ಮುನ್ನುಡಿ:- ಅರ್ಪಿತಾಳ ಕಥೆಯಲ್ಲಿ ಸಮಾಜದಲ್ಲಿ ತುಂಬಾ ಹಿಂಸೆಗೊಳಪಟ್ಟ ಒಬ್ಬ ತಾಯಿಯ ಮಗನನ್ನು ದಂಪತಿಗಳು ದತ್ತು ತೆಗೆದುಕೊಂಡು ಆ ಮಗುವಿನ ಒಳ್ಳೆಯ ಭವಿಷ್ಯಕ್ಕೆ ದಾರಿಯಾದರು. ಇನ್ನೊಂದು ಮಗುವನ್ನು ದತ್ತು ತೆಗೆದುಕೊಂಡು ಹೆಚ್.ಐ.ವಿ ಇರಬಹುದು ಎಂದು ತಿಳಿದರೂ ಎದೆ ಗುಂದದೆ, ಮಗುವನ್ನು ತಿರಸ್ಕರಿಸದೆ, ಮತ್ತೆ ಒಮ್ಮೆ ಪರೀಕ್ಷೆ ಮಾಡಿಸಿ, ಪ್ರೀತಿಯ ಸೆಲೆ ಹರಿಸಿದರು. ಇದೇ ರೀತಿ ಹೆತ್ತ ತಾಯಂದಿರು ತ್ಯಜಿಸಿದ ಮಕ್ಕಳಿಗೆ ಇಂತಹ ಮನೆಯೇ ತೃಪ್ತಿಕರ. ಕುಟುಂಬದ ಪ್ರೀತಿ ಸಿಕ್ಕಿ ಅನಾಥರಾಗದೆ ಬೆಳೆದರೆ ಎಷ್ಟೋ ಮಕ್ಕಳು ಬೀದಿಯ ಪಾಲಾಗಲಾರರು ಅಲ್ಲವೆ? ಶೇಖರ್ ಮತ್ತು ಮಾಲಿನಿ ಪ್ರೀತಿಸಿ ಮದುವೆಯಾದವರು. ಬಹು ಅನ್ಯೋನ್ಯ ದಾಂಪತ್ಯ ಜೀವನ ಅವರದು. ಸುಂದರವಾದ ಹೂವೊಂದು ಸಾರ್ಥಕತೆ ಪಡೆದುಕೊಳ್ಳುವುದು ಅದು ದೇವರ ಪೂಜೆಗೆ ಒದಗಿದಾಗ. ಹಾಗೆ ಹೆಣ್ಣಿನ ಜೀವನ ಸಾರ್ಥಕತೆ ಪಡೆಯುವುದು ಆಕೆಯ ಮಡಿಲಿಗೆ ಒಂದು ಮಗು ಬಂದಾಗ.
ಅವತ್ತು ಬೆಳಗ್ಗೆಯಿಂದ ಮಾಲಿನಿಯ ಮನಸ್ಸಿಗೆ ಸಮಾಧಾನವೇ ಇಲ್ಲ. ಒಂದೆಡೆ ವೇದನೆ, ಮತ್ತೊಂದೆಡೆ ಆತಂಕ, ಏನೂ ತೋಚದ ಸ್ಥಿತಿ. ಕುಟುಂಬದ ಮೇಲೆ ಆವರಿಸಿದ ಕಾರ್ಮೋಡ ಹೇಗೆ ಸರಿದೀತು ಎನ್ನುವ ಆತಂಕವೇ ಆಕೆಯನ್ನು ಕಾಡುತ್ತಿತ್ತು. ಹಾಗೆ ನೋಡಿದರೆ ಆಕೆ ಹುಟ್ಟಿನಿಂದ ಸುಖವನ್ನೇ ಪಡೆದುಕೊಂಡು ಬಂದವಳಲ್ಲ. ಜೀವನದ ಪ್ರತೀ ಹೆಜ್ಜೆಯೂ ಕಲ್ಲು ಮುಳ್ಳಿನ ಹಾದಿಯಲ್ಲೇ. ಆದರೂ ಧೈರ್ಯಗೆಟ್ಟವಳಲ್ಲ. ಪ್ರತೀ ಸಮಸ್ಯೆ ಸೃಷ್ಟಿಸಿಕೊಟ್ಟ ದೇವರು ಅದಕ್ಕೊಂದು ಪರಿಹಾರವನ್ನು ಕೊಟ್ಟೇಕೊಟ್ಟಿರುತ್ತಾನೆಂಬುದು ಅವಳ ಗಟ್ಟಿ ನಂಬಿಕೆ. ಆ ನಂಬಿಕೆಯೇ ಅವಳ ಕುಟುಂಬವನ್ನು ಇಲ್ಲಿಯವರೆಗೆ ನಡೆಸಿಕೊಂಡು ಬಂದಿದೆ. ಹತ್ತು ವರ್ಷಗಳಾದರೂ ಒಂದು ಮಗುವನ್ನು ಪಡೆಯುವ ಭಾಗ್ಯ ಶೇಖರ್ ಮತ್ತು ಮಾಲಿನಿ ದಂಪತಿಗಳು ಕೇಳಿಕೊಂಡು ಬಂದಿರಲಿಲ್ಲ. ಅನೇಕ ವೈದ್ಯರ ಬಳಿ ತಪಾಸಣೆ ಮಾಡಿಸಿದರು. ಆದರೆ ಏನೂ ಪ್ರಯೋಜನವಾಗಲಿಲ್ಲ. ತನ್ನ ದೌರ್ಭಾಗ್ಯಕ್ಕೆ ಕೊರಗಿದ ಮಾಲಿನಿ, ಗಂಡನನ್ನು ಮರುಮದುವೆಯಾಗಲು ಸೂಚಿಸಿದಳು. ಆದರೆ ಶೇಖರ್ ಒಪ್ಪಿರಲಿಲ್ಲ. ಮಾಲಿನಿ, ನನ್ನ ಪ್ರೀತಿಯ ಪರಿ ಅರಿತ ನೀನೂ ಈ ರೀತಿ ಮಾತನಾಡಬಹುದಾ? ಎಂದು ಅವಳಿಗೆ ಪ್ರಶ್ನೆ ಮಾಡಿದ್ದ. ಅವತ್ತಿಗೆ ಆ ಚರ್ಚೆ ಕೊನೆಗೊಂಡಿತು. ಆದರೆ ಸಮಸ್ಯೆಗೆ ಪರಿಹಾರ ಮಾರ್ಗವೊಂದನ್ನು ಅವನೇ ಸೂಚಿಸಿದ್ದ. ಮಕ್ಕಳಾಗದಿದ್ದರೇನಂತೆ, ನಾವು ಒಂದು ಮಗುವನ್ನು ದತ್ತು ತೆಗೆದುಕೊಳ್ಳೋಣ ಎಂದಿದ್ದ. ಈ ವಿಚಾರ ಅವಳಿಗೂ ಸಮ್ಮತವೇ ಆಗಿತ್ತು. ಒಂದು ದತ್ತಕ ಏಜೆನ್ಸಿಯ ಮೂಲಕ ಶೇಖರ್ ಮತ್ತು ಮಾಲಿನಿ ಒಂದು ಗಂಡು ಮಗುವನ್ನು ದತ್ತು ತೆಗೆದುಕೊಂಡರು. ಆ ಮಗುವಿಗೆ ಆದಿತ್ಯ ಎಂದು ನಾಮಕರಣ ಮಾಡಿದರು. ಖುಷಿ ತಂತಾನೆ ಆ ಮನೆಯಲ್ಲಿ ಕಾಲಿರಿಸಿತು. ಅವರ ಸಂಸಾರ ನೋಡಿದ ಯಾರೂ ಆದಿತ್ಯ, ಅವರ ದತ್ತು ಮಗು ಎಂದು ಹೇಳುವಂತೆಯೇ ಇರಲಿಲ್ಲ. ಆದಿತ್ಯ ಶೇಖರ್ ಮತ್ತು ಮಾಲಿನಿಯ ಪ್ರೀತಿಯ ಸೆಲೆಯಾದ. ಆದಿತ್ಯ ಹುಟ್ಟಿನಿಂದಲೇ ಪ್ರೀತಿವಂಚಿತ ಮಗು. ಅವನನ್ನು ಪಡೆದ ತಾಯಿ ಒಳ್ಳೆಯ ಮನೆತನದಿಂದ ಬಂದವಳಾದರೂ ಸಂಸಾರ ಸುಖದ ಅದೃಷ್ಟ ಅವಳಿಗಿರಲಿಲ್ಲ. ಆದಿತ್ಯ ಗರ್ಭದಲ್ಲಿರುವಾಗಲೇ ಅವಳ ಪತಿ ಆಕೆಯನ್ನು ತೊರೆದ. ಪತಿಯೇ ಸರ್ವಸ್ವ ಎಂದುಕೊಂಡವಳಿಗೆ ಇದು ಸಹಿಸಲಾರದ ಆಘಾತ, ಪರಿಣಾಮ ಆಕೆಗೆ ಮತಿಭ್ರಮಣೆಯಾಯಿತು. ಇದೇ ಪರಿಸ್ಥಿತಿಯಲ್ಲಿ ಆಕೆ ಗಂಡುಮಗುವಿಗೆ ಜನ್ಮವಿತ್ತು ಕೊನೆಯುಸಿರೆಳೆದಳು. ಆ ಮಗುವೇ ಆದಿತ್ಯನಾಗಿ ಶೇಖರ್ ಮತ್ತು ಮಾಲಿನಿ ಮಡಿಲನ್ನು ತುಂಬಿದ. ದಂಪತಿಗಳು ಅವನಿಗೆ ಪ್ರೀತಿಯ ಸುಧೆಯನ್ನೇ ಹರಿಸಿದರು, ಆದಿತ್ಯನಿಗೆ ಕೊರತೆ ಎಂಬುದೇ ಇರಲಿಲ್ಲ. ಆದಿತ್ಯನಿಗೆ ಮೂರು ವರ್ಷಗಳಾದ ಮೇಲೆ ಶೇಖರ್ ಮತ್ತು ಮಾಲಿನಿ ದಂಪತಿಗಳು ಒಂದು ಹೆಣ್ಣು ಮಗುವನ್ನು ದತ್ತು ಪಡೆಯಲು ನಿರ್ಧರಿಸಿದರು. ಮನೆಗೆ ಮತ್ತೊಂದು ಸದಸ್ಯಳ ಆಗಮನ, ಸಂತಸದ ಹೊಳೆಯನ್ನೇ ಹರಿಸಿತ್ತು. ಆದಿತ್ಯನಿಗಂತೂ ಖುಷಿಯೋ ಖುಷಿ. ತನ್ನೊಡನೆ ಆಟವಾಡಲು ತಂಗಿಯೊಬ್ಬಳು ಬರಲಿದ್ದಾಳೆಂಬುದು ಆತನ ಹರ್ಷಕ್ಕೆ ಕಾರಣ. ಅರ್ಪಿತಳ ಹಡೆದ ತಾಯಿ, ಮನೆಯವರನ್ನು ಬಿಟ್ಟು ತನ್ನ ಪ್ರಿಯತಮನ ಹಿಂದೆ ಹೋದಳು. ಮದುವೆಯಾಗುವುದಕ್ಕೆ ಮೊದಲೇ ತಾಯ್ತನವನ್ನು ಪಡೆದಳು, ಪ್ರೀತಿಸಿದವನು ವಂಚಿಸಿದ. ತವರು ಮನೆಗೆ ಮತ್ತೆ ಹೋಗಲಾರದೆ, ಅನಾಥಾಶ್ರಮಕ್ಕೆ ಸೇರಿ ಅಲ್ಲೇ ಹೆಣ್ಣು ಮಗುವಿಗೆ ಜನ್ಮವಿತ್ತು, ಆತ್ಮಹತ್ಯೆ ಮಾಡಿಕೊಂಡಳು. ಈಗ ಮಾಲಿನಿ ಮತ್ತು ಶೇಖರ್ ರವರಿಗೆ ಆದಿತ್ಯ, ಅರ್ಪಿತ ಇಬ್ಬರು ಮಕ್ಕಳು. ಅವರದು ಈಗ ತುಂಬು ಕುಟುಂಬ. ಮಕ್ಕಳ ನಡುವೆ ಅತ್ಯಂತ ಮಧುರ ಬಾಂಧವ್ಯ ಏರ್ಪಟ್ಟಿತ್ತು. ದುರಾದೃಷ್ಟವನ್ನೇ ಹೊತ್ತು ಬಂದಿದ್ದ ಮಕ್ಕಳು ಬೆಚ್ಚನೆಯ ಗೂಡು ಸೇರಿ ಸುರಕ್ಷಿತ ಭಾವ ಹೊಂದಿದ್ದರೆ, ಮಕ್ಕಳೇ ಇಲ್ಲದ ದಂಪತಿಗಳು ಮುದ್ದು ಮಕ್ಕಳಿಬ್ಬರನ್ನು ಹೊಂದಿ ಬಾಳು ಬಂಗಾರವಾದ ಸಾರ್ಥಕತೆಯಲ್ಲಿದ್ದರು. ಆದರೆ, ಎಲ್ಲ ಸರಿ ಇದ್ದರೆ ಅದಕ್ಕೆ ಜೀವನ ಎನ್ನಲಾದೀತೆ...? ಒಂದು ಕೈಯಲ್ಲಿ ಕೊಟ್ಟು ಹರಸಿದ ದೇವರು ಇನ್ನೊಂದು ಕೈಯಲ್ಲಿ ಕಿತ್ತೊಯ್ಯಲು ಕಾಯುತ್ತಿರುತ್ತಾನೆ. ಅದಕ್ಕೇ ವಿಧಿ ಎನ್ನುವುದು. ಆದಿತ್ಯನ ವಿವರ ವೈದ್ಯಕೀಯ ಪರೀಕ್ಷೆ ಮಾಡಿಸಿ, ವರದಿ ಇಟ್ಟುಕೊಂಡಿದ್ದ ಮಾಲಿನಿ ಶೇಖರ್, ಅರ್ಪಿತಳನ್ನೂ ವಿವರ ವೈದ್ಯಕೀಯ ಪರೀಕ್ಷೆಗೆ ಕರೆದೊಯ್ದರು. ಅರ್ಪಿತಾಳ ರಕ್ತ ಪರೀಕ್ಷೆ ಮಾಡಿದಾಗ ವರದಿಯಲ್ಲಿ ಎಚ್.ಐ.ವಿ ಪಾಸಿಟಿವ್ ಎಂದು ಬಂತು. ದಂಪತಿಗಳ ಮೇಲೆ ಸಿಡಿಲು ಬಡಿದಂತಾಯಿತು. ಏನು ಮಾಡಬೇಕೆಂದು ತೋಚಲಿಲ್ಲ. ಶೇಖರ್ ಮಗುವನ್ನು ದತ್ತಕ ಸಂಸ್ಥೆಗೇ ಹಿಂದಿರುಗಿಸಲು ಮಾಲಿನಿಗೆ ಸೂಚಿಸಿದ. ಆದರೆ ತಾಯಿ ಹೃದಯದ ಮಾಲಿನಿಗೆ ಆ ರೀತಿ ಮಾಡಲು ಮನಸ್ಸು ಒಪ್ಪಲಿಲ್ಲ. ಒಂದು ವೇಳೆ ತನ್ನ ಸ್ವಂತ ಮಗುವಿಗೆ ಆ ಪರಿಸ್ಥಿತಿ ಬಂದಿದ್ದರೆ ಏನು ಮಾಡುತ್ತಿದ್ದೆವು? ಎಂಬ ಯೋಚನೆ ಬಂದಿತು. ಆದಿತ್ಯ ತಂಗಿಯನ್ನು ಬಹಳ ಹಚ್ಚಿಕೊಂಡಿದ್ದ. ಅವನು ತಂಗಿಯ ಅಗಲುವಿಕೆಯನ್ನು ಸಹಿಸುತ್ತಿರಲಿಲ್ಲ. ಕೊನೆಗೆ ದಂಪತಿಗಳಿಬ್ಬರೂ ಮತ್ತೊಮ್ಮೆ ದೊಡ್ಡ ಆಸ್ಪತ್ರೆಯೊಂದರಲ್ಲಿ ಮತ್ತೆ ಅರ್ಪಿತಾಳ ರಕ್ತ ಪರೀಕ್ಷೆ ಮಾಡಿಸುವ ನಿರ್ಧಾರ ಮಾಡಿದರು. ರಕ್ತ ಪರೀಕ್ಷೆಯ ನಂತರ ವರದಿಗಾಗಿ ಭಯದಿಂದ ಕಾಯ್ದರು. ಕೊನೆಗೂ ವರದಿ ಬಂತು, ನಡುಗುವ ಕೈಗಳಿಂದ ವರದಿಯನ್ನು ತೆರೆದು ಓದಿದಾಗ ಎಚ್.ಐ.ವಿ ನೆಗೆಟಿವ್ ಎಂದಿತ್ತು. ದಂಪತಿಗಳ ಸಂತಸಕ್ಕೆ ಪಾರವಿಲ್ಲದಂತಾಯಿತು. ಸಧ್ಯ ಅರ್ಪಿತಾಳಿಗೆ ಏಡ್ಸ್ ಭೀತಿ ಇಲ್ಲದಂತಾಯಿತು. ಬೆಳೆಯುವ ಕುಡಿ ಬಾಲ್ಯದಲ್ಲೇ ಕಮರುವುದು ಅವರಿಗೆ ಸಂಕಟದ ವಿಷಯವಾಗಿತ್ತು. ಆದರೆ ಅರ್ಪಿತಾಳಿಗೆ ಏಡ್ಸ್ ಭೀತಿ ಇಲ್ಲವೆಂಬುವುದು ಅವರಿಗೆ ದೊಡ್ಡ ಸಮಾಧಾನ. ವಿಧಿ ತನ್ನ ಕಳ್ಳ ಆಟದಿಂದ ಅವರ ನೆಮ್ಮದಿ ಸ್ವಲ್ಪವಾದರೂ ಹಾಳು ಮಾಡಿದೆನಲ್ಲ ಎಂದು ಮುಸಿ ಮುಸಿ ನಕ್ಕಿತು. ಈಗ ಮಕ್ಕಳಿಬ್ಬರೂ ಬೆಳೆದು ಅವರ ಕಾಲಮೇಲೆ ನಿಂತು, ಈ ದಂಪತಿಗಳ ಪ್ರೀತಿಯ ಕುಡಿಗಳಾಗಿದ್ದಾರೆ. ಎಲ್ಲಾ ಪ್ರಯತ್ನಗಳಿಗೂ ಒಂದು ಸಾರ್ಥಕತೆ ಸಿಕ್ಕಿ, ಮಕ್ಕಳ ಬೆಳವಣಿಗೆಗೆ ಅವರ ವಂಶವಾಹಿನಿಗಿಂತ ವಾತಾವರಣವೇ ಬಹಳ ಮುಖ್ಯವಾದ ಪಾತ್ರವಹಿಸುತ್ತದೆ. ಇದಕ್ಕೆ ಪೂರಕವಾಗಿ ಪೋಷಕರು ಸ್ಪಂದಿಸಬೇಕಷ್ಟೆ. ಪದ್ಮಾ ಸುಬ್ಬಯ್ಯ ಸಂಕಲ್ಪ ಟ್ರಸ್ಟ್, ಬೆಂಗಳೂರು
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
|
|
|
|
SITE MAP
SitePOSH |
NIRATHANKAOUR OTHER WEBSITESSubscribe |
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |