ಬದುಕು, ಎಂಬ ಪದ ಕೇಳಲು ಎಷ್ಟು ಚೆಂದವೋ ಆ ಬದುಕೆಂಬ ಬಂಡಿಯನ್ನು ನಡೆಸಲು ಅಷ್ಟೇ ಕಷ್ಟದಾಯಕ ಎಂಬುದು ನಮಗೆ ಬದುಕನ್ನು ಬಯಸಿ ಬೆಂಗಳೂರಿಗೆ ವಲಸೆ ಬರುವ ಬಡಕುಟುಂಬಗಳನ್ನು ನೋಡಿದಾಗ ಅರಿವಾಗುತ್ತದೆ, ಹೀಗೆ ಬದುಕನ್ನು ಅರಸಿ ಬೆಂಗಳೂರಿಗೆ ಬರುವ ಕುಟುಂಬಗಳು ಭಾರತದ ನಾನಾ ಪ್ರದೇಶಗಳಿಂದ ಜೀವನವೆಂಬ ಬದುಕಿನ ಜಟಕಾ ಬಂಟಿಯನ್ನು ನಡಸಲು ಹಲವಾರು ಕೆಲಸಗಳನ್ನು ಹುಡುಕಿಕೊಂಡು ಹೊರ ರಾಜ್ಯಗಳಾದ ಆಂಧ್ರ, ತಮಿಳುನಾಡು, ಒರಿಸ್ಸಾ, ಮಹಾರಾಷ್ಟ್ರ, ಕಲ್ಕತ್ತಾ ರಾಜ್ಯಗಳಿಂದ ಬಂದರೆ, ನಮ್ಮದೇ ರಾಜ್ಯದ ಜಿಲ್ಲೆಗಳಾದ ಗುಲ್ಬರ್ಗ, ರಾಯಚೂರು, ಕೊಪ್ಪಳ, ಬಳ್ಳಾರಿ, ಬಿಜಾಪುರ, ಬೀದರ್, ಬಾಗಲಕೋಟೆ ಮುಂತಾದ ಭಾಗಗಳಿಂದ ಬೆಂಗಳೂರಿಗೆ ಬಂದು ಯಾವುದೋ ಒಂದು ಕೊಳಚೆ ಪ್ರದೇಶ ಅಥವಾ ಯಾವುದೋ ಒಂದು ಖಾಲಿ ಜಾಗಗಳಲ್ಲಿ ಮಾಲೀಕರಿಗೆ 100 ರೂಗಳಿಂದ 200 ರೂಗಳವರೆಗೆ ಮಾಸಿಕ ಬಾಡಿಗೆಯನ್ನು ನೀಡಿ ತಮ್ಮ ಗುಡಾರಗಳನ್ನು ನಿರ್ಮಿಸಿಕೊಂಡು ಜೀವನವನ್ನು ಸಾಗಿಸುವ ಜನರೇ ಹೆಚ್ಚು. ಬೆಂಗಳೂರೆಂಬ ಮಹಾ ನಗರದಲ್ಲಿ ಅವರು ಸುಸಜ್ಜಿತ ಮನೆಗಳಲ್ಲಿ ವಾಸಿಸುವುದು ಇವರ ಪಾಲಿಗೆ ಕೇವಲ ಕನಸಷ್ಟೆ , ಕೆಲವರಿಗೆ ತಮ್ಮ ಊರುಗಳಲ್ಲಿ ತಮ್ಮದೇ ಆದ ಸ್ವಂತ ಮನೆಗಳಿದ್ದರೂ, ವ್ಯವಸಾಯದ ಜಮೀನುಗಳಿದ್ದರೂ ವ್ಯವಸಾಯಕ್ಕೆ ಬೇಕಾದ ಸೌಲಭ್ಯಗಳ ಕೊರತೆಯಿಂದಲೋ ಅಥವಾ ಅದರಿಂದ ಸಿಗುವ ಮಿತ ಆದಾಯದಿಂದಲೋ ತಮ್ಮ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲಾಗದೆ ಅದಕ್ಕಿಂತಲೂ ಉತ್ತಮವಾದ ಜೀವನವನ್ನು ನಡೆಸಬಹುದೆಂಬ ಇಚ್ಛೆಯಿಂದ ಬರುವವರು ಒಂದೆಡೆಯಾದರೆ, ಜೀವನ ನಡೆಸಲು ಬೇಕಾದ ಮೂಲ ಅವಶ್ಯಕತೆಗಳ ಕೊರತೆ, ಬಡತನವೆಂಬ ಭೂತದ ಬೆಂಕಿಯ ಬೇಗೆಯನ್ನು ತಾಳಲಾರದೆ ತಮ್ಮ ಹೊಟ್ಟೆಯನ್ನು ತುಂಬಿಕೊಳ್ಳುವ ಉದ್ದೇಶದಿಂದ ವಲಸೆ ಬರುವ ಜನರೇ ಹೆಚ್ಚು. ಹೀಗೆ ಬಂದ ಜನ ಬೆಂಗಳೂರೆಂಬ ಕಾಂಕ್ರೀಟ್ ನಗರವನ್ನು ಮತ್ತಷ್ಟು ಕಾಂಕ್ರೀಟ್‍ಮಯಗೊಳಿಸುವ ಕೆಲಸದಲ್ಲಿ ತೊಡಗುತ್ತಾರೆ. ಅಂದರೆ ಕಟ್ಟಡ ಕಾಮಗಾರಿಯ ಕೆಲಸಗಳಲ್ಲಿ ತೊಡಗುತ್ತಾರೆ, ಮತ್ತೆ ಕೆಲವರು ಪ್ಲಾಸ್ಟಿಕ್ ಮುಂತಾದ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿ ಮಾರಾಟ ಮಾಡುವ ಕೆಲಸಗಳಲ್ಲಿ ತೊಡಗುತ್ತಾರೆ. ಈ ಎಲ್ಲಾ ಕಾರ್ಯಗಳನ್ನು ಮಾಡುವಲ್ಲಿ ಅವರ ಮಕ್ಕಳೂ ತೊಡಗುತ್ತಾರೆಂಬುದೇ ದುಃಖಕರ ಸಂಗತಿ, ಬಾಲ್ಯದ ಆಟಗಳನ್ನು ಆಡುತ್ತಾ ಓದುವ ವಯಸ್ಸಿನಲ್ಲಿ ಯಾವುದೋ ರಸ್ತೆಯಲ್ಲಿ ಚಿಂದಿಯನ್ನು ಹಾಯುತ್ತಾ, ಯಾವುದೋ ಕಟ್ಟಡ ನಿರ್ಮಾಣ ಪ್ರದೇಶದಲ್ಲಿ ಬಾಲಕಾರ್ಮಿಕರಾಗಿ ದುಡಿಯುವವರು ತಮ್ಮ ವಿದ್ಯಾಭ್ಯಾಸದಿಂದ ವಂಚಿತರಾಗಿ ಜೀವನ ನಡೆಸುವುದನ್ನು ಕಾಣಬಹುದಾಗಿದೆ. ಈ ನಿಟ್ಟಿನಲ್ಲಿ ಲೈಫ್ ಟ್ರಸ್ಟ್ ಸಂಸ್ಥೆಯು ಇಂತಹ ವಿದ್ಯಾಭ್ಯಾಸದಿಂದ ವಂಚಿತರಾದ ಮಕ್ಕಳಿಗೆ ಅವರ ಬಾಲ್ಯದ ಹಕ್ಕುಗಳನ್ನು ಒದಗಿಸಿಕೊಡುವ ಕಾರ್ಯಗಳನ್ನು ಮಾಡುತ್ತಾ ಬಂದಿದೆ, ಅಂದರೆ ಇದೊಂದು ಸರ್ಕಾರೇತರ ಸಂಸ್ಥೆಯಾಗಿದ್ದು ಬೆಂಗಳೂರಿಗೆ ತಮ್ಮ ಜೀವನವನ್ನು ಸಾಗಿಸುವ ಸಲುವಾಗಿ ವಲಸೆ ಬರುವ ಕುಟುಂಬಗಳ ಮಕ್ಕಳಿಗೆ ವಿದ್ಯಾಭ್ಯಾಸವನ್ನು ಹಾಗೂ ಅವರಿಗೆ ಬೇಕಾದ ಮೂಲ ಸೌಕರ್ಯಗಳು, ಪೌಷ್ಟಿಕ ಆಹಾರ, ಸ್ವಚ್ಛತೆ, ಶಿಸ್ತು, ಜೀವನ ಕೌಶಲ್ಯಗಳು ಮುಂತಾದವುಗಳನ್ನು ಅವರ ಬಾಲ್ಯದ ಆಟಗಳೊಂದಿಗೆ ಕಲಿಸುವ ನಿಟ್ಟಿನಲ್ಲಿ ಸಾಗುತ್ತಿದೆ.
