ಸ್ವಯಂಸೇವಾಸಂಸ್ಥೆಗಳು ಸಾಮಾಜಿಕ ಅಭ್ಯುದಯದಲ್ಲಿ ತನ್ನದೆ ಆದ ಪರಿಣಾಮಕಾರಿ ಪಾತ್ರವನ್ನು ವಹಿಸುತ್ತಿವೆ. ಜನಸಂಖ್ಯಾಸ್ಫೋಟದ ಜೊತೆಯಲ್ಲೇ ಹೆಚ್ಚುತ್ತಿರುವ ಸಮಸ್ಯೆಗಳನ್ನು ಪರಿಹರಿಸುವುದು ಸುಲಭಸಾಧ್ಯವಲ್ಲ. ಸರ್ಕಾರವೊಂದನ್ನೇ ನಂಬಿಕೊಂಡು ಕೂರುವುದು ಕೂಡಾ ಸಾಧುವಲ್ಲ. ಈ ನಿಟ್ಟಿನಲ್ಲಿ ಸರ್ಕಾರದ ಜೊತೆಜೊತೆಯಲ್ಲಿ ಜನರ ಬಾಧೆಗಳನ್ನು ನಿವಾರಿಸಲು, ಸಾಮಾಜಿಕ ಕಳಕಳಿಯಿರುವ ಮಂದಿ ಒಗ್ಗೂಡಿ ರಚಿಸಿಕೊಂಡಿರುವ ಸಂಘಟನೆಯೇ ಸ್ವಯಂಸೇವಾಸಂಸ್ಥೆ. ಒಂದು ರೀತಿಯಲ್ಲಿ ಸ್ವಯಂಸೇವಾಸಂಸ್ಥೆಗಳು ಸರ್ಕಾರಕ್ಕಿಂತ ಪರಿಣಾಮಕಾರಿಯಾಗಿ, ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುತ್ತವೆಯೆಂದೇ ಹೇಳಬೇಕಾಗುತ್ತದೆ. ಕಾರಣ ಈ ಸಂಸ್ಥೆಗಳು ಸಮುದಾಯದಲ್ಲೆ ಹುಟ್ಟಿ, ಬೆಳೆದು ಅಲ್ಲಿನ ಹುಲ್ಲುಬೇರುಗಳನ್ನು ಅರ್ಥೈಸಿಕೊಂಡು ಜನರ ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸುತ್ತವೆ. ಅದರಲ್ಲೂ ನೈಸರ್ಗಿಕ ವಿಕೋಪಗಳಂತಹ ಸನ್ನಿವೇಶಗಳಲ್ಲಿ ಜೀವದ ಹಂಗುತೊರೆದು ಜನರ ಜೀವ, ಆಸ್ತಿಪಾಸ್ತಿಗಳ ಸಂರಕ್ಷಣೆಯಲ್ಲಿ ತೊಡಗಿರುವುದನ್ನು ಕಾಣಬಹುದು. ಆದ್ದರಿಂದ, ಸಮಸ್ಯೆಗಳ ಗುರುತಿಸುವಿಕೆ, ವಿಶ್ಲೇಷಣೆ, ಮೌಲ್ಯಮಾಪನ, ಸಮುದಾಯ ಸಹಭಾಗಿತ್ವದಲ್ಲಿ ಸರ್ಕಾರಕ್ಕಿಂತ ಬಹುಪಾಲು ಮೇಲೆಂದು ಹೇಳಬಹುದು.
ಸ್ವಯಂಸೇವಾಸಂಸ್ಥೆಗಳು: ಭಾರತದ ಮಟ್ಟಿಗೆ ಹೇಳಬೇಕೆಂದರೆ, 2009ರ ಸರ್ಕಾರದ ದಾಖಲೆಗಳ ಪ್ರಕಾರ ಸುಮಾರು 33ಲಕ್ಷ ನೋಂದಾಯಿತ ಸ್ವಯಂಸೇವಾಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಇವು ಪ್ರತೀವರ್ಷ 40,000 ದಿಂದ 80,000 ಕೋಟಿ ಹಣವನ್ನು ಸಾಮಾಜಿಕ ಅಭ್ಯುದಯದ ಉದ್ದೇಶಕ್ಕಾಗಿ ಸಾರ್ವಜನಿಕರಿಂದ ಪಡೆಯುತ್ತಿವೆ. ಅಂದರೆ ಪ್ರತೀ 400 ಜನ ಭಾರತೀಯರಿಗೆ ಒಂದು ಸಂಸ್ಥೆಯು ಕೆಲಸಮಾಡುತ್ತಿದೆ. ಇದರಲ್ಲಿ ಮಹಾರಾಷ್ಟ್ರವು ಅತೀ ಹೆಚ್ಚು, ಅಂದರೆ 4.8 ಲಕ್ಷ ಸ್ವಯಂಸೇವಾಸಂಸ್ಥೆಗಳನ್ನು ಹೊಂದಿದ್ದರೆ, ಕರ್ನಾಟಕದ ಪಾಲು 1.9 ಲಕ್ಷ. ಇವೆಲ್ಲಾ ಸರ್ಕಾರದ ಅಧಿಕೃತ ಮಾಹಿತಿಗಳು. ನೋಂದಾಯಿತವಾಗದೇ ಸೇವೆಯಲ್ಲಿ ತೊಡಗಿರುವ ಸಾವಿರಾರು ಸ್ವಯಂಸೇವಾಸಂಸ್ಥೆಗಳನ್ನು ಕಾಣಬಹುದು. ಅಂತೂ ಭಾರತದಲ್ಲಿನ ಶೇ 30 ರಷ್ಟು ಬಡವರು ಒಂದಿಲ್ಲೊಂದು ರೀತಿಯಲ್ಲಿ ಸ್ವಯಂಸೇವಾಸಂಸ್ಥೆಗಳಿಂದ ಸೇವೆಯನ್ನು ಪಡೆಯುತ್ತಿದ್ದಾರೆ. ಕಥೆ ಇಷ್ಟೇ ಆಗಿದ್ದರೆ ನಾನು ಮುಂದೆ ಬರೆಯುವ ಆವಶ್ಯಕತೆಯೇ ಇರುತ್ತಿರಲಿಲ್ಲ. ಆದರೆ ಇದು ಕೆಲವು ಸ್ವಯಂಸೇವಾಸಂಸ್ಥೆಗಳು ಪ್ರಾಮಾಣಿಕವಾಗಿ ಸಮುದಾಯಾಭಿವೃದ್ದಿಯಲ್ಲಿ ತೊಡಗಿರುವುದರ ಕಥೆ. ಉಳಿದ ಹಲವು ಸ್ವಯಂಸೇವಾಸಂಸ್ಥೆಗಳ ಕ್ರೌರ್ಯವು ಬಹುಪಾಲು ಜನರಿಗೆ ತಿಳಿದಿಲ್ಲ/ಸಿಲ್ಲ. ಮೊದಲೇ ಹೇಳಿಬಿಡ್ತೇನೆ ಮುಂದಿನ ಅಂಶಗಳು ಸಮಾಜದಲ್ಲಿ ಸೇವೆಯ ಹೆಸರಿನಲ್ಲಿ ಜನರ ರಕ್ತಹೀರುತ್ತಿರುವ ಸ್ವಯಂಸೇವಾಸಂಸ್ಥೆಗಳಿಗೆ ಮಾತ್ರ ಅನ್ವಯಿಸುತ್ತದೆ. ಯಾರೂ ಅನ್ಯಥಾ ಭಾವಿಸಬಾರದು. ಈಗ ಅಸಲಿ ವಿಚಾರಕ್ಕೆ ಬರೋಣ. CAPART ಸಂಸ್ಥೆಯು 2009ನೇ ಸಾಲಿನಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಯಂಸೇವಾಸಂಸ್ಥೆಗಳಲ್ಲಿ 600 ಸ್ವಯಂಸೇವಾಸಂಸ್ಥೆಗಳನ್ನು ಹಣದ ದುರ್ಬಳಕೆಯ ಆಧಾರದ ಮೇಲೆ ಕಪ್ಪುಪಟ್ಟಿಗೆ ಸೇರಿಸಿದೆ. ಇದರಲ್ಲಿ ಕರ್ನಾಟಕದ ಪಾಲು 19. ಅದರಲ್ಲೂ ವಿಶೇಷವೆಂದರೆ 19 ರಲ್ಲಿ ಬಹುಪಾಲು ಸ್ವಯಂಸೇವಾಸಂಸ್ಥೆಗಳು ಹಿಂದುಳಿದ ಒಂದೇ ಜಿಲ್ಲೆಯಲ್ಲಿ ನೀರಿನ ವಿಚಾರದಲ್ಲಿ ಅವ್ಯವಹಾರ ನಡೆಸಿರುವುದು ನಾಚಿಕೆಗೇಡಿನ ವಿಚಾರ. ಇವೆಲ್ಲಾ ಅಧಿಕೃತವಾಗಿ ಕಾನೂನಿನ ಕಪಿಮುಷ್ಟಿಯಲ್ಲಿ ಸಿಕ್ಕಿರುವ ಸಂಸ್ಥೆಗಳು. ಇನ್ನು ಅನಧಿಕೃತವಾಗಿ ವ್ಯವಹರಿಸುತ್ತಿರುವ ಸಂಸ್ಥೆಗಳು? 40,000 80,000 ಕೋಟಿ ಹಣವು ನಿಜವಾಗಿಯೂ ಅಭಿವೃದ್ಧಿಗೋಸ್ಕರ ಬಳಕೆಯಾಗುತ್ತದೆಯೇ? ಅದಕ್ಕೆಲ್ಲಾ ಸಮರ್ಪಕ ಲೆಕ್ಕಾಪತ್ರಗಳಿವೆಯೇ ? ಆ ದೇವರೇ ಬಲ್ಲ. ಇಷ್ಟೆಲ್ಲಾ ಹಣ ಬಂದರೂ ಕೆಲಸ ಮಾಡಲು ಹಣವೇ ಇಲ್ಲ ಕಣ್ರೀ ಅಂತ ಸಬೂಬು ಹೇಳುವವರ ಸಾಚಾತನ ಯಾರು ಬಲ್ಲರು? ಇನ್ನು ಸ್ವಯಂಸೇವಾಸಂಸ್ಥೆಗಳು ಹೇಗೆ ಸಮಾಜಕ್ಕೆ ಮಂಕುಬೂದಿ ಎರಚುತ್ತಾ ಈ ಮೂಲಕ ಸೇವೆಯ ಸೋಗಿನಲ್ಲಿ ಜನರ ಮುಗ್ಧತೆಯೊಂದಿಗೆ ಹೇಗೆ ಕಣ್ಣಾಮುಚ್ಚಾಲೆಯಾಡುತ್ತವೆಯೆಂಬುದನ್ನು ಕೂಲಂಕಷವಾಗಿ ತಿಳಿಯುವುದು ಸೂಕ್ತ. ಮಾರ್ಕ್ಸ್‍ಕಾರ್ಡ್ ಕೊಡಿ: ಕೆಲಸ ಸಿಗಲಿಲ್ಲವೆಂದು ಬೇಸತ್ತು, ಯಾವುದಾದರೂ ಕೆಲಸಮಾಡಲು ತಯಾರಿರುವ ಯುವಕ/ಯುವತಿಯರಿಗೆ ಅತ್ಯಂತ ಸುಲಭವಾಗಿ ಸಿಗುವ ಕೆಲಸವೆಂದರೆ NGO ಗಳಲ್ಲಿನ ಕೆಲಸ. 2-3 ಸಾವಿರಗಳಿಗೆ ಸಮಯದ ಮಿತಿಯಿಲ್ಲದೆ ದುಡಿಸಿಕೊಳ್ಳುವ ಸ್ವಯಂಸೇವಾಸಂಸ್ಥೆಗಳು ಮಾಡುವ ಮೊದಲ ಕೆಲಸವೆಂದರೆ ಅಭ್ಯರ್ಥಿಯ ಅಸಲಿ ಮಾರ್ಕ್ಸ್‍ಕಾರ್ಡ್‍ನ್ನು ತೆಗೆದು ಇಟ್ಟುಕೊಳ್ಳುವುದು. ಅದಕ್ಕೆ ಕಾರಣ ಕೇಳಿದರೆ, ನಮ್ಮಲ್ಲಿ ಭದ್ರವಾಗಿಟ್ಟುಕೊಳ್ಳುತ್ತೇವೆ, ವೆರಿಫಿಕೇಷನ್‍ಗೆ ಬೇಕು ಎಂದು ಸಬೂಬು ಹೇಳಿದರೂ, ಅದರ ಅಸಲಿ ಉದ್ದೇಶ ಕೆಲಸಕ್ಕೆ ಸೇರಿದವ ಯಾವುದೇ ಕಾರಣಕ್ಕೂ ತಮ್ಮ ಸಂಸ್ಥೆ ಬಿಟ್ಟು ಹೋಗಬಾರದೆನ್ನುವುದು. ಅಕಸ್ಮಾತ್ ಆತ/ಆಕೆಗೆ ಸಂಸ್ಥೆಯ ಪರಿಸರ, ಸಂಬಳ, ಸವಲತ್ತುಗಳು ಸಾಲದೇ ಬೇರೆ ಕಡೆ ಒಳ್ಳೆಯ ಅವಕಾಶ ಸಿಕ್ಕಿದರೂ ಹೋಗುವಂತಿಲ್ಲ, ಕಾರಣ, ಅಸಲಿ ಮಾರ್ಕ್ಸ್‍ಕಾರ್ಡ್ ಸಂಸ್ಥೆಯ ಕಪಿಮುಷ್ಟಿಯಲ್ಲಿರುತ್ತದೆ. ಇದೇ ಉದ್ದೇಶದಿಂದ ಸಂಸ್ಥೆಯು ನೀಡುವ ಕಿರುಕುಳವನ್ನು ಸಹಿಸಿಕೊಂಡು, ಇತ್ತ ಕೆಲಸಮಾಡಲೂ ಇಷ್ಟವಿಲ್ಲದೆ, ಅತ್ತ ಬಿಟ್ಟುಹೋಗಲೂ ಸಾಧ್ಯವಾಗದೇ ದಿನ ತಳ್ಳುತ್ತಿರುವ ಅಮಾಯಕರೆಷ್ಟೋ....! ಖಾಲೀ ರಸೀದಿಯ ಮೇಲೆ ಸಹಿ: ಇದು NGO ಗಳ ಹಗಲು ದರೋಡೆ. ಕೆಲವು ಸಂಸ್ಥೆಗಳು ಖಾಲೀ ರಸೀದಿಯ ಮೇಲೆ ಕೆಲಸಗಾರರ ಸಹಿ ಹಾಕಿಸಿಕೊಳ್ಳುವ ಪರಿಪಾಠ ಹೊಂದಿದ್ದಾರೆ. ಅವರಿಗೆ ಕೊಡುವ ಸಂಬಳ 5,000ರೂ ಆದರೆ, ನಂತರ ಅದನ್ನು 15,000 ವೆಂದು ಮಾಡಿ, 10,000 ರೂಗಳನ್ನು ಗುಳುಂ ಮಾಡುವ ಸಂಸ್ಥೆಗಳೂ ಇವೆ. ಇದಕ್ಕೆ ಪ್ರತಿಭಟಿಸಿದವರನ್ನು ನಿರ್ದಾಕ್ಷಿಣ್ಯವಾಗಿ ಇಲ್ಲಸಲ್ಲದ ಆರೋಪ ಹೊರಿಸಿ ಮಾನಸಿಕ ದೈಹಿಕ ಕಿರುಕುಳ ನೀಡಿ ಹೊರಹಾಕುವ ಸಾಧ್ಯತೆಯೂ ಇರುತ್ತದೆ. ಹಲವು ಕೆಲಸಗಳಿಗೆ ಒಂದೇ ಸಂಬಳ: ಇದು ಸ್ವಯಂಸೇವಾಸಂಸ್ಥೆಗಳ ಮತ್ತೂಂದು ಗಿಮಿಕ್. ಒಬ್ಬ ವ್ಯಕ್ತಿಯನ್ನು ಯಾವುದೋ ಒಂದು Project ಗೆಂದು ಕೆಲಸಕ್ಕೆ ತೆಗೆದುಕೊಂಡು ಅವರನ್ನು ಹಲವು ಕೆಲಸಗಳಿಗೆ ಹಚ್ಚಿ ಅವರಿಂದ ಕೆಲಸಪಡೆದು ಕಡೆಗೆ ಒಂದೇ ಸಂಬಳ ಕೊಟ್ಟು ಉಳಿದ Project ಗಳಲ್ಲೂ ಕೊಟ್ಟಂತೆ ತೋರಿಸಿ ಕೆಲಸಮಾಡುವವರ ಬೆವರಿನ ಫಲದಿಂದ ಉದ್ದಾರವಾಗುತ್ತಿರುವ ಸಂಸ್ಥೆಗಳಿಗೇನೂ ಕೊರತೆಯಿಲ್ಲ. 12 ವರ್ಷ ಪ್ರೊಭೆಷನರಿ: ಇದೊಂದು ದೊಡ್ಡ ಪ್ರಹಸನ. ಕೆಲಸಕ್ಕಾಗಿ ಅಲೆಅಲೆದು ಸುಸ್ತಾಗಿರುವ ಯುವಕ/ಯುವತಿಯರನ್ನು ಕೆಲವು ಸಂಸ್ಥೆಗಳು ಅತ್ಯಂತ ನಾಜೂಕಿನಿಂದ ಆವಶ್ಯಕತೆಗೆ ಬಳಸಿಕೊಂಡು ಕೊನೆಗೆ ಅನಾಗರಿಕವಾಗಿ ಹೊರದಬ್ಬುವುದನ್ನು ಕಾಣಬಹುದು, ಇದಕ್ಕೆ ಪ್ರೊಭೆಷನರಿಯೆಂಬ ಹೆಸರನ್ನು ಕೊಡ್ತಾರೆ. ನೋಡಿ 1-2 ವರ್ಷ ಕೆಲಸ ಮಾಡು ನಿನ್ನ ಕೆಲಸ ಚೆನ್ನಾಗಿದೆಯೆಂದು ಮನದಟ್ಟಾದರೆ ಮುಂದುವರೆಸುತ್ತೇವೆ. ಇಲ್ಲವಾದರೆ ಇಲ್ಲವೆಂದು ಮೊದಲೇ ಹೇಳಿರುತ್ತಾರೆ. ಅವಸರಕ್ಕೆ ಎಷ್ಟು ಸಾಧ್ಯವೋ ಅಷ್ಟು ಬಳಸಿಕೊಂಡು ಕೊನೆಗೆ ನಿಮ್ಮ performance ಸರಿಯಿಲ್ಲ ಅದನ್ನು ಹಾಗೆ ಮಾಡಬಹುದಿತ್ತು, ಹೀಗೆ ಮಾಡಬಹುದಿತ್ತೆಂದು ಪುಕ್ಕಟೆ ಸಲಹೆ ನೀಡಿ ಕಬ್ಬಿನ ಸಿಪ್ಪೆಯನ್ನು ಬಿಸಾಡಿದ ಹಾಗೆ ಬಿಸಾಡುವ ಸಂಸ್ಥೆಗಳಿಗೆ ನೊಂದವರ ಸಂಕಟವೆಲ್ಲಿ ಕಾಣುತ್ತದೆ ? ಶೋಷಣೆ: ಸ್ವಯಂಸೇವಾಸಂಸ್ಥೆಗಳು ಎಷ್ಟೇ ಜಾತ್ಯಾತೀತತೆ, ಸಮಾನತೆ, ಹಕ್ಕುಗಳ ಬಗ್ಗೆ ಮಾತನಾಡಿದರೂ ಲಿಂಗತಾರತಮ್ಯ, ಜಾತಿ ರಾಜಕಾರಣ, ಧರ್ಮ ಅಸಮಾನತೆ ಇವೇ ಮೊದಲಾದ ಅಸ್ತ್ರಗಳಿಂದ ಕೆಲಸಗಾರರನ್ನು ಶೋಷಿಸುವ ಪರಿಪಾಠ ಚಾಲ್ತಿಯಲ್ಲಿದೆ. ಸೇರುವಾಗಲೇ ನೀವು ಯಾವ ಧರ್ಮ, ಜಾತಿ ಎಂದು ಕೇಳುವ ಮಂದಿ ಬಹಳಷ್ಟಿದ್ದಾರೆ. ಈ ನಿಟ್ಟಿನಲ್ಲಿ ಮತಾಂತರ ಮಾಡಲು ಸಂಚು ನಡೆಯುತ್ತಿರುವುದೂ ಬೆಳಕಿಗೆ ಬಂದಿವೆ. ಇದರ ಜೊತೆಗೆ ಮಹಿಳೆಯರ ಮೇಲಿನ ಶೋಷಣೆಯ ಬಗ್ಗೆ ಹೇಳಲೇಬೇಕು. ಹೆಣ್ಣಿನ ಮುಗ್ದತೆಯನ್ನು ಬಂಡವಾಳವಾಗಿಸಿಕೊಳ್ಳುವ ಕೆಲವು ಸಂಸ್ಥೆಗಳು ಮಹಿಳಾ ಸಬಲೀಕರಣವೆಂದು ಬಡಾಯಿ ಕೊಚ್ಚಿಕೊಂಡು ತನ್ನ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಯರ ಬಗ್ಗೆಯೇ ತಾತ್ಸಾರಹೊಂದಿ, ಅವರನ್ನು ಇಲ್ಲಸಲ್ಲದ ಕಾರ್ಯಗಳಿಗೆ ಬಳಸಿಕೊಂಡು ಮಾನಸಿಕ, ದೈಹಿಕ ಕಿರುಕುಳ ನೀಡುತ್ತಿರುವ ಅಂಶಗಳು ಬೆಳಕಿಗೆ ಬರುತ್ತಿಲ್ಲ. ಅದು ಮೂಕವೇದನೆಯಾಗೇ ಉಳಿದಿದೆ. ಹೇಳುವುದು ಒಂದು, ಮಾಡಿಸುವುದು ಇನ್ನೊಂದು: ಸ್ವಯಂಸೇವಾಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಬಹುಪಾಲು ಸಿಬ್ಬಂದಿಗೆ ತನ್ನ ಕೆಲಸವೇನೆಂಬುದೇ ಸರಿಯಾಗಿ ಗೊತ್ತಿರುವುದಿಲ್ಲ. ಅಸಲಿಗೆ ಅವರಿಗೆ Appointment Letter ಕೂಡಾ ಕೊಟ್ಟಿರುವುದಿಲ್ಲ, ಹೇಳಿದ ಕೆಲಸವೆಲ್ಲವನ್ನೂ ಮಾಡಿ ಸ್ವಾಮಿನಿಷ್ಠೆ ತೋರಿಸಬೇಕು ಅಕಸ್ಮಾತ್ ಇದು ನನ್ನ ಕೆಲಸವೇ? ಎಂದರೆ, `ಅಂದೇ ನಿಮ್ಮ ಕೆಲಸದ ಕೊನೆಯ ದಿನವಾಗಿರಬಹುದು ಅಷ್ಟರಮಟ್ಟಿಗೆ ಕೆಲಸದಲ್ಲಿ ಅಭದ್ರತೆಯೆಂಬುದಿರುತ್ತದೆ. ಮತ್ತೊಂದು ಅಂಶವೆಂದರೆ, ವ್ಯಕ್ತಿಯನ್ನು ಆಯ್ಕೆಮಾಡುವಾಗ ಒಂದು ಸ್ಥಳಕ್ಕೆಂದು ಹೇಳಿ, 3-4 ತಿಂಗಳನಂತರ ನೂರಾರು ಕಿ.ಮೀ ದೂರಕ್ಕೆ ಹೋಗಿ ಕೆಲಸ ಮಾಡಲು ತಿಳಿಸುತ್ತಾರೆ. ಇಷ್ಟವಿರಲಿ, ಇಲ್ಲದಿರಲಿ ಅಲ್ಲಿಗೆ ಹೋಗಲೇಬೇಕು. ಇಲ್ಲವೆಂದರೆ ಗೊತ್ತಲ್ಲ? ಗೇಟ್ ಪಾಸ್ ರೆಡಿಯಿರುತ್ತದೆ. ಏಕೆಂದರೆ ಇದು ಮಿಲಿಟರಿ ಸಾಮ್ರಾಜ್ಯ. ಪ್ರಜಾಪ್ರಭುತ್ವ ಹೆಸರಿಗಷ್ಟೆ. ಇನ್ನೂ ಕೆಲವು ಸ್ವಯಂಸೇವಾಸಂಸ್ಥೆಗಳು ಸ್ವಲ್ಪಮುಂದೆ ಹೆಜ್ಜೆ ಇಟ್ಟು ಯಾವುದಾದರು Project ಬರುವವರೆಗೂ ಅಥವಾ Inspection ಮುಗಿವವರೆಗೂ ಕೆಲವು ಯುವಕ/ಯುವತಿಯರನ್ನ ಬಾಡಿಗೆಗೆ ತೆಗೆದುಕೊಳ್ಳಬಹುದು. ನಂತರ ನಿಮ್ಮನ್ನು ಹೊರಹಾಕಿ ಪ್ರತೀ ತಿಂಗಳು ನಿಮ್ಮ ಹೆಸರಿನಲ್ಲಿ ಇತರರು ಸಹಿಮಾಡಿ ಸಂಬಳ ಪಡೆದು ಮಾಜಾಮಾಡುತ್ತಿರಬಹುದು. ಇದರ ಬಗ್ಗೆ ಒಂದು ಚಿಕ್ಕ ಸುಳಿವೂ ಕೂಡ ನಿಮಗೆ ದೊರೆಯುವುದಿಲ್ಲ ಕಾರಣ ಇದು ಮಾಯಾಬಜಾರ್. Target work: ಇತ್ತೀಚೆಗೆ ಕಾರ್ಪೋರೇಟ್ ಸಂಸ್ಥೆಗಳ ಸಾಮಾಜಿಕ ಹೊಣೆಗಾರಿಕೆ (CSR) ಕೃಪೆಯಿಂದ ಅಥವಾ ಅದಕ್ಕೋಸ್ಕರವೇ ಜನಿಸಿರುವ ಕೆಲವು NGO ಗಳು ದಿನಬೆಳಗಾದರೆ ಟಾರ್ಗೆಟ್ ಹಾವಳಿ ಶುರುಮಾಡುತ್ತವೆ. ಈ 15 ದಿನಗಳಲ್ಲಿ ಇಷ್ಟು ಕೆಲಸ ಮುಗಿಸಲೇಬೇಕು, ಇಲ್ಲವಾದರೆ ಸಂಬಳ, ಸೌಲಭ್ಯಗಳನ್ನು ಕೊಡುವುದಿಲ್ಲ ವೆಂದು ಥೇಟ್ ಖಳನಾಯಕನ ತರಹ ಹೇಳುತ್ತಾರೆ. ಅಲ್ಲಾ ಸಾರ್, ನಾವೇಳಿದ್ದನ್ನೆಲ್ಲಾ ಕೇಳಿ ಪಾಲಿಸುವುದಕ್ಕೆ ಜನರೇನು ಯಂತ್ರಗಳೇ! ನನ್ನದೇ ಉದಾಹರಣೆ ತೆಗೆದುಕೊಂಡರೆ, ಮೊದಲು ಕೆಲಸ ಮಾಡುತ್ತಿದ್ದ NGO ಯಾವುದೋ ಕಂಪನಿಯ CSR ಅಡಿಯಲ್ಲಿ ಹಣ ಪಡೆದು ದೇವನಹಳ್ಳಿಯ ಗ್ರಾಮಗಳಿಗೆ ಕೆಲಸ ಮಾಡಲು ನಮ್ಮನ್ನು ಕಳುಹಿಸಿದರು. ಅಲ್ಲಿನ ರೈತರ ಜಮೀನನ್ನೇ ಕಡಿಮೆ ಹಣಕ್ಕೆ ಕೊಂಡು, ಅವರ ಸಂಪನ್ಮೂಲಗಳನ್ನೇ ಬಳಸಿಕೊಂಡು ಪರಿಸರ ನಾಶಮಾಡುತ್ತಿರುವ ಆ ಕಾರ್ಖಾನೆಯ ಬಗ್ಗೆ ಸಮುದಾಯಕ್ಕೆ ಕೋಪ ಮೂಗಿನ ಮೇಲೆಯೇ ಇದೆ. ಅಲ್ಲಿ ರಾತ್ರಿಯ ಸಮಯ Meeting ಗಳಿಗೆ ಬಲವಂತದಿಂದ (ಟೈಟಾಗಿ) ರೈತರು ಬರುತ್ತಿದ್ದರೂ, ನಾವು ಹೇಳಿದ ಕೆಲಸಗಳನ್ನೆಲ್ಲಾ ಬೆಳಿಗ್ಗೆಯೇ ಮಾಡಿಸಿಕೊಳ್ಳುತ್ತೇವೆಂದು ಹೇಳಿ ಹೋಗುತ್ತಿದ್ದರು. ನಾವುಗಳು ಅವರ ಅಮಲಿನ ಮಾತುಗಳನ್ನ ನಿಜವೆಂದು ನಂಬಿ ಮೇಲಿನವರಿಗೆ ಟಾರ್ಗೆಟ್ Achieve ಆಗುತ್ತದೆಂದು ಹೇಳಿ ಶಬಾಷ್ ಗಿಟ್ಟಿಸುತ್ತಿದ್ದೆವು. ಆದರೆ ಬೆಳಿಗ್ಗೆ ಚಿತ್ರಣವೇ ಬೇರೆ ಇರುತ್ತಿತ್ತು. ನಾವು ಅವರ ಮನೆಯ ಹತ್ತಿರಕ್ಕೆ ಹೋದರೆ, ಏನು ಬಂದಿದ್ದು ಅನ್ನೋತರಹ ನೋಡ್ತಿದ್ರು. ನಿನ್ನೆ ಅವರು ಹೇಳಿದ ಡೈಲಾಗ್‍ಗಳನ್ನು ನೆನಪಿಸಲು ಪ್ರಯತ್ನಿಸಿದರೆ, ಅಯ್ಯೋ. ಹೌದಾ, ಆಗಂದ್ನಾ. ಆಗಲ್ಲ ಸಾರ್, ಈ ತಿಂಗಳು ಸ್ವಲ್ಪ ಸಮಸ್ಯೆಯಿದೆ ಮುಂದಿನ ತಿಂಗಳು ನೋಡೋಣ ಎಂದೋ ಅಥವಾ ಸಾರ್ ಅದು ಕೇವಲ ಮಳೆಗಾಲಕ್ಕೆ ಉಪಯೋಗ ಬೇಸಿಗೆ ಕಾಲದಲ್ಲಿ ಏನು ಪ್ರಯೋಜನ, ಅದೂ ಮಳೆ ಬೇರೆ ಕಡಿಮೆಯಾಯಿತು. ನಮಗೇನೂ ಬೇಕಿಲ್ಲ ವೆಂತಲೋ ಹೇಳಿ ಮಂಗಳಾರತಿ ಮಾಡಿ ಕಳಿಸುತ್ತಿದ್ದರು, ಇಂತಹವರನ್ನು ನಂಬಿಕೊಂಡು ಹೇಗೆ ತಾನೇ Target Achieve ಮಾಡುವುದು? ಅಸಲಿ, ಜನರ ಜೊತೆ ಕೆಲಸ ಮಾಡುವಾಗ, ಅಭಿವೃದ್ದಿಯಲ್ಲಿ ಟಾರ್ಗೆಟ್ ಕೆಲಸ ಮಾಡುತ್ತವೆಯೇ? ಈ ಟಾರ್ಗೆಟ್ ಹೆಸರಿನಲ್ಲಿ ಕೆಲಸಗಾರರ ಪ್ರಾಣ ಹಿಂಡುವುದು ಸರಿಯೇ? ಸ್ವಂತ ಬೆಳವಣಿಗೆಗೆ ಆಸ್ಪದವಿಲ್ಲದಿರುವುದು: ಸ್ವಯಂಸೇವಾಸಂಸ್ಥೆಗಳಲ್ಲಿ ಕೆಲಸ ಮಾಡುವ ಬಹುಪಾಲು ಜನರ ದೂರೆಂದರೆ, ಸಾರ್ ಇಲ್ಲಿ Personal Growth ಗೆ ಜಾಗ ಇಲ್ಲ ಸಾರ್ ಎಂದು. ನಿಜ ಈ ತರದ ಸಂಸ್ಥೆಗಳಲ್ಲಿ ವ್ಯಕ್ತಿ ಅಭಿವೃದ್ದಿಯು ಮರೀಚಿಕೆಯೇ. ಅನಗತ್ಯ ರಾಜಕೀಯ ಉಪಯೋಗಿಸಿ ಕೆಲವರು. ಕೆಲಸ ಮಾಡುವವರನ್ನು ಕಾಲಡಿಯಲ್ಲಿ ತುಳಿಯಲು ಪ್ರಯತ್ನಿಸುತ್ತಾರೆ. ತರಬೇತಿ ಶಿಬಿರಗಳಾಗಲೀ, Exposure Visit ಗಳಾಗಲಿ, ಎಲ್ಲವೂ ಎಲ್ಲೆಗೂ ನಿಲುಕದವುಗಳಾಗಿರುತ್ತವೆ. ಸಂಸ್ಥೆ ಸೇರಿದಾಗ ಹೇಗಿದ್ದರೋ ಹಾಗೆಯೇ ಬಿಟ್ಟು ಹೊರಬರುವುದನ್ನು ಕಾಣಬಹುದು. ರಕ್ಷಣೆ: ಬಹಳಷ್ಟು ಸ್ವಯಂಸೇವಾಸಂಸ್ಥೆಗಳು (ಮುಖ್ಯವಾಗಿ ಸಮುದಾಯ ಹುಲ್ಲುಬೇರುಗಳಲ್ಲಿ ಕೆಲಸ ಮಾಡುತ್ತಿರುವ) ತನ್ನ ಸಿಬ್ಬಂದಿಗೆ ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ಕೊಡುವ ಸೌಜನ್ಯತೆಯನ್ನು ತೋರಿಸುವುದಿಲ್ಲ. ಇನ್ನೂ P.F ಗ್ರಾಚ್ಯುಟಿಗಳ ವಿಷಯ ಕೇಳಲೇಬೇಡಿ. ಕೆಲವು ಸಮುದಾಯ ಸಂಘಟಕರು ಹಗಲು-ರಾತ್ರಿಯೆನ್ನದೇ ಹಳ್ಳಿಗಳಲ್ಲಿ ಕೆಲಸ ಮಾಡುತ್ತಾರೆ. ಸರಿಯಾದ ಆಹಾರ, ಸಾರಿಗೆ ಸೌಲಭ್ಯ, ಇಲ್ಲದೇ ಚಳಿಗಾಳಿಗೆ ಮೈಯೊಡ್ಡಿ ಟಾರ್ಗೆಟ್‍ಗಳನ್ನು ಪೂರೈಸಲು ರಾತ್ರಿಯಿಡೀ ಕೆಲಸ ಮಾಡುವ ಸಿಬ್ಬಂದಿಗೆ ಯಾವುದೇ ರಕ್ಷಣೆಯೂ ಇರುವುದಿಲ್ಲ. ಅಕಸ್ಮಾತ್ ಅಪಘಾತ, ದೀರ್ಘಕಾಯಿಲೆಗಳೇನಾದರೂ ಅಂಟಿಕೊಂಡರೆ, ಆ ದೇವರೇ ದಿಕ್ಕು. ಜಪ್ಪಯ್ಯವೆಂದರೂ ಸಂಸ್ಥೆ ಕಡೆಯಿಂದ ನಯಾ ಪೈಸೆಯನ್ನೂ ಪಡೆಯಲಾಗುವುದಿಲ್ಲ. ಈ ಮೇಲಿನ ದೂರುಗಳೆಲ್ಲಾ ಸಿಬ್ಬಂದಿಗೆ ಹೆಚ್ಚು ಸಂಬಂದಿಸಿದ್ದು. ಇವಲ್ಲದೇ ಇನ್ನೂ ಹಲವಾರು ದೂರುಗಳು ಅವುಗಳ ಮೇಲಿವೆ
ಪ್ರಶ್ನೆಗಳು ಈ ಮೇಲಿನ ಉದಾಹರಣೆಗಳಲ್ಲಿ ಗಮನಿಸಿದರೆ ಹಲವು ಪ್ರಶ್ನೆಗಳು ನಮ್ಮ ಮುಂದೆ ಬರುತ್ತವೆ: ಇಡೀ ಸಮಾಜದ ಅಭಿವೃದ್ಧಿಯ ಕನಸನ್ನು ಹೊತ್ತಿರುವ ಸಂಸ್ಥೆಯು ತನ್ನ ಏಳ್ಗೆಗೋಸ್ಕರ ಹಗಲು ಇರುಳು ದುಡಿಯುತ್ತಿರುವ ಸಿಬ್ಬಂದಿಯನ್ನು ಶೋಷಿಸುವುದು ಸರಿಯೇ? ಜಾತ್ಯಾತೀತತೆ, ಪ್ರಜಾಪ್ರಭುತ್ವ, ನ್ಯಾಯ ನೀತಿಯೆಂದು ಮಾತನಾಡುವ ಸ್ವಯಂಸೇವಾಸಂಸ್ಥೆಗಳು ನಿಜವಾಗಿಯೂ ಮೇಲ್ಕಂಡ ಗುಣಗಳನ್ನು ಅಂತರ್ಗತವಾಗಿಸಿಕೊಳ್ಳುತ್ತಿವೆಯೇ ? Accountability, Transference ಮೌಲ್ಯಗಳನ್ನು ಹೊಂದಿರಬೇಕಾಗಿರುವ ಸ್ವಯಂಸೇವಾಸಂಸ್ಥೆಗಳು ನಿಜಾರ್ಥದಲ್ಲಿ ಪ್ರಾಮಾಣಿಕವಾಗಿ ಪಾಲಿಸುತ್ತಿವೆಯೇ? ಬಡಜನರ ಉದ್ದಾರಕ್ಕೆಂದು ಹುಟ್ಟಿಕೊಂಡ ಸಂಸ್ಥೆಗಳು ಅವರ ಹೆಸರು ಹೇಳಿಕೊಂಡು ಉದ್ದಾರವಾಗಿ ಕೊನೆಗೆ ಬಡವರನ್ನೇ ಶೋಷಿಸಲು ಮುಂದುವರೆಯುತ್ತಿರುವುದು ಸರಿಯೇ? ಸೇವೆಯನ್ನು ಜೀವವಾಗಿಸಿಕೊಳ್ಳಬೇಕಾದ ಸಂಸ್ಥೆಗಳು ನಿಜವಾಗಿಯೂ Commercial Organization ಆಗದೇ ಸೇವೆಗಯ್ಯುತ್ತಿವೆಯೇ? ಪರಿಹಾರಗಳು ಈ ಹತ್ತು ಹಲವು ಪ್ರಶ್ನೆಗಳ ನಡುವೆಯೇ ಕೆಲವೂಂದು ಪರಿಹಾರಗಳು ಬರದೇ ಇರುವುದಿಲ್ಲ. ಅವುಗಳಲ್ಲಿ ಪ್ರಮುಖವಾದವುಗಳನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ. ನಾಯಿಕೊಡೆಗಳಂತೆ ಹೆಚ್ಚುತ್ತಿರುವ ಸ್ವಯಂಸೇವಾಸಂಸ್ಥೆಗಳಿಗೆ ಕಡಿವಾಣ: ಆಕಾಶನೋಡಲು ನೂಕುನುಗ್ಗಲೇಕೆ? ಎಂಬಂತೆ ಸಮಾಜಸೇವೆ ಮಾಡಲು ನಾಮುಂದು, ತಾಮುಂದೆಂದು ಸಂಸ್ಥೆಗಳನ್ನು ನೋಂದಾಯಿಸಿ, ಹೆಸರಿಗೆ ಮಾತ್ರವಿದ್ದು, ಹಣ ಆಸ್ತಿ ಮಾಡುವ ದಂದೆಯಲ್ಲಿರುವ ಸಂಘಸಂಸ್ಥೆಗಳು ಹುಟ್ಟದಂತೆ ಕಡಿವಾಣ ಅಗತ್ಯವಿದೆ. ಸಂಘಟನೆ ಕಟ್ಟುವುದು ನಮ್ಮ ಮೂಲಭೂತ ಹಕ್ಕೆಂಬುದು ನಿಜವಾದರೂ, ಅದಕ್ಕೆ ತನ್ನದೇ ಆದ ಯೋಗ್ಯತೆಯಿರಬೇಕೆಂಬುದನ್ನು ಮರೆಯಬಾರದು. ಈ ನಿಟ್ಟಿನಲ್ಲಿ 1860ರ ಸಂಘಸಂಸ್ಥೆಗಳ ನೋಂದಣಿ ಕಾಯ್ದೆಗೆ ಸೂಕ್ತ ತಿದ್ದುಪಡಿ ತರಬೇಕಾದದ್ದು ಅತ್ಯಗತ್ಯ.. ನೋಂದಣಿ ಕಾಯ್ದೆಯಲ್ಲಿ ಸಿಬ್ಬಂದಿ ಆಯ್ಕೆ, ಸೇವೆ, ಸೌಲಭ್ಯಗಳಿಗೆ ಸಂಬಂಧಿಸಿದಂತೆ ಯಾವುದೇ ನೀತಿ ನಿಯಮವಿಲ್ಲದ್ದು ಇಂದಿನ ಬಹುತೇಕ ಸಮಸ್ಯೆಗೆ ಕಾರಣವಾಗಿದೆ. ಇವರು ಸಹಕಾರ ಸಂಘಗಳ ಅಡಿಯಲ್ಲಿ ಬಂದರೂ ಕಾನೂನುಗಳ ಸೂಕ್ತ ಅಳವಡಿಕೆ (Implementation) ಕೊರತೆಯಿಂದ ತೊಂದರೆಯಾಗಿದೆ. ಕೇಂದ್ರೀಕೃತ ವ್ಯವಸ್ಥೆ: ಸ್ವಯಂಸೇವಾಸಂಸ್ಥೆಗಳಲ್ಲಿ ಕೆಲಸಮಾಡಲು ಇಚ್ಛಿಸುವವರು ತಾಲ್ಲೂಕು/ಜಿಲ್ಲಾನ್ವಯ ಕೇಂದ್ರೀಕೃತ ಸಂಸ್ಥೆಯಲ್ಲಿ ನೋಂದಣಿಯಾಗಬೇಕು, ಈ ಸಂಸ್ಥೆಯು ಅವರಿಗೊಂದು PIN ಕೊಟ್ಟು ಆ ಮೂಲಕ ಅವರ ಅನುಭವ, ಸಂಬಳ, ಸೌಲಭ್ಯಗಳ ಕುರಿತು ಸೂಕ್ತ Track ಹೊಂದಿರಬೇಕು. ಸಂಸ್ಥೆಗಳು ಸಿಬ್ಬಂದಿಯನ್ನು ಆ ಸಂಸ್ಥೆಯ ಮೂಲಕವೇ ನೇಮಿಸಿಕೊಳ್ಳಬೇಕು. ಸಂಘಟಿತವಾಗಿರಬೇಕು: ಮೊಟ್ಟಮೊದಲಿಗೆ ಆಗಬೇಕಾದ ಕೆಲಸವೆಂದರೆ, ಸ್ವಯಂ ಸೇವಾಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಸಂಘಟಿತರಾಗಬೇಕು, ಒಗ್ಗಟ್ಟಿನಲ್ಲಿ ಬಲವಿದೆಯೆಂದು ತೋರಿಸಬೇಕು. ಎಲ್ಲಾದರೂ ಸಹ ಕಾರ್ಯಕರ್ತರಿಗೆ ಕಿರಿಕಿರಿ, ಶೋಷಣೆಯಾದರೆ ತಕ್ಷಣ ದ್ವನಿ ಎತ್ತಬೇಕು ಪ್ರತಿಭಟಿಸಬೇಕು ಇಲ್ಲವಾದರೆ ಪರಿಸ್ಥಿತಿ ಅದೋಗತಿಗಿಳಿಯುತ್ತದೆ. ಇದಕ್ಕೊಂದು ಸಹಾಯವಾಣಿಯಿದ್ದರೆ ಒಳ್ಳೆಯದು. ವ್ಯವಸ್ಥೆಯಲ್ಲಿ ಬದಲಾವಣೆ: ಸರ್ಕಾರದ ವಿವಿಧ ಇಲಾಖೆಗಳಿಂದ ಸ್ವಯಂ ಸೇವಾಸಂಸ್ಥೆಗಳಿಗೆ ಬರುವ Project ಗಳಿಗೆ ಇಂತಿಷ್ಟು ಶೇಕಡಾ ಕೊಡಬೇಕೆಂದು ಅಲಿಖಿತವಾಗಿ ನಿಗದಿಪಡಿಸಿರುವ ವ್ಯವಸ್ಥೆಯನ್ನು ಸರಿಪಡಿಸಬೇಕು. ಸಂಪನ್ಮೂಲಗಳು ಸೋರಿಕೆಯಾಗದೆ ಫಲಾನುಭವಿಗಳಿಗೆ, ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವವರಿಗೆ ಸಿಗಬೇಕು. ಸರ್ಕಾರದ ಸೂಕ್ತ ಮೇಲ್ವಿಚಾರಣೆ: ಕೇವಲ Register ಮಾಡಿಸಿಕೊಳ್ಳುವುದಷ್ಟೇ ತನ್ನ ಕೆಲಸವೆಂದು ಬಗೆದು ಸುಮ್ಮನೆ ಕುಳಿತಿರುವ ಸರ್ಕಾರ ಎಚ್ಚರಗೊಂಡು ಈ ಕ್ಷೇತ್ರದಲ್ಲಿ ನಡೆಯುತ್ತಿರುವ ಅವ್ಯವಹಾರಗಳನ್ನ ತಡೆಯಲು ಸೂಕ್ತ Vigilance Committee ರಚಿಸಬೇಕು. ಇಲ್ಲಿ ಪ್ರಾಮಾಣಿಕರು ತುಂಬಿರಬೇಕು. ಪ್ರತೀ ವರ್ಷ ಸ್ವಯಂಸೇವಾಸಂಸ್ಥೆಗಳು ಮಾಡುವ ಕೆಲಸಕಾರ್ಯ, ಖರ್ಚು ಮಾಡುವ ಹಣದ ಬಗ್ಗೆ ಈ ತಂಡ ನಿಷ್ಪಕ್ಷಪಾತ ಅಧ್ಯಯನ ಮಾಡಬೇಕು. ಸಂಸ್ಥೆಗಳು ರಾಜಕೀಯ ವ್ಯಕ್ತಿಗಳಿಂದ, ಪಕ್ಷಗಳಿಂದ, ರಾಜಕೀಯ ಪ್ರಭಾವದಿಂದ ಹೊರತಾಗಿದ್ದು, ಇದನ್ನು Side Business ಎಂಬಂತೆ ಇಟ್ಟುಕೊಳ್ಳದೇ ಅದು ಸೇವೆಗಾಗಿ, ಮನಃತೃಪ್ತಿಗಾಗಿ ಮಾಡಿದರೆ ಒಳ್ಳೆಯದು. ಇವೇ ಮೊದಲಾದ ಹತ್ತು ಹಲವು ಕ್ರಮಗಳಿಂದ ಸ್ವಯಂಸೇವಾಸಂಸ್ಥೆಗಳಲ್ಲಿನ ಪರಿಸ್ಥಿತಿಯನ್ನು ಸುಧಾರಿಸಬಹುದು. ಸ್ವಯಂಸೇವಾಸಂಸ್ಥೆಗಳಿಂದ ಸಮಾಜದ ಇತ್ಯಾತ್ಮಕ ಬದಲಾವಣೆಗೆ ಪ್ರಯತ್ನಿಸಬಹುದು. ಪ್ರಧಾನಿ ಡಾ|| ಮನಮೋಹನ್ ಸಿಂಗ್ ಅವರು ಹೇಳುವಂತೆ ದೇಶದ ಅಭಿವೃದ್ದಿಗೆ ಸರ್ಕಾರದ ಜೊತೆ, ಖಾಸಗೀ ಸಂಘಸಂಸ್ಥೆಗಳು ಕೈಜೋಡಿಸಬೇಕು ಎಂಬ ಮಾತು ಅರ್ಥಗರ್ಭಿತ. ಆದರೆ ಇಂದು ಪ್ರತೀದಿನ ಪತ್ರಿಕೆಗಳಲ್ಲಿ ಬರುವ ಸ್ವಯಂಸೇವಾಸಂಸ್ಥೆಗಳು ಭ್ರಷ್ಟಾಚಾರದಲ್ಲಿ `40 ಸ್ವಯಂಸೇವಾಸಂಸ್ಥೆಗಳು ಕಪ್ಪು ಪಟ್ಟಿಗೆ `ಸ್ವಯಂ ಸೇವಾಸಂಸ್ಥೆಗಳಲ್ಲಿ ಶೋಷಣೆ ಇವೇ ಮೊದಲಾದ ಸುದ್ದಿಗಳು ಸ್ವಯಂಸೇವಾಸಂಸ್ಥೆಗಳ ನೈಜತೆಯನ್ನು ಪ್ರಶ್ನಿಸುವಂತಿವೆ. ಬೆವರು ಸುರಿಸಿ ದುಡಿದು ಜನರು ದಾನ ಮಾಡಿದಂತಹ ಹಣವನ್ನು ದುರ್ಬಳಕೆ ಮಾಡಿಕೊಳ್ಳುವುದು, ಅದರಲ್ಲೂ ಸಮಾಜದ ಉದ್ದಾರಕ್ಕೆಂದೇ ಸ್ಥಾಪಿತವಾಗಿರುವ ಸಂಸ್ಥೆಗಳು ಬಡವರ ಹೆಸರಿನಲ್ಲಿ ತಿಂದು ತೇಗುತ್ತಿರುವುದು ಮಹಾನ್ ಅಪರಾಧ. ಇದಕ್ಕೆ ಕ್ಷಮೆಯೇ ಇಲ್ಲ. ಏನೇ ಕಾನೂನು ನೀತಿಗಳಿದ್ದರೂ ಸಂಸ್ಥೆಯನ್ನು ಮುನ್ನಡೆಸುವವರು ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಅರಿತುಕೊಂಡು, ತತ್ತ್ವಾದರ್ಶಗಳನ್ನ ಹೊಂದಿ, ಸಂಸ್ಥೆಯನ್ನು ನಡೆಸಿದರೆ, ಪ್ರಾಮಾಣಿಕ ಸೇವೆಯನ್ನು ಜನರಿಗೆ ನೀಡಿದರೆ, ಸಮಾಜದ ಉದ್ಧಾರ ಸಾಧ್ಯ. ಶ್ರದ್ಧೆಯಿಂದ ಮತ್ತು ಪರಿಶ್ರಮದಿಂದ ಸ್ವಯಂಸೇವಾಸಂಸ್ಥೆಗಳನ್ನು ಮುನ್ನಡೆಸಿಕೊಂಡು ಹೋದಲ್ಲಿ ಖಂಡಿತಾ ಗೌರವ, ಯಶಸ್ಸು ಮತ್ತು ಹಣಕಾಸಿನ ಸಂಪೂರ್ಣ ನೆರವು ದೊರೆಯುತ್ತದೆ. ಇದಕ್ಕೆ SKDRDP, ವಿವೇಕಾನಂದ Youth movement, ‘VGKK’ ಮುಂತಾದ ಸ್ವಯಂಸೇವಾಸಂಸ್ಥೆಗಳೇ ಉದಾಹರಣೆ. ಇದಾಗದೆ Solutions are worst than problems ಎಂಬಂತಾದರೆ, ಮುಂದೊಂದು ದಿನ ಜನ ಮಹಾತ್ಮಗಾಂಧಿಯವರು ಒಮ್ಮೆ ಹೇಳಿದ If I had the power I would, after India gained Independence, send out all the missionaries from the Country ಎಂಬ ಮಾತಿನಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡು ಸ್ವಯಂ ಸೇವಾಸಂಸ್ಥೆಗಳಿಗೆ ಅನ್ವಯಿಸಿಕೊಳ್ಳುತ್ತಾರೇನೋ....!! ಆನಂದ್ ಎನ್.ಎಲ್ ಉಪನ್ಯಾಸಕರು, ಸಮಾಜಕಾರ್ಯ ವಿಭಾಗ, ಸಿ. ಎಂ. ಆರ್ ಕಾಲೇಜು, ಬೆಂಗಳೂರು
1 Comment
|
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
SITE MAP
SiteTRAININGJOB |
HR SERVICESOTHER SERVICESnIRATHANKA CITIZENS CONNECT |
NIRATHANKAPOSHOUR OTHER WEBSITESSubscribe |
MHR LEARNING ACADEMY
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|