ಭಾರತದ ಅತ್ಯಂತ ಪ್ರಾಚೀನ ಭಾಷೆಗಳಲ್ಲೊಂದಾದ ಸಂಸ್ಕೃತದಲ್ಲಿ ಬಹಳ ಉತ್ತಮವಾದ ಸಾಹಿತ್ಯ ರಚನೆಯಾಗಿದೆ. ವೇದ ಸಾಹಿತ್ಯದಿಂದ ಆರಂಭವಾಗಿ, ಇತಿಹಾಸ-ಪುರಾಣಗಳು, ಸೂತ್ರಗಳು, ಕೋಶಗಳು, ಸ್ಮೃತಿ ಗ್ರಂಥಗಳು, ಶಾಸ್ತ್ರಗ್ರಂಥಗಳು, ಕಾವ್ಯ-ನಾಟಕಗಳು ಹೀಗೆ ಸಂಸ್ಕೃತ ಸಾಹಿತ್ಯ ರಚನೆ ನೂರಾರು ವರ್ಷಗಳು ಅವ್ಯಾಹತವಾಗಿ ನಡೆದು ಬಂದಿದೆ. ಸಂಸ್ಕೃತವು ಭಾರತದ ಹಲವಾರು ಭಾಷೆಗಳ ಉಗಮಕ್ಕೆ ಕಾರಣವಾದುದೇ ಅಲ್ಲದೆ ಕವಿಗಳಿಗೆ ವಿದ್ವಾಂಸರಿಗೆ ಅಗಾಧವಾದ ವಸ್ತುವನ್ನೂ ಸ್ಫೂರ್ತಿಯನ್ನೂ ಒದಗಿಸಿಕೊಟ್ಟಿದೆ. ರಾಮಾಯಣ, ಮಹಾಭಾರತ, ಪುರಾಣಗಳು ಹಾಗೂ ಬೃಹತ್ಕಥೆಯಂತಹ ಗ್ರಂಥಗಳು ಮುಂದಿನ ಕ್ಲಾಸಿಕಲ್ ಎಂದು ಕರೆಸಿಕೊಳ್ಳುವ ಸಂಸ್ಕೃತ ಸಾಹಿತ್ಯಕ್ಕೆ ಮೂಲ ಸಾಮಗ್ರಿಯನ್ನು ಒದಗಿಸಿದೆ. ಒಂದು ಕಾಲಕ್ಕೆ ಭಾರತ ದೇಶದ ಉದ್ದಗಲಕ್ಕೂ ಪ್ರಚಲಿತವಾಗಿದ್ದು ಶಿಷ್ಟ ಜನರ ಕಾವ್ಯಾಭಿವ್ಯಕ್ತಿಯ ಮಾಧ್ಯಮವಾಗಿದ್ದ ಸಂಸ್ಕೃತ ಸಾಹಿತ್ಯವು ಈ ದೇಶದ ಸಾವಿರಾರು ವರ್ಷಗಳ ಸಾಮಾಜಿಕ ಮತ್ತು ಸಾಂಸ್ಕೃತಿಕ ಇತಿಹಾಸವನ್ನು ಪ್ರತಿಬಿಂಬಿಸುತ್ತಾ ಬಂದಿದೆ. ಕವಿಗಳು ತಮ್ಮ ಸಮಕಾಲೀನ ಸಮಾಜದ ಅವಿಭಾಜ್ಯ ಅಂಗವಾಗಿರುವುದರಿಂದ ಅವರ ಕೃತಿಗಳಲ್ಲಿ ಆಯಾ ಕಾಲದ ಸಾಮಾಜಿಕ-ಸಾಂಸ್ಕೃತಿಕ ತೊಳಲಾಟಗಳು, ಆರ್ಥಿಕ ಸ್ಥಿತಿಗತಿಗಳು, ರಾಜಕೀಯ ಸಂಘರ್ಷಗಳು, ತಾತ್ತ್ವಿಕ ಚಿಂತನೆಗಳು ಹಾಸುಹೊಕ್ಕಾಗಿ ಬಂದಿರುತ್ತವೆ ಎಂಬುದು ವಿದ್ವಾಂಸರ ಅಭಿಪ್ರಾಯ. (Prof. M.G. Bhate in his introduction to ‘History Of Sanskrit .Literature’, Ed. By S. N. Dasgupta)
ದೇಶದ ಇತಿಹಾಸದ ಪ್ರಮುಖ ಮಜಲುಗಳನ್ನು ತನ್ನದೇ ಆದ ರೀತಿಯಲ್ಲಿ ದಾಖಲಿಸಿರುವ ಸಂಸ್ಕೃತ ಸಾಹಿತ್ಯ, ದೇಶವ್ಯಾಪಿಯೂ, ಸರ್ವಜನ ಮಾನ್ಯವೂ ಆಗಿದ್ದ ಕಾರಣ ಭಾರತೀಯ ಸಂಸ್ಕೃತಿಯ ದ್ಯೋತಕವೆಂಬ ಮಾನ್ಯತೆ ಪಡೆದಿದೆ. ಈ ಕಾರಣಗಳಿಂದಾಗಿ ಸಾಂಸ್ಕೃತಿಕ ಇತಿಹಾಸವನ್ನು ಗುರುತಿಸುವ ದೃಷ್ಟಿಯಿಂದ ಸಂಸ್ಕೃತ ಸಾಹಿತ್ಯದ ಮರು ಅಧ್ಯಯನ ಇಂದಿಗೂ ಪ್ರಸ್ತುತವಾಗಿದೆ. ಸಂಸ್ಕೃತ ಸಾಹಿತ್ಯವನ್ನು ಸ್ತ್ರೀ ಕೇಂದ್ರಿತವಾದ ನೆಲೆಯಲ್ಲಿ ಪರಿಶೀಲಿಸುವುದು ಈ ಅಧ್ಯಯನದ ಉದ್ದೇಶ. ಸಂಸ್ಕೃತ ಸಾಹಿತ್ಯದಲ್ಲಿ ಸ್ತ್ರೀಯರ ಸಾಮಾಜಿಕ ಮತ್ತು ಸಾಂಸ್ಕೃತಿಕ ಸ್ಥಿತಿ ಗತಿಗಳನ್ನು ಹೇಗೆ ಚಿತ್ರಿಸಿಲಾಗಿದೆ? ಪಿತೃಪ್ರಧಾನ ವ್ಯವಸ್ಥೆಯಲ್ಲಿ ಸ್ತ್ರೀಯರ ಸ್ಥಾನಮಾನಗಳೇನು? ಹೇರಿದ ನಿರ್ಬಂಧಗಳೇನು? ಇಲ್ಲಿನ ಪಾತ್ರಗಳು ಹಾಗೂ ಸಂದರ್ಭಗಳು ಈ ನಿರ್ಬಂಧಗಳ ಚೌಕಟ್ಟಿನೊಳಗೇ ಇವೆಯೇ? ಅಥವಾ ಇದರಿಂದ ಆಚೆಗೆ ವಿಸ್ತರಿಸುವ ಸ್ವಾತಂತ್ರ್ಯ ವಹಿಸಲಾಗಿದೆಯೇ? ಸ್ತ್ರೀವಿಶಿಷ್ಟವಾದ ಸಂಸ್ಕೃತಿಯೊಂದನ್ನು ಸಂಸ್ಕೃತ ಸಾಹಿತ್ಯದ ಮೂಲಕ ಗುರುತಿಸಲು ಸಾಧ್ಯವೇ? ಸಂಸ್ಕೃತ ಕಾವ್ಯಗಳಲ್ಲಿ ಬರುವ ಸ್ತ್ರೀ ಪಾತ್ರಗಳು ಸಾಂಸ್ಕೃತಿಕ ಪಡಿಯಚ್ಚುಗಳೇ ಅಥವಾ ತಮ್ಮವೇ ಆದ ವೈಶಿಷ್ಟ್ಯವನ್ನು ಹೊಂದಿವೆಯೇ? ಇಂತಹ ಹಲವಾರು ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕಾಡುವ ಪ್ರಯತ್ನ ಇಲ್ಲಿದೆ. ಈ ಹುಡುಕಾಟಕ್ಕೆ ತೊಡಗುವ ಮೊದಲು ಸಂಸ್ಕೃತ ಸಾಹಿತ್ಯವನ್ನು ಕುರಿತಂತೆ ಕೆಲವೊಂದು ವಿಷಯಗಳನ್ನು ಸ್ಪಷ್ಟಪಡಿಸಬೇಕಾಗುತ್ತದೆ. ಮೊದಲನೆಯದಾಗಿ, ಸಂಸ್ಕೃತದ ಪ್ರಸಿದ್ಧ ಕವಿಗಳ ಕೃತಿಗಳು ಸಮಾಜದ ಶಿಷ್ಟವರ್ಗಕ್ಕೆ ಸೇರಿದ ಹಾಗು ರಾಜಾಶ್ರಯವನ್ನು ಪಡೆದ ಕವಿಗಳು, ವಿದ್ವತ್ ಸಮುದಾಯಕ್ಕಾಗಿ ರಚಿಸಿದ ಕೃತಿಗಳು. ಆದ್ದರಿಂದಲೇ ಇಂತಹ ಕಾವ್ಯಗಳಲ್ಲಿ ಆಲಂಕಾರಿಕತೆ ಹಾಗೂ ವರ್ಣನಾತ್ಮಕತೆ ಹೆಚ್ಚು. ಇಲ್ಲಿ ನೈಜತೆ ಕಡಿಮೆ, ಕಾವ್ಯಾಡಂಬರ ಹೆಚ್ಚು. ಇವುಗಳಿಂದ ಸತ್ಯಾಂಶಗಳನ್ನು ಹೊರಗೆಳೆಯುವುದು ಕಷ್ಟ. ಎರಡನೆಯದು, ಸಂಸ್ಕೃತ ಸಾಹಿತ್ಯವು ಪುರುಷಪ್ರಧಾನ ವ್ಯವಸ್ಥೆಯಿಂದ ಹೊರಹೊಮ್ಮಿದ್ದಾಗಿದ್ದು, ಪುರುಷಕೇಂದ್ರಿತ ದೃಷ್ಟಿಕೋನವನ್ನು ಬಿಂಬಿಸುತ್ತದೆ. ಕಾವ್ಯಗಳು ಸಾಮಾನ್ಯವಾಗಿ ಪುರುಷರೇ ರಚಿಸಿದವುಗಳು. ಬೆರಳೆಣಿಕೆಯಷ್ಟು ಕಾವ್ಯಗಳನ್ನು ಸ್ತ್ರೀಯರು ರಚಿಸಿದ್ದರೂ ಅವುಗಳು ಪಿತೃಪ್ರಧಾನ ವ್ಯವಸ್ಥೆಯ ಆದರ್ಶಗಳನ್ನೇ ಬಿಂಬಿಸುತ್ತವೆ. ಈ ಕಾರಣಗಳಿಂದಾಗಿ ಸ್ತ್ರೀಪರ ನಿಲುವುಗಳನ್ನು ಇಲ್ಲಿ ಅಪೇಕ್ಷಿಸುವುದಾಗಲಿ, ನಿರೀಕ್ಷಿಸುವುದಾಗಲಿ ಕಷ್ಟ. ಮೂರನೆಯದು, ಈ ಕಾವ್ಯಗಳಲ್ಲಿ ಸಮಾಜದ ಮೇಲ್ವರ್ಗಕ್ಕೆ ಸೇರಿದವರ ಚರಿತ್ರೆಯನ್ನು ಮಾತ್ರ ಕಾಣಬಹುದು. ಮಹಾಕಾವ್ಯ ಹಾಗೂ ನಾಟಕ ಲಕ್ಷಣಗಳಲ್ಲಿಯೇ ಹೇಳಿರುವಂತೆ ಪ್ರಖ್ಯಾತ ವಂಶಕ್ಕೆ ಸೇರಿದ ರಾಜಷರ್ಿ ಅಥವಾ ದೇವತೆಗಳು ನಾಯಕನಾಗಿರಬೇಕು. ಅದಕ್ಕೆ ಹೊಂದುವಂತೆ ನಾಯಕಿಯೂ ರಾಜವಂಶಕ್ಕೆ ಸೇರಿದವಳಾಗಿರಬೇಕು ಅಥವಾ ದೇವತೆ, ವಿದ್ಯಾಧರೆ ಅಥವಾ ಅಪ್ಸರೆಯರಾಗಿರಬೇಕು. ಇವರಿಗೆ ಸಹಾಯಕರಾಗಿ ಕೆಳವರ್ಗಕ್ಕೆ ಸೇರಿದ ಸ್ತ್ರೀಯರು ಭೃತ್ಯವರ್ಗದವರಾಗಿರುತ್ತಾರೆ. ಇಲ್ಲೂ ಇವರ ಅಂತಃಪುರ ಕಾರ್ಯಗಳನ್ನು ಕುರಿತ ಚಿತ್ರಣವಿದೆಯೇ ಹೊರತು ವೈಯಕ್ತಿಕ ಜೀವನವನ್ನು ಕುರಿತಂತೆ ಇಲ್ಲ. ಆದ್ದರಿಂದ ಸಂಸ್ಕೃತ ಸಾಹಿತ್ಯದಲ್ಲಿ ಸಾಮಾನ್ಯವಾಗಿ ಸಮಾಜದ ಯಾವುದೋ ಒಂದೆರಡು ವರ್ಗಕ್ಕೆ ಸೇರಿದ ಸ್ತ್ರೀಯರ ಚಿತ್ರಣ ಮಾತ್ರ ಕಂಡುಬರುತ್ತದೆ. ಇವುಗಳ ಆಧಾರದ ಮೇಲೆ ಇಡೀ ಸ್ತ್ರೀಸಮುದಾಯದ ಬಗ್ಗೆ ನಿರ್ಧಾರಗಳಿಗೆ ಬರುವುದು ಸಾಧ್ಯವಿಲ್ಲ. ಸಾಂಸ್ಕೃತಿಕ ವೈವಿಧ್ಯತೆಗೆ ಹೆಸರಾದ ಈ ದೇಶದಲ್ಲಿ ಯಾವುದಾದರೂ ಒಂದು ಸಂಸ್ಕೃತಿಯನ್ನು ಪ್ರಧಾನವೆಂದು ಪರಿಗಣಿಸಿ ಅದರ ಮೂಲಕ ಒಟ್ಟು ಸಂಸ್ಕೃತಿಯ ವಿಶ್ಲೇಷಣೆಗೆ ತೊಡಗುವುದು ತಪ್ಪಾಗುತ್ತದೆ. ಅದರಲ್ಲೂ ಸ್ತ್ರೀಯರ ಸ್ಥಾನಮಾನಗಳ ವಿಷಯಕ್ಕೆ ಬಂದಾಗ ಇದು ಇನ್ನು ಕ್ಲಿಷ್ಟವಾಗುತ್ತದೆ. ಏಕೆಂದರೆ ಭಾರತದಲ್ಲಿ ಸ್ತ್ರೀಯರ ಸ್ಥಾನಮಾನಗಳು ಜಾತಿಯಿಂದ ಜಾತಿಗೆ, ಧರ್ಮದಿಂದ ಧರ್ಮಕ್ಕೆ, ವರ್ಗದಿಂದ ವರ್ಗಕ್ಕೆ ಹಾಗೆಯೇ ಪರಿಸರದಿಂದ ಪರಿಸರಕ್ಕೆ ಬದಲಾಗುತ್ತಾ ಹೋಗುತ್ತವೆ ಎಂಬುದು ಸಾಮಾಜಿಕ ಸಂಶೋಧಕರಾದ ಎಂ.ಎನ್.ಶ್ರೀನಿವಾಸರ ಅಭಿಪ್ರಾಯ (The cohesive role of Sanskritisation by M N Srinivas, p.76, on ‘The changing position of Indian Women’). ಈ ಎಲ್ಲ ಧೋರಣೆಗಳನ್ನಿಟ್ಟುಕೊಂಡೇ ಸಂಸ್ಕೃತ ಸಾಹಿತ್ಯವನ್ನು ದೃಷ್ಟಿಸಿದರೂ ಭಾರತೀಯ ಸಂಸ್ಕೃತಿಯ ಆಳದಲ್ಲೆಲ್ಲೋ ಒಂದು ಕಡೆ ಸುಪ್ತವಾಗಿರುವ ಸ್ತ್ರೀಪರ ಕಾಳಜಿಗಳು, ಸೂಕ್ಷ್ಮತೆಗಳು ಕಾವ್ಯಗಳಲ್ಲಿ ಅಭಿವ್ಯಕ್ತವಾಗುತ್ತಲೇ ಹೋಗುತ್ತವೆ. ಪುರುಷಪ್ರಧಾನ ಸಮಾಜವು ಸ್ತ್ರೀಯರ ಮೇಲೆ ತನಗೆ ಅನುಕೂಲವಾದ ಆದರ್ಶಗಳನ್ನು ಆರೋಪ ಮಾಡಿ ಅವುಗಳನ್ನು ವೈಭವೀಕರಿಸುತ್ತಲೇ ಸ್ತ್ರೀ ವಿಶಿಷ್ಟತೆಯನ್ನು ಅನಾವರಣಗೊಳಿಸುತ್ತ ಹೋಗುತ್ತದೆ. ಅನೇಕ ಕೃತಿಗಳಲ್ಲಿ ಕವಿಗಳು ಅಲ್ಲಿನ ಸಂದರ್ಭಗಳನ್ನು ವ್ಯಾಖ್ಯಾನಿಸುವ ರೀತಿಯಿಂದ ಹಾಗೂ ತಮ್ಮ ಮಾತುಗಳ ಮೂಲಕ ಸಾಮಾಜಿಕ ಬದಲಾವಣೆಯನ್ನೂ ಸೂಚಿಸುವ ಪ್ರಯತ್ನ ಮಾಡಿದ್ದಾರೆ. ಇವುಗಳನ್ನು ಗುರುತಿಸುವುದೇ ಈ ಅಧ್ಯಯನದ ಪ್ರಮುಖ ಉದ್ದೇಶ. ಪಿತೃಪ್ರಧಾನ ವ್ಯವಸ್ಥೆ ಮತ್ತು ಸಂತಾನಾಕಾಂಕ್ಷೆ: ಭಾರತದಲ್ಲಿ ಹೆಚ್ಚು ವ್ಯಾಪಕವಾಗಿರುವ ಪಿತೃಪ್ರಧಾನ ವ್ಯವಸ್ಥೆಯೇ ಇಲ್ಲಿನ ಸಾಮಾಜಿಕ ರಚನೆಯ ಸ್ವರೂಪಕ್ಕೆ ಕಾರಣವಾಗಿದೆ. ಪಿತೃಪ್ರಧಾನ ವ್ಯವಸ್ಥೆಯ ಆಶಯಗಳು ರಾಮಾಯಣ, ಮಹಾಭಾರತದಂತಹ ಇತಿಹಾಸಗಳಿಂದ ಆರಂಭಿಸಿ ಸಂಸ್ಕೃತ ಸಾಹಿತ್ಯದುದ್ದಗಲಕ್ಕೂ ವ್ಯಕ್ತವಾಗಿಯೇ ಇವೆ. ಇಲ್ಲಿ ಹೆಸರೇ ಹೇಳುವಂತೆ ಪಿತೃ ಅಥವಾ ಗಂಡು ಸಂತಾನವೇ ಪ್ರಧಾನವಾದದ್ದು. ಈ ವ್ಯವಸ್ಥೆಯಲ್ಲಿ ವಂಶದ ಮುಂದುವರಿಕೆಯ ದೃಷ್ಟಿಯಿಂದ ಪುತ್ರಸಂತಾನ ಮುಖ್ಯವೆನಿಸಿಕೊಳ್ಳುತ್ತದೆ. ಯಜಮಾನಿಕೆ, ಅಧಿಕಾರ, ಆಸ್ತಿಯ ಹಕ್ಕು, ಸಂಸಾರದ ಎಲ್ಲ ಸದಸ್ಯರ ಪಾಲನೆ, ಪೋಷಣೆ, ರಕ್ಷಣೆಯ ಜವಾಬ್ದಾರಿಗಳು ಪುರುಷ ಕೇಂದ್ರೀಕೃತವಾಗಿರುತ್ತವೆ. ಇವೆಲ್ಲವೂ ತಂದೆಯಿಂದ ಮಗನಿಗೆ ವರ್ಗಾವಣೆಯಾಗುವುದರಿಂದ ಪುತ್ರಸಂತತಿಯ ಬಗ್ಗೆ ವಿಶೇಷ ಕಾಳಜಿ. ಅದಿಲ್ಲದಿದ್ದಾಗ ಆಸ್ತಿಗೆ ವಾರಸುದಾರರಿಲ್ಲದ ಆತಂಕ ಕಂಡುಬರುತ್ತದೆ. ಅನೇಕ ಸಾಹಿತ್ಯ ಕೃತಿಗಳಲ್ಲಿ ಇದು ಸ್ಪಷ್ಟವಾಗಿ ಅಭಿವ್ಯಕ್ತವಾಗಿದೆ. ಉದಾಹರಣೆಗೆ, ಕಾಳಿದಾಸನ ರಘುವಂಶ ಮಹಾಕಾವ್ಯದಲ್ಲಿ ಅನೇಕ ವರ್ಷಗಳ ಕಾಲ ಮಕ್ಕಳಿಲ್ಲದಾದಾಗ ದಿಲೀಪ ಮತ್ತು ಅವನ ರಾಣಿ ಸುದಕ್ಷಿಣೆ ವಸಿಷ್ಟರ ಆದೇಶದಂತೆ ಕಾಮಧೇನುವಿನ ಮಗಳು ನಂದಿನಿಯೆಂಬ ಗೋವಿನ ಸೇವೆ ಮಾಡಿ ಸತ್ತ್ವ ಪರೀಕ್ಷೆಗೊಳಪಟ್ಟು ನಂತರ ಮಗನನ್ನು ಪಡೆಯುತ್ತಾರೆ. ರಾಮಾಯಣದಲ್ಲಿ ದಶರಥ ಪುತ್ರಕಾಮೇಷ್ಟಿಯನ್ನು ಮಾಡಿದ್ದು, ಮಹಾಭಾರತದಲ್ಲಿ ಕುರುವಂಶದ ಮುಂದುವರಿಕೆಗಾಗಿ ವ್ಯಾಸನನ್ನು ಕರೆಸಿದ್ದು ಇಂತಹ ಅನೇಕ ಉದಾಹರಣೆಗಳು ಇತಿಹಾಸದುದ್ದಕ್ಕೂ ಇದ್ದೇ ಇವೆ. ಇವುಗಳ ಜೊತೆಗೆ ಧರ್ಮಶಾಸ್ತ್ರಗಳು ಪ್ರತಿಪಾದಿಸಿದ ಧಾರ್ಮಿಕ ನಂಬಿಕೆಗಳು ಸಹ ಈ ಆತಂಕವನ್ನು ಬಲಪಡಿಸುತ್ತವೆ. ಅದೇನೆಂದರೆ ಮನುಷ್ಯನು ತನ್ನ ಜೀವಿತ ಕಾಲದಲ್ಲಿ ಮೂರು ಋಣಗಳನ್ನು ತೀರಿಸಬೇಕಾಗಿರುತ್ತದೆ. ಅವುಗಳಲ್ಲಿ ಒಂದಾದ ಪಿತೃಋಣವನ್ನು ತೀರಿಸುವುದು ಮಗನನ್ನು ಪಡೆಯುವುದರ ಮೂಲಕ (ಮನುಸ್ಮೃತಿ, 4.35; 10.206) ಮಗನಾದವನು ಶ್ರಾದ್ಧಾದಿಗಳನ್ನು ಮಾಡುವುದರ ಮೂಲಕ ಪುತ್ ಎಂಬ ನರಕದಿಂದ ಪಿತೃಗಳನ್ನು ಪಾರುಮಾಡುವನು ಎಂಬ ನಂಬಿಕೆ. ಬಾಣಭಟ್ಟನ ಕಾದಂಬರಿಯಲ್ಲಿ ತಾರಾಪೀಡನ ಹೆಂಡತಿ ವಿಲಾಸವತಿ ಕೂಡ ಈ ವಿಷಯದಲ್ಲಿ ತನ್ನ ಭಯವನ್ನು ವ್ಯಕ್ತಪಡಿಸುತ್ತಾಳೆ. (ಕಾದಂಬರಿ,ಪು-104). ರಘುವಂಶದಲ್ಲೂ ಇದು ವ್ಯಕ್ತವಾಗಿದೆ. ಗೃಹಸ್ಥಾಶ್ರಮದ ಪರಮ ಗುರಿಯೇ ಮಗನನ್ನು ಪಡೆಯುವುದು-ಪ್ರಜಾಯೈ ಗೃಹಮೇಧಿನಾಂ....(ರಘುವಂಶ,1.7) ಈ ನಂಬಿಕೆಗಳು ಸಾಮಾಜಿಕ, ರಾಜಕೀಯ ಹಾಗೂ ಧಾರ್ಮಿಕ ನಂಬಿಕೆಗಳ ದೃಷ್ಟಿಯಿಂದ ಸಹಜವೆನ್ನಿಸಿದರೂ ಇವು ಪರೋಕ್ಷವಾಗಿ ಹೆಣ್ಣಿನ ಸಾಮಾಜಿಕ ಸ್ಥಿತಿಯ ಮೇಲೆ ಪರಿಣಾಮ ಉಂಟುಮಾಡುತ್ತಿದ್ದವು. ಪುತ್ರಸಂತಾನವನ್ನು ನೀಡಲಾಗದ ಹೆಣ್ಣನ್ನು ನಿಕೃಷ್ಟವಾಗಿ ಕಾಣಲಾಗುತ್ತಿತ್ತು. ಹೆಣ್ಣಿಗೂ ಅಸಫಲತೆ ಕಾಡುತ್ತಿತ್ತು (ಕಾದಂಬರಿ, ಪು-104) ಗಂಡು ಮರುಮದುವೆಯಾಗಲು ಕಾರಣ ಸಿಗುತ್ತಿತ್ತು. ರಾಜವಂಶಗಳಲ್ಲಂತೂ ಬಹುಪತ್ನೀತ್ವ ಸಾಮಾನ್ಯವೂ ಸಮ್ಮತವೂ ಆಗಿರುತ್ತಿತ್ತು. (ಅಭಿಜ್ಞಾನ ಶಾಕುಂತಲ, 3ನೇ ಅಂಕ) ಶಾಕುಂತಲದಲ್ಲಂತೂ ಚಕ್ರವರ್ತಿಯಾಗುವ ಮಗನನ್ನು ಪಡೆಯುವುದೇ ಇಡೀ ನಾಟಕದ ಉದ್ದೇಶವಾಗಿ ಕಂಡುಬರುತ್ತದೆ. ಪತ್ನಿಯರ ಸ್ಥಾನಮಾನಗಳೂ ಮಗನನ್ನು ಹೊಂದಿರುವುದರ ಮೇಲೆ ಅವಲಂಬಿಸಿರುತ್ತದೆ. ಸಂಸ್ಕೃತ ನಾಟಕಗಳಲ್ಲಿ ಬರುವ ರಾಣಿಯರ ನಡುವಿನ ಸಂಘರ್ಷಗಳು ಇದನ್ನು ಸೂಚಿಸುತ್ತವೆ. ಆದರೆ ಮಗಳಂದಿರನ್ನು ಪಡೆಯಲೇಬೇಕೆಂಬ ತವಕ ಎಲ್ಲೂ ಕಂಡುಬರುವುದಿಲ್ಲ. ಏಕೆಂದರೆ ಮಗ ನಡೆಸಬಹುದಾದ ಯಾವುದೇ ಧಾರ್ಮಿಕ ಕ್ರಿಯೆಗಳನ್ನು ನಡೆಸುವ ಅಧಿಕಾರ ಮಗಳಿಗೆ ಇಲ್ಲ. ಸ್ತ್ರೀಯರಿಗೆ ವಿಶಿಷ್ಟವಾದ ಯಜ್ಞವಾಗಲೀ, ವ್ರತವಾಗಲೀ ಇಲ್ಲ ಎಂದು ಧರ್ಮಶಾಸ್ತ್ರಗಳೇ ಹೇಳುತ್ತವೆ. (ಮನುಸ್ಮೃತಿ, 5.155) ಷೋಡಶ ಸಂಸ್ಕಾರಗಳು ಇವರಿಗೆ ವಿಹಿತವಲ್ಲ. ಆದ್ದರಿಂದ ಮಗಳಂದಿರು ಬೇಕೇ ಬೇಕೆಂಬ ಅನಿವಾರ್ಯತೆ ಎಲ್ಲೂ ಸೂಚಿತವಾಗಿಲ್ಲ. ಹಾಗೆಂದ ಮಾತ್ರಕ್ಕೆ ಎಲ್ಲಿಯೂ ಮಗಳಂದಿರ ಬಗ್ಗೆ ಜುಗುಪ್ಸೆಯಾಗಲೀ, ತಾತ್ಸಾರವಾಗಲೀ, ಕಂಡುಬರುವುದಿಲ್ಲ. ಹೆಣ್ಣು ಬ್ರೂಣಹತ್ಯೆಯಾಗಲೀ ಹೆಣ್ಣಿನ ಬಗ್ಗೆ ಕ್ರೂರವಾಗಿ ನಡೆದುಕೊಳ್ಳುವುದಾಗಲಿ ಇಲ್ಲ. ಆದರೆ ಹೆಣ್ಣು ಹುಟ್ಟಿದಾಗ ಗೃಹಸ್ಥರು ಕಣ್ಣೀರಿಡುವುದಕ್ಕೆ ಕಾರಣವನ್ನು ಬಾಣಭಟ್ಟನ ಹರ್ಷಚರಿತೆಯಲ್ಲಿ ರಾಜ್ಯಶ್ರೀಯ ಮದುವೆಯ ಸಂದರ್ಭದಲ್ಲಿ ತಂದೆ ಪ್ರಭಾಕರವರ್ಧನ ವಿಶ್ಲೇಷಿಸುತ್ತಾನೆ. ಗಂಡು ಹೆಣ್ಣು ಮಕ್ಕಳೆರಡೂ ಕರುಳ ಕುಡಿಗಳೇ ಆಗಿದ್ದರೂ ಪ್ರೀತಿಯೀಂದ ಸಾಕಿ ಸಲಹಿದ ಮಗಳಂದಿರನ್ನು ಮುಂದೊಂದು ದಿನ ಕಂಡುಕೇಳರಿಯದ ಯಾರೋ ಮದುವೆಮಾಡಿಕೊಂಡು ಕರೆದುಕೊಂಡು ಹೋಗಿಬಿಡುವ ಸಂಪ್ರದಾಯವನ್ನು ಟೀಕಿಸುತ್ತಾನೆ. ಮತ್ತು ಈ ಕಾರಣದಿಂದಲೇ ಹೆತ್ತವರು ಆ ಮಗು ಹುಟ್ಟಿದಾಗಲೇ ಕಣ್ಣೀರಿಡುತ್ತಾರೆ ಎಂದು ವಿಶ್ಲೇಷಿಸುತ್ತಾನೆ (ಹರ್ಷಚರಿತೆ, ಪು-156) ಹಾಗೆಯೇ ಶಾಕುಂತಲದಲ್ಲಿ ಕಣ್ವರಿಗೆ ತಮ್ಮ ಸಾಕುಮಗಳಾದ ಶಕುಂತಲೆಯ ಬಗ್ಗೆ ಇರುವ ಪ್ರೀತಿ ಅನನ್ಯವಾದದ್ದು. ಆಸ್ತಿ, ವಂಶ, ಧಾರ್ಮಿಕ ನಂಬಿಕೆಗಳೂ ಈ ಯಾವುವೂ ಮುಖ್ಯವೆನಿಸಿಕೊಳ್ಳದ ತಪೋವನದ ಪರಿಸರದಲ್ಲಿ ಕಣ್ವರಿಗೆ ಮಗಳು ತಮ್ಮ ಜೀವಿತಸರ್ವಸ್ವವಾಗುತ್ತಾಳೆ. ಇಲ್ಲಿ ಹೆಣ್ಣು, ಗಂಡೆಂಬ ಭೇದ ಪ್ರಮುಖವಾಗುವುದಿಲ್ಲ. ಮಗಳಿಗೆ ದೈವ ಪ್ರತಿಕೂಲವಾಗಿರುವುದನ್ನು ಅರಿತು ಅದನ್ನು ಪರಿಹರಿಸಲು ಸೋಮತೀರ್ಥಕ್ಕೆ ಹೋಗುತ್ತಾರೆ. ಅತಿಥಿ ಸತ್ಕಾರದ ಜವಾಬ್ದಾರಿಯನ್ನು ಮಗಳಿಗೆ ವಹಿಸಿ ಹೋಗುತ್ತಾರೆ. ಮಗಳಿಗೆ ತನ್ನ ಸುತ್ತಲಿನ ಪರಿಸರದ ಬಗ್ಗೆ, ಪ್ರಾಣಿ, ಪಕ್ಷಿ, ಗಿಡಮರಗಳ ಬಗ್ಗೆ ಇರುವ ಕಾಳಜಿ ಅವರಿಗೆ ಹೆಮ್ಮೆಯ ವಿಷಯ. ಕಣ್ವರ ಪ್ರಕೃತಿ ಪ್ರೇಮವನ್ನು ಸಂಪೂರ್ಣವಾಗಿ ಮೈಗೂಡಿಸಿಕೊಂಡವಳು ಶಕುಂತಲೆ. ಅಥವಾ ಇದು ಕಾಳಿದಾಸನ ಪ್ರಕೃತಿ ಪ್ರಿಯತೆ ಎಂದರೆ ತಪ್ಪಾಗಲಾರದು. ಏಕೆಂದರೆ ಕಾಳಿದಾಸನ ನಾಯಕಿಯರೆಲ್ಲರೂ ಪ್ರಕೃತಿ ಪ್ರಿಯರೇ. ಶಕುಂತಳೆ, ಪಾರ್ವತಿ, ಸೀತೆ ಎಲ್ಲರೂ ಗಿಡಮರಗಳನ್ನು ತಮ್ಮ ಮಕ್ಕಳಿಗಿಂತ ಹೆಚ್ಚಾಗಿ ಪ್ರೀತಿಸಿದವರು. ಪಾರ್ವತಿಯು ಗಿಡಮರಗಳ ಬಗ್ಗೆ ಇದ್ದ ಪ್ರೀತಿಯನ್ನು ಮುಂದೆ ಅವಳ ಮಗನಾಗುವ ಗುಹನೂ ಕಸಿದುಕೊಳ್ಳಲಾಗಲಿಲ್ಲ ಎಂದಿದೆ. ಕಣ್ವರ ದೊಡ್ಡತನ ತಿಳಿದುಬರುವುದು ಅವರು ತಮ್ಮ ಅನುಪಸ್ಥಿತಿಯಲ್ಲಿ ಮಗಳು ಕೈಗೊಂಡ ಮದುವೆಯ ನಿರ್ಧಾರವನ್ನು ಒಪ್ಪಿಕೊಂಡಿದ್ದರಲ್ಲಿ. (ಹೋಮದ) ಹೊಗೆ ಕವಿದು ಯಜಮಾನನ ಕಣ್ಣು ಮುಚ್ಚಿದ್ದರೂ ಆಹುತಿಯು ಅಗ್ನಿಯಲ್ಲಿಯೇ ಬಿದ್ದಂತಾಯಿತು ಎಂದುಕೊಂಡು ಅವಳನ್ನು ಅಭಿನಂದಿಸುತ್ತಾರೆ. ದುಷ್ಯಂತನ ಮಗುವಿಗೆ ತಾಯಿಯಾಗಲಿರುವ ವಿಷಯವನ್ನು ಅರಿತು ಕೂಡಲೆ ಅವಳನ್ನು ಗಂಡನ ಮನೆಗೆ ಕಳಿಸುವ ಸಿದ್ಧತೆ ಮಾಡುತ್ತಾರೆ. ಮಗಳ ಬಗ್ಗೆ ಮಿತಿ ಮೀರಿದ ವಾತ್ಸಲ್ಯದಿಂದ ಕಳಿಸಿಕೊಡುವುದು ಕಷ್ಟವಾದರೂ ಕರ್ತವ್ಯಪ್ರಜ್ಞೆ ಎಚ್ಚರಿಸುತ್ತದೆ. ಅವರ ಹೃದಯ ಉತ್ಕಂಟತೆಯಿಂದ ಕೂಡಿ, ಕಣ್ಣೀರಿನಿಂದ ಗಂಟಲು ತುಂಬಿ ಬಂದು, ಕಣ್ಣು ಮಂಜಾಗಿ ಋಷಿಗಳಾದ ತಮಗೇ ಮಗಳ ವಿಯೋಗದ ದುಃಖವನ್ನು ಸಹಿಸಿಕೊಳ್ಳುವುದು ಇಷ್ಟು ಕಷ್ಟವಾದರೆ ಇನ್ನು ಗೃಹಸ್ಥರ ಪಾಡೇನು ಎಂದು ಪರಿತಪಿಸುತ್ತಾರೆ. ನಾಟಕದ 4ನೆಯ ಅಂಕದಲ್ಲಿ ಬರುವ ಶಕುಂತಲೆಯ ಬೀಳ್ಕೊಡುಗೆಯು ಇಡೀ ಪಿತೃಪ್ರಧಾನ ವ್ಯವಸ್ಥೆಯ ನಂಬಿಕೆಗಳನ್ನೇ ಅಲುಗಾಡಿಸುತ್ತದೆ. ಪುತ್ರಸಂತಾನದ ಆಕಾಂಕ್ಷೆಯಲ್ಲಿ ಮಗಳಂದಿರನ್ನು ಕಡೆಗಣಿಸಿದ್ದವರಿಗೆ ಇದು ಒಂದು ಹೊಸ ದೃಷ್ಟಿಕೋನವನ್ನು ತೆರೆದಿಡುತ್ತದೆ. ಶಾಕುಂತಲದ ನಾಲ್ಕನೆಯ ಅಂಕಕ್ಕೆ ಇರುವ ಪ್ರತಿಷ್ಠೆಗೆ ಇದೂ ಒಂದು ಕಾರಣವೆನ್ನಬಹುದು. ಶಕುಂತಲೆಯ ಬೀಳ್ಕೊಡುಗೆಯು ಸ್ತ್ರೀ ಕೇಂದ್ರಿತ ಚಿಂತನೆಗೆ ಒಂದು ವಿಶಿಷ್ಟ ಉದಾಹರಣೆಯಾಗಿ ನಿಲ್ಲುತ್ತದೆ. ಇಂತಹ ಒಂದು ಕಾರ್ಯವನ್ನು ಕಾಳಿದಾಸನಂತಹ ಮಹಾಕವಿಯಲ್ಲದೆ ಮತ್ಯಾರು ಮಾಡಲು ಸಾಧ್ಯ? ಇದರಂತೆಯೇ ಮಗಳಂದಿರ ಜನ್ಮದಿಂದ ತಂದೆ ತಾಯಿಯರು ಬಹಳಷ್ಟು ಸಂತೋಷಪಡುವ ಕೆಲವು ಸಂದರ್ಭಗಳು ಸಂಸ್ಕೃತ ಸಾಹಿತ್ಯದಲ್ಲಿ ಇವೆ. ಕಾಳಿದಾಸನ ಮಹಾಕಾವ್ಯವಾದ ಕುಮಾರಸಂಭವ ಮತ್ತು ಶಿವಲೀಲಾರ್ಣವ ಇದಕ್ಕೆ ಉದಾಹರಣೆಗಳು. ಕುಮಾರಸಂಭವದಲ್ಲ್ಲಿ ತನ್ನ ತಂದೆ ಮಾಡಿದ ಅವಮಾನವನ್ನು ಸಹಿಸಲಾರದೆ ದೇಹವನ್ನು ತ್ಯಜಿಸಿದ ಶಿವನ ಹೆಂಡತಿಯಾದ ಉಮೆಯು ಮತ್ತೆ ಹಿಮವಂತನ ಮಗಳಾಗಿ ಹುಟ್ಟುತ್ತಾಳೆ(1.21) ಈ ಮಗುವಿನ ಜನ್ಮದಿಂದ ಹಿಮವಂತ-ಮೇನೆಯರು ಅತ್ಯಂತ ಹರ್ಷಿತರಾದರು ಮತ್ತು ತಮ್ಮ ವಂಶ ಪಾವನವಾಯಿತೆಂದುಕೊಂಡರು. ಶಿವಲೀಲಾರ್ಣವದಲ್ಲಂತೂ ಪಾರ್ವತಿಯನ್ನು ಮಗಳಾಗಿ ಪಡೆಯಲು ಮಲಯಧ್ವಜ ಯಜ್ಞವೊಂದನ್ನು ಮಾಡುತ್ತಾನೆ. ಹೋಮಕುಂಡದ ಜ್ವಾಲೆಯಿಂದಲೇ ಹುಟ್ಟಿದ ಕನ್ಯೆ ತಟಾಕಾ ಈ ಎರಡೂ ಸಂದರ್ಭಗಳಲ್ಲಿ ಹೆಣ್ಣು ಮಗುವಿನ ಜನನದ ವೈಭವೀಕರಣವನ್ನು ಕಾಣಬಹುದು. ಇವರಿಬ್ಬರೂ ದೈವೀ ಶಕ್ತಿಯ ಪ್ರತೀಕಗಳಾಗಿರುವ ಕಾರಣವಿರಬಹುದು ಅಥವಾ ಒಂದು ಸಾಮಾಜಿಕ ಬದಲಾವಣೆಯ ಸೂಚನೆಯೂ ಇರಬಹುದು. ಈ ಎರಡೂ ಕಾವ್ಯಗಳು ಪೌರಾಣಿಕವಾದ ವಸ್ತುವನ್ನು ಆಧರಿಸಿದವು. ಈ ಎರಡೂ ಪಾತ್ರಗಳ ಬೆಳವಣಿಗೆಯ ಉದ್ದೇಶವೂ ಬಹಳ ಭಿನ್ನವಾಗಿದ್ದು ಲೋಕೋತ್ತರವಾದ ಗುರಿಯನ್ನು ಹೊಂದಿರುತ್ತವೆ. ಕುಮಾರಸಂಭವದಲ್ಲಿ ಪಾರ್ವತಿಯು ಕಠಿಣಕರವಾದ ಪಂಚಾಗ್ನಿ ತಪಸ್ಸನ್ನು ಆಚರಿಸಿ ಶಿವನನ್ನು ಪಡೆದು ಜಗನ್ಮಾತೆಯೆನಿಸಿಕೊಂಡರೆ, ಮೀನಾಕ್ಷೀ-ಸುಂದರೇಶ್ವರರ ಕಥೆಯನ್ನಾಶ್ರಯಿಸಿದ ಶಿವಲೀಲಾರ್ಣವದಲ್ಲಿ ತಟಾಕೆಯು ಪಟ್ಟಾಭಿಷಿಕ್ತಳಾಗಿ ದಿಗ್ವಿಜಯವನ್ನು ಸಾಧಿಸಿ ಶಿವನನ್ನು ಮದುವೆಯಾಗುತ್ತಾಳೆ. ಈ ಉದ್ದೇಶಗಳು ಏನೇ ಇರಲಿ ಕವಿಗಳು ಇದರ ಮೂಲಕ ಸ್ತ್ರೀಯರನ್ನು ಒಂದು ವಿಭಿನ್ನವಾದ ದೃಷ್ಟಿಕೋನದಿಂದ ಚಿತ್ರಿಸಬಹುದಾದ ಸಾಧ್ಯತೆಯನ್ನು ತೋರಿಸಿದ್ದಾರೆ ಎಂಬುದು ಮುಖ್ಯ. ಅಲ್ಲದೆ ಸಂಸ್ಕೃತ ಸಾಹಿತ್ಯದಲ್ಲಿ ಸಾಮಾನ್ಯವಾಗಿ ವರ್ಣಿಸಲಾಗಿರುವ ರಾಜಮನೆತನಗಳಲ್ಲಿ ಮಗಳಂದಿರ ಬಗ್ಗೆ ಯಾವುದೇ ವಿಷಾದವಿಲ್ಲ. ಸೀತೆ, ಸಾವಿತ್ರಿ, ದಮಯಂತಿ, ದ್ರೌಪದಿ, ವಾಸವದತ್ತೆ ಮುಂತಾದವರೆಲ್ಲರೂ ತಂದೆತಾಯಿಯರ ಮುದ್ದಿನ ಮಕ್ಕಳೇ. ಇವರ ಲಾಲನೆ, ಪಾಲನೆ, ಮದುವೆ ಯಾವ ವಿಷಯದಲ್ಲಿಯೂ ಕೊರತೆ ಕಂಡುಬರುವುದಿಲ್ಲ. ವಿದ್ಯಾಭ್ಯಾಸ/ಬೆಳವಣಿಗೆ : ವಿದ್ಯಾಭ್ಯಾಸ ಎಂಬುದು ಯಾವುದೇ ರೀತಿಯ ಶಿಕ್ಷಣಕ್ಕೆ ಅನ್ವಯಿಸುತ್ತದೆ. ವರ್ಣಾಶ್ರಮ ಧರ್ಮಗಳ ವ್ಯವಸ್ಥೆಯೇ ಪ್ರಧಾನವಾಗಿದ್ದ ಈ ದೇಶದಲ್ಲಿ ಪ್ರತಿಯೊಂದು ವರ್ಣದವರಿಗೂ ಅವರವರ ವೃತ್ತಿಧರ್ಮವನ್ನನುಸರಿಸಿ ಶಿಕ್ಷಣವನ್ನು ನಿಗದಿಪಡಿಸಲಾಗಿತ್ತು. ಬ್ರಾಹ್ಮಣರಿಗೆ ವೇದಾಧ್ಯಯನ, ಕ್ಷತ್ರಿಯರಿಗೆ ರಾಜನೀತಿ, ವಾಣಿಜ್ಯ ಹಾಗೂ ಶಸ್ತ್ರಾಸ್ತ್ರ ಪ್ರಯೋಗದ ಶಿಕ್ಷಣ, ವೈಶ್ಯ ಮತ್ತು ಶೂದ್ರರಿಗೆ ಅವರವರ ವೃತ್ತಿಗಳಿಗನುಸಾರವಾಗಿ ಶಿಕ್ಷಣ ನಿಗದಿತವಾಗಿತ್ತು. ಆದರೆ ಸ್ತ್ರೀಯರ ಶಿಕ್ಷಣದ ಬಗ್ಗೆ ಏನನ್ನೂ ಹೇಳಿಲ್ಲ ಅವರಿಗೂ ಅವರ ಪಾತ್ರಗಳಿಗನುಸಾರವಾಗಿ ಶಿಕ್ಷಣ ಎಂಬುದು ಸ್ವಯಂವೇದ್ಯ. ವೇದ ಸಾಹಿತ್ಯದಲ್ಲಿ ಗಾರ್ಗಿ, ವಾಚಕ್ನವಿ, ಸುಲಭಾ, ಮೈತ್ರೇಯಿ, ಅಪಲಾ, ವಿಶ್ವಾವರಾ, ಘೋಷಾ ಮೊದಲಾದ ವಿದ್ಯಾವಂತರಾದ ಸ್ತ್ರೀಯರ ಬಗ್ಗೆ ಹೇಳಲಾಗಿದೆ. ಇವರಲ್ಲಿ ಕೆಲವರು ಬ್ರಹ್ಮವಾದಿನಿಯರೆಂದು ಪರಿಗಣಿಸಲ್ಪಟ್ಟಿದ್ದಾರೆ. ಧರ್ಮಶಾಸ್ತ್ರಗಳಲ್ಲೂ ಸಧ್ಯೋವಧು ಮತ್ತು ಬ್ರಹ್ಮವಾದಿನಿ ಎಂಬ ಎರಡು ವಿಧವಾದ ಸ್ತ್ರೀಯರ ಬಗ್ಗೆ ಉಲ್ಲೇಖವಿದೆ. ವಿದ್ಯಾಭ್ಯಾಸ ಮುಗಿಸಿದ ಕೂಡಲೆ ಮದುವೆಯಾಗುವವರು ಸಧ್ಯೋವಧುಗಳು ಹಾಗೆಯೇ ಉಳಿದು ತಾತ್ತ್ವಿಕ ಜಿಜ್ಞಾಸೆಯನ್ನು ಮುಂದುವರಿಸುವವರು (ವೇದ ಕಾಲದ ಗಾರ್ಗಿಯಂತೆ) ಬ್ರಹ್ಮವಾದಿನಿಯರು. ಕಾವ್ಯಗಳಲ್ಲಿ ಈ ರೀತಿಯ ವಿಂಗಡಣೆಯನ್ನು ಗುರುತಿಸಿಕೊಳ್ಳಬೇಕಾಗುತ್ತದೆ. ಉದಾಹರಣೆಗೆ, ಮಾಲವಿಕಾಗ್ನಿಮಿತ್ರದಲ್ಲಿ ಬರುವ ಪಂಡಿತ ಕೌಶಿಕಿ, ರತ್ನಾವಳಿಯಲ್ಲಿ ಕಾಣುವ ಸಿದ್ಧಿಮತಿ, ಶಾಕುಂತಲದ ಗೌತಮಿ ಇವರುಗಳು ಮದುವೆಯಾಗದೆ ಉಳಿದ ಬ್ರಹ್ಮಚಾರಿಣಿಯರು ಅಥವಾ ಸಂನ್ಯಾಸಿನಿಯರು. ಕುಮಾರಸಂಭವದ ಪಾರ್ವತಿ ಮತ್ತು ಕಾದಂಬರಿಯಲ್ಲಿ ಬರುವ ಮಹಾಶ್ವೇತೆಯರೂ ತಪಸ್ಸನ್ನು ಆಚರಿಸಿದವರು. ಉಳಿದಂತೆ ಎಲ್ಲರೂ ಸದ್ಯೋವಧುಗಳೇ. ಏಕೆಂದರೆ ಆ ಕಾಲದ ಸಮಾಜದಲ್ಲಿ ಹೆಣ್ಣಿಗೆ ಮದುವೆಯೇ ಪ್ರಮುಖ ಗುರಿ. ಈ ಪಾತ್ರಕ್ಕೆ ಅವಳನ್ನು ಸಿದ್ಧಗೊಳಿಸುವುದೇ ಅವಳ ಶಿಕ್ಷಣದ ಉದ್ದೇಶ. ಆದ್ದರಿಂದ ಸಾಮಾನ್ಯ ವರ್ಗದ ಹೆಣ್ಣಿನ ಶಿಕ್ಷಣ ಮನೆಯಲ್ಲಿಯೇ ಆಗುತ್ತಿತ್ತು. ರಾಜಮನೆತನದ ಸ್ತ್ರೀಯರಿಗೆ ಹೆಚ್ಚಿನ ಶಿಕ್ಷಣದ ಅವಕಾಶಗಳಿರುತ್ತಿದ್ದವು. ಆದರೆ ಪುರುಷರಂತೆ ಗುರುಕುಲಕ್ಕೆ ಹೋಗಿ ಕಲಿತವರು ಕಡಿಮೆ. ಮಹಾಭಾರತದಲ್ಲಿ ದೇವಯಾನಿ ತನ್ನ ತಂದೆಯ ಗುರುಕುಲದಲ್ಲಿ ವಿದ್ಯಾಭ್ಯಾಸ ಮಾಡಿದ ಪ್ರಸಕ್ತಿ ಇದೆ. ಇದನ್ನು ಬಿಟ್ಟರೆ ಭವಭೂತಿ ಬರೆದ ಮಾಲತಿ ಮಾಧವ ಎಂಬ ಪ್ರಕರಣದಲ್ಲಿ ಕಾಮಂಧಕಿ ಮತ್ತು ಸೌಧಾಮಿನಿ ಎಂಬ ಸ್ತ್ರೀಯರಿಬ್ಬರು, ದೇವರಾತ ಮತ್ತು ಭೂರಿಶ್ರವರ ಜೊತೆ ಗುರುಕುಲದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದುದರ ಬಗ್ಗೆ ಉಲ್ಲೇಖವಿದೆ (ಪು.14) ಇದು ಗುರುಕುಲಗಳಲ್ಲಿ ಸ್ತ್ರೀಯರಿಗೂ ಅವಕಾಶವಿದ್ದ ಒಂದು ಸಂದರ್ಭವನ್ನು ನಮ್ಮ ಮುಂದಿಡುತ್ತದೆ. ಸಾಮಾನ್ಯವಾಗಿ ಅವರಿಗೆ ಕಲಿಸಿಕೊಡುತ್ತಿದ್ದುದು ಧರ್ಮಶಾಸ್ತ್ರ, ಇತಿಹಾಸ, ಪುರಾಣಗಳು,ಕಾವ್ಯಗಳು, ಸಂಗೀತ, ನೃತ್ಯ, ವೀಣೆ, ಮುಂತಾದ ವಾದ್ಯಗಳು, ಚಿತ್ರಕಲೆ, ಇತ್ಯಾದಿ. ಇದಕ್ಕೆ ಮಾಲವಿಕಾಗ್ನಿಮಿತ್ರದಲ್ಲಿ ಮಾಲವಿಕೆ ಮತ್ತು ರಾಣಿ ಇರಾವತಿಯರ ನೃತ್ಯ ಶಿಕ್ಷಣ, ಸ್ವಪ್ನವಾಸವದತ್ತದಲ್ಲಿ ವಾಸವದತ್ತೆ ಉದಯನ ವಾಸವದತ್ತೆಗೆ ವೀಣೆ ನುಡಿಸುವುದನ್ನು ಕಲಿಸುವುದು, ನಾಗಾನಂದದಲ್ಲಿ ಮಲಯವತಿ ದೇವಿ ಗೌರಿಯ ಎದುರಲ್ಲಿ ವೀಣೆ ನುಡಿಸುವುದು, ಬಾಣನ ಕಾದಂಬರಿಯಲ್ಲಿ ಮಹಾಶ್ವೇತೆಯ ವೀಣೆಯ ಸ್ವರವನ್ನನುಸರಿಸಿ ಚಂದ್ರಾಪೀಡನ ಆಗಮನ ಮತ್ತು ಹರ್ಷಚರಿತೆಯಲ್ಲಿ ರಾಜ್ಯಶ್ರೀಯು ನೃತ್ಯಗೀತಾದಿ ಕಲೆಗಳನ್ನು ಕಲಿತದ್ದರ ಬಗ್ಗೆ ಇರುವ ಮಾತು ಹೀಗೆ ಹಲವಾರು ಉದಾಹರಣೆಗಳಿವೆ. ಮಹಾಭಾರತದ ದ್ರೌಪದಿ, ದಮಯಂತಿ,ಮೊದಲಾದವರು ಧರ್ಮಸೂಕ್ಷ್ಮಗಳನ್ನು ತಿಳಿದವರೆಂದು ಪ್ರಸಿದ್ಧರಾಗಿದ್ದಾರೆ. ರಾಜಮನೆತನಗಳಲ್ಲಿ ಈ ರೀತಿ ಮೇಧಾವಿಗಳೆನಿಸಿಕೊಂಡ ಸುಂದರ ಕನ್ಯೆಯರನ್ನು ಮದುವೆಯಾಗಲು ಬಹಳ ಪೈಪೋಟಿ ಇರುತ್ತಿತ್ತು. ಈ ಕಾರಣದಿಂದಲೇ ಸೀತೆ, ದ್ರೌಪದಿ, ದಮಯಂತಿ, ರುಕ್ಮಿಣಿ ಮೊದಲಾದ ರಾಜಕುಮಾರಿಯರಿಗೆ ಸ್ವಯಂವರವನ್ನು ಏರ್ಪಡಿಸಲಾಗಿತ್ತು. ಆದರೆ ಎಲ್ಲಿಯೂ ಹೆಣ್ಣುಮಕ್ಕಳಿಗೆ ವೇದಾಧ್ಯಯನ, ಶಾಸ್ತ್ರಗ್ರಂಥಗಳ ಅಧ್ಯಯನ ಮಾಡಿಸಿದ್ದರ ಬಗ್ಗೆ ಮಾಹಿತಿ ಇಲ್ಲ. ಸಂಸ್ಕೃತ ಭಾಷೆಯಲ್ಲಿ ಮಾತನಾಡುವ ವಿಷಯದಲ್ಲಿ ಸ್ತ್ರೀಯರಿಗೆ ಸಂಪೂರ್ಣ ನಿರ್ಬಂಧವಿದ್ದ ಕಾಲವದು. ಇದು ಸಂಸ್ಕೃತ ನಾಟಕಗಳಲ್ಲಿ ಸ್ತ್ರೀಯರು ಕೇವಲ ಪ್ರಾಕೃತವನ್ನು ಮಾತ್ರ ಮಾತನಾಡುವುದನ್ನು ನೋಡಿದಾಗ ತಿಳಿದುಬರುತ್ತದೆ. ಬೇರೆಯವರು ಮಾತನಾಡುವ ಸಂಸ್ಕೃತವನ್ನು ಅರ್ಥ ಮಾಡಿಕೊಳ್ಳಬಲ್ಲರಾದರೂ ಇವರು ಪ್ರಾಕೃತದಲ್ಲಿ ಉತ್ತರಿಸುತ್ತಾರೆ. ಹೀಗಿರುವಾಗ ಸಂಸ್ಕೃತ ಗ್ರಂಥಗಳ ಅಧ್ಯಯನದ ಅವಕಾಶ ಇವರಿಗೆ ಇರಬಹುದಾಗಿದ್ದ ಸಾಧ್ಯತೆಗಳು ಬಹಳ ಕಡಿಮೆ. ಕೇವಲ ಇತಿಹಾಸದಂತಹ ಗ್ರಂಥಗಳನ್ನು ಬೇರೆಯವರಿಂದ ಓದಿಸಿ ತಿಳಿದುಕೊಳ್ಳುತ್ತಿದ್ದರು ಎಂಬುದಕ್ಕೆ ಆಧಾರವಿದೆ. (ಕಾದಂಬರಿ ಕಥಾಮುಖ). ಅದೇ ರೀತಿ ಶಾಕುಂತಲದಲ್ಲೂ ಶಕುಂತಲೆಯ ಸಖಿಯರು ತಾವು ಕೇಳಿದ ಇತಿಹಾಸ ಪುರಾಣಗಳಲ್ಲಿ ಬರುವ ವರ್ಣನೆಗಳ ಮೂಲಕ ತಮ್ಮ ಸುತ್ತಲಿನ ಸಂದರ್ಭವನ್ನು ಅರ್ಥೈಸಿಕೊಳ್ಳಲು ಪ್ರಯತ್ನಿಸುತ್ತಾರೆ. ಹಾಗೆಯೇ ಚಿತ್ರಕಲೆಯಲ್ಲಿ ತಮಗಿದ್ದ ಪರಿಶ್ರಮವನ್ನಾಧರಿಸಿ ವನದೇವತೆಗಳು ಕೊಟ್ಟ ಆಭರಣಗಳನ್ನು ಸೂಕ್ತವಾಗಿ ಬಳಸಿ ಶಕುಂತಲೆಯನ್ನು ಅಲಂಕರಿಸುತ್ತಾರೆ. ಋಷ್ಯಾಶ್ರಮದಲ್ಲಿದ್ದ ಶಕುಂತಲೆ ದುಷ್ಯಂತನಿಗೆ ಪ್ರೇಮ ಪತ್ರ ಬರೆಯುವಷ್ಟು, ಅದರಲ್ಲೂ ಕಾವ್ಯಮಯ ರಚನೆ ಮಾಡುವಷ್ಟು, ಅಕ್ಷರಸ್ಥಳು (3ನೇ ಅಂಕ) ಕೆಲವೊಂದು ಸಂದರ್ಭಗಳಲ್ಲಿ ಗಂಡು ಸಂತತಿಯಿಲ್ಲದ ರಾಜಮನೆತನಗಳಲ್ಲಿ ಹೆಣ್ಣು ಮಕ್ಕಳಿಗೆ ಶಸ್ತ್ರಾಭ್ಯಾಸ, ರಾಜನೀತಿಶಾಸ್ತ್ರವನ್ನೂ ಕಲಿಸಲಾಗುತ್ತಿತ್ತು ಎಂಬುದಕ್ಕೆ ಮಹಾಭಾರತದಲ್ಲಿ ಚಿತ್ರಾಂಗದೆ, ಉಲೂಪಿ ಮೊದಲಾದವರ ಉದಾಹರಣೆಗಳಿವೆ. ಇವನ್ನು ಹೊರತುಪಡಿಸಿದರೆ ನೀಲಕಂಟ ದೀಕ್ಷಿತನ ಶಿವಲೀಲಾರ್ಣವದಲ್ಲಿ ಮಲಯಧ್ವಜನಿಗೆ ಒಬ್ಬಳೇ ಮಗಳಾಗಿ ಹುಟ್ಟಿದ ತಟಾಕೆ ಬೇರೆಲ್ಲ ವಿದ್ಯೆಗಳನ್ನು ಕಲಿಯುವುದರ ಜೊತೆಗೆ ವಿವಿಧ ಶಸ್ತ್ರಗಳ ಪ್ರಯೋಗವನ್ನೂ, ಯುದ್ಧಕೌಶಲ್ಯಗಳನ್ನೂ ಕಲಿಯುತ್ತಾಳೆ. (7.27) ಧೂಳೆಬ್ಬಿಸುತ್ತಾ ಇವಳು ಕುದುರೆಯ ಮೇಲೆ ಸಾಗುವ ವರ್ಣನೆ (7.29), ಜಡೆಯನ್ನು ಮೇಲಕ್ಕೆತ್ತಿ ಕಟ್ಟಿ ಶಿರಸ್ತ್ರಾಣಗಳನ್ನು ಧರಿಸಿ, ಖಡ್ಗವನ್ನು ಹಿಡಿದ ಇವಳ ಭಂಗಿಯ ವರ್ಣನೆಗಳು (7. 30 ) ಇಲ್ಲಿವೆ. ಅದೇ ರೀತಿ ಕುಮಾರಸಂಭವದಲ್ಲಿಯೂ ಅವಳು ಹಿಂದೆ ಕಲಿತಿದ್ದ ಎಲ್ಲ ವಿದ್ಯೆಗಳೂ ತಾವಾಗಿಯೇ ಬಂದು ಅವಳಲ್ಲಿ ಸೇರಿದವು ಎಂಬ ಮಾತು ಬರುತ್ತದೆ. ಆದರೆ ಈ ಎರಡು ಉದಾಹರಣೆಗಳು ಬಹಳ ವಿಭಿನ್ನವಾದ ಹಿನ್ನೆಲೆಯನ್ನು ಹೊಂದಿದವು ಎಂಬುದನ್ನು ಗಮನಿಸಬೇಕಾಗುತ್ತದೆ. ಏಕೆಂದರೆ ಇವರಿಬ್ಬರೂ ಆದಿಶಕ್ತಿಯ ಅವತಾರಗಳು. ಆದ್ದರಿಂದ ಸಾಮಾನ್ಯ ಹೆಣ್ಣುಗಳಿಗೆ ಅನ್ವಯಿಸುವ ಯಾವ ನಿಯಮಗಳೂ ಇವರಿಗೆ ಅನ್ವಯಿಸುವುದಿಲ್ಲ. ಪುರಾಣವನ್ನಾಧರಿಸಿದ ಕಥೆಗಳನ್ನುಳ್ಳ ಕಾರಣ ಈ ಪಾತ್ರಗಳನ್ನು ನೋಡುವ ದೃಷ್ಟಿಕೋನವೇ ಬಹಳ ಭಿನ್ನವಾಗಿದೆ. ಆದರೆ ಸ್ತ್ರೀಯರ ಕಲಿಕಾ ಸಾಮಥ್ರ್ಯದ ಬಗ್ಗೆ, ಕವಿತ್ವ ಶಕ್ತಿಯ ಬಗ್ಗೆ ಅನೇಕ ಅಭಿಪ್ರಾಯಗಳು ಅಲ್ಲಲ್ಲಿ ವ್ಯಕ್ತವಾಗಿರುವುದು ಕಂಡುಬರುತ್ತದೆ. ಉದಾಹರಣೆಗೆ, ಮಾಲವಿಕಾಗ್ನಿಮಿತ್ರದಲ್ಲಿ ಮಾಲವಿಕೆಯ ನಾಟ್ಯಾಚಾರ್ಯರು ನೃತ್ಯ ಪ್ರಯೋಗ ವಿಷಯವಾಗಿ ಮುಂದಿನದನ್ನು ಹೇಳಿಕೊಟ್ಟರೆ ಅವಳು ಅದನ್ನು ಇನ್ನೂ ವಿಶೇಷವಾಗಿ ಮಾಡುತ್ತಾ ನನಗೇ ಪ್ರತ್ಯುಪದೇಶ ಮಾಡುವಂತೆ ಕಾಣುತ್ತದೆ ಎಂದು ಪ್ರಶಂಸಿಸುತ್ತಾನೆ. (ಅಂಕ 1. ಶ್ಲೋಕ 5). ರಾಜಶೇಖರನು ತನ್ನ ಕಾವ್ಯಮೀಮಾಂಸೆಯಲ್ಲಿ ಪುರುಷನಂತೆ ಹೆಣ್ಣೂ ಕವಿಯಾಗಬಲ್ಲಳು. ಸಂಸ್ಕಾರವು ಆತ್ಮಕ್ಕಾದ್ದರಿಂದ ಸ್ತ್ರೀ ಅಥವಾ ಪುರುಷನೆಂಬ ಭೇದವನ್ನಪೇಕ್ಷಿಸುವುದಿಲ್ಲ. ಶಾಸ್ತ್ರಪ್ರವೀಣರೂ, ಕವಿಗಳೂ ಆದ ಅನೇಕ ರಾಜಪುತ್ರಿಯರ, ಮಂತ್ರಿಪುತ್ರಿಯರ, ಗಣಿಕೆಯರ ಹಾಗೂ ಕೌತುಕೀಭಾಯರ್ೆಯರ ಬಗ್ಗೆ ಕೇಳಿದ್ದೇವೆ ಹಾಗೂ ನೋಡುತ್ತಲೂ ಇದ್ದೇವೆ (ಪು.53) ಎಂಬ ಮಾತನ್ನು ಹೇಳಿದ್ದಾನೆ. ಲಲಿತವಿಸ್ತರವೆಂಬ ಕಾವ್ಯದಲ್ಲಿ ಯಾವ ಕನ್ಯೆಯು ಗಾಥ, ಲೇಖಗಳನ್ನು ಬರೆಯಬಲ್ಲವಳಾಗಿರುತ್ತಾಳೊ ಚತುರಳಾರುತ್ತಾಳೊ ಅಂತಹವಳನ್ನು ವರಿಸಬೇಕೆಂದು ಸಿದ್ಧಾರ್ಥನು ಇಷ್ಟಪಡುತ್ತಾನೆ(ಪು-158) ಹಾಗೆಯೇ ಶೂದ್ರಕ ತನ್ನ ಮೃಚ್ಛಕಟಿಕ ನಾಟಕದಲ್ಲಿ ಸ್ತ್ರೀಯರು ಪ್ರಕೃತಿ ಸಹಜವಾಗಿಯೇ ಪಂಡಿತರಾಗಿರುತ್ತಾರೆ, ಪುರುಷರು ಶಾಸ್ತ್ರಾಧ್ಯಯನದಿಂದ ಪಂಡಿತರಾಗುತ್ತಾರೆ (4.29) ಎಂಬ ಮಾತನ್ನು ಹೇಳುತ್ತಾನೆ. ಶಾಕುಂತಲದಲ್ಲಿ ದುಷ್ಯಂತನು ಸ್ತ್ರೀಯರ ಅಶಿಕ್ಷಿತ ಪಟುತ್ವದ ಬಗ್ಗೆ ವ್ಯಂಗ್ಯವಾದ ಮಾತನ್ನಾಡುತ್ತಾನೆ. (4ನೆಯ ಅಂಕ). ಅದರೆ ಈ ಎರಡೂ ಮಾತುಗಳು ಸ್ತ್ರೀಯರಿಗೆ ವ್ಯವಸ್ಥಿತ ಶಿಕ್ಷಣದ ಅವಕಾಶವಿಲ್ಲದಿರುವುದನ್ನು ಮತ್ತು ಹಾಗಿದ್ದರೂ ಅವರಿಗೆ ಲೋಕವ್ಯವಹಾರದ ಅರಿವು ಇರುವುದನ್ನು ಸಮರ್ಥಿಸುತ್ತವೆ. Bibliography: 1. A History of Sanskrit Literature, Vol-1, Ed: S N Dasgupta, Pub: University of Calcutta, 1962. 2. ‘A Cohesive Role of Sanskritisation and other Essays’, Author- M N Srinivas, Oxford University Press, New Delhi, 1989. 3. History of Dharmasastra, Ed: P V Kane, Pub: Bandarkar Oriental Research Institute, Pune, 1941. 4. Kadambari of Banabhatta, Ed: M R Kale, Pub: Motilal banarasidas, Delhi, 1968. 5. Raghuvamsa of Kalidasa, Nirnay Sagar Mudranalaya, Mumbai, 1948. 6. Harshacharita of Banabatta, Ed: Shuranad Kunjan Pillai, 1933 7. Abhijnana Shakuntala of Kalidasa, Ed: M R kale, Pub: Motilal Banarasidas, Delhi, 1977. 8. Kumarasambhava of Kalidasa, Ed:Pradhyumna Pande, Pub: Chawkamba, Varanasi, 1977. 9. Shivalilarnava of Neelakanta Dikshita, Sri Vani Vilas Press, Srirangam,1922. 10. Malatimadhava of Bhavabhuti, Ed: M R Kale, Pub: Motilal Banarasidas, Delhi, 1983. 11. Malavikagnimitra of kalidasa, Ed: C R devadar and V N Mandlik, Pub: Motilal Banarasidas, Delhi, 1966 12. Mrichchakatika of Shudraka, Ed: M R Kale, Pub: Motilal Banarasidas, Delhi, 1972. 13. Indian Women Through the ages, Author: P Thomas, Pub: Asia Publishing House, Bombay, 1964. ಡಾ. ಆರ್ ಶೋಭಾ ಸಂಸ್ಕೃತ ಸಹ ಪ್ರಾಧ್ಯಾಪಕರು, ಮಹಾರಾಣಿ ಮಹಿಳಾ ಕಲಾ ಕಾಲೇಜು, ಶೆಷಾದ್ರಿ ರಸ್ತೆ, ಬೆಂಗಳೂರು-1
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
|
|
|
|
SITE MAP
SitePOSH |
NIRATHANKAOUR OTHER WEBSITESSubscribe |
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |