ಸಮಾಜಕಾರ್ಯದ ಮೌಲ್ಯಗಳಲ್ಲಿ ನಂಬಿಕೆಯಿಟ್ಟು, ಸಮುದಾಯ ಸಂಘಟನೆಯ ತತ್ವಗಳನ್ನು ಸಮುದಾಯದಲ್ಲಿ ಅಳವಡಿಸುವ ಮೂಲಕ ನಿಜ ಸಮಾಜಕಾರ್ಯವನ್ನು ಆಚರಿಸುತ್ತಿರುವ ಸಮಾನಮನಸ್ಕ ಯುವಜನರ ತಂಡವೇ ಉಸಿರಿಗಾಗಿ ಹಸಿರು. ಸದರಿ ತಂಡಕ್ಕೆ ಸೂಕ್ತ ಮಾರ್ಗದರ್ಶನ ನೀಡಿ ಮುನ್ನಡೆಸುತ್ತಿರುವವರೂ ಸಹ ವೃತ್ತಿಪರ ಸಮಾಜಕಾರ್ಯರ್ತರು ಎಂಬುದು ವಿಶೇಷ. ಮೇಲ್ನೋಟಕ್ಕೆ ಪರಿಸರ ಪ್ರೇಮಿಗಳ ಗುಂಪಾಗಿ ಕಂಡರೂ ಒಳಹೊಕ್ಕು ನೋಡಿದಾಗ ಸಮಾಜಕಾರ್ಯದ ನಿಜವಾದ ಆಚರಣೆ ಅನಾವರಣಗೊಳ್ಳುತ್ತದೆ. ಸಮುದಾಯ ಸಂಘಟನೆಯ ಬಹುಪಾಲು ತತ್ವಗಳನ್ನು ಅಳವಡಿಸಿಕೊಂಡು ಯಶಸ್ಸಿನತ್ತ ಸಾಗುತ್ತಿರುವ ತಂಡಕ್ಕೆ ಸಮಾಜಕಾರ್ಯವೇ ಸ್ಪೂರ್ತಿ. ಸುಸ್ಥಿರ ಅಭಿವೃದ್ಧಿಯಿಂದ ಮಾತ್ರ ಮನುಕುಲದ ಉಳಿವು ಸಾಧ್ಯವೆಂದು ನಂಬಿರುವ ಸದಸ್ಯರು, ತಮ್ಮ ಗುರಿ ಸಾಧನೆಗಾಗಿ ತಮ್ಮಲ್ಲಿರುವ ಅಗಾಧ ಇಚ್ಚಾಶಕ್ತಿಯಲ್ಲಿ ನಂಬಿಕೆಯಿಟ್ಟಿದ್ದಾರೆ. ಹೀಗೆ ತಮ್ಮದೇ ವಿಭಿನ್ನ ಕಾರ್ಯವೈಖರಿಯ ಮೂಲಕ ಮನೆಮಾತಾಗಿರುವ ತಂಡದ ಕಾರ್ಯಗಳಲ್ಲಿ ಎದ್ದುಕಾಣುವ ಸಮಾಜಕಾರ್ಯ ಆಚರಣೆಯ ಹೆಗ್ಗುರುತುಗಳನ್ನು ಗುರುತಿಸುವ ಪ್ರಯತ್ನವೇ ಈ ಲೇಖನ. ಪ್ರಸ್ತುತ ಕಾಲಮಾನದಲ್ಲಿ, ವಿಶ್ವದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಅಭ್ಯಸಿಸಲ್ಪಡುತ್ತಿರುವ ಉಳಿದೆಲ್ಲ ವಿಷಯಗಳಿಗಿಂತ ಸಮಾಜಕಾರ್ಯವು ಕೊಂಚ ವಿಭಿನ್ನವೂ, ವಿಸ್ತಾರವೂ ಆಗಿದೆ ಎಂದರೆ ಅತಿಶಯೋಕ್ತಿಯಾಗದು. ಸಮಾಜಕಾರ್ಯದ ವ್ಯಾಪ್ತಿ ಹಾಗೂ ಕಾರ್ಯಕ್ಷೇತ್ರ ಇತರ ವಿಷಯಗಳಂತೆ ಸೀಮಿತವಾಗಿರದೇ, ಸಮಾಜದ ಎಲ್ಲ ರಂಗಗಳಿಗೆ ವ್ಯಾಪಿಸಿದೆ. ಸಮಾಜಸೇವೆ ಎಂದೇ ಕರೆಯಲ್ಪಡುತ್ತಿದ್ದ ಸಮಾಜಕಾರ್ಯ ಈ ಹಿಂದೆ ಸೀಮಿತವಾಗಿದ್ದು, ಪ್ರತಿಯೊಬ್ಬರೂ ಮಾಡಬಹುದಾದಂತಹ ಕಾರ್ಯವಾಗಿತ್ತು. ಪುರಾತನ ಕಾಲದಿಂದಲೂ ಭಾರತದಲ್ಲಿ ಸಮಾಜಕಾರ್ಯದ ಬೇರುಗಳನ್ನು ಕಾಣಬಹುದಾಗಿದ್ದರೂ ಅದಕ್ಕೆ ಸೈದ್ದಾಂತಿಕ ರೂಪ ನೀಡಿದ್ದು ಮಾತ್ರ ಇಪ್ಪತ್ತನೇ ಶತಮಾನದಲ್ಲಿ. ಸರ್ವರ ಒಳಿತಿಗಾಗಿ ಹಮ್ಮಿಕೊಳ್ಳುತ್ತಿದ್ದ ಯಜ್ಞ, ಹೋಮ-ಹವನ, ವೇದಗಳ ಕಾಲದಲ್ಲಿ ರೂಢಿಯಲ್ಲಿದ್ದ ದಾನ-ಧರ್ಮಗಳು ಪುರಾತನ ಭಾರತದಲ್ಲಿ ಅಸ್ತಿತ್ವದಲ್ಲಿದ್ದ ಸಮಾಜಕಾರ್ಯಕ್ಕೆ ಹಿಡಿದಗನ್ನಡಿಗಳಾಗಿವೆ. ಸಮಾಜಸೇವೆ ಎಂಬ ಪರಿಕಲ್ಪನೆಯಡಿಯಲ್ಲಿ ಇವುಗಳನ್ನು ಬಂಧಿಸಿದ್ದರೂ ಸಮಾಜಕಾರ್ಯದಿಂದ ಬೇರ್ಪಡಿಸಲು ಅಸಾಧ್ಯ. ಸಮಾಜಕಾರ್ಯ ಹುಟ್ಟಿದ್ದೇ ಸಮಾಜಸೇವೆಯಿಂದ. ಸೇವೆಯಿಲ್ಲದ ಸಮಾಜಕಾರ್ಯ ಆತ್ಮವಿಲ್ಲದ ದೇಹವಿದ್ದಂತೆ. ಆಧುನಿಕ ಸಮಾಜಕಾರ್ಯದಲ್ಲಿ ಸೇವೆ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಹೊಂದಿರುವುದಲ್ಲದೇ ಸಮಾಜಕಾರ್ಯದ ಮೌಲ್ಯಗಳಲ್ಲೊಂದಾಗಿದೆ. ಇದು ಸಮಾಜಕಾರ್ಯದಲ್ಲಿ ಸೇವೆಯ ಮಹತ್ವವನ್ನು ಸಾರುತ್ತದೆ. ಮಾನವನ ಶ್ರೇಯಸ್ಸಿಗೇ ಅಲ್ಲದೇ ಪಶು, ಪ್ರಾಣಿ-ಪಕ್ಷಿಗಳ ಕಲ್ಯಾಣಕ್ಕಾಗಿ ಅಶೋಕನು ಕೈಗೊಂಡ ಕಾರ್ಯಗಳನ್ನು ಹೊರತುಪಡಿಸಿದ ಸಮಾಜಕಾರ್ಯ ವಿಷಯದ ಅಧ್ಯಯನ ಊಹಿಸಲಸಾಧ್ಯ. ಮಾನವ ಸಂಕುಲ ಸುಭೀಕ್ಷವಾಗಿರಬೇಕಾದರೆ ಪರಿಸರ ಆರೋಗ್ಯಕರವಾಗಿರಬೇಕೆಂಬ ಅಂಶವನ್ನು ಅರಿತಿದ್ದ ನಮ್ಮ ಪೂರ್ವಜರು ಹೋಮ ಹವನಗಳ ಮೂಲಕ ವಾಯುವನ್ನು ಶುದ್ಧಿಗೊಳಿಸಿದರೆ, ಜೀವ ಜಲವನ್ನು ಗಂಗೆಯೆಂತಲೂ, ಪರಿಸರವನ್ನು ಭಕ್ತಿಭಾವಗಳಿಂದ ಪೂಜಿಸಿ ಆರಾಧಿಸುತ್ತಿದ್ದರು. ಜೊತೆಗೆ ಸೂರ್ಯ, ಚಂದ್ರ, ವರುಣ, ವಾಯು, ವೃಕ್ಷ ಇವೇ ಮೊದಲಾದವುಗಳನ್ನು ಪೂಜ್ಯಭಾವದಿಂದ ಕಾಣುತ್ತಿದ್ದರು. ಅದೊಂದು ಸಂಘಟಿತ ಕಾರ್ಯವಾಗಿತ್ತು. ಇಡೀ ಸಮುದಾಯವೇ ಹೋಮ-ಹವನಗಳಲ್ಲಿ ಭಾಗಿಯಾಗಿ ಎಲ್ಲರ ಶ್ರೇಯಕ್ಕೆ ಎಲ್ಲರೂ ಶ್ರಮಿಸುತ್ತಿದ್ದರು. ಪ್ರಸ್ತುತ ಸಮಾಜಕಾರ್ಯದ ಪ್ರಾಥಮಿಕ ವಿಧಾನಗಳಲ್ಲೊಂದಾದ ಸಮುದಾಯ ಸಂಘಟನೆಯ ತತ್ವಗಳ ತಳಹದಿಯ ಮೇಲೆ ಅಂದಿನ ಸಾಂಘಿಕ ಕಾರ್ಯ ಜರುಗುತ್ತಿತ್ತು. ಇಂದಿನ ಸಮಾಜಕಾರ್ಯಕರ್ತರು ಅಭ್ಯಸಿಸಿ ಆಚರಣೆಗೆ ತರುವ ಸಮುದಾಯ ಸಂಘಟನೆ ಪುರಾತನ ಭಾರತದಲ್ಲಿ ಅಸ್ತಿತ್ವದಲ್ಲಿತ್ತು ಎಂಬುದಕ್ಕೆ ಹೋಮ-ಹವನ, ಹಬ್ಬ-ಹರಿದಿನ ಇವೇ ಮೊದಲಾದ ಆಚರಣಾ ವೈಖರಿಗಳೇ ಸಾಕ್ಷಿ.
ಪರಿಸರ ಸಮಾಜಕಾರ್ಯ ಎಂಬ ಪರಿಕಲ್ಪನೆ ತೀರಾ ಇತ್ತೀಚೆಗೆ ಬೆಳೆದು ಬಂದ ವಿಚಾರವಾಗಿದ್ದರೂ, ಸಮಾಜಕಾರ್ಯದ ಮೂಲ ಮೌಲ್ಯಗಳಾದ ಮಾನವನ ಘನತೆ ಮತ್ತು ಗೌರವ ಹಾಗೂ ಮಾನವ ಹಕ್ಕುಗಳನ್ನು ಪರಿಸರದಿಂದ ಬೇರ್ಪಡಿಸಲಾಗದು. ಮಾನವ ಘನತೆ ಮತ್ತು ಗೌರವಗಳಿಂದ ನಡೆಸಬೇಕಾದರೆ ಉತ್ತಮ ಆರೋಗ್ಯ ಅನಿವಾರ್ಯ. ಪ್ರಸ್ತುತ ಸಮಾಜದಲ್ಲಿ ಉತ್ತಮ ಆರೋಗ್ಯ ಹೊಂದುವುದು ಮಾನವನ ಹಕ್ಕುಗಳಲ್ಲಿ ಪ್ರಮುಖ ಅಂಶವಾಗಿದೆ. ಅನಾರೋಗ್ಯಪೀಡಿತನಾದ ಮಾನವ ಘನತೆ ಗೌರವಗಳಿಂದ ಜೀವನ ನಡೆಸುವುದು ಅಸಾಧ್ಯ. ಮಾನವ ಎದುರಿಸುವ ಬಹುಪಾಲು ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ ಪರಿಸರ ಅಸಮತೋಲನೆಯೇ ಪ್ರಮುಖ ಕಾರಣವಾಗಿರುವುದರಿಂದ ಉತ್ತಮ ಪರಿಸರವನ್ನು ಹೊಂದುವುದೂ ಮಾನವನ ಮೂಲಭೂತ ಹಕ್ಕುಗಳಲ್ಲೊಂದಾಗಿದೆ. ಭಾರತ ಸಂವಿಧಾನದ 21ನೇ ವಿಧಿಯಲ್ಲಿ ಖಾತರಿ ಪಡಿಸಿರುವ ಮಾನವನ ಜೀವಿಸುವ ಹಕ್ಕನ್ನು ಸಾಕಾರಗೊಳಿಸಲು ಉತ್ತಮ ಮತ್ತು ಆರೋಗ್ಯಕರವಾದ ಪರಿಸರದ ಅನಿವಾರ್ಯತೆ ಎದ್ದು ಕಾಣುತ್ತದೆ. ಭಾರತ ಸಂವಿಧಾನದ 42ನೇ ತಿದ್ದುಪಡಿಯನ್ವಯ ಅರಣ್ಯ ಹಾಗೂ ವನ್ಯಪ್ರಾಣಿಗಳನ್ನು ರಕ್ಷಿಸುವುದರ ಜೊತೆಗೆ ಪರಿಸರವನ್ನು ಸಂರಕ್ಷಿಸುವ ಹೊಣೆ ಸರ್ಕಾರಗಳದ್ದಾಗಿದೆಯೆಂದು ವಿಧಿ 48(ಎ) ತಿಳಿಸುತ್ತದೆ. ಇವುಗಳೊಟ್ಟಿಗೆ ವಿಧಿ 51-ಎ(ಜಿ) ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಮೂಲಭೂತ ಕರ್ತವ್ಯವೆಂದು ತಿಳಿಸುತ್ತದೆ. ಹಾಗಿದ್ದರೂ ಸಹ ಮನುಷ್ಯನ ಆರೋಗ್ಯಕರ ಜೀವನಕ್ಕೆ ಅನಿವಾರ್ಯವಿರುವ ಒಟ್ಟು ಭೂಬಾಗದ 33 ಪ್ರತಿಶತ ಭೂಪ್ರದೇಶದಲ್ಲಿ ಅರಣ್ಯವಿಲ್ಲ. ಪ್ರಸ್ತುತ ಕರ್ನಾಟಕದಲ್ಲಿ ಲಭ್ಯವಿರುವ ಅರಣ್ಯ ಪ್ರದೇಶದ ಒಟ್ಟಾರೆ ವಿಸ್ತೀರ್ಣ 17 ಪ್ರತಿಶತವೆಂದು ಅಂಕಿಅಂಶಗಳು ತಿಳಿಸಿದರೂ ವಾಸ್ತವ ತೀರಾ ಕಡಿಮೆ. ದಿನಾಂಕ 20.02.2016 ರಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪರಿಸರವಾದಿಗಳಾದ ಶ್ರೀಯುತ ಚೌಡಪ್ಪನವರು ಉಸಿರಿಗಾಗಿ ಹಸಿರು ತಂಡದ ವಾರ್ಷಿಕ ವರದಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡುತ್ತಾ ಕರ್ನಾಟಕದಲ್ಲಿ ಲಭ್ಯವಿರುವ ಒಟ್ಟು ಅರಣ್ಯಪ್ರದೇಶದ ವಿಸ್ತೀರ್ಣ ಕೇವಲ 4 ರಿಂದ 6 ಪ್ರತಿಶತ ಮಾತ್ರ ಉಳಿದಂತೆ ಸುಮಾರು 11 ರಿಂದ 13 ರಷ್ಟು ಅರಣ್ಯ ಪ್ರದೇಶ ಕುರುಚಲು ಗಿಡಗಳಿಂದಾವೃತವಾಗಿದೆಯೆಂದು ಅಭಿಪ್ರಾಯಪಟ್ಟರು. ಮಾನವನ ಅನಿವಾರ್ಯತೆಗಳನ್ನು ಪೂರೈಸಲು ಸಾಕಾಗುವಷ್ಟು ಯಥೇಚ್ಚ ಸಂಪನ್ಮೂಲಗಳು ನಮ್ಮಲ್ಲಿವೆಯಾದರೂ ಅವುಗಳಿಂದ ಮಾನವನ ದುರಾಸೆಗಳನ್ನು ಈಡೇರಿಸಲಾರದೆಂಬ ಮಹಾತ್ಮ ಗಾಂಧೀಜಿಯವರ ಮಾತು ಪ್ರಸ್ತುತ ಸಮಾಜದಲ್ಲಿ ನಿಜವಾಗುತ್ತಿದೆ. ಮನುಷ್ಯ ಅಕ್ಷರಸ್ಥನಾದರೂ ಅನಾಗರಿಕನಂತೆ ಸಮಾಜದ ಒಳಿತನ್ನು ಬದಿಗೊತ್ತಿ ತನ್ನ ಸ್ವಾರ್ಥಕ್ಕಾಗಿ ಎಲ್ಲವನ್ನೂ ಉಪಯೋಗಿಸಿಕೊಳ್ಳತೊಡಗಿದ. ಇದರ ಫಲವೇ ಇಂದು ಬರಿದಾಗಿರುವ ನೈಸರ್ಗಿಕ ಮತ್ತು ಪ್ರಾಕೃತಿಕ ಸಂಪತ್ತು ಹಾಗೂ ಕಾಣೆಯಾಗಿರುವ ವನ್ಯ ಪ್ರಾಣಿ-ಪಕ್ಷಿಗಳು. ವಿಲಾಸಿ ಜೀವನ ನಡೆಸಬೇಕೆಂಬ ಮನುಷ್ಯನ ವಿಕೃತ ಆಸೆಗೆ ಬಲಿಯಾಗುತ್ತಿರುವ ಮಾನವೀಯ ಸಂಬಂಧಗಳು ಹಾಗೂ ಅಧಿಕವಾಗುತ್ತಿರುವ ವಸ್ತುಪ್ರೇಮ ಪ್ರಸ್ತುತ ಪರಿಸ್ಥಿತಿಗೆ ಮೂಲ ಕಾರಣ. ಆರೋಗ್ಯಕರ ಜೀವನಕ್ಕೆ ಅನಿವಾರ್ಯವಾಗಿರುವ ಮಾನವೀಯ ಸಂಬಂಧಗಳನ್ನು ಉಪಯೋಗಿಸಿಕೊಳ್ಳುತ್ತಿರುವ ಮನುಷ್ಯನಿಂದು ಅವಶ್ಯಕವೂ ಅಲ್ಲದ ವಸ್ತುಗಳನ್ನು ಅಗಾಧವಾಗಿ ಪ್ರೀತಿಸತೊಡಗುತ್ತಿದ್ದಾನೆ. ಅನವಶ್ಯಕವಾದುದ್ದಕ್ಕೆ ಹೆಚ್ಚಿನ ಪ್ರಾಶಸ್ತ್ಯ ಕೊಡುತ್ತಿರುವ ಮಾನವನಿಂದು ಅನಿವಾರ್ಯವಾದುದ್ದನ್ನು ಕಡೆಗಣಿಸುತ್ತಿದ್ದಾನೆ. ಇದರ ಫಲವೆ ಇಂದು ಮಾನವ ಸಂಬಂಧಗಳಲ್ಲಿ ಸಾಮಾನ್ಯವಾಗಿ ಕಾಣುತ್ತಿರುವ ಅಗಾಧ ಬಿರುಕುಗಳು ಹಾಗೂ ಅಧಿಕವಾಗುತ್ತಿರುವ ಕೊಳ್ಳುಬಾಕ ಸಂಸ್ಕೃತಿ. ತುಸು ಅಧಿಕವೆನಿಸುವ ಮನುಷ್ಯನ ಈ ಕೊಳ್ಳುಬಾಕ ಸಂಸ್ಕೃತಿಗೆ ಭೂಮಿಯ ಮೇಲಿನ ಅಗಾಧ ನೈಸರ್ಗಿಕ ಸಂಪತ್ತಿನ ಜೊತೆಗೆ ಪರಿಸರವೂ ಬಲಿಯಾಗಿದೆ. ಆದರೂ ತೃಪ್ತನಾಗದ ಮಾನವ ತನಗೆ ಅನ್ನ ಒದಗಿಸುತ್ತಿದ್ದ ಮಣ್ಣನ್ನೂ ಮಾರಿ ತನ್ನ ದುರಾಸೆಗಳನ್ನು ಈಡೇರಿಸಿಕೊಳ್ಳಲು ಅಣಿಯಾದ ಕಾರಣ ಪ್ರಸ್ತುತ ಪರಿಸ್ಥಿತಿಯಲ್ಲಿ ಎಲ್ಲೆಂದರಲ್ಲಿ ಎಗ್ಗಿಲ್ಲದೆ ಸಾಗುತ್ತಿರುವ ಅಕ್ರಮ ಮರಳು ಗಣಿಗಾರಿಕೆ, ಮರಳು ಫಿಲ್ಟರ್, ಅರಣ್ಯ ನಾಶ, ಕಾಣೆಯಾಗುತ್ತಿರುವ ಕೆರೆ-ಕುಂಟೆ-ಕಾಲುವೆಗಳು, ನದಿಗಳು, ಹೇಳಲು ಹೆಸರಿಲ್ಲದಂತಿರುವ ಗೋಮಾಳ, ಗುಂಡುತೋಪು, ನೆಡುತೋಪುಗಳು. ಈ ಎಲ್ಲ ಅನೈತಿಕ ಅಕ್ರಮ ಚಟುವಟಿಕೆಗಳಿಂದ ಕೃಷಿಯ ಜೀವಾಳವಾಗಿದ್ದ ಅಂತರ್ಜಲ ಪಾತಾಳ ಸೇರಿತು. ಕೃಷಿ ಅತ್ಯಂತ ವೆಚ್ಚದಾಯಕ ಕಸುಬಾಗಿ, ಗ್ರಾಮಗಳಲ್ಲಿದ್ದ ಜನರು ಕ್ರಮೇಣವಾಗಿ ನಗರಗಳತ್ತ ಮುಖಮಾಡಿದರು. ಪರಿಣಾಮ ನಗರಗಳಲ್ಲಿ ಜನಸಂದಣೆ ಅಧಿಕವಾಗಿ ಮೂಲಭೂತ ಸೌಕರ್ಯಗಳ ಸಮಸ್ಯೆಯನ್ನೂ ಒಳಗೊಂಡಂತೆ, ನಿರುದ್ಯೋಗ ಸಮಸ್ಯೆ, ಅಪರಾಧ, ಕೌಟುಂಬಿಕ ವಿಘಟನೆ, ಇವೇ ಮೊದಲಾದ ಹತ್ತು ಹಲವು ಸಮಸ್ಯೆಗಳಿಗೆ ಕಾರಣವಾಯಿತು. ಈ ಎಲ್ಲ ಸಮಸ್ಯೆಗಳಿಗೆ ನಮ್ಮನ್ನಾಳುತ್ತಿರುವ ಸರ್ಕಾರಗಳೇ ಹೊಣೆಯೆಂದು ವ್ಯರ್ಥ ಚರ್ಚೆಮಾಡಿ ಕಾಲಹರಣ ಮಾಡುವ ಅಕ್ಷರಸ್ಥ ಸಮುದಾಯ ಹಾದಿ ತಪ್ಪುತ್ತಿದ್ದ ಸಮಾಜವನ್ನು ಸರಿದಾರಿಗೆ ತರುವ ಗೋಜಿಗೆ ಹೋಗಲಿಲ್ಲ. ಎಲ್ಲಾ ಬುದ್ಧಿವಂತರು, ಜ್ಞಾನಿಗಳೆನಿಸಿಕೊಂಡವರೂ ಸಮಾಜವನ್ನು ತಿದ್ದುವ ಪ್ರಯತ್ನ ಮಾಡದಿದ್ದರೂ ಕೇವಲ ಬೆರಳೆಣಿಕೆಯಷ್ಟು ಮಂದಿ ಇಂತಹ ಪ್ರಯತ್ನ ಮಾಡಿರುವ ಉದಾಹರಣೆಗಳು ನಮ್ಮ ಕಣ್ಮುಂದೆ ಇವೆ. ಆದರೆ ಕೊಳೆತು-ನಾರುತ್ತಿರುವ ಸಮಾಜವನ್ನು ಶುಚಿಮಾಡಲು ಬೆರಳೆಣಿಕೆಯಷ್ಟು ಮಂದಿಯಿಂದ ಕಷ್ಟಸಾಧ್ಯ. ಈ ಕಾರ್ಯಕ್ಕೆ ಜನಾಂದೋಲನಗಳನ್ನು ಕಟ್ಟುವ ಕಾರ್ಯ ಆಗಬೇಕಿದ್ದು, ಅದು ಸಾಮಾಜಿಕ ಕಳಕಳಿ ಹೊಂದಿರುವ ಸಮಾಜಕಾರ್ಯಕರ್ತರಿಂದ ಸಾಧ್ಯವೆಂದು ನಂಬಿದ ಒಬ್ಬ ಸಮಾಜಕಾರ್ಯ ವಿಷಯವನ್ನು ಬೋಧಿಸುವ ಅತಿಥಿ ಉಪನ್ಯಾಸಕನ ಜೊತೆಗೂಡಿದ ನಾಲ್ಕು ಸಮಾಜಕಾರ್ಯ ಪ್ರಶಿಕ್ಷಣಾರ್ಥಿಗಳಿಂದ ದಿನಾಂಕ 26.01.2015 ರಂದು ಜನ್ಮತಳೆದ ಸಮಾನ ಮನಸ್ಕ ಯುವಜನತೆಯ ತಂಡವೇ ಉಸಿರಿಗಾಗಿ ಹಸಿರು. ಸಮಾಜಕಾರ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದು ಹಲವು ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿ ಪ್ರಸ್ತುತ ಅತಿಥಿ ಉಪನ್ಯಾಸಕನಾಗಿ ಕಾರ್ಯನಿರ್ವಹಿಸುತ್ತಿರುವ ಲೇಖಕರು ವ್ಯವಸಾಯದೆಡೆಗೆ ತಮಗಿರುವ ವ್ಯಾಮೋಹದಿಂದ ವಾರಾಂತ್ಯದಲ್ಲಿ ಕೃಷಿ ಚಟುವಟಿಕೆಗಳಲ್ಲಿಯೂ ಭಾಗಿಯಾಗುತ್ತಾರೆ. 2011 ರಿಂದ 2013ರ ಸಮಯದಲ್ಲಿ ತಮ್ಮ ಹುಟ್ಟೂರಿನಲ್ಲಿ ಕಾಣೆಯಾದ ಅರಣ್ಯ, ಕೆರೆಯಂಗಳದಲ್ಲಿ ಎಗ್ಗಿಲ್ಲದೇ ನಡೆಯುತ್ತಿದ್ದ ಅಕ್ರಮ ಮರಳು ಗಣಿಗಾರಿಕೆ ಮತ್ತು ಅರಣ್ಯದಲ್ಲಿ ನಡೆಯುತ್ತಿದ್ದ ಮರಳು ಫಿಲ್ಟರ್, ಈ ಕಾರಣದಿಂದ ಬರಿದಾದ ಅಂತರ್ಜಲ, ಮಳೆಯನ್ನೇ ನಂಬಿ ಕುಳಿತಿದ್ದ ರೈತರ ಶೋಚನೀಯ ಪರಿಸ್ಥಿತಿಯ ಜೊತೆಗೆ ಮೇವು-ನೀರಿಲ್ಲದೆ ಸಣಕಲಾದ ಪಶುಗಳ ಧೀನಸ್ಥಿತಿ ಕಂಡು ಲೇಖಕರ ಮನ ಮರುಗಿತು. ಹಚ್ಚ ಹಸುರಿನಿಂದ ಕಂಗೊಳಿಸುತ್ತಿದ್ದ ಹಳ್ಳಿ ಬರಿದಾಗಿತ್ತು ಮತ್ತು ಬರಡಾಗುವ ಎಲ್ಲ ಲಕ್ಷಣಗಳೂ ಕಾಣುತ್ತಿದ್ದವು. ಹಳ್ಳಿಯ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿ, ಅಂತರ್ಜಲವನ್ನು ಬರಿದಾಗಿಸುತ್ತಿರುವ ಅಕ್ರಮ ಮರಳು ದಂಧೆಗೆ ಕಡಿವಾಣವಾಕದಿದ್ದರೆ ರೈತರ ಜೀವನಾಡಿ ವ್ಯವಸಾಯದ ವಿನಾಶ ಖಚಿತವೆಂಬ ವಿಚಾರವನ್ನು ಗ್ರಾಮದ ಯುವಜನತೆ ಮತ್ತು ಹಿರಿಯರೊಂದಿಗೆ ಚರ್ಚಿಸಿದರು. ಪ್ರಸ್ತುತ ರೈತರನ್ನು ಬಾಧಿಸುತ್ತಿರುವ ಅಂತರ್ಜಲದ ಸಮಸ್ಯೆಯನ್ನು ತಕ್ಕ ಮಟ್ಟಿಗಾದರೂ ಬಗೆಹರಿಸಬೇಕಾದರೆ ಮರಳು ದಂಧೆಗೆ ಕಡಿವಾಣ ಹಾಕಬೇಕೆಂಬ ಅಂಶವನ್ನು ಸಮುದಾಯದ ಜನರೊಂದಿಗೆ ನಡೆದ ಸಭೆಗಳಲ್ಲಿ ವಿವರಿಸಿದರು. ಸಮುದಾಯ ಸಂಘಟನೆಯ ಸೂತ್ರ ಅತೃಪ್ತಿ ಅಭಿವೃದ್ಧಿಯ ಅಡಿಗಲ್ಲುನ್ನು ಸಮರ್ಥವಾಗಿ ಬಳಸಿಕೊಂಡು ಗ್ರಾಮದ ಜನ ಎದುರಿಸುತ್ತಿರುವ ಸಮಸ್ಯೆಯ ಬಗ್ಗೆ ಅತೃಪ್ತಿಯನ್ನು ಮೂಡಿಸುವಲ್ಲಿ ಲೇಖಕರು ಸಫಲರಾದರು. ಅಂತರ್ಜಲ ಕುಸಿತಕ್ಕೆ ಕಾರಣವಾದ ಅಂಶಗಳನ್ನೂ ಮತ್ತು ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಅನಿವಾರ್ಯವಾಗಿ ಎದುರಿಸಲೇಬೇಕಾದ ಸಮಸ್ಯೆಗಳ ಬಗ್ಗೆಯೂ ಗ್ರಾಮದ ಜನರಲ್ಲಿ ಅರಿವು ಮೂಡಿಸಿದರು. ಮೊದಮೊದಲು ಗ್ರಾಮದ ಸಮಸ್ಯೆಗಳನ್ನು ಚರ್ಚಿಸುವ ಸಭೆಗಳಿಂದ ದೂರ ಉಳಿದ ಕೆಲ ಯುವಕರು ಮತ್ತು ಹಿರಿಯರು, ಆಗುತ್ತಿರುವ ಬೆಳವಣಿಗೆಗಳನ್ನು ಕಂಡು ಸ್ವಯಂಪ್ರೇರಿತವಾಗಿ ತಮ್ಮ ಸಹಕಾರವನ್ನು ನೀಡತೊಡಗಿದರು. ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವೇ ಇಲ್ಲವೆಂದು ಮೂಗುಮುರಿಯುತ್ತಿದ್ದ ಯುವಕರು ಮತ್ತು ಹಿರಿಯರೂ ಸಹ ಸಹಕರಿಸತೊಡಗಿದರು. ಕೇವಲ ಒಂದು ವಿಚಾರವನ್ನು ಚರ್ಚಿಸಲು ಒಗ್ಗೂಡಿದ ಯುವಜನತೆ ಸಭೆಗಳಲ್ಲಿ ಹಲವು ವಿಚಾರಗಳು ಮತ್ತು ಸಮಸ್ಯೆಗಳನ್ನು ಚರ್ಚಿಸಲು ಆರಂಭಿಸಿದರು. ನೈಜ ಸಮಸ್ಯೆಯನ್ನು ಬಿಟ್ಟು ಇತರೆಡೆಗೆ ಚರ್ಚೆಗಳು ಸಾಗುತ್ತಿರುವುದನ್ನು ಗಮನಿಸಿದ ಲೇಖಕರು ಸಭೆಗಳಲ್ಲಿ ಯುವಜನತೆ ವ್ಯಕ್ತಪಡಿಸಿದ ಎಲ್ಲ ಸಮಸ್ಯೆಗಳನ್ನು ಗಣನೆಗೆ ತೆಗೆದುಕೊಂಡು, ಅವುಗಳನ್ನು ಆದ್ಯತೆಗೆ ಅನುಗುಣವಾಗಿ ಅನುಕ್ರಮಣೆಗೊಳಿಸಿದರು. ಗ್ರಾಮದ ಜನತೆ ಎದುರಿಸುತ್ತಿರುವ ಇತರ ಎಲ್ಲ ಸಮಸ್ಯೆಗಳ ಮೂಲ ಅಂತರ್ಜಲದ ಸಮಸ್ಯೆಯಾಗಿರುವುದನ್ನು ಸೂಕ್ಷ್ಮವಾಗಿ ವಿವರಿಸಿದರು. ಇದನ್ನು ಒಪ್ಪಿದ ಗ್ರಾಮದ ಯುವಕರು ಸದರಿ ಸಮಸ್ಯೆಗೆ ಕಾರಣವಾದ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಲು ಪೂರಕ ಕ್ರಿಯಾಯೋಜನೆಗಳನ್ನು ಸಿದ್ಧಪಡಿಸುವ ಮೂಲಕ ಪ್ರಥಮ ಪ್ರಾಶಸ್ತ್ಯದ ಸಮಸ್ಯೆಯನ್ನಾಗಿ ಒಪ್ಪಿಕೊಂಡರು. ಗ್ರಾಮಸ್ಥರನ್ನು ಒಂದು ನಿರ್ದಿಷ್ಟ ಸಮಸ್ಯೆಯಿಂದ ತಮಗೆ ಅತೃಪ್ತಿಯಿದೆ ಎಂದು ಮನವರಿಕೆ ಮಾಡಲು ಲೇಖಕರು, ಸಮುದಾಯ ಸಂಘಟನೆಯ ಅತೃಪ್ತಿಯು ನಿಷ್ಟೃಷ್ಟ ಸಮಸ್ಯೆಯತ್ತ ಮುಖ ಮಾಡಿರಬೇಕು, ಎಂಬ ಸೂತ್ರವನ್ನು ಯಶಸ್ವಿಯಾಗಿ ಉಪಯೋಗಿಸಿಕೊಂಡರು. ಹೀಗೆ ಹಲವು ಸಭೆಗಳ ಮೂಲಕ ಗ್ರಾಮಸ್ಥರ ಸಮಸ್ಯೆಗಳಿಗೆ ಸೂಕ್ತ ಕಾರಣ ಮತ್ತು ಪರಿಹಾರಗಳನ್ನು ಹುಡುಕುತ್ತಿರುವ ವೇಳೆಯಲ್ಲಿ ಅದೇ ಗ್ರಾಮದಲ್ಲಿ ಮರಳು ಗಣಿಗಾರಿಕೆ ಮತ್ತು ಮರಳು ಫಿಲ್ಟರ್ ದಂಧೆಯಲ್ಲಿ ತೊಡಗಿದ್ದ ಕೆಲವರು ವಿರೋಧ ವ್ಯಕ್ತಪಡಿಸಿದರು. ಒಂದು ಹಂತದಲ್ಲಿ ಸಮಸ್ಯೆಯ ತೀವ್ರತೆಯನ್ನು ಅರ್ಥಮಾಡಿಸಲು ಯುವಕರಾದಿಯಾಗಿ ಹಿರಿಯರು ಮತ್ತು ಲೇಖಕರು ಪ್ರಯತ್ನಿಸಿದರು. ಆದರೆ ಸಮಸ್ಯೆಗೆ ಕಾರಣವಾದವರು ಅರ್ಥಮಾಡಿಕೊಳ್ಳಲಿಲ್ಲ. ಈ ವಿಚಾರದ ಬಗ್ಗೆ ಗ್ರಾಮದ ಹಿರಿಯರನ್ನು ಮಧ್ಯಸ್ಥಿಕೆ ವಹಿಸಲು ಕೋರಿ ಯುವಕರು ವಿನಂತಿಸಿದರು. ಲೇಖಕನನ್ನೊಳಗೊಂಡ ಹಿರಿಯರ ಗುಂಪೊಂದು ಮರಳು ಗಣಿಗಾರಿಕೆ ಮಾಡುತ್ತಿದ್ದ ಹಾಗೂ ಅದನ್ನು ಸಾಗಿಸಲು ಸಹಕರಿಸುತ್ತಿದ್ದ ಟ್ರ್ಯಾಕ್ಟರ್ ಮಾಲಿಕರೊಡನೆ ಸಮಾಲೋಚಿಸಿದರು. ಪ್ರಾರಂಭದಲ್ಲಿ ಒಪ್ಪಿಗೆ ನೀಡಿದ ಮಾಲಿಕರು ನಂತರದ ದಿನಗಳಲ್ಲಿ ತಮ್ಮ ಹಳೆಯ ಚಾಳಿಯನ್ನು ಮುಂದುವರೆಸಿದರು. ಈ ಹಂತದಲ್ಲಿ ಲೇಖಕ ಮರಳು ದಂಧೆಯಲ್ಲಿ ಪಾಲ್ಗೊಂಡವರಿಗೆ ಸಮಸ್ಯೆಯ ತೀವ್ರತೆಯನ್ನು ಅರ್ಥಮಾಡಿಸುವಲ್ಲಿ ಪ್ರಯತ್ನಿಸಿದನು. ಇಡೀ ಗ್ರಾಮವೇ ನೀರಿನ ಅಭಾವದಿಂದ ತಲ್ಲಣಗೊಂಡಿದೆ ಒಂದು ವೇಳೆ ಈ ಅಕ್ರಮ ದಂಧೆ ಹೀಗೆಯೇ ಮುಂದುವರೆದರೆ ಮುಂದೊಂದು ದಿನ ಕುಡಿಯುವ ನೀರಿಗೂ ಪರದಾಡಬೇಕಾಗುವುದು. ಮನುಷ್ಯರಷ್ಟೇ ಅಲ್ಲದೇ ಪಶುಗಳೂ ಸಹ ನೀರಿಲ್ಲದೇ ಸಾಯುವಂತಹ ಪರಿಸ್ಥಿತಿ ಎದುರಾಗಬಹುದೆಂದು ವಿವರಿಸುವ ಮೂಲಕ ಅತೃಪ್ತಿಯು ಸರ್ವರ ಸ್ವತ್ತಾಗಬೇಕು ಎಂಬ ತತ್ವವನ್ನು ಅಳವಡಿಸಲು ಪ್ರಯತ್ನಿಸಿದರು. ಹಣ ಸಂಪಾದಿಸುವ ಅಮಲಿನಲ್ಲಿದ್ದವರು ಲೇಖಕನ ಮಾತುಗಳನ್ನು ತಿರಸ್ಕರಿಸಿದರು. ಮೇಲಿನ ಎಲ್ಲ ಆಗುಹೋಗುಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಯುವರೈತರ ತಾಳ್ಮೆ ಎಲ್ಲೆ ಮೀರಿತ್ತು. ಏನಾದರಾಗಲಿ ಎಲ್ಲವನ್ನೂ ಎದುರಿಸೋಣ ಎಂದು ಒಗ್ಗೂಡಿದ ಕೆಲವೇ ಯುವರೈತರು ತಮ್ಮ ಗ್ರಾಮದಲ್ಲಿ ಅಕ್ರಮವಾಗಿ ನಡೆಯುತ್ತಿರುವ ಮರಳು ದಂಧೆಯನ್ನು ಕೂಡಲೇ ತಡೆಯಲು ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಿ ತಹಸೀಲ್ದಾರರಿಗೆ ಮತ್ತು ಆರಕ್ಷಕ ಉಪ ನಿರೀಕ್ಷಕರಿಗೆ ದೂರನ್ನು ಸಿದ್ಧಪಡಿಸಿ ಸಲ್ಲಿಸಿದರು. ದೂರು ನೀಡಿ ಒಂದು ವಾರ ಕಳೆದರೂ ಸಂಬಂಧಿಸಿದ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದ ಕಾರಣ ಲೇಖಕರೊಂದಿಗೆ ಚರ್ಚಿಸಿದ ಯುವಜನತೆ ಜಿಲ್ಲಾಧಿಕಾರಿಯವರಿಗೆ ಅರ್ಜಿಯನ್ನು ಸಿದ್ಧಪಡಿಸಿದರು. ತಹಸೀಲ್ದಾರ್ ಮತ್ತು ಆರಕ್ಷಕ ಉಪನಿರೀಕ್ಷಕರಿಗೆ ಸಲ್ಲಿಸಿದ ದೂರುಗಳ ಸ್ವೀಕೃತಿಗಳ ಸಮೇತ ಜಿಲ್ಲಾಧಿಕಾರಿಯವರಿಗೆ ಖುದ್ಧಾಗಿ ಅರ್ಜಿ ಸಲ್ಲಿಸಿದರು. ಜೀವಮಾನದಲ್ಲಿ ಎಂದೂ ಜಿಲ್ಲಾಧಿಕಾರಿಯವರ ಕಛೇರಿಗೆ ಭೇಟಿ ನೀಡದ ಯುವಕರು ಅಂದು ಭೇಟಿ ನೀಡಿ ಜಿಲ್ಲಾಧಿಕಾರಿಯರಿಗೆ ಮನವಿ ಸಲ್ಲಿಸಿ ಪರಿಸ್ಥಿತಿಯ ಸಂಪೂರ್ಣ ಚಿತ್ರಣವನ್ನು ವಿವರಿಸಿದ್ದು ನಿಜಕ್ಕೂ ಸಾಧನೆಯೇ. ಹೀಗೆಯೇ ಯುವಜನರು ಲೇಖಕರ ಮಾರ್ಗದರ್ಶನದಲ್ಲಿ ಕಾನೂನಿನ ಪರಧಿಯಲ್ಲಿ ತಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಪ್ರಯತ್ನಿಸಿದರು. ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ ಕೆಲವೇ ದಿನಗಳಲ್ಲಿ ಆರಕ್ಷಕ ಸಿಬ್ಬಂಧಿ ಗ್ರಾಮಕ್ಕೆ ಭೇಟಿ ನೀಡಿ ಸಂಬಂಧಿಸಿದವರಿಗೆ ಎಚ್ಚರಿಕೆ ಕೊಟ್ಟರೆಂದು ಯುವಕರು ತಿಳಿಸಿದರು. ಆದರೆ ಮರಳು ಸಾಗಾಣಿಕೆ ನಿರಂತರವಾಗಿ ನಡೆಯುತ್ತಿತ್ತು. ಮರಳು ಸಾಗಾಣಿಕೆಗೆ ಕಡಿವಾಣ ಹಾಕಲು ನಿಯೋಜಿಸಿದ ಆರಕ್ಷಕ ಸಿಬ್ಬಂದಿಯೇ ಸಾಗಾಣಿಕಾದಾರರೊಂದಿಗೆ ಕೈಜೋಡಿಸಿ, ಸಾಗಾಣಿಕೆಗೆ ಅನುವು ಮಾಡಿಕೊಟ್ಟಿರುವ ಸತ್ಯ ತಿಳಿಯುತ್ತಿದ್ದಂತೆಯೇ ಕುಪಿತರಾದ ಯುವಜನತೆ ಮರಳು ಸಾಗಾಟ ಮಾಡುತ್ತಿದ್ದ ಲಾರಿಗಳನ್ನು ತಡೆದು ಆರಕ್ಷಕ ಉಪನಿರೀಕ್ಷಕರಿಗೆ ವಿಷಯ ತಿಳಿಸಿದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಆರಕ್ಷಕ ಸಿಬ್ಬಂದಿ ಲಾರಿಯನ್ನು ಸುಪರ್ದಿಗೆ ಪಡೆದು ಠಾಣೆಗೆ ಒಯ್ದರು. ಈ ಘಟನೆಯಿಂದ ಕುಪಿತರಾದ ಮರಳು ಸಾಗಾಣಿಕೆದಾರರು ಲೇಖಕ ಮತ್ತು ಯುವಕರ ಮೇಲೆ ಸೇಡು ತೀರಿಸಿಕೊಳ್ಳುವ ಸಂಚು ರೂಪಿಸಿದರು. ಗ್ರಾಮದ ಕೆಲ ಹಿರಿಯರಿಗೆ ಹಣದ ಆಮಿಷವೊಡ್ಡಿದ ದಂಧೆಕೋರರು, ಹಿರಿಯರನ್ನು ಯುವಕರ ವಿರುದ್ಧ ಎತ್ತಿ ಕಟ್ಟಿದರು. ಅಲ್ಲಿಯವರೆಗೂ ದಂಧೆಕೋರರ ವಿರುದ್ಧವಾಗಿ ಹರಿಹಾಯುತ್ತಿದ್ದ ಹಿರಿಯರು ಅವರ ಪರವಾಗಿಯೇ ವಾದ ಮಂಡಿಸತೊಡಗಿದರು. ಇದರಿಂದ ಬೇಸತ್ತ ಯುವಜನತೆ ಹೋರಾಟದಿಂದ ದೂರ ಉಳಿಯಲು ನಿಶ್ಚಯಿಸಿದರು. ಪರಿಣಾಮವಾಗಿ ಯುವಜನತೆಯ ಗುಂಪು ಒಡೆದು ಹೋಳಾಯಿತು. ಸಹಕರಿಸುತ್ತಿದ್ದ ಯುವಜನತೆ ಹೋರಾಟದಿಂದ ವಿಮುಖರಾದರು. ಹೋರಾಟದಲ್ಲಿ ಪಾಲ್ಗೊಳ್ಳುವವರ ಸಂಖ್ಯೆ ಕ್ರಮೇಣವಾಗಿ ಕುಗ್ಗುತ್ತಾ ಹೋಯಿತು. ಘಟನೆ ನಡೆದ ಕೆಲವೇ ದಿನಗಳಲ್ಲಿ ಲೇಖಕನೊಂದಿಗೆ ಕೈಜೋಡಿಸುವವರ ಯುವಕರ ಸಂಖ್ಯೆ ಹನ್ನೆರಡರಿಂದ ಎರಡಕ್ಕಿಳಿಯಿತು. ತಾನು ಹುಟ್ಟಿ ಬೆಳೆದ ಹಳ್ಳಿಯ ಜನಕ್ಕೆ ಒಳಿತು ಮಾಡಲು ಯತ್ನಿಸಿದ ಲೇಖಕರಿಗೆ ತನ್ನೊಡನೆ ಬೆಳೆದವರಿಂದಲೇ ಮುಖಭಂಗವಾಯಿತು. ಗ್ರಾಮದ ಯುವಜನತೆ ಮತ್ತು ಮಕ್ಕಳಿಗೆ ಮಾದರಿಯಂತಿದ್ದ ಲೇಖಕರು ಗ್ರಾಮಸ್ಥರಿಂದಲೇ ಅಪಹಾಸ್ಯಕ್ಕೀಡಾದರು. ಮಾರ್ಗದರ್ಶನ ಸ್ವೀಕರಿಸುತ್ತಿದ್ದವರು ಬುದ್ಧಿಮಾತುಗಳನ್ನು ಹೇಳತೊಡಗಿದರು. ಹೊಗಳುತ್ತಿದ್ದ ಜನರು ತೆಗಳಲಾರಂಭಿಸಿದರು ಮತ್ತು ಗೌರವಿಸುತ್ತಿದ್ದವರು ತಿರಸ್ಕಾರದಿಂದ ಕಾಣಲು ಆರಂಭಿಸಿದರು. ಈ ಘಟನೆಗಳು ಲೇಖಕನನ್ನೂ ಒಳಗೊಂಡಂತೆ ಗ್ರಾಮದ ಕೆಲ ಯುವಕರನ್ನೂ ಭಾದಿಸಿದವು. ಆದರೆ ಲೇಖಕರು ಕೈಗೊಂಡ ಕಾರ್ಯವನ್ನು ಅರ್ಧಕ್ಕೆ ನಿಲ್ಲಿಸಲಿಲ್ಲ, ಬದಲಿಗೆ ಸೀಮಿತಗೊಳಿಸಿದ್ದ ಆಲೋಚನೆಗಳನ್ನು ವಿಸ್ತರಿಸಿದರು. ಒಂದು ಹಳ್ಳಿಯ ರೈತರ ಸಮಸ್ಯೆಗಳನ್ನು ಬಗೆಹರಿಸುವತ್ತ ಕೇಂದ್ರೀಕರಿಸಿದ್ದ ಲೇಖಕನ ದೃಷ್ಟಿಕೋನ ಇಡೀ ರೈತಸಮುದಾಯದ ಮೂಲಭೂತ ಸಮಸ್ಯೆಗಳ ಕಡೆ ಹರಿಯಿತು. ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸುವುದರ ಬದಲು ಸುಸ್ಥಿರ ಪರಿಹಾರಗಳೆಡೆ ಗಮನ ಹರಿಸತೊಡಗಿದರು. ಜನರ ಬದಲಾಗಿ ಜನಾಂಧೋಲನಗಳನ್ನು ರೂಪಿಸುವತ್ತ ಕ್ರಿಯಾ ಯೋಜನೆಗಳನ್ನು ಸಿದ್ಧಪಡಿಸಿದರು. ನೇರವಾಗಿ ಸಮಸ್ಯೆಯ ಜುಟ್ಟಿಗೆ ಕೈಹಾಕುವ ಬದಲು ಸಮಸ್ಯೆಯನ್ನು ಬುಡಸಮೇತ ಕಿತ್ತೊಗೆಯಲು ಆಲೋಚಿಸತೊಡಗಿದರು. ಈ ಎಲ್ಲ ಹುಚ್ಚುತನಗಳನ್ನು ತಲೆಗೆ ಹತ್ತಿಸಿಕೊಂಡ್ಡಿದ್ದರ ಫಲವಾಗಿ ಜನಿಸಿದ ಕೂಸೇ ಉಸಿರಿಗಾಗಿ ಹಸಿರು. ಸಾರ್ವಜನಿಕ ಸ್ಥಳಗಳಲ್ಲಿ ಸಸಿಗಳನ್ನು ನೆಟ್ಟು, ಅವುಗಳ ಪೋಷಣೆ ಹಾಗೂ ಸಂರಕ್ಷಣೆಯ ಜವಾಬ್ದಾರಿಯನ್ನು ಸಮುದಾಯಕ್ಕೆ ಒಪ್ಪಿಸುವ ಮೂಲಕ ಶ್ರೀಸಾಮಾನ್ಯರಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದೊಂದಿಗೆ ಒಗ್ಗೂಡಿದ ಸಮಾನ ಮನಸ್ಕ ಯುವಜನರ ತಂಡವೇ ಉಸಿರಿಗಾಗಿ ಹಸಿರು. ಶಾಲೆ, ದೇವಸ್ಥಾನ, ಅಂಗನವಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಪೋಲೀಸ್ ಠಾಣೆ, ಸಮುದಾಯ ಭವನ ಇವೇ ಮೊದಲಾದ ಸಾರ್ವಜನಿಕ ಸ್ಥಳಗಳಲ್ಲಿ ಸಸಿಗಳನ್ನು ನೆಟ್ಟು ಅವುಗಳ ಪೋಷಣೆಯ ಜವಾಬ್ದಾರಿಯನ್ನು ಸಮುದಾಯಕ್ಕೊಪ್ಪಿಸಿ, ಕಾಲಕಾಲಕ್ಕೆ ಅವುಗಳ ಬೆಳವಣಿಗೆಯ ಉಸ್ತುವಾರಿ ನಡೆಸುವುದರ ಜೊತೆಗೆ ಶ್ರೀಸಾಮಾನ್ಯರಲ್ಲಿ ಪರಿಸರ ಸಂರಕ್ಷಣೆಯ ಅನಿವಾರ್ಯತೆಯ ಬಗ್ಗೆ ಜಾಗೃತಿ ಮೂಡಿಸುತ್ತಿದೆ. ಕಳೆದೊಂದು ವರ್ಷದಿಂದ ತಂಡವು ಬಯಲುಸೀಮೆಯ ಜಿಲ್ಲೆಗಳಾದ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಹಾಗೂ ನಗರ ಜಿಲ್ಲೆಗಳ ವಿವಿಧ ಸ್ಥಳಗಳಲ್ಲಿ ವಿವಿಧ ಬಗೆಯ ಬಹುಪಯೋಗಿ ಸಸಿಗಳನ್ನು ನೆಟ್ಟು ಪೋಷಣೆಯ ಜವಾಬ್ದಾರಿಯನ್ನು ಸಮುದಾಯಕ್ಕೆ ವಹಿಸಿದೆ. ಮೊದಮೊದಲು ಹತ್ತರಿಂದ ಇಪ್ಪತು ಸಸಿಗಳನ್ನು ನೆಡುತ್ತಿದ್ದ ತಂಡದ ಸದಸ್ಯರು ಕ್ರಮೇಣ ನೂರು, ನೂರೈವತ್ತು, ಐನೂರು ಸಸಿಗಳನ್ನು ನೆಡುವ ಯೋಜನೆಗಳ್ನು ರೂಪಿಸಿ ಯಶಸ್ವಿಯಾಗಿ ಅನುಷ್ಠಾನಗೊಳಿಸಿದರು. ಆರಂಭದ ವರ್ಷದಲ್ಲಿ ತಂಡ ನೆಟ್ಟ 1301 ಸಸಿಗಳಲ್ಲಿ 83.70 ಪ್ರತಿಶತ ಸಸಿಗಳ ಬೆಳವಣಿಗೆ ಉತ್ತಮವಾಗಿರುವುದು ತಂಡದ ಸದಸ್ಯರ ಕಾರ್ಯವೈಖರಿಗೆ ಹಿಡಿದಗನ್ನಡಿ. ಪ್ಲಾಸ್ಟಿಕ್ ಮುಕ್ತ ನಂದಿ ಗಿರಿಧಾಮವನ್ನು ರೂಪಿಸುವ ನಿಟ್ಟಿನಲ್ಲಿ ತಂಡದ ಸದಸ್ಯರು ಕೈಗೊಂಡ ಜಾಗೃತಿ ಕಾರ್ಯಕ್ರಮ ಫಲಪ್ರಧವಾಗಿದ್ದು, ಗಿರಿಧಾಮಕ್ಕೆ ಆಗಮಿಸಿದ್ದ ಪ್ರವಾಸಿಗರಿಗೆ ಗುಲಾಬಿಯೊಂದನ್ನು ನೀಡಿ ಪ್ಲಾಸ್ಟಿಕ್ ಉಪಯೋಗಿಸದಂತೆ ಮೂಡಿಸಿದ ಜಾಗೃತಿ ಅರ್ಥಪೂರ್ಣವಾಗಿತ್ತು. ಜೊತೆಗೆ ತಂಡವು ಹಮ್ಮಿಕೊಳ್ಳುವ ಎಲ್ಲ ಕಾರ್ಯಕ್ರಮಗಳಲ್ಲಿ ಪ್ಲಾಸ್ಟಿಕ್ ಉಪಯೋಗವನ್ನು ನಿಷೇಧಿಸಿದೆ ಮತ್ತು ಶ್ರೀಸಾಮಾನ್ಯರಲ್ಲಿ ಪ್ಲಾಸ್ಟಿಕ್ ಉಪಯೋಗದಿಂದಾಗುವ ಅನಾಹುತಗಳ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ತಂಡ ನೆಡುತ್ತಿದ್ದ ಸಸಿಗಳನ್ನು ಬೆಳಸಲು ಬಳಸಿದ್ದ ಪ್ಲಾಸ್ಟಿಕ್ ಚೀಲಗಳನ್ನು ಸಂಗ್ರಹಿಸಿ ನಾಶಪಡಿಸುವುದು ತಂಡದ ವೈಶಿಷ್ಠ್ಯ. ತಂಡದ ಸದಸ್ಯರು ತಮ್ಮ ವೈಯಕ್ತಿಕ ಕೆಲಸಕಾರ್ಯಗಳಲ್ಲಿಯೂ ಸಹ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸುವುದರ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಪರಿಸರ ಮತ್ತು ಅಂತರ್ಜಲಕ್ಕೆ ಮಾರಕವಾದ ನೀಲಗಿರಿ ಮುಕ್ತ ಅರಣ್ಯಗಳನ್ನು ಅಭಿವೃದ್ಧಿಪಡಿಸುವಂತೆ ಒತ್ತಾಯಿಸಿ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲಾ ಕೇಂದ್ರಗಳಲ್ಲಿ ಹಮ್ಮಿಕೊಂಡಿದ್ದ ಮೌನಪ್ರತಿಭಟನೆಗಳು ಇತಿಹಾಸದ ಪುಟಗಳಲ್ಲಿ ದಾಖಲಾದವು. ನೀಲಗಿರಿ ಮುಕ್ತ ಅರಣ್ಯಗಳನ್ನು ಅಭಿವೃದ್ಧಿಪಡಿಸುವುದೂ ಒಳಗೊಂಡಂತೆ, ನೀಲಗಿರಿಗೆ ಪರ್ಯಾಯವಾಗಿ ಇತರ ಬಹುಪಯೋಗಿ ಸಸಿಗಳನ್ನು ಬೆಳೆಸುವುದು, ನೀಲಗಿರಿ ಸಸಿ ಉತ್ಪಾದನೆಯನ್ನು ಕಾನೂನು ಬಾಹೀರಗೊಳಿಸುವುದು, ಫಲವತ್ತಾದ ಸಾಗುವಳಿ ಭೂಮಿಯಲ್ಲಿ ನೀಲಗಿರಿ ನಾಟಿಯನ್ನು ತಕ್ಷಣದಿಂದಲೇ ನಿಷೇಧ ಇವೇ ಮೊದಲಾದ ಹಲವು ಬೇಡಿಕೆಗಳನ್ನೊಳಗೊಂಡ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದರು. ನೀಲಗಿರಿ ಮುಕ್ತ ಗ್ರಾಮಗಳನ್ನು ರೂಪಿಸುವ ವಿಷಯವಾಗಿ ಜಿಲ್ಲಾಧಿಕಾರಿಯವರೊಂದಿಗೆ ಚರ್ಚಿಸಿದ್ದು, ನೀಲಗಿರಿ ನಾಟಿಯನ್ನು ನಿಯಂತ್ರಿಸಲು ಜಿಲ್ಲಾ ವ್ಯಾಪ್ತಿಯ ಎಲ್ಲ ಗ್ರಾಮಪಂಚಾಯಿತಿಗಳಿಗೆ ಸುತ್ತೋಲೆಯನ್ನು ರವಾನಿಸಲು ಕೋರಿದ್ದಾರೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿಯವರು ತ್ವರಿತ ಕ್ರಮ ಕೈಗೊಳ್ಳುವ ಭರವಸೆ ನೀಡಿರುತ್ತಾರೆ. ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವ ಸದಸ್ಯರು ನೀಲಗಿರಿ ಮುಕ್ತ ಅರಣ್ಯಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಇಲಾಖೆಯ ಕ್ರಿಯಾಯೋಜನೆಗಳನ್ನು ಸಂಗ್ರಹಿಸಿ ಕಾಲಕಾಲಕ್ಕೆ ಅನುಪಾಲನೆ ನಡೆಸುತ್ತಿದ್ದಾರೆ. ಇದರ ಫಲಶೃತಿಯಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಕುರೂಡಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿದ್ದ ಎರಡು ಸಾವಿರ ಎಕರೆ ಅರಣ್ಯಪ್ರದೇಶದಲ್ಲಿದ್ದ ನೀಲಗಿರಿಯನ್ನು ಕಿತ್ತೊಗೆದು ಇತರೆ ಬಹುಪಯೋಗಿ ಸಸಿಗಳನ್ನು ನೆಡುವ ಯೋಜನೆಯಲ್ಲಿ ಅರಣ್ಯ ಇಲಾಖೆ ಕಾರ್ಯಪ್ರವೃತ್ತವಾಗಿದೆ. ನೀಲಗಿರಿ ಮುಕ್ತ ಗ್ರಾಮಗಳನ್ನು ರೂಪಿಸುವತ್ತ ಹೆಜ್ಜೆಯಿಟ್ಟಿರುವ ತಂಡಕ್ಕೆ ಅನ್ನದಾತರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಸುಮಾರು 40ಕ್ಕೂ ಅಧಿಕ ರೈತರು ತಮ್ಮ ಕೃಷಿ ಭೂಮಿಯಲ್ಲಿ ಬೆಳೆಸಿದ್ದ ನೀಲಗಿರಿಯನ್ನು ಕಿತ್ತೊಗೆದು ಇತರೆ ಬಹುಪಯೋಗಿ ಸಸಿಗಳನ್ನು ನೆಡುವ ತಯಾರಿಯಲ್ಲಿದ್ದಾರೆ. ನೀಲಗಿರಿಯನ್ನು ತಮ್ಮ ಸಾಗುವಳಿ ಭೂಮಿಯಿಂದ ಕಿತ್ತೊಗೆದ ಎಲ್ಲ ರೈತರಿಗೆ ಜೂನ್ ಮಾಹೆಯಲ್ಲಿ ವಿವಿಧ ತಳಿಯ ಬಹುಪಯೋಗಿ ಸಸಿಗಳನ್ನು ಉಚಿತವಾಗಿ ವಿತರಿಸುವ ನಿಟ್ಟಿನಲ್ಲಿ ತಂಡವು ಅರಣ್ಯ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಗಳೊಂದಿಗೆ ಚರ್ಚಿಸಿದೆ. ಜೊತೆಗೆ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಫಲವನ್ನು ಪಡೆಯಲು ರೈತರಿಗೆ ತಂಡದ ಸದಸ್ಯರು ಸೂಕ್ತ ಮಾರ್ಗದರ್ಶನ ನೀಡುತ್ತಿದ್ದಾರೆ. ಮಾಹಿತಿ ಹಕ್ಕು ಅಧಿನಿಯಮವನ್ನು ಪರಿಣಾಮಕಾರಿ ಅಸ್ತ್ರವನ್ನಾಗಿ ಉಪಯೋಗಿಸಿಕೊಂಡಿರುವ ಸದಸ್ಯರು ತಂಡದ ಚಟುವಟಿಕೆಗಳಿಗೆ ಅಗತ್ಯವಿರುವ ನಂಬಲರ್ಹ ಮಾಹಿತಿಯನ್ನು ವಿವಿಧ ಸರ್ಕಾರಿ ಇಲಾಖೆಗಳಿಂದ ಪಡೆಯುತ್ತಿದ್ದಾರೆ. ಚಿಕ್ಕಬಳ್ಳಾಪುರ, ಕೋಲಾರ ಮತ್ತು ತುಮಕೂರು ಜಿಲ್ಲೆಗಳ ವ್ಯಾಪ್ತಿಯಲ್ಲಿರುವ ಅರಣ್ಯಗಳ ಒಟ್ಟು ವಿಸ್ತೀರ್ಣಕ್ಕೆ ಸಂಬಂಧಿಸಿದ ಮಾಹಿತಿಯನ್ನು ಅರಣ್ಯ ಇಲಾಖೆಯಿಂದ ಈಗಾಗಲೇ ಪಡೆದಿದ್ದು, ಪ್ರಸ್ತುತ ನೀಲಗಿರಿಯ ಅಸ್ತಿತ್ವವಿರುವ ಅರಣ್ಯಗಳ ವಿಸ್ತೀರ್ಣಕ್ಕೆ ಸಂಬಂಧಿಸಿದ ಮಾಹಿತಿಯನ್ನು ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಜೊತೆಗೆ ನೀಲಗಿರಿಯನ್ನು ಬೆಳೆದಿರುವ ಅಥವಾ ಬೆಳೆಸುತ್ತಿರುವ ಕೃಷಿಭೂಮಿಯ ವಿಸ್ತೀರ್ಣಕ್ಕೆ ಸಂಬಂಧಿಸಿದ ಮಾಹಿತಿಯನ್ನೂ ನೀಡುವಂತೆ ಕೋರಿ ತೋಟಗಾರಿಕಾ ಇಲಾಖೆಗೆ ಅರ್ಜಿ ಸಲ್ಲಿಸಿದ್ದು, ಮಾಹಿತಿಯ ನಿರೀಕ್ಷೆಯಲ್ಲಿದ್ದಾರೆ. ಉಸಿರಿಗಾಗಿ ಹಸಿರು ತಂಡದ ಸದಸ್ಯರು ಕಳೆದ ವರ್ಷ ನೆಟ್ಟ ಸಸಿಗಳಿಗೆ ನೀರಾಯಿಸುವ ಜವಾಬ್ದಾರಿಯನ್ನು ಸ್ಥಳೀಯ ಸರ್ಕಾರಗಳಿಗೆ ವಹಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ಈ ವಿಚಾರವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಿದ್ದು, ಪೂರಕವಾಗಿ ಸ್ಪಂದಿಸಿದ ಅಧಿಕಾರಿಗಳು ಪ್ರಸ್ತುತ ಆರ್ಥಿಕ ವರ್ಷದಿಂದ ತಂಡ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ನೆಡುವ ಸಸಿಗಳಿಗೆ ನೀರಾಯಿಸುವ ಜವಾಬ್ದಾರಿಯನ್ನು ಗ್ರಾಮಪಂಚಾಯಿತಿಗಳಿಗೆ ವಹಿಸುವ ಭರವಸೆ ನೀಡಿದ್ದಾರೆ. ಜೊತೆಗೆ ಈ ವಿಚಾರವಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸುವುದಾಗಿ ತಿಳಿಸಿರುತ್ತಾರೆ. ಮೇಲ್ಕಾಣಿಸಿದ ವಿವಿಧ ವಿಭಿನ್ನ ಕಾರ್ಯಕ್ರಮಗಳಿಂದ ಮಾನೆಮಾತಾಗಿರುವ ಉಸಿರಿಗಾಗಿ ಹಸಿರು ತಂಡದಲ್ಲಿಂದು ಒಟ್ಟು 360 ಸ್ವಯಂಸೇವಕರಿದ್ದಾರೆ. ಆರಂಭಿಕ ಹಂತದಲ್ಲಿ ಸಮಾಜಕಾರ್ಯ ಪ್ರಶಿಕ್ಷಣಾರ್ಥಿಗಳನ್ನು ಅಧಿಕ ಸಂಖ್ಯೆಯಲ್ಲಿ ಹೊಂದಿದ್ದ ತಂಡದಲ್ಲಿಂದು ವಿವಿಧ ವಿಷಯಗಳನ್ನು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳನ್ನು, ಯುವಕರನ್ನು, ರೈತರನ್ನೂ ಒಳಗೊಂಡಂತೆ ವಿವಿಧ ರಂಗಗಳಲ್ಲಿ ಕೆಲಸ ಮಾಡುತ್ತಿರುವ ವೃತ್ತಿಪರರೂ ಸದಸ್ಯರಾಗಿದ್ದಾರೆ. ಸದಸ್ಯರ ಸಂಖ್ಯೆ ಅಧಿಕವಾದಂತೆ ತಂಡದ ಕಾರ್ಯವ್ಯಾಪ್ತಿ ವಿಸ್ತಾರವಾಯಿತು ಮತ್ತು ತಂಡದ ಚಟುವಟಿಕೆಗಳು ಅಧಿಕಗೊಂಡವು. ಸಸಿನೆಟ್ಟು ಪೋಷಿಸುವುದರ ಜೊತೆಗೆ ಪರಿಸರ ಸಂರಕ್ಷಣೆ ಮತ್ತು ಪ್ಲಾಸ್ಟಿಕ್ ಅವಾಂತರಗಳ ಬಗ್ಗೆ ಶ್ರೀಸಾಮಾನ್ಯರಲ್ಲಿ ಅರಿವು ಮೂಡಿಸುವುದು ಮತ್ತು ನೀಲಗಿರಿ ವಿರುದ್ಧ ಸಮರ ಸಾರುವಂತಹ ವಿನೂತನ ಯೋಜನೆಗಳಿಗೆ ತಂಡ ಸಜ್ಜಾಯಿತು. ತಂಡ ಇಲ್ಲಿಯವರೆಗೆ ಹಮ್ಮಿಕೊಂಡಿದ್ದ ಎಲ್ಲ ಕಾರ್ಯಕ್ರಮಗಳ ಸಂಕ್ಷಿಪ್ತ ವರದಿ ಹಾಗೂ ಭವಿಷ್ಯದ ಕ್ರಿಯಾ ಯೋಜನೆಗಳನ್ನೂ ಒಳಗೊಂಡಂತೆ ಸದಸ್ಯರು ಇಲ್ಲಿಯವರೆಗೆ ನೆಟ್ಟ ಸಸಿಗಳ ಸ್ಥಿತಿಗತಿಗಳ ಬಗ್ಗೆ ಬೆಳಕು ಚೆಲ್ಲುವ ಅಂಕಿ ಅಂಶಗಳನ್ನೊಳಗೊಂಡ ವಾರ್ಷಿಕ ವರದಿಯನ್ನು ದಿನಾಂಕ 20.02.2016ರಂದು ಬಿಡುಗಡೆಗೊಳಿಸಿತು. ಈ ಎಲ್ಲ ಕಾರ್ಯಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿದ ಬೆಂಗಳೂರು ಮೂಲದ ಯೂಥ್ ಫಾರ್ ಸೇವಾ ಸಂಸ್ಥೆಯು ಯುವಚೇತನ - ರಾಷ್ಟ್ರಮಟ್ಟದ ಅತ್ಯುತ್ತಮ ಗುಂಪು ಚಟುವಟಿಕೆ ಪುರಸ್ಕಾರವನ್ನು ತಂಡಕ್ಕೆ ನೀಡಿ ಗೌರವಿಸಿದೆ. ಶ್ರೀಸಾಮಾನ್ಯರಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವುದರ ಮೂಲಕ ಪೋಷಣೆಗೆ ಪ್ರೇರೇಪಣೆ ಎಂಬ ಧ್ಯೇಯದೊಂದಿಗೆ ಕಾರ್ಯಪ್ರವೃತ್ತರಾದ ಸಮಾನಮನಸ್ಕರ ತಂಡ ರಾಷ್ಟ್ರೀಯ ಹಬ್ಬ, ಹುತಾತ್ಮರ ಜನ್ಮದಿನಾಚರಣೆ ಹಾಗೂ ವಾರ್ಷಿಕೋತ್ಸವಗಳನ್ನು ಸಸಿ ನೆಡುವುದರ ಮೂಲಕ ಅರ್ಥಪೂರ್ಣವಾಗಿ ಆಚರಿಸತೊಡಗಿತು. ಪ್ರಾರಂಭದ ಹಂತದಲ್ಲಿ ತಂಡದ ಸದಸ್ಯರು ತಮ್ಮ ಜನ್ಮದಿನಾಚರಣೆಗಳನ್ನು ಸಸಿನೆಡುವ ಮೂಲಕ ಆಚರಿಸಿಕೊಂಡರು. ಇದರಿಂದ ಪ್ರೇರೇಪಿತರಾದ ಹಲವರು ತಮ್ಮ ಜೀವನದ ಮಹತ್ವಪೂರ್ಣ ದಿನಗಳಾದ ಹುಟ್ಟುಹಬ್ಬ ಹಾಗೂ ವಾರ್ಷಿಕೋತ್ಸವಗಳನ್ನು ಸಸಿ ನೆಟ್ಟು ಆಚರಿಸಿದರು. ಕೆಲವೇ ಸಮಾನಮನಸ್ಕ ಯುವಜನರಿಂದ ಆರಂಭವಾದ ವಿಭಿನ್ನ ಆಚರಣೆ ಎಲ್ಲೆಡೆ ಪಸರಿಸತೊಡಗಿತು. ಪರಿಣಾಮವಾಗಿ ತಂಡ ನೆಡುತ್ತಿದ್ದ ಸಸಿಗಳಿಗೆ ಅವಶ್ಯಕವಾದ ದೇಣಿಗೆ ಸಂಗ್ರಹವಾಗತೊಡಗಿತು. ಸಾಮಾಜಿಕ ಜಾಲತಾಣ ಫೇಸ್‍ಬುಕ್ ಅನ್ನು ಸಮರ್ಥವಾಗಿ ಉಪಯೋಗಿಸಿಕೊಂಡ ಸದಸ್ಯರು, ತಂಡದ ಹೆಸರಿನಲ್ಲಿ ಖಾತೆಯೊಂದನ್ನು ತೆರೆದು, ತಂಡದ ವಿವಿಧ ಕಾರ್ಯಕ್ರಮಗಳು, ಅನುಸರಣಾ ವರದಿಗಳು, ನೆಟ್ಟ ಸಸಿಗಳ ಬೆಳವಣಿಗೆಗೆ ಸಂಬಂಧಿಸಿದ ಮಾಹಿತಿ ಇವೇ ಮೊದಲಾದ ವಿಚಾರಗಳನ್ನು ಕಾಲಕಾಲಕ್ಕೆ ಹಂಚಿಕೊಂಡರು. ಇದರಿಂದ ತಂಡದ ಸದಸ್ಯರ ಸಂಖ್ಯೆ ಅಧಿಕಾವಾಗುವುದರ ಜೊತೆಗೆ ಕಾರ್ಯಚಟುವಟಿಕೆಗಳಿಗೆ ಬೇಕಾದ ಹಣಕಾಸಿನ ನೆರವು ಸಿಗಲಾರಂಭಿಸಿತು. ಪರಿಣಾಮವಾಗಿ ತಂಡವಿಂದು ವಿವಿಧ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ತನ್ನ ಗುರಿಸಾಧನೆಯತ್ತ ದಾಪುಗಾಲಿಡುತ್ತಿದೆ. ನೀಲಗಿರಿಯ ಅವಾಂತರ - ಒಂದು ವಾಸ್ತವ ಕುರಿತ ಸಂಶೋಧನೆಯನ್ನು ತಂಡದ ಸದಸ್ಯರು ಕೈಗೊಂಡಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ದತ್ತಾಂಶಗಳನ್ನು ಸಂಗ್ರಹಿಸುತ್ತಿದ್ದಾರೆ. ಜೊತೆಗೆ ಜೂನ್ ಐದರಂದು ವಿಶ್ವ ಪರಿಸರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದು, ಚಿಕ್ಕಬಳ್ಳಾಪುರ ಜಿಲ್ಲೆ, ಗುಡಿಬಂಡೆ ತಾಲ್ಲೂಕಿನ ಎಲ್ಲ ಸರ್ಕಾರಿ ಶಾಲೆಗಳು ಒಟ್ಟು 2000 ಸಸಿಗಳನ್ನು ನೆಡುವ ಕ್ರಿಯಾ ಯೋಜನೆಗಳನ್ನು ಸಿದ್ಧಪಡಿಸಿದ್ದಾರೆ. ಪ್ರಸ್ತುತ ವರ್ಷದಲ್ಲಿ ತಂಡದ ಚಟುವಟಿಕೆಗಳನ್ನು ರಾಮನಗರ ಮತ್ತು ತುಮಕೂರು ಜಿಲ್ಲೆಗಳಿಗೆ ವಿಸ್ತರಿಸುವ ಯೋಜನೆಯನ್ನು ಹೊಂದಿದ್ದಾರೆ. ಕೋಲಾರ ಮತ್ತು ತುಮಕೂರು ಜಿಲ್ಲೆಗಳ ತಲಾ ಒಂದೊಂದು ತಾಲ್ಲೂಕಿನ ವ್ಯಾಪ್ತಿಯಲ್ಲಿರುವ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಸಸಿಗಳನ್ನು ನೆಟ್ಟು ಪೋಷಣೆಯ ಜವಾಬ್ದಾರಿಯನ್ನು ಶಾಲಾ ಅಭಿವೃದ್ಧಿ ಮತ್ತು ಉಸ್ತುವಾರಿ ಮಂಡಳಿ ಹಾಗೂ ಸ್ಥಳೀಯ ಸರ್ಕಾರಗಳಿಗೆ ವಹಿಸುವ ನಿಟ್ಟಿನಲ್ಲಿ ಕ್ರಿಯಾಯೋಜನೆಗಳನ್ನು ಸಿದ್ಧಪಡಿಸಿದ್ದಾರೆ. ಜೊತೆಗೆ ತಂಡ ಕೈಗೊಂಡ ಅಧ್ಯಯನದ ಫಲಿತಾಂಶಗಳ ನೆರಳಿನಲ್ಲಿ ನೀಲಗಿರಿಯಿಂದ ಅನ್ಯಾಯಕ್ಕೊಳಗಾದ ರೈತರಿಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಸಾರ್ವಜನಿಕ ವಿಚಾರಣೆಯನ್ನು ಆಯೋಜಿಸುವುದು ಮತ್ತು ಶಿಫಾರಸ್ಸುಗಳನ್ನು ಸರ್ಕಾರಕ್ಕೆ ಒಪ್ಪಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡುವುದು. ಕ್ರಮ ಕೈಗೊಳ್ಳದ ಪಕ್ಷದಲ್ಲಿ ಉಚ್ಛ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ಹೂಡುವ ಯೋಜನೆಯನ್ನೂ ತಂಡ ಹೊಂದಿದೆ. ಉಸಿರಿಗಾಗಿ ಹಸಿರು - ಪರಿಸರ ಸಂರಕ್ಷಣೆಯ ಬಗ್ಗೆ ಕಾಳಜಿ ಹೊಂದಿರುವ ಸಮಾನ ಮನಸ್ಕ ಯುವಜನರನ್ನು ಒಳಗೊಂಡ ಒಂದು ಗುಂಪು. ಇದು ನೋಂದಾಯಿತ ಸಂಸ್ಥೆಯಲ್ಲ. ಸಮಾಜಮುಖಿ ಕೆಲಸಕಾರ್ಯಗಳಲ್ಲಿ ತೊಡಗುವ ಆಸಕ್ತಿಯುಳ್ಳ ವ್ಯಕ್ತಿಗಳಿಗಾಗಿ ವೃತ್ತಿಪರ ಸಮಾಜಕಾರ್ಯಕರ್ತ ಹಾಗೂ ಸಮಾಜಕಾರ್ಯ ಪ್ರಶಿಕ್ಷಣಾರ್ಥಿಗಳಿಂದ ರೂಪಿಸಲ್ಪಟ್ಟ ಒಂದು ವೇದಿಕೆ. ಪರಿಸರ ಸಂರಕ್ಷಣೆಯ ಮೂಲಕ ಅನ್ನದಾತನ ಉಳಿವಿಗಾಗಿ ಜನಾಂದೋಲನವನ್ನು ಹುಟ್ಟುಹಾಕಲು ಪ್ರವರ್ಧಮಾನಕ್ಕೆ ಬಂದ ಯುವಕರ ತಂಡ. ತಂಡದ ಸ್ವಯಂಸೇವಕರು ಸಸಿಗಳನ್ನು ನೆಟ್ಟರೂ ಅವುಗಳ ಪೋಷಣೆಯ ಜವಾಬ್ದಾರಿಯನ್ನು ಸಮುದಾಯಕ್ಕೊಪ್ಪಿಸುವ ಮೂಲಕ ಸಮುದಾಯದ ಸಹಭಾಗಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಸಸಿಗಳ ಪೋಷಣೆಯಲ್ಲಿ ಸ್ಥಳೀಯ ಸರ್ಕಾರಗಳನ್ನು ಪಾಲುದಾರರನ್ನಾಗಿಸುವ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸುತ್ತಿದ್ದು, ಸಹಕಾರ ತತ್ವದ ತಳಹದಿಯ ಮೇಲೆ ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸುವ ಪಥದಲ್ಲಿ ತಂಡ ಸಾಗುತ್ತಿದೆ. ಶಿಸ್ತು ಮತ್ತು ಸಮಯಪಾಲನೆಗೆ ಹೆಸರುವಾಸಿಯಾದ ತಂಡದ ಸದಸ್ಯರು ತಮ್ಮ ಎಲ್ಲ ಕಾರ್ಯಗಳನ್ನು ಬಹಳ ಅಚ್ಚುಕಟ್ಟಾಗಿ ಹಾಗೂ ನಿಯಮಿತವಾಗಿ ಹಮ್ಮಿಕೊಳ್ಳುವುದರ ಮೂಲಕ ವೃತ್ತಿಧರ್ಮವನ್ನು ಪಾಲಿಸುತ್ತಿದ್ದಾರೆ. ಪ್ರಜಾಪ್ರಭುತ್ವದ ತತ್ವಗಳಲ್ಲಿ ಮತ್ತು ದೇಶದ ಕಾನೂನುಗಳಲ್ಲಿ ನಂಬಿಕೆ ಹೊಂದಿದ್ದು, ತಂಡದ ಕಾರ್ಯಗಳನ್ನು ಕಾನೂನಿನ ಚೌಕಟ್ಟಿನಲ್ಲಿ ಹಮ್ಮಿಕೊಳ್ಳುತ್ತಿರುವುದು ತಂಡದ ವೈಶಿಷ್ಠ್ಯ. ಸಮುದಾಯ ಸಂಘಟನೆಯ ಬಹುಪಾಲು ತತ್ವಗಳನ್ನು ತಮ್ಮ ಕಾರ್ಯಗಳಲ್ಲಿ ಅಳವಡಿಸಿಕೊಂಡಿರುವ ಸದಸ್ಯರು ಆರಂಭಿಕ ವರ್ಷದಲ್ಲಿ ತಂಡ ಹಮ್ಮಿಕೊಂಡ ವಿವಿಧ ಕಾರ್ಯಕ್ರಮಗಳನ್ನು ಬಹಳ ಯಶಸ್ವಿಯಾಗಿ ಆಯೋಜಿಸಿರುವುದು ಸದಸ್ಯರಲ್ಲಿ ಅಡಕವಾಗಿರುವ ವೃತ್ತಿಪರತೆಗೆ ಹಿಡಿದಗನ್ನಡಿ. ಒಂದು ಪುಟ್ಟ ಗ್ರಾಮದ ರೈತರ ಸಮಸ್ಯೆಗಳನ್ನು ಬಗೆಹರಿಸುವ ಸಂದರ್ಭದಲ್ಲಾದ ಯಡವಟ್ಟುಗಳಿಂದ ಅನುಭವಿಸಿದ ಅವಮಾನ, ದೂಷಣೆ, ತೆಗಳಿಕೆ ಮತ್ತು ಹತಾಶೆಗಳಿಂದ ಕಲಿತ ಪಾಠಗಳು ಲೇಖಕರನ್ನು ಸಧೃಡಗೊಳಿಸಿದವು. ಸಮಸ್ಯೆಯ ಗಂಭೀರತೆಯನ್ನು ಅರಿತಿದ್ದರೂ ಸನ್ನಿವೇಶಗಳ ಸೂಕ್ಷ್ಮತೆಯನ್ನು ಅರಿಯುವಲ್ಲಿ ಎಡವಿದ ಕಾರಣ ಹೋರಾಟ ಹಾದಿತಪ್ಪಿತು. ಇದರಿಂದ ಎಚ್ಚೆತ್ತ ಲೇಖಕರು ತುಂಬಾ ಎಚ್ಚರಿಕೆಯಿಂದ ವ್ಯವಹರಿಸತೊಡಗಿದರು. ಸತ್ತ ಇಲಿಯ ಕಾರಣದಿಂದ ದುರ್ಗಂಧ ಸೂಸುವ ಕೋಣೆಗೆ ಸುಗಂಧ ದ್ರವ್ಯಗಳನ್ನು ಸಿಂಪಡಿಸುವ ಬದಲು ಸತ್ತ ಇಲಿಯನ್ನು ಹುಡುಕಿ ಹೊರಹಾಕುವ ಮೂಲಕ ಶಾಶ್ವತವಾಗಿ ಕೋಣೆಯನ್ನು ದುರ್ಗಂಧಮುಕ್ತಗೊಳಿಸುವ ಹಾಗೆ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಆಲೋಚಿಸಿ ಉಸಿರಿಗಾಗಿ ಹಸಿರು ತಂಡಕ್ಕೆ ಅಡಿಪಾಯ ಹಾಕಿದರು. ಅನ್ನದಾತರ ಸಮಸ್ಯೆಗಳು ಪರಿಹಾರವಾಗಬೇಕಾದರೆ ಪರಿಸರ ಸಂರಕ್ಷಣೆಯಿಂದ ಮಾತ್ರ ಸಾಧ್ಯವೆಂಬ ಅಂಶವನ್ನು ತರಗತಿಗಳಲ್ಲಿ ನಡೆಯುತ್ತಿದ್ದ ಚರ್ಚೆಗಳಲ್ಲಿ ಕೂಲಂಕುಶವಾಗಿ ವಿವರಿಸಿದರು. ಉಪನ್ಯಾಸಕರಾದ ಲೇಖಕರ ಚಿಂತನೆಗಳಿಂದ ಪ್ರಭಾವಿತರಾದ ಕೆಲ ಪ್ರಶಿಕ್ಷಣಾರ್ಥಿಗಳು ಲೇಖಕರ ಚಿಂತನೆಗಳನ್ನು ಕಾರ್ಯರೂಪಕ್ಕೆ ತಂದರು. ಕೇವಲ ಸಸಿಗಳನ್ನು ನೆಡುವುದೇ ಅಲ್ಲದೇ ಅವುಗಳ ಪೋಷಣೆಯ ಜವಾಬ್ದಾರಿಯನ್ನು ಸಮುದಾಯಕ್ಕೊಪ್ಪಿಸಿ ಕಾಲಕಾಲಕ್ಕೆ ಅನುಸರಣೆ ಮಾಡುವ ಲೇಖಕರ ಚಿಂತನೆಗಳು ಹೆಚ್ಚಿನ ಸಂಖ್ಯೆಯ ಪ್ರಶಿಕ್ಷಣಾರ್ಥಿಗಳನ್ನು ಆಕರ್ಷಿಸಿದವು. ಇದರ ಫಲವಾಗಿ ಕೆಲವೇ ಸದಸ್ಯರಿಂದ ಆರಂಭವಾದ ತಂಡ ಮುಂದಿನ ಕೆಲವೇ ದಿನಗಳಲ್ಲಿ ಬೃಹತ್ ಸಂಖ್ಯೆ ಸದಸ್ಯರನ್ನೊಳಗೊಂಡ ಒಂದು ಗುಂಪಾಗಿ, ಒಂದು ಜನಾಂದೋಲನವಾಗಿ ರೂಪುಗೊಂಡಿತು. ಸಮಾಜಮುಖಿ ಕಾರ್ಯಗಳಲ್ಲಿ ತೊಡಗುವವರು ಎದುರಿಸಬೇಕಾದ ಪರಿಸ್ಥಿತಿಗಳ ಬಗ್ಗೆ ಅರಿವಿದ್ದ ತಂಡದ ಸದಸ್ಯರು ಅಕ್ಷರಶಃ ಕಠಿಣವಾಗಿದ್ದ ಆರಂಭದ ದಿನಗಳನ್ನು ಸಮರ್ಥವಾಗಿ ಎದುರಿಸಿದರು. ಟೀಕೆಗಳಿಗೆ ಕಿವಿಗೊಡದ ಸದಸ್ಯರು ತಮ್ಮ ಚಿತ್ತವನ್ನು ಕಾರ್ಯಗಳತ್ತ ಕೇಂದ್ರೀಕರಿಸಿದರು. ಇದರ ಫಲವಾಗಿ ಇಂದು ತಂಡದ ವಿಭಿನ್ನ ಕಾರ್ಯಕ್ರಮಗಳು ಮನೆಮಾತಾಗಿವೆ ಹಾಗೂ ಶ್ರೀಸಾಮಾನ್ಯರಿಂದ ಉತ್ತಮ ಸ್ಪಂದನೆ ಪಡೆಯುತ್ತಿವೆ. ಸಸಿನೆಟ್ಟು ಪೋಷಿಸುವ ಕಾರ್ಯ ಮಾಡುತ್ತಿದ್ದ ತಂಡವನ್ನು ಅಪಹಾಸ್ಯ ಮಾಡಿದವರು ಕೆಲವೇ ದಿನಗಳಲ್ಲಿ ತಂಡದ ಕಾರ್ಯಗಳನ್ನು ಶ್ಲಾಘಿಸಿದರು. ಹಿಂದೆ ಲೇಖಕರ ಆಲೋಚನೆಗಳನ್ನು ಟೀಕಿಸಿದ್ದ ಹಳ್ಳಿಯ ಜನರೇ ತಂಡವನ್ನು ಸಂಪರ್ಕಿಸಿ, ತಮ್ಮ ಗ್ರಾಮದಲ್ಲಿ ಸಸಿ ನೆಡುವಂತೆ ತಂಡವನ್ನು ಆಮಂತ್ರಿಸಿದ್ದು ಒಂದು ಉತ್ತಮ ನಿದರ್ಶನ. ಈ ಎಲ್ಲ ಬೆಳವಣಿಗೆಗಳಿಗೆ ಕಾರಣವಾದದ್ದು, ತಂಡದ ಸದಸ್ಯರಲ್ಲಿದ್ದ ಇಚ್ಛಾಶಕ್ತಿ, ಕರ್ತವ್ಯನಿಷ್ಠೆ ಮತ್ತು ವೃತ್ತಿಪರತೆ. ಸಮಾಜಕಾರ್ಯ ಪ್ರಶಿಕ್ಷಣಾರ್ಥಿಗಳನ್ನೆ ಅಧಿಕ ಸಂಖ್ಯೆಯಲ್ಲಿ ಹೊಂದಿರುವ ತಂಡ, ಪ್ರತಿ ಹಂತದಲ್ಲಿಯೂ ನಿಖರತೆ ಮತ್ತು ಸ್ಪಷ್ಟತೆಗೆ ಆದ್ಯತೆ ನೀಡಿ, ತನ್ನ ವಿಭಿನ್ನ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುತ್ತಿದೆ. ಗೊಂದಲಗಳಿಗೆ ಅವಕಾಶ ನೀಡದ ಸದಸ್ಯರು ತಮ್ಮ ಕಾರ್ಯಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುವುದರ ಮೂಲಕ ತಂಡವನ್ನು ಸಾಧನೆಯ ಪಥದಲ್ಲಿ ಮುನ್ನಡೆಸುತ್ತಿದ್ದಾರೆ. ಆರಂಭದ ದಿನಗಳಲ್ಲಿ ಸಮಸ್ಯೆಯಾಗಿ ಪರಿಣಮಿಸಿದ ಹಣಕಾಸಿನ ಕೊರತೆ ನಂತರದ ದಿನಗಳಲ್ಲಿ ಮರೆಯಾಯಿತು. ತಂಡದ ಕಾರ್ಯಕ್ರಮಗಳನ್ನು ಮೆಚ್ಚಿ ದೇಣಿಗೆ ನೀಡಲಿಚ್ಚಿಸುವವರಿಂದ ಮಾತ್ರ ಹಣಕಾಸಿನ ನೆರವನ್ನು ಪಡೆಯುತ್ತಿದ್ದಾರೆ. ತಂಡದ ಎಲ್ಲ ಕಾರ್ಯಕ್ರಮ ಹಾಗೂ ಕ್ರಿಯಾಯೋಜನೆಗಳ ಬಗೆಗಿನ ಸಂಪೂರ್ಣ ಮಾಹಿತಿಗಾಗಿ ಸಾಮಾಜಿಕ ಜಾಲತಾಣ ಫೇಸ್ಬುಕ್ನಲ್ಲಿ ಉಸಿರಿಗಾಗಿ ಹಸಿರು-Green for Breath ಹೆಸರಿನಲ್ಲಿ ತೆರೆದಿರುವ ಖಾತೆಗೆ ಭೇಟಿ ನೀಡಬಹುದು. ತಂಡದ ಬ್ಲಾಗ್ www.usirigaagihasiru.wordpress.com ಹಾಗೂ [email protected] ಮೂಲಕ ತಂಡವನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು. ಗ್ರಂಥ ವಿವರಣೆ
ಗಂಗಾಧರ ರೆಡ್ಡಿ ಎನ್. ಸಂಚಾಲಕರು, ಉಸಿರಿಗಾಗಿ ಹಸಿರು
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
|
|
|
|
SITE MAP
SitePOSH |
NIRATHANKAOUR OTHER WEBSITESSubscribe |
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |