ತಿಗೆ ಕಾಫಿ ಮುಗಿಸಿ ಹೊರಟೆವು. ಸಾಕಷ್ಟು ಮಂಜು ಮುಸುಕಿದ್ದರಿಂದ ಹೆಡ್ ಲೈಟ್ ಬೆಳಗಿಸಿಯೇ ಗಾಡಿ ಚಲಾಯಿಸುತ್ತಿದ್ದೆ. ಇನ್ನೇನು ಶ್ರೀನಗರದ ಹೊರವಲಯಕ್ಕೆ ಬರಬೇಕು ಅನ್ನುವಷ್ಟರಲ್ಲಿ, ಒಂದು ದೊಡ್ಡ ಸರ್ಕಲ್ ಬಳಿ ಬ್ಯಾರಿಕೇಡುಗಳನ್ನಿರಸಲಾಗಿತ್ತು. ನಾನು ಕಾರನ್ನು ನಿಧಾನಿಸುವಷ್ಟರಲ್ಲಿ ಭಾರಿಗಾತ್ರದ ಇಬ್ಬರು ಪೋಲೀಸಿನವರು ಪ್ರತ್ಯಕ್ಷರಾದರು. ಇಬ್ಬರೂ ದಪ್ಪ ರಗ್ಗುಗಳನ್ನು ಹೊದ್ದಿದ್ದರಿಂದ ಅವರನ್ನು ಪೊಲೀಸರು ಎಂದು ಗುರುತಿಸುವುದಕ್ಕೇ ಸ್ವಲ್ಪ ಸಮಯ ಬೇಕಾಯಿತು. ಡಿ.ಎಲ್., ಆರ್.ಸಿ. ಬುಕ್, ಇನ್ಷ್ಯೂರೆನ್ಸ್ ಎಲ್ಲಾ ತೆಗೆದಕೊಂಡು ಬರುವಂತೆ ನಮಗೆ ತಿಳಿಸಲಾಯಿತು. ದುರದೃಷ್ಟಕ್ಕೆ ಕಾರಿನ ಎಮಿಷನ್ ಸರ್ಟಿಫಿಕೇಟ್ ದಿನಾಂಕ ಮುಗಿದುಹೋಗಿತ್ತು. ಹಿಂದಿನ ಎರಡು ದಿನಗಳೂ, ಶ್ರೀನಗರದಲ್ಲೇ ಎಮಿಷನ್ ಟೆಸ್ಟ್ ಮಾಡಿಸಲು ಪ್ರಯತ್ನಿಸಿದೆವಾದರೂ, ಟೆಸ್ಟ್ ಮಾಡುವ ಕೇಂದ್ರಗಳೇ ಕಾಣಸಿಗಲಿಲ್ಲ. ಸಧ್ಯ ಈತ ಅದನ್ನು ಬಿಟ್ಟು ಉಳಿದವನ್ನು ಮಾತ್ರ ಕೇಳಿದ್ದರಿಂದ, ಧೈರ್ಯವಾಗಿ ಎಲ್ಲವನ್ನು ತೆಗೆದುಕೊಂಡು ಹೊರಟೆವು. ನಮ್ಮನ್ನು ಒಂದು ಪೊಲೀಸ್ ಬೂತ್ ಒಳಗೆ ಕರೆದೊಯ್ಯಲಾಯಿತು. ಎರಡೇ ನಿಮಿಷದಲ್ಲಿ ಎಲ್ಲವನ್ನೂ ಚೆಕ್ ಮಾಡಿದಂತೆ ಮಾಡಿ ನಮಗೆ ಹೊರಡುವಂತೆ ಸೂಚಿಸಲಾಯಿತು. ಇನ್ನೂ ನಾವು ಹತ್ತು ಹೆಜ್ಜೆ ಹಾಕಿರಲಿಲ್ಲ, ಅಷ್ಟರಲ್ಲೇ ಮತ್ತೆ ಹಿಂದಕ್ಕೆ ಕರೆದರು. ಎಮಿಷನ್ ಟೆಸ್ಟ್ ಸರ್ಟಿಫಿಕೇಟ್ ತೋರಿಸುವಂತೆ ಕೇಳಲಾಯಿತು. ನಾವು ಇರುವ ವಿಚಾರ ತಿಳಿಸಿ, ದಿನಾಂಕ ಮುಗಿದುಹೋಗಿದ್ದ ದಾಖಲೆಯನ್ನೇ ತೋರಿಸಿದೆವು. ಅಂದಿಗೆ ದಿನಾಂಕ ಮುಗಿದು ಹತ್ತು ದಿನಗಳಾಗಿದ್ದುವು ಅಷ್ಟೆ. ಆದರೆ, ಅದನ್ನು ಕೇಳಲು ಅಲ್ಲಿ ಯಾರೂ ತಯಾರಿರಲಿಲ್ಲ. ಒಂದು ಸಾವಿರ ರುಪಾಯಿ ಫೈನ್ ಕಟ್ಟಬೇಕಾಗುತ್ತದೆ ಎಂದು ಒಬ್ಬ ಪೊಲೀಸಿನವನು ನಮಗೆ ಸೂಚಿಸಿದ. ಇನ್ನು ವಾದ ಮಾಡಿ ಪ್ರಯೋಜನವಿಲ್ಲವೆಂದು, ಹಣಕಟ್ಟಿ ರಸೀದಿ ಪಡೆಯಲು ನಿರ್ಧರಿಸಿದೆವು. ನೋಡಿದರೆ ಅಲ್ಲಿ ಯಾವ ರಸೀದಿ ಪುಸ್ತಕವಾಗಲೀ, ನೋಟೀಸಿನ ಪುಸ್ತಕವಾಗಲೀ ಇರಲೇ ಇಲ್ಲ. ಆಗ ಒಬ್ಬ ಪೋಲೀಸಿನವನು ಒಂದಷ್ಟು ಹಣ ಕೊಟ್ಟು ಹೊರಟುಬಿಡಿ ಎಂದು ಸೂಚಿಸಿದ. ದಿನೇಶ ನೂರರ ಎರಡು ನೋಟುಗಳನ್ನು ಅವನ ಕೈಗಿತ್ತು ಹೊರಟೇ ಬಿಟ್ಟ. ಅಂತೂ ನಾವು ಇನ್ನೂರು ಲಂಚ ಕೊಟ್ಟ ಹಾಗೆ ಆಯಿತು ಎಂದು ನಾನು ಹೇಳಿದಾಗ, ನಮ್ಮ ಅಂಕಲ್ ಒಂದು ಮಾತು ಹೇಳಿದರು. ನೋಡಿ, ಅವರು ಬೀಟ್ ಪೋಲೀಸಿನವರು. ಅವರಿಗೆ ಗಾಡಿಗಳನ್ನು ನಿಲ್ಲಿಸಿ ಚೆಕ್ ಮಾಡುವ ಅಧಿಕಾರವೇ ಇಲ್ಲ. ಅದರಲ್ಲೂ ಎಮಿಷನ್ ಸರ್ಟಿಫಿಕೇಟ್ ಮೊದಲಾದವನ್ನು ಚೆಕ್ ಮಾಡುವ ಅಧಿಕಾರವಂತೂ ಇರಲಿಕ್ಕೆ ಸಾಧ್ಯವೇ ಇಲ್ಲ. ಅವೆಲ್ಲಾ ಇದ್ದಿದ್ದರೆ ರಸೀದಿ ಪುಸ್ತಕ ಇರುತ್ತಿರಲಿಲ್ಲವೆ? ಪಂಜಾಬ್ ರಿಜಿಸ್ಟ್ರೇಷನ್ ಗಾಡಿಯಾದ್ದರಿಂದ, ಪ್ರವಾಸಿಗರದೇ ಇರುತ್ತದೆ ಎಂದುಕೊಂಡು ಒಂದಷ್ಟು ಕಾಫಿ ತಿಂಡಿಗೆ ಕಾಸು ಗಿಟ್ಟಿಸಿಕೊಂಡಿದ್ದಾರೆ ಅಷ್ಟೆ ಎಂದರು. ನಮಗೂ ಅದೇ ಸರಿಯೆನ್ನಿಸಿತು.

ಮುಂದೆ ಅನಂತನಾಗ್ ನಗರಕ್ಕೆ ಬಂದಾಗ, ಎಮಿಷನ್ ಟೆಸ್ಟ್ ಮಾಡಿಸಲೇಬೇಕೆಂದು, ಆ ಟೆಸ್ಟ್ ಮಾಡುವ ಜಾಗವನ್ನು ಕೊನೆಗೂ ಪತ್ತೆ ಹಚ್ಚಿದೆವು. ಆದರೆ, ಏನು ಮಾಡುವುದು ಸುಮಾರು ಮೂವತ್ತು ನಲವತ್ತು ವಾಹನಗಳು ಸರದಿಯಲ್ಲಿದ್ದವು. ಕೊನೆಗೆ ದಿನೇಶ, ಆ ಎಮಿಷನ್ ಟೆಸ್ಟ್ ಮಾಡುತ್ತಿದ್ದ ಹುಡುಗನನ್ನು ಹಿಡಿದು, ನಮ್ಮ ಪರಿಸ್ಥಿತಿಯನ್ನು ಹೇಳಿ, ಮತ್ತೊಂದು ಕೇಂದ್ರ ಮುಂದೆ ಎಲ್ಲಿ ಸಿಗುತ್ತದೆ ಎಂದು ಕೇಳಿದ. ಅದಕ್ಕೆ ಆತ ಕಾರಿನ ಬಳಿ ಬಂದು, ಹೊಸ ಕಾರಲ್ಲವೆ? ಎಂದ. ನಾವು ಹೌದು ಎಂದಾಗ, ಉದ್ದ ವಯರ್ ಇದ್ದ ವೆಬ್ ಕ್ಯಾಮೆರವಾನ್ನು ಕಾರಿನ ಬಳಿ ತಂದು ನಂಬರ್ ಪ್ಲೇಟ್ ಕ್ಲಿಕ್ಕಿಸಿದ. ನಂತರ ಐದೇ ನಿಮಿಷದಲ್ಲಿ ಎಮಿಷನ್ ಸರ್ಟಿಫಿಕೇಟ್ ನಮ್ಮ ಕೈಯಲ್ಲಿತ್ತು. ನಾವು ಇತ್ತ ನೂರು ರೂಪಾಯಿಗೆ, ಇಪ್ಪತ್ತೈದು ರೂಪಾಯಿ ಚಿಲ್ಲರೆಯನ್ನು ಆತ ವಾಪಸ್ ನೀಡಿದ. ನಾನು ಅಲ್ಲಿ ನೇತು ಹಾಕಿದ್ದ ದರಪಟ್ಟಿಯಿದ್ದ ಬೋರ್ಡನ್ನು ನೋಡಿದೆ. ಅದರಲ್ಲಿ ಪೆಟ್ರೋಲ್ ಕಾರ್ ಐವತ್ತು ರೂಪಾಯಿ, ಡೀಸೆಲ್ ಕಾರು ಎಪ್ಪತ್ತೈದು ರೂಪಾಯಿ ಎಂದಿತ್ತು! ನಮ್ಮದು ಡೀಸೆಲ್ ಕಾರು ಆಗಿತ್ತು ಹಾಗೂ ಆ ಹುಡುಗ ಸರಿಯಾಗೆ ಹಣ ತೆಗೆದುಕೊಂಡಿದ್ದ. ಅಂದು ಬೆಳಿಗ್ಗೆಯೇ ಕಾಶ್ಮೀರ ಎಂಬ ಸ್ವರ್ಗದಲ್ಲಿ ಪೋಲೀಸಿನವರು ನಡೆದುಕೊಂಡಿದ್ದ ರೀತಿಯನ್ನು ಕಂಡಿದ್ದ ನಮಗೆ ಆ ಹುಡುಗನ ಪ್ರಾಮಾಣಿಕತೆ ಅತಿ ದೊಡ್ಡದು ಎನ್ನಿಸಿತ್ತು. ಏಕೆಂದರೆ ಆತ ಹೆಚ್ಚಿಗೆ ಕೇಳಿದ್ದರೂ ಕೊಡಲು ನಾವು ತಯಾರಿದ್ದೆವು.

ಪ್ರತ್ಯಕ್ಷವಾದ ಆಪೆಲ್ ವ್ಯಾಲಿ!
ರಸ್ತೆಯ ಎರಡೂ ಬದಿಗೆ ಆಪೆಲ್ ಹಣ್ಣುಗಳ ಬಾಕ್ಸ್ ಮತ್ತು ಬುಟ್ಟಿಗಳು ಕಾಣಿಸತೊಡಗಿದವು. ಸೇಬಿನ ಮರಗಳೆಲ್ಲಿ ಎಂದು ಹುಡುಕುತ್ತಲೇ ಡ್ರೈವ್ ಮಾಡುತ್ತಿದ್ದ ದಿನೇಶನಿಗೆ ರಸ್ತೆಯ ಎರಡೂ ಬದಿ ಕೊಂಬೆ ರಂಬೆಗಳಲ್ಲಿ ಸೇಬನ್ನು ತೂಗಿಸಿತ್ತಾ ನಿಂತಿದ್ದ ಸಾಲು ಸಾಲು ಸೇಬಿನ ಮರಗಳನ್ನು ಕಂಡು ಖುಷಿಯೋ ಖುಷಿ. ಒಂದು ಕಡೆ ರಸ್ತೆ ಬದಿಯಲ್ಲೇ ಲೋಡುಗಟ್ಟಲೆ ಸೇಬನ್ನು ರಾಶಿ ಹಾಕಿಕೊಂಡು ಕೆಲವರು ಗ್ರೇಡ್ ಮಾಡಿ ವಿಂಗಡಿಸುತ್ತಿದ್ದರು. ಇನ್ನು ಕೆಲವರು ಕಾಗದದ ಬಾಕ್ಸುಗಳಲ್ಲಿ ತುಂಬಿಸಿ ಪ್ಯಾಕ್ ಮಾಡುತ್ತಿದ್ದರು. ನಾವು ಕಾರಿನಿಂದ ಇಳಿಯುತ್ತಲೇ ಒಂದಷ್ಟು ಜನ ಬಂದು ಫ್ರೆಷ್ ಹಣ್ಣುಗಳನ್ನು ಕೊಳ್ಳುವಂತೆ ಪೀಡಿಸತೊಡಗಿದರು. ಆಗ ದಿನೇಶ ಮತ್ತು ನಮ್ಮ ಅಂಕಲ್ ಅವರೊಂದಿಗೆ ಚೌಕಾಸಿಗೆ ಇಳಿದರು. ದಿನೇಶ ಮತ್ತು ನಾನು ನಾವೇ ಮರದಿಂದ ಹಣ್ಣು ಕಿತ್ತುಕೊಳ್ಳಬೇಕು ಎಂದು ಆಲೋಚಿಸಿದೆವು. ಒಂದು ಬಾಕ್ಸಿಗೆ (ಸುಮಾರು ಆರರಿಂದ ಎಂಟು ಕೇಜಿ ತೂಕದವು) ನಾನೂರು ಐನೂರು ಹೇಳುತ್ತಿದ್ದರು. ಆಗ ನಾವು, ಮರದಿಂದಲೇ ಕಿತ್ತುಕೊಳ್ಳಲು ಅವಕಾಶ ಮಾಡಿಕೊಟ್ಟರೆ ಐನೂರು ಕೊಡುವುದಾಗಿ ತಿಳಿಸಿದೆವು. ಆದರೆ, ಆ ತೋಟದ ಮಾಲೀಕ ಅಲ್ಲಿ ಇರಲಿಲ್ಲ. ಅಲ್ಲಿದ್ದವರೆಲ್ಲಾ ಕೆಲಸಗಾರರು, ಒಬ್ಬ ಮ್ಯಾನೇಜರ್ ಮಾತ್ರ. ಅಷ್ಟರಲ್ಲಿ ಬೇರೆ ಇನ್ನೊಬ್ಬ ಬಂದು, ಇಲ್ಲಿಂದ ಸ್ವಲ್ಪ ದೂರದಲ್ಲಿ ನನ್ನ ತೋಟವಿದೆ. ಅಲ್ಲಿ ನೀವೆ ಕಿತ್ತು ಕೊಳ್ಳಬಹುದು. ಆದರೆ ನಾನು ತೋರಿಸಿದ ಹಣ್ಣುಗಳನ್ನೇ ಕಿತ್ತುಕೊಳ್ಳಬೇಕು ಎಂದು ಆಹ್ವಾನಿಸಿದ. ಎಲ್ಲರೂ ಅತ್ತ ಹೊರಟಾಗ ಕೆಲವು ಮಕ್ಕಳು ಬಂದು ಬಿಸ್ಕತ್ತು ಇದ್ದರೆ ಕೊಡಿ ಎಂದು ಪೀಡಿಸತೊಡಗಿದರು. ನಾವು ನಮ್ಮಲ್ಲಿದ್ದ ಬಿಸ್ಕತ್ತುಗಳನ್ನು ಕೊಟ್ಟೆವು. ಆಗ ದೊಡ್ಡವರೂ ಬಂದು ಬಿಸ್ಕತ್ತಿಗಾಗಿ ಪೀಡಿಸತೊಡಗಿದರು. ನಮ್ಮಲ್ಲಿದ್ದ ಎಲ್ಲಾ ಬಿಸ್ಕತ್ತುಗಳನ್ನು ಪ್ಯಾಕ್ ಸಮೇತ ನೀಡಿದರೂ ಅವರು ಕಾಡುವುದು ತಪ್ಪಲಿಲ್ಲ. ಆಗ ನಮ್ಮನ್ನು ತನ್ನ ತೋಟಕ್ಕೆ ಆಹ್ವಾನಿಸಿದಾತನೇ ಅವರನ್ನೆಲ್ಲಾ ಗದರಿ ದೂರ ಕಳುಹಿಸಿದ. ಕಾರಿನ ಮೇಲೆಯೇ ನಮ್ಮ ಲೆಗ್ಗೇಜು ಇದ್ದುದರಿಂದ ನಾನು ಕಾರಿನ ಬಳಿಯೇ ಉಳಿದೆ. ಉಳಿದವರು ತೋಟದಲ್ಲಿ ಹಣ್ಣು ಕೀಳುವ ಸಂಭ್ರಮದಿಂದ ಹೆಜ್ಜೆ ಹಾಕಿದರು.

ಆಗ ನಾನು ಅಲ್ಲಿದ್ದ ಒಬ್ಬ ವಯಸ್ಕನೊಂದಿಗೆ ನನ್ನ ಅರೆಬರೆ ಹಿಂದಿಯಲ್ಲಿ ಸಂಭಾಷಣೆಗೆ ತೊಡಗಿದೆ. ನಾನು ಏನು ಕೇಳಿದೆನೊ? ಅವನು ಏನು ಹೇಳಿದನೊ? ಆದರೆ ನನಗೆ ಅರ್ಥವಾಗಿದ್ದು ಇಷ್ಟೆ. ಅಲ್ಲಿನ ಹೆಚ್ಚಿನ ಸೇಬು ತೋಟಗಳು ಬೇರೆ ಬೇರೆ ಕಂಪೆನಿ ಆಡಳಿತಕ್ಕೆ ಒಳಪಟ್ಟಿವೆ. ಚಿಕ್ಕಪುಟ್ಟ ತೋಟ ಇಟ್ಟುಕೊಂಡಿರುವವರೂ ಅಲ್ಲಿ ನೆಲೆಸಿಲ್ಲ. ಎಲ್ಲ ನಗರಗಳಲ್ಲಿ ನೆಲೆಸಿದ್ದಾರೆ. ಇಲ್ಲಿ ಮ್ಯಾನೇಜರುಗಳೇ ಆಳು ಕಾಳುಗಳನ್ನು ಕರೆದು ಕೆಲಸ ಮಾಡಿಸುತ್ತಾರೆ. (ನಮ್ಮ ಕಾಫಿ ತೋಟದ ಮಾಲೀಕರ ಕಥೆಯನ್ನೇ ಇದು ಸ್ವಲ್ಪ ಹೋಲುತ್ತದೆ).

ನಾನು, ತಿನ್ನಲು ಬೇಕಾದಷ್ಟು ಸೇಬುಗಳೇ ಇರುವಾಗ ಹೀಗೆ ಬಿಸ್ಕತ್ತಿಗೆ ಪೀಡಿಸುವುದು ಏಕೆ ಎಂದೆ. ಅದಕ್ಕೆ ಆತ, ಇಲ್ಲಿರುವವರೆಲ್ಲಾ ಬಡವರೆ. ಕೆಲಸಗಾರರು ಸೇಬನ್ನು ಎಷ್ಟು ತಿಂದರೂ ಯಾರೂ ಕೇಳುವುದಿಲ್ಲ. ಆದರೆ ಈ ಚಳಿಯಲ್ಲಿ ಆ ಹಣ್ಣನ್ನು ಎಷ್ಟು ತಿನ್ನಲು ಸಾಧ್ಯ. ವರ್ಷದಲ್ಲಿ ಆರುತಿಂಗಳು ಮಾತ್ರ ಸಂಪಾದನೆ. ಅದರಲ್ಲೇ ಉಳಿಸಿಕೊಂಡರೆ ಮುಂದಿನ ಆರುತಿಂಗಳು ಜೀವನ. ಇಲ್ಲದಿದ್ದರೆ ಕಷ್ಟ. ಬಿಸ್ಕತ್ತು ತಿಂದು ನೀರು ಕುಡಿದರೆ, ತುಂಬಾ ಹೊತ್ತು ಹೊಟ್ಟೆ ಹಸಿಯುವುದಿಲ್ಲ. ಅದಕ್ಕೆ ಮಕ್ಕಳು ಇಲ್ಲಿ ಯಾರೇ ಪ್ರವಾಸಿಗರು ಬಂದರೂ ಬಿಸ್ಕತ್ತಿಗಾಗಿ ಪೀಡಿಸುತ್ತವೆ ಎಂದ.

ರಸ್ತೆಯ ಬದಿಯಲ್ಲೇ ಥರಾವರಿ ಹಣ್ಣುಗಳನ್ನು ಬೇರೆ ಬೇರೆಯಾಗಿ ಗ್ರೇಡ್ ಮಾಡಿ ಗುಡ್ಡೆ ಹಾಕಿದ್ದರು. ಒಂದಷ್ಟನ್ನು ಚರಂಡಿಗಳಲ್ಲಿ ಬಿಸಾಕಿದ್ದರು. ಅವು ಬಳಸಲು ಯೋಗ್ಯವಿಲ್ಲದವು ಎಂದು ಆತ ಹೇಳಿದ. ಒಂದು ಗುಡ್ಡೆಯಿಂದ ಒಂದು ಹಣ್ಣನ್ನು ತಂದು ತಿನ್ನುವಂತೆ ನನಗೆ ಕೊಟ್ಟ. ಅದನ್ನು ಅಲ್ಲಿನಿಂದ ಕಚ್ಚಿದೆ, ಅಷ್ಟೆ. ನನ್ನ ಬಾಯಿಯ ಎರಡೂ ಕಡೆಯಿಂದ ರಸ ರಭಸವಾಗಿ ಹೊರ ಬಂದಿತ್ತು. ನನ್ನ ಜೀವನದಲ್ಲಿ ಅಷ್ಟೊಂದು ರಸಭರಿತ ಸೇಬನ್ನು ನಾನು ತಿಂದೇ ಇರಲಿಲ್ಲ.

ಅತ್ತ ಸೇಬನ್ನು ಮರದಿಂದ ಕೀಳುವ ಉತ್ಸಾಹದಿಂದ ಹೋದವರು, ಎರಡು ಬಾಕ್ಸುಗಳ್ನು ಹೊತ್ತು ತರುತ್ತಿದ್ದರು. ಅದಲ್ಲದೆ ಉಳಿದವರ ಕೈಯಲ್ಲಿ ಎರಡು ಮೂರು ಹಣ್ಣುಗಳು! ನಾನು ಹಣ್ಣು ತಿನ್ನುತ್ತಿರುವುದನ್ನು ಗಮನಿಸಿದ, ನನ್ನ ಹೆಂಡತಿ, ಅಯ್ಯೋ ಅದನ್ನು ಬಿಸಾಕಿ, ಈಗ ತಾನೆ ಮರದಿಂದ ಕಿತ್ತು ತಂದಿರುವ ಇದನ್ನು ತಿಂದು ನೋಡಿ. ನಾವಂತೂ ಒಬ್ಬೊಬ್ಬರು ಎರಡ್ಮೂರು ತಿಂದಿದ್ದೇವೆ. ರಸ ಹಾಗೆ ಬಾಯಿಯಿಂದ ಹೊರ ಬರುತ್ತದೆ ಎಂದು ಒಂದು ಹಣ್ಣು ಕೊಟ್ಟಳು. ನಾನು ಅದನ್ನು ಹಲ್ಲಿನಿಂದ ಕಚ್ಚಿದೆ. ನಾನು ಮೊದಲು ತಿಂದ ಹಣ್ಣಿಗಿಂತ ಸಿಹಿಯಾಗಿ ರಸಭರಿತವಾಗಿತ್ತು. ಆಗ ನನ್ನೊಂದಿಗೆ ಮಾತನಾಡುತ್ತಿದ್ದಾತ, ನಾನು ತಿನ್ನುತ್ತಿದ್ದ ಹಣ್ಣಿನ ನಡುವೆ ಅಲ್ಲಲ್ಲಿ ಕೆಂಪಗೆ ಇದ್ದ ಭಾಗವನ್ನು ತೋರಿಸಿ, ಇದು ಒಂದೆರಡು ದಿನಗಳಾದ ಮೇಲೆ ಕಾಣೆಯಾಗುತ್ತದೆ. ಆಗ ಇಷ್ಟೊಂದು ರುಚಿ ಸೇಬಿಗೆ ಇರುವುದಿಲ್ಲ ಎಂದ. ನಾನು ನಮ್ಮವರ ಎಲ್ಲರ ಬಾಯಿಯನ್ನೂ ನೋಡಿದೆ. ಎಲ್ಲರ ಬಾಯಿಯೂ ಸೇಬಿನ ರಸದಿಂದ ಆವೃತ್ತವಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಹಣ್ಣು ಕೀಳಲು ಕರೆದುಕೊಂಡು ಹೋಗಿದ್ದಾತ, ಎಷ್ಟು ಬೇಕಾದರೂ ತಿನ್ನಿ ಎಂದು ಹೇಳಿದ್ದೇ ಇವರಿಗೆ ಸಾಕಾಗಿತ್ತು. ಕನಿಷ್ಠ ಇಪ್ಪತ್ತು ಹಣ್ಣುಗಳಾದರೂ ನಮ್ಮೆಲ್ಲರ ಹೊಟ್ಟೆ ಸೇರಿದ್ದವು. ಮಕ್ಕಳಿಬ್ಬರೂ ಮುಖಮೂತಿಯನ್ನೆಲ್ಲಾ ಸೇಬು ಮಾಡಿಕೊಂಡು, ಬಾಯಿಯಲ್ಲಿ ಒತ್ತರಿಸಕೊಂಡೇ ಮಾತನಾಡುತ್ತಿದ್ದರು!

ನಾವು ಬೆಂಗಳೂರಿನಲ್ಲಿ ಸೇಬು ಕೊಂಡುಕೊಳ್ಳುವಾಗಲೆಲ್ಲಾ, ಇವು ಕನಿಷ್ಠ ಒಂದು ವಾರದಷ್ಟಾದರೂ ಹಳೆಯವು ಎಂಬುದು ಮನಸ್ಸಿಗೆ ಬರುತ್ತದೆ. ನೆನೆದಾಗಲೆಲ್ಲಾ ಕಾಶ್ಮೀರದ ರಸಭರಿತ ಸೇಬನ್ನು ಸವಿಯುವಂತಿದ್ದರೆ ಎನ್ನಿಸುತ್ತದೆ. ಬಹುಶಃ ಉತ್ತರದ ಕಡೆಯವರಿಗೆ ತೆಂಗಿನ ಕಾಯಿಯನ್ನು ನೋಡಿದರೆ ಹಾಗೆ ಅನ್ನಿಸಬಹುದೇನೊ? ಏಕೆಂದರೆ ನಾನು ಉತ್ತರಖಂಡ, ಕಾಶ್ಮೀರ ಮತ್ತು ಪಂಜಾಬಿನ ಕೆಲವು ನಗರಗಳಲ್ಲಿ ತೆಂಗಿನ ಕಾಯಿಯ ತುಂಡುಗಳನ್ನು ರಸ್ತೆ ಬದಿಯಲ್ಲಿ ಮಾರಾಟ ಮಾಡುವುದನ್ನು ನೋಡಿದ್ದೇನೆ. ಒಂದು ಹೋಳಿನಿಂದ ಎಂಟು ಚೂರು ಒಟ್ಟಾರೆ ಒಂದು ಕಾಯಿಯಿಂದ ಹದಿನಾರು ಚೂರು ಮಾಡಿರುತ್ತಾರೆ. ಒಂದೊಂದು ಚುರು ಮೂರರಿಂದ ಐದು ರೂಪಾಯಿಗೆ ಮಾರಾಟವಾಗುತ್ತಿದ್ದವು. ಅಂದರೆ ಒಂದು ತೆಂಗಿನ ಕಾಯಿಗೆ 50 ರಿಂದ ಎಂಬತ್ತು ರೂಪಾಯಿ!

ಸದ್ಯ, ಇನ್ನೂ ನಮ್ಮ ಕಡೆ ಸೇಬನ್ನು ತುಂಡರಿಸಿ ಮಾರಾಟ ಮಾಡುವ ವ್ಯವಸ್ಥೆ ಬಂದಿಲ್ಲ.
0 Comments



Leave a Reply.


    Categories

    All
    ಇತರೆ
    ಎನ್‍ಜಿಓ
    ಪರಿಸರ
    ವ್ಯಕ್ತಿಚಿತ್ರಗಳು
    ಸಂಪುಟ 1
    ಸಂಪುಟ 2
    ಸಂಪುಟ 3
    ಸಂಪುಟ 4
    ಸಂಪುಟ 5
    ಸಂಪುಟ 6
    ಸಂಪುಟ 7
    ಸಂಪುಟ 8
    ಸಂಪುಟ 9
    ಸಮಾಜಕಾರ್ಯ
    ಸಮುದಾಯ ಸಂಘಟನೆ


    Picture

    Social Work Learning Academy

    Join WhatsApp Channel

    Niruta Publications

    Social Work Foot Prints

    Leaders Talk

    Ramesha Niratanka

    Picture
    WhatsApp

    Picture

    MHR LEARNING ACADEMY

    Get it on Google Play store
    Download App
    Online Courses

    Picture
    50,000 HR PROFESSIONALS ARE CONNECTED THROUGH OUR NIRATHANKA HR GROUPS.
    YOU CAN ALSO JOIN AND PARTICIPATE IN OUR GROUP DISCUSSIONS.
    Join HR Online Groups


    RSS Feed

Niruta Publications Books List
File Size: 672 kb
File Type: pdf
Download File

Social Work Books
File Size: 116 kb
File Type: pdf
Download File

HR Books
File Size: 87 kb
File Type: pdf
Download File

General Books
File Size: 195 kb
File Type: pdf
Download File



SITE MAP


Site

  • HOME
  • ABOUT US
  • BLOG
  • COLLABORATE WITH NIRUTA PUBLICATIONS
  • HR BLOG
  • PUBLICATION WITH US
  • TRANSLATION & TYPING
  • VIDEOS
  • HR & EMPLOYMENT LAW CLASSES - EVERY FORTNIGHT

POSH

  • OUR ASSOCIATES
  • OUR CLIENTS
  • POSH
  • POSH BLOG​
  • WANT TO BECOME AN EXTERNAL MEMBER FOR AN IC?

NIRATHANKA

  • ​CSR
  • TREE PLANTATION PROJECT

OUR OTHER WEBSITES

  • WWW.HRKANCON.COM
  • WWW.MHRSPL.COM
  • WWW.NIRATANKA.ORG​

Subscribe


Picture
More Details

Copyright Niruta Publications 2021,    Website Designing & Developed by: www.mhrspl.com