``ಸಂಘಟನೆ ಯಾವುದೇ ಮನುಷ್ಯ ಸಮಾಜದ ಒಂದು ಅವಿಭಾಜ್ಯ ಅಂಗ.1 ಸಂಘಟನೆ ಮನುಷ್ಯ ಸಮಾಜದಷ್ಟೇ ಹಳೆಯದು. ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟು (ಸಂಪುಟ-8, ಪುಟ-8211) ಸಂಘಟನೆ ಶಬ್ದಕ್ಕೆ ಹೊಂದಿಸುವಿಕೆ, ಜೋಡಿಸುವಿಕೆ, ಸಂಯೋಜಿಸುವಿಕೆ ಎಂಬ ಅರ್ಥಗಳನ್ನು ಕೊಟ್ಟಿದೆ. ಒಟ್ಟುಗೂಡಿಸುವಿಕೆ, ವ್ಯವಸ್ಥೆಗೊಳಿಸುವಿಕೆ ಮುಂತಾದ ಶಬ್ದಗಳೂ ಇದಕ್ಕೆ ಹತ್ತಿರದ ಅರ್ಥವನ್ನು ಕೊಡುವ ಶಬ್ದಗಳಾಗಿದೆ. ಈ ಹಿನ್ನೆಲೆಯಲ್ಲಿ ಸಾಮಾನ್ಯ ಅರ್ಥದಲ್ಲಿ ಯಾವುದೇ ಸಮುದಾಯದಲ್ಲಿ, ಸಂಬಂಧಪಟ್ಟ ವ್ಯಕ್ತಿಗಳು, ಒಂದು ಅಥವಾ ಅದಕ್ಕಿಂತ ಹೆಚ್ಚು ಉದ್ದೇಶಗಳನ್ನಿಟ್ಟುಕೊಂಡು, ಆ ಉದ್ದೇಶಗಳನ್ನು ಈಡೇರಿಸಿಕೊಳ್ಳುವ ಸಲುವಾಗಿ ಒಂದುಗೂಡಿ ಅವಶ್ಯ ಕ್ರಮಗಳನ್ನು ಕೈಕೊಳ್ಳುವುದಕ್ಕೆ ಸಂಘಟನೆ ಎಂದು ಕರೆಯಬಹುದಾಗಿದೆ. ಚರಿತ್ರೆಯ ಉದ್ದಕ್ಕೂ ಜಗತ್ತಿನಾದ್ಯಂತ, ಸಾವಿರಾರು ಸಮುದಾಯಗಳು, ತಮ್ಮ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಈ ರೀತಿ ಸಂಘಟನೆಯಾಗಿರುವುದನ್ನು ನೋಡುತ್ತೇವೆ. ನಾಗರೀಕ ಪೂರ್ವ ಯುಗದಲ್ಲಿಯೂ, ಕಾಡು ಮನುಷ್ಯನು ಗುಂಪುಗುಂಪಾಗಿ ಜೀವಿಸುತ್ತಿದ್ದುದನ್ನು ಮತ್ತು ಅವರು ಅಲೆಮಾರಿಯಾಗಿದ್ದುದನ್ನು ಇತಿಹಾಸ ದಾಖಲಿಸಿದೆ. ಅವರು ತಮ್ಮ ಆಹಾರ ಮತ್ತು ಮಾನ ಮುಚ್ಚಿಕೊಳ್ಳಲು ಬೇಟೆಯನ್ನು ಅವಲಂಬಿಸಿದ್ದರು. ಅವರು ತಮ್ಮ ವಸತಿಯ ಸಮಸ್ಯೆಗಳಿಗೆ ಹಾಗೂ ಮುಖ್ಯವಾಗಿ ತಮ್ಮ ಸಮುದಾಯಗಳ ರಕ್ಷಣೆಗೆ ಸಂಘಟನೆ ಮಾಡಿಕೊಳ್ಳುತ್ತಿದ್ದರು. ಅಂತಹ ಸಂಘಟನಾ ಪ್ರಕ್ರಿಯೆ ತುಂಬಾ ಸಂಕೀರ್ಣವಾಗಿರದೆ, ಬಹುಶಃ ಬಹಳ ಸರಳವಾಗಿ ಇದ್ದಿರಬೇಕು ಎಂದು ಊಹಿಸಬಹುದಾಗಿದೆ. ಇಂತಹ ಇತಿಹಾಸ ಪೂರ್ವ ಸಮುದಾಯಗಳಿಗೆ ನಾಗರೀಕತೆಯ ಪರಿಚಯ ಆದಂತೆಲ್ಲಾ, ತಮ್ಮ ಅಲೆಮಾರಿತನವನ್ನು ಬಿಟ್ಟುಕೊಟ್ಟು, ತಮಗೆ ಸರಿಕಂಡ ಅರಣ್ಯ, ನದಿ, ಗಿರಿ, ಕಂದರ ಮುಂತಾದ ಕಡೆಗಳಲ್ಲಿ ನೆಲೆ ನಿಂತರು. ಆಹಾರದ ನಿರ್ವಹಣೆಗಾಗಿ ಕೃಷಿ, ಹೈನುಗಾರಿಕೆ ಮುಂತಾದ ವೃತ್ತಿಗಳನ್ನು ಅವಲಂಬಿಸಿದರು. ಜೊತೆ ಜೊತೆಗೆ ತಮ್ಮ ಸಮುದಾಯಗಳ ರಕ್ಷಣೆಗೆ ತಾವೇ ಪಡೆಗಳನ್ನು ಕಟ್ಟಿಕೊಂಡರು. ತಮ್ಮ ಬಹುಮುಖದ ಈ ಚಟುವಟಿಕೆಗಳಿಗೆ ಅವರು ಸಂಘಟನೆಯ ಅವಶ್ಯಕತೆಯನ್ನು ಮನಗೊಂಡರು. ತಮ್ಮ ಸಮಸ್ಯೆಗಳ ಬಗ್ಗೆ ಕುಂದು ಕೊರತೆಗಳ ಬಗ್ಗೆ ಕಂಡುಕೊಳ್ಳಬೇಕಾದ ಪರಿಹಾರಗಳ ಬಗ್ಗೆ ಒಂದೆಡೆ ಕುಳಿತು, ಚರ್ಚಿಸಿ ನಿರ್ಣಯ ತೆಗೆದುಕೊಂಡ ಉದಾಹರಣೆಗಳನ್ನು ಮಾನವ ಶಾಸ್ತ್ರ, ಧರ್ಮ ಶಾಸ್ತ್ರ ಗ್ರಂಥಗಳು ದಾಖಲಿಸಿವೆ. ಜಗತ್ತಿನಾದ್ಯಂತ ಇಂತಹ ಸಾವಿರಾರು ಜನಾಂಗಗಳು, ಬುಡಕಟ್ಟುಗಳು, ಪಂಗಡಗಳು, ಕುಲಗಳು ರಕ್ಷಣೆಯನ್ನೂ ಸೇರಿಕೊಂಡು ತಮ್ಮ ವಿವಿಧ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು, ತಮ್ಮ ಒಗ್ಗಟ್ಟು, ಐಕ್ಯಮತ್ಯಗಳನ್ನು ಕಾಪಾಡಿಕೊಳ್ಳಲು ಸಂಘಟಿತರಾಗಿದ್ದಾರೆ. ಮನುಷ್ಯನ ಬದುಕು ಆಧುನಿಕಗೊಂಡಂತೆ ಮತ್ತು ಸಂಕೀರ್ಣಗೊಂಡಂತೆ, ಸಂಘಟನಾ ಪ್ರಕ್ರಿಯೆಯನ್ನು ಬದುಕಿನ ಎಲ್ಲಾ ಮುಖಗಳಿಗೂ, ಸಮಸ್ಯೆಗಳಿಗೂ ಅನ್ವಯಿಸಿದ್ದಾರೆ, ತನ್ಮೂಲಕ ಸಂತೃಪ್ತಿ, ಶಾಂತಿ ಸಮಾಧಾನಗಳನ್ನು ಕಂಡುಕೊಳ್ಳಲು ಪ್ರಯತ್ನಿಸಿದ್ದಾರೆ. ಸಂಘಟನಾ ಪ್ರಕ್ರಿಯೆಯು ಕಾಲಕಾಲಕ್ಕೆ ತನ್ನ ಅರ್ಥವ್ಯಾಪ್ತಿಯನ್ನು ಹಿಗ್ಗಿಸಿಕೊಳ್ಳುತ್ತಾ ಬಂದಿದೆ. ಈ ಹಿನ್ನೆಲೆಯಲ್ಲಿ ಸಮುದಾಯ ಸಂಘಟನೆಯ ಇತಿಹಾಸವನ್ನು ಅರ್ಥೈಸಿಕೊಳ್ಳಬೇಕಾಗಿದೆ.
ಬ್ರಿಟನ್ನಿನ ಸಮುದಾಯ ಸಂಘಟನೆಯ ಇತಿಹಾಸ ಆಧುನಿಕ ಸಮಾಜಕಾರ್ಯ ಮತ್ತು ಸಮುದಾಯ ಸಂಘಟನೆಯ ಚಟುವಟಿಕೆಗಳು ಪ್ರಾರಂಭಗೊಂಡದ್ದು ಬ್ರಿಟನ್ ಮತ್ತು ಅಮೇರಿಕ ದೇಶಗಳಲ್ಲಿ, ಅದೂ ಹತ್ತೊಂಬತ್ತನ್ನೇ ಶತಮಾನದ ಮಧ್ಯಭಾಗದಲ್ಲಿ. ಆಯಾ ಸಮಾಜಗಳು ಆ ಸಮಯದಲ್ಲಿ ಸಮಾಜಕಾರ್ಯ-ಸಮುದಾಯ ಸಂಘಟನೆಯ ಪರಿಕಲ್ಪನೆಗೆ ಅನುವು ಮಾಡಿಕೊಟ್ಟವು. ಹಾಗಂದಾಕ್ಷಣ ಅದಕ್ಕೂ ಹಿಂದಿನ ದಿನಗಳಲ್ಲಿ ಆ ನಿಟ್ಟಿನಲ್ಲಿ ಏನೂ ಕೆಲಸವಾಗಿಲ್ಲ ಎಂದು ಭಾವಿಸಲಾಗುವುದಿಲ್ಲ. ಸಮಾಜಕಾರ್ಯ, ಸಮುದಾಯ ಸಂಘಟನೆಗಳ ಚಟುವಟಿಕೆಗಳು ಆ ಹಿಂದೆಯೂ ಪ್ರಾರಂಭಗೊಂಡಿದ್ದು ಅವುಗಳ ಒಂದು ಸಿಂಹಾವಲೋಕನವನ್ನು ಮಾಡಲು ಇಲ್ಲಿ ಪ್ರಯತ್ನಿಸಲಾಗಿದೆ. ಸಮಾಜಕಾರ್ಯ-ಸಮುದಾಯ ಸಂಘಟನೆ ಎಂಬ ಪರಿಕಲ್ಪನೆಯಡಿ ಚಟುವಟಿಕೆಗಳು ಪ್ರಾರಂಭಗೊಂಡಿರದಿದ್ದರೂ, ಸಮಾಜ ಸೇವೆಯ ವ್ಯವಸ್ಥೆಯಡಿಯಲ್ಲಿ ಅನೇಕ ಜನಹಿತ ಕೆಲಸಗಳು ಆಗಿವೆ. ಹದಿಮೂರು ಮತ್ತು ಹದಿನಾಲ್ಕನೇ ಶತಮಾನದಲ್ಲಿ ಬ್ರಿಟನ್ ಸಮಾಜದಲ್ಲಿ ಆರ್ಥಿಕ-ಸಾಮಾಜಿಕ ಬದಲಾವಣೆಗಳಾದವು. ಸಾಂಪ್ರದಾಯಕ ಉತ್ಪಾದನಾ ಪದ್ಧತಿಗಳ ಜೊತೆಗೆ, ಅಂದಿನ ದಿನಮಾನಕ್ಕೆ ಆಧುನಿಕ ಅನ್ನಬಹುದಾದ ಉತ್ಪಾದನಾ ಮತ್ತು ಇತರೆ ಆರ್ಥಿಕ ಚಟುವಟಿಕೆಗಳಿಗೆ ಸಮಾಜ ಸಾಕ್ಷಿಯಾಯಿತು. ಇದರ ಪರಿಣಾಮ ಸಾಮಾಜಿಕ ಕ್ಷೇತ್ರದಲ್ಲೂ ಆಗಿ, ಸಮಾಜದ ರಾಚನಿಕ ಅಂಶಗಳು ಮತ್ತು ಸಂಬಂಧಗಳಲ್ಲಿ ಬದಲಾವಣೆಯನ್ನು ಕಾಣುವಂತಾಯಿತು. ಆದರೂ ಜಮೀನ್ದಾರರು, ಭೂ ಮಾಲೀಕರು ಸಮಾಜದ ಮೇಲಿನ ತಮ್ಮ ಹಿಡಿತವನ್ನು ಕಳೆದುಕೊಂಡಿರಲಿಲ್ಲ. ಅವರು ಕೃಷಿ ಕಾರ್ಮಿಕರನ್ನು ಹಿಂಸಿಸುತ್ತಿದ್ದರು. ಸಮಾಜದಲ್ಲಿ ಕಡು ಬಡತನ ತಾಂಡವವಾಡುತ್ತಿತ್ತು. ಕಾರ್ಮಿಕರು ದಿವಾಳಿ ಏಳುವ ಸ್ಥಿತಿಯು ನಿರ್ಮಾಣವಾಗಿತ್ತು. ಕಾರ್ಮಿಕರು ವಲಸೆ ಹೋಗುವುದು ಸಾಮಾನ್ಯವಾಗಿತ್ತು. ಬಾಲ ಕಾರ್ಮಿಕರನ್ನು ಕಡಿಮೆ ದರದಲ್ಲಿ ದುಡಿಸಿಕೊಳ್ಳುವುದು ಅವಿರತವಾಗಿತ್ತು. ಸಮಾಜದಲ್ಲಿ ಅಪರಾಧಗಳು, ದುಷ್ಕೃತ್ಯಗಳು ಹೆಚ್ಚಾಗಿದ್ದವು. ಸಮಾಜದಲ್ಲಿ ಇಷ್ಟೆಲ್ಲಾ ಆದರೂ ಬ್ರಿಟಿಷ್ ರಾಣಿಯ ಮನೆತನದ ರಾಜ ಪ್ರತಿನಿಧಿಗಳಾಗಲೀ, ಬ್ರಿಟನ್ ಸಂಸತ್ತಾಗಲೀ ಈ ವಿಷಯಗಳ ಬಗ್ಗೆ ಆಸಕ್ತಿ ತೋರಿದ ಹಾಗೆ ಕಂಡುಬರುವುದಿಲ್ಲ. ಆದರೆ ಅಲ್ಲಿನ ಚರ್ಚುಗಳು, ಕ್ರೈಸ್ಥ ಸಂಘಗಳು ಮತ್ತು ಕ್ರೈಸ್ಥ ಸಮಾಜಗಳು (ಖಾಸಗಿ ಸಂಘಗಳು), ಅನುಕಂಪದ ಆಧಾರದ ಮೇಲೆ ಸಮಾಜಸೇವಾ ಕೆಲಸಗಳನ್ನು ಮಾಡಿಕೊಂಡು ಬಂದಿವೆ. ಬಡವರಿಗೆ ರೋಗದಿಂದ ಬಳಲುತ್ತಿದ್ದವರಿಗೆ, ನಿರ್ಗತಿಕರಿಗೆ, ಅನಾಥ ಮಕ್ಕಳಿಗೆ ಅವರ ಕಷ್ಟಕಾಲದಲ್ಲಿ ನೆರವನ್ನು, ಆಹಾರ, ಬಟ್ಟೆಗಳನ್ನು ಒದಗಿಸಿವೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ, ಆಳುವವರು ಅನಿವಾರ್ಯವಾಗಿ ಮಧ್ಯಸ್ಥಿಕೆ ವಹಿಸಬೇಕಾಯಿತು. ಆ ಕಷ್ಟದ ಕಾಲಘಟ್ಟದಲ್ಲಿ ಸರಕಾರದವರು ಹಸ್ತಕ್ಷೇಪ ಮಾಡಲು, ಡಾ.ರಮೇಶ ಎಂ. ಸೋನಕಾಂಬಳೆಯವರು ಈ ಕೆಳಗಿನ ಮೂರು ಕಾರಣಗಳನ್ನು ಗುರುತಿಸಿದ್ದಾರೆ.2
ಕಾರ್ಮಿಕ ಶಾಸನ 1343 ಪ್ಲೇಗ್ ಹಾವಳಿಯಿಂದ ಬಹುಸಂಖ್ಯೆ ಕಾರ್ಮಿಕರು ಮರಣವನ್ನಪ್ಪಿದರು. ಅದರ ಫಲಶೃತಿಯಾಗಿ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಲು ಕಾರ್ಮಿಕರ ಕೊರತೆಯಿತ್ತು. ಹಾಗಾಗಿ ಪ್ರತಿಯೊಬ್ಬ ಸದೃಢ ಮನುಷ್ಯ ಮಾಲೀಕರ ಹತ್ತಿರ ಕೆಲಸ ಮಾಡುವುದು ಕಡ್ಡಾಯ ಎಂಬ ಶಾಸನವನ್ನು ಜಾರಿಗೊಳಿಸಲಾಯಿತು. ಸದೃಢ ವ್ಯಕ್ತಿಗೆ ಯಾರು ಭಿಕ್ಷೆ ಹಾಕಬಾರದೆಂದು ಕಟ್ಟಾಜ್ಞೆ ಮಾಡಲಾಯಿತು. ಹಾಗೆಯೇ ಕಾರ್ಮಿಕರ ಸ್ವೇಚ್ಛಾಚಾರವನ್ನು ಹತ್ತಿಕ್ಕಲಾಯಿತು. ಗ್ರಾಮೀಣ ಪ್ರದೇಶದ ಕಾರ್ಮಿಕರು, ಪಟ್ಟಣ, ನಗರ ಪ್ರದೇಶಗಳಿಗೆ ಕೆಲಸಕ್ಕಾಗಿ ವಲಸೆ ಹೋಗುವುದನ್ನು ತಡೆಯಲಾಯಿತು. ಆ ಕಾರ್ಮಿಕರು ಗ್ರಾಮೀಣ ಪ್ರದೇಶಗಳಲ್ಲೇ ಉಳಿಯಬೇಕು ಮತ್ತು ಕಡ್ಡಾಯವಾಗಿ ಕೆಲಸ ಮಾಡಬೇಕು ಎಂಬ ಅಂಶವನ್ನು ಶಾಸನದಲ್ಲಿ ಸೇರಿಸಲಾಯಿತು. ಶಾಸನವನ್ನು ಉಲ್ಲಂಘಿಸಿದವರಿಗೆ ಕಠಿಣ ಶಿಕ್ಷೆಯನ್ನು ವಿಧಿಸಲು ಕಾನೂನಿನಲ್ಲಿ ಅವಕಾಶ ಮಾಡಿಕೊಡಲಾಯಿತು. ಬಡತನದ ಪರಿಹಾರ ಶಾಸನ 1531:- ಸಮಾಜಸೇವಾ ಚಟುವಟಿಕೆಗಳಲ್ಲಿ ಬ್ರಿಟಿಷ್ ಅರಸರು ಆಸಕ್ತಿ ತೋರಿಸಿದರು. ಎಂಟನೇ ಹೆನ್ರಿಯ ಆಡಳಿತಾವಧಿಯಲ್ಲಿ ಅನೇಕ ಉಪಯುಕ್ತ ಕ್ರಮಗಳನ್ನು ಕೈಕೊಂಡು ಪರಿಸ್ಥಿತಿಯನ್ನು ನಿಭಾಯಿಸಲಾಯಿತು. ಇದು ಮುಂದಿನ ಬಡತನದ ಪರಿಹಾರ ಚಟುವಟಿಕೆಗಳಿಗೆ ಪ್ರೇರಣೆಯನ್ನು ಒದಗಿಸಿತು. ಈ ಸಮಯದಲ್ಲಿ ಸಾರ್ವಜನಿಕ ಪರಿಹಾರ ಯೋಜನೆಯನ್ನು ಜಾರಿಗೊಳಿಸಲಾಯಿತು. ಈ ಯೋಜನೆ ಅನೇಕ ಹೊಸ ಪದ್ಧತಿಗಳನ್ನು ಜಾರಿಗೊಳಿಸಲು ಅನುವು ಮಾಡಿಕೊಟ್ಟದ್ದು, ಭಿಕ್ಷುಕರ ನೋಂದಣಿಯನ್ನು ಕಡ್ಡಾಯಗೊಳಿಸಲಾಯಿತು. ಭಿಕ್ಷುಕರು ತಮ್ಮ ಚರ್ಚುಗಳ ಒಕ್ಕೂಟದ (ಪ್ಯಾರಿಷ್-ಪಾದ್ರಿಯ ಆಡಳಿತ ಪ್ರದೇಶ) ಮುಖ್ಯ ಕಾರ್ಯಾಲಯದಲ್ಲಿ ನೋಂದಾಯ ಮಾಡಿಸಿಕೊಳ್ಳಬೇಕು. ಈ ರೀತಿ ನೋಂದಾಯಿಸಿಕೊಳ್ಳಲು ಅವು ತಮ್ಮ ಪ್ಯಾರಿಷ್ ಪ್ರದೇಶದಲ್ಲಿ ಕನಿಷ್ಟ ಮೂರು ವರ್ಷ ಜೀವಿಸಿರಬೇಕು. ಪ್ಯಾರಿಷ್ ಮುಖ್ಯಸ್ಥರು ಮಾತ್ರ ಊನಶಕ್ತರನ್ನು, ದುರ್ಬಲರನ್ನು, ಭಿಕ್ಷುಕರನ್ನು ನೋಡಿಕೊಳ್ಳಬೇಕು. ಭಿಕ್ಷುಕರು ಸದೃಢವಾಗಿದ್ದರೆ ಅವರು ಕೆಲಸ ಮಾಡಬೇಕು. ಅದರಂತೆ ಸೋಮಾರಿ ವ್ಯಕ್ತಿಗಳನ್ನು ಹುಡುಕಿ ಅವರನ್ನು ಕೆಲಸಕ್ಕೆ ಹಚ್ಚಲಾಯಿತು. ಐದರಿಂದ ಹದಿನಾಲ್ಕು ವಯಸ್ಸಿನ ಮಕ್ಕಳಿಗೆ ಬೇರೆ ಬೇರೆ ಕೆಲಸಗಳನ್ನು ಮಾಡಲು ತರಬೇತಿ ಕೊಡಲಾಯಿತು. ಸಾಮಾನ್ಯ ತೆರಿಗೆ ಶಾಸನ (1572)ವನ್ನು ಜಾರಿಗೆ ತಂದು, ಅದರಿಂದ ಶೇಖರಣೆಗೊಂಡ ಹಣದಿಂದ ಕೆಲವು ಅವಶ್ಯವಿದ್ದ ಕಡೆಗಳಲ್ಲಿ ಪಟ್ಟಣ, ನಗರಗಳಲ್ಲಿ ಬಡತನ ಪರಿಹಾರದ ಕೆಲಸಗಳಿಗೆ, ಸೇವಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಯಿತು. ಅದರಂತೆಯೇ 1597ರಲ್ಲಿ ಮತ್ತೊಂದು ಕಾಯಿದೆಯನ್ನು ಜಾರಿಗೆ ತರಲಾಯಿತು. ಅದರನ್ವಯ ಹೊಲಬುಗೇಡಿಗಳಿಗೆ, ದುರ್ಬಲರಿಗೆ, ಅಶಕ್ತ ಬಡವರಿಗೆ ವೃದ್ಧರಿಗೆ, ಅಂಧರಿಗೆ ಮಾನಸಿಕವಾಗಿ ಅಸ್ವಸ್ಥತೆಯಿಂದ ಕೂಡಿದವರಿಗೆ ಹಾಗೂ ಕೆಲಸ ಮಾಡಲು ಅನರ್ಹರಾದವರಿಗೆ ವಸತಿ ಗೃಹಗಳನ್ನು ಪ್ರಾರಂಭಿಸಲಾಯಿತು. ಪ್ರಾರಂಭದ ಹಂತದಲ್ಲಿ ಅರಸರು ಇಂತಹ ಜನಹಿತ ಚಟುವಟಿಕೆಗಳಲ್ಲಿ ತಮ್ಮ ಸ್ವಯಂ ಸ್ಫೂರ್ತಿಯಿಂದ ತೊಡಗಿಸಿಕೊಳ್ಳಲಿಲ್ಲ. ಆದರೆ ಅಂದಿನ ಸಾಮಾಜಿಕ ಪರಿಸ್ಥಿತಿ ಅವರಿಂದ ಈ ಕೆಲಸವನ್ನು ಮಾಡಿಸಿತು. ಇದರ ಮುಖಾಂತರವಾಗಿ ಬ್ರಿಟಿಷ್ ಸರಕಾರ ಸೇವಾಕ್ಷೇತ್ರಕ್ಕೆ ತನ್ನನ್ನು ತೊಡಗಿಸಿಕೊಳ್ಳುವಂತಾಯಿತು. ರಾಣಿ ಎಲಿಜಿಬೆತ್ ಅವರ ಬಡವರ ಕಾನೂನು ಸಂಹಿತೆ 1601:- ಬ್ರಿಟನ್ನಿನ ನಿವಾಸಿಗಳ ಸಾರ್ವಜನಿಕ ಜೀವನದಲ್ಲಿ ರಾಣಿ ಎಲಿಜಿಬೆತ್ರವರ ಬಡವರ ಕಾನೂನು, 1601 ತುಂಬಾ ಮಹತ್ವವನ್ನು ಪಡೆದುಕೊಂಡಿದೆ. ಅಲ್ಲಿಯತನಕ ಜಾರಿಗೊಂಡಿದ್ದ ಶಾಸನಗಳ, ಯೋಜನೆಗಳ ಲೋಪದೋಷಗಳನ್ನು ಗುರುತಿಸಿ, ಅವುಗಳನ್ನು ಸರಿಪಡಿಸಿ, ಸಮಗ್ರವಾಗಿ ಶಾಸನವನ್ನು ರೂಪಿಸಿ, ಅದಕ್ಕೆ ರಾಣಿ ಎಲೆಜಿಬೆತ್ ಅವರ ಹೆಸರನ್ನಿಡಲಾಯಿತು. ಎಲ್ಲಾ ಬಡವರ ಹಾಗೂ ಸಾರ್ವಜನಿಕ ಪರಿಹಾರ ಕಾರ್ಯಗಳಿಗೆ ಈ ಕಾನೂನನ್ನು ಮೀಸಲಿಡಲಾಯಿತು. ಅದರ ಪ್ರಮುಖ ಅಂಶಗಳು ಹೀಗಿವೆ.
ದಾನ ಸಂಘಟನಾ ಸಮಾಜಗಳು (Charity Organisation Societies) ಬ್ರಿಟನ್ ದೇಶದ ಸಮಾಜಸೇವಾ ಚಟುವಟಿಕೆಗಳ ಸಂಕ್ಷಿಪ್ತ ಅವಲೋಕನವನ್ನು ಮೇಲೆ ಮಾಡಿದ್ದೇವೆ. ಇಂತಹ ಸಮಾಜ ಸೇವಾ ಚಟುವಟಿಕೆಗಳು ಪ್ರಾರಂಭದಲ್ಲಿ ಚರ್ಚುಗಳು ಮತ್ತು ಇತರೆ ಕ್ರೈಸ್ಥ ಸಂಘಗಳಿಂದ ಪ್ರಾರಂಭಗೊಂಡವು. ಆ ನಂತರ ಸಮಾಜ ಸೇವಾ ಕೆಲಸಗಳು ಮತ್ತು ಸ್ಪಲ್ಪಮಟ್ಟಿಗೆ ಸಂಯೋಜನೆಯ ಕೆಲಸಗಳು, ಕಾನೂನುಗಳ ಮೂಲಕ, ಅರಸರು ಮಾಡಿದ್ದಾರೆ. ಈ ಎಲ್ಲ ಚಟುವಟಿಕೆಗಳ ಪ್ರಭಾವ ಇಡೀ ಸಮಾಜದ ಮೇಲೆ ಸ್ವಲ್ಪಮಟ್ಟಿಗಾಯಿತು. ಸಾಮಾಜಿಕ ಪರಿಸ್ಥಿತಿ ನಿರೀಕ್ಷಿತ ಬದಲಾವಣೆಯನ್ನು ತರಲಿಲ್ಲ. ಬ್ರಿಟನ್ ಮತ್ತು ಅಮೇರಿಕ ದೇಶಗಳಲ್ಲಿ, ಹದಿನೆಂಟು ಮತ್ತು ಹತ್ತೊಂಬತ್ತನೇ ಶತಮಾನಗಳಲ್ಲಿ, ಸಮಾಜ ಕಡು ಬಡತನ ಮತ್ತು ಅದರಿಂದ ವ್ಯಕ್ತವಾಗುವ ನಿರುದ್ಯೋಗ, ದಿವಾಳಿತನ, ಭಿಕ್ಷಾಟನೆ, ವಲಸೆ, ಬಾಲಕಾರ್ಮಿಕರು, ಅಪರಾಧ, ಬಾಲಾಪರಾಧ ಮುಂತಾದ ಸಮಸ್ಯೆಗಳಿಂದ ತೀವ್ರ ಯಾತನೆಯನ್ನು ಅನುಭವಿಸಿರುವುದು ಚಾರಿತ್ರಿಕ ದಾಖಲೆಗಳಿಂದ ತಿಳಿದು ಬರುತ್ತದೆ.3 ಸಮಾಜದಲ್ಲಿ ಶಾಂತಿ ಇದ್ದಿಲ್ಲ. ಇದು ಸಮಾಜದ ಸ್ವಾಸ್ಥ್ಯವನ್ನೇ ಹಾಳು ಮಾಡಿತು. ಇಂತಹ ಸನ್ನಿವೇಶದಲ್ಲಿ ನಿರ್ಗತಿಕರಗೆ, ನಿರಾಶ್ರಿತರಿಗೆ ಪರಿಹಾರ ಮತ್ತು ಪುನರ್ವಸತಿ ತುಂಬಾ ತುರ್ತಾಗಿ ಬೇಕಾಗಿತ್ತು. ಚರ್ಚುಗಳು, ಕ್ರೈಸ್ತ ಸಂಘಗಳು, ಇನ್ನಿತರ ಸಂಸ್ಥೆಗಳು ಸೇವಾ ಸೌಲಭ್ಯಗಳನ್ನು, ಪುನರ್ವಸತಿ ಮನೆಗಳನ್ನು ಒದಗಿಸುತ್ತಿದ್ದವು. ಅವುಗಳ ಕಾರ್ಯ ಸಮರ್ಪಕವಾಗಿ ಆಗುತ್ತಿದ್ದಿಲ್ಲ. ಸೌಲಭ್ಯಗಳ ಪುನರಾವರ್ತನೆ ಆಗುತ್ತಿತ್ತು. ಕೆಲವು ಫಲಾನುಭವಿಗಳು ಮೋಸದಿಂದ ಒಂದಕ್ಕಿಂತ ಹೆಚ್ಚು ಮೂಲಗಳಿಂದ ಪರಿಹಾರವನ್ನು, ಸಹಾಯವನ್ನು ಪಡೆಯುತ್ತಿದ್ದರು. ಪರಿಹಾರವನ್ನು ಒದಗಿಸುವ ಸಂಘಸಂಸ್ಥೆಗಳಲ್ಲಿ ಅನುಚಿತ ಸ್ಪರ್ಧೆ ಏರ್ಪಡುತ್ತಿತ್ತು. ಅವರಲ್ಲಿ ಇರಬೇಕಾದ ಸಹಕಾರ ಮತ್ತು ಸಂಯೋಜನೆಗಳ ಕೊರತೆ ಎದ್ದು ಕಾಣುತ್ತಿತ್ತು. ಸಂಬಂಧಗಳು ಅರ್ಥಪೂರ್ಣವಾಗಿದ್ದಿಲ್ಲ. ಕೆಲವೊಮ್ಮೆ ಅವರಲ್ಲಿ ವಿರೋಧ ವ್ಯಕ್ತವಾಗುತ್ತಿತ್ತು. ಕೆಲವು ಸಂಘಗಳು ಧನಸಹಾಯವಿಲ್ಲದೆ ಕೊರಗುತ್ತಿದ್ದವು. ಕೆಲವು ಫಲಾನುಭವಿಗಳು ಹಾಗೂ ಕೆಲವು ಅನರ್ಹ ವ್ಯಕ್ತಿಗಳು ಈ ಅವಕಾಶಗಳನ್ನು ಉಪಯೋಗಿಸಿಕೊಂಡು ಒಂದೇ ಸಮಸ್ಯೆಗೆ ಬೇರೆ ಬೇರೆ ಕಡೆಯಿಂದ ಪರಿಹಾರ ಪಡೆಯುವಲ್ಲಿ ಯಶಸ್ವಿಯಾಗುತ್ತಿದ್ದರು. ಈ ಎಲ್ಲದರ ಹಿನ್ನೆಲೆಯಲ್ಲಿ ಒಂದು ಒಳ್ಳೆಯ ವ್ಯವಸ್ಥೆಯ, ಒಂದು ಉತ್ತಮ ಸಂಯೋಜನೆಯ ಅವಶ್ಯಕತೆಯನ್ನು ಮನಗಾಣಲಾಯಿತು. ಈ ಹಿನ್ನೆಲೆಯಲ್ಲಿ ಅನೇಕ ನಾಗರೀಕ ಪಜ್ಞೆಯಿರುವ ವ್ಯಕ್ತಿಗಳು, ದಾನಶೀಲರು, ಸಮಾಜದ ಹಿತೈಷಿಗಳು ಹಾಗೂ ಚರ್ಚು, ಕ್ರೈಸ್ತ ಸಂಘ, ಇತರ ಸಂಘಗಳ ಪ್ರತಿನಿಧಿಗಳು ಒಂದುಗೂಡಿ, 1869ರಲ್ಲಿ ಲಂಡನ್ನಿನಲ್ಲಿ ಸಭೆ ಸೇರಿ, ತಮ್ಮ ಸಮಸ್ಯೆಗಳನ್ನು ವಿವರವಾಗಿ ಚರ್ಚಿಸಿದರು. ಎಲ್ಲಾ ಸಮಾಜ ಸೇವಾ-ಸಮಾಜಕಾರ್ಯ ಚಟುವಟಿಕೆಗಳನ್ನು ಸಂಯೋಜಿಸುವ ಸಲುವಾಗಿ ದಾನ ಸಂಘಟನಾ ಸಮಾಜ (Charity Organisation Society) ಎಂಬ ಸಂಸ್ಥೆಯನ್ನು ಪ್ರಾರಂಭಿಸಿದರು. ಇಂತಹುದೇ ಸಂಸ್ಥೆ ಅಮೇರಿಕದಲ್ಲಿ 1877ರಲ್ಲಿ ಪ್ರಾರಂಭವಾಯಿತು. ಪ್ರಾರಂಭದ ಹಂತದಲ್ಲಿಯೇ ಈ ಸಂಸ್ಥೆ ತನ್ನ ಉದ್ದೇಶಗಳನ್ನು ಹಾಗೂ ಕಾರ್ಯವೈಖರಿಯನ್ನು ನಿರ್ಣಯಿಸಿಕೊಂಡಿತು.
ಬೆವರಿಡ್ಜ್ ವರದಿ 1941 ಎರಡನೇ ಜಾಗತಿಕ ಸಮರ, ಎಲ್ಲಾ ದೇಶಗಳಲ್ಲಿ ಭೀತಿಯನ್ನು ತಂದಂತೆ ಬ್ರಿಟನ್ನಿನಲ್ಲಿಯೂ ಅತಂಕವನ್ನು ಸೃಷ್ಟಿಸಿತ್ತು, ಅಷ್ಟೊತ್ತಿಗೆ ಲಂಡನ್ ನಗರದ ಮೇಲೆ ಬಾಂಬುಗಳು ಬಿದ್ದು ಸಾಕಷ್ಟು ಹಾನಿಯಾಗಿತ್ತು. ಜನರು ಗಾಬರಿಯಿಂದಿದ್ದರು. ಎಲ್ಲಿ ನೋಡಿದರೂ ಜನರು ಯುದ್ಧದ ಬಗ್ಗೆಯೇ ಮಾತನಾಡುತ್ತಿದ್ದರು. ಯುದ್ಧಕ್ಕೆ ಸಂಬಂಧಪಟ್ಟ ಚಟುವಟಿಕೆಗಳು, ತರಬೇತಿಗಳು ಅವ್ಯಾಹತವಾಗಿ ನಡೆದಿತ್ತು. ಇಂತಹ ಸಂದಿಗ್ಧ ಕಾಲಘಟ್ಟದಲ್ಲಿ ಸಾಮಾಜಿಕ ಸೇವೆಗಳ ದಕ್ಷ ವ್ಯವಸ್ಥೆಯನ್ನು, ಸಮರ್ಥ ಸಾಮಾಜಿಕ ಭದ್ರತೆಯನ್ನು ಒದಗಿಸುವುದು ತುಂಬಾ ತುರ್ತಾಗಿ ಆಗಬೇಕಾದ ಕೆಲಸವಾಗಿತ್ತು. ಅದಕ್ಕಾಗಿ ಬ್ರಿಟನ್ ಸಂಸತ್ತು ಲಾರ್ಡ್ ವಿಲಿಯಂ ಬೆವರಿಡ್ಜ್ ಅವರ ನಾಯಕತ್ವದಲ್ಲಿ ಒಂದು ಸಮಿತಿಯನ್ನು ನೇಮಕ ಮಾಡಿತು. ಸಾಮಾಜಿಕ ವಿಮೆ ಮತ್ತು ಇತರ ಸೇವೆಗಳ ಬಗ್ಗೆ ಅಭ್ಯಾಸ ಮಾಡಿ ಒಂದು ವರದಿಯನ್ನು ಕೊಡಲು ಅದಕ್ಕೆ ಸೂಚಿಸಲಾಯಿತು. ಲಾರ್ಡ್ ಬೆವರಿಡ್ಜ್ ಅವರ ಸಮಿತಿ ಸುದೀರ್ಘ ಅಧ್ಯಯನ ಮಾಡಿ 1941ರಲ್ಲಿ ವರದಿಯನ್ನು ಸಲ್ಲಿಸಿತು. ಸಮಿತಿಯು ಅನೇಕ ವ್ಯವಸ್ಥಿತ ಯೋಜನೆಗಳನ್ನು ಶಿಫಾರಸ್ಸು ಮಾಡಿತು. ಅವು ಜಾರಿಗೊಳಿಸಲು ಯೋಗ್ಯವೂ ಆಗಿದ್ದವು. ಸಾಮಾಜಿಕ ಸೇವೆ, ಸಾಮಾಜಿಕ ವಿಮೆ ಹಾಗೂ ಸಾಮಾಜಿಕ ಭದ್ರತಾ ಕಾರ್ಯಕ್ರಮಗಳಿಗೆ ಇದು ಹೊಸ ಅಡಿಪಾಯ ಹಾಕಿಕೊಟ್ಟಿತು. ಈ ವರದಿಯು ಕೇವಲ ಬ್ರಿಟನ್ ದೇಶಕ್ಕೆ ಅಲ್ಲ, ವಿಶ್ವದ ಎಲ್ಲಾ ರಾಷ್ಟ್ರಗಳಿಗೆ ಒಂದು ಮಾದರಿಯಾಗಿತ್ತು.4 ಲಾರ್ಡ್ ಬೆವರಿಡ್ಜ್ ವರದಿಯು ಐದು ಕಾರ್ಯಕ್ರಮಗಳನ್ನು ಶಿಫಾರಸ್ಸು ಮಾಡಿತು.
ಆಧುನಿಕ ಸಾಮಾಜಿಕ ಭದ್ರತಾ ಕಾರ್ಯಕ್ರಮಗಳು ಬ್ರಿಟನ್ ದೇಶದಲ್ಲಿ ಲಾರ್ಡ್ ಬೆವರಿಡ್ಜ್ ವರದಿಯು ಸಮಾಜದಲ್ಲಿ ಅನೇಕ ಮಹತ್ತರ ಬದಲಾವಣೆಗಳನ್ನು ತರಲು ನೆರವಾಯಿತು. ಸದರಿ ವರದಿಯ ಆಧಾರದ ಮೇಲೆ ಅನೇಕ ಹೊಸ ಶಾಸನಗಳು ರೂಪಿತಗೊಂಡವು. ಅವುಗಳನ್ನು ಅನುಸರಿಸಿ ಹತ್ತಾರು ಯೋಜನೆಗಳು, ಕಾರ್ಯಕ್ರಮಗಳು ರೂಪುಗೊಂಡು, ಅನುಷ್ಠಾನಕ್ಕೆ ಬಂದವು. ಬ್ರಿಟನ್ ಸಮಾಜದಲ್ಲಿ ಸಾಮಾಜಿಕ ಭದ್ರತೆಯ ಹೊಸಯುಗ ಪ್ರಾರಂಭವಾಯಿತು. ಇದೇ ಸಮಯದಲ್ಲಿ ರಾಷ್ಟ್ರೀಯ ಸಾರ್ವಜನಿಕ ನೆರವು ಮಂಡಳಿಯನ್ನು ಸ್ಥಾಪಿಸಲಾಯಿತು. ಆಧುನಿಕ ಸಾಮಾಜಿಕ ಭದ್ರತಾ ಯೋಜನೆಯಲ್ಲಿ ನಾಲ್ಕು ಪ್ರಮುಖ ಕಾರ್ಯಕ್ರಮಗಳನ್ನು ರೂಪಿಸಲಾಯಿತು.
ಬ್ರಿಟನ್ ದೇಶದ ಆಧುನಿಕ ಸಮುದಾಯ ಸಂಘಟನೆಯ ಪರಂಪರೆ ಬ್ರಿಟನ್ ದೇಶದಲ್ಲಿ ಸಾಂಪ್ರದಾಯಿಕ ಸಮಾಜಕಾರ್ಯ ಸಮುದಾಯ ಸಂಘಟನೆಯ ಇತಿಹಾಸವನ್ನು ಮೇಲೆ ನೋಡಿದ್ದೇವೆ. ಸಮುದಾಯ ಸಂಘಟನೆಯ ಪ್ರಕ್ರಿಯೆ ಬಡವರಿಗೆ, ದುರ್ಬಲರಿಗೆ, ನಿರ್ಗತಿಕರಿಗೆ, ಮಕ್ಕಳಿಗೆ, ರೋಗಿಗಳಿಗೆ ಹಾಗೂ ಇತರೆ ಅರ್ಹ ವ್ಯಕ್ತಿಗಳಿಗೆ ನೆರವು ಕೊಡುವುದರ ಮೂಲಕ ಪ್ರಾರಂಭಗೊಂಡಿದೆ. ಹಾಗೆ ಕೊಡುವ ದಾನ ಹಾಗೂ ಪುನರ್ವಸತಿ ಚಟುವಟಿಕೆಗಳು ನಕಲಿ ಆಗಬಾರದೆಂದು ದಾನ ಸಂಸ್ಥೆಗಳು ಒಗ್ಗೂಡಿವೆ. ಈ ಕ್ಷೇತ್ರದಲ್ಲಿ ಕೆಲಸ ಮಾಡುವವರು ದಿನಕಳೆದಂತೆ ತಮ್ಮ ಕಾರ್ಯವಿಧಾನದಲ್ಲಿ ಕೌಶಲ್ಯವನ್ನು ಮೆರೆದಿದ್ದಾರೆ. ಆನಂತರದ ದಿನಗಳಲ್ಲಿ ಅದೇ ವೃತ್ತಿ ಕೌಶಲ್ಯಕ್ಕೆ ಅನುವು ಮಾಡಿಕೊಟ್ಟಿದೆ. ಇದೇ ವೃತ್ಯಾತ್ಮಕ ಸಮುದಾಯ ಸಂಘಟನೆ ಬೆಳೆಯಲು ಕಾರಣವಾಗಿದೆ. ಇಡೀ ಪ್ರಕ್ರಿಯೆಯಲ್ಲಿ, ಸಂಘಟಕರ ಮನೋಭೂಮಿಕೆಯಲ್ಲಿ ಆಧುನಿಕತೆ ಅಂಕುರಿಸಿದೆ. ಬಾಲ್ಡಾಕ್ (1974) ಅವರು ಬ್ರಿಟನ್ನಿನ ಆಧುನಿಕ ಸಮುದಾಯ ಸಂಘಟನೆಯ ಪರಂಪರೆಯಲ್ಲಿ ನಾಲ್ಕು ಹಂತಗಳನ್ನು ಗುರುತಿಸಿದ್ದಾರೆ.7 ಮೊದಲನೆಯ ಹಂತ 1880-1920. ಬ್ರಿಟನ್ನಿನಲ್ಲಿ ಹದಿನೆಂಟು ಮತ್ತು ಹತ್ತೊಂಬತ್ತನೇ ಶತಮಾನದಲ್ಲಿ ಕೈಗಾರಿಕಾ ಸಮುದಾಯಗಳು ರೂಪುಗೊಳ್ಳುತ್ತಿದ್ದವು. ಇಂತಹ ಸಮಾಜೊ-ಆರ್ಥಿಕ ಬದಲಾವಣೆಗೆ ಹೊಂದಿಕೊಳ್ಳುವುದು ಜನ ಸಾಮಾನ್ಯರಿಗೆ ಅವಶ್ಯವಾಗಿತ್ತು. ಹೀಗೆ ಹೊಂದಿಕೊಳ್ಳುವ ಪ್ರಕ್ರಿಯೆ ಸುಗಮವಾಗಿ ಸಾಗಲು ಅರ್ಹ ವ್ಯಕ್ತಿಗಳಿಗೆ ಸಹಾಯ ಮಾಡುವುದು ಮತ್ತು ಅವರ ಬದಲಾವಣೆಯನ್ನು ಒಪ್ಪಿಕೊಳ್ಳುವಂತೆ ತಯಾರು ಮಾಡುವುದು ಸಮುದಾಯ ಸಂಘಟನೆ ಎಂದೆನಿಸಿಕೊಂಡಿತು. ಈ ಚಟುವಟಿಕೆಗಳಲ್ಲಿ ಸ್ವಯಂ ಸಹಾಯಕ್ಕೆ ಹೆಚ್ಚಿನ ಆದ್ಯತೆಯನ್ನು ಕೊಡಲಾಯಿತು. ಹಾಗಾಗಿ ಖಾಸಗಿ ಸಂಘಸಂಸ್ಥೆಗಳಿಂದ ಪರಿಹಾರಕಾರ್ಯ ಹಮ್ಮಿಕೊಳ್ಳುವುದು ಹೆಚ್ಚಾಯಿತು. ಮಾನವೀಯತೆಯ ಆಧಾರದ ಮೇಲೆ ತಮ್ಮ ಜೊತೆಗೆ ಜೀವಿಸುತ್ತಿರುವರ ಕಷ್ಟಕಾರ್ಪಣ್ಯಗಳನ್ನು ಬಗೆಹರಿಸಲು ಅನೇಕರು ಸ್ವಯಂಪ್ರೇರಣೆಯಿಂದ ಮುಂದೆ ಬಂದು ಸಹಾಯ ಮಾಡಿದರು. ಪರಿಣಾಮವಾಗಿ ಸ್ವಯಂಸೇವಾ ಸಂಘಗಳ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ದೊರೆಯಿತು. ಇದರಿಂದ ಸಾರ್ವಜನಿಕ ದಾನ ಪ್ರಕ್ರಿಯೆ ಕಡಿಮೆಯಾಯಿತು. ಸಮುದಾಯ ಸಂಘಟನಾ ಚಟುವಟಿಕೆಗಳನ್ನು ಸಮಾಜಕಾರ್ಯದ ಒಂದು ವಿಧಾನ ಎಂದು ಪರಿಗಣಿಸಲಾಯಿತು. ಎರಡನೇ ಹಂತ 1920-1950 ಈ ಹಂತದಲ್ಲಿ ವೃತ್ತಿಕೌಶಲ್ಯಕ್ಕೆ ಹೆಚ್ಚು ಪ್ರಾಶಸ್ತ್ಯವನ್ನು ನೀಡಲಾಯಿತು ಹಾಗೂ ಇಂತಹ ವೃತ್ತಿಕೌಶಲ್ಯವನ್ನು ಅಳವಡಿಸಿಕೊಳ್ಳಲು ಕಾರ್ಯಕ್ಷೇತ್ರವನ್ನು ಗುರುತಿಸುವಲ್ಲಿ ಕಳಕಳಿಯನ್ನು ತೋರಲಾಯಿತು. ಕೇಂದ್ರ ಸರ್ಕಾರಗಳು ಹಾಗೂ ಸ್ಥಳೀಯ ಸರಕಾರಗಳು ನಗರಾಭಿವೃದ್ಧಿಯ ಉದ್ದೇಶಕ್ಕೆ ಸಮುದಾಯಗಳನ್ನು ಒಗ್ಗೂಡಿಸಿದವು. ಸಮುದಾಯಗಳನ್ನು, ನೆರೆಹೊರೆಗಳನ್ನು ಸ್ವ ಸಹಾಯಕ್ಕೆ ಹುರಿದುಂಬಿಸುವುದು ಹಾಗೂ ಸಮುದಾಯದ ಸದಸ್ಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವುದು ಉದ್ದೇಶವಾಗಿತ್ತು. ಸಮುದಾಯ ಸಂಘಟಕರ ಉದ್ದೇಶ ಸ್ಥಿರವಾಗಿತ್ತು ಮತ್ತು ಕಡಿಮೆ ಸ್ಥರ ವಿನ್ಯಾಸವಿರುವ ಸಮುದಾಯಗಳನ್ನು ಸೃಷ್ಟಿಸುವಲ್ಲಿ ಕಾರ್ಯಕರ್ತನ ಗಮನ ಹರಿದಿತ್ತು. ಮೂರನೇ ಹಂತ (1950 ರ ನಂತರ) ಈ ಕಾಲಘಟ್ಟದಲ್ಲಾದ ಪ್ರಮುಖ ಚಟುವಟಿಕೆಯೆಂದರೆ, ಸಮಾಜಕಾರ್ಯ, ಸಮುದಾಯ ಸಂಘಟನೆ ಕ್ಷೇತ್ರಗಳಲ್ಲಿ ಅಲ್ಲಿಯವರೆಗೆ ಮಾಡಿದ ಕೆಲಸಗಳ, ಪದ್ಧತಿಗಳ ಅತ್ಮಾವಲೋಕನ ಮತ್ತು ಸಿದ್ಧಾಂತ, ಪದ್ಧತಿ, ಕಾರ್ಯವೈಖರಿಗಳ ಪುನರ್ವ್ಯಾಖ್ಯಾನ, ಸಮಾಜಕಾರ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ಪ್ರಶಿಕ್ಷಕರು, ಯೋಜಕರು ಮತ್ತು ಇತರೆ ವೃತ್ತಿನಿರತರು ಅಲ್ಲಿಯವರೆಗೆ ಅನುಷ್ಠಾನಗೊಂಡ ಯೋಜನೆಗಳ, ಕಾರ್ಯಕ್ರಮಗಳ ಹಾಗೂ ಇತರೆ ಚಟುವಟಿಕೆಗಳ ಲೋಪದೋಷಗಳನ್ನು ಕಂಡುಹಿಡಿಯಲು ಪ್ರಯತ್ನಿಸಿ, ಸಫಲರಾದರು. ಇದರಿಂದ ತಮ್ಮ ಸಿದ್ಧಾಂತ, ಪದ್ಧತಿ, ಯೋಜನೆಗಳು ಹಾಗೂ ಕಾರ್ಯವೈಖರಿಯನ್ನು ಸೂಕ್ತವಾಗಿ ಬದಲಾಯಿಸಿಕೊಳ್ಳಲು ಸಹಾಯವಾಯಿತು. ಸ್ವಸಹಾಯದ ಬಗ್ಗೆ ಹೆಚ್ಚು ತಿಳುವಳಿಕೆಯನ್ನು ಕೊಡಲಾಯಿತು. ಇದರಿಂದ ಜನಪರ ಕಾರ್ಯಕ್ರಮಗಳಲ್ಲಿ ಹೆಚ್ಚೆಚ್ಚು ಜನ ಭಾಗವಹಿಸುವಂತಾಯಿತು. ವೃತ್ಯಾತ್ಮಕ ಚಟುವಟಿಕೆಗಳಿಗೆ ಹೆಚ್ಚು ಆದ್ಯತೆಯನ್ನು ಕೊಡುವುದು ಕಂಡುಬಂದಿತು. ಸಮುದಾಯ ಸಂಘಟನಾ ಕಾರ್ಯಗಳಿಗೆ ಒಂದು ವೃತ್ಯಾತ್ಮಕ ಅಸ್ಮಿತೆ (Identity)ಯನ್ನು ಗುರುತಿಸುವುದು ಸಾಧ್ಯವಾಯಿತು. ಸಮುದಾಯ ಸಂಘಟನೆಯ ಈ ಅಸ್ಮಿತೆ ಸಮಾಜಕಾರ್ಯ ಕ್ಷೇತ್ರದಲ್ಲಿ ಮತ್ತು ಪ್ರತ್ಯೇಕವಾಗಿಯೂ ಗುರುತಿಸುವಂತಾಯಿತು. ಇದೇ ಸಮಯದಲ್ಲಿ ಸಮಾಜಕಾರ್ಯಕರ್ತರ ಸಂಖ್ಯೆಯೂ ಗಣನೀಯವಾಗಿ ಹೆಚ್ಚಿತು. ದಾನ ಸಂಸ್ಥೆಗಳ ಮತ್ತು ಫಲಾನುಭವಿಗಳ ಗುಂಪುಗಳ ಮಧ್ಯೆ ಸಂಪರ್ಕ, ಸಹಕಾರ ಹೆಚ್ಚಾಯಿತು. ಇದು ಸಂಪನ್ಮೂಲಗಳ ಕ್ರೋಢೀಕರಣ ಚಟುವಟಿಕೆಗಳ ವ್ಯವಸ್ಥೆ ಮುಂತಾದ ಕೆಲಸಗಳನ್ನು ನಿರ್ವಹಿಸಲು ಸಹಾಯವಾಯಿತು. ಈ ಹಂತದಲ್ಲಿ ಸೀಬೋಹ್ಮ್ ವರದಿ ಮತ್ತು ಗುಲ್ಬೆಂಕಿಯನ್ ವರದಿಗಳು ಮಂಡನೆಯಾದವು. ಸಮುದಾಯ ಕಾರ್ಯದ ಪರಿಕಲ್ಪನೆ ಮತ್ತು ವ್ಯಾಪ್ತಿಯನ್ನು ಈ ವರದಿಗಳು ಪುನರ್ವ್ಯಾಖ್ಯಾನಿಸಿದವು. ಸಮುದಾಯ ಸಂಘಟನೆಗೆ ಸಮುದಾಯ ಕಾರ್ಯ ಎಂಬ ಪದಗುಚ್ಚವನ್ನು ಹೆಚ್ಚು ಬಳಕೆಗೆ ತರಲು ಗುಲ್ಬೆಂಕಿಯನ್ ವರದಿ ಕಾರಣವಾಯಿತು. ಆನಂತರ ಸಮುದಾಯ ಕಾರ್ಯ ಎಂಬ ಪದಗುಚ್ಚವೇ ಹೆಚ್ಚು ಬಳಕೆಯಾಯಿತು. ಸೀಬೋಹ್ಮ್ ವರದಿ ಸಮಾಜಸೇವಾ ಪ್ರಕ್ರಿಯೆಯಲ್ಲಿನ ಕೆಲವು ಉತ್ತಮ ಲಕ್ಷಣಗಳನ್ನು ಗುರುತಿಸಿತು. ಯಾವುದೇ ಒಂದು ಸಮುದಾಯದಲ್ಲಿ ಹೆಚ್ಚಾದ ಅಪರಾಧಗಳು, ಮಕ್ಕಳಿಗೆ ಅವಕಾಶಗಳ ವಂಚನೆ, ಮಾನಸಿಕ ಅಸ್ವಸ್ಥತೆ ಹಾಗೂ ಇನ್ನಿತರ ಸಾಮಾಜಿಕ ಸ್ವಾಸ್ಥ್ಯವನ್ನು ಕೆಡಿಸುವ ಚಟುವಟಿಕೆಗಳು ಹೆಚ್ಚಾಗಿದ್ದು, ಅಂತಹ ಸಮುದಾಯಗಳಲ್ಲಿ ಸ್ವಯಂ ಪ್ರೇರಣೆಯಿಂದ ಸಮಾಜ ಸೇವೆಯನ್ನು ಮಾಡಬೇಕೆಂದರೆ ಈ ಕೆಳಗಿನ ಅಂಶಗಳ ಕಡೆಗೆ ಹೆಚ್ಚಿನ ಗಮನವನ್ನು ಹರಿಸಬೇಕು.
ನಾಲ್ಕನೆಯ ಹಂತ ನಾಲ್ಕನೆಯ ಹಂತದಲ್ಲಿ ಸಮುದಾಯಕಾರ್ಯ ಚಟುವಟಿಕೆಗಳು, ವೃತ್ಯಾತ್ಮಕತೆಯಿಂದ ಕ್ರಿಯಾಸಿದ್ಧಾಂತಕ್ಕೆ (From Professionalism to Activism) ಕ್ರಾಂತಿಕಾರಿ ಬದಲಾವಣೆಗಳು ಆದವು. ಸಮಸ್ಯೆಗಳ ಬಗ್ಗೆ ಕಳಕಳಿ ಹೆಚ್ಚಾಗಿ, ಅದಕ್ಕೆ ತಕ್ಕಂತೆ ಕೆಲಸಗಳು ಬದಲಿಯಾದವು. ಸಾಮುದಾಯಿಕ ಕಾರ್ಯಾಚರಣೆ ಪರಿಕಲ್ಪನೆ ಹೆಚ್ಚು ಪ್ರಸಿದ್ಧಿಗೆ ಬಂದಿತು. ಇದು ಮುಂದೆ ಕ್ರಿಯಾತ್ಮಕ ಸಾಮಾಜಿಕ ಆಂದೋಲನಕ್ಕೆ ದಾರಿಮಾಡಿಕೊಟ್ಟಿತು. ಆಡಳಿತ ವರ್ಗದವರೊಡನೆ ಭಿನ್ನಾಭಿಪ್ರಾಯ, ಚರ್ಚೆ, ಸಾಮಾಜಿಕ ಕ್ರಿಯೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ ಬಂದಿತು. ಕ್ರಿಯಾಸಿದ್ಧಾಂತದ ಪದ್ಧತಿಗಳು ಹೆಚ್ಚಿಗೆ ಪ್ರಸಿದ್ಧಿಗೆ ಬಂದವು. ಸಮುದಾಯ ಕಾರ್ಯವನ್ನು ಕ್ರಾಂತಿಕಾರಿ ಸಾಮಾಜಿಕ ಆಂದೋಲನವನ್ನಾಗಿ ನೋಡಲಾಯಿತು. ಬ್ರಿಟನ್ನಿನಲ್ಲಿ ಸಮುದಾಯ ಅಭಿವೃದ್ಧಿ ಯೋಜನೆಗಳು ನಗರ ಪ್ರದೇಶಗಳಲ್ಲಿನ ಅವಕಾಶಗಳಿಂದ ವಂಚಿತರಾದ ಜನರ ಪ್ರಗತಿಗಾಗಿ, ಬ್ರಿಟನ್ನಿನಲ್ಲಿ ಒಟ್ಟಾರೆಯಾಗಿ ಹನ್ನೆರಡು ಸಮುದಾಯ ಸಂಘಟನಾ ಯೋಜನೆಗಳನ್ನು ಜಾರಿಗೊಳಿಸಲಾಯಿತು. ಈ ಯೋಜನೆಗಳು ಬೇರೆ ಬೇರೆ ನಗರ ಪ್ರದೇಶಗಳಲ್ಲಿ 1969-1978ರ ಮಧ್ಯೆ ಜಾರಿಗೊಂಡವು. ಬ್ರಿಟನ್ನಿನ ಕೇಂದ್ರ ಸರಕಾರ ಮತ್ತು ಸ್ಥಳೀಯ ಸರಕಾರಗಳು ಒಟ್ಟಾಗಿ ಸೇರಿ ಈ ಯೋಜನೆಗಳನ್ನು ಜಾರಿಗೆ ತಂದವು. ಈ ಯೋಜನೆಗಳ ಅನುಷ್ಠಾನಾಧಿಕಾರಿಗಳು ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ಕಾರ್ಯ ತಂತ್ರಗಳನ್ನು ಅಳವಡಿಸಿಕೊಂಡರು. ಬೇರೆ ಬೇರೆ ಕಾರ್ಯವೈಖರಿಯನ್ನು ಒಪ್ಪಿಕೊಂಡರು. ಸಮಸ್ಯೆಗಳನ್ನು ಬಗೆಹರಿಸುವಾಗ ಸಾಮಾಜಿಕ ಬದಲಾವಣೆಗೆ ಸಂವಾದ ನಮೂನೆ (Dialogue Model)ಯನ್ನು ಅಂಗೀಕರಿಸಿದರು ಮತ್ತು ತಮ್ಮನ್ನು ಸ್ಥಳೀಯ ಅಂಶಗಳಿಗೆ ಸೀಮಿತಗೊಳಿಸಿಕೊಂಡರು. ಆದರೆ ಈ ರೀತಿ ಕಾರ್ಯರೂಪಗೊಂಡ ಯೋಜನೆಯ ಪ್ರತಿಕ್ರಿಯೆ ಇಡೀ ಯೋಜನೆಯ ಮೇಲೆ ಪ್ರಭಾವ ಬೀರುವಂತಾಯಿತು. ಹಾಗಾಗಿ ಅವರು ತಮ್ಮ ಕಾರ್ಯವೈಖರಿಯನ್ನೇ ಬದಲಾಯಿಸಿಕೊಂಡರು. ಸಂವಾದ ನಮೂನೆ ಬದಲು ಅವರು ಸಂಘರ್ಷ ನಮೂನೆಯೇ ಸೇವೆಗಳನ್ನು ಒದಗಿಸಲು ಉತ್ತಮ ವಿಧಾನವಾಗಬಹುದೆಂದು ವಾದಿಸಿದರು. ಇನ್ನೊಂದು ಯೋಜನೆಯಲ್ಲಿ ಬೇರೆಯದೇ ಆದ ಕಾರ್ಯವೈಖರಿಯನ್ನು ಅಳವಡಿಸಿಕೊಂಡರು. ಈ ಯೋಜನೆಯ ಅಧಿಕಾರಿಗಳು ಸ್ಥಳೀಯ ಸಮುದಾಯದ ರಚನೆ ಮತ್ತು ಸಮಾಜೋ-ಆರ್ಥಿಕ ಬದಲಾವಣೆಗಳನ್ನು ತರುವುದರ ಮೂಲಕ ಆ ಯೋಜನಾ ಪ್ರದೇಶದಲ್ಲಿ ಹಲವು ಸಮಸ್ಯೆಗಳನ್ನು ಬಗೆಹರಿಸಬಹುದೆಂದು ನಂಬಿದರು. ಅದಕ್ಕಾಗಿ ಪ್ರಾದೇಶಿಕ ಸಮಸ್ಯೆಗಳ ಬಗ್ಗೆ ಗಮನಹರಿಸುತ್ತಾ ಬದುಕಿನ ಗುಣಮಟ್ಟವನ್ನು ಉತ್ತಮಪಡಿಸುವಲ್ಲಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದರು. ಆದರೆ ಇದರ ಪರಿಣಾಮ ರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಾಗಿ ಆಗಲಿಲ್ಲ. ಮತ್ತೊಂದು ಯೋಜನೆಯಲ್ಲಿ ವೈಯಕ್ತಿಕ ಸಮಸ್ಯೆಗಳಿಗೆ ಹೆಚ್ಚಿಗೆ ಮಹತ್ವ ಕೊಡದೆ, ಸಮಷ್ಟಿಹಿತವನ್ನು ಕಾಪಾಡುವಂತಹ ಕಾರ್ಯಕ್ರಮಗಳನ್ನು ಜಾರಿಗೊಳಿಸಿದರು. ಸಂಪನ್ಮೂಲಗಳ ಕ್ರೋಢೀಕರಣ ಪದ್ಧತಿಯಲ್ಲಿ ಬದಲಾವಣೆಗಳನ್ನು ತರುವಲ್ಲಿ ಪ್ರಯತ್ನಿಸಿದರು. ಈ ಯೋಜನೆ ಸಂಘರ್ಷ ವಿಧಾನವನ್ನು ಒಪ್ಪಿಕೊಳ್ಳಲಿಲ್ಲ. ಸಾಮಾಜಿಕ ಕಾರ್ಯಾಚರಣಾ (Social Action) ಪದ್ಧತಿ ಅಪಾಯಕಾರಿ ಎಂದು ಭಾವಿಸಲಾಯಿತು. ಹಾಗಾಗಿ ಲಭ್ಯವಿರುವ ಸಂಪನ್ಮೂಲಗಳ ಹಿನ್ನೆಲೆಯಲ್ಲಿ, ಸಾಮಾಜಿಕ ಬದಲಾವಣೆಯನ್ನು ತರುವಲ್ಲಿ ಪ್ರಯತ್ನಿಸಲಾಯಿತು. ಈ ಯೋಜನೆಯಲ್ಲಿ ಸಂಪನ್ಮೂಲ ಕ್ರೋಢೀಕರಣ ಪ್ರಕ್ರಿಯೆಯಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ತರಲಾಯಿತು. ಬೇರೆಯದೇ ಆದ ಇನ್ನೊಂದು ಯೋಜನೆಯಲ್ಲಿ ಸಮಸ್ಯೆಗಳು, ಅವುಗಳಿಗೆ ತಕ್ಕಂತೆ ಚರ್ಚೆ, ಮುಂತಾದ ಅಂಶಗಳ ಮೇಲೆ ಕೆಲಸ ಮಾಡಿದರೂ ಸಂಘರ್ಷ ಮಾದರಿಯನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಲಿಲ್ಲ. ಮಗದೊಂದು ಯೋಜನೆಯಲ್ಲಿ ಸಮಾಜದ ರಾಚನಿಕ ಅಂಶಗಳ ಕಡೆಗೆ ಗಮನ ಕೊಡುತ್ತಾ ಅಭಿವೃದ್ಧಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಯಿತು. ಈ ಯೋಜನೆಯಲ್ಲಿ ಸಾಮಾಜಿಕ ಯೋಜನಾ ವಿಧಾನವನ್ನು ಅಳವಡಿಸಿಕೊಳ್ಳಲಾಯಿತು. ಈ ಎಲ್ಲ ಯೋಜನೆಗಳ ಅನುಷ್ಠಾನ ಸಮುದಾಯ ಅಭಿವೃದ್ಧಿ ಕ್ಷೇತ್ರದಲ್ಲಿ ಮಹತ್ತರವಾದ ಪ್ರಭಾವವನ್ನು ಬೀರಲಿಲ್ಲ. ಆದರೆ ಈ ಯೋಜನೆಗಳಿಂದ ಸಮುದಾಯ ಸಂಘಟನೆ ಕ್ಷೇತ್ರದ ಬೇರೆ ಬೇರೆ ಕಾರ್ಯಕ್ಷೇತ್ರದಲ್ಲಿ ಕೆಲಸಗಳನ್ನು ಕೈಕೊಳ್ಳಬಹುದು ಎಂಬುದನ್ನು ತೋರಿಸಿಕೊಟ್ಟಿತು.8 ಅಮೇರಿಕದಲ್ಲಿ ಸಮುದಾಯ ಸಂಘಟನೆಯ ಪರಂಪರೆ ಅಮೇರಿಕಾ ದೇಶದಲ್ಲಿಯೂ, ಬ್ರಿಟನ್ನಿನಂತೆ, 17ನೇ ಶತಮಾನದಲ್ಲಿ ಸಮುದಾಯ ಸಂಘಟನೆಯ ಚಟುವಟಿಕೆಗಳು ನೇರವಾಗಿ ಪ್ರಾರಂಭಗೊಳ್ಳದಿದ್ದರೂ, ಪ್ರಾರಂಭದಲ್ಲಿ ಸಮಾಜ ಕಲ್ಯಾಣ ಚಟುವಟಿಕೆಗಳ ಹೆಸರಿನಲ್ಲಿ, ಬಡತನದ ಪರಿಹಾರ ಕಾರ್ಯಕ್ರಮಗಳ ಹೆಸರಿನಲ್ಲಿ ಸಮಾಜಸೇವಾ ಕೆಲಸಗಳು ಪ್ರಾರಂಭಗೊಂಡು, ನಿಧಾನವಾಗಿ ಅವು ವೃತ್ಯಾತ್ಮಕ ಚಟುವಟಿಕೆಗಳಾಗಿ ಮಾರ್ಪಟ್ಟವು. ಅಮೇರಿಕಾ ದೇಶವು ಬ್ರಿಟನ್ನಿನ ವಸಾಹತು ಪ್ರಾಂತ್ಯಗಳಲ್ಲಿ ಒಂದಾಗಿತ್ತು. ಹಾಗಾಗಿ ರೆ.ಎಸ್.ಹೆಚ್.ಗರ್ಟೀನ್, ಬ್ರಿಟಿಷ್ ಕ್ರೈಸ್ಥ ಪಾದ್ರಿ, ಅಮೇರಿಕಕ್ಕೆ ವರ್ಗಾವಣೆಗೊಂಡರು. ಇಸ್ವಿ 1877ರಲ್ಲಿ, ಬಫೆಲೊ ಪಟ್ಟಣದಲ್ಲಿ, ರೆ.ಗರ್ಟೀನ್ ನಾಯಕತ್ವದಲ್ಲಿ ದಾನ ಸಂಘಟನಾ ಸಂಘದ ಸಮಾಜಸೇವಾ ಚಟುವಟಿಕೆಗಳು ಪ್ರಾರಂಭಗೊಂಡವು.9 ಈ ಬಡತನ ಪರಿಹಾರ ಕೆಲಸಗಳೂ ಬ್ರಿಟನ್ ಮಾದರಿಗಳನ್ನೇ ಅನುಸರಿಸಿದವು. ವಿಧವೆಗಳಿಗೆ, ವೃದ್ಧರಿಗೆ, ನಿರ್ಗತಿಕ ಮಕ್ಕಳಿಗೆ, ರೋಗಿಗಳಿಗೆ ಹಾಗೂ ಇನ್ನುಳಿದ ಅರ್ಹ ವ್ಯಕ್ತಿಗಳಿಗೆ ತಮ್ಮ ಪರಿಹಾರ ಕೆಲಸಗಳ ಮುಖಾಂತರ ಸಹಾಯ ಮಾಡಿದರು. ಇಂತಹ ಕೆಲಸಗಳನ್ನು ಪ್ಯಾರಿಷ್, ದಾನ ಸಂಸ್ಥೆಗಳು, ಆಸ್ಪತ್ರೆಗಳು ಮುಂತಾದ ಸಂಘಗಳಿಂದ ಹಮ್ಮಿಕೊಳ್ಳಲಾಗಿತ್ತು. ಅಮೇರಿಕ ದೇಶದಲ್ಲಿ 1870ರ ನಂತರ ಪ್ರಾರಂಭಗೊಂಡ ಸಮಾಜಕಾರ್ಯ ಪರಂಪರೆಯನ್ನು ಈ ಕೆಳಕಂಡ ನಾಲ್ಕು ಭಾಗಗಳಾಗಿ ವಿಂಗಡಿಸುವುದು ವಾಡಿಕೆ. 1. ದಾನ ಸಂಘಟನಾ ಕಾಲವಧಿ (Charity Organisation Period):- ದಾನ ಸಂಘಟನಾ ಕಾಲಾವಧಿ ಸಮಾಜಕಲ್ಯಾಣ ಚಟುವಟಿಕೆಗಳಿಂದ ಪ್ರಾರಂಭಗೊಳ್ಳುತ್ತದೆ.10 ಸಾಮಾನ್ಯವಾಗಿ ಈ ಕಾಲಾವಧಿಯನ್ನು ಸುಮಾರು 1870 ರಿಂದ 1917 ರವರೆಗೆ ಎಂದು ವಿಭಾಗಿಸಿದರೂ 1863 ರಲ್ಲಿಯೇ ಮ್ಯಾಸಾಚೂಸಿಟ್ಸ್ನಲ್ಲಿ ರಾಜ್ಯ ದಾನ ಮಂಡಳಿ (State Board of Charity) ಪ್ರಾರಂಭಗೊಂಡಿತ್ತು ಹಾಗೂ 1870ರ ಹೊತ್ತಿಗೆ ಇತರೆ ಆರು ರಾಜ್ಯಗಳಲ್ಲಿ ರಾಜ್ಯ ದಾನ ಮಂಡಳಿಗಳು ಪ್ರಾರಂಭಗೊಂಡವು. ಹಾಗೇನೇ 1872ರಲ್ಲಿ ನ್ಯೂಯಾರ್ಕ್ ನಲ್ಲಿ ರಾಜ್ಯದಾನ ನೆರವು ಸಂಸ್ಥೆ (State Organisation of Aid Association-SOAA) ಯು, ರಾಜ್ಯಮಟ್ಟದ ಕಲ್ಯಾಣ ಯೋಜನಾ ಸಂಸ್ಥೆಯಾಗಿ ಸ್ಥಾಪಿಸಲ್ಪಟ್ಟಿತು. ಈ ಕಾಲಾವಧಿಯಲ್ಲೇ, 1899ನೇ ಇಸ್ವಿಯಲ್ಲಿ ರಾಷ್ಟ್ರಿಯ ಯುಹೂದ್ಯರ ದಾನ ಕೂಟ (National Jewish conference of Charity)ವೂ ಹಾಗೂ 1910ರಲ್ಲಿ ರಾಷ್ಟ್ರೀಯ ಕ್ಯಾಥೋಲಿಕ್ಕರ ದಾನ ಕೂಟ (National Conference of Catholic Charity) ವೂ ಪ್ರಾರಂಭಗೊಂಡವು. ಹಾಗೇನೆ 1873ರಲ್ಲಿ ಸ್ಥಾಪನೆಗೊಂಡ ರಾಷ್ಟ್ರೀಯ ದಾನ ಮತ್ತು ಸುಧಾರಣಾ ಒಕ್ಕೂಟ (National Conference of Charity and Correction) ವೂ ಸಮಾಜ ಕಲ್ಯಾಣ ಕ್ಷೇತ್ರದಲ್ಲಿ ಒಂದು ಮೈಲಿಗಲ್ಲಾಗಿ ಪರಿಣಮಿಸಿತು. ಇದೇ ಸಂಸ್ಥೆ ತನ್ನ ಹೆಸರನ್ನು 1917ರಲ್ಲಿ ರಾಷ್ಟ್ರೀಯ ಸಮಾಜಕಾರ್ಯ ಪರಿಷತ್ತು (National Social work Conference) ಎಂದು ಬದಲಾಯಿಸಿಕೊಂಡಿತು. ಆನಂತರ ಇದೇ ಸಂಸ್ಥೆ 1956ರಲ್ಲಿ ತನ್ನ ಹೆಸರನ್ನು ರಾಷ್ಟ್ರೀಯ ಸಮಾಜಕಲ್ಯಾಣ ಪರಿಷತ್ತು (National Social Welfare Conference) ಎಂದು ಪುನಃ ಬದಲಾಯಿಸಿಕೊಂಡಿತು. ಈ ರಾಷ್ಟ್ರೀಯ ಸಂಸ್ಥೆ ಸಮಾಜ ಕಲ್ಯಾಣ ಕ್ಷೇತ್ರದಲ್ಲಿ ಕೆಲಸ ಮಾಡುವ ಸಂಘಸಂಸ್ಥೆಗಳಿಗೆ ಮಾರ್ಗದರ್ಶನ ಮಾಡಿತು. ಪ್ರಸ್ತುತ ದಾನ ಸಂಘಟನಾ ಕಾಲಖಂಡದಲ್ಲಿ ದೇಶದಲ್ಲಿ ನೂರಾರು ದಾನ ಸಂಘಟನಾ ಸಂಘಗಳು ಪ್ರಾರಂಭಗೊಂಡಿದ್ದವು. ಎಲ್ಲಾ ಸಂಘಗಳು ತಮ್ಮನ್ನು ಬೇರೆ ಬೇರೆ ರಾಜ್ಯಗಳಲ್ಲಿ, ಪ್ರದೇಶಗಳಲ್ಲಿ, ನಗರಗಳಲ್ಲಿ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದವು. ಇವುಗಳಿಗೆ ಮಾರ್ಗದರ್ಶನ ಮಾಡಲು ರಾಷ್ಟ್ರೀಯ ಸಂಸ್ಥೆಗಳು ಅಸ್ತಿತ್ವಕ್ಕೆ ಬಂದಿದ್ದವು. ಇಡೀ ಸಮಾಜದಲ್ಲಿ ಅದೊಂದು ಆಂದೋಲನದ ರೂಪ ತಳೆದಿತ್ತು. ಆ ದಾನ ಸಂಘಟನಾ ಆಂದೋಲನವು ಎರಡು ವಿಷಯಗಳ ಕಡೆಗೆ ತನ್ನ ಕಳಕಳಿಯನ್ನಿಟ್ಟುಕೊಂಡಿತ್ತು. ಒಂದು, ಅವಶ್ಯವಿದ್ದ ವ್ಯಕ್ತಿಗಳಿಗೆ ಮತ್ತು ಕುಟುಂಬಗಳಿಗೆ ಹೆಚ್ಚು ಪರಿಣಾಮಕಾರಿ ಮತ್ತು ಬೇಕಾದಷ್ಟು ವ್ಯಕ್ತಿ ಸೇವೆಯನ್ನು ಒದಗಿಸುವುದು; ಎರಡು, ಸಮುದಾಯದ ದಾನ ಕೊಡುವ ಅಥವಾ ಸಮಾಜ ಕಲ್ಯಾಣ ಸಮಸ್ಯೆಗಳಿಗೆ ಸಹಕಾರ ಮನೋಭಾವದಿಂದ ವರ್ತಿಸುವುದು. ಅವು ಆಧುನಿಕ ಸಮಾಜಕಾರ್ಯದ ಪರಿಭಾಷೆಯಲ್ಲಿ ವ್ಯಕ್ತಿಗತ ಸಮಾಜಕಾರ್ಯ ಮತ್ತು ಸಮುದಾಯ ಸಂಘಟನೆಗಳಾಗಿದ್ದವು.11 ಅವುಗಳ ಜೊತೆಗೆ ಈ ದಾನ ಸಂಘಟನಾ ಸಂಸ್ಥೆಗಳು ಸಮಾಜ ಕಲ್ಯಾಣ ಕೆಲಸಗಳಲ್ಲಿ ತೊಡಗಿಸಿಕೊಂಡಂತಹ ಸಂಘಗಳ ಮಧ್ಯೆ ಸಹಕಾರವನ್ನು ಏರ್ಪಡಿಸುವುದು, ಮೋಸಗಾರರನ್ನು ಬಹಿರಂಗ ಪಡಿಸುವುದು, ಸೋಮಾರಿತನವನ್ನು ತಡೆಯುವುದು. ಬಡವರ ಮತ್ತು ಉಳ್ಳವರ ಮಧ್ಯೆ ಅಭಿರುಚಿ ಮತ್ತು ಸಹಾನುಭೂತಿಯನ್ನು ವೃದ್ಧಿಸುವುದು, ದಾರಿದ್ರ್ಯತನವನ್ನು ತಡೆಯುವುದು, ಸಮಾಜ ಕಲ್ಯಾಣಕ್ಕೆ ಸಂಬಂಧಪಟ್ಟಂತ ಜ್ಞಾನವನ್ನು ಸಂಗ್ರಹಿಸುವುದು ಮತ್ತು ಪ್ರಚಾರ ಮಾಡುವುದು ಮುಂತಾದ ಕೆಲಸಗಳನ್ನು ಕೈಕೊಂಡವು.12 ಈ ಚಟುವಟಿಕೆಗಳ ಫಲವೆಂಬಂತೆ ಕ್ಷಯರೋಗ ನಿರ್ಮೂಲನಾ ಸಮಿತಿಗಳು, ಗೃಹ ನಿರ್ಮಾಣ ಸಮಿತಿಗಳು, ಇತರೆ ಸಮಿತಿಗಳು ಅಸ್ತಿತ್ವಕ್ಕೆ ಬಂದವು. ನ್ಯೂಯಾರ್ಕ್ ದಾನ ಸಂಘಟನಾ ಸಂಸ್ಥೆ, ಬೇರೆ ಸೇವೆಗಳ ಜೊತೆಗೆ, ಸಮಾಜಕಾರ್ಯ ಶಿಕ್ಷಣಕ್ಕಾಗಿ ಅಮೇರಿಕೆಯ ಪ್ರಥಮ ನ್ಯೂಯಾರ್ಕ್ ಸಮಾಜಕಾರ್ಯ ಶಾಲೆಯನ್ನು ಪ್ರಾರಂಭಿಸಿತು. ಸಮೀಕ್ಷೆ ಮಾಡುವುದರಲ್ಲಿ ಪರಿಣಿತಿ ಹೊಂದಿದ್ದ ಈ ಸಂಸ್ಥೆಯು ಪಿಟ್ಸ್ ಬರ್ಗ್ ಸಮೀಕ್ಷೆ (1907-08)ಯನ್ನು ಯೋಜಿಸಿ ಕಾರ್ಯರೂಪಕ್ಕೆ ತಂದಿತು. ಸಮುದಾಯ ಸಂಘಟನೆ ಕ್ಷೇತ್ರದಲ್ಲಿ ಈ ಸಮೀಕ್ಷೆ ಪ್ರಥಮ ಎಂದು ಕರೆಸಿಕೊಳ್ಳುತ್ತದೆ. ದಾನ ಸಂಘಟನಾ ಆಂದೋಲನದ ಪರಿಣಾಮವಾಗಿ ಸಮಾಜ ಸೇವಾ ವಿನಿಮಯ ಕೇಂದ್ರ ಮತ್ತು ಸಮುದಾಯ ಕಲ್ಯಾಣ ಸಮಿತಿ ಅಥವಾ ಸಾಮಾಜಿಕ ಸಂಘಗಳ ಪರಿಷತ್ತುಗಳು ಪ್ರಾರಂಭವಾದವು. ಸ್ವಯಂ ಸೇವಕರೇ, 1876ರಲ್ಲಿ ಮೊದಲನೇ ಸೇವಾ ಕೇಂದ್ರ ಬಾಷ್ಟನ್ ನೋಂದಾವಣಿ ಕಛೇರಿ (Boston Registration Bureau)ಯನ್ನು ಪ್ರಾರಂಭಿಸಿದರು. ಫಲಾನುಭವಿಗಳ ಕುಟುಂಬದ ಮಾಹಿತಿ ಪಡೆದ ಸೇವೆಗಳ ವಿವರ ಮುಂತಾದ ಮಾಹಿತಿಯನ್ನು ದಾಖಲು ಮಾಡುವ ಕೆಲಸವನ್ನು ಈ ಕಛೇರಿ ಕೈಕೊಂಡಿತು. ಈ ರೀತಿ ಸೇವೆ ಪಡೆದ ಕುಟುಂಬಗಳ ಒಂದು ಸಮಗ್ರ ಸೂಚಿ (Central Index) ರೂಪಗೊಂಡಿತು. ಆ ನಂತರದ ದಿನಗಳಲ್ಲಿ ಈ ಪದ್ಧತಿಯನ್ನೇ ಅಮೇರಿಕೆಯ ಸಮುದಾಯಗಳಲ್ಲಿ ಮುಂದುವರೆಸಿಕೊಂಡು ಬರಲಾಯಿತು. ದಾನ ಸಂಘಟನಾ ಸಂಘಗಳಿಂದ ಇಂತಹ ವಿನಿಮಯ ಕೇಂದ್ರಗಳನ್ನು ದೇಶವ್ಯಾಪ್ತಿ ಸ್ಥಾಪಿಸಲಾಯಿತು. 1920ರ ಹೊತ್ತಿಗೆ ಈ ಕೇಂದ್ರಗಳನ್ನು ಸಾಮಾಜಿಕ ಸಂಸ್ಥೆಗಳ ಪರಿಷತ್ತು ಮತ್ತು ಸಮುದಾಯ ಕೋಶಗಳ (Council of Social Agencies and Community Chests) ವ್ಯಾಪ್ತಿಗೆ ತರಲಾಯಿತು. ಇವುಗಳ ಮುಂದಾಳತ್ವವನ್ನು ದಾನ ಸಂಘಟನಾ ಸಂಘಗಳ ಕಾರ್ಯ ನಿರ್ವಾಹಕರು ವಹಿಸಿಕೊಂಡರು. ಆನಂತರದ ದಿನಗಳಲ್ಲಿ ಕುಟುಂಬ ಸೇವಾ ಸಂಸ್ಥೆಯಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಇಂತಹ ವಿನಿಮಯ ಕೇಂದ್ರಗಳಿಂದ ಬಂದಂತಹವರೇ ಆಗಿದ್ದರು. ಸಮುದಾಯ ಕೋಶಗಳು ಮತ್ತು ಸಮಿತಿಗಳು (Community Chests and Councils) ಹೆಚ್ಚು ವ್ಯಕ್ತಿಗತ ಸಮಾಜಕಾರ್ಯದಲ್ಲಿ ತೊಡಗಿಕೊಂಡವು. ವೃಂದಗತ ಸಮಾಜಕಾರ್ಯ ಹಾಗೂ ಸಮುದಾಯ ಸಂಘಟನೆಗೆ ಬೇರೆ ಬೇರೆಯೇ ಆದ ತಂತ್ರ ಕೌಶಲ್ಯಗಳೇ ಬೇಕಾಗುತ್ತವೆ ಎಂದು ಈ ಸಮಯದಲ್ಲಿ ಮನಗಾಣಲಾಯಿತು. ಹಾಗಾಗಿ ಹೆಚ್ಚು ಹೆಚ್ಚು ವ್ಯಕ್ತಿಗತ ಚಟುವಟಿಕೆಗಳಿಗೆ ಆದ್ಯತೆ ಕೊಡಲಾಯಿತು. ಮೊದಲನೇ ಜಾಗತಿಕ ಸಮರದ ನಂತರವೂ ಸಮುದಾಯ ಸಂಘಟನೆಗಿಂತ, ಕುಟುಂಬಕ್ಕೆ ಹೆಚ್ಚು ಪ್ರಾಶಸ್ತ್ಯವನ್ನು ಕೊಟ್ಟು ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಯಿತು ಮತ್ತು ಸದರಿ ಸಂಸ್ಥೆಗಳ ಹೆಸರನ್ನು ಕುಟುಂಬ ಕಲ್ಯಾಣ ಮತ್ತು ಕುಟುಂಬ ಸೇವಾ ಕೇಂದ್ರಗಳೆಂದು ಬದಲಾಯಿಸಿಕೊಳ್ಳಲಾಯಿತು. ದೊಡ್ಡ ಪಟ್ಟಣಗಳಲ್ಲಿ ಸಾಮಾಜಿಕ ಪುನರ್ವಸತಿ ಸಂಸ್ಥೆ (Social Settlement)ಯು, ಪಟ್ಟಣಗಳಲ್ಲಿನ ನೆರೆಹೊರೆ ಅಥವಾ ಸ್ಥಳೀಯ ಸಮುದಾಯದ ಸಹಕಾರದೊಂದಿಗೆ ಗುಂಪುಗಳ ಅಭಿವೃದ್ಧಿ ಮತ್ತು ಮನರಂಜನಾ ಚಟುವಟಿಕೆಗಳಲ್ಲಿ ಕ್ರಿಯಾಶೀಲವಾಗಿತ್ತು. ಎಡ್ವರ್ಡ್ ಡೆನಿಸನ್, ಒಬ್ಬ ಬ್ರಿಟಿಷ್ ಗೌರವಾರ್ಹ ವ್ಯಕ್ತಿ, 1867 ರಲ್ಲಿಯೇ ಪ್ರಥಮವಾಗಿ ವ್ಯಕ್ತಿಗಳ ಮತ್ತು ವೃಂದಗಳ ಕೆಲಸಕಾರ್ಯಗಳಲ್ಲಿ ಮತ್ತು ಪುನರ್ವಸತಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಸಮುದಾಯ ಸಂಘಟನೆ ಒಂದು ಪ್ರಕ್ರಿಯೆ ಎಂದು ತೋರಿಸಿಕೊಟ್ಟರು. ಅಮೇರಿಕ ದೇಶದಲ್ಲಿ ಸಮಾಜಕಾರ್ಯ ಕ್ಷೇತ್ರದಲ್ಲಿ ಪ್ರಮುಖ ಪಾತ್ರವಹಿಸಿದ ರಾಷ್ಟ್ರೀಯ ಮಟ್ಟದ ಸಮಾಜ ಕಲ್ಯಾಣ ಸಂಸ್ಥೆಗಳು ಈ ದಾನ ಸಂಘಟನಾ ಕಾಲಾವಧಿಯಲ್ಲೇ ಸ್ಥಾಪನೆಗೊಂಡಂತಹವು. ಸಮಾಜಕಾರ್ಯ ವಾರ್ಷಿಕ ಸಂಚಿಕೆ (1947)ಯಲ್ಲಿ ನಮೂದಿಸಲ್ಪಟ್ಟ 256 ಸಂಸ್ಥೆಗಳಲ್ಲಿ, ಕೇವಲ ಒಂಬತ್ತು ಮಾತ್ರ 1870ರ ಪೂರ್ವದಲ್ಲೇ ಸ್ಥಾಪಿಸಲ್ಪಟ್ಟಿದ್ದು, ಉಳಿದವುಗಳಲ್ಲಿ 97 ಸಂಸ್ಥೆಗಳು 1870-1917ರ ಮಧ್ಯೆ ಪ್ರಾರಂಭಗೊಂಡಂಥವುಗಳಾಗಿವೆ. ರಾಜ್ಯಮಟ್ಟದ ಪ್ರಥಮ ಸಮಾಜಕಾರ್ಯ ಸಮ್ಮೇಳನ (Social Work Conference) ವಿಸ್ಕಾಂನ್ಸಿನ್ ರಾಜ್ಯದಲ್ಲಿ, 1881ರಲ್ಲಿ ಸ್ಥಾಪನೆಯಾಯಿತು. ಪ್ರಥಮ ಜಾಗತಿಕ ಯುದ್ಧ ಮುಗಿಯುವ ಹೊತ್ತಿಗೆ 32 ರಾಜ್ಯಗಳಲ್ಲಿ ಇಂತಹ ಸಮ್ಮೇಳನಗಳು (ಸಂಸ್ಥೆಗಳು) ಅಸ್ಥಿತ್ವಕ್ಕೆ ಬಂದಿದ್ದವು. 2. ಒಕ್ಕೂಟದ ಉಗಮ (Rise of Fedaration-1917-1935) :- ದಾನ ಸಂಘಟನಾ ಕಾಲಾವಧಿಯಲ್ಲಿ ಸಮುದಾಯ ಕೋಶಗಳು ಮತ್ತು ಸಮಾಜ ಕಲ್ಯಾಣ ಕೇಂದ್ರಗಳು ಪ್ರಾರಂಭವಾಗಿದ್ದರೂ ಅವುಗಳ ಸಂಖ್ಯೆ ತುಂಬಾ ಹೆಚ್ಚಾದದ್ದು ಈ ಎರಡನೇ ಹಂತದಲ್ಲಿ. ಇಂಗ್ಲೆಂಡಿನ ಲಿವರ್ಪೂಲ್ನಲ್ಲಿ, 1873ರಲ್ಲಿ, ಈ ಸ್ವಯಂ ಪ್ರೇರಣಾ ಕಲ್ಯಾಣ ಕೇಂದ್ರಗಳ ಒಂದು ಕೇಂದ್ರ ಆರ್ಥಿಕ ಒಕ್ಕೂಟ (Financial Fedaration) ಇದೇ ಸಮಯದಲ್ಲಿ ಪ್ರಾರಂಭವಾಯಿತು. ಅದರಂತೆಯೇ, ಅಮೇರಿಕೆಯಲ್ಲಿ ಯಹೂದ್ಯ (Jew) ಸಮುದಾಯದ ಕೇಂದ್ರ ಸಂಸ್ಥೆಗಳು (Fedaration) ಬೋಷ್ಟನ್ ಮತ್ತು ಸಿನ್ಸಿನಟ್ಟಗಳಲ್ಲಿ, ಅನುಕ್ರಮವಾಗಿ 1895 ಮತ್ತು 1896 ರಲ್ಲಿ ಆರಂಭಗೊಂಡವು. ನ್ಯೂಯಾರ್ಕ್ ನಲ್ಲಿಯೂ ಇಂಥದೇ ಸಂಸ್ಥೆ ಅಸ್ಥಿತ್ವಕ್ಕೆ ಬಂದಿತು. ಕ್ಲೀವ್ ಲ್ಯಾಂಡ್ನಲ್ಲಿ, 1900ರಲ್ಲಿ ಕ್ಲೀವ್ ಲ್ಯಾಂಡ್ ದಾನ ಮತ್ತು ಲೋಕೋಪಕಾರರ ಒಕ್ಕೂಟ (Cleveland Fedaration of Charity and Philanthropy) ಪ್ರಾರಂಭವಾಯಿತು. ಇಸ್ವಿ 1907ರಲ್ಲಿ ಅರವತ್ತೊಂದು ಕಲ್ಯಾಣ ಕೇಂದ್ರಗಳಲ್ಲಿ ನಡೆಸಿದ ಸಮೀಕ್ಷೆಯಂತೆ, ಆ ಸಂಸ್ಥೆಗಳಿಗೆ ಕೆಲವೇ ದಾನಿಗಳು ಆರ್ಥಿಕ ಬೆಂಬಲ ನೀಡುತ್ತಿದ್ದಾರೆಂದು ತಿಳಿದುಬಂದಿತು. ಆದರೆ 1913ರಲ್ಲಿ, ಕ್ಲೀವ್ ಲ್ಯಾಂಡ್ ಫೆಡರೇಷನ್ ಹೊಸ ಯೋಜನೆಯೊಂದನ್ನು ರೂಪಿಸಿ ಜಾರಿಗೆ ತಂದಿತು ಮತ್ತು ಇದರಿಂದ ಯಶಸ್ಸನ್ನು ಕಾಣುವಂತಾಯಿತು. ಅಮೇರಿಕ ಪ್ರಥಮ ಜಾಗತಿಕ ಸಮರದಲ್ಲಿ (1917) ಭಾಗವಹಿಸಿತು. ಪರಿಣಾಮವಾಗಿ ಹೆಚ್ಚು ಹೆಚ್ಚು `ಯುದ್ಧ ಕೋಶಗಳು (War Chests) ಪ್ರಾರಂಭಗೊಂಡವು. ಯುದ್ಧಕ್ಕೆ ಬೇಕಾದ ಆರ್ಥಿಕ ಸಂಪನ್ಮೂಲಗಳನ್ನು ಕಂಡುಕೊಳ್ಳುವುದೇ ಅವುಗಳ ಉದ್ದೇಶವಾಗಿತ್ತು. ಸ್ವಾಭಾವಿಕವಾಗಿ ಸಮರದ ನಂತರ ಈ ಯುದ್ಧಕೋಶಗಳು ಶಾಂತಿ ಸಮುದಾಯ ಕೋಶಗಳಾಗಿ ಮಾರ್ಪಾಟುಗೊಂಡವು. ಇಸ್ವಿ 1920ರ ಹೊತ್ತಿಗೆ ಬೇರೆ ಬೇರೆ ಸಮುದಾಯಗಳಲ್ಲಿಯೂ ಸಮುದಾಯ ಕೋಶಗಳು ಪ್ರಾರಂಭಗೊಂಡವು. ಈ ಕೋಶಗಳ ಆರ್ಥಿಕ ಅವಶ್ಯಕತೆಗಳನ್ನು ಪೂರೈಸಲು ಪರಿಷತ್ತುಗಳು (ಕೌನ್ಸಿಲ್ ಗಳು) ಅಸ್ತಿತ್ವಕ್ಕೆ ಬಂದವು. ಎಲ್ಲಾ ಕೋಶಗಳು ಇಂತಹ ಒಂದಿಲ್ಲೊಂದು ಪರಿಷತ್ತಿನ ಸಂಪರ್ಕವನ್ನಿಟ್ಟುಕೊಂಡಿದ್ದವು. ಇದರಿಂದ ಜಂಟಿಯಾಗಿ ಸಮುದಾಯ ಯೋಜನೆಗಳನ್ನು ರೂಪಿಸಲು, ಆರ್ಥಿಕ ನೆರವನ್ನು ಒದಗಿಸಲು ಮತ್ತು ಚಟುವಟಿಕೆಗಳನ್ನು ಸಂಯೋಜಿಸಲು ನೆರವಾಯಿತು. ಸಮಯ ಕಳೆದಂತೆ, ಸಾರ್ವಜನಿಕರಿಂದ ಪ್ರಾರಂಭಗೊಂಡ ಈ ಸಮುದಾಯ ಕೋಶಗಳು ಆರ್ಥಿಕ ಮುಗ್ಗಟ್ಟನ್ನು ಎದುರಿಸುವಂತಾಯಿತು. ದ್ವಿತೀಯ ಜಾಗತಿಕ ಸಮರದ ನಂತರ ಪ್ರಾರಂಭಗೊಂಡ ಕೋಶಗಳಿಗೂ ಇದೇ ಗತಿಯಾಯಿತು. ಆನಂತರ 1933ರ ಹೊತ್ತಿಗೆ ಕೋಶಗಳಿಗೆ ಆರ್ಥಿಕ ನೆರವು ಸರಕಾರದಿಂದಲೇ ಪ್ರಾಥಮಿಕವಾಗಿ ಬರಬೇಕೆಂಬ ಅಭಿಪ್ರಾಯ ರೂಪಗೊಂಡಿತು. ಅಮೇರಿಕಾ ಸಮುದಾಯ ಸಂಘಟನಾ ಸಂಸ್ಥೆ (American Association for community Organisation - AACO), 1918 ರಲ್ಲಿ ಸಮುದಾಯ ಕೋಶಗಳ ಮತ್ತು ಪರಿಷತ್ತುಗಳ ರಾಷ್ಟ್ರೀಯ ಸಂಸ್ಥೆಯಾಗಿ ಪ್ರಾರಂಭಗೊಂಡರೂ, 1956ರಲ್ಲಿ ತನ್ನ ಹೆಸರನ್ನು ಅಮೇರಿಕ ಸಮುದಾಯ ಕೋಶಗಳ ಮತ್ತು ಪರಿಷತ್ತುಗಳ ಸಂಯುಕ್ತ ಸಂಸ್ಥೆ (United Community Chests and Councils of America) ಎಂದು ಬದಲಾಯಿಸಿಕೊಂಡಿತು. ಇಸ್ವಿ 1923ರಲ್ಲಿ ಈ ಸಂಸ್ಥೆಯು ಓಹಿಯೋ ರಾಜ್ಯದ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ, ಸಮುದಾಯ ಕೋಶಗಳ ಕಾರ್ಯ ನಿವರ್ಾಹಕರಿಗೆ ಎಂಟು ವಾರಗಳ ತರಬೇತಿ ಶಿಬಿರವನ್ನು ಪ್ರಾರಂಭಿಸಿತು. ಇದೇ ಅಂತಿಮವಾಗಿ ಸಮುದಾಯ ಕೋಶಗಳ ಮತ್ತು ಪರಿಷತ್ತುಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ತರಬೇತಿ ಕೊಡುವ ಸಮಾಜಕಾರ್ಯ ಶಾಲೆಯಾಗಿ ರೂಪಗೊಂಡಿತು. ಸದರಿ ಎಎಸಿಒ ಸಂಸ್ಥೆ, ಕ್ಲೀವ್ಲ್ಯಾಂಡ್ ಕಲ್ಯಾಣ ಒಕ್ಕೂಟ (Cliveland Welfare Federation) ಮತ್ತು ಆನಂತರ ಚಿಕಾಗೊ ವಿಶ್ವವಿದ್ಯಾಲಯಗಳು ಕಾಲಕಾಲಕ್ಕೆ ಸಮೀಕ್ಷೆ ನಡೆಸಿ ಸಂಬಂಧಪಟ್ಟವರಿಗೆ ಅಂಕಿಸಂಖ್ಯೆಗಳನ್ನು ಒದಗಿಸುತ್ತಿದ್ದವು. ದಿಕಳೆದಂತೆ ಈ ಕೆಲಸವನ್ನು ರಾಷ್ಟ್ರೀಯ ಸರಕಾರಿ ಹಾಗೂ ಸ್ವಯಂಸೇವಾ ಸಂಸ್ಥೆಗಳು ಮಾಡಿದವು. ಪ್ರಥಮ ಜಾಗತಿಕ ಸಮರದ ಹೊತ್ತಿಗೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಕೆಲಸ ಮಾಡಲು ಮೂರು ಬೇರೆ ತರಹದ ಸಂಸ್ಥೆಗಳು ಹುಟ್ಟಿಕೊಂಡವು. ಇಸ್ವಿ 1917ರಲ್ಲಿ ಸಿನ್ಸಿನಟ್ಟಿ ಸಾರ್ವಜನಿಕ ಆರೋಗ್ಯ ಒಕ್ಕೂಟ (Cincinatti Public Health Federation) ಅಮೇರಿಕಾ ದೇಶದ ಪ್ರಥಮ ಆರೋಗ್ಯ ಸಂಸ್ಥೆಯಾಗಿ ಪ್ರಾರಂಭವಾಯಿತು. ಅದರಂತೆಯೇ 1912-1918ರ ಮಧ್ಯೆ ಮಸ್ಸಾಚುಸೆಟ್ಸ್ನಲ್ಲಿ ಕೆಲವು ಗ್ರಾಮೀಣ ಸಮುದಾಯ ಸಮಿತಿಗಳೂ ಹಾಗೂ 1919ರಲ್ಲಿ ಕ್ಯಾಲಿಫೋರ್ನಿಯಾದಲ್ಲಿ ಪ್ರಥಮವಾಗಿ ಒಂದು ಸಂಯೋಜನಾ ಸಮಿತಿಯೂ (Co-ordinating Council) ಪ್ರಾರಂಭಗೊಂಡವು. ಇಸ್ವಿ 1930ರ ಹೊತ್ತಿಗೆ ಕ್ಯಾಲಿಫೋರ್ನಿಯಾದ ಇತರೆ ಸ್ಥಳಗಳಿಗೂ ಇವು ವಿಸ್ತರಣಗೊಂಡವು. ಇಸ್ವಿ 1863-1917ರ ಕಾಲಘಟ್ಟದಲ್ಲಿ ಪ್ರಾರಂಭಗೊಂಡ ಸಾರ್ವಜನಿಕ ಕಲ್ಯಾಣ ಕೇಂದ್ರಗಳು ಹೆಚ್ಚಾಗಿ ರಾಜ್ಯಮಟ್ಟದ ದಾನಶೀಲ ಇಲ್ಲವೇ ನಿಯಂತ್ರಣಾ ಸಂಸ್ಥೆಗಳಾಗಿದ್ದವು. ಇಲ್ಲೂನಿಯಸ್ ರಾಜ್ಯದಲ್ಲಿ ಸರಕಾರದ ವತಿಯಿಂದ 1917ರಲ್ಲಿ ಸಾರ್ವಜನಿಕ ಕಲ್ಯಾಣ ಇಲಾಖೆಯನ್ನು ಸೃಷ್ಟಿಸಲಾಯಿತು. ಮುಂದಿನ ದಿನಗಳಲ್ಲಿ ಈ ಸಾರ್ವಜನಿಕ ಸಂಸ್ಥೆಗಳು, ಇಲಾಖೆಗಳು ಸಮಾಜಕಲ್ಯಾಣ ಕ್ಷೇತ್ರದಲ್ಲಿ ಗಣನೀಯ ಪಾತ್ರವಹಿಸಿದವು. ಸಮಾಜ ಕಲ್ಯಾಣ ಕ್ಷೇತ್ರದಲ್ಲಿ ಹೊಸ ಸಂಸ್ಥೆಗಳು ಪ್ರಾರಂಭವಾಗುವುದು 1935ರವರೆಗೂ ಮುಂದುವರೆದಿತ್ತು. ಸಮುದಾಯ ಸಂಘಟನಾ ಕ್ಷೇತ್ರವನ್ನು ಸೇರಿಕೊಂಡಿತೆ, ಪ್ರಥಮ ವೃತ್ಯಾತ್ಮಕ ಸಂಸ್ಥೆ, ಅಮೇರಿಕ ಸಮಾಜಕಾರ್ಯಕರ್ತರ ಸಂಸ್ಥೆ (American Association of Social Workers) 1921ರಲ್ಲಿ ಪ್ರಾರಂಭವಾಯಿತು. ಇಸ್ವಿ 1930 ರಲ್ಲಿ, ಅಮೇರಿಕ ಸಮಾಜ ಕಲ್ಯಾಣ ಅಧಿಕಾರಿಗಳ ಸಂಸ್ಥೆ (American Association of Social Welfare Officials) ಪ್ರಾರಂಭಗೊಂಡು, 1958ರ ಹೊತ್ತಿಗೆ ಅಮೇರಿಕ ಸಾರ್ವಜನಿಕ ಕಲ್ಯಾಣ ಸಂಸ್ಥೆ (American Public Welfare Association) ಎಂದು ತನ್ನ ಹೆಸರನ್ನು ಬದಲಾಯಿಸಿಕೊಂಡಿತು. ಸಾರ್ವಜನಿಕ ಕಲ್ಯಾಣದ ಪ್ರಾಮುಖ್ಯತೆಯನ್ನು ಈ ಸಂಸ್ಥೆ ಪ್ರಚುರಪಡಿಸಿತು. ರಸೆಲ್ ಫೌಂಡೇಷನ್ನಿನ ಸಮೀಕ್ಷೆ ಮತ್ತು ಪ್ರಕಟಣೆ ಇಲಾಖೆಯು ನಿಧಾನವಾಗಿ ತನ್ನ ಕಾರ್ಯ ವೈಖರಿಯನ್ನು ಸಮೀಕ್ಷೆಯಿಂದ ವಿಶ್ಲೇಷಣೆಗೆ ಬದಲಾಯಿಸಿಕೊಂಡಿತು. ಮುಂದೆ ಇದೇ 1934ರಲ್ಲಿ ಸಮಾಜಕಾರ್ಯ ವಿಶ್ಲೇಷಣಾ ಇಲಾಖೆ ಎಂದು ಮಾರ್ಪಾಡಾಯಿತು. ಇಸ್ವಿ 1921ರಲ್ಲಿ ಪ್ರಾರಂಭಗೊಂಡ ರಾಷ್ಟ್ರೀಯ ಆರೋಗ್ಯ ಸಮಿತಿ (National Health Council) ಮತ್ತು 1922ರಲ್ಲಿ ಅಸ್ತಿತ್ವಕ್ಕೆ ಬಂದ ರಾಷ್ಟ್ರೀಯ ಸಮಾಜಕಾರ್ಯ ಸಮಿತಿ (National Social Work Council) ಒಗ್ಗಟ್ಟಾಗಿ ಕೆಲಸ ಮಾಡಿದವು ಮತ್ತು ರಾಷ್ಟ್ರಮಟ್ಟದಲ್ಲಿ ಸಾಮಾಜಿಕ ಕೇಂದ್ರಗಳ ಒಂದು ಸಂಸ್ಥೆಯ ಕಲ್ಪನೆಯನ್ನು ಹುಟ್ಟುಹಾಕಿದವು. 3. ಸಮುದಾಯ ಸಂಘಟನೆಯ ವಿಸ್ತಾರ ಮತ್ತು ವೃತ್ಯಾತ್ಮಕ ಅಭಿವೃದ್ಧಿ (1935-55 Expansion of Community Organisation and Professional Development) :- ಸಮುದಾಯ ಸಂಘಟನೆಯ ಮೂರನೇ ಹಂತದಲ್ಲಿ ಸೇವೆಗಳ ವಿಸ್ತಾರಕ್ಕೆ ಮತ್ತು ವೃತ್ತಿ ನೈಪುಣ್ಯತೆಗೆ ಹೆಚ್ಚು ಆದ್ಯತೆಯನ್ನು ಕೊಡಲಾಯಿತು. ಸಾರ್ವಜನಿಕ ಕಲ್ಯಾಣ ಕ್ಷೇತ್ರದಲ್ಲಿ ಸಮುದಾಯ ಸಂಘಟನೆಯ ಪ್ರಕ್ರಿಯೆಯನ್ನು ಹೆಚ್ಚು ಹೆಚ್ಚು ಬಳಸಿಕೊಳ್ಳಲಾಯಿತು. 1930ರ ದಶಕ ಕಂಡ ಆರ್ಥಿಕ ಕುಸಿತದ ಪರಿಣಾಮವಾಗಿ ನೀರುದ್ಯೋಗ ಹೆಚ್ಚಾಯಿತು. ಇದರ ಫಲಶೃತಿಯೆಂಬಂತೆ ಪರಿಹಾರವನ್ನು ಒದಗಿಸುವ ಕೆಲಸಗಳೂ ವರ್ಷದಿಂದ ವರ್ಷಕ್ಕೆ ಹೆಚ್ಚಾದವು. ಪ್ರಮುಖ ನಗರಗಳಲ್ಲಿ ಸಮುದಾಯ ಕೇಂದ್ರಗಳ ಒಕ್ಕೂಟಗಳು ಅಸ್ತಿತ್ವಕ್ಕೆ ಬಂದವು. ರಾಷ್ಟ್ರೀಯ ಮಟ್ಟದಲ್ಲಿ ಅಮೇರಿಕಾ ಸಾರ್ವಜನಿಕ ಕಲ್ಯಾಣ ಸಂಸ್ಥೆ (American Public Welfare Association), ಅಮೇರಿಕಾ ಕುಟುಂಬ ಕಲ್ಯಾಣ ಸಂಸ್ಥೆ (American Family Welfare Association), ಸಮುದಾಯ ಕೋಶಗಳು ಮತ್ತು ಒಕ್ಕೂಟಗಳು (Community Chests and Federations) ಮುಂತಾದ ಸ್ವಯಂಸೇವಾ ಸಂಸ್ಥೆಗಳು ತುರ್ತುಕಾರ್ಯವನ್ನು ಪ್ರಾರಂಭಿಸಿದವು. ವಸ್ತುನಿಷ್ಠ ಸಮೀಕ್ಷೆಗಳು ನಡೆದು, ಕೈಪಿಡಿಗಳು ಬಿಡುಗಡೆಗೊಂಡವು. ಇದರಿಂದ ವಸ್ತುಸ್ಥಿತಿಯನ್ನು ಅರ್ಥೈಸಿಕೊಳ್ಳಲು ಮತ್ತು ಪರಿಹಾರ ಕಾರ್ಯಗಳನ್ನು ಮಾಡಲು ಅನುಕೂಲವಾಯಿತು. ಈ ಸಂಸ್ಥೆಗಳು, ರಾಷ್ಟ್ರಾಧ್ಯಕ್ಷರ ನಿರುದ್ಯೋಗ ಪರಿಹಾರ ಸಂಸ್ಥೆಯ ಸಹಯೋಗದಲ್ಲಿ, ಈ ತರಹದ ಸಂಸ್ಥೆಗಳು ಇರುವ ಮತ್ತು ಇಲ್ಲದಿರುವ ಎಲ್ಲಾ ಪಟ್ಟಣಗಳಲ್ಲಿ, ಪರಿಹಾರ ಕಾರ್ಯಗಳನ್ನು ಕೈಗೊಂಡವು. ಇದೇ ಸಮಯದಲ್ಲಿ ಜನಸಾಮಾನ್ಯರ ಬೆಂಬಲವನ್ನು ಪಡೆಯುವ ಸಲುವಾಗಿ ಶಿಕ್ಷಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಆನಂತರದ ವರ್ಷಗಳಲ್ಲಿ ಈ ತರಹದ ಆರ್ಥಿಕ ಕುಸಿತದ ಸಮಯದಲ್ಲಿ ಸರಕಾರದ ಪರಿಹಾರ ಕಾರ್ಯಯೋಜನೆಗಳೇ ಹೆಚ್ಚು ಸೂಕ್ತ ಎಂದು ಮನಗಾಣಲಾಯಿತು. ಈ ಸಮಯದಲ್ಲಿ ಸಂಸ್ಥೆಗಳು ಹೆಚ್ಚಾದವು. ಹಾಗಾಗಿ ರಾಷ್ಟ್ರಮಟ್ಟದಲ್ಲಿ ಸಂಯೋಜನೆಯ ಅವಶ್ಯಕತೆಯನ್ನು ಮನಗಾಣಲಾಯಿತು. ಸರಕಾರಿ ಸಂಸ್ಥೆಗಳು ಅಂಕಿಸಂಖ್ಯೆಗಳನ್ನು ಸಂಗ್ರಹಿಸುವುದು, ಸಾರ್ವಜನಿಕ ಶಿಕ್ಷಣ, ಸಂಯೋಜನೆ ಮುಂತಾದ ಕಾರ್ಯ ಕ್ಷೇತ್ರಗಳಲ್ಲಿ ಹೊಸ ಜವಾಬ್ದಾರಿಗಳನ್ನು ನಿಭಾಯಿಸುವಲ್ಲಿ ಮುಂದೆ ಬಂದವು. ಸಾಮಾಜಿಕ ರಕ್ಷಣಾ ಕಾಯಿದೆ, 1935 (Social Security Act) ಜಾರಿಗೆ ಬಂದುದರ ಫಲವಾಗಿ ರಾಷ್ಟ್ರ ಹಾಗೂ ರಾಜ್ಯ ಸರಕಾರಗಳು ಈ ಕ್ಷೇತ್ರದಲ್ಲಿ ನಾಯಕತ್ವವನ್ನು ವಹಿಸುವಂತಾಯಿತು. ಈ ಕಾಯಿದೆಯ ಅನೇಕ ಅಂಶಗಳು, ಸಮುದಾಯ ಸಂಘಟನೆಯ ದೃಷ್ಟಿಯಿಂದ, ಮುಖ್ಯ ಎಂದು ಪರಿಗಣಿಸಲ್ಪಟ್ಟವು. ಆ ಅಂಶಗಳು ಹೀಗಿವೆ.13
ಬಫೇಲೊದಲ್ಲಿ, 1946ರಲ್ಲಿ ನಡೆದ ರಾಷ್ಟ್ರೀಯ ಸಮಾಜಕಾರ್ಯ ಸಮ್ಮೇಳನದಲ್ಲಿ ಒಂದು ಸಮುದಾಯ ಸಂಘಟನಾ ಸಂಸ್ಥೆಯನ್ನು (Association for the Study of Community Organisation, ASCO) ಸ್ಥಾಪಿಸಲಾಯಿತು. ಸದಸ್ಯತ್ವಕ್ಕೆ ಮುಕ್ತ ಅವಕಾಶ ಇತ್ತಾದರೂ, ಸದಸ್ಯರು ತಮ್ಮ ಸದಸ್ಯತ್ವ ಶುಲ್ಕವನ್ನು ಕೊಡಬೇಕಾಗಿತ್ತು. ವಾಸ್ತವವಾಗಿ ಸಮುದಾಯ ಸಂಘಟನಾ ಮುಖ್ಯಸ್ಥರು, ವೃತ್ತಿನಿರತರು ಹಾಗೂ ಪ್ರಶಿಕ್ಷಕರು ಹೆಚ್ಚಾಗಿ ಸೇರಿಕೊಂಡರು. ಈ ಪ್ರವೃತ್ತಿ ಹೆಚ್ಚಾಗುತ್ತಾ ಎಎಸ್ಸಿಒ ಒಂದು ವೃತ್ಯಾತ್ಮಕ ಸಂಸ್ಥೆಯಾಗಿ ರೂಪಗೊಂಡಿತು. ಕಛೇರಿಯ ಕೆಲಸಗಳೂ ಸ್ವಯಂಸೇವಾ ನೆಲೆಯಲ್ಲಿಯೇ ನಡೆಯುತ್ತಿದ್ದವು. ಈ ಸಂಸ್ಥೆಯ ಕೇಂದ್ರ ಕಛೇರಿ ಡಿಟ್ರಾಯ್ಟ್ ನಲ್ಲಿ ಪ್ರಾರಂಭಗೊಂಡು, ಪಿಲೆಡೆಲ್ಫಿಯಾ, ಕೊಲಂಬಸ್ ಮತ್ತು ಓಹಿಯೊಗಳಿಗೆ ವರ್ಗಾಯಿಸಲ್ಪಟ್ಟು, ಕೊನೆಗೆ ಅಮೇರಿಕಾ ಕಾರ್ಯಕರ್ತರ ಸಂಸ್ಥೆಯ ಕೇಂದ್ರ ಕಛೇರಿಗೆ ಸ್ಥಳಾಂತರಿಸಲ್ಪಟ್ಟಿತು. ಸಂಸ್ಥೆಯ ಸಂಘಟನೆಯ ಬಗ್ಗೆ ಸಮಸ್ಯೆಗಳಿದ್ದರೂ, ಸಂಸ್ಥೆ ಈ ಕೆಳಕಂಡ ಅಂಶಗಳನ್ನು ಸೇರಿಕೊಂಡು ಅನೇಕ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತು.
ಸಮುದಾಯ ಸಂಘಟನೆಯನ್ನು ಸಮಾಜಕಾರ್ಯ ಪ್ರಶಿಕ್ಷಣದ ಒಂದು ಅವಿಭಾಜ್ಯ ಅಂಗವೆಂದು ಪರಿಗಣಿಸಲಾಯಿತು. ಈ ಜವಾಬ್ದಾರಿಯನ್ನು ಅಮೇರಿಕಾ ಸಮಾಜಕಾರ್ಯ ಶಾಲೆಗಳ ಒಕ್ಕೂಟ (ಆ ನಂತರ ಸಮಾಜಕಾರ್ಯ ಶಿಕ್ಷಣ ಸಮಿತಿ)ವು ಬಹು ಸಮರ್ಥವಾಗಿ ನಿರ್ವಹಿಸಿತು. ಈ ಸಂಸ್ಥೆಯ ಆಶ್ರಯದಲ್ಲಿ ಸಮುದಾಯ ಸಂಘಟನೆಗೆ ಸಂಬಂಧಪಟ್ಟಂತೆ ಅನೇಕ ವಿಚಾರ ಸಂಕಿರಣಗಳನ್ನು ಹಮ್ಮಿಕೊಳ್ಳಲಾಯಿತು. ಇದೆಲ್ಲದರ ಪರಿಣಾಮವಾಗಿ ಸಮಾಜಕಾರ್ಯ ಕ್ಷೇತ್ರದಲ್ಲಿ ದೇಶವ್ಯಾಪಿ ವೃತ್ಯಾತ್ಮಕ ಚಿಂತನೆ ಬೆಳೆಯುವಂತಾಯಿತು. ಎರಡನೆ ಜಾಗತಿಕ ಸಮರ ಮತ್ತು ಸಮುದಾಯ ಸಂಘಟನೆ ಸಮಾಜಕಲ್ಯಾಣ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಸಮರದ ಸಮಯದಲ್ಲಿ ಮೂರು ಸಮಸ್ಯೆಗಳನ್ನು ಎದುರಿಸಬೇಕಾಯಿತು.
ಚೆನ್ನಾಗಿ ದುಡಿಯುವ ಒಂದು ಅರ್ಥಪೂರ್ಣ ಬದುಕಿಗೆ ಅವಕಾಶವಿದ್ದರೂ, ಅವಶ್ಯಕತೆಗಳ ಕೊರತೆಯಿಂದಾಗಿ, ಇಂತಹ ಸಮುದಾಯಗಳಲ್ಲಿ ಮಾನವನ ಜೀವನಕ್ಕೆ ಪ್ರಾಶಸ್ತ್ಯ ಕೊಡುವ ಸಮುದಾಯ ಸಂಘಟನೆಗೆ ಅವಕಾಶ ಕಂಡು ಬಂದಿತು. ಜೊತೆಗೆ ವೃತ್ತಿನಿರತ ಸ್ತ್ರೀಯರ ಮಕ್ಕಳಿಗೆ ಹಗಲು ಪಾಲನಾ ಕೇಂದ್ರ, ಬೇರೆ ಪ್ರದೇಶಗಳಿಂದ ಯುದ್ಧದ ಸಲುವಾಗಿ ಬಂದವರ ಪಾಲನೆ ಮುಂತಾದ ಸಮಸ್ಯೆಗಳು ಕಂಡುಬಂದವು. ಈ ಅವಶ್ಯಕತೆಗಳ ಆಧಾರದ ಮೇಲೆ ಸಮುದಾಯ ಸಂಘಟನೆಯ ಚಟುವಟಿಕೆಗಳು ಹೆಚ್ಚಾದವು. ರಾಷ್ಟ್ರದ ನಾಯಕರು ಚುರುಕುಗೊಂಡರು. ನಾಗರೀಕ ರಕ್ಷಣಾ ಕಛೇರಿ (Office of Civil Defence)ಯ ಸಂಯೋಜಕತ್ವದಲ್ಲಿ ಆರೋಗ್ಯ ಮತ್ತು ಕಲ್ಯಾಣ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಯಿತು. ಸಮುದಾಯ ಕಲ್ಯಾಣ ಸಮಿತಿ ಮತ್ತು ರಕ್ಷಣಾ ಸಮಿತಿಗಳು ಸೇರಿ ಕೆಲಸ ಮಾಡಿದವು. ಈ ಅನುಭವ ಮುಂದೆ ಆರೋಗ್ಯ ಮತ್ತು ಕಲ್ಯಾಣ ಯೋಜನೆಗಳನ್ನು ರೂಪಿಸಲು ನೆರವಾಯಿತು. ಅಮೆರಿಕನ್ ರೆಡ್ ಕ್ರಾಸ್ ಸಂಸ್ಥೆಯೂ ಸೇರಿದಂತೆ ಅನೇಕ ರಾಷ್ಟ್ರಮಟ್ಟದ ಸಂಸ್ಥೆಗಳು ಈ ಕ್ಷೇತ್ರದಲ್ಲಿ ಕೆಲಸ ಮಾಡಿದವು. ಸಮರದ ನಂತರ ಸಮಾಜಕಾರ್ಯ ಮತ್ತು ಸಂಘಟಿತ ಕಾರ್ಮಿಕರ ಬಾಂಧವ್ಯ ವೃದ್ಧಿಗೊಂಡಿತು. ಇದೊಂದು ಮಹತ್ತರ ಬೆಳವಣಿಗೆ. ಅಮೇರಿಕಾ ಕಾರ್ಮಿಕರ ಒಕ್ಕೂಟ (American Fedaration of Labour) ಮತ್ತು ಕೈಗಾರಿಕಾ ಸಂಸ್ಥೆಗಳ ಕಾಂಗ್ರೆಸ್ (Congress of Industrial Organisations), ಸಮುದಾಯ ಕೋಶಗಳು ಮತ್ತು ಸಮರಕೋಶಗಳ ಮಧ್ಯೆ ಒಪ್ಪಂದವೇರ್ಪಟ್ಟು, ಕಾರ್ಮಿಕರೂ ಸಂಘಟನಾ ಚಟುವಟಿಕೆಗಳಿಗೆ ತಮ್ಮ ಕೈಲಾದ ದೇಣಿಗೆಯನ್ನು ಕೊಡುವಂತಾಯಿತು, ಆಡಳಿತ-ಕಾರ್ಮಿಕ ಸಮಿತಿಯಲ್ಲಿ ಅವರು ಭಾಗವಹಿಸುವಂತಾಯಿತು. ಜಾಗತಿಯ ಸಮರದ ಸಮಯದಲ್ಲಿ ಗುರುತಿಸಬಹುದಾದ ಇನ್ನೊಂದು ಪ್ರಮುಖ ಬೆಳವಣಿಗೆಯೆಂದರೆ, ಸ್ವಯಂಸೇವೆ ಮತ್ತು ವೈಯಕ್ತಿಕ ನೆಲೆಗಳಲ್ಲಿ ನಾಗರೀಕರು ಸಮುದಾಯ ಸಂಘಟನಾ ಚಟುವಟಿಕೆಗಳಿಗೆ ಉದಾರವಾಗಿ ದೇಣಿಗೆಗಳನ್ನು ಕೊಟ್ಟದ್ದು, ಆರೋಗ್ಯ, ಕಲ್ಯಾಣ, ಮುಂತಾದ ಕ್ಷೇತ್ರಗಳಲ್ಲಿ ಸ್ಥಳೀಯ ಮತ್ತು ರಾಷ್ಟ್ರಮಟ್ಟಗಳಲ್ಲಿ ಅನೇಕ ಸಂಘಸಂಸ್ಥೆಗಳು ಹುಟ್ಟಿಕೊಂಡವು. ಸಮಾಜಕಲ್ಯಾಣ ಯೋಜನೆಗಳಲ್ಲಿ ಈ ಸಂಘ ಸಂಸ್ಥೆಗಳು ಮತ್ತು ಸ್ವಯಂ ಸೇವಕರು ತುಂಬಾ ಆಸಕ್ತಿಯಿಂದ ಭಾಗವಹಿಸಿದರು. 4. ನಾಲ್ಕನೇ ಹಂತ-(1955ರ ನಂತರ)-ಸಾಮಾಜಿಕ ಬದಲಾವಣೆಗೆ ಒತ್ತು ನಾಲ್ಕನೇ ಹಂತದಲ್ಲಿ ದೈಹಿಕ ಮತ್ತು ಮಾನಸಿಕ ಊನಶಕ್ತರ ಪುನಶ್ಚೇತನ, ವೃದ್ಧರ ಸಮಸ್ಯೆಗಳು, ಬಾಲಾಪರಾಧಗಳನ್ನು ತಡೆಯುವುದು ಮತ್ತು ಉಪಚರಿಸುವುದು ಮುಂತಾದ ಹೊಸ ವಿಷಯ ಬಗ್ಗೆ ಸಮೀಕ್ಷೆ ನಡೆಸಿ ಮಾಹಿತಿ ಸಂಗ್ರಹಿಸಿ ಕಾರ್ಯಕ್ರಮ ರೂಪಿಸಿ ಅನುಷ್ಠಾನಗೊಳಿಸಲಾಯಿತು. ಇಲ್ಲಿಯ ತನಕ ಸಂಪನ್ಮೂಲಗಳನ್ನು ಸ್ಥಳೀಯವಾಗಿ ಸಂಗ್ರಹಿಸುತ್ತಿದ್ದು, ಈಗ ಈ ಕೆಲಸವನ್ನು ಒಂದು ಕೇಂದ್ರೀಯ ಸಂಸ್ಥೆ ಮಾಡುವಂತಾಯಿತು ಮತ್ತು ಅದನ್ನು ಸ್ಥಳೀಯ ಸಂಸ್ಥೆಗಳಿಗೆ ಒದಗಿಸಿದವು. ರಾಷ್ಟ್ರ ಮಟ್ಟದಲ್ಲಿ ಸಮಾಜಕಲ್ಯಾಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ಸಂಘಸಂಸ್ಥೆಗಳಲ್ಲಿ ಹೆಚ್ಚು ಅರ್ಥಪೂರ್ಣ ಸಹಯೋಗ ಉಂಟಾಯಿತು. ರಾಷ್ಟ್ರೀಯ ಸಮಾಜಕಾರ್ಯ ಸಮಿತಿ (National Social Work Council)ಯು, 1945ರಲ್ಲಿ, ರಾಷ್ಟ್ರೀಯ ಸಮಾಜ ಕಲ್ಯಾಣ ಸಭೆ (National Social Work Assembly)ಯಾಗಿ ಪುನರ್ಸಂಘಟನೆಗೊಂಡಿತು. ಉಚ್ಚಮಟ್ಟದ ಸಂಘಸಂಸ್ಥೆಗಳು ಇದರ ವ್ಯಾಪ್ತಿಗೆ ಬಂದವು. ಇದರಿಂದ ಎಲ್ಲರೂ ಸೇರಿ ಕೆಲಸ ಮಾಡುವಂತಾಯಿತು.15 ಸಮುದಾಯ ಸಂಘಟನೆಯು, 1955ರ ನಂತರ, ತನ್ನ ಗಮನವನ್ನು ಸಂಘಟನೆಯಿಂದ ಸಾಮಾಜಿಕ ಬದಲಾವಣೆಗೆ ಬದಲಾಯಿಸಿತೆಂದು ಡಾ.ಆಶಾ ರಾಮಗೊಂಡ ಪಾಟೀಲ್ ಅವರು ಹೇಳುತ್ತಾರೆ ಮತ್ತು ಅಂತಹ ನಾಲ್ಕು ವಿಷಯಗಳನ್ನು ಗುರುತಿಸಿದ್ದಾರೆ. 1. ನಾಗರೀಕ ಹಕ್ಕು ಮತ್ತು ಸಾಮಾಜಿಕ ನ್ಯಾಯ :- ಮತದಾರರ ನೋಂದಾವಣಿ, ಶಾಲೆಗಳ ವರ್ಗೀಕರಣ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ಹೋರಾಟಗಳಾಗಿದ್ದವು. ಜನಸಾಮಾನ್ಯರು ಹರತಾಳ, ಹೋರಾಟ, ಮುಷ್ಕರ, ದೊಂಬಿ ಮುಂತಾದವುಗಳಲ್ಲಿ ತೊಡಗಿದ್ದರು. ಇವುಗಳ ಜೊತೆಗೆ ಕೊಳೆಗೇರಿಗಳಲ್ಲಿ ವಸತಿ, ನಿರುದ್ಯೋಗ ಶಾಲೆಗಳ ಸಂಖ್ಯೆಯಲ್ಲಿ ಕಡಿಮೆಯಾಗುವಿಕೆ, ಕುಟುಂಬದ ರಕ್ಷಣೆ, ಅಪರಾಧ ಮುಂತಾದವುಗಳ ಬಗ್ಗೆಯೂ ಗಮನಹರಿಸಬೇಕಾಗಿತ್ತು. 2. ನಗರೀಕರಣ ಜಾಸ್ತಿ ಆಯಿತು. ಇಸವಿ 1960ರಲ್ಲಿ 70% ಜನರು ನಗರಗಳಲ್ಲಿ ವಾಸವಾಗಿದ್ದರು, ವಸತಿ, ನೈರ್ಮಲ್ಯ, ಆರೋಗ್ಯ, ಶಿಕ್ಷಣ, ಬಡ ಕುಟುಂಬಗಳು, ನಾಗರೀಕ ಸೇವೆಗಳ ಕೊರತೆ ಅಪರಾಧ ಮುಂತಾದವು ಹೆಚ್ಚಾಗಿದ್ದವು. ಈ ಪರಿಸ್ಥಿತಿಯನ್ನು ಬದಲಾಯಿಸಬೇಕಾಗಿತ್ತು. ಜನಸಾಮಾನ್ಯರು ಪ್ರಗತಿಪರ ಚಟುವಟಿಕೆಗಳಲ್ಲಿ ಭಾಗವಹಿಸಬೇಕಾಗಿತ್ತು. ಇಂತಹ ಪರಿಸ್ಥಿತಿಗೆ ಉತ್ತರವೆಂಬಂತೆ ಸಿರಿವಂತರು-ಬಡವರು, ರಾಜಕಾರಣಿಗಳು-ವೃತ್ತಿ ನಿಪುಣರು, ನಗರ-ಉಪನಗರಗಳ ಸದಸ್ಯರು ಒಟ್ಟಾಗಿ ಕೆಲಸ ಮಾಡಿ ಪರಿಸ್ಥಿತಿಯನ್ನು ನಿಭಾಯಿಸಿದರು. ಸಮಗ್ರದೃಷ್ಟಿಯನ್ನಿಟ್ಟುಕೊಂಡು ಕೆಲಸ ಮಾಡುವ ಪರಿಕಲ್ಪನೆ ಆಗಿನಿಂದ ಪ್ರಾರಂಭವಾಯಿತು. 3. ಬಡತನ ನಿರ್ಮೂಲನಾ ಕೆಲಸಗಳು ಕೊಲಂಬಿಯ ವಿಶ್ವವಿದ್ಯಾಲಯ ಮತ್ತು ಯುವಕರಿಗಾಗಿ ಕ್ರೋಢೀಕರಣ ಮುಂತಾದ ಸಂಸ್ಥೆಗಳಿಂದ ಪ್ರಾರಂಭವಾದವು. ಆರ್ಥಿಕ ಅವಕಾಶ ಕಾನೂನಿನನ್ವಯ (Economic Opportunity Act) ಕೇಂದ್ರ ಸರಕಾರ ಕ್ರಿಯಾಯೋಜನೆಗಳನ್ನು ರೂಪಿಸಿ, ಅನುದಾನ ಮತ್ತು ತಾಂತ್ರಿಕ ಬೆಂಬಲವನ್ನು ಒದಗಿಸಿತು. ಬಡತನ ಓಡಿಸುವ ಈ ಯೋಜನೆಗಳಲ್ಲಿ ಸ್ವಯಂ ಸೇವೆಗೆ ಹೆಚ್ಚು ಆದ್ಯತೆಯನ್ನು ಕೊಡಲಾಯಿತು. ಸರಕಾರ, ಸ್ವಯಂ ಸಂಸ್ಥೆಗಳು, ಕಾರ್ಯಕರ್ತರು ಮತ್ತು ಸ್ಥಳೀಯರು ಹೊಂದಿಕೊಂಡು ಕೆಲಸ ಮಾಡುವ ಕಾರ್ಯವೈಖರಿಯನ್ನು ಅನುಷ್ಠಾನಕ್ಕೆ ತರಲಾಯಿತು. ಆರೋಗ್ಯ, ಕುಟುಂಬ ಕಲ್ಯಾಣ, ವಸತಿ, ವೃದ್ಧರಿಗೆ ನಿಲಯಗಳು, ವಯಸ್ಕರ ಶಿಕ್ಷಣ, ಮಾನವ ಸಂಪನ್ಮೂಲ ಮುಂತಾದ ಕ್ಷೇತ್ರಗಳ ಸಮಸ್ಯೆಗಳನ್ನು ಎದುರಿಸಲಾಯಿತು. 4. ಕಡುಬಡವರಿಗಾಗಿ ಕಾರ್ಯಕ್ರಮಗಳನ್ನು ರೂಪಿಸುವಾಗ ಅವಶ್ಯಕತೆಗಳಿಗೆ ತಕ್ಕಂತೆ ಸಂಘರ್ಷ ಪದ್ಧತಿಯನ್ನು ಅನುಸರಿಸಲಾಯಿತು. ಸೌಲ್ ಅಲಸ್ಕೀಯ ನಮೂನೆಯೂ ಸೇರಿದಂತೆ ಅನೇಕ ಹೊಸ ಪ್ರಯೋಗಗಳನ್ನು ಮಾಡಲಾಯಿತು. ಸಾಮಾಜಿಕ ಬದಲಾವಣೆಗೆ ಸಮುದಾಯ ಕ್ರಿಯೆ (Community Action) ಅವಶ್ಯ ಎಂದು ಮನಗಾಣಲಾಯಿತು. ಇದರಿಂದ ಆರ್ಥಿಕ ಪ್ರಗತಿಗೆ ಅನುಕೂಲವೇ ಆಯಿತು. ಅನೇಕ ಆಂದೋಲನಗಳು ನಡೆದವು. ರಾಜಕೀಯ ಬದಲಾವಣೆಗೆ ಸಾಮಾಜಿಕ ಆಂದೋಲನಗಳು ಕಾರಣ ಎಂಬ ಕಲ್ಪನೆ ಜನರಲ್ಲಿ ಮೂಡಿತು. ವಿಶ್ವಸಂಸ್ಥೆ ಅಭಿವೃದ್ಧಿ ಕಾರ್ಯಕ್ರಮ (UNDO) ಸ್ಥಾಪನೆಯಾಗಿ, ಅನೇಕ ಸಮುದಾಯ ಕಾರ್ಯಕ್ರಮಗಳು ಜಾರಿಯಾದವು. ಸಮುದಾಯ ಸಂಘಟನೆಯ ಪ್ರಚಲಿತ ಧೋರಣೆಗಳು, ಸಮುದಾಯ ಸಂಘಟನೆಯ ಪರಿಕಲ್ಪನೆ ಮತ್ತು ಧೋರಣೆಗಳಲ್ಲಿ ತಾತ್ವಿಕತೆಯು ಧೃವೀಕರಣಗೊಂಡಿತು. ಪ್ರೊ. ಆರ್ಥರ್ ಡನ್ಹ್ಯಾಮ್ (1970) ಅವರು ಇದನ್ನು ನಾಲ್ಕು ಅಂಶಗಳಲ್ಲಿ ವಿವರಿಸುತ್ತಾರೆ (ಉ: ಡಾ.ಆಶಾ ರಾಮಗೊಂಡ ಪಾಟೀಲ್).16
ಅಡಿ ಟಿಪ್ಪಣಿಗಳು :-
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
|
|
|
|
SITE MAP
SitePOSH |
NIRATHANKAOUR OTHER WEBSITESSubscribe |
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |