Niruta Publications
  • Home
  • About Us
    • Ramesha's Profile
  • Publication With Us
    • Niruta's Read & Write Initiative
    • Leaders Talk
    • Inviting Articles
    • Promote Your Books
  • Our Services
  • Collaborate with Niruta Publications
    • Join Our Online Groups
  • Nirathanka Club House
  • HR Blog
    • Editor's Blog
    • Blog
    • English Articles
    • Kannada Articles
  • Online Store
  • Media Mentions
    • Photos
    • Videos
  • Contact Us
  • Home
  • About Us
    • Ramesha's Profile
  • Publication With Us
    • Niruta's Read & Write Initiative
    • Leaders Talk
    • Inviting Articles
    • Promote Your Books
  • Our Services
  • Collaborate with Niruta Publications
    • Join Our Online Groups
  • Nirathanka Club House
  • HR Blog
    • Editor's Blog
    • Blog
    • English Articles
    • Kannada Articles
  • Online Store
  • Media Mentions
    • Photos
    • Videos
  • Contact Us
Niruta Publications

ಮಾನಸಿಕ ಆರೋಗ್ಯ : ಪರಿಕಲ್ಪನೆ, ಮಾನಸಿಕ ಅಸ್ವಸ್ಥತೆಗಳು: ಗುರುತಿಸುವಿಕೆ, ಚಿಕಿತ್ಸಾ ವಿಧಾನಗಳು ಮತ್ತು ಮನೋವೈದ್ಯ

4/14/2018

0 Comments

 
ಪ್ರಸ್ತಾವನೆ:
ಮಾನಸಿಕ ರೋಗಕ್ಕೆ ಚಿಕಿತ್ಸೆ ಉಂಟು ಎನ್ನುವ ಈ ಲೇಖನದಲ್ಲಿ ಮಾನಸಿಕ ಆರೋಗ್ಯದ ಪರಿಕಲ್ಪನೆ, ಮಾನಸಿಕ ಆರೋಗ್ಯದ ಮುಖ್ಯ ಲಕ್ಷಣಗಳು, ಮಾನಸಿಕ ಅಸ್ವಸ್ಥತೆ, ಮಾನಸಿಕ ಕಾಯಿಲೆಗಳ ಬಗ್ಗೆ ಇರುವ ತಪ್ಪು ಕಲ್ಪನೆಗಳ ಬಗ್ಗೆ ಗಮನಹರಿಸಲಾಗಿದೆ. ಹಾಗೂ ಮಾನಸಿಕ ಕಾಯಿಲೆಗೆ ಕಾರಣಗಳು, ಮಾನಸಿಕ ಕಾಯಿಲೆಗಳ ಪ್ರಕಾರಗಳ ಬಗ್ಗೆ ವಿವರಿಸಲಾಗಿದೆ. ಪ್ರಸ್ತುತ ಲಭ್ಯವಿರುವ ಚಿಕಿತ್ಸಾ ಪದ್ಧತಿಗಳು, ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಗಳ ಮತ್ತು ಅವರ ಸಂಬಂಧಿಕರ ಜವಾಬ್ದಾರಿಗಳ ಬಗ್ಗೆ ಒತ್ತುಕೊಡಲಾಗಿದೆ. ಮನೋವೈದ್ಯಕೀಯ ಕ್ಷೇತ್ರದಲ್ಲಿ ಮನೋವೈದ್ಯರು, ಚಿಕಿತ್ಸಕ ಮನಶಾಸ್ತ್ರಜ್ಞರು, ಮನೋವೈದ್ಯಕೀಯ ಸಮಾಜಕಾರ್ಯಕರ್ತರು, ಮನೋವೈದ್ಯಕೀಯ ಶೂಶ್ರುಷಕ ಸಿಬ್ಬಂದಿಗಳ ಮತ್ತು ಇತರ ಮನೋವೈದ್ಯಕೀಯ ತಂಡದ ಪಾತ್ರದ ಬಗ್ಗೆ ವಿವರಿಸಲಾಗಿದೆ. ಮನೋರೋಗಿಗಳ ಸಾಮಾಜಿಕ ಸಮಸ್ಯೆಗಳನ್ನು ಗುರುತಿಸುವಿಕೆ, ಮನೋರೋಗಿಯನ್ನು ಸಮಾಜದ ಮುಖ್ಯವಾಹಿನಿಯಲ್ಲಿ ತರುವಲ್ಲಿ ಮನೋವೈದ್ಯಕೀಯ ಸಮಾಜಕಾರ್ಯಕರ್ತರ ಪಾತ್ರ ಹಾಗೂ ಸವಾಲುಗಳು ಬಗ್ಗೆ ಈ ಲೇಖನದಲ್ಲಿ ವಿವರಿಸಲಾಗಿದೆ.  

ಮಾನಸಿಕ ಆರೋಗ್ಯ: ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಮಾನಸಿಕ ಆರೋಗ್ಯವೆಂದರೆ ಒಬ್ಬ ವ್ಯಕ್ತಿಯು ತನ್ನ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಅರ್ಥಮಾಡಿಕೊಳ್ಳುವುದರ ಜೊತೆಗೆ, ದೈನಂದಿನ ಸಾಮಾನ್ಯ ಸಮಸ್ಯೆಗಳನ್ನು ಅಥವಾ ಒತ್ತಡಗಳನ್ನು ಎದುರಿಸುವ ಸಾಮರ್ಥ್ಯವನ್ನು ಹೊಂದಿರಬೇಕು ಹಾಗೂ ಗುಣಾತ್ಮಕ ಉತ್ಪಾದಕತೆಯನ್ನು ಮಾಡುವುದರ ಜೊತೆಗೆ ಸಮುದಾಯಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುವ ಸಾಮರ್ಥ್ಯವನ್ನು ಹೊಂದಿರುವಂತಹ ಸುರಕ್ಷಿತ ಅಥವಾ ಸಂತೋಷದ ಮಾನಸಿಕ ಸ್ಥಿತಿಯನ್ನು ಮಾನಸಿಕ ಆರೋಗ್ಯವೆಂದು ಕರೆಯಲಾಗುತ್ತದೆ. ಆದ್ದರಿಂದ ಇಂದಿನ ಆಧುನಿಕ, ಜಾಗತೀಕರಣ, ಉದಾರೀಕರಣ, ಖಾಸಗೀಕರಣದ ಭರದಿಂದಾಗಿ ಪ್ರತಿಯೊಬ್ಬರು ಮಾನಸಿಕ ಆರೋಗ್ಯದಿಂದ ಇರುವುದು ಎಷ್ಟು ಕಷ್ಟಸಾಧ್ಯ ಎನ್ನುವುದು ನಮ್ಮೆಲ್ಲರಿಗೂ ತಿಳಿದ ವಿಷಯವೇ ಆಗಿದೆ. ಮಾನಸಿಕ ಆರೋಗ್ಯ ವ್ಯಕ್ತಿಯು ಹೊಂದಿರಬೇಕಾದ ಮುಖ್ಯ ಲಕ್ಷಣಗಳೆಂದರೆ ವಾಸ್ತವತೆಯ ಬಗ್ಗೆ ಅರಿವನ್ನು ಹೊಂದಿರುವುದು, ವಿಚಾರಗಳು ಹಾಗೂ ಕಲ್ಪನೆಗಳ ಮೇಲೆ ನಿಯಂತ್ರಣ ಹೊಂದಿರುವುದು, ಕೆಲಸ ಹಾಗೂ ಕಾರ್ಯಕ್ಷೇತ್ರದಲ್ಲಿ ದಕ್ಷತೆಯನ್ನು ಹೊಂದಿರುವುದು, ಸಾಮಾಜಿಕ ಅಂಗೀಕಾರತ್ವವನ್ನು ಹೊಂದಿರುವುದು, ತನ್ನ ಬಗ್ಗೆ ಸಕಾರಾತ್ಮಕ ಪರಿಕಲ್ಪನೆಯನ್ನು ಹೊಂದುವುದು ಹಾಗೂ ಭಾವನಾತ್ಮಕವಾದ ಸಂಬಂಧವನ್ನು ಹೊಂದಿರುವುದು ಮುಖ್ಯವಾದ ಮಾನಸಿಕ ಆರೋಗ್ಯ ಲಕ್ಷಣಗಳೆಂದು ಹೇಳುತ್ತೇವೆ.

ಒಬ್ಬ ವ್ಯಕ್ತಿಯು ಬೇರೆಯವರ ಜೊತೆ ಸಕಾರಾತ್ಮಕವಾಗಿ ಹೊಂದಾಣಿಕೆಯುಳ್ಳ ಸಾಮರ್ಥ್ಯವನ್ನು, ತನ್ನ ಬಗ್ಗೆ ಉತ್ತಮ ಭಾವನೆಯನ್ನು, ವೈಯಕ್ತಿಕ ಸಾಮರ್ಥ್ಯದ ಆಧಾರದ ಮೇಲೆ ಸಮಸ್ಯೆಗಳನ್ನು ಪರಿಹರಿಸುವ, ವೈಯಕ್ತಿಕ ನಿರ್ಧಾರಗಳನ್ನು ತೆಗೆದುಕೊಳ್ಳುವ ಕೌಶಲ್ಯಗಳನ್ನು ಮೈಗೂಡಿಸಿಕೊಂಡಿದ್ದರೆ, ಭಾವನಾತ್ಮಕ ವರ್ತನೆಯ ವಿಚಾರದಲ್ಲಿ ಅಭಿವೃದ್ಧಿಯನ್ನು ಹಾಗೂ ದೈನಂದಿನ ಜೀವನದಲ್ಲಿ ಬರುವ ಸಮಸ್ಯೆಗಳಿಗೆ ಆತ್ಮವಿಶ್ವಾಸವನ್ನು ಕಳೆದುಕೊಳ್ಳದೇ ಜೀವನ ನಡೆಸುವ ವ್ಯಕ್ತಿಯನ್ನು ಮಾನಸಿಕ ಆರೋಗ್ಯದಿಂದ ಇದ್ದಾನೆ ಎಂದು ಹೇಳುತ್ತೇವೆ. ಮಾನಸಿಕ ಆರೋಗ್ಯ ಹಾಗೂ ಮಾನಸಿಕ ಅಸ್ವಸ್ಥತೆ ಎನ್ನುವುದರ ಬಗ್ಗೆ ಬಹುತೇಕ ಜನರಲ್ಲಿ ವಿವಿಧ  ದೃಷ್ಟಿಕೋನಗಳಿದ್ದು ಕೆಲವು ಜನರಲ್ಲಿ ಮಾನಸಿಕ ಅಸ್ವಸ್ಥತೆ ಮತ್ತು ಮಾನಸಿಕ ಆರೋಗ್ಯ ಎರಡು ಒಂದೇ ಎನ್ನುವ ಅಭಿಪ್ರಾಯಗಳು ಇರುವುದರ ಬಗ್ಗೆ ತಳ್ಳಿಹಾಕುವಂತಿಲ್ಲ. ಮಾನಸಿಕ ಆರೋಗ್ಯದಿಂದ ಇರಲು ಸಾಧ್ಯವಾಗದೇ ಇರುವಾಗ ಮಾನವರಲ್ಲಿ ಮಾನಸಿಕ ಕಾಯಿಲೆಯ ಅಥವಾ ಮಾನಸಿಕ ಅಸ್ವಸ್ಥತೆಯ ಲಕ್ಷಣಗಳು ಕಾಣಲು ಪ್ರಾರಂಭಿಸುತ್ತವೆ ಇದಕ್ಕೆ ಹಲವಾರು ಕಾರಣಗಳು ಇರಬಹದು. ಮಾನಸಿಕ ಅಸ್ವಸ್ಥತೆ ಎನ್ನುವದರ ಬಗ್ಗೆ ತಿಳಿದುಕೊಳ್ಳುವುದು ಅವಶ್ಯಕ.

ಮಾನಸಿಕ ಅಸ್ವಸ್ಥತೆ: ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವವರನ್ನು ನಾವು ಸಹಜವಾಗಿಯೇ ಕಾಣುತ್ತಿರುತ್ತೇವೆ. ನಾನಾ ರೀತಿಯ ಕಾರಣಗಳಿಂದ ಇಂದು ಮನೋವ್ಯಾಕುಲಕ್ಕೆ ಒಳಗಾಗುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವುದು ಕಳವಳಕಾರಿ ಸಂಗತಿ. ಈಗ ಲಭ್ಯ ಇರುವ ಪರಿಣಾಮಕಾರಿ ಚಿಕಿತ್ಸೆ ಪಡೆದರೆ ಮಾನಸಿಕ ಕಾಯಿಲೆ ಹೊಂದಿದ ವ್ಯಕ್ತಿಗಳು ಸಹಜ ಜೀವನ ನಡೆಸಲು ಸಾಧ್ಯ. ನಾನಾ ರೀತಿಯ ಮಾನಸಿಕ ಕಾಯಿಲೆಗಳಿದ್ದು, ಇದಕ್ಕೆ ಇರುವ ಸೂಕ್ತ ಚಿಕತ್ಸೆ ಹಾಗೂ ಇತರ ವೈಜ್ಞಾನಿಕ ಚಿಕಿತ್ಸಾ ಪದ್ಧತಿಗಳನ್ನು ಇಂದು ಜನರು ತಿಳಿದುಕೊಳ್ಳಬೇಕಾದ ಅವಶ್ಯಕತೆ ಇದೆ.

ಮಾನಸಿಕ ಅಸ್ವಸ್ಥತೆ ಇಂದು ನಿನ್ನೆಯದ್ದಲ್ಲ: ಮಾನಸಿಕ ಅಸ್ವಸ್ಥತೆ ಅಥವಾ ಮನೋವೈಕಲ್ಯವು ಇಂದು ನಿನ್ನೆಯದ್ದಲ್ಲ. ಪುರಾತನ ಕಾಲದಿಂದಲೂ ವ್ಯಕ್ತಿಯಲ್ಲಿ ಕಂಡು ಬರುವ ಮಾನಸಿಕ ಕಾಯಿಲೆಗೆ ಹಲವು ಬಗೆಯ ಮೂಢನಂಬಿಕೆಗಳಿವೆ. ಮಾಟ-ಮಂತ್ರ, ಭೂತ, ಪಿಶಾಚಿ, ಅಂಟು ರೋಗ, ಮೈಯಲ್ಲಿ ಭೂತವಿರುವುದೆಂದು, ಮಾನಸಿಕ ರೋಗಿ ಸದಾ ಹಿಂಸಾ ಪ್ರವೃತ್ತಿಯುಳ್ಳವನೆಂದು ಹಾಗೂ ಆ ಕಾಯಿಲೆ ಗುಣಮುಖವಾಗದು  ಎಂಬ ಅಪನಂಬಿಕೆಗಳಿವೆ.  1950 ರ ದಶಕದ ಹಿಂದೆ ಇಂತಹ ಮಾನಸಿಕ ರೋಗಗಳಿಗೆ ಚಿಕಿತ್ಸೆ ಲಭ್ಯವಿರದ ಕಾರಣ ಮಾನಸಿಕ ಅಸ್ವಸ್ಥ ರೋಗಿಗಳ ಕೈ ಮತ್ತು ಕಾಲುಗಳಿಗೆ ಕಬ್ಬಿಣದ ಸರಪಳಿಯಿಂದ ಬಂಧಿಸಿ ಪ್ರತ್ಯೇಕ ಕೋಣೆಗಳಲ್ಲಿ ಇಡುತ್ತಿದ್ದರೆಂದರೆ ಆಗಿನ ಕಾಲದಲ್ಲಿ ಅದೆಷ್ಟು ಮಾನಸಿಕ ಅಸ್ವಸ್ಥರು ಮಾನಸಿಕ ಯಾತನವನ್ನು ಅನುಭವಿಸಿರಬಹುದು ಎಂದು ನಾವು ಉಹಿಸಬಹುದು. ಮನೋರೋಗಿಗಳು ಕುಟುಂಬಕ್ಕೆ ಕಳಂಕರು, ಸಹಜ ಚಟುವಟಿಕೆಗಳಿಗೆ ಅಸಮರ್ಥರೆಂಬ ಇತ್ಯಾದಿ ತಪ್ಪು ಕಲ್ಪನೆಗಳು ಮೊದಲಿನಿಂದಲೂ ಜನರಲ್ಲಿವೆ.

ಪಾಶ್ಚಿಮಾತ್ಯ ದೇಶಗಳಲ್ಲಿದ್ದ ವಿವಿಧ ಮೂಢನಂಬಿಕೆಗಳು ಹಾಗೂ ಆಚರಣೆಗಳು: ಮಾನಸಿಕ ರೋಗಗಳು ಬರುವುದು ಭೂತ, ಪ್ರೇತ, ಪಿಶಾಚಿ, ಮಾಟ ಅಥವಾ ಮಂತ್ರಗಳಿಂದ ಬರುತ್ತವೆ ಎನ್ನುವುದು ಪೂರ್ವಜರ ನಂಬಿಕೆಯಾಗಿತ್ತು. ಪಾಶ್ಚಿಮಾತ್ಯ ದೇಶಗಳಲ್ಲಿ ಶತಮಾನಗಳ ವರ್ಷಗಳ ಹಿಂದೆ ಮಾನಸಿಕ ರೋಗಿಯ ತಲೆಗೆ ರಂಧ್ರವನ್ನು ಕೊರೆಯುತ್ತಿದ್ದರು, ಇದರ ಉದ್ದೇಶ ದೇಹದ ಒಳಗೆ ಇರುವ ಭೂತ ಹೊರಗಡೆ ಹೋಗಬೇಕು ಎಂದು ಇದರ ಅರ್ಥ.

ವೈದ್ಯಕೀಯ ಆವಿಷ್ಕಾರ: 1950 ರ ಬಳಿಕ ಮನೋವೈದ್ಯಕೀಯ ಲೋಕದಲ್ಲಾದ ಅವಿಷ್ಕಾರಗಳು ಮಾನಸಿಕ ರೋಗಿಗಳಿಗೂ ಚಿಕಿತ್ಸೆಯನ್ನು ನೀಡಿ ಸುಧಾರಣೆ ಮಾಡಬಹುದು ಎನ್ನುವ ತೀರ್ಮಾನಕ್ಕೆ ಬರಲಾಯಿತು. ಮಾನಸಿಕ ರೋಗಗಳಿಗೆ ಮದ್ದು ಇಲ್ಲ ಎನ್ನುವವರಿಗೆ 1950 ರಲ್ಲಿ  Chlorpromazine ಎನ್ನುವ ಮಾತ್ರೆಯನ್ನು ಕಂಡು ಹಿಡಿದ ನಂತರ ಮಾನಸಿಕ ರೋಗವನ್ನು ಮಾತ್ರೆಯ ಮೂಲಕ ಹತೋಟಿಗೆ ತರಬಹುದು ಎಂದು ಜನರಿಗೆ ತಿಳಿಯಿತು ಹಾಗೂ ಇದು ಮಾನಸಿಕ ರೋಗಗಳ ಬಗ್ಗೆ ವೈಜ್ಞಾನಿಕವಾಗಿಯೂ ತಿಳಿದುಕೊಳ್ಳಲು ಸಹಾಯವಾಯಿತು. ತದನಂತರ ಮಾನಸಿಕ ಕಾಯಿಲೆಗೆ ಹೊಸ ಬಗೆಯ ಮಾತ್ರೆಗಳ ಆವಿಷ್ಕಾರವಾಗಲು ಪ್ರಾರಂಭವಾಯಿತು. ಉದಾಹರಣೆಗೆ Chlorpromazin  Resperidone, Clozapine, Haloperidol, Carbomezapine, Lithium Carbonate, Sodium Valporate, Olanzepine  ಇನ್ನು ಹಲವು ಮಾತ್ರೆಗಳ ಆವಿಷ್ಕಾರವಾಗಿ ಜನರು ಮಾನಸಿಕ ಕಾಯಿಲೆಗಳಿಗೆ ವೈಜ್ಞಾನಿಕ ಮನೋಭಾವನೆಗಳನ್ನು ಬೆಳೆಸಿಕೊಳ್ಳಲು ಸಾಧ್ಯವಾಯಿತು.

ಮಾನಸಿಕ ಕಾಯಿಲೆಗಳ ಲಕ್ಷಣಗಳು: ಅಸಂಗತ ವರ್ತನೆ, ಅಶರೀರ ಧ್ವನಿಗಳನ್ನು ಕೇಳಿಸಿಕೊಳ್ಳುವುದು, ಖಿನ್ನತೆ, ಅತಿಯಾದ ಅನುಮಾನ ಪ್ರವೃತ್ತಿ, ವಿನಾಕಾರಣ ಇನ್ನೊಬ್ಬರನ್ನು ಹಿಂಸಿಸುವುದು, ನಿದ್ರಾಹೀನತೆ, ಆತ್ಮಹತ್ಯೆ ಯೋಚನೆಗಳು, ಅತಿಯಾದ ಆತಂಕ. ವ್ಯಕ್ತಿಯ ಭಾವನೆಗಳಲ್ಲಿ, ನಡವಳಿಕೆಗಳಲ್ಲಿ ಏರುಪೇರು ಆಗುವುದು ಹಾಗೂ ವ್ಯಕ್ತಿಯ ದಿನನಿತ್ಯದ ಚಟುವಟಿಕೆಗಳಿಗೆ ತೊಂದರೆಯಾಗುವುದು. ವ್ಯಕ್ತಿಯು ಮಾಡಿದ ಕೆಲಸಗಳನ್ನು ಪದೇ ಪದೇ ಮಾಡುವುದು (ಪದೇ ಪದೇ ಕೈ ತೊಳೆಯುವುದು) ಇತ್ಯಾದಿ.

ವಿವಿಧ ಬಗೆಯ ಮಾನಸಿಕ ಕಾಯಿಲೆಗಳು: ಇಂದಿಗೂ ಅನೇಕ ಜನರು ಮಾನಸಿಕ ಕಾಯಿಲೆಗಳೆಲ್ಲವೂ ಒಂದೇ ಎಂದು ತಿಳಿದುಕೊಂಡಿದ್ದಾರೆ. ಮನೋವೈದ್ಯಕೀಯ ಕ್ಷೇತ್ರದಲ್ಲಿ ಮಾನಸಿಕ ಕಾಯಿಲೆಗಳಲ್ಲಿ ತೀವ್ರ ತೆರನಾದ ಮತ್ತು ಅಲ್ಪತೆರನಾದ ಮಾನಸಿಕ ಕಾಯಿಲೆಗಳೆಂದು ವರ್ಗೀಕರಣ ಮಾಡಲಾಗಿದೆ. ಚಿತ್ತವಿಕಲತೆ, ಸ್ಕೀಜೋಅಫೆಕ್ಟೀವ್ ಮನೋಕಾಯಿಲೆ ಹಾಗೂ ಉನ್ಮಾದ-ಖಿನ್ನತೆ ಮನೋವಿಕೃತಿ ಕಾಯಿಲೆ ಎಂದು ತೀವ್ರತೆರನಾದ ಮಾನಸಿಕ ಕಾಯಿಲೆಗಳೆಂದು ಹೆಸರಿಸಲಾಗಿದೆ. ಆತಂಕ, ಭಯ, ಅತಿಭಯ ಹಾಗೂ ಗೀಳು ರೋಗವೆಂದು ಅಲ್ಪತೆರನಾದ (ಮನೋಬೇನೆಗಳು) ಮಾನಸಿಕ ಕಾಯಿಲೆಗಳಿಗೆ ಕರೆಯುತ್ತಾರೆ. ಮಾದಕ ಮತ್ತು ಮದ್ಯವ್ಯಸನಗಳಾದ ತಂಬಾಕು, ಸಾರಾಯಿ ಅಥವಾ ಹೆಂಡ, ಗಾಂಜಾ, ಅಫೀಮು ಇತ್ಯಾದಿ ಇವುಗಳಿಂದ ಬರುವ ಮಾನಸಿಕ ಕಾಯಿಲೆಗಳು ಒಂದು ಪ್ರಕಾರವಾದರೆ, ಅಪಘಾತದಿಂದ ಮಿದುಳಿನ ಮೇಲೆ ಪರಿಣಾಮ ಬೀರಿ, ತೀವ್ರ ತೆರನಾದ ರೋಗಗಳಿಂದ ಮಿದುಳಿನ ಸೋಂಕಿನಿಂದ ಬರುವ ಆಂಗಿಕ ಮನೋವಿಕೃತಿ ಅಥವಾ ಆಂಗಿಕ ಚಿತ್ತವಿಕಲತೆ ಕಾಯಿಲೆ ಇನ್ನೊಂದು ಪ್ರಕಾರದ ಮಾನಸಿಕ ಕಾಯಿಲೆಗಳಾಗಿವೆ. ವ್ಯಕ್ತಿತ್ವದ ದೋಷಗಳಿಗೆ ಸಂಬಂಧಿಸಿದ ಕಾಯಿಲೆಗಳು (Personality Disorders) ಇನ್ನೊಂದು ಬಗೆಯ ಕಾಯಿಲೆಗಳಾದರೆ, ಆಟಿಸಂ, ಅತಿಚಂಚಲತೆ, ಬುದ್ಧಿಮಾಂದ್ಯತೆ ಇವುಗಳು ಮಕ್ಕಳಲ್ಲಿ ಕಂಡುಬರುವ ಕಾಯಿಲೆಗಳಾಗಿವೆ. ಮನೋವೈದ್ಯಕೀಯ ಕ್ಷೇತ್ರದಲ್ಲಿ ಮಾನಸಿಕ ಕಾಯಿಲೆಗಳ ಬಗ್ಗೆ ವರ್ಷದಿಂದ ವರ್ಷಕ್ಕೆ ಸಂಶೋಧನೆಗಳು ನಡೆಯುತ್ತಲೇ ಇವೆ. ಕೆಲವು ಮುಖ್ಯ ಮಾನಸಿಕ ಕಾಯಿಲೆಗಳ ಬಗ್ಗೆ ಸಂಕ್ಷಿಪ್ತವಾಗಿ ತಿಳಿದುಕೊಳ್ಳೋಣ.

ಸ್ಕೀಜೋಫ್ರೀನಿಯಾ: ಸ್ಕೀಜೋಫ್ರೀನಿಯಾ ಅಥವಾ ಚಿತ್ತವಿಕಲತೆ ಒಂದು ತೀವ್ರತೆರನಾದ ಮಾನಸಿಕ ಕಾಯಿಲೆಯಾಗಿದ್ದು, ರೋಗಿಯು ವಾಸ್ತವಿಕತೆಯಿಂದ ದೂರವಿರುವಂತಹ ಸ್ಥಿತಿಯಾಗಿದೆ. ಯಾರಿಗೂ ಕೇಳಿಸದ ಧ್ವನಿಗಳು ಕೇಳಿಸುವುದು, ಯಾರಿಗೂ ಕಾಣದ ದೃಶ್ಯಗಳು ಕಾಣುವುದು, ಸಾಮಾಜಿಕ ಚಟುವಟಿಕೆಗಳಿಂದ ದೂರವಿರುವಂತಹ ಕಾಯಿಲೆಯ ಚಿಹ್ನೆಗಳು ರೋಗಿಯು ಹೊಂದಿರುತ್ತಾರೆ.

ಖಿನ್ನತೆ : ಖಿನ್ನತೆ ಕಾಯಿಲೆಯಲ್ಲಿ ರೋಗಿಯು ದುಃಖಿತ ಭಾವನೆ ಹೊಂದಿರುತ್ತಾನೆ, ನಿರುತ್ಸಾಹ, ನಕಾರಾತ್ಮಕ ವಿಚಾರಗಳು, ಆತ್ಮವಿಶ್ವಾಸ ಕಡಿಮೆ ಇರುವುದು, ಮಂಕುತನ, ಏಕಾಂಗಿತನ, ಜೀವನದ ಬಗ್ಗೆ ಭರವಸೆಯಿಲ್ಲದಿರುವುದು, ಇಂತಹ ಲಕ್ಷಣಗಳನ್ನು ಖಿನ್ನತೆ ಕಾಯಿಲೆಯಿಂದ ಬಳಲುತ್ತಿರುವ ರೋಗಿಯು ಹೊಂದಿರುತ್ತಾನೆ.

ಉನ್ಮಾದ ಕಾಯಿಲೆ: ಉನ್ಮಾದ ಮಾನಸಿಕ ಕಾಯಿಲೆಯನ್ನು ಹೊಂದಿದ ರೋಗಿಯು ಅತಿಯಾಗಿ ಮಾತನಾಡುವುದು, ತನ್ನ ಬಗ್ಗೆ ಜಂಭ ಕೊಚ್ಚಿಕೊಳ್ಳುವುದು, ಅತಿಯಾದ ಆನಂದದಲ್ಲಿ ಇರುವುದು, ಬೇರೆಯವರ ಜೊತೆ ಅತಿಯಾಗಿ ಸಲುಗೆಯಿಂದ ಮಾತನಾಡುವುದು, ದೊಡ್ಡ ದೊಡ್ಡ ವಿಷಯಗಳ ಬಗ್ಗೆ ಮಾತನಾಡುವುದು ಇಂತಹ ಲಕ್ಷಣಗಳನ್ನು ಹೊಂದಿರುತ್ತಾನೆ.

ಗೀಳು ರೋಗ : ಈ ಗೀಳು ರೋಗದ ಕಾಯಿಲೆಯ ಮುಖ್ಯ ಲಕ್ಷಣಗಳೆಂದರೆ ಪದೇ ಪದೇ ಕೈ ತೊಳೆಯುವುದು, ಮಾಡಿದ ಕೆಲಸಗಳನ್ನು ಪದೇ ಪದೇ ಮಾಡುವುದು (ಕೈ-ತೊಳೆಯುವುದು, ಬಟ್ಟೆಗಳನ್ನು ತೊಳೆಯುವುದು ಇತ್ಯಾದಿ) ಮತ್ತು ರೋಗಿಗೆ ಮನಸ್ಸಿಗೆ ವಿರುದ್ಧವಾದ ವಿಚಾರಗಳು, ಚಿತ್ರಗಳು, ಭಯಕ್ಕೆ ಸಂಬಂಧಟ್ಟ ವಿಚಾರಗಳು ಬರುವುದು.

ಆತಂಕ: ಆತಂಕ ಕಾಯಿಲೆಯು ಒಂದು ಪ್ರಕಾರದ ಅಲ್ಪತೆರನಾದ ಮಾನಸಿಕ ಕಾಯಿಲೆಯಾಗಿದ್ದು, ಈ ಕಾಯಿಲೆಯಲ್ಲಿ ರೋಗಿಯು ಆತಂಕಕ್ಕೆ ಒಳಗಾಗುತ್ತಾನೆ. ಬೆವರುವುದು, ಎದೆಬಡಿತ, ಭಯ ಮುಂತಾದ ಲಕ್ಷಣಗಳನ್ನು ಹೊಂದಿರುತ್ತಾನೆ.

ಭಯ: ರೋಗಿಯು ಕೆಲವು ಪ್ರದೇಶಗಳು, ಪ್ರಾಣಿಗಳು, ವಸ್ತುಗಳನ್ನು ಕಂಡರೆ ಭಯ ಪಡುವುದು. ಇದು ಒಂದು ಅಲ್ಪತೆರನಾದ ಮಾನಸಿಕ ಕಾಯಿಲೆಯಾಗಿರುತ್ತದೆ.

ಮಕ್ಕಳಲ್ಲಿ ಕಂಡು ಬರುವ ಮಾನಸಿಕ ಕಾಯಿಲೆಗಳು: ಬುದ್ಧಿಮಾಂದ್ಯತೆ, ಗುಣ ಮತ್ತು ನಡವಳಿಕೆಗೆ ಸಂಬಂಧಪಟ್ಟ ದೋಷಗಳು, ವರ್ತನಾ ತೊಂದರೆಗಳು, ಭಾವನಾತ್ಮಕ ತೊಂದರೆಗಳು ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಮಾನಸಿಕ ಕಾಯಿಲೆಗಳು.

ಮೆದುಳಿನ ಆಂಗಿಕ ದೋಷಗಳು: ವ್ಯಕ್ತಿಯ ಮಿದುಳಿಗೆ ಆಗುವ ಸೋಂಕು ಅಥವಾ ಪೆಟ್ಟಿನಿಂದ ಮಾನಸಿಕ ಕಾಯಿಲೆಯು ಬರುತ್ತದೆ. ಇಂತಹ ಕಾಯಿಲೆಗಳನ್ನು ಪತ್ತೆ ಹಚ್ಚಲು ಮನೋವೈದ್ಯರು ವೈದ್ಯಕೀಯ ಪರೀಕ್ಷೆಯ ಮೂಲಕ ಪತ್ತೆ ಹಚ್ಚುತ್ತಾರೆ.

ಮದ್ಯ ಹಾಗೂ ಮಾದಕ ವ್ಯಸನಗಳ ದುಶ್ಚಟದಿಂದಾಗಿ ಬರುವ ಮಾನಸಿಕ ಕಾಯಿಲೆಗಳು: ಸಾರಾಯಿ, ತಂಬಾಕು, ಗಾಂಜಾ, ಅಫೀಮು ಮುಂತಾದ ಮದ್ಯ ಹಾಗೂ ಮಾದಕ ವ್ಯಸನಗಳ ದುಶ್ಚಟಗಳಿಗೆ ಅಂಟಿಕೊಂಡು ಮಾನಸಿಕ ಕಾಯಿಲೆಗಳನ್ನು ಹೊಂದುತ್ತಾರೆ.

International Classification of Mental Disorders (ICD_10) ಪ್ರಕಾರ ಮಾನಸಿಕ ರೋಗಗಳು ಹಲವು ಪ್ರಕಾರಗಳಲ್ಲಿ ವಿಂಗಡಣೆ ಮಾಡಲಾಗಿದೆ. ಪ್ರತಿ ಕಾಯಿಲೆಗೆ ಕೆಲವು ನಿರ್ದಿಷ್ಟ ಮಾರ್ಗಸೂಚಿಗಳನ್ನು ನಮೂದಿಸಲಾಗಿದೆ. ಮನೋವ್ಯೆದ್ಯಕೀಯ ತಂಡದವರು ಇದರ ಪ್ರಕಾರ ರೋಗಿಗೆ ಇರುವ ಮಾನಸಿಕ ಕಾಯಿಲೆಯನ್ನು ಗುರುತಿಸಿ ಚಿಕಿತ್ಸೆ ಮತ್ತು ಔಷಧೋಪಚಾರ ನೀಡುತ್ತಾರೆ.
 
ಚಿಕಿತ್ಸೆ ಕೊಡಿಸುವಲ್ಲಿ ವಿಳಂಬ:
ಇಂದಿಗೂ ಅನೇಕ ಜನರು ಮಾನಸಿಕ ಕಾಯಿಲೆಯ ಲಕ್ಷಣಗಳನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ. ಕಾಯಿಲೆಯು ತೀವ್ರ ಸ್ವರೂಪವನ್ನು ಪಡೆದುಕೊಂಡ ನಂತರ ರೋಗಿಯನ್ನು ಮನೋವೈದ್ಯರ ಬಳಿ ಕರೆದುಕೊಂಡು ಬರುತ್ತಾರೆ. ಮಾನಸಿಕ ಕಾಯಿಲೆ ಆರಂಭವಾಗಿ ಕೆಲವು ವರ್ಷಗಳ ನಂತರ ಮನೋವೈದ್ಯರ ಬಳಿ ಚಿಕಿತ್ಸೆಗೆಂದು ಕರೆದುಕೊಂಡು ಬಂದ ಉದಾಹರಣೆಗಳು ಸಾಕಷ್ಟು ಇವೆ. ಇದಕ್ಕೆ ಕಾರಣಗಳು ಮಾನಸಿಕ ಕಾಯಿಲೆಯ ಲಕ್ಷಣಗಳನ್ನು ಗುರುತಿಸಲು ಸಾಧ್ಯವಾಗದಿರುವುದು, ಮೂಢ ನಂಬಿಕೆಗಳ ಮೊರೆ ಹೋಗಿರಬಹುದು, ಚಿಕಿತ್ಸೆಯ ಬಗ್ಗೆ ತಿಳುವಳಿಕೆ ಕೊರತೆಯೂ ಕೂಡ ಇರಬಹುದು.

ಈ ರೀತಿಯ ತಪ್ಪು ನಂಬಿಕೆಗಳಿಗೆ ಮನೋವೈದ್ಯರು ವ್ಯಕ್ತಿಗೆ ಮಾನಸಿಕ ರೋಗ ಬರಲು ಕಾರಣವೇನು? ಇರುವ ಚಿಕಿತ್ಸಾ ಸೌಲಭ್ಯಗಳ ಬಗ್ಗೆ ವಿವರಿಸಿ ಚಿಕಿತ್ಸೆಯನ್ನು ನೀಡಿ ಮಾನಸಿಕ ರೋಗಿಯನ್ನು ಗುಣಪಡಿಸುತ್ತಾರೆ. ಮನಶಾಸ್ತ್ರಜ್ಞರು ಹಾಗೂ ಮನೋವೈದ್ಯಕೀಯ ಸಮಾಜಕಾರ್ಯಕರ್ತರು ರೋಗಿಗೆ ಮತ್ತು ಆತನ ಸಂಬಂಧಿಕರಿಗೆ ಮನೋಚಿಕಿತ್ಸೆ ಹಾಗೂ ಆಪ್ತಸಮಾಲೋಚನೆಯನ್ನು ಮಾಡುವರು. ಇದರಿಂದ ರೋಗಿಯು ಸಮಾಜದಲ್ಲಿ ಎಲ್ಲರಂತೆ ಸಾಧ್ಯವಾದಷ್ಟು ಮಟ್ಟಿಗೆ ಆರೋಗ್ಯದಿಂದ ಜೀವನ ನಡೆಸಲು ಸಾಧ್ಯವಾಗುತ್ತದೆ. ಮನೋವೈದ್ಯರು ಸೂಕ್ತ ಎನ್ನಿಸಿದಲ್ಲಿ ಮಾತ್ರ ರೋಗಿಗೆ ಮಾತ್ರೆಗಳನ್ನು ನೀಡುತ್ತಾರೆ ಇಲ್ಲದೇ ಇದ್ದಲ್ಲಿ ರೋಗಿಗೆ ಆಪ್ತಸಮಾಲೋಚನೆಯನ್ನು ಮಾಡುವರು.

ಚಿಕಿತ್ಸಾ ವಿಧಾನಗಳು: ಮನೋವೈದ್ಯರು ನೀಡುವ ಮಾತ್ರೆಗಳು, ಔಷಧಗಳು ಅಥವಾ ಚುಚ್ಚುಮದ್ದುಗಳು (Pharmacotherapy) ಮಾನಸಿಕ ರೋಗಗಳನ್ನು ನಿಯಂತ್ರಿಸುವ ಮತ್ತು ಕಾಯಿಲೆಯನ್ನು ತಡೆಗಟ್ಟುವ ಒಂದು ಬಗೆಯ ಚಿಕಿತ್ಸಾ ಪದ್ಧತಿಯಾದರೆ, ವಿದ್ಯುತ್ ಕಂಪನ ಚಿಕಿತ್ಸೆ (Electro Convulsive Therapy) ಮತ್ತು ಆಪ್ತಸಮಾಲೋಚನೆ (Counseling) ಇತರ ಪ್ರಕಾರದ ಚಿಕಿತ್ಸಾ ಪದ್ಧತಿಗಳು. ಮಾತ್ರೆಗಳನ್ನು ನೀಡಿದ ತಕ್ಷಣವೇ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗುವುದಿಲ್ಲ. ಕೆಲವು ಬಾರಿ ರೋಗಿಗಳಿಗೆ ಮಾತ್ರೆಗಳನ್ನು ನೀಡಿದರೂ ಇತರ ಮನೋಸಾಮಾಜಿಕ ಸಮಸ್ಯೆಗಳು ರೋಗಿಯು ಗುಣಮುಖವಾಗುವ ಪ್ರಕ್ರಿಯೆಯಲ್ಲಿ ಎದುರಾಗುತ್ತವೆ. ಇಂತಹ ಸನ್ನಿವೇಶಗಳಲ್ಲಿ ಮನೋವೈದ್ಯಕೀಯ ಸಮಾಜಕಾರ್ಯಕರ್ತರು ರೋಗಿ ಮತ್ತು ಕುಟುಂಬಕ್ಕೆ ಸೂಕ್ತ ಮಾರ್ಗದರ್ಶನ ನೀಡುತ್ತಾರೆ.

ವಿದ್ಯುತ್ ಕಂಪನ ಚಿಕಿತ್ಸೆ: ವಿದ್ಯುತ್ ಕಂಪನ ಚಿಕಿತ್ಸೆಯನ್ನು ಮನೋವೈದ್ಯಕೀಯ  ಆಸ್ಪತ್ರೆಗಳಲ್ಲಿ ಅರವಳಿಕೆತಜ್ಞರು ಕೆಲವು ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಅರವಳಿಕೆ ಮದ್ದನ್ನು ನೀಡಿ ವಿದ್ಯುತ್ ಕಂಪನ ಚಿಕಿತ್ಸೆಯನ್ನು ಕೊಡುತ್ತಾರೆ. ತೀವ್ರತೆರನಾದ ಖಿನ್ನತೆ ಮತ್ತು ಆತ್ಮಹತ್ಯೆ ಯೋಚನೆಗಳು ಇರುವಂತಹ ರೋಗಿಗಳಿಗೆ ವಿದ್ಯುತ್ ಕಂಪನ ಚಿಕಿತ್ಸೆಯನ್ನು ನೀಡುತ್ತಾರೆ. ಇದು ಕೇವಲ ಕೆಲವು ಸೆಕೆಂಡಗಳು ಮಾತ್ರ. ಯಾವುದೇ ಮಾನಸಿಕ ರೋಗಿಗೆ ಅರವಳಿಕೆ ಮದ್ದನ್ನು ನೀಡದೇ ವಿದ್ಯುತ್ ಕಂಪನ ಚಿಕಿತ್ಸೆಯನ್ನು ಕೊಡುವುದಿಲ್ಲ.

ಮಾನಸಿಕ ರೋಗಿ ಇರುವ ಮನೆಯಲ್ಲಿ ಮನೋಸಾಮಾಜಿಕ ಸಮಸ್ಯೆಗಳು ಇರುತ್ತವೆ. ಉದಾ: ದಾಂಪತ್ಯದ ಸಮಸ್ಯೆ, ಹೊಂದಾಣಿಕೆ ಸಮಸ್ಯೆ, ರೋಗಿಯು ನಿಯಮಿತವಾಗಿ ಮಾತ್ರೆಗಳನ್ನು ತೆಗೆದುಕೊಳ್ಳದೇ ಇರುವುದು, ಕೆಲಸ ಮಾಡದೇ ಇರುವುದು, ರೋಗಿಯನ್ನು ನೋಡಿಕೊಳ್ಳಲು ಮನೆಯಲ್ಲಿ ಯಾರು ಇರದೇ ಇರುವುದು, ಕಾನೂನು ಸಮಸ್ಯೆಗಳು ಮತ್ತು ಇತರೆ ಸಮಸ್ಯೆಗಳು. ಇಂತಹ ಸಮಸ್ಯೆಗಳಿಗೆ ಮನೋವೈದ್ಯಕೀಯ ಕ್ಷೇತ್ರದಲ್ಲಿ ಮನೋರೋಗಿಗೆ ಇತರ ಚಿಕಿತ್ಸಾ ಸೇವೆಗಳನ್ನು ರೋಗಿಯ ಹಾಗೂ ಕುಟುಂಬದ ಹಿತದೃಷ್ಟಿಯಿಂದ ಒದಗಿಸಲಾಗುತ್ತದೆ. ಈ ರೀತಿಯ ಇತರ ಚಿಕಿತ್ಸಾ ಪದ್ಧತಿಗಳೆಂದರೆ- ಮನೋಚಿಕಿತ್ಸೆ, ಆಪ್ತಸಮಾಲೋಚನೆ, ವರ್ತನಾ ಚಿಕಿತ್ಸೆ, ಕೌಟಂಬಿಕ ಆಪ್ತಸಮಾಲೋಚನೆ, ಪುನರ್ವಸತಿ, ಸಾಮಾಜಿಕ ಕೌಶಲ್ಯಗಳ ತರಬೇತಿ ಸೌಲಭ್ಯಗಳು ಇವೆ.

ಕುಟುಂಬದ ಮೇಲೆ ಆಗುವ ಪರಿಣಾಮಗಳು: ಒಂದು ಕುಟುಂಬದಲ್ಲಿ ಒಬ್ಬ ವ್ಯಕ್ತಿಯು ಮಾನಸಿಕ ರೋಗಕ್ಕೆ ತುತ್ತಾದರೆ ಕುಟುಂಬದ ಎಲ್ಲಾ ಸದಸ್ಯರ ಮೇಲೆ ಪರಿಣಾಮ ಬೀರುವಂತಹದ್ದು ಸತ್ಯ. ಮಾನಸಿಕ ರೋಗಿಯ ನಡವಳಿಕೆಗಳು, ನೆರೆಹೊರೆಯ ಜನರು ಕುಟುಂಬವನ್ನು ನೋಡುವ ರೀತಿ, ರೋಗಿಯು ಒಂದು ವೇಳೆ ಹಿಂಸಾತ್ಮಕ ಪ್ರವೃತ್ತಿಯನ್ನು ಹೊಂದಿ ನೆರೆಹೊರೆ ಜನರಿಗೆ ತೊಂದರೆ ಮಾಡಿದ್ದೇ ಆದರೆ ಇದರಿಂದ ಆಗುವ ಕಾನೂನು ಸಮಸ್ಯೆಗಳು. ಕುಟುಂಬವು ಬಡತನ ಎನ್ನುವ ಸಾಮಾಜಿಕ ಸಮಸ್ಯೆಯನ್ನು ಹೊಂದಿದ್ದೆ ಆದರೆ ಮನೋರೋಗಿಗೆ ಚಿಕಿತ್ಸೆಯನ್ನು ಕೊಡಿಸಲು ಹಣಕಾಸಿನ ವ್ಯವಸ್ಥೆಯನ್ನು ಮಾಡುವುದು ಮತ್ತು ನಿರಂತರ ಅನುಸರಣೆ ಮಾಡುವುದು. ಹೀಗೆ ಕುಟುಂಬದ ಸದಸ್ಯರು ಒತ್ತಡ, ಅವಮಾನ ಹಾಗೂ ಗುಣಾತ್ಮಾಕ ಜೀವನವನ್ನು ನಡೆಸುವಲ್ಲಿ ತೊಂದರೆಯನ್ನು ಅನುಭವಿಸುತ್ತಾರೆ.

ಮಾತ್ರೆಗಳ ಬಗ್ಗೆ ಇರುವ ಅಪನಂಬಿಕೆಗಳು: ಮನೋವೈದ್ಯರು ನೀಡುವಂತಹ ಮಾತ್ರೆಗಳು ರೋಗಿಗೆ ನಿದ್ರೆ ಬರಿಸುತ್ತವೆ ಎನ್ನುವುದು ಹಲವು ರೋಗಿಗಳ ಹಾಗೂ ಅವರ ಸಂಬಂಧಿಕರ ವಾದ. ಕೇವಲ ಕೆಲವು ದಿನಗಳ ಮಟ್ಟಿಗೆ ಮಾತ್ರ ಮನೋವೈದ್ಯರು ನಿರ್ಧರಿಸಿ ರೋಗಿಗೆ ಮಾತ್ರೆಗಳನ್ನು ನೀಡುತ್ತಾರೆ ಅಷ್ಟೆ. ಮಾನಸಿಕ ರೋಗವು ಮಿದುಳಿನಲ್ಲಾದ ರಸಾಯನಿಕ ಕ್ರಿಯೆಗಳಲ್ಲಿ ಏರುಪೇರು ಆಗಿರುವುದರಿಂದ ಇದನ್ನು ಸರಿಪಡಿಸಲು ಮುಖ್ಯವಾದ ಮಾತ್ರೆಗಳನ್ನು ನೀಡಿ ರೋಗಿಯನ್ನು ಗುಣಪಡಿಸುತ್ತಾರೆ. ಜನರು ಇದರ ಬಗ್ಗೆ ವೈಜ್ಞಾನಿಕವಾಗಿ ತಿಳಿದುಕೊಳ್ಳುವುದು ಅವಶ್ಯಕವಾಗಿದೆ. ಕೆಲವು ರೋಗಗಳಿಗಾಗಿ ಮಾತ್ರ ಮನೋವೈದ್ಯರ ಸಲಹೆಯಂತೆ ದೀರ್ಘಾವಧಿ ಮಾತ್ರೆ ತೆಗೆದುಕೊಳ್ಳಬೇಕಾಗುತ್ತದೆ. ಇತರ ಅಲ್ಪತೆರನಾದ ಕಾಯಿಲೆಗಳಿಗೆ ಕೆಲವು ವರ್ಷಗಳ ಕಾಲ ಮಾತ್ರೆಗಳನ್ನು ತೆಗೆದುಕೊಂಡು ಮನೋವೈದ್ಯರ ಸೂಚನೆಯಂತೆ ನಿಲ್ಲಿಸಬೇಕು.

ಮನೋರೋಗಕ್ಕೆ ನೀಡುವ ಮಾತ್ರೆಗಳೆಲ್ಲವೂ ತೀವ್ರತೆರನಾದ ಅಡ್ಡಪರಿಣಾಮವನ್ನುಂಟು ಮಾಡುತ್ತವೆ ಎನ್ನುವ ಮಾತು ಸತ್ಯಕ್ಕೆ ದೂರವಾದದ್ದು. ಮನೋವೈದ್ಯರ ಸೂಚನೆಯಂತೆ ದೈನಂದಿನ ಜೀವನದಲ್ಲಿ ವ್ಯಾಯಾಮ ಹಾಗೂ ಕ್ರಮಬದ್ಧವಾದ ಆಹಾರ ಪದ್ದತಿಯನ್ನು ರೂಢಿಸಿಕೊಂಡರೆ ಕೆಲವು ಅಡ್ಡಪರಿಣಾಮಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಬಹುದಾಗಿದೆ.

ಮನೋವೈದ್ಯಕೀಯ ಸಮಾಜಕಾರ್ಯಕರ್ತರ ಪಾತ್ರ: ಮನೋವೈದ್ಯಕೀಯ ಕ್ಷೇತ್ರದಲ್ಲಿ ಮನೋವೈದ್ಯರು ಮನೋಸಾಮಾಜಿಕ ವಿಷಯಗಳಿಗೆ ಅತಿ ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತಿದ್ದಾರೆ. ಕಾರಣ, ಮಾನಸಿಕ ಕಾಯಿಲೆಗಳು ಕೇವಲ ಜೈವಿಕ ಕಾರಣಗಳಿಂದ ಬರದೇ (ಉದಾ: ಮಿದುಳಿನ ನರವಾಹಕಗಳಲ್ಲಿ ಕೆಲವು ರಸಾಯನಿಕ ಕ್ರಿಯೆಗಳಲ್ಲಿ ಬದಲಾವಣೆ) ಸಾಮಾಜಿಕ ಪರಿಸರದಲ್ಲಿ ಅನೇಕ ನಕಾರಾತ್ಮಕ ಅಂಶಗಳು ವ್ಯಕ್ತಿಯ ಮನಸ್ಥಿತಿಯ ಮೇಲೆ ಪರಿಣಾಮ ಬೀರಿ ಮಾನಸಿಕ ಕಾಯಿಲೆ ಬರುತ್ತದೆ. ಅತಿಯಾದ ಒತ್ತಡಗಳು, ಹೊಂದಾಣಿಕೆ ಸಮಸ್ಯೆಗಳು, ದಾಂಪತ್ಯದ ಸಮಸ್ಯೆಗಳು, ಆತ್ಮೀಯರ ಅಗಲಿಕೆ, ಕಾನೂನು ಸಮಸ್ಯೆಗಳು, ಬಾಲ್ಯದ ಕಹಿ ಅನುಭವಗಳು, ಶೋಷಣೆ ಇತ್ಯಾದಿ ಕಾರಣಗಳು ಕೂಡ ಮಾನಸಿಕ ಕಾಯಿಲೆ ಬರಲು ಕಾರಣಗಳು ಆಗುತ್ತವೆ. ಹೀಗಾಗಿ, ಮನೋವೈದ್ಯಕೀಯ ಸಮಾಜಕಾರ್ಯಕರ್ತರು ಮನೋಸಾಮಾಜಿಕ ಅಂಶಗಳಿಗೆ ಪ್ರಾಮುಖ್ಯತೆಯನ್ನು ನೀಡಿ ಮಾನಸಿಕ ಕಾಯಿಲೆಗೆ ಕಾರಣವಾದ ಅಂಶಗಳ ಜೊತೆ ರೋಗಿ ಹಾಗೂ ರೋಗಿಯ ಸಂಬಂಧಿಕರ ಜೊತೆ ಚರ್ಚಿಸುತ್ತಾರೆ. ಮಾನಸಿಕ ಕಾಯಿಲೆಗೆ ಒಳಗಾದ ವ್ಯಕ್ತಿಯ ಸಮಗ್ರ ಮಾಹಿತಿಯನ್ನು ಸಂಗ್ರಹಿಸಿ, ರೋಗಿಗೆ ಹಾಗೂ ರೋಗಿಯ ಸಂಬಂಧಿಕರಿಗೆ ಬೇಕಾದ ಮಾಹಿತಿಯನ್ನು ಮತ್ತು ಮಾನಸಿಕ ಸ್ಥೆರ್ಯವನ್ನು ಮನೋವೈದ್ಯಕೀಯ ಸಮಾಜಕಾರ್ಯಕರ್ತರು ಒದಗಿಸುತ್ತಾರೆ. ಮನೋ-ಸಾಮಾಜಿಕ ಮಧ್ಯಸ್ಥಿಕೆಗಳಾದ (Psychosocial Interventions) ಮನೋಶಿಕ್ಷಣ, ಆಪ್ತಸಮಾಲೋಚನೆ, ಕೌಟಂಬಿಕ ಚಿಕಿತ್ಸೆ, ಗುಂಪು ಚಿಕಿತ್ಸೆ, ವರ್ತನಾ ಚಿಕಿತ್ಸೆ, ಒತ್ತಡ ನಿರ್ವಹಣಾ ತಂತ್ರಗಳು ಹಾಗೂ ಪುನರ್ವಸತಿ ಮುಂತಾದವುಗಳಿಂದ ರೋಗಿಯನ್ನು ಮಾನಸಿಕವಾಗಿ ಹಾಗೂ ಆತ್ಮವಿಶ್ವಾಸದಿಂದ ಎದುರಿಸಿ ಹೇಗೆ ಜೀವನ ನಡೆಸಬೇಕೆಂದು ಸಿದ್ಧಗೊಳಿಸುತ್ತಾರೆ.

