Niruta Publications
  • Home
  • About Us
    • Ramesha's Profile
  • List Your Book for Free
  • Publication With Us
    • Inviting Authors
    • Promote Your Books
  • Niruta Book Club
  • Our Services
  • Leaders Talk
  • HR Blog
    • Inviting Articles
  • Books / Online Store
  • Media Mentions
    • Photos
  • Join Our Online Groups
  • Contact Us
  • Home
  • About Us
    • Ramesha's Profile
  • List Your Book for Free
  • Publication With Us
    • Inviting Authors
    • Promote Your Books
  • Niruta Book Club
  • Our Services
  • Leaders Talk
  • HR Blog
    • Inviting Articles
  • Books / Online Store
  • Media Mentions
    • Photos
  • Join Our Online Groups
  • Contact Us
Niruta Publications

ತುಮಕೂರು ಜಿಲ್ಲೆಯ ಕೈಗಾರಿಕೆಗಳಲ್ಲಿನ ನಿಗಮೀಕೃತ ಸಾಮಾಜಿಕ ಜವಾಬ್ದಾರಿಗಳ ಮೇಲಿನ ಒಂದು ಅಧ್ಯಯನ

7/18/2017

0 Comments

 
ಪೀಠಿಕೆ
ನಾವು ಭಾರತದ ಇತಿಹಾಸ ಪುಟಗಳನ್ನು ಒಮ್ಮೆ ಪರಾಮರ್ಶಿಸಿದರೆ, ನಮಗೆ ಭಾರತ ರಾಷ್ಟ್ರ ಬೆಳೆದು ಬಂದಂತಹ ಅನೇಕ ಹಂತಗಳು ನಮ್ಮ ಕಣ್ಣು ಮುಂದೆ ಹಾದು ಹೋಗುತ್ತವೆ. ಭಾರತ ರಾಷ್ಟ್ರಕ್ಕೆ ಜಗತ್ತಿನಲ್ಲಿ ವಿಶೇಷವಾದ ಮನ್ನಣೆ ಇದೆ. ಇದಕ್ಕೆ ಪ್ರಮುಖವಾದ ಕಾರಣವೆಂದರೆ ನಮ್ಮ ರಾಷ್ಟ್ರ ಹೊಂದಿರುವ ಶ್ರೀಮಂತ  ಸಂಸ್ಕೃತಿ. ಭಾರತವು ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿರುವ ರಾಷ್ಟ್ರ. ಇದಕ್ಕೆ  ಪುಷ್ಟಿ ನೀಡುವಂತೆ ನಮ್ಮ ದೇಶದಲ್ಲಿ ಸರ್ವಧರ್ಮಗಳಿಗೂ (ಹಿಂದೂ, ಮುಸ್ಲಿಂ, ಕ್ರೈಸ್ತ, ಬೌದ್ಧ, ಜೈನ, ಪಾರ್ಸಿ, ಇತ್ಯಾದಿ) ಸಂವಿಧಾನಾತ್ಮಕವಾಗಿ ಮಾನ್ಯತೆ ಇರುವುದು.
ಇಷ್ಟೆಲ್ಲಾ ಇದ್ದಾಗ್ಯೂ ನಮ್ಮ ಭಾರತ ರಾಷ್ಟ್ರವನ್ನು ಹಿಂದಿನಿಂದ ಇಂದಿನವರೆಗೂ ನಾವು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ ಎಂದೇ ಸಂಬೋಧಿಸುತ್ತೇವೆ.

ಭಾರತ ವಿಶ್ವದ ಜನ ಸಂಖ್ಯೆಯಲ್ಲಿ ಎರಡನೆಯ ಅತಿದೊಡ್ಡ ರಾಷ್ಟ್ರ. ಆದರೆ ಇಲ್ಲಿ ನಾವು ಗಮನಿಸಬೇಕಾದ ಮತ್ತೊಂದು ಮಹತ್ತರವಾದ ವಿಷಯವೆಂದರೆ ನಮ್ಮ ನೆರೆಯ ರಾಷ್ಟ್ರ ಚೀನಾ ವಿಶ್ವದ ಜನಸಂಖ್ಯೆಯಲ್ಲಿ ಮೊದಲನೆಯ ಸಾಲಿನಲ್ಲಿ ನಿಲ್ಲುತ್ತದೆ. ಆದರೆ ಆ ರಾಷ್ಟ್ರವನ್ನು ಇಡೀ ವಿಶ್ವವೇ ಅಭಿವೃದ್ಧಿ ಹೊಂದಿರುವ ರಾಷ್ಟ್ರ ಎಂದು ಒಪ್ಪಿಕೊಳ್ಳುತ್ತದೆ. ಇದಕ್ಕೆ ಕಾರಣ ಅಲ್ಲಿರುವ ಮಾನವ ಸಂಪನ್ಮೂಲದ  ಸರಿಯಾದ ಸದ್ಬಳಕೆ ಮತ್ತು ಅಲ್ಲಿನ ರಾಜಕೀಯ ವ್ಯವಸ್ಥೆ (ಸಮತಾವಾದ).

ಭಾರತವು ಕೃಷಿ ಪ್ರಧಾನ ರಾಷ್ಟ್ರವಾಗಿದ್ದು, ರೈತರು ಭಾರತದ ಬೆನ್ನೆಲುಬಾಗಿದ್ದಾರೆ. ಆದ್ದರಿಂದಲೇ ಬ್ರಿಟಿಷರ ಸುದೀರ್ಘ 300 ವರ್ಷಗಳ ಆಳ್ವಿಕೆಯ ನಂತರ ಭಾರತವು ಸ್ವಾತಂತ್ರ್ಯವನ್ನು ಪಡೆದು, ಸ್ವಂತ ಸರ್ಕಾರ  ರಚನೆ ಮಾಡಿ ಆರ್ಥಿಕ ಅಭಿವೃದ್ಧಿಗಾಗಿ ಪಾಂಚವಾರ್ಷಿಕ ಯೋಜನೆಯನ್ನು ಅನುಷ್ಠಾನಕ್ಕೆ ತಂದು, ಮೊಟ್ಟಮೊದಲ ಪಾಂಚವಾರ್ಷಿಕ ಯೋಜನೆಯನ್ನು ಕೃಷಿ ಕ್ಷೇತ್ರಕ್ಕೆ ಮೀಸಲಿರಿಸಿತು. ಆದರೆ ಈ ವೇಳೆಗಾಗಲೇ ಫ್ರಾನ್ಸ್ ಹಾಗೂ ರಷ್ಯಾ ರಾಷ್ಟ್ರಗಳಲ್ಲಿ ಕೈಗಾರಿಕ ಕ್ರಾಂತಿಯ ಪ್ರಾಬಲ್ಯವು ಜಗತ್ತಿನ ಇತರೇ ರಾಷ್ಟ್ರಗಳ ಜೊತೆಗೆ ಭಾರತದ ಮೇಲೂ ಸಹ ಪ್ರಭಾವ ಬೀರಿತು. ಈ ವೇಳೆಗಾಗಲೇ ದೇಶದ ಅನೇಕ ಆರ್ಥಿಕ ಪರಿಣಿತರು ಕೈಗಾರಿಕೆಗಳ ಸ್ಥಾಪನೆಯ ಬಗೆಗೆ ಪ್ರಸ್ತಾವನೆ ಮಾಡುತ್ತಲೇ ಇದ್ದರು.

ಉದಾರೀಕರಣ, ಖಾಸಗೀಕರಣ ಹಾಗೂ ಜಾಗತೀಕರಣದಿಂದಾಗಿ ಭಾರತದ ಅಭಿವೃದ್ಧಿಯ ದಿಕ್ಕು ಬದಲಾಯಿತು. ಉದಾರೀಕರಣದಿಂದಾಗಿ ಅನೇಕ ಜಾಗತಿಕ ಕಂಪನಿಗಳು ದೇಶದಲ್ಲಿ ತಳ ಊರಲು ಪ್ರಾರಂಭಿಸಿದವು, ಖಾಸಗೀಕರಣದಿಂದಾಗಿ ಅಭಿವೃದ್ಧಿಯು ಚುರುಕುಗೊಂಡಿತು. ಜಾಗತೀಕರಣವು ವಾಣಿಜ್ಯೋದ್ಯಮ ವ್ಯಾಪ್ತಿಯನ್ನು ವಿಸ್ತರಿಸಿತು. ಇದರ ಪರಿಣಾಮವಾಗಿ ನಮ್ಮ ದೇಶದಲ್ಲಿ ಅನೇಕ ಕೈಗಾರಿಕೆಗಳು ಪ್ರಾರಂಭವಾದವು. ಇದಕ್ಕೆ ಪುಷ್ಟಿ ನೀಡುವಂತೆ ಸರ್ಕಾರವೂ ಕೈಗಾರಿಕೆಗಳ ಸ್ಥಾಪನೆಗೆ ವಿಶೇಷವಾದ ಸೌಲಭ್ಯ, ಸವಲತ್ತುಗಳನ್ನು ಒದಗಿಸಲು ಮುಂದಾಯಿತು. ಇದಕ್ಕೆ ಅನುಗುಣವೆಂಬಂತೆ ಸಕರ್ಾರವು ತನ್ನ  ದ್ವಿತೀಯ ಪಾಂಚವಾರ್ಷಿಕ ಯೋಜನೆಯನ್ನು ಕೈಗಾರಿಕಾ ಕ್ಷೇತ್ರಕ್ಕೆ ಮೀಸಲಿರಿಸಿತು.
 
ದ್ವಿತೀಯ ಪಾಂಚವಾರ್ಷಿಕ ಯೋಜನೆ (1956-61)
ದ್ವಿತೀಯ ಪಾಂಚವಾರ್ಷಿಕ ಯೋಜನೆಯು ಕೈಗಾರಿಕೆಗಳ ಸ್ಥಾಪನೆಗೆ ಅದರಲ್ಲೂ ವಿಶೇಷವಾಗಿ ಬೃಹತ್ ಕೈಗಾರಿಕೆಗಳಿಗೆ ಪ್ರಾಶಸ್ತ್ಯವನ್ನು ನೀಡಿತು. ಮೊದಲ ಪಾಂಚವಾರ್ಷಿಕ ಯೋಜನೆಯು ಮುಖ್ಯಾವಾಗಿ ತನ್ನ ಗಮನವನ್ನು ಕೃಷಿಗೆ ನೀಡಿತ್ತು, ಇದಕ್ಕೆ ಭಿನ್ನವಾಗಿ ದ್ವಿತೀಯ ಪಾಂಚವಾರ್ಷಿಕ ಯೋಜನೆಯಲ್ಲಿ, ನಿರ್ದಿಷ್ಟವಾಗಿ ಸಾರ್ವಜನಿಕ ವಲಯಗಳ ಅಭಿವೃದ್ಧಿಗಾಗಿ ಗೃಹ ಉಪಯೋಗಿ ವಸ್ತುಗಳ ಉತ್ಪಾದಕತೆಗೆ ಪ್ರೋತ್ಸಾಹವನ್ನು ನೀಡಲಾಯಿತು. ಈ ಯೋಜನೆಯು ಭಾರತದ ಸಂಖ್ಯಾಶಾಸ್ತ್ರಜ್ಞರಾದ ಶ್ರೀಯುತ ಪ್ರಶಾಂತಚಂದ್ರ ಮಹಾಲನೋಭಿ ರವರು 1953 ರಲ್ಲಿ ಅಭಿವೃದ್ಧಿ ಪಡಿಸಿದ ಆರ್ಥಿಕ ಅಭಿವೃದ್ಧಿ ಮಾದರಿ ಯನ್ನು ಅನುಸರಿಸಿದ್ದರಿಂದ ಮಹಾಲನೋಭಿ ಮಾದರಿ ಎಂದೇ ಹೆಸರಾಯಿತು. ಈ ಒಂದು ಯೋಜನೆಯು ದೀರ್ಘಾವಧಿಯ ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸುವ ಸಲುವಾಗಿ ಉತ್ಪಾದಕ ವಲಯಗಳ ನಡುವೆ ಹೂಡಿಕೆಯನ್ನು ನಿರ್ಧರಿಸುವ ಪ್ರಯತ್ನ ಮಾಡಿದೆ.

ಜಲವಿದ್ಯುಚ್ಚಕ್ತಿ ಯೋಜನೆ ಹಾಗೂ ಭಿಲಾಹಿ, ದುರ್ಗಾಪುರ್ ಮತ್ತು ರೂರ್ಕೇಲಾಗಳಲ್ಲಿ ಐದು ಉಕ್ಕು ಕಾರ್ಖಾನೆಗಳನ್ನು ಸ್ಥಾಪಿಸಲಾಯಿತು. ಕಲ್ಲಿದ್ದಲು ಉತ್ಪಾದನೆಯನ್ನು ಹೆಚ್ಚಿಸಲಾಯಿತು. ಭಾರತದ ಉತ್ತರ ಪಶ್ಚಿಮ ಭಾಗಗಳ ರೈಲ್ವೇ ಮಾರ್ಗಗಳನ್ನು ಹೆಚ್ಚಿಸಸಾಯಿತು.

1948 ರಲ್ಲಿ ಹೋಮಿ ಜಹಾಂಗೀರ್ ಬಾಬಾರವರ ಅಧ್ಯಕ್ಷತೆಯಲ್ಲಿ ಅಣುಶಕ್ತಿ ಆಯೋಗವನ್ನು ಪ್ರಾರಂಭಿಸಲಾಯಿತು. ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆಯು ಸಂಶೋಧನಾ ಸಂಸ್ಥೆಯಾಗಿ ಸ್ಥಾಪನೆಯಾಯಿತು. 1957 ರಲ್ಲಿ ಅಣುಶಕ್ತಿಯಲ್ಲಿ ಕಾರ್ಯ ನಿರ್ವಹಿಸಲು ಪ್ರತಿಭಾನ್ವಿತ ಯುವ ವಿದ್ಯಾರ್ಥಿಗಳನ್ನು ತರಬೇತಿಗೊಳಿಸುವ ಸಲುವಾಗಿ, ಪ್ರತಿಭಾನ್ವಿತರನ್ನು ಹುಡುಕುವ ಹಾಗೂ ವಿದ್ಯಾರ್ಥಿವೇತನ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.

ಭಾರತದ ದ್ವಿತೀಯ ಪಾಂಚವಾರ್ಷಿಕ ಯೋಜನೆಗಾಗಿ 4800.00 ಕೋಟಿ ರೂಪಾಯಿಗಳನ್ನು ಮೀಸಲಿರಿಸಲಾಗಿತ್ತು. ಈ ಮೊತ್ತವನ್ನು ವಿವಿಧ ವಲಯಗಳಿಗೆ ವ್ಯಯಿಸಲಾಯಿತು, ಅವುಗಳೆಂದರೆ-

ಗಣಿ ಮತ್ತು ಕೈಗಾರಿಕೆ
ಸಮುದಾಯ  ಹಾಗೂ ಕೃಷಿ ಅಭಿವೃದ್ಧಿ.
ವಿದ್ಯುತ್  ಹಾಗೂ ನೀರಾವರಿ.
ಸಂವಹನ ಮತ್ತು ಸಾರಿಗೆ.
ಆದರೆ ಇಲ್ಲಿ ಚರ್ಚೆಯ ವಿಷಯವೆಂದರೆ, ಹಿಂದಿನಿಂದಲೂ ಅನೇಕ ಉದ್ಯಮಿಗಳು ಕೈಗಾರಿಕೆಗಳನ್ನು ಸ್ಥಾಪಿಸಿ ತಾವು ಮಾತ್ರ ಲಾಭ ಪಡೆದು ಶ್ರೀಮಂತರಾಗುತ್ತಿದ್ದಾರೆಯೇ ಹೊರತು ಇದೇ ವೇಳೆ ದೇಶದ ಅಭಿವೃದ್ಧಿಗೆ, ಸ್ಥಳೀಯ ಅಭಿವೃದ್ಧಿಗೆ ಪ್ರಾಮುಖ್ಯತೆಯನ್ನು ಕೊಡುತ್ತಿಲ್ಲ. ಉದ್ಯಮಪತಿಗಳು ತಾವು ಮಾತ್ರವೇ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಅಗ್ರಮಾನ್ಯರಾಗಲು ಪೈಪೋಟಿ ನಡೆಸುತ್ತಿದ್ದಾರೆಯೇ ಹೊರತು ದೇಶವನ್ನು ಮುಂದುವರೆದ ರಾಷ್ಟ್ರಗಳ ಪಟ್ಟಿಗೆ ಸೇರಲು ಕೊಡುಗೆಯನ್ನು ನೀಡುತ್ತಿಲ್ಲ. ಆದರೆ ಒಂದು ವಿಪರ್ಯಾಸದ ಅಂಶವೆಂದರೆ ಉದ್ಯಮಪತಿಗಳು ತಮ್ಮ ಉದ್ಯಮವನ್ನು ಸ್ಥಾಪನೆ ಮಾಡಿ ಸ್ಥಳೀಯವಾಗಿ ದೊರಕುವಂತಹ ಪ್ರತಿಯೊಂದು ಸೌಲಭ್ಯ, ಸಂಪನ್ಮೂಲಗಳನ್ನು ಬಳಸಿಕೊಂಡು ಲಾಭಗಳಿಸುತ್ತಿದ್ದಾರಯೇ ಹೊರತು, ಸ್ಥಳೀಯರಿಗಾಗಿ ಅವರು ನೀಡುತ್ತಿರುವ ಕೊಡುಗೆ ಶೂನ್ಯ.

ತೀರ ಇತ್ತೀಚೆಗೆ ಎಚ್ಚೆತ್ತುಕೊಂಡಂತೆ ಇರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ಬಗ್ಗೆ ಗಮನಹರಿಸುವ ದೃಷ್ಟಿಯಿಂದ ಕಾರ್ಪರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ ಅಂದರೆ ನಿಗಮೀಕೃತ ಸಾಮಾಜಿಕ ಜವಾಬ್ದಾರಿಗಳು(ಇದನ್ನು ಸಿ.ಎಸ್.ಆರ್ ಎಂತಲೂ ಕರೆಯುತ್ತಾರೆ) ಎಂಬ ಪರಿಕಲ್ಪನೆಗೆ ವಿಶೇಷ ಗಮನ ನೀಡುತ್ತಿರುವುದರಿಂದ ಅನೇಕ ಕೈಗಾರಿಕೆಗಳು ಸರ್ಕಾರದ ಮತ್ತು ಸ್ಥಳೀಯರ ಕೆಂಗಣ್ಣಿಗೆ ಗುರಿಯಾಗುವುದನ್ನು ತಪ್ಪಿಸಿಕೊಳ್ಳಲು ತಮ್ಮ ತಮ್ಮ ಕೈಗಾರಿಕೆಗಳ ಮೂಲಕವಾಗಿ ಈ ಒಂದು ಪರಿಕಲ್ಪನೆಯ ಅನುಷ್ಠಾನಗೊಳಿಸುವಿಕೆಗೆ ತಮ್ಮಲ್ಲಿಯ ಮಾನವ ಸಂಪನ್ಮೂಲ ವಿಭಾಗದ ನೆರವಿನೊಂದಿಗೆ ಪ್ರತ್ಯೇಕ ಶಾಖೆಗಳನ್ನು ಇದಕ್ಕಾಗಿ ಸ್ಥಾಪಿಸುವ ಮೂಲಕವಾಗಿ ಪ್ರತ್ಯೇಕ ಹಣಕಾಸನ್ನು ಮೀಸಲಿರಿಸಿ, ಸ್ಥಳೀಯ ಸಮುದಾಯ, ಪರಿಸರ, ಕಾರ್ಮಿಕರನ್ನು ದೃಷ್ಟಿಯಲ್ಲಿ ಇರಿಸಿಕೊಂಡು ಅನೇಕ ಕಾರ್ಯಕ್ರಮಗಳನ್ನು ಕಾಲಕಾಲಕ್ಕೆ ಅನುಗುಣವಾಗಿ ನಡೆಸುತ್ತಾ ಬಂದಿದೆ.

ಹಾಗಾದರೆ ಈ ಒಂದು ವಿಶೇಷವಾದ ನಿಗಮೀಕೃತ ಸಾಮಾಜಿಕ ಜವಾಬ್ದಾರಿಯ (ಸಿ.ಎಸ್.ಆರ್) ಅರ್ಥ, ಇದರ ಬಗೆಗೆ ಖ್ಯಾತನಾಮರು ನೀಡಿರುವ ವ್ಯಾಖ್ಯಾನ, ಇದು ಬೆಳೆದು ಬಂದ ದಾರಿ ಹಾಗೂ ಇದರಿಂದ  ಕೈಗಾರಿಕೆಗಳಿಗೆ ಆಗುವ ಲಾಭದ ಬಗೆಗೆ ತಿಳಿಯುವುದು ಅತ್ಯವಶ್ಯ.

ಹಾಪ್‍ಕಿನ್ಸ್(2003) ರವರ ಪ್ರಕಾರ ಸಿ.ಎಸ್.ಆರ್ ಎಂಬುದು ಒಂದು ವ್ಯವಹಾರಕ್ಕೆ ಸಂಬಂಧಿಸಿದ ನಿರಂತರ ಬದ್ಧತೆಯಾಗಿದ್ದು, ಇದು ಸಂಘಟನೆಗಳು ನೈತಿಕವಾಗಿ ವರ್ತಿಸುವ ಮುಖಾಂತರ ತನ್ನ ಕಾರ್ಮಿಕರ ಗುಣಾತ್ಮಕ ಜೀವನವನ್ನು ಹೆಚ್ಚಿಸುವ ಮೂಲಕವಾಗಿ ತಮ್ಮ ಕುಟುಂಬಗಳು, ಸ್ಥಳೀಯ ಸಮುದಾಯ ಹಾಗೂ ಬೃಹತ್  ಮಟ್ಟದಲ್ಲಿ ಸಮಾಜದ ಆರ್ಥಿಕ ಬೆಳವಣಿಗೆಗೆ ಕಾರಣವಾಗುತ್ತದೆ ಎಂದಿದ್ದಾರೆ.

ಪ್ರೆಡ್ರಿಕ್(2006) ರವರ ಪ್ರಕಾರ ಸಿ.ಎಸ್.ಆರ್. ಎಂಬುದು ಸಂಘಟನೆಗಳ ನೈತಿಕತೆಗೆ ಸಂಬಂಧಿಸಿದ ವಿಚಾರವಾಗಿದ್ದು, ಇದು ತನ್ನ ವ್ಯವಹಾರದ ಜೊತೆ ಜೊತೆಗೆ ತನ್ನ ಷೇರುದಾರರ, ಕಾರ್ಮಿಕರ, ಪರಿಸರ, ಸ್ಥಳೀಯ ಸಮುದಾಯ ಹಾಗೂ ಸಮಾಜದ ಒಟ್ಟಾರೆ ಏಳಿಗೆಯನ್ನು ಬಯಸುವಂತದ್ದು ಎಂದಿದ್ದಾರೆ.

ತೀರ ಇತ್ತೀಚಿನ ದಿನಗಳಲ್ಲಿ ಅದರಲ್ಲೂ ಬಹು ರಾಷ್ಟ್ರೀಯ ಕಂಪನಿಗಳು ಬಹುಸಂಖ್ಯೆಯಲ್ಲಿ ಅಸ್ತಿತ್ವಕ್ಕೆ ಬಂದ ಮೇಲೆ ಈ ಸಿ.ಎಸ್.ಆರ್. ಎಂಬ ಪರಿಕಲ್ಪನೆಯು ಹೆಚ್ಚು ಮಹತ್ವವನ್ನು ಪಡೆದುಕೊಂಡಿದೆ.

ನಿಗಮೀಕೃತ ಸಾಮಾಜಿಕ ಜವಾಬ್ದಾರಿ (ಸಿ.ಎಸ್.ಆರ್) ಎಂಬ ಪರಿಕಲ್ಪನೆ ಮೊಟ್ಟ ಮೊದಲಿಗೆ ಜಗತ್ತಿನಾದ್ಯಂತ ಪ್ರಖ್ಯಾತಿಯನ್ನು ಪಡೆದ ಕಾಲಘಟ್ಟವೆಂದರೆ  1960-1970 ರ ದಶಕದಲ್ಲಿ.

1945 ರಲ್ಲಿ ಟಾಟಾ ಮೋಟಾರ್ಸ್ ತನ್ನ ಕಾರ್ಮಿಕರಿಗಾಗಿ ಸಾಮಾಜಿಕ ಕಲ್ಯಾಣ ಸೌಲಭ್ಯಗಳನ್ನು ಅನುಷ್ಠಾನಗೊಳಿಸಿತು, ನಂತರ ಇವುಗಳೇ ಶಾಸನಾತ್ಮಕ ನಿಯಮಗಳಾಗಿ ಮಾರ್ಪಟ್ಟವು. ಇದೇ ರೀತಿ ಇಂದು ಭಾರತದಲ್ಲಿ ಇರುವಂತಹ ಅನೇಕ ಹೆಸರಾಂತ ಕೈಗಾರಿಕೆಗಳು ಈ (ಸಿ.ಎಸ್.ಆರ್) ಪರಿಕಲ್ಪನೆಯನ್ನು ಅನುಸರಿಸಿ ಬಡತನ ನಿರ್ಮೂಲನೆಗಾಗಿ, ಪರಿಸರ ಸಂರಕ್ಷಣೆಗಾಗಿ ಹಾಗೂ ಸುಸ್ಥಿರ ಅಭಿವೃದ್ಧಿಗಾಗಿ ಶ್ರಮಿಸುತ್ತಿವೆ.

ಭಾರತದಲ್ಲಿ ಸಿ.ಎಸ್.ಆರ್ ಪರಿಕಲ್ಪನೆಯ ಆಚರಣೆಗಾಗಿಯೇ ವಿಶೇಷವಾದ ಗಮನ ಹಾಗೂ ಕಾಳಜಿಯನ್ನು ತಮ್ಮದೇ ಆದ ರೀತಿಯಲ್ಲಿ ತೋರಿಸುತ್ತಿರುವ ಇನ್ನಿತರ ಹೆಸರಾಂತ ಸಂಸ್ಥೆಗಳನ್ನು ಹೆಸರಿಸುವುದಾದರೆ, ಟಾಟಾ ಮೋಟಾರ್ಸ್, ಟಿ.ವಿ.ಎಸ್ ಎಲೆಕ್ಟ್ರಾನಿಕ್ಸ್, ಸತ್ಯಂ ಕಂಪ್ಯೂಟರ್ಸ್ ಲಿಮಿಟೆಡ್, ಇನ್ಫೋಸಿಸ್ ಫೌಂಡೇಷನ್, ಐ.ಸಿ.ಐ.ಸಿ.ಐ ಬ್ಯಾಂಕ್ ಲಿಮಿಟೆಡ್, ಐಟಿಸಿ ಲಿಮಿಟೆಡ್, ಡಾಲ್ಮಿಯಾ ಸಿಮೆಂಟ್ಸ್, ಲಾರ್ಸನ್ ಅಂಡ್ ಟರ್ಬೊ (ಎಲ್&ಟಿ),  ಮಹೇಂದ್ರ & ಮಹೇಂದ್ರ ಇತ್ಯಾದಿ.

ಇಷ್ಟೆಲ್ಲಾ ಮಹತ್ವ ಪಡೆದಿರುವ (ಸಿ.ಎಸ್.ಆರ್) ಸಂಸ್ಥೆಗಳಿಗೆ/ಸಂಘಟನೆಗಳಿಗೆ ಅನೇಕ ರೀತಿಯಲ್ಲಿ ಉಪಯುಕ್ತವಾಗಿದೆ.

  • ಸ್ಥಳೀಯ ಸಮುದಾಯದೊಂದಿಗೆ ಉತ್ತಮ ಸಂಬಂಧ ಏರ್ಪಡುತ್ತದೆ.
  • ಸಂಸ್ಥೆಯ ಬ್ರ್ಯಾಂಡ್‍ಗೆ (ವ್ಯಾಪಾರದ ಗುರುತು) ಸಹಜ ಪ್ರಚಾರ ಸಿಗುತ್ತದೆ ಹಾಗೂ ಸಂಸ್ಥೆಯ ಗೌರವ ಹೆಚ್ಚಾಗುತ್ತದೆ.
  • ಸಂಸ್ಥೆಯ ಬಗೆಗೆ ಗ್ರಾಹಕರ ನಂಬಿಕೆ ಹೆಚ್ಚಾಗುತ್ತದೆ.
  • ಸಂಸ್ಥೆಯ ಆವಿಷ್ಕಾರಕ ಹಾಗೂ ಕ್ರಿಯಾತ್ಮಕ ಸಾಮರ್ಥ್ಯ ಹೆಚ್ಚಾಗುತ್ತದೆ.
  • ಕಾರ್ಮಿಕರ ನೇಮಕಾತಿ ಹಾಗೂ ಉಳಿಸಿಕೊಳ್ಳುವಿಕೆಗೆ ಸಹಾಯಕವಾಗುತ್ತದೆ.
  • ಕಾರ್ಮಿಕರಲ್ಲಿನ ನೈತಿಕತೆ ಹಾಗೂ ಉತ್ಪಾದಕತೆ ಹೆಚ್ಚಾಗುತ್ತದೆ.
  • ಕಾರ್ಮಿಕರಲ್ಲಿ ಸಂಸ್ಕೃತಿ ಹಾಗೂ ತಂಡವಾಗಿ ಕಾರ್ಯ ನಿರ್ವಹಿಸುವ ಸಾಮರ್ಥ್ಯವನ್ನು ಬೆಳೆಸುತ್ತದೆ.
  • ತರಬೇತಿ ಮತ್ತು ಅಭಿವೃದ್ಧಿಗೆ ಸಹಕಾರಿಯಾಗುತ್ತದೆ.
 
ಸಮಸ್ಯೆಯ ಸ್ವರೂಪ
ಅತ್ಯಂತ ಮಹತ್ವವನ್ನು ಸಮಾಜದಲ್ಲಿ ಹೊಂದಿರುವ ಸಿ.ಎಸ್.ಆರ್ ಪರಿಕಲ್ಪನೆಯ ಅನುಷ್ಠಾನದಿಂದ ತುಮಕೂರಿನ ಜಿಲ್ಲೆಗೆ ಎಷ್ಟರ ಮಟ್ಟಿಗೆ ಉಪಯುಕ್ತವಾಗಿದೆ ಎಂಬುದನ್ನು ಅರಿಯಲು ಈ ಸಂಶೋಧನೆಯನ್ನು  ತುಮಕೂರು ಜಿಲ್ಲೆಯಲ್ಲಿರುವ ಬೃಹತ್ ಹಾಗೂ ಮಧ್ಯಮ ಕೈಗಾರಿಕೆಗಳಲ್ಲಿ ಅನುಷ್ಠಾನಗೊಳಿಸಿ ಎಷ್ಟರ ಮಟ್ಟಿಗೆ ಆಚರಿಸುತ್ತಿವೆ ಎಂಬುದನ್ನು ತಿಳಿಯಲು ಕೈಗೊಂಡ ಸಂಶೋಧನೆಯಾಗಿದೆ. ಈ ಜಿಲ್ಲೆಯ ಕೈಗಾರಿಕಾ ಕೇಂದ್ರದಲ್ಲಿ 29 ಕೈಗಾರಿಕೆಗಳು ನೋದಾಯಿಸಲ್ಪಟ್ಟಿದ್ದು ಇವುಗಳನ್ನು ಈ ಕೆಳಕಂಡ ಕೈಗಾರಿಕಾ ಪ್ರದೇಶಗಳಲ್ಲಿ ಕಾಣಬಹುದು.
  1. ಕುಣಿಗಲ್
  2. ಅಂತರಸನಹಳ್ಳಿ
  3. ಸತ್ಯಮಂಗಲ  
  4. ಹಿರೇಹಳ್ಳಿ
  5. ಪಂಡಿತನಹಳ್ಳಿ
  6. ಅಮ್ಮಸಂದ್ರ.
 
ತುಮಕೂರು ಜಿಲ್ಲೆಯಲ್ಲಿ ಇರುವಂತಹ ಕೆಲವು ಪ್ರತಿಷ್ಠಿತ ಕೈಗಾರಿಕೆಗಳು ಈ ಕೆಳಗಿನಂತಿವೆ.
  1. ಇನ್ಕ್ಯಾಪ್ (ಟಿ.ವಿ.ಎಸ್)
  2. ವಿಪ್ರೋ.
  3. ಕಿರ್ಲೊಸ್ಕರ್
  4. ಹೆಚ್.ಎಂ.ಟಿ
  5. ಮೈಸೆಮ್ ಸಿಮೆಂಟ್ ಕಾರ್ಖಾನೆ (ಡೈಮಂಡ್ ಸಿಮೆಂಟ್ಸ್)
  6. ಮೈಕೋ.
  7. ಕರ್ನ್‍ಲೈಬಿಯರ್ಸ್  8.    ಹೆಚ್ & ಆರ್ ಜಾನ್ಸನ್ ಪ್ರೈವೇಟ್  ಲಿಮಿಟೆಡ್ ಇತ್ಯಾದಿ.
 
ಅಧ್ಯಯನದ ಧ್ಯೇಯೋದ್ದೇಶಗಳು
  1. ತುಮಕೂರು ಜಿಲ್ಲೆಯ ಬೃಹತ್ ಹಾಗೂ ಮಧ್ಯಮ ಕೈಗಾರಿಕೆಗಳಲ್ಲಿ ಸಿಎಸ್ಆರ್ ಪರಿಕಲ್ಪನೆಯ ಅಳವಡಿಕೆಯ ಮಟ್ಟವನ್ನು ತಿಳಿಯುವುದು.
  2. ಸಿಎಸ್ಆರ್ ಪರಿಕಲ್ಪನೆಗೆ ಇರುವ ಪ್ರಖ್ಯಾತಿಯನ್ನು  ತಿಳಿಯುವುದು.
  3. ಸಿಎಸ್ಆರ್ ಪರಿಕಲ್ಪನೆಯ ಯಶಸ್ಸು ಅಥವಾ ವಿಫಲತೆಗೆ ಕಾರಣಗಳನ್ನು ತಿಳಿಯುವುದು.
  4. ಕೈಗಾರಿಕೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವಂತಹ ಮಾನವ ಸಂಪನ್ಮೂಲ ವ್ಯವಸ್ಥಾಪಕರಿಗೆ ಪರಿಕಲ್ಪನೆಯ ಬಗೆಗೆ ಇರುವ ಅಭಿಪ್ರಾಯ ಹಾಗೂ ಆಸಕ್ತಿಯನ್ನು ತಿಳಿಯುವುದು.
  5. ಸಿಎಸ್ಆರ್ ಪರಿಕಲ್ಪನೆಯ ಅಳವಡಿಕೆಯಲ್ಲಿ ವ್ಯವಸ್ಥಾಪಕರಿಗೆ ಇರುವಂತಹ ಸಮಸ್ಯೆ/ ತೊಡಕುಗಳನ್ನು ತಿಳಿಯುವುದು.
 
ಅಧ್ಯಯನದ ಕ್ಷೇತ್ರ ವ್ಯಾಪ್ತಿ
ಈ ಅಧ್ಯಯನವು ತುಮಕೂರು ಜಿಲ್ಲೆಯ 27 ಬೃಹತ್ ಹಾಗೂ ಮಧ್ಯಮ ಕೈಗಾರಿಕೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ವ್ಯವಸ್ಥಾಪಕರ ಅಭಿಪ್ರಾಯವನ್ನು ಒಳಗೊಂಡಿರುತ್ತದೆ.
 
ಅಧ್ಯಯನದ ಮಾದರಿಯ ಗಾತ್ರ
ಅಧ್ಯಯನದ ಕಾಲದ ಮಿತಿಯನ್ನು ಹಾಗೂ ಕ್ಷೇತ್ರದ ವ್ಯಾಪ್ತಿಯನ್ನು ಗಮನದಲ್ಲಿರಿಸಿಕೊಂಡು ಸರಿಸುಮಾರು ಒಟ್ಟು 50 ಮಾನವ ಸಂಪನ್ಮೂಲ ವ್ಯವಸ್ಥಾಪಕರುಗಳಲ್ಲಿ ಕೇವಲ 25 ವ್ಯವಸ್ಥಾಪಕರುಗಳನ್ನು ಸಂಭಾವನೀಯ ಮಾದರಿಯ, ಸರಳ ಯಾದೃಚ್ಛಿಕ  ವಿಧಾನದ ಮೂಲಕ ಆಯ್ಕೆ ಮಾಡಿದೆವು.
 
ದತ್ತಾಂಶ ಸಂಗ್ರಹಣೆಗೆ ಬಳಸಿದ ಸಾಧನಗಳು
ಸಂಶೋಧನೆಯ ಸಮಸ್ಯೆಗೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸಲು ಇದ್ದಂತಹ ಕಾಲಾವಧಿ ಹಾಗೂ ವ್ಯವಸ್ಥಾಪಕರ ಲಭ್ಯತೆಯನ್ನು ಗಮನದಲ್ಲಿರಿಸಿಕೊಂಡು ಸರಳ ಪ್ರಶ್ನಾವಳಿಯನ್ನು ಸಿದ್ಧಪಡಿಸಿ ಅಗತ್ಯವಾದ ಮಾಹಿತಿಯನ್ನು ಸಂಗ್ರಹಿಸಲಾಯಿತು.
 
ದತ್ತಾಂಶ ವಿಶ್ಲೇಷಣೆ
ಪ್ರಶ್ನಾವಳಿಯ ಸಹಾಯದಿಂದ ಸಂಶೋಧನೆಯ ಸಮಸ್ಯೆಗೆ ಸಂಬಂಧಿಸಿದಂತೆ ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸಲಾಯಿತು. ಆಶ್ಚರ್ಯಕರ ಸತ್ಯಾಂಶವೆಂದರೆ, ತುಮಕೂರು ಜಿಲ್ಲೆಯಲ್ಲಿ ಇರುವ ಯಾವುದೇ ಮಧ್ಯಮ ಹಾಗೂ ಬೃಹತ್ ಕೈಗಾರಿಕೆಗಳಲ್ಲೂ ಸಹ ಸಿ.ಎಸ್.ಆರ್ ಎಂಬ ಪರಿಕಲ್ಪನೆಯನ್ನು  ಯಾವುದೇ ಪ್ರತ್ಯೇಕವಾದ ಶಾಖೆಯ ಮೂಲಕ ಅಥವಾ ಔಪಚಾರಿಕವಾಗಿ ಆಚರಣೆಗೆ ತಂದಿಲ್ಲದಿರುವುದು. ಅನೇಕ ಕಾರ್ಖಾನೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾನವ ಸಂಪನ್ಮೂಲ ವ್ಯವಸ್ಥಾಪಕರುಗಳಿಗೆ ಈ ಪರಿಕಲ್ಪನೆ ತಿಳಿಯದೇ ಇರುವುದು ಒಂದೆಡೆಯಾದರೆ ಕೆಲವು ವ್ಯವಸ್ಥಾಪಕರುಗಳಿಗೆ ಇದರ ಅರಿವಿದ್ದರೂ ನಮಗೇಕೆ ಎಂಬ ಧೋರಣೆ ಇರುವುದು ವಿಪರ್ಯಾಸವೇ ಸರಿ. ಜೊತೆಗೆ ಈ ಪರಿಕಲ್ಪನೆಯ ಬಗೆಗೆ ಸ್ಥಳೀಯರಿಗೆ ಹಾಗೂ ಕಾರ್ಮಿಕರಲ್ಲಿ ಅರಿವಿನ ಅಭಾವ ಕಾಣುತ್ತದೆ. ಕೆಲವು ವ್ಯವಸ್ಥಾಪಕರು ಈ ಪರಿಕಲ್ಪನೆ ಅನುಷ್ಠಾನಗೊಂಡರೆ ಹೆಚ್ಚಿನ ಜವಾಬ್ದಾರಿ ಹಾಗೂ ಹೊರೆಯಾಗುವುದೆಂಬ ಭಾವನೆಯಿಂದ ಪಲಾಯನವಾದವನ್ನು ಅನುಸರಿಸುತ್ತಿದ್ದಾರೆ.

ಸಂಶೋಧನೆಯ ಒಂದು ತೃಪ್ತಿದಾಯಕ  ಅಂಶವೆಂದರೆ ಕೆಲವು ಕೈಗಾರಿಕೆಗಳು ಔಪರಿಚಾರಿಕವಾಗಿ ಅಲ್ಲದೇ ಇದ್ದರು ಅನೌಪಚಾರಿಕವಾಗಿ ಈ ಒಂದು ಪರಿಕಲ್ಪನೆಯನ್ನು ಆಚರಿಸುತ್ತಿರುವುದು. ಅಂತಹ ಆಚರಣೆಗಳು ಈ ಕೆಳಗಿನಂತಿವೆ.
  1. ಇನ್ಕ್ಯಾಪ್ , ಕರ್ನ್‍ಲೈಬರ್ಸ್ ಸ್ಪ್ರಿಂಗ್ಸ್ ಅಂಡ್ ಸ್ಟಾಂಪಿಂಗ್ ಪ್ರೈವೇಟ್ ಲಿಮಿಟೆಡ್- ಪರಿಸರ ನಿರ್ವಹಣೆಗೆ ವಿಶೇಷವಾದ ಮಹತ್ವವನ್ನು ನೀಡಿರುತ್ತಾರೆ. ಇದು ಸ್ಥಳೀಯರಿಗೆ ಹಾಗೂ ಇಲ್ಲಿ ಕಾರ್ಯ ನಿರ್ವಹಿಸುವ ಕಾರ್ಮಿಕರಿಗೆ ಆರೋಗ್ಯದ ದೃಷ್ಟಿಯಿಂದ ಸಹಕಾರಿಯಾಗಿದೆ.
  2. ಮೈಕೋ (ಎಮ್.ಹೆಚ್.ಬಿ) ಇಲ್ಲಿ ತೀರ ಇತ್ತೀಚಿನ ದಿನಗಳಿಂದ ಆರೋಗ್ಯ ತಪಾಸಣಾ ಶಿಬಿರವನ್ನು ಕಾರ್ಮಿಕರನ್ನು ಒಳಗೊಂಡಂತೆ ಸ್ಥಳೀಯ ಜನತೆಗೂ ಆಯೋಜಿಸಲಾಗುತ್ತಿದೆ ಹಾಗೂ ಪರಿಸರ ಸಂರಕ್ಷಣೆಗೂ ವಿಶೇಷವಾದ ಗಮನ ನೀಡಿರುತ್ತಾರೆ.
  3. ದಿಸಾ ಪ್ರೈ. ಲಿಮಿಟೆಡ್ ಕಾರ್ಖಾನೆಯು ಸ್ಥಳೀಯವಾಗಿ ಇರುವಂತಹ ಖಾಸಗಿ ಶಾಲೆಯ ಅಭಿವೃದ್ಧಿಯ ದೃಷ್ಟಿಯಿಂದ ಕೊಠಡಿ ನಿರ್ಮಾಣಕ್ಕೆ ಹಾಗೂ ಮೇಜು, ಪುಸ್ತಕಗಳ ಖರೀದಿಗೆ ಆರ್ಥಿಕವಾಗಿ ಸಹಾಯವನ್ನು ಮಾಡಿದೆ.
  4. ಟಿ.ವಿ.ಎಸ್ ಸಂಸ್ಥೆಯು ಇನ್ಕ್ಯಾಪ್  ಸಂಸ್ಥೆಯಾಗಿ ಬಹುರಾಷ್ಟ್ರೀಯ ಕಂಪನಿಯಲ್ಲಿ ವಿಲೀನಗೊಳ್ಳುವ ಮೊದಲು ಅನೇಕ ಕಾರ್ಯಕ್ರಮಗಳನ್ನು ಅಂದರೆ ಪ್ರಸಿದ್ಧವಾದ ದೇವರಾಯನದುರ್ಗದ ದೇವಸ್ಥಾನದ ಹಾಗೂ ಬಸದಿ ಬೆಟ್ಟದ ಜೈನ ದೇವಾಲಯಗಳ ಜೀರ್ಣೊದ್ಧಾರಕ್ಕೆ ಉದಾರವಾದ ಆರ್ಥಿಕ ನೆರವನ್ನು ನೀಡುವುದರ ಜೊತೆಗೆ ಕಾರ್ಖಾನೆಯಲ್ಲಿ ಕಾರ್ಯ ನಿರ್ವಹಿಸುವ ಕಾರ್ಮಿಕರ ಹಾಗೂ ಸ್ಥಳೀಯ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಶಾಲೆಯನ್ನು ಸ್ಥಾಪಿಸಿತ್ತು. ಆದರೆ ಪ್ರಸ್ತುತವಾಗಿ ಈ ಯಾವುದೇ ಕಾರ್ಯಕ್ರಮಗಳನ್ನು ಮುಂದುವರೆಸುತ್ತಿಲ್ಲ. ಆದರೆ ಈ ಹಿಂದೆ ಮಾಡಿದಂತಹ ಕಾರ್ಯಕ್ರಮಗಳು ಸ್ಥಳೀಯ ಜನತೆಯ ಪ್ರಶಂಸೆಗೆ ಪಾತ್ರವಾಗಿದ್ದರಿಂದ ಹಾಗೂ ಈ ಕಾರ್ಯಕ್ರಮಗಳನ್ನು ಮುಂದೆಯು ಸಹ ಮುಂದುವರೆಯಬೇಕೆಂಬ ಸ್ಥಳೀಯ ಜನತೆಯ ಒತ್ತಾಯದಿಂದ ಈಗಿನ ವ್ಯವಸ್ಥಾಪಕರು ಆಡಳಿತ ಮಂಡಳಿಯೊಂದಿಗೆ ಮಾತುಕತೆ ನಡೆಸುತ್ತಿದ್ದು ಮತ್ತೆ ಈ ಎಲ್ಲಾ ರೀತಿಯ ಕಾರ್ಯಕ್ರಮಗಳು ಪುನಃ ಪ್ರಾರಂಭವಾಗುವ ಲಕ್ಷಣಗಳಿವೆ.
 
ಸಂಶೋಧನೆಯ ಸಂದರ್ಭದಲ್ಲಿ ಕಂಡು ಬಂದ  ಪ್ರಮುಖ ಅಂಶಗಳು
ಕೋಷ್ಟಕ-01
ಮಾನವ ಸಂಪನ್ಮೂಲ ವ್ಯವಸ್ಥಾಪಕರುಗಳ ವಿದ್ಯಾರ್ಹತೆಯನ್ನು ಸೂಚಿಸುತ್ತದೆ.
Picture
ಈ ಮೇಲಿನ ಕೋಷ್ಟಕದ ಪ್ರಕಾರ ಬಹುತೇಕ ಕೈಗಾರಿಕೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಾನವ ಸಂಪನ್ಮೂಲ ವ್ಯವಸ್ಥಾಪಕರು ಸಾಮಾಜಿಕ ವಿಜ್ಞಾನಗಳ ಹಿನ್ನೆಲೆಯಿಂದ ಬಂದವರಾಗಿರುವುದಿಲ್ಲ  ಬದಲಿಗೆ, ಆಡಳಿತ, ಹಣಕಾಸು ನಿರ್ವಾಹಣೆಯ ವಿಷಯಕ್ಕೆ ಸಂಬಂಧಿಸಿದ ಪದವಿ ಹೊಂದಿದವರಾಗಿರುತ್ತಾರೆ.
 
ಕೋಷ್ಟಕ-02
ವ್ಯವಸ್ಥಾಪಕರುಗಳಲ್ಲಿ ಸಿ.ಎಸ್.ಆರ್ ಪರಿಕಲ್ಪನೆ ಆಚರಣೆಯ ಬಗೆಗಿನ ಆಸಕ್ತಿಯನ್ನು ಸೂಚಿಸುತ್ತದೆ.
Picture
ಈ ಮೇಲಿನ ಕೋಷ್ಟಕದ ಪ್ರಕಾರ ಬಹುತೇಕ ವ್ಯವಸ್ಥಾಪಕರಿಗೆ ಸಿ.ಎಸ್.ಆರ್ ಪರಿಕಲ್ಪನೆಯ ಬಗ್ಗೆ ಅನಾಸಕ್ತಿಯ ಜೊತೆಗೆ ನಿರ್ಲಕ್ಷ್ಯವಿರುವುದನ್ನು ಕಾಣಬಹುದು.
 
ಕೋಷ್ಟಕ-03
ಕಾರ್ಮಿಕರಿಗೆ ಸಿ.ಎಸ್.ಆರ್ ಪರಿಕಲ್ಪನೆಯ ಬಗ್ಗೆ ಇರುವ ಅರಿವಿನ ಮಟ್ಟವನ್ನು ಸೂಚಿಸುತ್ತದೆ.
Picture
ಈ ಕೋಷ್ಟಕದ ಪ್ರಕಾರ ಬಹುತೇಕ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ಪರಿಕಲ್ಪನೆಯ (ಸಿ.ಎಸ್.ಆರ್) ಅರಿವಿನ ಕೊರತೆ ಇದೆ.
 
ಕೋಷ್ಟಕ-04
ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರ ಶೈಕ್ಷಣಿಕ ಮಟ್ಟ.
Picture
ಈ ಮೇಲಿನ ಕೋಷ್ಟಕದ ಪ್ರಕಾರ ಬಹುತೇಕ ಕಾರ್ಯ ನಿರ್ವಹಿಸುವ ಕಾಮರ್ಿಕರ ಶಿಕ್ಷಣದ ಮಟ್ಟ ಬಹಳ ಕಡಿಮೆ ಇರುವುದರಿಂದ ಸಿ.ಎಸ್.ಆರ್ ಪರಿಕಲ್ಪನೆಯ ಅರಿವಿಲ್ಲ.
 
ಕೋಷ್ಟಕ-05
ಕಾರ್ಯ ನಿರ್ವಹಿಸುವ ವ್ಯವಸ್ಥಾಪಕರುಗಳು ಸ್ವತಂತ್ರ ನಿರ್ಧಾರಗಳನ್ನು ಕೈಗೊಳ್ಳುವ ಸಾಮರ್ಥ್ಯವನ್ನು ಸೂಚಿಸುತ್ತದೆ.
Picture
ಈ ಮೇಲಿನ ಕೋಷ್ಟಕದ ಪ್ರಕಾರ ಬಹುತೇಕ ವ್ಯವಸ್ಥಾಪಕರು ಮಾಲೀಕರ ಕೃಪಾ ಕಟಾಕ್ಷದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಸ್ವತಂತ್ರ ನಿರ್ಧಾರ  ಕೈಗೊಳ್ಳುವ  ಸಾಮರ್ಥ್ಯ ಇಲ್ಲದಿರುವುದನ್ನು ಕಾಣಬಹುದಾಗಿದೆ.
 
ಕೋಷ್ಟಕ-06
ಸ್ಥಳೀಯರ ನಿರ್ಲಕ್ಷಯದಿಂದಾಗಿ ಕೆಲವೇ ಪಟ್ಟಭದ್ರ ಹಿತಾಸಕ್ತಿ ವ್ಯಕ್ತಿಗಳು ಮಾತ್ರವೇ ಲಾಭ ಮಾಡಿಕೊಳ್ಳುತ್ತಾ ಸಮುದಾಯದ ಜನರ ದಿಕ್ಕನ್ನು ತಪ್ಪಿಸುತ್ತಿದ್ದಾರೆಂಬುದನ್ನು ನೀವು ಒಪ್ಪುವಿರಾ.
Picture
ಈ ಮೇಲಿನ ಕೋಷ್ಟಕದ ಪ್ರಕಾರ ಸ್ಥಳೀಯರಲ್ಲಿ ಇರುವ ನಿರ್ಲಕ್ಷ್ಯ, ಕೆಲವೇ ಪಟ್ಟ ಭದ್ರಾ ಹಿತಾಸಕ್ತಿ ವ್ಯಕ್ತಿಗಳು ಮಾತ್ರ ಸವಲತ್ತು ಲಾಭವನ್ನು ಮಾಡಿಕೊಳ್ಳುತ್ತಾ, ಸಮುದಾಯದ ಜನರ ದಿಕ್ಕು ತಪ್ಪಿಸುತ್ತಿದ್ದಾರೆ.
  
ಕೋಷ್ಟಕ-07
ಕಾರ್ಮಿಕ ಸಂಘಟನೆಗಳು ಬಲಿಷ್ಠವಾಗಿಲ್ಲದೇ ಇರುವುದೇ ಸಿ.ಎಸ್.ಆರ್ ಪರಿಕಲ್ಪನೆ ಅನುಷ್ಠಾನಗೊಳ್ಳಲು ವಿಫಲವಾಗಿದೆ ಎಂಬುದನ್ನು ಸೂಚಿಸುತ್ತದೆ.
Picture
ಈ ಮೇಲಿನ ಕೋಷ್ಟಕದ ಪ್ರಕಾರ ಕಾರ್ಖಾನೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರ ಸಂಘಟನೆಗಳು ಬಲಿಷ್ಠವಾಗಿ ಇರದೇ ಇರುವುದು ಅಥವಾ ಸಿ.ಎಸ್.ಆರ್ ಪರಿಕಲ್ಪನೆಯ ಬಗ್ಗೆ ತಿಳಿಯದೇ ಇರುವುದು ಅನುಷ್ಠಾನ ಗೊಳ್ಳುವಿಕೆಯ ವಿಫಲತೆಗೆ ಕಾರಣವಾಗಿದೆ.
 
ಅಧ್ಯಯನದ ಮಿತಿಗಳು
ಈ ಸಂಶೋಧನೆಯನ್ನು  ಕೈಗೊಂಡಾಗ ಕೆಲವೊಂದು ಮಿತಿಗಳನ್ನು ಹೊಂದಿತ್ತು.
  1. ಸಂಶೋಧನಾ ಕಾಲಾವಧಿಯನ್ನು 25 ದಿವಸಗಳಿಗೆ ಸೀಮಿತಗೊಳಿಸಲಾಗಿತ್ತು.
  2. ಮಾಹಿತಿಯನ್ನು ಸಂಗ್ರಹಿಸಲು ಕೇವಲ ಪ್ರಶ್ನಾವಳಿಯ ಹೊರತಾಗಿ ಇನ್ನಾವುದೇ ಸಾಧನಗಳನ್ನು ಉಪಯೋಗಿಸದೇ ಇರುವುದು.
  3. ಕೇವಲ 25 ಮಾನವ ಸಂಪನ್ಮೂಲ ವ್ಯವಸ್ಥಾಪಕರುಗಳ ಅಭಿಪ್ರಾಯಕ್ಕೆ  ಸಿಮೀತವಾಗಿದೆ.
 
ಪರಿಸ್ಥಿತಿಯ ಬದಲಾವಣೆಗೆ ಕೆಲವು ಸಲಹೆಗಳು

  • ಮೊದಲಿಗೆ ಸಮಾಜ, ಸಮುದಾಯದ ಬಗ್ಗೆ  ಕಾಳಜಿ ಹೊಂದಿರುವಂತಹ ಪದವೀಧರರು ಮಾನವ ಸಂಪನ್ಮೂಲ ಇಲಾಖೆಯ ವ್ಯವಸ್ಥಾಪಕರಾಗುವುದು, ಇಲ್ಲವೇ ಇರುವಂತಹ ವ್ಯವಸ್ಥಾಪಕರಿಗೆ ಸಿ.ಎಸ್.ಆರ್ ಬಗೆಗೆ ಅರಿವನ್ನು ಮೂಡಿಸುವುದು.
  • ಕಾರ್ಮಿಕರಿಗೆ ಸಿ.ಎಸ್.ಆರ್ ಪರಿಕಲ್ಪನೆಯ ಹಾಗೂ ಅದರ ಪ್ರಾಮುಖ್ಯತೆಯ ಅರಿವನ್ನು ಮೂಡಿಸುವುದು.
  • ಕಾರ್ಯ ನಿರ್ವಹಿಸುತ್ತಿರುವ ವ್ಯವಸ್ಥಾಪಕರು ಕಾರ್ಮಿಕ ಹಾಗೂ ಮಾಲೀಕರ ನಡುವಿನ ಕೊಂಡಿಯಂತೆ ಕಾರ್ಯ ನಿರ್ವಹಿಸುವಂತೆ  ಮಾಡುವುದು.
  • ಕಾರ್ಮಿಕ ಸಂಘಟನೆಗಳಿಗೆ ಸಿ.ಎಸ್.ಆರ್ ಪರಿಕಲ್ಪನೆಯ ವಿಶೇಷತೆಯ ಬಗೆಗೆ ಅರಿವನ್ನು ಮೂಡಿಸುವುದು.
  • ವ್ಯವಸ್ಥಾಪಕರು ಸಿ.ಎಸ್.ಆರ್ ಬಗ್ಗೆ ಉದ್ಯಮಪತಿಗಳ ಮನವೊಲಿಸುವ ಕಾರ್ಯ ಮಾಡುವುದು.
  • ಸಿ.ಎಸ್.ಆರ್ ಪರಿಕಲ್ಪನೆ ಕಡ್ಡಾಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸರ್ಕಾರ ಮಧ್ಯಸ್ಥಿಕೆ ವಹಿಸುವುದು.
 
ಉಪಸಂಹಾರ
ಈ ಒಂದು ಅಧ್ಯಯನದಿಂದ ಕಂಡು ಬಂದ ಅಂಶವೆಂದರೆ ಪ್ರತಿಯೊಂದು ಔದ್ಯಮಿಕ ಸಂಸ್ಥೆ ಸಿ.ಎಸ್.ಆರ್ ಪರಿಕಲ್ಪನೆಯನ್ನು ಪ್ರಾಮಾಣಿಕವಾಗಿ ಅನುಷ್ಠಾನಗೊಳಿಸಲು ಪ್ರಯತ್ನಿಸಿದ್ದಲ್ಲಿ ತುಮಕೂರು ಜಿಲ್ಲೆ ಉತ್ತಮ ರೀತಿಯಲ್ಲಿ ಅಭಿವೃದ್ಧಿ ಹೊಂದಬಹುದು.
 
ಆಧಾರ ಸಾಹಿತ್ಯ
  1. ಎ.ಟಿ ಲಾರೆನ್ಸ್ ಮತ್ತು ವೆಬ್ರ್ (2002) ರವರ  ಬಿಸಿನೆಸ್ ಅಂಡ್ ಸೋಸೈಟಿ. ಟಾಟಾ ಮೇಗ್ರಾ-ಹಿಲ್ ಪ್ರಕಾಶಿತ 10ನೇ ಆವತರಣಿಕೆ
  2. ಆಲ್ಸ್ಟನ್ ಪಿ (2005) ನಾನ್-ಸ್ಟೇಟ್ ಆಕ್ಟರ್ಸ ಆಂಡ್  ಹ್ಯುಮನ್‍ರೈಟ್ಸ ಆಕ್ಸಫರ್ಡ ವಿಶ್ವವಿದ್ಯಾಲಯ ಪ್ರೆಸ್. 
  3. ಬೀಸ್ಲೆ ಎಮ್. ಇವಾನ್ಸ್ ಟಿ (1978) ಕಾರ್ಪೋರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ. ಲಂಡನ್: ಕ್ರೂಮ್ ಹೆಲ್ಮ.
  4. ಬ್ರಾಡ್ಲೇ ಎಂ.ಪಿ ಮತ್ತು ಪೆಟ್ರೂ.ಪಿ (2002) ಟ್ರೂಥ್ ಕ್ಲೈಮ್ಸ: ರಿಪ್ರೇಸೆಂಟೇಶನ್ ಅಂಡ್ ಹ್ಯುಮನ್‍ರೈಟ್ಸ್. ಲಂಡನ್: ರೂಟ್ಜರ್ಸ್ ಯೂನಿವರ್ಸಿಟಿ ಪ್ರೆಸ್.
  5. ಹೆಚ್ ಆರ್- ಕ್ರೋನಿಕಲ್; ಕಾರ್ಪೋರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ
  6. ಕರ್ಮಯೋಗ- ಕ್ಯಾಟಲಿಸ್ಟ್ ಸ್ಪೆಷಲ್ ಇಷ್ಯು ಆನ್ ಸಿ.ಎಸ್. ಆರ್- ಜೂನ್ 2007
  7. ಕಾರ್ಪೋರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ- ಫಕೀರ್ ರಿಜ್ವೀ
  8. ದಿ ಹಿಂದು- ಬ್ಯೂಸ್ನೆಸ್ ಲೈನ್, ಭಾನುವಾರ, ಸೆಪ್ಟಂಬರ್ 26, 2004
 
ಮೋಹನ್.ವಿ.ಟಿ
ಉಪನ್ಯಾಸಕರು ಸ್ನಾತಕೋತ್ತರ ಸಮಾಜಕಾರ್ಯ ವಿಭಾಗ, ಹೇಮಾದ್ರಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಸ್ಟಡೀಸ್, ತುಮಕೂರು.    
 
ಡಾ.ಎಂ.ಪಿ. ಸೋಮಶೇಖರ್
ಅಧ್ಯಕ್ಷರು, ಸಮಾಜಕಾರ್ಯ ವಿಭಾಗ, ಜೆ.ಎಸ್.ಎಸ್, ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು, ಊಟಿ ರಸ್ತೆ, ಮೈಸೂರು.
0 Comments



Leave a Reply.


    Categories

    All
    ಇತರೆ
    ಎನ್‍ಜಿಓ
    ಪರಿಸರ
    ವ್ಯಕ್ತಿಚಿತ್ರಗಳು
    ಸಂಪುಟ 1
    ಸಂಪುಟ 2
    ಸಂಪುಟ 3
    ಸಂಪುಟ 4
    ಸಂಪುಟ 5
    ಸಂಪುಟ 6
    ಸಂಪುಟ 7
    ಸಂಪುಟ 8
    ಸಂಪುಟ 9
    ಸಮಾಜಕಾರ್ಯ
    ಸಮುದಾಯ ಸಂಘಟನೆ


    Picture

    Social Work Learning Academy

    Join WhatsApp Channel

    Niruta Publications

    Social Work Foot Prints

    Leaders Talk

    Ramesha Niratanka

    Picture
    WhatsApp

    Picture

    MHR LEARNING ACADEMY

    Get it on Google Play store
    Download App
    Online Courses

    Picture
    50,000 HR PROFESSIONALS ARE CONNECTED THROUGH OUR NIRATHANKA HR GROUPS.
    YOU CAN ALSO JOIN AND PARTICIPATE IN OUR GROUP DISCUSSIONS.
    Join HR Online Groups


    RSS Feed

Niruta Publications Books List
File Size: 672 kb
File Type: pdf
Download File

Social Work Books
File Size: 116 kb
File Type: pdf
Download File

HR Books
File Size: 87 kb
File Type: pdf
Download File

General Books
File Size: 195 kb
File Type: pdf
Download File



SITE MAP


Site

  • HOME
  • ABOUT US
  • BLOG
  • COLLABORATE WITH NIRUTA PUBLICATIONS
  • HR BLOG
  • PUBLICATION WITH US
  • TRANSLATION & TYPING
  • VIDEOS
  • HR & EMPLOYMENT LAW CLASSES - EVERY FORTNIGHT

POSH

  • OUR ASSOCIATES
  • OUR CLIENTS
  • POSH
  • POSH BLOG​
  • WANT TO BECOME AN EXTERNAL MEMBER FOR AN IC?

NIRATHANKA

  • ​CSR
  • TREE PLANTATION PROJECT

OUR OTHER WEBSITES

  • WWW.HRKANCON.COM
  • WWW.MHRSPL.COM
  • WWW.NIRATANKA.ORG​

Subscribe


Picture
More Details

Copyright Niruta Publications 2021,    Website Designing & Developed by: www.mhrspl.com