ಹಸಿವು ಜಗತ್ತಿನ ಸಕಲ ಜೀವರಾಶಿಗಳು ಜೀವನ ಪರ್ಯಂತ ನಿರಂತರವಾಗಿ ಅನುಭವಿಸುವ ಒಂದು ಮನೋದೈಹಿಕ ಸಂಸ್ಥಿತಿ. ಹಸಿವು ಆಹಾರ ಬೇಕೆನ್ನುವುದರ ಸೂಚನೆ. ಆಹಾರ ಜೀವನದ ಬಹುಮುಖ್ಯ ಅವಶ್ಯಕತೆ. ಆಹಾರ ಶಕ್ತಿಯ ಮೂಲ. ಜೀವವಿರುವ ಪ್ರಾಣಿಗಳೆಲ್ಲವೂ ಸದಾ ಕಾಲ ಕ್ರಿಯಾನಿರತವಾಗಿರುತ್ತವೆ. ಎಚ್ಚರವಿರಲಿ, ಇಲ್ಲದಿರಲಿ, ಏನಾದರೂ ಮಾಡುತ್ತಲೇ ಇರುತ್ತವೆ. ನೀವು ವಿಶ್ರಾಂತ ಸ್ಥಿತಿಯಲ್ಲಿರುವಾಗಲೂ ಕಾರ್ಯನಿರತರಾಗಿರುತ್ತೀರಿ. ನಿಮ್ಮ ದೇಹದಲ್ಲಿ ಹಲವಾರು ಕ್ರಿಯೆಗಳು ನಡೆಯುತ್ತಿರುತ್ತವೆ. ನೀವು ಉಸಿರಾಡುತ್ತಿರುವಿರಿ; ರಕ್ತ ಪರಿಚಲನೆ ನಡೆಯುತ್ತಿರುತ್ತದೆ; ಆಹಾರ ಜೀರ್ಣವಾಗುತ್ತಿರುತ್ತದೆ. ನೀವು ಮಾನಸಿಕವಾಗಿ ಏನೋ ಆಲೋಚಿಸುತ್ತಿರಬಹುದು. ನಿದ್ರೆ ಮಾಡುವಾಗ ಕನಸು ಕಾಣುತ್ತಿರಬಹುದು. ಇವೆಲ್ಲದರಲ್ಲೂ ಶಕ್ತಿ ವ್ಯಯವಾಗುತ್ತಿರುತ್ತದೆ. ನೀವು ಏನೇ ಮಾಡಬೇಕಾದರೂ ಶಕ್ತಿ ಬೇಕು. ಈ ಶಕ್ತಿ ಬರುವುದು ಆಹಾರದಿಂದ. ಆಹಾರದಲ್ಲಿರುವ ಗ್ಲೂಕೋಸ್ (ಸಕ್ಕರೆ), ಕೊಬ್ಬು, ಮತ್ತಿತರ ಪೋಷಕಾಂಶಗಳು ಜೀವಿಗಳ ಸಕಲ ಕ್ರಿಯೆಗಳಿಗೂ ಶಕ್ತಿಯನ್ನು ಒದಗಿಸುತ್ತವೆ. ಆಹಾರವಿಲ್ಲದಿದ್ದರೆ ಜೀವಿಗಳು ನಿಷ್ಕ್ರಿಯವಾಗಿ, ಬಲಹೀನವಾಗಿ, ಏನೂ ಮಾಡಲಾಗಲಾರದೆ, ಸಾಯಬಹುದು. ಆದುದರಿಂದ ಹಸಿವಿಲ್ಲದಿದ್ದರೆ ಆಹಾರ ಬೇಕೆಂಬ ಪರಿಜ್ಞಾನವಿರುವುದಿಲ್ಲ. ಆಹಾರವಿಲ್ಲದಿದ್ದರೆ ಶಕ್ತಿಯಿಲ್ಲ; ಶಕ್ತಿ ಇಲ್ಲದಿದ್ದರೆ ಚಟುವಟಿಕೆ ಇಲ್ಲ; ಜೀವನವಿಲ್ಲ. ಒಂದು ದೃಷ್ಟಿಯಿಂದ ನೋಡಿದರೆ, ಹಸಿವನ್ನು ತಣಿಸುವುದೇ ಜೀವನದ ಒಂದು ಪ್ರಮುಖ ಕಾರ್ಯವೆಂದು ಕಂಡುಬರುತ್ತದೆ. ಜೀವ ಉಳಿದಿರುವುದೆ ಹಸಿವನ್ನು ತಣಿಸಲು ಉಪಯೋಗಿಸುವ ಆಹಾರದಿಂದ. ಮಾನವನ ಸಕಲ ಸೃಷ್ಟಿಗಳು ಜರುಗುತ್ತಿರುವುದರ ಹಿನ್ನೆಲೆಯಲ್ಲಿ ಹಸಿವಿದೆ. ನಮ್ಮ ಎಲ್ಲಾ ವರ್ತನೆಗಳ ಹಿನ್ನೆಲೆಯಲ್ಲಿರುವ ಪ್ರೇರಣೆಗಳಲ್ಲಿ ಹಸಿವೇ ಪ್ರಮುಖವಾದುದು. ನಮ್ಮ ನಾಗರಿಕತೆ, ಸಂಸ್ಕೃತಿ, ಕಲೆ, ಸಾಹಿತ್ಯ, ಸಂಗೀತ, ವಿಜ್ಞಾನ, ಇವೆಲ್ಲವೂ ಹುಟ್ಟಿ ಬಂದಿರುವುದು ನಾವು ನಮ್ಮ ಹಸಿವನ್ನು ತಣಿಸುವ ಹಾದಿಯಲ್ಲಿಯೇ. ನಮ್ಮ ಜನಪದರ ಮಾತಿನಲ್ಲಿ ಹೇಳುವುದಾದರೆ, ನಾವು ಮಾಡುವುದೆಲ್ಲಾ ಗೇಣು ಹೊಟ್ಟೆಗಾಗಿ. ಹಸಿವೆಂದರೇನು? ಈ ಪ್ರಶ್ನೆಗೆ ಉತ್ತರಿಸುವುದು ಸುಲಭವಲ್ಲ. ವಿಜ್ಞಾನಿಗಳು ಇಂದಿನವರೆಗೆ ಹಸಿವನ್ನು ಕುರಿತು ಬಹಳಷ್ಟು ಹೇಳಿದ್ದಾರೆ. ಅವರು ಪ್ರತಿಪಾದಿಸಿರುವ ಸಿದ್ಧಾಂತಗಳನ್ನು ಪ್ರಮುಖವಾಗಿ ಮೂರು ಗುಂಪಾಗಿ ವಿಂಗಡಿಸಬಹುದು. 1. ಮೊದಲನೆಯವು ಜೈವಿಕ ಸಿದ್ಧಾಂತಗಳು (biological theories); ಹಸಿವಿಗೆ ಸಂಬಂಧಿಸಿದ ದೈಹಿಕ ಪ್ರಕ್ರಿಯೆಗಳನ್ನು ಕುರಿತಾದವು. 2. ಎರಡನೆಯವು ಆನುವಂಶಿಕ (genetic theories) ಸಿದ್ಧಾಂತಗಳು; ವಂಶಪರಂಪರಾಗತವಾಗಿ ನಿರ್ಧಾರವಾಗಿರುವ ಅಂಶಗಳು. 3. ಮೂರನೆಯವು ಮಾನಸಿಕ (psychological theories) ಸಿದ್ಧಾಂತಗಳು; ನಾವಾಗಿ ಅಭ್ಯಾಸ ಮಾಡಿಕೊಂಡ ಹಸಿವುಗಳು. ಇವುಗಳನ್ನು ಸಿದ್ಧಾಂತಗಳು ಎನ್ನುವುದಕ್ಕಿಂತ ಅಭಿಪ್ರಾಯಗಳು ಎಂದು ಕರೆಯುವುದು ಮೇಲು. ನಿಮಗೆ ಮೊದಲೇ ಹೇಳಿಬಿಡುತ್ತೇನೆ; ನೆನಪಿಡಿ, ಇವೆಲ್ಲಾ ಸಿದ್ಧಾಂತಗಳು ಅಥವಾ ಅಭಿಪ್ರಾಯಗಳು; ಫ್ಯಾಕ್ಟ್ಸ್ ಅಲ್ಲ. ನಿಜ ಹೇಳಬೇಕೆಂದರೆ, ಹಸಿವನ್ನು ಕುರಿತು ನಿರ್ದಿಷ್ಟವಾದ ಕೊನೆಯ ವಾಕ್ಯವನ್ನು ಇನ್ನೂ ಬರೆಯಬೇಕಿದೆ. ಜೈವಿಕ ಸಿದ್ಧಾಂತಗಳು ಸಾಮಾನ್ಯವಾಗಿ ಹಸಿವೆಂದರೆ ನಮಗೆ ಮೊದಲು ನೆನಪಿಗೆ ಬರುವುದು ಹೊಟ್ಟೆ. ನಾವೆಲ್ಲಾ ಹೇಳುವುದು ನಮಗೆ ಹೊಟ್ಟೆ ಹಸಿದಿದೆ ಎಂದು. ಹಿಂದಿ ಮಾತನಾಡುವ ಜನ ಹಸಿವನ್ನು ಕುರಿತು ಹೇಳುವಾಗ ಹೊಟ್ಟೆಯಲ್ಲಿ ಇಲಿ ಓಡಾಡುತ್ತಿದೆ ಎನ್ನುತ್ತಾರೆ. ನಾವು ಕೂಡ ಹೊಟ್ಟೆ ತಾಳಹಾಕುತ್ತಿದೆ ಎನ್ನುತ್ತೇವೆ. ಆದರೆ, ನಿಜವಾಗಿ ಹಸಿವೆಂದರೇನು? ಅದೆಲ್ಲಿ ಹುಟ್ಟುತ್ತದೆ? ಹೇಗೆ ಹುಟ್ಟುತ್ತದೆ? ಅದನ್ನು ಹೇಗೆ ತಣಿಸಲಾಗುತ್ತದೆ? ಎಂಬ ಪ್ರಶ್ನೆಗಳಿಗೆ ಉತ್ತರಿಸುವುದು ನಾವು ನೀವು ತಿಳಿದಿರುವಷ್ಟು ಸುಲಭವಲ್ಲ. ಹಸಿವು ಬಹಳ ಸಂಕೀರ್ಣವಾದ ಮನೋದೈಹಿಕ ಪ್ರಕ್ರಿಯೆ. ಅದು ಜೀರ್ಣಾಂಗಗಳು, ಮಿದುಳು, ಹಾರ್ಮೋನುಗಳು, ರಸಾಯನಿಕಗಳು, ನರವಾಹಕಗಳು (neurotransmitters), ಇವೆಲ್ಲವುಗಳ ಕ್ರಿಯೆಗಳನ್ನೊಳಗೊಂಡಿರುತ್ತದೆ. ವಾಸ್ತವವಾಗಿ ನೋಡಿದರೆ, ಹಸಿವಿನಲ್ಲಿ ಹೊಟ್ಟೆಯ ಪಾತ್ರ ಬಹಳ ಕಡಿಮೆ. ಹೊಟ್ಟೆ ಖಾಲಿಯಾದಾಗ ಹಸಿವಾಗುತ್ತದೆ ನಿಜ. ಆದರೆ ಹೊಟ್ಟೆಗೆ ಏನನ್ನಾದರೂ ತುಂಬಿದರೆ ಹಸಿವು ಹಿಂಗುವುದಿಲ್ಲ. ಒಂದು ಪ್ರಯೋಗದಲ್ಲಿ, ಹೊಟ್ಟೆಯೊಳಕ್ಕೆ ಒಂದು ಬೆಲೂನ್ ಇಳಿಸಿ ಅದಕ್ಕೆ ಗಾಳಿ ತುಂಬಲಾಯ್ತು. ಆಗ ಹೊಟ್ಟೆ ತುಂಬಿದ ಅನುಭವವಾದರೂ ಹಸಿವು ಹಿಂಗಲಿಲ್ಲ. ಇನ್ನೊಂದು ಪ್ರಯೋಗದಲ್ಲಿ, ಹೊಟ್ಟೆಗೆ ಉಪ್ಪು ನೀರು ತುಂಬಲಾಯ್ತು. ಆಗ ಕೂಡ ಹೊಟ್ಟೆ ತುಂಬಿದ್ದರೂ ಹಸಿವು ಹಿಂಗಲಿಲ್ಲ. ಅಷ್ಟೇಕೆ, ಹೊಟ್ಟೆಯೇ ಇಲ್ಲವಾದರೂ ಹಸಿವಾಗುತ್ತದೆಂದು, ಪ್ರಾಣಿಗಳ ಮೇಲೆ ಮಾಡಿದ ಪ್ರಯೋಗಗಳಿಂದ, ತಿಳಿದುಬಂದಿದೆ. ನಿಜ ಹೇಳುವುದಾದರೆ, ಹಸಿವಿನ ಸೂಚನೆ ಬರುವುದು ಹೊಟ್ಟೆಯೊಂದರಿಂದಲೇ ಅಲ್ಲ; ಅದು ಪ್ರಮುಖವಾಗಿ ಹುಟ್ಟುವುದು ನಿಮ್ಮ ತಲೆಯಲ್ಲಿ, ಅದರೊಳಗಿನ ಮಿದುಳಿನಲ್ಲಿ. ಮಿದುಳಿನಲ್ಲಿರುವ ಹೈಪೊತಲಮಸ್ (hypothalamus) ಎಂಬ ಒಂದು ಪುಟ್ಟ ನರಗಳ ಕೇಂದ್ರ ಹಸಿವನ್ನು ನಿರ್ದೇಶಿಸುತ್ತದೆ ಮತ್ತು ನಿಯಂತ್ರಿಸುತ್ತದೆ. ಹೈಪೊತಲಮಸ್ (ಚಿತ್ರ-1) ಪುಟ್ಟದಾದರೂ ಅದು ನಿಯಂತ್ರಿಸುವ ಕ್ರಿಯೆಗಳು ಹಲವಾರು. ಬಾದಾಮಿ ಗಾತ್ರದ ಈ ಅಂಗ ಹಸಿವಲ್ಲದೆ, ನೀರಡಿಕೆ, ಲೈಂಗಿಕ ವರ್ತನೆ, ನಿದ್ದೆ, ಆಯಾಸ, ಭಯ, ಶರೀರದ ಉಷ್ಣಾಂಶ, ಹೀಗೆ ಬೇರೆ ಬೇರೆ ಕ್ರಿಯೆಗಳನ್ನು, ಅನುಭವಗಳನ್ನು ನಿಯಂತ್ರಿಸುತ್ತದೆ. ಹೈಪೊತಲಮಸ್ನಲ್ಲಿ ಲ್ಯಾಟರಲ್ ಹೈಪೊತಲಮಸ್ (lateral hypothalamus-LH) ಮತ್ತು ವೆನ್ಟ್ರೊ ಮೀಡಿಯಲ್ ಹೈಪೊತಲಮಸ್ (ventromedial hypothalamus-VMH) ಎಂಬ ಎರಡು ಅತಿ ಸಣ್ಣ ಕೇಂದ್ರಗಳಿವೆ. ಲ್ಯಾಟರಲ್ ಹೈಪೊತಲಮಸ್ (ಎಲ್ ಹೆಚ್) ನಮಗೆ ಆಹಾರವನ್ನು ಸೇವಿಸುವಂತೆ ನಿರ್ದೇಶಿಸುವ ಕೇಂದ್ರ. ವೆನ್ಟ್ರೊ ಮೀಡಿಯಲ್ ಹೈಪೊತಲಮಸ್ (ವಿಎಂಹೆಚ್) ಆಹಾರ ಸೇವನೆಯನ್ನು ನಿಲ್ಲಿಸುವಂತೆ ಹೇಳುವ ಭಾಗ. ಪ್ರಾಣಿಗಳ ಮೇಲೆ ಮಾಡಿದ ಪ್ರಯೋಗಗಳಲ್ಲಿ ಎಲ್ಹೆಚ್ ಅನ್ನು ಪ್ರಚೋದಿಸಿದಾಗ, ಅವಕ್ಕೆ ಹಸಿವಿರಲಿ, ಇಲ್ಲದಿರಲಿ, ತಿನ್ನಲು ಆರಂಭಿಸುತ್ತವೆ. ಒಂದು ವೇಳೆ ಯಾವುದೋ ಕಾರಣಕ್ಕಾಗಿ ಒಂದು ಪ್ರಾಣಿಯ ಎಲ್ಹೆಚ್ ಅನ್ನು ಕತ್ತರಿಸಿ ತೆಗೆದು ಬಿಟ್ಟರೆ, ಆ ಪ್ರಾಣಿ ತಿನ್ನುವುದನ್ನು ಸಂಪೂರ್ಣವಾಗಿ ನಿಲ್ಲಿಸಿ, ಅದರ ತೂಕ ಬಹಳ ಕಡಿಮೆಯಾಗಿ, ಅದು ಸಾಯಲೂಬಹುದು. ಹಾಗೆಯೇ ವಿಎಮ್ಹೆಚ್ ಅನ್ನು ಪ್ರಚೋದಿಸಿದಾಗ ಪ್ರಾಣಿಗಳು ಹಸಿವಿದ್ದರೂ ತಿನ್ನುವುದನ್ನು ನಿಲ್ಲಿಸುತ್ತವೆ. ಈ ಅಂಗವನ್ನು ಕತ್ತರಿಸಿ ತೆಗೆದರೆ, ಆ ಪ್ರಾಣಿ ಆಹಾರ ಸೇವಿಸುವುದನ್ನು ನಿಲ್ಲಿಸದೆ, ಸದಾ ತಿನ್ನುತ್ತಾ, ದೈತ್ಯಾಕಾರವಾಗಿ ಬೆಳೆದ ನಿದರ್ಶನಗಳಿವೆ (ಚಿತ್ರ-2). ಇತ್ತೀಚೆಗೆ ಹೈಪೊತಲಮಸ್ನ ಇನ್ನೊಂದು ಕೇಂದ್ರ (paraventricular nucleus) ಆಹಾರ ಸೇವನೆಯಲ್ಲಿ ಮುಖ್ಯ ಪಾತ್ರ ವಹಿಸುತ್ತಿರುವುದಾಗಿ ತಿಳಿದುಬಂದಿದೆ. ಹೈಪೊತಲಮಸ್ನ ಈ ಕೇಂದ್ರಗಳಿಗೆ ಯಾವಾಗ ಆಹಾರವನ್ನು ಸೇವಿಸಬೇಕು ಮತ್ತು ಯಾವಾಗ ನಿಲ್ಲಿಸಬೇಕು ಎನ್ನುವುದಕ್ಕೆ ಸೂಚನೆಗಳು, ಜೀರ್ಣಾಂಗಗಳು ಸೇರಿದಂತೆ, ಇತರ ಬೇರೆ ಮೂಲಗಳಿಂದಲೂ (ರಕ್ತದಲ್ಲಿ ಗ್ಲೂಕೋಸ್ ಪ್ರಮಾಣ, ಕೊಬ್ಬಿನ ಕೋಶಗಳು, ಇತ್ಯಾದಿ) ಬರುತ್ತದೆ. ಎಲ್ಲಾ ದೈಹಿಕ ಮತ್ತು ಮಾನಸಿಕ ಕಾರ್ಯಗಳಿಗೆ ಶಕ್ತಿ ಬೇಕೆಂದು ಈಗಾಗಲೆ ಹೇಳಲಾಗಿದೆ. ಶಕ್ತಿ ಬರುವುದು ಪ್ರಮುಖವಾಗಿ ಆಹಾರದಲ್ಲಿರುವ ಗ್ಲೂಕೋಸ್ (glucose) ಎಂಬ ಸಕ್ಕರೆಯಿಂದ. ಗ್ಲೂಕೋಸ್ ರಕ್ತದ ಮುಖಾಂತರ ದೇಹದ ಎಲ್ಲೆಡೆಗೂ ಸರಬರಾಜಾಗುತ್ತದೆ. ರಕ್ತದಲ್ಲಿ ಗ್ಲೂಕೋಸ್ ಪ್ರಮಾಣ ಕಡಿಮೆಯಾದರೆ, ಅದು ಎಲ್ಹೆಚ್ಗೆ ತಿಳಿದು, ಅಲ್ಲಿಂದ ನಮಗೆ ತಿನ್ನುವ ಆದೇಶ ಬರುತ್ತದೆ. ಒಂದು ವೇಳೆ, ನಾವು ಅವಶ್ಯಕತೆಗಿಂತ ಹೆಚ್ಚು ಆಹಾರ ಸೇವಿಸಿದರೆ, ಹೆಚ್ಚಿಗೆ ಸಕ್ಕರೆ ಕೊಬ್ಬಿನ ಕೋಶಗಳಲ್ಲಿ (adipocytes; fat cells) ಶೇಖರಗೊಳ್ಳುತ್ತದೆ. ನಾವು ಆಹಾರವನ್ನು ಸೇವಿಸಿದಾಗ, ಕೊಬ್ಬಿನ ಕೋಶಗಳಿಂದ ಲೆಪ್ಟಿನ್ (leptin) ಎಂಬ ರಸಾಯನಿಕ (ಹಾರ್ಮೋನ್) ಬಿಡುಗಡೆಯಾಗುತ್ತದೆ. ಈ ಹಾರ್ಮೋನ್ ಆಹಾರ ಸೇವನೆಯನ್ನು ನಿಲ್ಲಿಸುವಂತೆ ಮಿದುಳಿಗೆ ಸಂದೇಶ ಕಳಿಸುತ್ತದೆ. ಲೆಪ್ಟಿನ್ ತೃಪ್ತಿಯನ್ನು ಸೂಚಿಸುವ ಹಾರ್ಮೋನ್ (satiety hormone). ನಾವು ಆಹಾರವನ್ನು ಸೇವಿಸಿದ ಹಲವು ತಾಸುಗಳ ನಂತರ ಕೊಬ್ಬಿನ ಕೋಶಗಳಲ್ಲಿ ಲೆಪ್ಟಿನ್ನ ಪ್ರಮಾಣ ಕಡಿಮೆಯಾಗುತ್ತದೆ. ಅದು ಕಡಿಮೆಯಾದಾಗ, ಜಠರದಲ್ಲಿ ಘ್ರೆಲಿನ್ (ghrelin) ಎಂಬ ಹಾರ್ಮೋನ್ ಬಿಡುಗಡೆಯಾಗುತ್ತದೆ. ಇದು ಹಸಿವನ್ನು ಸೂಚಿಸುವ ಹಾರ್ಮೋನ್ (hunger hormone). ಇದರ ಸೂಚನೆ ನರಗಳ ಮೂಲಕ ಎಲ್ ಹೆಚ್ಗೆ ತಲುಪಿ ಅಲ್ಲಿಂದ ಆಹಾರ ಸೇವಿಸುವಂತೆ ಆದೇಶ ಬರುತ್ತದೆ. ಇವಲ್ಲದೆ ಇನ್ನೂ ಹಲವು ರಸಾಯನಿಕಗಳು ಹಸಿವು ಹಾಗೂ ಆಹಾರ ಸೇವನೆಯಿಂದಾಗುವ ಪರಿಣಾಮಗಳನ್ನು ನಿರ್ಧರಿಸುತ್ತವೆ. ಹಸಿವು ಮತ್ತು ಆಹಾರ ಸೇವನೆಯನ್ನು ಕುರಿತು ಹೇಳುವಾಗ, ಕೋಲ್ಸಿಸ್ಟೊಕಿನಿನ್ (cholecystokinin - cck), ಇನ್ಸುಲಿನ್ (insulin), ಡೊಪಮಿನ್ (dopamine), ಸೆರೊಟೊನಿನ್ (serotonin), ಎಂಡಾರ್ಫಿನ್ಸ್ (endorphins), ಮುಂತಾದ ಸಂಕೀರ್ಣ ರಸಾಯನಿಕಗಳ ಪಾತ್ರವನ್ನು ಪರಿಗಣಿಸಬೇಕಾಗುತ್ತದೆ. ಆನುವಂಶಿಕ ಸಿದ್ಧಾಂತಗಳು ನಮಗೆ ಆಹಾರವನ್ನು ಶಕ್ತಿಯಾಗಿ ಪರಿವರ್ತಿಸುವ ಮತ್ತು ಆ ಶಕ್ತಿಯನ್ನು ಉಪಯೋಗಿಸಿಕೊಳ್ಳುವ ಮೆಟಬಾಲಿಸಮ್ ಕ್ರಿಯೆ (basal metabolic rate - BMR) ಅನುವಂಶಿಕವಾಗಿ ನಿರ್ಣಯಿಸಲ್ಪಟ್ಟರುತ್ತದೆ. ನಮ್ಮ ದೇಹದಲ್ಲಿ ಕೊಬ್ಬಿನ ಕೋಶಗಳ ಸಂಖ್ಯೆ ಎಷ್ಟಿರಬೇಕೆಂಬುದು ಕೂಡ ಅನುವಂಶಿಕವಾಗಿ ನಿರ್ಧರಿಸಲ್ಪಟ್ಟಿರುತ್ತದೆ. ಮೆಟಬಾಲಿಸಮ್ ಮತ್ತು ಕೊಬ್ಬಿನ ಕೋಶಗಳು ಹಸಿವು ಹಾಗು ತೃಪ್ತಿಯ ಅನುಭವಗಳಿಗೆ ನೇರವಾಗಿ ಸಂಬಂಧಿಸಿರುವುದು ವೈಜ್ಞಾನಿಕವಾಗಿ ತಿಳಿದುಬಂದಿದೆ. ಇನ್ನು ಕೆಲವು ಸಿದ್ಧಾಂತಗಳ ಪ್ರಕಾರ, ನಮ್ಮ ದೇಹದ ತೂಕ ಎಷ್ಟಿರಬೇಕೆಂಬುದು ಕೂಡ ಅನುವಂಶಿಕವಾಗಿ ನಿರ್ಧರಿಸಲ್ಪಟ್ಟಿರುತ್ತದೆ. ಈ ಪೂರ್ವನಿರ್ಧಾರಿತ ತೂಕವನ್ನು ಸೆಟ್ ಪಾಯಿಂಟ್ (set point) ಎಂದು ಕರೆಯತ್ತಾರೆ. ಸೆಟ್ ಪಾಯಿಂಟ್ ಮೆಟಬಾಲಿಸಮ್ ಪ್ರಕ್ರಿಯೆಯ ನಿಯಂತ್ರಣದಲ್ಲಿದ್ದು, ನಮ್ಮ ತೂಕ ಈ ಪಾಯಿಂಟ್ಗಿಂತ ಮೇಲೆ ಹೋದರೆ ತಿನ್ನುವುದನ್ನು ನಿಲ್ಲಿಸುವ ಸೂಚನೆ ಬರುತ್ತದೆ; ಆಗ ನಾವು ಒಂದಲ್ಲ ಒಂದು ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡು ಹೆಚ್ಚಿನ ಕ್ಯಾಲರಿಗಳನ್ನು ಉಪಯೋಗಿಸಿಕೊಳ್ಳ ಬೇಕಾಗುತ್ತದೆ. ತೂಕ ಸೆಟ್ ಪಾಯಿಂಟ್ಗಿಂತ ಕೆಳಗಿಳಿದಾಗ, ಹಸಿವಾಗಿ ತಿನ್ನುವ ಆದೇಶ ಬರುತ್ತದೆ. ಸೆಟ್ ಪಾಯಿಂಟ್ ಅನ್ನು ಬದಲಾಯಿಸುವುದು ಸಾಮಾನ್ಯವಾಗಿ ಕಷ್ಟವೆಂದು ನಂಬಲಾಗಿದೆ. ಸೆಟ್ ಪಾಯಿಂಟ್ ತೂಕ ಎಷ್ಟಿರಬೇಕು ಎಂಬುದನ್ನು ಪೂರ್ವಭಾವಿಯಗಿ ನಿಗದಿಪಡಿಸುತ್ತದೆ ಎಂದು ನಂಬಲಾಗಿದೆ. ನೀವು ನೋಡಿರಬಹುದು; ಕೆಲವರು ಎಷ್ಟೇ ತಿಂದರೂ ದಪ್ಪವಾಗುವುದಿಲ್ಲ. ಕೆಲವರು ಕಡಿಮೆ ತಿಂದರೂ ಸಣ್ಣಗಾಗುವುದಿಲ್ಲ. ಅಂದರೆ, ನಮ್ಮ ದೇಹದ ತೂಕ ಸೆಟ್ ಪಾಯಿಂಟ್ನ ಸುತ್ತಮುತ್ತ ಇರುವಂತೆ ನಮ್ಮ ಹುಟ್ಟೇ (ಜೆನಿಟಿಕ್ಸ್) ನಿರ್ಧರಿಸಿರುತ್ತದೆ. ಮಾನಸಿಕ ಸಿದ್ಧಾಂತಗಳು ವಿಜ್ಞಾನಿಗಳು ಹಸಿವನ್ನು ದೈಹಿಕ ಹಸಿವು (bodily hunger) ಮತ್ತು ಮಾನಸಿಕ ಹಸಿವು (psychological hunger) ಎಂದು ಎರಡು ಬಗೆಯಾಗಿ ವಿಂಗಡಿಸಿದ್ದಾರೆ. ಹಸಿವಿಗೆ ಶರೀರವಷ್ಟೇ ಕಾರಣವಲ್ಲ, ಬಹಳಷ್ಟು ಮಟ್ಟಿಗೆ ಮನಸ್ಸು ಕೂಡ ಕಾರಣವೆಂಬುದು ವಿಜ್ಞಾನಿಗಳ ಅಭಿಮತ. ಕೆಲವು ವೇಳೆ, ದೈಹಿಕ ಹಸಿವು ಹಿಂಗಿದ್ದರೂ ಮಾನಸಿಕ ಹಸಿವು ಎಚ್ಚರವಾಗಿದ್ದು ನಮ್ಮನ್ನು ತಿನ್ನಲು ಪ್ರೇರೇಪಿಸುತ್ತದೆ. ಉದಾಹರಣೆಗೆ, ಭೋಜನಕೂಟ ಒಂದರಲ್ಲಿ ನೀವು ತೃಪ್ತಿಯಾಗುವಷ್ಟು, ಹೊಟ್ಟೆತುಂಬ, ಉಂಡು ಹೊರಬರುತ್ತಿರುವಿರಿ. ಆಗ ನಿಮಗೆ ಅಲ್ಲಿ ಐಸ್ಕ್ರೀಮ್ ಅಥವಾ ಫ್ರೂಟ್ ಸಲಡ್ ವಿತರಿಸುತ್ತಿರುವುದು ಕಂಡುಬರುತ್ತದೆ. ನಿಮ್ಮ ಗಮನ ಅದರೆಡೆಗೆ ಹರಿಯುತ್ತದೆ. ತಕ್ಷಣ ಅದನ್ನು ತಿನ್ನಬೇಕೆನಿಸುತ್ತದೆ; ಸಂತೋಷದಿಂದ ತಿನ್ನುತ್ತೀರಿ. ಅದು ಮಾನಸಿಕ ಹಸಿವಿನ ಪ್ರಭಾವ. ನಿಮ್ಮ ದೇಹಕ್ಕೆ ಬೇಕಾಗುವಷ್ಟು ತಿಂದಿದ್ದೀರಿ; ಹೊಟ್ಟೆ ತುಂಬಿದೆ. ನಿಮ್ಮ ದೇಹಕ್ಕೆ ಆಹಾರದ ಅವಶ್ಯಕತೆ ಇಲ್ಲ; ಆದರೂ ತಿನ್ನುತ್ತೀರಿ. ಇಂಥ ಘಟನೆಗಳು ಪ್ರತಿ ದಿನ ನಡೆಯುತ್ತಲೇ ಇರುತ್ತವೆ. ಸಾಯಂಕಾಲ ತಿರುಗಾಡಲು ಹೊರಟಾಗ, ರಸ್ತೆ ಮೂಲೆಯಲ್ಲಿ ಬಿಸಿಬಿಸಿಯಾಗಿ ಬೇಯಿಸುತ್ತಿರುವ ಈರುಳ್ಳಿ ಪಕೋಡದ ವಾಸನೆ ಮೂಗಿಗೆ ಬಡಿಯುತ್ತದೆ. ಅದನ್ನು ಹತ್ತಿಕ್ಕಬಲ್ಲಿರೇನು? ಅದು ಸಾಧ್ಯವೆ ಹೇಳಿ? ಹಸಿವಿಲ್ಲದಿದ್ದರೂ ಅದನ್ನು ಕೊಂಡು ತಿನ್ನಬೇಕೆನಿಸುತ್ತದೆ. ಕೆಲವು ಖಾದ್ಯಗಳು ನೀವು ನೋಡಿದ ತಕ್ಷಣ ತಮ್ಮೆಡೆಗೆ ನಿಮ್ಮನ್ನು ಆಕರ್ಷಿಸುತ್ತವೆ; ತಿನ್ನಲು ಕರೆಯುತ್ತವೆ. ಅವುಗಳ ಕರೆಯನ್ನು ನಿರಾಕರಿಸುವುದು ಬಹಳ ಕಷ್ಟ. ಕೆಲವು ಹೊಟೆಲ್ಗಳು ಕೆಲವು ತಿನಿಸುಗಳಿಗೆ ಪ್ರಸಿದ್ಧಿಯಾಗಿರುತ್ತವೆ. ಆ ಹೊಟೆಲ್ ಕಡೆ ಹೋದಾಗ, ಅವುಗಳನ್ನು ಕಂಡಾಗ, ಅಥವಾ ಅವು ನಿಮ್ಮ ನೆನಪಿಗೆ ಬಂದಾಗ, ನಿಮಗೆ ಅಲ್ಲಿ ತಯಾರಾಗುವ ಸ್ಪೆಷಲ್ ತಿಂಡಿಗಳನ್ನು ತಿನ್ನಬೇಕೆನಿಸಬಹುದು. ಉದಾಹರಣೆಗೆ, ದಾವಣಗೆರೆ ಬೆಣ್ಣೆ ದೋಸೆ, ಅಥವಾ ಉತ್ತರ ಕರ್ಣಾಟಕದ ಜೋಳದ ರೊಟ್ಟಿ. ಕೆಲವು ಊರುಗಳು ಕೆಲವು ತಿನಿಸುಗಳಿಗೆ ಹೆಸರುವಾಸಿಯಾಗಿದ್ದು, ಆ ಊರ ಕಡೆ ಹೋದಾಗ ಆ ತಿಂಡಿಯನ್ನು ತಿನ್ನುವುದಷ್ಟೇ ಅಲ್ಲ, ಮನೆಗೂ ತರುವ ಅಭ್ಯಾಸ ಬಹಳಷ್ಟು ಜನಕ್ಕಿರುತ್ತದೆ. ಉದಾಹರಣೆಗೆ ಹೈದರಾಬಾದ್ನ ಪುಲ್ಲಾರೆಡ್ಡಿ ಸ್ವೀಟ್ಸ್, ದಾರವಾಡದ ಪೇಡೆ, ಬೆಳಗಾವಿಯ ಕುಂದ, ಇತ್ಯಾದಿ. ಬಹಳಷ್ಟು ಜನರಿಗೆ ಅವರು ಸೇವಿಸುವ ಆಹಾರದಲ್ಲಿ ವೈವಿಧ್ಯತೆ ಇರಬೇಕು. ಕೇವಲ ಅನ್ನ ಸಾಂಬಾರ್ ಸಾಲದು. ಜತೆಗೆ ಮೊಸರನ್ನ, ಒಂದು ಅಥವಾ ಎರಡು ತರಕಾರಿ, ಕೋಸಂಬರಿ, ಹಪ್ಪಳ, ಉಪ್ಪಿನಕಾಯಿ, ಏನಾದರೊಂದು ಸಿಹಿ, ಇವೆಲ್ಲಾ ಇರಬೇಕು; ಇದ್ದರೇನೆ ಅವರಿಗೆ ತೃಪ್ತಿ. ಕೆಲವು ಭೋಜನ ಕೂಟಗಳಲ್ಲಿ ಬಡಿಸುವ ಐಟಮ್ಗಳನ್ನು ಗಮನಿಸಿ. ಕೆಲವೆಡೆ ಬಡಿಸುವ ತಿನಿಸುಗಳ ಸಂಖ್ಯೆ ಅತಿಥೇಯರ ಶ್ರೀಮಂತಿಕೆಯ ಪ್ರತೀಕವಾಗಿರುತ್ತದೆ. ಉತ್ತರ ಭಾರತದ ಭೋಜನಕೂಟವೆಂದರೆ ಸುಮಾರು 25 ಸಿಹಿ ಪದಾರ್ಥಗಳಿರಲೇಬೇಕು. ಅಲ್ಲಿ ಅವರು ಪ್ರೀತಿಯಿಂದ ಬಡಿಸಿರುವುದನ್ನು ತಿಂದು ಮುಗಿಸದಿದ್ದರೆ ಹೇಗೆ? ಅದಕ್ಕಾಗಿ ಕಷ್ಟಪಟ್ಟಾದರೂ ಸರಿ, ತಿನ್ನುತ್ತೇವೆ. ಕೆಲವು ತಿನಿಸುಗಳ ಮೇಲೆ ಜನರಿಗೆ ಬಹಳ ವ್ಯಾಮೋಹ. ಅದು ಒಬ್ಬಟ್ಟಾಗಿರಬಹುದು, ಕೇಸರಬಾತ್, ಜಿಲೇಬಿ ಅಥವಾ ಮೈಸೂರ್ ಪಾಕ್ ಆಗಿರಬಹುದು. ಕೆಲವು ಪ್ರಾಂತದ ಜನರಿಗೆ ಕೆಲವು ತಿಂಡಿಗಳ ಮೇಲೆ ವಿಶೇಷವಾದ ಪ್ರೀತಿ. ಉದಾಹರಣೆಗೆ, ಬಂಗಾಳಿಗಳಿಗೆ ರಸಗುಲ್ಲದ ಮೇಲೆ ಅತಿಯಾದ ವ್ಯಾಮೋಹ. ಅದನ್ನು ಸೇವಿಸುವುದಕ್ಕಾಗಿ ಅವರು ಏನೇ ತ್ಯಾಗವನ್ನಾದರೂ ಮಾಡಲು ಸಿದ್ಧ. ಇಲ್ಲಿ ನನಗೊಂದು ಪ್ರಸಂಗ ನೆನಪಾಗುತ್ತದೆ. ಅದು ಹೆಸರಾಂತ ಬಂಗಾಳಿ ಕಾದಂಬರಿಕಾರ ಶರತ್ಚಂದ್ರರಿಗೆ ಸಂಬಂಧಿಸಿದ್ದು. ಅವರು ಒಂದು ಭೋಜನಕೂಟದಲ್ಲಿ ಭಾಗ ವಹಿಸುತ್ತಿದ್ದರು. ಅಲ್ಲಿ ತೃಪ್ತಿಯಾಗಿ ಉಂಡಿದ್ದ ಅವರಿಗೆ ಪಕ್ಕದ ಮಿತ್ರರು ಎಷ್ಟೇ ಒತ್ತಾಯ ಮಾಡಿದರೂ ಇನ್ನೇನೂ ತಿನ್ನಲಾಗಲಿಲ್ಲ್ಲ. ಹೊಟ್ಟೆಯಲ್ಲಿ ಜಾಗವಿಲ್ಲವೆಂದು ಹೇಳಿ ಎಲ್ಲವನ್ನೂ ನಿರಾಕರಿಸಿದರು. ಆದರೆ, ಊಟದ ಕೊನೆಯಲ್ಲಿ ರಸಗುಲ್ಲ ಬಡಿಸಲು ಬಂದಾಗ, ಅದನ್ನು ಬೇಡವೆನ್ನಲಾಗಲಿಲ್ಲ; ಹಾಕಿಸಿಕೊಂಡು ತಿನ್ನಲು ಆರಂಭಿಸಿದರು. ಪಕ್ಕದ ಮಿತ್ರರು ನಗುತ್ತಾ, ಹೊಟ್ಟೆಯಲ್ಲಿ ಜಾಗವಿಲ್ಲವೆಂದಿರಿ, ಇದನ್ನು ಹೇಗೆ ಇಳಿಸುತ್ತೀರಿ, ಎಂದು ಕೇಳಿದರು. ಆಗ ಶರತ್ ಬಾಬು ಏನು ಹೇಳದರು ಗಮನಿಸಿ: ರಸಗುಲ್ಲ ಗೌರ್ನರ್ ಗಾಡಿ ಇದ್ದ ಹಾಗೆ. ಅದು ಬರುವಾಗ ಬೇರೆ ಗಾಡಿಗಳು ಪಕ್ಕಕ್ಕೆ ಸರಿದು ಜಾಗ ಮಾಡಿಕೊಡುತ್ತವೆ. ಸಾಹಿತಿಗಳಿಗೆ ತಕ್ಕಂತಹ ಸೊಗಸಾದ ಉಪಮಾನ. ಪುಷ್ಕಳವಾದ ಭೋಜನದ ನಂತರ ಫ್ರೂಟ್ ಸಲಡ್ ತಿನ್ನುವ ಆಸೆಯಾದಾಗ ನಿಮಗೂ ಹಾಗೆ ಅನ್ನಿಸಿರಬೇಕಲ್ಲವೆ? ಕೆಲವು ತಿಂಡಿಗಳನ್ನು ನೋಡಿದಾಗಲೆಲ್ಲಾ ಬಾಯಲ್ಲಿ ನೀರೂರುತ್ತದೆ, ತಿನ್ನಬೇಕೆನಿಸುತ್ತದೆ. ಅದನ್ನು ಕೆಲವರು ಜಿಹ್ವಾ ಚಾಪಲ್ಯ ಎನ್ನುತ್ತಾರೆ; ಏನಾದರು ಅನ್ನಿ, ಅದನ್ನು ನಿಯಂತ್ರಿಸುವುದು ಕಷ್ಟ. ದೇಹಕ್ಕೆ ಬೇಕಿಲ್ಲ; ಮನಸ್ಸಿಗೆ ಬೇಕೆನ್ನಿಸುತ್ತದೆ, ತಿನ್ನುತ್ತೀರಿ. ಕೆಲವರು ಎಷ್ಟು ತಿನ್ನಬೇಕೆಂಬುದನ್ನು ಮೊದಲೇ ಮಾನಸಿಕವಾಗಿ ತೀರ್ಮಾನಿಸಿರುತ್ತಾರೆ. ಅಷ್ಟು ತಿಂದರೇನೆ ಅವರಿಗೆ ತೃಪ್ತಿ. ಬೇಕಿರಲಿ, ಬೇಡದಿರಲಿ ಅವರು ನಿರ್ಧರಿಸಿಕೊಂಡಷ್ಟನ್ನು ತಿಂದೇ ತಿನ್ನುತ್ತಾರೆ. ಇನ್ನು ಕೆಲವರಿಗೆ ಊಟದ ಸಮಯ ಬಂತು ಅಂದರೆ ಸಾಕು, ಊಟ ಮಾಡಬೇಕು. ಹಸಿವಿರಲಿ, ಇಲ್ಲದಿರಲಿ, ಆ ಸಮಯದಲ್ಲಿ ಊಟ ಮಾಡುತ್ತಾರೆ. ಹೆಚ್ಚು ತಿಂದಷ್ಟೂ ಬಲಾಢ್ಯ ವ್ಯಕ್ತಿಗಳಾಗಬಹುದೆಂಬ ತಪ್ಪು ತಿಳುವಳಿಕೆ ಹಲವರಲ್ಲಿದೆ. ಕೆಲವು ಕುಟುಂಬಗಳಲ್ಲಿ ಒತ್ತಾಯ ಮಾಡಿ ಹೆಚ್ಚಿಗೆ ಸಿಹಿ, ಜಿಡ್ಡು ಪದಾರ್ಥಗಳನ್ನು ಮನೆಯವರೆಲ್ಲರಿಗೂ ತಿನ್ನಿಸುತ್ತಾರೆ. ಮಕ್ಕಳಿಗೆ ನಾವು ಬಲವಂತವಾಗಿ ಹೆಚ್ಚಿಗೆ ತಿನ್ನುವುದನ್ನು ಕಲಿಸುತ್ತೇವೆ. ಕೆಲವು ತಾಯಂದಿರು ಮಕ್ಕಳಿಗೆ ಬಡಿಸುವಾಗ ಹೇಳುವ ಮಾತನ್ನು ನೀವು ಗಮನಿಸಿರಬಹುದು. ನಿನಗೆ ಎಷ್ಟು ಬೇಕೆಂಬುದು ನನಗೆ ಗೊತ್ತು, ಬಡಿಸಿರುವುದನ್ನು ತಿಂದೇಳು. ಮಗುವಿಗೆ ಬೇಕಿರಲಿ, ಇಲ್ಲದಿರಲಿ, ಬಡಿಸಿರುವುದನ್ನು ತಿಂದು ಮುಗಿಸಬೇಕು, ಮುಗಿಸುತ್ತದೆ. ಇದು ಮಗುವಿಗೆ ಅಭ್ಯಾಸವಾಗಿ, ಅವಶ್ಯಕತೆಗಿಂತ ಹೆಚ್ಚು ತಿನ್ನುವುದು ರೂಢಿಯಾಗಿಬಿಡುತ್ತದೆ. ನಮ್ಮಲ್ಲಿ ಉಂಡ ತಟ್ಟೆಯಲ್ಲಿ ಅಥವಾ ಎಲೆಯಲ್ಲಿ ಏನೂ ಉಳಿಸಕೂಡದೆಂಬ ಸಂಪ್ರದಾಯವಿರುವುದು ನಿಮಗೆಲ್ಲರಿಗೂ ಗೊತ್ತೇ ಇದೆ. ಅನ್ನ ಬ್ರಹ್ಮ; ಆಹಾರವನ್ನು ಪೋಲು ಮಾಡಬಾರದಲ್ಲವೆ? ಆದುದರಿಂದ ಬಡಿಸಿರುವುದನ್ನೆಲ್ಲಾ ತಿನ್ನುತ್ತೇವೆ. ಮತ್ತೆ ಕೆಲವರಿಗೆ ವಿಚಿತ್ರ ಹವ್ಯಾಸಗಳಿರುತ್ತವೆ. ಅವರು ಟಿವಿ ನೋಡುತ್ತಿರುವಾಗ ಏನಾದರೂ ತಿನ್ನುತ್ತಿರಬೇಕು. ಕಾರ್ಡ್ಸ್ ಆಡುವಾಗ ಏನಾದರು ತಿನ್ನುತ್ತಿರಬೇಕು; ಸಿನಿಮಾ ನೋಡುವಾಗ ಚಿಪ್ಸ್ ಅಥವಾ ಪಾಪ್ ಕಾರ್ನ್ ಇಲ್ಲದಿದ್ದರೆ ಹೇಗೆ? ಕೋಕ ಕೋಲ ಕುಡಿಯಲೇ ಬೇಕು. ರೈಲಿನಲ್ಲಿ ಪ್ರಯಾಣ ಮಾಡುವಾಗಲಂತು ಹೇಳುವುದೇ ಬೇಡ. ಕೆಲವು ಪ್ರಯಾಣಿಕರು ಹೊತ್ತು ತರುವ ತಿಂಡಿ ಡಬ್ಬಗಳನ್ನು ನೋಡಿದರೆ, ಅವರು ತಿನ್ನುವುದಕ್ಕಾಗಿಯೇ ಪ್ರಯಾಣಿಸುತ್ತಿರುವಂತೆ ಕಾಣುತ್ತದೆ. ಇನ್ನೊಂದು ವಿಷಯವನ್ನು ನೀವು ಗಮನಿಸಿರಬಹುದು. ಒಂಟಿಯಾಗಿ ತಿನ್ನುವಾಗ, ನೀವು ಸೇವಿಸುವ ಆಹಾರದ ಪ್ರಮಾಣ ಕಡಿಮೆ ಇರುತ್ತದೆ. ಅದೇ ಸ್ನೇಹಿತರ ಜತೆ ಇರುವಾಗ, ಅವರೊಡನೆ ಹರಟುತ್ತಾ ನಿಮಗರಿವಿಲ್ಲದಂತೆ ಹೆಚ್ಚಿಗೆ ತಿನ್ನುತ್ತೀರಿ (ಚಿತ್ರ-3). ಇವೆಲ್ಲಾ ಸಂದರ್ಭೋಚಿತವಾಗಿ ನಾವು ರೂಢಿಸಿಕೊಂಡ ಅಭ್ಯಾಸಗಳು; ಕಲಿತ ಹಸಿವುಗಳು; ಮಾನಸಿಕ ಹಸಿವುಗಳು. ಇದೆಲ್ಲದರ ಸಾರಾಂಶವಿಷ್ಟೆ: ನಮ್ಮಲ್ಲಿ ಎರಡು ತರಹದ ಹಸಿವುಗಳಿವೆ. ಒಂದು ದೈಹಿಕ ಹಸಿವು; ಇನ್ನೊಂದು ಮಾನಸಿಕ ಹಸಿವು. ಮಾನಸಿಕ ಹಸಿವು ಬಹಳಷ್ಟು ಸಂದರ್ಭಗಳಲ್ಲಿ, ದೈಹಿಕ ಹಸಿವು ಹಿಂಗಿದ್ದರೂ ಅದರ ಕರೆಯನ್ನು ಗಮನಿಸದೆ, ನಾವು ಅವಶ್ಯಕತೆಗಿಂತ ಹೆಚ್ಚಿಗೆ ತಿನ್ನುವಂತೆ ಪ್ರೇರೇಪಿಸುತ್ತದೆ. ಮಾನಸಿಕ ಹಸಿವಿನ ಕರೆ ಹೊಟ್ಟೆ ತುಂಬಿದ ಅನುಭವವನ್ನು ಮೆಟ್ಟಿ ನಿಲ್ಲುತ್ತದೆ. ಮಾನಸಿಕ ಹಸಿವಿನ ಕೂಗು ದೈಹಿಕ ಹಸಿವಿನ ಪಿಸುಮಾತನ್ನು ಕೇಳಿಸದಂತೆ ಮಾಡುತ್ತದೆ. ಕೆಲವರಿಗೆ ಹೆಚ್ಚು ತಿಂದು ದಪ್ಪನಾಗುವುದು ಆರೋಗ್ಯದ ಲಕ್ಷಣವೆಂಬ ತಪ್ಪು ತಿಳುವಳಿಕೆ ಇರುತ್ತದೆ. ಅದನ್ನೇ ನಂಬಿ ಪ್ರತಿದಿನ ಬೇಕಾದ್ದು, ಬೇಡವಾದ್ದು ಎಲ್ಲವನ್ನು ಕಂಠಪೂರ್ತಿ ತಿಂದು ಹೆಮ್ಮರವಾಗಿ ಬೆಳೆಯುತ್ತಾರೆ. ಇನ್ನು ಕೆಲವರಿಗೆ ಸದಾ ಏನನ್ನಾದರೂ ತಿನ್ನುತ್ತಲೇ ಇರಬೇಕು. ಕೆಲವರು ಸಕ್ಕರೆ ಮತ್ತು ಜಿಡ್ಡಿನಿಂದ ಆವೃತವಾಗಿರುವ ಬೆಣ್ಣೆ, ತುಪ್ಪ, ಸಿಹಿ ತಿಂಡಿಗಳು, ಕೇಕ್, ಐಸ್ ಕ್ರೀಮ್, ಚಾಕೋಲೇಟ್, ಮುಂತಾದುವನ್ನು ಶ್ರೇಷ್ಠ ಆಹಾರಗಳೆಂದು ಬಗೆದು ಅವನ್ನು ಅತಿಯಾಗಿ ಸೇವಿಸುತ್ತಾರೆ. ಸಣ್ಣ ಮಕ್ಕಳಿಗೆ ಸಕ್ಕರೆ ತುಪ್ಪಗಳನ್ನು ತಿನ್ನಿಸುವ ಪರಿಪಾಟ ಬಹಳ ಕುಟುಂಬಗಳಲ್ಲಿರುವುದನ್ನು ನೀವು ಗಮನಿಸಿರಬಹುದು. ಹೀಗೆ, ಬಹಳಷ್ಟು ಜನರು ತಮಗೆ ತಿಳಿಯದಂತೆಯೇ ತಮ್ಮ ಶರೀರದ ಅವಶ್ಯಕತೆಗಿಂತ ಹೆಚ್ಚು ತಿನ್ನುತ್ತಾರೆ; ಇತರರಿಗೆ ತಿನ್ನಿಸುತ್ತಾರೆ. ಹೆಚ್ಚಿಗೆ ತಿನ್ನಲು ಹಾಗು ಬೇರೆಯವರಿಗೆ ತಿನ್ನಿಸಲು ಇರುವ ಬಹು ಮುಖ್ಯ ಕಾರಣ ನಮಗೆ ಆಹಾರದ ಬಗ್ಗೆ ಸರಿಯಾದ ತಿಳಿವಳಿಕೆ ಇಲ್ಲದಿರುವುದು. ಹೆಚ್ಚಿಗೆ ತಿನ್ನುವುದರ ಪರಿಣಾಮ - ಬೊಜ್ಜು ಹೆಚ್ಚಿಗೆ ತಿನ್ನುವುದರಿಂದ ಆಗುವ ಪರಿಣಾಮಗಳೇನು? ಅದರಿಂದಾಗುವ ಅನಾಹುತಗಳು ಹಲವಾರು. ಮೊದಲನೆಯದು ಹಾಗು ಬಹು ಮುಖ್ಯವಾದುದು ಬೊಜ್ಜು ಅಥವಾ ಸ್ಥೂಲಕಾಯ (obesity). ನಮ್ಮ-ನಿಮ್ಮ ಉಳಿವಿಗೆ ತಕ್ಕಮಟ್ಟಿನ ಜಿಡ್ಡು ಮತ್ತು ಸಕ್ಕರೆ ಬೇಕು. ನಾವು ಸೇವಿಸುವ ಆಹಾರಗಳಲ್ಲಿ ಅವಶ್ಯವಿರುವಷ್ಟು ಸಕ್ಕರೆ ಮತ್ತು ಜಿಡ್ಡು ಪೂರೈಕೆಯಾಗುತ್ತದೆ. ಅನ್ನ, ಹಣ್ಣು, ತರಕಾರಿ, ಮುಂತಾದವುಗಳಲ್ಲಿ ಇರುವ ಸಕ್ಕರೆ ನಮಗೆ ಸಾಕು. ಸಕ್ಕರೆಯನ್ನೇ ನೇರವಾಗಿ ಸೇವಿಸುವ ಅವಶ್ಯಕತೆ ಇಲ್ಲ. ಆದರೆ ನಮ್ಮೆಲ್ಲರಿಗೂ ಕರಿದ ತಿಂಡಿಗಳು ಮತ್ತು ಸಿಹಿ ಖಾದ್ಯಗಳನ್ನು ಬಿಟ್ಟಿರುವುದು ಕಷ್ಟ. ಸಕ್ಕರೆಯ ಮೇಲಿನ ಒಲವು ಅದಮ್ಯ. ಅದನ್ನು ಬಿಟ್ಟಿರಲಾರೆವು. ಕಾಫಿ, ಟೀ, ಬಿಸ್ಕಟ್, ಕೋಕ ಕೋಲ, ಚಾಕೊಲೆಟ್, ಮಿಠಾಯಿಗಳ ಮೂಲಕ ಸಕ್ಕರೆಯನ್ನು ನೇರವಾಗಿ ಸೇವಿಸುತ್ತೇವೆ. ನೆನಪಿರಲಿ, ನಮಗೆ ಸಕ್ಕರೆ ಬೇಕು. ಎಷ್ಟು ಬೇಕೊ ಅಷ್ಟು. ಅತಿಯಾದರೆ ಅಮೃತವೂ ವಿಷವಾಗುತ್ತದೆ. ನಿಜವಾಗಿಯೂ ನೀವು-ನಾವು ಉಪಯೋಗಿಸುವ ಸಕ್ಕರೆ, ಒಂದು ಬಿಳಿ ವಿಷವೆಂದೇ ಪರಿಗಣಿಸಲ್ಪಟ್ಟಿದೆ. ಕಬ್ಬಿನ ಹಾಲು ತುಂಬ ಒಳ್ಳೆಯ ಪಾನೀಯ; ಅದು ಹಲವಾರು ಪೋಷಕಾಂಶಗಳಿಂದ, ಔಷಧೀಯ ಗುಣಗಳಿಂದ ಕೂಡಿದ ಪಾನೀಯ. ಬೆಲ್ಲ ಕೂಡ ಒಳ್ಳೆಯದು. ನಾವು ಅವನ್ನು ಬಿಟ್ಟು ಸಕ್ಕರೆಯನ್ನು ಸೇವಿಸುತ್ತೇವೆ. ಕಬ್ಬಿನ ಹಾಲಿನಲ್ಲಿರುವ ಪೋಷಕಾಂಶಗಳನ್ನು ಸಂಪೂರ್ಣವಾಗಿ ನಾಶ ಮಾಡಿದ ಮೇಲೆ ಉಳಿಯುವುದೇ ಸಕ್ಕರೆ. ಸಕ್ಕರೆಗೆ ಬಿಳಿ ಬಣ್ಣ ಬರಿಸಲು ಏನೇನು ಮಾಡುತ್ತಾರೆಂಬುದು ನಿಮಗೆ ತಿಳಿದಿದ್ದರೆ, ಪ್ರಾಯಶಃ ನೀವು ಸಕ್ಕರೆಯನ್ನು ಉಪಯೋಗಿಸುವುದಿಲ್ಲ. ಅದೇನೆ ಇರಲಿ. ನೀವು ಸೇವಿಸಿದ ಹೆಚ್ಚಿಗೆ ಸಕ್ಕರೆ, ಫ್ಯಾಟಿ ಆಸಿಡ್ (fatty acid) ಆಗಿ ಪರಿವರ್ತನೆಗೊಂಡು, ರಕ್ತದ ಮೂಲಕ ದೇಹದ ಬೇರೆ ಬೇರೆ ಭಾಗಗಳಿಗೆ ರವಾನೆಯಾಗಿ, ಅವುಗಳಲ್ಲಿ ಶೇಖರಗೊಳ್ಳುತ್ತದೆ. ಮುಖ್ಯವಾಗಿ, ತೊಡೆ, ನಿತಂಬ, ಹೊಟ್ಟೆ, ಎದೆ, ಮುಂತಾದ ಭಾಗಗಳಲ್ಲಿರುವ ಕೊಬ್ಬಿನ ಕೋಶಗಳಲ್ಲಿ ಸಂಗ್ರಹವಾಗುತ್ತದೆ. ಅದರಿಂದಾಗಿ ದೇಹದ ತೂಕ ಹೆಚ್ಚುತ್ತದೆ. ನೀವು ಸ್ಥೂಲಕಾಯದವರಾಗುತ್ತೀರಿ. ನಿಮ್ಮ ಶಾರೀರಿಕ ಸೌಂದರ್ಯ ಹಾಳಾಗುತ್ತದೆ. ಅಷ್ಟೇ ಆದರೆ ಪರವಾಗಿಲ್ಲ. ಅನಂತರ, ಈ ಕೊಬ್ಬಿನ ಅಂಶಗಳು ಹೃದಯ, ಪಿತ್ತ ಕೋಶ, ಮೂತ್ರ ಕೋಶ, ಮುಂತಾದ ಅಂಗಗಳೆಡೆಗೆ ಲಗ್ಗೆ ಇಡುತ್ತವೆ. ಅಲ್ಲೆಲ್ಲಾ ಕೊಬ್ಬು ಹೆಚ್ಚಾಗಿ ಶೇಖರಗೊಳ್ಳುತ್ತದೆ. ಇದರಿಂದ ಆ ಅಂಗಗಳ ಕಾರ್ಯಕ್ಷಮತೆ ತಗ್ಗುತ್ತದೆ. ಇದರಿಂದಾಗುವ ಅನಾಹುತಗಳು ಹಲವಾರು. ಅದು ಡಯಾಬಿಟೀಸ್, ಕೆಲವು ಬಗೆಯ ಕ್ಯಾನ್ಸರ್ಗಳು, ಹೃದ್ರೋಗಗಳು, ಸ್ಟ್ರೋಕ್ಗಳಿಗೆ ಎಡೆಮಾಡಿಕೊಡಬಹುದು. ಸ್ಥೂಲಕಾಯದವರಿಗೆ ರೋಗನಿರೋಧಕ ಶಕ್ತಿ ಕಡಿಮೆ. ಬೊಜ್ಜಿನಿಂದಾಗುವ ದೈಹಿಕ ತೊಂದರೆಗಳು ಬೊಜ್ಜಿನವರಿಗೆ ದೇಹ ಬಾರವಾಗಿ, ಚಟುವಟಿಕೆ ಕಡಿಮೆಯಾಗಿ, ಏಳುವುದು, ಕೂಡುವುದು, ನಡೆಯುವುದು ತ್ರಾಸದಾಯಕವಾಗುತ್ತದೆ. ಏನಾದರೂ ಕೆಲಸ ಮಾಡುವುದು ಕಷ್ಟ; ಹೊಟ್ಟೆ ಬಾರದಿಂದಾಗಿ ಬೆನ್ನು ಬಾಗಿ ನಡುಗೆ ವಿಕಾರವಾಗಬಹುದು; ಅಲ್ಲದೆ ಶಾಶ್ವತವಾದ ಬೆನ್ನು ನೋವು ಉಂಟಾಗಬಹುದು. ಹಿಗ್ಗಿದ ದೇಹಕ್ಕೆ ರಕ್ತ ಸರಪರಾಜು ಮಾಡಿ ಮಾಡಿ ಹೃದಯ ಶಕ್ತಿಹೀನಗೊಳ್ಳಬಹುದು. ರಕ್ತದಲ್ಲಿ ಕೊಲೆಸ್ಟರಾಲ್ ಹೆಚ್ಚಿ ನಾಳಗಳಲ್ಲಿ ರಕ್ತ ಪರಿಚಲನೆಗೆ ತೊಂದರೆಯಾಗಿ, ಹೃದಯಾಘಾತವಾಗಬಹುದು. ಪಿತ್ತಕೋಶಗಳಲ್ಲಿ ಕಲ್ಲುಗಳುಂಟಾಗಬಹುದು. ಇನ್ಸುಲಿನ್ಗೆ ಸಕ್ಕರೆಯನ್ನು ನಿಯಂತ್ರಿಸಲಾಗದೆ ಸಕ್ಕರೆ ಕಾಯಿಲೆ ಬರಬಹುದು. ರಕ್ತನಾಳಗಳಲ್ಲಿ ಕೊಬ್ಬು ಸೇರಿ, ಮೆದುಳಿಗೆ ರಕ್ತದ ಸರಬರಾಜು ತಗ್ಗಿ ಪಾಶ್ರ್ವವಾಯು ಬರಬಹುದು. ಶರೀರದ ಚಟುವಟಿಕೆ ಮತ್ತು ಇಂದ್ರಿಯಗಳ ಚುರುಕುತನ ಕಡಿಮೆಯಾಗಿ ಅಪಘಾತಗಳಿಗೆ ಒಳಗಾಗಬಹುದು. ಬೊಜ್ಜು ಹೆಚ್ಚಿಗೆ ಇರುವ ಮಹಿಳೆಯರ ಋತುಚಕ್ರದಲ್ಲಿ ಏರುಪೇರಾಗಬಹುದು. ಬೊಜ್ಜು ಹೆಚ್ಚಾದಂತೆ ಸ್ತ್ರೀ-ಪುರುಷರಿಬ್ಬರಲ್ಲೂ ಲೈಂಗಿಕ ಕ್ರಿಯೆಗೆ ತೊಂದರೆಯಾಗಬಹುದು. ಇಬ್ಬರಲ್ಲೂ ಲೈಂಗಿಕ ಆಸಕ್ತಿ ಕಡಿಮೆಯಾಗಿ, ಸಂತಾನಶಕ್ತಿ ಕುಂದುವುದಕ್ಕೆ ಬೊಜ್ಜು ಕಾರಣವಾಗಬಹುದೆಂದು ಹೇಳಲಾಗುತ್ತಿದೆ. ಕೊಬ್ಬು ಹೆಚ್ಚಿದಾಗ ಅಂಟುರೋಗಗಳು ಬರುವ ಸಾಧ್ಯತೆ ಹೆಚ್ಚು. ಬೊಜ್ಜಿನವರು ಹೆಚ್ಚಾಗಿ ಮಲಬದ್ದತೆ ಮತ್ತು ಮೂಲವ್ಯಾಧಿಗಳಿಂದ ಬಳಲುವರು. ಬೊಜ್ಜಿದ್ದವರು ಅದಿಲ್ಲದವರಿಗಿಂತ ಸುಮಾರು 20 ವರ್ಷ ಕಡಿಮೆ ಬದುಕುವರೆಂಬುದು ಸಂಶೋಧನೆಗಳಿಂದ ತಿಳಿದುಬಂದಿದೆ. ಬೊಜ್ಜಿನ ವಿಷಯವಾಗಿ ನಮ್ಮ ದೇಶದಲ್ಲಿನ ಸರಿಯಾದ ಅಂಕಿ ಅಂಶಗಳು ನನಗೆ ತಿಳಿಯದು. ಮೊನ್ನೆ ತಾನೆ ಕೆಲವು ಅಂಕಿ ಅಂಶಗಳನ್ನು ಬಿಡುಗಡೆ ಮಾಡಿರುವ ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆಯ ಪ್ರಕಾರ, ನಮ್ಮ ದೇಶದಲ್ಲಿ ಸ್ತ್ರೀಪುರುಷರಿಬ್ಬರಲ್ಲೂ ಬೊಜ್ಜಿನವರ ಸಂಖ್ಯೆ ಹೆಚ್ಚಾಗುತ್ತಿದೆ. ಗಂಡಸರಲ್ಲಿ 2005-6 ರಲ್ಲಿ ಶೆ. 10 ಇದ್ದದ್ದು 2015-16 ರಲ್ಲಿ ಶೆ. 39 ಆಗಿದೆ. ಅಮೆರಿಕದಲ್ಲಿ ಶೇಕಡ 68.8 ಜನ ಸ್ಥೂಲಕಾಯದಿಂದ ಬಳಲುತ್ತಿರುವುದು ಕಂಡುಬಂದಿದೆ. ಇದಕ್ಕಾಗಿ ಆಗುವ ಖರ್ಚು 147 ಬಿಲಿಯನ್ ಡಾಲರ್ಗಳು. ಅಲ್ಲಿ ಶೇಕಡ 25 ಮಂದಿ ಪುರುಷರು ಮತ್ತು ಶೇಕಡ 45 ಮಂದಿ ಸ್ತ್ರೀಯರು ಆಹಾರ ನಿಯಂತ್ರಣ (ಡಯಟಿಂಗ್) ಮಾಡುತ್ತಿದ್ದಾರೆ. ಆದರೆ, ಅವರಲ್ಲಿ ಶೇ. 95 ಮಂದಿ ತಮ್ಮ ಪ್ರಯತ್ನದಲ್ಲಿ ಸೋತು ಮತ್ತೆ ತಿನ್ನಲು ಆರಂಭಿಸುತ್ತಾರೆ. ಕೆಲ ವರ್ಷಗಳಲ್ಲಿ ಮೊದಲ ಸ್ಥಿತಿಗೆ ಬರುತ್ತಾರೆ. ಹೀಗಾಗಲು ಕಾರಣ ಅವರ ಜಿಹ್ವಾ ಚಾಪಲ್ಯ; ಅವರ ಮಾನಸಿಕ ಹಸಿವು; ಅವರ ಕಲಿತ, ಅಭ್ಯಾಸ ಮಾಡಿಕೊಂಡ ಹಸಿವು; ಅನವಶ್ಯಕ ಆಹಾರ ಸೇವನೆ. ನೆನಪಿಡಿ, ಅನವಶ್ಯಕ ಆಹಾರ ದೇಹಕ್ಕೆ ಭಾರ; ಬೊಜ್ಜಿಗೆ ಆಹ್ವಾನ. ಬೊಜ್ಜಿಗೆ ಬಹು ಮುಖ್ಯ ಕಾರಣಗಳು ಎರಡು: 1) ಹೆಚ್ಚು ತಿನ್ನುವುದು; 2) ಕಡಿಮೆ ದುಡಿಯುವುದು. ಸುಮಾರು 50,000 ವರ್ಷಗಳ ಹಿಂದೆ ಮನುಷ್ಯರಿಗೆ ಬೊಜ್ಜಿರಲಿಲ್ಲ. ನಮ್ಮ ಪೂರ್ವಿಕರು ಕಾಡುಮೇಡುಗಳಲ್ಲಿ ಅಲೆದು, ಶ್ರಮವಹಿಸಿ, ಆಹಾರವನ್ನು ಹುಡುಕಿ ತಂದು, ತಿಂದು ಬದುಕುತ್ತಿದ್ದರು. ಅವರು ಸೇವಿಸಿದ ಆಹಾರ ಅವರ ಶ್ರಮಕ್ಕೆ ಸರಿಹೋಗುತ್ತಿತ್ತು. ಕೊಬ್ಬು ಶೇಖರಣೆಗೆ ಅಲ್ಲಿ ಅವಕಾಶವೇ ಇರಲಿಲ್ಲ. ಅವರಿಗೆ ಆಹಾರದ ಉತ್ಪಾದನೆಯಾಗಲೀ, ಅದನ್ನು ಶೇಖರಿಸಿಡುವುದಾಗಲೀ ತಿಳಿದಿರಲಿಲ್ಲ. ಅವರು ನೈಸರ್ಗಿಕವಾದ ಆಹಾರವನ್ನು ತಿಂದು ಆರೋಗ್ಯವಾಗಿ ಬೊಜ್ಜಿಲ್ಲದೆ ಬದುಕಿದ್ದರು. ಮೊನ್ನೆ ಮೊನ್ನೆಯವರೆಗೂ ನಮ್ಮ ಹಳ್ಳಿಯ ಜನ ಹೊಲ ಉಳುತ್ತಿದ್ದರು, ಕಳೆ ಕೀಳುತ್ತಿದ್ದರು, ಸೌದೆ ಒಡೆಯುತ್ತಿದ್ದರು. ಬಿಸಿಲಿನಲ್ಲಿ ದುಡಿದು ಬೆವರುತ್ತಿದ್ದರು. ಹೆಂಗಸರು ಕೂಡ ಹೊಲಗಳಲ್ಲಿ ದುಡಿಯುತ್ತಿದ್ದರು, ಮನೆಯಲ್ಲಿ ಬತ್ತ ಕುಟ್ಟುತ್ತಿದ್ದರು, ಬಟ್ಟೆ ಒಗೆಯುತ್ತಿದ್ದರು, ಪಾತ್ರೆ ತೊಳೆಯುತ್ತಿದ್ದರು. ಇವರಾರಿಗೂ ಬೊಜ್ಜು ಬರುವ ಸಾಧ್ಯತೆ ಇರಲಿಲ್ಲ. ಆದರೆ, ಕಾಲಕಳೆದಂತೆ ಮಾನವರ ಜೀವನ ಶೈಲಿಯಲ್ಲಿ ಮಿಂಚಿನ ವೇಗದ ಬದಲಾವಣೆಗಳಾದವು. ಎಲ್ಲದಕ್ಕೂ ಯಂತ್ರಗಳು ಬಂದವು: ಹೊಲ ಉಳಲು ಟ್ರಾಕ್ಟರ್, ಬಟ್ಟೆ ಹೊಗೆಯಲು ವಾಷಿಂಗ್ ಮೆಷೀನ್, ಪಾತ್ರೆ ತೊಳೆಯಲು ಡಿಷ್ ವಾಷರ್. ಕೂತು ತಿನ್ನುವುದು ಅತಿಯಾಯ್ತು; ಶ್ರಮ ಕಡಿಮೆಯಾಯ್ತು. ಹಸಿರು ಕ್ರಾಂತಿಯಿಂದ ಆಹಾರದ ಉತ್ಪಾದನೆ ಹೆಚ್ಚಿತು. ದವಸ ಧಾನ್ಯಗಳು ಹೇರಳವಾಗಿ ದೊರಕುವಂತಾಯ್ತು. ತಿನ್ನುವುದು ಹೆಚ್ಚಾಯ್ತು. ಅವಶ್ಯಕತೆಗಿಂತ ಹೆಚ್ಚು ತಿಂದ ಆಹಾರ ಕೊಬ್ಬಿನ ರೂಪದಲ್ಲಿ ದೇಹದಲ್ಲಿ ಸಂಗ್ರಹಗೊಂಡು ಬೊಜ್ಜು ಬರುವುದು ಆರಂಭವಾಯ್ತು. ನಮ್ಮ ಆಹಾರಸೇವನೆಯಲ್ಲಿ ಎಷ್ಟು ಬದಲಾವಣೆಯಾಗಿದೆ ನೋಡಿರುವಿರೇನು? ಇಂದು ನಮ್ಮದೇನಿದ್ದರೂ ಫಾಸ್ಟ್ ಫುಡ್ ಕಲ್ಚರ್. ಗಂಡಹೆಂಡಿರಿಬ್ಬರೂ ಹೊರಗಡೆ ಕೆಲಸಕ್ಕೆ ಹೋಗುವುದರಿಂದ, ಮನೆಯಲ್ಲಿ ಅಡುಗೆ ಮಾಡುವುದು ನಿಂತು, ಕೊಂಡು ತಿನ್ನುವ ಪರಿಪಾಟ ಬೆಳೆದು ಬಂತು. ತಿನ್ನುವುದಾದರೂ ಎಂತದು. ಎಲ್ಲ ಮೊದಲೇ ತಯಾರಾದ ಪ್ಯಾಕ್ಡ್ ಫುಡ್. ಕೃತಕ ರುಚಿ, ಬಣ್ಣ, ವಾಸನೆಗಳಿಗೆ ಮಾರುಹೋಗಿ ಜನರು ಶರೀರಕ್ಕೆ ವಿಷವನ್ನು ತುಂಬುತ್ತಿದ್ದಾರೆ. ಇತ್ತೀಚೆಗೆ ವಿವಿಧ ಆಹಾರಗಳು (ಸಿದ್ಧಪಡಿಸಿದ ದೋಸೆ ಮಿಕ್ಸ್, ಜಾಮೂನ್ ಮಿಕ್ಸ್, ಇತ್ಯಾದಿ) ಮಾರುಕಟ್ಟೆಗಳಲ್ಲಿ ಹೇರಳವಾಗಿ ದೊರಕುವಂತಾಗಿ, ಇಡೀ ದೇಶವೇ ಆಹಾರದ ಅಂಗಡಿಯಾಗಿಬಿಟ್ಟಿದೆ. ಎಲ್ಲೆಡೆ ಕೊಬ್ಬು ಮತ್ತು ಸಕ್ಕರೆಯ ತಿಂಡಿಗಳು ಹೇರಳವಾಗಿ ಮಾರಾಟವಾಗುತ್ತಿವೆ. ಅವುಗಳ ಸೇವನೆ ಉಪಯೋಗ ಹೆಚ್ಚಾಗುತ್ತಿದೆ. ಸಕ್ಕರೆಯ ಪ್ರಭಾವ ನೀವು ಪ್ರತಿದಿನ ಸೇವಿಸುವ ಸಕ್ಕರೆಯ ಪ್ರಮಾಣವನ್ನು ಲೆಕ್ಕವಿಟ್ಟಿದ್ದೀರೇನು? ಬೆಳಗ್ಗೆ ಒಂದು ಲೋಟ ಕಾಫಿ ಅಥವಾ ಟೀ. ತಿಂಡಿ ತಡವಾದರೆ ಇನ್ನೊಂದು ಲೋಟ. ತಿಂಡಿಯ ನಂತರ ಮತ್ತೊಂದು ಲೋಟ. ಆಫೀಸ್ನಲ್ಲಿ ಟೀ ಬ್ರೇಕ್ ವೇಳೆಯಲ್ಲಿ ಮತ್ತೊಂದು ಲೋಟ. ಆಗಾಗ್ಗೆ ಕೋಕ ಕೋಲ. (ಕೋಕ ಕೋಲದಲ್ಲಿ ಎಷ್ಟು ಸಕ್ಕರೆ ಇದೆ ಗೊತ್ತೇನು?) ಸಾಲದ್ದಕ್ಕೆ ಅಲ್ಲಲ್ಲಿ ಜರಗುವ ಪಾರ್ಟಿಗಳು, ಭೋಜನಕೂಟಗಳು. ಯಾರಿಗೆ ಏನಾದರೊಂದು ಒಳ್ಳೆಯದು ಜರಗಿದಾಗ ಸಕ್ಕರೆ ಬೇಕೇ ಬೇಕು. ಮಗು ಹುಟ್ಟಿದಾಗ ಬಾಳೆಹಣ್ಣು ಸಕ್ಕರೆ, ಹುಟ್ಟುಹಬ್ಬಕ್ಕೆ ಸಿಹಿ ತಿಂಡಿ, ಪರೀಕ್ಷೆ ಪಾಸ್ ಆದಾಗ ಸ್ವೀಟ್ ವಿತರಣೆ, ಕೆಲಸ ಸಿಕ್ಕಿದ್ದಕ್ಕೆ ಸಿಹಿತಿನಸು. ಇಷ್ಟೊಂದು ಸಕ್ಕರೆ ಉಪಯೋಗಿಸಿದರೆ ಬೊಜ್ಜು ಬರದೆ ಇನ್ನೇನಾಗುತ್ತದೆ ಹೇಳಿ? ಸಕ್ಕರೆಯ ಮೇಲಿನ ಅಕ್ಕರೆ ಸಕ್ಕರೆ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಸಕ್ಕರೆಯ ಮೇಲೆ ನಮಗೆ ಅಪಾರವಾದ ವ್ಯಾಮೋಹ. ನಾವೇಕೆ ಸಕ್ಕರೆಯನ್ನು ಸೇವಿಸಲು ಅಷ್ಟೊಂದು ಹಾತೊರೆಯುತ್ತೇವೆ? ಇದಕ್ಕೆ ಕಾರಣವನ್ನು ಜೀವಿಗಳ ವಿಕಾಸದ (evolution) ಹಾದಿಯಲ್ಲಿ ಹುಡುಕಬೇಕು ಎಂಬುದು ಒಂದು ಸಿದ್ಧಾಂತ. ಪ್ರಾಣಿಗಳೆಲ್ಲರಿಗೂ ಸಕ್ಕರೆ ಅವಶ್ಯಕ. ಅದು ಶಕ್ತಿಯ ಮೂಲ. ಅದರಲ್ಲಿ ಎರಡು ಮಾತಿಲ್ಲ. ಬಹಳ ಹಿಂದೆ, ಜೀವಿಗಳು ವಿಕಾಸಗೊಳ್ಳುತ್ತಿದ್ದ ಕಾಲದಲ್ಲಿ, ಪರಿಸರದಲ್ಲಿ ಸಾಕಾದಷ್ಟು ಸಕ್ಕರೆ ಸಿಗುತ್ತಿರಲಿಲ್ಲ. ಅದಕ್ಕಾಗಿ ಹುಡುಕಬೇಕಾಗಿತ್ತು. ಮುಂದೆ ದೊರಕದೇನೋ ಎಂಬ ಆತಂಕವಿತ್ತು. ಆದುದರಿಂದ, ಸಕ್ಕರೆ ಸಿಕ್ಕಿದಾಗ ಹಿಂದು ಮುಂದು ನೋಡದೆ ಸಿಕ್ಕಿದಷ್ಟನ್ನು ತಿನ್ನಬೇಕಿತ್ತು. ಯಾವುದೇ ವಸ್ತುವಿಗೆ ಕೊರತೆ ಇದ್ದಾಗ, ಅದಕ್ಕೆ ಡಿಮಾಂಡ್ ಹೆಚ್ಚು ತಾನೆ? ಆಹಾರದ ರೇಷನ್ ಇದ್ದಾಗ ಹಸಿವು ಜಾಸ್ತಿ. ಆದುದರಿಂದ ಪ್ರಾಣಿಗಳಿಗೆ ಸಕ್ಕರೆಯ ಮೇಲಿನ ಒಲವು ಹೆಚ್ಚಿಗೆ ಇದ್ದದ್ದು ಸರಿ. ಆದರೆ ಆಧುನಿಕ ಯುಗದಲ್ಲಿ ಸಕ್ಕರೆ ಹೇರಳವಾಗಿ ದೊರಕುತ್ತಿದೆ. ಅದನ್ನು ಪಡೆಯಲು ಶ್ರಮಪಡಬೇಕಾಗಿಲ್ಲ. ಹಳೆಯ ಹಂಬಲ ಹಾಗೆ ಉಳಿದುಬಿಟ್ಟಿದೆ. ಸಕ್ಕರೆಯ ಮೇಲಣ ಕಡುಬಯಕೆ ಮಿದುಳಿನಲ್ಲಿ ಅಚ್ಚಾಗಿ, ಅದನ್ನು ಸೇವಿಸುವ ಹಂಬಲ ಒಂದು ಹುಟ್ಟುಗುಣವಾಗಿ ಉಳಿದುಬಿಟ್ಟಿರುವುದೇನೋ ಅನಿಸುತ್ತಿದೆ. ಹುಟ್ಟುಗುಣ ಸುಟ್ಟರೂ ಹೋಗದು. ಹೀಗೆ, ಮಾನವರ ಮಟ್ಟದಲ್ಲೂ ಸಕ್ಕರೆಯ ಮೇಲಿನ ವ್ಯಾಮೋಹ ಹುಟ್ಟುಗುಣವಾಗಿ ಉಳಿದು ಬಂದು, ಅನೇಕ ಅನಾಹುತಗಳಿಗೆ ಕಾರಣವಾಗಿದೆ. ಬೊಜ್ಜಿಗೆ ಕಾರಣ - ಆಧುನಿಕ ಜೀವನ ಶೈಲಿ ಎಲ್ಲಕ್ಕಿಂತ ಮಿಗಿಲಾಗಿ ಇಂದು ನಮ್ಮ ಜೀವನ ಶೈಲಿಯಲ್ಲಿ ಅಪಾರವಾದ ಬದಲಾವಣೆಯಾಗಿದೆ. ನಮ್ಮಲ್ಲಿ ಸಕಲ ಕಾರ್ಯಗಳಿಗೂ ಯಂತ್ರಗಳನ್ನು ಉಪಯೋಗಿಸುವ ಪರಿಪಾಟ ಬೆಳೆಯುತ್ತಿದೆ. ವಾಹನಗಳ ಮೇಲಿನ ಅವಲಂಬನೆ ಹೆಚ್ಚಾಗಿ, ನಡೆಯುವುದನ್ನೇ ಮರೆಯುತ್ತಿದ್ದೇವೆ. ವಾಕಿಂಗ್ ಬದಲು ಕಾರಿಂಗ್ ಮಾಡುತ್ತಿದ್ದೇವೆ. ಎಲ್ಲದಕ್ಕೂ ಯಂತ್ರವನ್ನು ಬಳಸುತ್ತಾ, ದೈಹಿಕ ಶ್ರಮ ಕಡಿಮೆಯಾಗುತ್ತಿದೆ. ಕುಳಿತಲ್ಲೇ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಸಾಧನಗಳು ಬಂದಿವೆ. ಅಡುಗೆ ಮಾಡಲು, ಬಟ್ಟೆ ಹೊಗೆಯಲು, ಕಾಯಿ ತುರಿಯಲು, ತರಕಾರಿ ಕತ್ತರಿಸಲು ಎಲ್ಲಕ್ಕು ಯಂತ್ರಗಳು ಬಂದಿವೆ. ಇದೆಲ್ಲಕ್ಕಿಂತ ಹೆಚ್ಚಾಗಿ ಶ್ರಮದ ಕೆಲಸ ಮಾಡುವುದು ಮತ್ತು ವಾಹನವಿಲ್ಲದೆ ಕೆಲಸಕ್ಕೆ ಹೋಗುವುದು ತಮ್ಮ ಅಂತಸ್ತಿಗೆ ತಕ್ಕದಲ್ಲವೆಂಬ ಭಾವನೆ ಜನರಲ್ಲಿ ಬೆಳೆದು ಬರುತ್ತಿದೆ. ಕೆಲಸ ಮಾಡಿದರೆ ಮೈಕೈ ನೋವಾಗಿ ಆರೋಗ್ಯ ಕೆಡಬಹುದೆಂಬ ತಪ್ಪು ಕಲ್ಪನೆ ಕೂಡ ಹಲವರಲ್ಲಿದೆ. ಮಕ್ಕಳು ಶ್ರಮವಹಿಸಿ ಕೆಲಸ ಮಾಡುವುದನ್ನು ನೋಡಿದಾಗ ತಂದೆತಾಯಿಗಳ ಮನಸ್ಸಿಗೆ ನೋವಾಗಿ, ಅವರಿಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ದುರಾದೃಷ್ಟದ ಸಂಗತಿಯೆಂದರೆ ಇಂದು ಮಕ್ಕಳಲ್ಲೂ ಬೊಜ್ಜು ಬೆಳೆಯುತ್ತಿರುವುದು (ಚಿತ್ರ-5). ಶ್ರೀಮಂತರ ಮತ್ತು ಪಟ್ಟಣಿಗರ ಮಕ್ಕಳಲ್ಲಿ ಕಂಡು ಬರುತ್ತಿದ್ದ ಬೊಜ್ಜು ಇಂದು ಹಳ್ಳಿ ಮಕ್ಕಳಲ್ಲಿಯೂ ಕಂಡುಬರುತ್ತಿದೆ. ಹಳ್ಳಿಯ ಜನ ತಾವು ಬೆಳೆದ ಉತ್ತಮವಾದ ಆಹಾರ ಪದಾರ್ಥಗಳನ್ನು ಮಾರಿ, ಪಟ್ಟಣದ ಜಂಕ್ ಫುಡ್ಗಳನ್ನು ಕೊಂಡು ತಿನ್ನುತ್ತಿದ್ದಾರೆ; ಅದನ್ನು ತಮ್ಮ ಮಕ್ಕಳಿಗೂ ತಿನ್ನಿಸುತ್ತಿದ್ದಾರೆ. ಪಟ್ಟಣದ ಮಕ್ಕಳ ಬೊಜ್ಜಿಗೆ ಕಾರಣವನ್ನು ಹುಡುಕಲು ಕಷ್ಟಪಡಬೇಕಿಲ್ಲ. ಇಂದಿನ ಮಕ್ಕಳು ಹೆಚ್ಚಾಗಿ ಇಷ್ಟಪಟ್ಟು ಸೇವಿಸುವ ಆಹಾರಗಳನ್ನು ಗಮನಿಸಿ: ಫಿಜ್ಜಾ, ಐಸ್ಕ್ರೀಮ್, ಚಾಕೋಲೇಟ್, ಕೇಕ್, ಪಫ್, ಬ್ರೆಡ್, ಬಟ್ಟರ್, ಜಾಮ್. ಇಂದು ಅಂಗಡಿಗಳಲ್ಲಿ ಸಿದ್ಧಪಡಿಸಿದ, ಕರೆದ ತಿಂಡಿಯ ವೈವಿಧ್ಯಮಯ ಪೊಟ್ಟಣಗಳು ಹೇರಳವಾಗಿ ಸಿಗುತ್ತಿರುತ್ತವೆ. ಶಾಲೆಗೆ ಹೋಗುವಾಗ ಮತ್ತು ಬರುವಾಗ ಮಕ್ಕಳ ಕೈಯಲ್ಲಿ ಇಂಥ ತಿಂಡಿ ಪೊಟ್ಟಣಗಳು ಇದ್ದೇ ಇರುತ್ತವೆಂಬುದನ್ನು ನಿಮಗೆ ನೋಡಿರಲೇಬೇಕು. ಕೈಯಲ್ಲಿ ಅಂಥ ಪೊಟ್ಟಣಗಳಿಲ್ಲದ ಶಾಲಾ ಮಕ್ಕಳನ್ನು ಕಾಣುವುದೇ ಕಷ್ಟ. ಮನೆಯಲ್ಲಿ ಇರುವಾಗ ಅವರ ಆಸಕ್ತಿಯಲ್ಲ ಟಿವಿ, ಕಂಪ್ಯೂಟರ್, ವಿಡಿಯೋ ಗೇಮ್ಸ್ಗಳ ಮೇಲೆ. ಇವೆಲ್ಲಕ್ಕಿಂತ ಮಿಗಿಲಾಗಿ ಮನೆ ಪಾಠ ಮತ್ತು ಕುಳಿತು ಮಾಡುವ ಹೋಮ್ ವರ್ಕ್ ಇದ್ದೇ ಇರುತ್ತದೆ. ಇಂದಿನ ಮಕ್ಕಳಿಗೆ ಯಾವುದೇ ದೈಹಿಕ ಚಟುವಟಿಕೆಗಳಿಗೆ, ಬಯಲಲ್ಲಿ ಆಟವಾಡುವುದಕ್ಕೆ ಅವಕಾಶವೇ ಇಲ್ಲ. ಶಾಲೆಗಳಲ್ಲಿ ಆಟವೆಂಬುದು ಕನಸಿನ ಮಾತು. ಇಂದು ಪಟ್ಟಣದ ಶಾಲೆಗಳಲ್ಲಿ ಆಟದ ಮೈದಾನವಾದರೂ ಎಲ್ಲಿದೆ? ಮೈದಾನವಿದ್ದರೆ ತಾನೆ ಆಟ. ನಮ್ಮ ಜನನಿಬಿಡ ಪಟ್ಟಣಗಳ ಶಾಲೆಗಳಲ್ಲಿ ಆಟದ ಮೈದಾನಗಳ ಉಪಸ್ಥಿತಿಯನ್ನು ಊಹಿಸುವುದೂ ಕಷ್ಟ. ನೆನಪಿಡಿ, ತಿನ್ನುವುದೇ ಒಂದು ಚಟವಾದಾಗ ನಿಮ್ಮ ಶರೀರ ಅನುಭವಿಸುವ ದುಸ್ಥಿತಿಯೇ ಬೊಜ್ಜು. ಬೊಜ್ಜು ಇಂದು ಇಡಿ ವಿಶ್ವವನ್ನು ಕಾಡುತ್ತಿರುವ ಬಹು ದೊಡ್ಡ ಸಮಸ್ಯೆ. ಒಂದು ಅಂದಾಜಿನ ಪ್ರಕಾರ, ಇಂದು ವಿಶ್ವದಲ್ಲಿ 10 ಕೋಟಿ ಜನರು ಬೊಜ್ಜಿನಿಂದ ಬಳಲುತ್ತಿದ್ದಾರೆ. ಬೊಜ್ಜೇ ಒಂದು ಕಾಯಿಲೆಯಲ್ಲ. ಅದು ಮರಣಾಂತಿಕ ರೋಗಗಳು ಬರಬಹುದೆಂಬುದರ ಎಚ್ಚರಿಕೆಯ ಕರೆಘಂಟೆ. ನಿಮ್ಮ ದೇಹದಲ್ಲಿ ಅವಶ್ಯಕತೆಗಿಂತ ಹೆಚ್ಚಾಗಿ ಕೊಬ್ಬು ಶೇಖರಗೊಂಡಾಗ ಬೊಜ್ಜು ಉಂಟಾಗುತ್ತದೆ. ಆದುದರಿಂದ, ನಿಮಗೆ ಬೊಜ್ಜು ಬರದಿರಬೇಕಾದರೆ, ದೇಹದಲ್ಲಿ ಕೊಬ್ಬು ಶೇಖರವಾಗದಂತೆ ನೋಡಿಕೊಳ್ಳಿ. ರಕ್ತದಲ್ಲಿ ಸಕ್ಕರೆ ಪ್ರಮಾಣ ಕಡಿಮೆ ಇರಲಿ. ಕಡಮೆ ಆಹಾರ ತಿನ್ನಿ. ಸಕ್ಕರೆ ಇಲ್ಲದ, ಸೊಪ್ಪು, ತರಕಾರಿ, ನಾರು ಬೇರುಗಳನ್ನು ತಿನ್ನಿ. ತಿಂದದ್ದು ಅರಗಲು ಶ್ರಮವಹಿಸಿ ದುಡಿಯಿರಿ. ಬೊಜ್ಜು ಇರುವವರು ಸಾಮಾನ್ಯವಾಗಿ ಮಾನಸಿಕ ಹಸಿವಿನ ನಿಯಂತ್ರಣದಲ್ಲಿರುತ್ತಾರೆ. ಅವರ ಹಸಿವು ದೈಹಿಕ ಸ್ಥಿತಿಗಳಿಂದ ನಿರ್ಧರಿಸಿದ್ದಲ್ಲ. ಅದು ಪರಿಸರದಿಂದ ಬರುವ ಪ್ರಚೋದನೆಗಳ ನಿಯಂತ್ರಣದಲ್ಲಿರುತ್ತದೆ. ಬಹಳಷ್ಟು ಹಸಿವು ನಾವಾಗಿ ಕಲಿತದ್ದು; ಸ್ವಯಾರ್ಜಿತವಾದುದು. ನಮಗೆ ನೋಟ, ರುಚಿ, ವಾಸನೆ ಮುಖ್ಯ. ನಮಗೆ ಆಶ್ಚರ್ಯವಾಗಬಹುದು. ಮಾನವೇತರ ಪ್ರಾಣಗಳಿಗೆ ಬೊಜ್ಜಿರುವುದಿಲ್ಲ. ಅದಕ್ಕೆ ಕಾರಣ ಅವಕ್ಕೆ ಮಾನಸಿಕ ಹಸಿವಿಲ್ಲದಿರುವುದು. ಅವರ ಹಸಿವು ದೈಹಿಕವಾದದ್ದು. ದೇಹಕ್ಕೆ ಎಷ್ಟು ಬೇಕೊ ಅಷ್ಟು ತಿಂದು ಸುಮ್ಮನಿರುತ್ತವೆ. ಆಹಾರಕ್ಕಾಗಿ ದುಡಿಯುತ್ತವೆ. ಮನುಷ್ಯರಿಗೆ ಮನಸ್ಸಿದೆ. ಕಂಡಕಂಡಲ್ಲಿ ಆಹಾರವಿದೆ. ಮನಸ್ಸು ಕೊಂಬೆಯ ಮೇಲಣ ಮರ್ಕಟನಂತೆ, ಕಂಡದನೆಲ್ಲಾ ಬಯಸುತ್ತದೆ; ಸಿಕ್ಕಿದ್ದನ್ನೆಲ್ಲ ತಿನ್ನಿಸುತ್ತದೆ. ಬೊಜ್ಜು ಬೆಳೆಯದೆ ಇನ್ನೇನಾಗುತ್ತದೆ ಹೇಳಿ? ಭೊಜ್ಜು ಕರಗಿಸುವುದು ಹೇಗೆ? ಬೊಜ್ಜು ಕರಗಿಸಲು ಔಷಧಿ ಮತ್ತು ಸರ್ಜರಿಯನ್ನು ಸೂಚಿಸುತ್ತಾರೆ. ಹಲವಾರು ಔಷಧಿಗಳು ಹೊರಬಿದ್ದಿವೆ. ನೀವು ಇವಕ್ಕೆ ಸಂಬಂಧಪಟ್ಟ ಜಾಹಿರಾತುಗಳನ್ನು ನೋಡಿರಬಹುದು. ವೈದ್ಯರ ಸಲಹೆಯಂತೆ ಇವುಗಳನ್ನು ಉಪಯೋಗಿಸಬಹುದು. ಕೆಲವು ಮೇಲ್ಮಟ್ಟದ ಆಸ್ಪತ್ರೆಗಳಲ್ಲಿ ಬೊಜ್ಜನ್ನು ಹೊರತೆಗೆಯುವ ಶಸ್ತ್ರ ಚಿಕಿತ್ಸೆಗಳನ್ನು ಮಾಡುತ್ತಾರೆ. ಇವೆಲ್ಲಾ ದುಬಾರಿ ಖರ್ಚಿನವು. ಇವುಗಳಲ್ಲಿ ಉಪಯೋಗಕ್ಕಿಂತ ಅಡ್ಡ ಪರಿಣಾಮಗಳೇ ಹೆಚ್ಚು ಎಂದು ತಿಳಿದುಬಂದಿದೆ. ಬೊಜ್ಜು ಇಳಿಸಲು ಇರುವ ಉತ್ತಮ ಚಿಕಿತ್ಸೆಗಳು ಎರಡು: 1) ಕಡಿಮೆ ಆಹಾರ ಸೇವನೆ; 2) ಬೆವರಿಳಿಯುವಷ್ಟು ದುಡಿಮೆ. ಜತೆಗೆ ಈ ಕೆಳಗಿನ ಸಲಹೆಗಳನ್ನು ಗಮನಿಸಿ.
ಬೊಜ್ಜು ಬರುವುದು ನಾವು ಮಾಡುವ ತಪ್ಪುಗಳಿಂದಾಗಿಯೇ ಎಂಬುದನ್ನು ನಾವು ಅರಿಯಬೇಕು. ತಪ್ಪುಗಳನ್ನು ತಿದ್ದಿಕೊಳ್ಳಲು ಸತತ ಪ್ರಯತ್ನ ಮಾಡಬೇಕು. ಹಾಗೆ ಮಾಡಿದರೆ ಮಾತ್ರ ಕೊಬ್ಬಿನಿಂದ ಪಾರಾಗಲು ಸಾಧ್ಯ. ಕೊಬ್ಬನ್ನು ಕರಗಿಸುವ ಪ್ರಯತ್ನದಲ್ಲಿ ಅಭಿವೃದ್ಧಿ ಹೊಂದಿದ ದೇಶಗಳು ಗೆಲವು ಸಾಧಿಸಿವೆ. ಅವರಿಂದ ನಾವು ಪಾಠ ಕಲಿಯಬೇಕು. ಆಹಾರ ಸೇವನೆಗೆ ಸಂಬಂಧಿಸಿದ ಕೆಲವು ವ್ಯಾಧಿಗಳು ನಾವು ಸೇವಿಸುವ ಆಹಾರದ ಪ್ರಮಾಣ ನಮಗೆ ಎಷ್ಟು ಶಕ್ತಿ ಬೇಕು ಎಂಬುದರಿಂದ ನಿರ್ಧರಿಸಲ್ಪಡುತ್ತದೆ ಎನ್ನುವ ಮಾತು ಭಾಗಶಃ ಸತ್ಯ. ನಾವು ಸೇವಿಸುವ ಆಹಾರ ಎಷ್ಟಿರಬೇಕು, ಯಾವಾಗ ತಿನ್ನಬೇಕು ಎಂಬುದಕ್ಕೆ ಮಾನಸಿಕ ಕಾರಣಗಳೂ ಇವೆ ಎನ್ನುವುದು ನಿಮಗೆ ತಿಳಿದಿದೆ. ಇವೆರಡಕ್ಕೂ ಮೀರಿದ ಸತ್ಯ ಒಂದಿದೆ. ಅದನ್ನು ನೀವು ಸಾಮಾಜಿಕ ಕಾರಣವೆನ್ನಬಹುದು. ಪ್ರತಿ ಸಮಾಜದಲ್ಲೂ ನೀವು ದೈಹಿಕವಾಗಿ ಹೇಗೆ ಕಾಣಬೇಕು, ಶರೀರದ ಆಕಾರ ಹೇಗಿರಬೇಕು, ತೂಕ ಎಷ್ಟಿರಬೇಕು, ಹೇಗಿದ್ದರೆ ನೀವು ತೆಳ್ಳಗೆ ಬೆಳ್ಳಗೆ, ಆಕರ್ಷಕವಾಗಿ, ಸುಂದರವಾಗಿ ಕಾಣತ್ತೀರಿ ಎನ್ನುವ ಕಲ್ಪನೆಗಳಿರುವುದು ಸಹಜ. ಹಾಗಿರಬೇಕಾದರೆ ಎಷ್ಟು ತಿನ್ನಬೇಕು ಎಂಬುದನ್ನು ನೀವು ಮತ್ತು ನಿಮ್ಮ ಸಾಮಾಜಿಕ ಪರಿಸರ ನಿರ್ಧರಿಸುತ್ತದೆ. ಒಂದು ಕಾಲದಲ್ಲಿ ದಪ್ಪವಾಗಿ, ತೋರವಾಗಿ ಇದ್ದರೆ ಚನ್ನ ಎನ್ನುವ ಅಭಿಪ್ರಾಯವಿತ್ತು. ಇಂದು ಸ್ಲಿಮ್ ಆಗಿರಬೇಕೆಂಬುದು ಎಲ್ಲರ ಆಶೆ. ಅದಕ್ಕಾಗಿ ವ್ಯಾಯಾಮ ಮಾಡುತ್ತಾರೆ, ಜಿಮ್ಗೆ ಹೋಗುತ್ತಾರೆ. ಔಷಧಗಳನ್ನು ಸೇವಿಸುತ್ತಾರೆ, ಊಟ ಬಿಡುತ್ತಾರೆ. ಸಣ್ಣಗಿರಬೇಕೆಂಬ ಆಶೆ ಹೆಣ್ಣು ಮಕ್ಕಳಲ್ಲಿ ಅತಿ ಹೆಚ್ಚು. ತೆಳ್ಳಗೆ ಬೆಳ್ಳಗೆ ಬಡ ನಡುವಿನ ಬಾಲೆಯರಿಗೆ ಮದುವೆ ಮಾಡುವುದು ಸುಲಭವೆಂದು ಮನೆಯವರು ನಂಬುತ್ತಾರೆ. ಅದಕ್ಕಾಗಿ ನಮ್ಮ ಹೆಣ್ಣು ಮಕ್ಕಳು ಮಾಡುವ ಕಸರತ್ತು ಹಲವಾರು. ಕೆಲವರಿಗೆ ಇದೇ ಒಂದು ಗೀಳಾಗಿಬಿಡುತ್ತದೆ. ಅವರು ತಮ್ಮ ಆಹಾರ ಸೇವನೆಯನ್ನು ಬಹಳ ತಗ್ಗಿಸುತ್ತಾರೆ. ಸದಾ ಕನ್ನಡಿಯ ಮುಂದೆ ನಿಂತು ತಮ್ಮ ಆಕಾರ ಹೇಗಿದೆ ಎಂದು ಪರಿಶೀಲಿಸುತ್ತಾ ಕಾಲ ಕಳೆಯುತ್ತ ಉಣ್ಣುವುದನ್ನು ಮರೆಯುತ್ತಾರೆ. ಅಮೆರಿಕೆಯಲ್ಲಿ ಶೇಕಡ 60ರಷ್ಟು ಹೆಣ್ಣು ಮಕ್ಕಳು ಮತ್ತು ಶೇಕಡ 28 ಗಂಡಸರು ಡೈಯಟಿಂಗ್ ಮಾಡುತ್ತಿರುವಂತೆ ತಿಳಿದು ಬಂದಿದೆ. ಇಂದು ಕೃಶಕಾಯಕ್ಕೆ ಬಹಳ ಬೆಲೆ ಬಂದಿದೆ. ಕೃಶಕಾಯದ ವ್ಯಾಮೋಹ ಕೆಲವು ಮನೋವ್ಯಾಧಿಗಳಿಗೆ ಎಡೆ ಮಾಡಿದೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಇಂಥ ಕಾಯಿಲೆಗಳಲ್ಲಿ ಅನೊರೆಕ್ಸಿಯ ನರ್ವೋಸ (anorexia nervosa) ಮತ್ತು ಬುಲಿಮಿಯ ನರ್ವೋಸ (bulimia nervosa) ಎಂಬ ಎರಡು ಸ್ಥಿತಿಗಳನ್ನು ಗುರುತಿಸಿ, ಅವಕ್ಕೆ ಕಾರಣಗಳೇನು, ಚಿಕಿತ್ಸೆಯೇನು ಎನ್ನುವುದರ ಕುರಿತು ಸಂಶೋಧನೆಗಳು ಜರುಗುತ್ತಿವೆ. ಅನೊರೆಕ್ಸಿಯ ನರ್ವೋಸದಿಂದ ನರಳುತ್ತಿರುವವರಿಗೆ ತಾವು ತೆಳ್ಳಗಿರಬೇಕೆಂಬ ಗೀಳು ಮತ್ತು ತಾವು ದಪ್ಪವಾಗುವೆವು ಎಂಬ ಭಯ. ಇದರಿಂದಾಗಿ ತಿನ್ನುವುದನ್ನು ಬಹಳ ಕಡಿಮೆ ಮಾಡುತ್ತಾರೆ. ಇವರು ಬರಿ ಮೂಳೆ ಚಕ್ಕಳದವರಾಗಿದ್ದರೂ, ತಾವು ಬಹಳ ದಪ್ಪವಿರುವುದಾಗಿ ನಂಬುತ್ತಾರೆ. ಯಾರು ಎಷ್ಟೇ ಹೇಳಿದರೂ ಇವರು ಬೇರೆಯವರ ಮಾತನ್ನು ನಂಬುವುದಿಲ್ಲ. ಅವರಿಗೆ ಕನ್ನಡಿಯಲ್ಲಿ ತಮ್ಮ ಪ್ರತಿಬಿಂಬ ತಾವಿರುವುದಕ್ಕಿಂತ ತೋರವಾಗಿ ಕಾಣುತ್ತದೆ (ಚಿತ್ರ-7). ಈ ರೋಗ ಹದಿಹರಯದಲ್ಲೆ ಆರಂಭವಾಗುತ್ತದೆ; ದಪ್ಪವಾಗುವ ಭಯದಿಂದ ಆಗಲೇ ಡಯಟಿಂಗ್ಗೆ ಮೊರೆಹೊಕ್ಕು, ಅತಿಯಾಗಿ ವ್ಯಾಯಾಮ ಮಾಡುತ್ತಾ ಕಾಲ ಕಳೆಯುತ್ತಿರುತ್ತಾರೆ. ಅನೊರೆಕ್ಸಿಯ ನರ್ವೋಸದಿಂದ ನರಳುತ್ತಿರುವವರಲ್ಲಿ ಶೇ. 95 ಹೆಣ್ಣು ಮಕ್ಕಳು. ಅಮೆರಿಕದ ಮನೋವೈದ್ಯ ಸಂಘದ ಪ್ರಕಾರ, ಸುಮಾರು 200 ಜನರಲ್ಲೊಬ್ಬರು ತಮ್ಮ ಜೀವಿತ ಕಾಲದಲ್ಲಿ ಈ ರೋಗದಿಂದ ನರಳುವ ಸಾಧ್ಯತೆ ಇದೆ. ಈ ರೋಗ ಬಹಳ ಅಪಾಯಕಾರಿ. ಇದರ ಪರಿಣಾಮವಾಗಿ ಹಲವಾರು ಹೃದಯ ಸಂಬಂಧಿ ರೋಗಗಳಿಗೆ ಬರಬಹುದು. ಮುಟ್ಟಾಗುವುದು ನಿಲ್ಲಬಹುದು; ಹೊಟ್ಟೆ ನೋವು ಬರಬಹುದು. ಕೆಲವರು ಆತ್ಮಹತ್ಯೆ ಮಾಡಿಕೊಳ್ಳಬಹುದು, ಅಥವಾ ಹಾಗೆ ಮರಣಹೊಂದಬಹುದು. ಬಹಳಷ್ಟು ಮಂದಿ ಸಿನಿಮಾ ನಟಿಯರು, ಬ್ಯಾಲೆ ನೃತ್ಯಗಾತಿಯರು (Ballet dancers), ರೂಪದರ್ಶಿಗಳು ಅನೊರೆಕ್ಸಿಯ ನರ್ವೋಸದಿಂದ ಬಳಲುತಿರುವುದು ಕಂಡುಬಂದಿದೆ. ಇದೊಂದು ಅಪಾಯಕಾರಿ ಸ್ಥಿತಿ; ಈ ವ್ಯಾಧಿಯಿಂದ ಬಳಲುವವರಲ್ಲಿ ಬಹಳಷ್ಟು ಮಂದಿ ಸಾವನ್ನಪ್ಪುತ್ತಾರೆ. ಉಳಿದವರಲ್ಲಿ ಮೆದುಳು ಸವೆದು ಹಲವು ತೊಂದರೆಗಳುಂಟಾಗಬಹುದು. ಬುಲಿಮಿಯ ನರ್ವೋಸ ಒಂದು ವಿಚಿತ್ರ ಕಾಯಿಲೆ. ಇಲ್ಲಿ ರೋಗಿಗಳು ಚನ್ನಾಗಿ ತಿನ್ನುತ್ತಾರೆ; ಅನಂತರ ಸ್ವಪ್ರಯತ್ನದಿಂದ ವಾಂತಿ ಮಾಡಿಕೊಳ್ಳುತ್ತಾರೆ (Binge eating and purging). ಬೇಧಿಯ ಔಷಧಿ ಉಪಯೋಗಿಸಿ ತಿಂದದನ್ನೆಲ್ಲ ಹೊರಹಾಕುತ್ತಾರೆ. ಬಹಳಷ್ಟು ವ್ಯಾಯಾಮಗಳಲ್ಲಿ ಅತಿಯಾಗಿ ತೊಡಗಿಸಿಕೊಂಡು ತೂಕವನ್ನು ನಿಯಂತ್ರಿಸಲು ಪ್ರಯತ್ನಿಸುತ್ತಾರೆ. ಇವರಿಗೂ ಅನೊರೆಕ್ಸಿಯ ನರ್ವೋಸದವರಿಗಿರುವಂತೆ ದಪ್ಪವಾಗುವೆವು ಎನ್ನುವ ಭಯ. ಆದರೆ ಇವರಿಗೆ ತಿನ್ನುವುದನ್ನು ಬಿಡಲು ಇಷ್ಟವಿಲ್ಲ. ಹಲವಾರು ಪ್ರಸಿದ್ಧ ವ್ಯಕ್ತಿಗಳು (ರಾಜಕುಮಾರಿ ಡಯಾನ) ಈ ರೋಗದಿಂದ ನರಳುತ್ತಿದ್ದರೆಂದು ಹೇಳಲಾಗಿದೆ. ಒಂದು ಒಳ್ಳೆಯ ವಿಷಯವೆಂದರೆ, ಇವರ ದೈಹಿಕ ತೂಕ ಮಾತ್ರ ಎಲ್ಲರಂತೆ ಸಾಮಾನ್ಯ ಮಟ್ಟದಲ್ಲೇ ಇರುತ್ತದೆ. ಇವರು ಯಾರಿಗೂ ಕಾಣದಂತೆ ಗುಟ್ಟಾಗಿ ತಿನ್ನುವ ಚಟವನ್ನು ಬೆಳೆಸಿಕೊಂಡಿರುತ್ತಾರೆ (ಚಿತ್ರ-8); ಸಿಹಿ ಪದಾರ್ಥಗಳನ್ನು ಹೆಚ್ಚಾಗಿ ತಿನ್ನುತ್ತಾರೆ. ನಂತರ ಅದನ್ನು ಒಂದಲ್ಲ ಒಂದು ರೀತಿಯಲ್ಲಿ ಹೊರ ಹಾಕುತ್ತಾರೆ. ಈ ರೋಗ ಕೂಡ ಹೆಂಗಸರಲ್ಲಿ ಹೆಚ್ಚು (ಸುಮಾರು ಶೇ. 1 ರಿಂದ ಶೇ. 3); ಗಂಡಸರಲ್ಲಿ ಕಡಿಮೆ (ಸಾವಿರದಲ್ಲಿ ಮೂರು). ಬುಲಿಮಿಯ ನರ್ವೋಸವನ್ನು 1987ರಲ್ಲಿ ಒಂದು ಮಾನಸಿಕ ವ್ಯಾಧಿಯೆಂದು ಪರಿಗಣಿಸಲಾಯ್ತು. ಬುಲಿಮಿಯದವರು ಕೂಡ ಹಲವಾರು ರೋಗಗಳಿಗೆ ತುತ್ತಾಗುವ ಸಾಧ್ಯತೆಗಳಿವೆ. ಆದರೆ ಸಾಯುವವರ ಸಂಖ್ಯೆ ಕಡಿಮೆ. ಬಹಳಷ್ಟು ಬುಲಿಮಿಯ ರೋಗಿಗಳಿಗೆ ತಾವು ತಿನ್ನುವಷ್ಟು ಆಹಾರವನ್ನು ಕೊಳ್ಳಲು ಕಾಸಿಲ್ಲದೆ ತೊಂದರೆಗೀಡಾದ ನಿದರ್ಶನಗಳಿವೆ. ಕೆಲವರು ಆಹಾರವನ್ನು ಕದ್ದು ತಂದು ತಿನ್ನುವುದು ತಿಳಿದುಬಂದಿದೆ, ತಮ್ಮ ದುಸ್ಥಿತಿಯನ್ನು ಬೇರೆಯವರಿಂದ ಗುಟ್ಟಾಗಿ ಇಡಲು ಇವರು ಬಹಳ ಶ್ರಮ ವಹಿಸುತ್ತಾರೆ. ಈ ಎರಡು ಕಾಯಿಲೆಗಳಿಗೆ ನಿಜವಾದ ಕಾರಣಗಳು ಏನೆಂಬುದು ತಿಳಿದುಬಂದಿಲ್ಲ. ಕಾರಣಗಳು ಬಹಳವಿರಬಹುದು. ಎಲ್ಲರೂ ಗುರುತಿಸುವ ಬಹು ಮುಖ್ಯ ಕಾರಣ, ಆಧುನಿಕ ಯುವಕ ಯುವತಿಯರಲ್ಲಿ ಕಂಡು ಬರುವ ದೈಹಿಕವಾಗಿ ತೆಳ್ಳಗಿರಬೇಕೆಂಬ ಅತಿಯಾದ ವ್ಯಾಮೋಹ. ಇಂದು ಸುಮಾರು ಶೇ. 50 ರಿಂದ ಶೇ. 75 ರಷ್ಟು ಮಕ್ಕಳಿಗೆ ತಮ್ಮ ಶರೀರಾಕೃತಿಯ ಮೇಲೆ ಅತೃಪ್ತಿ ಇರುವುದೆಂದು ಹೇಳಲಾಗಿದೆ. ಈ ಭಾವನೆ ಸುಮಾರು 8-10 ವರ್ಷದ ಮಕ್ಕಳಲ್ಲೂ ಇರುವುದು ಕಂಡುಬಂದಿದೆ. ಇದಕ್ಕೆ ಮುಖ್ಯ ಕಾರಣ ಇಂದು ನಮ್ಮ ಮಕ್ಕಳು ಪ್ರಚಾರ ಮಾಧ್ಯಮಗಳಲ್ಲಿ ನೋಡುವ ಸಿನಿಮಾ ತಾರೆಯರು, ಜೀರೊ ಸೈಜ್ ಮಾಡೆಲ್ಗಳು ಮತ್ತು ಜಾಹಿರಾತುಗಳಲ್ಲಿ ಕಂಡುಬರುವ ಸುರಸುಂದರಿಯರು. ತಾವು ಅವರ ಹಾಗೆ ಆಗಬೇಕೆಂಬ ಹಂಬಲ. ಇವೆಲ್ಲಕ್ಕು ಮಿಗಿಲಾಗಿ ಹೆಣ್ಣುಮಕ್ಕಳು ತೆಳ್ಳಗೆ ಬೆಳ್ಳಗೆ, ಸ್ಲಿಮ್ ಆಗಿರಬೇಕೆಂಬುದರ ಬಗ್ಗೆ ಬೆಳೆಯುತ್ತಿರುವ ಸಾಮಾಜಿಕ ಒತ್ತಡ. ಈ ಒತ್ತಡ ಪೂರ್ವಾತ್ಯ ಬಡ ದೇಶಗಳಲ್ಲಿ ಅಷ್ಟಾಗಿ ಇಲ್ಲವಾದರೂ, ಇತ್ತೀಚೆಗೆ ಅಲ್ಲಿ ಕೂಡ ತೆಳ್ಳಗಿರಬೇಕೆಂಬ ಹುಚ್ಚು ಹರಡುತ್ತಿದೆ.
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
![]()
|
![]()
|
![]()
|
![]()
|
SITE MAP
SitePOSH |
NIRATHANKAOUR OTHER WEBSITESSubscribe |
HR and Employment Law Classes - Every Fortnight
Stay updated and informed by joining our WhatsApp group for HR and Employment Law Classes - Every Fortnight.
The Zoom link for the sessions will be shared directly in the group. |
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |