ಮನುಷ್ಯನ ಜನ್ಮದಲ್ಲಿ ಎರಡು ಪ್ರಕಾರಗಳಿವೆ, ಒಂದು ಪುರುಷ, ಇನ್ನೊಂದು ಮಹಿಳೆ. ಇವೆಡರಲ್ಲಿ ಶಾರೀರಿಕವಾಗಿ ಭಿನ್ನವೇ ಹೊರತು ಬೌದ್ಧಿಕವಾಗಿ ಅಲ್ಲ. ಅದು ಸಮವಾಗಿಯೇ ಇದೆ. ಆಕೆ ಜನ್ಮ ಕೊಟ್ಟ ಮಾತೆ, ಸೋದರಿ, ಮಡದಿಯಾಗಿ ಜೀವನದ ನೋವು-ನಲಿವುಗಳಲ್ಲಿ ಸಮಭಾಗಿಯಾಗಿ, ಪತಿಗೆ ಧೈರ್ಯ ಆತ್ಮವಿಶ್ವಾಸ ತುಂಬಿ ನಿಲ್ಲುವ ಬಂಧುವಾಗಿ, ತಪ್ಪಿದಲ್ಲಿ ತಿದ್ದುವ ಮಾರ್ಗದರ್ಶಿಯಾಗಿ, ಮನೆಬೆಳೆಗುವ ಸೊಸೆಯಾಗಿ-ಹೀಗೆ ಪುರುಷ ಜೀವನದ ಅವಿಭಾಜ್ಯ ಅಂಗವಾಗಿ ನಿಲ್ಲುವ ಹಾಗೂ ಸಮಾಜ ರಾಷ್ಟ್ರಗಳ ನಿರ್ಮಾಣದಲ್ಲಿ ತನ್ನ ಜವಾಬ್ದಾರಿಯನ್ನು ನಿರ್ವಹಿಸುತ್ತಾಳೆ. ಸಾಮಾಜಿಕವಾಗಿ, ರಾಜಕೀಯವಾಗಿ ಹಾಗೂ ಆರ್ಥಿಕವಾಗಿ ಆಕೆ ಹೇಗೆ ಅನೇಕ ಸವಾಲುಗಳನ್ನು ಎದುರಿಸುತ್ತಾಳೋ ಹಾಗೆಯೇ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಕೂಡಾ ಆಕೆಗೆ ಅನೇಕ ಸವಾಲುಗಳಿವೆ, ಕಟ್ಟುಪಾಡುಗಳಿವೆ. ನಮ್ಮಲ್ಲಿ ಮಠಾಧೀಶರು ಬೆಳೆದ, ಬೆಳೆಸಿದ ಹಾಗೆ, ಮಠಾಧೀಶೆಯರು ಬೆಳೆಯಲಿಲ್ಲ-ಬೆಳೆಸಲಿಲ್ಲ. ತಾವೇ ಬೆಳೆದರೂ ಏನಾದರೊಂದು ವಿವಾದದಲ್ಲಿ ಸಿಕ್ಕಿಹಾಕಿಕೊಂಡವರು (ವಚನಾಂಕಿತ ತಿದ್ದಿದ ಮಾತೆ ಮಹಾದೇವಿ). ಆಧ್ಯಾತ್ಮಿಕವಾಗಿ ತನ್ನನ್ನು ವಿಸ್ತರಿಸಿಕೊಳ್ಳಲು ಆಕೆಗೆ ಮಠಗಳೇ ಅಥವಾ ಕಾವಿಯನ್ನೇ ಧರಿಸಬೇಕೆಂದಿಲ್ಲ. ಶುಭ್ರವಾದ ಶ್ವೇತ ವಸ್ತ್ರಧಾರಿಣಿ ತನ್ನನ್ನು ಹೇಗೆ ಆಧ್ಯಾತ್ಮದಡಿಯಲ್ಲಿ ಉಳಿಸಿಕೊಳ್ಳಬಲ್ಲಳು, ಅದರಲ್ಲಿ ತಲ್ಲೀನಳಾಗಿ ಜೀವನದ ಎಲ್ಲ ಹಂತಗಳನ್ನು ದಾಟಿ ಬಾಳಬಲ್ಲಳು ಎಂಬುದಕ್ಕೆ ಎಲೆ ಮರದ ಕಾಯಿಯ ಹಾಗೆ ಈಗಲೂ ನಮ್ಮಲ್ಲಿ ಅನೇಕರಿದ್ದಾರೆ. ಅವರ ಸಾಧನೆ ಅಸಾಧಾರಣ. ಅಂತಹವರಲ್ಲಿ ಒಬ್ಬರು ಸುಮಂಗಲಿ ಸೇವಾಶ್ರಮದ ಎಸ್.ಜಿ. ಸುಶೀಲಮ್ಮನವರು. ಕರ್ನಾಟಕದ ಎಲ್ಲ ಜನತೆಗೆ 'ಅಮ್ಮ' ಎಂದೆ ಚಿರಪರಿಚಿತ. ಮೂವತ್ತೈದು ವರುಷಗಳ ಹಿಂದೆ ಇಟ್ಟ ಹೆಜ್ಜೆ ಇಂದು ದೀರ್ಘಯಾತ್ರೆಯನ್ನು ತಲುಪಿದೆ. ಅಂದು ನೆಟ್ಟ ಒಂದು ಬೀಜ ಬೃಹದಾಕಾರವಾಗಿ ಆಲದಮರದಂತೆ ಬೆಳೆದಿದೆ. ತನ್ನ ಸೇವಾ ಬಿಳಿಲುಗಳಲ್ಲಿ ಎಲ್ಲೆಡೆಗೆ ಚಾಚಿದೆ. ಹಲವು ಕಷ್ಟ-ನಷ್ಟ, ಸೋಲು-ಸಂಕಷ್ಟ, ನಿರಾಸೆ-ದುಃಖ, ಬೀಳುಗಳ ನಡುವೆ ಎದ್ದವರು. ಇವತ್ತಿನ ಬೆಳೆದು ನಿಂತ ಆಶ್ರಮದ ಹಿಂದೆ ಅಪಾರವಾದ ಪರಿಶ್ರಮವಿದೆ. ನಾಲ್ಕನೆಯ ದಶಕವನ್ನು ದಾಟುವ ಹಂತದಲ್ಲಿರುವ ಆಶ್ರಮದ ರೂವಾರಿ ಸುಶೀಲಮ್ಮನವರು. ಅದಕ್ಕೆ ಜೊತೆಯಾದವರು ಕಾಂತಕ್ಕ. ನಂತರ ಬಂದವರು ರಮಾ ಮಾನೆಯವರು (ಅಮ್ಮಾಜಿ). ಈ ಮೂರು ಜನರ ಸಾರಥ್ಯದಲ್ಲಿ ಆಶ್ರಮ ಒಂದು ರೂಪು ಪಡೆದುಕೊಂಡಿದೆ. ಪ್ರತಿಯೊಬ್ಬ ಮಹಿಳೆಯ ಜೀವನ ಒಂದಲ್ಲ ಒಂದು ರೀತಿಯ ಸಂಕೋಲೆಯಿಂದ ಬಂಧಿತವಾಗಿರುತ್ತದೆ. ಆಕೆಯನ್ನು ಸುತ್ತುವರೆದಿರುವ ಅನೇಕ ಬಗೆಯ ಸಂಕೋಲೆಗಳು ಆಕೆಯನ್ನು ಓರ್ವ ಸ್ವತಂತ್ರ ವ್ಯಕ್ತಿಯಾಗಿ ತನ್ನ ಬದುಕನ್ನು ರೂಪಿಸಿಕೊಳ್ಳಲು ಅವಕಾಶವನ್ನೇ ನೀಡುವುದಿಲ್ಲ. ಸ್ತ್ರೀ ಸಹಜ ಗುಣಗಳು ಎಂದು ಗುರುತಿಸಲ್ಪಟ್ಟಿರುವ ಸಹನೆ, ಮೃದುತ್ವ, ಅತಿಭಾವುಕತೆ, ಪೋಷಣಾ ಮನೋಭಾವ ಇವೇ ಮುಂತಾದವು ಸ್ತ್ರೀ ಎನ್ನುವ ಪದಕ್ಕೆ ಹೆಚ್ಚು ಹಿಡಿಸಿದಂತವು. ಸುಪ್ತ ಶಕ್ತಿಗಳು, ಪ್ರತಿಭೆಗಳು, ಪೂರ್ಣವಾಗಿ ವಿಕಸನಕೊಂಡು ಬೆಳೆಗಳು ಇರುವ ಸದವಕಾಶ, ಕಲೆ, ಸಾಹಿತ್ಯ, ಸಂಗೀತ, ಶಿಕ್ಷಣ, ವಿಜ್ಞಾನ, ಧರ್ಮ, ಈ ಎಲ್ಲಾ ರಂಗಗಳಲ್ಲಿ ಪ್ರಚಂಡ ಸಾಧನೆ ಮಾಡಿ ಬಹುಮುಖವಾಗಿ ಈಗಾಗಲೇ ಅನೇಕ ಮಹಿಳೆಯರು ಮುಂದೆ ಬಂದಿದ್ದಾರೆ. ಹಾಗೆಯೇ ಕರ್ತವ್ಯಗಳನ್ನು ಮರೆತು ತಾತ್ಕಾಲಿಕ ಆವೇಗದಿಂದ ಸ್ವೇಚ್ಛೆಯಿಂದ ವರ್ತಿಸಿದರೆ ಕಾಲಾನಂತರದಲ್ಲಿ ಆಕೆಯ ಬದುಕು, ದೀಪದ ಸುತ್ತಲೂ ಕೆಲವು ನಿಮಿಷ ಕಾಲ ಉತ್ಸಾಹಪೂರ್ಣವಾಗಿ ಆತುರ-ಆವೇಶಗಳಿಂದ ಸುತ್ತಿ ನಂತರ ರೆಕ್ಕೆಯುದುರಿ ಬಿದ್ದು ನಿಸ್ಸಹಾಯಕವಾಗಿ ಒದ್ದಾಡುವ ಪತಂಗದಂತೆ.
'ಸ್ತ್ರೀ' ನಮ್ಮ ಶ್ರೇಷ್ಟ ಸಂಸ್ಕೃತಿಯ ರೂವಾರಿ, ನಮ್ಮ ಉನ್ನತ ಸಂಸ್ಕೃತಿಯ ರಕ್ಷಣೆ ಹೊತ್ತರುವವಳು. ಸ್ವಾತಂತ್ರ್ಯ ಪೂರ್ವದಲ್ಲಿ ಸುಭಾಷ್ಚಂದ್ರ ಬೋಸ್ರವರು ತಮ್ಮದೇ ಆದ ರೀತಿಯಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರು. ಜನಸಂಖ್ಯೆಯಲ್ಲಿ ಅರ್ಧದಷ್ಟಿರುವ ಮಹಿಳೆಯರೂ ಅದರಲ್ಲಿ ಪಾಲ್ಗೊಳ್ಳಬೇಕೆಂದು 1500 ಮಹಿಳೆಯರ ಗುಂಪು ಮಾಡಿ, 'ರಾಣಿ ಝೂನ್ಸಿ ಲಕ್ಷ್ಮೀಬಾಯಿ ಸೈನಿಕ ಪಡೆಯಲ್ಲಿದ್ದ ಒಬ್ಬ ಮಹಿಳೆ ಈಗಲೂ ನಮ್ಮೊಂದಿಗಿದ್ದಾರೆ. ಕಾನ್ಪುರದ ನಿವಾಸಿ ಕ್ಯಾಪ್ಟನ್ ಮಾನವತಿ ಆರ್ಯ. ಇಡೀ ಮಹಿಳಾ ಕುಲಕ್ಕೊಂದು ಆತ್ಮವಿಶ್ವಾಸ ಉಂಟು ಮಾಡುವವಳು ಅಕ್ಕ ಮಹಾದೇವಿ. 12ನೇ ಶತಮಾನದಲ್ಲಿಯೇ ಸಬಲೀಕರಣ ಹೊದಿದವಳು, ಸಬಲತೆಯನ್ನು ಸ್ವಪ್ರಯತ್ನದಿಂದ, ಆತ್ಮಬಲದಿಂದ ಪಡೆದುಕೊಂಡವಳು. ಆಕೆಯಲ್ಲಿದ್ದ ಧೈರ್ಯ, ಸ್ಥೈರ್ಯ, ಆತ್ಮವಿಶ್ವಾಸಗಳು ಬೆರಗುಗೊಳಿಸುವಂತವು. ಆಕೆ ತನ್ನ ಆಧ್ಯಾತ್ಮಿಕ ಬೆರಗುಗೊಳಿಸುವಂತಹವು. ಆಕೆ ತನ್ನ ಆಧ್ಯಾತ್ಮಿಕ ಗುರಿ ಸಾಧಿಸುವಲ್ಲಿ, ಯಾರಿಗೂ ಅಂಜುವವಳಲ್ಲ ಎಂದು ಸಾರಿ, ಅಂಜದೆ, ಅಳುಕದೆ ಬಂದ ಎರಡು ತೊಡರುಗಳನ್ನು ಸಾಹಸದಿಂದ ಎದುರಿಸಿದ ದಿಟ್ಟೆ. ಅಕ್ಕನ ಅಂದಿನ ದಿಟ್ಟ ನಿಲುವು, ಇಂದು ಅನೇಕ ಮಹಿಳೆಯರು ಸಹ ಆ ನಿಲುವು ತೆಗೆದುಕೊಂಡವರಿದ್ದಾರೆ. ಜಗತ್ತು ಎನ್ನವದೊಂದು ವಿಸ್ಮಯ ಲೋಕ, ಸಮಸ್ಯೆಗಳ ಆಗರ, ಆಕೆಯೊಂದು ಅದ್ಭುತ ಸೃಷ್ಟಿ, ಹೂವಿನ ಸೌಂದರ್ಯ, ಕೋಮಲತೆ, ಮಳೆಬಿಲ್ಲ ಮೋಹಕತೆ, ಮಂದಾನಿಲದ ಹಿತಸ್ಪರ್ಶ, ಕುರಿಯ ಮುಗ್ಧತೆ, ದುಂಬಿಗಳ ಚಾಂಚಲ್ಯ, ನರಿಯ ಯುಕ್ತಿ, ಮೇಘಗಳ ಮೇರುಗತ್ತಿ, ಹಂಸದ ನಡಿಗೆ, ನವೀನ ವೈಯಾರ, ಮುಗುಳುಗಳ ಮೃದುಹಾಸ, ಹಾಗೆಯೇ ವಜ್ರದಷ್ಟು ಕಠೋರ, ಕಠಿಣ ಹೃದಯ, ಇವೆಲ್ಲವುಗಳನ್ನು ಕಲೆಹಾಕಿ ಹೆಣ್ಣಾಗಿ ರೂಪಿಸಿದ್ದಾನೆ. ಪ್ರಕೃತಿಯಲ್ಲಿನ ಸೌಂದರ್ಯ ಪ್ರಜ್ಞೆ ಸ್ತ್ರೀಯಲ್ಲಿದೆ. ಆಂಗ್ಲ ಕವಿ ಮಿಕ್ಲೇಟ್ ಸ್ತ್ರೀ ದೈವಸೃಷ್ಟಿಯಲ್ಲಿ ಒಂದು ಅಸಂಗತ ಪವಾಡ ಎನ್ನುತ್ತಾನೆ. ಇಷ್ಟೆಲ್ಲಾ ಮಿಳಿತಗೊಂಡಿರುವ ಮಹಿಳೆಯಲ್ಲೂ ಸಹ ಭೂಮಿಯಲ್ಲಿ ಕುಸಿತವಾದಂತೆ ಒಮ್ಮೊಮ್ಮೆ ಆಕೆಯ ಮನದಲ್ಲೂ ಆಗುತ್ತದೆ. ಅದಕ್ಕೆ ಯಾವ ಕಾರಣವಾದರೂ ಆಗಬಹುದು. ಗಂಡನ, ಅತ್ತೆಯ ಹೀಯಾಳಿಕೆಯಿಂದ, ಕೆಲಸದ ಸ್ಥಳಗಳಲ್ಲಾಗುವ ಲೈಂಗಿಕ ಕಿರುಕುಳ, ಅತ್ಯಾಚಾರ, ಭ್ರೂಣಹತ್ಯೆ, ಬಲತ್ಕಾರ, ವೇಶ್ಯಾವಾಟಿಕೆ, ವರದಕ್ಷಿಣೆ ತರಲಾಗದೆ ಆತ್ಮಹತ್ಯೆ ಮುಂತಾದ ನೂರಾರು ಸಮಸ್ಯೆಗಳಿರಬಹುದು. ಅಂತಹ ಸಂದರ್ಭದಲ್ಲಿ ಮಹಿಳೆಗೆ ಒಬ್ಬ ಜ್ಞಾನಿ ಹೇಳಿದ ಹಾಗೆ, ಹತಾಶಳಾಗಬೇಡ, ನಿನ್ನ ಘನತೆಯ ಮೇಲೆ ದಾಳಿ ನಡೆದಾಗ ಕೂಡಾ ಆತ್ಮಗೌರವವನ್ನು ಕಾಯ್ದಿಟ್ಟುಕೊ; ಅಂತಹ ಸಂದರ್ಭದಲ್ಲಿ ನಿನ್ನಲ್ಲಾಗುವ ಕೀಳರಿಮೆ, ಆಘಾತವನ್ನು ತೊಲಗಿಸಿ, ಅತ್ಯಂತ ತೀಕ್ಷ್ಣವಾದ ಆತ್ಮಗೌರವದ ಪ್ರಜ್ಞೆ ಬೆಳೆಸಿಕೋ, ನಿಧಾನವಾಗಿ ಎಲ್ಲವೂ ತನ್ನಿಂದ ತಾನೇ ಬದಲಾಗುತ್ತದೆ. ಇದಕ್ಕೊಂದು ಜ್ವಲಂತ ನಿದರ್ಶನ ಶ್ರೀಮತಿ ಎಸ್.ಜಿ. ಸುಶೀಲಮ್ಮನವರು. ಪರಿಚಯ 1939ರ ಮೇ 24ರಂದು ಬೆಂಗಳೂರಿನ ಚಾಮರಾಜಪೇಟೆಯ ದೇವಾಂಗ ಸಮುದಾಯದ ಸಂಪ್ರದಾಯಸ್ಥ ತುಂಬು ಕುಟುಂಬದಲ್ಲಿ ಜನಿಸಿದವರು. ಹೈಸ್ಕೂಲ್ ಮುಗಿಸಿದ ನಂತರ ಕೆಲವು ಕಾರಣಗಳಿಂದ ಹಿರಿಯಣ್ಣನ ಜೊತೆ ಮನೆಯ ಜವಾಬ್ದಾರಿ ಹೊತ್ತವರು. ಸುಶೀಲಮ್ಮನವರು ನಡೆದು ಬಂದ ಹಾದಿಯದೇ ಬೇರೆ ಕತೆ. ಅವರ ಕುಟುಂಬ ಶ್ರೀಮಂತವಾಗಿದ್ದು ಎರಡನೆಯ ಮಹಾಯುದ್ಧದ ವ್ಯಾಪಾರಿಯಾಗಿದ್ದ ತಂದೆ ನಷ್ಟಕ್ಕೀಡಾದರು. ಕುಟುಂಬ ನಷ್ಟಕ್ಕೆ ಸಿಲುಕಿತು. ಓದುತ್ತಿದ್ದ ಈ ಬಾಲಕಿ, ಹೈಸ್ಕೂಲಿನಲ್ಲಿ ಬಡ ವಿದ್ಯಾರ್ಥಿಗಳ ನಿಧಿಯಿಂದ ನೆರವು ಸ್ವೀಕರಿಸಿದ ದಿನ, ಮುಂದೆ ಎಂದಾದರೂ ಈ ಋಣ ತೀರಿಸಬೇಕು ಎಂದು ಮನದಲ್ಲೇ ಶಪಥ ಮಾಡಿದರು. ಮುಂದೆ ತಂದೆ ಸಾವಿನಿಂದ ಕುಟುಂಬ ನಷ್ಟಕ್ಕೆ ಸಿಲುಕಿದಾಗ ರೆಮ್ಕೊ ಕಾರ್ಖಾನೆಯಲ್ಲಿ ಕೆಲಸಕ್ಕೆ ಸೇರಿದರು. ಅಲ್ಲಿ ಆಪರೇಟರ್ ಆಗಿ ಕೆಲಸ ಮಾಡುತ್ತ, ಅಲ್ಲಿನ ಉದ್ಯೋಗಸ್ಥ ಮಹಿಳೆಯರ ಮಕ್ಕಳ ಮೇಲ್ವಿಚಾರಣೆಯನ್ನೂ ಇವರೇ ನೋಡಿಕೊಂಡಿದ್ದರು. ಇದರ ಮಧ್ಯೆ ಅವರ ವಿವಾಹ ಬದುಕಿನ ಒಂದು ಆಕಸ್ಮಿಕವಷ್ಟೇ, ಮೂರು ಮಕ್ಕಳಾದವು. ಆದರೆ ವಿಧಿನಿಯಮ ಬೇರೆಯೇ ಇತ್ತಲ್ಲ. ಎಲ್ಲವನ್ನೂ ತೊರೆದು ಆಧ್ಯಾತ್ಮಿಕದತ್ತ ತಮ್ಮನ್ನು ತೆರೆದುಕೊಂಡರು. ಆದರೆ ವೈಧವ್ಯ ಅವರನ್ನು ಅಲ್ಲಿ ಸಿಲ್ಲಿಸದೇ ಮತ್ತೆ ಅವರ ಬದುಕನ್ನು ಸೇವಾಕ್ಷೇತ್ರದ ತಿರುವಿಗೆ ತೆಗೆದುಕೊಂಡು ಬಂದು ನಿಲ್ಲಿಸಿದಾಗ ಅವರ ಜೊತೆ ಜೊತೆಯಾಗಿ ಕಾಯಾ, ವಾಚಾ, ಮನಸಾ ಹೆಜ್ಜೆ ಹಾಕಿದವರು ಹಾಗೂ ಪ್ರಾರಂಭದಲ್ಲಿ ಮಗುವಿನಂತೆ ನೋಡಿಕೊಂಡವರು ಕಾಂತಕ್ಕನವರು. ಕಾರ್ಯಕ್ಷೇತ್ರ ಚೋಳನಾಯಕನಹಳ್ಳಿ. ಅಲ್ಲಿನ ಹಳ್ಳಿಯ ಮಹಿಳೆಯರನ್ನು ಕಲೆಹಾಕಿ ಮಣ್ಣನ್ನು ಅಗೆದು ಅದರಿಂದಲೇ ಗೋಡೆಗಳನ್ನು ಕಟ್ಟಿ, ಹುಲ್ಲು ಛಾವಣಿಯನ್ನು ಹೊದಿಸಿ, ಒಳಗೆ ಮೋಡಿಗೋಡೆಗಳನ್ನು ಹಾಕಿ ವಿಭಾಗಿಸಿ ಶಾಲೆ ಸಿದ್ಧಪಡಿಸಿದರು. ಎಲ್ಲವೂ ಬರೀ ಮಣ್ಣಿನಿಂದ ಮಾಡಿದ್ದು, ಅಲ್ಲಿನ ಮಕ್ಕಳು ಚಿಕ್ಕ-ಪುಟ್ಟ ಕೈಕೆಲಸಗಳಿಂದ ನೆರವು ನೀಡಿದರು. ಶಾಲಾ ಮಕ್ಕಳಿಗೆ ತಿಂಡಿ-ಹಾಲು ಹಂಚುವ ಕಾರ್ಯವನ್ನು ಕೈಗೊಂಡರು. ಅಳಿದುಳಿದನ್ನು ಹಸಿದ ತಮ್ಮ ಸಂಸ್ಥೆಯ ಮಕ್ಕಳಿಗೂ ಬಡಿಸಿದವರು. ಸುಶೀಲಮ್ಮನವರ ಸೇವಾಕಾರ್ಯದಲ್ಲಿ ಒಂದು ವೈಶಿಷ್ಟ್ಯವಿದೆ. ಉಂಡುಟ್ಟು ಸುಖವಾಗಿದ್ದ ಸಿರಿವಂತ ಮಹಿಳೆ ಹೊತ್ತು ಕಳೆಯಲು ಮಾಡುವ ಸೇವಾಕಾರ್ಯ ಅಲ್ಲ ಇವರದು, ಅಥವಾ ಕಾರ್ಯವನ್ನೇ ಬಂಡವಾಳವಾಗಿಟ್ಟುಕೊಂಡು ರಾಜಕೀಯ ಮಾಡುವ ಮನಸ್ಥಿತಿಯೂ ಅವರದಲ್ಲ. ಸಮಾಜದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ, ಶೋಷಣೆ, ಜೀವಂತದಹನ, ವರದಕ್ಷಿಣೆ ಕಿರುಕುಳದಂತಹ ಅನೇಕ ಸಾಮಾಜಿಕ ಸಮಸ್ಯೆಗಳನ್ನು ಕಣ್ಣಾರೆ ಕಂಡು ಅಂತಹವರಿಗೆ ತಮ್ಮ ಕೈಲಾದ ನ್ಯಾಯ ಒದಗಿಸಲು, ಅವರ ಬಾಳಿನ ದಿವ್ಯಜ್ಯೋತಿಯನ್ನು ಬೆಳಗಿಸಲು ಕಂಕಣ ಬದ್ಧರಾಗಿದ್ದಾರೆ. ಅದರಲ್ಲಿ ಯಶಸ್ಸನ್ನು ಸಹ ಕಂಡಿದ್ದಾರೆ. ಬೆಂಗಳೂರಿನ ಹೆಬ್ಬಾಳದ ಬಳಿ ಇರುವ ಚೋಳನಾಯಕನಹಳ್ಳಿಯ ಸುಮಂಗಲಿ ಸೇವಾಶ್ರಮದ ಪರಿಸರ ಎಂತಹವರನ್ನು ಒಂದು ಕ್ಷಣ ಮೈಮರೆಸುತ್ತದೆ. 2000ರಲ್ಲಿ ತನ್ನ ಬೆಳ್ಳಿ ಹಬ್ಬವನ್ನು ಸಹ ಆಚರಿಸಿಕೊಂಡಿದೆ. ಆಶ್ರಮಕ್ಕೆ ಭೇಟಿ ನೀಡಿದಾಗ ಅಲ್ಲಿನ ನಿರ್ಮಲತೆ ಮನಸ್ಸನ್ನು ತಟ್ಟುತ್ತದೆ. ಅಲ್ಲಿರುವ ಎಲ್ಲರೂ ಒಂದಲ್ಲ ಒಂದು ಕೆಲಸದಲ್ಲಿ ತೊಡಗಿಸಿಕೊಂಡಿರುತ್ತಾರೆ. ಆಶ್ರಮದಲ್ಲೆಲ್ಲ ಹಬ್ಬಿ ನಿಂತಿರುವ ಬಳ್ಳಿ-ಗಿಡಗಳೆಲ್ಲ ಹಸಿರು ಹೊತ್ತು ವಾತಾವರಣದಲ್ಲಿ ಜೀವಂತಿಕೆಯನ್ನು ತುಂಬಿವೆ. ಸ್ವಾವಲಂಬಿಗಳಾಗಿ ಬದುಕಲು ಬೇಕಾದ ಅನುಕೂಲಗಳೂ, ಕೈಮಗ್ಗ, ಹೊಲಿಗೆ, ವಿವಿಧ ಗುಡಿ ಕೈಗಾರಿಕೆಗಳು, ಕಲಾತ್ಮಕವಾಗಿ ಸಿದ್ಧಪಡಿಸುವ ಉಡುಪುಗಳ ತಯಾರಿಕೆ ತರಬೇತಿ ನೀಡಲಾಗುತ್ತಿದೆ. ತಮ್ಮ ಈ ಎಪ್ಪತ್ತನೆಯ ವಯಸ್ಸಿಲ್ಲಿಯೂ ಪಾದರಸದಂತೆ ಚುರುಕಾಗಿ ಓಡಾಡುತ್ತಾರರೆ. ಆಶ್ರಮದ ಕಾರ್ಯಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ದಿನದ 24 ಗಂಡೆಗಳೂ ಸಾಲದು ಎನ್ನುವ ಅವರ ಮನೋಭಿಲಾಷೆ ಮತ್ತು ಕಾರ್ಯತತ್ಪರತೆಗೆ ತಲೆದೂಗಲೇಬೇಕು. ಸಂಸ್ಥೆ ಬೆಳೆಸಲು ಸಹಕರಿಸಿದೆ. ಪ್ರತಿಯೊಬ್ಬರನ್ನು ನೆನೆಯುತ್ತಾರೆ. ಸರಳಾ ಬದುಕು ಮತ್ತು ಕಾರ್ಯ ವೈಖರಿಯಿಂದ ಕರ್ನಾಟಕದ ಉದ್ದಗಲಕ್ಕೂ, ಸಂಚರಿಸಿ ಸಂಘಟನೆ ಮಾಡಿದ್ದಾರೆ. ಸೇವೆ ಮಾಡಬೇಕೆನ್ನುವ ಮನೋಭಾವ ಮೂಡುವುದೇ ಅಪರೂಪ, ಅದರಲ್ಲಿಯೂ ಹೆಣ್ಣುಮಕ್ಕಳಿಗೆ ಇಂತಹ ಭಾವನೆ ಮೂಡಿದರೆ ಅದು ಕಾರ್ಯರೂಪಕ್ಕೆ ಬರುವುದು ಸುಲಭ ಸಾಧ್ಯವಲ್ಲ. ಸಂಕಲ್ಪ, ಧೈರ್ಯ, ಕರ್ತೃತ್ವ ಶಕ್ತಿ ಪಡೆದ ಮಹಿಳೆಯೊಬ್ಬರು ದೀನ-ದಲಿತರ ಸೇವೆಯನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವುದು ಅಸಮಾನ್ಯ ಸಂಗತಿ. ಒಬ್ಬ ಮಹಿಳೆಯ ಅಗತ್ಯ ಶ್ರದ್ಧೆ, ಹಲವಾರು ಮಂದಿಯ ಒತ್ತಾಸೆ, ಈ ಮಾದರಿ ಆಶ್ರಮಕ್ಕೆ ತಳಹದಿ. ಇಂದಿನ ಸಮಾಜದಲ್ಲಿ 'ಸಮಾಜಸೇವೆ'ಎಂಬ ಪದ ಕೆಲ ಭಾಷಣಗಳಲ್ಲಿ ಬಳಕೆಯಾಗುವ ಸವಕಳಿ ನಾಣ್ಯವಾಗಿದೆ. ಮೂರು ದಶಕಗಳನ್ನು ದಾಟಿರುವ ಸುಮಂಗಲಿ ಸೇವಾ ಆಶ್ರಮ ಇದಕ್ಕೆ ಮಾತ್ರ ಅಪವಾದ. ನೊಂದ ಮಹಿಳೆಯರು ಮತ್ತು ಅನಾಥ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಅವಿರತ ಶ್ರಮಿಸುತ್ತಿರುವ ಈ ಆಶ್ರಮದ ಸೇವೆ ಅನುಪಮ, ಆದರ್ಶನೀಯ. ಸ್ವಭಾವತಃ ಸರಳಜೀವಿಯಾದ ಸುಶೀಲಮ್ಮನವರು ಪ್ರಶಸ್ತಿ-ಪುರಸ್ಕಾರಗಳಿಗಾಗಿ ಆಸೆ ಪಟ್ಟವರಲ್ಲ. ಪ್ರಚಾರಪ್ರಿಯರೂ ಅಲ್ಲ. ತಮ್ಮ ಮನಸಾಕ್ಷಿಗೆ ಸರಿದೋರಿದಂತೆ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಆದರೂ ಅವರ ಸೇವೆಯನ್ನು ಗುರುತಿಸಿ ಹತ್ತು ಹಲವಾರು ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬಂದಿವೆ. ಕೇಂದ್ರ ಸರ್ಕಾರದ ರಾಷ್ಟ್ರೀಯ ಪ್ರಶಸ್ತಿ , ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ, ಬಸಸವ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಜಾನಕಿದೇವಿ ಬಜಾಜ್ ಪುರಸ್ಕಾರ ಮುಖ್ಯವಾದವು. ಈ ಸಂಸ್ಥೆ ಆರಂಭದ ದಿನದಲ್ಲಿ ಎದುರಿಸಿದ ಕಷ್ಟ-ಕೋಟಲೆಗಳು ಅನೇಕ. ಈ ಸಂಸ್ಥೆಯ ಸೇವೆಯನ್ನು ನಾನಾ ಸಂಘ-ಸಂಸ್ಥೆಗಳು ಗುರುತಿಸಿ ಸಹಾಯಕಹಸ್ತ ನೀಡಿವೆ. ಅಷ್ಟೇ ಅಲ್ಲ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳ, ಸಮಾಜ ಸೇವಾ ಇಲಾಖೆಯಿಂದ ನೆರವು ದೊರೆಯುತ್ತಿದೆ. ಅನೇಕ ಬಾರಿ ಅನುದಾನ ಬರದಿದ್ದಾಗ ಬಡ್ಡಿಯಂತೆ ಸಾಲ ತಂದು ಸಂಸ್ಥೆ ನಡೆಸಿದ್ದಾರೆ. ಬಾಳಿನ ಕ್ರೂರಮುಖವನ್ನು ಕಂಡ ಅಬಲೆಯರಿಗೆ ಜೀವನಕ್ಕೆ ಮಾರ್ಗದರ್ಶಿಯಾಗಿ ಅವರ ಮನಸ್ಸಿನಲ್ಲಿರುವ ಕರಾಳ ಛಾಯೆಯನ್ನು ತೆಗೆದು ಆಶಾಭಾವನೆ ತುಂಬುತ್ತಿದ್ದಾರೆ. ವೃತ್ತಿ ತರಬೇತಿ ಕೇಂದ್ರಗಳಾದ ಹೊಲಿಗೆ ತರಬೇತಿ ಕೇಂದ್ರ, ಹ್ಯಾಡಲೂಂ ತರಬೇತಿ ಕೇಂದ್ರ, ಎಂಬ್ರಾಯಿಡರಿ ನಿಟ್ಟಿಂಗ್ ತರಬೇತಿ ಕೇಂದ್ರಗಳು, ಪಾಟರಿ, ಡೈರಿ, ತೋಟಗಾರಿಕಾ ತರಬೇತಿ ಕೇಂದ್ರ ಮುಂತಾದ ವೃತ್ತಿಗೆ ಸಂಬಂಧಿಸಿದಂತೆ ತರಬೇತಿ ಕೇಂದ್ರಗಳಲ್ಲಿ ಮಹಿಳೆಯರನ್ನು ಸಜ್ಜುಗೊಳಿಸುತ್ತಾರೆ. ಗಾಂಧೀಜಿ ಮತ್ತು ಬಸವಣ್ಣನವರ ಆದರ್ಶನವೇ, ಇವರ ಒಟ್ಟು ಬದಿಕಿಗೆ ಒಂದು ರೂಪ, ತಂದುಕೊಟ್ಟಿದೆ. ಬಾಳಿನ ಹಲವಾರು ಬೀಳುಗಳ ಜೊತೆ ಬೇರೆಯವರ ಏಳ್ಗೆಗಾಗಿ ಇಡೀ ಜೀವನವನ್ನು ತ್ಯಾಗ ಮಾಡಿ ಆಧ್ಯಾತ್ಮಿಕದತ್ತ ಮನ ಜಗ್ಗುತ್ತಿದ್ದರೂ ಸಾಮಾಜಿಕ ಸೇವೆಗೆ ತಮ್ಮನ್ನರ್ಪಿಸಿಕಂಡು ಬದುಕಿನಲ್ಲಿ ಸಾರ್ಥಕತೆ ಕಂಡುಕೊಂಡವರು ಎಸ್.ಜಿ. ಸುಶೀಲಮ್ಮನವರು. ಅವರಿಗೆ ಬಸವಶ್ರೀ ಪುರಸ್ಕಾರ ಲಭಿಸಿದ ಸಂದರ್ಭ ಒಮ್ಮೆ ಹಿರಿಯರೂ, ಸಾಹಿತಿಗಳೂ ಆದ ಡಾ.ಎಚ್.ಎಂ.ಮರುಳಸಿದ್ದಯ್ಯನವರ ಜೊತೆ ಮಾತನಾಡುತ್ತಿದ್ದ ವೇಳೆ, ನೀನ್ಯಾಕೆ ಸುಶೀಲಮ್ಮನವರ ಬಗ್ಗೆ ಬರೆಯಬಾರದು ಎನ್ನುವ ತುಣುಕೊಂದನ್ನು ನನ್ನ ತಲೆಯಲ್ಲಿ ಬಿಟ್ಟರು, ಅದು ಹುಳದಂತೆ ಆಗಾಗ್ಗೆ ಕೊರೆಯುತ್ತಲೇ ಇತ್ತು. ಆಗ ಅನೇಕರಿಗೆ ಪತ್ರ ಬರೆದು ಪರಿಚಿತ ಸುಶೀಲಮ್ಮನವರ ಬಗ್ಗೆ ಬರೆದು ಕಳಿಸಿ ಎಂದರೂ ಅವರ ಬಗ್ಗೆ ಲೇಖನಗಳು ಕ್ರೋಡಿಕರಣಗೊಳ್ಳಲು ವರ್ಷಗಳೇ ಆದವು. ಎರಡು ವರ್ಷಗಳ ಈ ಸುದೀರ್ಘ ಅವಧಿಯಲ್ಲಿ ಅಮ್ಮನ 72ನೆಯ ವರುಷದ ಹರುಷದಲ್ಲಿ ಈ ಪುಸ್ತಕ ಬಿಡುಗಡೆಯಾಗುತ್ತಿರುವುದು ಸಂತಸದ ವಿಷಯವೇ. ಒಬ್ಬ ಸಾಧಕಿಯ ಬಗ್ಗೆ ಬರೆಯುತ್ತಿರುವುದು ನನಗೆ ತೃಪ್ತಿ ತಂದಿದೆ. ಹತ್ತಾರು ವರುಷಗಳಿಂದ ಅಮ್ಮನ ಸಂಪರ್ಕವಿದ್ದರೂ, ಈ ಪುಸ್ತಕ ಬರೆಯವಾಗ ಅವರ ಜೊತೆ ಕಳೆದ ಸಮಯ ಸದಾ ನೆನಪಿನಲ್ಲಿರುತ್ತದೆ. ಅವರು ಮಾತನಾಡುತ್ತ ತಮ್ಮ ಜೀವನದ ಪುಟಗಳನ್ನು ತಿರುವುತ್ತಿದ್ದ ಹಾಗೆಯೇ ನನಗನ್ನಿಸಿದ್ದು, ನಮ್ಮಲ್ಲಿ ಅನೇಕ ಮಹಿಳೆಯರು ಜೀವನದಲ್ಲಿ ಕುಸಿತ ಕಂಡಾಗ ಅಮ್ಮನಂತೆ ಯೋಚಿಸಿ ನಡೆದರೆ....? ಅನೇಕ ನೊಂದ, ಶೋಷಿತ ಮಹಿಳೆಯರು ಇವರಲ್ಲಿಗೆ ಬಂದಾಗ ಅವರಿಗೆ ನೀಡುವ ಸಾಂತ್ವನ ಜೀವನದ ಗತಿಯನ್ನು ಬದಲಾಯಿಸುತ್ತದೆ. ಹಾಗೆ ಬಾಳಿಗೊಂದು ದಿಕ್ಕನ್ನು ಸೂಚಿಸುತ್ತದೆ. ಸುಮಾರು 35 ವರ್ಷ ವರುಷಗಳ ಸತತ ಹೋರಾಟದ ಛಲ, ಶ್ರಮ, ಅವರು ಸವೆಸಿದ ಸೇವಾ ಬದುಕಿನ ಸೇವೆಯೊಂದಿಗೆ ಅರ್ಥವಿದೆ. ತ್ಯಾಗಕ್ಕೊದು ಬೆಲೆಯಿದೆ. ಸದ್ಯ ಅವರ ಮನದಲ್ಲಿರುವ ತುಡಿತ ಆಧ್ಯಾತ್ಮಿಕ ಸಾಧನೆಯ ಪಥದತ್ತ ಓಡುವ ಮನಸ್ಸನ್ನು ಗಟ್ಟಿಯಾಗಿ ಹಿಡಿದು ನಿಲ್ಲಿಸಿದ್ದಾರೆ. ಸಂಗಾತಿಯಂತಿರುವ ಅಮ್ಮಾಜಿ (ರಮಾ ಮಾನೆ)ಯವರ ಜೊತೆ ಇಪ್ಪತ್ತೈದು ವರುಷದಿಂದ ಆಧ್ಯಾತ್ಮಿಕತೆಯ ಭಾವನೆಗಳನ್ನು ಹಂಚಿಕೊಂಡಿದ್ದಾರೆ. ಒಬ್ಬರಿಗೊಬ್ಬರು ಅಗಲುವುದೇ ಇಲ್ಲ. ಪರಸ್ಪರ ಒಬ್ಬರಿಗೊಬ್ಬರು ಅಗಲುವುದೇ ಇಲ್ಲ. ಪರಸ್ಪರ ಒಬ್ಬರನ್ನೊಬ್ಬರು ಗೌರವಿಸುತ್ತಾರೆ, ಪೂಜಿಸುತ್ತಾರೆ. ಕೆಲವೊಮ್ಮೆ ಅಮ್ಮಾಜಿ, ಆಶ್ರಮಕ್ಕೆ ಬಂದ ದಿನದಿಂದಲೂ ಅಮ್ಮನನ್ನು ಮಗುವಿನಂತೆ ಸಲಹುತ್ತಾರೆ, ನೋಡಿಕೊಳ್ಳುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ಸಂಸ್ಥೆ ಆಶ್ರಮ ಹುಟ್ಟುಹಾಕಲು ಕಲ್ಪನೆಯೊಂದು ಮನದಲ್ಲಿ ಬರಲು ಕಾರಣರಾದವರು ಮಾಜಿ ಸಚಿವೆ ಲೀಲಾದೇವಿ. ಆರ್. ಪ್ರಸಾದ್‍ರವರು, ಸುಶೀಲಮ್ಮ ನನ್ನ ಮಾನಸಪುತ್ರಿಯೆಂದೇ ಹೇಳಿಕೊಳ್ತಾರೆ. ಅವರ ಭುವನೇಶ್ವರಿ ಮಹಿಳಾ ಸಮಾಜದಲ್ಲಿದ್ದಾಗಲೇ ಮನದಲ್ಲಿ ಚಿಗುರಿದ್ದು ಇಂದು ಸುಮಂಗಲಿ ಸೇವಾಶ್ರಮದಂತಹ ದೊಡ್ಡ ಸಂಸ್ಥೆಯಾಗಿ ಬೆಳೆದಿದೆ. ಎಲ್ಲರನ್ನು ಸದಾ ನೆನೆಯುವ ಅಮ್ಮ ಸದಾ ಅನ್ನಪೂರ್ಣೆ. ಶೋಭಾ ಎಚ್.ಜಿ.
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
SITE MAP
SiteTRAININGJOB |
HR SERVICESOTHER SERVICESnIRATHANKA CITIZENS CONNECT |
NIRATHANKAPOSHOUR OTHER WEBSITESSubscribe |
MHR LEARNING ACADEMY
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|