`ಸಮಾಜಸೇವೆ ಎಂಬ ಪದವನ್ನು ನಾವು ಅನಾದಿಕಾಲದಿಂದಲೂ ಕೇಳುತ್ತ ಬಂದಿದ್ದೇವೆ. ಜನಸೇವೆಯೇ ಜನಾರ್ದನ ಸೇವೆ ಎಂಬಂತೆ ಪ್ರತಿಯೊಬ್ಬ ವ್ಯಕ್ತಿಯು ತನ್ನದೇ ಆದ ರೀತಿಯಲ್ಲಿ ಸಮಾಜಸೇವೆಯನ್ನುಜನರಿಗೋಸ್ಕರ ಮಾಡುತ್ತ ಬಂದಿದ್ದಾನೆ. ಸಮಾಜ ಸೇವಾ ಕಾರ್ಯಕ್ರಮಗಳು ಪ್ರಸ್ತುತಿಯಲ್ಲಿರುವುದನ್ನು ನಾವು ಇಂದಿಗೂ ಕೂಡ ಕಾಣಬಹುದು. ಸಮಾಜ ಸೇವೆಯನ್ನು ನಿಸ್ವಾರ್ಥ ಸೇವೆ ಎಂದರೂ ತಪ್ಪಾಗಲಾರದು. ಸಮಾಜ ಸೇವೆಯ ಅಂಶವನ್ನು ನೋಡಿದಾಗ. ಸೇವೆಯನ್ನೊದಗಿಸುವ ಪ್ರಕ್ರಿಯೆಯು ಒಂದು ನಿರ್ದಿಷ್ಟ ರೀತಿಯನ್ನು ಅನುಸರಿಸದೆ ಸೇವೆಯನ್ನು ಎಲ್ಲರಿಗೂ ಒದಗಿಸುತ್ತದೆ. ಸಮಾಜ ಸೇವೆಯಲ್ಲಿ ವ್ಯಕ್ತಿಯ ಬಗ್ಗೆ ಹೆಚ್ಚಿನ ಗಮನವನ್ನು ಹರಿಸುವುದಿಲ್ಲ. ಆದರೆ ಸಮಾಜದಲ್ಲಿ ಜನಗಳ ಅಭಿವೃದ್ಧಿಗೆ ಪೂರಕವಾಗುವಂತಹ ಅಂಶಗಳ ಮೇಲೆ ಸೇವೆಯನ್ನೊದಗಿಸುತ್ತಿರುವುದನ್ನು ನಾವು ಕಾಣಬಹುದಾಗಿದೆ.
ಸಮಾಜ ಸೇವೆಯನ್ನು ಒದಗಿಸುವಾಗ ಸರಿಯಾದ ರೀತಿಯಲ್ಲಿ ಸಂಪನ್ಮೂಲಗಳ ಸದ್ಬಳಕೆ ಆಗಬೇಕಾಗುತ್ತದೆ. ಆದರೆ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಅದರ ಸದ್ಬಳಕೆ ಆಗದೆ ಇರುತ್ತಿರುವುದನ್ನು ಕೆಲವು ಸಂದರ್ಭಗಳಲ್ಲಿ ನೋಡಬಹುದು. ಸಮಾಜ ಸೇವೆಯಲ್ಲಿ ಒದಗಿಸುವಂತಹ ಸೇವೆಗಳಾಗಲಿ ಅಥವಾ ಮಾರ್ಗೋಪಾಯಗಳಾಗಲಿ ಅಷ್ಟು ಪರಿಣಾಮಕಾರಿಯಾಗಿ ಬಹಳ ಕಾಲವಿರುವುದಿಲ್ಲ. ಅದು ಕೇವಲ ತಾತ್ಕಾಲಿಕ ಪರಿಹಾರ ಅಥವಾ ಸಹಾಯವಾಗುತ್ತದೆ. ಸಮಾಜ ಸೇವೆಯನ್ನು ಮಾಡುವ ಯಾವುದೇ ವ್ಯಕ್ತಿಗೆ ನಿರ್ದಿಷ್ಟವಾದಂತಹ ಜ್ಞಾನ, ಕೌಶಲ್ಯ ಹಾಗೂ ಶಿಕ್ಷಣ ಅಷ್ಟಾಗಿ ಆವಶ್ಯಕತೆಯಿಲ್ಲ. ಆದರೆ ಸೇವಾ ಮನೋಭಾವ, ನಿಸ್ವಾರ್ಥ, ಕರುಣೆ ಇರುವಂತಹ ಯಾರಾದರೂ ಕೂಡ ಸೇವೆಯನ್ನು ಜನರಿಗೋಸ್ಕರ ಮಾಡಬಹುದು. ಸಮಾಜ ಸೇವೆಯಲ್ಲಿ ಸೇವೆಯನ್ನು ಒದಗಿಸುವ ಹಾಗೂ ಸೇವೆಯನ್ನು ಸ್ವೀಕರಿಸುವಂತಹ ಜನಗಳಿದ್ದರೆ ಸಾಕು, ಅದು ಯಾರಾದರೂ ಸರಿಯೇ. ವ್ಯಕ್ತಿ ನಿಜವಾಗಿಯೂ ಸಮಸ್ಯೆಗಳಿಂದ ಬಳಲುತ್ತಿದ್ದಾನೆಯೇ ಇಲ್ಲವೇ, ಅವನಿಗೆ ಅವಶ್ಯಕತೆ ಇದೆಯೇ, ಇಲ್ಲವೇ ಎಂಬ ಕೂಲಂಕಷ ಅಂಶವನ್ನು ಸಮಾಜ ಸೇವೆಯಲ್ಲಿ ಅಧ್ಯಯನ ಮಾಡಲಾಗುವುದಿಲ್ಲ. ಇದರಿಂದಾಗಿ ಅವಶ್ಯಕತೆ ಇರುವಂತಹವರಾರು, ಇಲ್ಲದವರಾರು ಎಂದು ಕಂಡುಹಿಡಿಯುವುದು ಕಷ್ಟವಾಗಿ ಅನುಕೂಲಗಳನ್ನು ಪಡೆದವರೇ ಮತ್ತೆ ಅವಕಾಶಗಳನ್ನು ಪಡೆಯುವಂತಾಗಿದೆ. ಒಟ್ಟಾರೆಯಾಗಿ ಸಮಾಜ ಸೇವೆಯೆಂಬುದು ಜನರಿಗೋಸ್ಕರ ಸೇವೆಯನ್ನೊದಗಿಸುವಂತಹ ಅಥವಾ ಜನರಿಗಾಗಿಯೇ ಮಾಡುವಂತಹ ಸೇವೆ ಎನ್ನಬಹುದು. ಬಹಳಷ್ಟು ಜನರಿಗೆ ಸಮಾಜ ಸೇವೆಯೇ ಸಮಾಜಕಾರ್ಯ ಎಂಬ ತಪ್ಪು ಪರಿಕಲ್ಪನೆ ಇದೆ. ಸಮಾಜಕಾರ್ಯಕ್ಕೆ ಮೂಲ ಸಮಾಜ ಸೇವೆಯೇ ಎನ್ನಬಹುದು. ಆದರೆ, ಸಮಾಜಕಾರ್ಯವೆಂಬುದು ಸಮಾಜದಲ್ಲಿ ವಾಸಿಸುತ್ತಿರುವಂತಹ ಹಾಗೂ ಜೀವನವನ್ನು ಸಾಗಿಸುತ್ತಿರುವಂತಹ ಜನಗಳ ಅವಶ್ಯಕತೆಗಳಿಗೆ, ಸಮಸ್ಯೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿ ಸೇವಾಕಾರ್ಯಕ್ರಮಗಳು ಮತ್ತು ಅಭಿವೃದ್ಧಿ ಕಾರ್ಯಗಳಲ್ಲಿ ಅವರನ್ನು ಭಾಗವಹಿಸುವಂತೆ ಮಾಡಿ, ಅದರ ಜೊತೆಯಲ್ಲೇ ಅವರ ಸರ್ವತೋಮುಖ ಅಭಿವೃದ್ಧಿಯನ್ನು ಕಾಣುವ ಒಂದು ಪ್ರಕ್ರಿಯೆ ಆಗಿದೆ. ಸಮಾಜಕಾರ್ಯದಲ್ಲಿ ವ್ಯಕ್ತಿಗೆ ಬಹಳ ಆದ್ಯತೆಯನ್ನು ಕೊಡಲಾಗುತ್ತದೆ. ಏಕೆಂದರೆ, ಪ್ರತಿಯೊಬ್ಬ ವ್ಯಕ್ತಿಗೂ ಸಮಾಜದಲ್ಲಿ ತನ್ನದೇ ಆದಂತಹ ಗೌರವ, ಘನತೆ, ಸ್ವನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಮತ್ತು ವಿವೇಚನೆ ಇರುತ್ತದೆ ಎಂದು ನಂಬಲಾಗಿದೆ. ಈ ಕಾರಣದಿಂದಾಗಿ ಸಮಾಜಕಾರ್ಯವು ಜನಗಳ ಆವಶ್ಯಕತೆ ಮತ್ತು ಸಮಸ್ಯೆ ಏನೆಂಬುದನ್ನು ಅರಿತು, ಆ ನಿಟ್ಟಿನಲ್ಲಿ ಸಹಾಯ ಕಾರ್ಯಕ್ರಮಗಳನ್ನೊದಗಿಸುವುದನ್ನು ಮಾಡುತ್ತದೆ. ಸಮಾಜಕಾರ್ಯದಲ್ಲೊದಗಿಸುವಂತಹ ಸೇವೆಗಳ ವೈಜ್ಞಾನಿಕ ರೀತಿಯಿಂದ ಕೂಡಿದ್ದು ದೀರ್ಘಕಾಲವೂ ಹಾಗೂ ಪರಿಣಾಮಕಾರಿಯೂ ಕೂಡ ಆಗಿರುತ್ತವೆ. ಅವಶ್ಯಕತೆಯಿರುವವರಾರು ಎಂಬ ಕೂಲಂಕಷ ಅಧ್ಯಯನವನ್ನು ನಡೆಸಿದ ಮೇಲೆ ಸೇವೆಯನ್ನು ಒದಗಿಸುವ ಪ್ರಕ್ರಿಯೆಯನ್ನು ಸಮಾಜಕಾರ್ಯದಲ್ಲಿ ಮಾಡಲಾಗುತ್ತದೆ. ಸೇವೆ ಬೇಕಾದಂತಹ ಅರ್ಹರಿಗೆ ಸಮಾಜಕಾರ್ಯದಲ್ಲಿ ಮೊದಲ ಆದ್ಯತೆ ಕೊಡಲಾಗುತ್ತದೆ. `ಸಮಾಜಸೇವೆ ಜನರಿಗೋಸ್ಕರ ಮಾಡುವಂತಹ ಒಂದು ರೀತಿಯ ಸೇವೆಯಾದರೆ, `ಸಮಾಜಕಾರ್ಯ ಜನಗಳ ಜೊತೆ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಅದರಲ್ಲಿ ಅವರನ್ನು ಕೂಡ ಭಾಗವಹಿಸುವಂತೆ ಮಾಡಿ ಅವರನ್ನು ಅಭಿವೃದ್ಧಿ ಪಥದತ್ತ ಸಾಗಿಸುವ ಒಂದು ಪ್ರಕ್ರಿಯೆ ಆಗಿದೆ. ಸೇವೆ ಬೇಕಾಗಿರುವವರಿಗೆ ಸೇವೆಯನ್ನೊದಗಿಸುವುದು ಸಮಾಜಕಾರ್ಯದ ಒಂದು ಮುಖ್ಯ ಅಂಶವಾಗಿದೆ. ಸಮಾಜಕಾರ್ಯ ಒಂದು ಮಹತ್ತರ ವೃತ್ತಿಯೆಂದರೆ ತಪ್ಪಾಗಲಾರದು. ಏಕೆಂದರೆ ಇದರ ಪರಿಕಲ್ಪನೆಯೇ ಬೇರೆ ಹಾಗೂ ಅದರ ಕಾರ್ಯ ವೈಖರಿಯೇ ಬೇರೆ. ಸಮಾಜಕಾರ್ಯವನ್ನು ನಾವು 3 ಪ್ರಧಾನ ಹಂತಗಳ ಮೂಲಕ ಮಾಡುತ್ತೇವೆ. ಅವುಗಳಾವುವೆಂದರೆ 1. ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡುವುದು. 2. ಸಮಸ್ಯೆಗಳನ್ನು ಸೂಕ್ತ ವೈಜ್ಞಾನಿಕ ಜ್ಞಾನದ ಹಿನ್ನೆಲೆಯಿಂದ ತಡೆಗಟ್ಟುವುದು. 3. ಪರಿಹಾರ ಒದಗಿಸುವುದು. ಮೊದಲನೆಯ ಹಂತದಲ್ಲಿ ಜನಪರ ಕಾರ್ಯಕ್ರಮಗಳಿಗೆ ಬಹಳ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಜನರ ಸರ್ವತೋಮುಖ ಅಭಿವೃದ್ಧಿಗೆ ಸಂಬಂಧಪಟ್ಟಂತಹ ಜನಾಭಿವೃದ್ಧಿ ಕಾರ್ಯಕ್ರಮಗಳು ಮತ್ತು ಅಭಿವೃದ್ಧಿಯತ್ತ ಸಾಗುವ ಸಮಾಜ ನಿರ್ಮಾಣಕ್ಕೆ ಈ ಹಂತದಲ್ಲಿ ಆದ್ಯತೆಯನ್ನು ನೀಡಲಾಗಿದೆ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ವ್ಯಕ್ತಿತ್ವ ಬೆಳವಣಿಗೆಯ ತಿಳಿವಳಿಕೆಯ ಅಂಶಗಳು ಜನರ ಸರ್ವತೋಮುಖ ಅಭಿವೃದ್ಧಿ ಹಾಗೂ ಏಳಿಗೆಗೆ ಸಹಾಯಕಾರಿಯಾಗಿವೆ. ಅಭಿವೃದ್ಧಿಯ ಹಂತದಲ್ಲಿ ಸಮಸ್ಯೆಗೆ ಹಾಗೂ ಅದರ ಪರಿಹಾರಕ್ಕೆ ಒತ್ತು ನೀಡಲಾಗುವುದಿಲ್ಲ. `ಅಭಿವೃದ್ಧಿಯೇ ಈ ಹಂತದಲ್ಲಿ ಪರಮ ಗುರಿಯಾಗಿದೆ. ಸಮಾಜಕಾರ್ಯಕರ್ತನು ಈ ಹಂತಕ್ಕೆ ಬಹಳ ಪ್ರಾಮುಖ್ಯತೆ ನೀಡಬೇಕಾಗಿರುವುದು ಅತ್ಯಾವಶ್ಯ. ಎರಡನೇ ಹಂತದಲ್ಲಿ ಸಮಸ್ಯೆಯನ್ನು ತಿಳಿಯುವ ಮತ್ತು ಅದನ್ನು ತಡೆಗಟ್ಟುವ ಅರಿವನ್ನು ನೀಡುವುದಾಗಿದೆ. ಜೀವನ ಸಾಗಿಸುವುದು ಸುಗಮವಾದ ಹಾದಿಯೇನಲ್ಲ. `ಸಮಸ್ಯೆಯೇ ಇರದ ಯಾವೊಬ್ಬ ವ್ಯಕ್ತಿಯೂ ಕೂಡ ಈ ಜಗತ್ತಿನಲ್ಲಿ ಇಲ್ಲ. ಮನೋಸಾಮಾಜಿಕ, ಆರ್ಥಿಕ ಸಮಸ್ಯೆಗಳ ಸುಳಿಯಲ್ಲಿ ಸಿಕ್ಕಿರುವ ಪ್ರತಿಯೊಬ್ಬನಿಗೂ ಅದರಿಂದ ಹೊರಬರುವ ಆಶಯ ಇರುತ್ತದೆ. ಆದರೆ ಎಲ್ಲರಿಗೂ ಸಮಸ್ಯೆ ತಡೆಗಟ್ಟುವುದು ಹೇಗೆ ಎಂಬಂತಹ ವಿಷಯಗಳ ಬಗ್ಗೆ ಅಷ್ಟಾಗಿ ತಿಳಿದಿರುವುದಿಲ್ಲ. ಹಾಗಾಗಿ ಸಮಸ್ಯೆಯನ್ನು ತಡೆಗಟ್ಟುವುದರಲ್ಲಿ ಎಲ್ಲರೂ ಎಡುವುತ್ತಿದ್ದಾರೆ. ಆದರೆ ಸಮಾಜಕಾರ್ಯವು ಈ ಹಂತದಲ್ಲಿ ತನ್ನದೇ ಆದ ಕಾರ್ಯವೈಖರಿಯ ಮೂಲಕ ಸಮಸ್ಯೆಯನ್ನು ತಡೆಗಟ್ಟುವುದಕ್ಕೆ ಪ್ರಾಧಾನ್ಯತೆಯನ್ನು ನೀಡಿದೆ. ಮನೋಸಾಮಾಜಿಕ, ಆರ್ಥಿಕ ಸಮಸ್ಯೆಯ ಸ್ವರೂಪವನ್ನು ಪ್ರಾರಂಭದಲ್ಲೇ ಅರಿತು ಅದನ್ನು ತಡೆಗಟ್ಟುವುದರಿಂದ ಅದರಿಂದುಂಟಾಗುವ ಪ್ರತಿಕೂಲ ಪರಿಣಾಮಗಳನ್ನು ತಡೆಯಬಹುದಾಗಿದೆ. ಮೂರನೆಯ ಹಂತದಲ್ಲಿ ಸಮಸ್ಯೆಗೆ ಪರಿಹಾರವನ್ನು ಒದಗಿಸುವ, ಬಗೆಹರಿಸುವ, ರೀತಿ ಮತ್ತು ಅದರ ನಿರ್ವಹಣೆ ಮಾಡುವುದರ ಬಗ್ಗೆ ಗಮನ ಹರಿಸಲಾಗುತ್ತದೆ. ಸಾಮಾನ್ಯ ಜನರು ಮನೋಸಾಮಾಜಿಕ, ಆರ್ಥಿಕ ಸಮಸ್ಯೆಗಳಿಂದ ವಿಚಲಿತರಾಗಿರುತ್ತಾರೆ. ಏಕೆಂದರೆ, ಸಮಸ್ಯೆಯಿಂದುಂಟಾದಂತಹ ತೊಂದರೆಗಳು ಅವರಿಗೆ ಯಾವ ರೀತಿ ಸಮಸ್ಯೆ ಬಗೆಹರಿಸಬೇಕು ಮತ್ತು ಅದರ ನಿರ್ವಹಣೆ ಹೇಗೆ ಮಾಡಬೇಕೆಂಬುದರ ಬಗ್ಗೆ ಆಲೋಚನೆ ಮಾಡಲು ಅವಕಾಶವನ್ನು ಕೊಡುವುದಿಲ್ಲ. ಹಾಗಾಗಿ ಮೂರನೆಯ ಹಂತದಲ್ಲಿ, ಸಮಸ್ಯೆಗೆ ಪರಿಹಾರವನ್ನು ಒದಗಿಸುವ ನಿಟ್ಟಿನಲ್ಲಿ ಸಮಾಜಕಾರ್ಯಕರ್ತನು ಪಾತ್ರ ನಿರ್ವಹಿಸುತ್ತಾನೆ. ಇದರಿಂದಾಗಿ ಪರಿಹಾರ ಒದಗಿಸುವ ಹಂತವು ಸಮಾಜಕಾರ್ಯದಲ್ಲಿ ಮುಖ್ಯವಾದದ್ದು ಎಂದು ಹೇಳಬಹುದು. ಈ ರೀತಿಯಾಗಿ ಸಮಾಜಕಾರ್ಯವು ಜನಗಳ ಸಮಸ್ಯೆ, ಅದಕ್ಕೆ ಪರಿಹಾರ ಹಾಗೂ ಜನಗಳ ಅಭಿವೃದ್ಧಿಯನ್ನು ಮಾಡುವಂತಹ ಕಾರ್ಯಗಳನ್ನು ಅತ್ಯಂತ ವೈಜ್ಞಾನಿಕ, ಯುಕ್ತವಾದ ರೀತಿಯಲ್ಲಿ ಮಾಡುತ್ತ ಬಂದಿದೆ. ಸಮಾಜಕಾರ್ಯವು ತನ್ನ ಚಟುವಟಿಕೆಯನ್ನು ಸಮಾಜಮುಖಿಯಾಗಿ, ಸಮಾಜದ ಹಿತದೃಷ್ಟಿಯಿಂದ ಒಂದು ವ್ಯವಸ್ಥಿತ ರೀತಿಯಲ್ಲಿ ಮಾಡುತ್ತ ಮುಂದೆ ಸಾಗುತ್ತಿದೆ. ಹೀಗಿರುವಾಗ, ಸಮಾಜಕಾರ್ಯದ ಶಿಕ್ಷಣಕ್ಕೆ ಬಹಳ ಮಹತ್ವ ಕೊಡುವದು ಅತ್ಯವಶ್ಯಕವಾಗಿದೆ. ಸಮಾಜಕಾರ್ಯ ಶಿಕ್ಷಣವನ್ನು ಪಡೆಯಬಯಸುವ ಪ್ರತಿಯೊಬ್ಬರು ನಿಸ್ವಾರ್ಥ ಸೇವಾಮನೋಭಾವವನ್ನು ಹೊಂದಿರಬೇಕು. ಏಕೆಂದರೆ, ಸಮಾಜಕಾರ್ಯಕರ್ತನಾದವನು ವಿಭಿನ್ನ ರೀತಿಯ ಜನರ ಜೊತೆ ಬೆರೆತು, ಅವರ ಜೊತೆಗೆ ಕೆಲಸ ಮಾಡಬೇಕು. ಈ ರೀತಿಯ ಕೌಶಲ್ಯ ಸಮಾಜಕಾರ್ಯ ಶಿಕ್ಷಣವನ್ನು ಪಡೆಯಬಯಸುವ ವಿದ್ಯಾರ್ಥಿಗೆ ಇರಬೇಕು. ಜನರ ಜೊತೆ ಉತ್ತಮ ಬಾಂಧವ್ಯ, ಹೊಂದಾಣಿಕೆ ಇದ್ದಾಗ ಸಮಾಜದಲ್ಲಿ ಸಮಾಜಕಾರ್ಯಕರ್ತನು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಬಾಂಧವ್ಯ, ಹೊಂದಾಣಿಕೆ, ಅರ್ಥೈಸಿಕೊಳ್ಳುವಿಕೆ, ನಿಸ್ವಾರ್ಥತೆ, ಸೇವಾಮನೋಭಾವಗಳೆಂಬ ಸೂತ್ರಗಳು ಸಮಾಜಕಾರ್ಯವನ್ನು ಮಾಡುವ ಸಮಾಜಕಾರ್ಯಕರ್ತನಿಗೆ ಬಹುಮುಖ್ಯವಾದವು. ಸಮಾಜಕಾರ್ಯ ಶಿಕ್ಷಣವು ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಸೇವಾಮನೋಧರ್ಮದ ಬಗ್ಗೆ, ಸಂವಹನ ಕಲೆಯ ಮಹತ್ವದ ಬಗ್ಗೆ, ತಾಳ್ಮೆಯ ಮನೋಭಾವ, ನಿರಂತರ ಕಲಿಕೆಯ ತುಡಿತದ ಬಗೆಗೆ ಹುರಿದುಂಬಿಸುವ ಮತ್ತು ಅದಕ್ಕೆ ತಕ್ಕ ಹಾಗೆ ತರಬೇತಿಯನ್ನು ನೀಡುತ್ತದೆ. ಈ ಪ್ರಕ್ರಿಯೆ ಮೇಲ್ನೋಟಕ್ಕೆ ಅತಿಸುಲಭವೆನಿಸಿದರೂ ಇದು ಕಬ್ಬಿಣದ ಕಡಲೆಯಂತೆ. ಆದರೆ, ಅತೀ ಸೂಕ್ಷ್ಮವನ್ನು ಅರಿತು ಮತ್ತು ಜಾಗೃತವಾಗಿ ಕೆಲಸ ನಿರ್ವಹಿಸಿದಾಗ, ಉತ್ತಮ ಸಮಾಜಕಾರ್ಯಕರ್ತರನ್ನು ನಿರ್ಮಿಸಲು ಅನುಕೂಲವಾಗುತ್ತದೆ. ಸಮಾಜಕಾರ್ಯಕರ್ತನು ಆಶಾವಾದಿಯಾಗಿರಬೇಕು. ಆ ಆಶಾವಾದಿತನವೇ ಜನರ ಆಮೂಲಾಗ್ರ ಅಭಿವೃದ್ಧಿಗೆ ಕಾರಣವಾಗುತ್ತದೆ. ಸಮಾಜಕಾರ್ಯದ ಮೌಲ್ಯಗಳಾದಂತಹ ಸೇವೆ ಮಾನವೀಯ ಸಂಬಂಧ ಸ್ವೀಕರಿಸುವ ತತ್ವ ಸರಿಸಮಾನ ಗೌರವ ಗೌಪ್ಯತೆ ಸಾಮಾಜಿಕ ಕಲಿಕೆ ಸ್ವಯಂ ನಿರ್ಣಯದ ತತ್ವಗಳು ಸಮಾಜಕಾರ್ಯಕ್ಕೆ ಇನ್ನಷ್ಟು ಪುಷ್ಠಿ ನೀಡುವಲ್ಲಿ ಸಹಕಾರಿಯಾಗಿವೆ. ಸಮಾಜ ಕಾರ್ಯಕರ್ತನ ವಿಷಯ ವಿಶ್ಲೇಷಣಾತ್ಮಕ ಬುದ್ದಿವಂತಿಕೆ ಹಾಗೂ ಸಮಗ್ರ ಅಭಿವೃದ್ಧಿಯ ಮಂತ್ರಗಳು ಜನರಿಗೆ ಇನ್ನಷ್ಟು ಹತ್ತಿರವಾಗಲು ಪೂರಕವಾಗುತ್ತವೆ. ಹೀಗಾದಾಗ ಸಮಾಜಕಾರ್ಯದ ಪ್ರಾಮುಖ್ಯತೆ ಇನ್ನೂ ಇಮ್ಮಡಿಗೊಳ್ಳುವುದರಲ್ಲಿ ಎರಡು ಮಾತಿಲ್ಲ. ಇನ್ನು ಪ್ರಮುಖವಾಗಿ ತಿಳಿಯಬೇಕಾದ ವಿಷಯವೆಂದರೆ ಸಮಾಜಕಾರ್ಯ ವಿಧಾನಗಳು. ಮನುಷ್ಯನಿಗೆ ಹೃದಯಭಾಗ ಎಷ್ಟು ಮುಖ್ಯವೋ ಹಾಗೆಯೇ ಸಮಾಜಕಾರ್ಯ ವಿಧಾನಗಳು ಸಮಾಜಕಾರ್ಯಕ್ಕೆ ಅಷ್ಟೇ ಮುಖ್ಯವಾಗಿವೆ. ವ್ಯಕ್ತಿಯ ಪರಿಪೂರ್ಣ ವ್ಯಕ್ತಿತ್ವವನ್ನು ರೂಪಿಸುವ ಕಾರ್ಯವನ್ನು ನಿಭಾಯಿಸುವ ವ್ಯಕ್ತಿಗತ ಸಮಾಜಕಾರ್ಯ, ಗುಂಪಿನ ಮಹತ್ವ, ಅದರ ಪ್ರಾಯೋಗಿಕ ಅನುಕೂಲಗಳನ್ನು ಅರಿತು ಹೇಳುವ ವೃಂದಗತ ಕಾರ್ಯ, ಸಮುದಾಯವೆಂಬ ಮಹಾಸಾಗರದ ಪ್ರತಿಯೊಂದು ಅಂಶವನ್ನು ತಿಳಿದು ಅದಕ್ಕೆ ತಕ್ಕ ಹಾಗೆ ಕಾರ್ಯವನ್ನು ನಿರ್ವಹಿಸುವ ಸಮುದಾಯ ಸಂಘಟನೆ ವಿಧಾನ, ಇನ್ನೂ ಹೊಸ ಬಗೆಯ ಆವಿಷ್ಕಾರಗಳ ಆಗರದಂತಿರುವ ಸಮಾಜಕಾರ್ಯ ಸಂಶೋಧನಾ ವಿಧಾನ, ಸಾಮಾಜಿಕ ಕ್ರಿಯೆ ಮತ್ತು ಸಮಾಜಕಾರ್ಯ ಆಡಳಿತ ವಿಧಾನ ಇವುಗಳ ಅರಿವು ಮತ್ತು ಕ್ರಿಯೆ ಸಮಾಜಕಾರ್ಯಕರ್ತನಿಗೆ ಮಹತ್ವದವು. ಈ ಎಲ್ಲ ವಿಧಾನಗಳು ಸಮಾಜಕಾರ್ಯದ ಬೆನ್ನೆಲುಬುಗಳಾಗಿವೆ. ಇವುಗಳ ಸಮರ್ಪಕ ಉಪಯೋಗ ಹಾಗೂ ಬಳಕೆ ಹಿಂದಿನಿಂದಲೂ ಆಗುತ್ತಿದೆ; ಆದರೂ ಮತ್ತಷ್ಟು ವ್ಯವಸ್ಥಿತ ರೀತಿಯಲ್ಲಿ ಆಗಬೇಕಿರುವುದು ಅವಶ್ಯವಾಗಿದೆ. ಏಕೆಂದರೆ, ಪ್ರಸ್ತುತ ಸನ್ನಿವೇಶದಲ್ಲಿ ಮನುಷ್ಯನು ಸ್ವಾರ್ಥಜೀವನಕ್ಕೆ ಬೆಲೆ ಕೊಟ್ಟು ಮಾನವೀಯ ಮೌಲ್ಯಗಳ ಹಾಗೂ ಸಂಬಂಧಗಳ ನೆಲೆಗಟ್ಟನ್ನು ಅರಿಯದೆ ಜೀವನವನ್ನು ಸಾಗಿಸುತ್ತಿದ್ದಾನೆ. ಇಂತಹ ಪರಿಸ್ಥಿತಿಯಲ್ಲಿ ಸಮಾಜ ಕಾರ್ಯಕರ್ತನು ತನ್ನ ಕಾರ್ಯವಿಧಾನಗಳ ಮೂಲಕ ಅವುಗಳನ್ನು ತೊಡೆದುಹಾಕಿ, ಮನುಷ್ಯತ್ವ ಮತ್ತು ಮಾನವೀಯ ಸಂಬಂಧಗಳ ಅರಿವನ್ನು ಜನರಿಗೆ ನೀಡಬೇಕು. ಸಮಾಜಕಾರ್ಯವು ಒಂದು ವೃತ್ತಿಯಾಗದೆ ಅದು ನಮ್ಮ ಜೀವನಶೈಲಿಯಾಗಬೇಕು. ಹಾಗಾದಾಗ ಮಾತ್ರ ಸಮಾಜಕಾರ್ಯದ ಮಹತ್ವ ಹಾಗೂ ಅದರ ಉಪಯೋಗ ಸಮಾಜದಲ್ಲಿರುವಂತಹ ಜನರಿಗೆ ತಿಳಿಯುತ್ತದೆ. ಕೃಪೆ : ಸಾಹಿತ್ಯ ಸಮಾಜ ಸಂಗಮ ಟಿ.ಬಿ.ಬಿ. ಎಸ್.ವಿ. ರಮಣಯ್ಯ ಪ್ರಾಧ್ಯಾಪಕರು, ಸಮಾಜಕಾರ್ಯ ವಿಭಾಗ, ಮಾನಸಗಂಗೋತ್ರಿ, ಮೈಸೂರು ವಿ.ವಿ., ಮೈಸೂರು. ಶ್ರೀ ನಾಗೇಶ ಎಮ್. ಸಂಶೋಧನಾ ವಿದ್ಯಾರ್ಥಿ, ಮಾನಸಗಂಗೋತ್ರಿ, ಮೈಸೂರು ವಿ.ವಿ., ಮೈಸೂರು.
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
SITE MAP
SiteTRAININGJOB |
HR SERVICESOTHER SERVICESnIRATHANKA CITIZENS CONNECT |
NIRATHANKAPOSHOUR OTHER WEBSITESSubscribe |
MHR LEARNING ACADEMY
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|