ಆರ್ಥಿಕವಾಗಿ, ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ಜಗಳೂರು ತಾಲ್ಲೂಕಿಗೆ ಹರಿಕಾರರಾಗಿ ಬಂದ ವಿದ್ಯಾರತ್ನ ಡಾ. ಟಿ. ತಿಪ್ಪೇಸ್ವಾಮಿಯವರು ಬಹುಮುಖಿ ವ್ಯಕ್ತ್ತಿತ್ವ, ಸುಸಂಸ್ಕೃತ ಕುಟುಂಬವೆಂದೇ ಹೆಸರು ಪಡೆದ ಮನೆತನದ ಗುರುಭಕ್ತಿ, ಜನಪ್ರೀತಿಗೆ ಹೆಸರಾದ ದಿವಂಗತ ಟಿ. ಕಲ್ಲಪ್ಪ ಮತ್ತು ದಿವಂಗತ ಟಿ. ಶಾರದಮ್ಮ ಇವರ ಪುಣ್ಯಗರ್ಭದಲ್ಲಿ ಶ್ರೀ ಟಿ. ತಿಪ್ಪೇಸ್ವಾಮಿಯವರು ದಿನಾಂಕ: 23-09-1938 ರಂದು ಜನಿಸುತ್ತಾರೆ. ಬೆಳೆಯುವ ಪೈರು ಮೊಳಕೆಯಲ್ಲಿ: ಈ ನಾಣ್ಣುಡಿಯಂತೆ ತಿಪ್ಪೇಸ್ವಾಮಿಯವರು ಬಾಲ್ಯದಿಂದಲೇ ವಿಶಿಷ್ಟವಾದ ಎಳೆಯದರಲ್ಲಿ ಒಡನಾಡಿಗಳೊಂದಿಗೆ ಕುಣಿದು ಕುಪ್ಪಳಿಸಬೇಕಿದ್ದ ಇವರ ಮನಸ್ಸು ಏನನ್ನೊ ಚಿಂತನ ಮಂಥನ ನಡೆಸಿತು. ಉನ್ನತ ಶಿಕ್ಷಣ ಪಡೆಯಬೇಕೆಂದು ಅದಮ್ಯ ಕನಸು ಹೊತ್ತ ತಿಪ್ಪೇಸ್ವಾಮಿಯವರಿಗೆ ಪ್ರೇರಣೆಯಾಗಿ ತಾಯಿ ಶಾರದಮ್ಮ ವಿದ್ಯೆಯ ಬೀಜ ಬಿತ್ತುತ್ತಾರೆ. ಹಲವು ಎಡರು ತೊಡರುಗಳನ್ನು ದಿಟ್ಟತನದಿಂದ ಎದುರಿಸಿ ತಿಪ್ಪೇಸ್ವಾಮಿಯವರು ಪದವಿ ಶಿಕ್ಷಣ ಮುಗಿಸಿ ಜಗಳೂರು ಸರ್ಕಾರಿ ಪ್ರೌಢಶಾಲೆ ಮತ್ತು ಸಿರಿಗೆರೆಯ ವಿವಿಧೋದ್ಧೇಶ ಪ್ರೌಢಶಾಲೆಯಲ್ಲಿ ಕೆಲ ಕಾಲ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿ ವಿದ್ಯಾರ್ಥಿಗಳ ಮೆಚ್ಚಿನ ಶಿಕ್ಷಕರಾಗುತ್ತಾರೆ. ಉನ್ನತ ಗುರಿಯ ಮೊದಲ ಹೆಜ್ಜೆ : ಟಿ.ಟಿ. ಟ್ಯುಟೋರಿಯಲ್ ಶಿಕ್ಷಕ ವೃತ್ತಿ ತಿಪ್ಪೇಸ್ವಾಮಿಯವರಿಗೆ ತೃಪ್ತಿ ತಂದುಕೊಟ್ಟರೂ, ಅವರ ಒಳಗಿನ ಅತೃಪ್ತಿಯು ಹೊಗೆಯಾಡುತ್ತಲೇ ಇದ್ದ ಈ ಬೇಗುದಿ ಹೆಚ್ಚಾದಂತೆ ಇವರ ಮನಸ್ಸು ಚಡಪಡಿಸ ತೊಡಗಿತು. ಮುಂದೇನು? ಎಂಬ ಭವಿಷ್ಯದ ಪ್ರಶ್ನೆ ದಿನೇ ದಿನೇ ಹೆಮ್ಮರವಾಗಿ ಬೆಳೆದಂತೆ ಮಾಗಿದ ಮನಸ್ಸಿಗೆ ಮುಂದಿನ ಹೆಗ್ಗುರಿಯ ಮೊದಲ ಸೋಪಾನ ಗೋಚರಿಸಿತು. ಇದರ ಫಲಶೃತಿಯಾಗಿ ತಿಪ್ಪೇಸ್ವಾಮಿಯವರು ಚಿತ್ರದುರ್ಗದಲ್ಲಿ ಟ್ಯಾಲೆಂಟೆಡ್ ಕೋಚಿಂಗ್ ಟ್ಯುಟೂರಿಯಲ್ ಸ್ಥಾಪಿಸುತ್ತಾರೆ. ಕಬ್ಬಿಣದ ಕಡಲೆಯೆನಿಸಿದ ಇಂಗ್ಲಿಷ್ ಭಾಷೆಯನ್ನು ಅತ್ಯಂತ ಸರಳವಾಗಿ ವಿದ್ಯಾರ್ಥಿಗಳ ಮನಸ್ಸಿಗೆ ಮುಟ್ಟಿಸುವಲ್ಲಿ ಯಶಸ್ವಿಯಾಗುತ್ತಾರೆ. ಇವರು ಸಾವಿರಾರು ವಿದ್ಯಾರ್ಥಿಗಳ ಮನಸ್ಸಿನಲ್ಲಿ ಟಿ.