“Education is not passing the exams or getting a job. It is the building of stable real character and humanity”. -Swami Vivekanand ಪ್ರಸ್ತಾವನೆ: ಸದೃಢ ಮನಸ್ಸಿನ ಆರೋಗ್ಯವಂತ, ಸಂತೋಷದಾಯಕ, ಉಲ್ಲಾಸದ ಯುವಕರು ಭಾರತದ ಆರ್ಥಿಕಾಭಿವೃದ್ಧಿಗೆ ಬೇಕಾಗಿದ್ದಾರೆ ಎಂದು ಗಾಂಧೀಜಿಯವರು ಹೇಳಿದ ಮಾತು ಇಂದು ಎಷ್ಟೊಂದು ಸತ್ಯವೆನಿಸುತ್ತದೆ. ಇಂದಿನ ಆರ್ಥಿಕಾಭಿವೃದ್ಧಿಗೆ ಮಾನವಿಕ ಸಂಪತ್ತು ಬಹಳ ಮುಖ್ಯ. ಲಭ್ಯವಿರುವ ಭೂಸಂಪತ್ತು, ಜಲಸಂಪತ್ತು, ಅರಣ್ಯಸಂಪತ್ತು, ಖನಿಜ ಸಂಪತ್ತು, ಇಂಧನ ತೈಲ ಮುಂತಾದ ಸಂಪನ್ಮೂಲಗಳನ್ನು ದಕ್ಷವಾಗಿ ಮತ್ತು ಮಿತವಾಗಿ ಬಳಸಿಕೊಳ್ಳುವುದರ ಮೂಲಕ ಅವುಗಳ ಅಪವ್ಯಯವಾಗದಂತೆ ಮತ್ತು ದುರ್ಬಳಕೆಯಾಗದಂತೆ ನೋಡಿಕೊಳ್ಳಬೇಕಾಗಿದೆ. ಆದ್ದರಿಂದ ಇಂದು ಶಿಕ್ಷಣದ ರಕ್ಷಣೆ ಮುಖ್ಯವೆನಿಸುತ್ತದೆ. ಭಾರತ ಹಿಂದೆಂದೂ ಕಾಣದಂತಹ ಆರ್ಥಿಕಾಭಿವೃದ್ದಿಯನ್ನು ಸಾಧಿಸಿದ್ದರೂ (8% ರಷ್ಟು ಬೆಳವಣಿಗೆ) ಭವಿಷ್ಯದಲ್ಲಿ ಶಿಕ್ಷಣದ ಸವಾಲುಗಳು ಆರ್ಥಿಕಾಭಿವೃದ್ಧಿಗೆ ತಡೆಯಾಗಬಹುದೇ? ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಇದರಿಂದ ಭಾರತದ ಆರ್ಥಿಕ ವ್ಯವಸ್ಥೆಯನ್ನು ಜಾಗತಿಕ ಪೈಪೋಟಿಯಲ್ಲಿ ಎದುರಿಸಲು ಸಿದ್ದಗೊಳಿಸಬೇಕಾಗಿದೆ. ಆದ್ದರಿಂದ ಇಂದು ಶಿಕ್ಷಣ ಆರ್ಥಿಕಾಭಿವೃದ್ಧಿಯ ಸಂಜೀವಿನಿ ಎಂದು ಹೇಳಬಹುದಾಗಿದೆ. ಭಾರತದಲ್ಲಿ ಉನ್ನತ ಶಿಕ್ಷಣ: ವೈದ್ಯಕೀಯ, ಇಂಜಿನಿಯರಿಂಗ್, ಮಾಹಿತಿ ತಂತ್ರಜ್ಞಾನ, ಕಂಪ್ಯೂಟರ್ ಮತ್ತು ಸಂಶೋಧನೆ-ಇವುಗಳು ನೀಡಿದ ಪ್ರತಿಫಲಗಳು ಸಮಾಜದ ಎಲ್ಲಾ ವರ್ಗದ ಜನರಿಗೆ ಹಾಗೂ ಗ್ರಾಮೀಣ ಪ್ರದೇಶವನ್ನು ತಲುಪುವಂತೆ ನೋಡಿಕೊಳ್ಳಬೇಕಾಗಿದೆ. ಅಂದು ಗ್ರಾಹಂಬೆಲ್ ಕಂಡು ಹಿಡಿದ ಟೆಲಿಪೋನ್, ಮಾರ್ಕೋನಿ ಕಂಡು ಹಿಡಿದ ರೇಡಿಯೋ, ಎಡಿಸನ್‍ನ ವಿದ್ಯುತ್ ದೀಪ ಇಂದು ಸಮಾಜಕ್ಕೆ ಎಷ್ಟೊಂದು ಅನಿವಾರ್ಯವಾಗಿರುವುದರ ಜೊತೆಯಲ್ಲಿ ಸಮಾಜ ಪರಿವರ್ತನೆಯಲ್ಲಿ ಸಮಾಜವಿಜ್ಞಾನಗಳ ಸಂಶೋಧನೆಯನ್ನು ಕಡೆಗಣಿಸುವಂತಿಲ್ಲ. ಇನ್ನೊಂದು ಕಡೆ ಇದು ಪ್ರಪಂಚದ ಆರ್ಥಿಕತೆಯನ್ನು ಒಂದುಗೂಡಿಸುತ್ತದೆ. ಒಂದುಗೂಡಿಸುವಿಕೆಯ ಅಂಶವು ಕೇವಲ ಉನ್ನತ ಶಿಕ್ಷಣದಿಂದ ಮಾತ್ರ ಸಾಧ್ಯವೆಂದು ಹಲವಾರು ಅರ್ಥಶಾಸ್ತ್ರಜ್ಞರು ಮತ್ತು ಶಿಕ್ಷಣ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸಂಪ್ರದಾಯ ಪದ್ಧತಿಯಲ್ಲಿದ್ದ ಶಿಕ್ಷಣದ ಮಾದರಿಯು ಈಗ ಖಾಸಗೀಕರಣ ಮತ್ತು ಜಾಗತೀಕರಣಗಳ ಪ್ರಭಾವದಿಂದಾಗಿ ವ್ಯಾಪಾರೀಕರಣಗೊಳ್ಳುತ್ತಿದೆ. ಇದರಿಂದಾಗಿ ಭಾರತದ ಆರ್ಥಿಕತೆಯಲ್ಲಿ ವ್ಯಾಪಾರದ ವಿಸ್ತರಣೆ, ಹೂಡಿಕೆಯಲ್ಲಿನ ಹೆಚ್ಚಳ, ಮಾರುಕಟ್ಟೆ ವಿಸ್ತರಣೆ ಮತ್ತು ರಾಷ್ಟ್ರೀಯ ಆಂತರಿಕ ಉತ್ಪನ್ನದಲ್ಲಿನ ಹೆಚ್ಚಳವು ಉನ್ನತ ಶಿಕ್ಷಣದ ಅಭಿವೃದ್ಧಿ ಮತ್ತು ಸಂಶೋಧನೆಗಳಿಂದಾಗುವ ಹೊಸ ಹೊಸ ಆವಿಷ್ಕಾರಗಳ ಮೇಲೆ ಅವಲಂಬನೆಯಾಗಿರುವುದು ಕಂಡುಬಂದರೂ ದೇಶದಲ್ಲಿ ಇಂದಿನ ಉನ್ನತ ಶಿಕ್ಷಣದ ಸ್ಥಿತಿಯನ್ನು ನೋಡಿದರೆ ಮಾರುಕಟ್ಟೆಯಲ್ಲಿಟ್ಟ ಸರಕಿನಂತಾಗಿದೆ. 1950 ಮತ್ತು 2008ರ ಸುಮಾರು 58 ವರ್ಷಗಳ ಅವಧಿಯಲ್ಲಿ ಉನ್ನತ ಶಿಕ್ಷಣದ ಪ್ರಗತಿಯನ್ನು ನೋಡಿದಾಗ, 1991ರ ಹೊಸ ಆರ್ಥಿಕ ನೀತಿಯಿಂದಾಗಿ ಉನ್ನತ ಶಿಕ್ಷಣದಲ್ಲಿನ ಅಂಕಿ-ಅಂಶಗಳು ಮಾತ್ರ ಬದಲಾಗಿವೆಯೆ ಹೊರತು ಅದರ ಗುಣಮಟ್ಟ ಮಾತ್ರ ತಳಮಟ್ಟಕ್ಕಿಳಿದಿದೆ, ಉನ್ನತ ಶಿಕ್ಷಣದ ಪ್ರಗತಿಯನ್ನು ಈ ಕೆಳಗಿನಂತೆ ನೋಡಬಹುದಾಗಿದೆ. ಈ ಮೇಲಿನ ಅಂಕಿ-ಅಂಶಗಳನ್ನು ನೋಡಿದಾಗ ಭಾರತದಲ್ಲಿ ಉನ್ನತ ಶಿಕ್ಷಣದಲ್ಲಿ ಗಣನೀಯ ಪ್ರಗತಿಯಾಗಿರುವುದು ಕಂಡು ಬರುತ್ತದೆ. ಆದರೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಜೊತೆಗೆ ತುಲನೆ ಮಾಡಿ ನೋಡಿದಾಗ, ನಾವು ಉನ್ನತ ಶಿಕ್ಷಣದಲ್ಲಿ ಅಂಬೆಗಾಲು ಇಡುತ್ತಿರುವ ಶಿಶುಗಳಾಗಿದ್ದೇವೆ ಎಂದರೂ ತಪ್ಪಾಗಲಿಕ್ಕಿಲ್ಲ. ಅಮೆರಿಕಾದಲ್ಲಿನ ಒಬ್ಬ ಸಂಶೋದನಾ ವಿದ್ಯಾರ್ಥಿ ಭಾರತದಲ್ಲಿನ ಒಬ್ಬ ಪ್ರಾಧ್ಯಾಪಕನಿಗೆ ಸಮಾನವೆಂದು ತಿಳಿದುಕೊಂಡಾಗ ನಮ್ಮನ್ನು ನಾವು ಅರಿತುಕೊಳ್ಳುವುದು ಅಗತ್ಯವೆನ್ನಿಸುತ್ತದೆ. ಒಂದು ಕಡೆ ನಮ್ಮನ್ನು ನಾವೇ ಬೆನ್ನು ತಟ್ಟಿಕೊಂಡರೆ, ಇನ್ನೊಂದು ಕಡೆ ನಾಚಿಕೆ ಪಡುವಂತಹ ಅಂಶಗಳನ್ನು ಕಂಡುಕೊಳ್ಳಬೇಕಾಗುತ್ತದೆ. ಭಾರತದಲ್ಲಿ ಪ್ರಜಾಪ್ರಭುತ್ವದ ಹೆಸರಿನಲ್ಲಿ ರಾಜಕೀಯ ಕ್ಷೇತ್ರ ಎಲ್ಲಾ ಕ್ಷೇತ್ರಗಳಲ್ಲಿ ವ್ಯಾಪಿಸಿ ಪ್ರಪಂಚದ ಭ್ರಷ್ಟಾಚಾರದ ರಾಷ್ಟ್ರಗಳಲ್ಲಿ ಅಗ್ರಸ್ಥಾನದಲ್ಲಿ (84ನೇ ಸ್ಥಾನ) ನಿಲ್ಲಿಸಿದೆ (ಕರ್ನಾಟಕ ರಾಜ್ಯ ದೇಶದಲ್ಲಿ ಪ್ರಥಮ ಸ್ಥಾನದಲ್ಲಿದೆ). ಭಾರತದ ಕೆಲವೊಂದು ರಾಜ್ಯಗಳಲ್ಲಿ ರಾಜಕಾರಣಿಗಳು ಹಗಲು ದರೋಡೆಗಾರರಾಗಿದ್ದಾರೆ ಮತ್ತು ಸಂಪೂರ್ಣವಾಗಿ ಶಿಕ್ಷಣ ಕ್ಷೇತ್ರವನ್ನು ನಿರ್ಲಕ್ಷಿಸಲಾಗಿದೆ ಎನ್ನವುದಕ್ಕೆ ಹಲವಾರು ನಿದರ್ಶನಗಳಿವೆ. ದೇಶದಲ್ಲಿ ಸುಮಾರು 430ಕ್ಕಿಂತ ಹೆಚ್ಚಿರುವ ವಿಶ್ವವಿದ್ಯಾಲಯ ಮಟ್ಟದ ಸಂಸ್ಥೆಗಳನ್ನು ಅಭಿವೃದ್ದಿಪಡಿಸುವ ಕಲ್ಪನೆ ಬಿಟ್ಟು, ಬೇರೆ ದೇಶದ ವಿಶ್ವವಿದ್ಯಾಲಯಗಳಿಗೆ ದೇಶದಲ್ಲಿ ನೆಲೆಯೂರಲು ಅವಕಾಶ ಮಾಡಿಕೊಡುತ್ತಿರುವ ನಮ್ಮ ರಾಜಕಾರಣಿಗಳಿಗೆ ಉನ್ನತ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಕಾಳಜಿ ಎಷ್ಟರ ಮಟ್ಟಿಗೆ ಇದೆ ಎಂಬುದು ತೋರಿಸಿಕೊಡುತ್ತದೆ. ಅದೇ ಇವರ ಕೊನೆಯ ತೀರ್ಮಾನವಾದರೆ ನಮ್ಮ ವಿಶ್ವವಿದ್ಯಾಲಯಗಳು ಏಕೆ ಬೇಕು ಮತ್ತು ಅವುಗಳ ಮೇಲೆ ಮಾಡುವ ಖರ್ಚು ಆರ್ಥಿಕತೆಗೆ ಹೊರೆಯಾಗುವುದಿಲ್ಲವೇ ಎಂದು ಆಲೋಚಿಸಿದಾಗ ರಾಜಕಾರಣಿಗಳ ಸ್ವಾರ್ಥದಿಂದಾಗಿ ಇವತ್ತು ಭಾರತದಲ್ಲಿ ಉನ್ನತ ಶಿಕ್ಷಣ ತನ್ನ ಮೌಲ್ಯ ಕಳೆದುಕೊಳ್ಳುತ್ತಿದೆ, ಅಲ್ಲದೆ ಸಿಕ್ಕ ಪಾಲಲ್ಲಿ ಹರಿದು ಹಂಚಿಕೊಂಡು ತಿನ್ನುವ ಸ್ಥಿತಿ ನಮ್ಮ ಉನ್ನತ ಶಿಕ್ಷಣ ಎದುರಿಸುತ್ತಿದೆ. ಉನ್ನತ ಶಿಕ್ಷಣದ ಸ್ಥಿತಿ: ಯೂರೋಪ್ ಮತ್ತು ಏಶಿಯನ್ ರಾಷ್ಟ್ರಗಳ ಮಧ್ಯದ ಉನ್ನತ ಶಿಕ್ಷಣದ ಸ್ಥಿತಿಗತಿಯನ್ನು ನೋಡಿದಾಗ ಹೆಚ್ಚು ವ್ಯತ್ಯಾಸಗಳಿರುವುದು ಕಂಡು ಬರುತ್ತದೆ (ಪಠ್ಯಕ್ರಮ ರಚನೆ, ಹೆಸರು ನೋಂದಾಯಿಸುವ ವಿಧಾನ ಮತ್ತು ಸಂಶೋಧನಾ ಮಾದರಿ ಇತ್ಯಾದಿ). ಯೂರೋಪ್ ರಾಷ್ಟ್ರಗಳಲ್ಲಿನ 12ನೇ ತರಗತಿ ಮಾದರಿಯು ಭಾರತದಲ್ಲಿನ ಸ್ನಾತಕೋತ್ತರ ಮಾದರಿಗೆ ಸಮನಾಗಿರುತ್ತದೆ. ಇವುಗಳಲ್ಲಿನ ಅಂತರವನ್ನು ನೋಡಿದಾಗ ಭಾರತದಲ್ಲಿ ಉನ್ನತ ಶಿಕ್ಷಣವು ಕೇವಲ ಉಳ್ಳವರಿಗಾಗಿ ಇದೆ ಎಂಬುದನ್ನು ತೋರಿಸಿಕೊಡುತ್ತದೆ. ಜಾಗತೀಕರಣದ ಹೆಸರಿನಲ್ಲಿ ಉನ್ನತ ಶಿಕ್ಷಣದ ವ್ಯಾಪಾರೀಕರಣವಾಗಿದೆ ಎನ್ನುವುದರಲ್ಲಿ ಅನುಮಾನವಿಲ್ಲ. ಪ್ರಪಂಚದಲ್ಲಿ ಶ್ರೇಷ್ಠ ವಿಶ್ವವಿದ್ಯಾಲಯಗಳ ಪಟ್ಟಿಯನ್ನು ತಯಾರಿಸಿದಾಗ ಅದರಲ್ಲಿ ಅಮೆರಿಕಾ ಮತ್ತು ಇಂಗ್ಲೆಂಡಿನ ವಿಶ್ವವಿದ್ಯಾಲಯಗಳು ಅಗ್ರಸ್ಥಾನದಲ್ಲಿವೆ. ಭಾರತದ ಕೇವಲ ಎರಡು ವಿಶ್ವವಿದ್ಯಾಲಯಗಳು ಮಾತ್ರ 183 ಮತ್ತು 188ನೇ ಸ್ಥಾನದಲ್ಲಿರುವುದು ಉನ್ನತ ಶಿಕ್ಷಣದ ಕಳಪೆಯನ್ನು ಎತ್ತಿ ತೋರಿಸುತ್ತದೆ. ಖಾಸಗಿ ಒಡೆತನದಲ್ಲಿನ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣದ ಪದವಿಗಳು ಹಣಕ್ಕೆ ಮಾರಾಟವಾಗುತ್ತಿರುವುದು ಜಗಜ್ಜಾಹೀರಾದರೂ ಸರ್ಕಾರ ಮತ್ತು ನಿಯಂತ್ರಣ ಸಂಸ್ಥೆಗಳು ರಾಜಕೀಯ ಪ್ರಭಾವ (ಭ್ರಷ್ಟಾಚಾರ)ದಿಂದಾಗಿ ನಿಯಂತ್ರಿಸುವಲ್ಲಿ ನಿಶ್ಯಕ್ತವಾಗಿವೆ. ಏಕೆಂದರೆ ಬಹುತೇಕ ಉನ್ನತ ಶಿಕ್ಷಣದ ಸಂಸ್ಥೆಗಳು ರಾಜಕೀಯ ವ್ಯಕ್ತಿಗಳ ಅಧೀನದಲ್ಲಿವೆ. ಇದರಿಂದಾಗಿ ತಂತ್ರಜ್ಞಾನ, ಇಂಜನಿಯರಿಂಗ್, ವೈದ್ಯಕೀಯ ಜೀವ ವಿಜ್ಞಾನ ಮತ್ತು ಮಾನವಿಕ ಅಧ್ಯಯನಗಳಲ್ಲಿನ ಸಂಶೋಧನೆಗಳು ತೀವ್ರಗತಿಯಲ್ಲಿ ಅಧಃಪತನಕ್ಕೆ ಇಳಿಯುತ್ತಿವೆ. ಇದು ಆರ್ಥಿಕಾಭಿವೃದ್ಧಿಯ ಮೇಲೆ ಹಲವಾರು ಪರಿಣಾಮಗಳನ್ನು ಬೀರುತ್ತದೆ ಎನ್ನುವುದು ಗೊತ್ತಿದ್ದರು ಸಹ ಗುಣಮಟ್ಟ ಸುಧಾರಿಸುವುದರ ಕಡೆಗೆ ಗಮನ ಕೊಡದಿರುವುದು ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳ ದುರ್ದೈವವೇ ಎಂದು ಭಾವಿಸಬೇಕಾಗಿದೆ. ಇದರಿಂದಾಗಿ ಉನ್ನತ ಶಿಕ್ಷಣ ಪಡೆಯಲು ಭಾರತೀಯ ವಿದ್ಯಾರ್ಥಿಗಳು ಬೇರೆ ಬೇರೆ ದೇಶಗಳಲ್ಲಿ ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದಾರೆ ಎಂಬುದನ್ನು ಈ ಕೆಳಗಿನ ಕೋಷ್ಠಕದಿಂದ ತಿಳಿಯಬಹುದು. ಕೋಷ್ಠಕ-2: ಬೇರೆ ಬೇರೆ ದೇಶಗಳಲ್ಲಿ ಭಾರತೀಯ ವಿದ್ಯಾರ್ಥಿಗಳು (2009) ಈ ಮೇಲಿನ ಅಂಕಿ ಅಂಶಗಳು ಪ್ರಪಂಚದ ಬೇರೆ ಬೇರೆ ರಾಷ್ಟ್ರಗಳಲ್ಲಿ ಭಾರತೀಯ ವಿದ್ಯಾರ್ಥಿಗಳ ಪ್ರಮಾಣ ಹೆಚ್ಚಿದೆ ಮತ್ತು ಭಾರತದಲ್ಲಿ ಬೇರೆ ಬೇರೆ ರಾಷ್ಟ್ರಗಳಿಂದ ಬರುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದೆ. ಇದು ಭಾರತದಲ್ಲಿನ ಉನ್ನತ ಶಿಕ್ಷಣದ ಗುಣಮಟ್ಟವು ಕಳಪೆಯುತವಾಗಿದೆ ಎಂಬುದನ್ನು ತೋರಿಸುತ್ತದೆ. ಬೇರೆ ಬೇರೆ ದೇಶದ ವಿದ್ಯಾರ್ಥಿಗಳು ಭಾರತದಲ್ಲಿ ಇದ್ದಾರೆ ಎಂದು ತಿಳಿದುಕೊಂಡರೆ ಅದು ಮುರ್ಖತನದ ವಿಚಾರವಾಗುತ್ತದೆ. ಆ ದೇಶದಲ್ಲಿ ಇಲ್ಲದ ಕೆಲವು ಕೋರ್ಸ್‍ಗಳನ್ನು ಕಲಿಯಲು ಬರುತ್ತಾರೆಯೇ ಹೊರತು ಇಲ್ಲಿ ಗುಣಮಟ್ಟದ ಶಿಕ್ಷಣ ಇದೆ ಎಂದಲ್ಲ.
ಉನ್ನತ ಶಿಕ್ಷಣ ಮತ್ತು ನೇಮಕಾತಿ ವಿಧಾನ: ಪ್ರಸ್ತುತ ಭಾರತದಲ್ಲಿನ ಉನ್ನತ ಶಿಕ್ಷಣದ ಗುಣಮಟ್ಟ ಕಾಯ್ದುಕೊಳ್ಳುವ ಉದ್ದೇಶದಿಂದ ವಿಶ್ವವಿದ್ಯಾಲಯ ಧನ ಸಹಾಯ ಆಯೋಗವು ಒಂದು ಸಮಿತಿಯನ್ನು ರಚಿಸಿತು. ಆ ಸಮಿತಿಯು ಕೈಗೊಂಡ ಅಧ್ಯಯನದಿಂದಾಗಿ ಹಲವಾರು ಶಿಫಾರಸ್ಸುಗಳು ಹೊರಬಂದಿವೆ. ಭಾರತದಲ್ಲಿ ಉನ್ನತ ಶಿಕ್ಷಣದ ನೇಮಕಾತಿಯಲ್ಲಿ ಹಲವಾರು ಬದಲಾವಣೆಗಳು ಆದರೂ ರಾಜ್ಯವಾರು ನೇಮಕಾತಿಯಲ್ಲಿ ವಿಶ್ವವಿದ್ಯಾಲಯ ಧನ ಸಹಾಯ ಆಯೋಗದ ನಿಯಮಗಳನ್ನು ಗಾಳಿಗೆ ತೂರಿರುವುದಕ್ಕೆ ಹಲವಾರು ಉದಾಹರಣೆಗಳಿವೆ. ಇದು ಆಯಾಯ ರಾಜ್ಯದ ಉನ್ನತ ಶಿಕ್ಷಣದ ಸಚಿವಾಲಯ ನಿರ್ವಹಿಸಿದೆ ಮತ್ತು ನೇಮಕಾತಿಯಲ್ಲಿ ಏಕಸ್ವಾಮ್ಯ (ಸರ್ಕಾರದ ನೇಮಕಾತಿ ಸಂಸ್ಥೆಗಳು) ಮಾರುಕಟ್ಟೆ ನಿರ್ಮಾಣವಾಗಿದೆ. ಇತ್ತೀಚೆಗೆ ಕರ್ನಾಟಕ ರಾಜ್ಯದಲ್ಲಿ ಉನ್ನತ ಶಿಕ್ಷಣ ಸಚಿವರು ಪದವಿ ಕಾಲೇಜು ಉಪನ್ಯಾಸಕರ (ಒಟ್ಟು 1500 ಹುದ್ದೆಗಳು) ನೇಮಕಾತಿಯನ್ನು 300ರಂತೆ 5 ಕಂತುಗಳಲ್ಲಿ ಭರ್ತಿ ಮಾಡಿಕೊಳ್ಳಲಾಗುವುದು ಎಂಬುದರ ಹೇಳಿರುವುದರ ಹಿಂದೆ ಬೇಡಿಕೆ ಮತ್ತು ಪೂರೈಕೆಯ ಅಂಶಗಳು ಕಂಡುಬರುತ್ತವೆ. ಅನುಭೋಗಿಗಳು(ಅರ್ಹತೆ ಪಡೆದ ಪದವೀಧರರು) ಹೆಚ್ಚಿದ್ದು, ಪೂರೈಕೆ (ಹುದ್ದೆಗಳ ಸಂಖ್ಯೆ) ಕಡಿಮೆ ಇದ್ದರೆ ಬೇಡಿಕೆ ಹೆಚ್ಚುತ್ತದೆ, ಆಗ ಬೆಲೆಯು (ಹುದ್ದೆ ಪಡೆಯುವ ಆಕಾಂಕ್ಷಿಗಳಿಂದ ಪಡೆಯುವ ಹಣವಿರಬಹುದು)ಹೆಚ್ಚಾಗುತ್ತದೆ. ಒಂದು ವೇಳೆ ಪೂರೈಕೆ ಹೆಚ್ಚಾದರೆ, ಬೇಡಿಕೆ ಕಡಿಮೆಯಾಗಿ, ಬೆಲೆಯು ಕಡಿಮೆಯಾಗುತ್ತದೆ ಎಂಬ ಉದ್ದೇಶವಿರಬಹುದು. ಇದು ಕೇವಲ ಸ್ವ-ಅಭಿವೃದ್ಧಿಯೇ ಹೊರತು ಸಮಗ್ರ ಶಿಕ್ಷಣದ ಅಭಿವೃದ್ದಿಯಲ್ಲ ಎಂಬುದನ್ನು ರಾಜಕಾರಣಿಗಳು, ಶಿಕ್ಷಣ ಸಂಸ್ಥೆಗಳು ಮತ್ತು ಶಿಕ್ಷಣ ತಜ್ಞರು ಮನಗಾಣಬೇಕಾಗಿರುವುದು ಇಂದು ಅನಿವಾರ್ಯವಾಗಿದೆ. ಇಲ್ಲಿ ಗುಣಮಟ್ಟ ಮತ್ತು ಅರ್ಹತೆಯನ್ನು ಕಡೆಗಣಿಸಿ ಕೇವಲ ಹಣಬಲ ಮತ್ತು ರಾಜಕೀಯ ಪ್ರಭಾವದ ಬಲದಿಂದಾಗಿ ಸುಮಾರು 70 ಪ್ರತಿಶತದಷ್ಟು ಸಂಶೋಧನೆಯ ಜ್ಞಾನವಿಲ್ಲದಿರುವವರಿಗೆ ನೇಮಕಾತಿ ಮಾಡಿಕೊಂಡಿರುವುದು ಹಲವಾರು ರಾಜ್ಯಗಳಲ್ಲಿ ಕಂಡು ಬರುತ್ತದೆ. ಕರ್ನಾಟಕ ದಲ್ಲಿ ಇತ್ತಿಚೆಗೆ ಪ್ರಥಮ ದರ್ಜೆ ಕಾಲೇಜುಗಳಲ್ಲಿ ನೇಮಕವಾದ ಉಪನ್ಯಾಸಕರ ಕುರಿತು ಜ್ಞಾನ ಆಯೋಗದ ಅಧ್ಯಕ್ಷರಾದ ಸ್ಯಾಮ್ಪಿಥ್ರೋಡ್ ಅವರು (ಪ್ರಜಾವಾಣಿ ನವೆಂಬರ್, 2009) ಪ್ರಕಟಿಸಿದಂತೆ, ಸುಮಾರು 90 ಪ್ರತಿಶತದಷ್ಟು ಉಪನ್ಯಾಸಕರಿಗೆ ಸಂಶೋಧನಾ ಜ್ಞಾನದ ಜೊತೆಗೆ ಇಂಗ್ಲಿಷ್ ಜ್ಞಾನವೂ ಕೂಡಾ ಇರುವುದಿಲ್ಲ. ಇಂಥವರಿಂದ ಯಾವ ಮಟ್ಟದ ಸಂಶೋಧನೆ ನೀರಿಕ್ಷಿಸಬಹುದು ಮತ್ತು ಉನ್ನತ ಶಿಕ್ಷಣದ ಗುಣಮಟ್ಟ ಸಾಧಿಸುವುದು ಸಾಧ್ಯವೇ? ಎಂಬ ಪ್ರಶ್ನೆಗಳು ಉದ್ಭವಿಸುತ್ತವೆ. ಇದರಿಂದಾಗಿ ಹಲವಾರು ಸಂಶೋಧನೆಗಳು ಹೊರಬರುತ್ತಿಲ್ಲಾ, ದೇಶದ ಒಟ್ಟು ಆಂತರಿಕ ಉತ್ಪನ್ನದಲ್ಲಿ ಸುಮಾರು 4 ರಿಂದ 8 ಪ್ರತಿಶತದಷ್ಟು ಉನ್ನತ ಶಿಕ್ಷಣಕ್ಕಾಗಿ ಖರ್ಚು ಮಾಡುತ್ತಿರುವುದರ ಉದ್ದೇಶವಾದರೂ ಏನು ಎನ್ನುವುದನ್ನು ಪರಾಮರ್ಶೆಗೆ ಒಳಪಡಿಸಬೇಕಾದುದು ಅನಿವಾರ್ಯವಾಗಿದೆ. ಹಲವಾರು ಸೂಕ್ತ ಸಂಶೋಧನೆಗಳ ಕೊರತೆಯಿಂದಾಗಿ ಶಿಕ್ಷಣದ ಗುಣಮಟ್ಟ ಸಾಧಿಸಲು ಸಾಧ್ಯವಿಲ್ಲದರ ಜೊತೆಗೆ ಆರ್ಥಿಕಾಭಿವೃದ್ಧಿಗೆ ಹಿನ್ನಡೆಯಾಗುವುದರಲ್ಲಿ ಅನುಮಾನವಿಲ್ಲ. ಉನ್ನತ ಶಿಕ್ಷಣದ ಸಮಸ್ಯೆಗಳು: ಭಾರತದಲ್ಲಿನ ಉನ್ನತ ಶಿಕ್ಷಣದ ಮೇಲಿನ ನಿಷ್ಕಾಳಜಿಯ ಬಗ್ಗೆ ಜನಸಾಮಾನ್ಯರು ಸಹ ಚರ್ಚಿಸುವಂತಾಗಿದೆ, ಅದರ ಹಲವಾರು ಸಮಸ್ಯೆಗಳನ್ನು ಈ ಕೆಳಗಿನಂತೆ ನೋಡಬಹುದಾಗಿದೆ.
ಪರಿಹಾರ ಕ್ರಮಗಳು: ಈ ಕೆಳಗಿನ ಕ್ರಮಗಳನ್ನು ಅನುಸರಿಸಿದರೆ ಸ್ವಲ್ಪ ಮಟ್ಟಿಗಾದರೂ ಉನ್ನತ ಶಿಕ್ಷಣದಲ್ಲಿ ಸುಧಾರಣೆಯಾಗಬಹುದು, ಅವುಗಳೆಂದರೆ:
ಉಪಸಂಹಾರ: ಭಾರತದ ಆರ್ಥಿಕತೆಯಲ್ಲಿ ಉನ್ನತ ಶಿಕ್ಷಣದ ಪಾತ್ರ ಪ್ರಮುಖವಾಗಿದೆ. ರಾಷ್ಟ್ರಾದಾಯ, ತಲಾದಾಯ, ಬಂಡವಾಳ ಸಂಚಲನ, ಮಾರುಕಟ್ಟೆಯ ವಿಸ್ತರಣೆ ಮತ್ತು ಉದ್ಯೋಗವಕಾಶಗಳ ಹೆಚ್ಚಳಗಳು ಉನ್ನತ ಶಿಕ್ಷಣವನ್ನು ಅವಲಂಬಿಸಿವೆ. ಕೃಷಿ ಮತ್ತು ಕೈಗಾರಿಕಾ ವಲಯಗಳಲ್ಲಿನ ಹೊಸ ಸಂಶೋಧನೆಗಳು ಆಯಾ ವಲಯಗಳನ್ನು ಅಭಿವೃದ್ಧಿಗೊಳಿಸಿವೆ. ವೈಜ್ಞಾನಿಕ ಪ್ರಗತಿಯಿಂದಾಗಿ ದೇಶವು ಪ್ರಪಂಚದ ಅಭಿವೃದ್ಧಿಶೀಲ ರಾಷ್ಟ್ರಗಳ ಸಾಲಿನಲ್ಲಿ ನಿಲ್ಲಿಸಲಾಗಿದೆ. ಆದರೂ ಭ್ರಷ್ಟಾಚಾರವೆಂಬ ಭೂತದಿಂದಾಗಿ ಪ್ರಪಂಚದ ರಾಷ್ಟ್ರಗಳ ಜೊತೆಗೆ ಉನ್ನತ ಶಿಕ್ಷಣವನ್ನು ತುಲನೆ ಮಾಡಿ ನೋಡಲು ಸಾಧ್ಯವಾಗುತ್ತಿಲ್ಲ. ಹಲವಾರು ಸಮಸ್ಯೆಗಳಿಂದ ಹೊರ ಬಂದಾಗ ಮಾತ್ರ ಉನ್ನತ ಶಿಕ್ಷಣಕ್ಕೆ ಇನ್ನಿಲ್ಲದ ಮಹತ್ವ ಬರುತ್ತದೆ. ಇದರಿಂದ ರಾಷ್ಟ್ರದ ಆರ್ಥಿಕಾಭಿವೃದ್ಧಿಯನ್ನು ಉನ್ನತೀಕರಿಸುವಲ್ಲಿ ಯಾವುದೇ ಅನುಮಾನವಿಲ್ಲ. ಎಂದು ಹೇಳಬಹುದು. ಡಾ. ವಿಠೋಬ .ಬಿ (ಉಪನ್ಯಾಸಕರು, ಅರ್ಥಶಾಸ್ತ್ರ ಅಧ್ಯಯನ ವಿಭಾಗ, ಸ್ನಾತಕೋತ್ತರ ಕೇಂದ್ರ, ನಂದಿಹಳ್ಳಿ, ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ) ಮಾರಾನಾಯಕ ನಾಲ್ಕನೇ ಸೆಮಿಸ್ಟರ್, ಅರ್ಥಶಾಸ್ತ್ರ ಅಧ್ಯಯನ ವಿಭಾಗ, ಸ್ನಾತಕೋತ್ತರ ಕೇಂದ್ರ, ನಂದಿಹಳ್ಳಿ (ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ)
1 Comment
Veena sutar
9/12/2020 09:13:58 am
Goodwriting sir.
Reply
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
![]()
|
![]()
|
![]()
|
![]()
|
SITE MAP
SitePOSH |
NIRATHANKAOUR OTHER WEBSITESSubscribe |
HR and Employment Law Classes - Every Fortnight
50,000 HR PROFESSIONALS ARE CONNECTED THROUGH OUR HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
Are you looking to enhance your knowledge of HR and labor laws? Join Nirathanka's HR and Employment Law Classes-Every Fortnight—a one-of-a-kind opportunity to learn from experienced professionals and industry experts.