ಮನೋವೈದ್ಯಕೀಯ ಸಮಾಜಕಾರ್ಯರ್ತರು ಮಾನಸಿಕ ಕಾಯಿಲೆಗಳನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಸಾರ್ವಜನಿಕರಿಗೆ ಮತ್ತು ಮಾನಸಿಕ ರೋಗಗಳ ಅರಿವಿನ ಕುರಿತು ಕಾರ್ಯಕ್ರಮಗಳನ್ನು ಸಮುದಾಯಗಳಲ್ಲಿ ಹಮ್ಮಿಕೊಳ್ಳುವ ಮೂಲಕ ಪ್ರಮುಖ ಪಾತ್ರವಹಿಸುತ್ತಾರೆ. ಮಾನಸಿಕ ಕಾಯಿಲೆಗಳನ್ನು ತಡೆಗಟ್ಟುವಲ್ಲಿ ಪ್ರಮುಖ ವಿಷಯಗಳಾದ ರಕ್ತ ಸಂಬಂಧಗಳಲ್ಲಿ ಮದುವೆ, ಗರ್ಭಿಣಿ ಸ್ತ್ರೀಯರ ಯೋಗಕ್ಷೇಮ, ಸಮಯಕ್ಕೆ ಅನುಸಾರವಾಗಿ ವೈದ್ಯಕೀಯ ಚಿಕಿತ್ಸೆಯನ್ನು ಪಡೆದುಕೊಳ್ಳುವುದು, ಮಗುವಿನ ಲಾಲನೆ ಪಾಲನೆಯ ಬಗ್ಗೆ, ಮಗುವಿನ ಶಿಕ್ಷಣದ ಬಗ್ಗೆ ಮುತುವರ್ಜಿ ವಹಿಸುವುದು, ಅತ್ಯುತ್ತಮ ಜೀವನ ಶೈಲಿಯನ್ನು ಮಾರ್ಪಾಡು ಮಾಡಿಕೊಳ್ಳುವುದು ಮುಂತಾದ ವಿಷಯಗಳನ್ನು ಒಳಗೊಂಡಂತೆ ಮಾನಸಿಕ ಆರೋಗ್ಯದ ಅರಿವಿನ ಕುರಿತು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರಲ್ಲಿ ಮಾನಸಿಕ ಆರೋಗ್ಯದ ಮಹತ್ವದ ಬಗ್ಗೆ ತಿಳಿಸಿಕೊಡುತ್ತಾರೆ.

ಸಮಾಜಕಾರ್ಯ ವಿಧಾನಗಳಾದ ವ್ಯಕ್ತಿಗತ ಸಮಾಜಕಾರ್ಯ, ವೃಂದಗತ ಸಮಾಜಕಾರ್ಯ, ಸಮುದಾಯ ಸಂಘಟನೆ ಮತ್ತು ಸಾಮಾಜಿಕ ಸಂಶೋಧನೆ ವಿಧಾನಗಳನ್ನು ರೋಗಿಯ ಚಿಕಿತ್ಸಾ ಪ್ರಕ್ರಿಯೆಯಲ್ಲಿ ಅಳವಡಿಸಿಕೊಂಡು, ಮಾನಸಿಕ ರೋಗಿಗಳನ್ನು ಸಮುದಾಯದ ಮುಖ್ಯ ವಾಹಿನಿಗೆ ತರಲು ಜವಾಬ್ದಾರಿಯುತ ಪಾತ್ರವನ್ನು ನಿರ್ವಹಿಸುತ್ತಾರೆ. ಸಾಮಾಜಿಕ ಸಂಶೋಧನೆ ವಿಧಾನದ ಮೂಲಕ ಮನೋಸಾಮಾಜಿಕ ಸಮಸ್ಯೆಗಳ ಬಗ್ಗೆ ಸಂಶೋಧನೆಗಳನ್ನು ಮಾಡಿ, ರೋಗಿಯನ್ನು ಗುಣಮುಖರನ್ನಾಗಿ ಮಾಡಲು ಪ್ರಯತ್ನಿಸುತ್ತಾರೆ. ರೋಗಿಯ ಚಿಕಿತ್ಸಾ ಪ್ರಕ್ರಿಯೆಯಲ್ಲಿ ಮನೋಚಿಕಿತ್ಸಕನಾಗಿ, ಸಂಯೋಜಕರಾಗಿ, ಮಾರ್ಗದರ್ಶಕರಾಗಿ, ಕಾನೂನು ಸಲಹೆಗಾರನಾಗಿ, ಆಪ್ತಸಮಾಲೋಚಕನಾಗಿ ಪ್ರಮುಖಪಾತ್ರ ನಿರ್ವಹಿಸುತ್ತಾರೆ.

ಮಾನಸಿಕ ರೋಗಿಗಳು ಹಾಗೂ ಅವರ ಹಕ್ಕುಗಳು: ಮಾನಸಿಕ ರೋಗಿಗಳು ಕೂಡ ಇತರರಂತೆ ಹಕ್ಕುಗಳನ್ನು ಹೊಂದಿರುತ್ತಾರೆ. ಬದುಕುವ ಹಕ್ಕು, ಅಭಿವ್ಯಕ್ತಿಪಡಿಸುವ ಹಕ್ಕು, ಆಸ್ತಿಯ ಹಕ್ಕು, ಧಾರ್ಮಿಕ ಹಕ್ಕು, ಸಮಾನತೆಯ ಹಕ್ಕು ಹೀಗೆ ಇತರರು ಹೊಂದಿರುವಂತೆ ಮಾನಸಿಕ ರೋಗಿಗಳು ಕೂಡ ಹಕ್ಕುಗಳನ್ನು ಹೊಂದಿರುತ್ತಾರೆ. ಮಾನಸಿಕ ಅಸ್ವಸ್ಥತೆಯ ಸಂದರ್ಭದಲ್ಲಿ ಮಾತ್ರ ಅವರು ನಿರ್ಧಾರವನ್ನು ತೆಗೆದುಕೊಳ್ಳುವ ಸಾಮಥ್ರ್ಯವನ್ನು ಹೊಂದಿರುವುದಿಲ್ಲ. ಮನೋವೈದ್ಯಕೀಯ ಚಿಕಿತ್ಸಾ ತಂಡವು ಕೇವಲ ಚಿಕತ್ಸೆ ಮತ್ತು ಆಪ್ತಸಮಾಲೋಚನೆಗೆ ಆದ್ಯತೆ ನೀಡದೇ ಮನೋರೋಗಿಗಳ ಹಕ್ಕುಗಳನ್ನು ಸಂರಕ್ಷಣೆ ಮಾಡುವುದಕ್ಕೆ ಪ್ರಾಮುಖ್ಯತೆಯನ್ನು ನೀಡುತ್ತದೆ. ಮಾನಸಿಕ ರೋಗಿಗಳ ಹಕ್ಕುಗಳನ್ನು ಸಂರಕ್ಷಣೆ ಮಾಡಲು ಮನೋವೈದ್ಯಕೀಯ ಸಮಾಜಕಾರ್ಯಕರ್ತರು ವಿಶೇಷ ಪಾತ್ರ ವಹಿಸುವರು.

ಬಹುತಜ್ಞರ ಚಿಕಿತ್ಸಾ ತಂಡವಾಗಿ ಮನೋವೈದ್ಯಕೀಯ ವೃತ್ತಿಪರರು ಮತ್ತು ಇವರ ಪಾತ್ರ: ಮನೋರೋಗಿಯನ್ನು ಕೇವಲ ಒಬ್ಬರು ಮಾತ್ರ ಪರೀಕ್ಷಿಸುವುದಿಲ್ಲ. ಮನೋವೈದ್ಯರು, ಚಿಕಿತ್ಸಕ ಮನಶಾಸ್ತ್ರಜ್ಞರು, ಮನೋವೈದ್ಯಕೀಯ ಸಮಾಜ ಕಾರ್ಯಕರ್ತರು, ಮನೋವೈದ್ಯಕೀಯ ಶೂಶ್ರುಷಕರು, ಔದ್ಯೋಗಿಕ ಚಿಕಿತ್ಸಕರು, ಭೌತಿಕ ಚಿಕಿತ್ಸಕರು ಇವರುಗಳು ಮನೋವೈದ್ಯಕೀಯ ಚಿಕಿತ್ಸಾ ಭಾಗದ ತಂಡವಾಗಿ ಕಾರ್ಯನಿರ್ವಹಿಸುವರು. ಮಾನಸಿಕ ರೋಗಿಗಳನ್ನು ಗುಣಪಡಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವುದು ಮನೋವೈದ್ಯಕೀಯ ವೃತ್ತಿಪರರ ಪ್ರಮುಖ ಗುರಿಯಾಗಿರುತ್ತದೆ.

ಮನೋವೈದ್ಯಕೀಯ ಶುಶ್ರೂಷಕರ ಪಾತ್ರ (Psychiatric Nurses):   ಮನೋರೋಗಿಯು ಒಳರೋಗಿಯಾಗಿ ದಾಖಲಾದಾಗ ರೋಗಿಗೆ ಮನೋವೈದ್ಯರು ನೀಡಿದ ಮಾತ್ರೆಗಳನ್ನು ವಾರ್ಡ್‍ಗಳಲ್ಲಿ ಸೂಕ್ತ ಆರೈಕೆಯನ್ನು ಮನೋವೈದ್ಯಕೀಯ ಶುಶ್ರೂಷಕರು ಮಾಡುತ್ತಾರೆ. ಇದಲ್ಲದೇ, ಇವರು ಸಲಹೆಗಾರರಾಗಿ, ಆಪ್ತಸಮಾಲೋಚಕರಾಗಿ, ಕಾನೂನು ಸಲಹೆಗಾರರಾಗಿ, ಚಿಕಿತ್ಸಕರಾಗಿ, ಮನೋವೈದ್ಯರು ಮತ್ತು ರೋಗಿಗಳ ಆರೈಕೆದಾರರ ನಡುವಿನ ಸೇತುವೆ ಆಗಿ ಕಾರ್ಯನಿರ್ವಹಿಸುತ್ತಾರೆ. ರೋಗಿಗೆ ವಿದ್ಯುತ್ ಕಂಪನ ಚಿಕಿತ್ಸೆ ನೀಡಿದಾಗ ಶುಶ್ರೂಷಕರು ರೋಗಿಗೆ ವಿಶೇಷವಾದ ಕಾಳಜಿಯನ್ನು ವಹಿಸುತ್ತಾರೆ. ರೋಗಿಯ ದೈನಂದಿನ ಚಟುವಟಿಕೆಗಳ ಬಗ್ಗೆ ಮಹತ್ವವನ್ನು ನೀಡಿ ರೋಗಿಯು ಆರೋಗ್ಯದ ಬಗ್ಗೆ ವಿಶೇಷ ಕಾಳಜಿಯನ್ನು ತೆಗೆದುಕೊಳ್ಳುವಂತೆ ಪ್ರೇರಣೆ ನೀಡುತ್ತಾರೆ. ರೋಗಿಯ ಮಾನವ ಹಕ್ಕುಗಳ ಸಂರಕ್ಷಣೆ ಜವಾಬ್ದಾರಿಯನ್ನು ಮಾಡುವುದು, ರೋಗಿಗೆ ಮನರಂಜನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು, ಸಂಬಂಧಿಸಿದ ವಾರ್ಡ್‍ಗಳಲ್ಲಿ ರೋಗಿಗೆ ವ್ಯಾಯಾಮವನ್ನು ಮಾಡಿಸುವುದು ಮುಖ್ಯವಾದ ಜವಾಬ್ದಾರಿಗಳು ಶುಶ್ರೂಷಕರದ್ದಾಗಿರುತ್ತವೆ. ರೋಗಿಯು ದಾಖಲಾದ ನಂತರದಿಂದ ಹಿಡಿದು ಆಸ್ಪತ್ರೆಯಿಂದ ಬಿಡುಗಡೆ ಆಗುವವರೆಗೆ ರೋಗಿಯ ಸಂಬಂಧಿಕರಿಗೆ ಚಿಕಿತ್ಸೆಯ ಬಗೆಗಿನ ಪ್ರಕ್ರಿಯೆಯ ಬಗ್ಗೆ ವಿವರಿಸುವರು. 

ಚಿಕಿತ್ಸಕ ಮನಶಾಸ್ತ್ರಜ್ಞರ ಪಾತ್ರ (Clinical Psychologist):  ಮನೋವೈದ್ಯರ ಸೂಚನೆಯ ಮೇರೆಗೆ ಮನೋರೋಗಿಗೆ ಕೆಲವು ಮಾನಸಿಕ ಪರೀಕ್ಷೆಗಳು, ವ್ಯಕ್ತಿತ್ವದ ಪರೀಕ್ಷೆಗಳು ಹಾಗೂ ಇತರ ಪರೀಕ್ಷೆಗಳನ್ನು ಚಿಕಿತ್ಸಕ ಮನಶಾಸ್ತ್ರಜ್ಞರು ಮಾಡುವರು. ರೋಗಿಗೆ ಅವಶ್ಯಕವಿರುವ ಮನೋಚಿಕಿತ್ಸೆ, ವರ್ತನಾ ಚಿಕತ್ಸೆ, ಪ್ರಜ್ಞಾಪೂರ್ವಕ ವರ್ತನಾ ಚಿಕಿತ್ಸೆ, ಆಪ್ತಸಮಾಲೋಚನೆ ಮುಂತಾದ ಚಿಕಿತ್ಸೆಗಳನ್ನು ಮಾಡುವರು.

ಮನೋವೈದ್ಯರ ಪಾತ್ರ (Psychiatrist):  ಮನೋವೈದ್ಯರು ರೋಗಿಯು ಮಾನಸಿಕ ಲಕ್ಷಣಗಳಿಂದ ಬಳಲುತ್ತಿರುವುದನ್ನು ನಿರ್ಧರಿಸಿ ಸೂಕ್ತ ಮಾತ್ರೆಗಳನ್ನು ನೀಡುವರು. ಮನೋರೋಗವನ್ನು ಪತ್ತೆ ಹಚ್ಚಲು ಸೂಕ್ತ ಸಿ.ಟಿ ಸ್ಕ್ಯಾನ್, ಎಂ.ಆರ್.ಐ ಸ್ಕ್ಯಾನ್ ವಿಧಾನಗಳ ಮುಖಾಂತರ ಆಂಗಿಕ ಮನೋರೋಗವೇ ಅಥವಾ ಆಂಗಿಕವಲ್ಲದ ಮನೋರೋಗವೇ ಎಂಬುದನ್ನು ನಿರ್ಧರಿಸುತ್ತಾರೆ. ಮನೋರೋಗಿಗೆ ಕೇವಲ ಮಾತ್ರೆಗಳನ್ನು ನೀಡದೇ ಚಿಕಿತ್ಸೆಯನ್ನು ಪ್ರಾರಂಭಿಸಿದ ಹಂತದಿಂದ ಹಿಡಿದು ಗುಣಮುಖನಾಗುವವರೆಗೆ ಅವನ ಆತ್ಮಸ್ಥೈರ್ಯವನ್ನು ಹೆಚ್ಚಿಸುವ ಬಹುಮುಖ್ಯವಾದ ಜವಬ್ದಾರಿಯನ್ನು ಮನೋವೈದ್ಯರು ನಿರ್ವಹಿಸುತ್ತಾರೆ. ರೋಗಿಗೆ ವಿದ್ಯುತ್ ಕಂಪನ ಚಿಕಿತ್ಸೆ ಅವಶ್ಯವೆನಿಸಿದ್ದಲ್ಲಿ ರೋಗಿಗೆ ಹಾಗೂ ಅವನ ಸಂಬಂಧಿಕರಿಗೆ ಸರಳವಾದ ರೀತಿಯಲ್ಲಿ ವಿದ್ಯುತ್ ಕಂಪನ ಚಿಕಿತ್ಸೆಯ ಬಗ್ಗೆ ವಿವರಿಸಿ ಮತ್ತು ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವ ಕಾರ್ಯವನ್ನು ಮನೋವೈದ್ಯರು ಯಶಸ್ವಿಯಾಗಿ ನಿರ್ವಹಿಸುತ್ತಾರೆ.

ಔದ್ಯೋಗಿಕ ಚಿಕಿತ್ಸಕರ ಪಾತ್ರ (Occupational Therapist): ಮನೋರೋಗಿಗೆ ಕೌಶಲ್ಯ ತರಬೇತಿಯನ್ನು ನೀಡಿ ದಿನ ಪೂರ್ತಿ ಚಟುವಟಿಕೆಯಿಂದ ಇರುವಂತೆ ರೋಗಿಯನ್ನು ನೋಡಿಕೊಳ್ಳುತ್ತಾರೆ.

ಭೌತಿಕ ಚಿಕಿತ್ಸಕರ ಪಾತ್ರ (Physiotherapist): ಭೌತಿಕ ಚಿಕಿತ್ಸಕರು ಮಾನಸಿಕ ಮತ್ತು ನರ ರೋಗದಿಂದ ಬಳಲುತ್ತಿರುವ ರೋಗಿಗಳಿಗೆ ಭೌತಿಕ ಚಿಕಿತ್ಸೆಯು ಅವಶ್ಯಕವಿದ್ದಲ್ಲಿ ಸಂಬಂಧಿಸಿದ ತಜ್ಞರೊಂದಿಗೆ ಚರ್ಚಿಸಿ ಸೂಕ್ತ ಭೌತಿಕ ಚಿಕಿತ್ಸೆಯನ್ನು ನೀಡಿರುತ್ತಾರೆ.

ಮನೋವೈದ್ಯಕೀಯ ಸಮಾಜಕಾರ್ಯಕರ್ತರಿಗೆ ಇರುವ ಸವಾಲುಗಳು: ಮನೋರೋಗಿಗಳು ಬಡತನದ ಹಿನ್ನಲೆಯನ್ನು ಹಾಗೂ ಹಣಕಾಸಿನ ಸಮಸ್ಯೆಗಳನ್ನು ಎದುರಿಸುವಂತಹ ಸ್ಥಿತಿಗಳು, ಮಾನವ ಹಕ್ಕುಗಳು ಪದೇ ಪದೇ ಉಲ್ಲಂಘನೆ, ಪದೇ ಪದೇ ಮಾತ್ರೆಗಳನ್ನು ತೆಗೆದುಕೊಳ್ಳಲು ನಿರಾಕರಿಸುವುದು, ಕುಟುಂಬದವರ ಅಸಹಕಾರ, ನೆರೆಹೊರೆಯವರ ನಕಾರಾತ್ಮಕ ಮನೋಧೋರಣೆಗಳು, ನಿರ್ಲಕ್ಷತನ, ಪದೇ ಪದೇ ರೋಗಿಯನ್ನು ಕೀಳು ಭಾವನೆಯಿಂದ ನೋಡುವುದು ಹಾಗೂ ಪರಿಸರದ ಅನೇಕ ಅಂಶಗಳು ಮಾನಸಿಕ ರೋಗಿಗೆ ಮಾನಸಿಕ ಯಾತನೆ ಉಂಟುಮಾಡುತ್ತಿದ್ದರೆ ಇಂತಹ ಸಂದರ್ಭಗಳಲ್ಲಿ ಮನೋವೈದ್ಯಕೀಯ ಸಮಾಜಕಾರ್ಯರ್ತರು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಸಮುದಾಯದಲ್ಲಿ ಮತ್ತೆ ಎಲ್ಲರಂತೆ ಜೀವನ ನಿರ್ವಹಿಸುವಂತೆ ಮಾಡುವಲ್ಲಿ ಸವಾಲುಗಳನ್ನು ಎದುರಿಸುತ್ತಾರೆ. ತೀವ್ರತೆರನಾದ ಮಾನಸಿಕ ಕಾಯಿಲೆಯುಳ್ಳ ವ್ಯಕ್ತಿಗಳು ದೀರ್ಘಕಾಲಿನವರೆಗೆ ಚಿಕಿತ್ಸೆಯನ್ನು ಪಡೆಯುವ ಅನಿವಾರ್ಯತೆಯಿರುವುದರಿಂದ ರೋಗಿಗೆ ದೀರ್ಘಕಾಲದವರೆಗೆ ಉತ್ತಮ ಪರಿಸರವನ್ನು ಹೊಂದುವುದು ಕೂಡ ಅನಿವಾರ್ಯತೆಯಾಗುತ್ತದೆ.

ಮಾನಸಿಕ ಅಸ್ವಸ್ಥತೆ ತಡೆಗಟ್ಟುವಲ್ಲಿ ಮತ್ತು ಮಾನಸಿಕ ಆರೋಗ್ಯವನ್ನು ಉತ್ತೇಜಿಸುವಲ್ಲಿ ಮನೋವೈದ್ಯಕೀಯ ವೃತ್ತಿಪರರ ಪಾತ್ರ: ದಿನದಿಂದ ದಿನಕ್ಕೆ ತಲೆದೋರುತ್ತಿರುವ ಹೊಸ ಹೊಸ ಸಮಸ್ಯೆಗಳು ವ್ಯಕ್ತಿಗಳನ್ನು ಮಾನಸಿಕ ಆರೋಗ್ಯದಿಂದ ಜೀವಿಸಲು ಆಗದಿರುವಂತೆ ಮಾಡುತ್ತವೆ. ಮನೋವೈದ್ಯಕೀಯ ವೃತ್ತಿಪರರು ಮಾನಸಿಕ ಆರೋಗ್ಯದ ಉತ್ತೇಜನಕ್ಕಾಗಿ ಸಮುದಾಯದಲ್ಲಿ ಮಾನಸಿಕ ಆರೋಗ್ಯದ ಅರಿವಿನ ಕುರಿತು ಮತ್ತು ವಿವಿಧ ಮಾನಸಿಕ ಕಾಯಿಲೆಗಳ ಬಗ್ಗೆ ಜನರಲ್ಲಿ ಅರಿವನ್ನು ಮೂಡಿಸುವಂತಹ ಕಾರ್ಯಗಳನ್ನು ಮಾಡುತ್ತಾರೆ. ಇಂದು ಮನೋವೈದ್ಯಕೀಯ ವೃತ್ತಿಪರರು ಆಸ್ಪತ್ರೆಗಳಲ್ಲಿ ರೋಗಿಗಳು ಮತ್ತು ಅವರ ಆರೈಕೆದಾರರ ಮನೋಸಾಮಾಜಿಕ ಸಮಸ್ಯೆಗಳ ಬಗ್ಗೆ ಪ್ರಾಮುಖ್ಯತೆಯನ್ನು ನೀಡುವುದರ ಜೊತೆಗೆ ಸಂಶೋಧನೆ, ಲೇಖನಗಳು, ಕಾರ್ಯಾಗಾರಗಳು, ವಿಚಾರ ಸಂಕೀರ್ಣಗಳು, ಮನೋವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಪಟ್ಟ ಹೊಸ ಮಾಪನಗಳನ್ನು ಅಭಿವೃದ್ದಿಪಡಿಸುವುದು, ವಿಶ್ವವಿದ್ಯಾಲಯಗಳು, ಕಾಲೇಜುಗಳು, ಶಾಲೆಗಳಲ್ಲಿ ಹಾಗೂ ಇತರ ಪ್ರಮುಖ ಸ್ಥಳಗಳಲ್ಲಿ ಮಾನಸಿಕ ಆರೋಗ್ಯದ ಅರಿವಿನ ಕುರಿತು ಜನಜಾಗೃತಿಯನ್ನು ಮಾಡುತ್ತಿದ್ದಾರೆ. ಇದು ಹಿಂದಿನ ಕೆಲವು ವರ್ಷಗಳಿಗೆ ಹೊಲಿಕೆ ಮಾಡಿದ್ದಲ್ಲಿ, ಇಂದು ಹೊಸ ಹೊಸ ಬಗೆಯ ರೀತಿಯಲ್ಲಿ ಜನರಿಗೆ ಸರಳವಾಗಿ ಮತ್ತು ಸುಲಭವಾಗಿ ಮಾನಸಿಕ ಕಾಯಿಲೆಗಳನ್ನು ತಿಳಿದುಕೊಳ್ಳಲು ಮನೋವೈದ್ಯಕೀಯ ವೃತ್ತಿಪರರು ಶ್ರಮವಹಿಸುತ್ತಿದ್ದಾರೆ.
 
ಅಡಿಟಿಪ್ಪಣಿಗಳು
  1. ಡಾ.ಸಿ.ಆರ್.ಚಂದ್ರಶೇಖರ, ಮನೋರೋಗಕ್ಕೆ ಚಿಕಿತ್ಸೆ ಏನು? ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೇಟ್ ಲಿಮಿಟೆಡ್. 2013
  2. ಡಬ್ಲ್ಯು.ಹೆಚ್.ಓ, ಇಂಟರ್ ನ್ಯಾಷನಲ್ ಕ್ಲಾಸಿಫೇಕೆಶನ್ ಆಫ್ ಮೆಂಟಲ್ ಬಿಹೆವಿಯರಲ್ ಡಿಸಾರ್ಡರ್ಸ್: ಕ್ಲಿನಿಕಲ್ ಡಿಸ್ಕ್ರಿಪ್ಸೆನ್ಸ್ & ಡಯಗ್ನೊಸ್ಟಿಕ್ ಗೈಡ್ ಲೈನ್ಸ್. ಜಿನೇವಾ, 1992
  3. ಜಿ.ಆರ್.ಸತ್ಯಲಿಂಗರಾಜು, ಮನೋವಿಜ್ಞಾನ, ಚೇತನ ಬುಕ್ ಹೌಸ್, ಮೈಸೂರು, 2011
 
ಶ್ರೀ ಅಶೋಕ ಎಸ್. ಕೋರಿ
ಮನೋವೈದ್ಯಕೀಯ ಸಮಾಜಕಾರ್ಯಕರ್ತರು, ಮನೋವೈದ್ಯಕೀಯ ಸಮಾಜಕಾರ್ಯ ವಿಭಾಗ, ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನಗಳ ಸಂಸ್ಥೆ (ಡಿಮ್ಹಾನ್ಸ್), ಧಾರವಾಡ.
 
ಡಾ. ಮಹೇಶ್ ದೇಸಾಯಿ
ನಿರ್ದೇಶಕರು (ಪ್ರಭಾರಿ), ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನಗಳ ಸಂಸ್ಥೆ (ಡಿಮ್ಹಾನ್ಸ್), ಧಾರವಾಡ ಮತ್ತು ಪ್ರಾಧ್ಯಾಪಕರು, ಮನೋರೋಗ ವಿಭಾಗ, ಕಿಮ್ಸ್, ಹುಬ್ಬಳ್ಳಿ.
 
ಡಾ. ಸೋಮಶೇಖರ ಬಿಜ್ಜಳ
ಮನೋವೈದ್ಯರು, ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನಗಳ ಸಂಸ್ಥೆ (ಡಿಮ್ಹಾನ್ಸ್), ಧಾರವಾಡ.

0 Comments



Leave a Reply.


    Categories

    All
    ಇತರೆ
    ಎನ್‍ಜಿಓ
    ಪರಿಸರ
    ವ್ಯಕ್ತಿಚಿತ್ರಗಳು
    ಸಮಾಜಕಾರ್ಯ
    ಸಮುದಾಯ ಸಂಘಟನೆ
    ಸಂಪುಟ 1
    ಸಂಪುಟ 2
    ಸಂಪುಟ 3
    ಸಂಪುಟ 4
    ಸಂಪುಟ 5
    ಸಂಪುಟ 6
    ಸಂಪುಟ 7
    ಸಂಪುಟ 8
    ಸಂಪುಟ 9



    Six-Days
    Labour Laws & Labour Codes Certification Program

    Know More

    Picture
    Know More

    Picture
    WhatsApp

    Picture

    MHR LEARNING ACADEMY

    Get it on Google Play store
    Download App
    Online Courses

    Picture
    30,000 HR PROFESSIONALS ARE CONNECTED THROUGH OUR NIRATHANKA HR GROUPS.
    YOU CAN ALSO JOIN AND PARTICIPATE IN OUR GROUP DISCUSSIONS.
    Join HR Online Groups


    Social Work Foot Prints


    RSS Feed


SITE MAP


Site

  • HOME
  • ABOUT US
  • BLOG
  • COLLABORATE WITH NIRUTA PUBLICATIONS
  • EDITOR'S BLOG
  • HR BLOG
  • PUBLICATION WITH US
  • TRANSLATION & TYPING
  • VIDEOS

TRAINING

  • CERTIFICATE TRAINING COURSES
  • TRAINING PROGRAMMES

nIRATHANKA cLUB hOUSE

  • NIRATHANKA CLUB HOUSE

JOB

  • CURRENT JOB OPENINGS
  • FIND FREELANCE JOBS​
  • FREELANCE SPOKEN ENGLISH TRAINER
  • FREELANCE TRANSLATOR

HR SERVICES

  • ​COMPLIANCE SUPPORT
  • CONSULTING
  • CONTRACT LABOUR
  • CONTRACT LABOUR LICENCE & CONSULTING
  • DOMESTIC ENQUIRY
  • DRAFTING OF LEGAL DOCUMENTS
  • HR AND COMPLIANCE AUDIT
  • HUMAN RESOURCE PROCESS AND POLICY FORMULATION
  • ISO CERTIFICATION​
  • LEGAL ASSISTANCE
  • ORGANISATIONAL AND JOB DESIGNS
  • PAYROLL
  • RECRUITMENT & STAFFING SERVICES
  • STAFFING - WHITE & BLUE COLLAR
  • ​STANDING ORDERS CERTIFICATION
  • ​TRADEMARK

OTHER SERVICES

  • ​APARTMENT RESIDENTS WELFARE ASSOCIATION REGISTRATION
  • LICENCES AND NOCs FROM FIRE, AGRICULTURE, STATE EXCISE DEPARTMENTS
  • MSME REGISTRATION
  • ​NGO / TRUST / SOCIETY / ASSOCIATION, COOPERATIVE SOCIETY & PVT. LTD. COMPANY REGISTRATION
  • ​SHOPS & ESTABLISHMENT REGISTRATION​

NIRATHANKA

  • ​CSR
  • TREE PLANTATION PROJECT

POSH

  • OUR ASSOCIATES
  • OUR CLIENTS
  • POSH
  • POSH BLOG​
  • WANT TO BECOME AN EXTERNAL MEMBER FOR AN IC?

OUR OTHER WEBSITES

  • WWW.HRKANCON.COM
  • WWW.MHRSPL.COM
  • WWW.NIRATANKA.ORG​

Subscribe



JOIN OUR ONLINE GROUPS


JOIN WHATSAPP BROADCAST


ONLINE STORE


Copyright Niruta Publications 2021,    Website Designing & Developed by: www.mhrspl.com