ಈ ಮೇಲೆ ಗ್ರಾಮೀಣ ಸಮುದಾಯಗಳ ಸಮಸ್ಯೆಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸಿದ್ದೇವೆ, ಅವುಗಳಲ್ಲಿ ಲಿಂಗ ತಾರತಮ್ಯ, ನಿರಕ್ಷರತೆ, ಆರೋಗ್ಯ, ವಸತಿ, ಜನಸಂಖ್ಯೆ, ಬಾಲಕಾರ್ಮಿಕರು, ಜೀತದಾಳುಗಳು, ಅಸ್ಪೃಶ್ಯತೆ, ಮದ್ಯಪಾನ, ನಿರುದ್ಯೋಗ, ಮೂಢನಂಬಿಕೆ, ನಾಗರೀಕ ಸೌಲಭ್ಯಗಳ ಕೊರತೆ ಮುಂತಾದ ಸಮಸ್ಯೆಗಳು ನಗರ ಸಮುದಾಯಗಳಿಗೂ ಅನ್ವಯಿಸಬಹುದಾಗಿದೆ. ಕೆಲವು ಸಮಸ್ಯೆಗಳು ಕೇವಲ ಗ್ರಾಮೀಣ ಸಮುದಾಯಗಳನ್ನಷ್ಟೇ ಕಾಡಿದರೆ, ಇನ್ನೂ ಕೆಲವು ಹೆಚ್ಚಾಗಿ ನಗರ ಸಮುದಾಯಗಳನ್ನು ಪೀಡಿಸುತ್ತಿವೆ. ಕೃಷಿ, ಕೃಷಿ ಸಂಬಂಧಿ ವೃತ್ತಿಗಳು, ಗೃಹಕೈಗಾರಿಕಾ ಕ್ಷೇತ್ರಗಳಲ್ಲಿನ ಸಮಸ್ಯೆಗಳು ಹೆಚ್ಚಾಗಿ ಗ್ರಾಮೀಣ ಸಮುದಾಯದ ಸಮಸ್ಯೆಗಳು, ಅದರಂತೆಯೇ ಬೃಹತ್ ಕೈಗಾರಿಕೆ, ಮಧ್ಯಮ ಮತ್ತು ಸಮ ಪ್ರಮಾಣದ ಕೈಗಾರಿಕೆ, ನಿರುದ್ಯೋಗ, ಸೂಕ್ತ ತಾಂತ್ರಿಕ ಶಿಕ್ಷಣ, ವಾಹನ ಸೌಕರ್ಯ, ಕೊಳಗೇರಿಗಳು, ಸಂಚಾರ ಮುಂತಾದ ಸಮಸ್ಯೆಗಳು ಅತೀವವಾಗಿ ನಗರ ಸಮುದಾಯಗಳನ್ನು ಹಿಂಸಿಸುತ್ತಿವೆ. ನಗರ ಸಮುದಾಯಗಳ ಸಮಸ್ಯೆಗಳನ್ನು ನಗರ ಸಮುದಾಯಗಳ ವೈಲಕ್ಷಣಗಳ ಹಿನ್ನೆಲೆಯಲ್ಲಿ ಗ್ರಹಿಸಬೇಕಾಗುತ್ತದೆ. 1. ಜನ ಸಾಂದ್ರತೆ:- ನಗರ ಪ್ರದೇಶಗಳಲ್ಲಿನ ಪ್ರಮುಖ ಸಮಸ್ಯೆಗಳಲ್ಲಿ ಒಂದು ಜನಸಾಂದ್ರತೆ ಗ್ರಾಮ ಸಮುದಾಯಗಳಲ್ಲಿ ಸಾಮಾನ್ಯವಾಗಿ ಒಂದು ಜನಸಾಂದ್ರತೆ ಗ್ರಾಮ ಸಮುದಾಯಗಳಲ್ಲಿ ಸಾಮಾನ್ಯವಾಗಿ ಪ್ರತಿ ಚದುರ ಕಿಲೋಮೀಟರಿಗೆ 150-200 ಜನರಿದ್ದರೆ, ಪಟ್ಟಣಗಳಲ್ಲಿ, ನಗರಗಳಲ್ಲಿ ಜನಸಾಂದ್ರತೆ ಪ್ರತಿ ಚದುರ ಕಿಲೋಮೀಟರಿಗೆ 400 ಜನಕ್ಕಿಂತ ಹೆಚ್ಚಿರುತ್ತದೆ. ಮಹಾನಗರಗಳಲ್ಲಿ ಮತ್ತು ಬೃಹತ್ ನಗರಗಳಲ್ಲಿ ಇದು 2000-3000 ಮತ್ತು 3000-5000 ಇದೆಯೆಂದು ಅಂದಾಜಿಸಲಾಗಿದೆ. ಬಹಳ ವೇಗವಾಗಿ ಪಟ್ಟಣಗಳು ನಗರಗಳಾಗಿ, ನಗರಗಳು ಮಹಾನಗರಗಳಾಗಿ ಮತ್ತು ಮಹಾನಗರಗಳು ಬೃಹತ್ ನಗರಗಳಾಗಿ ಪರಿವರ್ತನೆಗೊಳ್ಳುತ್ತಿವೆ. ಹಾಗಾಗಿ ನಗರಗಳಲ್ಲಿ ಇಷ್ಟು ಶೀಘ್ರವಾಗಿ ಬೆಳೆಯುತ್ತಿರುವ ಜನಸಂಖ್ಯೆಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಗ್ರಾಮಾಂತರ ಪ್ರದೇಶಗಳಿಂದ ನಗರ-ಮಹಾನಗರಗಳಿಗೆ ಜನರ ಬೇರೆ ಬೇರೆ ಉದ್ದೇಶಗಳಿಗೆ ಹೋಗಿ ಸೇರುತ್ತಾರೆ. ಗ್ರಾಮಗಳಲ್ಲಿ ವರ್ಷದುದ್ದಕ್ಕೂ ಕೆಲಸ ಸಿಗದೆ ಇರುವುದರಿಂದ ಅನೇಕ ಜನರು ಕೂಲಿಗಾಗಿ ಕೆಲಸಕ್ಕಾಗಿ ನಗರಗಳಿಗೆ ವಲಸೆ ಹೋಗಿ, ಅಲ್ಲಿಯೇ ಉಳಿಯುತ್ತಾರೆ. ಗ್ರಾಮೀಣ ಯುವಕರು ತಮ್ಮ ಇಷ್ಟ ಬಂದ ವಿದ್ಯಾಭ್ಯಾಸಕ್ಕಾಗಿ ನಗರಗಳಿಗೆ ಹೋಗುತ್ತಾರೆ. ಆ ವಿದ್ಯೆಯನ್ನು ಪಡೆದ ನಂತರ ಗ್ರಾಮೀಣ ಪ್ರದೇಶಗಳಲ್ಲಿ ಅಂತಹ ವಿದ್ಯೆಗೆ ಕೆಲಸ ಸಿಗದಿರುವುದರಿಂದ ಅವರು ಪಟ್ಟಣಗಳಲ್ಲಿಯೇ ಇದ್ದು, ನೌಕರಿ ಹಿಡಿದು, ಅಲ್ಲೇ ನೆಲೆಗೊಳ್ಳುತ್ತಾರೆ. ಇನ್ನೂ ಕೆಲವು ಜನ ಸಣ್ಣ-ಪುಟ್ಟ ವ್ಯವಹಾರ ಮಾಡಿಕೊಂಡು ಜೀವನ ಮಾಡಲು ನಗರಗಳನ್ನು ಸೇರುತ್ತಾರೆ. ಶ್ರೀಮಂತರು, ಬುದ್ಧಿವಂತರು ಕೈಗಾರಿಕೆಗಳನ್ನು ಸ್ಥಾಪಿಸಲು, ಕಂಪನಿಗಳನ್ನು ಪ್ರಾರಂಭಿಸಲು, ಕಾರ್ಖಾನೆಗಳನ್ನು ಕಟ್ಟಲು ನಗರಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಮಾಹಿತಿ ತಂತ್ರಜ್ಞಾನ ಬ್ಯಾಂಕಿಂಗ್, ಜೀವವಿಮೆ, ಸೇವಾವಲಯ ಮುಂತಾದ ಕ್ಷೇತ್ರಗಳಲ್ಲಿನ ಸಂಘಸಂಸ್ಥೆಗಳು ನಗರಗಳಲ್ಲಿಯೇ ಪ್ರಾರಂಭಗೊಳ್ಳುತ್ತವೆ. ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ಆಸ್ಪತ್ರೆಗಳು ನಗರಗಳಲ್ಲಿಯೇ ನೆಲೆಗೊಳ್ಳುತವೆ. ಸಂಗೀತ, ಸಾಹಿತ್ಯ, ಯೋಗ, ನೃತ್ಯ, ಕಲೆ, ನಾಟಕ, ಚಿತ್ರೋದ್ಯಮ ಮುಂತಾದ ಪ್ರಕಾರಗಳಲ್ಲಿ ಸಾಧನೆಯನ್ನು ಮಾಡಬೇಕೆನ್ನುವವರೂ ಹೆಚ್ಚಾಗಿ ನಗರ ಪ್ರದೇಶಗಳನ್ನೇ ಅವಲಂಬಿಸುತ್ತಾರೆ. ಸಂಚಾರ, ಸಾರಿಗೆ, ಹೋಟೆಲ್ಲು, ಇನ್ನೂ ಮುಂತಾದ ಅನೇಕ ಕ್ಷೇತ್ರಗಳಲ್ಲಿ ದುಡಿಯುವರು ಎಲ್ಲರೂ ನಗರಗಳನ್ನು ಸೇರುತ್ತಾರೆ.
ಈ ಎಲ್ಲಾ ಚಟುವಟಿಕೆಗಳ ಪರಿಣಾಮವಾಗಿ ನಗರಗಳಲ್ಲಿ ಜನಸಂದಣಿ ಜಾಸ್ತಿಯಾಗಿದೆ. ನಗರಗಳಲ್ಲಿ ಹೊರ ವಲಯಗಳಲ್ಲಿ ಉಪನಗರಗಳು ತಲೆಯೆತ್ತುತ್ತಿವೆ. ಮಹಡಿ ಮನೆಗಳು, ಗೃಹ ಸಮೂಹಗಳು, ಸಮುಚ್ಚಯಗಳು ಹೆಚ್ಚುತ್ತಿವೆ. ಜಾಗ ಸೀಮಿತ ಅದು ಬೆಳೆಯಲು ಸಾಧ್ಯವಿಲ್ಲ. ಅದಕ್ಕೆ ವಿರುದ್ಧವಾಗಿ ಜನಸಾಂದ್ರತೆ ಅಳತೆ ಮೀರಿ ಬೆಳೆಯುತ್ತಿದೆ. ಸರಕಾರಿ ಯೋಜನೆಗಳು ಹಾಲಿ ಇರುವ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಬಗೆಹರಿಸುತ್ತಿಲ್ಲ. ಕದ್ದು ತಿನ್ನುವವರಿಗೆ ಹಪ್ಪಳ ಇದೆ ಎಂಬ ಗಾದೆಯಂತಾಗಿದೆ. ನಗರಗಳು ಮಹಾನಗರಗಳು ಹಾಗೂ ಬೃಹತ್ ನಗರಗಳು, ಜನರಿಂದ ತುಂಬಿಹೋಗಿದೆ. ಎಲ್ಲಿ ನೋಡಿದರೂ ಜನ. ಆ ಜನಸಂಖ್ಯೆ ಸ್ಫೋಟಕ್ಕೆ ತಕ್ಕಂತೆ ಕೆಲಸಗಳಲ್ಲಿ ಸಂಪನ್ಮೂಲಗಳ ಬಳಕೆ, ವಿತರಣೆ ಸರಿಯಾಗಿ ಆಗುತ್ತಿಲ್ಲ. ಜನರ ಹತ್ತಿರ ಅವಕಾಶಗಳಿಲ್ಲ, ಆದಾಯವಿಲ್ಲ. ಎಲ್ಲಿ ನೋಡಿದರೂ ಅಸಮಾಧಾನಗೊಂಡ ಜನತೆ ಅವಕಾಶಗಳಿಂದ ಆದಾಯಗಳಿಂದ ವಂಚಿತರಾದ ಜನತೆ. ಇದು ಅವರ ದೇಹದ ಮೇಲೆ, ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತಿವೆ. ಇದೇ ಮುಂದುವರೆದು ಮನೋವ್ಯಾಧಿ ಕಾಯಿಲೆ, ಮದ್ಯವ್ಯಸನ, ಪ್ಯಭಿಟಾರ್, ಕಳ್ಳತನ, ದರೋಡೆ ಇತ್ಯಾದಿಗಳಿಗೆ ಎಡೆಮಾಡಿಕೊಡುತ್ತದೆ. ಜನರಿಗೆ ನೆರೆಹೊರೆಯ ಬಗ್ಗೆ ಅನಾಸಕ್ತಿ, ನಿರ್ಲಕ್ಷ್ಯ ಮನೋಭಾವ ಮೂಡುತ್ತಿದೆ. ಜನರು ತಮ್ಮ ಕೆಲಸ, ತಮ್ಮ ಆದಾಯ, ತಮ್ಮ ಒಳಿತು ಹೀಗೆ ತಮ್ಮ ಬಗ್ಗೆಯೇ ಆಲೋಚಿಸುವಂತಾಗಿದೆ. ನೆರೆಹೊರೆಯ ಪರಿಚಯ ತುಂಬಾ ಔಪಚಾರಿಕವಾಗಿ ಬಿಟ್ಟಿದೆ. ನಮಸ್ಕಾರ, ತಿಂಡಿ ಆಯಿತೆ, ಊಟ ಆಯಿತೆ, ಹೇಗಿದ್ದೀರಿ, ಶುಭರಾತ್ರಿ ಮುಂತಾದ ಮಾತುಗಳಿಗಷ್ಟೆ ಸೀಮಿತವಾಗಿಬಿಟ್ಟಿದೆ. ಅವರ ಉತ್ತರವನ್ನೂ ಕೇಳುವಷ್ಟು ತಾಳ್ಮೆ ಯಾರಿಗೂ ಇಲ್ಲ. ಹತ್ತಾರು ವರ್ಷಗಳು ಒಂದೇ ಜಾಗದಲ್ಲಿದ್ದರೂ ನೆರೆಹೊರೆಯವರ ಸಂಪರ್ಕ ಹೆಚ್ಚಾಗಿ ಇರುವುದಿಲ್ಲ. ಅವರ ಬದುಕು ಏಕತಾನತೆಯಿಂದ ಕೂಡಿರುತ್ತದೆ. ಅನಾಥಪ್ರಜ್ಞೆಯಿಂದ ತೊಳಲಾಡುತ್ತಿರುತ್ತದೆ. ಇದು ನಗರೀಕರಣದ ಜನಸಾಂದ್ರತೆಯ ದುಷ್ಪರಿಣಾಮ. 2. ವಸತಿ:- ಮಹಾನಗರಗಳ, ಬೃಹತ್ ನಗರಗಳ ಇನ್ನೊಂದು ಪ್ರಚಲಿತ ಸಮಸ್ಯೆ ವಸತಿಗೆ ಸಂಬಂಧಪಟ್ಟಿದೆ. ಸರಕಾರಗಳು, ಪಂಚಾಯತ್ ರಾಜ್ಯ ಸಂಸ್ಥೆಗಳು, ನ್ಯಾಯಾಲಯಗಳು, ಸರಕಾರಿ ಹಾಗೂ ಖಾಸಗಿ ಕಂಪನಿಗಳು, ಉದ್ದಿಮೆದಾರರು, ರಾಷ್ಟ್ರೀಯ ಹಾಗೂ ಖಾಸಗಿ ಬ್ಯಾಂಕುಗಳು, ಆರ್ಥಿಕ ಸಂಸ್ಥೆಗಳು, ಗೃಹ ಮಂಡಳಿ ಮತ್ತು ಇತರೆ ಗೃಹ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ಹಾಗೂ ಜನತೆಗೆ ವಸತಿಗಳನ್ನು ಕಟ್ಟಿಸಿಕೊಡುತ್ತಾರೆ. ಶ್ರೀಮಂತರು ತಮಗೆ ಬೇಕಾದದ್ದಕಿಂತ ಹೆಚ್ಚಿನ ಮನೆಗಳನ್ನು ಕಟ್ಟಿಸಿ ಬಾಡಿಗೆ ಕೊಡುತ್ತಾರೆ. ಉದ್ಯೋಗಿಗಳು, ಬಡವರೂ ತಮಗೆ ಬೇಕಾದ ಮನೆಗಳನ್ನು ಕಟ್ಟಿಕೊಳ್ಳುತ್ತಾರೆ. ಕೆಳಮಧ್ಯಮ ವರ್ಗದ ಜನರು ಮತ್ತು ಬಡವರು ತಮ್ಮ ಆರ್ಥಿಕ ಮತ್ತು ಇತರೆ ಸಂಪನ್ಮೂಲಗಳನ್ನು ಆಧರಿಸಿ, ತಮಗಿದ್ದ ಚಿಕ್ಕ ಜಾಗದಲ್ಲೊ, ಅಥವಾ ಒಂದು ಚಿಕ್ಕ ಜಾಗವನ್ನು ಖರೀದಿಸಿಯೋ ಮನೆ ಕಟ್ಟುವುದುಂಟು. ಮೊದಲನೆಯದಾಗಿ ಜಾಗ ವಿಶಾಲವಾಗಿ ಇರುವುದಿಲ್ಲ. ರಸ್ತೆ ಮಾಡಲು ಇದ್ದ ಜಾಗ ಸಾಲದು. ಮನೆಗೆ ಹೋಗಬೇಕೆಂದರೆ ಕಾಲು ದಾರಿಯಲ್ಲೇ ನಡೆದುಹೋಗಬೇಕು. ಅಂತಹ ಕಿಕ್ಕಿರಿದ ರಸ್ತೆಗಳಲ್ಲಿಯೇ ಕಸದ ರಾಶಿಗಳು, ಚರಂಡಿ ವ್ಯವಸ್ಥೆಗೆ ಜಾಗ ಇಲ್ಲ. ಬಚ್ಚಲು ನೀರು, ಕಕ್ಕಸು ನೀರು ಹಾಗೂ ಮಳೆ ನೀರು ಆ ಕಾಲು ರಸ್ತೆಯಲ್ಲೇ ಹರಿದು ಹೋಗಬೇಕು. ಅಂತಹ ನೀರಿನೊಂದಿಗೆ ಕಸವೂ ಸೇರಿ ಅಲ್ಲೇ ಕೊಳೆಯಲು ಪ್ರಾರಂಭಿಸುವುದರಿಂದ ಕೆಟ್ಟ ವಾಸನೆ. ಮನೆಗಳು ತುಂಬಾ ಚಿಕ್ಕವು, ಗಾಳಿ, ಬೆಳಕು ಬರಲು ಅವಕಾಶವಿಲ್ಲ. ಮನೆಗಳ ಹೊರಗೆ ಎತ್ತರದ ಕಟ್ಟಡಗಳಿದ್ದರೆ ಬಿಸಿಲು-ಬೆಳಕು ಕಡಿಮೆ. ಒಂದು ಅಂದಾಜಿನಂತೆ ಮಹಾನಗರಗಳಲ್ಲಿ ಪ್ರತಿಶತ 75 ರಷ್ಟು ಜನ ಇರುವುದು ಇಂತಹ ಕಿರಿದಾದ ಓಣಿಗಳಲ್ಲಿ ಹಾಗೂ ವಠಾರಗಳಲ್ಲಿ, ಬಾಂಬೆ, ಕಲ್ಕತ್ತಾ, ಚೆನ್ನೈ, ಡೆಲ್ಲಿ, ಬೆಂಗಳೂರು, ವಾರಣಾಸಿ ಮುಂತಾದ ನಗರಗಳು ಇದಕ್ಕೆ ಉತ್ತಮ ಉದಾಹರಣೆ ಕೈಗಾರಿಕೆಗಳ ಕೇಂದ್ರೀಕರಣ, ಕೈಗಾರಿಕಾ ಕೇಂದ್ರಗಳ ಕಾರ್ಖಾನೆಗಳ ಅಕ್ಕಪಕ್ಕ ಹುಟ್ಟಿಕೊಂಡ ವಸಾಹತುಗಳು, ಬೃಹತ್ ನಗರಗಳ ಹತ್ತಿರ ಆವಿರ್ಭಾವಗೊಂಡ ಉಪನಗರಗಳು, ವಿಶ್ವವಿದ್ಯಾಲಯ, ವಿದ್ಯಾಸಂಸ್ಥೆಗಳು, ಶಾಲಾ ಕಾಲೇಜುಗಳು ಹಾಗೂ ಅವುಗಳ ಸುತ್ತ ಎದ್ದು ನಿಂತ ವಸತಿ ಸಮುಚ್ಚಯಗಳು, ಈ ಕಾರಣಗಳಿಂದ ಹೆಚ್ಚಾದ ಭೂಮಿಯ ಬೆಲೆ, ಕಟ್ಟಡ ವಸ್ತುಗಳ ಅಲಭ್ಯತೆ, ಆ ವಸ್ತುಗಳ ದುಬಾರಿ ಬೆಲೆ, ಕಟ್ಟಡ ನಿರ್ಮಾಣದ ವೆಚ್ಚದಲ್ಲಿ ಏರಿಕೆ ಮುಂತಾದ ಕಾರಣಗಳು ವಸತಿ ಸಮಸ್ಯೆಯನ್ನು ಮತ್ತಷ್ಟು ಸಂಕೀರ್ಣಗೊಳಿಸಿವೆ. ಈ ಅಂಶಗಳು ಒಂದಕ್ಕೊಂದು ಕಾರ್ಯಕಾರಣ ಸಂಬಂಧ ಉಳ್ಳವುಗಳಾಗಿವೆ. 3. ಕೊಳಗೇರಿಗಳು:- ನಗರ ಸಮುದಾಯಗಳ ಇನ್ನೊಂದು ಪ್ರಮುಖ ಸಮಸ್ಯೆ ಕೊಳಗೇರಿಗಳು. ನಗರಗಳಿಗೆ ಕೊಳಗೇರಿಗಳು ಅರ್ಬುದ ರೋಗಗಳಿದ್ದಂತೆ ಎಂಬುದು ಸಮಾಜವಿಜ್ಞಾನಿಗಳ ಅಭಿಪ್ರಾಯವಾಗಿದೆ. ಮಾನವರು ವಾಸಿಸಲು ಯೋಗ್ಯವಲ್ಲದ ಆದರೆ ಜನರು ಬಲವಂತವಾಗಿ ವಾಸಿಸುವ ಪ್ರದೇಶಗಳನ್ನು ಕೊಳಚೆ ಪ್ರದೇಶಗಳು ಎಂದು ಕರೆಯಬಹುದಾಗಿದೆ. ಅತಿ ಚಿಕ್ಕದಾದ ಪ್ರದೇಶದಲ್ಲಿ, ತಗ್ಗು ಪ್ರದೇಶಗಳಲ್ಲಿ ರಸ್ತೆ, ಕಾಲುವೆ, ನದಿ ಹಳ್ಳ, ಕೆರೆ ಮುಂತಾದ ಪ್ರದೇಶಗಳ ಹತ್ತಿರದಲ್ಲಿ ಹಾಗೂ ಕೈಗಾರಿಕ ಕೇಂದ್ರಗಳ ಪಕ್ಕದಲ್ಲಿ ಕೊಳಚೆಪ್ರದೇಶಗಳು ಹುಟ್ಟಿಕೊಳ್ಳುತ್ತವೆ. ಕೈಗಾರಿಕೆಗಳಿಗೆ, ಕಾರ್ಖಾನೆಗಳಿಗೆ ಇನ್ನಿತರ ಕೆಲಸಗಳಿಗೆ ಕಾರ್ಮಿಕರು ಬೇಕು. ಅವರು ಕೆಲಸ ಮಾಡುವ ಸ್ಥಳಕ್ಕೆ ಹತ್ತಿರವೇ ಇರಬೇಕು. ಹಾಗಾಗಿ ಅಂತಹ ಪ್ರದೇಶಗಳ ಸುತ್ತಮುತ್ತ ಕೊಳಗೇರಿಗಳು ಆವಿರ್ಭಾವಗೊಳ್ಳುತ್ತವೆ. ಬಡವರು, ಕೂಲಿ ಕಾರ್ಮಿಕರು, ಜೀವನೋಪಾಯಕ್ಕಾಗಿ ನಗರಗಳಿಗೆ ಬಂದವರು, ಬೇರೆ ದಾರಿ ಕಾಣದೆ ತಗ್ಗು ಪ್ರದೇಶಗಳಲ್ಲಿ ಕಾಲುವೆ-ಹಳ್ಳಗಳ ಇಕ್ಕಡೆಗಳಲ್ಲಿ ರಸ್ತೆ ಬದಿಗಳಲ್ಲಿ ತಾತ್ಕಾಲಿಕವಾಗಿ ನೆಲೆಗೊಳ್ಳುತ್ತಾರೆ. ಆರ್ಥಿಕ ಮತ್ತಿತರ ಕಾರಣಗಳಿಗಾಗಿ ಅಲ್ಲೇ ನೆಲೆ ನಿಲ್ಲುತ್ತಾರೆ. ಬಲವಂತವಾಗಿ ತಮ್ಮ ಜೀವಮಾನದುದ್ದಕ್ಕೂ ಅಲ್ಲೇ ಉಳಿಯುತ್ತಾರೆ. ಕೊಳಚೆ ಪ್ರದೇಶಗಳಲ್ಲಿ ಜಾಗ ಕಿರಿದು 10x10 ಜಾಗದಲ್ಲಿ 4-6 ಜನ ಇರುವ ಕುಟುಂಬ ವಾಸಿಸುತ್ತದೆ. ದೊಡ್ಡ ಕೆಲವು ಕುಟುಂಬಗಳಿಗೆ ಅದಕ್ಕಿಂತ ಹೆಚ್ಚು ಜಾಗವಿದ್ದರೂ 2-3 ಜೋಡಿಗಳು ವಾಸ ಮಾಡಬೇಕಾದ ಅನಿವಾರ್ಯತೆ ಇರುತ್ತದೆ. ಅಂತಹ ಮನೆಗಳು ತಗಡಿನಿಂದ ಇಲ್ಲವೇ ತಟ್ಟಿಯಿಂದ ಮಾಡಿದವುಗಳಾಗಿರುತ್ತವೆ. ಮಳೆಯಿಂದ ರಕ್ಷಿಸಿಕೊಳ್ಳಲು ಅಂತಹ ಗುಡಿಸಲಿನ ಮೇಲ್ಭಾಗವನ್ನು ಪ್ಲಾಸ್ಟಿಕ್ ಷೀಟಿನಿಂದ ಮುಚ್ಚಲಾಗಿರುತ್ತದೆ. ತಗಡಿನಿಂದಲೋ, ತಟ್ಟಿಯಿಂದಲೋ ಇಲ್ಲವೆ ಗೋಣಿ ತಟ್ಟಿನಿಂದಲೊ ಅಂತಹ ಗುಡಿಸಲುಗಳನ್ನು ಭಾಗಮಾಡಿಕೊಂಡಿರುತ್ತಾರೆ. ಗಾಳಿ, ಬೆಳಕು ಮುಂತಾದವುಗಳ ಅಭಾವವಿರುತ್ತದೆ. ಪ್ರತ್ಯೇಕ ಸ್ನಾನದ ಕೋಣೆ ಹಾಗೂ ಕಕ್ಕಸುಗಳು ಅಪರೂಪ, ಸಾರ್ವಜನಿಕ ಕಕ್ಕಸನ್ನೇ ಅವಲಂಬಿಸಬೇಕಾಗುತ್ತದೆ. ರಸ್ತೆಗಳು ಚಿಕ್ಕವು, ವಾಹನಗಳು ಒಳಗೆ ಹೋಗಲು ಆಗುವುದಿಲ್ಲ. ಅಂತಹ ಕಿರಿದಾದ ರಸ್ತೆಗಳಲ್ಲೇ ಕಸದ ರಾಶಿಗಳು, ಬಚ್ಚಲು ನೀರು, ಮಳೆ ನೀರು ಅದೇ ರಸ್ತೆಯಲ್ಲೇ ಹರಿದು ಹೋಗಬೇಕು. ಕಸದ ರಾಶಿಯ ಜೊತೆ ನೀರು ಮಿಶ್ರವಾಗಿ ಕೊಳೆತು ಕೆಟ್ಟವಾಸನೆ ಬರುತ್ತದೆ. ಇಂತಹ ಪ್ರದೇಶಗಳಿಂದ ಸೊಳ್ಳೆಗಳು ವೃದ್ಧಿಯಾಗಲು ಸಹಕಾರಿಯಾಗುತ್ತವೆ. ಕಾಲರಾ, ಡಯೇರಿಯಾ, ಡಿಫ್ತೀರಿಯಾ, ಟೆಟನಸ್, ದಡಾರ ಮುಂತಾದ ಮಾರಣಾಂತಿಕ ರೋಗಗಳು ಪ್ರಾರಂಭಗೊಂಡು ಹರಡುವುದು ಇಂತಹ ಕೊಳಚೆ ಪ್ರದೇಶಗಳಿಂದಲೆ. ಚಿಕ್ಕ ಚಿಕ್ಕ ಮನೆಗಳಲ್ಲಿ ಹೆಚ್ಚಾಗಿ ಬಿದಿರು ತಟ್ಟಿ, ಗೋಣಿಚೀಲದ ತಟ್ಟು, ರೊಟ್ಟು ಮುಂತಾದವುಗಳನ್ನು ಉಪಯೋಗಿಸುತ್ತಾರಾದ್ದರಿಂದ ಬೆಂಕಿ ಅನಾಹುತಗಳಿಗೆ ಈಡಾಗುವುದು ಹೆಚ್ಚು. ಒಂದು ಗುಡಿಸಲಿಗೆ ಬೆಂಕಿ ಹತ್ತಿಕೊಂಡರೆ ಇಡೀ ಕೊಳಗೇರಿಯೇ ಸುಟ್ಟು ಹೋಗುತ್ತದೆ. ಬಡತನ, ಅನಕ್ಷರತೆ, ಕೆಟ್ಟ ಯೋಜನೆ, ಯೋಜನೆರಹಿತ ಬೆಳವಣಿಗೆ, ನಿರುದ್ಯೋಗ ಮುಂತಾದ ಸಮಸ್ಯೆಗಳಿಂದ ಪ್ರಾರಂಭಗೊಂಡ ಕೊಳಚೆ ಪ್ರದೇಶಗಳು ಮುಂದೆ ಸಮಸ್ಯೆಗಳು ಬಿಗಡಾಯಿಸಿ ಸಮಾಜಕ್ಕೆ ಧಕ್ಕೆಯುಂಟು ಮಾಡುವ ಬಿಕ್ಷಾಟನೆ, ಅಪರಾಧ, ಬಾಲಾಪರಾಧ, ಮದ್ಯವ್ಯಸನ, ಲೈಂಗಿಕ ದುರಾಚಾರ ಅಥವಾ ವೇಶ್ಯಾವಾಟಿಕೆ, ಕಳ್ಳತನ, ಜೂಜುಗಾರಿಕೆ, ಕೊಲೆ, ದರೋಡೆ ಮುಂತಾದ ಪ್ರಮುಖ ಸಾಮಾಜಿಕ ಸಮಸ್ಯೆಗಳ ಆಶ್ರಯತಾಣಗಳಾಗಿ ಮಾರ್ಪಡುತ್ತವೆ. ಪ್ರೊ. ಜಿ. ಸುಬ್ರಹ್ಮಣ್ಯ ಅವರು ಅಭಿಪ್ರಾಯ ಪಡುವಂತೆ ಪ್ರಮುಖ ನಗರಗಳ ಕೊಳಚೆ ಪ್ರದೇಶಗಳಲ್ಲಿ ಆಯಾ ನಗರಗಳ ಪ್ರತಿಶತ 40-45 ಜನ ವಾಸ ಮಾಡುತ್ತಿದ್ದಾರೆ. 4. ನೀರು ಪೂರೈಕೆ ಹಾಗೂ ಒಳಚರಂಡಿ ವ್ಯವಸ್ಥೆ:- ಗಾಳಿಯ ನಂತರ ಮನುಷ್ಯನಿಗೆ ಬೇಕಾದ ಪ್ರಮುಖ ಅವಶ್ಯಕತೆಗಳಲ್ಲಿ ನೀರು ಒಂದು. ನಮ್ಮ ದೇಹದಲ್ಲಿನ ಬಹುತೇಕ ಅಂಗಗಳು ಚಟುವಟಿಕೆಯಿಂದಿರಲು ನೀರು ಬೇಕು. ನೀರು ನಮ್ಮನ್ನು ಅನೇಕ ರೋಗಗಳಿಂದ ಪಾರುಮಾಡುತ್ತದೆ. ಪ್ರತಿಯೊಬ್ಬ ವ್ಯಕ್ತಿ ದಿನವೊಂದಕ್ಕೆ ಎರಡರಿಂದ ಮೂರು ಲೀಟರ್ ಕುಡಿದರೆ ಅವನು ಆರೋಗ್ಯ ಪೂರ್ಣವಾಗಿರುತ್ತಾನೆ. ಮನುಷ್ಯನ ಉತ್ತಮ ಆರೋಗ್ಯ ಆಹಾರದಂತೆಯೇ ನೀರನ್ನೂ ಅವಲಂಬಿಸಿದೆ. ಪಟ್ಟಣಗಳಿಗೆ ಹಾಗೂ ಚಿಕ್ಕ ನಗರಗಳಿಗೆ ಕೊಳವೆ ಬಾವಿ, ಕೆರೆ, ಕಾಲುವೆಗಳಿಂದ ನೀರನ್ನು ಒದಗಿಸುತ್ತಾರೆ. ಅದರಂತೆಯೇ ಮಹಾ ನಗರಗಳಿಗೆ, ಬೃಹತ್ ನಗರಗಳಿಗೆ ಅಣೆಕಟ್ಟುಗಳಿಂದ ನೀರನ್ನು ಒದಗಿಸುತ್ತಾರೆ. ಕೆಲವು ನಗರಗಳಿಗೆ ನೀರಿನ ಕೊರತೆಯಿದೆ. ಇನ್ನು ಕೆಲವು ಶಹರಗಳಿಗೆ ನೀರಿನ ಲಭ್ಯತೆಯಿದೆ ಆದರೆ ಪೂರೈಕೆ ಸರಿಯಿಲ್ಲ. ಒಂದು ಅಂದಾಜಿನ ಪ್ರಕಾರ ನೀರಿನ ವಿತರಣೆಯಿಲ್ಲ. ಪ್ರತಿಶತ 40 ರಿಂದ 45 ರಷ್ಟು ನೀರು ಪೋಲಾಗುತ್ತಿದೆ. ನಗರ ಪ್ರದೇಶಗಳಲ್ಲಿ ನೀರಿನ ಲಭ್ಯತೆ ಇಲ್ಲದಿರುವುದರಿಂದ ನೂರಾರು ಕಿಲೋಮೀಟರು ದೂರದಿಂದ ನೀರನ್ನು ತರಲಾಗುತ್ತಿದೆ. ಅವಶ್ಯವಿದ್ದಕಡೆ 50 ರಿಂದ 500 ಅಡಿ ಆಳದಿಂದ ನೀರನ್ನು ಎತ್ತಲಾಗುತ್ತಿದೆ. ನಗರ ಪ್ರದೇಶಗಳ ಕುಡಿಯುವ ನೀರಿನ ಯೋಜನೆಗಳಿಗೆ ಸಾವಿರಾರು ಕೋಟಿ ರೂಪಾಯಿಗಳನ್ನು ಖರ್ಚುಮಾಡಲಾಗುತ್ತಿದೆ. ಆದರೂ ನೀರಿನ ಸಂಪರ್ಕ ಬಳಕೆ ಆಗುತ್ತಿಲ್ಲ. ಭೂಮಿಯಲ್ಲಿ ನೀರಿನ ಮಟ್ಟ ಇಳಿಯುತ್ತಿದೆ. ಕೊಳವೆ ಬಾವಿಗಳು ಒಣಗುತ್ತಿವೆ. ಪಟ್ಟಣಗಳ ನೀರು ಸರಬರಾಜು ಯೋಜನೆಗಳಿಗೆ 400 ರಿಂದ 800 ಅಡಿ ಅಳದ ಕೊಳವೆ ಬಾವಿಗಳನ್ನು ಕೊರೆಯಲಾಗುತ್ತಿದೆ. ಜಲ ಸಂಪನ್ಮೂಲ ಕ್ಷೀಣಿಸುತ್ತಿದೆ. ನೀರಿನ ಶುದ್ಧೀಕರಣ ಘಟಕಗಳು ಅವಶ್ಯವಿರುವಷ್ಟು ಸ್ಥಾಪನೆಯಾಗಿಲ್ಲ. ಕೆಲವು ಕಡೆ ಒಂದೋ ಎರಡೋ ಶುದ್ಧೀಕರಣ ಘಟಕಗಳು ಕಾರ್ಯನಿರ್ವಹಿಸುತ್ತಿದೆ. ಅವುಗಳು ಕೆಟ್ಟು ನಿಂತಾಗ ಬೇಗ ದುರಸ್ಥಿಯಾಗುವುದಿಲ್ಲ. ಆ ದುರಸ್ಥಿ ಸಮಯದಲ್ಲಿ ಅಶುದ್ಧ ನೀರನ್ನು ಕೊಡಲಾಗುತ್ತಿದೆ. ಇದರಿಂದ ಜನಸಾಮಾನ್ಯರು ಬಲವಂತವಾಗಿ ಅಶುದ್ಧ ನೀರನ್ನು ಕುಡಿಯುವಂತಾಗಿದೆ. ಕೆಲವು ನಗರಗಳಲ್ಲಿ ಚರಂಡಿ ಮತ್ತಿತರ ಕಾಲುವೆಗಳಲ್ಲಿ ನೀರಿನ ಪೈಪುಗಳನ್ನು ಜೋಡಿಸಿರುತ್ತಾರೆ. ನೀರಿನ ಪೈಪುಗಳು ಒಡೆದು ನೀರು ಪೈಪುಗಳನ್ನು ಜೋಡಿಸಿರುತ್ತಾರೆ. ನೀರಿನ ಪೈಪುಗಳು ಒಡೆದು ನೀರು ಪೋಲಾಗುವುದರ ಜೊತೆಗೆ ಚರಂಡಿ ನೀರು ಕುಡಿಯುವ ನೀರಿನ ಪೈಪಿಗೆ ಸೇರಿ ಮನೆಗಳಿಗೆ ನೀರು ಕುಡಿಯುವ ನೀರಿನ ಪೈಪಿಗೆ ಸೇರಿ, ಮನೆಗಳಿಗೆ ಸರಬರಾಜಾಗುತ್ತಿದೆ. ಅಂತಹ ಅಶುದ್ಧ ನೀರನ್ನು ಅನಿವಾರ್ಯವಾಗಿ ಆಹಾರ ಪದಾರ್ಥ ಬೇಯಿಸಲು, ಕುಡಿಯಲು ಉಪಯೋಗಿಸುವಂತಾಗಿದೆ. ನಗರ ಪ್ರದೇಶಗಳಲ್ಲಿ ನೀರಿನ ವಿತರಣೆ ಸಮರ್ಪಕವಾಗಿ ಆಗುತ್ತಿಲ್ಲ ಎಂಬ ಇರಾದೆಯಿದೆ. ಗೃಹ ಬಳಕೆಗೆ ಉಪಯೋಗಿಸಬೇಕಾದ ನೀರನ್ನು ಬೇರೆ ಬೇರೆ ಉದ್ದೇಶಗಳಿಗೆ ಬಳಸಲಾಗುತ್ತಿದೆ. ಕೈಗಾರಿಕೋದ್ಯಮಿಗಳು, ಹೋಟೆಲ್ ಮಾಲೀಕರು, ಗ್ಯಾರೇಜ್ ಮಾಲೀಕರು ಇನ್ನೂ ಮುಂತಾದವರು ನೀರಿನ ಸಿಂಹಪಾಲನ್ನು ಪಡೆದು ತಮ್ಮ ಕಾರ್ಖಾನೆಗಳಲ್ಲಿ ಹೋಟೆಲ್ಗಳಲ್ಲಿ ಗ್ಯಾರೇಜ್ಗಳಲ್ಲಿ ಉಪಯೋಗಿಸುತ್ತಿದ್ದಾರೆ. ಕಟ್ಟಡ ನಿರ್ಮಾಣದಲ್ಲಿ ತೊಡಗಿರುವವರು ಅನಧಿಕೃತವಾಗಿ ಹಾಗೂ ಹೆಚ್ಚಾಗಿ ನೀರನ್ನು ಬಳಸುತ್ತಾರೆ. ಪರಿಣಾಮವಾಗಿ ಜನಸಾಮಾನ್ಯರ ಕುಡಿಯುವ ನೀರಿಗೆ ಅಭಾವ ಬಂದೊದಗಿದೆ. ರಾಜ್ಯದ ನಗರಗಳಿಗೆ ಕುಡಿಯುವ ಸಲುವಾಗಿ ಕೆಲವು ಭಾಗಗಳಲ್ಲಿ ಬೆಳೆಗಳಿಗಾಗಿ ಅಣೆಕಟ್ಟುಗಳಲ್ಲಿರುವ ನೀರು ಸಾಕಾಗುತ್ತಿಲ್ಲ. ಆದಾಗ್ಯೂ ನೆರೆ ರಾಜ್ಯಗಳಿಗೆ ನೀರು ಬಿಡಲು ಒತ್ತಡ. ಅಂತರಾಜ್ಯ ನೀರಿನ ಒಪ್ಪಂದಗಳು ನ್ಯಾಯಸಮ್ಮತವಾಗಿಲ್ಲ ಎಂಬ ಅಬ್ಬರ ಬೇರೆ. ರಾಷ್ಟ್ರಮಟ್ಟದಲ್ಲಿ ಒಂದು ಜಲನೀತಿ ಇಲ್ಲದಿರುವುದೇ ಇದೆಲ್ಲಕ್ಕೂ ಕಾರಣ ಎಂಬ ಅಭಿಪ್ರಾಯವಿದೆ. ವರ್ಷದಿಂದ ವರ್ಷಕ್ಕೆ ಈ ಸಮಸ್ಯೆ ಉಲ್ಬಣಗೊಳ್ಳುತ್ತಿದೆ. ಇದರಿಂದ ಮಹಾನಗರಗಳ ಕುಡಿಯುವ ನೀರಿನ ಯೋಜನೆಗಳಿಗೆ ಧಕ್ಕೆಯಾಗಿದೆ. ನಗರ ಪ್ರದೇಶಗಳಲ್ಲಿ ನೀರಿನ ಸರಬರಾಜಿಗೆ ಜೊತೆ ಜೊತೆಗೆ ಅಂಟಿಕೊಂಡಿರುವ ಇನ್ನೊಂದು ಸಮಸ್ಯೆಯೆಂದರೆ ಚರಂಡಿ ವ್ಯವಸ್ಥೆ, ನಗರ ಪ್ರದೇಶಗಳ ಪ್ರಮುಖ ಭಾಗಗಳಲ್ಲಿ ಚರಂಡಿ ವ್ಯವಸ್ಥೆ ಇದೆ. ಆದರೆ ಸಮರ್ಪಕವಾಗಿಲ್ಲ. ಮಳೆಗಾಲದಲ್ಲಿ ರಸ್ತೆ ತುಂಬಾ ನೀರು. ದ್ವಿಚಕ್ರ, ಆಟೋರಿಕ್ಷಾ, ಸಣ್ಣ ವಾಹನಗಳು ಹೋಗುವುದೇ ಕಷ್ಟದಾಯಕ, ಚರಂಡಿ ವ್ಯವಸ್ಥೆಯನ್ನು ಸಮಂಜಸವಾಗಿ ನಿರ್ವಹಣೆ ಮಾಡುತ್ತಿಲ್ಲ. ಕಾಲಕಾಲಕ್ಕೆ ಅವುಗಳನ್ನು ಸ್ವಚ್ಛಮಾಡುತ್ತಿಲ್ಲ. ಕಸ, ಒಣಗಿದ ಎಲೆ, ಕಡ್ಡಿಗಳು, ಪ್ಲಾಸ್ಟಿಕ್ ಚೀಟಿಗಳು, ಹರಿದ ಚಪ್ಪಲಿಗಳು, ಸಾಕು ಪ್ರಾಣಿಗಳು, ಶವಗಳು, ಹೋಟೆಲ್, ಆಸ್ಪತ್ರೆ ಹಾಗೂ ಕೈಗಾರಿಕಾ ತ್ಯಾಜ್ಯಗಳು ಚರಂಡಿಯೊಳಗೆ ಸೇರಿ, ನೀರು ಸರಾಗವಾಗಿ ಹರಿಯಲು ಅಡ್ಡಿಯಾಗಿ, ನೀರು ರಸ್ತೆಯಲ್ಲೇ ಹರಿಯಬೇಕಾಗಿದೆ. ಚರಂಡಿ ವ್ಯವಸ್ಥೆಯನ್ನು ನೋಡಿಕೊಳ್ಳಲು ಅಧಿಕಾರಿಗಳಿಗೆ ಬೇಕಾದ ಸಹಕಾರ ಜನಸಾಮಾನ್ಯರು ಹಾಗೂ ಸಂಬಂಧಪಟ್ಟವರು ಕೊಡುತ್ತಿಲ್ಲ. ಹಾಗಾಗಿ ಸಮಸ್ಯೆಯ ತೀವ್ರತೆ ಹೆಚ್ಚಾಗುತ್ತಿದೆ. ನಮ್ಮ ದೇಶದಲ್ಲಿ ಯೋಜನೆಯನ್ನು ರೂಪಿಸಿ ಪಟ್ಟಣ ಹಾಗೂ ನಗರಗಳನ್ನು ಕಟ್ಟಿದ ಉದಾಹರಣೆಗಳೇ ಇಲ್ಲ ಎಂದು ಯೋಜನಾ ತಜ್ಞರು ಅಭಿಪ್ರಾಯಪಡುತ್ತಾರೆ. ನಗರಗಳು, ಉಪನಗರಗಳು ವಿಭಿನ್ನ ಪರಿಸ್ಥಿತಿಯ ಪರಿಣಾಮವಾಗಿ ತಮ್ಮಷ್ಟಕ್ಕೆ ತಾವೇ ಅಡ್ಡಾದಿಡ್ಡಿಯಾಗಿ ಹುಟ್ಟಿಕೊಳ್ಳುತ್ತಿದೆ. ಮೊದಲು ಬೇಕಾಬಿಟ್ಟಿಯಾಗಿ ಕಟ್ಟಡಗಳು, ಸಮೂಹ ಕಟ್ಟಡಗಳು ಏಳುತ್ತವೆ. ಅದಕ್ಕೆ ಆನಂತರ ರಸ್ತೆಗಳನ್ನು ಕಲ್ಪಿಸಿಕೊಡಲಾಗುತ್ತಿದೆ. ಆ ಮೇಲೆ ಬೀದಿ ದೀಪಗಳು, ನೀರು ಸರಬರಾಜು ಹಾಗೂ ಚರಂಡಿ ವ್ಯವಸ್ಥೆ ಮುಂತಾದವುಗಳು ಅನಿವಾರ್ಯವಾಗಿ ಒಂದೊಂದಾಗಿ ಬಂದು ಸೇರಿಕೊಳ್ಳುತ್ತವೆ. ಹಾಗಾಗಿ ಪೂರ್ವಭಾವಿಯಾಗಿ ಯೋಜನೆಯೊಂದನ್ನು ರೂಪಿಸಿ ಅದನ್ನು ಕಾರ್ಯರೂಪಕ್ಕೆ ತಂದು, ಪಟ್ಟಣಗಳನ್ನು ನಗರಗಳನ್ನು ಕಟ್ಟಿದ ಉದಾಹರಣೆಗಳೇ ಇಲ್ಲ ಎಂದು ಹೇಳಲಾಗುತ್ತಿದೆ. ನಮ್ಮ ಪರಿಸ್ಥಿತಿ ಹೇಗಿದೆಯೆಂದರೆ, ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಂಡು, ಕಟ್ಟಡಗಳನ್ನು ಕಟ್ಟಿಕೊಳ್ಳುವ ಬದಲು, ಬೇಕಾಬಿಟ್ಟಿಯಾಗಿ ಕಟ್ಟಡಗಳನ್ನು ಕಟ್ಟಿ, ಆ ನಂತರ ರಸ್ತೆ, ದೀಪ, ನೀರು ಮುಂತಾದ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಪ್ರಯತ್ನಿಸುತ್ತೇವೆ. ಆಯಾ ಪರಿಸ್ಥಿತಿಗೆ ಹೊಂದಿಕೊಳ್ಳುವಂತೆ ನಾಗರೀಕ ಸೌಲಭ್ಯಗಳನ್ನು ಒದಗಿಸುತ್ತಿದ್ದೇವೆಯೇ ಹೊರತು, ನಗರಗಳನ್ನು ಉಪನಗರಗಳನ್ನು ಕಟ್ಟುವಾಗ ಯೋಜನೆಯನ್ನು ರೂಪಿಸಿಕೊಂಡು ಅದನ್ನು ಕಾರ್ಯರೂಪಕ್ಕೆ ತರುತ್ತಿಲ್ಲ. ಹಾಗಾಗಿ ನೀರು ಪೂರೈಕೆ ಮತ್ತು ಒಳ ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲ. ಅದರಂತೆಯೇ ನಿರ್ವಹಣೆಯೂ ಹದಗೆಟ್ಟಿದೆ. 5. ಮಾಲೀನ್ಯತೆ:- ಇತ್ತೀಚಿನ ದಿನಗಳಲ್ಲಿ ನಗರವಾಸಿಗಳ ಜೀವನವನ್ನು ನರಕಸದೃಶ ಮಾಡುತ್ತಿರುವ ಅಂಶಗಳಲ್ಲಿ ಪರಿಸರ ಮಾಲಿನ್ಯವೂ ಒಂದು. ಪಂಚಭೂತಗಳಾದ ಭೂಮಿ, ನೀರು, ಗಾಳಿ, ತೇಜಸ್ಸು (ಪ್ರಕಾಶ ಬೆಂಕಿ) ಮತ್ತು ಆಕಾಶಗಳ ಪ್ರಭಾವ ಜನರ ಮೇಲೆ ಸಹಜವಾಗಿಯೇ ಆಗುತ್ತದೆ. ಈ ಅಂಶಗಳನ್ನು ದೃಷ್ಟಿಯಲ್ಲಿಟ್ಟುಕೊಂಡು, ಮನುಷ್ಯನ ಸುತ್ತಲೂ ಇರುವ ಸನ್ನಿವೇಶವನ್ನು ಪರಿಸರ ಎಂದು ಕರೆಯಲಾಗಿದೆ. ಈ ಪಂಚಭೂತಗಳ ಪ್ರಭಾವ ನಗರ ಪ್ರದೇಶಗಳ ಜನರ ಮೇಲೆ ಉಚಿತ ಪ್ರಮಾಣದಲ್ಲಿ ಆದರೆ ಅದನ್ನು ಉತ್ತಮ ಪರಿಸರ ಎಂತಲೂ ಹಾಗೂ ಈ ಅಂಶಗಳಲ್ಲಿ ಕೆಲವು ಅಥವಾ ಎಲ್ಲವೂ ಮಲಿನಗೊಂಡು, ಅವುಗಳಲ್ಲಿ ಪ್ರಭಾವ ನಗರವಾಸಿಗಳ ಮೇಲೆ ಕೆಟ್ಟದಾಗಿ ಆದರೆ ಅದು ಪರಿಸರ ಮಾಲಿನ್ಯ ಎಂತಲೂ ಕರೆಯಬಹುದಾಗಿದೆ. ನಗರ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಭೂಮಿ, ಜಲ, ವಾಯು (ಗಾಳಿ), ಆಕಾಶ ಅಂಶಗಳು ಮಾಲಿನ್ಯಕ್ಕೆ ಒಳಪಟ್ಟಿವೆ. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ ನಗರ ಸಮುದಾಯಗಳಲ್ಲಿ ಜಲ ಮಾಲಿನ್ಯ, ವಾಯು ಮಾಲಿನ್ಯ, ಭೂ ಮಾಲಿನ್ಯ, ಆಕಾಶ ಮಾಲಿನ್ಯ, ಹೆಚ್ಚಾಗಿ ನೋಡಬಹುದಾಗಿದೆ. ಕೈಗಾರಿಕೆಗಳಲ್ಲಿ ಅದರಲ್ಲೂ ಹೆಚ್ಚಾಗಿ ಸಕ್ಕರೆ ಕಾರ್ಖಾನೆ, ಪ್ಲಾಸ್ಟಿಕ್ ಕಾರ್ಖಾನೆ, ಪೇಪರ್ ಮಿಲ್ಲುಗಳು, ಕಾರ್ಯಾಗಾರಗಳು, ಗ್ಯಾರೇಜುಗಳು, ಬೃಹತ್ ಹೋಟೆಲ್ಲುಗಳು ಮುಂತಾದ ಸ್ಥಳಗಳಲ್ಲಿ ಘನ ಮತ್ತು ದ್ರವ ತ್ಯಾಜ್ಯಗಳು ಹೆಚ್ಚಾಗಿ ಉತ್ಪಾದನೆಯಾಗುತ್ತಿದೆ. ಅಂತಹ ತ್ಯಾಜ್ಯಗಳನ್ನು, ಹೆಚ್ಚಾಗಿ ದ್ರವ ತ್ಯಾಜ್ಯಗಳನ್ನು ಶುದ್ಧೀಕರಣಗೊಳಿಸಿ ಪುನರ್ಬಳಕೆ ಮಾಡಬಹುದು ಅಥವಾ ನದಿಗಳಿಗೆ ಬಿಡಬಹುದು. ಆದರೆ ಇಂತಹ ದ್ರವ ತ್ಯಾಜ್ಯಗಳನ್ನು ಶುದ್ಧೀಕರಿಸದೆ ನದಿಗೆ ಬಿಟ್ಟಿದ್ದರ ಪರಿಣಾಮವಾಗಿ ಹರಿಹರ ಹೊಸಪೇಟೆ, ಮೈಸೂರು ಹತ್ತಿರದ ತುಂಗಭದ್ರ ಮತ್ತು ಕಾವೇರಿ ನದಿಗಳು ಕಲುಷಿತಗೊಂಡು ಸಾವಿರಾರು ಮೀನು ಇನ್ನಿತರ ಜಲಚರ ಪ್ರಾಣಿಗಳು ಸತ್ತುಹೋಗಿರುವುದು ನಮಗೆ ನೆನಪಿದೆ. ಘಟನೆಯಾದಾಗ ದಿನಪತ್ರಿಕೆಗಳಲ್ಲಿ ವರದಿಗಳು ಬರುತ್ತವೆ. ವಿಚಾರಣಾ ಸಮಿತಿಗಳು ನೇಮಕಗೊಳ್ಳುತ್ತದೆ. ವರದಿಗಳು ಮಂಡಿತವಾಗುತ್ತವೆ. ಮುಂದೇನಾಯಿತು ಎಂದು ಯಾರಿಗೂ ಗೊತ್ತಾಗುವುದಿಲ್ಲ. ನಗರ ಪ್ರದೇಶಗಳಲ್ಲಿ ನಾಗರೀಕರನ್ನು ಚಿಂತೆಗೀಡು ಮಾಡಿರುವ ಇನ್ನೊಂದು ಅಂಶ ಘನ ತ್ಯಾಜ್ಯ. ಇದನ್ನು ಎರಡು ಭಾಗಗಳಾಗಿ ವಿಂಗಡಿಸುವುದು ರೂಢಿ. ಮೊದಲನೆಯದು ಘನ ತ್ಯಾಜ್ಯ, ಪ್ಲಾಸ್ಟಿಕ್ ಕಾಗದ, ಕಟ್ಟಿಗೆ, ಒಣಗಿದ ಎಲೆ, ಹರಿದ ಚಪ್ಪಲಿ, ರಬ್ಬರ್, ಹರಕು ಬಟ್ಟೆ, ಎಲೆಕ್ಟ್ರಾನಿಕ್ ಉಪಕರಣಗಳ ಕೆಟ್ಟ ಬಿಡಿ ಭಾಗಗಳು ಮುಂತಾದವುಗಳನ್ನು ಸೇರಿಸಬಹುದಾಗಿದೆ. ಪ್ಲಾಸ್ಟಿಕ್, ರಬ್ಬರ್ ತ್ಯಾಜ್ಯಗಳನ್ನು ಬೇರೆಯಾಗಿಯೇ ಸಂಗ್ರಹಿಸಿ ಪುನರ್ಬಳಕೆ ಮಾಡುತ್ತಿದ್ದಾರೆ. ಉಳಿದ ತ್ಯಾಜ್ಯವನ್ನು ನಗರಗಳಿಂದ ದೂರ ತೆಗೆದುಕೊಂಡು ಹೋಗಿ ಗುಡ್ಡೆಹಾಕುತ್ತಿದ್ದಾರೆ. ಅದನ್ನು ಸಂಸ್ಕರಿಸುವ ಅವಶ್ಯಕತೆಯಿದೆ. ಎರಡನೆಯದು, ಹಸಿ ತ್ಯಾಜ್ಯ, ತರಕಾರಿ, ಹಣ್ಣು-ಹಂಪಲುಗಳ ತ್ಯಾಜ್ಯ, ತಿರಸ್ಕೃತ ಆಹಾರ, ಹಸಿ ಎಲೆ, ಮುಂತಾದವುಗಳನ್ನು ಈ ಗುಂಪಿಗೆ ಸೇರಿಸಬಹುದಾಗಿದೆ. ಇದು ಕೊಳೆತುಹೋಗುವ ಗುಣ ಇರುವುದರಿಂದ ಅದನ್ನು ಬೇರೆ ಸಂಗ್ರಹಮಾಡಿ ಕಾಂಪೋಷ್ಟ ಗೊಬ್ಬರ ಮಾಡಲು ಉಪಯೋಗಿಸಬಹುದಾಗಿದೆ. ನಮಗೆಲ್ಲಾ ಗೊತ್ತಿರುವಂತೆ ಬೆಂಗಳೂರು ಒಂದರಲ್ಲೇ ಪ್ರತಿದಿನ 5000 ಟನ್ (2015) ಕಸ ಉತ್ಪಾದನೆಯಾಗುತ್ತಿದೆ. ಯಾವುದೇ ಪಕ್ಷ ಸರಕಾರ ರಚನೆ ಮಾಡಲಿ, ಈ ಸಮಸ್ಯೆಯನ್ನು ಪ್ರಭಾವಯುತವಾಗಿ ಎದುರಿಸಲಾಗುತ್ತಿಲ್ಲ. ನಗರ ಸಮುದಾಯದ ಸದಸ್ಯರು ಎದುರಿಸುತ್ತಿರುವ ಮತ್ತೊಂದು ಸಮಸ್ಯೆ ವಾಯುಮಾಲಿನ್ಯ, ಶಬ್ದಮಾಲಿನ್ಯ. ಗ್ರಾಮೀಣ ಸಮುದಾಯಗಳಲ್ಲಿ ಪರಿಸರ ಅಷ್ಟಾಗಿ ಕಲುಷಿತಗೊಳ್ಳುವ ಪ್ರಮೇಯವಿರುವುದಿಲ್ಲ. ಇದ್ದರೂ ಹೆಚ್ಚಿನ ಪ್ರಮಾಣದಲ್ಲಿರುವುದಿಲ್ಲ. ಆದರೆ ನಗರ ಪರಿಸ್ಥಿತಿಯೇ ಬೇರೆ, ನಗರಗಳಲ್ಲಿ ಲಕ್ಷಗಟ್ಟಲೆ ದ್ವಿಚಕ್ರ ವಾಹನಗಳು, ತ್ರಿಚಕ್ರ ವಾಹನಗಳು (ಆಟೋ ರಿಕ್ಷ, ಆಪೆ, ಸಾಮಾನು ಸಾಗಿಸುವ ವಾಹನ) ವಿವಿಧ ರೀತಿಗಳ ಕಾರುಗಳು, ಜೀಪುಗಳು, ಬಸ್ಸುಗಳು, ಲಾರಿಗಳು, ಲೋಕಮೋಟೊ ಇಂಜಿನ್ಗಳು ಅವಿರತವಾಗಿ ಓಡಾಡುತ್ತಿರುವುದರಿಂದ, ಅವುಗಳಿಂದ ಹೊರಬಂದ ಧೂಳು, ಹೊಗೆ ಗಾಳಿಯಲ್ಲಿ ಸೇರಿ, ಕಲುಷಿತಗೊಂಡಿದೆ. ವಾಹನಗಳಿಗೆ ಕುಟಿರಕೆ ಇಂಧನ (ಸೀಮೆ ಎಣ್ಣೆ ಸೇರಿಸುವುದು) ಸೇರಿಸುವುದರಿಂದ ವಾಹನಗಳು ಹೆಚ್ಚಿನ ಹೊಗೆಯನ್ನು ಹೊರಹಾಕುತ್ತಿವೆ. ಇದರಿಂದ ಟಿ.ಬಿ., ಕ್ಯಾನ್ಸರ್, ಶ್ವಾಸೋಚ್ಛಾಸದ ತೊಂದರೆಗಳು ಮುಂತಾದ ರೋಗಗಳಿಂದ ಜನ ನರಳುವಂತಾಗಿದೆ. ನಗರ ಪ್ರದೇಶಗಳಲ್ಲಿರುವ ಇನ್ನೊಂದು ತೊಂದರೆ ಶಬ್ದಮಾಲಿನ್ಯ, ರೈಲ್ವೆ ಇಂಜಿನ್ಗಳು, ಬಸ್ಸುಗಳು, ಲಾರಿಗಳು, ಕಾರುಗಳು, ಆಟೋ ರಿಕ್ಷಾಗಳು, ದ್ವಿಚಕ್ರವಾಹನಗಳು ನಗರಗಳಲ್ಲಿ ಹೆಚ್ಚು ಶಬ್ದವನ್ನು ಹೊರಹಾಕುತ್ತವೆ. ಶಬ್ದವನ್ನು ಡೆಸೆಬಲ್ ಎಂಬ ಮಾಪನಗಳಿಂದ ಅಳೆಯುತ್ತಾರೆ. ವಾಹನಗಳ ಸಂಚಾರದಿಂದ ಹೆಚ್ಚು ಡೆಸೆಬಲ್ ಶಬ್ದವಾಗುತ್ತಿರುವುದರಿಂದ ಅದನ್ನು ಸಹಿಸಲು ಮನುಷ್ಯ ಒದ್ದಾಡಬೇಕಾಗುತ್ತದೆ, ಇದು ಸಮಸ್ಯೆ. ಕಾರ್ಖಾನೆಗಳಲ್ಲಿ ವಸ್ತುಗಳ ಉತ್ಪಾದನೆ ಮಾಡಲು ಅನೇಕ ಯಂತ್ರಗಳನ್ನು ಬಳಸುತ್ತಾರೆ. ಈ ಯಂತ್ರಗಳು ಉತ್ಪಾದನಾ ಪ್ರಕ್ರಿಯೆಯಲ್ಲಿ ತೊಡಗಿದಾಗ ಶಬ್ದವಾಗುತ್ತದೆ. ಕಾರ್ಖಾನೆಗಳ ಸೈರನ್ನುಗಳಿಂದಲೂ ಶಬ್ದಮಾಲಿನ್ಯವಾಗುತ್ತಿದೆ. ಇಂತಹ ಶಬ್ದಮಾಲಿನ್ಯ ಕಾರ್ಖಾನೆ ಕಾರ್ಮಿಕರಲ್ಲಿ, ಜನಸಾಮಾನ್ಯರಲ್ಲಿ ದೈಹಿಕ, ಮಾನಸಿಕ ಕಿರಿಕಿರಿ, ವ್ಯಾಕುಲತೆಯನ್ನು ತಂದೊಡ್ಡಿದೆ. ಇದು ದಿನಕಳೆದಂತೆ ಮಾನಸಿಕ ಅಸಮತೋಲನ ಅಸಹಿಷ್ಣುತೆ, ಖಿನ್ನತೆ ಮುಂತಾದ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ. ಈ ಮಾಲಿನ್ಯಕ್ಕೆ ಸರಕಾರಗಳ ಮತ್ತು ಸಂಬಂಧಪಟ್ಟವರ ಅನಾಸಕ್ತಿ, ಕರ್ತವ್ಯಲೋಪ ಮುಂತಾದ ಮುಖ್ಯ ಕಾರಣಗಳನ್ನು ಕೊಡಬಹುದಾಗಿದೆ. ಕಾರ್ಮಿಕರ ಅನೈಪುಣ್ಯತೆ, ಅನಾಸಕ್ತಿ, ಅನಾದ್ಯತೆ, ದೋಷಪೂರಿತ ಯಂತ್ರಗಳ ಬಳಕೆ ಮುಂತಾದ ಕಾರಣಗಳನ್ನು ಕೊಡಬಹುದಾಗಿದೆ. ದೋಷಪೂರಿತ ಯೋಜನೆಗಳು, ಹಿತಾಸಕ್ತಿಗಳ ಒತ್ತಡ, ಪ್ರಭಾವಿ ಯೋಜನಾನುಷ್ಠಾನಗಳ ಕೊರತೆ, ಮೇಲ್ವಿಚಾರಣೆಯ ಅಭಾವ ಮುಂತಾದ ಕಾರಣಗಳನ್ನೂ ಕೊಡಬಹುದಾಗಿದೆ. ಇವುಗಳ ಜೊತೆಗೆ ನಗರ ಪ್ರದೇಶಗಳಲ್ಲಿ ಭೂಮಾಲಿನ್ಯವೂ ಆಗುತ್ತದೆ. ರಾಸಾಯನಿಕ ಪದಾರ್ಥಗಳು, ಔಷಧಗಳು, ಸೋಪು, ಪೇಷ್ಟು, ಶೃಂಗಾರ ಸಾಮಗ್ರಿಗಳು, ಮುಂತಾದ ಸಿದ್ಧ ವಸ್ತುಗಳ ಉತ್ಪಾದಕರು ಘನ, ದ್ರವ ತ್ಯಾಜ್ಯಗಳನ್ನು ಸರಿಯಾಗಿ ಪರಿಷ್ಕರಿಸದೆ, ಘನ ತ್ಯಾಜ್ಯವನ್ನು ಒಂದು ಕಡೆ ಗುಂಪು ಹಾಕುತ್ತಾರೆ ಹಾಗೂ ದ್ರವ ತ್ಯಾಜ್ಯಗಳನ್ನು ಕಾಲುವೆ, ನದಿ, ಕೆರೆಗಳಿಗೆ ಬಿಡುತ್ತಾರೆ. ಇಂತಹ ತ್ಯಾಜ್ಯಗಳ ಜೊತೆಗೆ ಮಳೆ ನೀರು, ಒಣಗಿದ ಎಲೆ ಮುಂತಾದವುಗಳು ಸೇರಿ ಭೂಭಾಗ ಮತ್ತು ಜಲತಾಣಗಳು ಕಲುಷಿತಗೊಳ್ಳುತ್ತಿವೆ. ಇದೇ ರೀತಿ ಹೋಟೆಲ್ಲಿನ ಹಸಿ ತ್ಯಾಜ್ಯ, ಆಸ್ಪತ್ರೆಗಳ ಹಸಿತ್ಯಾಜ್ಯ, ತರಕಾರಿ ಮಾರುಕಟ್ಟೆಯ ಹಸಿತ್ಯಾಜ್ಯ ಭೂಮಿಯ ಕೆಲಭಾಗವನ್ನು, ಜಲ ಮೂಲಗಳನ್ನು ಕಲುಷಿತಗೊಳ್ಳುತ್ತವೆ. ಕೈಗಾರಿಕೆಗಳು, ರೈಲ್ವೆ ಇಂಜಿನ್ನುಗಳು ಹೊರಸೂಸುವ ಹೊಗೆ ಆ ಪ್ರದೇಶದ ಆಕಾಶಭಾಗವನ್ನೂ ಮಲಿನಗೊಳಿಸುತ್ತವೆ. ಕೈಗಾರಿಕಾ ವಲಯಗಳು ಇದಕ್ಕೆ ಉತ್ತಮ ಉದಾಹರಣೆ. ಕೈಗಾರಿಕಾ ಮತ್ತು ಗೃಹ ಕೈಗಾರಿಕೆಗಳ ಒಣ ತ್ಯಾಜ್ಯವನ್ನು ಸುಡುವ ಪದ್ಧತಿಯಿದೆ. ಆಗಲೂ ಹೊಗೆ ತುಂಬಿ ಪರಿಸರ ಕಲುಷಿತಗೊಳಿಸುತ್ತಿವೆ. 6. ಸಾಗಾಣಿಕೆ ಮತ್ತು ಸಂಚಾರ:- ವಸ್ತುಗಳನ್ನು ಸಾಗಿಸುವುದನ್ನು ಸಾಗಾಣಿಕೆ ಎಂತಲೂ, ವ್ಯಕ್ತಿಗಳು ತಿರುಗಾಡುವುದು, ಅಡ್ಡಾಡುವುದು, ಪ್ರಯಾಣ ಮಾಡುವುದನ್ನು ಸಂಚಾರ ಎಂತಲೂ ಕರೆಯುವುದು ರೂಢಿ. ಸಿದ್ಧವಸ್ತುಗಳು, ಆಹಾರಧಾನ್ಯಗಳು, ಹಣ್ಣು ತರಕಾರಿಗಳು ಉತ್ಪಾದನೆಗೊಂಡ ಸ್ಥಳದಿಂದ ಮಾರಾಟವಾಗುವ ಮಾರುಕಟ್ಟೆಗೆ ಸಾಗಿಸುವುದು ಸಾಗಾಣಿಕೆ ಎಂದೆನಿಸಿಕೊಳ್ಳುತ್ತವೆ. ಸರಕಾರ ನೇರವಾಗಿ ಈ ಕೆಲಸವನ್ನು ನಿರ್ವಹಿಸುವುದು ಕಡಿಮೆ. ಈ ಕೆಲಸವನ್ನು ಹೆಚ್ಚಾಗಿ ಖಾಸಗಿ ವ್ಯಕ್ತಿಗಳು ಮಾಡುತ್ತಾರೆ. ನಗರ ಪ್ರದೇಶಗಳಲ್ಲಿ ರಸ್ತೆಗಳು ತೃಪ್ತಿಕರವಾಗಿಲ್ಲ. ಆಗಾಗ್ಗೆ ದೂರವಾಣಿ ಇಲಾಖೆಯವರು, ನೀರು ಸರಬರಾಜು, ಒಳ ಚರಂಡಿ ವ್ಯವಸ್ಥೆ ನೋಡಿಕೊಳ್ಳುವವರು, ಗುಂಡಿಗಳನ್ನು ತೋಡದಿದ್ದರೆ ರಸ್ತೆಗಳು ಸ್ವಲ್ಪವಾಸಿ, ಹಣದ ಲಭ್ಯತೆಯನ್ನು ಅನುಸರಿಸಿ ಆಗಾಗ್ಗೆ ದುರಸ್ಥಿಗೊಳ್ಳುತ್ತವೆ. ಸಮಸ್ಯೆ ಇರುವುದು ಮಾರುಕಟ್ಟೆಯ ಸುತ್ತಮುತ್ತ ಮತ್ತು ಮಾರುಕಟ್ಟೆಯ ಒಳಗೆ ಆ ಪ್ರದೇಶದಲ್ಲಿ ರಸ್ತೆಗಳು ಹೆಚ್ಚಾಗಿ ಉಪಯೋಗಿಸಲ್ಪಡುತ್ತವೆಯಾದ್ದರಿಂದ ಆಗಿಂದಾಗ್ಗೆ ದುರಸ್ಥಿಗೊಳ್ಳುತ್ತಿರಬೇಕು. ಅಸಮರ್ಪಕ ಹಾಗೂ ಭ್ರಷ್ಟ ವ್ಯವಸ್ಥೆಯಲ್ಲಿ ಅದು ವಿಳಂಬವಾಗುತ್ತದೆ. ತರಕಾರಿ, ಹಣ್ಣು ಮಾರುಕಟ್ಟೆಗಳಲ್ಲಿ ಮಾಲಿನ್ಯತೆ ಜಾಸ್ತಿ. ಅದರ ಮೇಲ್ವಿಚಾರಕರು ಉದಾಸೀನ ಸ್ವಭಾವದವರು. ಅವರ ಗಮನ ಹೆಚ್ಚಾಗಿ ಆದಾಯದ ಕಡೆಗೆ. ಹಾಗಾಗಿ ಸಾಗಾಣಿಕೆ - ನೈರ್ಮಲ್ಯಗಳ ಕಡೆ ಲಕ್ಷ್ಯ ಕೊಡುವವರು ಇರುವುದಿಲ್ಲ. ಬೃಹತ್ ನಗರಗಳಲ್ಲಿ ಇಂತಹ ಸಮಸ್ಯೆಗಳನ್ನು ಬೇಗನೇ ಪರಿಹರಿಸುವವರು ಇದ್ದರೂ, ಉಳಿದ ನಗರ ಪ್ರದೇಶಗಳಲ್ಲಿ ಈ ವಿಚಾರಗಳಿಗೆ ಆದ್ಯತೆ ಕೊಟ್ಟು ಕೆಲಸ ಮಾಡುವವರು ಕಡಿಮೆ. ನಗರ ಪ್ರದೇಶಗಳಲ್ಲಿ ಇದಕ್ಕೆ ಹತ್ತಿಕೊಂಡೇ ಜನರು ಎದುರಿಸುತ್ತಿರುವ ಇನ್ನೊಂದು ಸಮಸ್ಯೆ ಎಂದರೆ ಸಂಚಾರ ವ್ಯವಸ್ಥೆ, ಬೃಹತ್ ನಗರಗಳನ್ನು ಹೊರತುಪಡಿಸಿ. ಎಲ್ಲಾ ನಗರಗಳಲ್ಲಿ ಜನಸಂಚಾರಕ್ಕಾಗಿ ಸರಕಾರಗಳು ಬಸ್ಸುಗಳ ವ್ಯವಸ್ಥೆಯನ್ನು ಮಾಡಿವೆ. ಅದಕ್ಕೆ ಅಪವಾದಗಳೂ ಇವೆ. ಸಾರ್ವಜನಿಕ ಸಾರಿಗೆ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ನಗರಗಳಲ್ಲಿ ಬಸ್ಸುಗಳನ್ನು ವ್ಯವಸ್ಥೆಗೊಳಿಸಿದ್ದಾರೆ. ಆದರೆ ಈ ವ್ಯವಸ್ಥೆ ಅಸಮರ್ಪಕವಾಗಿದೆ ಎಂಬ ಕೂಗಿದೆ. ನಗರಗಳ ಅನೇಕ ಕಡೆ ರಸ್ತೆಗಳು ಕಿರಿದು. ತಾರು ಹಾಕಿರುವುದಿಲ್ಲ. ಚರಂಡಿ ವ್ಯವಸ್ಥೆ ಮಾಡಿರುವುದಿಲ್ಲ. ಬಸ್ಸುಗಳು ಸರಿಯಾದ ಸಮಯಕ್ಕೆ ಬರುವುದಿಲ್ಲ. ಬಸ್ಸಿನಲ್ಲಿ ಜನಸಂದಣಿ ಜಾಸ್ತಿ. ಬಸ್ಸುಗಳು ರಸ್ತೆಯಲ್ಲೇ ನಿಂತುಬಿಡುತ್ತವೆ. ನಗರಗಳ ಎಲ್ಲಾ ಕಡೆಗಳಿಗೆ ಬಸ್ಸುಗಳ ವ್ಯವಸ್ಥೆಯಾಗಿಲ್ಲ. ಸಂಚಾರಕ್ಕೆ ಉಪಯೋಗಿಸುವ ವಾಹನಗಳು ಸಂಚಾರಕ್ಕೆ ಯೋಗ್ಯವಾಗಿಲ್ಲ. ಭ್ರಷ್ಟ ಸಿಬ್ಬಂದಿಯಿಂದ ಹಣ ಸಂಗ್ರಹಣೆ ಸಮರ್ಪಕವಾಗಿಲ್ಲ. ಚಾಲಕರು ಮಾದಕ ಪಾನೀಯಗಳನ್ನು ಸೇವಿಸಿ ವಾಹನಗಳನ್ನು ಚಾಲನೆ ಮಾಡುತ್ತಾರೆ. ಸಿಬ್ಬಂದಿಗೆ ಸಂಬಳ, ಸವಲತ್ತುಗಳು ತೃಪ್ತಿಕರವಾಗಿಲ್ಲ. ಹೀಗೆ ಹಲವು ಹತ್ತು ಸಮಸ್ಯೆಗಳನ್ನು ಸಂಚಾರ ವ್ಯವಸ್ಥೆ ಎದುರಿಸುತ್ತಿದೆ. ಪ್ರತಿಯೊಂದು ರಾಜ್ಯ ಸರ್ಕಾರವೂ, ಅವಶ್ಯಕ ಸೇವೆಗಳು ಎನ್ನುವ ಪರಿಕಲ್ಪನೆಯಡಿ ನಿಯತಕಾಲಿಕವಾಗಿ ಬಸ್ಸುಗಳನ್ನು ಬದಲಿಸಿ ಹೊಸ ಬಸ್ಸುಗಳನ್ನು ಖರೀದಿಸಿ, ಜನಸಾಮಾನ್ಯರ ಮೇಲೆ ಸಾವಿರಾರು ಕೋಟಿ ರೂಪಾಯಿಗಳ ಸಾಲದ ಹೊರೆಯನ್ನು ಹೊರೆಸುತ್ತಾರೆ. ರಾಜಕಾರಣಿಗಳಲ್ಲಿ ಸಾರ್ವಜನಿಕ ಜವಾಬ್ದಾರಿ ಕಡಿಮೆಯಾಗುತ್ತಿದೆ. ಅಧಿಕಾರಿಗಳು ಭ್ರಷ್ಟ ಹಾಗೂ ಅದಕ್ಷರಾಗುತ್ತಿದ್ದಾರೆ ಎಂಬ ಆಪಾದನೆಯಿದೆ. ಇವುಗಳಿಂದ ಸಮಸ್ಯೆಗಳು ಸಂಕೀರ್ಣವಾಗುತ್ತಿದೆ. 7. ವಿದ್ಯುಚ್ಛಕ್ತಿ:- ನಗರ ಸಮುದಾಯಗಳಲ್ಲಿ, ಇತ್ತೀಚಿನ ದಿನಗಳಲಿ ವಿದ್ಯುಚ್ಛಕ್ತಿಯ ಕೊರತೆ ಹೆಚ್ಚಾಗಿ ಕಾಣಿಸುತ್ತಿದೆ. ಇಪ್ಪತ್ತನೇ ಶತಮಾನದ ಮಧ್ಯಭಾಗದಲ್ಲಿ ಕೈಗಾರಿಕೆಗಳಿಗೆ ಮತ್ತು ಮನೆಗಳಲ್ಲಿ ದೀಪಗಳನ್ನು ಬೆಳಗಿಸಲು ಮಾತ್ರ ವಿದ್ಯುತ್ತನ್ನು ಬಳಸಲಾಗುತ್ತಿತ್ತು. ಕೈಗಾರಿಕೆಗಳಲ್ಲಿಯೂ ಉತ್ಪಾದನೆಯ ಮುಖ್ಯ ಚಟುವಟಿಕೆಗಳಿಗೆ ಮಾತ್ರ ವಿದ್ಯುತ್ತನ್ನು ಉಪಯೋಗಿಸಲಾಗುತ್ತಿತ್ತು. ನಾಗರೀಕತೆ ಬೆಳೆದಂತೆಲ್ಲಾ, ಕೈಗಾರಿಕೆ ಮತ್ತು ಇನ್ನಿತರ ಕ್ಷೇತ್ರಗಳಲ್ಲಿ ಉತ್ಪಾದನಾ ಪ್ರಕ್ರಿಯೆ ನವೀಕರಣಗೊಳ್ಳುತ್ತಿದೆ. ಹೊಸ ಹೊಸ ಅವಿಷ್ಕಾರಗಳು ಆದಂತೆಲ್ಲಾ ಅಂತಹ ಹೊಸ ಉದ್ದೇಶಗಳಿಗೆ ವಿದ್ಯುತ್ತನ್ನು ಬಳಸಲಾಗುತ್ತಿದೆ. ಅದರಂತೆಯೇ ಸೇವಾಕ್ಷೇತ್ರ, ಕಛೇರಿ, ಗ್ಯಾರೇಜು, ಹೋಟಲ್ಲು ಮುಂತಾದ ಕಡೆಗಳಲ್ಲಿಯೂ ಅದರ ಬಳಕೆ ಹೆಚ್ಚುತ್ತಲಿದೆ. ರೈಲ್ವೆ ಇಂಜಿನ್ನುಗಳನ್ನು ಓಡಿಸಲು ವಿದ್ಯುತ್ತನ್ನು ಉಪಯೋಗಿಸಲಾಗುತ್ತಿದೆ. ಮನೆಗಳಲ್ಲಿ ದೀಪ ಬೆಳಗಿಸಲು ಮಾತ್ರ ಬಳಕೆಯಾಗುತ್ತಿದ್ದ ವಿದ್ಯುಚ್ಛಕ್ತಿ, ಈಗ ಮನೆಯಲ್ಲಿನ ಹತ್ತಾರು ಉದ್ದೇಶಗಳಿಗೆ ಬಳಸಲಾಗುತ್ತಿದೆ. ಇವೆಲ್ಲವುಗಳ ಫಲವಾಗಿ ದಿನದಿಂದ ದಿನಕ್ಕೆ ವಿದ್ಯುಚ್ಛಕ್ತಿಯ ಅವಶ್ಯಕತೆ ಮತ್ತು ಅಭಾವ ಕಾಣಿಸುತ್ತಿದೆ. ನಗರ ಪ್ರದೇಶಗಳಲ್ಲಿ ಇಂದಿನ ಜೀವನ ಹೆಚ್ಚಾಗಿ ವಿದ್ಯುತ್ತನ್ನು ಅವಲಂಬಿಸುವಂತೆ ಮಾಡಿದೆ. ವಿದ್ಯುಚ್ಛಕ್ತಿಯ ಸರಬರಾಜು ನಿಂತರೆ ಜನಜೀವನವೇ ನಿಂತ ಅನುಭವ ಉಂಟಾಗುತ್ತದೆ. ವಿದ್ಯುಚ್ಛಕ್ತಿ ಮೂಲಗಳು ಹಲವಾರು. ಜಲ ಮತ್ತು ಅಣು ವಿದ್ಯುತ್ ಅವುಗಳಲ್ಲಿ ಪ್ರಮುಖವಾದವುಗಳು. ಗಾಳಿಯಂತ್ರಗಳು, ಸೌರಶಕ್ತಿ (ಸೋಲಾರ್) ಮುಂತಾದ ಶಕ್ತಿ ಮೂಲಗಳು ಇತ್ತೀಚಿಗೆ ಬೆಳಕಿಗೆ ಬಂದಿವೆ. ಗೋಬರ್ ಗ್ಯಾಸ್ ಮುಂತಾದ ಶಕ್ತಿ ಮೂಲಗಳನ್ನು ಉಪಯೋಗಿಸಲಾಗುತ್ತಿದೆ. ಇಂಥವುಗಳನ್ನು ಅಸಾಂಪ್ರದಾಯಿಕ ಶಕ್ತಿ ಮೂಲಗಳಿಂದ ಕರೆಯುವುದು ವಾಡಿಕೆ. ಇತ್ತೀಚಿಗೆ ವಿದ್ಯುತ್ತಿನ ಕ್ಷಾಮ ತಲೆದೋರಿದೆ. ವಿದ್ಯುಚ್ಛಕ್ತಿಯನ್ನು ಬಳಸುವ ವಿಧಾನಗಳು ಹೆಚ್ಚಾದಂತೆ, ವಿದ್ಯುಚ್ಛಕ್ತಿಯನ್ನು ಉತ್ಪಾದಿಸುವ ವಿಧಾನಗಳು ಹೆಚ್ಚಾಗಿಲ್ಲ. ಈಗ ವಿದ್ಯುಚ್ಛಕ್ತಿ ಉತ್ಪಾದನೆ ಆಗುತ್ತಿರುವುದು ಜಲಮೂಲಗಳಿಂದ ಮತ್ತು ಅಣು ವಿದ್ಯುತ್ ಉತ್ಪಾದನ ಘಟಕಗಳಿಂದ. ಬೀದಿ ದೀಪ ಉರಿಸಲು, ನೀರೆತ್ತಲು ನೀರು ಕಾಯಿಸಲು ಗಾಳಿಯಂತ್ರಗಳನ್ನು ಹಾಗೂ ಸೌರಶಕ್ತಿಯನ್ನು ಬಳಸಲಾಗುತ್ತಿದೆ. ನಗರ ಪ್ರದೇಶಗಳಲ್ಲಿ ವಿದ್ಯುಚ್ಛಕ್ತಿಯ ಅಭಾವವಿದೆ. ಇದರ ಜೊತೆ ಜೊತೆಗೆ ವಿದ್ಯುಚ್ಛಕ್ತಿಯ ದುರುಪಯೋಗ, ಅಪವ್ಯಯ, ಹಾನಿಯಾಗುತ್ತಿದೆ. ನಗರಗಳ ಕೆಲವು ಪ್ರದೇಶಗಳಲ್ಲಿ ಹಗಲಿನಲ್ಲೂ ಬೀದಿ ದೀಪಗಳು ಉರಿಯುತ್ತಿವೆ. ಸಂಬಂಧಪಟ್ಟವರಿಗೆ ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಲು ಆಗುತ್ತಿಲ್ಲ. ಇದರಿಂದ ವಿದ್ಯುಚ್ಛಕ್ತಿ ನಿಗಮಗಳು ನಿಯತಕಾಲಿಕವಾಗಿ ಸರಬರಾಜನ್ನು ಕಡಿತಗೊಳಿಸುತ್ತಿವೆ. ಹಾಗಾಗಿ ಹಗಲು ಹೊತ್ತಿನಲ್ಲಿ ಕಾರ್ಖಾನೆಗಳು, ಇನ್ನಿತರ ಕೈಗಾರಿಕೋದ್ಯಮಗಳು ಕೆಲಸ ಮಾಡಲು ಆಗುತ್ತಿಲ್ಲ. ಅವರುಗಳು ರಾತ್ರಿ ಕೆಲಸ ಮಾಡಬೇಕಾಗಿದೆ. ಇದರಿಂದ ಕಾರ್ಮಿಕರಿಗೂ ಸೇರಿದಂತೆ ಕೈಗಾರಿಕೋದ್ಯಮಿಗಳಿಗೆ ತೊಂದರೆಯಾಗುತ್ತಿದೆ. ಅಕಾಲಿಕ ವಿದ್ಯುತ್ ಕೊರತೆಯಿಂದ ವಿದ್ಯಾರ್ಥಿಗಳು ತಮ್ಮ ಪರೀಕ್ಷೆಗಳಿಗೆ ಓದಿಕೊಳ್ಳಲು ಆಗುತ್ತಿಲ್ಲ. ಈಗ ಅವಶ್ಯವಿರುವ ವಿದ್ಯುಚ್ಛಕ್ತಿಯನ್ನು ಕೊಳ್ಳಲು ರಾಜ್ಯ ಸರ್ಕಾರ ನೆರೆ ರಾಜ್ಯಗಳ ಮೊರೆಹೋಗಬೇಕಾಗಿದೆ. ಹೆಚ್ಚಿನ ಬೆಲೆಯನ್ನು ಕೊಟ್ಟು ಖರೀದಿಸಬೇಕಾಗಿದೆ. ಇದು ಸರ್ಕಾರಕ್ಕೆ ಹಾಗೂ ಅಂತಿಮವಾಗಿ ಜನತೆಗೆ ಹೊರೆಯಾಗಿದೆ. ಜಲ ವಿದ್ಯುತ್ ಉತ್ಪಾದನಾ ಘಟಕಗಳು ನೀರಿಲ್ಲದೆ ಸುಮ್ಮನೆ ನಿಲ್ಲುವಂತಾಗಿದೆ. ನೀರಿನ ಕಾರಣದಿಂದ ನೆರೆ ರಾಜ್ಯಗಳೊಡನೆ ಮನಸ್ತಾಪ ಕಟ್ಟಿಕೊಳ್ಳಬೇಕಾಗಿದೆ. 8. ಅನಿಶ್ಚಿತತೆ, ವಿಹಾರಗಳಿಗೆ ಅನವಕಾಶ:- ನಗರ ಪ್ರದೇಶಗಳ ಸಾಮಾನ್ಯ ಜೀವನ ಅನಿಶ್ಚಿತತೆಯಿಂದ ಕೂಡಿದೆ. ಇಂತಹ ಅನಿಶ್ಚಿತತೆ ರಾಜಕೀಯ ಕಾರಣದಿಂದ ಉದ್ಭವಿಸಿರಬಹುದು. ಇಲ್ಲವೇ ಕೈಗಾರಿಕೆಗಳ ಕಾರಣಗಳಿಂದ ಪ್ರಾರಂಭವಾಗಿರಬಹುದು. ಸರ್ಕಾರಿ ಉದ್ಯೋಗಿಗಳು, ಬ್ಯಾಂಕ್ ಉದ್ಯೋಗಿಗಳು, ಕಾರ್ಮಿಕರು ಮುಂತಾದವರಿಂದ ಅನಿಶ್ಚಿತತೆ ಆವಿರ್ಭಾವಗೊಂಡಿರಬಹುದು ಅಥವಾ ವಿದ್ಯಾರ್ಥಿಗಳು, ಆಟೋಚಾಲಕರು, ಇನ್ನಿತರ ಯಾವುದೇ ಗುಂಪುಗಳು ಅನಿಶ್ಚಿತತೆಯನ್ನು ಪ್ರಾರಂಭಿಸಿರಬಹುದು. ಕಾರಣ ಏನೇ ಇರಬಹುದು, ಕಾರಣಕರ್ತರು ಯಾರೇ ಆಗಿರಬಹುದು. ಅದು ನಗರವಾಸಿಗಳನ್ನು ತೊಂದರೆಗೆ ಈಡುಮಾಡುತ್ತದೆ. ಇಂತಹ ಅನಿಶ್ಚಿತತೆ ಮುಷ್ಕರ, ಚಳುವಳಿ, ಪ್ರದರ್ಶನ, ಕ್ರಾಂತಿ, ಬಂಡಾಯ, ಹಕ್ಕೊತ್ತಾಯ, ಸತ್ಯಾಗ್ರಹ ಮುಂತಾದವುಗಳಿಗೆ ಎಡೆಮಾಡಿಕೊಡುತ್ತದೆ. ಅಲ್ಲಿಂದ ಅಶಾಂತಿ, ಹೊಡೆದಾಟ, ಬೀದಿ ದೀಪ ಒಡೆಯುವುದು, ಬಸ್ಸುಗಳನ್ನು ಸುಡುವುದು, ಸಂಬಂಧಪಟ್ಟವರನ್ನು ಫೇಕಾಫ್ ಮಾಡುವುದು ಮುಂತಾದ ಚಟುವಟಿಕೆಗಳಲ್ಲಿ ಮುಂದುವರೆಯುತ್ತದೆ. ಪ್ರತಿಕ್ರಿಯೆ ರೂಪದಲ್ಲಿ ಪೊಲೀಸರಿಂದ ಲಾಠಿಚಾರ್ಜ್, ಗಾಳಿಯಲ್ಲಿ ಗುಂಡು, 144 ಕಲಂನ ಅನ್ವಯಗೊಳಿಸುವುದು. ಗೋಲಿಬಾರ್ ಮುಂತಾದವುಗಳಲ್ಲಿ ಪರ್ಯಾವಸನಗೊಳ್ಳುತ್ತದೆ. ವಿಚಾರಣೆ, ನ್ಯಾಯಾಂಗ ತನಿಖೆ ಮುಂತಾದವುಗಳು ಅವುಗಳನ್ನು ಹಿಂಬಾಲಿಸುತ್ತದೆ. ಇಂತಹ ಚಟುವಟಿಕೆಗಳಿಂದ ಜನಸಾಮಾನ್ಯ ಬೇಸತ್ತುಹೋಗಿದ್ದಾರೆ. ಇದಕ್ಕೆ ವಿರುದ್ಧವಾಗಿ ನಗರ ಪ್ರದೇಶಗಳಲ್ಲಿ ವಿರಾಮ-ವಿಹಾರಗಳಿಗೆ ಅವಕಾಶ ಸಾಕಷ್ಟು ಇಲ್ಲ ಎಂಬ ಅಭಿಪ್ರಾಯ ನಾಗರೀಕರಲ್ಲಿದೆ. ನಗರ ಪ್ರದೇಶಗಳಲ್ಲಿ ವಾಚನಾಲಯಗಳು ಅಗತ್ಯ ಪ್ರಮಾಣದಲ್ಲಿ ಇಲ್ಲವೆಂಬ ಅಭಿಪ್ರಾಯವಿದೆ. (ಗ್ರಾಮ ಸಮುದಾಯಗಳಲ್ಲಿ ವಾಚನಾಲಯಗಳು ತುಂಬಾ ಅಪರೂಪ). ಮಕ್ಕಳಿಗೆ ಆಟವಾಡಲು ಸುಸಜ್ಜಿತ ಕ್ರೀಡಾಂಗಣಗಳಿಲ್ಲ. ಕ್ರೀಡಾಂಗಣಗಳಿವೆ, ಆದರೆ ಇಚ್ಛಿತ ಪ್ರಮಾಣದಲ್ಲಿಲ್ಲ. ಮಕ್ಕಳು ರಸ್ತೆಯಲ್ಲಿ ಆಟವಾಡುವುದು ಸಾಮಾನ್ಯ ದೃಶ್ಯವಾಗಿದೆ. ನಗರ ಪ್ರದೇಶಗಳಲ್ಲಿ ಬೇಕಾಗುವಷ್ಟು ಉದ್ಯಾನಗಳಲ್ಲಿ ವೃದ್ಧರಿಗೆ, ಜೋಡಿಗಳಿಗೆ, ಇತರರಿಗೆ ತಮ್ಮ ವಿರಾಮ ಸಮಯವನ್ನು ಕಳೆಯುವುದು ಕಷ್ಟವಾಗುತ್ತಿದೆ. ಬೆಂಗಳೂರಿನಲ್ಲಿ ಇತ್ತೀಚೆಗೆ ಉದ್ಯಾನಗಳು ಹೆಚ್ಚುತ್ತಿದೆ ಎಂಬ ಮಾತಿದೆ. ಆ ಅದೃಷ್ಟ ಇತರೆ ನಗರಗಳಿಗೆ ಅಷ್ಟಾಗಿ ಇಲ್ಲ ಎಂದು ಹೇಳಲಾಗುತ್ತಿದೆ.1 ಬುಡಕಟ್ಟು ಸಮುದಾಯಗಳ ಸಮಸ್ಯೆಗಳು ಗ್ರಾಮೀಣ ಹಾಗೂ ನಗರ ಸಮುದಾಯಗಳಿಗೆ ಇರುವಂತೆ ಬುಡಕಟ್ಟು ಸಮುದಾಯಗಳಿಗೆ ತಮ್ಮದೇ ಆದ ಸಮಸ್ಯೆಗಳಿರುತ್ತದೆ ಬುಡಕಟ್ಟು ಸಮುದಾಯಗಳ ಸಮಸ್ಯೆಗಳನ್ನು ಆ ಸಮುದಾಯಗಳ ಲಕ್ಷಣಗಳ ಹಿನ್ನೆಲೆಯಲ್ಲಿ ಗ್ರಹಿಸಬೇಕಾಗುತ್ತದೆ. ಬುಡಕಟ್ಟು ಸಮುದಾಯಗಳು ಸಾಮಾನ್ಯವಾಗಿ ಗುಡ್ಡಗಾಡು ಪ್ರದೇಶಗಳಲ್ಲಿ ಕಣಿವೆ ಕಂದರಗಳಲ್ಲಿ ನಾಗರೀಕತೆಯಿಂದ ದೂರವಿದ್ದು ತಮ್ಮದೇ ಆದ ಪ್ರತ್ಯೇಕ ಜೀವನವನ್ನು ಸಾಗಿಸುತ್ತಾರೆ. ಅವರು ತಮಗೆ ವಿಶಿಷ್ಟವಾದ ಸಾಂಪ್ರದಾಯಿಕ ವೃತ್ತಿ, ಆರ್ಥಿಕ ವ್ಯವಸ್ಥೆ ಹೊಂದಿದವರಾಗಿರುತ್ತಾರೆ. ಅವರು ತಮ್ಮದೇ ಆದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಜೀವನ ಪದ್ಧತಿಯನ್ನು ರೂಪಿಸಿಕೊಂಡಿರುತ್ತಾರೆ. ಹಾಗಾಗಿ ಅವರ ಸಮಸ್ಯೆಗಳೂ ಅವರ ಆರ್ಥಿಕ ವ್ಯವಸ್ಥೆ ಸಂಸ್ಕೃತಿ ಹಾಗೂ ಜೀವನ ಶೈಲಿಯನ್ನು ಅವಲಂಬಿಸಿರುತ್ತವೆ. ಬುಡಕಟ್ಟು ಸಮುದಾಯದ ಸದಸ್ಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಬಹುದಾಗಿದೆ ಮೊದಲನೆ ಗುಂಪಿಗೆ ಅವರು ಬೇರೆ ಸಮುದಾಯದ ಸದಸ್ಯ (ಗ್ರಾಮೀಣ ಹಾಗೂ ನಗರ)ರೊಡನೆ ಸೇರಿ ಎದುರಿಸುವ ಸಮಸ್ಯೆಗಳು ಜನಸಂಖ್ಯೆ ಏರಿಕೆ, ನಿರಕ್ಷರತೆ, ಅನಾರೋಗ್ಯ, ಮಹಿಳಾ ಅಸಮಾನತೆ, ನಿರುದ್ಯೋಗ, ವಸತಿ, ಬಾಲಕಾರ್ಮಿಕರು, ರಸ್ತೆಗಳು ಹಾಗೂ ನಾಗರೀಕ ಸೌಲಭ್ಯಗಳ ಕೊರತೆ ಮುಂತಾದವುಗಳನ್ನು ಸೇರಿಸಬಹುದಾಗಿದೆ. ಈ ಸಮಸ್ಯೆಗಳ ವ್ಯಾಪ್ತಿಯನ್ನು ಈಗಾಗಲೇ ನೋಡಿದ್ದೇವೆ. ಇನ್ನೊಂದು ಗುಂಪಿನ ಸಮಸ್ಯೆಗಳು ನಿಶ್ಚಿತ ರೂಪದಲ್ಲಿ ಬುಡಕಟ್ಟು ಸಮುದಾಯಗಳು ಮಾತ್ರ ಎದುರಿಸುವಂತಹ ಸಮಸ್ಯೆಗಳು ಪ್ರತ್ಯೇಕತೆ, ಮೂಢನಂಬಿಕೆಗಳು, ಸಂಪ್ರದಾಯ ಶರಣತೆ, ಮದ್ಯಪಾನ, ಕಳ್ಳಬಟ್ಟಿ, ಸಾಂಸ್ಕೃತಿಕ ಕ್ಷೇತ್ರದ ಸಮಸ್ಯೆಗಳು, ವ್ಯಭಿಚಾರ, ಆರ್ಥಿಕ ಸ್ಥಿತಿಗತಿ ಮುಂತಾದವುಗಳನ್ನು ಈ ಗುಂಪಿಗೆ ಸೇರಿಸಬಹುದಾಗಿದೆ. ಅವುಗಳನ್ನು ಒಂದೊಂದಾಗಿ ನೋಡಬಹುದಾಗಿದೆ. 1. ಪ್ರತ್ಯೇಕತೆ:- ಬುಡಕಟ್ಟು ಜನಾಂಗದ ಸದಸ್ಯರು ಗುಡ್ಡ ಬೆಟ್ಟಗಳಲ್ಲಿ ಗಿರಿ ಕಂದರಗಳಲ್ಲಿ ನದಿ-ಹಳ್ಳಗಳ ತಟೆಗಳಲ್ಲಿ ವಾಸ ಮಾಡುತ್ತಾರೆ. ಪರಿಣಾಮವಾಗಿ ಅವರು ನಾಗರೀಕತೆಯಿಂದ, ಆಧುನೀಕರಣದಿಂದ ದೂರ ಉಳಿಯುವಂತಾಗಿದೆ. ಹಾಗೇನೆ ಅವರು ಶಿಕ್ಷಣ, ಆರೋಗ್ಯ ಮುಂತಾದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಇದಕ್ಕೆ ಬಹುಮುಖ್ಯ ಕಾರಣ ಅವರು ತಮ್ಮ ಸಾಂಸ್ಕೃತಿಕ ಅಂತರವನ್ನು ಕಾಪಾಡಿಕೊಳ್ಳುವುದು. ಆದರೆ ಇವೆಲ್ಲದರ ಫಲರೂಪವಾಗಿ ಅವರು ನವೀನ ಸಮಾಜದಿಂದ ಪ್ರತ್ಯೇಕತೆಯನ್ನು ಅನುಭವಿಸುವಂತಾಗಿದೆ. ಈ ಪ್ರತ್ಯೇಕತೆ ಅವರ ಆರ್ಥಿಕ ಸಾಮಾಜಿಕ ಶೈಕ್ಷಣಿಕ ಪ್ರಗತಿಗೆ ಮಾರಕವಾಗಿದೆ ಕೆಲವು ಬುಡಕಟ್ಟು ಸಮುದಾಯಗಳ ಸದಸ್ಯರು ಇನ್ನೂ ಹೊರ ಜಗತ್ತಿಗೆ ನಾಗರೀಕ ಪ್ರಪಂಚಕ್ಕೆ ಪರಿಚಿತರಾಗಿಲ್ಲ. ತಮ್ಮ ಸಾಂಪ್ರದಾಯಿಕ ವೃತ್ತಿಗಳಿಂದ ಹೊರಬಂದು, ಬೇರೆ ಬೇರೆ ವೃತ್ತಿಗಳನ್ನು ಗಳಿಸಲು ಉತ್ಸುಕರಾಗಿಲ್ಲ. ತಮ್ಮ ಹಟ್ಟಿ, ಹಾಡಿ, ತಾಂಡಗಳಿಂದ ಹೊರಬಂದು, ಶಿಕ್ಷಣ ಪಡೆದು, ಉತ್ತಮ ವೃತ್ತಿಗಳನ್ನು ಹಿಡಿದು ಹಣ ಸಂಪಾದಿಸುತ್ತಿಲ್ಲ. ಬುಡಕಟ್ಟು ಜನಾಂಗಗಳ ಸದಸ್ಯರು ಪ್ರತ್ಯೇಕತೆಯನ್ನು ಅನುಭವಿಸುತ್ತಿರುವುದರಿಂದ ಅವರಿಗೆ ನಿತ್ಯ ಬಳಕೆಯ ವಸ್ತುಗಳು ಸುಲಭವಾಗಿ ಸಿಗುತ್ತಿಲ್ಲ. ತಮ್ಮ ದೈನಂದಿನ ಅವಶ್ಯಕತೆಗಳಿಗೆ ಹತ್ತಿರವಿರುವ ಗ್ರಾಮ ಪಟ್ಟಣಗಳನ್ನು ಅವಲಂಬಿಸುವಂತಾಗಿದೆ. 2. ಮೂಢನಂಬಿಕೆ, ಅಂಧ ಶ್ರದ್ಧೆ, ಸಾಂಸ್ಕೃತಿಕ ಭಿನ್ನತೆ:- ಬುಡಕಟ್ಟು ಸಮುದಾಯಗಳು ಧಾರ್ಮಿಕ ಹಾಗೂ ಸಾಂಸ್ಕೃತಿಕ ಹಿನ್ನೆಲೆಯಲ್ಲಿ ರೂಪಗೊಂಡಂತಹವು ಹೆಚ್ಚಿನ ಬುಡಕಟ್ಟುಗಳಿಗೆ ಸಾಂಸ್ಕೃತಿಕ ನಾಯಕರಿರುತ್ತಾರೆ. ಕೆಲವು ಬುಡಕಟ್ಟು ಸಮುದಾಯಗಳನ್ನು ಈಗಲೂ ಆ ಸಮುದಾಯದ ಹಿಂದಿನ ಇಲ್ಲವೇ ಈಗಿನ ನಾಯಕರೊಡನೆ ಸೇರಿಸಿ ಗುರುತಿಸುವುದುಂಟು. ಹಾಗೆಯೇ ಪ್ರತಿಯೊಂದು ಬುಡಕಟ್ಟು ಜನಾಂಗ, ತಮ್ಮದೇ ಆದ ಧಾರ್ಮಿಕ ಪದ್ಧತಿಗಳು ತಮ್ಮ ಔಚಿತ್ಯವನ್ನು ಕಳೆದುಕೊಳ್ಳುತ್ತವೆ. ಪ್ರಾದೇಶಿಕ ಭಿನ್ನತೆಯಿಂದಲೊ, ಅಂದಿನ ಸಾಂಸ್ಕೃತಿಕ ನಾಯಕರ ಪ್ರಭಾವದಿಂದಲೊ, ಚಿಂತನೆಯಿಂದಲೊ ಕೆಲವು ಸಂಪ್ರದಾಯ ಪದ್ಧತಿಗಳು ಆಚರಣೆಗೆ ಬಂದಿರುತ್ತವೆ. ಕೆಲವು ವರ್ಷಗಳ ಶತಮಾನಗಳ ನಂತರ ಆ ಸಂಪ್ರದಾಯ ಪದ್ಧತಿಗಳು ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತವೆ. ಆದರೆ ಆಯಾ ಸಮುದಾಯಗಳ ಸದಸ್ಯರು ಅವುಗಳನ್ನು ತಮ್ಮ ಸಾಂಸ್ಕೃತಿಕ ನಾಯಕರ ಮೇಲೆ ಇಲ್ಲವೇ ತಮ್ಮ ಈಗಿನ ಸಮುದಾಯದ ನಾಯಕ, ಹಿರಿಯರ ಮೇಲೆ ಇರುವ ಗೌರವದಿಂದ ಆಚರಿಸಿಕೊಂಡು ಬರುತ್ತಾರೆ. ಇಂತಹವುಗಳಲ್ಲಿ ಕೆಲವು ಮೂಢನಂಬಿಕೆಗಳಾಗಿ, ಅಂಧ ಶ್ರದ್ಧೆಗಳಾಗಿ ಉಳಿದುಕೊಂಡುಬಿಡುತ್ತವೆ. ಸಮುದಾಯದ ಸದಸ್ಯರಿಗೆ ರೋಗ ಬಂದಾಗ ವೈದ್ಯರನ್ನು ಕಾಣದೆ, ಔಷಧೋಪಚಾರ ಮಾಡಿಸದೆ ದೇವರಿಗೆ ಹರಕೆ ಹೊರುವುದು, ದೇವರಿದ್ದಾನೆಂದು ನಂಬುವವರು ಇದನ್ನು ವಿರೋಧಿಸಲಾರರು. ಆದರೆ ರೋಗ ಬಂದಾಗ ಮೊದಲು ಆಗಬೇಕಾದದ್ದು, ವೈದ್ಯರಿಂದ ತಪಾಸಣೆ ಮತ್ತು ಚಿಕಿತ್ಸೆ ಜೊತೆ ಜೊತೆಗೆ ದೇವರ ಮೊರೆ ಆದರೆ ಹಾಗಾಗುವುದಿಲ್ಲ. ಬುಡಕಟ್ಟು ಸಮುದಾಯಗಳ ಸದಸ್ಯರ ಅನಕ್ಷರತೆ, ಅಜ್ಞಾನ, ಆರೋಗ್ಯ ಸೌಲಭ್ಯಗಳ ಹಾಗೂ ಸಂಚಾರ ಸೌಲಭ್ಯಗಳ ಕೊರತೆ, ಬಡತನ, ದುರಂತಗಳು, ಸಮುದಾಯದಲ್ಲಾದ ಸಾವು, ನೋವುಗಳು ಮುಂತಾದ ಅಂಶಗಳು ಅವರ ಮೂಢನಂಬಿಕೆಗೆ, ಅಂಧಶ್ರದ್ಧೆಗೆ ಕಾರಣ ಆಗಿರಬಹುದಾಗಿದೆ. ಶಿಕ್ಷಣ, ಆರ್ಥಿಕ ಪ್ರಗತಿ, ನಾಗರೀಕ ಸೌಲಭ್ಯಗಳ ಲಭ್ಯತೆ, ಅಭ್ಯುದಯದ ಮನೋಭಾವ ಮುಂತಾದವುಗಳಿಂದ ಮೂಢನಂಬಿಕೆಗಳನ್ನು ದೂರಮಾಡಬಹುದಾಗಿದೆ. 3. ಮದ್ಯಪಾನ:- ಗ್ರಾಮೀಣ ಸಮುದಾಯಗಳ ಸಮಸ್ಯೆಗಳನ್ನು ಚರ್ಚಿಸುವಾಗ ಮದ್ಯಪಾನದ ವ್ಯಾಪ್ತಿ, ಅದು ಮದ್ಯವ್ಯಸನಿಯ ಮೇಲೆ ಆ ಕುಟುಂಬದ ಮೇಲೆ ಹಾಗೂ ಸಮುದಾಯದ ಮೇಲೆ ಮಾಡುವ ಪರಿಣಾಮ ಮತ್ತು ಮದ್ಯಪಾನವನ್ನು ತಡೆಗಟ್ಟಲು ಕೈಕೊಳ್ಳಬೇಕಾದ ಕಾರ್ಯಗಳು ಮುಂತಾದವುಗಳ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸಲಾಗಿದೆ. ಇಲ್ಲಿ ಮದ್ಯಕ್ಕೂ ಮತ್ತು ಕೆಲವು ಬುಡಕಟ್ಟು ಜನಾಂಗಗಳಿಗೂ ಇರುವ ಸಂಬಂಧವನ್ನು ತಿಳಿಯಬೇಕಾಗಿದೆ. ಕೆಲವು ಬುಡಕಟ್ಟುಗಳಿಗೂ ಹಾಗೂ ಮದ್ಯಪಾನಕ್ಕೂ ಒಂದು ಅವಿನಾಭಾವ ನಂಟಿದೆ. ಆ ನಂಟಿಗೆ ಹಲವು ಕಾರಣಗಳನ್ನು ಕೊಡಬಹುದಾಗಿದೆ. ಮೊದಲನೆಯದಾಗಿ ಕೆಲವು ಬುಡಕಟ್ಟು ಜನಾಂಗಗಳಲ್ಲಿ ಮದ್ಯಪಾನ ಅವರ ಸಾಂಸ್ಕೃತಿಕ ಬದುಕಿನ ಅಂಗವೇ ಆಗಿದೆ. ಹಬ್ಬ ಹರಿದಿನಗಳು, ತೇರು ಜಾತ್ರೆಗಳು, ಮದುವೆ, ಮುಂಜಿ, ಅಂತ್ಯ ಸಂಸ್ಕಾರ ಮುಂತಾದ ಸಂದರ್ಭಗಳಲ್ಲಿ ಮದ್ಯಪಾನ ಮಾಡುವುದು ಒಂದು ಶಿಷ್ಟಾಚಾರವೇ ಆಗಿದೆ. ಮನೆಗೆ, ಹಟ್ಟಿಗೆ, ತಾಂಡಕ್ಕೆ, ಬೀಗರು ಹಿರಿಯರು ಬಂದಾಗ, ಪಂಚಾಯಿತಿ ಹೇಳಲು ಪರಿಚಿತರು ಬಂದಾಗ ಅವರಿಗೆ ಮದ್ಯಕೊಡುವ, ಊಟಕ್ಕೆ ಹಾಕುವ ಹಾಗೂ ಎಲೆ ಅಡಿಕೆ ತಾಂಬೂಲ ಕೊಡುವ ಪದ್ಧತಿಯೇ ಇದೆ. ಹಾಗೆ ಮಾಡದಿದ್ದರೆ ಅಂತಹ ಸದಸ್ಯನನ್ನು ಯಾರೂ ಗೌರವಿಸುವುದಿಲ್ಲ. ಆದರೆ ಈ ಸಂಪ್ರದಾಯವನ್ನು ತಮ್ಮ ಕೆಟ್ಟ ಕುಡಿತದ ಚಟಕ್ಕೆ ಬಳಸಿಕೊಂಡು ಬುಡಕಟ್ಟು ಸಮುದಾಯದ ಸದಸ್ಯರು ಹಾಳಾಗುತ್ತಿದ್ದಾರೆ. ತಮ್ಮ ಸಂಸಾರಗಳನ್ನು ಬೀದಿಗೆ ತರುತ್ತಿದ್ದಾರೆ. ಕೆಲವು ಬುಡಕಟ್ಟು ಸಮುದಾಯದ ನಾಯಕರು ಹದಿನೈದನೇ ಶತಮಾನದ ತನಕ ತಾವು ಸಾಕಿದ ನೂರಾರು ದನಗಳ ಬೆನ್ನ ಮೇಲೆ ಸಾಂಬಾರು ಪದಾರ್ಥಗಳು, ಉಪ್ಪು, ಶೃಂಗಾರ ಸಾಧನಗಳನ್ನು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಒಂದು ನಾಡಿನಿಂದ ಇನ್ನೊಂದು ನಾಡಿಗೆ ಸಾಗಿಸಿ, ಮಾರಾಟ ಮಾಡಿ ತಮ್ಮ ಜೀವನವನ್ನು ನಿರ್ವಹಿಸುತ್ತಿದ್ದರು. ಬ್ರಿಟೀಷರು ಈ ದೇಶವನ್ನು ಪ್ರವೇಶಿಸಿದ ಮೇಲೆ ರೈಲು ಮಾರ್ಗಗಳನ್ನು ಹಾಕಿದ ಮೇಲೆ, ಮೋಟಾರು ವಾಹನಗಳನ್ನು ಓಡಿಸಲು ಪ್ರಾರಂಭಿಸಿದ ಮೇಲೆ ಈ ಬುಡಕಟ್ಟು ಸಮುದಾಯಗಳ ವಾಸಿಗಳು ತಮ್ಮ ವೃತ್ತಿಯನ್ನು ಬಲವಂತವಾಗಿ ಬದಲಾಯಿಸಬೇಕಾಯಿತು. ಆಗ ಕೆಲವರು ಕೃಷಿ ಮತ್ತು ಕೃಷಿ ಸಂಬಂಧಿ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಅಂತಹ ಸಮಯಗಳಲ್ಲಿ ಕೆಲ ಬುಡಕಟ್ಟು ಜನಾಂಗದ ಸದಸ್ಯರು ಅನಧಿಕೃತ ಮದ್ಯ ತಯಾರಿಸಲು ಮುಂದಾದರು. ಇದೇ ಅಭ್ಯಾಸ ಮುಂಬರುವ ದಿನಗಳಲ್ಲಿ ಆಯಾ ಸಮುದಾಯಗಳ ಸಮಸ್ಯೆಯಾಗಿ ಪರಿವರ್ತನೆಗೊಂಡಿತು. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಮೇಲೆ ಹಾಗೂ ಸಮಾಜ ಸುಧಾರಣಾ ಕಾರ್ಯಕ್ರಮಗಳ ಫಲರೂಪವಾಗಿ ಕೆಲವು ರಾಜ್ಯಗಳಲ್ಲಿ ಪಾನನಿಷೇಧ ಜಾರಿಗೆ ಬಂತು. ಅಲ್ಲಿಯವರೆಗೆ ಮದ್ಯಪಾನ ಮಾಡುತ್ತಿದ್ದವರಿಗೆ ತೊಂದರೆ ಪ್ರಾರಂಭವಾಯಿತು. ಅವರು ತಮ್ಮ ದೈನಂದಿನ ಕುಡಿತಕ್ಕೆ ಅನಧಿಕೃತ ಕಳ್ಳಭಟ್ಟಿ ಮದ್ಯವನ್ನು ಅವಲಂಬಿಸಿದರು. ಹಾಗೆ ಅಧಿಕೃತವಾಗಿ ದೇಶಿ ಮದ್ಯ ತಯಾರಿಸುತ್ತಿದ್ದ ಬುಡಕಟ್ಟು ಜನಾಂಗದವರು ತಮ್ಮ ಉತ್ಪಾದನೆಯನ್ನು ಅನಧಿಕೃತವಾಗಿ ತಯಾರಿಸಲು ಪ್ರಾರಂಭಿಸಿದರು. ಅದು ಮುಂದಿನ ದಿನಗಳಲ್ಲಿ ಹೆಚ್ಚಿನ ತೊಂದರೆಗೆ ಕಾರಣವಾಯಿತು. ಇವೆಲ್ಲವುಗಳ ಪರಿನಾಮವಾಗಿ ಬುಡಕಟ್ಟು ಸಮುದಾಯದ ಸದಸ್ಯರು ಮದ್ಯಪಾನವನ್ನು ತಮ್ಮ ಬದುಕಿನ ಒಂದು ಭಾಗವನ್ನಾಗಿ ಮಾಡಿಕೊಂಡರು. ಈಗ ಕಳ್ಳಭಟ್ಟಿ ಮದ್ಯ ಇಲ್ಲ. ಆದರೆ ಮಾರುಕಟ್ಟೆಯಲ್ಲಿ ಅದೇ ಬೆಲೆಗೆ ಬೇರೆ ಮದ್ಯ ಸಿಗುತ್ತದೆ. ಬಡತನ, ಅನಕ್ಷರತೆ, ಅಜ್ಞಾನ, ಆಹಾರದಲ್ಲಿ ಪೌಷ್ಟಿಕಾಂಶಗಳ ಕೊರತೆ, ಮದ್ಯದ ಲಭ್ಯತೆ, ವೃತ್ತಿ ಸಭ್ಯತೆ ಮುಂತಾದ ಕಾರಣಗಳಿಗಾಗಿ ಬುಡಕಟ್ಟು ಜನಾಂಗದ ಸದಸ್ಯರು ಈ ಕೆಟ್ಟ ಚಟಕ್ಕೆ ಬಲಿಯಾಗುತ್ತಿದ್ದಾರೆ. ಇದೊಂದು ಗಂಭೀರ ಸಮಸ್ಯೆಯಾಗಿದ್ದು, ಸರಕಾರ ಹಾಗೂ ಇಡೀ ಸಮಾಜವೇ ಆ ಬಗ್ಗೆ ಚಿಂತಿಸುವಂತಾಗಿದೆ. 4. ಸಾಂಸ್ಕೃತಿಕ ಸಾಮಾನ್ಯೀಕರಣ:- ಬುಡಕಟ್ಟು ಸಮುದಾಯದ ಸದಸ್ಯರಿಗೆ ತಮ್ಮದೇ ಆದ ಸಾಂಸ್ಕೃತಿಕ ಅಸ್ಮಿತೆ ಇದೆ. ಪ್ರತಿಯೊಂದು ಬುಡಕಟ್ಟು ಸಮುದಾಯದವರಿಗೂ ಅವರದೇ ಆದ ಹಬ್ಬ-ಹುಣ್ಣಿಮೆ, ದೇವರು-ದಿಂಡರು, ತೇರು-ಜಾತ್ರೆ, ಹಾಡು-ಕುಣಿತ ಮುಂತಾದ ಸಾಂಸ್ಕೃತಿಕ ಅಂಶಗಳ ಹಿನ್ನೆಲೆ ಇದೆ. ಅದರಂತೆ ಅವರು ಆಯಾ ದಿನಗಳಲ್ಲಿ ಅವುಗಳನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ನಾಗರೀಕತೆಯ ಸಂಪರ್ಕ ಹಾಗೂ ಸರ್ಕಾರಿ ಅಧಿಕಾರಿಗಳ ಸಂಪರ್ಕ ಮುಂತಾದವುಗಳಿಂದ ಅವರು ತಮ್ಮ ಸಾಂಸ್ಕೃತಿಕ ವಿಶೇಷತೆಯನ್ನು, ಸಾಂಸ್ಕೃತಿಕ ಅಸ್ಮಿತೆಯನ್ನು ಕಳೆದುಕೊಳ್ಳುತ್ತಿದ್ದಾರೆ ಎಂಬ ಕೊರಗಿದೆ. ಬುಡಕಟ್ಟು ಜನಾಂಗದ ಸದಸ್ಯರು ಈಗ ನಾಗರೀಕ ಸಂಪರ್ಕವಿಲ್ಲದೆ ಚೆನ್ನಾಗಿ ಜೀವಿಸಲಾರಲು ಎಂಬ ಹಂತಕ್ಕೆ ತಲುಪಿದ್ದಾರೆ. ಅವರೂ ಶಿಕ್ಷಣ ಪಡೆಯುತ್ತಿದ್ದಾರೆ. ದಿನಪತ್ರಿಕೆ, ನಿಯತಕಾಲಿಕಗಳನ್ನು ಓದುತ್ತಾರೆ. ದೂರದರ್ಶನವನ್ನು ನೋಡುತ್ತಾರೆ. ಸರಕಾರಿ ಅಧಿಕಾರಿಗಳನ್ನು ಭೇಟಿಯಾಗುತ್ತಾರೆ. ತಮ್ಮ ಸಮುದಾಯಗಳ ಹಾಡು-ಕುಣಿತಗಳನ್ನು ನಾಡ ಉತ್ಸವ, ದಸರಾ ಉತ್ಸವ, ಹಂಪಿ ಉತ್ಸವ, ಸಾಹಿತ್ಯ ಸಮ್ಮೇಳನ, ಸಂಸ್ಕೃತಿ ಉತ್ಸವ, ನುಡಿ ಹಬ್ಬ ಮುಂತಾದ ಉತ್ಸವ, ಸಭೆ ಸಮಾರಂಭಗಳ ಸಮಯಗಳಲ್ಲಿ ಪ್ರದರ್ಶಿಸುತ್ತಾರೆ. ಹಾಗೆ ಮಾಡುವಾಗ ಸಮಯ-ಸಂದರ್ಭಕ್ಕೆ ತಕ್ಕಂತೆ ಹಾಡು-ಕುಣಿತಗಳನ್ನು ಮಾರ್ಪಡಿಸಿಕೊಳ್ಳುತ್ತಾರೆ. ಕೆಲವು ಅಂಶಗಳನ್ನು, ಸೂಕ್ಷ್ಮ ಅಂಶಗಳನ್ನು ಬಿಟ್ಟುಬಿಡುತ್ತಾರೆ. ದಿನಕಳೆದಂತೆ ಆ ಸಾಂಸ್ಕೃತಿಕ ಅಂಶಗಳೇ, ಸೂಕ್ಷ್ಮಗಳೇ ಅವರ ಸ್ಮೃತಿಪಟಲದಿಂದ ಜಾರಿಹೋಗುತ್ತವೆ. ಆಧುನೀಕರಣದ ಹಾಡು-ಕುಣಿತದ ಶೈಲಿಗಳೇ ಉಳಿದುಕೊಂಡು ಬಿಡುತ್ತವೆ. ಇದು ಸಾಂಸ್ಕೃತಿಕ ದುರ್ಗತಿಗೆ ಕಾರಣವಾಗುತ್ತದೆ. ಇದು ಅವರಿಗೆ ನಾಗರೀಕ ಸಂಪರ್ಕದಿಂದ ಉಂಟಾದ ದುಷ್ಪರಿಣಾಮಗಳಲ್ಲಿ ಒಂದು. 5. ವೃತ್ತಿಯಲ್ಲಿ ಬದಲಾವಣೆ ಮತ್ತು ಆರ್ಥಿಕ ಸ್ಥಿತಿಗತಿ:- ಅನೇಕ ಬುಡಕಟ್ಟು ಸಮುದಾಯಗಳ ಸದಸ್ಯರು ಗುಡ್ಡ, ಬೆಟ್ಟ, ಹಳ್ಳ ಕಂದರಗಳಲ್ಲಿ ವಾಸಮಾಡುತ್ತಿದ್ದ ಹಿನ್ನೆಲೆಯಲ್ಲಿ, ಅಲ್ಲಿ ಸಿಗುವ ಜೇನು, ಎಲೆ, ತೊಗಟೆ, ಕಾಯಿ, ಹಣ್ಣು, ಹೂವು, ಕಾಡುಪ್ರಾಣಿಗಳ ಮಾಂಸ, ಕೋಡು, ಕೊಂಬು, ಗರಿ, ಚರ್ಮ, ಹುಲ್ಲು, ಕಟ್ಟಿಗೆ, ಕಲ್ಲು ಮುಂತಾದವುಗಳನ್ನು ಸಂಗ್ರಹಿಸುವುದು, ಅವುಗಳನ್ನು ಸಾಗಿಸುವುದು, (ಕೆಲವನ್ನು ತಾವು ಬಳಸುತ್ತಿದ್ದರು) ಮತ್ತು ಮಾರುವುದು ಮುಂತಾದ ವೃತ್ತಿಗಳನ್ನು ನಿರ್ವಹಿಸುತ್ತಿದ್ದರು. ಕೆಲ ಸಮುದಾಯದ ಸದಸ್ಯರು ರಾಜರಿಗೆ, ಅಧಿಕಾರಿಗಳಿಗೆ, ಜನಸಾಮಾನ್ಯರಿಗೆ ಬೇಕಾದ ಸಾಂಬರು ಪದಾರ್ಥಗಳು, ಉಪ್ಪು, ಶೃಂಗಾರ ಸಾಧನಗಳನ್ನು, ತಾವು ಸಾಕಿದ ದನಗಳ ಬೆನ್ನ ಮೇಲೆ ಹೇರಿಕೊಂಡು ಹೋಗಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ಬ್ರಿಟೀಷರ ಆಗಮನದ ನಂತರ ರೈಲುಮಾರ್ಗ, ರಸ್ತೆ, ವಾಹನ ಸಂಚಾರ ಮುಂತಾದವುಗಳು ಪ್ರಾರಂಭಗೊಂಡ ಮೇಲೆ ತಮ್ಮ ಅನೂಚಾನ ವೃತ್ತಿಗಳನ್ನು ಬಿಟ್ಟು, ಅಲ್ಲಲ್ಲೇ ನೆಲೆನಿಂತು ವ್ಯವಸಾಯವನ್ನು ಮಾಡಲು ಪ್ರಾರಂಭಿಸಿದರು. ವ್ಯವಸಾಯದಲ್ಲಿ ಅವರಿಗೆ ಅನುಭವ ಇಲ್ಲದಿದ್ದರೂ ವೃತಿಯನ್ನು ಪ್ರಾರಂಭಿಸಿ ಅನುಭವವನ್ನು ಪಡೆದುಕೊಳ್ಳತೊಡಗಿದರು. ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯ ನಂತರ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಅರಣ್ಯ ಪ್ರದೇಶಗಳನ್ನು ತಮ್ಮ ಸ್ವಾಧೀನ ಮಾಡಿಕೊಂಡು, ಅಧಿಕಾರಿಗಳನ್ನು ನೇಮಿಸಿಕೊಂಡು, ರಕ್ಷಣೆಯನ್ನು ಕೊಡಲು ಪ್ರಾರಂಭಿಸಿದ ಮೇಲೆ ಕೆಲವು ಬುಡಕಟ್ಟು ಜನಾಂಗಗಳನ್ನು ಒಕ್ಕಲೆಬ್ಬಿಸಿದರು. ಆ ಪ್ರಕ್ರಿಯೆ ಆಗಾಗ್ಗೆ ಈಗಲೂ ನಡೆಯುತ್ತಿರುತ್ತದೆ. ಹಾಗಾಗಿ ಅವರು ತಮ್ಮ ವೃತ್ತಿಗಳನ್ನು ಬಲವಂತವಾಗಿ ಬದಲಾಯಿಸಿಕೊಂಡರು. ಕೆಲವರು ಕಾಡಿನಿಂದ ನಾಡಿಗೆ ಬಂದು ಕೃಷಿ, ಪಶು ಸಂಗೋಪನೆ ಮುಂತಾದ ವೃತ್ತಿಗಳನ್ನು ಪ್ರಾರಂಭಿಸಿದರು. ಕೆಲವರು ಕೂಲಿ ಕೆಲಸ ಮಾಡಲು ಉದ್ಯುಕ್ತರಾದರು. ಇದರಿಂದ ಅವರ ಮೂಲ ವೃತ್ತಿಗಳು ಬದಲಾದವು, ಕೆಲವು ವೃತ್ತಿಗಳು ಪರಿಷ್ಕರಣಗೊಂಡವು. ಇದು ಅವರ ಆರ್ಥಿಕ ಪರಿಸ್ಥಿತಿಯ ಮೇಲೆ ಪ್ರಭಾವ ಬೀರಿದವು. 6. ಆರೋಗ್ಯ:- ಬುಡಕಟ್ಟು ಜನರು ಸ್ವಚ್ಛ ಪರಿಸರದಲ್ಲಿ ಬೆಳೆದವರಾಗಿದ್ದರು. ಅವರ ಆಹಾರ ಪದ್ಧತಿ, ಜೀವನಶೈಲಿ ತುಂಬಾ ಭಿನ್ನವಾಗಿತ್ತು ಮತ್ತು ಸಮಾಧಾನಕರವಾಗಿತ್ತು. ಹಾಗಾಗಿ ಅವರಿಗೆ ರೋಗ-ರುಜಿನಗಳು ಹೆಚ್ಚಾಗಿ ಬಾಧಿಸುತ್ತಿರಲಿಲ್ಲ. ಆದರೆ ಅವರಿಗೆ ನಾಗರೀಕತೆಯ ಪರಿಚಯ ಆದಂತೆಲ್ಲಾ, ಹೈಬ್ರಿಡ್ ತಳಿಯ ಆಹಾರ ಸೇವಿಸಿದಂತೆಲ್ಲಾ, ಗುಣಮಟ್ಟವಲ್ಲದ ಮಾದಕ ಪಾನೀಯಗಳನ್ನು ಸೇವಿಸಿದಂತೆಲ್ಲಾ, ವಿಶ್ರಾಂತಿರಹಿತ ಜೀವನಪದ್ಧತಿಗೆ ಹೊಂದಿಕೊಂಡಂತೆಲ್ಲಾ, ಇತರೆ ನಾಗರೀಕ ಸಮಾಜವನ್ನು ಕಾಡುವ ಹೊಸ ಹೊಸ ರೋಗ-ರುಜಿನಗಳು ಅವರನ್ನೂ ಕಾಡಲು ಪ್ರಾರಂಭಿಸಿದವು. ಅವರು, ತಮ್ಮ ಹಿಂದಿನ ರೋಗಗಳಿಗೆ ಔಷಧಗಳನ್ನು ಕಂಡುಕೊಂಡಂತೆ ಈ ಹೊಸ ರೋಗಗಳಿಗೆ ಔಷಧಗಳನ್ನು ಕಂಡುಕೊಳ್ಳುವ ಪ್ರಯತ್ನದಲ್ಲಿ ವಿಫಲವಾದರು. ಅವರೂ ಇತರರಂತೆ ಸರಕಾರಿ-ಖಾಸಗಿ ಆಸ್ಪತ್ರೆಗಳನ್ನೇ ಮೊರೆಹೋಗಬೇಕಾಯಿತು. ಇದು ಅವರ ಪ್ರಾಚೀನ ಚಿಕಿತ್ಸಾಪದ್ಧತಿಯನ್ನು ಮರೆಯುವಂತೆ ಮಾಡಿತು.2 ಬದಲಾಗುತ್ತಿರುವ ಬುಡಕಟ್ಟು ಸಮುದಾಯಗಳು ಈಗ ಪರಿಸ್ಥಿತಿ ಬದಲಾಗಿದೆ, ಬದಲಾಗುತ್ತಿದೆ, ಬುಡಕಟ್ಟು ಸಮುದಾಯದ ಸದಸ್ಯರು ಬದಲಾಗುತ್ತಿದ್ದಾರೆ. ಸರಕಾರಗಳು ಅವರ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುತ್ತಿವೆ. ಬುಡಕಟ್ಟು ಜನಾಂಗಗಳ ಹಾಡಿ, ಹಟ್ಟಿ, ತಾಂಡಗಳಿಗೆ ರಸ್ತೆಗಳಿವೆ. ಶಾಲೆ, ಅಂಗನವಾಡಿ, ಮುಂತಾದ ಕೇಂದ್ರಗಳಿವೆ. ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಕುಡಿಯುವ ನೀರಿನ ಸೌಲಭ್ಯ (ನೀರಿನ ಯೋಜನೆ ಇಲ್ಲವೆ ಕೊಳವೆ ಬಾವಿ) ಇದೆ. ಸಾಮಾಜಿಕವಾಗಿ, ರಾಜಕೀಯವಾಗಿ ಮುಂದೆ ಬರುತ್ತಿದ್ದಾರೆ. ಸರಕಾರಗಳು ರೂಪಿಸಿದ ಅನೇಕ ಅಭಿವೃದ್ಧಿ ಯೋಜನೆಗಳ ಉಪಯೋಗ ಪಡೆಯುತ್ತಿದ್ದಾರೆ. ಇದೊಂದು ಶುಭ ಸೂಚನೆ. ಆದರೆ ಈ ಪರಿಸ್ಥಿತಿ ಎಲ್ಲಾ ಬುಡಕಟ್ಟು ಜನಾಂಗಗಳಿಗೆ ಅನ್ವಯವಾಗುವುದಿಲ್ಲ. ಯಳವರು, ಕೊರಗರು, ಜೇನುಕುರುಬರು, ಕಾಡುಕುರುಬರು, ಹಕ್ಕಿ ಪಿಕ್ಕಿ ಜನಾಂಗ ಮುಂತಾದವರು ಅಭಿವೃದ್ಧಿಯ ಹಾದಿಗೆ ಬರಬೇಕಾಗಿದೆ. ಅಡಿ ಟಿಪ್ಪಣಿಗಳು
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
SITE MAP
SiteTRAININGJOB |
HR SERVICESOTHER SERVICESnIRATHANKA CITIZENS CONNECT |
NIRATHANKAPOSHOUR OTHER WEBSITESSubscribe |
MHR LEARNING ACADEMY
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|