ಪ್ರದೇಶದ ಸಮಗ್ರ ಅಭಿವೃದ್ಧಿ ಮತ್ತು ಯೋಜನೆ: ಸಂಸದರ ಆದರ್ಶ ಗ್ರಾಮ ಯೋಜನೆಗೆ ಆಯ್ಕೆಯಾದ ಹಾರೋಬೆಳವಾಡಿ ಗ್ರಾಮ.....7/24/2017 (Integrated Area Development and Planning: A Geographical Study of Harobelavadi Gram Panchayath, selected for Sansad Adarsh Gram Yojana (SAGY)) ಪೀಠಿಕೆ: ಆದರ್ಶ ಗ್ರಾಮದ ಪರಿಕಲ್ಪನೆ ಹೊಸದೇನೂ ಅಲ್ಲ, ಪ್ರಾಚೀನ ಕಾಲದಿಂದಲೂ ಗ್ರಾಮಗಳನ್ನಾಗಲೀ, ರಾಜ್ಯವನ್ನಾಗಲೀ ಆದರ್ಶವಾಗಿಸುವ ಗೀಳು ರಾಜ-ಮಹಾರಾಜರಿಂದ ಸರಪಂಚರವರೆಗೂ ವ್ಯಾಪಿಸಿಕೊಂಡಿದೆ. ಮೌಲ್ಯಾಧಾರಿತ ಸಮಾಜ ಮತ್ತು ವಾತಾವರಣಗಳ ನಿರ್ಮಾಣಕ್ಕಾಗಿ ಮಾನವ ಸಂಪನ್ಮೂಲದ ಬಂಡವಾಳ, ಸಾಮಾಜಿಕ ಬಂಡವಾಳ ಮತ್ತು ಭೌತಿಕ ಬಂಡವಾಳಗಳ ಹೂಡುವಿಕೆ ಅನಿವಾರ್ಯವಾಗುತ್ತದೆ. ಆಯಾ ಕಾಲಮಾನಗಳಲ್ಲಿ ಮಿಂಚಿ ಮಾಯವಾದ ಅನೇಕ ನೇತಾರರು ಈ ಪ್ರಯತ್ನದಲ್ಲಿ ಕೆಲ ಮಟ್ಟಿನ ಸಾಧನೆಗಳನ್ನು ಮಾಡಿ ಹೆಸರುವಾಸಿಯಾದರು, ಇನ್ನು ಕೆಲವರು ಎಲೆಯ ಮರೆಯ ಕಾಯಿಯಂತೆ ತಮ್ಮ ಅಮೋಘ ಕೊಡುಗೆಯನ್ನು ಸಮಾಜಕ್ಕೆ ನೀಡಿದರು. ಕೆಲವರು ಕನಸಿನ ಸೌಧಗಳನ್ನು ಕಟ್ಟಿ ಕಣ್ಮರೆಯಾದರು. ಅಂಥ ನೇತಾರರಲ್ಲಿ ಮಹಾತ್ಮಾ ಗಾಂಧೀಜಿಯೂ ಒಬ್ಬರು. ತಂತ್ರಜ್ಞಾನಗಳ ಆವಿಷ್ಕಾರ ಪ್ರಾರಂಭವಾಗಿದ್ದರೂ ಭಾರತದಲ್ಲಿ ಲಭ್ಯವಿರುವ ಅಗಾಧ ಪ್ರಮಾಣದ ಮಾನವ ಸಂಪನ್ಮೂಲ, ಸಾಂಪ್ರದಾಯಿಕ ವ್ಯವಸಾಯ, ಸಂಪನ್ಮೂಲಗಳಾಧಾರಿತ ಗುಡಿ-ಕೈಗಾರಿಕೆಗಳ ಪ್ರಾಮುಖ್ಯತೆಯನ್ನರಿತೇ ಇರಬೇಕು, ರಾಮ ರಾಜ್ಯದ ಕನಸನ್ನು ಗ್ರಾಮ್ ಸ್ವರಾಜ್ದ ಹೆಸರಿನಲ್ಲಿ ಕಂಡಿದ್ದರು. ಆದರೆ ಅದನ್ನು ನನಸು ಮಾಡಲು ತದನಂತರದ ಎಷ್ಟೋ ರಾಜಕೀಯ ಧುರೀಣರು ಪ್ರಯತ್ನ ಪಟ್ಟು ಅಲ್ಲಲ್ಲಿ ಕೆಲ ಸಣ್ಣ-ಪುಟ್ಟ ಮಾದರಿಗಳನ್ನು ಮೊಳಕೆಯೊಡೆಸಿದರೂ ಪೂರ್ಣ ಪ್ರಮಾಣ ತಲುಪುವಷ್ಟರಲ್ಲಿಯೇ ಪಾಶ್ರ್ವ ಪೀಡಿತವಾಗಿ ಬಿಡುತ್ತವೆ. ಅದಕ್ಕೆ ಕಾರಣ ಹುಡುಕ ಹೋದರೆ ಧುರೀಣರಲ್ಲಿ ಕುಂದಿದ ಆಸಕ್ತಿ, ಸಮುದಾಯದಲ್ಲಿನ ಸಹಕಾರ ಮನೋಭಾವನೆಯ ಕೊರತೆ, ಕಾರ್ಯಾಂಗದ ನಿಷ್ಠೆಯ ಕೊರತೆ, ಆಧುನೀಕರಣದ ತುಡಿತ, ಸಂಪ್ರದಾಯ, ಸಂಸ್ಕೃತಿ, ಸಂಸ್ಕಾರಗಳ ಅನಾದರಣೆ, ಅರ್ಥಕಳೆದುಕೊಂಡಿರುವ ರಾಜಕೀಯದ ಪ್ರವೇಶ ಇತ್ಯಾದಿಗಳು ವೇದ್ಯವಾಗುತ್ತವೆ, ಒಟ್ಟಾರೆ ಮೌಲ್ಯಗಳ ಶಿಥಿಲೀಕರಣವೇ ದೊಡ್ಡ ಸಮಸ್ಯೆಯಾಗಿ ಗೋಚರಿಸುತ್ತದೆ. ಇದನ್ನರಿತೇ ಪ್ರಶಕ್ತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಕಳೆದ ವರ್ಷದ (2014) 68ನೇ ಸ್ವಾತಂತ್ರೋತ್ಸವದ ದಿನ ಆದರ್ಶ ಗ್ರಾಮದ ಪರಿಕಲ್ಪನೆಯನ್ನು ಪುನರುಚ್ಛರಿಸಿ ಪ್ರತಿಯೊಂದು ಲೋಕಸಭಾ ಕ್ಷೇತ್ರದ ಸಾಮಂತ (ಸಂಸದರಿಗೆ)ರಿಗೆ ಪ್ರತೀ ವರ್ಷ ಒಂದೊಂದು ಗ್ರಾಮಗಳನ್ನು ವಿಶೇಷ ಕಾಳಜಿವಹಿಸಿ ಮೇಲ್ಕಾಣಿಸಿದ ಮೂರು ಬಂಡವಾಳಗಳನ್ನು ನಿಷ್ಠೆಯಿಂದ ಹೂಡಿ, 2019 ರಷ್ಟೊತ್ತಿಗೆ ಮೂರು ಗ್ರಾಮ (ಪಂಚಾಯತಿ)ಗಳನ್ನು ಅಥವಾ ಗ್ರಾಮ ಸಮುಚ್ಛಯಗಳನ್ನು ಆದರ್ಶ ಗ್ರಾಮಗಳನ್ನಾಗಿ ಮಾರ್ಪಡಿಸುವ ಜವಾಬ್ದಾರಿಯನ್ನೆ ವಹಿಸಿದ್ದರು. ಈ ಹಿನ್ನಲೆಯಲ್ಲಿ ಧಾರವಾಡ ಲೋಕಸಭಾ ಸದಸ್ಯ ಶ್ರೀ ಪ್ರಲ್ಹಾದ್ ಜೋಶಿಯವರು ಆಯ್ದುಕೊಂಡಿರುವ ಧಾರವಾಡ ತಾಲೂಕಿನ ಹಾರೋಬೆಳವಾಡಿ ಗ್ರಾಮ ಪಂಚಾಯ್ತಿಯ ಸಂಪೂರ್ಣ ವಿವರ ಈ ಲೇಖನದಲ್ಲಿ ಮೂಡಿ ಬಂದಿದೆ. ಅಧ್ಯಯನದ ಉದ್ದೇಶಗಳು: ಸಾಮಾನ್ಯ ಉದ್ದೇಶ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿನ ಭೌತಿಕ, ಸಾಮಾಜಿಕ-ಆರ್ಥಿಕ-ಸಾಂಸ್ಕೃತಿಕ ಸನ್ನಿವೇಶಗಳನ್ನು ಸ್ಥೂಲವಾಗಿ ಅಭ್ಯಸಿಸಿ, ಅವುಗಳ ಸ್ಥಿತಿಗತಿಗಳನ್ನು ವಿಶ್ಲೇಷಿಸಿ, ಆದರ್ಶ ಗ್ರಾಮವೆಂದೆನಿಸಲು ಅವಶ್ಯವಿರುವ ಸಮುದಾಯದ ಮೂಲ ಬೇಡಿಕೆಗಳನ್ನು ಕ್ರೋಢೀಕರಿಸಿ ಯೋಜನೆಗೆ ಸಲಹೆಗಳನ್ನೀಯುವುದು. ನಿರ್ದಿಷ್ಟ ಉದ್ದೇಶಗಳು
ಅಧ್ಯಯನದ ವಿಧಾನಗಳು: ಬೇರುಮಟ್ಟದ ಸಂಶೋಧನೆಯಲ್ಲಿ ತೊಡಗಿಕೊಂಡಿರುವ ಸಂಸ್ಥೆಯು ತನ್ನೀ ಕಾರ್ಯದಲ್ಲಿ ವೈಶಿಷ್ಟ್ಯಪೂರ್ಣವಾದ ಸಮುದಾಯ ಸಮಾಲೋಚನಾ ವಿಧಾನಕ್ಕೆ ಹೆಸರುವಾಸಿಯಾಗಿದ್ದು ಸದರೀ ಅಪ್ರೋಚ್ ನಲ್ಲಿ ಪರಿಣತಿ ಸಾಧಿಸಿದೆ. ಮೇಲ್ಕಾಣಿಸಿದ ಉದ್ದೇಶಗಳನ್ನು ಈಡೇರಿಸಲು ವಿವಿಧ ವಿಧಾನಗಳನ್ನು ಬಳಸಲಾಗಿದೆ, ಸಹಭಾಗಿತ್ವದ ಅಧ್ಯಯನಕ್ಕೆ ಹೆಚ್ಚಿನ ಒತ್ತು ನೀಡಿ ಕೆಳ ಕಾಣಿಸಿದ ವಿವಿಧ ಸಹಭಾಗಿತ್ವದ ವಿಧಾನಗಳನ್ನು ಅಳವಡಿಸಿಕೊಳ್ಳಲಾಗಿದೆ.
ಗ್ರಾಮದ ಚಿತ್ರಣ: ಹಾರೋಬೆಳವಾಡಿ ಗ್ರಾಮವು ತೋಪರಿ ಹಳ್ಳ ಎಂಬ ಹಳ್ಳದ ಬಲದಂಡೆಯ ಮೇಲೆ ಸ್ಥಾಪಿತವಾಗಿದ್ದು, ಇಲ್ಲಿ ಈ ತೋಪರಿ ಹಳ್ಳವೇ ಧಾರವಾಡ ಜಿಲ್ಲೆಯ ಅಂತಿಮ ಗಡಿರೇಖೆಯಾಗಿದೆ. ಹಳ್ಳ ದಾಟಿದರೆ ಬೆಳಗಾವಿ ಜಿಲ್ಲೆ ಪ್ರವೇಶಿಸಿದ ಹಾಗೆಯೇ. ಹಾರೋಬೆಳವಾಡಿಯಿಂದ 5 ಕಿ.ಮೀ. ಉತ್ತರದಲ್ಲಿ ಬೆಳಗಾವಿ ಜಿಲ್ಲೆ ಸೇರಿದ ಇನಾಮ ಹೊಂಗಲ ಗ್ರಾಮ, ದಕ್ಷಿಣದಲ್ಲಿ 10 ಕಿ.ಮೀ. ದೂರದಲ್ಲಿ ಅಮ್ಮಿನಭಾವಿ, ಪಶ್ಚಿಮದಲ್ಲಿ ಉಪ್ಪಿನ ಬೆಟಗೇರಿ ಮತ್ತು ಪೂರ್ವದಲ್ಲಿ ಶಿರೂರು ಹಾಗೂ ಆಹೆಟ್ಟಿ ಎಂಬ ಗ್ರಾಮಗಳಿವೆ. ಸಮುದ್ರ ಮಟ್ಟದಿಂದ 738 ಮೀಟರ್ಗಳಷ್ಟು ಎತ್ತರದಲ್ಲಿರುವ ಈ ಪಂಚಾಯತ್ ಪ್ರದೇಶವು 150 59 ದಿಂದ 150 66 ಉತ್ತರ ಅಕ್ಷಾಂಶಗಳಲ್ಲಿ ಹರಡಿಕೊಂಡಿದೆ. ಹಾರೋಬೆಳವಾಡಿ ಗ್ರಾಮ ಪಂಚಾಯತಿಯು ಧಾರವಾಡ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಕ್ಕೆ 21 ಕಿಮೀ ದೂರದಲ್ಲಿದ್ದು, ಪಂಚಾಯತಿಯು ಧಾರವಾಡದಿಂದ ಇನಾಂಹೊಂಗಲ ಮಾರ್ಗ ಸವದತ್ತಿಗೆ ಹಾದು ಹೋಗುವ ರಾಜ್ಯ ಹೆದ್ದಾರಿಯ ರಸ್ತೆಯಲ್ಲಿ ಇದೆ. ಅಮೀನ್ಭಾವಿಯು ಈ ಪಂಚಾಯತಿಯ ಹೋಬಳಿ ಕೇಂದ್ರವಾಗಿದ್ದು, ಅಮೀನ್ಬಾವಿಯಿಂದ ಪಂಚಾಯತಿಯು ಸುಮಾರು 10 ಕಿಮೀ ದೂರದಲ್ಲಿರುತ್ತದೆ. ಹಾರೋಬೆಳವಾಡಿ ಗ್ರಾಮ ಪಂಚಾಯತಿಯು ಹಾರೋಬೆಳವಾಡಿ ಹಾಗೂ ಕೆಬ್ಬೆನೂರು ಎಂಬ ಎರಡು ಗ್ರಾಮಗಳನ್ನು ಒಳಗೊಂಡಿದ್ದು. ಕೆಬ್ಬೆನೂರು ಗ್ರಾಮವು ಹಾರೋಬೆಳವಾಡಿ ಗ್ರಾಮದಿಂದ 5 ಕಿಮೀ ದೂರದಲ್ಲಿದೆ. ಈ ಗ್ರಾಮ ಪಂಚಾಯತಿ ವ್ಯಾಪ್ತಿಯ ಮುಖ್ಯ ಕಸುಬುಗಳು ಕೃಷಿ ಮತ್ತು ಕೃಷಿಯೇತರ ಚಟುವಟಿಕೆ ಆಗಿರುತ್ತವೆ. ಈ ಪಂಚಾಯತಿಯು ಉತ್ತರ ಪರಿವರ್ತನ ವಲಯ ಹಾಗೂ ಉತ್ತರ ಶುಷ್ಕ ವಲಯಗಳ ಅಂಚಿನಲ್ಲಿರುವ ಕೃಷಿ ವಾಯುಗುಣ ವಲಯದಲ್ಲಿದೆ. ಮಾಹಿತಿಗಳ ವಿಶ್ಲೇಷಣೆ ಅಧ್ಯಯನ ಪ್ರದೇಶದ ಜನಸಂಖ್ಯಾ ವಿವರಗಳು: ಈ ಮೇಲಿನ ಪಟ್ಟಿ ಸಂಖ್ಯೆ 1 ಹಾರೋಬೆಳವಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಜನಸಂಖ್ಯಾ ಚಿತ್ರಣವನ್ನು ಒದಗಿಸುತ್ತದೆ. ಇದರಲ್ಲಿ ಗ್ರಾಮವಾರು ವಿತರಿಸಲ್ಪಟ್ಟಿರುವ ಜನಸಂಖ್ಯೆಯ ವಿವರವನ್ನು ನೀಡಲಾಗಿದೆ. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಗ್ರಾಮಗಳೊಳಗೆ ಮತ್ತು ನಡುವೆ ಇರುವ ಪರಸ್ಪರ ಸಾಮಾಜಿಕ ಮತ್ತು ಆರ್ಥಿಕ ಸಂಬಂಧಗಳ ಬಗ್ಗೆ ಈ ವಿಭಾಗವು ಮಾಹಿತಿಯನ್ನು ಒದಗಿಸುತ್ತದೆ. ಜೊತೆಗೆ ಗ್ರಾಮ ಪಂಚಾಯತಿಯೊಳಗಿರುವ ಸಮುದಾಯಗಳು ಮತ್ತು ಧಾರ್ಮಿಕ ಸಂಯೋಜನೆ, ಸಾಮಾಜಿಕ ಪರಿಸ್ಥಿತಿಯನ್ನು ವಿಶ್ಲೇಷಿಸಲಾಗಿದೆ. ಅಷ್ಟೇ ಅಲ್ಲದೇ ಜೀವನ ಚಕ್ರ ವಿಧಾನದ ಮೂಲಕ ಮಕ್ಕಳು, ಹದಿಹರೆಯದವರು, ಯುವಕರು, ಪುರುಷರು, ಮಹಿಳೆಯರು ಮತ್ತು ಹಿರಿಯರ ಬಗ್ಗೆ ಮಾಹಿತಿಯನ್ನು ಪಡೆದ ನಂತರ ತುಲನಾತ್ಮಕವಾಗಿ ನೋಡಲಾಗಿದೆ. ಪಂಚಾಯತಿ ವ್ಯಾಪ್ತಿಯಲ್ಲಿ ಲಿಂಗಾಯಿತರು, ಪ್ರಧಾನ ಜನಾಂಗದವರಾಗಿದ್ದು, ಕುರುಬರು, ಪರಿಶಿಷ್ಟ ಜಾತಿ, ವಾಲ್ಮಿಕಿ ಸಮಾಜ, ಮರಾಠರು, ಅಂಬಿಗರು, ಭೋವಿ ಮತ್ತು ಮುಸ್ಲಿಂ ಜನಾಂಗದವರು ವಾಸಿಸುತ್ತಿದ್ದಾರೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಅಲ್ಪ ಸಂಖ್ಯಾತ ಜನಾಂಗದವರು ಗ್ರಾಮದಲ್ಲಿ ಪ್ರತ್ಯೇಕವಾದ ಓಣಿಗಳಲ್ಲಿ ವಾಸವಾಗಿದ್ದಾರೆ. ಹಾರೋಬೆಳವಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿಯವರು 445 ಜನ, ಪರಿಶಿಷ್ಟ ಪಂಗಡದವರು 264 ಜನರಿದ್ದರೆ, ಇತರೆ ಜಾತಿಯವರು 4625 ಜನರಿದ್ದಾರೆ, ಒಟ್ಟು 5341 ಜನಸಂಖ್ಯೆಯನ್ನು ಈ ಗ್ರಾಮಗಳು ಹೊಂದಿರುತ್ತವೆ. ಪಂಚಾಯ್ತಿ ವ್ಯಾಪ್ತಿಯಲ್ಲಿ ಲಿಂಗತ್ವದ ಪ್ರಮಾಣವು ವೈವಿಧ್ಯಮಯವಾಗಿದೆ. ಹಾರೋಬೆಳವಾಡಿಯಲ್ಲಿ 1000 ಪುರುಷರಿಗೆ 956 ಮಹಿಳೆಯರಿದ್ದರೆ, ಕಬ್ಬೇನೂರಿನಲ್ಲಿ ಈ ಪ್ರಮಾಣ ಭಿನ್ನವಾಗಿದೆ, ಅಂದರೆ 1010 ಇದೆ. ಪಂಚಾಯ್ತಿ ಪ್ರದೇಶದ ಒಟ್ಟು ಲಿಂಗತ್ವದ ಪ್ರಮಾಣವು 1000 ಪುರುಷರಿಗೆ 981 ಮಹಿಳೆಯರಿದ್ದಾರೆ. ಸಮೀಕ್ಷೆಯ ಅಂಕಿ ಅಂಶಗಳನ್ನು (ಪಟ್ಟಿ-3ರಲ್ಲಿ) ಗಮನಿಸಿದಲ್ಲಿ ಯುವಕ ಯುವತಿಯರ ಸಂಖ್ಯೆ ಹೆಚ್ಚಾಗಿದ್ದು, 18 ವಯಸ್ಸು ಪೂರ್ಣಗೊಂಡವರು ಒಟ್ಟು 3461 ಇದ್ದು ಇವರುಗಳಿಗೆ ಸಂಬಂಧಿಸಿದಂತೆ ತರಬೇತಿ ಉದ್ಯೋಗ ಕೌಶಲ್ಯಗಳ ಕುರಿತು ಗಮನಹರಿಸಬೇಕಾಗಿರುತ್ತದೆ, 6-18 ವಯೋಮಾನದ ಕಿಶೋರ ಕಿಶೋರಿಯರು ಒಟ್ಟು 1286 ಇದ್ದು ಇವರುಗಳ ವಿದ್ಯಾಭ್ಯಾಸ ಶಿಕ್ಷಣ ನಿಟ್ಟಿನಲ್ಲಿ ಹೆಚ್ಚು ಗಮನ ಹರಿಸಬಹುದಾಗಿರುತ್ತದೆ, ಹಾಗೂ 6 ವಯೋಮಾನಕ್ಕಿಂತ ಸಣ್ಣ ವಯೋಮಾನದ ಮಕ್ಕಳ ಸಂಖ್ಯೆ 594 ಇದ್ದು, ಈ ಮಕ್ಕಳ ಆರೋಗ್ಯ ಮತ್ತು ಪೌಷ್ಠಿಕ ಅಹಾರ ಪೂರೈಕೆ ಕುರಿತು ಗಮನಹರಿಸಬೇಕಾಗಿರುತ್ತದೆ. ಕೌಟುಂಬಿಕ ಮಾಹಿತಿ: ಹಾರೋಬೆಳವಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಎರಡು ಹಳ್ಳಿಗಳಲ್ಲಿ ಒಟ್ಟು 1019 ಕುಟುಂಬಗಳಿದ್ದು ಸದರಿ ಕುಟುಂಬಗಳಲ್ಲಿ ಪರಿಶಿಷ್ಟ ಜಾತಿ 111 (ಶೇ.11 ರಷ್ಟು) ಕುಟುಂಬಗಳು, ಪರಿಶಿಷ್ಟ ಪಂಗಡ 39 (ಶೇ. 4 ರಷ್ಟು) ಕುಟುಂಬಗಳು, ಇತರೆ 791 (ಶೇ. 77ರಷ್ಟು) ಕುಟುಂಬಗಳು, ಸಾಮಾನ್ಯ 78 (ಶೇ. 8ರಷ್ಟು) ಕುಟುಂಬಗಳು ಕಂಡು ಬಂದಿವೆ. ಒಟ್ಟು 1019 ಕುಟುಂಬಗಳ ಪೈಕಿ ಹಾರೋಬೆಳವಾಡಿ ಗ್ರಾಮದಲ್ಲಿ ಒಟ್ಟು 609 (ಶೇ. 60 ರಷ್ಟು) ಕುಟುಂಬಗಳಿವೆ. ಇದರಲ್ಲಿ ಪರಿಶಿಷ್ಟ ಜಾತಿ 70 (ಶೇ. 11.49 ರಷ್ಟು), ಪರಿಶಿಷ್ಟ ಪಂಗಡ 38 (ಶೇ. 6.24 ರಷ್ಟು) ಕುಟುಂಬಗಳು, ಇತರೆ 429 (ಶೇ. 70.44 ರಷ್ಟು) ಕುಟುಂಬಗಳು ಹಾಗೂ ಸಾಮಾನ್ಯ 72 (ಶೇ. 11.82 ರಷ್ಟು) ಕುಟುಂಬಗಳು ವಾಸವಾಗಿರುವುದನ್ನು ಗಮನಿಸಬಹುದಾಗಿದೆ. ಕಬ್ಬೇನೂರು ಗ್ರಾಮದಲ್ಲಿ ಒಟ್ಟು 410 (ಶೇ. 40 ರಷ್ಟು) ಕುಟುಂಬಗಳಿದ್ದು. ಇದರಲ್ಲಿ ಪರಿಶಿಷ್ಟ ಜಾತಿ 41 (ಶೇ. 10 ರಷ್ಟು), ಪರಿಶಿಷ್ಟ ಪಂಗಡ 1 (ಶೇ. 0.24 ರಷ್ಟು) ಕುಟುಂಬಗಳು, ಇತರೆ 362 (ಶೇ. 88.29 ರಷ್ಟು) ಕುಟುಂಬಗಳು ಹಾಗೂ ಸಾಮಾನ್ಯ 6 (ಶೇ. 1.46 ರಷ್ಟು) ಕುಟುಂಬಗಳು ವಾಸವಾಗಿರುವುದನ್ನು ಗಮನಿಸಬಹುದಾಗಿದೆ. ಮಹಿಳಾ ಒಡೆತನದ ಕುಟುಂಬಗಳು: ಹಾರೋಬೆಳವಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಎರಡು ಹಳ್ಳಿಗಳಲ್ಲಿರುವ ಒಟ್ಟು 1019 ಕುಟುಂಬಗಳ ಪೈಕಿ 129 (ಶೇಕಡ 13 ರಷ್ಟು) ಮಹಿಳಾ ಮುಖ್ಯಸ್ಥರು ಹಾಗೂ 890 (ಶೇಕಡ 87 ರಷ್ಟು) ಪುರುಷ ಮುಖ್ಯಸ್ಥರಿರುವ ಕುಟುಂಬಗಳು ವಾಸವಾಗಿರುತ್ತವೆ, ಹಾರೋಬೆಳವಾಡಿಯಲ್ಲಿ ಮಹಿಳಾ ಮುಖ್ಯಸ್ಥ 81 (ಶೇಕಡ 13 ರಷ್ಟು) ಕುಟುಂಬಗಳು ಇದ್ದು. ಕಬ್ಬೇನೂರು ಗ್ರಾಮದಲ್ಲಿ 48 ಶೇಕಡ 12 ರಷ್ಟು ಮಹಿಳಾ ಕುಟುಂಬಗಳನ್ನು ಗಮನಿಸಬಹುದಾಗಿದೆ. ಪಟ್ಟಿ-6 ನ್ನು ಅವಲೋಕಿಸಿದಾಗ ಪಂಚಾಯ್ತಿ ವ್ಯಾಪ್ತಿಯಲ್ಲಿನ ಭೂ-ಜನ ಪ್ರಮಾಣ ಅಂದರೆ ಜನಸಂಖ್ಯಾ ಸಾಂದ್ರತೆಯ ಪ್ರಮಾಣ ಸ್ಪಷ್ಟವಾಗುತ್ತದೆ. ಹಾರೋಬೆಳವಾಡಿ ಗ್ರಾಮದಲ್ಲಿ ಪ್ರತಿ ಚದರ ಕಿಲೋಮೀಟರ್ಗೆ 134 ಜನರಿದ್ದರೆ, ಕಬ್ಬೇನೂರಿಗೆ ಇದರ ಪ್ರಮಾಣ ಇನ್ನೂ ಅಧಿಕವಾಗಿದೆ, ಪ್ರಮಾಣವಿಲ್ಲಿ ಪ್ರತಿ ಚ.ಕಿ.ಮಿ.ಗೆ 170 ಜನರಿದ್ದಾರೆ. ಒಟ್ಟಾರೆ ಪಂಚಾಯತ್ ಪ್ರದೇಶದ ಪ್ರಮಾಣವನ್ನು ನೋಡಲಾಗಿ ಪ್ರತಿ ಚ.ಕಿ.ಮೀ.ಗೆ 148 ಜನರಿದ್ದಾರೆ. ಇದು ಹಾರೋಬೆಳವಾಡಿಗಿಂತ ಅಧಿಕ ಮತ್ತು ಕಬ್ಬೆನೂರಿಗಿಂತ ಕಡಿಮೆ ಕಂಡುಬರುತ್ತದೆ. 2011ರ ಜನಗಣತಿಯ ಪ್ರಕಾರ ಹಾರೋಬೆಳವಾಡಿ ಗ್ರಾಮ ಪಂಚಾಯತಿಯ ಸಾಕ್ಷರತೆ ಶೇ. 63.36 ರಷ್ಟಿದೆ. ಇದರಲ್ಲಿ ಕ್ರಮವಾಗಿ ಪುರುಷ ಸಾಕ್ಷರತೆಯ ಪ್ರಮಾಣ ಶೇ.58.37 ರಷ್ಟಿದ್ದರೆ, ಮಹಿಳೆಯರ ಸಾಕ್ಷರತೆಯ ಪ್ರಮಾಣ ಶೇ. 41.15 ರಷ್ಟಿದೆ. ಧಾರವಾಡ ತಾಲ್ಲೂಕು ಮಟ್ಟದಲ್ಲಿ ಇದು ಕ್ರಮವಾಗಿ ಪುರುಷರ ಸಾಕ್ಷರತೆ ಶೇ 70.4 ಪುರುಷರ ಪ್ರಮಾಣದಷ್ಟಿದ್ದರೆ, ಮಹಿಳೆಯರ ಸಾಕ್ಷರತಾ ಪ್ರಮಾಣ ಶೇ.55.3 ಪ್ರಮಾಣದಷ್ಟಿದೆ. ಒಟ್ಟು ಸಾಕ್ಷರತೆ ಶೇ.63.01 ರಷ್ಟಿದೆ. ಜಿಲ್ಲೆಯ ಸರಾಸರಿ ಸಾಕ್ಷರತೆ ಶೇ. 66.3, ಇದರಲ್ಲಿ ಪುರುಷರದ್ದು ಶೇ.73.4 ರಷ್ಟಿದ್ದರೆ, ಮಹಿಳೆಯರದ್ದು ಶೇ. 58.9 ರಷ್ಟಿದೆ. ಪಟ್ಟಿ-6ರ ಪ್ರಕಾರ ಹಾರೋಬೆಳವಾಡಿಯ ಸಾಕ್ಷರತೆ ಶೇ. 66.04, ಇದ್ದರೆ ಕಬ್ಬೇನೂರಿನದು ಶೇ. 60.02ರಷ್ಟಿದೆ. ಪಂಚಾಯ್ತಿ ಪ್ರದೇಶದ ಒಟ್ಟು ಸಾಕ್ಷರತಾ ಪ್ರಮಾಣ ಶೇ. 63.36 ಇದೆ. ಲಿಂಗವಾರು ಸಾಕ್ಷರತೆಯನ್ನು ನೋಡಲಾಗಿ ಅತ್ಯಂತ ಗಮನಾರ್ಹ ಅಂತರ ಕಂಡುಬರುವುದು. ಪುರುಷರ ಸಾಕ್ಷರತೆ ಶೇ. 71ಕ್ಕೂ ಅಧಿಕವಾಗಿದ್ದರೆ, ಮಹಿಳೆಯರಲ್ಲಿ ಈ ಪ್ರಮಾಣ ಶೇ. 57ರ ಒಳಗೇ ಇದೆ, ಅದರಲ್ಲೂ ಕಬ್ಬೆನೂರಿನಲ್ಲಿ ಇನ್ನೂ ಕಡಿಮೆ ಅಂದರೆ ಶೇ 48.5 ರಷ್ಟು ಇದೆ. ಸಾಕ್ಷರತೆಯ ಅದೂ ಆದರ್ಶ ಗ್ರಾಮದ ದೃಷ್ಟಿಕೋನದಲ್ಲಿ ಇಷ್ಟೊಂದು ಭಿನ್ನತೆ ಅತ್ಯಂತ ಆತಂಕಕಾರಿ ಸಂಗತಿ. ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು, ಶಿಕ್ಷಕರು ಹಾಗೂ ಪಾಲಕರು ಇದನ್ನು ಗಂಭೀರವಾಗಿ ಪರಿಗಣಿಸುವುದು ಸೂಕ್ತ. ಮೂಲ ಸೌಕರ್ಯಗಳತ್ತ ಒಂದು ನೋಟ: ಸಂಪರ್ಕ ಸಾಧನಗಳ ಜಾಲಬಂಧ :- ರಸ್ತೆಗಳ ಜಾಲ ಕಬ್ಬೆನೂರ ಗ್ರಾಮಕ್ಕೆ ಅದರ ಪಂಚಾಯ್ತಿ ಕೇಂದ್ರಸ್ಥಳವಾದ ಹಾರೋಬೆಳವಾಡಿಯಿಂದ ನೇರವಾಗಿ ತಲುಪಲು ರಸ್ತೆ ಸೌಲಭ್ಯವಿಲ್ಲ. ಏಕೆಂದರೆ ತೋಪರಿ ಹಳ್ಳ ಎರಡೂ ಗ್ರಾಮಗಳ ಮಧ್ಯದಲ್ಲಿ ಹರಿದಿದೆ. ಇದುವರೆಗೆ ಅಲ್ಲಿ ಸೇತುವೆ ಕಟ್ಟುವ ಕೆಲಸವಾಗಿಲ್ಲ, ಕಾರಣ ಈ ಎರಡೂ ಗ್ರಾಮಗಳ ಮಧ್ಯದಲ್ಲಿ ಪಕ್ಕಾ ರಸ್ತೆ ಇಂದಿಗೂ ಇಲ್ಲ. ಆದ್ದರಿಂದ ಹಾರೋಬೆಳವಾಡಿಯಿಂದ ರಾಜ್ಯ ಹೆದ್ದಾರಿಗುಂಟ ಅರ್ಧ ಕಿ.ಮೀ. ಉತ್ತರಕ್ಕೆ ಹೋದರೆ ಬೆಳಗಾವಿ ಜಿಲ್ಲೆಗೆ ಸೇರಿದ ಇನಾಮಹೊಂಗಲ ಎಂಬ ಗ್ರಾಮವಿದ್ದು ಅಲ್ಲಿಂದ 6 ಕಿ. ಮೀ. ದೂರ ಪಶ್ಚಿಮದಲ್ಲಿ ಈ ಗ್ರಾಮವಿದೆ, ಇನಾಮಹೊಂಗಲದಿಂದ ಬೆಳವಾಡಿ (ಮಲ್ಲಮ್ಮನ)ಗೆ ಹೋಗುವ ಮಾರ್ಗ ಮಧ್ಯದಲ್ಲಿದೆ. ಈ ಮುಖ್ಯ ರಸ್ತೆಯಲ್ಲೇ ಬಸ್ ಸ್ಟ್ಯಾಂಡ್ ಇದೆ. ಗ್ರಾಮದ ಕೇಂದ್ರ ಭಾಗ ಇಲ್ಲಿಂದ 250 ಮೀಟರ್ನಷ್ಟು ದೂರದಲ್ಲಿದ್ದು, ಊರು ಜಿಲ್ಲಾ ಮುಖ್ಯ ರಸ್ತೆಯಿಂದಲೇ ಪ್ರಾರಂಭವಾಗುತ್ತದೆ. ಬಸ್ ಸ್ಟ್ಯಾಂಡ್ನಿಂದ ದಕ್ಷಿಣಕ್ಕೆ ನೇರವಾಗಿ ಸುಮಾರು 275 ಮೀಟರ್ ಗಳಷ್ಟು ಉದ್ದದ ಅಂದರೆ ಊರಿನ ಪೂರ್ವ ಅಂಚಿನಗುಂಟ ತೋಪರಿ ಹಳ್ಳದವರೆಗೂ ಒಂದು ವಿಶಲವಾದ ಮುಖ್ಯ ರಸ್ತೆಯೊಂದಿದೆ. ಈ ರಸ್ತೆಯ ಬಲ ಭಾಗದಲ್ಲಿ ಶೇ. 97 ರಷ್ಟು ಊರು ಹರಡಿಕೊಂಡಿದೆ. ಈ ಭಾಗದಲ್ಲಿ ಏಳು ಸಂಪರ್ಕ ರಸ್ತೆಗಳು ಕಂಡು ಬರುತ್ತಿದ್ದು ಇವುಗಳು ಗ್ರಾಮದ ಕೇಂದ್ರಭಾಗ ಮತ್ತು ವಿವಿಧ ಓಣಿಗಳಿಗೆ ಸಂಪರ್ಕ ಕಲ್ಪಿಸುತ್ತವೆ. ರಸ್ತೆಯ ಎಡ ಭಾಗದಲ್ಲಿ ಇರುವ 5 ರಸ್ತೆಗಳು, ಆ ಭಾಗದಲ್ಲಿರುವ ದೇವಸ್ಥಾನ ಮತ್ತು ಹೊಸ ಬಡಾವಣೆಗಳಿಗೆ ಸಂಪರ್ಕ ಕಲಿಸುತ್ತವೆ. ಬಲ ಭಾಗದಲ್ಲಿ ಪ್ರಧಾನವಾಗಿ ಕೇಂದ್ರೀಕೃತವಾಗಿರುವ ಊರಿನ ಒಳ ಭಾಗದಲ್ಲಿ ಸುಮಾರು 28 ಒಳ ರಸ್ತೆಗಳ ಜಾಲಬಂಧವಿದೆ. ಇದು ಎಲ್ಲ ಓಣಿಗಳನ್ನು, ಉಪರಸ್ತೆಗಳನ್ನು, ಗ್ರಾಮದ ಪ್ರಮುಖ ದೇವಸ್ಥಾನಗಳಾದ ಮಾರುತಿ, ಕಲ್ಮೇಶ್ವರ ಮತ್ತು ದ್ಯಾಮವ್ವನ ಗುಡಿಗಳಿಗೆ ಸಂಪರ್ಕ ಕಲ್ಪಿಸುತ್ತವೆ. ಈ ರಸ್ತೆಗಳಲ್ಲಿ ಕೆಲವು ಪಕ್ಕಾ ರಸ್ತೆಗಳಾಗಿದ್ದು, ಇವುಗಳ ಪೈಕಿ ಮೂರು ರಸ್ತೆಗಳು ಮಾತ್ರ ಸಿಮೆಂಟಿನ ಕಾಂಕ್ರೆಟ್ ರಸ್ತೆಯಾಗಿವೆ, ಉಳಿದವು ಕಚ್ಚಾ ರಸ್ತೆ ಮತ್ತು ಮೆಟ್ಟಲ್ಡ್ ರಸ್ತೆಗಳಾಗಿವೆ. ಬಹಳಷ್ಟು ರಸ್ತೆಗಳನ್ನು ಪಕ್ಕಾ ರಸ್ತೆಗಳನ್ನಾಗಿ ಮಾಡಿ ಸಿಮೆಂಟ್ ರಸ್ತೆಯನ್ನಾಗಿ ಮಾಡಬೇಕಾದ ಅವಶ್ಯಕತೆಯಿದೆ. ಧಾರವಾಡ-ಸವದತ್ತಿಯ ಮುಖ್ಯ ರಸ್ತೆಯಿಂದ, ಅದೂ ಸುಮಾರು 60 ರಿಂದ 70 ಮೀ. ದೂರದ ಬಳಿಕ ಸುಮಾರು 100 ರಿಂದ 150 ಮೀ.ವರೆಗೆ ಮಾತ್ರ ಸಿಮೆಂಟ್ ರಸ್ತೆ ಮಾಡಿದ್ದು ಉಳಿದೆಲ್ಲ ರಸ್ತೆಗಳೂ ಮಣ್ಣಿನ ರಸ್ತೆಗಳಾಗಿವೆ. ಮುಖ್ಯವಾಗಿ ಗ್ರಾಮ ಪಂಚಾಯತ್ ಕೇಂದ್ರಸ್ಥಳವಾದ ಹಾರೋಬೆಳವಡಿ ಮತ್ತು ಕಬ್ಬೇನೂರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣ, ರೈತರ ಜಮೀನುಗಳಿಗೆ ಹೋಗಲು ಮತ್ತು ಬೆಳೆದ ಫಸಲನ್ನು ತರಲು ರಸ್ತೆಗಳ ನಿರ್ಮಾಣ, ಗ್ರಾಮದೊಳಗಿನ ರಸ್ತೆಗಳನ್ನು ಮೇಲ್ದರ್ಜೆಗೇರಿಸಿ ಕಾಂಕ್ರೀಟ್ ರಸ್ತೆಗಳನ್ನಾಗಿ ಮಾಡುವುದು, ಕಚ್ಚಾ ರಸ್ತೆಗಳನ್ನು ಪಕ್ಕಾ ರಸ್ತೆಗಳನ್ನಾಗಿ ನಿರ್ಮಿಸುವುದು, ಇವೇ ಮೊದಲಾದವುಗಳು ತುರ್ತಾಗಿ ಆಗಬೇಕಾಗಿರುವ ಕೆಲಸಗಳಾಗಿವೆ. ದೂರ ಸಂಪರ್ಕ ಮತ್ತು ಮಾಹಿತಿ ತಂತ್ರ ಜ್ಞಾನ: ದೂರ ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಮಾನದಂಡ. ಖಾಸಗಿ ಕ್ಷೇತ್ರಗಳಲ್ಲಿ ಇದರ ಉತ್ತೇಜನ ಜಾಸ್ತಿ ಇದೆ. ಪ್ರಸ್ತುತ ಇರುವ ಅಂತರಗಳು ಮತ್ತು ಸಾಧ್ಯತೆಗಳನ್ನು ಇಲ್ಲಿ ವಿಶ್ಲೇಷಣೆ ಮಾಡಲಾಗಿದೆ. ಗ್ರಾಮಗಳಲ್ಲಿ ಇದರ ಉಪಯೋಗ, ಗುಣಮಟ್ಟ ಹಾಗೂ ಅರ್ಹ ಸಂಪರ್ಕಗಳ ಬಗ್ಗೆ ನಿರ್ಣಯಿಸಲಾಗಿದೆ. ಈ ಕೆಳಗಿನ ಕೋಷ್ಠಕದಲ್ಲಿ ಸಂಪರ್ಕದ ಲಭ್ಯತೆ ಹಾಗೂ ಅದರ ಮೌಲ್ಯಮಾಪನ ನಡೆಸಲಾಗಿದೆ. ಹಾರೋಬೆಳವಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಒಟ್ಟು 1061 ಕುಟುಂಬಗಳಲ್ಲಿ ಮೊಬೈಲ್ ಬಳಕೆದಾರರ ಸಂಖ್ಯೆ 1048 (ಶೇಕಡ 98 ರಷ್ಟು) ಇದ್ದು. ಹಾರೋಬೆಳವಾಡಿ ಗ್ರಾಮದ ಒಟ್ಟು 610 ಕುಟುಂಬಗಳಲ್ಲಿ 510 ಕುಟುಂಬಗಳು (ಶೇಕಡ 83 ರಷ್ಟು) ಮೊಬೈಲ್ ಸಂಪರ್ಕ ಹೊಂದಿದ್ದು. ಕಬ್ಬೇನೂರು ಗ್ರಾಮದಲ್ಲಿ ಒಟ್ಟು 451 ಕುಟುಂಬಗಳಲ್ಲಿ 425 (ಶೇಕಡ 94 ರಷ್ಟು) ಕುಟುಂಬಗಳು ಮೊಬೈಲ್ ಸಂಪರ್ಕವನ್ನು ಹೊಂದಿರುವುದನ್ನು ಗಮನಿಸಬಹುದಾಗಿದೆ. ಈ ಮೇಲಿನ ಪಟ್ಟಿ(9)ಯನ್ನು ಅವಲೋಕಿಸಲಾಗಿ ಗ್ರಾಮ ಪಂಚಾಯತ್ ಕಛೇರಿ, ಬ್ಯಾಂಕ್, ಶಾಲೆ ಮತ್ತು ಪೋಸ್ಟ್ ಆಫೀಸ್ಗಳಿಗೆ ದೂರವಾಣಿ ಸಂಪರ್ಕದ ವ್ಯವಸ್ಥೆ ಇದ್ದು, ಪಂಚಾಯ್ತಿ ಮತ್ತು ಬ್ಯಾಂಕ್ಗಳಿಗೆ ಮಾತ್ರ ಇಂಟರ್ನೆಟ್ ಸೌಲಭ್ಯವಿದೆ, ಇತರ ಸಂಸ್ಥೆಗಳಿಗೆ ಇಲ್ಲವಾಗಿದೆ. ಆರೋಗ್ಯ ಉಪಕೇಂದ್ರಕ್ಕೆ ಯಾವುದೇ ತೆರನಾದ ಸಂಪರ್ಕ ವ್ಯವಸ್ಥೆಯೇ ಇಲ್ಲವೆಂಬುದು ಗಮನಾರ್ಹ. ಪೋಸ್ಟ್ ಆಫೀಸ್ಗೂ ಸಹಿತ ಮೊಬೈಲ್ನ್ನು ಹೊರತು ಪಡಿಸಿ ಇತರ ಯಾವುದೇ ತೆರನಾದ ಸಂಪರ್ಕ ಸೌಲಭ್ಯಗಳಿಲ್ಲ. ಶಕ್ತಿಯ ಮೂಲ: ಪ್ರಾಥಮಿಕವಾಗಿ ಗ್ರಾಮೀಣ ಪರಿಸರದಲ್ಲಿ ಇಂದನ ಬಳಕೆಯ ಕಾರಣಗಳೆಂದರೆ: ಅಡುಗೆ ಮಾಡಲು, ಬೆಳಕಿಗಾಗಿ, ಕೃಷಿಗಾಗಿ, ಇತರೆ ವಿಧದ ಆರ್ಥಿಕ ಮತ್ತು ಗೃಹೋಪಯೋಗಿ ಚಟುವಟಿಕೆಗಳಿಗಾಗಿ. ಈ ವಿವಿಧ ಉಪಯೋಗಗಳಿಗೆ ಬಳಸುತ್ತಿರುವ ಶಕ್ತಿಯು ಸಾಕಾಗುವಷ್ಟು ಇದೆಯೇ ಮತ್ತು ಗುಣಮಟ್ಟದಿಂದ ಕೂಡಿದೆಯೇ ಎಂಬುದನ್ನು ವಿಶ್ಲೇಷಣೆಗೆ ಒಳಪಡಿಸಲಾಗಿದೆ. ಶಕ್ತಿಯು ವಿವಿಧ ಮೂಲಗಳಿಂದ ದೊರೆಯುತ್ತದೆ. ಅವುಗಳೆಂದರೆ, ಸೌದೆ/ಕಟ್ಟಿಗೆ, ಸೀಮೆಎಣ್ಣೆ, ಜೈವಿಕ ಅನಿಲ, ಅಡುಗೆ ಅನಿಲ, ವಿದ್ಯುತ್, ಸೋಲಾರ್, ಗಾಳಿ ಮತ್ತು ಇತರೆ ನವೀಕರಿಸಬಹುದಾದ ಶಕ್ತಿಮೂಲಗಳಿಂದ. ಪ್ರಸಕ್ತ ಪಟ್ಟಿ(10)ಯಿಂದ ತಿಳಿದು ಬರುವುದೇನೆಂದರೆ ಈ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಶೇ. 30ರಷ್ಟು ಕುಟುಂಬಗಳು ಬಳಸುವ ಶಕ್ತಿ ಮೂಲಗಳ ಮಾಹಿತಿ ಲಭ್ಯವಿದೆ. ಅವುಗಳಲ್ಲಿ ಪೈಕಿ ಶೇ.99 ಕುಟುಂಬಗಳು ವಿದ್ಯುತ್ಚ್ಛಕ್ತಿಯನ್ನು ಅವಲಂಬಿಸಿವೆ. ಶೇ. 1 ರಷ್ಟು ಕುಟುಂಬಗಳು ಪರ್ಯಾಯ ಮೂಲವಾದ ಸೀಮೆ ಎಣ್ಣೆಯನ್ನು ಬಳಸುತ್ತಿವೆ. ಹಾರೋಬೆಳವಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಸ್ವಂತ ಮನೆಯನ್ನು ಹೊಂದಿರುವ ಕುಟುಂಬಗಳ ಸಂಖ್ಯೆ 545 ಆಗಿದ್ದು, ಸ್ವಂತ ಮನೆ ಇಲ್ಲದೇ ಇರುವ ಕುಟುಂಬಗಳ ಸಂಖ್ಯೆ 325 ಆಗಿರುತ್ತದೆ, ಹಾಗೂ ಯಾವುದೇ ಕೊಠಡಿಗಳನ್ನು ಹೊಂದಿರದ ಮನೆಗಳಲ್ಲಿ ವಾಸಿಸುತ್ತಿರುವ ಕುಟುಂಬಗಳ ಸಂಖ್ಯೆ 54 ಇವೆ. (ಇದು ಮಕ್ಕಳ ವಿದ್ಯಾಭ್ಯಾಸ, ದಂಪತಿಗಳ ಏಕಾಂತ ದೃಷ್ಟಿಯಿಂದ ಸಮಸ್ಯಾತ್ಮಕವಾಗಿರುತ್ತದೆ). ಕನಿಷ್ಠ ಎರಡು ಕೊಠಡಿಗಳನ್ನು ಹೊಂದಿರುವವರ ಸಂಖ್ಯೆ 294 ಇದೆ, ಹಾಗೂ 85 ಕುಟುಂಬವು ಕಚ್ಚಾ ಮನೆಯಲ್ಲಿ ವಾಸಿಸುತ್ತಿದ್ದು 377 ಕುಟುಂಬಗಳು ಅರೆ ಪಕ್ಕಾ ಮನೆಯಲ್ಲಿ ವಾಸಿಸುತ್ತಿದ್ದಾರೆ. ವಿವಧ ವಸತಿ ಯೋಜನೆಗಳ ಸಹಕಾರದೊಂದಿಗೆ ಹಾಗೂ ಅರಿವು ಮೂಡಿಸುವ ಕಾರ್ಯಕ್ರಮಗಳೊಂದಿಗೆ ಈ ಅಂಶಗಳೆಡೆಗೆ ಗಮನಹರಿಸಿದಲ್ಲಿ ಈ ಸಮಸ್ಯೆಗಳನ್ನು ಬಗೆಹರಿಸಬಹುದಾಗಿದೆ. ನಾಗರಿಕ ಸೌಲಭ್ಯಗಳ ವಿಶ್ಲೇಷಣೆ: ನೀರಿನ ಸೌಲಭ್ಯ ಮತ್ತು ಸರಬರಾಜು: ಪಂಚಾಯ್ತಿಯ ಎರಡೂ ಗ್ರಾಮಗಳಲ್ಲಿ ನೀರಿನ ಸರಬರಾಜು ವ್ಯವಸ್ಥೆ ಉತ್ತಮವಾಗಿದ್ದು, ಸಾಮಾನ್ಯವಾಗಿ ಎಲ್ಲ ಮನೆಗಳಿಗೂ ನೀರಿನ ನಲ್ಲಿಗಳಿವೆ. ಈ ನೀರನ್ನು ಮಲಪ್ರಭಾ ನದಿಯ ರೇಣುಕಾ ಸಾಗರದಿಂದ ಹುಬ್ಬಳ್ಳಿ-ಧಾರವಾಡ ಮಹಾನಗರಗಳಿಗೆ ಕುಡಿಯುವ ನೀರು ಪೂರೈಸುವ ಮುಖ್ಯ ಪೈಪ್ ಲೈನ್ನಿಂದ ಒದಗಿಸಲಾಗಿದೆ. ಈ ರೀತಿ ಸರಬರಾಜಾದ ನೀರು ಎಲ್ಲಾ ರೀತಿಯ ಗೃಹ ಬಳಕೆ ಮತ್ತು ಜನ-ದನ-ಕರುಗಳಿಗೂ ಬಳಸಲ್ಪಡುತ್ತದೆ. ಆದರೆ ಪೂರೈಸುತ್ತಿರುವ ಈ ನೀರು ಶುದ್ಧೀಕರಿಸದೇ ಕಚ್ಚಾ ನೀರು ಎಂಬುದೇ ಗ್ರಾಮಸ್ಥರ ಅಳಲು. ಗ್ರಾಮದ ಒಂದೆರಡು ಭಾಗಗಳಲ್ಲಿ ಕುಡಿಯುವ ನೀರಿಗಾಗಿ ಪೈಪ್ಲೈನ್ ಇನ್ನೂ ಆಗಬೇಕಾಗಿದೆ ಅವೆಂದರೆ ಹಾರೋಬೆಳವಾಡಿಯ ನವಗ್ರಾಮದ ಪ್ರದೇಶ ಮತ್ತು ದೊಡ್ಡಮನಿಯವರ ಓಣಿಗಳಿಗೆ ಮತ್ತು ಕಬ್ಬೇನೂರಿನ ಗಾಂವ್ಠಾಣಾದ ಹತ್ತಿರದ ಪ್ರದೇಶ ಮತ್ತು ಕಂಬಾರ ಓಣಿಗಳಿಗೆ ನಲ್ಲಿ ನೀರು ಸರಬರಾಜು ವ್ಯವಸ್ಥೆಯಾಗಬೇಕಾಗಿದೆ. ಬೀದಿ ದೀಪಗಳ ವ್ಯವಸ್ಥೆ: ಎರಡೂ ಗ್ರಾಮಗಳ ಒಳಗೆ ಮತ್ತು ಹೊರಗೆ ಲೈಟ್ ಕಂಬಗಳು ತೊಂಬಾ ಹಳೆಯವು. ಕೆಲಭಾಗದಲ್ಲಂತೂ ವಿದ್ಯುತ್ ತಂತಿಗಳು ಜನರ ತಲೆಗೆ ತಗುಲುವಷ್ಟು ಕೆಳಗಿವೆ. ಗ್ರಾಮದ ಎಲ್ಲಾ ಬೀದಿಗಳಲ್ಲೂ ದೀಪಗಳಿವೆ. ಆದರೆ ಕೆಲವು ಜಂಕ್ಷನ್ಗಳಲ್ಲಿ ಅಂದರೆ ಪ್ರಮುಖ ಕೂಡು ರಸ್ತೆಗಳಿಗೆ ದೊಡ್ಡ ಬಲ್ಬಗಳ ಫ್ಲಡ್ ಲೈಟ್ಗಳ ಅವಶ್ಯಕತೆಯನ್ನು ಗ್ರಾಮಸ್ಥರು ಒತ್ತಿ ಹೇಳಿದ್ದಾರೆ. ಹಾರೋಬೆಳವಾಡಿಯಲ್ಲಿ ಒಟ್ಟು 12 ಕೂಡು ರಸ್ತೆಗಳಿಗೆ ಮತ್ತು ಕಬ್ಬೆನೂರಿನ 7 ಕೂಡುರಸ್ತೆಗಳ ಜಂಕ್ಷನ್ಗಳಿಗೆ ಫ್ಲಡ್ ಲೈಟ್ಗಳ ಅವಶ್ಯಕತೆಯಿದೆ. ನೈರ್ಮಲ್ಯ ಮತ್ತು ತ್ಯಾಜ್ಯ ನಿರ್ವಹಣೆ: ಪಂಚಾಯ್ತಿ ವ್ಯಾಪ್ತಿಯಲ್ಲಿನ ಈ ಎರಡೂ ಊರುಗಳು ಹಳೇ ಊರುಗಳೆ, ಅಂದರೆ ಗ್ರಾಮಗಳ ಮಧ್ಯದ ಭಾಗ ನೈರ್ಮಲ್ಯದ ಸಮಸ್ಯೆ ಎದುರಿಸುತ್ತದೆ. ಎಂಟು-ಹತ್ತು ದಶಕಗಳ ಹಿಂದೆಯೇ ಕಟ್ಟ್ಟಿರುವ ಹಳೇ ಮನೆಗಳಲ್ಲಿ ಶೌಚಾಲಯಗಳನ್ನು ಕಟ್ಟಿಕೊಳ್ಳುತ್ತಿರಲಿಲ್ಲ. ಈಗ ಊರು ಬೆಳೆದಂತೆಲ್ಲ ಶೌಚಾಲಯದ ಅಗತ್ಯತೆ ಎದ್ದು ಕಾಣುತ್ತದೆ. ಆದರೆ ಗ್ರಾಮಸ್ಥರ ಪ್ರಕಾರ ಜಾಗದ ಕೊರತೆ ಬಹಳಷ್ಟು ಇದೆ. 2001 ರಿಂದಿತ್ತೀಚೆಗೆ ಕಟ್ಟಲಾಗಿರುವ ಕೆಲವು ಮನೆಗಳ ಶೌಚಾಲಯಗಳಿದ್ದು ಹಾರೋಬೆಳವಾಡಿಯಲ್ಲಿ ಸುಮಾರು ಶೇ. 75ಕ್ಕೂ ಅಧಿಕ ಮತ್ತು ಕಬ್ಬೆನೂರಿನಲ್ಲಿ ಶೇ. 65ಕ್ಕೂ ಅಧಿಕ ಮೆನೆಗಳಿಗೆ ಶೌಚಾಲಯಗಳ ವ್ಯವಸ್ಥೆಗಳಿಲ್ಲ. ಬಯಲು ಮಲ ವಿಸರ್ಜನೆಯು ಸಾಮಾನ್ಯವಾಗಿ ಕಂಡುಬರುವ ದೃಶ್ಯವಾಗಿದೆ. ಗ್ರಾಮದ ಹೊರ ವಲಯಗಳು ಮತ್ತು ಬಯಲು ಪ್ರದೇಶಗಳಲ್ಲಿ ಮಲವಿಸರ್ಜನೆ ಮಾಡಲು ಜನರು ಕತ್ತಲಾದ ಬಳಿಕ ಈ ಜಾಗವನ್ನು ಬಳಸುತ್ತಾರೆ. ಹಾರೋಬೆಳವಾಡಿಯ ಹರಿಜನ ಕೇರಿಯ ಮಧ್ಯ ಭಾಗದಿಂದ ಹಾಯ್ದು ಹೋಗುವ ಬೆಟಗೇರಿ ರಸ್ತೆಯಲ್ಲಿ ಓಡಾಡಲೂ ಆಗದಷ್ಟು ದಟ್ಟವಾದ ಮಲ ವಿಸರ್ಜನೆ ಮತ್ತು ಗಬ್ಬು ವಾಸನೆ ಊರಿನ ಅಂದಕ್ಕೆ ಕಪ್ಪು ಚುಕ್ಕೆಯೇ ಸರಿ. ಕಬ್ಬೇನೂರಿನಲ್ಲಿ ಶಾಲೆಯ ಎದುರಿನ ಬಯಲು, ಹರಿಜನ ಕಾಲೊನಿಗೆ ಹೋಗುವ ರಸ್ತೆಗಳೆಲ್ಲಾ ಬಯಲು ಮಲ ವಿಸರ್ಜನೆಯ ತಾಣಗಳೇ. ಅದಲ್ಲದೇ ಊರಿನ ಸುತ್ತ ಸುಸಜ್ಜಿತವಲ್ಲದ ಮತ್ತು ವ್ಯವಸ್ಥಿತವಲ್ಲದ ತಿಪ್ಪೆಗಳು ಕಂಡುಬರುತ್ತಿರುವುದು ಸರ್ವೇಸಾಮಾನ್ಯವಾಗಿದೆ. ಹಾರೋಬೆಳವಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳ್ಳಿಗಳಲ್ಲಿ 12 ಕುಟುಂಬಗಳು ಸಮುದಾಯ ಶೌಚಾಲಯ, 108 ಕುಟುಂಬಗಳು ಸ್ವಂತ ಶೌಚಾಲಯಗಳನ್ನು ಹೊಂದಿದ್ದು, 451 ಕುಟುಂಬಗಳು ಬಯಲು ಶೌಚಾಲಯ ಬಳಸುತ್ತಿರುವುದು ಸಮೀಕ್ಷೆಯಲ್ಲಿ ಕಂಡುಬಂದಿದ್ದು ಸ್ವಚ್ಚಭಾರತ ಮಿಷನ್ ಮತ್ತು ಕುಟುಂಬಗಳಿಗೆ ಅರಿವು, ಜನ ಜಾಗೃತಿ ಕಾರ್ಯಕ್ರಮಗಳ ಮೂಲಕ ಎಲ್ಲಾ ಕುಟುಂಬಗಳು ಶೌಚಾಲಯ ಬಳಸುವಂತಾಗಬೇಕು. ಗ್ರಾಮ ಪಂಚಾಯತಿ ಬಯಲು ಶೌಚಾಲಯ ಮುಕ್ತ ಗ್ರಾಮ ಪಂಚಾಯತಿ ಆಗಬೇಕಾಗಿದೆ. ಹಾಗೂ 513 ಕುಟುಂಬಗಳು ಯಾವುದೇ ಚರಂಡಿ ವ್ಯವಸ್ಥೆಯನ್ನು ತಮ್ಮ ಮನೆಗೆ ಹೊಂದಿಲ್ಲದಿರುವುದು ಸಮೀಕ್ಷೆಯಿಂದ ಕಂಡುಬಂದಿರುತ್ತದೆ. ಶೌಚಾಲಯಕ್ಕೆ ಸಂಬಂದಿಸಿದ ಎಲ್ಲರು ಅನುಕೂಲವಾಗಿದ್ದವರ ಕುಟುಂಬಗಳಲ್ಲಿ ಮಹಿಳೆಯರು ಮನೆಯಲ್ಲಿಯೇ ಶೌಚಾಲಯ ಬಳಸುತ್ತಾರೆ. ಆದರೆ ಪುರುಷರು ಜಮೀನಿನ ಕಡೆಗೆ ಹೋಗುತ್ತಾರೆ ಮತ್ತೆ ಮಹಿಳೆಯರು ಕಸಗಳನ್ನು ಬೀದಿಗೆ ಹಾಕುತ್ತಾರೆ, ಹಾರೋಬೆಳವಾಡಿ ಗ್ರಾಮದಲ್ಲಿ ಪ್ರಸ್ತುತ ತ್ಯಾಜ್ಯ ವಸ್ತುಗಳನ್ನು ಕೂಲಿಕಾರರ ಮೂಲಕ ಚರಂಡಿಗಳನ್ನು ಸ್ವಚ್ಚಮಾಡಿಸಿ ಅದರಿಂದ ಬರತಕ್ಕಂತ ಕಸವನ್ನು ಹಾಗೂ ಪ್ರಮುಖ ಓಣಿಗಳಲ್ಲಿ ಇಡಲಾದ ಕಸದ ತೊಟ್ಟಿಗಳಲ್ಲಿಯ ಕಸವನ್ನು ವಾಹನದ ಮೂಲಕ ಪ್ರತಿ ದಿನಕ್ಕೆ 3500 ಕೆ.ಜಿ ಯಷ್ಟು ಕಸವನ್ನು ಊರ ಹೊರಗಡೆ ಇರುವ ಸರಕಾರಿ ಜಾಗದಲ್ಲಿ ಹಾಕಲಾಗುತ್ತಿದೆ ಹಾಗೂ ದ್ರವ ತ್ಯಾಜ್ಯವನ್ನು (ಬ್ಲ್ಯಾಕ್/ಗ್ರೇವ್ವಾಟರ್) ಚರಂಡಿಗಳ ಮೂಲಕ ಊರ ಹೊರಗಡೆ ಸಾಗಿಸಲಾಗುತ್ತಿದೆ. ಈಗಾಗಲೇ ಸ್ಕೋಪ್(SCOPE) ಎಂಬ ಸಂಸ್ಥೆಯೊಂದು ಈ ನಿಟ್ಟಿನಲ್ಲಿ ಜನರ ಮನವೊಲಿಸುವಲ್ಲಿ ಕಾರ್ಯನಿರತವಾಗಿದೆ. ಹಾರೋಬೆಳವಾಡಿ ಗ್ರಾಮ ಪಂಚಾಯತಿ ವ್ಯ್ಯಾಪ್ತಿಯ ಹಳ್ಳಿಗಳಲ್ಲಿ ಆಮ್ ಆದ್ಮೀ ಬೀಮಾ ಯೋಜನೆಗೆ ಒಳ ಪಟ್ಟಿರುವ ಕುಟುಂಬಗಳ ಸಂಖ್ಯೆ 66 ಮಾತ್ರ ಇದ್ದು, ಒಳ ಪಡದ ಕುಟುಂಬಗಳ ಸಂಖ್ಯೆ 953 ಆಗಿರುತ್ತದೆ. ಹಾಗೆಯೇ ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿರುವ ಕುಟುಂಬಗಳ ಸಂಖ್ಯೆ 135 ಆಗಿದ್ದು, ಕಾರ್ಡ್ ಹೊಂದಿರದವರ ಕುಟುಂಬಗಳ ಸಂಖ್ಯೆ 1589 ಆಗಿರುತ್ತದೆ, ಬಡತನ 1997 ರಲ್ಲಿ 410 ಕುಟುಂಬಗಳು ಇದ್ದು, 2011 ಸಮೀಕ್ಷೆ ಪ್ರಕಾರ 1280 ಕುಟುಂಬಗಳು ಆಗಿರುತ್ತವೆ. ಒಟ್ಟು 1596 ಬಿಪಿಎಲ್ ಕುಟುಂಬಗಳು 128 ಎಪಿಎಲ್ ಕುಟುಂಬಗಳು ಇದ್ದು ಬಡವರ ಸಂಖ್ಯೆ ಹೆಚ್ಚು ಇರುವುದನ್ನು ಸಮೀಕ್ಷೆಯಿಂದ ಕಂಡುಕೊಳ್ಳಬಹುದಾಗಿದೆ, ಬಡತನ ಸಂಖ್ಯೆ ಹೆಚ್ಚಿದ್ದು, ಆದರೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಉದ್ಯೋಗ ಚೀಟಿ ಪಡೆದಿರುವವರ ಸಂಖ್ಯೆ 32 ಮಾತ್ರ ಇದ್ದು, ಪಡೆಯದೇ ಇರುವವರ ಸಂಖ್ಯೆ 1692 ಆಗಿರುತ್ತದೆ. ಆರ್ಥಿಕ ಸ್ಥಿತಿ-ಗತಿಗಳ ವಿಶ್ಲೇಷಣೆ: ಒಂದು ಪ್ರದೇಶದ ಆರ್ಥಿಕ ಅಭಿವೃಧ್ಧಿಯು ಅಲ್ಲಿರುವ ಸಂಪನ್ಮೂಲಗಳನ್ನು ಅವಲಂಬಿಸಿರುತ್ತದೆ. ಸಂಪನ್ಮೂಲವು ಅಲ್ಲಿರುವ ಉದ್ಯೋಗ ಮತ್ತು ಆದಾಯವನ್ನು ತಿಳಿಸುತ್ತದೆ. ಪ್ರಸಕ್ತ ಗ್ರಾಮ ಪಂಚಾಯ್ತಿ ಪ್ರದೇಶಕ್ಕೆ ಸಂಬಂಧಿಸಿದ ಈ ಮೇಲಿನ ಪಟ್ಟಿ 13ರಲ್ಲಿನ ಅಂಕಿ-ಸಂಖ್ಯೆಗಳೆಡೆಗೆ ಗಮನ ಹರಿಸಿದರೆ ಅಲ್ಲಿರುವ ಒಟ್ಟು ಭೌಗೋಳಿಕ ಪ್ರದೇಶದ ಅತ್ಯಧಿಕ ಪ್ರದೇಶವು ಅಂದರೆ ಶೇ. 97 ರಷ್ಟು ಭೂಮಿಯನ್ನು ಸಾಗುವಳಿ ಮಾಡಲಾಗಿದೆ. ಅದರರ್ಥ ಇಲ್ಲಿನ ಪ್ರಮುಖ ಸಂಪನ್ಮೂಲವೇ ಭೂಮಿಯಾಗಿದ್ದು, ಭೂಮಿಯಾಧಾರಿತ ಕೃಷಿ ಚಟುವಟಿಕೆಯೇ ಈ ಪ್ರದೇಶದ ಅತ್ಯಂತ ಪ್ರಮುಖವಾದ ಆರ್ಥಿಕ ಚಟುವಟಿಕೆಯೂ, ಇದುವೇ ಆದಾಯದ ಮೂಲವೂ ಹೌದು. ಈ ಪ್ರಮುಖ ಸಂಪನ್ಮೂಲದ ವಿತರಣೆ ಕುರಿತು ಆಭ್ಯಸಿಸಲಾಗಿ (ಪಟ್ಟಿ-14ರಲ್ಲಿ) ಒಟ್ಟು ಕುಟುಂಬಗಳ ಪೈಕಿ ಜಮೀನು ಇಲ್ಲದಿರುವ ಕುಟುಂಬಗಳು ತುಂಬಾ ಕಡಿಮೆ ಶೇ. 9.5 ರಷ್ಟು ಮಾತ್ರ. ಶೇ.20 ರಷ್ಟು ಕುಟುಂಬದವರು ಮಾತ್ರ ತಮಗೆ ಜಮೀನು ಇದೆ ಎಂದು ಧೈರ್ಯ ಮತ್ತು ನಿರ್ಭೀತಿಯಿಂದ ಹೇಳಿದ್ದು, ಇನ್ನುಳಿದ ಶೇ. 70ರಷ್ಟು ಕುಟುಂಬದವರು ಜಮೀನು ಹೊಂದಿರುವುದರ ಬಗ್ಗೆ ಸ್ಪಷ್ಟ ಮಾಹಿತಿ ನೀಡಿಲ್ಲ (ಆದರ್ಶ ಗ್ರಾಮದ ಉದ್ದೇಶಕ್ಕಾಗಿ ನಡೆಸಿದ ಸಮೀಕ್ಷೆಯ ಸಮಯದಲ್ಲಿ). ದತ್ತಾಂಶಗಳ ಇನ್ನೊಂದು ಮೂಲದ ಪ್ರಕಾರ (ಪಟ್ಟಿ-1) ಶೇ. 12.8ರಷ್ಟು ಕುಟುಂಬಗಳು ಮಾತ್ರ ಭೂ-ರಹಿತರಾಗಿದ್ದು ಇನ್ನುಳಿದ ಶೇ. 81.2 ರಷ್ಟು ಕುಟುಂಬಗಳು ಹಿಡುವಳಿದಾರರಾಗಿದ್ದಾರೆ. ಭೂ-ಹಿಡುವಳಿ ಗಾತ್ರವನ್ನು ನೋಡಿದರೆ ಹಿಡುವಳಿದಾರರ ಪೈಕಿ ಶೇ. 17 ರಷ್ಟು ಅತಿ ಚಿಕ್ಕ ಹಿಡುವಳಿದಾರರಿದ್ದಾರೆ (2.20 ಎಕರೆಗಿಂತ ಕಡಿಮೆ), ಶೇ. 35 ರಷ್ಟು ಸಣ್ಣ ಹಿಡುವಳಿದಾರರು (2.20 ಎಕರೆಯಿಂದ 5.00 ಎಕರೆ), ಶೇ. 36.5 ರಷ್ಟು ಅರೆ ಮಧ್ಯಮ ಹಿಡುವಳಿದಾರರಿದ್ದು (5.00 ಎಕರೆಯಿಂದ 10.00 ಎಕರೆ) ಇನ್ನುಳಿದ ಶೇ. 11ರಷ್ಟು ದೊಡ್ಡ ಹಿಡುವಳಿದಾರರಿದ್ದಾರೆ (25.00 ಎಕರೆಗಿಂತ ಹೆಚ್ಚು). ಈ ವಿಶ್ಲೇಷಣೆಯಿಂದ ತಿಳಿದು ಬರುವುದೇನೆಂದರೆ ಕೆಲವೇ ಜನರ ಸ್ವಾಧೀನದಲ್ಲಿ ಅಧಿಕ ಸಂಪನ್ಮೂಲವೂ, ಅಧಿಕ ಜನರಿಗೆ ಕಡಿಮೆ ಸಂಪನ್ಮೂಲವೂ ಇರುವುದು ಸ್ಪಷ್ಟವಾಗುತ್ತದೆ.
ಇಡೀ ಪಂಚಾಯತ್ ಪ್ರದೇಶವು ಅತ್ಯಂತ ಫಲವತ್ತಾದ ಮಣ್ಣು (Black Cotton Soil)ಳ್ಳ ಹಾಗೂ ಶೇ. 1 ರಿಂದ 2 ರಷ್ಟು ಇಳಿಜಾರನ್ನು ಹೊಂದಿರುವ ವಿಶಾಲವಾದ ಭೂ ಸಂಪತ್ತು ಇಲ್ಲಿನ ಅತಿ ಮುಖ್ಯವಾದ ಸಂಪನ್ಮೂಲವಾಗಿದೆ. ಈ ಭೂಮಿಯು ಉತ್ತರ ಮತ್ತು ಈಶಾನ್ಯ ಭಾಗಗಳನ್ನು ಹೊರತುಪಡಿಸಿ ಊರಿನ ಸುತ್ತಲೂ ಅಂದರೆ ಗ್ರಾಮದ ಪೂರ್ವ, ದಕ್ಷಿಣ, ಪಶ್ಚಿಮ ಮತ್ತು ವಾಯುವ್ಯ ಭಾಗಗಳಲ್ಲಿ ಹರಡಿದೆ. ಉತ್ತರ ಪರಿವರ್ತನ ವಲಯ ಹಾಗೂ ಉತ್ತರ ಶುಷ್ಕ ವಲಯಗಳ ಅಂಚಿನಲ್ಲಿರುವ ಕೃಷಿ ವಾಯುಗುಣ ವಲಯದಲ್ಲಿರುವ ಈ ಪ್ರದೇಶದಲ್ಲಿ ಈ ಮಣ್ಣಿನ ಇರುವಿಕೆಗೆ ಇಲ್ಲಿ ಹರಿದಿರುವ ತೋಪರಿ ಹಳ್ಳ ಮತ್ತು ಅದರ ಉಪ-ಹಳ್ಳಗಳೇ ಕಾರಣ. ಇಂಥ ಮಣ್ಣಿನಲ್ಲಿ ಮುಂಗಾರು ಋತುಮಾನದಲ್ಲಿ ಆಹಾರ ಬೆಳೆಯಾದ ಹೆಸರು ಮತ್ತು ವಾಣಿಜ್ಯ ಬೆಳೆಯಾದ ಈರುಳ್ಳಿ(ಉಳ್ಳಾಗಡ್ಡಿ)ಗಳಿಗೆ ಮತ್ತು ಹಿಂಗಾರು ಋತುಮಾನದಲ್ಲಿ ಕಡಲೆ, ಬಿಳಿಜೋಳ, ಗೋಧಿ ಮೊದಲಾದ ಆಹಾರ ಬೆಳೆಗಳು ಹಾಗೂ ವಾಣಿಜ್ಯ ಬೆಳೆಯಾದ ಹತ್ತಿ ಬೆಳೆಗಳಿಗೆ ಅತ್ಯಂತ ಉತ್ಕೃಷ್ಟವಾದ ಭೂಮಿ ಇದಾಗಿದ್ದು ಶೇ. 94 ರಷ್ಟು ಜಮೀನು ಮಳೆಯಾಧಾರಿತ ಕೃಷಿ ಚಟುವಟಿಕೆಗೆ ಒಳಪಟ್ಟಿದೆ. ಹೈನುಗಾರಿಕೆ: ಸಾಕು ಪ್ರಾಣಿಗಳಲ್ಲಿ ಹಾಲಿನ ಮೂಲವಾದ ಹಸುಗಳನ್ನು ಈ ಗ್ರಾಮದಲ್ಲಿ ಪ್ರತಿಯೊಬ್ಬರ ಮನೆಯಲ್ಲಿಯೂ ಕಾಣಬಹುದಾಗಿದೆ. ಕೆಲವರ ಕುಟುಂಬಗಳಲ್ಲಿ ಎತ್ತುಗಳು, ಕೆಲವೇ ಕುಟುಂಬಗಳಲ್ಲಿ ಎಮ್ಮೆಗಳು, ಕೆಲವರಲ್ಲಿ ಕುರಿಗಳೂ ಗ್ರಾಮಸ್ಥರ ಸಂಪತ್ತುಗಳಾಗಿವೆ. ಕಬ್ಬೆನೂರಿನಲ್ಲಿ ಹೈನುಗಾರಿಕೆ ಭರದಿಂದ ನಡೆಯುತ್ತಿದ್ದರೆ, ಹಾರೋಬೆಳವಾಡಿಯಲ್ಲಿ ಇದು ತುಂಬಾ ಕಡಿಮೆ. ಹಾರೋಬೆಳವಾಡಿಯಲ್ಲಿ ಶೇ. 30 ರಷ್ಟು ಕುಟುಂಬಗಳು ಮತ್ತು ಕಬ್ಬೇನೂರಿನಲ್ಲಿ ಶೇ. 90 ರಷ್ಟು ಕುಟುಂಬಗಳು ಹೈನೋದ್ಯಮದಲ್ಲಿ ತೊಡಗಿಕೊಂಡಿದ್ದಾರೆ. ಇಡೀ ಧಾರವಾಡ ತಾಲ್ಲೂಕಿನಲ್ಲಿಯೇ ಅತಿ ಹೆಚ್ಚು ಹಾಲು ಉತ್ಪಾದಿಸುವ, ಅಂದರೆ ದಿನವೊಂದಕ್ಕೆ 3000 ಲೀಟರ್ ಗೂ ಅಧಿಕ ಹಾಲು ಕಬ್ಬೇನೂರ ಗ್ರಾಮವೊಂದರಲ್ಲೇ ಉತ್ಪತ್ತಿಯಾಗುತ್ತದೆ. ಅಂತೆಯೇ ಈ ಗ್ರಾಮ(ಕಬ್ಬೆನೂರು)ವನ್ನು ತಾಲ್ಲೂಕಿನ ಹಾಲಿನ ಪಾತ್ರೆಯೆಂದು ಕರೆಯಲ್ಪಡುತ್ತದೆ. ಕೃಷಿ ಹೈನುಗಾರಿಕೆಗಳಲ್ಲಿ ತೊಡಗಿರುವವರನ್ನು ಹೊರತುಪಡಿಸಿ ಹಾರೋಹಳ್ಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳ್ಳಿಗಳಲ್ಲಿ 51 ಕುಟುಂಬದಲ್ಲಿ ಕುಶಲ ಕೂಲಿ ಕಾರ್ಮಿಕರಿದ್ದು 251 ಕುಟುಂದಲ್ಲಿ ಯಾವುದೇ ಕುಶಲ ಕಾರ್ಮಿಕರುಗಳು ಇಲ್ಲದಿರುವುದು ಕಂಡುಬಂದಿರುತ್ತದೆ, ಸರ್ಕಾರಿ ವೇತನಾ ನೌಕರರು 30 ಜನರು ಮಾತ್ರವಿದ್ದು ಖಾಸಗಿ ವೇತನಾ ನೌಕರರು 17 ಕುಟುಂಬಗಳು ಹೊಂದಿರುತ್ತವೆ, 4 ಕುಟುಂಬಗಳು ಮಾತ್ರ ಕೆಲಸಕ್ಕಾಗಿ ವಲಸೆ ಹೋಗುವವರಾಗಿದ್ದು. 1 ಕುಟುಂಬದವರು 18 ವರ್ಷಕ್ಕಿಂತ ಸಣ್ಣವರು ಕೆಲಸಕ್ಕಾಗಿ ವಲಸೆ ಹೋಗಿದ್ದಾರೆ. ಜೀವ ವೈವಿಧ್ಯತೆಯ ಚಿತ್ರಣ (Bio-diversity Profile): ಈ ಪ್ರಬೇಧದಲ್ಲಿ ಸ್ವಾಭಾವಿಕ ಸಸ್ಯವರ್ಗ, ಬೆಳೆಗಳು, ಜೀವ-ಜಂತುಗಳು ಮುಖ್ಯವಾದವುಗಳಾಗಿವೆ. (ಅ) ಸ್ವಾಭಾವಿಕ ಸಸ್ಯವರ್ಗ: ಈ ಭಾಗದಲ್ಲಿ ಸಾಮಾನ್ಯವಾಗಿ ಕಂಡಬರುವ ಸಸ್ಯಸಂಪತ್ತೆಂದರೆ ಬೇವಿನ ಮರಗಳು, ಜಾಲಿ ಗಿಡಗಳು ಮತ್ತು ಬನ್ನಿಮರಗಳು. ಆದರೆ ಇವುಗಳು ದಟ್ಟವಾಗಿರದೇ ಅಲ್ಲೊಂದು ಇಲ್ಲೊಂದು ಅತಿ ವಿರಳವಾಗಿ ಹರಡಿಕೊಂಡಿರುತ್ತವೆ. ಬೇವಿನ ಮರಗಳನ್ನು ನೆರಳು ಮತ್ತು ಬೇವಿನ ಬೀಜಕ್ಕೂ, ಬನ್ನಿ ಮರಗಳನ್ನು ಧಾರ್ಮಿಕ ಆಚರಣೆಗಳ ದೃಷ್ಟಿಯಿಂದಲೂ, ಜಾಲಿ ಗಿಡಗಳನ್ನು ಕರಿಜಾಲಿಯಾಗಿದ್ದರೆ ಆಡು-ಕುರಿಗಳಿಗೆ ಮೇವಾಗಿಯೂ ಮತ್ತು ಹೊಲಗಳಲ್ಲಿ ನೆರಳಿಗಾಗಿ ನೈಸರ್ಗಿಕವಾಗಿಯೇ ಬೆಳೆದಿರುವ ಗಿಡಗಳನ್ನು ಕಾಪಾಡಿಕೊಂಡಿದ್ದಾರೆ ಮತ್ತು ಬಳ್ಳಾರಿ ಜಾಲಿಯನ್ನು ಹೊಲಗಳಿಗೆ ಬೇಲಿಯಾಗಿಯೂ ಉಳಿಸಿಕೊಂಡಿದ್ದಾರೆ. ಇವುಗಳಲ್ಲದೇ ಬೆರಳೆಣಿಕೆಯಲ್ಲಿ ಗ್ರಾಮದ ರೈತರು ತಮ್ಮ ಜಮೀನುಗಳಲ್ಲಿ ಸಾಗವಾಣಿ ಮರಗಳಂಥ ಕೆಲ ವಾಣಿಜ್ಯ ಸಸ್ಯಗಳನ್ನು ಬೆಳೆಸಿಕೊಂಡಿದ್ದಾರೆ. (ಆ) ಬೆಳೆ ವೈವಿಧ್ಯತೆ: ಸ್ಥಳೀಯ ಕೃಷಿ-ವಾಯುಗುಣ ಪರಿಸರ ಮತ್ತು ಋತುಮಾನಕ್ಕನುಗುಣವಾಗಿ ಆಹಾರ ಮತ್ತು ವಾಣಿಜ್ಯ ಬೆಳೆಯನ್ನು ಬೆಳೆಯುತ್ತಾರೆ. ಅಲ್ಪಾವಧಿ ಬೆಳೆಗಳಾದ ಹೆಸರು, ಈರುಳ್ಳಿ, ಉದ್ದು ಮತ್ತು ಸೋಯಾ ಅವರೆಯಂಥವುಗಳನ್ನು ಮುಂಗಾರು ಅವಧಿಯಲ್ಲಿ ಬೆಳೆಯುವುದರೊಂದಿಗೆ ಹತ್ತಿಯನ್ನೂ ದೀರ್ಘಾವಧಿ ಬೆಳೆಯಾಗಿ ಬೆಳೆಯುತ್ತಾರೆ. ಹಿಂಗಾರಿ ಅವಧಿಯಲ್ಲಿ ಕಡಲೆ, ಬಿಳಿ ಜೋಳ, ಗೋಧಿ ಇತ್ಯಾದಿ ಬೆಳೆಗಳನ್ನು ಬೆಳೆಯುತ್ತಾರೆ. ಅಲ್ಲದೇ ಪೇರಲ ಮತ್ತು ಬಾಳೆ ತೋಟಗಳನ್ನು ಐದಾರು ಜನ ರೈತರು ಮಾತ್ರ ನಿರ್ವಹಿಸುತ್ತಿದ್ದಾರೆ. (ಇ) ಪ್ರಾಣಿ ವೈವಿಧ್ಯತೆ: ಇವುಗಳನ್ನು ಸಾಕು ಮತ್ತು ಕಾಡು ಪ್ರಾಣಿಗಳೆಂದು ವರ್ಗೀಕರಿಸಲಾಗಿದೆ. ಸಾಕು ಪ್ರಾಣಿಗಳಲ್ಲಿ ಹಾಲಿನ ಮೂಲವಾದ ಹಸುಗಳನ್ನು ಈ ಗ್ರಾಮದಲ್ಲಿ ಪ್ರತಿಯೊಬ್ಬರ ಮನೆಯಲ್ಲಿಯೂ ಕಾಣಬಹುದಾಗಿದೆ. ಕೆಲವರ ಕುಟುಂಬಗಳಲ್ಲಿ ಎತ್ತುಗಳು, ಕೆಲವೇ ಕುಟುಂಬಗಳಲ್ಲಿ ಎಮ್ಮೆಗಳು, ಕೆಲವರಲ್ಲಿ ಕುರಿಗಳೂ ಗ್ರಾಮಸ್ಥರ ಸಂಪತ್ತುಗಳಾಗಿವೆ. ಅದಲ್ಲದೇ ನರಿ, ತೋಳ, ಮೃಗಜಾತಿಯ ಪ್ರಾಣಿಗಳು, ಓತಿಕ್ಯಾತ, ಗೋಸುಂಬೆ, ಹಾವು, ಹಾವುರಾಣಿ ಇತ್ಯಾದಿ ಸರೀಸೃಪಗಳು, ಎಲ್.ಬಿ.ಬಿ.ಗ್ರಬ್, ಕ್ರೈಸೋಪರ್ಲಾ, ಕಡ್ಜಿರ್ಗಾ, ಮೊದಲಾದ ಪರೋಪಕಾರಿ ಕೀಟಗಳು, ನವಿಲು, ಬೆಳ್ಳಕ್ಕಿ, ಕೊಕ್ಕರೆ ಮೊದಲಾದ ಪಕ್ಷಿಗಳೆಲ್ಲವೂ ಈ ಪ್ರದೇಶದಲ್ಲಿ ಕಂಡುಬರುವ ಪಕ್ಷಿ ಮತ್ತು ಪ್ರಾಣಿ ಸಂಕುಲಗಳಾಗಿವೆ. ಹಸು ಸಾಕಾಣಿಕೆಯನ್ನು ಉಪ ಕಸುಬಾಗಿ ಅನುಸರಿಸಿ ಪಶುಸಂಗೋಪನೆಗೆ ಹಚ್ಚಿನ ಮಹತ್ವ ಕೊಟ್ಟಿರುವ ಈ ಗ್ರಾಮಗಳ ಹೊರ ವಲಯದಲ್ಲಿ ವಿಶೇಷವಾಗಿ ಗ್ರಾಮದ ದಕ್ಷಿಣ ಭಾಗದಲ್ಲಿ ಬಹುಸಂಖ್ಯೆಯಲ್ಲಿ ತಿಪ್ಪೆಗಳಿದ್ದು, ತಿಪ್ಪೆ ಗೊಬ್ಬರವನ್ನು ಹೇರಳವಾಗಿ ಬಳಸುತ್ತಿದ್ದಾರೆ. ಹಾಗಾಗಿ ಮಣ್ಣಿನಲ್ಲಿ ಸಾವಯವ ಪದಾರ್ಥವೂ ಸಾಕಷ್ಟಿದೆ. ಆದರೆ ಅದರ ದೃಢತೆಯಾಗಬೇಕಾಗಿದ್ದು ಮಣ್ಣಿನ ಪರೀಕ್ಷೆಯ ಅವಶ್ಯಕತೆಯೆದ್ದು ಕಾಣುತ್ತದೆ. ಈ ಪ್ರದೇಶದಲ್ಲಿ 8 ರಿಂದ 10 ಜನ ರೈತರು ತಮ್ಮ ಸ್ವಯಂ ಆಸಕ್ತಿಯಿಂದ ಮಣ್ಣಿನ ಪರೀಕ್ಷೆ ಮಾಡಿಸಿ ಮಣ್ಣಿನ ಆರೋಗ್ಯದ ಕಾರ್ಡ್‍ಗಳನ್ನು ಹೊಂದಿದ್ದರೆ ಶೇ. 99 ರಷ್ಟು ರೈತರ ಮಣ್ಣಿನ ಪರೀಕ್ಷೆ ಆಗಬೇಕಾಗಿದೆ. ಕೃಷಿ ಇಲಾಖೆಯು ಈಗಾಗಲೇ ರೈತರ ಜಮೀನುಗಳ ಮಣ್ಣಿನ ಮಾದರಿಗಳನ್ನು ಸಂಗ್ರಹಿಸಿ ಮಣ್ಣು ಪರೀಕ್ಷಾ ಪ್ರಯೋಗಾಲಯಕ್ಕೆ ರವಾಣಿಸಲಾಗಿದೆ. ಸಲಹೆಗಳು:
2. ಪಟ್ಟೇದ ಸರುವು ಮತ್ತು ಬಾವಿ ಹಳ್ಳಗಳಿಗೆ ಎರಡೆರಡು ಚೆಕ್ ಡ್ಯಾಮ್ಗಳು. 3. ಬಂಡರ ಹಳ್ಳಕ್ಕೆ ಇನ್ನೂ 4 ರಿಂದ 5 ಚೆಕ್ ಡ್ಯಾಮ್ಗಳನ್ನು ನಿರ್ಮಿಸಬಹುದಾಗಿದೆ. 4. ನಾಗಪ್ಪನ ಹಳ್ಳಕ್ಕೆ 3 ಚೆಕ್ ಡ್ಯಾಮ್ಗಳ ನಿರ್ಮಾಣ ಮಾಡಬಹುದು. ಹಾಗೂ 5. ಅಕ್ಕಿಯಾರ ಸರುವಿನಲ್ಲಿ 3 ಚೆಕ್ ಡ್ಯಾಮ್ ನಿರ್ಮಿಸಬಹುದಾಗಿದೆ. ಮತ್ತು ಕಬ್ಬೇನೂರಿನಲ್ಲಿ 6. ಉಪ್ಪಿನ ಬೆಟಗೇರಿ ರಸ್ತೆಗುಂಟ ಹರಿಯುವ ತೊರೆಗೆ ಮೇಲ್ಬದಿಯಲ್ಲಿ ಒಂದು ಗೋಕಟ್ಟೆ. 7. ಕೋಮ್ಮನ ಸರುವಿಗೆ ಮೇಲ್ಬದಿಯಲ್ಲಿ ಒಂದು ಗೋಕಟ್ಟೆ. 8. ಕಳ್ಳಿ ಸರುವುಗೆ 2 ಗೋಕಟ್ಟೆ. 9. ಉಳ್ಳಿಗೇರಿ ರಸ್ತೆ ಮತ್ತು ಊರಿನ ಬಂಡಿದಾರಿ ಸೇರುವ ಜಾಗೆಯಿಂದ ದಕ್ಷಿಣಾಭಿಮುಖವಾಗಿ ಹರಿದು ತೋಪರಿ ಹಳ್ಳ ಸೇರುವ ತೊರೆಗೆ 2 ಗೋಕಟ್ಟೆಗಳು. ಹಾಗೂ 10. ಡೊಂಕ ಹಳ್ಳಕ್ಕೆ 1 ಗೋಕಟ್ಟೆ. ಇವುಗಳಲ್ಲದೇ
ಉಪ ಸಂಹಾರ: ಮೇಲ್ಕಾಣಿಸಿದ ಸ್ಥೂಲವಾದ ಅಧ್ಯಯನದ ಅಂಶಗಳನ್ನು ಆಧರಿಸಿ ಹೇಳುವುದಾದರೆ, ಭೌತಿಕ, ಸಾಮಾಜಿಕ, ಆರ್ಥಿಕ ಕ್ಷೇತ್ರಗಳಲ್ಲಿ ಅಭಿವೃದ್ಧಿ ಸಾಧಿಸಲು ಹಾರೋಬೆಳವಾಡಿ ಗ್ರಾಮ ಪಂಚಾಯತ್ ಪ್ರದೇಶವು ಅತ್ಯಂತ ಸೂಕ್ತ ಪ್ರದೇಶವೇ ಆಗಿದೆ. ಆದರೆ ಸಾಮಾಜಿಕ ಕ್ಷೇತ್ರದಲ್ಲಿನ ಬದಲಾವಣೆಗೆ ನಾಮಕಾವಸ್ಥೆ ಸಮಾಜಕಾರ್ಯ ಯಶಸ್ವಿಯಾಗದು, ನುರಿತ ತಜ್ಞರ ತಂಡದ ಅವಿರತ ಶ್ರಮದಿಂದ ಮಾತ್ರ ಇಲ್ಲಿ ಹ್ಯೂಮನ್ ಎಂಜಿನೀಯರಿಂಗ್ ಮಾಡಬೇಕಾಗುತ್ತದೆ. ಭೌತಿಕ ಮತ್ತು ಆರ್ಥಿಕ ಕ್ಷೇತ್ರಗಳು ಸಾಧನೆಗೆ ಸರಾಗ ಮಾರ್ಗಗಳಾಗಿವೆ. ಆದರೆ ಇವಾವುದಕ್ಕೂ ಒಂದು ವರ್ಷದ ಅವಧಿ ಸಾಕಾಗುವುದಿಲ್ಲ, ಕನಿಷ್ಠ 5 ವರ್ಷಗಳ ನಿರಂತರ ಪ್ರಯತ್ನಗಳಾದಲ್ಲಿ ಹಾರೋಬೆಳವಾಡಿ ಗ್ರಾಮ ಪಂಚಾಯತ್ನ ಸಮಗ್ರ ಅಭಿವೃದ್ಧಿಯಾಗಿ ನಿಜವಾದ ಮಾದರಿ ಗ್ರಾಮ ಪಂಚಾಯತ್ ಆಗಿ ಹೊರಹೊಮ್ಮುವುದರಲ್ಲಿ ಸಂಶಯವೇ ಇಲ್ಲ. GRAAM (ಗ್ರಾಮ್) ಸಂಸ್ಥೆಯು ಅಧ್ಯಯನ ತಂಡದ ನೇತೃತ್ವವನ್ನು ನನಗೆ ವಹಿಸಿದ್ದಕ್ಕೆ ನಾನು ಚಿರಋಣಿಯಾಗಿದ್ದೇನೆ. ಗ್ರಂಥ ಋಣ: SAGY Guidelines, Govt. of India http://saanjhi.gov.in/pdf/guidelines_english.pdf ಡಾ. ಸಿದ್ದಪ್ಪ ಎಸ್. ಮಡಿವಾಳರ, MA, PhD. ಹಿರಿಯ ಸಂಶೋಧನಾಧಿಕಾರಿ (GRAAM), ಹಿರಿಯ ಸಿಬ್ಬಂಧಿ, ಅಭಿವೃದ್ಧಿ ಮತ್ತು ನಿರ್ವಹಣಾ ವಿಭಾಗ, ಸ್ನಾತಕೋತ್ತರ ಕೇಂದ್ರ, ವ್ಹಿಲೀಡ್ ಕ್ಯಾಂಪಸ್. ಮೈಸೂರು ವಿಶ್ವವಿದ್ಯಾಲಯ, ಮೈಸೂರು ಪ್ರಕಾಶ್ ಎಂ. ಸಹ-ಸಂಯೋಜಕರು, ಸಮುದಾಯ ಸಂಪರ್ಕ ವಿಭಾಗ, ಗ್ರಾಮ್ (GRAAM), ಮೈಸೂರು
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
|
|
|
|
SITE MAP
SitePOSH |
NIRATHANKAOUR OTHER WEBSITESSubscribe |
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |