ಪೀಠಿಕೆ:- ಈ ದೇಶದ ಕಡುಬಡವರು ಹಸಿವಿನ ಯಾತನೆ ಮತ್ತು ನರಳುವಿಕೆಯಿಂದ ಮುಕ್ತರಾದಾಗ ಮಾತ್ರ ಭಾರತ ನಿಜವಾದ ಸ್ವಾತಂತ್ರ್ಯವನ್ನು ಹೊಂದುತ್ತದೆ" ಎಂದು ಗಾಂಧೀಜಿಯವರು ಹೇಳಿದ ಮಾತಿನಂತೆ ಸಾದರಪಡಿಸಿ ನಿರುದ್ಯೋಗದ ಪ್ರಮಾಣವನ್ನು ಕಡಿಮೆ ಮಾಡಬೇಕು. ಅಂದರೆ ದುಡಿಯುವ ಶಕ್ತಿ ಇರುವ ಜನರಿಗೆ ದುಡಿದು ಸಂಪಾದಿಸುವ ಅವಕಾಶಗಳನ್ನು ಕಲ್ಪಿಸಿಕೊಡಬೇಕು. ಭಾರತ ಒಂದು ಹಳ್ಳಿಗಳ ದೇಶ. ಇಲ್ಲಿ ಸುಮಾರು ಐದು ಲಕ್ಷಕ್ಕಿಂತಲೂ ಅಧಿಕ ಹಳ್ಳಿಗಳಿವೆ. 2001ರ ಜನಗಣತಿಯ ಪ್ರಕಾರ ಸುಮಾರು 742 ದಶಲಕ್ಷ ಜನರು ಅಂದರೆ, ಶೇ 72.2ಕ್ಕಿಂತಲೂ ಅಧಿಕ ಜನರು ಗ್ರಾಮಾಂತರ ಪ್ರದೇಶಗಳಲ್ಲಿ ವಾಸವಾಗಿದ್ದಾರೆ, ಕಳೆದ ಐದು ದಶಕಗಳ ಅಭಿವೃದ್ಧಿಯ ಕಾರ್ಯಕ್ರಮಗಳು ಗ್ರಾಮೀಣ ಭಾಗದ ಜನರ ಸಮಸ್ಯೆಗಳನ್ನು ನಿವಾರಿಸುವಲ್ಲಿ ವಿಫಲಗೊಂಡಿದ್ದು, ಗ್ರಾಮೀಣ ಭಾರತ ಹಲವು ಸಮಸ್ಯೆಗಳ ಆಗರವಾಗಿಯೇ ಉಳಿದುಕೊಂಡಿದೆ. ಬಡತನ, ನಿರುದ್ಯೋಗ, ಮೂಲಭೂತ ಸೌಕರ್ಯಗಳ ಅಜ್ಞಾನ, ಮುಂತಾದ ಸಮಸ್ಯೆಗಳು ಗ್ರಾಮೀಣ ಭಾರತ ಎದುರಿಸುತ್ತಿರುವ ಗಂಭೀರ ಸಮಸ್ಯೆಗಳಾಗಿವೆ. ಗ್ರಾಮೀಣ ಜನರು ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಬಡತನ ಬಹು ಮುಖ್ಯ ಪಾತ್ರ ವಹಿಸುತ್ತದೆ. ಬಡತನ ಎಂಬುದು ಜನರ ಭರವಸೆರಹಿತ ನಿಕೃಷ್ಠ ಜೀವನದ ಪರಿಸ್ಥಿತಿಯಾಗಿದೆ, ಸಮಾಜದ ಒಂದು ವರ್ಗದ ಜನರು ತಮ್ಮ ಮೂಲಾವಶ್ಯಕತೆಗಳನ್ನು ಈಡೇರಿಸಿಕೊಳ್ಳಲಾಗದಂತಹ ಪರಿಸ್ಥಿತಿಯನ್ನು ಬಡತನ ಎಂದು ಅರ್ಥೈಸಿಕೊಳ್ಳಬಹುದು. ಹಾಗೂ ಇದೊಂದು ಸಾಪೇಕ್ಷ ವಿಷಯವಾಗಿದ್ದು ಅದನ್ನು ಭೌತಿಕ ಅಂಶಗಳ ಆಧಾರದ ಮೇಲೆ ವ್ಯಕ್ತಪಡಿಸಲಾಗುತ್ತದೆ. ವಿಶ್ವ ಆಹಾರ ಮತ್ತು ಕೃಷಿ ಸಂಘಟನೆಯ ಮೊದಲ ಮಹಾ ನಿರ್ದೇಶಕ ಲಾರ್ಡ್ ಬಯಲಾರ್ ಅವರು 1940ರಲ್ಲಿ ಮೊದಲಬಾರಿಗೆ ಬಡತನ ರೇಖೆಯನ್ನು ವ್ಯಾಖ್ಯಾನಿಸಿದರು. ಅವರ ಪ್ರಕಾರ ಒಬ್ಬ ವ್ಯಕ್ತಿ ಒಂದು ದಿನಕ್ಕೆ 2300ಕ್ಕಿಂತಲೂ ಕಡಿಮೆ ಕ್ಯಾಲೊರಿ ಆಹಾರವನ್ನು ಸೇವಿಸುತ್ತಿದ್ದರೆ, ಆತ ಬಡತನದ ರೇಖೆಗಿಂತಲೂ ಕೆಳಗಿದ್ದಾನೆಂದು ಪರಿಗಣಿಸಬೇಕಾಗುತ್ತದೆ ಎಂಬುದಾಗಿ ತಿಳಿಸಿದ್ದಾರೆ.
ಭಾರತದಂತಹ ರಾಷ್ಟ್ರದಲ್ಲಿ ಹವಾಮಾನ ಪರಿಸ್ಥಿತಿಗನುಗುಣವಾಗಿ ಹಳ್ಳಿಗಳಲ್ಲಿ ವರ್ಷದ ಎಲ್ಲಾ ಕಾಲಗಳಲ್ಲೂ ಎಲ್ಲಾ ವರ್ಗಕ್ಕೆ ಕೆಲಸ ಸಿಗುವುದಿಲ್ಲ, ಕೆಲಸ ಸಿಕ್ಕರೂ ಗಂಡು - ಹೆಣ್ಣೆಂಬ ತಾರತಮ್ಯ ಮಾಡುವುದು ಕಟುವಾಸ್ತವ ಸಂಗತಿಯಾಗಿದೆ. ಸ್ಥಳೀಯವಾಗಿ ಕೆಲಸವಿಲ್ಲದೆ ಇದ್ದಾಗ ಉದ್ಯೋಗ ಅರಸಿ ನಗರ ಪ್ರದೇಶಗಳಿಗೆ ವಲಸೆ ಹೋಗುವ ಪರಿಸ್ಥಿತಿ ಸಾಮಾನ್ಯವಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಜನರ ಬದುಕನ್ನು ಹಸನುಗೊಳಿಸುವ ನಿಟ್ಟಿನಲ್ಲಿ ದುಡಿಯುವ ಸಾಮರ್ಥ್ಯ, ಅಗತ್ಯತೆ ಮತ್ತು ಗಂಡು-ಹೆಣ್ಣೆಂಬ ಲಿಂಗ ತಾರತಮ್ಯವಿಲ್ಲದೆ ದುಡಿಯುವ ಕೈಗಳಿಗೆ ಒಂದಿಷ್ಟು ಉದ್ಯೋಗ ಕಲ್ಪಿಸಿಕೊಡಬೇಕು. 1982ರಲ್ಲಿ ಲಾರ್ಡ್ ರಿಪ್ಪನ್ ಜಾರಿಗೆ ತಂದ ಸುಧಾರಣಾ ಕಾರ್ಯಕ್ರಮಗಳಿಂದ ಪ್ರೇರಿತರಾಗಿ ವಿಕೇಂದ್ರೀಕರಣಕ್ಕೆ ಪ್ರಯತ್ನ ದೊರಕಿಸಿಕೊಡುವ ಮೂಲಕ ಉದ್ಯೋಗ ಭರವಸೆ ಯೋಜನೆಗಳನ್ನು ಕೇಂದ್ರ ಮತ್ತು ರಾಜ್ಯಸರ್ಕಾರಗಳೆರಡೂ ಪಾಂಚವಾರ್ಷಿಕ ಯೋಜನೆಗಳ ಮೂಲಕ ವಿವಿಧ ಕಾಲಘಟ್ಟಗಳಲ್ಲಿ ಗ್ರಾಮೀಣ ಬಡತನ ಮತ್ತು ನಿರುದ್ಯೋಗ ನಿವಾರಣೆಗಾಗಿ ಅನೇಕ ಯೋಜನೆಗಳನ್ನು ಸ್ವಾತಂತ್ರ್ಯಾ ನಂತರ ಜಾರಿಗೆ ತಂದರು. ಅವುಗಳಲ್ಲಿ ಪ್ರಮುಖವಾದ ಕಾರ್ಯಕ್ರಮಗಳೆಂದರೆ- ಗ್ರಾಮೀಣಾಭಿವೃದ್ದಿ ಕಾರ್ಯಕ್ರಮ, ಸ್ವರ್ಣಜಯಂತಿ ಗ್ರಾಮೋದ್ಯೋಗ ಯೋಜನೆ, ಗ್ರಾಮೀಣ ಉದ್ಯೋಗ ಸಮುಷ್ಟಿ ಯೋಜನೆ ಹೀಗೆ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದಿತ್ತು. ಆದರೆ ಯೋಜನೆಯ ಅನುಷ್ಠಾನಗೊಳಿಸಲು ಹಲವಾರು ತೊಡಕುಗಳು ಎದುರಾದವು- ಮಾಹಿತಿಕೊರತೆ, ಜನರ ಪಾಲ್ಗೊಳ್ಳುವಿಕೆ ಕೊರತೆ, ಮೇಲ್ವಿಚಾರಣೆ ಕೊರತೆ, ಪಾರದರ್ಶಕತೆ ಇಲ್ಲದಿರುವುದು, ಹೀಗೆ ಹಲವು ತೊಡಕುಗಳು ಹಾಗೂ ವೈಫಲ್ಯಗಳ ಆಗರವಾಗಿದ್ದವು