ಟಿ. ಸರ್ ಎಂದೇ ಇಂದಿಗೂ ಅಚ್ಚಳಿಯದೇ ಉಳಿದಿದ್ದಾರೆ. ಇವತ್ತಿಗೂ ಅವರ ಶಿಷ್ಯಕೋಟಿ ತಿಪ್ಪೇಸ್ವಾಮಿಯವರನ್ನು ಅತ್ಯಂತ ಪ್ರೀತಿಯಿಂದ ಟಿ.ಟಿ. ಟ್ಯುಟೋರಿಯಲ್ ನೆನಪಿನಲ್ಲೇ ಗುರುತಿಸುತ್ತಾರೆ. ಜಗಳೂರಿನಲ್ಲಿ ಅಮರ ಭಾರತಿ ವಿದ್ಯಾ ಕೇಂದ್ರ ಸ್ಥಾಪನೆ: ಸಾಧಕನಿಗೆ ಸಾಧನೆಯ ಒಂದೊಂದು ಮೆಟ್ಟಿಲು ಏರಿದಂತೆ ಇನ್ನೂ ಎತ್ತರಕ್ಕೇರುವ ಮಹತ್ತರವಾದುದನ್ನು ಸಾಧಿಸಬೇಕೆನ್ನುವ ಹೆಬ್ಬಯಕೆ ನಿರಂತರವಾಗಿರುತ್ತದೆ. ಈ ಹೆಬ್ಬಯಕೆಯ ತಿಪ್ಪೇಸ್ವಾಮಿಯವರನ್ನು ಹುಟ್ಟೂರು ಜಗಳೂರು ಕೈ ಬೀಸಿ ಕರೆಯುತ್ತದೆ. ಅಂದಿನ ದಿನಮಾನಗಳಲ್ಲಿ ಒಂದು ಶಿಕ್ಷಣ ಸಂಸ್ಥೆಯನ್ನು ಕಟ್ಟುವುದು ಬೆಳೆಸುವುದು ಸುಲಭದ ಮಾತಲ್ಲ. ಇದನ್ನು ಸವಾಲಾಗಿ ಸ್ವೀಕರಿಸಿದ ತಿಪ್ಪೇಸ್ವಾಮಿಯವರು 1973 ರಲ್ಲಿ ಅಮರ ಭಾರತಿ ವಿದ್ಯಾಕೇಂದ್ರ ಸಂಸ್ಥೆಯನ್ನು ಸ್ಥಾಪಿಸಿದರು. ಹೀಗೆ ಸ್ಥಾಪನೆಗೊಂಡ ಅಮರ ಭಾರತಿ ವಿದ್ಯಾ ಸಂಸ್ಥೆಯ ಪುಣ್ಯಗರ್ಭದಿಂದ ಹೊರಬಂದ ಮೊದಲ ಶಿಶುವೇ ನಾಲಂದ ಪದವಿ ಪೂರ್ವ ಮಹಾವಿದ್ಯಾಲಯ ಈ ಸಂಸ್ಥೆಗೆ 1973 ರಿಂದ 1994ರವರೆಗೆ ತಿಪ್ಪೇಸ್ವಾಮಿಯವರು ಸಂಸ್ಥಾಪಕ ಗೌರವ ಕಾರ್ಯದರ್ಶಿಯಾಗಿ ದುಡಿದ ಇವರು ಕೆಲಕಾಲ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿ ಕಾಲೇಜಿನ ಪುರೋಭಿವೃದ್ಧಿಗೆ ಅಡಿಗಲ್ಲಾಗುತ್ತಾರೆ. ತಿಪ್ಪೇಸ್ವಾಮಿಯವರ ಸಮರ್ಥ ಮಾರ್ಗದರ್ಶನದಲ್ಲಿ ಅಮರ ಭಾರತಿ ವಿದ್ಯಾ ಸಂಸ್ಥೆ ಅಮರವಾಗಿ ಬೆಳೆದು ಹೆಮ್ಮರವಾಗಿ ನಿಂತಿದೆ. ತನ್ನೊಡಲಲ್ಲಿ ನೂರಾರು ಆರೋಗ್ಯ ಪೂರ್ಣ ರೆಂಬೆಕೊಂಬೆಗಳನ್ನು ಹೊಂದಿ ನಾಡಿನ ಗಮನ ಸೆಳೆದಿದೆ. ತಿಪ್ಪೇಸ್ವಾಮಿಯವರು ಸಂಸ್ಥೆಯ ಅಡಿಯಲ್ಲಿ ಸ್ಥಾಪಿಸಿದ ವಿವಿಧ ಅಂಗ ಸಂಸ್ಥೆಗಳು: ಸ್ಥಳೀಯರ ಅಸಹಕಾರ, ಆರ್ಥಿಕ ಅಡಚಣೆಗಳ ಮಧ್ಯೆ ತಿಪ್ಪೇಸ್ವಾಮಿಯವರು ಪ್ರಾರಂಭಿಸಿದ ಅಮರ ಭಾರತಿ ವಿದ್ಯಾ ಕೇಂದ್ರ ಆರಂಭದಲ್ಲಿ ಹೊಂದಿದ್ದ ಕೇವಲ ಬೆರಳೆಣಿಕೆಯ ವಿದ್ಯಾರ್ಥಿಗಳನ್ನು ಮಾತ್ರ. ಈ ಹೊತ್ತು ನಾಲ್ಕು ದಶಕಗಳ ಅಂಚಿಗೆ ಬಂದು ನಿಂತ ಈ ಸಂಸ್ಥೆ ಹತ್ತು ಹಲವು ಅಂಗ ಸಂಸ್ಥೆಗಳೊಂದಿಗೆ ಹೆಮ್ಮರವಾಗಿ ಬೆಳೆದು ನಿಂತಿದೆ. ಈ ಸಂಸ್ಥೆಯ ಈಗಿನ ವಿದ್ಯಾರ್ಥಿಗಳ ಸಂಖ್ಯೆ ಬರೋಬ್ಬರಿ ಮೂರು ಸಾವಿರ ಗಡಿಯನ್ನು ದಾಟಿರುವುದು ಹೆಗ್ಗಳಿಕೆಯ ಸಂಗತಿ. ಇದಕ್ಕೆ ಮುಖ್ಯ ಕಾರಣ ತಿಪ್ಪೇಸ್ವಾಮಿಯವರ ಉನ್ನತ ಆದರ್ಶಗಳನ್ನು ರಾಷ್ಟ್ರೀಯ ಮನೋಭಾವನೆಗಳು ಎಲ್ಲಕ್ಕಿಂತ ಮುಖ್ಯವಾಗಿ ಅವರು ಹೆಕ್ಕಿ ತಂದ ಅತ್ಯಂತ ನುರಿತ, ಸೇವೆ ಮತ್ತು ಅರ್ಪಣಾ ಮನೋಭಾವನೆಯ ಸಿಬ್ಬಂದಿ ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡುತ್ತಿರುವುದೆ ಆಗಿದೆ. ಹಿರಿಯ ತರಳಬಾಳು ಜಗದ್ಗುರು ಲಿಂಗೈಕ್ಯ ಶ್ರೀ ಶ್ರೀ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ ಗಾರಡಿಯಲ್ಲಿ ಪಳಗಿದ ತಿಪ್ಪೇಸ್ವಾಮಿಯವರು ಅವರ ಹಾದಿಯಲ್ಲಿ ನಡೆದು ಸಮಾಜಮುಖಿಯಾಗಿ ಬೆಳೆಯುತ್ತಾರೆ. ವಾಗ್ದಾರಿಯಲ್ಲಿ ಅವು ಮುಕುಟಪ್ರಾಯವಾಗಿ ಕಂಗೊಳಿಸುತ್ತವೆ. ಈ ದೇಶದ ಪರಂಪರೆ ಸಂಸ್ಕೃತಿಯ ಬಗ್ಗೆ ಅಪಾರ ಕಾಳಜಿಯುನ್ನುಳ್ಳ ಇವರು ಕನ್ನಡ ನಾಡು, ನುಡಿಯ ಬಗ್ಗೆ ಗೌರವಾದರಗಳನ್ನು ಹೊಂದಿ ಸಾಹಿತ್ಯದಲ್ಲಿ ಆಳವಾದ ಪಾಂಡಿತ್ಯವುಳ್ಳವರಾಗಿದ್ದಾರೆ. ಅವರ ರಾಷ್ಟ್ರಪ್ರೇಮ, ಸಂಸ್ಕೃತಿ, ರೀತಿ, ಬಸವಾದಿ ಶರಣರ ಬಗ್ಗೆ ಇರುವ ಹೆಮ್ಮೆ-ಗೌರವಗಳು ಅಮರ ಭಾರತಿಯ ಅಂಗ ಸಂಸ್ಥೆಗಳ ಹೆಸರುಗಳಲ್ಲಿ ಸ್ಥಿರಸ್ಥಾಯಿಯಾಗಿ ರಾರಾಜಿಸುತ್ತಿವೆ. ಇವರು ಸ್ಥಾಪಿಸಿದ ಸಿದ್ದಾರ್ಥ ಶಿಕ್ಷಣ ಮಹಾವಿದ್ಯಾಲಯ, ಬಸವ ಭಾರತಿ ಪ್ರಥಮ ದರ್ಜೆ ಕಾಲೇಜು, ನಾಲಂದ ಶಿಕ್ಷಕರ ತರಬೇತಿ ಕಾಲೇಜು, ನಾಲಂದ ಪದವಿ ಪೂರ್ವ ಕಾಲೇಜು, ದಿವ್ಯಭಾರತಿ ಪ್ರೌಢಶಾಲೆ, ಬಾಲಭಾರತಿ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ನಮ್ಮ ಪರಂಪರೆಯ ಪ್ರತೀಕಗಳಾಗಿ ಅರ್ಥಪೂರ್ಣ ಶಿಕ್ಷಣ ನೀಡುತ್ತಿವೆ. ನಾಲಂದ ಕಲಾ ಭಾರತಿ ಸ್ಥಾಪನೆ: ನಾಲ್ಕು ಗೋಡೆಗಳ ಮಧ್ಯೆ ಕಲಿಯುವುದೇ ನಿಜವಾದ ಶಿಕ್ಷಣವಲ್ಲ ಎಂಬ ಸತ್ಯವನ್ನು ಅರಿತ ತಿಪ್ಪೇಸ್ವಾಮಿಯವರು ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ನಿಜವಾದ ಶೈಕ್ಷಣಿಕ ಪರಿಸರ ನಿರ್ಮಾಣ ಮಾಡುವ ನಿಟ್ಟಿನಲ್ಲಿ 1983ರಲ್ಲಿ ನಾಲಂದ ಕಲಾಭಾರತಿ ಎಂಬ ಹವ್ಯಾಸಿ ಕಲಾ ಸಂಘ ಸ್ಥಾಪಿಸುತ್ತಾರೆ. ಮೊದಲಿನಿಂದಲೂ ನೀ.ನಾ.ಸಂ. ಸಂಸ್ಥೆಯ ಸಂಪರ್ಕಹೊಂದಿ ಪ್ರತಿವರ್ಷ ನೀ.ನಾ.ಸಂ. ತಿರುಗಾಟ ನಾಟಕಗಳ ಪ್ರದರ್ಶನವನ್ನು ತಮ್ಮ ಸಂಸ್ಥೆಯ ಸಹಯೋಗದಲ್ಲಿ ಏರ್ಪಡಿಸುವ ಮೂಲಕ ರಂಗಭೂಮಿಯ ಹೊಸ ಪರಿಕಲ್ಪನೆಯನ್ನು ಇಲ್ಲಿನ ಜನರಲ್ಲಿ ಮೂಡಿಸಿ ಅದರ ಸದಭಿರುಚಿ ಮೂಡಿಸಿದ ಮೊದಲಿಗರಾಗುತ್ತಾರೆ. ಮುಂದೆ ನಾಲಂದ ಕಲಾ ಭಾರತಿಯ ಸಂಸ್ಥೆಗೆ ಇದೇ ಪ್ರೇರಣೆಯಾಗುತ್ತದೆ. ತಮ್ಮ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳ ಮೂಲಕ ನಾಲ್ಕು ರಂಗ ತರಬೇತಿ ಶಿಬಿರಗಳನ್ನು ಆಯೋಜಿಸಿ ಅಶೋಕ ಬಾದರದಿನ್ನಿ, ಸೊಲಬ್ಬಕನವರ್, ಚಿದಾನಂದ್, ವೆಂಕಟೇಶ ಮೂರ್ತಿ, ಶೈಲಶ್ರೀ ಮೊದಲಾದ ಹೆಸರಾಂತ ರಂಗ ಕರ್ಮಿಗಳ ಸಮರ್ಥ ನಿರ್ದೇಶನದಲ್ಲಿ ಜೋಕುಮಾರಸ್ವಾಮಿ, ಶರಣ ಸತಿ-ಲಿಂಗ ಪತಿ, ಮೃಚ್ಛಕಟಿಕ, ಸಂಜೀವಿನಿ, ಸಾಂಬಶಿವ ಪ್ರಹಸನ ಮೊದಲಾದ ಇವರ ಕಲಾ ಸಂಘವು ಹಲವು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರಶಸ್ತಿಗಳಿಸಿ ನಾಡಿನ ಗಮನ ಸೆಳೆದಿದೆ. ಜೋಕುಮಾರಸ್ವಾಮಿ ಮತ್ತು ಶರಣಸತಿ ನಾಟಕಗಳು 50 ಕ್ಕೂ ಹೆಚ್ಚು ಪ್ರದರ್ಶನ ಕಂಡಿರುವುದು ಇವರ ಕಲಾ ಸಂಘದ ಹೆಗ್ಗಳಿಕೆ. ಸಾಹಿತ್ಯಿಕ ವೇದಿಕೆಗಳ ಸ್ಥಾಪನೆ: ಸಾಂಸ್ಕೃತಿಕ ವೇದಿಕೆಯೊಂದಿಗೆ ತಿಪ್ಪೇಸ್ವಾಮಿಯವರು ತಮ್ಮ ಸಂಸ್ಥೆಯಡಿಯಲ್ಲಿ ಹಲವು ಸಾಹಿತ್ಯಿಕ ವೇದಿಕೆಗಳನ್ನು ಸ್ಥಾಪಿಸುತ್ತಾರೆ. ಧರ್ಮ, ಸಂಸ್ಕೃತಿ, ಪರಂಪರೆ, ಸಾಹಿತ್ಯ ಈ ದೇಶಕಂಡ ಸಾಧಕರು ಮತ್ತು ಸಿದ್ದಪುರುಷರ ಬಗ್ಗೆ ಅಪಾರ ಕಾಳಜಿಯುಳ್ಳ ಶ್ರೀಯುತರು ಈ ಎಲ್ಲಾ ಸಂಗತಿಗಳು ವಿದ್ಯಾರ್ಥಿಗಳ ಮನದಾಳಕ್ಕೆ ಮುಟ್ಟಿದಾಗಲೇ ಶಿಕ್ಷಣ ಪರಿಪೂರ್ಣ ಎಂದು ಮನಗಂಡು ಕನ್ನಡ ಸಾಹಿತ್ಯ ಭಾರತಿ, ಭಾರತ ಪ್ರದರ್ಶನ ವೇದಿಕೆ, ತರುಣ ಭಾರತಿ, ಜಾಗರಣಾ ವೇಧಿಕೆಗಳನ್ನು ಸಂಸ್ಥೆಯಲ್ಲಿ ಸ್ಥಾಪಿಸುತ್ತಾರೆ. ಇವರ ಮಾರ್ಗದರ್ಶನದಲ್ಲಿ ಕನ್ನಡ ಸಾಹಿತ್ಯ ಭಾರತಿ ಇದೇ ಶೈಕ್ಷಣಿಕ ವರ್ಷ ನಿರಂತರ ಸಾಹಿತ್ಯ ಚಟುವಟಿಕೆಗಳನ್ನು ಆಯೋಜಿಸುವುದರೊಂದಿಗೆ ಕಳೆದ 20 ವರ್ಷಗಳಿಂದ ನಿರಂತರವಾಗಿ ಶಾಲಾ ಅಂಗಳದಲ್ಲಿ ಸಾಹಿತ್ಯೋತ್ಸವ ಎಂಬ ವಿನೂತನ ಕಾರ್ಯಕ್ರಮವನ್ನು ತಾಲೂಕಿನಾದ್ಯಂತ ಎಲ್ಲಾ ಶಾಲಾ ಕಾಲೇಜುಗಳಲ್ಲಿ ನವೆಂಬರ್ ತಿಂಗಳ ಕನ್ನಡ ರಾಜ್ಯೋತ್ಸವದ ಅಂಗವಾಗಿ ಏರ್ಪಡಿಸುತ್ತಾ ಬಂದಿದ್ದು ಇದು ಮಾದರಿ ಕಾರ್ಯಕ್ರಮವಾಗಿ ಇಂದು ಇಡೀ ದಾವಣಗೆರೆ ಜಿಲ್ಲೆಗೆ ವಿಸ್ತಾರಗೊಂಡಿದೆ. ವಿಜ್ಞಾನ, ಸಾಹಿತ್ಯ, ಧರ್ಮ ಮುಂತಾದ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಯ ವಿಷಯಗಳನ್ನು ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ಉಪನ್ಯಾಸ ಮಾಡಿಸುವ ಕಾರ್ಯಕ್ರಮಗಳು ಭಾರತ ಪ್ರದರ್ಶನ ಕಾರ್ಯಕ್ರಮದಲ್ಲಿ ನಡೆಯುತ್ತವೆ. ಇನ್ನು ತರುಣ ಭಾರತಿ ಹೆಸರೇ ಸೂಚಿಸುವಂತೆ ಯುವ ಪೀಳಿಗೆಯನ್ನು ಮುಖ್ಯವಾಗಿಟ್ಟುಕೊಂಡು ನಿರ್ದಿಷ್ಟ ಪಠ್ಯಕ್ರಮದಡಿಯಲ್ಲಿ ಮೌಲಿಕ ವಿಚಾರಗಳನ್ನು ಬಿತ್ತುವ ಕೆಲಸವನ್ನು ತಿಪ್ಪೇಸ್ವಾಮಿಯವರ ಮಾರ್ಗದರ್ಶನದಲ್ಲಿ ಅರ್ಥಪೂರ್ಣವಾಗಿ ಪಡೆಯುತ್ತದೆ. ಶ್ರೀ ಯೋಗಿ ಅಚ್ಯುತಾಕೇಂದ್ರ : ಋಷ್ಯ ಮುಖಾಶ್ರಮ ಯೋಗ, ಅಧ್ಯಾತ್ಮ ಇಂದಿನ ಶಿಕ್ಷಣಕ್ಕೆ ಅತ್ಯವಶ್ಯಕ ಎಂದು ತಿಪ್ಪೇಸ್ವಾಮಿಯವರು ಮನಗಾಣುತ್ತಾರೆ. ನಮ್ಮ ಪಾರಂಪರಿಕ ಯೋಗ ವಿದ್ಯೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಶಿಷ್ಯ ಕೋಟಿಗೆ ಕಲಿಸಿದ ಹಂಪಿ ಋಷ್ಯ ಮುಖಾಶ್ರಮದ ಯೋಗ ಗುರು ಶ್ರೀ ಯೋಗಿ ಅಚ್ಯುತರ ಶಿಷ್ಯರಾದ ತಿಪ್ಪೇಸ್ವಾಮಿಯವರು ಅತ್ಯಂತ ಶ್ರದ್ಧಾ ಭಕ್ತಿಯಿಂದ ಯೋಗ ವಿದ್ಯೆಯನ್ನು ಪಾಲಿಸಿಕೊಂಡು ಬರುತ್ತಾರೆ. ಇಂಥಹ ಒಂದು ಪರಮ ವಿದ್ಯೆ ಈ ಭಾಗದ ಜನತೆಗೆ ಯುವ ಪೀಳಿಗೆಗೆ ಅತ್ಯವಶ್ಯಕವೆಂದು ಮನಗಂಡು ಜಗಳೂರಿನಲ್ಲಿಯೇ ಒಂದು ವಿಸ್ತಾರವಾದ ನಿವೇಶನವನ್ನು ತಾವೇ ನೀಡಿ ಅಚ್ಯುತಾಶ್ರಮ ಶಾಖಾ ಕೇಂದ್ರವನ್ನು ಸ್ಥಾಪಿಸುತ್ತಾರೆ. ಆಶ್ರಮದ ಸಾಧಕರು ನಿತ್ಯಯೋಗ ಸಾಧನೆಯಲ್ಲಿ ತೊಡಗಿ ತಿಪ್ಪೇಸ್ವಾಮಿಯವರ ಕನಸಿನ ಪರಿಶ್ರಮಕ್ಕೆ ನೀರೆರೆಯುತ್ತಿದ್ದಾರೆ ಎಂದು ಈ ಸಾಧಕರ ಸಂಖ್ಯೆ ಹಲವು ನೂರರ ಗಡಿಯನ್ನು ದಾಟಿದೆ. ಹಿರಿಯ ವಿದ್ಯಾರ್ಥಿ ಸಂಘ: ಸಂಸ್ಥೆಯಡಿಯಲ್ಲಿ ಕಲಿತ ಅಸಂಖ್ಯಾತ ವಿದ್ಯಾರ್ಥಿಗಳು ನಾಡಿನ ಮೂಲೆ ಮೂಲೆಗಳಲ್ಲಿ ದೇಶ ವಿದೇಶಗಳಲ್ಲಿ ನೆಲೆಸಿ ತಿಪ್ಪೇಸ್ವಾಮಿಯವರ ಹೆಸರಿಗೆ ಉಸಿರಾಗಿದ್ದಾರೆ. ಈ ಉಸಿರುಗಳು ತಮ್ಮ ಸಂಸ್ಥೆಯು ಜೀವನಾಡಿಯಾಗಿರಲಿ ಎಂದು ಬಯಸಿ ತಿಪ್ಪೇಸ್ವಾಮಿಯವರು ಹಿರಿಯ ವಿದ್ಯಾರ್ಥಿ ಸಂಘ ಸ್ಥಾಪಿಸುತ್ತಾರೆ. ಈ ಹಿರಿಯ ವಿದ್ಯಾರ್ಥಿಗಳ ಅಭಿಮಾನ ತುಂಬಾ ದೊಡ್ಡದು. ತಮ್ಮ ನೆಚ್ಚಿನ ಗುರುವಿಗೆ 70 ವರ್ಷ ಸಂದ ನೆನಪಿಗೆ ಹಿರಿಯ ವಿದ್ಯಾರ್ಥಿಗಳು ಗುರುವಂದನಾ ಸಮಾರಂಭ ಏರ್ಪಡಿಸಿ ಸಾರ್ಥಕ ಎಂಬ ನಾಲ್ಕು ನೂರು ಪುಟಗಳ ಅಭಿನಂದನಾ ಗ್ರಂಥವನ್ನು ಹೊರತಂದು ಗುರು ಮತ್ತು ಸಂಸ್ಥೆಯೊಡೆಗಿನ ತಮ್ಮ ನೆನಪನ್ನು ಸ್ಥಿರ ಸ್ಥಾಯಿಗೊಳಿಸಿದ್ದಾರೆ. ಈ ಎಲ್ಲಾ ಅಂಗ ಸಂಸ್ಥೆಗಳ ಜೊತೆಗೆ ತಿಪ್ಪೇಸ್ವಾಮಿಯವರು ತಮ್ಮ ಸಂಸ್ಥೆಯ ಅಡಿಯಲ್ಲಿ ಎನ್.ಎಸ್.ಎಸ್. ಘಟಕ, ಎಸ್.ಸಿ.ಸಿ. ಘಟಕ, ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರ ವಸತಿ ನಿಲಯಗಳು, ರೆಡ್ಕ್ರಾಸ್ ಸಂಸ್ಥೆ, ಮಾನವ ಹಕ್ಕುಗಳ ಸಂಘ, ನಾಲಂದ ಸಹಕಾರ ಸಂಘ, ನಾಲಂದ ಹಸಿರು ಪಡೆ, ಕೌಟಿಲ್ಯ ಸ್ಪೋಕನ್ ಇಂಗ್ಲೀಷ್ ತರಬೇತಿ, ಕಂಪ್ಯೂಟರ್ ತರಬೇತಿ ಕೇಂದ್ರಗಳನ್ನು ಸ್ಥಾಪಿಸಿ, ಅಮರ ಭಾರತಿಯನ್ನು ಒಂದು ಪರಿಪೂರ್ಣ ಸಂಸ್ಥೆಯನ್ನಾಗಿಸಿದ್ದಾರೆ. ವಿವಿಧ ಸಾಮಾಜಿಕ ಸಂಸ್ಥೆಗಳಲ್ಲಿ ಸೇವೆ:
ತಿಪ್ಪೇಸ್ವಾಮಿಯವರು ಕೇವಲ ಶಿಕ್ಷಣ ಸಂಸ್ಥೆಗಳಷ್ಟನ್ನೇ ತಮ್ಮ ಕಾರ್ಯಕ್ಷೇತ್ರವನ್ನು ಸೀಮಿತಗೊಳಿಸಿಕೊಳ್ಳದೇ ಹತ್ತು ಹಲವು ಸಾಮಾಜಿಕ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಅವುಗಳಲ್ಲಿ ರೋಟರಿ ಕ್ಲಬ್, ಜಗಳೂರು. ಬಸವ ಸಮಿತಿ, ಅನುದಾನ ರಹಿತ ಶಾಲಾ ಕಾಲೇಜುಗಳ ಒಕ್ಕೂಟ, ಬಸವ ಗ್ರಾಮೀಣ ವಿಕಾಸ ವೇದಿಕೆ, ಭಾರತ್ ಸೇವಾದಳ, ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಈ ಎಲ್ಲಾ ಸಂಘ ಸಂಸ್ಥೆಗಳ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿ ಆಯೋಜಿಸಿದ ಹತ್ತು ಹಲವು ಕಾರ್ಯಕ್ರಮಗಳು ಇಂದಿಗೂ ಮಾದರಿಯಾಗಿ ಉಳಿದಿವೆ. ಈ ನಾಡು ಕಂಡ ಅತ್ಯಂತ ಅರ್ಥಪೂರ್ಣ ಸರ್ವಧರ್ಮ ಸಮ್ಮೇಳನ ತರಳು-ಬಾಳು ಹುಣ್ಣಿಮೆ ಇಂತಹ ಒಂದು ಹುಣ್ಣಿಮೆ ಮಹೋತ್ಸವಕ್ಕೆ ಮೊದಲ ಚಾಲನೆ ಕೊಟ್ಟಿರುವುದೇ ಜಗಳೂರು ಎಂಬುದು ಹೆಮ್ಮೆಯ ಸಂಗತಿ. 1992-93 ನೇ ಅವಧಿಯಲ್ಲಿ ಎರಡನೇ ಭಾರಿ ಜಗಳೂರಿನಲ್ಲಿ ನಡೆದ ತರಳು-ಬಾಳು ಹುಣ್ಣಿಮೆ ಮಹೋತ್ಸವಕ್ಕೆ ಕಾರ್ಯನಿರ್ವಾಹಕ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸಿ ಈ ಮಹತ್ವರ ಕಾರ್ಯಕ್ರಮವನ್ನು ಯಶಸ್ವಿಯಾಗಿದ್ದು ಜನಮಾನಸಲ್ಲಿ ಹಸಿರಾಗಿ ಉಳಿದಿದೆ. ಸಾಹಿತ್ಯ ಕ್ಷೇತ್ರದಲ್ಲಿ ನೀಡಿದ ಸೇವೆ ಮತ್ತು ಸಂದ ಗೌರವ: ಅಪಾರ ಸಾಹಿತ್ಯ ಪ್ರೇಮಿಯಾದ ತಿಪ್ಪೇಸ್ವಾಮಿಯವರು ಉತ್ತಮ ಬರಹಗಾರರೂ ಮತ್ತು ವಾಗ್ಮಿಗಳು ಹೌದು. ಸಾಹಿತ್ಯ ಕ್ಷೇತ್ರದ ಕಾರ್ಯಕ್ರಮಗಳನ್ನು ಆಯೋಜಿಸುವುದರಲ್ಲಿ ಇವರದು ಮೊದಲ ಹೆಜ್ಜೆ. ಅಖಿಲ ಭಾತರ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾಗಿ, ಗೌರವಾಧ್ಯಕ್ಷರಾಗಿ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಬಯಲು ಸಾಹಿತ್ಯ ವೇದಿಕೆಯ ಅಧ್ಯಕ್ಷರು ಮತ್ತು ಪ್ರಧಾನ ಪೋಷಕರಾಗಿ, ತಾಲ್ಲೂಕು ಜಾನಪದ ಅಕಾಡೆಮಿಯ ಅದ್ಯಕ್ಷರಾಗಿ ಕಾರ್ಯ ನಿರ್ವಹಿಸಿ ಉತ್ತಮ ಸಾಹಿತ್ಯಿಕ ಕೆಲಸಗಳನ್ನು ನಡೆಸಿಕೊಂಡು ಬಂದಿರುತ್ತಾರೆ. ತಿಪ್ಪೇಸ್ವಾಮಿಯವರು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಮೂರು ದಿನಗಳ ಕಾಲ ಜನದನಿ ಕಾರ್ಯಕ್ರಮ ಏರ್ಪಡಿಸಿ ಅರ್ಥಪೂರ್ಣ ಉಪನ್ಯಾಸ ಮಾಲೆಗಳನ್ನು ಏರ್ಪಡಿಸಿದ್ದು, ಅವು ಜನದನಿ ಎಂಬ ಗ್ರಂಥ ರೂಪದಲ್ಲಿ ಹೊರಬಂದು, ಇಂದಿಗೂ ಒಂದು ಮೈಲಿಗಲ್ಲಾಗಿ ಉಳಿದಿವೆ. ಪಲ್ಲಾಗಟ್ಟೆಯಲ್ಲಿ ನಡೆದ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿ ಸಾಹಿತ್ಯ ಪ್ರೇಮಿಗಳ ಗೌರವಕ್ಕೆ ಪಾತ್ರರಾದ ಇವರು ಕನ್ನಡ ನುಡಿಯ ಎಲ್ಲಾ ಷರತ್ತಿಗಳಲ್ಲಿ ದತ್ತಿ ನಿಧಿ ನೀಡಿ ತಮ್ಮ ಸಾಹಿತ್ಯ ಪ್ರೀತಿ ತೋರಿದ್ದಾರೆ. ಸ್ವಾಮಿ ವಿವೇಕಾನಂದರ ಉಪನ್ಯಾಸಕದ ಚಿಕಾಗೋ ವಿಶ್ವಧರ್ಮ ಸಮ್ಮೇಳನ ನಡೆದ ಶತಮಾನೋತ್ಸವ ಸಮಾರಂಭದ ನೆನಪಿಗಾಗಿ ಇವರು ಸಂಸ್ಥೆಯಲ್ಲಿ ಮೂರು ದಿನಗಳ ಕಾಲ ಏರ್ಪಡಿಸಿದ್ದ ಧಾರ್ಮಿಕ ಕಾರ್ಯಕ್ರಮ ಇಂದಿಗೂ ಹಸಿರಾಗಿ ಉಳಿದಿದೆ. ಬರಹಗಾರರಾಗಿ: ಉತ್ತಮ ವಾಗ್ಮಿ ಒಳ್ಳೆಯ ಬರಹಗಾರನಾಗಲಾರ, ಒಳ್ಳೆಯ ಬರಹಗಾರ ಉತ್ತಮ ವಾಗ್ಮಿಯಾಗಲಾರ ಎಂಬ ನಂಬಿಕೆಯನ್ನು ಹುಸಿಗೊಳಿಸಿದ ತಿಪ್ಪೇಸ್ವಾಮಿಯವರು ಒಳ್ಳೆಯ ಮಾತುಗಾರರೂ ಹೌದು, ಉತ್ತಮ ಬರಹಗಾರರೂ ಹೌದು ಇವರು ಶತಮಾನೋತ್ಸವ ಸಂದೇಶ, ಭಿಕ್ಷಾಟನೆ ಸಮಸ್ಯೆ, ಅಸ್ಪೃಶ್ಯತೆ, ವಿಶ್ವವಿಜೇತ ಸ್ವಾಮಿ ವಿವೇಕಾನಂದ (ನಾಟಕ), ಭಾರತದಲ್ಲಿ ಶಿಕ್ಷಣ ವ್ಯವಸ್ಥೆ, ಶರಣ ದರ್ಶನ, ನಾಡಕಟ್ಟಿದ ನೇತಾರ - ಸ್ವಾಮಿ ವಿವೇಕಾನಂದ ಮುಂತಾದ ಮೌಲಿಕ ಕೃತಿಗಳನ್ನು ಕನ್ನಡ ಸಾರಸತ್ವ ಲೋಕಕ್ಕೆ ಅರ್ಪಿಸಿದ್ದಾರೆ. ರಾಜಕೀಯದತ್ತ: ಶಿಕ್ಷಣ ಮತ್ತು ಸಾಮಾಜಿಕ ಸೇವೆಗಳಿಗಷ್ಟೇ ತಮ್ಮ ಬದುಕನ್ನು ನಿರ್ದಿಷ್ಟವಾಗಿ ಸೀಮಿತಗೊಳಿಕೊಂಡಿದ್ದ ತಿಪ್ಪೇಸ್ವಾಮಿಯವರನ್ನು ಕೆಲಕಾಲ ರಾಜಕೀಯ ಕ್ಷೇತ್ರವೂ ಸೆಳೆಯುತ್ತದೆ. ಅಂದಿನ ಮುಖ್ಯಮಂತ್ರಿಗಳಾದ ದಿವಂಗತ ರಾಮಕೃಷ್ಣ ಹೆಗಡೆಯವರ ರಾಜಕೀಯ ಸಿದ್ದಾಂತಗಳಿಗೆ ಮನಸೋತು ಜನತಾದಳ ಪಕ್ಷದ ಸಕ್ರಿಯ ಕಾರ್ಯಕರ್ತ ಮತ್ತು ಸಂಘಟನಾ ಕಾರ್ಯದರ್ಶಿಯಾಗಿ, ದಾವಣಗೆರೆ ಜಿಲ್ಲೆಯ ಲೋಕಶಕ್ತಿ ಪಕ್ಷದ ಜಿಲ್ಲಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಾರೆ. ಹೀಗೆ ತಮ್ಮ ಕಾರ್ಯಕ್ಷೇತ್ರವನ್ನು ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ವಿಸ್ತರಿಸಿಕೊಂಡಿರುವ ತಿಪ್ಪೇಸ್ವಾಮಿಯವರು ಹತ್ತು ಹಲವು ಸಂಸ್ಥೆಗಳಿಗೆ ಆಜೀವ ಸದಸ್ಯರಾಗಿದ್ದಾರೆ. ಅವುಗಳಲ್ಲಿ ಮುಖ್ಯವಾಗಿ ಈ ಕೆಳಕಂಡವುಗಳನ್ನು ಗುರುತಿಸಬಹುದು.
ಸಂದ ಪ್ರಶಸ್ತಿಗಳು:
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
SITE MAP
SiteTRAININGJOB |
HR SERVICESOTHER SERVICESnIRATHANKA CITIZENS CONNECT |
NIRATHANKAPOSHOUR OTHER WEBSITESSubscribe |
MHR LEARNING ACADEMY
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|