ಸಾರಾಂಶ ಲೈಂಗಿಕ ಶೋಷಣೆ ಎಂಬ ಸಂದರ್ಭವು ವಿಭಿನ್ನ ರೀತಿಯ ಆಯಾಮಗಳನ್ನು ಹೊಂದಿದ್ದು ಅದರಲ್ಲಿ ವೇಶ್ಯಾವಾಟಿಕೆಯೂ ಒಂದಾಗಿದೆ. ಕಾಲಘಟ್ಟಗಳಲ್ಲಿ ಈ ವಿಷಯವನ್ನು ಅವಲೋಕಿಸಿದರೆ ಒಂದು ಹಂತದಲ್ಲಿ ತುಂಬಾ ಗೌರವದ ಸ್ಥಾನವನ್ನು ಪಡೆದುಕೊಂಡಿದ್ದೂ ಉಂಟು. ಆದರೆ ಸಾಮಾಜಿಕ, ಆರ್ಥಿಕ ಪರಿಸ್ಥಿತಿಗಳಿಗೆ ಅನುಸರಿಸಿ ಮತ್ತು ದೇಶದಲ್ಲಿ ರಾಜ್ಯದಲ್ಲಿ ಆದಂತಹ ರಾಜಕೀಯ ವ್ಯವಸ್ಥೆಯಿಂದಾಗಿ ಇದು ಸಾಕಷ್ಟು ಸಂದರ್ಭಗಳಲ್ಲಿ ಸ್ಥಿತ್ಯಂತರಕ್ಕೆ ಒಳಪಟ್ಟಿದ್ದೂ ಉಂಟು. ಮೂಲದಲ್ಲಿ ಸಾಂಪ್ರದಾಯಿಕವಾಗಿ ಹುಟ್ಟಿಕೊಂಡ ಒಂದು ವ್ಯವಸ್ಥೆಯು ಪ್ರಸ್ತುತ ಫ್ಲೆಶ್ ಟ್ರೇಡ್ ಎಂಬ ಹೆಸರಿನಿಂದ ಗುರುತಿಸುವ ಮಟ್ಟದವರೆಗೂ ವಾಣಿಜ್ಯೀಕರಣಗೊಂಡಿದೆ. ಇಂಥ ಸಂದರ್ಭದಲ್ಲಿ ಲೈಂಗಿಕ ಶೋಷಣೆಯ ಸಾಂಪ್ರದಾಯಿಕ ಮತ್ತು ವ್ಯವಹಾರಿಕ ಆಯಾಮವನ್ನು ಗುರುತಿಸಲು ಪ್ರಸ್ತುತ ಲೇಖನದಲ್ಲಿ ಪ್ರಯತ್ನಿಸಲಾಗಿದೆ. ಏನು ತಪ್ಪು ಮಾಡಿದೆ ತಾಯಿ ನನಗೆ ಈ ಶಿಕ್ಷೆ
ಮುತ್ತು ಕಟ್ಟಿ ಜೋಗುತಿ ಮಾಡಿ ಬೇಡಿಸಿದಿ ಭಿಕ್ಷೆ ಮನೆ ಮನೆ ಕೈಯ ಚಾಚಿ ಬೇಡುವಂತೆ ಮಾಡಿದಿ ಬಾಲ್ಯದಲ್ಲಿ ಕಟ್ಟಿದ ಕನಸು ನುಚ್ಚು ನೂರು ಮಾಡಿದಿ ಏನು ತಪ್ಪು ಮಾಡಿದೆ ತಾಯಿ ನನಗೆ ಈ ಶಿಕ್ಷೆ ಹೀಗೆ ದೇವದಾಸಿ ಮೂಲದ ಕಲಾವಿದೆಯೊಬ್ಬಳು, ಚೌಡಕಿ ಬಾರಿಸುತ್ತಾ ಹಾಡುತ್ತಿದ್ದರೆ, ಕಿಕ್ಕಿರಿದು ನೆರೆದ ಜನ ತಮಗರಿಯದಂತೆಯೇ ಕಣ್ಣಲ್ಲಿ ನೀರು ತುಂಬಿಕೊಂಡಿದ್ದರು. ಇದು ಒಬ್ಬಿಬ್ಬರ ಕಥೆಯಲ್ಲ. ಸಾವಿರಾರು ವರ್ಷಗಳಿಂದ ವಿವಿಧ ರೂಪಗಳಿಂದ ಹೆಣ್ಣುಮಕ್ಕಳನ್ನು ಲೈಂಗಿಕವಾಗಿ ಶೋಷಿಸಿದ ಪರಿಣಾಮದ ನೋವಿನ ಹಾಡಾಗಿದೆ. ಸ್ವತಃ ತಂದೆ-ತಾಯಿಯೇ ಮುಂದೆ ನಿಂತು ಅರಿಯದ ವಯಸ್ಸಿನಲ್ಲಿ, ತಮ್ಮ ಹೆಣ್ಣುಮಕ್ಕಳನ್ನು ದೇವರಿಗೆ ಅರ್ಪಿಸುವ ಕ್ರೂರ ಪದ್ಧತಿಗಳು ಸಂಪ್ರದಾಯದ ಹೆಸರಿನಲ್ಲಿ ಭಾರತದ ತುಂಬೆಲ್ಲ ಆಚರಣೆಯಲ್ಲಿವೆ. ಲೈಂಗಿಕ ಶೋಷಣೆಯು ಬರೀ ಶೋಷಣೆಯಾಗಿರದೇ ಅದೊಂದು ದೌರ್ಜನ್ಯವೆನಿಸಿದೆ. ಮೇಲು ನೋಟಕ್ಕೆ ಶೋಷಣೆಗೂ ದೌರ್ಜನ್ಯಕ್ಕೂ ವ್ಯತ್ಯಾಸವಿಲ್ಲವೆನಿಸಿದರೂ ಸಹ, ಒಂದು ಬಹು ಸೂಕ್ಷ್ಮವೆನಿಸುವ ಎಳೆಯನ್ನು ಗುರುತಿಸಬಹುದಾಗಿದೆ. ಲೈಂಗಿಕವಾಗಿ ಶೋಷಿತರಾದ ಶೇಕಡಾ 90 ಜನ ಮಹಿಳೆ ಮತ್ತು ಮಕ್ಕಳು ಕೆಳವರ್ಗದ ತಳಸಮುದಾಯದವರೇ ಆಗಿದ್ದಾರೆಂಬುದನ್ನು ಹಲವಾರು ವರದಿಗಳಿಂದ ಕಂಡುಕೊಳ್ಳಬಹುದು. ಜಾತಿಯ ತಂತ್ರವನ್ನು ಹುಟ್ಟು ಹಾಕಿದ ಶಿಷ್ಟ ಸಮುದಾಯ, ತಮ್ಮ ಬಳಕೆಗೆ ಅಸಹಾಯಕರಾದ ಒಂದು ವರ್ಗವನ್ನು ಪರಿಶಿಷ್ಟರನ್ನಾಗಿ ನಿರ್ಮಿಸಿದ್ದು ಶೋಷಣೆಯ ಹುಟ್ಟು. ದೇವರು, ಧರ್ಮ, ದೈವ, ಹುಟ್ಟು, ಸಾವು, ಪಾಪ, ಕರ್ಮ, ಮೋಕ್ಷಗಳ ಕಲ್ಪನೆಯನ್ನು ಹುಟ್ಟುಹಾಕಿ ಅತ್ಯಂತ ಕೀಳುಮಟ್ಟದ ಗುಲಾಮಗಿರಿಯನ್ನು ಹುಟ್ಟು ಹಾಕಿದ್ದು ಶೋಷಣೆಯ ಮುಂದುವರೆದ ರೂಪ. ಇವುಗಳಿಂದ ಪಾರಾಗಲು ಅವರ ಶ್ರಮವನ್ನು, ರಕ್ತವನ್ನು, ಅವರ ಮಹಿಳೆಯರನ್ನು ಮಕ್ಕಳನ್ನು ದೈಹಿಕವಾಗಿ, ಮಾನಸಿಕವಾಗಿ, ಲೈಂಗಿಕವಾಗಿ ಬಲಿ ತೆಗೆದುಕೊಂಡಿದ್ದು, ತೆಗೆದುಕೊಳ್ಳುತ್ತಿರುವುದು ದೌರ್ಜನ್ಯ. ಮುಕ್ತವಾಗಿ ಕಾಡುಮೇಡುಗಳಲ್ಲಿ ಓಡಾಡಿಕೊಂಡಿದ್ದ ಮಾನವ ಜೀವಿಗೆ ಆಹಾರವನ್ನು ಹುಡುಕಿ ತಿನ್ನುವುದೊಂದೇ ಗೊತ್ತಿದ್ದ ಸಂದರ್ಭದಲ್ಲಿ ಲೈಂಗಿಕತೆ ಒಂದು ಸಹಜ ಕ್ರಿಯೆ ಅಷ್ಟೇ. ಮುಂದೆ ಜೀವರಕ್ಷಣೆಗಾಗಿ ಒಂದೆಡೆ ಗುಂಪುಗೂಡಿದ್ದು, ಆಹಾರ ಸಂಗ್ರಹಣೆಯಿಂದ ಆಹಾರ ಉತ್ಪಾದನೆಯ ಹಂತಕ್ಕೆ ಏರಿದ್ದು ಕುಲ ಸಮುದಾಯದ ಜೀವನಕ್ಕೆ ನಾಂದಿ ಎಂದು ಅನೇಕ ಅಧ್ಯಯನಗಳಿಂದ ಕಂಡುಕೊಳ್ಳುತ್ತೇವೆ. ಕೂಡಿ ದುಡಿಯುವ ಮತ್ತು ಹಂಚಿ ತಿನ್ನುವ ಪರಿಸರದಲ್ಲಿ ತಾಯಿ ಎಂಬುದು ಸತ್ಯವಾಗಿತ್ತು. ಮಾತೃ ಪ್ರಧಾನವಾದ ಶಿಲಾಯುಗದ ಬುಡಕಟ್ಟುಗಳಲ್ಲಿ ವ್ಯಭಿಚಾರ ಎಂಬ ಮಾತಿಗೆ ಅರ್ಥವಿಲ್ಲ ಎಂದು ಕೋಸಾಂಬಿಯವರು ಪ್ರಾಚೀನ ಭಾರತದ ಚರಿತ್ರೆ ಪುಸ್ತಕದಲ್ಲಿ ಅಭಿಪ್ರಾಯ ಪಡುತ್ತಾರೆ. ಈ ಎಲ್ಲ ಸಂದರ್ಭಗಳಲ್ಲಿ ಮಹಿಳೆಯನ್ನು ಲೈಂಗಿಕವಾಗಿ ಹಿಂಸೆಗೆ ಒಳಪಡಿಸಿದ್ದನ್ನು ಬಲಾತ್ಕರಿಸಿದ್ದನ್ನು ಅಧೀನಗೊಳಿಸದ್ದನ್ನು ನಾವು ಕಾಣುವುದಿಲ್ಲ. ಆಗಲೂ ಸಹ ಅದು ಸಹಜ ಪ್ರಕ್ರಿಯೆಯೇ ಆಗಿತ್ತು. ಇಂಥ ಸಹಜ ಪ್ರಕ್ರಿಯೆಯೊಂದು ಮಹಿಳೆಯರನ್ನು ಜೀವಂತವಾಗಿ ಸುಡುವ ಸತಿ ಪದ್ಧತಿಯನ್ನು ಹುಟ್ಟು ಹಾಕುತ್ತದೆ. ಮಹಿಳೆಯ ಲೈಂಗಿಕತೆ ಪವಿತ್ರವಾಗಿರಬೇಕು, ಅವಳಿಂದ ಹುಟ್ಟುವ ಮಕ್ಕಳು ತನ್ನವೆ ಆಗಿರಬೇಕು ಎಂದು ಅವಳ ಲೈಂಗಿಕ ಸ್ವಾತಂತ್ರ್ಯಕ್ಕೆ ನಿರ್ಬಂಧ ಹೇರಲಾಗುತ್ತದೆ. ಅವಳ ಕನ್ಯತ್ವ ತನಗೇ ಮೀಸಲಾಗಿರಬೇಕೆಂಬ ಉದ್ದೇಶದಿಂದ ಪುರುಷ ಸಮಾಜ ಬಾಲ್ಯ ವಿವಾಹಗಳನ್ನು ಹುಟ್ಟು ಹಾಕುತ್ತದೆ. ಧಾರ್ಮಿಕ ನಂಬಿಕೆಗಳನ್ನು ಹುಟ್ಟು ಹಾಕಿ ಒಂದು ವರ್ಗದ ಸಮುದಾಯ ತಮ್ಮ ಹೆಣ್ಣು ಮಕ್ಕಳಿಗೆ ಮದುವೆಯನ್ನು ನಿರಾಕರಿಸುವಂತೆ ಮಾಡಿ ಅವರನ್ನು ನಿತ್ಯ ಸುಮಂಗಲಿಯರನ್ನಾಗಿಸುತ್ತದೆ. ಇಲ್ಲದ ದೇವರನ್ನು ಹುಟ್ಟಿಸಿ ಅವರೊಂದಿಗೆ ಮದುವೆ ಮಾಡುವ ಇವರನ್ನು ಮೇಲು ವರ್ಗ ತನ್ನ ಮುಕ್ತ ಲೈಂಗಿಕತೆಗೆ ಬಳಸಿಕೊಳ್ಳುತ್ತದೆ. ಪಿತೃ ಪ್ರಧಾನ ಸಮಾಜದ ಹಂತದಲ್ಲಿ ಹೆಣ್ಣನ್ನು ತನ್ನ ಆಸ್ತಿ ಎಂದೇ ಪರಿಗಣಿಸುವ ಪುರುಷ ಸಮಾಜ ಗಂಡ ಸತ್ತ ನಂತರ ವಿಧವೆಯನ್ನಾಗಿಸಿ ಸಮಾಜದಿಂದ ಹೊರಗುಳಿಸುತ್ತದೆ. ಈ ಎಲ್ಲ ಸಂದರ್ಭಗಳಲ್ಲಿಯೂ ಹೆಣ್ಣಿನ ಲೈಂಗಿಕತೆಯನ್ನೇ ಕೇಂದ್ರವಾಗಿಸಿಕೊಂಡಿರುವುದು, ಆ ಕಾರಣಕ್ಕಾಗಿಯೇ ಅವಳನ್ನು ತನ್ನ ಅಧೀನದಲ್ಲಿ ಇಟ್ಟುಕೊಳ್ಳುವುದು ತುಂಬಾ ಸಹಜವಾಗಿ ಗೋಚರಿಸುವುದರ ಜೊತೆ ಜೊತೆಗೇನೇ ಪುರುಷ ತಾನು ಲೈಂಗಿಕವಾಗಿ ಮುಕ್ತವಾಗಿರಲು ಬಯಸುವ ಪ್ರಯತ್ನಗಳು, ಮುಕ್ತವಾಗಿರುವಂತಹ ಸಂದರ್ಭಗಳು ಕಣ್ಣ ಮುಂದೆ ಕಾಣುತ್ತಿವೆ. ಇವು ನಾಗರಿಕ ಸಮಾಜದ ಯಜಮಾನಿಕೆಯ ಅಸಹಜ ವಿಕೃತಿಗಳಾಗಿವೆ. ಇವುಗಳ ಜೊತೆಗೆ ಸಮಾನ ಲಿಂಗಿಗಳಲ್ಲಿ ನಡೆಯುತ್ತಿರುವ ಲೈಂಗಿಕ ಸಂಬಂಧಗಳು, ಅಸಬಲ ಮಹಿಳೆಯರನ್ನು ಮತ್ತು ಅಪ್ರಾಪ್ತ ಮಕ್ಕಳನ್ನು ಲೈಂಗಿಕ ಚಟುವಟಿಕೆಗೆ ಎಳೆಯುತ್ತಿರುವ ಸಾಗಾಣಿಕಾ ಜಾಲಗಳು ಲೈಂಗಿಕ ಶೋಷಣೆ ಲೈಂಗಿಕ ದೌರ್ಜನ್ಯವಾಧಾರಿತ ಚಟುವಟಿಕೆಯನ್ನು ಜಗತ್ತಿನ ಮೂರನೆಯ ಅತೀ ದೊಡ್ಡ ಉದ್ಯಮವನ್ನಾಗಿ ಬೆಳೆಸಿ ನಿಲ್ಲಿಸಿವೆ. ಈ ಹಿನ್ನೆಲೆಯಲ್ಲಿ ಕೆಳವರ್ಗದ, ಆರ್ಥಿಕವಾಗಿ ಹಿಂದುಳಿದ, ಅನಾರೋಗ್ಯದಿಂದ ಬಳಲುವ, ಅಂಗವಿಕಲರಾಗಿರುವ ಅಮಾಯಕ ಹೆಣ್ಣುಮಕ್ಕಳನ್ನು ಧರ್ಮ, ದೇವರು, ಕರ್ಮಫಲ ಎಂದೆಲ್ಲ ನಂಬಿಸಿ ವೇಶ್ಯಾವಾಟಿಕೆಗೆ ತಳ್ಳಿದ್ದು ಲೈಂಗಿಕ ಶೋಷಣೆಗೆ ತಳ್ಳಿದ್ದು ಅದಕ್ಕೆ ಸಾಂಪ್ರದಾಯಿಕತೆಯ ರೂಪ ಕೊಟ್ಟಿದ್ದು ಲೈಂಗಿಕ ಶೋಷಣೆಯ ಒಂದು ಭಾಗ. ಅದರ ಜೊತೆಗೆ ಜಾಗತೀಕರಣಗೊಂಡ ಇಂದಿನ ಪ್ರಪಂಚದಲ್ಲಿ ಅದೇ ಸಾಂಪ್ರದಾಯಿಕತೆಯನ್ನು ವಾಣಿಜ್ಯೀಕರಣಗೊಳಿಸಿದ್ದು ಅದರ ಮತ್ತೊಂದು ಮುಖ. ಆದರೆ ಈ ಎಲ್ಲ ಸಂದರ್ಭಗಳಲ್ಲಿ ಮತ್ತೆ ಮತ್ತೆ ಬಲಿ ಬಿದ್ದವರು ಮತ್ತು ಬೀಳುತ್ತಿರುವವರು ಹೆಣ್ಣುಮಕ್ಕಳೇ. ಲೈಂಗಿಕ ಶೋಷಣೆಯ ಸಾಂಪ್ರದಾಯಿಕ ಆಯಾಮ: ಮಕ್ಕಳಿಲ್ಲದವರು ಹರಸಿಕೊಂಡ ಹರಕೆ, ಗಂಡು ಮಕ್ಕಳ ಬಯಕೆ, ಮನೆಯ ಅನಾರೋಗ್ಯ, ಆಸ್ತಿ, ಬೆಳೆ ಹಾಳಾದರೆ, ಹುಟ್ಟಿದ ಹೆಣ್ಣು ಮಗುವಿನ ನೆತ್ತಿಯ ಕೂದಲು ಗಂಟಾದರೆ, ಅನುವಂಶೀಯ ಸಂಪ್ರದಾಯ, ಪೂಜಾರಿಯೋ ಅಥವಾ ಜೋಗತಿಯೋ ಮಗಳನ್ನು ದೇವರಿಗೆ ಅರ್ಪಿಸಲು ಕೇಳಿದರೆ ಹೀಗೆಯೇ ಅನಕ್ಷರತೆ, ಅಜ್ಞಾನ, ಮೂಢ ನಂಬಿಕೆಗಳಿಗೆ ಜೋತು ಬಿದ್ದು, ಸಮುದಾಯದ ಒತ್ತಡ ಮತ್ತು ಬಡತನಗಳಿಗೆ ಪರಿಹಾರ ಕಂಡುಕೊಳ್ಳುವ ದಿಶೆಯಲ್ಲಿ ತಮ್ಮ ಮಗಳನ್ನು ದೇವರಿಗೆ ಅರ್ಪಿಸುವ ಪ್ರಕ್ರಿಯೆಯ ಕೊನೆಯ ಪರಿಣಾಮ ಲೈಂಗಿಕ ಹಿಂಸೆ ಮತ್ತು ಬಳಕೆಯಾಗಿದೆ. ಅದು ಶೋಷಣೆಯೋ, ಸಂಪ್ರದಾಯವೋ ಅವರಿಗೆ ಗೊತ್ತಿಲ್ಲ. ಆದರೆ ಹಲವಾರು ಅಧ್ಯಯನಗಳಿಂದ ಮತ್ತು ಸ್ವತಃ ಶೋಷಿತ ಸಮಾಜವೇ ವ್ಯಕ್ತಪಡಿಸುವಂತೆ, ಇದು ಅವರ ಬದುಕನ್ನು ಕಸಿದುಕೊಂಡ ವ್ಯವಸ್ಥಿತ ಹಿಂಸೆಯಾಗಿದೆ. ಇದು ಸಂಪ್ರದಾಯದ ಹೆಸರಿನಲ್ಲಿ ನಡೆಯುವುದರಿಂದ ಇದೊಂದು ಸಾಂಪ್ರದಾಯಿಕ ಲೈಂಗಿಕ ಚಟುವಟಿಕೆ ಅಥವಾ ವೇಶ್ಯಾಗಾರಿಕೆಯಾಗಿದೆ. ಇಲ್ಲಿ ಮಹಿಳೆ ಲೈಂಗಿಕ ಚಟುವಟಿಕೆಯನ್ನು ಹಣದಿಂದ ಅಳೆಯುವುದಿಲ್ಲ. ಒಂದು ಸಂಪ್ರದಾಯವು ತನ್ನನ್ನು ಅಸುರಕ್ಷಿತಳನ್ನಾಗಿ ಮಾಡಿದಾಗ, ಅದರ ಮೂಲಕವೇ ಒಬ್ಬನಿಗೆ ತನ್ನತನವನ್ನು ಅರ್ಪಿಸಿ ಸುರಕ್ಷತೆಯನ್ನು ಅರಸುತ್ತಾಳೆ. ಅಲ್ಲಿ ಅವನಿಂದ ತನಗೆಷ್ಟು ಲಾಭ ಗಳಿಕೆ ಎಂಬುದನ್ನು ನಿರೀಕ್ಷಿಸುವುದಕ್ಕಿಂತ, ಅವನೊಟ್ಟಿಗೆ ಬದುಕುವುದರಿಂದ ತಾನೆಷ್ಟು ಸುರಕ್ಷಿತಳು, ತನ್ನ ಮಕ್ಕಳೆಷ್ಟು ಸುರಕ್ಷಿತರು ಎಂದು ಯೋಚಿಸುತ್ತಾಳೆ. ಆದ್ದರಿಂದ ಮೂಲದಲ್ಲಿ ದೇವರು ಹಾಗೂ ಧರ್ಮದ ಹೆಸರಿನಲ್ಲಿ ನಡೆಯುತ್ತಿದ್ದ ಸಂಪ್ರದಾಯವನ್ನು ಸಾಂಪ್ರದಾಯಿಕ ವೇಶ್ಯಾವಾಟಿಕೆ ಅಥವಾ ದೇವಾಲಯದ ವೇಶ್ಯಾವಾಟಿಕೆ (Traditional Prostitution or Temple Prostitution) ಎಂದೂ ಕರೆಯಲಾಗುತ್ತದೆ. ಸಾಂಪ್ರದಾಯಿಕ ವೇಶ್ಯಾವಾಟಿಕೆಯ ಸ್ವರೂಪ: ಸಾಂಪ್ರದಾಯಿಕ ವೇಶ್ಯಾವಾಟಿಕೆಯು ಬರೀ ಯಾವುದೋ ಒಂದು ಪ್ರದೇಶಕ್ಕೆ ಸೀಮಿತವಾಗಿರದೇ ಜಗತ್ತಿನಾದ್ಯಂತ ತನ್ನ ನೆಲೆಯನ್ನು ಹೊಂದಿರುವ ಕುರಿತು ಡಾ: ಜೋಗನ್ ಶಂಕರ್ ಅವರು ತಮ್ಮ ದೇವದಾಸಿ ಸಂಪ್ರದಾಯ ಕೃತಿಯಲ್ಲಿ ಉಲ್ಲೇಖಿಸುತ್ತಾರೆ. 12ನೇ ಶತಮಾನಕ್ಕೂ ಮೊದಲಿನ ಇತಿಹಾಸಕ್ಕೆ ಪುರಾಣಗಳನ್ನು, ದೇವಾಲಯದ ಶಾಸನಗಳನ್ನು ಹೊರತುಪಡಿಸಿದರೆ ಕ್ರಿ.ಪೂ 300ರಲ್ಲಿ ಮೌರ್ಯರ ಕಾಲದಲ್ಲಿ ಕೌಟಿಲ್ಯನು ಬರೆದ ಅರ್ಥಶಾಸ್ತ್ರವು ಅಂದಿನ ಕಾಲದ ವೇಶ್ಯಾವಾಟಿಕೆಯ ಪರಿಯನ್ನು ವಿವರಿಸುತ್ತದೆ. ಭಾರತದ ಸಾಮಾಜಿಕ ಮತ್ತು ಧಾರ್ಮಿಕ ಜೀವನದಲ್ಲಿ ನೋಡುವುದಾದರೆ, ದೇಶದ ಉದ್ದಗಲಕ್ಕೂ ಇದರ ಪ್ರಭಾವ ಮತ್ತು ಪರಿಣಾಮವನ್ನು ವಿವಿಧ ರೂಪಗಳಲ್ಲಿ ಕಾಣಬಹುದಾಗಿದೆ. ಅರಳೀಮರದೊಂದಿಗೆ ಮದುವೆಯಾಗಿ ವೇಶ್ಯಾವೃತ್ತಿ ಪ್ರಾರಂಭಿಸುವ ಉತ್ತರಪ್ರದೇಶದ ತವಾಯಫ್, ನೃತ್ಯಗಾರರು ಮತ್ತು ಡೊಂಬರದವರೂ ಆಗಿ ವೇಶ್ಯಾವೃತ್ತಿ ಮಾಡುವ ರಾಜಸ್ಥಾನದ ಬೇಡಿಯರು, ದೇವಾಲಯದ ದೇವರ ದೀಪದ ಎಣ್ಣೆಯನ್ನು ತಲೆಯ ಮೇಲೆ ಹುಯ್ದುಕೊಳ್ಳುವುದರ ಮೂಲಕ ತಮ್ಮನ್ನು ಅರ್ಪಿಸಿಕೊಳ್ಳುವ ಮಹಾರಾಷ್ಟ್ರದ ರತ್ನಗಿರಿ, ಕೆನರ ಮತ್ತು ಸಾವಂತವಾಡಿ ಜಿಲ್ಲೆಗಳ ಭಾವಿನ್ಗಳು, ಕಠಾರಿಯ ಜೊತೆಗೆ ಮದುವೆ ಮಾಡಿಕೊಂಡು ಆ ಕಠಾರಿಯ ಸುತ್ತ ಗೋಳಾಡುತ್ತ ಏಳು ಸಾರೆ ಆಕೆ ಸುತ್ತುವುದರ ಮೂಲಕ ತನ್ನನ್ನು ಕಳೆದುಕೊಳ್ಳುವ ಬಂಗಾಳ ಮತ್ತು ಒರಿಸ್ಸಾಗಳಲ್ಲಿ ಇರುವ ಕಸ್ಬಿಗಳು, ಆಂಧ್ರಪ್ರದೇಶದ ಭಾಗಗಳಲ್ಲಿ ಕಂಡುಬರುತ್ತಿರುವ ಬೋಗಮ್ಗಳು, ಕತ್ತಿಗೆ ಏಳು ಕವಡೆಗಳ ಸರವನ್ನು ಹಾಕಿ ಖಂಡೋಬ ಅಥವಾ ಕಠಾರಿ ಜೊತೆ ಮದುವೆ ಮಾಡಿಕೊಳ್ಳುವ ಮುರುಳಿಯರು ಹಾಗೂ ಮುತ್ತು ಕಟ್ಟುವ ಮತ್ತು ಭುಜಕ್ಕೆ ಮುದ್ರೆಯೊತ್ತಿಸಿಕೊಳ್ಳುವ ಮೂಲಕ ದೇವರೊಂದಿಗೆ ಮದುವೆಯಾಗುವ ಕರ್ನಾಟಕ ಮತ್ತು ಮಹಾರಾಷ್ಟ್ರದ ದೇವದಾಸಿಯರು/ಬಸವಿಯರು/ಜೋಗತಿಯರು, ಹೀಗೆ ಭಾರತದ ಬಹಳಷ್ಟು ಪ್ರದೇಶಗಳಲ್ಲಿ ಕೆಳಸ್ತರದ ಹೆಣ್ಣುಮಕ್ಕಳನ್ನು ವೇಶ್ಯಾವಾಟಿಕೆಯಂತಹ ಕೂಪದಲ್ಲಿ ನರಳಿಸಿರುವದು ಕಂಡು ಬರುತ್ತದೆ. ಅವರಲ್ಲಿರುವ ಬಡತನ ಮತ್ತು ಅನಕ್ಷರತೆಗಳು ಮೌಢ್ಯತೆ, ಕಂದಾಚಾರಗಳು ಮತ್ತು ಮೂಢನಂಬಿಕೆಗಳನ್ನು ನಂಬುವಂತೆ ಮಾಡಿದ್ದವು. ಆ ಮೂಲಕ ತಮ್ಮ ಶೋಷಣೆಯಾಗುತ್ತಿದೆ ಎಂಬ ಕಲ್ಪನೆಯೂ ಅವರಿಗೆ ಇರಲಿಲ್ಲ. ಇಂಥ ಪದ್ಧತಿಗಳನ್ನು ತೊಡೆದು ಹಾಕಲು ದೇಶದಾದ್ಯಂತ, ಸಮಾಜ ಸುಧಾರಕರು ಆಂದೋಲನಗಳ ಮೂಲಕ ವಿರೋಧ ವ್ಯಕ್ತಪಡಿಸತೊಡಗಿದರು. ಸ್ವಯಂ ಸೇವಾ ಸಂಸ್ಥೆಗಳು ಜಾಗೃತಿ ಮೂಡಿಸತೊಡಗಿದವು. ಸರಕಾರವು ಆಯಾ ರಾಜ್ಯಗಳ ವ್ಯಾಪ್ತಿಗೆ ಮೀಸಲಾಗುವಂತೆ ದೇವದಾಸಿ ಸಮರ್ಪಣಾ ನಿಷೇಧ ಕಾಯಿದೆ ಹೊರಡಿಸಿದವು. ಶೈಕ್ಷಣಿಕ ಕಾರ್ಯಕ್ರಮಗಳು ಹೆಚ್ಚಾಗಿದ್ದರಿಂದ ದೇವದಾಸಿ ಮಕ್ಕಳು ಶಿಕ್ಷಣ ಪಡೆಯಲು ಮುಂದಾದರು. ಇದರಿಂದಾಗಿ ರಾಜಾರೋಷವಾಗಿ ನಡೆಯುತ್ತಿದ್ದ ಪದ್ಧತಿಗಳು ಅಲ್ಲಲ್ಲಿ ಕದ್ದು ಮುಚ್ಚಿ ನಡೆಯತೊಡಗಿದವು. ಸಾಂಪ್ರದಾಯಿಕತೆಯಿಂದ ವಾಣಿಜ್ಯೀಕರಣದತ್ತ: ಬ್ರಿಟಿಷರ ವಸಾಹತುಶಾಹಿ ಪದ್ಧತಿಯಲ್ಲಿ ಸಮಾಜಸೇವಾ ಸಂಘಟನೆಗಳ ಒತ್ತಡದಿಂದಾಗಿ ವೇಶ್ಯಾವಟಿಕೆಯನ್ನು ಕಾನೂನಿನಲ್ಲಿ ಅಪರಾಧವೆಂದು ಪರಿಗಣಿಸಲಾಯಿತು. ಆದರೂ ಅವರು ತಮ್ಮ ಸೇವೆಯಲ್ಲಿರುವ ಬ್ರಿಟಿಷ ಮಿಲಿಟರಿ ಪಡೆಗಳಿಗೆ ಭಾರತೀಯ ಮಹಿಳೆಯರು ಲೈಂಗಿಕ ಸೇವೆಯನ್ನು ಸಲ್ಲಿಸುವಂತಹ ಪದ್ಧತಿಯನ್ನು ಜಾರಿಗೊಳಿಸಿದರು. ಬ್ರಿಟಿಷ ಕಮಾಂಡರ್ ಇನ್ ಚೀಫ್ ಅಧಿಕಾರಿ ಲಾರ್ಡ್ ರಾಬರ್ಟ್ ರವರು 1886 ರಲ್ಲಿ ಬ್ರಿಟಿಷ್ ಮಿಲಿಟರಿ ಪ್ರಾಂತೀಯ ಪಡೆಗಳ ಮಾರುಕಟ್ಟೆಯಲ್ಲಿ ಆಕರ್ಷಣೀಯ ಮಹಿಳೆಯರು ಹಣಕ್ಕಾಗಿ ಲೈಂಗಿಕ ಸೇವೆಯನ್ನು ನೀಡಬೇಕೆಂದು ಆದೇಶಿಸಿದನೆಂದು ಮನೋರಂಜಿನಿಯವರು ತಮ್ಮ ಲಿಂಗೀಯ ಸಂಬಂಧಗಳು ಮತ್ತು ಸಮುದಾಯ ಚರ್ಚೆಗೆ ದಂಧೆ ಮಾಡುವವರ ಹಿನ್ನೆಲೆಯಲ್ಲಿ ಕೆಲ ವಿಚಾರಗಳು ಎಂಬ ಲೇಖನದಲ್ಲಿ ಉಲ್ಲೇಖಿಸುತ್ತಾರೆ. ಹಣ ಗಳಿಸುವ ಆಸೆಯಿಂದ ಮಹಿಳೆಯರನ್ನು ಅಪ್ರಾಪ್ತ ಮಕ್ಕಳನ್ನು ವೇಶ್ಯಾವಾಟಿಕೆಗೆ ತಳ್ಳತೊಡಗಿದರು. ಇದರಿಂದಾಗಿ ಸಾಂಪ್ರದಾಯಿಕವಾಗಿದ್ದ ಲೈಂಗಿಕತೆಯು ವ್ಯಾಪಾರವಾಗಿ ಬದಲಾಯಿತು. ಇದರಿಂದಾಗಿ ಅನೇಕ ವೇಶ್ಯಾಗೃಹಗಳು ಕಾನೂನು ರೀತಿಯಲ್ಲಿಯೇ ಹುಟ್ಟಿಕೊಂಡವು. ತಲೆಹಿಡುಕರು ಹುಟ್ಟಿಕೊಂಡರು. ಈ ಲೈಂಗಿಕತೆಯ ಮಾರುಕಟ್ಟೆಯಲ್ಲಿ ಅಧಿಕಾರ ವರ್ಗದವರ ಮತ್ತು ಹಣವಂತರ ದೌರ್ಜನ್ಯ ಆರಂಭವಾಯಿತು. ಒಂದು ಕಡೆ ಅಪರಾಧವೆಂದು ಗುರುತಿಸಿದ್ದನ್ನು, ಇನ್ನೊಂದೆಡೆ ತಮ್ಮ ಸ್ವಾರ್ಥಕ್ಕಾಗಿ ವ್ಯಾಪಾರದ ಸರಕಾಗಿಸಿದ್ದು, ಮಹಿಳೆಯರ ದಿಕ್ಕನ್ನು ತಪ್ಪಿಸಿತು. ಡಾ: ಜೋಗನ್ ಶಂಕರ್ ಅವರು ತಮ್ಮ ದೇವದಾಸಿ ಸಂಪ್ರದಾಯ ಪುಸ್ತಕದಲ್ಲಿ ಬರೆಯುವಂತೆ ಹಳ್ಳಿಗಳಿಂದ ಸಾಗಾಣೆಗೊಂಡು ಮುಂಬಯಿಯ ವೇಶ್ಯಾಗೃಹಗಳಲ್ಲಿ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿದ ದೇವದಾಸಿಯರು ಗ್ರಾಮೀಣ ಭಾಗದ ಮಕ್ಕಳನ್ನು ಹೆಚ್ಚಿನ ಹಣಕ್ಕಾಗಿ ಮಾರಿಸುವ ದಂಧೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಇದು ಗ್ರಾಮೀಣ ತಂದೆ-ತಾಯಂದಿರು, ಪೋಷಕರು ತಮ್ಮ ಮಕ್ಕಳನ್ನು ಹಣದಾಸೆಗಾಗಿ ವ್ಯಾಪಾರಕ್ಕಿಳಿಸುವಂತೆ ಪ್ರೇರೇಪಿಸಿತು. ಹೀಗೆ ಒಂದು ಸಂಪ್ರದಾಯವಾಗಿದ್ದ ಲೈಂಗಿಕತೆಯು ಕ್ರಮೇಣ ವಾಣಿಜ್ಯೀಕರಣಗೊಂಡು ಬಾಜಾರಿ ಲೈಂಗಿಕ ಚಟುವಟಿಕೆಗಳು ಪ್ರಾರಂಭವಾದವು. ಬಾಜಾರಿ ಲೈಂಗಿಕ ಚಟುವಟಿಕೆ ಎಂದರೆ, ಯಾವುದೇ ದೇವರು ಧರ್ಮದ ಹೆಸರಿಲ್ಲದೇ ಅಥವಾ ಅದರ ಹೆಸರಿನಲ್ಲಿ ನೇರವಾಗಿ ಮಹಿಳೆಯನ್ನು ಒಂದು ಸರಕಾಗಿಸಿ ಲೈಂಗಿಕ ಉದ್ದೇಶಕ್ಕಾಗಿ ಮಾರುವ ಮತ್ತು ಕೊಳ್ಳುವ ಒಂದು ಚಟುವಟಿಕೆಯಾಗಿದೆ. ಇಲ್ಲಿ ಮಹಿಳೆ ಮತ್ತು ಮಕ್ಕಳನ್ನು ಮೋಸದಿಂದ, ಒತ್ತಾಯದಿಂದ ತೊಡಗಿಸಲಾಗುತ್ತದೆ. ಇಂತಹ ಎಷ್ಟೋ ಸಂದರ್ಭಗಳಲ್ಲಿ ಮಕ್ಕಳು ಋತುಮತಿಯಾಗುವ ಮುನ್ನವೇ ಅವರನ್ನು ಲೈಂಗಿಕ ಚಟುವಟಿಕೆಗೆ ಎಳೆಯಲಾಗುತ್ತದೆ. ಹಳ್ಳಿಗಳಲ್ಲಿಯೇ ಇದ್ದುಕೊಂಡು ವ್ಯಾಪಾರೀ ದೃಷ್ಟಿಯಿಂದ ವೇಶ್ಯಾವೃತ್ತಿ ನಡೆಸಿದ ಅಜ್ಜಿಯೊಬ್ಬರು, ನಾವೆಲ್ಲ ಹಳೆಯ ಕಾಲದವರು, ಆಗೆಲ್ಲ ಹೊಟ್ಟೆ ಇಳಿಸಿಕೊಳ್ಳಲು (ಗರ್ಭಪಾತ) ದವಾಖಾನೆಗಳು ಇರುತ್ತಿರಲಿಲ್ಲ. ಇದ್ದರೂ ಅವು ನಮ್ಮಂಥವರಿಗೆ ನಿಲುಕುತ್ತಿರಲಿಲ್ಲ. ಆಗೆಲ್ಲ, ನಾವು ಬಸುರಿಯಾದರೆ ದಂಧೆಗೆ ಪೆಟ್ಟು ಬೀಳುತ್ತಿತ್ತು, ಗಳಿಕೆ ಕಡಿಮೆ ಆಗುತ್ತಿತ್ತೆಂದು, ಮುಟ್ಟು ನಿಂತ ಎರಡು ತಿಂಗಳ ಒಳಗೇನೇ, ಗಣಜಲಿಗೆ ಕಡ್ಡಿಯನ್ನು ಚುಚ್ಚಿ ಪೀಶ್ವಿ (ಗರ್ಭಕೋಶ) ಹರಿಯುತ್ತಿದ್ದರು. ಒಂದೊಂದು ಸಾರೆ ಮಡ್ಡ್ಯಾಗ (ಗುಡ್ಡ) ಬೆಳೆದ ಖಾರ್ಚಿ ಗಡ್ಡಿ ತಂದು, ಅದರ ರಸ ತೆಗೆದು ಹಾಳ ಹೊಟ್ಟ್ಯಾಗ (ಖಾಲಿ ಹೊಟ್ಟಿ) ಮೂರು ದಿನ ಕುಡಿಸುತ್ತಿದ್ದರು ಎಂದು ಹೇಳುತ್ತಾರೆ. 12-13ರ ವಯಸ್ಸಿನಲ್ಲಿಯೇ ಮುಂಬಯಿ ವೇಶ್ಯಾಗೃಹದಲ್ಲಿದ್ದು, ಮರಳಿದ ಮಹಿಳೆಯೊಬ್ಬರು ಹೇಳುವಂತೆ, ದಂಧೆಯ ಮನೆಗಳಲ್ಲಿ ಮಕ್ಕಳು, ದೊಡ್ಡವರು ಎಂಬ ಯಾವ ವ್ಯತ್ಯಾಸವೂ ಇರುವುದಿಲ್ಲ. ನೆರೆಯದೇ ಇರುವ ಮಕ್ಕಳನ್ನೂ ಸಹ ಅಲ್ಲಿ ನೆರೆಸಲಾಗುತ್ತದೆ. ಒಂದು ದಿನಕ್ಕೆ 5-10-15 ಜನ ಗಿರಾಕಿಗಳನ್ನು ಅವರು ಸಂತೃಪ್ತಿಗೊಳಿಸಬೇಕಾಗುತ್ತದೆ. ಇದರಲ್ಲಿ ಮಹಿಳೆಯರಾಗಿದ್ದರೆ ಲೆಕ್ಕವಿಟ್ಟು ಆದಾಯ ಪಡೆಯುತ್ತಾರೆ. ಆದರೆ ಮಕ್ಕಳ ವಿಷಯದಲ್ಲಿ ಯಾವುದೇ ಲಾಭ-ನಷ್ಟಗಳ ಪ್ರಶ್ನೆಯೇ ಬರುವುದಿಲ್ಲ. ಏಕೆಂದರೆ ಘರವಾಲಿ 50,000-1,00,000 ರೂಪಾಯಿಗಳಿಗಿಂತಲೂ ಹೆಚ್ಚಿನ ಹಣವನ್ನು ನೀಡಿ ತಲೆಹಿಡುಕರಿಂದ ಅವರನ್ನು ಖರೀದಿಸಿರುವುದರಿಂದ, ಅವಳನ್ನು ಹಣ ಗಳಿಸುವ ಒಂದು ವಸ್ತುವಾಗಿಯೇ ಅವಳು ಭಾವಿಸುತ್ತಾಳೆ. ತಾನು ಹೂಡಿದ ಬಂಡವಾಳವನ್ನು ಮರಳಿ ಗಳಿಸುವುದೊಂದೇ ಅವಳ ಉದ್ದೇಶವಾಗಿರುತ್ತದೆ. ಹಾಗಾಗಿ ಅವಳು ಹೇಳಿದಷ್ಟು ಗಿರಾಕಿಗಳನ್ನು ಆ ಮಕ್ಕಳು/ಹುಡುಗಿಯರು ಕರೆದುಕೊಳ್ಳಲೇಬೇಕಾಗುತ್ತದೆ. ಯಾರೂ ಇಲ್ಲದ ಇವರಿಗೆ ಘರವಾಲಿಯೇ ಎಲ್ಲವೂ ಆಗಿರುತ್ತಾಳೆ ಎಂದು ಹೇಳುತ್ತಾರೆ. ಅಲ್ಲಿಗೆ ಬರುವ ಗಿರಾಕಿಗಳು ಅದೆಷ್ಟು ಅಮಾನುಷರೆಂದರೆ, ನಮ್ಮನ್ನು ತಿಂಗಳಿನ ಮೂರು ದಿನಗಳಲ್ಲಿಯೂ ಬಿಡುತ್ತಿರಲಿಲ್ಲ. ಅಂಥ ಸ್ಥಿತಿಯಲ್ಲಿಯೇ ಸಂಪರ್ಕ ಬೆಳೆಸೋರು. ಆಗೆಲ್ಲ ಹೊಟ್ಟೆ ನೋವು ಹೆಚ್ಚಾಗಿ, ನೋವಿನಿಂದ ಚೀರುತ್ತಿದ್ದೆವು ವೇಶ್ಯಾಗೃಹದಿಂದ ರಕ್ಷಿಸಲ್ಪಟ್ಟ ತರುಣಿಯೊಬ್ಬಳು ಹೇಳುತ್ತಾ ಕಣ್ಣೀರು ಮಿಡಿಯುತ್ತಾಳೆ. ಮುಂಬಯಿಯ ಕಾಮಾಟಿಪುರದ ಘರವಾಲಿಯೊಬ್ಬಳು ಹೇಳುವಂತೆ, ಮೊದಲು 14-16 ವರ್ಷದ ಹುಡುಗಿಯರನ್ನು ತರುತ್ತಿದ್ದರು. ಈಗ 2 ವರ್ಷಗಳಿಂದ ಅದು 10-14 ವರ್ಷಕ್ಕೆ ಇಳಿದಿದ್ದು, ಕಡಿಮೆ ವಯೋಮಾನದ ಮಕ್ಕಳಿಗೆ ಈಗ ಬೇಡಿಕೆ ಹೆಚ್ಚುತ್ತಿದೆ ಎನ್ನುತ್ತಾಳೆ. ಕುಮಾರಿಯರಾದ ಹುಡುಗಿಯರೊಂದಿಗೆ ಲೈಂಗಿಕ ಸಂಪರ್ಕ ಹೊಂದಿದರೆ ಏಡ್ಸ್ ರೋಗದ ಭಯವಿರುವುದಿಲ್ಲವೆಂಬ ಮತ್ತು ಈಗಾಗಲೇ ತಮಗೆ ಕಾಯಿಲೆಗಳಿದ್ದರೆ ಅವು ಇಲ್ಲದಂತಾಗುತ್ತವೆಂಬ ಸುಳ್ಳು ನಂಬಿಕೆ (ಮಿಥ್)ಯು ಮಕ್ಕಳಿಗೆ ಬೇಡಿಕೆ ಹೆಚ್ಚಲು ಕಾರಣವಾಗಿದೆ ಎಂದು ಅವರು ತಿಳಿಸುತ್ತಾರೆ. ದಂಧೆಯಲ್ಲಿರುವ ಹೆಣ್ಣುಮಕ್ಕಳಲ್ಲಿ ಜೂಜು, ಗುಟುಕಾ, ಮಧ್ಯಪಾನ, ಧೂಮಪಾನ, ಡ್ರಗ್ಸ್ ನಂತಹ ಚಟಗಳು ಮೈಗೂಡಿಕೊಂಡಿರುತ್ತವೆ. ವೇಶ್ಯಾಗೃಹಗಳ ಮುಂದೆ, ರಸ್ತೆಯ ಬದಿಗಳಲ್ಲಿ, ಸಿನಿಮಾ ಟಾಕೀಸ್ ಮತ್ತು ಬಸ್ ಸ್ಟ್ಯಾಂಡ್ ಸುತ್ತ ಮುತ್ತ ಅಶ್ಲೀಲವಾದ ಬಟ್ಟೆ ಧರಿಸಿ, ಗಿರಾಕಿಗಳನ್ನು ಕರೆಯುತ್ತಾ ನಿಂತಿರುತ್ತಾರೆ. ಇಷ್ಟೆಲ್ಲಾ ನೋವುಗಳನ್ನು, ಸಂಕಷ್ಟಗಳನ್ನು ಕಾಣುತ್ತಿದ್ದರೂ ಸಹ ಇಂದಿನ ಹುಡುಗಿಯರು ಹಣದ ಆಸೆಗಾಗಿ, ತಮ್ಮ ಸುತ್ತ ಅಲೆಯುವ ತಲೆಹಿಡುಕರನ್ನು ಹಿಂಬಾಲಿಸುತ್ತಿದ್ದಾರೆ. ಹೆಣ್ಣುಮಕ್ಕಳನ್ನು ಮೋಸದಿಂದ, ತಂದೆ-ತಾಯಿಗಳಿಗೆ ಕೆಲಸದ ನೆಪ ನೀಡಿ, ಹಣದ ಆಸೆ ತೋರಿಸಿ ಕದಿಯಲಾಗುತ್ತಿದೆ. ಇಲ್ಲಿ ನೇರ ಮಾರಾಟ ಮತ್ತು ಕೊಳ್ಳುವ ಪ್ರಕ್ರಿಯೆಗಳೇ ನಡೆಯುತ್ತಿದ್ದು, ನಂತರದಲ್ಲಿ ಅವರನ್ನು ಪ್ರವಾಸೀ ಲೈಂಗಿಕತೆ (Sex Tourisam), ಪೋರ್ನೋಗ್ರಾಫಿ (Pornography), ವೇಶ್ಯಾವಾಟಿಕೆಯಲ್ಲಿ, ಮಸಾಜ್ ಪಾರ್ಲರ್ ಗಳಲ್ಲಿ ಲೈಂಗಿಕ ಚಟುವಟಿಕೆಗಾಗಿ ಉಪಯೋಗಿಸಿಕೊಳ್ಳಲಾಗುತ್ತಿದೆ. ಕೆಲವು ಗ್ರಾಮಗಳಲ್ಲಿ ಇಂದಿಗೂ ದೇವದಾಸಿ ಪದ್ಧತಿಯಂತಹ ಸಾಂಪ್ರದಾಯಿಕ ಪದ್ಧತಿಯ ಕರಿನೆರಳು ಮುಗ್ಧ ಹೆಣ್ಣುಮಕ್ಕಳನ್ನು ಹಿಂಬಾಲಿಸುತ್ತಲೇ ಇವೆ. ಹಣದಾಸೆಗಾಗಿ ಹೆತ್ತವರು, ನಿವಾರಣಾ ಸಮಿತಿಗಳಿಗೆ ದಂಡ ಕಟ್ಟಿ ದೇವದಾಸಿ ಮಾಡುತ್ತಿದ್ದಾರೆ. ಮುಂಬೈನಂತಹ ನಗರಗಳಿಗೆ ರಾಜ್ಯದ ಕಟ್ಟಕಡೆಯ ಹಳ್ಳಿಗಳಿಗೂ ಸಂಪರ್ಕ ವ್ಯವಸ್ಥೆ ಸಾಧ್ಯವಾಗಿದೆ. ಲೈಂಗಿಕ ಕಾರ್ಯಕರ್ತರ ಸಂಘಟನೆಗಳು ಪ್ರತಿಬಂಧಕೋಪಾಯಗಳನ್ನು, ಕಾನೂನುಗಳನ್ನು ಧಿಕ್ಕರಿಸಿ ವೇಶ್ಯಾವಾಟಿಕೆಯನ್ನು ಕಾನೂನುರೀತ್ಯಾ ಮಾನ್ಯ ಮಾಡಬೇಕೆಂದು ಧ್ವನಿ ಎತ್ತಿವೆ. ಪ್ರಸ್ತುತ ಇರುವ ಪ್ರತಿಬಂಧಕೋಪಾಯಗಳು, ರಕ್ಷಣಾ ತಂತ್ರಗಳು, ಪುನರ್ವಸತಿ ಕಾರ್ಯಕ್ರಮಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳದೇ, ತಲೆಹಿಡುಕರು, ಘರವಾಲಿಗಳು ನಷ್ಟವೇ ಇರದ ಮಾಂಸದ ದಂಧೆ (Flesh Trade)ಯನ್ನು ನಿರಾತಂಕವಾಗಿ ಮುಂದುವರೆಸಿದ್ದಾರೆ. ಇದೆಲ್ಲದರ ಮಧ್ಯದಲ್ಲಿ ಮುಗ್ಧ ಹೆಣ್ಣುಮಕ್ಕಳು ಶೋಷಣೆಗೊಂಡು ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿದ್ದಾರೆ. HIV/AIDS ನಂತಹ ರೋಗಗಳಿಗೆ ಬಲಿಯಾಗಿ ಬಾಳಿ ಬದುಕಬೇಕಾದ ಸಮಯದಲ್ಲಿ ಬಹಿಷ್ಕೃತರಾಗಿ ಮಸಣ ಸೇರುತ್ತಿದ್ದಾರೆ. ಉಪಸಂಹಾರ: ಶೋಷಣೆಗೆ ತನ್ನದೇ ಆದ ವಿಭಿನ್ನ ಮುಖಗಳಿವೆ. ಅದರಲ್ಲಿ ಲೈಂಗಿಕ ಶೋಷಣೆಯೂ ಒಂದು ಅಸಹನೀಯ ಮುಖ. ಆದರೂ ಕಾಲಘಟ್ಟದಲ್ಲಿ ಅದು ಸಮಾಜದ ಪರಿಸ್ಥಿತಿಗೆ ಅನುಸರಿಸಿ ತನ್ನ ಸ್ವರೂಪ ಜಾಡುಗಳನ್ನು ಬದಲಿಸುತ್ತಾ ನಡೆದಿದೆ. ಸಂಪ್ರದಾಯವಾಗಿದ್ದಂತಹ ಕ್ರಿಯೆಯೊಂದು ವಾಣಿಜ್ಯೀಕರಣಗೊಳ್ಳುತ್ತಾ ದಿನದಿಂದ ದಿನಕ್ಕೆ ಅದರ ಕ್ರೂರ ವ್ಯಾಪಕತೆಯನ್ನು ಹೆಚ್ಚಿಸುತ್ತಾ ನಡೆದಿದೆ. ಹಾಗಂತ ಸಂಪ್ರದಾಯವೇನೂ ಶೋಷಿತರ ಪರವಾಗಿ ಇರಲಿಲ್ಲ. ಅದೊಂದು ಉಳ್ಳವರ ಆಷಾಢಭೂತಿಯಾಗಿತ್ತು. ಧರ್ಮದ ಸಂಪ್ರದಾಯದ ಹೆಸರಿನಲ್ಲಿ ಜೀವಂತ ಉಳಿಯುವ ಇಂಥ ಪಿಡುಗುಗಳ ರಕ್ಷಣೆಯಲ್ಲಿ ಧರ್ಮ ಒಂದು ಅಫೀಮಿನಂತೆ ಕೆಲಸ ಮಾಡುತ್ತದೆಂದು ಮಾರ್ಕ್ಸ್ ಅಭಿಪ್ರಾಯ ಪಡುತ್ತಾರೆ. ಅಂದರೆ ಆ ಕ್ಷಣದ ಗಾಯಕ್ಕೆ, ಹಸಿವಿಗೆ, ತಳಮಳಕ್ಕೆ ನೋವು ನಿವಾರಕವಾಗಿ ಮಾತ್ರ. ಆದರೆ ಆಳದಲ್ಲಿರುವ ಮೂಲ ಗಾಯವು, ಮೂಲ ಕಾರಣಗಳೂ ತಮ್ಮ ಬೇರುಗಳನ್ನು ಹರಡುತ್ತಾ ತಳ ಊರಿ ನಿಲ್ಲುತ್ತವೆ. ಮಳೆಗಾಲ ಬರಲಿ, ಬೇಸಿಗೆ ಇರಲಿ, ಬರಗಾಲಗಳೇ ಬೀಳಲಿ ಅದರ ಹಸಿ ಆರುವುದೇ ಇಲ್ಲ. ಪೀಳಿಗೆಯಿಂದ ಪೀಳಿಗೆಗೆ ಹಬ್ಬುತ್ತಲೇ ನಡೆಯುತ್ತದೆ. ನಾಡು ಸುಭಿಕ್ಷೆಯಿಂದರಲೆಂಬ ಸಾಮಾಜಿಕ ಉದ್ದೇಶದಿಂದ ಹೆಣ್ಣುಗಳನ್ನು ದೇವರುಗಳಿಗೆ ಬಲಿ ಕೊಡುವುದರೊಂದಿಗೆ ಪ್ರಾರಂಭವಾದ ಕ್ರಿಯೆಯೊಂದು ಧಾರ್ಮಿಕ ಚಟುವಟಿಕೆಯಾಗಿ ಮಹಿಳಾ ಕುಲಕ್ಕೇ ಅಂಟಿದ ರೋಗವಾಗಿದೆ. ಕಾಲ ಸರಿದಂತೆ ರಾಜರುಗಳ ರಾಜಕೀಯ ಗೂಢಚಾರರಾಗಿಯೂ ಇವರು ಜೀವದ ಹಂಗು ತೊರೆದು ಕಾರ್ಯನಿರ್ವಹಿಸಿದ ಐಹಿತ್ಯಗಳನ್ನು ಕಾಣಬಹುದು. ಇದಕ್ಕಾಗಿ ರಾಜಬೊಕ್ಕಸದಿಂದಲೇ ಹಣ ವ್ಯಯಿಸಿ, ವೇಶ್ಯಾವಾಟಿಕೆಯ 64 ಕಲೆಗಳಲ್ಲಿ ಇವರಿಗೆ ತರಬೇತಿ ಕೊಡಿಸಿದ ನಿದರ್ಶನಗಳನ್ನು ನಾವು ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಕಾಣುತ್ತೇವೆ. ಅದಕ್ಕೆ ಪ್ರತಿಯಾಗಿ ಅವರು ತಾವು ಗಳಿಸಿದ ಹಣದಲ್ಲಿ ರಾಜ್ಯಕ್ಕೆ ತೆರಿಗೆ ನೀಡಿದ ದಿನಗಳನ್ನೂ ಕೌಟಿಲ್ಯ ಬರೆಯುತ್ತಾರೆ. ಇದೇ ಪರಿಸ್ಥಿತಿಯು ಕ್ರಮೇಣ ಬದಲಾಗುತ್ತಾ ನಡೆದು ಬಡವರ, ಕೆಳವರ್ಗದವರ ಹೆಣ್ಣುಮಕ್ಕಳು ಮೇಲ್ವರ್ಗದವರ ಮುಕ್ತ ಲೈಂಗಿಕತೆಗೆ ಒಂದು ಸಂಪ್ರದಾಯದ ರೂಪದಲ್ಲಿ ಸರಕಾಗಿದ್ದು, ಇಂದೂ ಸರಕಾಗುತ್ತಿರುವುದು ನಮ್ಮ ಕಣ್ಣ ಮುಂದಿದೆ. ಇದನ್ನು ಇನ್ನಿಲ್ಲದಂತೆ ಮಾಡಲು, ಹಲವಾರು ಜಾಗೃತಿ, ಪುನರ್ವಸತಿ ಕಾರ್ಯಕ್ರಮಗಳು ನಡೆಯುತ್ತಿದ್ದರೂ ಸಹ ಆ ಸಂಪ್ರದಾಯದ ವಾಣಿಜ್ಯೀಕರಣ ಮಹಿಳೆಯರನ್ನು ಮಕ್ಕಳನ್ನ ಲೈಂಗಿಕವಾಗಿ ಶೋಷಿಸುವಲ್ಲಿ ದಣಿವರಿಯದಂತೆ ದುಡಿಯುತ್ತಿದೆ. ಅದಕ್ಕೆ ಬಲಿಯಾಗುತ್ತಿರುವ ಮಹಿಳೆ ಮತ್ತು ಮಕ್ಕಳ ಲೆಕ್ಕವನ್ನು ಅಂದಾಜಿಸಲೂ ಸಹ ಆಗುತ್ತಿಲ್ಲ. ಇದನ್ನು ಹೀಗೇ ಮುಂದುವರೆಯಲು ಬಿಟ್ಟರೆ ಹೆಣ್ಣು ಕುಲದ ರಕ್ಷಣೆ ಎಂಬುದು ಕನಸಿನ ಮಾತೇ ಸರಿ. ಪ್ರಸ್ತುತ ಜಾರಿಯಲ್ಲಿರುವ ಕಾನೂನುಗಳು, ಪರಿಹಾರ ಕಾರ್ಯಕ್ರಮಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುವುದು ಅವಶ್ಯವಿದೆ. ಸರಕಾರದ ಎಲ್ಲ ಇಲಾಖೆಗಳು ಒಂದಕ್ಕೊಂದು ಪೂರಕವಾಗಿ ಕಾರ್ಯನಿರ್ವಹಿಸುವುದು ಅಗತ್ಯವಿದೆ. ಸರಕಾರದ ಮತ್ತು ಕಾರ್ಪೋರೇಟ್ ಕಂಪನಿಗಳ ಏಜೆಂಟರಂತೆ, ಕಾಂಟ್ರ್ಯಾಕ್ಟರ್ ಗಳಂತೆ ವರ್ತಿಸುತ್ತಿರುವ ಬಹುತೇಕ ಎನ್ ಜಿ ಓಗಳು ಸಮಾಜದ ಸಮುದಾಯದ ನಿಜವಾದ ಸಮಸ್ಯೆಗಳಿಗೆ ಪರ್ಯಾಯ ಉತ್ತರವನ್ನು ಸೂಚಿಸುವಲ್ಲಿ ಕಾರ್ಯನಿರ್ವಹಿಸಬೇಕಾಗಿದೆ. ಸಮಾಜ ಕಾರ್ಯಕರ್ತರಲ್ಲಿ ವೃತ್ತಿ ಪರತೆ, ಬದ್ಧತೆ, ಕಾಳಜಿಗಳು ಹೆಚ್ಚಬೇಕಾಗಿದೆ. ಸಮಾನ ಶಿಕ್ಷಣ, ಉದ್ಯೋಗಾವಕಾಶಗಳು ದೊರೆಯುವುದು ಅವಶ್ಯವಿದೆ. ಜೊತೆಗೆ ವಿದ್ಯಾವಂತವಾದ ಶೋಷಿತ ವರ್ಗದ ಪೀಳಿಗೆಯು ಇದನ್ನು ಧಿಕ್ಕರಿಸುವ ಪಣ ತೊಟ್ಟು ನಿಲ್ಲಬೇಕಾಗಿದೆ. ಆಧಾರ ಸಾಹಿತ್ಯ:
ಭಾರತಿ ಬಿಜಾಪೂರ ಪಿಎಚ್.ಡಿ. ವಿದ್ಯಾರ್ಥಿನಿ, ಅಭಿವೃದ್ಧಿ ಅಧ್ಯಯನ ವಿಭಾಗ, ಕನ್ನಡ ವಿಶ್ವ ವಿದ್ಯಾಲಯ, ಹಂಪಿ
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
|
|
|
|
SITE MAP
SiteTRAININGJOB |
HR SERVICESOTHER SERVICESnIRATHANKA CITIZENS CONNECT |
NIRATHANKAPOSHOUR OTHER WEBSITESSubscribe |
MHR LEARNING ACADEMY
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|