ಸಮಾಜದಲ್ಲಿ ಮಾನವ ಜನಾಂಗದಷ್ಟೆ ಪುರಾತನವಾಗಿರುವ ಅನೇಕ ಸಮಸ್ಯೆಗಳ ಸುಳಿಯಿಂದ ಸಂಕಷ್ಟದಲ್ಲಿರುವ ಪರಿಸ್ಥಿತಿ ಸುಧಾರಿಸುವ ಮಹದಾಸೆಯೊಂದಿಗೆ ಸುಮಾರು ಶತಮಾನದ ಹಿಂದೆ ಅಮೆರಿಕಾದಿಂದ ಆಮದಾಗಿದೆ. ವೃತ್ತಿಪರ ಸಮಾಜಕಾರ್ಯ ನಮ್ಮ ದೇಶದ, ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಸಾಂಪ್ರದಾಯಿಕ ನಿಲುವುಗಳಿಂದಾಗಿ ನಮ್ಮಲ್ಲಿನ್ನು ಈ ವೃತ್ತಿಪರ ಸಮಾಜಕಾರ್ಯದ ಪರಿಕಲ್ಪನೆ ನೆನೆಗುದಿಗೆ ಬಿದ್ದಿದೆ. ಅಸ್ಪಷ್ಟ ಕಲ್ಪನೆಯಿಂದ ವೃತ್ತಿಯಾಗಿ ಸಂಪೂರ್ಣ ಬೇರು ಬಿಡಲು ನಾವಿನ್ನು ಅನಿವಾರ್ಯವಾಗಿ ಕಾಯಬೇಕಿದೆ. ಆದರೆ ಕಳೆದ ಎಂಟೊಂಭತ್ತು ದಶಕಗಳಿಂದಲೂ ಸಮಾಜಕಾರ್ಯವನ್ನು ಸ್ನಾತಕೋತ್ತರ ಪದವಿ ಮಟ್ಟದಲ್ಲಿ ಅಭ್ಯಸಿಸಿದವರು, ವಿಭಿನ್ನ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಉದಾ: ಸ್ವಯಂಸೇವಾಸಂಘಗಳಲ್ಲಿ, ಕಾರ್ಖಾನೆಗಳಲ್ಲಿ, ಪದವಿ ಹಾಗೂ ಸ್ನಾತಕೋತ್ತರ ಶಿಕ್ಷಣ ಕೇಂದ್ರಗಳಲ್ಲಿ, ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಸೇವೆ ವಿಭಾಗಗಳಲ್ಲಿ, ಸರ್ಕಾರಿ ಸೇವೆಗಳಲ್ಲಿ, ಸಮಾಜಕಾರ್ಯಕರ್ತರು, ಸಮುದಾಯ ಸಂಘಟಕರು, ಸಮಾಜ ವಿಜ್ಞಾನಿಯಾಗಿ,ಅಧ್ಯಾಪಕರಾಗಿ, ಸಹಾಯ ಸಂಶೋಧಕ, ಸಂಪನ್ಮೂಲ ವ್ಯಕ್ತಿಯಾಗಿ, ಸಮಾಜ ಕಲ್ಯಾಣಧಿಕಾರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿಯಾಗಿ, ಕಾರ್ಮಿಕ ಕಲ್ಯಾಣಾಧಿಕಾರಿಯಾಗಿ. ಈ ತೆರನಾದ ಪದನಾಮ ಹೊಂದಿದ ಅನೇಕರು ವಿಭಿನ್ನ ರೀತಿಯಲ್ಲಿ ತಮ್ಮನ್ನು ತಾವೆ ತೊಡಗಿಸಿಕೊಂಡಿರುವುದು ನಮ್ಮ ಸುತ್ತಲು ಸಾಮಾನ್ಯವಾಗಿ ಕಾಣಬಹುದು. ಅವರಿಗೇನು ಸಮಸ್ಯೆ ಸಂಬಳ ಬರುತ್ತಲ್ಲಾ ಎನ್ನುವಿರಾ?
ಬದುಕಿನಲ್ಲಿ ಹೊಸತನ್ನೇನಾದರು ಸಾಧಿಸುವ ಹುಮ್ಮಸ್ಸಿನಲ್ಲಿ ಸಮಾಜಕಾರ್ಯ ಅಧ್ಯಯನ ಮಾಡಿದ ಯುವಪೀಳಿಗೆ ಬೆಳಕು-ಬೆಂಕಿಯ ವ್ಯತ್ಯಾಸ ತಿಳಿಯದ ಪತಂಗಗಳಂತೆ ತಮ್ಮ ಜೀವನೋತ್ಸಾಹದೊಂದಿಗೆ ನಿರಾಸೆಯೆಂಬ ಬೆಂಕಿಗೆ ಆಹುತಿಯಾಗುತ್ತಿದ್ದಾರೆ. ಕರಕಲಾದ ರಕ್ಕೆಗಳೊಂದಿಗೆ ಪತಂಗ ಬದುಕಲು ಸಾಧ್ಯವೇ? ಹಾಗೆ ಕರಕಲಾದ ಕನಸುಗಳನ್ನು ಹೊತ್ತ ಅನೇಕ ವೃತ್ತಿಪರ ಸಮಾಜಕಾರ್ಯಕರ್ತರು ನಮ್ಮೆಲ್ಲರ ಮಧ್ಯೆ ಬದುಕುತ್ತಿದ್ದಾರೆ ಎಂಬುದಂತು ಸತ್ಯ. ಸಮಾಜಕಾರ್ಯವನ್ನು ಸ್ನಾತಕೋತ್ತರ ಮಟ್ಟದಲ್ಲಿ ಅಭ್ಯಸಿಸಿದವರು ಉನ್ನತ ಶ್ರೇಣಿಯ ಪದವಿ ಹೊಂದಿದ್ದರು. ಮಧ್ಯಮ ದರ್ಜೆ ಅಥವಾ ಕೆಳ ದರ್ಜೆಯ ಶ್ರೇಣಿಯಲ್ಲಿ ಸೇವೆಯಲ್ಲಿರುವುದು ಅನಿವಾರ್ಯವಾಗಿದೆ. ಸಮಾಜಕಾರ್ಯಕರ್ತರು ಎಂದೊಡನೆ ಕೆಲವು ಬಾರಿ ತೀರಾ ಅಸಡ್ಡೆಗೊಳಗಾಗಬೇಕಾದ ಪ್ರಸಂಗವನ್ನು ಎದುರಿಸಬೇಕಾಗುತ್ತದೆ. ಸಾಮಾನ್ಯವಾಗಿ ಕಛೇರಿಗಳಲ್ಲಿ ಕೆಲಸ ಮಾಡಿಸುವ, ಅದಕ್ಕಾಗಿ ಹಣಕೀಳುವ ದಲ್ಲಾಳಿಗಳು ಸಹ ನಾವು ಸಮಾಜಕಾರ್ಯಕರ್ತರು ಎಂದೆ ಪರಿಚಯಿಸಿಕೊಳ್ಳುತ್ತಾರೆ. ಈ ಎರಡರ ಮಧ್ಯದ ಅಂತರ ಬಹಳ ಜನಕ್ಕೆ ತಿಳಿದಿಲ್ಲ ಇದೇನು ಮಹಾ, ಸಮಾಜಕಾರ್ಯವೆಂದರೆ ಯಾರು ಬೇಕಾದರೂ ಮಾಡುವಂತಹ ಸಾಮಾನ್ಯ ಕೆಲಸ ಇದಕ್ಯಾವ ಅರ್ಹತೆ ಬೇಕಿಲ್ಲವೆಂಬ ಕಳಂಕದಿಂದ ಹೊರಬರುವುದು ಮಾತ್ರ ಕಷ್ಟಸಾಧ್ಯ. ಯಾವುದೇ ಕಾರ್ಯಕ್ಷೇತ್ರವಿರಲಿ, ಸಾಮಾನ್ಯವಾಗಿ ಹಂತಹಂತವಾಗಿ ಪದೊನ್ನತಿ ಹೊಂದುವ, ಕಾಲಕ್ಕೆ ತಕ್ಕಹಾಗೆ ಸ್ಥಾನಮಾನಗಳಲ್ಲಿ ಬಡ್ತಿ ಹೊಂದುವ, ಅದರೊಟ್ಟಿಗೆ ಆರ್ಥಿಕವಾಗಿ ಪ್ರಗತಿ ಬಯಸುವುದು ಮಾನವನ ಸಹಜ ಅಭಿಲಾಷೆಯಲ್ಲವೆ. ವಿಪರ್ಯಾಸವೆಂದರೆ ಬಹುತೇಕ ಸಮಾಜಕಾರ್ಯಕರ್ತರಿಗೆ ಈ ಅಭಿಲಾಷೆ ಮರೀಚಿಕೆ, ಇದೊಂದು ರೀತಿಯ ಮಾನವ ಹಕ್ಕುಗಳ ಕಗ್ಗೊಲೆಯಲ್ಲವೆ. ಇದ್ಯಾರಗಮನಕ್ಕು ಬರುತ್ತಿಲ್ಲವೆ.? ಸಮಾಜ ಸುಧಾರಣೇಯ ಧ್ಯೇಯದೊಂದಿಗೆ ಸೇವೆಗೈವ ಸಮಾಜಕಾರ್ಯಕರ್ತರು ತುಂಬಾ ಅಸಹಾಯಕ ಪರಿಸ್ಥಿತಿಯಲ್ಲಿದ್ದಾರೆ. ಇದಕ್ಕೆಲ್ಲಾ ಮೂಲಕಾರಣ ಅಸ್ಪಷ್ಟ ನಿಯಮಾವಳಿಗಳು. ಯಾವ ಕ್ಷೇತ್ರದಲ್ಲಿ ಯಾವ ತರನಾದ ಹುದ್ದೆಗಳಲ್ಲಿ, ಯಾವ ಯಾವ ಕಾರ್ಯಕಲಾಪಗಳು ನಿರ್ವಹಿಸಬೇಕು, ಯಾವ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬಹುದು, ಹುದ್ದೆಯ ಪ್ರಾಮುಖ್ಯತೆ ಏನು? ಇತಿ ಮಿತಿಗಳೇನು? ಎಂಬುದರ ಕುರಿತು ಲಿಖಿತರೂಪದಲ್ಲಿ ಉಲ್ಲೇಖವೆ ಇಲ್ಲ! ಅನೇಕಬಾರಿ ತಮ್ಮ ಸೇವಾ ಕ್ಷೇತ್ರಗಳಲ್ಲಿ ಬಡ್ತಿ ಹೊಂದುವ ಎಲ್ಲ ಅರ್ಹತೆ ಇದ್ದರೂ, ನೌಕರರಿಗೆ ಪ್ರೋತ್ಸಾಹಿಸುವ ಸದ್ವಿಚಾರದ ಸಂಘ ಸಂಸ್ಥೆಗಳಲ್ಲಿಯು ಸಹ ಯಾವ ಆಧಾರದ ಮೇಲೆ ಬಡ್ತಿ ಕೊಡಬೇಕು ಎಂಬ ಜಿಜ್ಞಾಸೆಯಿಂದಾಗಿ ಸಮಾಜಕಾರ್ಯಕರ್ತರು ತಟಸ್ಥರಾಗಿ ತ್ರಿಶಂಕು ಸ್ಥಿತಿಯಲ್ಲಿರುವುದು ಅನಿವಾರ್ಯವಾಗಿದೆ. ಈ ಮೇಲ್ಕಾಣಿಸಿದ ಕಾರಣದಿಂದಾಗಿ ಅತ್ಯಂತ ಹಿರಿಯ ಕೆಳದರ್ಜೆಯ ನೌಕರರಾಗಿ ಉಳಿಯಬೇಕಾದದ್ದು ಒಬ್ಬ ಸ್ನಾತಕೋತ್ತರ ಪದವೀಧರನಿಗೆ ಎಂಥಹ ಕೀಳರಿಮೆಗೆ ಎಡೆಮಾಡಿ ಕೊಡುತ್ತದೆಂಬುದು ಅನುಭವಿಸದವರೇ ಬಲ್ಲರು. ಇದಲ್ಲದೆ ಇಂತಹ ಪರಿಸ್ಥಿತಿಯನ್ನು ದುರುಪಯೋಗ ಪಡಿಸಿಕೊಂಡು ಶೋಷಿಸುವ ಮೇಲಧಿಕಾರಿಗಳು ಇದ್ದಾರೆ. ಇದಕ್ಕೆಲ್ಲಾ ಯಾರು ಹೊಣೆ? ಕಾರಣವೇನು? ಎಂದು ವ್ಯರ್ಥ ಕಾಲಹರಣ ಮಾಡದೆ ಸದ್ಯದ ಪರಿಸ್ಥಿತಿಯನ್ನ ಸುಧಾರಿಸಿಕೊಳ್ಳುವ ನಿಟ್ಟಿನಲ್ಲಿರಬೇಕಾದುದು ವೃತ್ತಿಪರ ಸಮಾಜಕಾರ್ಯಕರ್ತರ ಪ್ರಯತ್ನ ಈ ನಿಟ್ಟಿನಲ್ಲಿ ಪ್ರತಿವರ್ಷವು ವಿವಿಧ ವಿಶ್ವವಿದ್ಯಾಲಯ ಹಾಗೂ ಖಾಸಗಿ ಶಿಕ್ಷಣ ಕೇಂದ್ರದಿಂದ ಪದವಿ ಹಾಗೂ ಸ್ನಾತಕೋತ್ತರ ಸಮಾಜಕಾರ್ಯ ತರಬೇತಿ ಪಡೆದು ವೃತ್ತಿಗೆ ಧುಮುಕುತ್ತಿರುವ ಸಮಾಜಕಾರ್ಯಕರ್ತರ ಸಂಖ್ಯೆಯನ್ನು ನೋಡಿ ಇದೇ ಪ್ರಗತಿ, ಇದೆ ವೃತ್ತಿಪರ ಸಮಾಜಕಾರ್ಯದ ಬೆಳವಣಿಗೆಯ ಲಕ್ಷಣ ಎಂದು ಎದೆಯುಬ್ಬುಸಿಕೊಂಡರೆ ಸಾಲದು. ಸ್ನಾತಕೋತ್ತರ ಪದವೀಧರರಾದ ಸಮಾಜಕಾರ್ಯಕರ್ತರಿಗೆ ವೃತ್ತಿರಂಗದಲ್ಲಿ ಯಾವ ಮಟ್ಟದಲ್ಲಿ ಅವಕಾಶಗಳಿವೆ? ಗೌರವ ಇದೆ, ಇಂತಹ ಒಂದು ಮನುಕುಲ ಹಿತಾಪೇಕ್ಷೆಯ ಉದಾತ್ತ ಸೇವೆಯಲ್ಲಿರುವ ವಿವಿಧ ಅವಕಾಶಗಳಾವುವು? ಕ್ಷೇತ್ರಾವಾರು ವಿವಿಧ ಸ್ತರದ ಹುದ್ದೆಗಳಾವವು? ಪ್ರತಿ ಹುದ್ದೆಗೂ ಸೂಕ್ತವಾಗಿರುವ ನಿಗದಿತ ಚಟುವಟಿಕೆಗಳಾವವು? ಪದೋನ್ನತಿ ಅಥವಾ ಬಡ್ತಿ ಹೊಂದಲು ಬೇಕಾಗಿರುವ ಅರ್ಹತೆಗಳೇನು? ಮಾನದಂಡಗಳಾವುವು? ಸೇವಾ ಭದ್ರತೆ ಒದಗಿಸುವ ಚೌಕಟ್ಟು ಎಲ್ಲ ಕ್ಷೇತ್ರಗಳಲ್ಲಿ ಉಧ್ಬವಿಸಬಹುದಾದ ತೊಂದರೆಗಳಾವುವು? ಇಂತಹ ಅಡೆ-ತಡೆಗಳ ನಿವಾರಣೆಗಾಗಿ ಸಮಗ್ರ ವೃತ್ತಿಪರ ಸಮಾಜಕಾರ್ಯದ ಕೈಪಿಡಿಯು ಅವಶ್ಯಕತೆ ತೀವ್ರವಾಗಿ ಆಗಬೇಕಾಗಿದೆ. ಈ ಎಲ್ಲ ಮೇಲಿನ ಸಮಸ್ಯೆಗಳತ್ತ ಬೆಳಕು ಬೀರುವ ಪ್ರಯತ್ನಕ್ಕೆ ಅಡಿಪಾಯವಾಗಿ ವಿವಿಧ ಕಾರ್ಯ ಕ್ಷೇತ್ರಗಳಲ್ಲಿ ಸಮಾಜಕಾರ್ಯಕರ್ತರು ಎದುರಿಸುತ್ತಿರುವ ಸಮಸ್ಯೆಗಳೇನೆಂಬುದರ ವೈಜ್ಞಾನಿಕ ಅಧ್ಯಯನದ ಅವಶ್ಯಕತೆ ಇದೆ ಈ ತೆರನಾದ ಸಂಶೋಧನೆಯಿಂದಾದರೂ ನಮಗಿಂದು ವೃತ್ತಿಪರ ಸಮಾಜಕಾರ್ಯದಲ್ಲಿ ಯಾವ ತೆರನಾದ ತೀವ್ರ ಬದಲಾವಣೆ ಅವಶ್ಯವಿದೆ ಎಂದು ಅರಿಯಬೇಕಾಗಿದೆ. ತಕ್ಕ ಪರಿಹಾರೋಪಾಯದ ಅನ್ವೇಷಣೆ ಬೇಕಾಗಿದೆ. ಇವುಗಳ ಅಳವಡಿಕೆಯಿಂದ ಉಪಯುಕ್ತ ಮಾರ್ಪಾಡುಗಳನ್ನು ಅನುಷ್ಠಾನಕ್ಕೆ ತಂದರೆ ಮಾತ್ರ ವೃತ್ತಿಪರ ಸಮಾಜಕಾರ್ಯದ ಕಲ್ಪನೆ ಸ್ಪಷ್ಟವಾಗುತ್ತದೆ ಹಾಗೂ ಸಂತ್ರಪ್ತ ಸಮಾಜಕಾರ್ಯಕರ್ತರನ್ನು ಕಾಣಬಹುದು. ಈ ಕಾರ್ಯವನ್ನು ಪ್ರತಿಯೊಬ್ಬ ಸಮಾಜಕಾರ್ಯಕರ್ತರ ಕ್ರಿಯಾಶೀಲ ಭಾಗವಹಿಸುವಿಕೆಯಿಂದ ಮಾತ್ರ ಮುನ್ನೆಡೆಸಲು ಸಾಧ್ಯ. ಇದಕ್ಕಾಗಿ ಒಗ್ಗಟ್ಟಾಗಿ ಶ್ರಮಿಸಬೇಕು, ಅವಶ್ಯವಿದ್ದರೆ ಹೋರಾಟ ಮಾಡಬೇಕು, ವೃತ್ತಿಪರ ಸಂಘ, ಒಕ್ಕೂಟಗಳನ್ನು ಬಡಿದೆಬ್ಬಿಸಬೇಕು ಸಮ್ಮೇಳನಗಳನ್ನು ಅರ್ಥಪೂರ್ಣವಾಗಿ ಸಂಘಟಿಸಬೇಕು. ಇದೆಲ್ಲಾ ವಾಸ್ತವ ಜೀವನದಲ್ಲಿ ಕಾರ್ಯಗತವಾಗಲು ಎಷ್ಟು ತಲೆಮಾರುಗಳು ಬೇಕೋ? ಬದುಕಿರುವಷ್ಟು ದಿನ ಕಾಯುವ ಭಾವಿ, ಜನಾಂಗದ ಸಮಾಜಕಾರ್ಯಕರ್ತರಾದರೂ ಇತರ ಎಲ್ಲ ವೃತ್ತಿ ಬಂಧವರಂತೆ ನಾನು ವೃತ್ತಿಪರ ಸಮಾಜಕಾರ್ಯಕರ್ತ ಎಂದು ಹೆಂಮ್ಮೆಯಿಂದ ಬೀಗಲಿ. ಈ ಮೇಲ್ಕಾಣಿಸಿದಂತಹ ಸಮಾಜ ಕಾರ್ಯಕರ್ತರ ಸಮಸ್ಯೆಗಳ ಕುರಿತಾದ ನನ್ನ ಅಧ್ಯಯನಕ್ಕೆ ಪೂರಕವಾಗುವಂತಹ ತಮ್ಮ ಅಮೂಲ್ಯ ಅಭಿಪ್ರಾಯಗಳಿಗೆ ಸ್ವಾಗತವಿದೆ. ಶ್ರೀಮತಿ.ವೀಣಾ ಬಿ.ಯರಗೋಳ. ಎಂ.ಎಸ್.ಡಬ್ಲ್ಯೂ ಉಪನ್ಯಾಸಕರು, ಸಮುದಾಯ ವೈದ್ಯಕೀಯ ವಿಭಾಗ ಬಿ.ಎಲ್.ಡಿ.ಇ.ಶ್ರೀ.ಬಿ.ಎಂ.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ಬಿಜಾಪುರ
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
|
|
|
|
SITE MAP
SitePOSH |
NIRATHANKAOUR OTHER WEBSITESSubscribe |
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |