ಪಂಡಿತ ಸುಧಾಕರ ಚತುರ್ವೇದಿ: ಬಾಲ್ಯ ಮತ್ತು ವಿದ್ಯಾಭ್ಯಾಸ 114 ವಸಂತಗಳನ್ನು ಪೂರೈಸಿರುವ, ಅಪ್ಪಟ ಕನ್ನಡಿಗರಾಗಿದ್ದು, ಬಹುಸಂಖ್ಯಾತ ಕನ್ನಡಿಗರಿಗೆ ಅಪರಿಚತರಾಗಿಯೇ ಉಳಿದಿರುವ, ತಮ್ಮ ಜೀವನದ ಬಹುಪಾಲು ದಿನಗಳನ್ನು ಉತ್ತರ ಭಾರತದಲ್ಲಿಯೇ ಸ್ವಾತಂತ್ರ್ಯ ಹೋರಾಟಕ್ಕಾಗಿ ಹೋರಾಡಿದ, ಸದಾ ಹಸನ್ಮುಖಿ, ಸಹೃದಯಿ, ಕರ್ಮಯೋಗಿಗಳಾದ ಪಂಡಿತ ಸುಧಾಕರ ಚತುರ್ವೇದಿಯವರು 1897ನೆಯ ಇಸವಿ ಏಪ್ರಿಲ್ 20ರ ರಾಮನವಮಿಯಂದು ತುಮಕೂರು ಜಿಲ್ಲೆಯ ಕ್ಯಾತಸಂದ್ರ ಗ್ರಾಮದ ದಂಪತಿಗಳಾದ ಶ್ರೀಮತಿ ಲಕ್ಷ್ಮಮ್ಮ ಮತ್ತು ಶ್ರೀ ಶ್ರೀಕೃಷ್ಣರಾಯರವರ ಮಗನಾಗಿ ಒಂದು ಸಾಂಪ್ರದಾಯಿಕ ಕುಟುಂಬದಲ್ಲಿ ಜನ್ಮತಾಳಿದರೂ, ಸಮಾಜದ ಅನಿಷ್ಟ ಕಟ್ಟುಪಾಡುಗಳ ವಿರುದ್ಧ ಹೋರಾಡುತ್ತ ಬೆಳೆದು, ತಮ್ಮದೇ ಆದ ಸ್ವತಂತ್ರ ವ್ಯಕ್ತಿತ್ವವನ್ನು ರೂಪಿಸಿಕೊಂಡ ಮೇರು ಪರ್ವತ ಸಾಧಕರಲ್ಲಿ ಸುಧಾಕರ ಪಂಡಿತರು ಒಬ್ಬರು. ಬಾಲ್ಯದಲ್ಲಿಯೇ ಅತೀ ಕ್ರಿಯಾಶೀಲ, ಚಟುವಟಿಕಗಳ ಗಣಿಯಾಗಿದ್ದ ಪ್ರತಿಭಾವಂತ ಹುಡುಗ ಎಂದು ಕರೆಸಿಕೊಂಡಿದ್ದ ಚತುರ್ವೇದಿಯವರ ಆರೋಗ್ಯ ಮಾತ್ರ ಹೇಳಿಕೊಳ್ಳುವಂತಿರಲಿಲ್ಲ. ಸದಾ ಕಾಯಿಲೆಗೆ ತುತ್ತಾಗುತ್ತಿದ್ದ ಪಂಡಿತ್‍ಜೀಯವರು ತಮ್ಮ ಎಂಟನೆಯ ವಯಸ್ಸಿನಲ್ಲಿಯೇ ತಮ್ಮ ನೆಚ್ಚಿನ ಹಿರಿಯ ಸಹೋದರಿಯಾದ ಪದ್ಮಕ್ಕನ ಮುದ್ದಿನ ತಮ್ಮನಾಗಿ ಅವರಿಂದ ಕನ್ನಡ ಸಾಹಿತ್ಯ, ಸಂಸ್ಕೃತ ಮತ್ತು ಭಾರತ ದರ್ಶನ, ವೇದ ಅಧ್ಯಯನಗಳ ಬಗ್ಗೆ ಆಸಕ್ತಿ ಬೆಳೆಸಿಕೊಂಡು ಬಾಲ್ಯದಲ್ಲಿಯೇ ವೇದ ಅಧ್ಯಯನಗಳ ಬಗ್ಗೆ ಪ್ರೌಢಿಮೆಯನ್ನು ಮೆರೆದರು. ಇವರ ಪ್ರೌಢಿಮೆಯನ್ನು ಗಮನಿಸಿದ ತಂದೆ ತಾಯಿಯರು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಉತ್ತರ ಭಾರತದ ಬಹುದೂರದ ಹರಿದ್ವಾರದ ಪ್ರಸಿದ್ಧ ಕಾಂಗಡಿ ಗುರುಕುಲಕ್ಕೆ ಸೇರಿಸಿದರು. ಈ ಗುರುಕುಲದಲ್ಲಿ ಪಂಡಿತ್ ಜೀಯವರು ನಾಲ್ಕು ವೇದಗಳನ್ನು (ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವವೇದ) ಅಮೂಲಾಗ್ರವಾಗಿ ಅಧ್ಯಯನ ಮಾಡಿ ನಿಜವಾದ ಅರ್ಥದಲ್ಲಿ ಚತುರ್ವೇದಿ ಎಂಬ ಹೆಸರನ್ನು ಗಳಿಸಿ ಪ್ರಸಿದ್ಧರಾದರು. ಸಾಧನೆಗಳು
ವೀರ ಅಭಿಮನ್ಯು, ಭರತ ಕುಮಾರರಂಥ ಸಿಂಹದ ಮರಿಗಳು ಜನಿಸಿದ ದೇಶದಲ್ಲಿ ನಿನ್ನಂಥ ಜಳ್ಳುದೇಹದ ಬಾಲಕರು ಹುಟ್ಟಿದ್ದೇಕೇ-ತನ್ನೆದರು ನಿಂತ ನರಪೇತಲನಂಥ ಹುಡುಗನನ್ನು ನೋಡಿ ಆರ್ಭಟಿಸಿದ್ದರು ಪಂಡಿತ್ ಜೀಯವರ ಗುರುಗಳಾದ ಸ್ವಾಮಿ ಶ್ರದ್ಧಾನಂದ. ಅದೇ ಹುಡುಗ ಮುಂದೆ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯ ಪಾತ್ರ ನಿರ್ವಹಿಸಿ, ಮೂರು ಶತಮಾನಗಳ ಕೊಂಡಿಯಂತೆ ಈಗಲೂ ಚಟುವಟಿಕೆಯಿಂದಿರುವುದು ಅಚ್ಚರಿಯೇ ಸರಿ. ಹೋರಾಟದ ಹಾದಿಗಳು ವೇದ ಪಂಡಿತರಾಗಿರುವುದರ ಜೊತೆಗೆ, ಸ್ವಾತಂತ್ರ್ಯ ಹೋರಾಟಗಾರರಾಗಿ, ದಲಿತೋದ್ದಾರ, ಜಾತಿ, ಭೇದ-ಭಾವ ನಿರ್ಮೂಲನೆ, ಹಿಂದಿ ಪ್ರಚಾರ ಹೀಗೆ ಜೀವನದುದ್ದಕ್ಕೂ ಹೋರಾಟ ನಡೆಸಿದ ಬಹುಮುಖ ವ್ಯಕ್ತಿತ್ವದ ಇವರಿಗೆ 114ವರ್ಷಗಳು. ಸ್ವಾಮಿ ಶ್ರದ್ಧಾನಂದರ ಶಿಷ್ಯರಾದ ಇವರು ನಮ್ಮೊಂದಿಗಿರುವುದು, ಅದೂ ಕನ್ನಡಿಗರಾಗಿರುವುದು ನಮ್ಮ ಭಾಗ್ಯ. ಪಂಡಿತ್‍ಜೀಯವರ ಸ್ವಾತಂತ್ರ್ಯ ಹೋರಾಟ ಆರಂಭಗೊಂಡಿದ್ದು ಜಲಿಯನ್ ವಾಲಾಬಾಗ್ (1919) ಘಟನೆಯ ಸಮಯದಿಂದ. ಅಂದಿನ ದಿನಗಳಲ್ಲಿ ಪಂಡಿತ್ ಜೀಯವರು ತಮ್ಮ ಗುರುಗಳಾದ ಶ್ರದ್ಧಾನಂದರೊಡನೆ ದಿಲ್ಲಿಯಲ್ಲಿ ನೆಲೆಸಿದ್ದರು. ದಿಲ್ಲಿಯಲ್ಲಿನ ಅಜ್ಮಲ್ ಖಾನ್ ಎಂಬ ಕಾಂಗ್ರೆಸ್ ನಾಯಕರು ದಿಲ್ಲಿಯ ಘಂಟಾಫರ್ ಚೌಕದಲ್ಲಿ ಒಂದು ಸಭೆ ಕರೆದಿದ್ದರು. ಆ ಸಭೆಗೆ ಬ್ರಿಟಿಷ್ ಅಧಿಕಾರಿ ಕ್ಯಾಪ್ಟನ್ ಸ್ಟೋಕ್ಸ್ ಬಂದು ಗುಂಡು ಹಾರಿಸುವೆ ಎಂದು ಗದರಿಸಿದ. ಆಗ ಶ್ರದ್ಧಾನಂದರು ಎದೆಯೊಡ್ಡಿ ನಿಂತರು. ಗುರುಗಳು ಎದೆಯೊಡ್ಡಿದ್ದನ್ನು ಕಂಡ ಪಂಡಿತ್‍ಜೀ ಅವರನ್ನು ಹಿಂದೆ ತಳ್ಳಿ ತಾವು ಮುಂದೆ ಬಂದರು. ಆದರೆ, ಗುರುಗಳು ಇವರನ್ನು ಹಿಂದೆ ತಳ್ಳಿ, ನಿನ್ನಿಂದ ಬಹಳಷ್ಟು ಕಾರ್ಯವಾಗಬೇಕಿದೆ ಎಂದು ಹಿಂದಿಯಲ್ಲಿ ಹೇಳಿ ಪಂಡಿತ್ ಜೀಯವರನ್ನು ಸಮಾಧಾನ ಪಡಿಸಿದರು. ಆ ಘಟನೆಯಲ್ಲಿ ಅನೇಕರು ಅಸುನೀಗಿರುವುದನ್ನು ಇಲ್ಲಿ ಸ್ಮರಿಸಬಹುದು. ಗಾಂಧೀಜಿಯವರೊಂದಿಗಿನ ನಂಟು ಸ್ವಾತಂತ್ರ್ಯ ಹೋರಾಟಕ್ಕಾಗಿ ಧುಮುಕಿದ ನಂತರ ಪಂಡಿತ್ಜೀಯವರು 1915ರಲ್ಲಿ ರಾಷ್ಟ್ರಪಿತ ಮಹಾತ್ಮಗಾಂಧಿಯವರ ಪ್ರಥಮ ಭೇಟಿಯಾಯಿತು. ನಂತರದ ಜೀವನ ಪಯಣ ಮಹಾತ್ಮಗಾಂಧಿಯವರೊಡನೆ. ಮಹಾತ್ಮರ ಪೋಸ್ಟ್ ಮ್ಯಾನ್ ಎಂದೇ ಗುರುತಿಸಲ್ಪಟ್ಟ ಪಂಡಿತ್ಜೀಯವರನ್ನು ಗಾಂಧೀಜಿಯವರು ಕರ್ನಾಟಕಿ ಎಂದು ಪ್ರೀತಿಯಿಂದ ಕರೆಯುತ್ತಿದ್ದರು. ಗಾಂಧಿ ಬರೆಯುತ್ತಿದ್ದ ಹಲವಾರು ಪತ್ರಗಳನ್ನು ಅಂದಿನ ವೈಸರಾಯ್ ಮತ್ತು ಗವರ್ನರ್ ಜನರಲ್‍ಗಳಿಗೆ ತಲುಪಿಸುತ್ತಿದ್ದ ಪಂಡಿತ್‍ಜೀಯವರ ಸ್ಫಟಿಕ ನಿರ್ಮಲ ದೇಶ ಸೇವೆಯಲ್ಲಿ ಮುಳುಗಿದ್ದ ಅವರಿಗೆ ವೈಯಕ್ತಿಕ ಜೀವನದ ಬಗ್ಗೆ ಯೋಚಿಸಲು ಹಾಗೂ ವಿವಾಹವಾಗಲು ಎಲ್ಲಿಯ ಸಮಯ? ಆದರೇನು? ಒಬ್ಬ ಹರಿಜನ ಬಾಲಕನನ್ನು ದತ್ತು ಸ್ವೀಕರಿಸಿ ಇತರರು ಬಾಯಿ ಮಾತಿನಲ್ಲಿ ಹೇಳುವ ಆದರ್ಶವನ್ನು ವಾಸ್ತವವಾಗಿ ಮಾಡಿ ತೋರಿಸಿದ ಕೀರ್ತಿ ಪಂಡಿತ್ ಜೀ ಅವರಿಗೆ ಸಲ್ಲುತ್ತದೆ. ಗಾಂಧೀಜಿಯವರೊಂದಿಗೆ ಸಬರಮತೀ ಆಶ್ರಮದಲ್ಲಿದ್ದರು. ಖಿಲಾಪತ್ ಚಳವಳಿಯನ್ನು ಗಾಂಧೀಜಿ ಸಾರಿದಾಗ ಅವರನ್ನು ಬಂಧಿಸಲಾಯ್ತು, ಅವರೊಂದಿಗೆ ಪಂಡಿತ್‍ಜೀಯವರನ್ನೂ ಬಂಧಿಸಿ ಎರವಾಡ ಕಾರಾಗೃಹದಲ್ಲಿ ಇರಿಸಲಾಯಿತು. ನಂತರ ಉಪ್ಪಿನ ಸತ್ಯಾಗ್ರಹದಲ್ಲೂ ಭಾಗವಹಿಸಿದ್ದರು. ಹರಿಜನೋದ್ಧಾರ ಕಾರ್ಯಗಳಲ್ಲೂ ಇವರು ಗಾಂಧೀಜಿಯವರೊಂದಿಗೆ ಇದ್ದು ದೇಶದ ವಿವಿಧೆಡೆ ಸಂಚರಿಸಿದ್ದಾರೆ. ಅನೇಕ ಚಳವಳಿಗಳಲ್ಲಿ ಭಾಗವಹಿಸಿ ಸುಮಾರು 30ಕ್ಕಿಂತ ಹೆಚ್ಚು ಬಾರಿ ಸೆರೆಮನೆ ವಾಸವನ್ನು ಅನುಭವಿಸಿದ ಪಂಡಿತ್ ಜೀಯವರು ಪ್ರಸ್ತುತ ಬೆಂಗಳೂರಿನ ಜೆ.ಪಿ. ನಗರದ ತಮ್ಮ ನಿವಾಸದಲ್ಲಿ ಮೊಮ್ಮಗಳೊಂದಿಗೆ ನೆಲೆಸಿರುವ 114ವರ್ಷದ ಪಂಡೀತ್‍ಜೀಯವರು ಆರ್ಯಸಮಾಜಕ್ಕೆ ವೇದ ಸಾಹಿತ್ಯದ ರಚನೆಗೆ ತಮ್ಮನ್ನು ಅರ್ಪಿಸಿಕೊಂಡಿರುವುದು ಅಚ್ಚರಿಯೇ ಸರಿ. ನುಡಿದಂತೆ ನಡೆದ ಚತುರ್ವೇದಿ ಶಾಸನಬದ್ಧ, ಶಿಸ್ತಿನ ಸಿಪಾಯಿ, ಹೀಗೆ ಜೀವನವಿರಬೇಕು, ವಿವಾಹವಾದರೆ ಸ್ವಾರ್ಥ ಸಾಧನೆಯೇ ವಿನಾ ದೇಶ ಸೇವೆ ಮಾಡುವುದಕ್ಕೆ ಅಡ್ಡಿ, ಎಂಬಿತ್ಯಾದಿ ನೀತಿ ನಿಯಮಗಳಿಗೆ ಚ್ಯುತಿ ಬರದಂತೆ ಬದುಕುತ್ತಿರುವ ಅವಿವಾಹಿತ ಯುವಕ- ಪಂಡಿತ್ ಸುಧಾಕರ ಚತುರ್ವೇದಿಯವರು ಮೇಲ್ವರ್ಗದಲ್ಲಿ ಹುಟ್ಟಿದ್ದರೂ ಸಮಾಜದ ಕಟ್ಟ ಕಡೆಯ ಜನರ ಉದ್ಧಾರಕ್ಕಾಗಿ ಸಮಾಜದಲ್ಲಿನ ಹೀನ ಕಟ್ಟು ಪಾಡುಗಳನ್ನು ತೊಡೆದು ಹಾಕಲು ಜಾತಿ ಪದ್ಧತಿ, ಅಸ್ಪೃಶ್ಯತೆ ಮುಂತಾದ ಸಮಾಜದ ಹೀನ ಪದ್ಧತಿಗಳನ್ನು ನಿರ್ಮೂಲನೆ ಮಾಡಲು ಪಣತೊಟ್ಟು ಹರಿಜನರ ಮಗುವನ್ನೆ ದತ್ತು ತೆಗೆದುಕೊಂಡು (ದತ್ತು ಮಗ ಆರ್ಯಮಿತ್ರ) ಉನ್ನತ ಶಿಕ್ಷಣವನ್ನು ನೀಡಿ ದೇಶದ ಅತ್ಯುನ್ನತ ನಾಗರಿಕ ಸೇವೆಯಾದಂಥ ಭಾರತೀಯ ಆಡಳಿತ ಸೇವೆ (ಐ.ಎ.ಎಸ್)ಯಲ್ಲಿ ಕಾರ್ಯನಿರ್ವಹಿಸುಂತೆ ಮಾಡಿಸಿ ಜಾತಿ ನಿರ್ಮೂಲನೆಗೆ ಮಾದರಿಯಾಗಿದ್ದಾರೆ. ಅಲ್ಲದೇ, ತಮ್ಮ ಜೀವಿತದ ಅವಧಿಯಲ್ಲಿ ಅನೇಕ ಅಂತರ್ಜಾತಿ ವಿವಾಹಗಳನ್ನು ನಡೆಸಿ ಜಾತೀಯತೆಯ ನಿರ್ಮೂಲನೆಗೆ ಶ್ರಮಿಸಿದ್ದಾರೆ. ತಮ್ಮ ಎಲ್ಲ ಮೊಮ್ಮಕ್ಕಳಿಗೂ ವೇದ ಅಧ್ಯಯನ, ಕನ್ನಡ, ಇಂಗ್ಲಿಷ್, ಹಿಂದಿ ಮುಂತಾದ ಭಾಷೆಗಳ ಮೇಲೆ ಪ್ರಭುತ್ವ ಬೆಳೆಯುವಂತೆ ಮಾಡಿ ಮೊಮ್ಮಕ್ಕಳ ಪ್ರೀತಿಯ ಅಜ್ಜರಾಗಿದ್ದಾರೆ. ಈಗಲೂ ಪಂಡಿತ ಸುಧಾಕರ ಚತುರ್ವೇದಿ ಅವರು ಯಾವುದಾದರೂ, ದೈನಂದಿನ ಪತ್ರಿಕೆ ಹಾಗೂ ವೇದಗಳ ನಿರಂತರ ಪಾರಾಯಣ, ಲೇಖನಗಳನ್ನು ಬರೆಯುವುದು ಮಾಡುತ್ತಿರುತ್ತಾರೆ. ಪ್ರತಿ ಶನಿವಾರದ ಸಂಜೆಯ ವೇಳೆ ಮನೆಯಲ್ಲಿ ಹವನ, ಪ್ರವಚನ, ವೇದ ಅಧ್ಯಯನ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಹೊರದೇಶಗಳಿಂದ ಅನೇಕ ವಿದೇಶಿಯರು ಯೋಗ, ವೇದಗಳ ಕಲಿಕೆಯಲ್ಲಿ ಆಸಕ್ತಿಯುಳ್ಳವರು ಆಗಾಗ್ಗೆ ಬರುತ್ತಿರುತ್ತಾರೆ. ಶತಾಯುಷಿಗಳಾದ ಪಂಡಿತ ಸುಧಾಕರ ಚತುರ್ವೇದಿಯವರಿಗೆ ಅನೇಕ ಬಿರುದು, ಸನ್ಮಾನಗಳು ದೊರೆತಿದ್ದು ಭಾರತೀಯ ವಿದ್ಯಾಭವನ ಸಂಸ್ಥೆಯ ವತಿಯಿಂದ ಇವರಿಗೆ ರಾಷ್ಟ್ರೀಯ ಪುರಸ್ಕಾರ ದೊರೆತಿದೆ. 2010ರಲ್ಲಿ ಕರ್ನಾಟಕ ಸರ್ಕಾರವು ಇವರ ವೇದ ಅಧ್ಯಯನ ಹಾಗೂ ವೇದ ಪ್ರಚಾರದ ಕಾರ್ಯದ ಸೇವೆಗಾಗಿ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ವೇದವನ್ನು ಕಲಿಯುವ ಆಸಕ್ತಿ ಇರುವವರಿಗೆ ಪ್ರತಿ ದಿನ ತರಗತಿಗಳನ್ನು ನಡೆಸುತ್ತಾರೆ. ಜೀವನದಲ್ಲಿ ಆಶಾವಾದ, ಯಾವುದೇ ವಿಷಯವನ್ನು ಅತಿ ಸುಲಭವಾಗಿ ಅರ್ಥೈಸುತ್ತಾ ಎಲ್ಲರನ್ನೂ ಸಮಾನ ಮನಸ್ಕರನ್ನಾಗಿ ನೋಡುವ ಪಂಡಿತ ಸುಧಾಕರ ಚತುರ್ವೇದಿಯವರು ಎಲ್ಲರಿಗೂ ಭಾವಪೂರ್ವಕವಾಗಿ ಜೀವನ ಯಾವ ರೀತಿ ಉತ್ತಮವಾಗಿರಬೇಕೆಂದು ತಿಳಿಹೇಳುತ್ತಾರೆ. ಸುಸಂಸ್ಕೃತ ಪರಿಸರವನ್ನು ಸೃಷ್ಠಿಸಿ ತಮ್ಮ ಮೊಮ್ಮಕ್ಕಳನ್ನು ಸಾಕುವ ಜವಾಬ್ದಾರಿಯನ್ನು ವಹಿಸಿಕೊಂಡು ಅವರಿಗೆ ಓದು, ಪಾಠ ಪ್ರವಚನ, ವೇದ ಅಧ್ಯಯನ ಹೋಮ ಹವನಗಳನ್ನು ಹೇಳಿಕೊಡುತ್ತಾ ಸುಸಂಸ್ಕೃತರನ್ನಾಗಿ ಬೆಳೆಸಿದರು. ಭಾರತದಲ್ಲಷ್ಟೇ ಅಲ್ಲದೆ ಪ್ರಾಯಶಃ ಇಡೀ ವಿಶ್ವದಲ್ಲೇ ಅತ್ಯಂತ ಹಿರಿಯರಾದ ಇವರು ಹರಿದ್ವಾರದ ಕಾಂಗ್ರಿ ಗುರುಕುಲದ ಸ್ವಾಮಿ ಶ್ರದ್ಧಾನಂದರ ಶಿಷ್ಯತ್ವದಲ್ಲಿ ವೇದ ವಾಚಸ್ಪತಿ ಎಂಬ ಬಿರುದು ಪಡೆದಿದ್ದಾರೆ. ಪಂಡಿತ್‍ಜೀ ಅವರು ಅಪಾರ ಶಿಷ್ಯವೃಂದವನ್ನು ಹೊಂದಿದ್ದಾರೆ. ರವಿಶಂಕರ ಗುರೂಜಿಯವರಂತಹ ಹಲವು ವಿಶೇಷ ಶಿಷ್ಯರನ್ನು ತಯಾರು ಮಾಡಿದವರು ಪಂಡಿತ್ಜೀ. ಶಿಷ್ಯರ ಅನುಕೂಲಕ್ಕಾಗಿ ಹಲವಾರು ಗ್ರಂಥಗಳನ್ನು ರಚಿಸಿದ್ದಾರೆ. ಸಂಸ್ಕೃತದಲ್ಲಿ ಆರು ಪುಸ್ತಕಗಳು, ಕನ್ನಡದಲ್ಲಿ 24 ಮತ್ತು ಇಂಗ್ಲಿಷಿನಲ್ಲಿ 9 ಗ್ರಂಥಗಳಲ್ಲಿ ವೇದೋಕ್ತ ಸತ್ಯಗಳನ್ನು ವಸ್ತುನಿಷ್ಠವಾಗಿ ವಿಶ್ಲೇಷಿಸಿ ಪ್ರಚಲಿತವಾಗಿರುವ ಹಲವು ತಪ್ಪು ಕಲ್ಪನೆಗಳನ್ನು ನಿವಾರಿಸಿದ್ದಾರೆ. ಉದಾಹರಣೆಗೆ, ``ಜನ್ಮಗತ ಜಾತಿಪದ್ಧತಿಗೆ ವೇದಾಧಾರವಲ್ಲ ಎಂಬುದನ್ನು ಉಲ್ಲೇಖಿಸಿದರೆ ಸಾಕು. ಪ್ರಶಸ್ತಿಗಳು ಪಂಡಿತ್‍ಜೀ ಅವರ ವಿದ್ವತ್ತಿಗಾಗಿ, ಸತ್ಯನಿಷ್ಠೆಗಾಗಿ ಅರಸಿಬಂದ ಗೌರವಗಳಿಗೇನೂ ಕಡಿಮೆಯಿಲ್ಲ. ಮೋತಿಲಾಲ್ ಬನಾರಸಿದಾಸ್ ಸಂಸ್ಥೆಯ ಕರ್ನಾಟಕ ಸಾಹಿತ್ಯ ಅನುವಾದ ಅಕಾಡೆಮಿ ಪ್ರಶಸ್ತಿ. ಗುರುಕುಲ ಕಾಂಗ್ರಿ ವಿಶ್ವವಿದ್ಯಾಲಯದ ಗೌರವ. ಕರ್ನಾಟಕ ರಾಜ್ಯಪಾಲರ ಗೌರವಗಳಲ್ಲದೆ `ವೇದವಾರಿಧಿ ಪುರಸ್ಕಾರ, ವೇದ ವೇದಾಂಗ ಪುರಸ್ಕಾರ, ದಯಾನಂದ ಪುರಸ್ಕಾರ ಇನ್ನು ಹಲವಾರು ಪ್ರಶಸ್ತಿಗಳು. 114ರ ತಾರುಣ್ಯದಲ್ಲೂ ಪಂಡಿತ್ ಜೀ ಅವರ ಚಟುವಟಿಕೆಗಳು ಎಂದಿನಂತೆ ಸಾಗುತ್ತಲೇ ಇವೆ. 20 ಸಂಪುಟಗಳ 30000 ಪುಟಗಳ ವೇದಭಾಷ್ಯರಚನೆಯಲ್ಲಿ ತೊಡಗಿರುವ ಪಂಡಿತ್ಜೀ ಅವರು ಸದಾ ಹಸನ್ಮುಖಿ. ವೇದ ತರಂಗ ಮಾಸಪತ್ರಿಕೆಯ ಮುಖ್ಯ ರೂವಾರಿಯಾಗಿರುವ ಪಂಡಿತ್‍ಜೀ ಅವರ ಆದರ್ಶ ಜೀವನ ಎಲ್ಲರಿಗೂ ಮಾದರಿ. ದೇಶದಲ್ಲೆಡೆ ವ್ಯಾಪಕವಾಗಿ ಹಬ್ಬಿಸುವ ಭ್ರಷ್ಟಾಚಾರದ ವಿರುದ್ದ ಕೆಂಡಕಾರುತ್ತಾರೆ. ಪಂಡಿತ್ ಜೀ ಅವರಿಗೆ 114 ವರ್ಷಗಳಾದರೂ ಅವರ ದೀಃಶಕ್ತಿ ಪ್ರಖರವಾಗಿರುವುದು ನಮ್ಮೆಲ್ಲರ ಸುದೈವ. ಒಲವೇ ಜೀವನ ನಗುವುದು, ನಗಿಸುವುದು, ಶಾಖಾಹಾರಿ ಆಹಾರ ಮತ್ತು ವೇದೊಕ್ತ ಜೀವನವು ಪಂಡಿತ್‍ಜೀಯವರ ದೀರ್ಘಾಯಸ್ಸಿನ ಗುಟ್ಟು. 300 ವರ್ಷಗಳ ಜೀವನ ಪಂಡಿತ್ ಜೀ ಅವರ ಅಭಿಲಾಷೆ, ಇದು ನಮ್ಮೆಲ್ಲರ ಅಭಿಲಾಷೆಯೂ ಹೌದು. ಮನುಷ್ಯ ನಗಬೇಕು, ನಗಿಸಬೇಕು. ನಗು ಇನ್ನೊಬ್ಬರಿಗೆ ದಾರಿದೀಪವಾಗಬೇಕು. ಇದು ಪಂಡಿತ್‍ಜೀಯವರ ಮಾತು. ಅಳುತ್ತಾ ಬರುವವರನ್ನು ನಗಿಸಿ ಕಳುಹಿಸಬೇಕು. ನೊಂದವರ ಪಾಲಿಗೆ ನಗುವು ಸಿದ್ಧೌಷಧವಾಗಬೇಕು. ಅದೇ ರೀತಿ ಪಂಡಿತ್ ಜೀಯವರು ನಡೆದುಕೊಳ್ಳುತ್ತಿದ್ದಾರೆ. ಎಷ್ಟೋ ಜನ ಅಳುತ್ತಾ ಅವರ ಮನೆಗೆ ಬಂದಿದ್ದಾರೆ. ಹಿಂತಿರುಗಿ ಹೋಗುವಾಗ ನಗುವಿನೊಂದಿಗೆ ಹೋಗುತ್ತಾರೆ. ಈ ಪವಾಡ ಪಂಡಿತ್ಜೀಯವರಿಂದಲೇ ಸಾಧ್ಯ. ಕುಟುಂಬವು ಯಶಸ್ವಿಯಾಗಿ ಸಾಗಬೇಕಾದರೆ ಒಲವು ತುಂಬಿದ, ನಿಃಸ್ವಾರ್ಥ ಮನೋಭಾವದ ವ್ಯಕ್ತಿಗಳಿದ್ದಾಗ ಮಾತ್ರ ಕುಟುಂಬ ಯಶಸ್ವಿಯಾಗಿ ಮುನ್ನಡೆದು ಸಮಾಜದ ಏಳಿಗೆಗೆ ವ್ಯಕ್ತಿಗಳು ಕಾರಣಕರ್ತರಾಗುತ್ತಾರೆ ಇದು ಪಂಡಿತ್ ಜೀಯವರ ಅನುಭವದ ಮಾತು. ವೆಂಕಟೇಶ್.ಕೆ ನಿರಾತಂಕ ಪೊನ್ನಸ್ವಾಮಿ ಎನ್ ನಿರಾತಂಕ
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
|
|
|
|
SITE MAP
SitePOSH |
NIRATHANKAOUR OTHER WEBSITESSubscribe |
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |