ಮಹಾತ್ಮ ಗಾಂಧೀಜಿಯವರು ಸದಾ ಕಾಲ ನಮಗೆ ಒಬ್ಬ ರಾಜಕೀಯ ನಾಯಕನಾಗಿ, ಸ್ವತಂತ್ರ ಹೋರಾಟಗಾರನಾಗಿ, ಸಾಮಾಜಿಕ ಸುಧಾರಣೆಯ ಪ್ರವರ್ತಕನಾಗಿ ಹಾಗೂ ತತ್ವಜ್ಞಾನಿ ಸರಳ ಜೀವಿಯಾಗಿ ಕಂಡುಬರುತ್ತಾರೆ. ಗಾಂಧೀಜಿ ಒಬ್ಬ ಪರಿಸರವಾದಿಯೂ ಹೌದೇ? ಎಂಬ ಪ್ರಶ್ನೆಗೆ ಬಹಳಷ್ಟು ಬಾರಿ ನಮಗೆ ಸಿಗುವ ಉತ್ತರ ನಕಾರಾತ್ಮಕವಾದ್ದು, ಇದಕ್ಕೆ ಕಾರಣವೆಂದರೆ ಗಾಂಧೀಜಿ ತಮ್ಮ ಜೀವಿತಾವಧಿಯಲ್ಲಿ ಒಮ್ಮೆಯೂ ಪರಸರವನ್ನು ಕುರಿತ ವಿಚಾರಗಳನ್ನು ನೇರವಾಗಿ ವ್ಯಕ್ತಪಡಿಸಿಲ್ಲ. ಭಾರತದಲ್ಲಿ ಪರಿಸರ ಚಳುವಳಿಯ ಪ್ರಾರಂಭಕ್ಕೆ ಕಾರಣವಾದ ಕೆಲವು ಮೂಲ ಪರಿಕಲ್ಪನೆಗಳನ್ನು ಗಮನಿಸಿದಾಗ ಅವುಗಳಲ್ಲಿ ಗಾಂಧೀಜಿಯವರ ಚಿಂತನೆಯ ಪ್ರಭಾವವು ಗಾಢವಾಗಿರುವುದು ಕಂಡುಬರುತ್ತದೆ. ಆದ್ದರಿಂದ ಗಾಂಧೀಜಿಯವರು ಒಬ್ಬ ಪರಿಸರವಾದಿಯಾಗಿದ್ದರೆಂಬುದು ಸ್ಪಷ್ಟವಾಗಿದೆ. ಪರಿಸರ ಪ್ರಜ್ಞೆಯು ಕೇವಲ ಕಳೆದ ನಾಲ್ಕು ದಶಕಗಳಿಂದ ಮಾತ್ರ ಹೆಚ್ಚು ಮಹತ್ವವನ್ನು ಪಡೆದುಕೊಳ್ಳುತ್ತಿರುವ ವಿಷಯವಾಗಿರುವುದರಿಂದ ಪರಿಸರ ಚಳುವಳಿಯಲ್ಲಿ ಗಾಂಧೀಜಿಯವರ ಸ್ಥಾನಮಾನಗಳು ಇತ್ತೀಚೆಗೆ ಗುರುತಿಸಲ್ಪಟ್ಟಿದೆ. 2003ರಲ್ಲಿ ಜುಲಿಯಾ.ಆರ್.ಮಿಲ್ಲರ್‍ರವರು ಸಂಪಾದಕರಾಗಿರುವ Encyclopedia of Human Ecologyಯಲ್ಲಿ ಪರಿಸರವಾದಿಯಾಗಿ ಗಾಂಧೀಜಿಯವರ ಪಾತ್ರವನ್ನು ಗುರುತಿಸಲಾಗಿದೆ. ಗಾಂಧೀಜಿಯವರ ಬರಹಗಳನ್ನು ಆಳವಾಗಿ ಅಧ್ಯಯನ ಮಾಡಿದಾಗ ಅರ್ಥಶಾಸ್ತ್ರಜ್ಞರಲ್ಲದೆಯೂ ಅರ್ಥಶಾಸ್ತ್ರದ ಅಂಶಗಳನ್ನು, ರಾಜ್ಯಶಾಸ್ತ್ರಜ್ಞರಲ್ಲದೆಯೂ ರಾಜಕೀಯವನ್ನು ಸಮಾಜಶಾಸ್ತ್ರಜ್ಞರಲ್ಲದೇ ಸಾಮಾಜಿಕ ಸಿದ್ಧಾಂತಗಳನ್ನು ಹಾಗೂ ಪರಿಸರವಾದಿಯಲ್ಲದೆಯೂ ಪರಿಸರ ಕಾಳಜಿಯನ್ನು ಪ್ರತಿಪಾದಿಸಿದ್ದಾರೆ. ಮಾನವನ ಪ್ರತಿಯೊಂದು ಚಟುವಟಿಕೆಯನ್ನು ಪ್ರತ್ಯೇಕಿಸಿ ನೋಡದೆ ಸಮಗ್ರವಾಗಿ ನೋಡುವ ಹಾಗೂ ಮಾನವನ ಪ್ರತಿಯೊಂದು ಚಟುವಟಿಕೆಯನ್ನು ಪರಿಸರದೊಂದಿಗೆ ಸಮೀಕರಿಸುವ ಪ್ರಯತ್ನವನ್ನು ಗಾಂಧೀಜಿಯವರ ಚಿಂತನೆಗಳಲ್ಲಿ ಕಾಣಬಹುದಾಗಿದೆ. ಹಾಗಾಗಿ ಗಾಂಧೀಜಿಯವರ ಪ್ರತಿ ಚಿಂತನೆಯು ಪರಿಸರ ಸ್ನೇಹಿ ಚಿಂತನೆಯಾಗಿತ್ತು ಎನ್ನಬಹುದು. ಗಾಂಧೀಜಿಯವರ ನೇರನುಡಿಗಳಲ್ಲಿ ಬರಹಗಳಲ್ಲಿ, ಜೀವನಶೈಲಿಯಲ್ಲಿ ಪರಿಸರ ಕಾಳಜಿಯ ಕುರುಹುಗಳನ್ನು ಗುರುತಿಸಬಹುದು.
ಗಾಂಧೀ ಪರಿಸರವಾದದ ಮೂಲ ಪ್ರಪಂಚದ ಜೀವ ವೈವಿಧ್ಯತೆಯನ್ನು ಗೌರವಿಸುತ್ತಾ ನಿರಂತರವಾಗಿ ಮನುಷ್ಯನ ಜೀವನವನ್ನು ಪರಿಶುದ್ಧತೆಯೆಡೆಗೆ ಕೊಂಡೊಯ್ಯುವ ಬೌದ್ಧ ಧರ್ಮ ಹಾಗೂ ಜೈನಧರ್ಮಗಳಿಂದ ಗಾಂಧೀಜಿಯವರು ಪ್ರಭಾವಿತರಾಗಿದ್ದರು. ಹಾಗೆಯೇ ಹಿಂದೂ ಧರ್ಮದಲ್ಲೂ ಪ್ರಕೃತಿಯ ಆರಾಧನೆಯನ್ನು ಅವರು ಅರಿತಿದ್ದರು. ಮಾನವ ಹಾಗೂ ಭೂಮಿ ಹಾಗೂ ಪರಿಸರದ ನಡುವಿನ ಸಂಬಂಧಗಳನ್ನು ಗಟ್ಟಿಗೊಳಿಸುವ ಆಚರಣೆಗಳು ಗಾಂಧೀಜಿಯವರ ಮೇಲೆ ಪ್ರಭಾವ ಬೀರಿದ್ದವು. ಪಾಶ್ಚಿಮಾತ್ಯ ಚಿಂತಕರಾದ ಜಾನ್‍ರಸ್ಕಿನ್‍ರವರ ಬರಹಗಳಲ್ಲಿ ಕೈಗಾರಿಕೀಕರಣವನ್ನು ಕುರಿತ ಟೀಕೆಗಳು ಕೈಗಾರಿಕೀಕರಣವು ಮಾನವ ಮತ್ತು ಪ್ರಕೃತಿಯ ನಡುವಿನ ಸಾಮರಸ್ಯಕ್ಕೆ ಹೇಗೆ ಧಕ್ಕೆಯುಂಟು ಮಾಡುತ್ತದೆ ಎಂಬ ಅಂಶಗಳನ್ನು ಪ್ರಸ್ತಾಪಿಸಲಾಗಿದೆ. ಹೆನ್ರಿಡೇವಿಡ್ ಥೊರೋ Civil Disobedience ಅನ್ನು ಕುರಿತ ಪ್ರಬಂಧದಲ್ಲಿ ಪ್ರಕೃತಿಯು ಮಾನವನಿಲ್ಲದೆಯೂ ಉಳಿಯಬಲ್ಲದು ಎಂಬ ಅಭಿಪ್ರಾಯವು ಗಾಂಧೀಜಿಯವರು ಮಾನವ ಮತ್ತು ಪರಿಸರದ ನಡುವಿನ ಸಂಬಂಧವನ್ನು ಚರ್ಚೆ ಕುರಿತು ಚಿಂತಿಸುವಂತೆ ಮಾಡಿತು. ಪರಿಸರವನ್ನು ಕುರಿತು ಗಾಂಧೀಜಿಯವರು I need no inspiration other than nature. She never failed me as yet. She mystifies me, bewilders me, and sends me to ecstasies. ಗಾಂಧೀಜಿಯವರು ಪರಿಸರವಾದಿ ಎಂಬುದನ್ನು ಹಲವರು ಒಪ್ಪಲಾರರು. ಏಕೆಂದರೆ ಇಂದು ಹೆಚ್ಚು ಚರ್ಚಿತವಾಗುತ್ತಿರುವ ಈ ವಿಷಯಗಳು ಅಂದಿನ ದಿನಗಳಲ್ಲಿ ಪ್ರಾಮುಖ್ಯತೆಯನ್ನು ಪಡೆದುಕೊಂಡಿರಲಿಲ್ಲ. ಆದರೆ ಆಧುನಿಕ ನಾಗರೀಕತೆ (ಕೈಗಾರೀಕರಣ)ಯನ್ನು ಗಾಂಧೀಜಿಯವರು ‘Even Days Wonder’ ಎಂದು ಗಾಂಧೀಜಿಯವರ ಸಮಗ್ರ ಬರಹವನ್ನು ಕೂಲಂಕುಷವಾಗಿ ಪರಿಶೀಲಿಸಿದಾಗ ಅವರು ಪರಿಸರವನ್ನು ಕುರಿತು ನೇರವಾಗಿ ವ್ಯಕ್ತಪಡಿಸಿರುವ ಕೆಲವು ವಿಚಾರಗಳು ಇಂದು ನಾವು ಎದುರಿಸುತ್ತಿರುವ ಹಲವಾರು ಪರಿಸರ ಸಮಸ್ಯೆಗಳನ್ನು ಮೊದಲೇ ಊಹಿಸಿದ್ದರೆಂಬುದನ್ನು ತಿಳಿಸುತ್ತದೆ. ಗಾಂಧೀಜಿಯವರ ಮಿತವಾದ ಬಯಕೆಗಳು ಹಾಗೂ ಮೂಲಭೂತ ಅವಶ್ಯಕತೆಗಳನ್ನು ಕುರಿತ ವಿಚಾರಧಾರೆಗಳು ಸಾಮಾಜಿಕ ಹಾಗೂ ಪ್ರಾಕೃತಿಕ ಮೂಲಾಂಶಗಳ ನಡುವಿನ ಸಾಮರಸ್ಯದ ಅಗತ್ಯತೆಯ ಬಗ್ಗೆ ಬೆಳಕನ್ನು ಚೆಲ್ಲುತ್ತವೆ. ಭೌತಿಕ ಸುಖವನ್ನೇ ಸಮಾಜದ ಕಲ್ಯಾಣವೆಂದು ಭ್ರಮಿಸುವ ಭಾವನೆಗಳನ್ನು ಕುರಿತು “A certain degree of physical harmony and comfort is necessary, but above a certain level it becomes hindrance instead of help, therefore the ideal of creating an unlimited number of wants and satisfying them seem to be a delusion and a snare” ಎಂದು ಹೇಳುತ್ತಾ ಬೃಹತ್ ಪ್ರಮಾಣದ ಕೈಗಾರಿಕೆಗಳು ಮನುಷ್ಯನ ಭೌತಿಕ ಸುಖದ ಬಯಕೆಗಳನ್ನು ಮಿತಿಯಿಲ್ಲದಂತೆ ಹೆಚ್ಚಿಸುವುದರೊಂದಿಗೆ ಅತಿಯಾದ ಅನುಭೋಗಿ ಪ್ರವೃತ್ತಿಯನ್ನುಂಟು ಮಾಡಿ ತನ್ಮೂಲಕ ಪರಿಸರ ನಾಶಕ್ಕೆ ಕಾರಣವಾಗುತ್ತದೆ ಎಂಬುದನ್ನು ಮನಗಂಡಿದ್ದರು. ಆದ್ದರಿಂದಲೇ ಪಾರೆಲ್ (2006) ರವರು ಗಾಂಧಿಯವರ ತತ್ವಶಾಸ್ತ್ರವನ್ನು ಪ್ರಕೃತಿಯೊಂದಿಗಿನ ಸಾಮರಸ್ಯದ ಮಾದರಿ (Harmony Model with Ecology) ಎಂದು ಬಣ್ಣಿಸಿದ್ದಾರೆ. ಭೌತಿಕ ಅಭಿವೃದ್ಧಿಯನ್ನು ಸಾಧಿಸುವುದರ ಮೂಲಕ ಮಾತ್ರ ಮಾನವನು ಸಂತೋಷವಾಗಿ ಬದುಕಲು ಸಾಧ್ಯವಿಲ್ಲ ಎಂಬುದರ ಅರಿವಿನ ಕಾರಣದಿಂದ ಇತ್ತೀಚೆಗೆ ಮಾನವನ ಜೀವನದ ಗುಣಮಟ್ಟವನ್ನು “Happiness index”ನ ಮೂಲಕ ಅಳೆಯುವ ಹೊಸ ಪ್ರಯತ್ನ ನಡೆಯುತ್ತಿದೆ. ಅತ್ಯಂತ ಕಡಿಮೆ ಬಯಕೆಗಳನ್ನು ಹೊಂದಿ ಸಂತೃಪ್ತ ಜೀವನವನ್ನು ನಡೆಸುವ ಗಾಂಧೀಜಿಯವರ ಚಿಂತನೆಯು ಉತ್ತಮ ಸಂತೋಷದ ಸೂಚ್ಯಂಕವನ್ನು ತಲುಪಲು ಸಹಕಾರಿಯಾಗಬಲ್ಲದು. ಆದ್ದರಿಂದಲೇ ಗಾಂಧೀಜಿಯವರು “A man who multiplies his wants cannot achieve the goal of plain living and high thinking” ಎಂದಿದ್ದಾರೆ. ಡಿವೆಲ್ ಮತ್ತು ಸೆಷನ್ಸ್ರವರ ಪ್ರಕಾರ (1985, ಪುಟ ಸಂಖ್ಯೆ 48) ಇಲ್ಲಿಯವರೆಗೆ ಮಾನವನು ಸಾಧಿಸಿರುವ ಪ್ರಗತಿಯು ವಾಸ್ತವದಲ್ಲಿ ಪರಿಸರ ನಾಶಕ್ಕೆ ಕಾರಣವಾಗಿದೆ. ಇದಕ್ಕೆಲ್ಲ ಅಮಿತವಾದ ಬಯಕೆಗಳೇ ಕಾರಣ. ಈ ಕುರಿತಂತೆ ಗಾಂಧೀಜಿಯವರು ಮರದಿಂದ ಎಲೆಗಳನ್ನು ಕೀಳುತ್ತಿದ್ದ ತನ್ನ ಅನುಯಾಯಿ ಒಬ್ಬನಿಗೆ “This is violence we should pluck the required number of leaves, but you broke off the whole twig which is wasteful and wrong” ಎಂದು ಹೇಳಿರುವುದನ್ನು ಪರಿಸರ ಸಂರಕ್ಷಣೆ ಹಾಗೂ ಪರಿಸರಕ್ಕೆ ಹಾನಿಯಾಗದಂತೆ ಅಭಿವೃದ್ಧಿ ಪ್ರಗತಿಯನ್ನು ಸಾಧಿಸುವ ಕುರಿತ ವಿಚಾರಗಳನ್ನು ಗುರುತಿಸಬಹುದು. ಆಧುನಿಕತೆಯನ್ನು ಕುರಿತು ಗಾಂಧೀಜಿಯವರ ವಿಮರ್ಶೆ ಹಾಗೂ ಪರಿಸರವಾದ ಗಾಂಧೀಜಿಯವರ ಅಭಿಪ್ರಾಯದಲ್ಲಿ ಕೈಗಾರೀಕರಣ ಹಾಗೂ ಲಾಭಗಳಿಸುವಿಕೆಯು ನೈತಿಕ ಪ್ರಗತಿಗೆ ವಿರುದ್ಧವಾದ ಅಂಶಗಳಾಗಿವೆ. ಗಾಂಧೀಜಿಯವರ ಪ್ರಕಾರ ಅನವಶ್ಯಕವಾದ ಭೌತಿಕ ಸುಖದ ಬಯಕೆಯು ಕೆಡುಕನ್ನುಂಟು ಮಾಡುತ್ತಿದೆ. ಆದ್ದರಿಂದ ಯುರೋಪಿಯನ್ ಸಮುದಾಯವು ಭೌದ್ಧಿಕ ಸುಖದ ಭಾರದಿಂದ ಕುಸಿದು ನಾಶವಾಗುವ ಮೊದಲು ತನ್ನ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳಬೇಕು. ಇಲ್ಲವಾದಲ್ಲಿ ತಮ್ಮ ಬಯಕೆಗಳನ್ನು ಹೆಚ್ಚಿಸಿಕೊಳ್ಳುತ್ತಾ ಧಾವಂತದಲ್ಲಿ ಮುನ್ನುಗ್ಗುತ್ತಿರುವ ಯುರೋಪಿಯನ್ ಸಮುದಾಯವು ತಾವು ನಡೆದ ದಾರಿಯನ್ನು ಪುನರಾವಲೋಕಿಸಿ ನಾವು ಏನು ಮಾಡಿದ್ದೇವೆ? ಎಂದು ಪಶ್ಚಾತ್ತಾಪ ಪಡುವ ದಿನಗಳು ದೂರವಿಲ್ಲ ಎಂದು ಎಚ್ಚರಿಸಿದರು. (Koshoo & Mulakattu: 2009). ಇತ್ತೀಚಿನ ದಿನಗಳಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ವಾತಾವರಣ ಬದಲಾವಣೆ (Climate Change)ಯ ಬಗೆಗೆ ಹೆಚ್ಚು ಚಿಂತಿತವಾಗಿರುವುದು ಹಾಗೂ ಕೈಗಾರೀಕರಣ ಮತ್ತು ಆಧುನಿಕತೆಯ ಪರಿಣಾಮವಾಗಿ ಉಂಟಾಗಿರುವ ಗ್ಲೋಬಲ್ ವಾರ್ಮಿಂಗ್ ಅನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ವಾತಾವರಣಕ್ಕೆ ಬಿಡುಗಡೆಯಾಗುತ್ತಿರುವ ಇಂಗಾಲವನ್ನು ನಿಯಂತ್ರಿಸಲು ಕೋಟ್ಯಾಂತರ ಹಣವನ್ನು ವೆಚ್ಚ ಮಾಡುತ್ತಿರುವ ನಿದರ್ಶನಗಳನ್ನು ನೋಡಿದಾಗ ಗಾಂಧೀಜಿಯವರ ಊಹೆಗಳು ನಿಜವಾಗಿರುವುದು ಸ್ಪಷ್ಟವಾಗುತ್ತಿದೆ. ಆದ್ದರಿಂದ ಕೈಗಾರೀಕರಣ ಹಾಗೂ ನಾಗರೀಕರಣಕ್ಕೆ ಮಿತಿ ಹೇರುವ ದಾರಿಯನ್ನು ನಾವು ಹುಡುಕದೇ ಇದ್ದರೆ ಸರ್ವನಾಶ ಖಂಡಿತ. ಇಂತಹ ವಿಚಾರಗಳನ್ನು ತಮ್ಮ ಹಿಂದ್ ಸ್ವರಾಜ್‍ನಲ್ಲಿ ಪ್ರಕಟಿಸಿದ್ದರಿಂದಲೇ ಪ್ರಕಟಿತವಾದ ಒಂದು ವರ್ಷದಲ್ಲೇ ಅದನ್ನು ನಿಷೇಧಿಸಲಾಯಿತು. ಸ್ವದೇಶಿ ಹಾಗೂ ಪರಿಸರ ಗಾಂಧೀಜಿಯವರ ಸ್ವದೇಶೀ ಪರಿಕಲ್ಪನೆಯು ಸಹ ಪರೋಕ್ಷವಾಗಿ Sustainable Development ಪೂರಕವಾದ ವಿಚಾರವೇ ಆಗಿದೆ. ಸ್ವದೇಶೀ ಎಂದರೆ ಸ್ವಾವಲಂಬಿಯಾಗಿರುವುದೇ ಆಗಿದೆ. ಆದ್ದರಿಂದ ಈ ಪರಿಕಲ್ಪನೆಯು ಪರಿಸರ ಸಮತೋಲನದೊಂದಿಗೆ ನಿಕಟ ಸಂಬಂಧವನ್ನು ಹೊಂದಿದೆ. ಗಾಂಧೀಜಿಯವರಿಗೆ ಪರಿಸರ ಸ್ನೇಹಿ ಅಭಿವೃದ್ಧಿಯ ಅರಿವಿರದಿದ್ದರೂ ಅವರು ಈ ಕುರಿತು ಸಾಕಷ್ಟು. ವಿಚಾರಗಳನ್ನು ವ್ಯಕ್ತಪಡಿಸಿದ್ದಾರೆ. ಭಾರತದ ಆರ್ಥಿಕತೆಯನ್ನು ಹಳ್ಳಿಗಳಲ್ಲಿ ಗುರುತಿಸಿರುವುದು. ಅನುಭೋಗೀ ವಸ್ತುಗಳ ಉತ್ಪಾದಕತೆಯ ಮೂಲವಾಗಿ ಗುಡಿಕೈಗಾರಿಕೆಗಳಿಗೆ ಮನ್ನಣೆ, ಕೃಷಿಕ ಸ್ನೇಹಿ ವಿಚಾರಧಾರೆಗಳು ಹಾಗೂ ಚರಕಗಳಿಂದ ಹತ್ತಿಯ ಬುಟ್ಟಿಗಳ ನೇಯುವಿಕೆ ಮೊದಲಾದ ಚಿಂತನೆಗಳು, ಪರಿಸರದೊಂದಿಗೆ ಸಾಮರಸ್ಯ ಸ್ಥಾಪಿಸುವ ಹಾಗೂ ಸರ್ವೋದಯದ ಪರಿಕಲ್ಪನೆಗೆ ಪೂರಕವಾಗಿವೆ ಎನ್ನಬಹುದು. ಗಾಂಧೀಜಿಯವರು ಎಂದಿಗೂ ಹಳ್ಳಿಯ ಚಮ್ಮಾರನ ವೃತ್ತಿಯನ್ನು ದೊಡ್ಡ ಚಪ್ಪಲಿ ಕಂಪನಿಗಳು ಹಾಗೂ ಒಬ್ಬ ಕಬ್ಬಿಣದ ಕೆಲಸ ಮಾಡುವವನ ವೃತ್ತಿಯನ್ನು ದೊಡ್ಡ ಉಕ್ಕಿನ ಕಾರ್ಖಾನೆಗಳು ಕಸಿದುಕೊಳ್ಳುವುದನ್ನು ಬೆಂಬಲಿಸಲಿಲ್ಲ. ದುರದೃಷ್ಟವಶಾತ್ ನಾವು ಗಾಂಧೀಜಿಯವರ ಈ ವಿಚಾರಧಾರೆಗಳಿಗೆ ತದ್ವಿರುದ್ಧವಾಗಿ ಪ್ರಕೃತಿಯಿಂದ ದೂರವಾದ ಕೃತಕ ಬದುಕನ್ನು ಸಾಗಿಸುತ್ತ ಕೊಳ್ಳುಬಾಕ ಸಂಸ್ಕೃತಿ ಪರಿಣಾಮವಾಗಿ ಪರಿಸರದೊಂದಿಗೆ ತಾನೂ ವಿನಾಶದತ್ತ ವೇಗವಾಗಿ ಸಾಗುತ್ತಿದ್ದೇವೆ. ಬದುಕಬೇಕೆಂದರೆ ಗಾಂಧಿ ಮಾರ್ಗವೊಂದೇ ದಾರಿ. ತಂತ್ರಜ್ಞಾನವನ್ನು ಕುರಿತು ಗಾಂಧಿಯವರ ವಿಚಾರಗಳು ಹಾಗೂ ಪರಿಸರ ಭಾರತದ ಸಂಸ್ಕೃತಿ ಹಾಗೂ ನೆಲದ ಗುಣಕ್ಕೆ ಅನುಗುಣವಾಗಿ ತಂತ್ರಜ್ಞಾನವನ್ನು ಕುರಿತು ಹೊಸ ದೃಷ್ಟಿಕೋನವನ್ನು ನೀಡಿದವರು ಗಾಂಧೀಜಿಯವರು ಮೊದಲಿಗರಾಗಿದ್ದಾರೆ. ಗ್ರಾಮಾಧಾರಿತವಾದ ಸಣ್ಣ ಸಣ್ಣ ಯಂತ್ರಗಳ ಮೂಲಕ ಉತ್ಪಾದನಾ ಚಟುವಟಿಕೆಗಳನ್ನು ನಡೆಸುವಂತೆ ಸಲಹೆ ನೀಡಿದರು. ಚರಕವು ಗಾಂಧೀಜಿಯವರ ಆದರ್ಶಮಯವಾದ ಪ್ರಕೃತಿ ಸ್ನೇಹಿ ಯಂತ್ರವಾಗಿತ್ತು. ಸ್ಥಳದಲ್ಲೇ ದೊರೆಯುವ ಸಂಪನ್ಮೂಲಗಳಿಂದ ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸುವುದು ಎಲ್ಲರಿಗೂ ಸ್ವಾವಲಂಬನೆಯನ್ನು ನೀಡುವುದೆಂಬುದು ಗಾಂಧೀಜಿಯವರ ನಿಲುವಾಗಿದ್ದರೂ ಸುಸ್ಥಿರ ಅಭಿವೃದ್ಧಿ (Sustainable Development)ಗೆ ಉತ್ತಮ ಮಾರ್ಗದರ್ಶನವಾಗಿದೆ. ಗಾಂಧೀಜಿಯವರ ಇಂತಹ ವಿಚಾರಧಾರೆಗಳಿಂದ ಪ್ರಭಾವಿತರಾದ ಶುಂಷರ್ರವರು ತಮ್ಮ ‘intermediate technology’ ಪರಿಕಲ್ಪನೆಯ ಮೂಲಕ ಈ ವಿಚಾರಗಳನ್ನು ಜನಪ್ರಿಯಗೊಳಿಸಿದರು. ಗಾಂಧೀಜಿಯವರಿಂದ ಪ್ರೇರಿತರಾದ ಹಲವಾರು ತಂತ್ರಜ್ಞರು ಪರಸರ ಸ್ನೇಹಿ ತಂತ್ರಜ್ಞಾನವನ್ನು ಪರಿಚಯಿಸುತ್ತಿದ್ದಾರೆ. ಗಾಂಧೀಜಿ ಹಾಗೂ ಪ್ರಕೃತಿ ಚಿಕಿತ್ಸೆ ಗಾಂಧೀಜಿಯವರು ಆಧುನಿಕ ಔಷಧಶಾಸ್ತ್ರವನ್ನು ಬ್ರಿಟಿಷ್ ವಸಾಹತುಶಾಹಿಯ ವಿಸ್ತೃತರೂಪ ಎಂದು ಅಭಿಪ್ರಾಯಪಡುತ್ತಾರೆ. ತಮ್ಮ ಹಿಂದ್ ಸ್ವರಾಜ್ ಗ್ರಂಥದಲ್ಲಿ (1949) ವೈದ್ಯರು ಕೇವಲ ರೋಗಕ್ಕೆ ಮಾತ್ರ ಚಿಕಿತ್ಸೆ ನೀಡುತ್ತಾರೆ. ಆದರೆ ರೋಗ ಬರದಂತೆ ತಡೆಗಟ್ಟುವ ಪ್ರಯತ್ನ ಮಾಡುವುದಿಲ್ಲ. ಗಾಂಧೀಜಿಯವರ ಪ್ರಕಾರ ಜನರು ಪ್ರಕೃತಿ ಸಹಜವಾದ ಜೀವನ ನಡೆಸಿದಾಗ ಇಂತಹ ಸಮಸ್ಯೆಗಳಿಂದ ದೂರವಾಗಬಹುದೆಂಬುದು ಗಾಂಧೀಜಿಯವರ ಅಭಿಪ್ರಾಯವಾಗಿತ್ತು. ಸಹಜ ಜೀವನ ಶೈಲಿ (ಪ್ರಕೃತಿ ಚಿಕಿತ್ಸೆ) ಪ್ರಾಮುಖ್ಯತೆಯನ್ನು ನೀಡಬೇಕೆಂಬುದು ಗಾಂಧೀಜಿಯವರು ಅಭಿಪ್ರಾಯ ಪಟ್ಟಿದ್ದಾರೆ. ಗಾಂಧಿಯವರ ಪ್ರಕಾರ ಮನಸ್ಸಿನ ಮೇಲಿನ ನಿಯಂತ್ರಣದಿಂದ ದೇಹದ ಮೇಲಿನ ನಿಯಂತ್ರಣವನ್ನು ಸಾಧಿಸಲು ಸಾಧ್ಯವಾಗುತ್ತಿದೆ. ಆಧುನಿಕ ವೈದ್ಯಶಾಸ್ತ್ರವು ದೇಹ-ಮನಸ್ಸುಗಳ ಸಮಗ್ರತೆಗೆ ವಿರುದ್ಧವಾಗಿ ಎರಡನ್ನೂ ಪ್ರತ್ಯೇಕಿಸಿ ಚಿಕಿತ್ಸೆ ನೀಡುತ್ತದೆ. ಆದ್ದರಿಂದ ಪ್ರಕೃತಿ ಚಿಕಿತ್ಸೆಯನ್ನು ಅರ್ಥೈಸಿಕೊಂಡು ಅನುಸರಿಸುತ್ತ ಉತ್ತಮವೆಂದು ಗಾಂಧೀಜಿಯವರು ತಮ್ಮ ಆತ್ಮಚರಿತ್ರೆ “My Experiment with truth” ಗ್ರಂಥದಲ್ಲಿ ಪ್ರಕೃತಿ ಚಿಕಿತ್ಸೆಯೊಂದಿಗಿನ ತಮ್ಮ ಪ್ರಯೋಗಗಳನ್ನು ಪ್ರಸ್ತಾಪಿಸಿದ್ದಾರೆ. ಅಲ್ಲದೆ ತಮ್ಮ ಹಿಂದ್ ಸ್ವರಾಜ್ ಗ್ರಂಥದಲ್ಲಿ ಆರೋಗ್ಯ ಹಾಗೂ ಪ್ರಕೃತಿ ಚಿಕಿತ್ಸೆಯನ್ನು ಕುರಿತ ವಿಚಾರಧಾರೆಗಳನ್ನು ನೋಡಬಹುದು. ಸಾಂಪ್ರದಾಯಿಕ ಚಿಕಿತ್ಸಾ ವಿಧಾನಗಳಾದ ಆಯುರ್ವೇದ, ಯುನಾನಿ, ತಿಬ್ಬ ಹಾಗೂ ಪ್ರಕೃತಿ ಚಿಕಿತ್ಸೆಗಳತ್ತ ಗಾಂಧೀಜಿಯವರಿಗೆ ಹೆಚ್ಚು ಒಲವು ಇರುವುದು ಕಂಡು ಬರುತ್ತದೆ. “How do diseases arise? Surely by our negligence or indulgence, I over eat, I have indigestion I go to doctor, he gives me medicine, I am alright, I over eat again, I take pills again….. Had the doctor not intervene, nature would have done this work and I would have mastery over myself” ಎಂಬ ಗಾಂಧೀಜಿಯವರ ಅಭಿಪ್ರಾಯವು ಮಾನವನು ಪ್ರಕೃತಿಯ ಕೂಸು, ಪ್ರಕೃತಿ ಸಹಜ ಜೀವನ ಶೈಲಿಯಿಂದ ಮಾತ್ರ ಆರೋಗ್ಯ ಸಾಧ್ಯ ಎಂಬುದನ್ನು ಸ್ಪಷ್ಟಪಡಿಸುತ್ತಿದೆ. ರೋಗವನ್ನು ಗುಣಪಡಿಸುವುದಕ್ಕಿಂತ ರೋಗ ಬಾರದಂತೆ ತಡೆಗಟ್ಟುವುದು ಗಾಂಧೀಜಿಯವರ ಆರೋಗ್ಯದ ಪರಿಕಲ್ಪನೆಯಾಗಿತ್ತು. ಉತ್ತಮ ಜೀವನ ಕ್ರಮ ಹಾಗೂ ಆಹಾರ ಪದ್ಧತಿಗಳು ಮನುಷ್ಯನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಆರೋಗ್ಯವಂತರನ್ನಾಗಿಸುತ್ತದೆಂದು ಗಾಂಧೀಜಿಯವರು ನಂಬಿದ್ದರು. ಆದ್ದರಿಂದಲೇ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಪ್ರಕೃತಿ ಚಿಕಿತ್ಸೆಯೇ ಸೂಕ್ತವಾದುದು ಎಂದು ಅಭಿಪ್ರಾಯ ಪಟ್ಟಿದ್ದರು. ದುರದೃಷ್ಟವಶಾತ್ ಇಂದಿನ ಹೈಟೆಕ್ ವೈದ್ಯಕೀಯ ಸೌಲಭ್ಯಗಳು ಬಹಳ ದುಬಾರಿಯಾಗಿದ್ದು, ಅತ್ಯಂತ ಬಡವರ್ಗದ ಜನರು ಇಂತಹ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಪರಿಸರಕ್ಕೆ ಪೂರಕವಾದ ಸುಸ್ಥಿರ ಅಭಿವೃದ್ಧಿಯು ಸರ್ವರ ಹಿತವನ್ನು ಕಾಪಾಡುತ್ತಿದೆ ಎಂಬುದಕ್ಕೆ ಗಾಂಧೀಜಿಯವರ ಈ ವಿಚಾರವೂ ಪೂರ್ಣವಾಗಿದೆ. ಗಾಂಧೀಜಿ ಹಾಗೂ ಸ್ವಚ್ಛತೆ ಇತ್ತೀಚೆಗೆ ಕೇಂದ್ರ ಸರ್ಕಾರದ ಮಹತ್ತರ ಆಶಯವಾದ ಸ್ವಚ್ಛ ಭಾರತ ಆಂದೋಲನವು ಗಾಂಧೀಜಿಯವರ ವಿಚಾರಧಾರೆಗಳಿಂದ ಪ್ರೇರೇಪಿತವಾಗಿದೆ. 