ಪ್ರೀತಿ, ತ್ಯಾಗ, ಸೇವೆ-ಇವು ಮಾತ್ರ ಭಾರತದ ಉದ್ಧಾರವನ್ನು ಮಾಡಲು ಶಕ್ತ. ಸ್ವಾಮಿ ವಿವೇಕಾನಂದರ ಈ ಮಾತನ್ನು ಅಕ್ಷರಶ: ಆಚರಣೆಗೆ ತಂದು ತೋರಿಸಿರುವವರು ಬಿಳಿಗಿರಿರಂಗನ ಬೆಟ್ಟದ ಸೋಲಿಗರ ಆರಾಧ್ಯ ದೈವವೆನಿಸಿಕೊಂಡಿರುವ ಡಾ. ಸುದರ್ಶನ್‍ರವರು. ಡಾ. ಎಚ್. ಸುದರ್ಶನ್‍ರವರು ಬೆಂಗಳೂರು ದಕ್ಷಿಣ ತಾಲ್ಲೂಕಿನ ಯಮಲೂರು ಗ್ರಾಮಕ್ಕೆ ಸೇರಿದ ರೈತ ಕುಟುಂಬವೊಂದರಲ್ಲಿ 1950 ಡಿಸೆಂಬರ್ 30 ರಂದು ಜನ್ಮತಾಳಿದರು. ತಂದೆ ಹನುಮರೆಡ್ಡಿ, ಎಚ್.ಎ.ಎಲ್‍ನಲ್ಲಿ ಉದ್ಯೋಗಿ. ತಾಯಿ ಚಿನ್ನಮ್ಮ. ತನ್ನ 12ನೆಯ ವಯಸ್ಸಿನಲ್ಲಿದ್ದಾಗ ವೈದ್ಯಕೀಯ ಸೌಲಭ್ಯವಿಲ್ಲದೆ ತನ್ನ ಕಣ್ಣ ಮುಂದೆಯೇ ತನ್ನ ತಂದೆಯ ಸಾವಿನ ದೃಶ್ಯವನ್ನು ನೋಡಿದ ಸುದರ್ಶನ್ ಅವರಿಗೆ ವೈದ್ಯಕೀಯ ಅಧ್ಯಯನದ ಕಡೆ ಆಸಕ್ತಿ ಬೆಳೆಯಿತು. ಸುದರ್ಶನ್ ಅವರು 3ನೆಯ ತರಗತಿಯವರೆಗು ಯಮಲೂರಿನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದರು. ನಂತರ ತನ್ನ ಪೋಷಕರೊಡನೆ ಹಳ್ಳಿಯಿಂದ ಎತ್ತಿನಗಾಡಿಯಲ್ಲಿ ಬಂದು ಬೆಂಗಳೂರಿನ ಜಯನಗರದಲ್ಲಿ ನೆಲೆಸಿದರು. ರಾಣಿ ಸರಳಾದೇವಿ ಶಾಲೆ, ಜಯನಗರ ಮತ್ತು ರಾಷ್ಟ್ರೀಯ ವಿದ್ಯಾಲಯದಲ್ಲಿ ತಮ್ಮ ಪ್ರೌಢಶಿಕ್ಷಣವನ್ನು ಮುಗಿಸಿದರು. ಬಾಲ್ಯದಿಂದಲೂ ತುಂಬಾ ಬುದ್ಧಿವಂತರಾಗಿದ್ದರಿಂದ ತಮ್ಮ ಶಾಲೆಯಲ್ಲಿ ಡಬಲ್ ಪ್ರೊಮೋಷನ್ ಪಡೆದರು. ಬೆಳೆಯುವ ಸಿರಿ ಮೊಳಕೆಯಲ್ಲಿಯೇ ಎಂಬಂತೆ ಎಸ್.ಎಸ್.ಎಲ್.ಸಿ ಯಲ್ಲಿ ಉನ್ನತ ದರ್ಜೆಯಲ್ಲಿ ತೇರ್ಗಡೆ ಹೊಂದಿದರು. ತಮ್ಮ ಪದವಿ ಪೂರ್ವ ಶಿಕ್ಷಣವನ್ನು ಬೆಂಗಳೂರಿನ ಸೆಂಟ್ ಜೋಸೆಫ್ ಕಾಲೇಜಿನಲ್ಲಿ ಮುಗಿಸಿದರು. ಮೆಡಿಕಲ್‍ಗೆ ಸೇರಬೇಕಾದಾಗ ಅವರ ವಯಸ್ಸು ನಿಗಧಿಗಿಂತ ಕಡಿಮೆಯಾದ್ದರಿಂದ ಒಂದು ವರ್ಷಗಳ ಕಾಲ ತನ್ನ ತಂದೆಯ ಸ್ನೇಹಿತರೊಬ್ಬರ ಕೃಷ್ಣ ಪ್ಲೋರ್ ಮಿಲ್ನಲ್ಲಿ ಗುಮಾಸ್ತರಾಗಿ ಕೆಲಸ ಮಾಡಿದರು. ಡಾ. ಸುದರ್ಶನ್ 1974 ರಲ್ಲಿ ತುಂಬುನೋವಿನ ಸಾಮಾಜಿಕ ಹಿನ್ನಲೆಯಲ್ಲಿ ವೈದ್ಯಕೀಯ ಪದವಿ ಗಳಿಸಿ 1975 ರಲ್ಲಿಯೇ ರಾಮಕೃಷ್ಣರು ಹಾಗೂ ಸ್ವಾಮಿ ವಿವೇಕಾನಂದರ ತತ್ತ್ವಗಳಿಗೆ ಬದ್ಧರಾಗಿ ಹಿಮಾಲಯದ ರಾಮಕೃಷ್ಣ ಮಿಷನ್ ಹೆಲ್ತ್ ಪ್ರಾಜೆಕ್ಟ್‍ನ ಸೇವಾಕರ್ತರಾಗಿ ಕಾರ್ಯನಿರ್ವಹಿಸಿದರು. ನಂತರ ಬೇಲೂರು ಮಠದಲ್ಲಿ ಸ್ವಲ್ಪ ದಿನ ಇದ್ದು ಕೊಡಗಿನ ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಆಶ್ರಮದಲ್ಲಿ ವೈದ್ಯಕೀಯ ಸೇವೆ ಸಲ್ಲಿಸಿದರು. 1978 ರಲ್ಲಿ ದೇಶಕ್ಕೆ ತನ್ನ ಸೃಜನಾತ್ಮಕ ಕಾಣಿಕೆಯನ್ನು ನೀಡಬೇಕೆಂದು ಬಿಳಿಗಿರಿರಂಗನ ಬೆಟ್ಟಕ್ಕೆ ಬಂದರು. 1980 ರಲ್ಲಿ ಕೇವಲ 5000 ರೂಗಳ ಆಯ-ವ್ಯಯದಲ್ಲಿ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರ (ವಿ.ಜಿ.ಕೆ.ಕೆ) ವನ್ನು ಸ್ಥಾಪಿಸಿದರು. ಬಿಳಿಗಿರಿ ರಂಗನಬೆಟ್ಟದಲ್ಲಿ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರದ ಮುಖಾಂತರ ಗಿರಿಜನರಿಗೆ ಆರೋಗ್ಯ, ವಿದ್ಯಾಭ್ಯಾಸವನ್ನು ಒದಗಿಸುವ ಸಲುವಾಗಿ, ಬುಡಕಟ್ಟು ಜನರ ಅಭಿವೃದ್ಧಿಗಾಗಿ ಸುಮಾರು 30 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಡಾ. ಎಚ್. ಸುದರ್ಶನ್ ಅವರು ಇಡೀ ಕರ್ನಾಟಕದಾದ್ಯಂತ ಮನೆಮಾತಾಗಿದ್ದಾರೆ. ನಂತರ ಯಳಂದೂರು ಮತ್ತು ಕೊಳ್ಳೆಗಾಲ ಜಿಲ್ಲೆಯ ವ್ಯಾಪ್ತಿಯಲ್ಲಿ ಕುಷ್ಠರೋಗ ನಿರ್ಮೂಲನೆಗಾಗಿ ಕರುಣಾ ಟ್ರಸ್ಟ್ ಅನ್ನು ಸ್ಥಾಪಿಸಿದರು. ಇಂದು ಕರುಣಾ ಟ್ರಸ್ಟ್ 5 ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ಸಂಗತಿ. ಬಿಳಿಗಿರಿ ರಂಗನಬೆಟ್ಟದ ಸೋಲಿಗರ ಕಾಡುಗಳಲ್ಲಿ ಸರಿಯಾದ ರಸ್ತೆ, ವಿದ್ಯುತ್ ಹಾಗೂ ನೀರಿನ ಸೌಲಭ್ಯಗಳಿಲ್ಲದೆ ಜೀವಿಸುತ್ತಿದ್ದರು. ದಟ್ಟ ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿದ್ದ ಇವರು ಅನೇಕ ರೀತಿಯ ರೋಗಗಳಿಗೆ ತುತ್ತಾಗುತ್ತಿದ್ದರೂ ಅವರಿಗೆ ಯಾವುದೇ ರೀತಿಯ ಚಿಕಿತ್ಸೆ ಲಭ್ಯವಿರಲಿಲ್ಲ.
ಇವುಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಡಾ.ಸುದರ್ಶನ್‍ರವರು ಒಂದು ಸಣ್ಣ ಕ್ಲಿನಿಕ್ ಆರಂಭಿಸಿದರು. ಕ್ರಮೇಣ ಕೇವಲ ಆರೋಗ್ಯ, ಔಷಧಿಯಿಂದ ಸೋಲಿಗರ ಸುಧಾರಣೆ ಸಾಧ್ಯವಿಲ್ಲವೆಂದು ಅನಿಸಿ, ಅವರಿಗೆ ಸಮಾನತೆ, ಸಂಘಟನೆ, ಆಹಾರ, ಶಿಕ್ಷಣ ಸ್ವಾತಂತ್ರ್ಯಗಳು ಬೇಕೆಂದು ತೀರ್ಮಾನಿಸಿ ಅವರಿದ್ದ ಗುಡಿಸಲಲ್ಲೆ ಒಂದು ಶಾಲೆ ತೆರೆದು ಶಿಕ್ಷಣ ನೀಡಲು ಶುರುಮಾಡಿದರು. ಸೋಲಿಗರ ಆರಾಧ್ಯದೈವ ಡಾ. ಎಚ್. ಸುದರ್ಶನ್ ಅವರು ಗಿರಿಜನರೊಂದಿಗೆ ದುಡಿಯಲು ಹಿನ್ನಲೆಯಿದೆ. ವೈದ್ಯಕೀಯ ಸೌಲಭ್ಯವಿಲ್ಲದೆ ತನ್ನ ತಂದೆಯವರು ತನ್ನ ಮಡಿಲಲ್ಲಿ ಪ್ರಾಣ ಬಿಟ್ಟ ಪ್ರಸಂಗ ಮತ್ತು ಮೆಡಿಕಲ್ ಕಾಲೇಜು ಓದುತ್ತಿರುವಾಗ ಒಮ್ಮೆ ನೀಲಗಿರಿ ಬೆಟ್ಟಕ್ಕೆ ಹೋಗಿದ್ದಾಗ ಅಲ್ಲಿ ಗಿರಿಜನರ ಅಭಿವೃದ್ಧಿಗಾಗಿ ದುಡಿಯುತ್ತಿರುವ ಡಾ. ನರಸಿಂಹನ್ ಅವರ ಪರಿಚಯವಾಗಿ ಅವರ ಹಾದಿಯಲ್ಲಿಯೇ ಬಡವರ ಸೇವೆ ಮಾಡುವ ಆಸೆ ತೀವ್ರವಾಯಿತು. (1979 ರಲ್ಲಿ ಬಿಳಿಗಿರಿರಂಗನ ಬೆಟ್ಟಕ್ಕೆ ಬಂದ ಸುದರ್ಶನ್ರವರ 6 ತಿಂಗಳು ಕಠಿಣ ಪರಿಶ್ರಮ ಅವರನ್ನು ಅವರನ್ನು ಸೋಲಿಗರ ವಿಶ್ವಾಸಕ್ಕೆ ಪಾತ್ರರಾಗುವಂತೆ ಮಾಡಿತು.) 1987ರಲ್ಲಿ ಯಳಂದೂರಿನಲ್ಲಿ ಇವರು ಸ್ಥಾಪಿಸಿದ ಕರುಣಾ ಟ್ರಸ್ಟ್ ತ್ಯಾಗ ಸೇವೆ, ಶ್ರದ್ಧೆ, ಪರಿಶ್ರ್ರಮಗಳಿಂದ ಕೂಡಿದ ಅನುಪಮ ಸಾಧನೆಯ ಫಲವಾಗಿ ಯಳಂದೂರು ತಾಲ್ಲೂಕಿನಲ್ಲಿ ಕುಷ್ಠ, ಕ್ಷಯ ಮತ್ತು ಮೂರ್ಛೆ ರೋಗಗಳ ಸಮೀಕ್ಷೆ ಕೈಗೊಂಡು ಆ ಮುಖಾಂತರ ಚಿಕಿತ್ಸೆಗಾಗಿ ಕಾರ್ಯೋನ್ಮುಖರಾಗಿ ಮುನ್ನಡೆಯುತ್ತಿದ್ದಾರೆ. ಡಾ.ಸುದರ್ಶನ್ ಅವರ ಬೆಂಬಲಿಗರಾಗಿ ಡಾ.ಸೋಮಸುಂದರಂ, ಜಿ.ಎಸ್.ಜಯದೇವ, ಜಿ.ಮಲ್ಲೇಶ್, ರಾಮಾಚಾರ್ ಹೀಗೆ ಹತ್ತಾರು ವ್ಯಕ್ತಿಗಳು ಕೇಂದ್ರದ ಧ್ಯೆಯೋದ್ದೇಶಗಳಿಗೆ ಅನುಗುಣವಾಗಿ ಶ್ರದ್ಧೆ-ನಿಷ್ಠೆಯಿಂದ ಎಲೆಮರೆಯ ಕಾಯಿಗಳಂತೆ ಸದ್ದುಗದ್ದಲವಿಲ್ಲದೆ ಸೇವಾದೀಕ್ಷೆತೊಟ್ಟು ಕಾರ್ಯನಿರತರಾಗಿದ್ದಾರೆ. ಆರಂಭದಲ್ಲಿ ಸೋಲಿಗರೊಡನೆ ಸ್ಪಂದಿಸಿ ಅವರಲ್ಲಿ ವಿಶ್ವಾಸ ಮೂಡಿಸುವುದು ಬಹಳ ಕಷ್ಟವಾಗಿತ್ತು. ಅವರನ್ನು ನೋಡಿದರೆ ಸೋಲಿಗರು ನಾಚಿಕೆ ಸಂಕೋಚ ಮತ್ತು ಭಯದಿಂದ ಓಡಿಹೋಗುತ್ತಿದ್ದರು. ಕೆಲವರು ಮರ ಹತ್ತಿ ಕೂತರೆ ಮತ್ತೆ ಕೆಲವರು ಗುಡಿಸಲಿನಿಂದ ಹೊರ ಬರುತ್ತಿರಲಿಲ್ಲ. ಒಮ್ಮೆ ಸೋಲಿಗರ ಬಾಲಕನೊಬ್ಬನಿಗೆ ಹಾವು ಕಚ್ಚಿ-ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಗ, ಡಾ. ಸುದರ್ಶನ್ ಅವರು ತಮ್ಮ ಬಾಯಿಯಿಂದಲೇ ವಿಷಯುಕ್ತ ರಕ್ತವನ್ನು ತೆಗೆದು ಬಾಲಕನನ್ನು ಬದುಕಿಸಿದರು. ಇದರಿಂದಾಗಿ ಸೋಲಿಗರಿಗೆ ಇವರಲ್ಲಿ ವಿಶ್ವಾಸ ಬಂದಿತು. 1980ರ ಸುಮಾರಿಗೆ ಸೋಲಿಗರಿಗಾಗಿ ಶಾಲೆಯನ್ನು ತೆರೆದ ಡಾ.ಸುದರ್ಶನರವರು ಒಂದು ಪುಟ್ಟ ಗುಡಿಸಲಿನಲ್ಲಿ ಕೇವಲ 6 ವಿದ್ಯಾರ್ಥಿಗಳನ್ನು ಇಟ್ಟುಕೊಂಡು ಕಾರ್ಯಪ್ರವೃತ್ತರಾದರು. ಆದರೆ ಇಂದು ಅದೇ ಶಾಲೆಯಲ್ಲಿ ಸುಮಾರು 700 ಮಕ್ಕಳು ಓದುತ್ತಿದ್ದಾರೆ, 10 ಮಂದಿ ಪದವಿಗಳಿಸಿದ್ದಾರೆ, 50 ಮಂದಿ ಪಿಯುಸಿ ಓದಿ ಕೆಲಸಕ್ಕೆ ಸೇರಿದ್ದಾರೆ. 60 ಸೋಲಿಗ ಹೆಣ್ಣುಮಕ್ಕಳು ಎ.ಎನ್.ಎಂ.ಗಳಾಗಿದ್ದಾರೆ ಇದು ಡಾ.ಸುದರ್ಶನರ ಅವಿರತ ಪರಿಶ್ರಮದ ಫಲ. ಈ ನಿಃಸ್ವಾರ್ಥ ಸೇವೆಯ ಮಾನವ ಪ್ರೇಮಿಯ ಹಾದಿಯು ಬರಿಯ ಹೂವಿನ ಹಾಸಿಗೆಯಾಗಿರಲಿಲ್ಲ, ಪ್ರಾಣ ಹಿಂಡುವ ಮುಳ್ಳುಗಳು ಇದ್ದವು. ಅವುಗಳಲ್ಲಿ ಒಂದನ್ನು ಸ್ವತಃ ಸುದರ್ಶನ್ರವರು ಹೀಗೆ ವಿವರಿಸುತ್ತಾರೆ. ರಾಜ್ಯ ಸರಕಾರ ನನಗೆ ರಾಜ್ಯಪ್ರಶಸ್ತಿಯನ್ನು ನೀಡಿದೆ, ನಾನು ಎರಡು ದಿನ ಜೈಲಿನಲ್ಲೂ ಇದ್ದೆ. ನಮ್ಮ ಸರಕಾರದಲ್ಲಿ ಕೆಲವರು ಒಳ್ಳೆಯವರಿದ್ದಾರೆ. ಅವರು ನಮಗೆ ಬಹುಬಗೆಯಲ್ಲಿ ಸಹಾಯ ಮಾಡಿದ್ದಾರೆ. ಹಾಗೆಯೇ ಕೆಲವು ಭ್ರಷ್ಟ ಅಧಿಕಾರಿಗಳೂ ಇದ್ದಾರೆ, ಅವರು ನಮಗೆ ಕಿರುಕುಳ ನೀಡಿದ್ದಾರೆ. ಎತ್ತಿನಂಗಡಿ ಚಾಮರಾಜನಗರದ ಒಂದು ಪುಟ್ಟ ಹಳ್ಳಿ. ಅಲ್ಲಿಯ ಗಿರಿಜನರಿಗೆ ಸರಕಾರ ಬಹಳ ಹಿಂದೆಯೇ ಭೂಮಿಕೊಟ್ಟಿತ್ತು. ಅದಕ್ಕೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ಅವರು ಕಳೆದುಕೊಂಡಿದ್ದರು. ಅದನ್ನು ತಿಳಿದ ಸ್ಥಳೀಯ ಭ್ರಷ್ಟರು ಆ ಭೂಮಿಯನ್ನು ಕಬಳಿಸಲು ಅಧಿಕಾರಿಗಳಿಗೆ ಲಂಚನೀಡಲು ಪ್ರಯತ್ನಿಸಿದರು. ತಮಗೇ ಸೇರಿದ ಜಾಗದಲ್ಲಿ ಸೋಲಿಗರು ಉತ್ತಿ ಬಿತ್ತಿದ ಬೆಳೆ ಪೈರನ್ನು ಪೊಲೀಸರ ಜತೆಗೆ ಬಂದ ಜಮೀನ್ದಾರರು ಕೊಯ್ದುಕೊಂಡು ಹೋದರು. ಸೋಲಿಗರು ಅವರ ವಿರುದ್ಧ ಒಟ್ಟಾದಾಗ ಪೊಲೀಸರು ಅವರನ್ನು ಜೈಲಿಗೆ ಹಾಕಿದರು. ಹಳ್ಳಿಯ ಜನರ ಮೇಲೆ ದೌರ್ಜನ್ಯ ಹೆಚ್ಚಾಯಿತು. ಇಂಥ ಸಂದರ್ಭದಲ್ಲಿ ನಾನು ಗಿರಿಜನರ ಪರವಾಗಿ ನಿಂತೆ. ಅವರ ಬಿಡುಗಡೆಗೆ ಪ್ರಯತ್ನಿಸಿ ನಾನೂ ಜೈಲು ಸೇರಿದೆ. ಎನ್ನುವ ಡಾ. ಸುದರ್ಶನ್ ಇಂಥ ಕ್ಲಿಷ್ಟಕರ ಸನ್ನಿವೇಶದಲ್ಲಿ ತಮ್ಮ ಸಹಾಯಕ್ಕೆ ನಿಂತ ಅನೇಕರನ್ನು ಮುಖ್ಯವಾಗಿ ಜಿಲ್ಲಾಧಿಕಾರಿ ಮದನ್ ಗೋಪಾಲರನ್ನು ಕೃತಜ್ಞಾಪೂರ್ವಕವಾಗಿ ನೆನಪಿಸಿಕೊಳ್ಳುತ್ತಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪುರಸ್ಕಾರ ಪಡೆದಿರುವ ಮಾತ್ರಕ್ಕೆ ನನ್ನ ಎಲ್ಲಾ ಕೆಲಸ ಮುಗಿದಿಲ್ಲ ಮಾಡಬೇಕಿರುವುದು ಇನ್ನೂ ಇದೆ ಎನ್ನುವ ಡಾ.ಸುದರ್ಶನ್‍ರವರು ತಮ್ಮ ಮುಂದಿನ ಕಾರ್ಯಗಳನ್ನು ಹೀಗೆ ವಿವರಿಸುತ್ತಾರೆ. ಎಲ್ಲ ಸೋಲಿಗರಿಗೂ ಭೂಮಿ ಹಂಚಲು ಸಾಧ್ಯವಾಗಿಲ್ಲ. ಸುಮಾರು ಅರ್ಧದಷ್ಟು ಕುಟುಂಬಗಳಿಗೆ (ಈ ಕೇಂದ್ರದ ವ್ಯಾಪ್ತಿಗೆ 3000 ಕುಟುಂಬಗಳ 2000 ಸೋಲಿಗರು ಬರುತ್ತಾರೆ) ಮಾತ್ರ ಕೃಷಿ ಯೋಗ್ಯ ಜಮೀನಿದೆ. ಉಳಿದವರಿಗೆ ನೀಡಲು ಜಮೀನಿನ ಕೊರತೆ ಇದೆ. ಅದಕ್ಕಾಗಿ ಯೋಜನೆ ರೂಪಿಸಬೇಕಿದೆ. ಗಿರಿಜನ ಸಂಸ್ಕೃತಿಯ ಮೂಲಭೂತ ಲಕ್ಷಣಗಳನ್ನು ಉಳಿಸಿಕೊಳ್ಳಲು ಆಗುತ್ತಿಲ್ಲ. ಗಿರಿಜನ ಕಲ್ಯಾಣ ಕೇಂದ್ರ ತನ್ನ ಎಲ್ಲ ಚಟುವಟಿಕೆಗಳಲ್ಲಿ ಆದಷ್ಟು ಮಟ್ಟಿಗೆ ಅವರ ಸಂಪ್ರದಾಯಗಳಿಗೆ ಒತ್ತುಕೊಟ್ಟುಕೊಂಡು ಬರಲು ಪ್ರಯತ್ನಿಸುತ್ತಿದ್ದರೂ ದೂರದರ್ಶನ, ಸರ್ಕಾರದ ಯೋಜನೆಗಳು ಮುಂತಾದವು ದಾಳಿ ನಡೆಸುತ್ತಲೇ ಇವೆ. 8ನೆಯ ತರಗತಿಯ ನಂತರ ಸೋಲಿಗ ವಿದ್ಯಾರ್ಥಿಗಳಿಗೆ ಅರಣ್ಯ ವಿಜ್ಞಾನ ಎಂಬ ವಿಷಯದ ಕಲಿಕೆಯನ್ನು ಪಠ್ಯಕ್ರಮದಲ್ಲಿ ಸೇರಿಸಲು ಕೇಂದ್ರವು ಪ್ರಯತ್ನ ನಡೆಸುತ್ತಿದೆ. ಸೋಲಿಗ ಮಕ್ಕಳಿಗೆ ಅರಣ್ಯದ ಬಗ್ಗೆ ಪ್ರಾಕ್ಟಿಕಲ್ ಜ್ಞಾನ ಇರುತ್ತದೆ ಆದರೆ ಥಿಯರಿ ತಿಳಿದಿರುವುದಿಲ್ಲ. ಅದನ್ನು ಕಲಿಸುವುದೇ ನಮ್ಮ ಈ ಪ್ರಯತ್ನದ ಹಿಂದಿನ ಉದ್ದೇಶ. ಆಗ ಈ ಶಿಕ್ಷಣ ವೃತ್ತಿಪರವಾಗಿ ಅರಣ್ಯ ಇಲಾಖೆಯಲ್ಲೇ ಸೋಲಿಗ ಯುವಕರಿಗೆ ನೌಕರಿ ಸಿಗಬಹುದು. ಆಸ್ಪತ್ರೆ ಮತ್ತು ಶಾಲೆಯನ್ನು ಹೊರತುಪಡಿಸಿ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರದ ಉಳಿದೆಲ್ಲ ಚಟುವಟಿಕೆಗಳನ್ನು ಗಿರಿಜನರಿಗೇ ವಹಿಸಿಕೊಡುವ ಉದ್ದೇಶವಿದೆ. ಸೋಲಿಗರು ಸ್ವಾವಲಂಬಿಗಳಾಗಲು ಕೇಂದ್ರವು ಹಾಕಿಕೊಂಡಿರುವ ಆದಾಯಗಳಿಕೆ ಕಾರ್ಯಕ್ರಮಗಳನ್ನು ಇನ್ನಷ್ಟು ವ್ಯವಸ್ಥಿತವಾಗಿ ನಡೆಸಬೇಕಿದೆ. ಈ ಕೆಲಸಕ್ಕೆ ಹೆಚ್ಚೆಚ್ಚು ಕಾರ್ಯಕರ್ತರ ಪೂರೈಕೆಯಾಗಬೇಕಿದೆ ಎನ್ನುವ ಡಾ.ಸುದರ್ಶನ್ ರವರು ಕೊನೆಯಲ್ಲಿ ಈ ಎಲ್ಲಾ ಕಾರ್ಯದ ಯಶಸ್ವಿಗೆ ಆತುರ ಸಲ್ಲದು ಮುಂದಿನ ತಲೆಮಾರು ನಿರೀಕ್ಷಿತ ಫಲ ನೀಡಬಹುದು ಎನ್ನುವ ಆಶಯವನ್ನು ಮುಂದಿಡಲು ಮರೆಯುವುದಿಲ್ಲ. ಅದು ವೀರಪ್ಪನ್ ಡಾ.ರಾಜಕುಮಾರ್‍ರವರನ್ನು ಅಪಹರಿಸಿದ್ದ ಸಮಯ. ಕಾಡುಗಳ್ಳ ವೀರಪ್ಪನ್‍ನಿಂದ ಅಪಹರಣವಾಗಬಹುದಾದ ಪಟ್ಟಿಯಲ್ಲಿ ಡಾ.ಸುದರ್ಶನರವರ ಹೆಸರೂ ಸೇರಿದ್ದ ಹಿನ್ನಲೆಯಲ್ಲಿ ಅವರ ರಕ್ಷಣೆಗೆ ಅಂಗರಕ್ಷಕರನ್ನು ನಿಯೋಜಿಸಲಾಗಿದ್ದ ಹಿನ್ನಲೆಯಲ್ಲಿ ಪ್ರಜಾವಾಣಿಯೊಂದಿಗೆ ಮಾತನಾಡಿದ ಅವರು ನನ್ನನ್ನು ವೀರಪ್ಪನ್ ಅಪಹರಿಸಲಿ, ಎಷ್ಟು ತಿಂಗಳು ಬೇಕಾದರು ಇಟ್ಟುಕೊಂಡರೂ ಪರವಾಗಿಲ್ಲ. ನನ್ನನ್ನು ಬಿಡಿಸುವುದಕ್ಕಾಗಿ ಸರ್ಕಾರವಾಗಲಿ ಅಥವಾ ನಮ್ಮ ಸಂಸ್ಥೆಯಾಗಲಿ ಒಂದು ಪೈಸೆ ಹಣವನ್ನು ಕೊಡಕೂಡದು. ನಾನು ಗಾಂಧೀವಾದಿ ಅಹಿಂಸಾ ಮಾರ್ಗದಲ್ಲಿ ನಂಬಿಕೆ ಇಟ್ಟುಕೊಂಡವನು. ವೀರಪ್ಪನ್ ಬಗ್ಗೆ ನನಗಾವ ಭಯವೂ ಇಲ್ಲ. ಅವನ ಮನ ಪರಿವರ್ತನೆ ಮಾಡಿಯೇ ಹಿಂದಿರುಗುತ್ತೇನೆ. ಎಂದು ಅವರು ವಿಶ್ವಾಸದಿಂದ ನುಡಿದಿದ್ದರು. ಇದು ಅವರ ನಿಃಸ್ವಾರ್ಥ ಮತ್ತು ನಿಯಮ ಬದ್ಧ ಜೀವನಕ್ಕೆ ಅದ್ವಿತೀಯ ಉದಾಹರಣೆ. ಇಂದು ಧನದಾಹಿ ವೈದ್ಯರ ಸಂಖ್ಯೆ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ. ವೈದ್ಯಕೀಯ ಸೇವೆಯಲ್ಲಿ ಅಲಕ್ಷ್ಯತೆ ಮತ್ತು ಬೇಜವಾಬ್ದಾರಿತನ ಹೆಚ್ಚಾಗುತ್ತಿದೆ. ಅವರ ಅಜ್ಞಾನ ಮತ್ತು ನಿಸ್ಸಹಾಯಕತೆಯನ್ನು ದುರುಪಯೋಗಪಡಿಸಿಕೊಂಡು ಅನೇಕ ವೈದ್ಯರು ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ವಾಸಮಾಡಲು ಅವರಿಗೆ ಪಟ್ಟಣವೇ ಬೇಕು. ಹಣವಿಲ್ಲದ, ಸರಿಯಾದ ಸೌಲಭ್ಯಗಳಿಲ್ಲದ ಹಳ್ಳಿ ಮತ್ತು ಹಳ್ಳಿಯ ರೋಗಿಗಳನ್ನು ಕಂಡರೆ ಅವರಿಗೆ ಅಲರ್ಜಿ. ಇಂತಹ ಸಮಯದಲ್ಲಿ ಡಾ.ಸುದರ್ಶನ್ ಮತ್ತವರ ಜೀವನ ವೈಖರಿಗೆ ಎಲ್ಲರೂ ಒಮ್ಮೆ ತಲೆಬಾಗಲೇಬೇಕು.
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
|
|
|
|
SITE MAP
SiteTRAININGJOB |
HR SERVICESOTHER SERVICESnIRATHANKA CITIZENS CONNECT |
NIRATHANKAPOSHOUR OTHER WEBSITESSubscribe |
MHR LEARNING ACADEMY
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|