ಈ ಪಾಂಚವಾರ್ಷಿಕ ಯೋಜನೆಗಳು. ಈ ಎಲ್ಲಾ ಅಂಕಿ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ತನ್ನ ಮಹತ್ವಾಕಾಂಕ್ಷೆಯಂತೆಯೇ ಜನಪರವಾದ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ - 2005ಯನ್ನು ಕಾಯ್ದೆ ರೂಪದಲ್ಲಿ ಜಾರಿಗೆ ತಂದಿತು. ಹಲವಾರು ವರ್ಷಗಳ ಹಿಂದೆಯೇ ಅಪ್ರತಿಮ ಅರ್ಥಶಾಸ್ತ್ರಜ್ಞ ಜಾನ್ ಮೇವಾರ್ಡ್ ಕೇನ್ಸ್ ಪ್ರತಿಪಾದಿಸಿದ ಸಾರ್ವಜನಿಕರ ಹೂಡಿಕೆ'ಯ ಆಧಾರದಲ್ಲಿ ಸರ್ಕಾರವು ಹೊಸ-ಹೊಸ ಉದ್ಯೋಗ ಸೃಷ್ಟಿಸಲು ಸಾಧ್ಯವಾಗದಿದ್ದಲ್ಲಿ ಸೂಕ್ತ ಪ್ರದೇಶದಲ್ಲಿ ಕೆರೆ ಕಾಲುವೆಗಳನ್ನು ತೋಡಿಸಿ, ಅಗತ್ಯವಾದವುಗಳನ್ನು ಮುಚ್ಚಿಸಿ'. ಆಗ ತಾನಾಗಿಯೇ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ ಎಂಬುದನ್ನು ಪ್ರತಿಪಾದಿಸಿದನು. ಇವರಂತೆ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ರಾಗ್ನರ್ವರ್ಕ್ಸ್ ಕೂಡ ಹಿಂದುಳಿದ ಪ್ರದೇಶದಲ್ಲಿರುವ ಆಹಾರ ಕ್ರಮ ಸಂಪನ್ಮೂಲವನ್ನು ಬಳಸಿ ಸಾಮೂಹಿಕ ಬಂಡವಾಳವನ್ನು ಸೃಷ್ಟಿಸಲು ಸಾಧ್ಯವೆಂದು ಪ್ರತಿಪಾದಿಸಿದರು. ಈ ತಜ್ಞರ ಆರ್ಥಿಕ ಚಿಂತನೆಯ ತಳಹದಿಯ ಮೇಲೆ ನಿಂತಿರುವ ಯೋಜನೆಯೇ ರಾಜ್ಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಯಾಗಿದೆ. ಅಪಾರ ಪ್ರಮಾಣದಲ್ಲಿ ವ್ಯರ್ಥವಾಗುತ್ತಿರುವ ಶ್ರಮವನ್ನು ಬಳಸಿ ಇಡೀ ರಾಷ್ಟ್ರವೇ ಬಳಸಬಹುದಾದ ಆಸ್ತಿಯನ್ನು ಸೃಷ್ಟಿಸಬಹುದೆಂಬುದನ್ನು ಹತ್ತಾರು ಜನರ ಉದ್ಯೋಗ ಬೇಡಿಕೆಯನ್ನು ಆರ್ಥಿಕ ಅಭಿವೃದ್ದಿಗಾಗಿ ಬಳಸಲು ಸಾಧ್ಯ ಎಂಬುದನ್ನು ಉದ್ಯೋಗ ಖಾತ್ರಿ ಯೋಜನೆ ಮನದಟ್ಟು ಮಾಡಿಕೊಡುತ್ತದೆ. ರಾಜ್ಯ ಗ್ರಾಮೀಣ ಉದ್ಯೋಗ ಭರವಸೆ ಕರಡು ಮಸೂದೆ 2005:- ಸ್ವಾತಂತ್ರ್ಯಾನಂತರ ದೇಶದಲ್ಲಿ ಈವರೆಗೆ ಒಳಗೊಂಡ ಗ್ರಾಮೀಣ ಉದ್ಯೋಗ ಭರವಸೆ ಕಾರ್ಯಕ್ರಮಗಳ ಸಾಧಕಬಾಧಕಗಳನ್ನು ಗಮನದಲ್ಲಿಟ್ಟುಕೊಂಡು ಭಾರತ ಸರ್ಕಾರ ರಾಜ್ಯ ಗ್ರಾಮೀಣ ಉದ್ಯೋಗ ಖಾತ್ರಿ ಅಧಿನಿಯಮ - 2005" ನ್ನು ದಿನಾಂಕ 07-09-2005ರಂದು ಭಾರತದ ರಾಷ್ಟ್ರ ಪತ್ರದಲ್ಲಿ ಪ್ರಕಟಿಸಿದ ಆರಂಭದಲ್ಲಿ ದೇಶದ 200 ಜಿಲ್ಲೆಗಳಲ್ಲಿ, ಪ್ರಸಕ್ತ ಆರ್ಥಿಕ ವರ್ಷದಿಂದ ದೇಶದ ಎಲ್ಲಾ ಜಿಲ್ಲೆಗಳಿಗೆ ವಿಸ್ತರಿಸಲಾಗಿದ್ದು ಮೊದಲಿಗೆ ಆಂದ್ರಪ್ರದೇಶದ ಕುಗ್ರಾಮ ಬಂಗಾಲಪಲ್ಲಿಯಲ್ಲಿ ಪ್ರಾಯೋಗಿಕವಾಗಿ ಮನಮೋಹನ್ ಸಿಂಗ್ ಮತ್ತು ಸೋನಿಯಾಗಾಂಧಿ ಅಧಿಕೃತವಾಗಿ ಚಾಲನೆ ನೀಡಿದರು. ಮೊದಲ ಹಂತದಲ್ಲಿ, ರಾಜ್ಯದ 5 ಜಿಲ್ಲೆಗಳಲ್ಲಿ 32 ತಾಲ್ಲೂಕುಗಳನ್ನು ಡಾ|| ನಂಜುಂಡಪ್ಪನವರ ವರದಿಯ ಸೂಚ್ಯಾಂಕದ ಆಧಾರದಂತೆ ಆಯ್ಕೆ ಮಾಡಲಾಗಿದೆ. ಈ ಯೋಜನೆಯನ್ನು ದೇಶದ ವಿವಿಧ ರಾಜ್ಯಗಳು ಅನುಷ್ಠಾನಗೊಳಿಸುತ್ತಿದ್ದು, ಪ್ರಾದೇಶಿಕ ಭಿನ್ನತೆ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಅಧಿನಿಯಮಕ್ಕೆ ಪೂರಕವಾಗಿ ನಿಯಮಗಳನ್ನು ರೂಪಿಸಿಕೊಂಡಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ರಾಜ್ಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಕರ್ನಾಟಕ' ಎಂಬ ಹೆಸರಿನಲ್ಲಿ ದಿನಾಂಕ 08-02-2007ರಲ್ಲಿ ಕರ್ನಾಟಕ ರಾಜ್ಯ ಪತ್ರದಲ್ಲಿ ಸ್ಪಷ್ಟಪಡಿಸಿದೆ. ಅಂದಿನಿಂದ ರಾಜ್ಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಕರ್ನಾಟಕ ಜಾರಿಗೆ ಬಂದಿದೆ. ಉದ್ದೇಶಗಳು:- ರಾಜ್ಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಮುಖ್ಯ ಉದ್ದೇಶಗಳೆಂದರೆ: ಸ್ವ ಇಚ್ಛೆಯಿಂದ ಅರ್ಜಿ ಸಲ್ಲಿಸುವ ಕರಕುಶಲ ದೈಹಿಕ ಕೆಲಸ ಬಯಸುವ ಗ್ರಾಮೀಣ ಪ್ರದೇಶದ ಸದಸ್ಯರಿಗೆ ಪ್ರತಿ ಕುಟುಂಬದ ಒಂದು ಆರ್ಥಿಕ ವರ್ಷದಲ್ಲಿ ಕನಿಷ್ಠ 100 ಮಾನವ ದಿನಗಳ ಉದ್ಯೋಗವನ್ನು ನೀಡಿ ಅವರ ಜೀವನಕ್ಕೆ ಭದ್ರತೆ ಒದಗಿಸುವುದು. ಗ್ರಾಮೀಣ ಜನರಿಗೆ ದೀರ್ಘ ಕಾಲದ ಜೀವನ ಸಾಗಿಸಲು ಮಾರ್ಗಗಳನ್ನು ತಿಳಿಯಪಡಿಸುವುದು. ಹಕ್ಕುಗಳು ಮತ್ತು ಅಧಿಕಾರಗಳು:
ಹಿಂದಿನ ಉದ್ಯೋಗ ಖಾತ್ರಿ ಯೋಜನೆಗಳಿಗೆ ಹೋಲಿಸಿದಾಗ ಈ ಯೋಜನೆಯಲ್ಲಿ ಕಂಡು ಬರುವ ಭಿನ್ನ ಅಂಶಗಳು:- ಈ ಯೋಜನೆಯು ಕೂಲಿ ಕೆಲಸಕ್ಕೆ ಶಾಸನಬದ್ಧವಾದ ಖಾತ್ರಿಯನ್ನು ನೀಡುತ್ತದೆ.
ಹೀಗೆ ಹಲವು ಹಂತಗಳಲ್ಲಿ ಯೋಜನೆಯ ಅನುಷ್ಠಾನ ಮಾರ್ಗಗಳ ಮೂಲಕ ಕಾರ್ಯಕ್ರಮವನ್ನು ಹೆಚ್ಚು ಹೆಚ್ಚು ವ್ಯಾಪಕಗೊಳಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಭಾಗವಹಿಸಿರುವುದು ಕಾಣಬಹುದು. ಜೊತೆಗೆ ದೇಶದ ಆರ್ಥಿಕ ಪ್ರಗತಿ ಹೆಚ್ಚಿದಂತೆ ಇಲ್ಲಿನ ಅಸಮಾನತೆ ಕೂಡ ಹೆಚ್ಚುತ್ತಿರುವುದರ ಹಿನ್ನೆಲೆಯಲ್ಲಿ ರಾಜ್ಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಸೃಷ್ಟಿ ಮಾತ್ರವಲ್ಲದೇ ಮಹಿಳೆಯರ ಸಬಲೀಕರಣ ಸಾಮಾಜಿಕ ಮತ್ತು ಆರ್ಥಿಕವಾಗಿ ಬಲಪಡಿಸಲು ಕೇಂದ್ರದ ಹಣಕಾಸು (ವಿತ್ತ ಸಚಿವ ) ಮಂತ್ರಿ ಪ್ರಣಾಬ್ ಮುಖರ್ಜಿಯವರು 2009-10ರ ಕೇಂದ್ರ ಬಜೆಟ್ನಲ್ಲಿ 39.100 ಕೋಟಿ ಹಣವನ್ನು ಈ ಯೋಜನೆಗೆ ಮೀಸಲಿಟ್ಟಿರುವುದು ರಾಜ್ಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಕೊಟ್ಟ ಮಹತ್ವವಾಗಿದೆ. ಉಲ್ಬಣಗೊಳ್ಳುವ ಸಮಸ್ಯೆಗಳಿಗೆ ತಕ್ಷಣವೇ ಪರಿಹಾರ ಸೂಚಿಸುವುದು ಎಷ್ಟು ಅಗತ್ಯದ ಕೆಲಸವೊ ಹಾಗೆಯೇ ಪ್ರಗತಿಯತ್ತ ಸಾಗುತ್ತಿರುವ ಯೋಜನೆಯ ಜಾಡು-ವೈಫಲ್ಯಗಳನ್ನು ಗುರುತಿಸಿ, ಓರೆ-ಕೋರೆಗಳನ್ನು ತಿದ್ದುವುದು ಅಷ್ಟೇ ಮಹತ್ವದ ಕೆಲಸ. ಹೀಗಾಗಿ ಯೋಜನೆಯನ್ನು ಮತ್ತಷ್ಟು ಬಲಪಡಿಸುವುದರ ಜೊತೆಗೆ ಗ್ರಾಮೀಣ ಬಡತನ ನಿವಾರಿಸಿ ಗ್ರಾಮೀಣಾಭಿವೃದ್ಧಿಯನ್ನು ಮಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ, ರಾಜ್ಯ ಸರ್ಕಾರದ ಜೊತೆ-ಜೊತೆಗೆ ವಿವಿಧ ಸರ್ಕಾರೇತರ ಸಂಸ್ಥೆ, ಸ್ಥಳೀಯ ಸಂಸ್ಥೆಗಳಾದ - ಗ್ರಾಮಪಂಚಾಯ್ತಿಗಳು, ಗ್ರಾಮ ಸಭೆಗಳು, ಸ್ವ-ಸಹಾಯ ಗುಂಪುಗಳು, ಸ್ಥಳೀಯ ಮೇಲ್ವಿಚಾರಣಾ ಸಂಸ್ಥೆಗಳು, ಸಮಿತಿಗಳು, ಎನ್.ಜಿ.ಓಗಳು ಸಮಾಜಕಾರ್ಯಕರ್ತರು ಈ ಯೋಜನೆಯ ಸಮರ್ಪಕ ಅನುಷ್ಠಾನದಲ್ಲಿ ಬಹು ಮುಖ್ಯ ಪಾತ್ರ ನಿರ್ವಹಿಸಬೇಕಾಗಿದೆ. 1946ರಷ್ಟು ಹಿಂದೆಯೇ ರಾಷ್ಟ್ರಪಿತ ಗಾಂಧೀಜಿಯವರು ಕಂಡಿದ್ದ `ರಾಮರಾಜ್ಯದ ಕನಸು ಅಂದರೆ `ಗ್ರಾಮೀಣ ಪಂಚಾಯತಿಗಳಿಗೆ ಪೂರ್ಣ ಅಧಿಕಾರಿ ನಿಯಮದ ನಿಟ್ಟಿನಲ್ಲಿ ಉದ್ಯೋಗ ಖಾತ್ರಿ ಯೋಜನೆ ಒಂದು ಮಹತ್ವದ ಮೈಲುಗಲ್ಲು. ಈ ಮಧ್ಯೆ ವಿರೋಧಪಕ್ಷದ ಆಡಳಿತವಿರುವ ಹಲವು ರಾಜ್ಯಗಳು `ಯುಪಿಎ' ಸರ್ಕಾರ ಜಾರಿಗೊಳಿಸಿದ ಈ ಕ್ರಾಂತಿಕಾರಿ ಯೋಜನೆಯ ಹೆಸರಿನ ಲಾಭ ಪಡೆಯುತ್ತವೆ ಎಂಬ ವರದಿಯ ಹಿನ್ನೆಲೆಯಲ್ಲಿ ಸದರಿ ಯೋಜನೆಗೆ ಕೇಂದ್ರ ಸರ್ಕಾರ `ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ` ಎಂದು ರಾಷ್ಟ್ರಪಿತನ 140ನೇ ಜನ್ಮ ದಿನಾಚರಣೆಯ ದಿನದಂದು ಅಕ್ಟೋಬರ್-02,2009ನೇ ಶುಕ್ರವಾರದಂದು ನಾಮಕರಣ ಮಾಡಿದೆ. ರಾ(ಗ್ರಾ)ಮ ರಾಜ್ಯದ ಕನಸು ಕಂಡಿದ್ದ ಬಾಪೂಜಿಯವರ ಹೆಸರಿನೊಂದಿಗೆ ಈ ಯೋಜನೆ ಅರ್ಥಪೂರ್ಣವಾಗಿದೆ.
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
|
|
|
|
SITE MAP
SiteTRAININGJOB |
HR SERVICESOTHER SERVICESnIRATHANKA CITIZENS CONNECT |
NIRATHANKAPOSHOUR OTHER WEBSITESSubscribe |
MHR LEARNING ACADEMY
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|