ಲೈಫ್ ಟ್ರಸ್ಟ್ ಸಂಸ್ಥೆಯು ಸರ್ವ ಶಿಕ್ಷಣ ಅಭಿಯಾನದೊಂದಿಗೆ ಜೊತೆಗೂಡಿ ಕಾರ್ಯ ನಿರ್ವಹಿಸುತ್ತಿದ್ದು, ಇದು ಕಟ್ಟಡ ನಿರ್ಮಾಣ, ಕೊಳಚೆ ಪ್ರದೇಶ, ಹಾಗೂ ಗುಡಾರ ಪ್ರದೇಶಗಳನ್ನು ಪತ್ತೆ ಹಚ್ಚಿ ಅಲ್ಲಿನ ಮಾಲೀಕರು ಅಥವಾ ಕಟ್ಟಡ ನಿರ್ಮಾಣ ಸಂಸ್ಥೆಗಳೊಂದಿಗೆ ಚರ್ಚೆ ಮಾಡಿ ಅವರಿಂದ ಒಪ್ಪಿಗೆಯನ್ನು ಪಡೆದು ಕುಟುಂಬಗಳು ವಾಸಿಸುವ ಸ್ಥಳದಲ್ಲಿಯೇ ಅದರಲ್ಲೂ ಮಕ್ಕಳು ಬರಲು ಸುಲಭವಿರುವ ಸ್ಥಳದಲ್ಲಿಯೇ ಒಂದು ತಾತ್ಕಾಲಿಕ ಗುಡಾರವನ್ನು ನಿರ್ಮಿಸಿ ಶಾಲೆಯನ್ನು ಪ್ರಾರಂಭಿಸಲಾಗುತ್ತದೆ, ಅಲ್ಲದೆ ಆ ಮಕ್ಕಳಿಗೆ ಬೋಧನೆಯನ್ನು ಮಾಡಲು ಬೇಕಾದ ಕೌಶಲ್ಯವುಳ್ಳ ಬೋಧಕರನ್ನು ನೇಮಿಸಿಕೊಳ್ಳಲಾಗುತ್ತದೆ. ಈ ಬೋಧಕರನ್ನು ಅವರ ವಿದ್ಯಾಭ್ಯಾಸ, ಅನುಭವ ಬೋಧನಾ ಸಾಮರ್ಥ್ಯಗಳ ಆಧಾರದ ಮೇಲೆ ನೇಮಿಸಿಕೊಳ್ಳಲಾಗುತ್ತದೆ. ಕೆಲವು ಗುಡಾರ ಶಾಲೆಗಳಲ್ಲಿ ಮಕ್ಕಳು ಹೊರ ರಾಜ್ಯಗಳಿಂದ ಬಂದಿದ್ದು ಅವರಿಗೆ ಕನ್ನಡ ಭಾಷೆಯನ್ನು ಕಲಿಯಲು ಮತ್ತು ಅರ್ಥ ಮಾಡಿಕೊಳ್ಳಲು ಕಷ್ಟಕರವಾಗಿದ್ದರೆ ಅಂತಹ ಸಂದರ್ಭದಲ್ಲಿ ಅವರ ಭಾಷೆಯನ್ನು ಬಲ್ಲ ಶಿಕ್ಷಕರನ್ನೇ ಆಯ್ಕೆ ಮಾಡಲಾಗುತ್ತದೆ, ಅವರವರ ಮಾತೃಭಾಷೆಯೊಂದಿಗೆ ಕನ್ನಡ, ಇಂಗ್ಲೀಷ್ ಭಾಷೆಯ ಕಲಿಕೆಯನ್ನೂ ಮಾಡಿಸಲಾಗುತ್ತದೆ. ಇದೊಂದು ಅನೌಪಚಾರಿಕ ಶಿಕ್ಷಣ ಪದ್ಧತಿಯಾಗಿದ್ದು ಸರ್ವ ಶಿಕ್ಷಣ ಅಭಿಯಾನದ 'ಚಿಣ್ಣರ ಅಂಗಳ' 'ನಲಿ-ಕಲಿ' ಶಿಕ್ಷಣ ಮಾದರಿಯನ್ನು ಅನುಸರಿಸಿ ಬೋಧನೆಯನ್ನು ಮಾಡಲಾಗುತ್ತಿದೆ. ನಮ್ಮ ಗುಡಾರ ಶಾಲಾ ಮಕ್ಕಳಿಗೆ ದೇಶ ಪ್ರೇಮವನ್ನು ಬೆಳೆಸುವ ಸಲುವಾಗಿ ಅದರ ಮಹತ್ವವನ್ನು ತಿಳಿಹೇಳುವ ಸಲುವಾಗಿ ಶಾಲೆಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ, ಗಾಂಧಿ ಜಯಂತಿ, ಗಣರಾಜ್ಯ ದಿನಾಚರಣೆ ಮುಂತಾದ ನಾಡ ಹಬ್ಬಗಳನ್ನೂ ಆಚರಿಸಲಾಗುತ್ತದೆ. ಇದಿಷ್ಟೇ ಅಲ್ಲದೆ ಮಕ್ಕಳಿಗೆ ಬೇಕಾದ ಕಲಿಕಾ ಸಾಮಗ್ರಿಗಳಾದ ಪುಸ್ತಕ, ಸ್ಲೇಟ್, ಪೆನ್ನು ಮುಂತಾದವುಗಳೊಂದಿಗೆ ಆಟಿಕೆಗಳನ್ನು ಒಸಗಿಸಲಾಗುತ್ತದೆ ಜೊತೆಗೆ ಮಕ್ಕಳಿಗೆ (ಸ್ನ್ಯಾಕ್ಸ್) ವ್ಯವಸ್ಥೆಯನ್ನು ಟ್ರಸ್ಟ್‍ನ ವತಿಯಿಂದ ಮಾಡಿದರೆ ಸರ್ವ ಶಿಕ್ಷಣ ಅಭಿಯಾನದ ವತಿಯಿಂದ ಮಧ್ಯಾಹ್ನದ ಬಿಸಿಯೂಟವೂ ದೊರೆಯುವಂತೆ ಮಾಡಲಾಗುತ್ತದೆ. ಇದರೊಂದಿಗೆ ಅವರ ಆರೋಗ್ಯವನ್ನು ಕಾಪಾಡುವ ದೃಷ್ಟಿಯಿಂದ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಆರೋಗ್ಯ ತಪಾಸಣಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಇಷ್ಟೆಲ್ಲಾ ಕಾರ್ಯಕ್ರಮಗಳನ್ನು ಮಾಡುತ್ತಿರುವ ನಮ್ಮ ಗುಡಾರ ಶಾಲೆಗಳಿಗೆ ನಾವಿಟ್ಟ ಹೆಸರು 'ಲೈಫ್ ಪಾಠಶಾಲೆ', ಲೈಫ್ ಎಂದರೆ ಜೀವನ, ಪಾಠಶಾಲೆ ಎಂದರೆ ಕಲಿಕಾ ಸ್ಥಳ ಒಟ್ಟಾರೆಯಾಗಿ ಲೈಫ್ ಪಾಠಶಾಲೆ ಎಂದರೆ ಜೀವನಕ್ಕೆ ಅಗತ್ಯವಾದ ವಿದ್ಯೆ, ಭಾಷೆ, ಶಿಸ್ತು, ನಡೆ, ನುಡಿ ಮುಂತಾದ ಕೌಶಲ್ಯಗಳನ್ನು ಕಲಿಸುವ ಕೇಂದ್ರಗಳಾಗಿವೆ. ಆನಂದ್ ಹೊಸಹಳ್ಳಿ, BA, LLB, MSW, PGDHRM ಲೈಫ್ ಟ್ರಸ್ಟ್, ಬೆಂಗಳೂರು
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
|
|
|
|
SITE MAP
SitePOSH |
NIRATHANKAOUR OTHER WEBSITESSubscribe |
HR and Employment Law Classes - Every Fortnight
Stay updated and informed by joining our WhatsApp group for HR and Employment Law Classes - Every Fortnight.
The Zoom link for the sessions will be shared directly in the group. |
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |