ಇದ್ದಕಿದ್ದ ಹಾಗೆ ಮಾರ್ಚ್ 2012 ರ 4ರಂದು ಭಾನುವಾರ ಡಾ.ಆರ್.ಶಿವಣ್ಣನವರು ನನಗೆ ದೂರವಾಣಿ ಕರೆಮಾಡಿ, ನಿಮ್ಮ ಮನೆಕಡೆ ಬರುತ್ತಿದ್ದೇನೆ; ಇನ್ನು ಹತ್ತು- ಹದಿನೈದು ನಿಮಿಷಗಳಲ್ಲಿ ನಿಮ್ಮಲ್ಲಿರುತ್ತೇನೆ; ಪ್ರೊ.ಎಲ್.ಎಸ್.ಶೇಷಗಿರಿರಾವ್ ಕಡೆಹೋಗಿ, ಅವರನ್ನು ನೋಡಿಕೊಂಡು ಬರೋಣ; ಅವರ ಆರೋಗ್ಯ ಅಷ್ಟೇನೂ ಚೆನ್ನಾಗಿಲ್ಲವಂತೆ ಹೀಗೆ ಹೇಳಿದರು. ನಮ್ಮ ಮನೆಗೆ ತೀರಾ ಹತ್ತಿರದಲ್ಲಿದ್ದರೂ ನನ್ನ ಅದೃಢ ಕಾಲು-ಸೊಂಟಗಳ ಕಾರಣದಿಂದ ನಾನು ಅವರನ್ನು ಕಂಡುಬರಲು ಆಗುತ್ತಲಿಲ್ಲ. ಬೇರೆಯವರ ವಾಹನ-ಹೆಗಲ ನೆರವಿನಿಂದ ಮಾತ್ರ ನಾನು ಹೋಗಿಬರಲು ಸಾಧ್ಯ. ಆದುದರಿಂದ ಬಹಳ ದಿನಗಳಾದ ನಂತರ ಈ ಅವಕಾಶ ದೊರೆಯಿತೆಂದು ನನಗೆ ಸಹಜವಾಗಿಯೇ ಸಂತಸವಾಯ್ತು. ಡಾ.ಶಿವಣ್ಣನವರಿಗೆ ಕಾಯತೊಡಗಿದೆ. ಅವರು ಹೇಳಿದಂತೆ ಬಂದರು; ಅವರ ಕಾರಿನಲ್ಲಿ ಮಹೇಶನ ನೆರವಿನಿಂದ ಹತ್ತಿ, ಪ್ರೊ. ಎಲ್.ಎಸ್.ಶೇಷಗಿರಿರಾವ್ ಮನೆಗೆ ಡಾ.ಶಿವಣ್ಣನವರೊಡನೆ ಹೋದೆ. ಪ್ರೊ.ಶೇಷಗಿರಿರಾವ್ ಅವರೇ ಬಾಗಿಲು ತೆರೆದು ನಮ್ಮನ್ನು ಒಳಕರೆದು ಕೂಡಿಸಿದುದನ್ನು ಕಂಡು ನಮಗೆ ಬಹು ಖುಷಿಯಾಯ್ತು; ಅವರ ಆರೋಗ್ಯ ಚೆನ್ನಾಗಿಯೇ ಇತ್ತು; ಆಗೀಗ ಅಲ್ಪಸ್ವಲ್ಪ ತಲೆ ಸುತ್ತುತ್ತದೆಯಂತೆ, ಅಷ್ಟೇ; ಓದಲಿಕ್ಕೆ ಅಂಥಾ ತೊಂದರೆಯಿಲ್ಲದಿದ್ದರೂ ಬರೆಯಲು ಕಷ್ಟವಾಗುತ್ತದೆಯಂತೆ. ಅವರಿಗೆ ಈಗ 85, ನನಗೆ 81 ಮತ್ತು ಡಾ.ಶಿವಣ್ಣನವರಿಗೆ 78 ವರ್ಷ. ಅಲ್ಲಿ ಸುಮಾರು ಒಂದೂವರೆ ತಾಸು ಕುಳಿತು ಪರಸ್ಪರ ಆರೋಗ್ಯ, ಲೋಕದ ವ್ಯವಹಾರ, ಸಾಹಿತ್ಯಿಕ ಚಟುವಟಿಕೆ, ಇತ್ಯಾದಿ ಸಲ್ಲಾಪಿಸಿದೆವು. ಆ ಮಧ್ಯೆ ಶ್ರೀಮತಿ ಭಾರತಿ ಶೇಷಗಿರಿರಾವ್ ನಮಗೆ ಕಾಫಿ ಕೊಟ್ಟರು.
ಅಜ್ಞಾನದ ಉಚ್ಛಾಟನೆ ಡಾ.ಶಿವಣ್ಣ ತಮ್ಮ ಬಸವತತ್ತ್ವ ಪ್ರಚಾರ ಪ್ರಕಾಶನದ ವತಿಯಿಂದ ಒಂದು ದೊಡ್ಡ, ಮೂರು (ಕನ್ನಡ, ಇಂಗ್ಲೀಷ್ ಮತ್ತು ಹಿಂದಿ) ಭಾಷೆಗಳ ನಿಘಂಟು ಸಿದ್ಧಗೊಳಿಸುತ್ತಿದ್ದು, ಅದರ ನಾಲ್ಕು ಮಾದರಿ ಪುಟಗಳನ್ನು ಪ್ರೊ.ಶೇಷಗಿರಿರಾವ್ ಅವರ ಕೈಗೆ ನೀಡಿದರು. ಆ ಮಾದರಿ ಪುಟಗಳನ್ನು ಪರಿಶೀಲಿಸಿದ ಪ್ರೊಫೆಸರ್, ಇಂಗ್ಲಿಷ್ ಭಾಷೆಯಲ್ಲಿ ಕ್ಯಾಪಿಟಲ್ ಮತ್ತು ಸಾಮಾನ್ಯ ಅಕ್ಷರಗಳಿವೆ; ನಿಘಂಟಿನಲ್ಲಿ ಕೆಲವು ಅಪವಾದಗಳನ್ನು (ವ್ಯಕ್ತಿಯ ಸ್ಥಳದ ಇಂತಹ ಸಂಗತಿಗಳ ಹೆಸರುಗಳನ್ನು ಹೊರತುಪಡಿಸಿ, ಕ್ಯಾಪಿಟಲ್ ಅಕ್ಷರಗಳಿಂದ ಶಬ್ದಗಳನ್ನು ಅಚ್ಚು ಮಾಡದಿರುವುದು ಸಂಪ್ರದಾಯ; ಇಲ್ಲಿ ಕ್ಯಾಪಿಟಲ್ ಅಕ್ಷರವನ್ನು ಬಳಸಲಾಗಿದೆ; ಇದು ಸರಿಯಾದ ಕ್ರಮ ಅಲ್ಲ ಅಂದರು. ಇದನ್ನು ಆಲಿಸಿದ ನಾವಿಬ್ಬರೂ ಬೆರಗಾದೆವು. ಈ ವಿಚಾರದಲ್ಲಿ ನಾವು ಅಜ್ಞರು. ನಾನಂತೂ ಪ್ರತಿ ದಿನವೂ ನಿಘಂಟುವನ್ನು ಅನೇಕ ಸಲ ಬಳಸುತ್ತಿರುವೆ. ನನಗಾಗಿಯೇ ನಾನೇ ಸಿದ್ಧಗೊಳಿಸಿಕೊಳ್ಳುತ್ತಿರುವ ಶಬ್ದಕೋಶದಲ್ಲಿ ಕ್ಯಾಪಿಟಲ್ ಅಕ್ಷರವನ್ನು ಬಳಸಿಯೇ ಆಂಗ್ಲ ಶಬ್ದಗಳನ್ನು ಬರೆದುಕೊಳ್ಳುತ್ತಿರುವೆ; ಇಂಥ ಸ್ಥಿತಿಯಲ್ಲಿ ನಿಘಂಟುವಿನಲ್ಲಿ ಆಂಗ್ಲ ಶಬ್ದಗಳು ಕ್ಯಾಪಿಟಲ್ ಅಕ್ಷರಗಳಿಂದ ಆರಂಭವಾಗುವುದಿಲ್ಲ. ಎಂಬುದನ್ನು ಗಮನಿಸದಿರುವುನ್ನು ನೆನೆದು ನನಗೆ ಸಿಗ್ಗಾಯಿತು. ನನ್ನೀ ಅಜ್ಞಾನವನ್ನು ತೊಡೆದುಕೊಂಡ ಆ ಸಮಯಕ್ಕೆ, ಪ್ರೊ.ಶೇಷಗಿರಿರಾವ್ ಅವರಿಗೆ ಮತ್ತು ನನ್ನನ್ನು ಕರೆದೊಯ್ದ ಡಾ. ಶಿವಣ್ಣನವರಿಗೆ ನಾನು ಕೃತಜ್ಞ. ಈ ಪ್ರಸಂಗವನ್ನು ಡಾ. ಎಂ. ಚಿದಾಂನಂದಮೂರ್ತಿಯವರಿಗೆ, ಆನಂತರ ತಿಳಿಸಿದೆ. ಆಗ ಅವರು ತಮ್ಮಲ್ಲಿನ ಆಂಗ್ಲ ನಿಘಂಟುವನ್ನು ತರೆದು ನೊಡಿ, `ಹೌದಲ್ಲವೆ? ಎಂದು ಉದ್ಗರಿಸಿದರು. ವಿನಯದಿಂದ ವಿದ್ಯೆ ಸಂಸ್ಕೃತದಲ್ಲಿ ಒಂದು ಉಕ್ತಿ ಹೀಗಿದೆ: ವಿದ್ಯಾ ದದಾತಿ ವಿನಯಂ. ಅಂದರೆ, ವಿದ್ಯೆಯಿಂದ (ವಿದ್ಯಾವಂತರಾದವರು) ವಿನಯವನ್ನು ಪಡೆಯುತ್ತಾರೆ. ಆದರೆ, ನನಗೆ ಈ ಸಂದರ್ಶನದ ಸಂದರ್ಭದಲ್ಲಿ ವಿನಯದಿಂದ ವಿದ್ಯೆಯು ದೊರೆಯುತ್ತದೆ ಎಂದೆನಿಸಿತು. ಪ್ರೊ.ಶೇಷಗಿರಿರಾವ್ ತಮ್ಮ ಜೀವನದಲ್ಲಾದ ಒಂದು ಘಟನೆಯನ್ನು ವಿವರಿಸಿದರು. ಅವರು ಆಂಗ್ಲ ಭಾಷೆಯನ್ನು ಓದಿಕೊಂಡವರು, ಅದನ್ನು ಆಳವಾಗಿ ಬಲ್ಲವರು, ಅದರಲ್ಲೂ ಅನೇಕ ಪುಸ್ತಕಗಳನ್ನು ಬರೆದವರು, ಅತ್ಯುತ್ತಮ ಬೋಧಕರೆಂದು ಹೆಸರು ಗಳಿಸಿದವರು. ಹೈದರಬಾದಿನ ಸಂಸ್ಥೆಯೊಂದಕ್ಕೆ (15-20 ವರ್ಷಗಳ ಬೋಧನೆಯ ಅನುಭವ ಉಳ್ಳ) ಅವರನ್ನು ಆಂಗ್ಲ ಭಾಷೆಯಲ್ಲಿ ತರಬೇತಿಗೆ ಹೋಗಲು ಸರ್ಕಾರದಿಂದ ಒಂದು ಆಜ್ಞೆ ಬಂತು. ಅದಕ್ಕೆ ನಾನೇಕೆ ಹೋಗಬೇಕು? ನಾನು ಅಲ್ಲಿ ಕಲಿಯುವುದು ಏನಿದೆ? ಎಂದೆನಿಸಿತು ಅವರಿಗೆ. ನನ್ನೊಳಗಿನ ಅಹಂನಿಂದ ಈ ಭಾವನೆ ಬಂದಿತ್ತು ಎಂದು ಅವರು ಹೇಳಿದರು. ಮುಂದುವರೆದು, ಪ್ರೊ. ಗೋಕಾಕರು ಆ ಸಂಸ್ಥೆಯ ನಿರ್ದೇಶಕರಾಗಿದ್ದರು, ಆಗ ಅವರೇ ಪತ್ರ ಬರೆದು, ನೀನು ಈ ಕೋರ್ಸ್ ಗೆ ಬರಬೇಕು ಎಂಬುದು ನನ್ನ ಅಪೇಕ್ಷೆ ಎಂದು ತಿಳಿಸಿದರು. ಅವರ ಮಾತಿಗೆ ಬೆಲೆ ಕೊಡಲು ನಾನು ಅಲ್ಲಿಗೆ ಹೋದೆ; ಅಲ್ಲಿ ಇದ್ದ ಕಾಲದಲ್ಲಿ ನಾನು ಕಲಿತದ್ದು ಹೊಸತು ಮಾತ್ರವೇ ಅಲ್ಲ ಅತ್ಯುಪಯುಕ್ತವಾದ ಭಾಷಾಶಾಸ್ತ್ರಕ್ಕೆ ಸಂಬಂಧಿಸಿದ ವಿಷಯ. ನಾನು ಅಲ್ಲಿಗೆ ಹೋಗದಿದ್ದರೆ, ನಾನು ಮೂರ್ಖನಾಗುತ್ತಿದ್ದೆ ಎಂದರು. ಇದು ವಿನಯದಿಂದ ಆದ ಲಾಭವಲ್ಲವೆ, ಸಾರ್? ಎಂದೆ, ನಾನು. ಹೌದು ಅಂದರು ಅವರು. ಈ ಸಂಗತಿಯನ್ನೂ ಡಾ. ಎಂ. ಚಿದಾನಂದಮೂರ್ತಿಯವರಿಗೆ ತಿಳಿಸಿದೆ. ಆಗ ಅವರು ತಮ್ಮ ಜೀವನದಲ್ಲಾದ ಒಂದು ಘಟನೆಯನ್ನು ವಿವರಿಸಿದರು. ನಾನು ಭಾಷಾಶಾಸ್ತ್ರದ ತರಬೇತಿಗೆಂದು ಪೂನಾಕ್ಕೆ ಹೋಗಿದ್ದೆ. ಆ ಕೋರ್ಸ್ ನಲ್ಲಿ ಪಾಠ ಮಾಡುತ್ತಿದ್ದ ಪ್ರೊ.ಆ.ನೇ.ಉಪಧ್ಯಾಯ ತಮ್ಮ ಉಪನ್ಯಾಸ ಆದ ಮೇಲೆ ಇತರ ವಿದ್ವಾಂಸರು ಪಾಠ ಮಾಡುವಾಗ ನಮ್ಮೊಡನೆ ಅವರೂ ವಿದ್ಯಾರ್ಥಿಯಂತೆ ಕುಳಿತು ನೋಟ್ಸ್ ಮಾಡಿಕೊಳ್ಳುತ್ತಿದ್ದರು. ಆ ಕೋರ್ಸ್ ಗೆ ಕರ್ನಾಟಕದಿಂದ ಘನ ವಿದ್ವಾಂಸರಾದ ತೀ.ನಂ.ಶ್ರೀಕಂಠಯ್ಯ (ಕನ್ನಡ) ಮತ್ತು ಪ್ರೊ. ನಂ. ಶಿವರಾಮಶಾಸ್ತ್ರಿಯವರು (ಸಂಸ್ಕೃತ) ಬಂದು ನಮ್ಮೊಡನೆ ಕುಳಿತು, ಆತುರದಿಂದ ಬೋಧನೆಯನ್ನು ಆಲಿಸಿ, ನೋಟ್ಸ್ ಮಾಡಿಕೊಳ್ಳುತ್ತಿದ್ದರು ಎಂದು ಹೇಳಿದರು. ನಾನು ಬೆಕ್ಕಸಬೆರಗಾದೆ. ಈಗಿನ ನಮ್ಮ ಪ್ರಾಧ್ಯಾಪಕರ ಮನೋಸ್ಥಿತಿ, ನಡವಳಿಕೆಯು ನನ್ನ ಕಣ್ಮುಂದೆ ಸುಳಿಯಿತು. ಇಂದಿನವರು ಪಡೆಯುತ್ತಿರುವ ಸಂಬಳ, ಭತ್ಯೆಯಷ್ಟು ಅಂದಿನ ಅವರು ಪಡೆಯುತ್ತಿರಲಿಲ್ಲ, ಎಂಬುದೇನಾದರೂ ಇದಕ್ಕೆ ಕಾರಣ ಇರಬಹುದೆ ಎಂಬ ಅನುಮಾನವು ಸುಳಿಯುವ ಸಾಧ್ಯತೆ ಇದೆಯಲ್ಲವೆ? ಡಾ.ಎಚ್.ಎಂ.ಮರುಳಸಿದ್ಧಯ್ಯ. 9480611307
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
SITE MAP
SiteTRAININGJOB |
HR SERVICESOTHER SERVICESnIRATHANKA CITIZENS CONNECT |
NIRATHANKAPOSHOUR OTHER WEBSITESSubscribe |
MHR LEARNING ACADEMY
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|