ತಿರುಳು ಸಮಾಜಕಾರ್ಯ ಸ್ನಾತಕೋತ್ತರ ಪದವಿ ಮತ್ತು ಸಂಶೋಧನೆಯ ಹಿನ್ನೆಲೆ ಇರುವ ಡಾ.ಸಿ.ಆರ್.ಗೋಪಾಲ ಸಮಾಜಕಾರ್ಯದ ತಾತ್ತ್ವಿಕ ಸಿದ್ಧಾಂತ-ಶರಣರ ಮತ್ತು ದಾಸರ ಜೀವನ ದೃಷ್ಟಿ ಎಂಬ ಸಂಶೋಧನಾತ್ಮಕ ಕೃತಿಯನ್ನು ರಚಿಸಿದ್ದಾರೆ. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಮೈಸೂರು ಪ್ರಕಟಿಸಿರುವ ಈ ಕೃತಿಗೆ ಡಾ. ಎಚ್.ಎಂ. ಮರುಳಸಿದ್ಧಯ್ಯನವರು ಸಮಾಜಕಾರ್ಯದ ತಾತ್ತ್ವಿಕ ಸಿದ್ಧಾಂತಕ್ಕೊಂದು ತಿದ್ದುಪಡಿ ಎಂಬ ತಲೆಬರಹದಡಿ ಮುನ್ನುಡಿಯನ್ನು ನೀಡಿದ್ದಾರೆ. ಸಮಾಜಕಾರ್ಯ ಶಾಸ್ತ್ರದ ಶಿಕ್ಷಣ ಪಡೆದವರಿಗೆಲ್ಲಾ ಸಿಗುವ ಮೂಲಪಾಠ, ಈ ನಿರ್ದಿಷ್ಟ ಚಿಂತನೆ, ಆಚರಣೆ ಕ್ರಮ ಪಾಶ್ಚಾತ್ಯ ಎಂದು. ಅಮೇರಿಕೆಯಲ್ಲಿ ಆರಂಭವಾದ ಸಮಾಜಕಾರ್ಯದ ನೀತಿ, ನಿಯಮ, ವಿಧಾನಗಳ ಪ್ರಶಿಕ್ಷಣ ಕ್ರಮ ಕಡಲುಗಳನ್ನು ದಾಟಿ ಭಾರತಕ್ಕೆ ಬಂದಿದೆ ಎಂದೇ ಈ ವಿಚಾರ ಕುರಿತು ಇರುವ ಬಹುತೇಕ ಉದ್ಗ್ರಂಥಗಳೂ ಉಲ್ಲೇಖಿಸುತ್ತಿದ್ದವು. ಪ್ರಾಯಶಃ ಐವತ್ತು ಅರವತ್ತು ವರ್ಷಗಳ ಹಿಂದೆ ಅಂತಹುದೇ ಸತ್ಯ ಎಂದು ನಂಬುವ, ನಂಬಿಸುವ ಸ್ಥಿತಿ ಇತ್ತೆಂದು ಭಾವಿಸೋಣ. ಕಾಲಕ್ರಮೇಣ, ಸಮಾಜಕಾರ್ಯ ಪ್ರಶಿಕ್ಷಣ ಪಡೆದು ಕ್ಷೇತ್ರಕಾರ್ಯದಲ್ಲಿ ಪ್ರಯೋಗಗಳನ್ನು ನಡೆಸಿದ ಅನೇಕರು ಸಮಾಜಕಾರ್ಯ ಶಾಸ್ತ್ರದ ನೀತಿ, ನಿಯಮ, ಚಿಂತನಾಕ್ರಮ, ಕಲ್ಪನೆಗಳನ್ನೆಲ್ಲಾ ನಮ್ಮ ಸಮುದಾಯಗಳ ಜೀವನ ಕ್ರಮ, ನಂಬಿಕೆ, ಆಚಾರ ವಿಚಾರ, ಸಂಬಂಧಗಳೊಡನೆ ತುಲನೆ ಮಾಡಲಾರಂಭಿಸಿದರು. ಆಗ ಬಹಳ ಸ್ಪಷ್ಟವಾಗಿ ದರ್ಶನವಾಗತೊಡಗಿದ್ದು ಭಾರತೀಯ ಬದುಕಿನ ಕುಟುಂಬ, ಸಮುದಾಯ, ಆಡಳಿತ, ರಾಜಕೀಯ, ಧರ್ಮ, ಸಂಸ್ಕೃತಿಯ ಪದರಗಳಲ್ಲಿ (ಪಾಶ್ಚಾತ್ಯವೆಂದು ನಂಬಿದ್ದ) ಸಮಾಜಕಾರ್ಯದ ಬೇರು, ಬಿಳಲುಗಳು ಇವೆ ಎಂದು. ಇವಿಷ್ಟೇ ಅಲ್ಲ, ಒಮ್ಮೊಮ್ಮೆ ಬಹಳ ಕ್ಲಿಷ್ಟವಾಗಿ ಜಿಗಟಾಗಿ ಕಾಣುವ ಸಮಾಜಕಾರ್ಯದ ಉದ್ದಾನುದ್ದ ತತ್ತ್ವಗಳನ್ನು, ನಮ್ಮ ಜಾನಪದ ಮೌಖಿಕ ಸಾಹಿತ್ಯ, ದಾಸರ ಪದಗಳು, ಶರಣರ ವಚನಗಳು, ಪಂಚತಂತ್ರ, ಬೋಧಿಸತ್ವನ ಕತೆಗಳಲ್ಲಿ, ಅಷ್ಟೇ ಏಕೆ ನಮ್ಮ ಪುರಾಣಗಳಲ್ಲೂ ಬಹಳ ಸರಳವಾಗಿ ದೃಷ್ಟಾಂತಗಳ ಮೂಲಕ ನಮ್ಮ ಸುತ್ತಮುತ್ತಲಿನ ಸಾಮಾನ್ಯರ ಪಾತ್ರಗಳಲ್ಲಿ, ಪ್ರಾಣಿಪಕ್ಷಿಗಳಲ್ಲಿ, ನಮ್ಮ ನಂಬಿಕೆಯ ದೈವ, ಭೂತ, ದೇವದೇವಿಯರುಗಳಲ್ಲಿ ಬಿಡಿಸಿಟ್ಟು ತೋರಿವೆ ಎಂಬುದಂತೂ ಇನ್ನೂ ಸಂತೋಷ, ಸೋಜಿಗವನ್ನು ಉಂಟು ಮಾಡಿರುವುದನ್ನೂ ಗುರುತಿಸಿದ್ದಾರೆ.
ಸಮಾಜಕಾರ್ಯದ ಇಂತಹ ಕ್ರಿಯಾ ಸಿದ್ಧಾಂತಗಳನ್ನು ಭಾರತೀಯ ಸಂಸ್ಕೃತಿಯ ಅನುಭವಗಳಲ್ಲಿ, ಸಾಹಿತ್ಯ ಮತ್ತು ದಾಖಲೆಗಳಲ್ಲಿ ಹೆಕ್ಕಿ ತೆಗೆಯುವ ಕೆಲಸದಲ್ಲಿ ಹಲವು ವಿದ್ವಾಂಸರು ತೊಡಗಿಕೊಂಡಿದ್ದಾರೆ. ಅಂತಹ ಎಳೆಯ ಹಿನ್ನೆಲೆಯಲ್ಲಿ ಡಾ.ಸಿ.ಆರ್.ಗೋಪಾಲ ಅವರ ಸಮಾಜಕಾರ್ಯದ ತಾತ್ತ್ವಿಕ ಸಿದ್ಧಾಂತ-ಶರಣರ ಮತ್ತು ದಾಸರ ಜೀವನ ದೃಷ್ಟಿ ಒಂದು ಉತ್ತಮ ಸಂಶೋಧನಾತ್ಮಕ ಕೃತಿಯಾಗಿದೆ. ಈ ಕೃತಿಗೆ ಸಮರ್ಥವಾದ ತಮ್ಮ ಮುನ್ನುಡಿಯಲ್ಲಿ ಡಾ.ಎಚ್.ಎಂ.ಮರುಳಸಿದ್ಧಯ್ಯನವರು ಹೀಗೆ ಹೇಳಿದ್ದಾರೆ, ಆಧುನಿಕ ಸಮಾಜಕಾರ್ಯವು ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿದು ವ್ಯಕ್ತಿಯನ್ನು ಪರಮೋಚ್ಚ ಸ್ಥಾನದಲ್ಲಿರಿಸಿರುವುದು, ಸಮಾಜವಾದವು ಈ ಸಮುದಾಯವನ್ನು ಪ್ರಾಣ ಜೀವಾಳವೆಂದು ಪರಿಗಣಿಸಿರುವುದು, ಅಂತೆಯೇ, ಪ್ರಾಚ್ಯ ಸಿದ್ಧಾಂತವು ವೃಂದದಲ್ಲಿಯೇ ವ್ಯಕ್ತಿಯನ್ನೂ, ಸಮುದಾಯವನ್ನೂ ಕಂಡುಕೊಳ್ಳುವಲ್ಲಿ ಪ್ರಯತ್ನಶೀಲವಾಗಿದೆ. ಇಂತಹ ಸಂಕೀರ್ಣ ಸ್ಥಿತಿಯಲ್ಲಿ ಪ್ರಜಾಪ್ರಭುತ್ವವನ್ನೇ ವೈಭವೀಕರಿಸಿ ಅನುಷ್ಠಾನಗೊಳಿಸುತ್ತಿರುವುದರಿಂದ ವ್ಯಕ್ತಿಗೇ ಪ್ರಾಧಾನ್ಯವನ್ನು ನೀಡಿ, ಅದರ ಪ್ರಕಾರ ಸಮಾಜಕಾರ್ಯದ ಎಲ್ಲ ಪರಿಕರಗಳನ್ನು ರೂಪಿಸಿ ಅನುಷ್ಠಾನಗೊಳಿಸುತ್ತಿರುವುದರಿಂದ ಸರಳ ಸಮಸ್ಯೆಗಳೂ ಭಾರತೀಯ ಸಮಾಜದಲ್ಲಿ ಸಂಕೀರ್ಣತೆಯನ್ನು, ಕ್ಲಿಷ್ಟತೆಯನ್ನು ಪಡೆಯುತ್ತಿರುವುದರಿಂದ ಸಮಾಜಕಾರ್ಯಕರ್ತರ ವಲಯಗಳು, ಅರ್ಥಿಗಳ ವಲಯಗಳು ಸಂಯೋಜನೆಗೊಳ್ಳದೆ ಒಡೆದ ಮನೆಗಳಾಗಿವೆ. ಇಂತಹ ಪರಿಸ್ಥಿತಿಯಲ್ಲಿರುವ ಸಮಾಜಕ್ಕೆ, ಪ್ರತಿ ಕುಟುಂಬಕ್ಕೆ ಮತ್ತು ಪ್ರತಿ ವ್ಯಕ್ತಿಗೆ ಸಮಾಜಕಾರ್ಯ ಅತ್ಯಂತ ಆವಶ್ಯಕವಾಗಿದೆ. ಆದರೆ, ಸಮಾಜಕಾರ್ಯದ ಅಳವಡಿಕೆಯೆಂದರೆ ಎಂತಹದೋ ರಾಕೆಟ್ ತಂತ್ರಜ್ಞಾನ, ತಮಗೆ ಸಿದ್ಧಿಸುವಂತಹದಲ್ಲವೆಂದೋ ಭಾವಿಸುವವರಿಗೆ ಸಮಾಜಕಾರ್ಯದ ಸರಳತೆಯನ್ನು ಈಗಲೂ ಇನ್ನೂ ತಿಳಿಸಬೇಕಿದೆ. ಜೊತೆಗೆ ಅದನ್ನು ನಮಗೆ ಸುಪರಿಚಿತವಾಗಿರುವ ರೀತಿನೀತಿಯಲ್ಲಿ ಹೇಳಿ ಆಪ್ತವಾಗಿಸಬೇಕಿದೆ. ಅಂತಹದೊಂದು ಸಮರ್ಥ ಪ್ರಯತ್ನದಲ್ಲಿ ಡಾ.ಸಿ.ಆರ್.ಗೋಪಾಲರು ಶರಣ ಮತ್ತು ದಾಸ ಭಕ್ತಿಪಂಥಗಳು ಬೆಳೆದು ಬಂದ ರೀತಿ, ಅವುಗಳ ತತ್ತ್ವಾಧಾರಗಳನ್ನು ಸಾಕ್ಷಿ ಸಮೇತ ತಿಳಿಸಿ ಅವುಗಳಲ್ಲಿ ಸಮಾಜಕಾರ್ಯದ ಮೂಲಗಳನ್ನು ಹುಡುಕಿಕೊಟ್ಟಿದ್ದಾರೆ. ಡಾ.ಸಿ.ಆರ್.ಗೋಪಾಲರ ಕೃತಿಯಲ್ಲಿ ಮೂರು ಹಂತಗಳನ್ನು ಗುರುತಿಸಬಹುದು. ಮೊದಲ ಹಂತವಾದ ಪೀಠಿಕೆಯಲ್ಲಿ ಸಮಾಜಕಾರ್ಯ ಕಲ್ಪನೆ ಮತ್ತು ನಮ್ಮ ಸಮಾಜದಲ್ಲಿ ಅದರ ಪ್ರಸ್ತುತತೆಯನ್ನು ವಿವರಿಸುತ್ತಾ ಪ್ರಮುಖವಾಗಿ ವೃತ್ತಿಶೀಲ ಸಮಾಜಕಾರ್ಯಕರ್ತರು ವ್ಯಕ್ತಿ, ವೃಂದ ಮತ್ತು ಕುಟುಂಬ ಹಾಗೂ ಸಮುದಾಯಗಳಲ್ಲಿ ಎಂತಹ ರೀತಿಯಲ್ಲಿ ತೊಡಗಿಕೊಳ್ಳಬೇಕೆಂದು ಸಂಕ್ಷಿಪ್ತವಾಗಿ ವಿವರಿಸಿದ್ದಾರೆ. ಅದೇ ಧಾಟಿಯಲ್ಲಿ ಸಮಾಜಕಾರ್ಯಕರ್ತರು ಅಳವಡಿಸಿಕೊಳ್ಳಬೇಕಾದ ತತ್ತ್ವಾದರ್ಶಗಳನ್ನು ವಿವರಿಸಿ ಸಮಾಜಕಾರ್ಯದ ಮೂಲ ಸಿದ್ಧಾಂತಗಳು, ಸೂತ್ರಗಳು ಮತ್ತು ಅವುಗಳನ್ನು ಸಮಾಜದಲ್ಲಿ ಅಳವಡಿಸಲು ಸಮಾಜಕಾರ್ಯಕರ್ತರು ಎಂತಹ ಮನಃಸ್ಥಿತಿಯನ್ನು ಹೊಂದಿರಬೇಕೆಂದು ತಿಳಿಸಿದ್ದಾರೆ. ಈ ಹಂತದಲ್ಲೇ ಒಂದು ರೀತಿ ಭಾರತೀಯ ಸಂಸ್ಕೃತಿ, ಜೀವನ ಪದ್ಧತಿ, ನ್ಯಾಯಾನ್ಯಾಯ ಕಲ್ಪನೆಗಳು ನಮ್ಮ ಮನಸ್ಸಿನಲ್ಲಿ ಸುಳಿಯಲಾರಂಭಿಸುತ್ತವೆ. ಬಹಳ ಪ್ರಮುಖವಾಗಿ ಧ್ವನಿಸುವುದು, ಡಾ.ಸಿ.ಆರ್.ಗೋಪಾಲರ ಅನುಭವದ ಮಾತು, ಸಮಾಜಕಾರ್ಯ ಪ್ರಕ್ರಿಯೆಯಲ್ಲಿ ಸಮಾಜಕಾರ್ಯಕರ್ತನ ಪಾತ್ರ ತುಂಬಾ ಹಿರಿದು. ಹಾಗಾಗಿ ಅವನ ವ್ಯಕ್ತಿತ್ವದ ಬಗ್ಗೆಯೂ ತಿಳಿದುಕೊಳ್ಳಬೇಕಾಗುತ್ತದೆ. ಸಮಾಜಕಾರ್ಯವನ್ನು ತಮ್ಮ ವೃತ್ತಿಯಾಗಿ ಒಪ್ಪಿಕೊಂಡಂತಹವರಿಗೆ ಅದೊಂದು ಪೂರ್ಣಾವಧಿ ಕೆಲಸ. ಅದಕ್ಕೆ ಅವಶ್ಯಕವಿರುವ ಜ್ಞಾನ, ವಿಧಾನ, ತತ್ತ್ವಾದರ್ಶ, ಕೌಶಲ್ಯ, ಹೊಣೆ ಅವರಿಗೆ ಇರಬೇಕಾಗುತ್ತದೆ. ಇದೆಲ್ಲಕ್ಕೂ ತರಬೇತಿ ಬೇಕು. ಕೆಲಸ ಮಾಡಲು ಸರಕಾರಿ/ಸರ್ಕಾರೇತರ ಸಂಸ್ಥೆಗಳು ಬೇಕು. ಇತರೆ ಪರಿಕರಗಳು ಬೇಕು. ಈ ಹಿನ್ನೆಲೆಯಲ್ಲಿ ಸಮಾಜಕಾರ್ಯಕರ್ತನನ್ನು ನೋಡಬೇಕಾಗಿದೆ. ಪ್ರಾಯಶಃ, ಇಂದಿನ ದಿನಗಳಲ್ಲಿ ಸಮಾಜಕಾರ್ಯವೆಂದರೆ, ಯಾರು ಬೇಕಾದರೂ ಮಾಡಬಹುದಾದ ಅಥವಾ ಕೆಲಸವಿಲ್ಲದವರೆಲ್ಲಾ ತೆಗೆದುಕೊಳ್ಳಬಹುದಾದ ಅಥವಾ ಧನಬಲ, ಅಧಿಕಾರಬಲ ಇರುವವರು, ರಾಜಕಾರಣದಲ್ಲಿರುವವರೂ ಸ್ವಯಂ ಆಗಿ ಘೋಷಿಸಿಕೊಳ್ಳಬಹುದಾದ ಕ್ಷೇತ್ರ ಮತ್ತು ತಮಗೆ ತಾವೇ ಪಟ್ಟ ಕಟ್ಟಿಕೊಳ್ಳಬಹುದಾದ ಬಿರುದು ಎಂಬ ಹುಂಬುತನವನ್ನು ಈ ಮೇಲಿನ ಹೇಳಿಕೆ ಸ್ಪಷ್ಟವಾಗಿ ವಿರೋಧಿಸುತ್ತದೆ. ಇದರೊಡನೆ, ಸುಮಾರು ಏಳೆಂಟು ದಶಕಗಳ ಹಿಂದೆ ಸಮಾಜಸೇವೆಯನ್ನೇ ಸಮಾಜಕಾರ್ಯವೆಂಬ ಅರ್ಥದಲ್ಲಿ ನೋಡುತ್ತಿದ್ದರು ಮತ್ತು ಅಂದಿನ ಹಲವು ಕೆಲಸಗಳಲ್ಲಿ ಈಗ ನಾವು ಹೇಳುತ್ತಿರುವ ನಿಯಮಗಳನ್ನು ಗುರುತಿಸುತ್ತಿದ್ದರು ಕೂಡಾ ಎಂಬುದನ್ನು ನಾವು ನೆನಪು ಮಾಡಿಕೊಳ್ಳಬೇಕಾಗಿದೆ. ಇಂತಹವುಗಳನ್ನು ಹಿಂದೆ ಆಗಿಹೋದ ಸಮಾಜ ಸುಧಾರಕರ ಪಂಥಗಳು/ಗುಂಪುಗಳ ಚಿಂತನೆ, ತತ್ತ್ವಾಧಾರಗಳನ್ನು ಸಮಾಜಕಾರ್ಯದ ಹಿನ್ನೆಲೆಯಲ್ಲಿ ಪರಿಚಯಿಸಿ, ಅವರ ಸಾಹಿತ್ಯ ಪ್ರಕಾರದಲ್ಲಿಂದಲೇ ಮತ್ತೆ ಸಮಾಜಕಾರ್ಯದ ಕುರುಹುಗಳನ್ನು ಪರಿಚಯಿಸುವ ಯತ್ನವನ್ನು ಎರಡು ಮತ್ತು ಮೂರನೇ ಹಂತಗಳಲ್ಲಿ ಗುರುತಿಸಬಹುದು. ಡಾ.ಸಿ.ಆರ್.ಗೋಪಾಲರು ಶರಣ ಸಾಹಿತ್ಯ ಮತ್ತು ದಾಸ ಸಾಹಿತ್ಯವನ್ನು ನಮ್ಮ ಮುಂದಿಡುತ್ತಾ, ಇವೆರಡರಲ್ಲೂ ಇರುವ ಜನಪರವಾದ ಧೋರಣೆಗಳು ಮತ್ತು ಚಿಕಿತ್ಸಕ ದೃಷ್ಟಿಕೋನವನ್ನು ಗುರುತಿಸುತ್ತಾರೆ. ಬರಿದೆ ಅಲ್ಲೊಂದು ಇಲ್ಲೊಂದು ವಚನವನ್ನೋ, ದಾಸಪದವನ್ನೋ ಉಲ್ಲೇಖಿಸಿ ಇದೇ ಅವರ ದೃಷ್ಟಿಕೋನ ಎಂದು ಹೇಳದೆ, ವಿಸ್ತಾರವಾಗಿ ಶರಣ ಸಂಸ್ಕೃತಿ ಮತ್ತು ದಾಸ ಸಂಸ್ಕೃತಿ ಜನಜೀವನವನ್ನು ತಿಳಿಸಿ ಮುಂದೆ ಅಲ್ಲಿನ ಸಾಹಿತ್ಯಕ್ಕೆ ಪ್ರವೇಶಿಸಿದ್ದಾರೆ. ಶೂನ್ಯ ಸಂಪಾದನೆ ಎಂಬುದನ್ನು ಸರಳವಾಗಿ ತಿಳಿಯುವುದು ಹೇಗೆ ಎನ್ನುವ ನನ್ನ ಹುಡುಕಾಟಕ್ಕೂ ಸಿ.ಆರ್.ಗೋಪಾಲರ ವಿವರಣೆ ಸಮಾಧಾನ ಹೇಳಿದೆ ಎನ್ನಬಹುದು. (ಪ್ರತಿಯೊಂದು) ಜೀವಿಯೂ ಆಣವ (ತಾನೊಂದು ಅಣು ಎಂಬ ಭಾವ); ಮಾಯಿಕ (ಶಿವ ಮತ್ತು ತಾನು ಬೇರೆ ಬೇರೆ ಎಂಬ ಭೇದ ಜ್ಞಾನ) ಮತ್ತು ಕಾರ್ಮಿಕ (ಸ್ಥೂಲ ಶರೀರ ಅನುಭವಿಸುವ ಸುಖ-ದುಃಖಗಳಲ್ಲಿ ಭಾಗಿಯಾಗುವ ಸ್ಥಿತಿ) ಎಂಬ ಮೂರು ಸ್ಥಿತಿಯನ್ನು ಅರಿತು, ಅವುಗಳಿಂದ ಹೊರಬಂದು, ಸಾಧನೆಯ ಮೂಲಕ ಶಿವನಲ್ಲಿ ಐಕ್ಯನಾಗಿ ಶಿವನಾಗುವುದು. ಇದೇ ಲಿಂಗಾಂಗ ಸಾಮರಸ್ಯ. ಇದೇ ಮೋಕ್ಷ. ಇದನ್ನೇ ಶರಣರು ಶೂನ್ಯ ಎಂದಿರುವುದು. ಅದೇ ಧಾಟಿಯಲ್ಲಿ ವೈಷ್ಣವ ತತ್ತ್ವದ ತಿರುಳುಗಳನ್ನು ಅಡಗಿಸಿಕೊಂಡಿರುವ ಅದ್ವೈತ, ದ್ವೈತ, ವಿಶಿಷ್ಟಾದ್ವೈತ ಮತಾಚಾರಗಳನ್ನು ಪರಿಚಯಿಸಿ, ದಾಸ ಸಾಹಿತ್ಯವನ್ನು ಪ್ರವೇಶಿಸುತ್ತಾರೆ. ಶರಣರು ಹೇಗೆ ಶಿವ ಮತ್ತು ತಾನು ಬೇರೆ ಬೇರೆ ಎಂದು ಹೇಳುತ್ತಲೇ ಶಿವನನ್ನು ಹೊಗುವತ್ತ ಸಾಗುತ್ತಾರೋ, ಅಂತೆಯೇ ದ್ವೈತ ಮತಾವಲಂಬಿಗಳಾಗಿದ್ದ ಬಹುತೇಕ ದಾಸರು, ದೇವ ಬೇರೆ ಜೀವ ಬೇರೆ ಎನ್ನುವ ಭೇದವಿಟ್ಟುಕೊಂಡೇ, ದೇಶಕಾಲಗಳಿಗೆ ತಕ್ಕುದಾದಂತೆ ಧರ್ಮವನ್ನು ಅನುಸರಿಸಿ, ಪುರುಷಾರ್ಥ ಮೋಕ್ಷವನ್ನು ಪಡೆಯಲೆತ್ನಿಸುತ್ತಾರೆ. ಈ ಎರಡರ ಅಂತರಂಗದಲ್ಲಿ ಇರುವುದು ಪ್ರತಿಯೊಬ್ಬ ವ್ಯಕ್ತಿಯೂ ವಿಶಿಷ್ಟ ಮತ್ತು ಪ್ರತಿಯೊಂದು ಕ್ರಿಯೆ ಪ್ರಕ್ರಿಯೆಯೂ ವಿಶಿಷ್ಟ ಎನ್ನುವ ಸಮಾಜಕಾರ್ಯದ ವೈಶಿಷ್ಟ್ಯವನ್ನು ವಿವರಿಸುವ ಪರಿಕಲ್ಪನೆ. ಡಾ.ಸಿ.ಆರ್. ಗೋಪಾಲರು ಈ ಎರಡು ಪಂಥಗಳ ಆಳ ಅಗಲಗಳ ಅಧ್ಯಯನ ಮಾಡುತ್ತಾ, ಹೇಗೆ ಶರಣರು ತಮ್ಮ ವಚನಗಳ ಮೂಲಕ ಮತ್ತು ದಾಸರು ತಮ್ಮ ಕೀರ್ತನೆಗಳ ಮೂಲಕ ವ್ಯಕ್ತಿಗತ ಮೌಲ್ಯವೃದ್ಧಿ, ಸಂಸಾರ ನಿರ್ವಹಣೆ, ಕಾಯಕದ ಮಹತ್ವ, ಸಮಾಜದ ಒಳಿತಿಗಾಗಿ ನಡೆದುಕೊಳ್ಳಬೇಕಾದ ವಿಧಿವಿಧಾನಗಳೇ ಮೊದಲಾದವುಗಳನ್ನು ಲೋಕ ಕಲ್ಯಾಣಕ್ಕಾಗಿ ಹೇಗೆ ತಿಳಿಸಿದ್ದಾರೆ, ಅವುಗಳಲ್ಲಿ ನಾವು (ನವೀನ ಚಿಂತಕರು ಹೇಳಿರುವ) ಸಮಾಜಕಾರ್ಯದ ಬೇರುಗಳನ್ನು ಕಾಣಬಹುದು ಎಂಬುದನ್ನು ದೃಷ್ಟಾಂತಗಳ ಮೂಲಕ ತೋರಿದ್ದಾರೆ. ಉದಾಹರಣೆಗೆ, ಬಸವಣ್ಣನವರು ಅಂತರಂಗ ಬಹಿರಂಗ ಶುದ್ಧಿಯನ್ನು ಪುಷ್ಟೀಕರಿಸಲು ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ...; ನುಡಿದರೆ ಮುತ್ತಿನ ಹಾರದಂತಿರಬೇಕು...; ಜಾತಿಪದ್ಧತಿಯನ್ನು ಪ್ರಶ್ನಿಸಿದ ಕನಕದಾಸರು, ಕುಲಕುಲ ಕುಲವೆನ್ನುತಿಹರು... ಎಂದಿದ್ದಾರೆ; ಜನರ ಬೂಟಾಟಿಕೆಯನ್ನು ಪುರಂದರ ದಾಸರು ಗೇಲಿ ಮಾಡುತ್ತಾ, ಮಡಿ ಮಡಿ ಮಡಿಯೆಂದಡಿಗಡಿಗ್ಹಾರುತಿ..., ಇತ್ಯಾದಿ. ಇವುಗಳೊಂದಿಗೆ ಡಾ.ಸಿ.ಆರ್. ಗೋಪಾಲರು ನಡೆಸಿರುವ ಸಮಾನಾಂತರ ಅಧ್ಯಯನ ಮತ್ತು ಉಲ್ಲೇಖ ಭಗವದ್ಗೀತೆ, ವೇದ, ಉಪನಿಷತ್ತುಗಳಲ್ಲೂ ಸಮಾಜಕಾರ್ಯದ ಅಂಶಗಳನ್ನು ಗುರುತಿಸಿರುವುದು. ಇಲ್ಲೊಂದು ಸ್ವಾರಸ್ಯಕರವಾದ ಅಂಶವನ್ನು ಸಿ.ಆರ್. ಗೋಪಾಲರು ಉಲ್ಲೇಖಿಸುತ್ತಾರೆ. ಜಗತ್ತಿನಲ್ಲಿ ಸದ್ಯ ನಾವು ಅನುಭವಿಸುತ್ತಿರುವುದು ಹಲವು ಧರ್ಮ, ಪಂಥಗಳ ಸ್ವಯಂಘೋಷಿತ ನಾಯಕರುಗಳು ತಮ್ಮ ದೈವವೇ ದೊಡ್ಡದು, ಅಥವಾ ತಮ್ಮ ಧರ್ಮಾಚರಣೆಯೇ ಶ್ರೇಷ್ಠ ಎನ್ನುವ ವಾಗ್ವಾದಗಳಿಂದಲೇ ವಿವಿಧ ಧರ್ಮಾನುಯಾಯಿಗಳು, ಗುಂಪುಗಳು, ಪ್ರಾಂತಗಳು, ವಿಭಾಗಗಳು ಅಷ್ಟೇಕೆ ದೇಶ ದೇಶಗಳ ನಡುವೆ ಯುದ್ಧಗಳಾಗುತ್ತಿರುವುದು. ಆದರೆ, ನಮ್ಮ ಸಂಸ್ಕೃತಿ ನಮಗೆ ಬಹಳ ಹಿಂದೆಯೇ ಬೋಧಿಸಿರುವುದು ಎಲ್ಲ ಧರ್ಮಗಳು, ಎಲ್ಲ ದೇವರೆಂಬ ಕಲ್ಪನೆಗಳು ಒಂದೇ ಎಂದು. ವಿವಿಧ ರೀತಿ ನೀತಿ, ವಿಧಾನ, ನಂಬಿಕೆ ಯಾವುದೇ ಆಗಲಿ ಅವೆಲ್ಲವೂ ಒಂದೇ ದೈವತ್ವವನ್ನು ಆರಾಧಿಸಿದಂತೆ ಅಥವಾ ಹೊಗುವಂತೆ. ಇಷ್ಟರ ಮೇಲೆ ದೈವ ಕಲ್ಪನೆಯನ್ನು ಒಪ್ಪದ ತರ್ಕಕ್ಕೂ ಅವಕಾಶವಿದೆ! ಅದನ್ನು ಬೇಲೂರು ಚೆನ್ನ ಕೇಶವ ದೇವಸ್ಥಾನದಲ್ಲಿ ಕೆತ್ತಿರುವ ಯಂ ಶೈವಸ್ಸಮುಪಾಸತೇ ಶಿವ ಇತಿ ಬ್ರಹ್ಮೇತಿ ವೇದಾಂತಿನೋ, ಬೌದ್ಧಾ ಬುದ್ಧ ಇತಿ ಪ್ರಮಾಣ ಪಟವಃ ಕರ್ತೇತಿ ನೈಯಾಯಿಕಾಃ ಅರ್ಹನ್ನಿತ್ಯಥ ಜೈನ ಶಾಸನರತಾಃ ಕರ್ಮೇತಿ ಮೀಮಾಂಸಕಾಃ (ಇದಕ್ಕೆ ಇತ್ತೀಚೆಗೆ ಸೇರಿಸಿರುವ ಸಾಲು ಎಂದು ಗೋಪಾಲರು ನೀಡಿದ್ದಾರೆ) ಕ್ರೈಸ್ತಾಃ ಕ್ರಿಸ್ತುರಿತಿ ಕ್ರಿಯಾಪದ ರಥಾಃ ಅಲ್ಲೇತಿ ಮೊಹಮ್ಮದಾಃ ಸೋಯಂ ನೋ ವಿಧದಾತು ವಾಂಛಿತ ಫಲಂ ತ್ರೈಲೋಕ್ಯ ನಾಥೋ ಹರಿಃ. ಹೀಗಾಗಿ ಹೊಡೆದಾಟ, ಹೋರಾಟಗಳೇಕೆ? ಹೀಗಿದ್ದರೂ, ನಮ್ಮ ದೇಶದಲ್ಲಿ ಹಿಂದಿನ ಶತಮಾನಗಳಲ್ಲಿ ಒಂದೇ ಧರ್ಮಾನುಯಾಯಿಗಳಲ್ಲಿನ ಪಂಥಗಳ ನಡುವೆ ಹೋರಾಟಗಳು ಆಗಿರುವುದು ವಿಪರ್ಯಾಸ! ಸಮಾಜಕಾರ್ಯದ ಹಲವು ನಿಯಮಗಳಲ್ಲಿ ಸರ್ವರನ್ನೂ ಸಮಾನರಾಗಿ ಪರಿಗಣಿಸಬೇಕು ಎಂಬುದು ಸಾಕಷ್ಟು ಪ್ರಮುಖವಾದುದು. ಶರಣರ ನುಡಿಯಲ್ಲಿ, ಕಾಸಿ ಕಮ್ಮಾರನಾದ, ಬೀಸಿ ಮಡಿವಾಳನಾದ, ಹಾಸನಿಕ್ಕಿ ಸಾಲಿಗನಾದ, ವೇದವನೋದಿ ಹಾರುವನಾದ ಎಂಬ ವಚನದಲ್ಲಿ ಲಿಂಗ, ವಯಸ್ಸು, ಕಸುಬು, ಜಾತಿ, ಪ್ರದೇಶ ಇದಾವುಗಳೂ ವ್ಯಕ್ತಿಯನ್ನು ಮೇಲು ಕೀಳು ಮಾಡುವುದಿಲ್ಲ ಎಂಬ ಭಾವ ಎದ್ದು ಕಾಣುತ್ತದೆ ಎಂದು ಗೋಪಾಲರು ವಿಶ್ಲೇಷಿಸಿ ದೃಷ್ಟಾಂತವನ್ನು ನೀಡಿದ್ದಾರೆ. ಸಮಾಜಕಾರ್ಯ ಬಹಳ ಮುಖ್ಯವಾಗಿ ಪ್ರಕ್ರಿಯೆ ಆಧಾರವಾದದ್ದು. ಅದೆಷ್ಟೋ ಬಾರಿ ನಿರ್ದಿಷ್ಟ ಉದ್ದೇಶವನ್ನಿಟ್ಟುಕೊಂಡು ನಡೆಸಿದ ಕೆಲಸ, ಕಾರ್ಯಕ್ರಮಗಳಲ್ಲಿ ನಾವಂದುಕೊಂಡಂತಹ ಫಲಿತಾಂಶ ಸಿಗದಿರಬಹುದು, ಆದರೆ, ಆ ಗುರಿಯತ್ತ ಸಾಗುತ್ತಿದ್ದಾಗ ಆಗುವ ವಿವಿಧ ರೀತಿಯ ಪ್ರಕ್ರಿಯೆಗಳಿಂದಾಗಿ ವಿವಿಧ ರೀತಿಯ ಪ್ರಯೋಜನಗಳು ಪರಿಣಾಮಗಳು ಸಂಭವಿಸುವ ಸಾಧ್ಯತೆಗಳಿರುತ್ತವೆ. ಅಂತಹದೊಂದು ಭಾವವನ್ನು ಸಿ.ಆರ್. ಗೋಪಾಲರು ಉದ್ಧರಿಸಿರುವುದು ಅತ್ಯಂತ ಹೆಚ್ಚು ಪ್ರಚಲಿತವಿರುವ ಭಗವದ್ಗೀತೆಯ ಸಾಲು, ಕರ್ಮಣ್ಯೇ ವಾಧಿಕಾರಸ್ತೇ ಮಾ ಫಲೇಶು ಕದಾಚನ... ಪ್ರಾಯಶಃ ಕರ್ಮದಲ್ಲಿ ಮಾತ್ರವೇ ನಿನಗೆ ಹಕ್ಕು, ಫಲಗಳಲ್ಲಿ ಎಂದೂ ಇಲ್ಲ, ಫಲವನ್ನು ನಂಬಿ ಎಂದೂ ಕೆಲಸ ಮಾಡಬೇಡ, ಇತ್ಯಾದಿಯಲ್ಲಿ ಸಮಾಜಕಾರ್ಯಕರ್ತರಿಗೂ ಒಂದು ಸಂದೇಶವಿರಬಹುದೇನೋ! ಕನ್ನಡ ನೆಲದ ವಚನ, ಕೀರ್ತನೆಗಳನ್ನು ಗೋಪಾಲರು ಗಮನಿಸಿರುವುದು ಸಮಾಜಕಾರ್ಯದ ದೃಷ್ಟಿಕೋನದಲ್ಲಿ ಎಂದು ಮತ್ತೆ ಮತ್ತೆ ತೋರುತ್ತಾ ಈ ಎರಡರಲ್ಲೂ ಶರಣರು ಮತ್ತು ದಾಸರು ಜಗದ ಹಿತವನ್ನು ಬಯಸುತ್ತಾ ತನ್ನನ್ನು ಬಣ್ಣಿಸದೆ, ತನಗೆ ಎಂದು ಹೇಳದೆ, ಹಣ, ಮಣ್ಣು, ಭೋಗವನ್ನು ಬಯಸದೆ ಇನ್ನೊಂದು ವ್ಯಕ್ತಿಗೆ ದ್ರೋಹ ತೊಂದರೆಯನ್ನು ಬಗೆಯದೆ, ನೋವು, ತೊಂದರೆಯಲ್ಲಿರುವವರಿಗೆ ತನ್ನನ್ನು ತಾನು ಸುಧಾರಿಸಿಕೊಳ್ಳಲು ಹೇಗೆ ನೆರವು ನೀಡುವುದು ಎಂದು ಹೇಗೆ ಬದುಕು ಸವೆಸಿದರು, ಆದರ್ಶಪ್ರಾಯರಾದರು ಎಂದಿದ್ದಾರೆ. ಇದೇ ವಿಚಾರಗಳನ್ನೇ ಸಮಾಜಕಾರ್ಯ ಶಾಸ್ತ್ರವೂ ತನ್ನ ಅಧ್ಯಯನದಲ್ಲಿ ತೋರಿರುವುದು. ಇದನ್ನು ಡಾ.ಸಿ.ಆರ್.ಗೋಪಾಲರು ಭಾರತೀಯ ಧಾರ್ಮಿಕ, ಸಾಂಸ್ಕೃತಿಕ ಮತ್ತು ಪಾರಮಾರ್ಥಿಕ ಜೀವನ ಪದ್ಧತಿಯಲ್ಲಿ ಶರಣರು ಮತ್ತು ದಾಸರು ಹೇಗೆ ಇದ್ದುಕೊಂಡು ತಮ್ಮ ತತ್ತ್ವಾದರ್ಶಗಳ ಮೂಲಕ ಸಮಾಜಕ್ಕೊಂದು ಮಾದರಿಯಾಗಿದ್ದರು ಎಂದು ವಿವರಿಸಿದ್ದಾರೆ. ಇವುಗಳ ಜೊತೆಯಲ್ಲೇ ಗೋಪಾಲರು ಒಂದು ಆಶಯವನ್ನೂ ವ್ಯಕ್ತಪಡಿಸಿದ್ದಾರೆ. ಭಾರತೀಯ ಸಮಾಜಕಾರ್ಯ ಪದ್ಧತಿ, ಪ್ರಕ್ರಿಯೆ ಕುರಿತು ಅಧ್ಯಯನ ಇನ್ನೂ ಆಳವಾಗಿ ಆಗಬೇಕು. ಅದನ್ನು ವಿಶ್ವವಿದ್ಯಾಲಯಗಳು ಕೈಗೆತ್ತಿಕೊಳ್ಳಬೇಕು, ಜೊತೆಗೆ ಇಂತಹದೊಂದು ಅಧ್ಯಯನ ಭಾರತ ದೇಶದ ಮಟ್ಟದಲ್ಲಿ ಆಗಬೇಕೆಂದು. ಡಾ.ಸಿ.ಆರ್.ಗೋಪಾಲರು ನಡೆಸಿರುವ ಶರಣ ಮತ್ತು ದಾಸರ ಜೀವನ ದೃಷ್ಟಿಕೋನದಲ್ಲಿ ಸಮಾಜಕಾರ್ಯದ ತಾತ್ತ್ವಿಕ ಸಿದ್ಧಾಂತದ ಸಂಶೋಧನಾತ್ಮಕ ಅಧ್ಯಯನ ಇಂತಹದೊಂದು ರಾಷ್ಟ್ರೀಯ ಮಟ್ಟದ ಚಳವಳಿಗೆ ಸಮರ್ಥವಾದ ಮೆಟ್ಟಿಲು ಎಂದು ಹೇಳಬಹುದು. ಮುಂದೊಂದು ದಿನ ಗೋಪಾಲರ ಆಶಯ ಈಡೇರಬಹುದು. ಡಾ.ಸಿ.ಆರ್.ಗೋಪಾಲರ ಈ ಪುಟ್ಟ ಕೃತಿಯನ್ನು ಪೂರ್ಣವಾಗಿ ಓದುವ ಹೊತ್ತಿಗೆ ಯಾರಿಗೇ ಆಗಲಿ ಅರೆ, ಈ ಎಲ್ಲ ಚಿಂತನೆಗಳು ನಮ್ಮ ಮಣ್ಣಿನಲ್ಲಿಯೇ ಹುಟ್ಟಿರುವುದಲ್ಲವೇ, ನಮ್ಮ ಕುಟುಂಬಗಳಲ್ಲಿ ಇವುಗಳಲ್ಲಿ ಹಲವನ್ನು ಅನುಸರಿಸುತ್ತಿದ್ದೆವಲ್ಲವೆ? ಆದರೆ, ಅವುಗಳು ಇಂದು ಎಲ್ಲಿ ಮರೆಯಾದವು ಅಥವಾ ಕಳೆದು ಹೋದವು ಅಥವಾ ತಿರಸ್ಕಾರಕ್ಕೆ ಗುರಿಯಾದವು ಎಂಬ ಉದ್ಗಾರ ಬಾರದಿರುವುದಿಲ್ಲ. ಗೋಪಾಲರು ವಚನ, ದಾಸರ ಕೃತಿಗಳು, ಭಗವದ್ಗೀತೆಯ ಉಲ್ಲೇಖಗಳನ್ನು ನೀಡುತ್ತಿದ್ದಾಗ, ಇವುಗಳನ್ನೆಲ್ಲಾ ನಾವೂ ಮತ್ತೆ ಓದಿ ಅರ್ಥಮಾಡಿಕೊಳ್ಳಬೇಕೆಂಬ ಆಶೆ ಹುಟ್ಟಿದರೆ ಆಶ್ಚರ್ಯವಿಲ್ಲ. ಹೀಗಾಗಿ ಈ ಕೃತಿ ಕೇವಲ ಸಮಾಜಕಾರ್ಯಕರ್ತರು, ಅಧ್ಯಯನಶೀಲರು ಅಥವಾ ಸಂಶೋಧಕರಿಗೆ ಮಾತ್ರವಲ್ಲ, ಯಾವುದೇ ಸಹೃದಯ ಓದುಗರಿಗೆ ಸರಳವಾಗಿ ತಲುಪಲು, ಪ್ರತಿಯೊಬ್ಬರೂ ಈ ಕುರಿತು ಆಲೋಚಿಸಲು ಸಹಕಾರಿಯಾಗಿದೆ. ಎನ್.ವಿ. ವಾಸುದೇವ ಶರ್ಮಾ ನಿರ್ದೇಶಕ, ಮಕ್ಕಳ ಹಕ್ಕುಗಳ ಟ್ರಸ್ಟ್
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
SITE MAP
SiteTRAININGJOB |
HR SERVICESOTHER SERVICESnIRATHANKA CITIZENS CONNECT |
NIRATHANKAPOSHOUR OTHER WEBSITESSubscribe |
MHR LEARNING ACADEMY
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|