Niruta Publications
  • Home
  • About Us
  • Editor's Blog
  • Our Services
    • Human Resources
    • Publications
    • NGO & CSR
    • PoSH
    • Training Programmes
    • Certificate Training Courses
  • Leader's Talk
  • Inviting Articles
  • Blog
  • HR Blog
  • Online Store
  • Videos
  • Join Our Online Groups
  • Search
  • Contact Us
  • Home
  • About Us
  • Editor's Blog
  • Our Services
    • Human Resources
    • Publications
    • NGO & CSR
    • PoSH
    • Training Programmes
    • Certificate Training Courses
  • Leader's Talk
  • Inviting Articles
  • Blog
  • HR Blog
  • Online Store
  • Videos
  • Join Our Online Groups
  • Search
  • Contact Us
Niruta Publications

ಸಂಘರ್ಷದ ಜ್ವಾಲೆಯಿಂದ ಅನ್ಯಾಯವನ್ನು ದಹಿಸಿದ ಧೀರೆ

10/25/2017

0 Comments

 
Picture
ಹಲವು ಸಿನೆಮಾಗಳಲ್ಲಿ ಕಂಡ ದೃಶ್ಯಗಳು.
ಆಕೆಯೊಬ್ಬಳೇ ವ್ಯವಸ್ಥೆ ಸುಧಾರಣೆಗಾಗಿ ಸಿಡಿದೇಳುತ್ತಾಳೆ. ಈ ಸಾಹಸಕ್ಕಾಗಿ ಮಾಫಿಯಾಗಳನ್ನು, ರೌಡಿಗಳನ್ನು, ರಾಜಕಾರಣಿಗಳನ್ನು ಎದುರು ಹಾಕಿಕೊಳ್ಳುತ್ತಾಳೆ. ಹೀಗೆ ಕಾದಾಡುವಾಗ ಕೆಲವೊಮ್ಮೆ ಅಪಮಾನಿತಳಾಗಿ, ಹತಾಶಳಾಗಿ ಒಂದು ಕ್ಷಣ ಮೌನವಾಗಿದ್ದು, ಮತ್ತೆ ರಣಚಂಡಿಯಂತೆ ಆರ್ಭಟಿಸುತ್ತಾಳೆ. ಇವಳನ್ನು ಜರಿಯುತ್ತಿದ್ದ ಜನರೇ ಕಾಲಾಂತರದಲ್ಲಿ ಬೆಂಬಲಕ್ಕೆ ನಿಂತು ಬೇಕೇ ಬೇಕು ನ್ಯಾಯ ಬೇಕು ಎಂದು ಮುಗಿಲು ಮುಟ್ಟುವಂತೆ ಘೋಷಣೆ ಹಾಕುತ್ತಾರೆ. ಅವಳ ನೇತೃತ್ವದಲ್ಲೇ ಬದಲಾವಣೆಗೆ ಮುನ್ನುಡಿ ಬರೆಯುತ್ತಾರೆ. ಆ ಮೇಲೆ ಹೆಣ್ಣಿನ ಯಶೋಗಾಥೆ ಎಂಬ ಪ್ರಶಂಸೆ, ಪುರಸ್ಕಾರ, ಸನ್ಮಾನಗಳೆಲ್ಲ ಆಗಿ ತೆರೆಯಲ್ಲಿ ಶುಭಂ ಎಂದು ಕಾಣುವಾಗ ಪ್ರೇಕ್ಷಕರು ಆ ಹೆಣ್ಣಿನ ಸಾಹಸದ ಪಾತ್ರದಲ್ಲೇ ಮುಳುಗಿರುತ್ತಾರೆ. ಆದರೂ, ಇಂಥ ಚಿತ್ರಗಳನ್ನು ನೋಡಿ ಬಂದ ಮೇಲೆ ಅದೆಲ್ಲ ಸಿನೆಮಾದಲ್ಲಿ ಮಾತ್ರ ಸಾಧ್ಯ ಬಿಡ್ರಿ. ರೀಲಿಗೂ, ರಿಯಲ್ ಲೈಫಿಗೂ ತುಂಬಾ ವ್ಯತ್ಯಾಸವಿದೆ ಎಂದು ಗೊಣಗಿ ದಿನದ ತಾಪತ್ರಯದಲ್ಲಿ ಮುಳುಗುತ್ತಾರೆ. ಮನುಷ್ಯನ ಪುಕ್ಕಲ ಸ್ವಭಾವವೇ ಹಾಗೇ. ಕಣ್ಣಾರೆ ಬದಲಾವಣೆಯ ಮಾದರಿಗಳನ್ನು ಕಂಡರೂ ಅದು ತನಗಲ್ಲ ಎಂದುಕೊಳ್ಳುತ್ತಾನೆ.

ಇರಲಿ ಬಿಡಿ; ಮೇಲೆ ವಿವರಿಸಿದ ಬಾಲಿವುಡ್ ದೃಶ್ಯಗಳು ನಿಜ ಜೀವನದಲ್ಲಿ ಕಾಣುವಂತಾದರೆ? ಸಮಾಜ ನಿಜಕ್ಕೂ ಥ್ರಿಲ್ ಆಗುತ್ತದೆ ಅಲ್ಲವೇ? ಹೀಗೆ ಹೋರಾಟವನ್ನೇ ಉಸಿರಾಗಿಸಿಕೊಂಡು ಕಾರ್ಮಿಕರು, ರೈತರು, ಶ್ರಮಿಕರು, ಬಡವರ್ಗದವರು, ವನವಾಸಿಗಳು, ಬುಡಕಟ್ಟು ವಾಸಿಗಳು, ಹೆಣ್ಣುಮಕ್ಕಳು ನೆಮ್ಮದಿಯ ಬಾಳು ಸಾಗಿಸಲು ಅನುವು ಮಾಡಿಕೊಟ್ಟಿರುವ ಈಕೆಯ ಹೆಸರು ಪರೋಮಿತಾ ಗೋಸ್ವಾಮಿ. ಹೇಳಿ ನಿಮ್ಮ ಸಮಸ್ಯೆ ಏನು? ನಿಮಗೆ ಎರಡು ನಿಮಿಷ ಕೊಡುತ್ತೇನೆ ಎಂದು ಮಂತ್ರಿಮಹಾಶಯರೊಬ್ಬರು ಹೇಳಿದಾಗ ನಿವ್ಯಾರೀ ಎರಡು ನಿಮಿಷ ಕೊಡಲು? ನಾನು ಹೋರಾಟಗಾರ್ತಿ; ಜನರ ಸಮಸ್ಯೆ ಆಲಿಸಲು ಸಮಯ ನೀಡುವುದು ನಿಮ್ಮ ಕರ್ತವ್ಯ ಎಂದು ಆವಾಜ್ ಹಾಕಿ ಮಂತ್ರಿಮಹಾಶಯನ ಬೆವರು ಇಳಿಸಿದ ಈ ಮಹಿಳೆ ಸುಧಾರಣೆಯ ಕ್ರಾಂತಿಯನ್ನೇ ಸಾಕಾರಗೊಳಿಸಿದ್ದಾರೆ. ಸುಶಿಕ್ಷಿತ ಹೆಣ್ಣುಮಕ್ಕಳ ಪಾಲಿಗೆ ಪರೋಮಿತಾ ಈಗ ಭಾರತದ ಅಂಗ್ ಸಾನ್ ಸೂ ಕಿ.

ಕಣ್ಣುಗಳ ತುಂಬಾ ಕನಸುಗಳನ್ನೇ ತುಂಬಿಕೊಂಡಿದ್ದ ಪಶ್ಚಿಮ ಬಂಗಾಳದ ಈ ಹುಡುಗಿ ದೂರದ ಮುಂಬೈಗೆ ಬಂದು ಎಂಎಸ್ಡಬ್ಲ್ಯೂನಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಾಳೆ. ಬಳಿಕ, ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಅಲ್ಲಿ-ಇಲ್ಲಿ ಸುತ್ತಾಡುತ್ತಾ ಬಂದು ತಲುಪಿದ್ದು ವಿದರ್ಭ ಪ್ರಾಂತ್ಯದ ಚಂದ್ರಪುರಗೆ. ವಿದರ್ಭ ಪ್ರಾಂತ್ಯಕ್ಕೆ ಅಂಟಿಕೊಂಡಿರುವ ಬಡತನ, ನಿರಕ್ಷರತೆ, ಮೂಢನಂಬಿಕೆ, ಮೂಲಸೌಕರ್ಯ ಕೊರತೆಯ ಶಾಪ ಚಂದ್ರಪುರ ಜಿಲ್ಲೆಗೆ ಬೆಂಬಿಡದೆ ಕಾಡುತ್ತಿದೆ. ಈ ಸ್ಥಿತಿ ನೋಡಿಯೇ ಇಲ್ಲಿ ಕೆಲಸ ಮಾಡಲು ತುಂಬಾ ಅವಕಾಶವಿದೆ ಎಂದು ನಿಶ್ಚಯಿಸಿದ ಕನಸು ಕಂಗಳಿನ ಪರೋಮಿತಾ ಮತ್ತೆ ಹಿಂತಿರುಗಿ ನೋಡಲಿಲ್ಲ. ಕಾಮರ್ಿಕರ ಶೋಷಣೆಯನ್ನು ತಪ್ಪಿಸಲು ಹಾಗೂ ಬುಡಕಟ್ಟು ಜನಾಂಗದವರಿಗೆ ಅವರ ಹಕ್ಕುಗಳನ್ನು ಕೊಡಿಸಲು ಶ್ರಮಿಕ ಎಲಗಾರ ಎಂಬ ಸಂಘಟನೆ ಹುಟ್ಟುಹಾಕಿ ಹೋರಾಟದ ಕಿಡಿ ಹೊತ್ತಿಸಿದರು.

ಈ ಕಿಡಿ ಜ್ವಾಲೆಯಾಗಿ ಪ್ರಜ್ವಲಿಸಿತು. ಉಳ್ಳವರ, ಅಧಿಕಾರಶಾಹಿಯ ಶೋಷಣೆಯಿಂದ ಬದುಕನ್ನೇ ಕಳೆದುಕೊಂಡಿದ್ದ ದಲಿತರು, ವನವಾಸಿಗಳು ಈ ಜ್ವಾಲೆಯಲ್ಲಿ ಬದುಕಿನ ಬೆಳಕು ಕಂಡರು. ಇಲ್ಲಿ ಶಿಕ್ಷಣದ ಕೊರತೆಯಿಂದ ಬಹುಸಂಖ್ಯಾತ ವನವಾಸಿಗಳು ತಮ್ಮ ಹಕ್ಕಿನಿಂದ ವಂಚಿತರಾಗಿದ್ದರು. ಅವರನ್ನೆಲ್ಲ ಶ್ರಮಿಕ ಎಲೆಗಾರ ನಡಿದ ಒಂದುಗೂಡಿಸಿ ನ್ಯಾಯಕೊಡಿಸಲು ಪರೋಮಿತಾ ನಡೆಸಿದ ಹೋರಾಟ ಒಂದೆರಡಲ್ಲ. ಜಡ್ಡುಗಟ್ಟಿದ ಅಧಿಕಾರಶಾಹಿ, ಆಡಳಿತಶಾಹಿ ಬೆಚ್ಚುಬಿದ್ದು ಮೈಕೊಡವಿಕೊಳ್ಳಬೇಕಾಯಿತು. ಬೇಡಿಕೆ ಈಡೇರಿಸುವವರೆಗೂ ಹೋರಾಟ ನಿಲ್ಲಿಸಿದ ಉದಾಹರಣೆಯೇ ಇಲ್ಲ. ಮೆರವಣಿಗೆ, ಮೋರ್ಚಾ, ಧರಣಿಯಲ್ಲದೆ ಅದೆಷ್ಟೋ ಬಾರಿ ಪರೋಮಿತಾ ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ. ರಾಜಕಾರಣಿಗಳ ಭ್ರಷ್ಟಾಚಾರಕ್ಕೆ ಇವರು ಅಡ್ಡಿಯಾದಾಗ ಪರೋಮಿತಾ ಇನ್ನಿಲ್ಲದ ಸಂಕಷ್ಟ ಎದುರಿಸಬೇಕಾಯಿತು. ಇವರ ಪಶ್ಚಿಮ ಬಂಗಾಳ ಹಿನ್ನೆಲೆ ನೋಡಿಕೊಂಡು. ಕೆಲ ರಾಜಕಾರಣಿಗಳು ಪರೋಮಿತಾಗೆ ನಕ್ಸಲ್ ಪಟ್ಟ ಕಟ್ಟಿ ಜೈಲಿಗೆ ನೂಕಿದರು. ನಮ್ಮನ್ನು ಎದುರು ಹಾಕಿಕೊಳ್ಳಲು ಸಾಧ್ಯವೇ? ಜೈಲು ಕಂಬಿ ಎಣಿಸಲಿ ಬಿಡಿ ಎಂದು ಭ್ರಷ್ಟರು ಕುಹಕ ನಗೆ ಬೀರುತ್ತಿರುವಾಗಲೇ ಒಂದೂವರೆ ವರ್ಷಗಳ ನ್ಯಾಯಾಂಗ ಹೋರಾಟದಲ್ಲಿ ಗೆಲುವು ಸಾಧಿಸಿ ದುರ್ಗಿಯಂತೆ ಮತ್ತೆ ರಣರಂಗಕ್ಕೆ ಇಳಿದರು. ಪರಿಣಾಮ, ಅದೇಷ್ಟೋ ಬಡರ ರೈತರ, ವನವಾಸಿಗಳ ಭೂಮಿ ವಾಪಾಸು ದೊರೆತು ಅವರು ಹೊಸ ಬದುಕು ಕಾಣುವಂತಾಯಿತು.

ಬರೀ ಹೋರಾಟಕ್ಕೆ ಸೀಮಿತವಾಗಿರದೆ ಮಹಿಳಾ ಸಶಕ್ತಿಕರಣ, ಕಾರ್ಮಿಕರ ಕಲ್ಯಾಣಕ್ಕಾಗಿ ಗೋಸ್ವಾಮಿ ಕಾರ್ಯೋನ್ಮುಖವಾದರು. ಒಂದು ದಶಕದ ಹಿಂದೆ ಒಬ್ಬಂಟಿಯಾಗಿ ಚಂದ್ರಪುರಕ್ಕೆ ಬಂದು ಸ್ಥಳೀಯ ಭಾಷೆ, ಸಂಸ್ಕೃತಿಯನ್ನು ಒಂದಿಷ್ಟು ತಿಳಿಯದ ಗೋಸ್ವಾಮಿ ಅವರ ಹಿಂದೆ ಈಗ ಪ್ರಚಂಡ ಜನಶಕ್ತಿಯೇ ಇದೆ. ಇವರ ಶ್ರಮಿಕ ಎಲಗಾರ ಸಂಘಟನೆಗೆ ಗಡಚಿರೋಲಿ ಹಾಗೂ ಚಂದ್ರಪುರ ಜಿಲ್ಲೆಗಳೆರಡರಲ್ಲೇ ಐವತ್ತು ಸಾವಿರ ಸದಸ್ಯರಿದ್ದಾರೆ. ಒಂದು ಸಾವಿರ ಕಾರ್ಯಕರ್ತರು ಪೂರ್ಣಾವಧಿಯಾಗಿ ಸಂಘಟನೆಗಾಗಿ ದುಡಿಯುತ್ತಿದ್ದಾರೆ. ಬಡಮಹಿಳೆಯರ ಆರ್ಥಿಕ ಸ್ವಾವಲಂಬನೆಗಾಗಿ ಹುಟ್ಟುಹಾಕಿದ ಪತ್ತಿನ ಸಂಸ್ಥೆ ಈಗ ವಾರ್ಷಿಕ ಒಂದು ಕೋಟಿ ರೂಪಾಯಿಯ ವಹಿವಾಟು ನಡೆಸುತ್ತಿದೆ!

ಉದ್ಯೋಗ ತರಬೇತಿ ಹಾಗೂ ಸಾಂಪ್ರದಾಯಿಕ ಕುಲಕಸುಬುಗಳ ಉತ್ತೇಜನಕ್ಕಾಗಿ ಶ್ರಮಿ ಜಲಗಾರ ವತಿಯಿಂದ ಚಿತೆಗಾವ್ನಲ್ಲಿ ಸ್ವಾಪಿಸಲಾಗಿರುವ ತರಬೇತಿ ಕೇಂದ್ರ ಸಾವಿರಾರು ಕೈಗಳಿಗೆ ಕೆಲಸ ನೀಡಿ ಬದುಕಿನ ದಾರಿ ತೋರಿಸಿದೆ. ರೈತರನ್ನು ಸಾಲದಿಂದ ಮುಕ್ತಗೊಳಿಸಲು ಹಾಗೂ ಕೃಷಿ ಚಟುವಟಿಕೆಗಳ ಖರ್ಚು ತಗ್ಗಿಸಲು ಅಗ್ಗದ ದರದಲ್ಲಿ ಗುಣಮಟ್ಟದ ಬೀಜ ಹಾಗೂ ರಸಗೊಬ್ಬರವನ್ನು ರೈತರಿಗೆ ವಿತರಿಸಲಾಗುತ್ತಿದೆ. ಗ್ರಾಮೀಣ ಮಕ್ಕಳಿಗೆ ವಿಜ್ಞಾನ ಶಿಕ್ಷಣ ನೀಡಲು ಸ್ಥಾಪಿಸಲಾಗಿರುವ ಬಾಲವಿಜ್ಞಾನ ಹಾಗೂ ಪರಿಸರ ಕೇಂದ್ರ ದುರ್ಬಲ ವರ್ಗದ ಮಕ್ಕಳಿಗೆ ಜ್ಞಾನಜ್ಯೋತಿಯಾಗಿ  ಪರಿಣಮಿಸಿದೆ.

ಇಷ್ಟೆಲ್ಲ ವ್ಯಾಪಕ ಕಾರ್ಯಚಟುವಟಿಕೆ ನಡೆಸುತ್ತಿರುವ ಗೋಸ್ವಾಮಿ ಸಿರಿವಂತ ಕುಟುಂಬದವರೇನಲ್ಲ. ತನ್ನ ಸಮಾಜಕಾರ್ಯದ ಆಶಯ ತಿಳಿಸಿ ಹತ್ತತ್ತು ರೂಪಾಯಿ ಒಟ್ಟುಗೂಡಿಸಿ ಈ ಪ್ರಕಲ್ಪಗಳನ್ನೆಲ್ಲ ಸಾಕಾರಗೊಳಿಸಿದ್ದಾರೆ. ಸಮಾಜಸೇವೆ, ಹೋರಾಟದ ಜತೆಗೆ ಜಾಗೃತಿ ಹುಟ್ಟುಹಾಕಲು ಲೇಖನಿಯ ಕೈಗೆತ್ತಿಕೊಂಡಿರುವ ಇವರು ಕಾರ್ಮಿಕರ ಕಲ್ಯಾಣದ ಬಗ್ಗೆ ಈವರೆಗೆ ಐದು ಪುಸ್ತಕಗಳನ್ನು ಬರೆದಿದ್ದಾರೆ. ಜೊತೆಗೆ ಇವರ ವೈಯಕ್ತಿಕ ಜೀವನವೂ ಸಂತೃಪ್ತಿಯಿಂದ ಕೂಡಿದೆ. ಪತಿ ಕಲ್ಯಾಣ್‍ಕುಮಾರ್, ಮಗಳು ರುಚಿತಾ ಇವರ ಈ ಎಲ್ಲ ಕಾರ್ಯಗಳಿಗೆ ಬೆಂಬಲವಾಗಿ ನಿಂತು ಪ್ರೋತ್ಸಾಹಿಸುತ್ತಿದ್ದಾರೆ. ಮುಂಬೈಯ ಕೇಶವ ಗೋರೆ ಸ್ಮಾರಕ ಟ್ರಸ್ಟ್ ಪ್ರತಿಷ್ಠಿತ ಬಾಬುರಾವ್ ಸಾಮಂತ್ ಸಂಘರ್ಷ ಪುರಸ್ಕಾರ ನೀಡಿ ಗೌರವಿಸಿದೆ.
​
ಇದೆಲ್ಲವೂ ಒಂದು ಹಂತದ ಸಂಘರ್ಷವಾದರೆ ಇತ್ತೀಚೆಗೆ ಮತ್ತೊಂದು ಮಹತ್ತರ ಸಂಘರ್ಷದಲ್ಲಿ ಪರೋಮಿತಾ ಗೆಲುವು ಸಾಧಿಸಿದ್ದಾರೆ. ಇದು ಅಂತಿಂಥ ಹೋರಾಟವಲ್ಲ. ಚಂದ್ರಪುರ ಜಿಲ್ಲೆಯಲ್ಲಿ ಮಹಿಳೆಯರ ನೆಮ್ಮದಿಯನ್ನೇ ಕಿತ್ತುಕೊಂಡಿದ್ದ ಸಾರಾಯಿ ವಿರುದ್ಧದ ಹೋರಾಟ ಇದು. ಇಡೀ ದಿನ ಕೂಲಿ ಮಾಡುವ ಗಂಡಸರು ಸಂಜೆಯಾಗುತ್ತಲೇ ಶರಾಬಿನ ಅಂಗಡಿ ಸೇರಿ ಮನೆಗೆ ತೂರಾಡುತ್ತಲೇ ಬರುತ್ತಿದ್ದರು. ಬಂದವರೇ, ಹೆಂಡತಿ ಮಕ್ಕಳನ್ನು ಹೊಡೆಯುವುದು, ಹಿಂಸಿಸುವುದು, ಹೆಣ್ಣುಮಕ್ಕಳನ್ನು ಬೀದಿಗೆ ತಳ್ಳುವುದು ಮಾಮುಲು ಆಗಿತ್ತು. ಮಹಿಳೆಯರು ಪರೋಮಿತಾ ಬಳಿ ಕಷ್ಟ ತೋಡಿಕೊಂಡು ಪರಿಹಾರಕ್ಕಾಗಿ ಅಂಗಲಾಚಿದರು. ಹೋರಾಟದ ರೂಪರೇಷೆ ಸಿದ್ಧವಾಯಿತು. ಆಗ ನಾಗಪುರದಲ್ಲಿ ರಾಜ್ಯ ವಿಧಾನಸಭೆಯ ಚಳಿಗಾಲ ಅಧಿವೇಶನ ನಡೆಯುತ್ತಿದ್ದ ಸಮಯ. ಸರ್ಕಾರವನ್ನೇ ಮಣಿಸಿ ಸಾರಾಯಿ ನಿಷೇಧಿಸಬೇಕೆಂಬ ದೃಢ ಸಂಕಲ್ಪಪಟ್ಟು ಐದು ಸಾವಿರ ಮಹಿಳೆಯರೊಡನೆ ಚಂದ್ರಪುರದಿಂದ ನಾಗಪುರಕ್ಕೆ (200ಕಿ.ಮೀ) ಕಾಲ್ನಡಿಗೆಯಲ್ಲೇ ಸಾಗಿದ ಗೋಸ್ವಾಮಿ ಮಂತ್ರಾಲಯ ಭವನ ವನ್ನು ಮುತ್ತಿಗೆ ಹಾಕಿದಾಗ ಬಡಹೆಣ್ಣುಮಕ್ಕಳ ಚೀತ್ಕಾರ ಕೇಳಿ ಸರ್ಕಾರವೇ ಅದುರಿತು. ಪರಿಣಾಮ, ಚಂದ್ರಪುರ ಸಾರಾಯಿ ಮುಕ್ತ ಜಿಲ್ಲೆಯಾಗಿ ಹೊರಹೊಮ್ಮಿದೆ. ದಾರುಬಂದಿ ಕಟ್ಟುನಿಟ್ಟಾಗಿ ಜಾರಿಗೆ ಬಂದು ಸಮಾಜದ ಸ್ವಾಸ್ಥ್ಯ ಹಳಿಗೆ ಬಂದಿದೆ. ಸಿನೆಮಾ ಅಲ್ಲ ನಿಜ ಜೀವನದಲ್ಲೂ ಇಷ್ಟೆಲ್ಲ ಬದಲಾವಣೆಗಳಿಗೆ ಮುನ್ನುಡಿ ಬರೆಯಬಹುದು ಎಂದು ತೋರಿಸಿರುವ ಭಾರತದ ಸೂಕಿ ಪರೋಮಿತಾ ಸಾಧನೆ ಶೋಷಣೆ ಅನುಭವಿಸುತ್ತಿರುವ ಅಸಂಖ್ಯಾ ಮಹಿಳೆಯರಿಗೆ ದಾರಿದೀಪವಾಗಲಿ.
 
ರವೀಂದ್ರ ಎಸ್ ದೇಶಮುಖ್
ಕೃಪೆ: ವಿಜಯವಾಣಿ, ಜುಲೈ 5 2012
0 Comments



Leave a Reply.


    20,000 HR PROFESSIONALS ARE CONNECTED THROUGH OUR NIRATHANKA HR GROUPS.
    YOU CAN ALSO JOIN AND PARTICIPATE IN OUR GROUP DISCUSSIONS.
    Join HR Online Groups

    Categories

    All
    ಇತರೆ
    ಎನ್‍ಜಿಓ
    ಪರಿಸರ
    ವ್ಯಕ್ತಿಚಿತ್ರಗಳು
    ಸಮಾಜಕಾರ್ಯ
    ಸಮುದಾಯ ಸಂಘಟನೆ
    ಸಂಪುಟ 1
    ಸಂಪುಟ 2
    ಸಂಪುಟ 3
    ಸಂಪುಟ 4
    ಸಂಪುಟ 5
    ಸಂಪುಟ 6
    ಸಂಪುಟ 7
    ಸಂಪುಟ 8
    ಸಂಪುಟ 9

    Social Work Foot Prints


    RSS Feed


Site
  • Home
  • About Us
  • Editor's Blog
  • Leader's Talk
  • Blog
  • Online Store
  • Videos
  • Join Our Online Groups
Vertical Divider
HR Online Groups
20,000 HR PROFESSIONALS ARE CONNECTED THROUGH OUR NIRATHANKA HR GROUPS.
Join

Vertical Divider
Contact us
080-23213710
+91-8073067542
Mail-nirutapublications@gmail.com
Our Other Websites
www.hrkancon.com 
www.niratanka.org  
www.mhrspl.com
www.nirutapublications.org
Receive email updates on the new books & offers
for the subjects of interest to you.
Copyright Niruta Publications 2021
Website Designing & Developed by: www.mhrspl.com