ಸಮಾಜದಲ್ಲಿನ ಸಮಸ್ಯೆಗಳನ್ನು ಬಗೆಹರಿಸುವ ಮೂಲ ಮಂತ್ರ ಶಿಕ್ಷಣ ಎಂದರೆ ತಪ್ಪಾಗಲಾರದು. ಸಮಸ್ಯೆಗಳ ಆಗರವೇ ಆಗಿರುವಂತಹ ಸಮಾಜವನ್ನು ತಿದ್ದಿ ತೀಡಿ ಅಲ್ಲಿ ಬದಲಾವಣೆಯನ್ನು ಕಾಣಬೇಕೆಂಬುದು ಎಲ್ಲರ ಆಶಯ. ಸಮಾಜದಲ್ಲಿನ ಪ್ರತಿಯೊಂದು ಸ್ತರದ ಅಭಿವೃದ್ಧಿ ದೇಶದ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂಬುದನ್ನು ನಾವು ಮೊದಲಿನಿಂದಲೂ ಅರಿತಿದ್ದೇವೆ. ಈ ಅಭಿವೃದ್ಧಿಯನ್ನು ಸಾಧಿಸಬೇಕಾದಲ್ಲಿ ಶಿಕ್ಷಣದ ಪಾತ್ರ ಅತಿಮುಖ್ಯ ಎಂಬುದರಲ್ಲಿ ಎರಡು ಮಾತಿಲ್ಲ. ಅದರಲ್ಲೂ ಸಮಾಜಕಾರ್ಯ ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದನ್ನು ಅರಿಯಬೇಕಿದೆ. ಸಮಾಜಕಾರ್ಯ ಶಿಕ್ಷಣವು ಇತರೆ ವಿಷಯಗಳಿಗಿಂತ ವಿಭಿನ್ನವಾದುದು. ಸಮಾಜಕಾರ್ಯ ಶಿಕ್ಷಣವು ಹೆಸರೇ ತಿಳಿಸಿದಂತೆ ಸಮಾಜಕ್ಕೆ ಹತ್ತಿರವಾದಂತಹ, ಸಮಾಜವನ್ನು ಅರಿತುಕೊಳ್ಳುವ, ಉತ್ತಮ ಸಮಾಜವನ್ನು ಕಟ್ಟುವ, ಒಗ್ಗೂಡಿಸುವ ಕಾರ್ಯವಾಗಿದ್ದು, ಈ ಮೂಲಕ ದೇಶವನ್ನು ಪ್ರಗತಿಯ ನಿಟ್ಟಿನಲ್ಲಿ ಅಭಿವೃದ್ಧಿಪಡಿಸುವ ಶಿಕ್ಷಣವಾಗಿದೆ. ಇದು ನಾಲ್ಕು ಗೋಡೆಗಳ ನಡುವೆ ಕುಳಿತು ಪಾಠ ಕೇಳುವಂತಹದ್ದಕ್ಕಿಂತ ಹೆಚ್ಚಾಗಿ ಸಮಾಜದಲ್ಲಿ ಜನರಡೊನೆ ಸ್ಪಂದಿಸುವ, ಸಂದರ್ಶನದ ಮೂಲಕ ಅವರ ಸಂಪರ್ಕವನ್ನು ಹೊಂದುವ, ಇದರಿಂದ ಅವರ ಸಮಸ್ಯೆಯನ್ನು ಅರಿತು, ಅರಿವು ಮೂಡಿಸುವ ಹಾಗೂ ಈ ಮೂಲಕ ಜನರು ತಮ್ಮ ಸಮಸ್ಯೆಯನ್ನು ತಾವೇ ಅರಿತುಕೊಂಡು ಪರಿಹಾರವನ್ನು ಕಂಡುಕೊಳ್ಳುವಂತೆ ಮಾಡುವ ಕೆಲಸವಾಗಿದೆ.
ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರದಲ್ಲಿ ಇದರ ಆವಶ್ಯಕತೆ ಅತಿ ಮುಖ್ಯ. ಶಿಕ್ಷಣವೆಂದರೆ ಬರೀ ಜೀವನೋಪಾಯ ಮಾರ್ಗವನ್ನು ಹುಡುಕಿಕೊಡುವಂತಹುದ್ದಲ್ಲ. ನಿಜವಾದ ಶಿಕ್ಷಣ ಸ್ವರೂಪವೇ ಭಿನ್ನ, ಅದು ವ್ಯಕ್ತಿಯ ವ್ಯಕ್ತಿತ್ವ, ನಡತೆ, ಸ್ನೇಹಪರತೆ, ಚಾರಿತ್ರ್ಯವನ್ನು ತಿದ್ದಿ ಪರಿಪೂರ್ಣ ವ್ಯಕ್ತಿಯನ್ನಾಗಿಸುವುದ್ದಾಗಿರುತ್ತದೆ. ಪ್ರಸ್ತುತ ಸಮಾಜದಲ್ಲಿ ಸಮಾಜಕಾರ್ಯ ಶಿಕ್ಷಣದ ಅರಿವು ಮೂಡಿಸುವ ಅಗತ್ಯವಿದೆ. ತರಗತಿಯಲ್ಲಿ ಬೋಧಿಸುವ ಪಠ್ಯಕ್ರಮವು ಪ್ರಸ್ತುತ ಸಮಾಜಕ್ಕೆ ಹತ್ತಿರವಾಗಿದ್ದು, ಆ ಮೂಲಕ ಅದನ್ನು ಅರ್ಥಮಾಡಿಕೊಂಡು, ನಂತರ ಕ್ಷೇತ್ರಕಾರ್ಯದಲ್ಲಿ ಕಾರ್ಯಗತಗೊಳಿಸಲು ಸಹಕಾರಿಯಾಗುತ್ತದೆ. ಇಂತಹ ಮೂಲ ಅಂಶಗಳನ್ನು ಸಮಾಜಕಾರ್ಯ ಶಿಕ್ಷಣವು ಕ್ರೋಡಿಕರಿಸಿಕೊಂಡಿದೆ. ಸಮಾಜದಲ್ಲಿ ಎಲ್ಲರಿಗೂ ಉಪಯೋಗವಾಗುವಂತಹ ಸೇವೆಯನ್ನು ಸಲ್ಲಿಸಲು ಅನುವಾಗುವಂತಹ ಪಠ್ಯಕ್ರಮವನ್ನು ಹಾಗೂ ವಿಷಯಗಳನ್ನು ಅಳವಡಿಸಲಾಗಿದ್ದು, ಸಮಾಜದ ಆವಶ್ಯಕತೆಗೆ ತಕ್ಕಂತೆ ವಿದ್ಯಾರ್ಥಿಗಳನ್ನು ರೂಪಿಸಲಾಗುತ್ತದೆ. ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ಸಮಸ್ಯೆಗಳ ಸುಳಿಯಲ್ಲಿ ಸಮಾಜ ತರಗೆಲೆಗಳಂತೆ ತಿರುಗುತ್ತಿದೆ. ಉಳ್ಳವರು ಹಾಗೂ ಇರದವರ ನಡುವಿನ ಅಂತರ ಬಹಳಷ್ಟು ದೂರ ಸಾಗಿದೆ. ದುರಾಲೋಚನೆ, ಅನೈತಿಕ ಚಟುವಟಿಕೆಗಳು, ಭ್ರಷ್ಟಾಚಾರಗಳು ಎಲ್ಲೆ ಮೀರಿರುವುದು ವಿಪರ್ಯಾಸದ ಸಂಗತಿ. ಸಮಾಜಕಾರ್ಯ ಶಿಕ್ಷಣವು ಪ್ರಸ್ತುತ ಸನ್ನಿವೇಶದಲ್ಲಿ ತನ್ನದೇ ಆದಂತಹ ಮೌಲ್ಯಗಳು ಹಾಗೂ ತತ್ತ್ವಗಳ ಮೇಲೆ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸುತ್ತಾ ಬಂದಿದೆ. ವ್ಯಕ್ತಿ ವ್ಯಕ್ತಿಗಳ ನಡುವೆ ಸಾಮರಸ್ಯವನ್ನು ಬೆಸೆಯುವಂತಹ, ಸಮಾಜದಲ್ಲಿನ ಸಮಸ್ಯೆಗಳ ತೀವ್ರತೆಯನ್ನು ಕಡಿಮೆ ಮಾಡುವಂತಹ, ಮಾನವತೆಯ ಅರಿವನ್ನು ತಿಳಿಸುವಂತಹ ಬೃಹತ್ತಾದ ಕಾರ್ಯವನ್ನು ತನ್ನ ಪಥದಲ್ಲಿಟ್ಟುಕೊಂಡು ಸಾಗುತ್ತಿದೆ. ಸಮಾಜಕಾರ್ಯದ ಮೌಲ್ಯಗಳಾದಂತಹ ಸೇವೆ, ಸಾಮಾಜಿಕ ನ್ಯಾಯ, ಒಗ್ಗಟ್ಟು, ಮಾನವೀಯ ಸಂಬಂಧ, ಗೌರವ ಹಾಗೂ ಸಾಮರ್ಥ್ಯ, ಇವು ಪ್ರತಿಯೊಬ್ಬ ವಿದ್ಯಾರ್ಥಿಯು ಸಮಾಜ ಮುಖಿಯಾಗಿ ಕೆಲಸ ಮಾಡಲು ಬುನಾದಿಯನ್ನು ಒದಗಿಸಿಕೊಡುತ್ತವೆ. ಜಾಗತೀಕರಣದ ಪ್ರಭಾವದಿಂದಾಗಿ ಆಗುತ್ತಿರುವ ಬದಲಾವಣೆಗಳು ಪ್ರಗತಿಪರ, ಪ್ರಗತಿ ಶೀಲ ಚಿಂತನೆಯನ್ನು ನಡೆಸಲು ಹೇಗೆ ಒತ್ತನ್ನು ನೀಡುತ್ತವೆಯೋ ಹಾಗೆಯೇ ಬದಲಾದ ಕಾಲಕ್ಕೆ ತಕ್ಕಂತೆ ತನ್ನ ಶೈಕ್ಷಣಿಕ ಉದ್ದೇಶ, ಕಾರ್ಯಗಳನ್ನು ಉತ್ತಮಪಡಿಸಿಕೊಳ್ಳುವಲ್ಲಿ ಸಮಾಜಕಾರ್ಯ ಶಿಕ್ಷಣವು ಪ್ರಾಮುಖ್ಯತೆಯನ್ನು ನೀಡುತ್ತಿದೆ. ವೃತ್ತಿಪರ ಸಮಾಜಕಾರ್ಯ ಶಿಕ್ಷಣವು ಮನುಷ್ಯನ ಆವಶ್ಯಕತೆ ಹಾಗೂ ಆಕಾಂಕ್ಷೆಗಳನ್ನು ಪೂರೈಸುವುದರೊಂದಿಗೆ ಸಮಾಜದಲ್ಲಿ ತನ್ನ ಮಹತ್ವವನ್ನು ಗುರುತಿಸಿಕೊಂಡಿದೆ. ಸಮಾಜಕಾರ್ಯ ಶಿಕ್ಷಣವನ್ನು ಕಲಿತಂತಹ ಯಾರೇ ಆದರೂ ಒದಗಿಸುವಂತಹ ಸೇವೆಗಳು ವೈಜ್ಞಾನಿಕ ರೀತಿಯಿಂದ ಕೂಡಿದ್ದು ನಿರಂತರ ಹಾಗೂ ಪರಿಣಾಮಕಾರಿಯಾಗಿ ಕೂಡ ಆಗಿರುತ್ತದೆ. ಸಮಾಜಕಾರ್ಯದ ಪರಿಕಲ್ಪನೆ ಹಾಗೂ ಕಾರ್ಯ ವೈಖರಿಯು ಭಿನ್ನತೆಯನ್ನು ಒಳಗೊಂಡಿದ್ದು ಅದು ತನ್ನದೇ ಆದ ರೀತಿಯಲ್ಲಿ ಕಾರ್ಯ ನಿರ್ವಹಿಸಲು ಸಹಾಯಕವಾಗಿದೆ. ಸಮಾಜಕಾರ್ಯವು ತನ್ನ ಸೇವಾಕಾರ್ಯವನ್ನು ಹಂತ ಹಂತವಾಗಿ ಮಾಡುತ್ತದೆ. ಮೊದಲನೆಯ ಹಂತದಲ್ಲಿ ಅಭಿವೃದ್ಧಿಯ ಅಂಶವನ್ನು ಗಮನದಲ್ಲಿರಿಸಿಕೊಂಡು ಅದಕ್ಕೆ ಸರಿಹೊಂದುವಂತಹ ಕಾರ್ಯಯೋಜನೆ, ರೂಪುರೇಖೆ ಹಾಗೂ ಕಾರ್ಯಕ್ರಮಗಳನ್ನು ಸಿದ್ಧಪಡಿಸುತ್ತದೆ. ಇದು ಸದೃಢ ಹಾಗೂ ಅಭಿವೃದ್ಧಿಯತ್ತ ನಡೆಯುವ ಸಮಾಜ ನಿರ್ಮಾಣಕ್ಕೆ ಪೂರಕವಾಗಿರುತ್ತದೆ. ಹಿತದೃಷ್ಟಿಯನ್ನು ಕೇಂದ್ರೀಕರಿಸಿ ಅದರ ಏಳಿಗೆಗೆ ಸರಿಹೊಂದುವಂತಹ ಅಭಿವೃದ್ಧಿ ಕಾರ್ಯಗಳನ್ನು ಈ ಹಂತದಲ್ಲಿ ಮಾಡಲಾಗುತ್ತದೆ. ಎರಡನೆಯ ಹಂತದಲ್ಲಿ ಸಮಸ್ಯೆಗಳನ್ನು ವೈಜ್ಞಾನಿಕ ರೀತಿಯಲ್ಲಿ ಅರಿತುಕೊಂಡು ಅದಕ್ಕೆ ಸೂಕ್ತ ರೀತಿಯಲ್ಲಿ ಪರಿಹಾರವನ್ನು ಒದಗಿಸುತ್ತದೆ. ಸಮಾಜ ಅಭಿವೃದ್ಧಿ ಪಥದತ್ತ ಸಾಗಲು ಪ್ರಸ್ತುತ ಸಮಾಜಕ್ಕೆ ಸಮಾಜಕಾರ್ಯ ಅಧ್ಯಯನ ನಡೆಸಿರುವ ಸಮಾಜಕಾರ್ಯಕರ್ತರ ಅಗತ್ಯವಿದೆ. ಸಮಾಜಕಾರ್ಯ ಶಿಕ್ಷಣವನ್ನು ಪಡೆಯಲು ಹೆಚ್ಚಾಗಿ ಹಿಂದುಳಿದ, ಹಳ್ಳಿಯ, ಉತ್ತಮ ಸೇವಾ ಮನೋಭಾವನೆಯನ್ನು ಉಳ್ಳವರು ಸಮಾಜಕಾರ್ಯವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅವರ ಮನೋಭಾವವನ್ನು ಉತ್ತೇಜಿಸುವ ಈ ಶಿಕ್ಷಣವು ಕೌಶಲ್ಯಗಳನ್ನು ಬೆಳೆಸಿಕೊಳ್ಳುವಂತೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಉತ್ತಮ ಸೇವಾಮನೋಭಾವ, ವ್ಯಕ್ತಿಯನ್ನು ಅರ್ಥಮಾಡಿಕೊಳ್ಳುವ ಗುಣ, ಸ್ವಭಾವ ಎಲ್ಲವೂ ಒಬ್ಬ ಉತ್ತಮ ಸಮಾಜಕಾರ್ಯಕರ್ತನನ್ನು ಸಮಾಜಕ್ಕೆ ನೀಡುವಲ್ಲಿ ಸಮಾಜಕಾರ್ಯದ ಪಾತ್ರ ಅತಿ ಮಹತ್ವವಾದದ್ದು. ಸಮಾಜಕಾರ್ಯವು ನಿಧಾನವಾಗಿಯಾದರೂ ನಿರಂತರವಾದ ಪ್ರಗತಿಯಿಂದ ಒಂದು ಪರಿಪೂರ್ಣ ವೃತ್ತಿಯಾಗುವ ಎಲ್ಲಾ ಲಕ್ಷಣಗಳನ್ನು ಹೊಂದಿದೆ. ಸಮಾಜಕಾರ್ಯಕರ್ತರ ಕೆಲಸವು ನಿರಂತರವಾದದ್ದು. ಇದಕ್ಕೆ ಯಾವುದೇ ಪ್ರತಿಫಲಾಪೇಕ್ಷೆಯನ್ನು ನಿರೀಕ್ಷಿಸದೆ, ನಿಷ್ಕಲ್ಮಷವಾದ ಸೇವೆಯನ್ನು ಸಮಾಜಕಾರ್ಯಕರ್ತರು ನಿರಂತರವಾಗಿ ನೀಡಿದ್ದಾರೆ, ನೀಡುತ್ತಿದ್ದಾರೆ ಹಾಗೂ ನೀಡುತ್ತಿರುತ್ತಾರೆ. ನಾಗೇಶ್.ಎಂ ಸಹ ಪ್ರಾಧ್ಯಾಪಕರು, ಸಮಾಜಕಾರ್ಯ ವಿಭಾಗ, ಪೂಜ ಭಾಗವತ್ ಸ್ಮಾರಕ ಮಹಾಜನ ಸ್ನಾತಕೋತ್ತರ ಕೇಂದ್ರ, ಮೈಸೂರು ಸಂಧ್ಯಾರಾಣಿ.ಎಂ.ಸಿ. ಸಂಶೋಧನಾ ವಿದ್ಯಾರ್ಥಿ, ಸಮಾಜಕಾರ್ಯ ವಿಭಾಗ, ಪೂಜ ಭಾಗವತ್ ಸ್ಮಾರಕ ಮಹಾಜನ ಸ್ನಾತಕೋತ್ತರ ಕೇಂದ್ರ, ಮೈಸೂರು.
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
SITE MAP
SiteTRAININGJOB |
HR SERVICESOTHER SERVICESnIRATHANKA CITIZENS CONNECT |
NIRATHANKAPOSHOUR OTHER WEBSITESSubscribe |
MHR LEARNING ACADEMY
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|