1916ರ ಫೆಬ್ರವರಿ 4ರಂದು ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಭಾಷಣ ಮಾಡುವಾಗ ಬನಾರಸ್‍ನ ವಿಶ್ವನಾಥ ದೇಗುಲಕ್ಕೆ ಭೇಟಿ ನೀಡಿದ ಸಂದರ್ಭವನ್ನು ನೆನಪಿಸಿಕೊಳ್ಳುತ್ತಾ ದೇವಸ್ಥಾನದ ಕೊಳಕು ಪರಿಸ್ಥಿತಿಯನ್ನು ಪ್ರಸ್ತಾಪಿಸಿ “Is not this great temple a reflection of our own character”? ಎಂದು ಪ್ರಶ್ನಿಸುತ್ತಾರೆ. (Penguin Book of Modern Indian Speeches 1877 to present edited by Rakesh Balabyal) (The Hindu). ಡಿ.ಜಿ.ತೆಂಡೂಲ್ಕರ್ರವರ ಮಹಾತ್ಮ ಗ್ರಂಥದ ಮೂರನೇ ಆವೃತ್ತಿಯಲ್ಲಿ ಹರಿಜನ ಯಾತ್ರೆಯ ಪ್ರಯುಕ್ತ ಪಾಟ್ನಾದಿಂದ ಒರಿಸ್ಸಾದ ಚಂಪಾಪುರದ ಒಂದು ಹಳ್ಳಿಯಲ್ಲಿ ಗಾಂಧೀಜಿಯವರು ಮತ್ತು ಅವರ ಅನುಯಾಯಿಗಳು ಇಡೀ ಹಳ್ಳಿಯನ್ನು ಸ್ವಚ್ಛಗೊಳಿಸಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಪ್ರಯತ್ನವನ್ನು ಮಾಡಿದರು ಹಾಗೂ ತ್ಯಾಜ್ಯ ವಸ್ತುಗಳನ್ನು ಸಿಕ್ಕಲ್ಲಿ ಬಿಸಾಡುವುದರಿಂದ ಸಾಂಕ್ರಾಮಿಕ ರೋಗಗಳು ಹರಡುತ್ತವೆ ಎಂಬ ಅಂಶವನ್ನು ಮನದಟ್ಟು ಮಾಡಿದರು. ಒಟ್ಟಿನಲ್ಲಿ ಗಾಂಧೀಜಿಯವರ ಸ್ವಚ್ಛತೆಯ ಪರಿಕಲ್ಪನೆಯು ಕೇವಲ ರಾಜಕೀಯ ತಂತ್ರಗಾರಿಕೆಯಾಗದೆ ಪ್ರತಿಯೊಬ್ಬ ಭಾರತೀಯನ ಆತ್ಮ ಪ್ರಜ್ಞೆಯಲ್ಲಿ ಪ್ರತಿಬಿಂಬಿಸಿದಾಗ ಮಾತ್ರ ಸ್ವಚ್ಛ ಭಾರತ ಹಾಗೂ ಸ್ವಚ್ಛ ಪರಿಸರದ ಕನಸು ನನಸಾಗಲು ಸಾಧ್ಯ. ಗಾಂಧೀಜಿಯವರ ಸ್ವಯಂ ಬಡತನ (Voluntary Poverty) ಹಾಗೂ ಪರಿಸರ ಕಾಳಜಿ ಸರಳ ಜೀವನವು ಗಾಂಧೀಜಿಯವರ ಜೀವನದ ಆದರ್ಶ ತತ್ವವಾಗಿತ್ತು. ಆದ್ದರಿಂದ ಪ್ರತಿಯೊಬ್ಬರು ಸ್ವಇಚ್ಛೆಯಿಂದ ತಮ್ಮ ಮಿತಿಯಿಲ್ಲದ ಆಸೆಗಳನ್ನು ಕಡಿಮೆ ಮಾಡಿಕೊಳ್ಳುವುದರ ಮೂಲಕ ಅತ್ಯಂತ ಸರಳ ಜೀವನ ನಡೆಸಬೇಕೆಂದು ಪ್ರತಿಪಾದಿಸಿದರು. ಅನವಶ್ಯಕ ಸಂಪತ್ತಿನ ಗಳಿಕೆಯನ್ನು ವಿರೋಧಿಸಿದರು. ಈ ತತ್ವಗಳನ್ನು ಸ್ವತಃ ಅನುಸರಿಸುತ್ತಿದ್ದ ಅವರು ನೈಸರ್ಗಿಕ ಸಂಪನ್ಮೂಲಗಳ ಮಿತವಾದ ಬಳಕೆ ಮಾಡುತ್ತಿದ್ದರು. ಒಟ್ಟಾರೆಯಾಗಿ ಹೇಳುವುದಾದರೆ ಗಾಂಧೀಜಿಯವರ ವಿಚಾರಗಳು ಹಾಗೂ ಜೀವನಶೈಲಿ ಎಲ್ಲವೂ ಪರಿಸರ ಕಾಳಜಿ ಹಾಗೂ ಸುಸ್ಥಿರ ಅಭಿವೃದ್ಧಿಗೆ ಸಂಬಂಧಿಸಿದಂತೆ ಅದ್ವಿತೀಯ ಮಾದರಿಗಳಾಗಿವೆ ಎನ್ನಬಹುದು. ಗಾಂಧೀವಾದಿ ಪರಿಸರ ತಜ್ಞರು ಭಾರತದಲ್ಲಿ ಪರಿಸರ ಕಾಳಜಿ ಹಾಗೂ ಸಂರಕ್ಷಣೆಯನ್ನು ಕುರಿತಂತೆ ಹಲವಾರು ಚಳುವಳಿಗಳು ಕಳೆದ ಮೂರು ನಾಲ್ಕು ದಶಕಗಳಿಂದಷ್ಟೇ ಪ್ರವರ್ಧಮಾನಕ್ಕೆ ಬಂದಿವೆ. ಹಲವಾರು ಭಾರತೀಯ ಹಾಗೂ ಪಾಶ್ಚಿಮಾತ್ಯ ಪರಿಸರವಾದಿಗಳು ಗಾಂಧೀಜಿಯವರ ವಿಚಾರಧಾರೆಗಳಿಂದ ಪ್ರಭಾವಿತರಾಗಿದ್ದಾರೆ. ಸುಂದರಲಾಲ್ ಬಹುಗುಣ ಅವರ ಚಿಪ್ಕೋ ಆಂದೋಲನ ಮೇಧಾ ಪಾಟ್ಕರ್‍ರವರ ನರ್ಮದಾ ಬಚಾವೋ ಆಂದೋಲನಗಳು ಇದಕ್ಕೆ ಉತ್ತಮ ಉದಾಹರಣೆಗಳು. ವಂದನಾಶಿವ, ಅನಿಲ್ ಅಗರವಾಲ್, ಮಹದೇವ್ ಗಾಡೀಳ್, ಬಾಬಾ ಆಮ್ಟೆ, ರಾಮಚಂದ್ರ ಗುಹಾ ಮೊದಲಾದವರು ಗಾಂಧಿ ಪ್ರೇರಿತ ಪರಿಸರವಾದಿಗಳಾಗಿದ್ದಾರೆ. ಇವರೆಲ್ಲರೂ ವಿಶೇಷವಾಗಿ ಗ್ರಾಮೀಣ ಪ್ರದೇಶದ ಪರಿಸರ ಸಮಸ್ಯೆಗಳ ನಿರ್ಮೂಲನೆಗಾಗಿ ಹೋರಾಟ ನಡೆಸುತ್ತಿದ್ದಾರೆ. ಅರ್ನೆ ನೀಸ್‍ರವರ Deep Ecology Movement ಸಹ ಗಾಂಧೀಜಿಯವರ ವಿಚಾರಗಳಿಂದ ಪ್ರೇರಿತವಾದುದಾಗಿದೆ. ಉಪಸಂಹಾರ ಗಾಂಧೀಜಿಯವರು ಮಾನವನ ಪ್ರತಿಯೊಂದು ಚಟುವಟಿಕೆಯನ್ನು ಪರಿಸರದೊಂದಿಗೆ ಸಮೀಕರಿಸುವ ಪ್ರಯತ್ನವನ್ನು ಮಾಡಿದ್ದಾರೆ. ಪರಿಸರವನ್ನು ಕುರಿತಾದ ಅದರ ವಿಚಾರಧಾರೆಗಳು ಆರ್ಥಿಕ ರಾಜಕೀಯ, ಸಾಮಾಜಿಕ, ಆರೋಗ್ಯ ಹಾಗೂ ಅಭಿವೃದ್ಧಿ ಮೊದಲಾದ ಅಂಶಗಳೊಂದಿಗೆ ಸಂಬಂಧವನ್ನು ಹೊಂದಿವೆ. ಅವರ ಸರಳ ಜೀವನದ ತತ್ವಗಳು, ಗ್ರಾಮ ಕೇಂದ್ರಿತ ನಾಗರೀಕತೆ, ಗ್ರಾಮೀಣ ಸ್ವಾಯತ್ತತೆ, ಸ್ವಾವಲಂಬನೆ, ವೃತ್ತಿ ಶಿಕ್ಷಣ ಹಾಗೂ ಮಾನವಶ್ರಮಕ್ಕೆ ನೀಡಿರುವ ಪ್ರಾಮುಖ್ಯತೆ ಎಲ್ಲವು ಸಹ ಪರಿಸರದೊಂದಿಗೆ ಸಾಮರಸ್ಯವನ್ನು ಉಂಟುಮಾಡುವ ದೃಷ್ಟಿಕೋನಗಳಾಗಿವೆ. ಪ್ರಪಂಚದಾದ್ಯಂತ ಉಂಟಾಗುತ್ತಿರುವ ಪ್ರಾಕೃತಿಕ ವಿಕೋಪಗಳಿಗೆ ಗಾಂಧೀಜಿಯವರ ಚಿಂತನೆಗಳೇ ಅಂತಿಮ ಪರಿಹಾರ ಎನ್ನುವುದರಲ್ಲಿ ಸಂಶಯವಿಲ್ಲ. ಗಾಂಧೀಜಿಯವರ ಉತ್ಕೃಷ್ಟ ಚಿಂತನೆಗಳು ಪ್ರಪಂಚದ ಹಲವಾರು ಪರಿಸರ ಚಳುವಳಿಗಳಿಗೆ ಪ್ರೇರಣೆಯಾಗಿದೆ. ಗಾಂಧೀಜಿಯವರ ಜೀವನ ಶೈಲಿ ಹಾಗೂ ವಿಚಾರಗಳು ಸುಸ್ಥಿರ ಅಭಿವೃದ್ಧಿಯ ಕನಸನ್ನು ನನಸಾಗಿಸುವಲ್ಲಿ ಸಹಕಾರಿಯಾಗಬಹುದು. ಬಹುಶಃ ಪ್ರಾರಂಭದಿಂದಲೇ ನಾವು ನಮ್ಮ ಆರ್ಥಿಕತೆಯನ್ನು, ಪ್ರಗತಿಯ ಪರಿಕಲ್ಪನೆಯನ್ನು ಗಾಂಧೀಜಿಯವರ ವಿಚಾರಗಳ ತಳಹದಿಯ ಮೇಲೆ ಕಟ್ಟಿಕೊಳ್ಳುವ ಪ್ರಯತ್ನವನ್ನು ಮಾಡಿದ್ದರೆ ಇಂದು ಇಡೀ ಪ್ರಪಂಚ ಪ್ರಾಕೃತಿಕ ವೈಪರೀತ್ಯವನ್ನು ಎದುರಿಸುವ ಸಾಧ್ಯತೆಗಳೇ ಇರುತ್ತಿರಲಿಲ್ಲ. ಆದ್ದರಿಂದಲೇ “The earth has enough for everyone’s need, but not for everyone’s greed” ಎಂಬ ಅವರ ಹೇಳಿಕೆಯು ಸಮಕಾಲೀನ ಪರಿಸರ ಚಳುವಳಿಗಳ ಘೋಷವಾಕ್ಯವಾಗಿದೆ. ಪರಾಮರ್ಶನ ಹಾಗೂ ಆಕರ ಗ್ರಂಥಗಳು ಹಾಗೂ ಲೇಖನಗಳು
ಪ್ರೊ. ಸುಮ ಎ. ಸಹಾಯಕ ಪ್ರಾಧ್ಯಾಪಕರು, ರಾಜ್ಯಶಾಸ್ತ್ರ ವಿಭಾಗ, ಮಹಾರಾಣಿ ಮಹಿಳಾ ಕಲಾ ಕಾಲೇಜು, ಮೈಸೂರು
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
|
|
|
|
SITE MAP
SitePOSH |
NIRATHANKAOUR OTHER WEBSITESSubscribe |
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |