ಮನೆ, ಮನೆತನ, ಕುಟುಂಬ ಇತ್ಯಾದಿಗಳ ಬಗ್ಗೆ ನಮ್ಮಲ್ಲಿ ಇಂದು ಬಹಳವಾಗಿ ಚರ್ಚೆ, ಸಂವಾದಗಳು ಸಡೆಯುತ್ತಿವೆ. ಕೆಲವೆಡೆ ಚರ್ಚೆ-ಸಂವಾದಗಳು ಶಬ್ದರೂಪಕ್ಕಷ್ಟೇ ಸೀಮಿತವಾಗಿ ' ಇದೆಲ್ಲವೂ ಕಾಲದ ಪರಿಣಾಮ: ಕಾಲಾಯ ತಸ್ಮೈ ನಮಃ, ನಾವು ಏನನ್ನೂ ಮಾಡಲಾರೆವು, ಗಾಳಿ ಬಂದಂತೆ ತೂರಿಕೊ' ಎಂದು ಅಸಹಾಯಕತೆಯನ್ನು ತೋರಿಸಿ, ಎಂದಿನಂತೆ ತಮ್ಮ ಜೀವನ ನಡೆಸುವವರು ಬಹಳಷ್ಟು ಮಂದಿ ಇದ್ದರೆ, ಇನ್ನಷ್ಟು ಮಂದಿ ಇಂತಹ ಚಿಂತನೆಯನ್ನು ನಡೆಸದವರೂ ಇದ್ದಾರೆ. ಮತ್ತಷ್ಟು ಮಂದಿ 'ನಾವು ಯಾವ ಊರಿಗೆ ಹೋಗಬೇಕೆಂದು ನಿರ್ಧಾರವಾಗಿದೆ, ಅದಕ್ಕೆ ಆ ದಾರಿಯಲ್ಲಿ ಹೋಗದೆ, ಬೇರೊಂದು ದಾರಿ ಹಿಡಿದಿರುವುದಾದರೆ ಅದನ್ನು ಬಿಟ್ಟು, ಸರಿಯಾದ ದಾರಿಯನ್ನು ಆಶ್ರಯಿಸಬೇಕು' ಎಂದು ತಿಳಿದು, ಅದರಂತೆ ತಾವು ಕ್ರಮಿಸಿದ ದಾರಿಯಿಂದ ಹಿಂದಕ್ಕೆ ಬಂದು ಸರಿಯಾದ ದಾರಿಯಲ್ಲಿ ಪ್ರಯಾಣಿಸಲು ನಿಶ್ಚಯಿಸಿ, ಅದರಂತೆಯೇ ಮಾಡುತ್ತಾರೆ. ಅಂತಹವರನ್ನೇ ಯುಕ್ತ-ಅಯುಕ್ತ ವಿವೇಚನಶಕ್ತಿಯುಳ್ಳ ವಿವೇಕಿಗಳು ಎಂದು ಕರೆಯಲಾಗುತ್ತದೆ. ಇಂತಹ ವಿವೇಕವು ಪ್ರತಿಯೊಬ್ಬ ಮನುಷ್ಯನಿಗೂ, ಆತನು ಪ್ರವೇಶಿಸುವ ಎಲ್ಲ ಕ್ಷೇತ್ರಗಳಲ್ಲೂ (ಓದು, ಬರಹ, ಶಾಲೆ, ಮನೆಯ ನಿರ್ವಹಣೆ, ಕೃಷಿ, ಕಛೇರಿ, ಕಾರ್ಖಾನೆ, ಸಮಯದ ಸದ್ಬಳಕೆ, ಸಾಮಾಜಿಕ ಸಂಬಂಧ ಇತ್ಯಾದಿ) ಇರಬೇಕು. ಅಂತಹ ವಿವೇಕವಿಲ್ಲದೆ, ಒಟ್ಟಾರೆಯಾಗಿ ಹೇಗೋ ಜೀವನವನ್ನು ಸಾಗಿಸುತ್ತಿದ್ದೇವೆ ಎಂದುಕೊಳ್ಳುವ ಜನರನ್ನು ಕಠೋಪನಿಷತ್ತು 'ಅಂಧೇನೈವ ನೀಯಮಾನಾ ಯಥಾಂಧಾಃ (ಕುರುಡರು ಕುರುಡರಿಗೆ ದಾರಿ ತೋರಿಸಿದರೆ ಹೆಗೋ ಹಾಗೆ ಅವರು ದಾರಿ ತಪ್ಪುತ್ತಾರೆ) ಎಂದು ಎಚ್ಚರಿಸಿದೆ. ಇಂತಹ ವಿವೇಚನೆಯ ತಿಳುವಳಿಕೆಯನ್ನು ಹೊಂದಿದವನೇ ನಿಜವಾದ ಮಾನವ ಅಥವಾ ಮನುಷ್ಯ. 'ಮಾನವ' ಹಾಗೂ 'ಮನುಷ್ಯ' ಎಂಬ ಪದಗಳೇ 'ಮನ್' ಎಂಬ ಧಾತುವಿನಿಂದ ಹುಟ್ಟಿದೆ. ಇದರ ಅರ್ಥ ಜ್ಞಾನ ಅಥವಾ ತಿಳುವಳಿಕೆ. ಮನುಷ್ಯನ ದೇಹ ಇತರ ಚತುಷ್ಪಾದ ಪ್ರಾಣಿಗಳ ದೇಹದಂತೆ ಪಂಚಭೂತಗಳಿಂದಲೇ ಆಗಿದೆಯಾದ್ದರಿಂದ ಹಸಿವೆ, ಬಾಯಾರಿಕೆ, ನಿದ್ದೆ, ಕಾಮತೃಷೆ ಇತ್ಯಾದಿಗಳು ಸಹಜ ಆದರೆ ಇವುಗಳನ್ನು ತಣಿಸಿಕೊಳ್ಳುವಾಗ ಮನುಷ್ಯನು ಚತುಷ್ಪಾದ ಪ್ರಾಣಿಗಳಂತೆ ನಡೆದುಕೊಳ್ಳದೆ ಒಂದು ಸಭ್ಯಮಾರ್ಗವನ್ನು ಅನುಸರಿಸಬೇಕು. ಹಾಗೂ ತನ್ನ ಜೀವನವು ಕೇವಲ ಆಹಾರ, ನಿದ್ದೆ, ಭಯ, ಮೈಥನಗಳಿಗೆ ಸೀಮಿತವಲ್ಲ; ತನ್ನ ದೇಹದ ಅಂಗಗಳ ಪೈಕಿ ತಲೆಯೇ (ಮೆದುಳು, ಮನಸ್ಸು) ಮುಖ್ಯವಾದದ್ದು. ಉದರನಿಮಿತ್ತಂ ಬಹುಕೃತವೇಷಃ ಎಂದು ಆದಿ ಶಂಕರರು ಹೇಳಿದಂತೆ ಹೊಟ್ಟೆಪಾಡಿಗಾಗಿ ಮಾತ್ರ ವಿವಿಧ ವಿದ್ಯೆ, ವೃತ್ತಿ ಒಡೆದೆನೆಂದರೆ ಅದರಿಂದ ಮಾನವನ ನಿಜವಾದ ಗುರಿಯು ಸಾಧಿತವಾಗುವುದಿಲ್ಲ. ಮಾನವನ ಗುರುಯೆಂದರೆ ತನ್ನ ಬಗ್ಗೆ ತಾನು ತಿಳಿದುಕೊಳ್ಳುವುದು. ಇದನ್ನೇ 'ಆತ್ಮಜ್ಞಾನ ಎಂದು ನಮ್ಮ ಹಿರಿಯರು ಹೇಳಿದ್ದಾರೆ. ಈ ಭೂಮಿಯಲ್ಲಿ ಜನಿಸಿದ ಪ್ರತಿಯೊಬ್ಬನೂ ಪಂಚೇದ್ರಿಯಗಳ ತೃಪ್ತಿಗಾಗಿ ಶ್ರಮಿಸುತ್ತಾನೆ. ಇದಕ್ಕೆ ಯಾರ ಉಪದೇಶವೂ ಬೇಕಾಗಿಲ್ಲ, ಏಕೆಂದರೆ ಅವೆಲ್ಲ ದೇಹಕ್ಕೆ ಬೇಕೇ ಬೇಕು. ಆದರೆ ಮನುಷ್ಯನು ತನ್ನ ದೇಹಕ್ಕೆ ಮಾತ್ರ ಸೀಮಿತನಲ್ಲ. ಈ ತೃಪ್ತಿ ಕೇವಲ ತಾತ್ಕಾಲಿಕ. ಎಷ್ಟು ತಾತ್ಕಾಲಿಕವೆಂದರೆ, ಇದು ಕೆಲವು ತಾಸುಗಳಿಗೆ ಸೀಮಿತ. ಪುನಃ ಅದೇ ತೃಪ್ತಿಗಾಗಿ ಹಾತೊರೆಯುವಿಕೆ ಪ್ರಾರಂಭ. ಆದರೆ ಆತ್ಮಜ್ಞಾನದಿಂದ ಶಾಶ್ವತತೃಪ್ತಿ. ಆತ್ಮಜ್ಞಾನದ ಪ್ರಾಪ್ತಿಗಾಗಿ ಪ್ರಯತ್ನಶೀಲನಾದವನು, ಯಾವಾಗಲೂ ಉತ್ಸಾಹಶೀಲನಾಗಿರುತ್ತಾನೆ. ಇದಕ್ಕಾಗಿ ಮನವನ ಜೀವನವನ್ನು ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಹಾಗೂ ಸಂನ್ಯಾಸವೆಂಬ ನಾಲ್ಕು ಆಶ್ರಮಗಳನ್ನಾಗಿ ವಿಭಾಗಿಸಿದ್ದಾರೆ. ಬ್ರಹ್ಮಚರ್ಯ ಆಶ್ರಮದಲ್ಲಿ ವಿದ್ಯೆಯನ್ನು ಕಲಿಯುವುದು; ಗೃಹಸ್ಥಾಶ್ರಮದಲ್ಲಿ ತಾನು ಪಡೆದ ವಿದ್ಯೆಯ ಪರಿಣಾಮಕಾರಿ ಅನುಷ್ಠಾನ; ಅದನ್ನು ತನ್ನ ಸಂತತಿ ಹಾಗೂ ನೆರೆಹೊರೆಯವರಿಗೂ ತಿಳಿಸಿಕೊಟ್ಟು, ಅದನ್ನು ತನ್ನ ಸಂತತಿ ಹಾಗೂ ನೆರೆಹೊರೆಯವರಿಗೂ ತಿಳಿಸಿಕೊಟ್ಟು, ಆದರ್ಶ ಜೀವನವನ್ನು ನಡೆಸುವುದು; ವಾನಪ್ರಸ್ಥ ಹಾಗೂ ಸಂನ್ಯಾಸದಲ್ಲಿ ತನ್ನ ಸಾಧನೆಯನ್ನು ಸಂಪೂರ್ಣವಾದ ಸಮರ್ಪಿತಜೀವನದಿಂದ ಮುಂದುವರೆಸಿ, ಗುರಿಯನ್ನು ಸಾಧಿಸುವುದು.
ಮಾನವನ ಜೀವನದ ಗುರಿಯನ್ನು 'ಪುರುಷಾರ್ಥ' ಎಂಬ ಪದದಿಂದ ಬಣ್ಣಿಸಲಾಗಿದೆ. ಈ ಪುರುಷಾರ್ಥಗಳನ್ನು ಧರ್ಮ, ಅರ್ಥ, ಕಾಮ, ಮೋಕ್ಷ ಎಂಬುದಾಗಿ ಗೊತ್ತುಮಾಡಲಾಗಿದೆ. ಅರ್ಥವನ್ನು ಸಂಪಾದಿಸಬೇಕು; ಅದರಿಂದ ಕಾಮನೆಗಳನ್ನು ಈಡೇರಿಸಿಕೊಳ್ಳಬೇಕು ಎಂಬುದನ್ನು ಯಾರೂ ಎಂದಿಗೂ ಅಲ್ಲಗಳೆದಿಲ್ಲ. ಇದಕ್ಕಾಗಿಯೇ ಚಾಣಕ್ಯನ ಅರ್ಥಶಾಸ್ತ್ರ, ವಾತ್ಸ್ಯಾಯನನ ಕಾಮಸೂತ್ರ ರಚಿತವಾಗಿವೆ. ಆದರೆ ಅವೆರಡನ್ನೂ ಧರ್ಮದ ಮೂಲಕ ಸಂಪಾದಿಸಿಕೊಳ್ಳಬೇಕು ಎಂಬುದನ್ನು ಋಷಿ ಮುನಿಗಳು ಒತ್ತಿ ಹೇಳಿದ್ದಾರೆ. ಮಹರ್ಷಿ ವೇದವ್ಯಾಸರು ತಮ್ಮ 'ಭಾರತಸಾವಿತ್ರೀ' ಎಂಬ ಐದು ಶ್ಲೋಕಗಳ ಪೈಕಿ ಒಂದರಲ್ಲಿ ಹೀಗೆ ಹೇಳಿದ್ದಾರೆ: // ಊರ್ಧ್ವಬಾಹುಃ ವಿರೋಮ್ಯೇಷಃ ನ ಚ ಕಶ್ಚಿಚ್ಛೃಣೋತಿ ಮೇ/ ಧರ್ಮಾದರ್ಥಶ್ಚ ಕಾಮಶ್ಚ ಸ ಕಿಮರ್ಥಂ ನ ಸೇವ್ಯತೇ // 'ಎರಡೂ ತೋಳುಗಳನ್ನೆತ್ತಿ ಗಟ್ಟಿಧ್ವನಿಯಲ್ಲಿ ಅರಚುತ್ತಿದ್ದೇನೆ. ಆದರೆ ಯಾರೊಬ್ಬರೂ ಕೇಳಿಸಿಕೊಳ್ಳುತ್ತಿಲ್ಲ. ಅದೇನೆಂದರೆ ಧರ್ಮದಿಂದಲೇ ಅರ್ಥ, ಕಾಮ ಎಂಬ ಪುರುಷಾರ್ಥಗಳು, ಆದರೆ ಆ ಧರ್ಮವನ್ನು ಮಾತ್ರ ಯಾರೂ ಏತಕ್ಕಾಗಿ ಅನುಸರಿಸುವುದಿಲ್ಲ?' ಧರ್ಮಮೂಲವಾಗಿ ಅರ್ಥ, ಕಾಮಗಳನ್ನು ಗೃಹಸ್ಥನು ಸೇವಿಸಿದಾಗ, ಆತನೊಬ್ಬ ಆದರ್ಶ ಗೃಹಸ್ಥನಾಗುತ್ತಾನೆ; ಅದೊಂದು ಆದರ್ಶಗೃಹವಾಗುತ್ತದೆ. ಅಲ್ಲಿ ಸಂಸ್ಕೃತಿ, ಸದಾಚಾರ, ಸಜ್ಜನಿಕೆ ಇತ್ಯಾದಿ ಎಲ್ಲವೂ ನೆಲೆಗೊಳ್ಳುತ್ತದೆ. ಗೃಹಸ್ಥಾಶ್ರಮವನ್ನೇ 'ಕುಟುಂಬ'ವನ್ನಾಗಿ ಕರೆಯುತ್ತಾರೆ. 'ಕುಟುಂಬ್ಯತೇ= ಪಾಲ್ಯತೇ' ಅಂದರೆ ಪಾಲಿಸುವುದು ಎಂದರ್ಥ. ಕುಟುಂಬದ ಬವಣೆಗೆ ಸಹಾಯಕವಾದ ಧನಕನಕ ವಸ್ತುಸಾಮಗ್ರಿಗಳೂ ವ್ಯಕ್ತಿಗಳೂ ಜೀವಿಗಳೂ 'ಕುಟುಂಬ' ಎಂಬ ಪರಿಧಿಯಲ್ಲಿ ಬರುತ್ತಾರೆ. ಹಾಗೆ ನೋಡಿದರೆ ಕುಟುಂಬವನ್ನು ಇತರ ಮೂರು ಆಶ್ರಮಗಳಿಗೂ ಆಧಾರವೆಂದು ಗೌರವಿಸಲಾಗಿದೆ. ಯಥಾ ವಾಯುಂ ಸಮಾಶ್ರಿತ್ಯ ಸರ್ವೇ ಜೀವಂತಿ ಜಂತವಃ / ತಥಾ ಗೃಹಸ್ಥಮಾಶ್ರಿತ್ಯ ವರ್ತನ್ತೇ ಸರ್ವ ಆಶ್ರಮಾಃ // (ಹೇಗೆ ಗಾಳಿಯನ್ನು ಆಶ್ರಯಿಸಿ ಎಲ್ಲ ಜೀವಿಗಳು ಬದುಕುತ್ತಾರೋ ಹಾಗೆಯೇ ಗೃಹಸ್ಥನನ್ನು ಆಶ್ರಯಿಸಿ ಇತರ ಮೂರು ಆಶ್ರಮದವರೂ ಜೀವಿಸುತ್ತಾರೆ). ಕೃತಿ ಎಂದರೆ ಕ್ರಿಯೆ ಎಂದರ್ಥ. ಅಥವಾ ಫಲದಿಂದ ಕೂಡಿದ ಚಟುವಟಿಕೆ ಎಂದು ಹೇಳಬಹುದು. ಆ ಕ್ರಿಯೆಯು (ಕೃತಿ) 'ಸಂ' - ಸಮ್ಯಕ್; ಉತ್ತಮವಾಗಿರಬೇಕು ಎಂಬುದು ಭಾರತೀಯ ಋಷಿಮುನಿಗಳ ಅಭಿಪ್ರಾಯ. ಆ ಹಿನ್ನೆಲೆಯಲ್ಲಿ ಇರುವುದೇ ಸಂಸ್ಕೃತಿ. ಆಚಾರ-ವಿಚಾರ-ಇದನ್ನೇ ನಡೆ-ನುಡಿ ಅಥವಾ ರೀತಿ-ನೀತಿ ಎಂದೂ ಕರೆಯುತ್ತಾರೆ- ಇವು ಕುಟುಂಬ ಕುಟುಂಗಳಲ್ಲಿ ಬೇರೆಯೆನಿಸಿದರೂ ಎಲ್ಲದರಲ್ಲೂ ಒಂದು ಸಾಮಾನ್ಯ ತತ್ತ್ವವಿರುತ್ತದೆ. ಕ್ರಿಯಾವಿಭಿನ್ನತೆಯಿದ್ದರೂ ಭಾವಸಮತೆಯಿರುತ್ತದೆ. 'ವಾಹಕ'ವೆಂದರೆ ಹೊತ್ತುಕೊಂಡು ಮುಂದೆ ಸಾಗುವುದು ಎಂದರ್ಥ. ಸ್ವರೂಪವು ಸ್ವಲ್ಪವೂ ಕೆಡದಂತೆ ಮುನ್ನಡೆಸುವುದು. ಸಾಧ್ಯವಿದ್ದಲ್ಲಿ ಅದು ಇನ್ನಷ್ಟು ಉತ್ಕರ್ಷತೆಗೆ ಪೋಷಕವಾಗಬೇಕು. ವಾಹಕದ ಕೆಲಸವೆಂದರೆ, ತನ್ನೊಳಗೆ ಏನನ್ನು ಹಾಕಿದರೂ ಅದನ್ನು ಹೊತ್ತುಕೊಂಡು ಮುಂದೆ ಸಾಗುತ್ತದೆ. ಉದಾಹರಣೆಗೆ ಗಾಡಿಯೊಂದರಲ್ಲಿ ಮೌಲಿಕಗ್ರಂಥಗಳನ್ನಾದರೂ ಸಾಗಿಸಬಹುದು, ಚಿತ್ತವಿಕಾರಗೊಳಿಸುವ ಅಥವಾ ಕೆರಳಿಸುವ ಗ್ರಂಥಗಳನ್ನಾದರೂ ಸಾಗಿಸಬಹುದು, ಗಂಗಾತೀರ್ಥದ ಕಳಸಗಳನ್ನಾದರೂ ಸಾಗಿಸಬಹುದು, ಮದ್ಯದ ಸೀಸೆಗಳನ್ನಾದರೂ ಸಾಗಿಸಬಹುದು. ಆದರೆ ಸಂಸ್ಕೃತಿ-ಕುಟುಂಬ; ಕುಟುಂಬ-ಸಂಸ್ಕೃತಿ-ಇವು ಒಂದರ ನೆರಳು ಒಂದು; ಒಂದರ ಫಲ ಇನ್ನೊಂದು. ಪ್ರತಿಯೊಂದು ಕುಟುಂಬಕ್ಕೂ ಒಂದು ವಿಶಿಷ್ಟ ನಡೆಯುತ್ತಿರುತ್ತದೆ. ಅದು ಆಯಾ ಮನೆಯಲ್ಲಿ ಮುಂದುವರೆಯುತ್ತ ಸಾಗಬೇಕು; ಹಾಗಾದಾಗ ಆ ಕುಟುಂಬ ದಾರಿದೀಪವೆನಿಸುತ್ತದೆ. ಸಾನಂದಂ ಸದನಂ ಸುತಾಶ್ಚ ಸುಧಿಯಃ ಕಾಂತಾ ನ ದುರ್ಭಾಷಿಣೀ / ಸನ್ಮಿತ್ರಂ ಸುನಧಂ ಸ್ವಯೋಷಿತಿ ರತಿಶ್ಚಾಜ್ಞಾಪರಾಸ್ಸೇವಕಾಃ// ಆತಿಥ್ಯಂ ಶಿವಪೂಜನಂ ಪ್ರತಿದಿನಂ ಮೃಷ್ಟಾನ್ನಪಾನಂ ಗೃಹೇ/ ಸಾಧೋ ಸಂಗಮುಪಾಸತೇ ಹಿ ಸತತಂ ಧನ್ಯೋ ಗೃಹಸ್ಥಾಶ್ರಮಃ// ಆನಂದ ತುಂಬಿದ ಮನೆ, ಮಕ್ಕಳೆಲ್ಲರೂ ಬುದ್ಧಿವಂತರು; ಮನೆಯೊಡತಿ ಎಂದಿಗೂ ದುರ್ಭಾಷಿಣಿಯಲ್ಲ; ಉತ್ತಮ ಗೆಳೆಯರು, ನ್ಯಾಯಮಾರ್ಗದಿಂದ ಅರ್ಜಿಸಿದ ಸಂಪತ್ತು; ತನ್ನ ಮಡದಿಯಲ್ಲಿ ಮಾತ್ರವೇ ಕಾಮರತಿ; ಆಜ್ಞಾದಾರಕರಾದ ಸೇವಕರು; ಪ್ರತಿದಿನ ಭಗವಂತನ ಪೂಜೆ, ಆತಿಥ್ಯ, ಮೃಷ್ಟಾನ್ನಪಾನ ಸೇವನೆ, ಸದಾಕಾಲ ಸಜ್ಜನರ ಸಹವಾಸ; -ಇಂತಹ ಗೃಹಸ್ಥಾಶ್ರಮವು ಧನ್ಯವಾದುದು. ಹೀಗೆ ಗೃಹಸ್ಥಾಶ್ರಮವನ್ನು ಧನ್ಯವನ್ನಾಗಿ ಬಿಂಬಿಸಿ, ಅದನ್ನು ಜ್ಯೇಷ್ಠಾಶ್ರಮವನ್ನಾಗಿ ಕರೆದಿದ್ದಾರೆ ಪೂರ್ವಜರು. ಸಾನಂದಂ ಸದನಂ ಮನೆಯು ಆನಂದಿಂದಿರಬೇಕು. ಎಲ್ಲರೂ ಬಯಸುವುದು ಇದನ್ನೇ ಅಲ್ಲವೇ? ಹೀಗೆ ಮನೆಯು ಆನಂದದಿಂದಿರಬೇಕೆಂದರೆ, ಅಲ್ಲಿರುವ ಸದಸ್ಯರೆಲ್ಲರೂ 'ನಾನು' ಎಂಬುದಕ್ಕೆ ಬದಲು 'ನಾವು' ಎಂಬ ತತ್ತ್ವವನ್ನು ಅಳವಡಿಸಿಕೊಳ್ಳಬೇಕು. ಎಲ್ಲಿ ಇತರರ ಗೆಲವು, ಸಂತೋಷ, ತೃಪ್ತಿಯಲ್ಲಿ ನನಗೂ ಗೆಲವು, ಸಂತೋಷ, ತೃಪ್ತಿಯಿದೆಯೆಂದು ಭಾವಿಸಿ ಸಂಭ್ರಮಿಸುತ್ತಾರೋ ಅಲ್ಲಿ ಸದಾಕಾಲದಲ್ಲೂ ಆನಂದವೇ ಇರುತ್ತದೆ. ಪ್ರಸಿದ್ಧವಾದ ಶ್ಲೋಕವೊಂದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಶ್ಲೋಕಾರ್ಧೇನ ಪ್ರವಕ್ಷ್ಯಾಮಿ ಯದುಕ್ತಂ ಗ್ರಂಥಕೋಟಿಭಃ/ ಆತ್ಮನಃ ಪ್ರತಿಕೂಲಾನಿ ಪರೇಷಾಃ ನ ಸಮಾಚರೇತ್// ವಿವಿಧ ಭಾಷೆಗಳಲ್ಲಿ ಕೋಟಿಶಃ ಗ್ರಂಥಗಳು ರಚಿತವಾಗಿದ್ದರೂ ಅವುಗಳಲ್ಲಿನ ಸಂದೇಶವನ್ನು ಅರ್ಧಶ್ಲೋಕದಲ್ಲಿ ಹೇಳಬಹುದು. ಅದೆಂದರೆ ತನಗೆ ಪ್ರತಿಕೂಲವಾದದ್ದನ್ನು ಇತರರಿಗೆ ಮಾಡಬಾರದು. ಇದನ್ನೇ ಬಸವಣ್ಣನವರು ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ ಅನ್ಯರಿಗೆ ಅಸಹ್ಯ ಪಡಬೇಡ ತನ್ನ ಬಣ್ಣಿಸಬೇಡ ಇದಿರ ಹಳಿಯಲು ಬೇಡ ಇದೇ ಅಂತರಂಗಶುದ್ಧಿ ಇದೇ ಬಹಿರಂಗಶುದ್ಧಿ ಎಂದು ಪ್ರತಿಪಾದಿಸಿದರು. 'ಶುದ್ಧಿ' ಎನ್ನುವುದನ್ನು ನಾವೀಗ ನಮ್ಮ ಶರೀರದ ಹೊರಭಾಗಕ್ಕೆ ಮಾತ್ರವೆಂದು ತಿಳಿದಿದ್ದೇವೆ. ಆದರೆ ನೈಜವಾದ ಶದ್ಧಿಯೆಂದರೆ ಮಾನಸಿಕ ಭಾವಶುದ್ಧಿ. ಸುತಾಶ್ಚ ಸುಧಿಯಃ ಮಕ್ಕಳು ಸುಧಿಗಳು. 'ಧೀ ಎಂದರೆ ಬುದ್ಧಿ. ಇಂದು ನಾವು ಮಕ್ಕಳಿಗೆ ಶಾಲಾ ಕಾಲೇಜುಗಳಲ್ಲಿ ನೀಡುತ್ತಿರುವ ಶಿಕ್ಷಣವನ್ನು ಈಶೋಪನಿಷತ್ತು 'ಅವಿದ್ಯೆ' ಎಂದು ಕರೆದಿದೆ. ಇದರಿಂದಾಗಿ ಮನುಷ್ಯನು ದ್ವೀಪದಂತಾಗುತ್ತಿದ್ದಾನೆ. ಆದರೆ ವ್ಯಾವಹಾರಿಕ ಪ್ರಪಂಚಕ್ಕೆ ಇದು ಬೇಕೆ ಬೇಕು ಎಂಬುದನ್ನು ಉಪನಿಷತ್ತಿನ ಋಷಿಗಳು ಒಪ್ಪಿದ್ದಾರೆ. 'ಅವಿದ್ಯೆ'ಯ ಜೊತೆಯಲ್ಲೇ 'ವಿದ್ಯೆ' ಯನ್ನೂ ತಿಳಿಯಬೇಕು. 'ವಿದ್ಯೆ' ಎಂದರೆ ಎಲ್ಲರ ಆತ್ಮವೂ ಒಂದೇ' ಎಂಬ ಏಕಾತ್ಮ ಚಿಂತನೆಯ ವಿಶ್ವಮಾನವತೆ. ಹೀಗೆ ಐಕಾತ್ಮ್ಯ ಚಿಂತನೆ ಮೂಡಿದಾಗ, ಮೋಹ, ಶೋಕ, ಅಸೂಯೆ, ಸ್ಪರ್ಧೆ ಇತ್ಯಾದಿ ಇರುವುದೇ ಇಲ್ಲ. ಎಲ್ಲವೂ ಪರಸ್ಪರ ಪೂರಕವಾಗಿರುತ್ತದೆ. ವಿದ್ಯಾಂ ಚ ಅವಿದ್ಯಾಂ ಚ ಯಸ್ತದ್ವೇದ ಉಭಯಗ್ಂ ಸಹ / ಅವಿದ್ಯಯಾ ಮೃತ್ಯುಂ ತೀರ್ತ್ವಾ ವಿದ್ಯಯಾ ಅಮೃತಮಶ್ನುತೇ // 'ವಿದ್ಯೆ' ಹಾಗೂ 'ಅವಿದ್ಯೆ' ಇವೆರಡನ್ನೂ ಯಾರು ತಿಳಿಯುತ್ತಾನೋ, ಅವನು ಅವಿದ್ಯೆಯಿಂದ (ಹಸಿವು, ನೀರದಿಕೆಯೆಂಬ) ಮೃತ್ಯುವನ್ನು ದಾಟಿ ವಿದ್ಯೆಯಿಂದ ಅಮೃತತ್ವವನ್ನು ಪಡೆಯುತ್ತಾನೆ. ಮಕ್ಕಳು ಇಂತಹ ಬುದ್ಧಿಯನ್ನು ಪಡೆದಾಗ ಸುಧಿಯರಾಗುತ್ತಾರೆ. ನಿಜವಾದಂತಹ ಸುಧೀ ಅಥವಾ ಪಂಡಿತನು ಯಾರೆಂಬ ಪ್ರಶ್ನೆಗೆ ಪಂಚತಂತ್ರದಲ್ಲಿ ಇನ್ನಷ್ಟು ಉತ್ತಮ ಸಂದೇಶವಿದೆ. ಪರಸ್ತ್ರೀಯರಲ್ಲಿ ಮಾತೃಭಾವ, ಪರರ ವಸ್ತುಗಳು ಮಣ್ಣಿನ ಹೆಂಟೆಯೆಂಬ ಭಾವನೆ, ಎಲ್ಲ ಜೀವಿಗಳಲ್ಲೂ ಆತ್ಮಸ್ವರೂಪದ ದರ್ಶನ ಹೊಂದಿರುವವನೇ ಪಂಡಿತ. ಮಾತೃವತ್ ಪರದಾಯೇಷು ಪರದ್ರವ್ಯೇಷು ಲೋಷ್ಠವತ್ / ಆತ್ಮವತ್ ಸರ್ವಭೂತೇಷು ಯಃ ಪಶ್ಯತಿ ಸ ಪಂಡಿತಃ // ಇಂತಹ ಸಮದರ್ಶಿತ್ವದ ಬುದ್ಧಿ ಇರುವಂತಹ ಮಕ್ಕಳೇ ಕುಟುಂಬದ ಭೂಷಣ. ಕಾಂತಾ ನ ದುರ್ಭಾಷಿಣೀ ಪತ್ನಿಯು ಎಂದಿಗೂ ದುರ್ಭಾಷಿಣಿಯಾಗಬಾರದು; ಆಕೆ ಸುಭಾಷಿಣಿಯೇ ಆಗಿರಬೇಕು. (ಹಾಗಾದರೆ ಗಂಡನು ದುರ್ಭಾಷಿಯಾಗಬಹುದೆಂಬ ಕುತರ್ಕ ಇಲ್ಲಿ ಅಪ್ರಸ್ತುತ). ಗಂಡ-ಮಕ್ಕಳು ಅಕಸ್ಮಾತ್ತಾಗಿ ದುರ್ಭಾಷಿಗಳಾದರೂ ಅವರನ್ನು ತನ್ನ ಸುಭಾಷಿತ್ವದಿಂದಲೇ ತಿದ್ದುವ ಶಕ್ತಿ ಹೆಂಗಸರಲ್ಲಿರುತ್ತದೆ. ಇಂದಿಗೂ ಸತಿಯು ತನ್ನ ಮನಃಸ್ಥಿತಿಯನ್ನು ಸಮತೋಲನದಲ್ಲಿಟ್ಟುಕೊಂಡರೆ, ಆ ಕುಟುಂಬದಲ್ಲಿ ಉಂಟಾಗುವ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಅವಳ ಮಾತಿನಿಂದಲೇ ಪರಿಹಾರಗೊಳ್ಳುತ್ತವೆ. ಇಂತಹ ಮಕ್ಕಳನ್ನೇ ಧರ್ಮಪ್ರಜಾಸಂತತಿಃ ಎಂದು ಕರೆಯುತ್ತಾರೆ. ವಿವಾಹದ ಮುಖ್ಯ ಉದ್ದೇಶವೇ ಇದು. ಕೌಟುಂಬಿಕ ಆದರ್ಶ, ಮೌಲ್ಯಗಳನ್ನು ಮಕ್ಕಳಿಗೆ ಸಮರ್ಥವಾಗಿ ವರ್ಗಾಯಿಸಬೇಕು. ಹಿರಿಯರ ಆದರ್ಶಗಳನ್ನು ಕಿರಿಯರು ಅರ್ಥೈಸಿಕೊಂಡು ಅವುಗಳನ್ನು ಮುಂದುವರೆಸಬೇಕು. ಆದ್ದರಿಂದಲೇ, ಮಗುವು ಗರ್ಭಾವಸ್ಥೆಯಲ್ಲಿದ್ದಾಗಲೇ ಅದಕ್ಕೆ ಉತ್ತಮ ಸಂಸ್ಕಾರವನ್ನು ನೀಡಲು ಆರಂಭಿಸಬೇಕು. ದಂಪತಿಗಳಿಗೆ ಸಂತಾನ ಬೇಕು ಎಂದು ಅನ್ನಿಸಿದಾಗಲೇ ಸಂಸ್ಕಾರಗಳು ಆರಂಭಗೊಳ್ಳುತ್ತವೆ; ಸಂತತಿಯ ಶೀಲ ಚಾರಿತ್ರ್ಯ ರೂಪುಗೊಳ್ಳುತ್ತದೆ ಎಂದು ವಿಜ್ಞಾನಿಗಳು ಅಭಿಪ್ರಾಯ ಹೊಂದಿದ್ದಾರೆ. ಶಿಶುವು ತಾಯಿಯ ಗರ್ಭದಲ್ಲಿರುವಾಗ ತಾಯಿಯ ಶಯನ, ಉತ್ಥಾನ, ಆಹಾರಸೇವನೆ, ದೃಶ್ಯ-ಶ್ರವ್ಯಮಾಧ್ಯಮಗಳ ಉಪಯೋಗ, ಮಾತುಕತೆ ಇತ್ಯಾದಿಗಳ ಪ್ರಭಾವಕ್ಕೆ ಒಳಗಾಗುತ್ತದೆ. ಈ ಪ್ರಭಾವವು ಆ ಶಿಶುವಿನ ಜೀವನಪೂರ್ತಿ ಇರುತ್ತದೆಂಬುದು ಗಮನಾರ್ಹ. ಪುರಾಣ, ಇತಿಹಾಸ ಗ್ರಂಥಗಳಲ್ಲಿ ಇದರ ಬಗ್ಗೆ ಸಾಕಷ್ಟು ಚಿಂತನೆ, ಉದಾಹರಣೆಗಳಿವೆ: ಅಭಿಮನ್ಯುವು ತಾಯಿಯ ಗರ್ಭದಲ್ಲಿದ್ದಾಗಲೇ ಚಕ್ರವ್ಯೂಹದ ಭೇದನದ ಬಗ್ಗೆ ತಿಳಿದಿದ್ದನು; ಅಷ್ಟಾವಕ್ರನು ತನ್ನ ತಂದೆಯು ಮಾಡುತ್ತಿದ್ದ ವ್ಯಾಕರಣದ ದೋಷವನ್ನು ತಾಯಿಯ ಹೊಟ್ಟೆಯಲ್ಲಿದ್ದಾಗಲೇ ತಿದ್ದಿದನು; ವೀರಶಿವಾಜಿಯ ತಾಯಿ ಜೀಜಾಬಾಯಿಯು ತಾನು ಗರ್ಭಿಣಿಯಿದ್ದಾಗಲೇ ತನ್ನ ಶಿಶುವು ಹಿಂದೂ ಸಾಮ್ರಾಜ್ಯ ಸ್ಥಾಪಕನಾಗಬೇಕೆಂದು ಯೋಚಿಸಿದ್ದಳು. ಹೀಗೆ ಮಕ್ಕಳು ಸುಧಿಗಳಾಗಬೇಕು, ಅದಕ್ಕೆ ತಕ್ಕ ಸಂಸ್ಕಾರ ಬೇಕು. ಸನ್ಮಿತ್ರಂ ವ್ಯಕ್ತಿಗೆ, ಕುಟುಂಬಕ್ಕೆ ಮಿತ್ರರು ಇರಬೇಕು. ಮಿತ್ರನನ್ನು 'ಪ್ರೀತಿರಸಾಯನಂ' ಎಂದು ಹಿತೋಪದೇಶದಲ್ಲಿ ವರ್ಣಿಸಲಾಗಿದೆ. ತನ್ಮಿತ್ರಮಾಪದಿ ಸುಖೇ ಚ ಸಮಕ್ರಿಯಂ ಯತ್ ಆಪತ್ಕಾಲದಲ್ಲೂ, ಸುಖಸಂಪತ್ತಿನ ಕಾಲದಲ್ಲೂ ಸಮನಾದ ಭಾವ ಹೊಂದಿರುವವನೇ ನಿಜವಾದ ಮಿತ್ರ ಎಂಬುದಾಗಿ ಸುಭಾಷಿತವು ತಿಳಿಸುತ್ತದೆ. ಹಾಲನ್ನು ಕಾಯಿಸಲು ಒಲೆಯ ಮೇಲೆ ಇರಿಸಿದಾಗ, ಅದರಲ್ಲಿನ ನೀರಿನ ಅಂಶವೆಲ್ಲವೂ ಆವಿಯಾದಾಗ, ಹಾಲು ಉಕ್ಕಲು ಆರಂಭವಾಗುತ್ತದೆ. ಆ ಕೂಡಲೇ ಸ್ವಲ್ಪ ನೀರನ್ನು ಹಾಕಿದಾಗ, ಅದು ಯಥಾಸ್ಥಿತಿಗೆ ಬರುತ್ತದೆ. ಹಾಗೆಯೇ ಸನ್ಮಿತ್ರರ ಸಂಬಂಧ. ಇತ್ತೀಚಿನ ದಿನಗಳಲ್ಲಂತೂ ತನ್ನ ಬಂಧುಗಳಲ್ಲಿ ಹೇಳಿಕೊಳ್ಳಲಾಗದ ಅನೇಕ ಸಮಸ್ಯೆ, ಪ್ರಸಂಗಗಳನ್ನು ಸನ್ಮಿತ್ರರ ಬಲಿ ಹೇಳಿಕೊಂಡಿ ಪರಿಹಾರ ಕಂಡುಕೊಳ್ಳುವವರನ್ನು ಕಾಣಬಹುದು. ಸುಧನಂ ಹಣವು ಜೀವನಕ್ಕೆ ಆಧಾರ. ಕುಟುಂಬದ ಯಜಮಾನನು ಹಣವನ್ನು ಸಂಪಾದಿಸಬೇಕು. ಆ ಸಂಪಾದನೆಯು ನ್ಯಾಯಯುತವಾಗಿದ್ದಾಗ, ಅದು ಸುಧನವೆನಿಸುತ್ತದೆ. ಕುಟುಂಬದ ನಿರ್ವಹಣೆ ಬೇಕಾದಷ್ಟು ಹಣವನ್ನು ಸಂಪಾದಿಸಬೇಕಾದದ್ದು ಅನಿವಾರ್ಯ. ಆದರೆ ಜೀವಮಾನವಿರುವವರೆಗೂ ಹಣದ ಸಂಪಾದನೆ ಎಂಬುದು ನಮ್ಮ ಸಂಸ್ಕೃತಿಯಲ್ಲ. ಮನುಷ್ಯನ ಜೀವಿತವನ್ನು ನಾಲ್ಕು ಆಶ್ರಮಗಳನ್ನಾಗಿ ವಿಂಗಡಿಸಿರುವಂತೆಯೇ ಪ್ರತಿದಿನದ ಸಮಯದಲ್ಲಿ ಎಂಟು ತಾಸುಗಳನ್ನು ಸಂಪಾದನೆಗಾಗಿ ವಿನಿಯೋಗಿಸಿ, ಗರಿಷ್ಠ ಏಳು ತಾಸುಗಳನ್ನು ನಿದ್ದೆಗಾಗಿಯೂ ಇನ್ನುಳಿದ ತಾಸುಗಳನ್ನು ಸ್ನಾನ, ಧ್ಯಾನ, ವ್ಯಾಸಂಗ, ಪರೋಪಕಾರ, ಕುಟುಂಬದವರೊಂದಿಗೆ ಮಿಲನ, ಮಾತುಕತೆ-ಇತ್ಯಾದಿಗಳಿಗೆ ವಿನಿಯೋಗಿಸಬೇಕು. ಹೀಗೆ ಅರ್ಜಿಸಿದ ಸುಧನದ ವಿನಿಯೋಗವನ್ನೂ ಸರಿಯಾದ ರೀತಿಯಲ್ಲಿ ಮಾಡಬೇಕು. ತಾನು ಸಂಪಾದಿಸಿದ ಹಣವಾದ್ದರಿಂದ ತನ್ನ ಮನಬಂದಂತೆ ಖರ್ಚು ಮಾಡಬಹುದೆಂದು ಬಾವಿಸಬಾರದು. ಸಂಸಾರನಿರ್ವಹಣೆ, ಅತಿಥಿಸತ್ಕಾರ, ಆರೋಗ್ಯಪಾಲನೆ, ಆಪದ್ಧನ, ದಾನ-ಧರ್ಮ ನೀಡುವುದು- ಇತ್ಯಾದಿಗಳಿಗಾಗಿ ಅದು ವಿನಿಯೋಗವಾಗಬೇಕು. ಸ್ವಯೋಷಿತಿ ರತಿಃ ತನ್ನ ಹೆಂಡತಿಯಲ್ಲಿ ಮಾತ್ರ ಕಾಮರತಿ; ಉಳಿದಂತೆ ಎಲ್ಲ ಸ್ತ್ರೀಯರೂ ಮಾತೃಸಮಾನರೆಂಬ ಭಾವನೆ. ಇಂತಹ ಭಾವನೆ ಮೂಡಿದಾಗ ಸಮಾಜದಲ್ಲಿನ ಎಲ್ಲ ಸ್ತ್ರೀಯರೂ ನಿರ್ಭಯರಾಗಿ ಓಡಾಡಬಹುದು ಸನ್ನಿವೇಶ ಸೃಷ್ಟಿಯಾಗುತ್ತದೆ. ಮಹಾತ್ಮ ಗಾಂಧಿಯವರನ್ನು ಸ್ವತಂತ್ರಭಾರತದ ಲಕ್ಷಣಗಳ ಬಗ್ಗೆ ಪ್ರಶ್ನಿಸಿದಾಗ, 'ಮಧ್ಯರಾತ್ರಿಯಲ್ಲೂ ಮಹಿಳೆಯೊಬ್ಬಳು ನಿರ್ಭಯಳಾಗಿ ಸಾರ್ವಜನಿಕ ರಸ್ತೆಯಲ್ಲಿ ಓಡಾಡುವಂತಾಗಬೇಕು' ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು. ಹೆಂಗಸರಿಗೆ ಹೇಗೆ ಪಾತಿವ್ರತ್ಯದ ಮೌಲ್ಯವಿರುತ್ತದೆಯೋ, ಅದೇ ರೀತಿ ಗಂಡಸರುಗೂ ಪತ್ನೀವ್ರತವೆಂಬ ಮೌಲ್ಯವಿರುವುದು ಸ್ಪಷ್ಟವಾಗಿದೆ. ಕಾಲ ಉರುಳಿದಂತೆ ಸತಿಪತಿಗಳಿಬ್ಬರ ಪ್ರೀತಿಯು ಇನ್ನಷ್ಟು ಪಕ್ವವಾಗಬೇಕು; ಶರೀರಿಕ ಪ್ರೀತಿಯು ಕಡಿಮೆಯಾಗಿ ಭಾವಸೌಂದರ್ಯದ ಪ್ರೀಂತಿಯು ಹೆಚ್ಚಾಗಬೇಕು. ಅವರಿಬ್ಬರೂ ಸೇರಿ ಒಂದೇ ಸ್ವರೂಪದ ಎರಡು ಮುಖಗಳು ಎಂಬ ಭಾವನೆ ಮೂಡುವಂತಾಗಬೇಕು. ಆಜ್ಞಾಪರಾಃ ಸೇವಕಾಃ ಮನೆಯ ಕೆಲಸಕ್ಕಾಗಿ ಹೊರಗಿನಿಂದ ಸೇವಕರು ಬರಬಹುದು. ಮನೆಯಲ್ಲಿನ ಸದಸ್ಯರು ಮನೆಯ ಕೆಲಸಗಳನ್ನು ಮಾಡಬಹುದು. ಯಜಮಾನನ ಆಜ್ಞೆ (ಸೂಚನೆ)ಯನ್ನು ಇವರಾರೂ ಮೀರಬಾರದು. ಹಾಗೇನಾದರೂ ಸ್ವತಂತ್ರರಾಗಿ, ತನಗೆ ತೋಚಿದಂತೆ ಪ್ರತಿಯೊಬ್ಬರೂ ಮಾಡುವುದಾದರೆ ಆ ಕೆಲಸವು ಅಸ್ತವ್ಯಸ್ತವಾಗುತ್ತದೆ. ನಾವಿಕನಿಲ್ಲದ ದೋಣಿಯಂತೆ ಅದರ ಗತಿಯಾಗುತ್ತದೆ. ಇಂದು ನಗರದ ಅನೇಕ ಮಧ್ಯಮವರ್ಗ ಹಾಗೂ ಶ್ರೀಮಂತ ಕುಟುಂಬಗಳಲ್ಲಿ ಇಂತಹ ದುಃಸ್ಥಿತಿಯಿದೆ. ಯಾರೂ ಯಾರ ಆಜ್ಞೆ, ಸೂಚನೆಯನ್ನೂ ಪಾಲಿಸದೆ, ಅದೊಂದು ಮೆಸ್ನಂತಾಗಿದೆ! ಅಲ್ಲಿನ ಸದಸ್ಯರು ತಮ್ಮ ಪಾಡಿಗೆ ಬಂದರು; ಹೋದರು; ತಿಂದರು; ಮಲಗಿದರು;-ಎಂಬಂತಾಗಿದೆ. ಆತಿಥ್ಯಮ್ ಶಿವಪೂಜನಂ ಪ್ರತಿದಿನಂ ಮೃಷ್ಟಾನ್ನಪಾನಂ ಗೃಹೇ ಅತಿಥಿಸತ್ಕಾರ ಹಾಗೂ ಶಿವಪೂಜೆಯೆಂಬುದು ಪ್ರತಿದಿನ ವ್ಯವಸ್ಥಿತಿಯಾಗಿ ಮನೆಗಳಲ್ಲಿ ನಡೆಯಬೇಕು. ಘಂಟೆ, ಜಾಗಟೆ, ಶಂಖಗಳ ಧ್ವನಿ ಮನೆಯಲ್ಲಿ ಕೇಳುವಂತಿರಬೇಕು. ನಮ್ಮನ್ನು ಸಲಹುತ್ತಿರುವ ಪರಾಶಕ್ತಿಗೆ ನಾವು ವಿಷ್ಣು, ಶಿವ, ದೇವಿ, ಗಣೇಶ, ಸ್ಕಂದ, ಮಾರಿಯಮ್ಮ ಇತ್ಯಾದಿ ಏನೇ ಹೆಸರನ್ನು ನೀಡಬಹುದು. ಆ ದೇವತೆಗೆ ಪ್ರತಿದಿನ ಪೂಜೆ ಸಲ್ಲಿಸಬೇಕು. ಇದನ್ನೇ 'ದೇವಯಜ್ಞ' ಎಂದು ಕರೆಯುತ್ತಾರೆ. ನಮಗೆ ಈ ದೇಹವನ್ನು ಅನುಗ್ರಹಿಸಿ, ನಮ್ಮನ್ನು ಈ ಮಟ್ಟಕ್ಕೆ ತರುವಲ್ಲಿ ಪ್ರಮುಖ ಕಾರಣರಾದ ಹಿರಿಯರನ್ನು ಸ್ಮರಿಸುವುದೇ 'ಪಿತೃಯಜ್ಞ' ಗತಿಸಿದ ಹಿರಿಯರನ್ನು ಉದ್ದೇಶಿಸಿ, ಪ್ರತಿದಿನ ನೀರಿನ ತರ್ಪಣ. ವಿಶೇಷ ದಿನಗಳಲ್ಲಿ ಎಳ್ಳಿನ ತರ್ಪಣ, ವರ್ಷದಲ್ಲೊಮ್ಮೆ ಹಾಗೂ ಮಹಾಲಯ ಪಕ್ಷದಲ್ಲಿ ಶ್ರಾದ್ಧದ ಆಚರಣೆ ಮಾಡಬೇಕು. ಇದಕ್ಕೆ ಬಂಧುಮಿತ್ರರನ್ನು ಆಹ್ವಾನಿಸಬೇಕು. ಮಹಾ+ಆಲಯ ಎಂದರೆ ದೊಡ್ಡಮನೆ ಎಂದರ್ಥ. ಪ್ರತಿಯೊಬ್ಬನದೂ ದೊಡ್ಡಮನೆಯೇ ಹೌದು. ಕಾರಣವೆಂದರೆ ಪ್ರತಿಯೊಬ್ಬರ ಬೆಳವಣಿಗೆಗಾಗಿ ತಂದೆ-ತಾಯಿ, ಅತ್ತೆ-ಮಾವ, ಅಣ್ಣ-ತಮ್ಮ, ಅಣ್ಣ-ತಂಗಿ ಇತ್ಯಾದಿ ಬಂಧುಗಳಷ್ಟೇ ಅಲ್ಲದೇ, ಇನ್ನಿತರ ಅನೇಕ ಮಂದಿ ಶ್ರಮಿಸಿರುತ್ತಾರೆ. ಉದಾಹರಣೆಗೆ; ಅಕ್ಕಪಕ್ಕದ ಮನೆಯವರು, ಊರಿನ ಗಣ್ಯರು, ಸ್ನೇಹಿತರು, ಪಾಠ ಕಲಿಸಿದ ಗುರುಗಳು, ಮನೆ ತೋಟ ಗದ್ದೆಗಳಲ್ಲಿ ಕೆಲಸ ಮಾಡಿದ ಸೇವಕ- ಸೇವಕಿಯರು, ಆಪತ್ಕಾಲದಲ್ಲಿ ಅನೀರಿಕ್ಷಿತವಾಗಿ ಸಹಾಯಹಸ್ತ ನೀಡಿದ ಅಪರಿಚಿತ ಅನಾಮಧೇಯರು; ಅಷ್ಟೇ ಅಲ್ಲದೆ, ಮನೆಯ ಹಸು-ಎತ್ತುಗಳು, ನಾಯಿ, ಬೆಕ್ಕು ಇತ್ಯಾದಿ ಚತುಷ್ಪಾದ ಪ್ರಾಣಿಗಳು- ಇವರೆಲ್ಲರನ್ನೂ ಸ್ವರಿಸಿದಾಗ ನಮ್ಮ ಮನೆ ಮಹಾ ಆಲಯವಾಗುತ್ತದೆ. ಅವರಿಗೆ ಕೃತಜ್ಞತೆ ಸಲ್ಲಿಸುವುದೇ ಮಹಾಲಯ ಶ್ರಾದ್ಧದ ವಿಶೇಷ. ಇಂತಹ ಸ್ಮರಣೆಗೆ ಪಾತ್ರರಾಗುವವರಲ್ಲಿ ಜಾತಿ-ಮತ ಇತ್ಯಾದಿ ಭೇದವಿರುವುದಿಲ್ಲವೆಂಬುದು ಗಮನಾರ್ಹ. ಅತಿಥಿಗಳನ್ನು ಸತ್ಕರಿಸದ ಹೊರತು ಗೃಹಸ್ಥನು ಆಹಾರವನ್ನು ಸೇವಿಸುವಂತಿಲ್ಲ. ಅತಿಥಿಯನ್ನು ದೇವರನ್ನಾಗಿ ಭಾವಿಸಿ ಅವರನ್ನು ತನ್ನ ಪಂಕ್ತಿಯಲ್ಲಿ ಸೇರಿಸಿಕೊಳ್ಳಬೇಕು. ಮನೆಯ ಸ್ನಾನದ ಮನೆಯ ಹಂಡೆಯಲ್ಲಿ ಒಬ್ಬರ ಸ್ನಾನಕ್ಕೆ ಬೇಕಾಗುವಷ್ಟು ಬಿಸಿನೀರು ಹಾಗೂ ಆಹಾರವು ಮಧ್ಯಾಹ್ನದವರೆಗೂ ಸಿದ್ಧವಿರಬೇಕು; ಮಧ್ಯಾಹ್ನದ ಸಮಯಕ್ಕೆ ಯಾರಾದರೂ ಅತಿಥಿಗಳು ಬರಬಹುದೆಂದು ನಿರೀಕ್ಷಿಸಬೇಕು. ತನಗೆ ಇಷ್ಟವಾದ ಮೃಷ್ಟಾನ್ನಪಾನಗಳನ್ನು ಪರಿಶುದ್ಧ ಭಾವದಿಂದ ಸಿದ್ಧಗೊಳಿಸಿ, ಅದನ್ನು ಭಗವಂತನಿಗೆ ನೈವೇದ್ಯ ಮಾಡಿ, ಆನಂತರ ಅದರ ಒಂದು ಭಾಗವನ್ನು ಮನೆಯ ಹೊರಗಡೆಯಲ್ಲಿ ಇರಿಸಲಾದ ಕಲ್ಲಿನ ಚಪ್ಪಡಿಯ ಮೇಲೆ ನಾಯಿ ಇನ್ನಿತರ ಪ್ರಾಣಿಗಳಿಗಾಗಿ ಸಮರ್ಪಿಸಬೇಕು. ಇದನ್ನೇ 'ಭೂತಯಜ್ಞ'ವೆಂದು ಕರೆಯುತ್ತಾರೆ. ಮನೆಯಲ್ಲಿರುವ ಹಸು, ಎಮ್ಮೆ ಇತ್ಯಾದಿ ಪ್ರಾಣಿಗಳಿಗಂತೂ ಬೆಳಿಗ್ಗೆಯೇ ಮೇವನ್ನು ನೀಡಲಾಗಿರುತ್ತದೆ; ಮಧ್ಯಾಹ್ನವೂ ನೀಡಬೇಕು. ಆನಂತರ ಅತಿಥಿಗಳಿಗೆ ಉಣಬಡಿಸುವುದೇ 'ಮನುಷ್ಯಯಜ್ಞ'. ಸಾಧೋಃ ಸಂಗಮುಪಾಸತೇ ಹಿ ಸತತಂ ಯಾವಾಗಲೂ ಸಜ್ಜನರ ಸಹವಾಸವನ್ನೇ ಮಾಡುವುದಲ್ಲದೆ ಉತ್ತಮ ಗ್ರಂಥಗಳನ್ನೂ ಪ್ತತಿದಿನ ಓದಬೇಕು. ಇಂತಹ ಗ್ರಂಥಗಳ ಬಗ್ಗೆ ಹೆಚ್ಚಿನ ಅಂಶಗಳನ್ನು ತಿಳಿಯಲು ಸತ್ಸಂಗ, ಪ್ರವಚನ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು. ತನ್ನ ಮನೆಯಲ್ಲೂ ಇಂತಹ ಚಟುವಟಿಕೆಗಳನ್ನು ಏರ್ಪಡಿಸಬೇಕು. ಪಂಚತ್ರದ ಮೊದಲ ಶ್ಲೋಕವೇ ಹೀಗಿದೆ: ಕಾವ್ಯಶಾಸ್ತ್ರ ವಿನೋದೇನ ಕಾಲೋ ಗಚ್ಛತಿ ಧಿಮತಾಮ್/ ವ್ಯಸನೇನ ಚ ಮೂಖರ್ಾಣಾಂ ನಿದ್ರಯಾ ಕಲಹೇನ ವಾ// ಇನ್ನೊಂದು ಪ್ರಸಿದ್ಧ ಚಾಟು ಶ್ಲೋಕವೆಂದರೆ, ಪ್ರಾತಃ ದ್ಯೂತಪ್ರಸಂಗೇನ ಮಧ್ಯಾಹ್ನೇ ಸ್ತ್ರೀ ಪ್ರಸಂಗತಃ/ ಸಾಯಂ ಚೋರಪ್ರಸಂಗೇನ ಕಾಲೋ ಗಚ್ಛತಿ ಧೀಮತಾಮ್// ಬೆಳಗ್ಗೆ ಜೂಜಾಟದ ಪ್ರಸಂಗ, ಮಧ್ಯಾಹ್ನದಲ್ಲಿ ಸ್ತ್ರೀ (ಅಪಹರಣದ) ಪ್ರಸಂಗ, ಸಂಜೆ ಕಳ್ಳತನದ ಬಗ್ಗೆ ಚಿಂತಿಸುತ್ತ ಬುದ್ಧಿವಂತರ ಕಾಲಯಾಪನವು ಇರುತ್ತದೆ. (ಜೂಜಾಟದ ಮೂಲಕ ಇಡೀ ವಿಶ್ವಕ್ಕೇ ಉದಾತ್ತ ಸಂದೇಶ ನೀಡಿದ ಮಹಾಭಾರತ, ಸೀತಾದೇವಿಯ ಅಪಹರಣದ ವೃತ್ತಾಂತವುಳ್ಳ ರಾಮಾಯಣ, ಬೆಣ್ಣೆಯನ್ನು ಕದ್ದ ಶ್ರೀಕೃಷ್ಣನ ಲೀಲೆಗಳನ್ನು ತಿಳಿಸುವ ಶ್ರೀಮದ್ಬಾಗವತ- ಈ ಮೂರು ಗ್ರಂಥಗಳನ್ನು ಬೆಳಗ್ಗೆ ಮಧ್ಯಾಹ್ನ ಹಾಗೂ ಸಂಜೆ ವ್ಯಾಸಂಗ ಮಾಡಬೇಕು ಎಂಬುದೇ ಈ ಶ್ಲೋಕದ ಸಂದೇಶ.) ಉತ್ತಮ ಗ್ರಂಥಗಳ ಅಭ್ಯಾಸ ನಮ್ಮ ಮನೋಬುದ್ಧಿಗಳಿಗೆ ಸಂಸ್ಕಾರ ನೀಡುತ್ತದೆ. ಇವಿಷ್ಟೂ ಕುಟುಂಬವೊಂದರ ದಿನಚರಿಯಾದಾಗ ಅಲ್ಲಿ ಸುಖಶಾಂತಿ ನೆಮ್ಮದಿಗಳು ನೆಲೆಸುತ್ತವೆ. 'ಆನಂದನಿಲಯ'ವೆಂಬುದು ಮನೆಮುಂದಿನ ಫಲಕದಲ್ಲಷ್ಟೇ ರಾರಾಜಿಸದೇ ಯಥಾರ್ಥದಲ್ಲೂ ಸಾಕಾರಗೊಳ್ಳುತ್ತದೆ. ಇಂತಹ ಆದರ್ಶಮಯ ವ್ಯವಸ್ಥೆಯೊಂದರ ಕಲ್ಪನೆಯನ್ನು ಕಟ್ಟಿಕೊಟ್ಟುದಲ್ಲದೆ, ಅದನ್ನು ಸಾಕಾರಗೊಳಿಸಿ ತೋರಿಸಿತು ಭಾರತ. ಅದರೆ, ಪ್ರಸಕ್ತ ಸನ್ನಿವೇಶದಲ್ಲಿ, ನಮ್ಮ ಸುತ್ತಮುತ್ತಲಿನ ಸಾಂಸ್ಕೃತಿಕ, ಸಾಮಾಜಿಕ, ರಾಜಕೀಯ, ನ್ಯಾಯಿಕ, ಧಾರ್ಮಿಕ, ಮತೀಯ ವಾತವರಣವನ್ನು, ಅಲ್ಲಿನ ಕ್ರಿಯೆ-ಪ್ರಕ್ರಿಯೆಗಳನ್ನೂ ಗಮನಿಸಿದಾಗ ಬರಲಿರುವ ದಿನಗಳಲ್ಲಿ ಕುಟುಂಬವೆಂಬ ಪದ್ಧತಿಯೇ ಅಪ್ರಸ್ತುತವೆನಿಸಿಬಿಡುತ್ತದೆಯೆನೋ? - ಎಂಬ ಆತಂಕ ಮೂಡುತ್ತಿದೆ. ನಾವೆಲ್ಲರೂ ಇಂದು, 'ನಮ್ಮ ದೇಶದಲ್ಲಿರುವ ಕುಟುಂಬ ವ್ಯವಸ್ಥೆ ವಿಶ್ವದಲ್ಲೇ ಉತ್ಕೃಷ್ಟವಾದುದು' ಎಂದು ನಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತ ಸುಖಿಸುತ್ತಿದ್ದೇವೆಯೇ ಹೊರತು, ಆದರ್ಶ ಕುಟುಂಬವೊಂದನ್ನು ಅಸ್ತಿತ್ವಕ್ಕೆ ತರಲು, ಶ್ರೇಷ್ಠ ಕಲ್ಪನೆಯನ್ನು ಸಾಕಾರಗೊಳಿಸಲು ಪ್ರಯತ್ನಿಸುತ್ತಿದ್ದೇವೆಯೇ?- ಗೊತ್ತಿಲ್ಲ. ಪ್ರಸಕ್ತ ಸನ್ನಿವೇಶದಲ್ಲಂತೂ ರೂಢಿಗತ ಔಪದೇಶಿಕ ಪ್ರಕ್ರಿಯೆಯ ಚೌಕಟ್ಟಿನಿಂದ ಹೊರಬಂದು, ಅನುಷ್ಠಾನಾತ್ಮಕ ಕಾರ್ಯದಲ್ಲಿ ತೊಡಗಿಸಿಕೊಂಡಾಗ ಮಾತ್ರ ಆದರ್ಶ ವ್ಯವಸ್ಥೆಯೊಂದರ ಅಸ್ತಿತ್ವವನ್ನು ಉಳಿಸಿಕೊಳ್ಳಬಲ್ಲೆವು. ಅದಿಲ್ಲವಾದರೆ, ಕುಟುಂಬ ಪದ್ಧತಿಯಷ್ಟೇ ಅಲ್ಲ, ಅದರ ಕುರಿತಂತೆ ಮಾತಾಡುವವರೂ ಮೂಲೆಗುಂಪಾಗಬೇಕಾದೀತು. ಆಚರಣೆಯಲ್ಲಿಲ್ಲದ ಆದರ್ಶದ ಉಪದೇಶದಿಂದೇನೂ ಪ್ರಯೋಜನವಾಗಲಾರದು ಎಂಬುದು ನಮ್ಮ ದೇಶದ ಪರಂಪರೆಯಲ್ಲಂತೂ ಹೆಜ್ಜೆಹೆಜ್ಜೆಗೂ ಸಾಬೀತಾಗಿರುವ ಕಟುಸತ್ಯ. ಹಾಗಾಗಿ, ಆದರ್ಶಮಯ ಕುಟುಂಬ ನಮ್ಮ ಮನೆಗಳಲ್ಲಿ ಸಾಕಾರಗೊಳ್ಳಬೇಕು; ಪ್ರತಿಯೊಂದು ಆಚರಣೆಯೂ ನಡೆ-ನುಡಿಯೂ ಹಿರಿಯರಿಂದ ಕಿರಿಯರಿಗೆ ಹಸ್ತಾಂತರಗೊಳ್ಳಬೇಕು; ಸಾಂಸ್ಕೃತಿಕ ಮೌಲ್ಯಗಳು ದಿನನಿತ್ಯದ ಚರ್ಚೆಗಳಲ್ಲಿ ಪ್ರತಿಫಲಿತಗೊಳ್ಳಬೇಕು. ಮೊದಲು ನಾವೊಂದು ಸರ್ವಾಂಗಸುಂದರ ಕುಟುಂಬವನ್ನು ಅಸ್ತಿತ್ವಕ್ಕೆ ತಂದರೆ, ಅದು ಸಜ್ಜನ ವ್ಯಕ್ತಿಗಳನ್ನೂ ಸಭ್ಯ ಸಮಾಜವನ್ನೂ ರೂಪಿಸುತ್ತದೆ. ಆ ನಿಟ್ಟಿನಲ್ಲಿ ಪ್ರಯತ್ನಶೀಲರಾಗೋಣ. ಟಿ.ಎನ್. ಪ್ರಭಾಕರ (ಕೃಪೆ: ಉತ್ಥಾನ ಜೂನ್ 2011)
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
|
|
|
|
SITE MAP
SitePOSH |
NIRATHANKAOUR OTHER WEBSITESSubscribe |
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |