ಪೀಠಿಕೆ: ವ್ಯಕ್ತಿ ಮತ್ತು ಸಮಾಜದ ನಡುವೆ ಬಿಡಿಸಲಾಗದ ಬಾಂಧವ್ಯ ಇದೆ. ಅವು ಒಂದೇ ನಾಣ್ಯದ ಎರಡು ಮುಖಗಳು. ವ್ಯಕ್ತಿಗಳಿಲ್ಲದೆ ಸಮಾಜವಿಲ್ಲ, ಸಮಾಜವಿಲ್ಲದ ಬದುಕು ಊಹಿಸಲು ಸಾಧ್ಯವಿಲ್ಲ. ಸಮಾಜವೆಂದರೆ, ಮಾನವನ ಸಾಮಾಜಿಕ ಸಂಬಂಧಗಳ ಬಲೆ ಎಂದು ಅರ್ಥೈಸಲಾಗಿದೆ. ಸಮಾಜದ ಅಸ್ತಿತ್ವ, ಉಗಮ ಹಾಗೂ ರಚನೆಯ ಕುರಿತು ಅನೇಕ ವಾದ-ವಿವಾದಗಳಿವೆ. ಆದರೆ ಒಂದು ಮಾತ್ರ ನಿಜ. ಮಾನವ ಸಮಾಜದ ರಚನೆ ಅತ್ಯಂತ ಪುರಾತನವಾದದು. ಕೋಟಿ ಕೋಟಿ ವರ್ಷಗಳ ಹಿಂದೆ ನಿಸರ್ಗ, ಚರಾತರ ವಸ್ತುಗಳು ಪಶು, ಪ್ರಾಣಿ, ಪಕ್ಷಿ, ಜೀವ ರಾಶಿಗಳ ಜೊತೆಗೆ ಮನುಷ್ಯನೂ ಹುಟ್ಟಿದ. ಪ್ರಾಣಿಗಳ ಜೊತೆಗೆ ಅವುಗಳ ಹಾಗೆ ಬದುಕಿದ. ಮಂಗನಿಂದ ಮಾನವ ಎಂದು ನಾವು ಯಾವಾಗಲೂ ಹೇಳುತ್ತೇವೆ. ಮಾನವನ ವಿಕಸನ ಹಂತ ಹಂತವಾಗಿ ನಡೆಯಿತು. ಪ್ರಾಣಿಗಳಿಲ್ಲವೂ ಮಾನವ ಅತ್ಯಂತ ಶ್ರೇಷ್ಠ ಪ್ರಾಣಿ, ನಗುವ, ಭಾವಿಸುವ ಹಾಗೂ ವೈಚಾರಿಕ ಶಕ್ತಿಯಿಂದಾಗಿ ಮನುಷ್ಯನು ಶ್ರೇಷ್ಠನಾದ. ಮೂಲತಃ ಪ್ರಾಣಿಗಳ ಅಗತ್ಯತೆಗಳನ್ನು ಹೊಂದಿರುವ ಮಾನವ ತನ್ನ ಭಿನ್ನತೆಯಿಂದಾಗಿ, ಶ್ರೇಷ್ಠತೆಯಿಂದಾಗಿ ಮಾನವ ಅಗತ್ಯತೆಗಳನ್ನು ಕಂಡುಕೊಂಡ. ಅದರಲ್ಲಿ ಸಮಾಜ, ಸಾಮಾಜಿಕ ಬದುಕು ಅತ್ಯಂತ ಅಗತ್ಯ ಹಾಗೂ ಅನಿವಾರ್ಯವಾಗಿ ಮಾಡಿಕೊಂಡ. ಸಾಮಾಜಿಕ ಜೀವಿಯಾದ ಮಾನವ ತನ್ನ ಬದುಕನ್ನು ಹಸನಾಗಿಸಿಕೊಳ್ಳಲು ಸಹಜೀವನ, ಸಂಘ ಜೀವನವನ್ನು ಆರಂಭಿಸಿದ. ಅನೇಕ ಗುಂಪು, ಸಂಘ ಸಂಸ್ಥೆಗಳನ್ನು ಕಟ್ಟಿಕೊಂಡ. ಜಾತಿ, ಸಮುದಾಯ ಹಾಗು ಧರ್ಮಗಳು, ಮಾನವನ ಬದುಕನ್ನು ರೂಪಿಸುವ ಮೂಲಕ ಒಂದು ವ್ಯವಸ್ಥೆಗೆ ಒಳಪಡಿಸಿದವು. ಇಂದಿಗೂ ಅವು ತಮ್ಮ ಪ್ರಭಾವ ಹಾಗು ನಿಯಂತ್ರಣವನ್ನು ಹೊಂದಿವೆ. ವ್ಯಕ್ತಿ ಮತ್ತು ಸಮಾಜದ ನಡುವೆ ಅವಿನಾಭಾವ ಸಂಬಂಧವಿದೆ. ಏಕೆಂದರೆ ವ್ಯಕ್ತಿಯು ಜನ್ಮತಾಳುವುದು ಸಮಾಜದಲ್ಲಿಯೇ. ಕುಟುಂಬದಲ್ಲಿ ಲಾಲನೆ-ಪಾಲನೆ, ಪೋಷಣೆ ನಂತರ ಸಂಬಂಧಿಗಳು, ನೆರೆಹೊರೆಯವರು, ಶಾಲೆ-ಶಿಕ್ಷಕರು, ಸ್ನೇಹಿತರು-ಹೀಗೆ ಅನೇಕರಿಂದ ತನ್ನ ವರ್ತನೆ, ಸ್ವಭಾವದಲ್ಲಿ ಮಾರ್ಪಾಡುಗಳನ್ನು ಮಾಡಿಕೊಂಡು ಸಾಮಾಜಿಕ ವ್ಯಕ್ತಿಯಾಗುತ್ತಾನೆ. ಮುಂದೆ ಜವಾಬ್ದಾರಿಯುತ ನಾಗರಿಕನಾಗುತ್ತಾನೆ. ಯಾವ ವ್ಯಕ್ತಿಗೆ ಸರಿಯಾದ ಪೋಷಣೆ-ಪ್ರೋತ್ಸಾಹ ಸಿಗುವುದಿಲ್ಲ, ಅವನು ಅನ್ಯ ಮಾರ್ಗಹಿಡಿದು ಸಮಾಜಕ್ಕೆ ವಿರುದ್ಧವಾಗಿ ಬೆಳೆದು ಕಂಟಕಪ್ರಾಯವಾಗುತ್ತಾನೆ. ಅಂಥವರ ಜವಾಬ್ದಾರಿ ಸಮಾಜದ್ದಾಗಿದೆ.
ಮಾನವ ಇಹ ಮತ್ತು ಪರ ಎಂದು ತನ್ನ ಜೀವನವನ್ನು ವಿಭಜಿಸಿದ್ದಾನೆ. ಇಹ ಜೀವನ ಅದು ಲೌಕಿಕ, ಪರಜೀವನ ಅದು ಅಲೌಕಿಕ ಇಹ ಅಥವಾ ಲೌಕಿಕ ಜೀವನ ನಮಗೆ ಚಿರಪರಿಚಿತ. ಏಕೆಂದರೆ ನಾವೆಲ್ಲ ಅದರಲ್ಲಿಯೇ ಬದುಕುತ್ತಿದ್ದೇವೆ. ಪರಲೋಕ ಅದು ಪಾರಮಾರ್ಥಿಕ ಅಥವಾ ದೈವಿಕ. ಇನ್ನೊಂದು ಅರ್ಥದಲ್ಲಿ ಸ್ವರ್ಗಲೋಕವು ಇಹಲೋಕದಲ್ಲಿ ಸತ್ಕಾರ್ಯಗಳನ್ನು ಮಾಡಿದರೆ, ಪರಲೋಕದಲ್ಲಿ (ಸ್ವರ್ಗದಲ್ಲಿ) ಸುಖವಾಗಿರಬಹುದು ಅಥವಾ ಅಲ್ಲಿ ಸ್ಥಾನ ಸಿಗಬಹುದು ಎಂಬುದು ಎಲ್ಲರ ಆಶೆ, ಬಯಕೆ, ಹಾಗು ಹಾರೈಕೆ. ಮಾನವ ತನ್ನ ಇತಿಹಾಸದುದ್ದಕ್ಕೂ ಆಶೆ ಪಡುತ್ತಾ, ಸುಖಕ್ಕಾಗಿ ಅಲೆದಾಡುತ್ತ ಬಂದಿರುವುದನ್ನು ಕಾಣುತ್ತೇವೆ. ತನ್ನಲ್ಲಿ ಇದ್ದುದಕ್ಕಿಂತ ಇಲ್ಲದರ ಬಗ್ಗೆ ಆಶೆ ಪಡುವುದು, ಸಿಕ್ಕ ಸಂತೋಷದಿಂದಲೇ ತೃಪ್ತನಾಗದೇ ಹೆಚ್ಚಿನ ಸುಖಕ್ಕಾಗಿ ಹಾತೊರೆಯುವುದನ್ನು ಮಾಡುತ್ತಲೇ ಬಂದಿದ್ದಾನೆ. ಅದರಿಂದ ತಾನೂ ತೊಂದರೆಗೆ, ಸಮಸ್ಯೆಗಳಿಗೆ ಈಡಾಗಿ ಸಮಾಜವನ್ನು ತೊಂದರೆಗೆ ಗುರಿಮಾಡಿದ್ದಾನೆ. ಬಹುಶಃ ಇದೇ ಸಾಮಾಜಿಕ ಸಮಸ್ಯೆಗಳ ಉಗಮ ಸ್ಥಾನವಾಗಿರಬಹುದೇನೋ? ಎಲ್ಲಿಯವರೆಗೆ ದುಃಖ, ಅತೃಪ್ತಿ, ಅಸಮಾಧಾನಗಳು ಇರುತ್ತವೆಯೋ, ಅಲ್ಲಿಯವರೆಗೆ ವ್ಯಕ್ತಿಗಳು ಸುಮ್ಮನೇ ಕೂಡುವುದಿಲ್ಲ. ಏನಾದರೂ, ಹೇಗಾದರೂ, ಮಾಡಿ ತಮ್ಮ ಆಶೆಯನ್ನು ಈಡೇರಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಇದರಿಂದ ಸಮಾಜಕ್ಕೆ ಒಳ್ಳೆಯದಕ್ಕಿಂತ ಕೆಟ್ಟದೇ ಬಹಳ ಆಗಿದೆ. ಅಲ್ಲದೆ ನಿಜವಾದ ಸುಖ ಯಾವುದು ಎಂಬುದನ್ನು ನಿರ್ಧರಿಸಲಿಕ್ಕೆ, ನಮ್ಮಿಂದ ಇಲ್ಲಿಯವರೆಗೆ ಸಾಧ್ಯವಾಗಿಲ್ಲ. ಆಶೆಗೆ ಆದಿ-ಅಂತ್ಯ ಯಾವುದೂ ಇಲ್ಲ. ಅತಿ ಆಶೆ, ದುರಾಶೆ ಆಗುತ್ತದೆ. ದುರಾಶೆ ಒಳ್ಳೆಯದಲ್ಲ. ಅದು ಕೆಡಕನ್ನು ಉಂಟು ಮಾಡುತ್ತದೆ. ತಮ್ಮ ದುರಾಶೆಗಳನ್ನು ಈಡೇರಿಸಿಕೊಳ್ಳಲು ವ್ಯಕ್ತಿಗಳು ದುರ್ಮಾರ್ಗವನ್ನು ಹಿಡಿಯುತ್ತಾರೆ. ಎಲ್ಲ ರೀತಿಯ ಅನಾಹುತಕ್ಕೆ ಕಾರಣರಾಗುತ್ತಾರೆ. ಸಮಾಜವನ್ನೂ ತಪ್ಪುದಾರಿಗೆ ಎಳೆಯುತ್ತಾರೆ. ಆಧುನಿಕ ಸಮಾಜ: ಇಂದಿನ ಪ್ರಸ್ತುತ ಸಮಾಜವನ್ನು ನಾವು ಆಧುನಿಕ ಸಮಾಜವೆಂದು ಗುರುತಿಸಿದ್ದೇವೆ. ಏಕೆಂದರೆ ವಿಜ್ಞಾನ, ತಂತ್ರಜ್ಞಾನಗಳು ಮೈದಳೆದು, ಹೊಸ-ಹೊಸ ಆವಿಷ್ಕಾರಗಳು ನಡೆದು ಜೌದ್ಯೋಗಿಕರಣದಿಂದ ನಾಗರೀಕರಣವಾಗಿ ಆಧುನೀಕರಣವಾಗಿದೆ. ಇಂದು ವಿಜ್ಞಾನ ಮತ್ತು ತಂತ್ರಜ್ಞಾನಗಳು ತಮ್ಮ ಉತ್ತುಂಗ ಸ್ಥಿತಿಯನ್ನು ತಲುಪಿದೆ. ಮಾನವ ಇಂದು ಸಾಧಿಸದೇ ಇರುವುದು ಯಾವುದೂ ಇಲ್ಲ ಎನ್ನುವ ಮಟ್ಟಿಗೆ ಬೆಳೆದಿವೆ. ಇಂದು ಮಾನವ ಹಕ್ಕಿಯಂತೆ ಹಾರಬಲ್ಲ ಮೀನಿನಂತೆ ನೀರಿನಲ್ಲಿ ಈಜಬಲ್ಲ. ಅಷ್ಟೇ ಅಲ್ಲ ಒಂದು ಲೋಕದಿಂದ ಇನ್ನೊಂದು ಲೋಕಕ್ಕೆ ಜಿಗಿಯಬಲ್ಲ, ಇಂಥ ಅನೇಕ ವಿಸ್ಮಯಕಾರಿ ಆವಿಷ್ಕಾರಗಳು ನಡೆದಿವೆ, ಇನ್ನೂ ನಡೆಯುತ್ತಿವೆ. ಆಧುನೀಕರಣದ ಪ್ರಕ್ರಿಯೆ ಅದು 18 ನೇಯ ಶತಮಾನದ ಉತ್ತರಾರ್ಧದಿಂದಲೇ ಆರಂಭವಾಗಿತ್ತು. ಉದ್ಯಮಗಳು ಬೆಳೆದವು, ಜೌದ್ಯೋಗಿಕರಣವಾಯಿತು. ಇದರಿಂದ ಅತ್ಯಂತ ಆಧುನಿಕ ಸಾಧನೆ-ಸಲಕರಣಿಗಳು ಲಭ್ಯವಾದವು. ವಲಸೆ ಹೆಚ್ಚಾಯಿತು. ನಗರಗಳು ಬೆಳೆದು ನಗರೀಕರಣವು ಆಯಿತು. ಜೀವನದ ಪ್ರತಿಯೊಂದು ಕ್ಷೇತ್ರದಲ್ಲಿ ಹೊಸ-ಹೊಸ ಆಯಾಮಗಳು ಕಂಡುಬಂದವು. ಆಧುನಿಕತೆ ಎದ್ದು ಕಾಣತೊಡಗಿತು. 21ನೇ ಶತಮಾನವನ್ನು ಕಂಪ್ಯೂಟರ್ ಅಂತರಿಕ್ಷಜಾಲ ಯುಗವೆಂತಲೂ ಕರೆಯುತ್ತೇವೆ. ಕಂಪ್ಯೂಟರ್ಗಳು ಮನೆ ಮಾತಾಗಿ ಮೊಬೈಲು ತೂತು ಹಾಕುತ್ತವೆ. ಸಣ್ಣ ಮಕ್ಕಳಿಂದ ಹಿಡಿದು ಮುದುಕರವರೆಗೆ ದಟ್ಟದರಿದ್ರರಿಂದ ಹಿಡಿದು ಕುಬೇರರವರೆಗೆ, ಹಳ್ಳಿಯಿಂದ ದಿಲ್ಲಿಯವರೆಗೆ ಅನಕ್ಷರಸ್ಥರಿಂದ ವಿದ್ಯಾವಂತರವರೆಗೆ, ಮೊಬೈಲ್‍ನ ಮಾಯಾಜಾಲ ದಟ್ಟವಾಗಿ ಹಬ್ಬಿದೆ. ಈಗ ಎಲ್ಲರೂ ಮೊಬೈಲ್, ಎಲ್ಲದಕ್ಕೂ ಮೊಬೈಲ್. ಪ್ರೀತಿಯಿಂದ ಹಿಡಿದು ಶಾಂತಿ ಕದಡುವುದಕ್ಕೂ ಹಾಗೂ ಬಾಂಬುಗಳನ್ನು ಸಿಡಿಸಿ ಅಮಾಯಕರ ಪ್ರಾಣ ತೆಗೆಯಲಿಕ್ಕೂ ಮೊಬೈಲ್‍ಗಳನ್ನು ಬಳಸಲಾಗುತ್ತದೆ. ಇದು ನಿಜಕ್ಕೂ ಆತಂಕಕಾರಿಯಾದ ಬೆಳವಣಿಗೆ. ಇದು ಆಧುನಿಕ ಮಾನವ ಸಮಾಜದ ಸಮಸ್ಯೆಗಳನ್ನು ಇಮ್ಮಡಿಗೊಳಿಸುವಲ್ಲಿ ಸಹಾಯಕಾರಿಯಾಗುತ್ತಿದೆ. ಮಾನವ ಸಮಾಜದ ಸಮಸ್ಯೆಗಳು: ಇಂದಿನ ಆಧುನಿಕ ಮಾನವ ಸಮಾಜ ಸಮಸ್ಯೆಗಳಿಂದ ತುಂಬಿ ತುಳುಕುತ್ತಿದೆ. ಅದರಲ್ಲೂ ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ಸಮಸ್ಯೆಗಳು ಹೊಸತೇನಲ್ಲ. ಅಭಿವೃದ್ಧಿ ಹೊಂದಿದ ದೇಶಗಳು ವೈಜ್ಞಾನಿಕ, ತಾಂತ್ರಿಕ ಬೆಳವಣಿಗೆಯ ಉತ್ತುಂಗಸ್ಥಿತಿಯನ್ನು ತಲುಪಿದರೂ ಉನ್ನತ ನಾಗರೀಕತೆಯನ್ನು ಹೊಂದಿದರೂ ಅನೇಕ ಸಮಸ್ಯೆಗಳಿಂದ ಬಳಲುತ್ತಿವೆ. ಅವರಿಗೆ ಶಾಂತಿ, ನೆಮ್ಮದಿಯೇ ಇಲ್ಲ. ಮೌಲ್ಯಗಳು ಕುಸಿದು ಹೋಗಿವೆ. ಅಪರಾಧಿ ಚಟುವಟಿಕೆಗಳು ಹೆಚ್ಚಾಗಿ ಮಾದಕ ದ್ರವ್ಯಗಳ ಬಳಕೆ, ಜೊತೆಗೆ ವ್ಯಭಿಚಾರ ಜೀವನ ಕ್ರಮವಾಗಿದೆ. ಈ ಪಾಶ್ಚಿಮಾತ್ಯ ಸಂಸ್ಕೃತಿಯ ಅಳಿದುಳಿದ ನಮ್ಮ ಭಾರತೀಯ ಸಂಸ್ಕೃತಿಯನ್ನು ಹೊಸಕಿ ಹಾಕುತ್ತಿವೆ. ಕೇಬಲ್ ನೆಟವರ್ಕ್‍ದಿಂದ ನಮ್ಮ ಸಂಸ್ಕೃತಿಯ ಮೇಲೆ ಬ್ರಹ್ಮಾಸ್ತ್ರದ ಪ್ರಯೋಗ ನಡೆಯುತ್ತಿದೆ. ಆದರೂ ಕೇಬಲ್ ಇಲ್ಲದ ನಮ್ಮ ಜೀವನ ಫೀಬಲ್ ಅನ್ನುವಂತೆ ಆಗಿದೆ. ಸಮಸ್ಯೆಗಳು ಮಾನವ ಸಮಾಜದ ಆರಂಭದಿಂದಲು ಇದ್ದರೂ ಸಹ, ಇಂದಿನ ಆಧುನಿಕ ಸಮಾಜದಲ್ಲಿ ಅವು ಅನೇಕ ಪಟ್ಟು ಹೆಚ್ಚಾಗಿವೆ. ಸಮಸ್ಯೆಗಳ ಸ್ವರೂಪ ಮತ್ತು ತೀವ್ರತೆಯಲ್ಲಿಯೂ ಸಹ ಬದಲಾವಣೆಗಳನ್ನು ಗುರುತಿಸಬಹುದು. ಸಮಸ್ಯೆ ಯಾವುದೇ ಇದ್ದರೂ ಸಹ ಯಾವುದೇ ಸಮಸ್ಯೆಯಿಂದ ನಾವು ತೊಂದರೆಯನ್ನು, ಅನಾನುಕೂಲವನ್ನು ಅನುಭವಿಸುತ್ತೇವೆಯೇ ಹೊರತು ಯಾವ ಸಮಸ್ಯೆಯಿಂದಲೂ ಒಳ್ಳೆಯದು ಅಥವಾ ಅನುಕೂಲವಾಗುವುದಿಲ್ಲ. ಕೆಲವರಿಗೆ ಆಗಬಹುದು. ಈಗ ರೋಗಗಳು ಉಲ್ಬಣಗೊಂಡರೆ ವೈದ್ಯರಿಗೆ ಅಗತ್ಯವಸ್ತುಗಳ ಬೆಲೆಗಳು ಹೆಚ್ಚಾದರೆ ವ್ಯಾಪಾರಿಗಳಿಗೆ. ಹೀಗೆ ಕೆಲವರಿಗೆ ಅವವಾಸ್ಯೆವಾದರೆ ಇನ್ನೂ ಕೆಲವರಿಗೆ ಹುಣ್ಣಿವೆ ಹಿಂದೆಯೂ ಸಮಸ್ಯೆಗಳು ಇದ್ದವು ಇಂದಿನ ಆಧುನಿಕ ಕಾಲದಲ್ಲಿಯೂ ಅನೇಕ ಸಮಸ್ಯೆಗಳಿವೆ. ಆದರೆ ಇವುಗಳಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ಹಿಂದಿನ ಸಮಸ್ಯೆಗಳು ಸಾಮಾಜಿಕ ಜೀವನದ ಅನಿವಾರ್ಯ ಪ್ರಸಂಗಗಳಾಗಿರಲಿಲ್ಲ. ಜೀವನದ ಪ್ರತಿಯೊಂದು ಕ್ಷೇತ್ರದಲ್ಲಿ ವ್ಯಾಪಕವಾಗಿ ಅವು ಕಂಡು ಬರುತ್ತಿರಲಿಲ್ಲ. ಆದರೆ ಇಂದಿನ ಸಮಸ್ಯೆಗಳು ಸಾಮಾಜಿಕ ಜೀವನದ ಅನಿವಾರ್ಯ ಪ್ರಸಂಗಗಳಾಗಿ ಕಂಡುಬರುತ್ತಿವೆ. ಅವು ಜೀವನದ ಪ್ರತಿಯೊಂದು ಕ್ಷೇತ್ರದಲ್ಲಿ ಹಾಸು ಹೊಕ್ಕಾಗಿವೆ, ನಮ್ಮ ನಿತ್ಯದ ಜೀವನದಲ್ಲಿ ಪ್ರತಿ ಹೆಜ್ಜೆಗೂ ಕಂಡು ಬರುತ್ತಿವೆ. ಅದಕ್ಕಾಗಿಯೇ ಯುಗವನ್ನು ಸಮಸ್ಯೆಗಳ ಯುಗವೆಂದು ಕರೆಯಬಹುದೇನೋ. ಸಾಮಾಜಿಕ ಸಮಸ್ಯೆಗಳನ್ನು ಸಾಮಾಜಿಕ ರೋಗ ರುಜಿನಗಳು ಎಂದು ಪರಿಗಣಿಸಬಹುದು. ವ್ಯಕ್ತಿಯ ದೇಹಕ್ಕೆ, ಮನಸ್ಸಿಗೆ ಆಗಾಗ ರೋಗಗಳು ಭಾದಿಸುವಂತೆ ಸಮಾಜಕ್ಕೂ ಅನಾರೋಗ್ಯವುಂಟಾಗುವುದು. ಆ ಸಮಾಜ ಸಮಸ್ಯೆಗಳಿಂದ ಪೀಡಿತವಾದಾಗ ಇಂದಿನ ಆಧುನಿಕ ಮಾನವ ಸಮಾಜವು ಅನೇಕ ಸಮಸ್ಯೆಗಳನ್ನು ಎದುರಿಸುತ್ತದೆ. ಅವುಗಳಲ್ಲಿ ಪ್ರಮುಖವಾವುದಗಳೆಂದರೆ ಬಡತನ, ಅನಕ್ಷರತೆ, ಅನಾರೋಗ್ಯ, ನಿರುದ್ಯೋಗ, ಬಿಕ್ಷಾಟನೆ, ಅಪರಾಧ ಹಾಗು ಬಾಲಾಪರಾಧ, ಮಧ್ಯಪಾನ, ತಂಬಾಕು-ಗುಟಕಾ ಸೇವನೆ, ವೇಶ್ಯಾವಾಟಿಕೆ, ವಿವಾಹ ವಿಚ್ಫೇದನ, ಕೌಟುಂಬಿಕ ವಿಘಟನೆ, ವರದಕ್ಷಿಣೆ, ನಸಂಖ್ಯಾ ಸಮಸ್ಯೆ, ಕಾರ್ಮಿಕರು ಯುವಕರಲ್ಲಿ ಆಶಾಂತಿ, ಕೋಮುಗಲಭೆಗಳು, ಹಿಂಸೆ, ಅತ್ಯಾಚಾರ ಜೊತೆಗೆ ಧಾರ್ಮಿಕ ಅಸಹಿಷ್ಣುತೆ ಮೂಲಭೂತವಾದಗಳು. ಉಗ್ರವಾದ ಜೊತೆಗೆ ಕಾಳ್ಗಿಚ್ಚಿನಂತೆ ಹಬ್ಬುತ್ತಿರುವ ಎಚ್.ಆಯ್.ವ್ಹಿ/ಏಡ್ಸ್ ರೋಗ ಹೀಗೆ ಅನೇಕಾನೇಕ ಸಮಸ್ಯೆಗಳನ್ನು ಇಂದಿನ ಆಧುನಿಕ ಮಾನವ ಸಮಾಜ ಎದುರಿಸುತ್ತಿದೆ. ಇಂದಿನ ಆಧುನಿಕ ಮಾನವ ಸಮಾಜದಲ್ಲಿ ಮುಖ್ಯವಾಗಿ ಶಾಂತಿ ನೆಮ್ಮದಿ ಹಾಗು ನಂಬಿಕೆಯ ಕೊರತೆ ಇದೆ. ಮಾನಸಿಕ ತೊಳಲಾಟ ಹೆಚ್ಚಾಗಿದೆ. ನೆಮ್ಮದಿ ಇಲ್ಲ. ಅದನ್ನು ಹುಡಿಕಿಕೊಂಡು ಅಲೆದಾಡುವ ಪರಿಸ್ಥಿತಿ ಬಂದೊದಗಿದೆ. ಸ್ವೇಚ್ಚಾಚಾರ ಹೆಚ್ಚಾಗಿ ಸಾಮಾಜಿಕ ಜೀವನವನ್ನು ವ್ಯಾಪಿಸುತ್ತದೆ. ಒಂದು ರೀತಿಯಾಗಿ ಧನಗಾಹಿಗಳಾಗುತ್ತಿದ್ದಾರೆ. ಹಣವೊಂದಿದ್ದರೆ ಸಾಕು ಏನೆಲ್ಲ ಮಾಡಬಹುದು ಎಂಬ ಮನೋಭಾವ ಬೆಳೆಯುತ್ತಿದೆ. ಸರಾಗವಾಗಿ ಹಣ ಸಂಪಾದನೆ ಮಾಡಲು ಯಾವ ಮಾರ್ಗ, ಮಟ್ಟಕ್ಕೂ ಹೋಗಲು ಇಂದಿನ ಮಾನವ ಸಿದ್ದನಾಗಿದ್ದಾನೆ. ಆದರಲ್ಲೂ ದೊಡ್ಡ ದೊಡ್ಡ ನಗರದಲ್ಲಿ ಮೋಸ ವಂಚನೆಯಿಂದಲೇ ಹಣ ಸಂಪಾದನೆ ಮಾಡುವುದನ್ನು ತಮ್ಮ ವೃತ್ತಿಯನ್ನಾಗಿ ಮಾಡಿಕೊಂಡಿದ್ದಾರೆ. ಸಮಸ್ಯೆಗಳ ಸ್ವರೂಪ: ಇಂದಿನ ಆಧುನಿಕ ಮಾನವ ಸಮಾಜದ ಸಮಸ್ಯೆಗಳು ತೀವ್ರವಾದ ಸ್ವರೂಪವನ್ನು ತಾಳುತ್ತಿವೆ. ಒಂದು ಸಮಸ್ಯೆಯನ್ನು ಬಗೆಹರಿಸಲು ನೋಡುತ್ತಿದ್ದರೆ, ಇನ್ನೊಂದು ಹೊಸ ಸಮಸ್ಯೆ ಅದು ಕೂಡ ಕಂಡರಿಯ ಕೇಳರಿಯದ ಸಮಸ್ಯೆ ಜೊತೆಗೆ ಅದು ಎಲ್ಲರನ್ನು ಚಕಿತಗೊಳಿಸುತ್ತದೆ. ಎಚ್ಚರಿಸುತ್ತದೆ. ದೇಹದ ರೋಗಕ್ಕೆ ಅಥವಾ ಬಾಹ್ಯ ಸಮಸ್ಯೆಗೆ ಚಿಕಿತ್ಸೆ ಪರಿಹಾರ ನೀಡಬಹುದು. ಆದರೆ ಆಂತರಿಕ ಮತ್ತು ಮಾನಸಿಕ ಸಮಸ್ಯೆಯನ್ನು ಹೇಗೆ ನಿವಾರಿಸುವುದು. ಇಂದು ಜನರು ಹೇಗಾದರೂ ಮಾಡಿ ಹಣ ಸಂಪತ್ತು ಅಧಿಕಾರವನ್ನು ಸಂಪಾದಿಸುತ್ತಿದ್ದಾರೆ. ಆದರೆ ಮಾನಸಿಕ ನೆಮ್ಮದಿಯನ್ನು ಹೇಗೆ ಸಂಪಾದಿಸುತ್ತಾರೆ? ಅದಕ್ಕಾಗಿಯೇ ಇಂದಿನ ದಿನಗಳಲ್ಲಿ ನಮ್ಮ ಅತ್ಯಂತ ಪ್ರಾಚೀನ ಋಷಿ-ಮುನಿಗಳು ಪ್ರಚಾರಪಡಿಸಿದ ಯೋಗ ಜ್ಞಾನವನ್ನು ಸ್ವಾಮಿ ರಾಮದೇವಜಿ ಮಹಾರಾಜ್ ಅಂಥವರು ಮಾನವ ಕುಲದ ಶಾಂತಿ-ನೆಮ್ಮದಿಗಾಗಿ ಮಹತ್ವದ ಕಾರ್ಯವನ್ನು ಕೈಗೊಂಡಿದ್ದಾರೆ. ಇಂದಿನ ನಮ್ಮ ಅನೇಕ ಆರೋಗ್ಯದ ಸಮಸ್ಯೆಗಳನ್ನು ಪರಿಹರಿಸಲು ಯೋಗವು ಅವಶ್ಯಕವಾಗಿದೆ. ಇಂದಿನ ಆಧುನಿಕ ಮಾನವ ಸಮಾಜದ ಸಮಸ್ಯೆಗಳು ಎಲ್ಲರನ್ನೂ ಭಾಧಿಸುತ್ತಿವೆ. ಎಲ್ಲರೂ ಇಂದಿನ ಅನೇಕ ಸಮಸ್ಯೆಗಳಿಂದ ಒಂದಲ್ಲ ಒಂದು ರೀತಿಯಲ್ಲಿ ಪೀಡಿತರಾಗಿದ್ದಾರೆ. ತೊಂದರೆಗೆ ಒಳಗಾಗಿದ್ದಾರೆ. ನೋವು ಅನುಭವಿಸಿದ್ದಾರೆ. ಇದು ಸಮಾಜದ ಸ್ವಾಸ್ಥ್ಯದ ದೃಷ್ಟಿಯಿಂದ ಸಾಮಾಜಿಕ ಅಭಿವೃದ್ಧಿ ರಾಷ್ಟ್ರದ ಅಭಿವೃದ್ಧಿಯ ದೃಷ್ಟಿಯಿಂದ ಒಳ್ಳೆಯದಲ್ಲ. ಮುಖ್ಯವಾಗಿ ಸಮಸ್ಯೆಗಳು ಹುಟ್ಟಿಕೊಳ್ಳುವುದು ನಮ್ಮ ಮಾನಸಿಕತೆಯಲ್ಲಿ, ಭಾವಗಳಲ್ಲಿ. ಪರಿಹರಿಸಲಾಗದ ಅಥವಾ ಪರಿಹಾರವಿಲ್ಲದ ಸಮಸ್ಯೆಯೇ ಇಲ್ಲ. ಇರುವುದಿಲ್ಲ. ಮತ್ತು ಯಾವುದೇ ಸಮಸ್ಯೆ ತನ್ನಲ್ಲಿ ತಾನು ಸರ್ವತಂತ್ರ ಸ್ವತಂತ್ರವಾಗಿರುವುದಿಲ್ಲ. ಒಂದು ಸಮಸ್ಯೆಗೆ ಒಂದಲ್ಲ, ಅನೇಕ ಕಾರಣಗಳು ಇರುತ್ತವೆ. ನಾವು ಸಮಸ್ಯೆಯ ಪ್ರಮುಖ ಕಾರಣಗಳನ್ನು ತಿಳಿದುಕೊಂಡು ಅ ಕಾರಣವನ್ನು ಬಗೆಹರಿಸಲು ಪ್ರಯತ್ನಿಸಬೇಕಾಗುತ್ತದೆ. ಇದಕ್ಕೂ ಮೊದಲು ನಾವು ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ, ಅಂದರೆ ಮಾನಸಿಕ ಸಿದ್ಧತೆ ಮಾಡಿಕೊಳ್ಳಬೇಕು. ನಂತರ ಅವುಗಳ ಬೇರುಗಳಿಗೆ ಅಂದರೆ ಕಾರಣಗಳಿಗೆ ಕೊಡಲಿಪೆಟ್ಟ ಹಾಕಬೇಕು. ಅಂದಾಗ ಮಾತ್ರ ಸಮಸ್ಯೆಗಳು ಅವುಗಳ ಸ್ವರೂಪದಲ್ಲಿ ಬದಲಾವಣೆ ತರಲು ಸಾಧ್ಯ ಅವುಗಳನ್ನು ಹತ್ತಿಕ್ಕಲು ಸಾಧ್ಯ. ನಮ್ಮ ದೇಶದ ಸಮಸ್ಯೆಗಳ ಸ್ವರೂಪವು ಜಗತ್ತಿನ ಶ್ರೀಮಂತ ರಾಷ್ಟ್ರಗಳ ಸಾಮಾಜಿಕ ಸಮಸ್ಯೆಗಳ ಸ್ವರೂಪಕ್ಕಿಂತ ಬಹಳವಾಗಿ ಬೇರೆ ಏನಲ್ಲ. ಆದರೆ ನಮ್ಮ ಸಂಸ್ಕೃತಿ ಸಾಮಾಜಿಕ ವ್ಯವಸ್ಥೆ ಮತ್ತು ಇತರ ಐತಿಹಾಸಿಕ ಹಾಗು ರಾಜಕೀಯ ಕಾರಣಗಳಿಂದಾಗಿ, ನಮ್ಮ ದೇಶದ ಸಮಸ್ಯೆಗಳು ಭಿನ್ನವಾಗಿರುವುದು ವಾಸ್ತವದ ಸಂಗತಿಯಾಗಿದೆ. ಮುಖ್ಯವಾಗಿ ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಕಂಡು ಬರುವ ಜಾತಿ ಪದ್ಧತಿಯ, ಅಸ್ಪೃಶ್ಯತೆ ಆಚರಣೆಯಂಥ ಹೀನ ಮತ್ತು ಅಮಾನವೀಯ ಪದ್ಧತಿಗಳು ಆಧುನಿಕ ಮಾನವ ಸಮಾಜದಲ್ಲಿ ನಮ್ಮ ದೇಶವು ತಲೆತಗ್ಗಿಸುವ ಹಾಗೆ ಮಾಡಿವೆ. ಸಮಾಜ ಕಾರ್ಯ ಸಮಾಜ ಕಾರ್ಯವನ್ನು ನಾವು ಯಥಾಪ್ರಕಾರ ಅರ್ಥಮಾಡಿಕೊಳ್ಳುವುದಾದರೆ, ಇದು ಸಮಾಜದ ಕಾರ್ಯಶೀಲತೆಯಾಗುತ್ತದೆ. ಸಮಾಜದ ಚಲನಾತ್ಮಕತೆಯ ಪ್ರತೀಕವಾಗಿದೆ. ಏಕೆಂದರೆ ಯಾರೇ ಬರಲಿ ಹೋಗಲಿ ಸಮಾಜ ನಡೆಯುತ್ತದೆ. ಸಮಾಜದ ಕಾರ್ಯ ಚಟುವಟಿಕೆ ನಡೆಯುತ್ತಲೇ ಇರುತ್ತದೆ. ಅದಕ್ಕಾಗಿಯೇ Society is a Dynamic State ಎನ್ನಲಾಗಿದೆ. ಅಂದರೆ ಸಮಾಜ ತನ್ನ ಕಾರ್ಯವನ್ನು ನಿಲ್ಲಿಸಿದರೆ, ಅದರ ಅಸ್ತಿತ್ವವೇ ಹೋಗಿ ಬಿಡುತ್ತದೆ. ಸಮಾಜ ನಿಂತ ನೀರಾದರೆ, ಅದು ಹೊಲಸಿನಿಂದ ನಾರುತ್ತದೆ. ಆದರೆ ಅದು ಹರಿಯುವ ಹೊಳೆ. ಇನ್ನೊಂದು ರೀತಿಯಲ್ಲಿ ಅರ್ಥ ಮಾಡಿಕೊಳ್ಳುವುದಾದರೆ, ಸಮಾಜದಲ್ಲಿ ಸಮಾಜಕ್ಕಾಗಿ ಮಾಡುವ ಎಲ್ಲ ಕೆಲಸ, ಚಟುವಟಿಕೆಗಳು ಅವು ಸಮಾಜ ಕಾರ್ಯವಾಗುತ್ತವೆ. ಆದರೆ ಸಮಾಜ ಕಾರ್ಯದ ಅರ್ಥವೇ ಬೇರೆ ಆಗಿದೆ. ಅನೇಕ ರೀತಿಯಲ್ಲಿ ಅರ್ಥೈಸಿಕೊಂಡಿದ್ದಾರೆ. ಕೆಲವರು ಇದನ್ನು ಉಚಿತವಾಗಿ ತಮ್ಮ ಮನಃ ಶಾಂತಿಗಾಗಿ ಮಾಡುವ ಕಾರ್ಯ ಅಥವಾ ಸೇವೆ ಎಂದು ಇತರರಿಗೆ ಅವರ ಕಷ್ಟದ ಕಾಲದಲ್ಲಿ ನೆರವಾಗುವುದು, ಸಹಾಯದ ಹಸ್ತವನ್ನು ನೀಡುವುದು ಸಮಾಜ ಕಾರ್ಯವೆಂದು ಭಾವಿಸಿಕೊಳ್ಳುತ್ತಾರೆ. ಇನ್ನೂ ಕೆಲವರು ಕೆಲಸವಿಲ್ಲದವರು ಅಥವಾ ಶ್ರೀಮಂತರು ಬೇರೆಯವರಿಗೆ ಅನುಕಂಪ ತೋರಿಸಲು ಮಾಡುವ ಕಾರ್ಯವೆಂದು ಹೇಳುತ್ತಾರೆ. ಆದರೆ ಕೇವಲ ಬೇರೆಯವರಿಗೆ ಸಹಾಯ ಮಾಡುವುದೇ ಅಥವಾ ನೆರವು ನೀಡುವುದೇ ಸಮಾಜ ಕಾರ್ಯವಾಗುವುದಿಲ್ಲ. ಪ್ರೊ. ಎಚ್.ಎಮ್. ಮರುಳಸಿದ್ದಯ್ಯ, ಅವರ ಪ್ರಕಾರ, ಸಮಾಜಕಾರ್ಯವನ್ನು ನಿಷ್ಕಷ್ಟವಾಗಿ ವ್ಯಾಖ್ಯಾನಿಸುವುದು ಕಷ್ಟ. ಸಮಾಜ ಕಾರ್ಯವನ್ನು ಅರ್ಥಮಾಡಿಕೊಳ್ಳಲು ತೊಡಗಿದವರು ಅದರಲ್ಲಿ ಕಾರ್ಯನಿರತರಾದವರು, ಅನೇಕ ರೀತಿಯಲ್ಲಿ ಅದನ್ನು ಅರ್ಥೈಸುವುದುಂಟು. ಮನುಷ್ಯನ ಸಂಕಷ್ಟಗಳಲ್ಲಿ ಭಾಗಿಯಾಗಿ ಅವುಗಳನ್ನು ಪರಿಹರಿಸುವುದರಲ್ಲಿ ತೊಡಗಿರುವವರನ್ನು ಸಮಾಜಕಾರ್ಯಕರ್ತರೆಂದು ತಿಳಿದುಕೊಂಡರೆ, ಪ್ರಪಂಚದ ಎಲ್ಲ ಜನರನ್ನು ಸಮಾಜ ಕಾರ್ಯಕರ್ತರೆಂದು ಪರಿಗಣಿಸಬೇಕಾಗುತ್ತದೆ. ಜನರಿಗೆತೊಡಗಿರುತ್ತಾರೆ. ತಾಯಿಯು ಮಗುವಿಗೆ, ಗಂಡನು ಹೆಂಡತಿಗೆ, ಉಪಾಧ್ಯಾಯ ವಿದ್ಯಾರ್ಥಿಗೆ ಅಧಿಕಾರಿಯ ರಾಷ್ಟ್ರಕನಿಗೆ, ಪೋಲಿಸರು ಸಾಮಾನುಗಳನ್ನು ಕಳಕೊಂಡವನಿಗೆ, ಇಂಜಿನೀಯರು ಮನೆಯನ್ನು ಕಟ್ಟುವವನಿಗೆ, ಡಾಕ್ಟರ್ ರೋಗಿಗೆ ಹೀಗೆಯೇ ಒಬ್ಬನು ಇನ್ನೊಬ್ಬನಿಗೆ ನೆರವಾಗುವುದು, ಎರಡನೆಯವನ ಸಂಕಷ್ಟದ ಪರಿಹಾರದಲ್ಲಿ ತೊಡಗುವುದು ಸಾಮಾನ್ಯ ಕ್ರಿಯೆ. ನೆರವಾಗುವುದನ್ನೇ ಇದು ಸಮಾಜ ಕಾರ್ಯ ಎಂದು ಪರಿಗಣಿಸಿದರೆ, ಮಾನವನು ನೆರವಾಗುವ ಎಲ್ಲ ಕಾರ್ಯಗಳು ಸಮಾಜ ಕಾರ್ಯಗಳಾಗುತ್ತವೆ. ಇಂಥ ವ್ಯಾಖ್ಯಾನವು ಬಹು ವಿಸ್ತ್ರತವಾದದಾದ್ದರಿಂದ ನೆರವಾಗುವ ಎಲ್ಲ ವೃತ್ತಿಗಳನ್ನು ಸಮಾಜ ಕಾರ್ಯ ಎಂದೇ ಪರಿಗಣಿಸಬೇಕಾಗುತ್ತದೆ. ಸಮಾಜ ಕಾರ್ಯವನ್ನು ಅತ್ಯಂತ ಸೀಮಿತಗೊಳಿಸುವ ಪ್ರಯತ್ನವೂ ಉಂಟು. ವ್ಯಕ್ತಿಗತವಾದ ಸಮಸ್ಯೆಗಳನ್ನು ಪರಿಹರಿಸುವ ವ್ಯಕ್ತಿಗಿಂತ ಸಮಾಜ ಕಾರ್ಯದ ವ್ಯಾಪ್ತಿಗೆ ಬರುವ ಪ್ರಕ್ರಿಯೆಗಳನ್ನು ಮಾತ್ರವೇ ಸಮಾಜ ಕಾರ್ಯ ಎಂದು ಗಣಿಸಿ, ಗುಂಪುಗಳಿಗೆ ಮತ್ತು ಸಮುದಾಯಗಳಿಗೆ ಸಂಬಂಧಿಸಿದಂತೆ ನಡೆಯುವ ಚಿಕಿತ್ಸಾ ಕ್ರಿಯೆಗಳನ್ನು ಸಮಾಜಕಾರ್ಯದ ಪರಿಧಿಯಿಂದ ಆಚೆಗೆ ಇರಿಸುವುದುಂಟು. ಇಂಥ ಸಂದೇಹಗಳಿಗೆ ಈಡಾಗಬಾರದೆಂಬುವ ಕಾರಣಗಳಿಂದ, ಸಮಾಜ ಕಾರ್ಯವನ್ನು ಅತ್ಯಂತ ವಿಶಿಷ್ಟವಾದ ವಿಶುದ್ಧ ಮತ್ತು ಪರಿಣಾಮಕಾರಕವಾದ ತಾಂತ್ರಿಕ ಸಂಪುಷ್ಟ ವೃತ್ತಿಯನ್ನಾಗಿಸುವ ಪ್ರಯತ್ನ ನಡೆಯುತ್ತಿದೆ. ಆದರೂ ಇಂಥ ಪರಿಮಿತಿಗಳನ್ನು ಹೇರುವುದರಿಂದ, ಸಮಾಜಕಾರ್ಯದ ಸತ್ಯಕ್ಕೆ ಊನ ತಂದಂತೆ ಬಹುವಿಸ್ತ್ರತ ವ್ಯಾಖ್ಯೆಯಷ್ಟೇ. ಇದು ದೋಷಪೂರ್ಣವಾದದ್ದು. ಸಮಾಜ ಕಾರ್ಯದ ಬಗ್ಗೆ ಸರಿಯಾಗಿ ಅರ್ಥಮಾಡಿಕೊಳ್ಳುವುದಕ್ಕಿಂತ ಹೆಚ್ಚಾಗಿ ಅನರ್ಥವನ್ನು ಮಾಡಿಕೊಳ್ಳಲಾಗಿದೆ. ಅನೇಕ ಸಲ ಸೇವೆಗೂ, ನೆರವಿಗೂ ಹಾಗು ಸಮಾಜಕಾರ್ಯಕ್ಕೂ ಸಂಬಂಧಿಸಿದ ತಪ್ಪು ಕಲ್ಪನೆಗಳೇ ಇದಕ್ಕೆ ಕಾರಣ. ಅಲ್ಲದೆ ನಮ್ಮ ಸಮಾಜದಲ್ಲಿ ಅನೇಕ ಪುಢಾರಿಗಳು ಯಾವುದೇ ನಿರ್ದಿಷ್ಟ ಗುರಿ ಇಲ್ಲದೆ, ಕಾಲಹರಣ ಮಾಡುವ ಯುವಕರು, ಒಬ್ಬರ ಟೋಪಿಯನ್ನು ಇನ್ನೊಬ್ಬರಿಗೆ ಹಾಕುವವರು. ತಾವು ಸಹ ಸಮಾಜ ಕಾರ್ಯಕರ್ತರು ಎಂದು ಹೇಳಿಕೊಳ್ಳುತ್ತ ಮಾಡಬಾರದನ್ನು ಮಾಡುತ್ತಿರುವುದೇ ಎಲ್ಲ ತಪ್ಪು ಕಲ್ಪನೆಗಳಿಗೆ ಕಾರಣವಾಗಿದೆ. ಅಲ್ಲದೆ ವೃತ್ತಿ ಸಮಾಜ ಕಾರ್ಯದ ಬಗ್ಗೆ ವಿದ್ಯಾವಂತರಲ್ಲಿಯೇ ತಪ್ಪು ಕಲ್ಪನೆಗಳಿವೆ. ಅನೇಕ ಅಧಿಕಾರಿಗಳಿಗೆ ಸಹ ಇದರ ಬಗ್ಗೆ ಗೊತ್ತಿಲ್ಲ. ಸಮಾಜ ಕಾರ್ಯದ ಬಗ್ಗೆ ಸರಿಯಾದ ಮಾಹಿತಿ ನೀಡುವ ಅದನ್ನು ಪ್ರಚಾರ ಮಾಡುವ ಅವಶ್ಯಕತೆ ಇದೆ. ಮುಖ್ಯವಾಗಿ ಇದರಲ್ಲಿ ಸಮಾಜ ಕಾರ್ಯ ಕ್ಷೇತ್ರದಲ್ಲಿ ಕಾರ್ಯತತ್ಪರರಾದವರು ಮತ್ತು ಸಮಾಜಕಾರ್ಯ ಸಂಘಟನೆಗಳ ಜವಾಬ್ದಾರಿ ಬಹಳ ಇದೆ. ಸಮಾಜ ಕಾರ್ಯವು ಮೂಲತಹ ಒಂದು ಸಹಾಯಕಾರಿ ಕಾರ್ಯವಾಗಿದೆ. ಆದರೆ ಉಚಿತವಾಗಿ ಮಾಡುವ ಕಾರ್ಯ ಅಲ್ಲ ಎನ್ನುವುದನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಬೇಕು. ಕೆಲವೊಂದು ಸಲ ಅಪವಾದ ಎಂಬಂತೆ ಆ ರೀತಿ ಮಾಡಬಹುದಾದರೂ, ಯಾವಾಗಲೂ ಅಲ್ಲ. ಜನರಿಗೆ ಸಹಾಯ ಮಾಡಿ ಅವರನ್ನು ಸ್ವಯಂ ಸಹಾಯಕರನ್ನಾಗಿ ಮಾಡುವುದೇ ನಿಜವಾದ ಸಮಾಜ ಕಾರ್ಯವಾಗುತ್ತದೆ. ಉದಾಹರಣೆಗೆ ಮೀನು ತಿನ್ನುವವರಿಗೆ ನಾವೇ ದಿನಾಲು ಮೀನು ಹಿಡಿದುಕೊಡುವುದಕ್ಕಿಂತ, ಮೀನುಗಳನ್ನು ಹೇಗೆ ಹಿಡಿಯುತ್ತಾರೆ ಎಂದು ಕಲಿಸಿಕೊಟ್ಟರೆ ತಮ್ಮ ತಾವೇ ಹಿಡಿದುಕೊಂಡು ತಿನ್ನುತ್ತಾರೆ. ಅಲ್ಲದೆ ಇನ್ನೊಬ್ಬರ ಮೇಲೆ ಅವಲಂಬನೆ ಆಗುವುದಿಲ್ಲ. ಇದೇ ನಿಜವಾದ ಸಮಾಜ ಕಾರ್ಯವಾಗುತ್ತದೆ. ಸಮಾಜ ಸೇವೆ, ಸಮಾಜ ಕಾರ್ಯ ಚಟುವಟಿಕೆಗಳು ಭಾರತೀಯ ಸಮಾಜಕ್ಕೆ ಹೊಸತೇನೂ ಅಲ್ಲ. ಅವುಗಳನ್ನು ಅನೇಕರು ಅನೇಕ ರೀತಿಯಲ್ಲಿ ಮಾಡುತ್ತಲೇ ಬಂದಿದ್ದಾರೆ. ನಮ್ಮ ದೇಶದ ಸಂಸ್ಕೃತಿಯ ಭಾಗವಾಗಿ, ಸೇವಾ ಕಾರ್ಯ ಚಟುವಟಿಕೆಗಳು ಅವ್ಯಾಹತವಾಗಿ ನಡೆಯುತ್ತಲೇ ಬಂದಿವೆ. ಮೊದಲಿನಿಂದಲೂ ಮಾನವೀಯ ಗುಣ ಹೊಂದಿದ ವ್ಯಕ್ತಿಗಳು, ಜನಾನುರಾಗಿಗಳು? ಮಠ ಮಾನ್ಯರು, ಅಲ್ಲದೆ ಅನೇಕ ರಾಜ-ರಾಣಿಯರು ತಮ್ಮನ್ನು ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದನ್ನು ನಮ್ಮ ಇತಿಹಾಸದ ಪುಟಗಳಲ್ಲಿ ಹೇರಳವಾಗಿ ಕಾಣಬಹುದು. ಇಂಥ ಸೇವಾ ಇತಿಹಾಸ ಜಗತ್ತಿನ ಯಾವ ರಾಷ್ಟ್ರದಲ್ಲಿಯೂ ಸಿಗುವುದಿಲ್ಲ. ಆದರೆ ವೃತ್ತಿಪರ ಸಮಾಜಕಾರ್ಯ ನಮಗೆ ಹೊಸದು. ನಮ್ಮ ದೇಶ, ಸಮಾಜಕ್ಕೂ ಹೊಸದು. ವೃತ್ತಿಪರ ಸಮಾಜಕಾರ್ಯದ ಜ್ಞಾನ, ತತ್ವ-ಸಿದ್ಧಾಂತಗಳು, ಕೌಶಲ್ಯ-ತಂತ್ರಗಳು, ನಮಗೆ ಅಪರಿಚಿತ. ಏಕೆಂದರೆ ವೃತ್ತಿಪರ ಸಮಾಜಕಾರ್ಯವನ್ನು ಹುಟ್ಟು ಹಾಕಿದವರು ಪಾಶ್ಚಿಮಾತ್ಯರು, ಅಮೇರಿಕನ್ನರು. ನಮ್ಮ ದೇಶದಲ್ಲಿ ಅಮೇರಿಕ ಮಾದರಿಯ ಪದ್ಧತಿಯ ವೃತ್ತಿಪರ ಸಮಾಜ ಕಾರ್ಯವನ್ನು ಆಮದು ಮಾಡಿಕೊಳ್ಳಲಾಗಿದೆ. ಅಂದರೆ ನಮ್ಮ ದೇಶದಲ್ಲಿರುವ ವೃತ್ತಿಪರ ಸಮಾಜ ಕಾರ್ಯವು ಅಮೇರಿಕದ್ದು Made in USA! ಅದು ಕೂಡ ಒಬ್ಬ ಅಮೇರಿಕನ್ನರೇ ಅದನ್ನು ಭಾರತಕ್ಕೆ ತಂದು ಕೊಟ್ಟರು. ಡಾ. ಕ್ಲಿಫರ್ಡ್ ಮಾನಶರ್ಟ್ ಎನ್ನುವವರು ನಮ್ಮ ದೇಶದ ವಾಣಿಜ್ಯನಗರಿ ಆಗಿನ ಬೊಂಬಾಯಿಗೆ ಬಂದು ಹೋಗುವುದು ಮಾಡುತ್ತಿದ್ದರು. ಅವರು ಕ್ರಿಶ್ಚಿಯನ್ ಮರಾಠಿ ಮಿಷನ್ ಜೊತೆಗೆ ಸಂಬಂಧ ಹೊಂದಿ, ಬೊಂಬಾಯಿ ಕೊಳಚೆ ಪ್ರದೇಶದಲ್ಲಿ ಒಂದು ಯೋಜನೆಯನ್ನು ಕೈಗೊಂಡಿದ್ದರು. ಆಗಿನ ಸಮಯ ಸಂದರ್ಭಗಳನ್ನು ಗಮನಿಸಿದ ಅವರು ಭಾರತದಲ್ಲಿ ವೃತ್ತಿಪರ ಸಮಾಜ ಕಾರ್ಯದ ಅವಶ್ಯಕತೆ ಇದೆ, ಪಾತ್ರ ಇದೆ ಎಂದು ಮನಗಂಡರು. ಅಲ್ಲದೆ ಆ ಕುರಿತು ಬೊಂಬಾಯಿಯಲ್ಲಿದ್ದ ಖ್ಯಾತ ಉದ್ಯಮಿಗಳು, ಶಿಕ್ಷಣ ಪ್ರೇಮಿಗಳಾದ ಟಾಟಾ ಅವರ ಜೊತೆ ಪ್ರಸ್ತಾಪಿಸಿದರು. ಅವರಿಗೆ ಸರಿ ಎನಿಸಿ ವೃತ್ತಿಪರ ಸಮಾಜ ಕಾರ್ಯ ಶಾಲೆಯನ್ನು ಆರಂಭಿಸಲು ಅನುಮತಿಸಿದರು. ಅಗತ್ಯವಾದ ಎಲ್ಲ ಪರಿಕರಗಳನ್ನು ಒದಗಿಸಿದರು. ಹೀಗೆ ಭಾರತದಲ್ಲಿ ಮೊಟ್ಟ ಮೊದಲ ವೃತ್ತಿಪರ ಸಮಾಜಕಾರ್ಯ ಪ್ರಶಿಕ್ಷಣ 1936 ರಲ್ಲಿ ಬೊಂಬಾಯಿಯಲ್ಲಿ ಸರ್ ದೋರಬಜಿ ಟಾಟಾ ಗ್ರಾಜುವೇಟ್ ಸ್ಕೂಲ್ ಆಫ್ ಸೋಶಿಯಲ್ ವರ್ಕ್ ಹೆಸರಿನಿಂದ ಪ್ರಾರಂಭವಾಯಿತು. ಅದರ ಮೊದಲ ನಿರ್ದೇಶಕರಾಗಿ ಡಾ. ಕ್ಲೀಫರ್ಡ್ ಮ್ಯಾನಶರ್ಟ್ ಅವರೇ ಕಾರ್ಯ ನಿರ್ವಹಿಸಿದರು. ನಮ್ಮ ದೇಶದಲ್ಲಿ ವೃತ್ತಿಪರ ಸಮಾಜ ಕಾರ್ಯದ ಯುಗ ಅರಂಭವಾಯಿತು. ಹಾಗಾದರೆ, ವೃತ್ತಿಪರ ಸಮಾಜ ಕಾರ್ಯವೆಂದರೇನು? ಎಂದು ಚರ್ಚಿಸೋಣ. ವೃತ್ತಿಪರ ಸಮಾಜ ಕಾರ್ಯವೆಂದರೆ ಸಮಾಜ ಕಾರ್ಯವನ್ನು ತಮ್ಮ ವೃತ್ತಿಯನ್ನಾಗಿ ಆಯ್ಕೆ ಮಾಡಿಕೊಂಡು ಸಮಾಜ ಕಾರ್ಯದಲ್ಲಿಯೇ ಪ್ರಶಿಕ್ಷಣ, ತರಬೇತಿ ಪಡೆದು, ಪದವಿ ಪಡೆದುಕೊಂಡು ವೃತ್ತಿಯನ್ನು ಕೈಗೊಳ್ಳುವುದಾಗಿದೆ. ಅದು ಸರಕಾರಿ, ಆರೆಸರಕಾರಿ ಅಥವಾ ಸ್ವಯಂ ಸೇವಾ ಸಂಸ್ಥೆಗಳಲ್ಲಿ ಇಲ್ಲವೆಂದರೆ ತಾವೇ ಸ್ವತಃ ಸಮಾಜ ಕಾರ್ಯ ಕ್ಷೇತ್ರಗಳಿಗೆ ಸಂಬಂಧಿಸಿದ ಸಂಘ ಸಂಸ್ಥೆಯನ್ನು ಪ್ರಾರಂಭ ಮಾಡುವ ಮೂಲಕ ಕಾರ್ಯತತ್ಪರವಾಗುವುದು. ತಮ್ಮ ಜ್ಞಾನ, ಕಾರ್ಯ ಕೌಶಲ್ಯ, ತತ್ವ-ಪದ್ಧತಿಗಳು ಹಾಗು ತಂತ್ರಗಳ ಮೂಲಕ ವೃತ್ತಿಪರವಾಗಿ ಸಮಾಜ ಸೇವಾ ಕಾರ್ಯದಲ್ಲಿ ತೊಡಗುವುದು ವೃತ್ತಿ ಸಮಾಜ ಕಾರ್ಯವಾಗುತ್ತದೆ. ಸಮಾಜ ಕಾರ್ಯಕ್ಕೂ ಹಾಗು ಸಮಸ್ಯೆಗಳಿಗೂ ಎಲ್ಲಿಲ್ಲದ ನಂಟು. ಎಲ್ಲೆಲ್ಲಿ ಸಮಸ್ಯೆಗಳಿರುತ್ತವೆ, ಅಲ್ಲಲ್ಲಿ ಸಮಾಜ ಕಾರ್ಯದ ಅವಶ್ಯಕತೆ, ಪಾತ್ರ ಇದ್ದೇ ಇರುತ್ತದೆ. ಅಂದರೆ ಸಮಾಜ ಕಾರ್ಯವು ಮುಖ್ಯವಾಗಿ ಸಮಾಜದ ಜನರ ಸಮಸ್ಯೆಗಳನ್ನು ಅದರಲ್ಲೂ Psycho-Social Problems ಮನೋ-ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸುವ ಕಾರ್ಯವಾಗಿದೆ. ಮೊದಲು ಸಮಸ್ಯೆಗಳನ್ನು ಶಾಸ್ತ್ರೀಯವಾಗಿ ಅಧ್ಯಯನ ಮಾಡಿ ಅವುಗಳ ಬೇರುಗಳನ್ನು (ಕಾರಣಗಳನ್ನು) ಅರಿತುಕೊಂಡು ಸೂಕ್ತ ಪರಿಹಾರವನ್ನು, ಸಮಸ್ಯೆಯಿಂದ ಹೊರಬರಲು ಮಾರ್ಗೋಪಾಯಿಗಳನ್ನು ಸೂಚಿಸುವುದು ಸಮಾಜ ಕಾರ್ಯವಾಗಿದೆ. ಅನೇಕ ಸಲ ಜನರಿಗೆ ತಮ್ಮ ನಿಜವಾದ ಸಮಸ್ಯೆ ಏನಿದೆ ಮತ್ತು ಆ ಸಮಸ್ಯೆಯಿಂದ ಹೊರಬರಲು ತಮ್ಮ ಹತ್ತಿರ ಯಾವ ಉಪಾಯ ಅಥವಾ ಶಕ್ತಿ ಇದೆ ಎಂಬುದೇ ಗೊತ್ತಿರುವುದಿಲ್ಲ. ಸಮಾಜ ಕಾರ್ಯಕರ್ತರು ಅದನ್ನು ಗೊತ್ತುಮಾಡಿ ಕೊಡುತ್ತಾರೆ. ನಿಜವಾದ ಸಮಸ್ಯೆ ಏನು ಎಂದು ಗೊತ್ತಾಗದ ಹೊರತು ಅದಕ್ಕೆ ಪರಿಹಾರ ಕಂಡುಕೊಳ್ಳುವುದು ಸಾಧ್ಯವಾಗುವುದಿಲ್ಲ. ಒಂದು ವೇಳೆ ಪರಿಹಾರ ಗೊತ್ತಿದ್ದರೂ ಖಚಿತವಾಗಿ ಅದು ಅರಿವಿಗೆ ಬರುವುದಿಲ್ಲ. ಜನರು ಒಂದು ಕಡೆ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಅನೇಕ ಸಲ ಜನರ ಮೂಲ ಅವಶ್ಯಕತೆಗಳ ಪೂರೈಕೆ ಆಗದಿದ್ದಾಗ ಅದೇ ಸಮಸ್ಯೆಗಳಾಗಿ ಪರಿಣಮಿಸುತ್ತವೆ ಮತ್ತು ಇನ್ನೊಂದು ಕಡೆ ಆ ಸಮಸ್ಯೆಗಳಿಗೆ ಪರಿಹಾರ ಕ್ರಮಗಳು ಜೊತೆಗೆ ಜನರ ಅವಶ್ಯಕತೆಗಳನ್ನು ಪೂರೈಸುವ ಸಂಘಟಿತ ಪ್ರಯತ್ನಗಳು ಇರುತ್ತವೆ. ಆದರೆ ಇವುಗಳ ನಡುವೆ ಎಲ್ಲೋ ಒಂದು ರೀತಿಯ ಹೊಂದಾಣಿಕೆ, ಸಮನ್ವಯತೆ ಇರುವುದಿಲ್ಲ. ಸಮಾಜ ಕಾರ್ಯವು ಹಾಗು ಸಮಾಜ ಕಾರ್ಯಕರ್ತರು ಸಮಸ್ಯೆ ಹಾಗು ಪರಿಹಾರ ಕ್ರಮಗಳ ಅವಶ್ಯಕತೆ ಹಾಗು ಸಂಘಟಿತ ಪ್ರಯತ್ನಗಳ ಸಂಪನ್ಮೂಲಗಳ ನಡುವೆ ಹೊಂದಾಣಿಕೆ ಹಾಗು ಸಮನ್ವಯತೆಯನ್ನು ಏರ್ಪಡಿಸಿ ಎರಡರ ನಡುವೆ ಸೇತುವೆಯ (Bridge) ಹಾಗೆ ಸಮಾಜ ಕಾರ್ಯಕರ್ತರು ಕೆಲಸ ಮಾಡುತ್ತಾರೆ. ಇದು ಸಮಸ್ಯೆಗೆ ಯಾವ ಪರಿಹಾರವಿದೆ. ಜನರ ಅವಶ್ಯಕತೆಗಳನ್ನು, ಬೇಕು ಬೇಡಿಕೆಗಳನ್ನು, ಪೂರೈಸುವ ಯಾವ ಸಂಘಟನೆಗಳು/ಸರಕಾರಿ ಅರೆಸರಕಾರಿ ಹಾಗೂ ಸ್ವಯಂ ಸೇವಾ ಸಂಸ್ಥೆಗಳು ಯಾವ ರೀತಿಯಾಗಿ ಅವರ ಅವಶ್ಯಕತೆಗಳನ್ನು ಪೂರೈಸುತ್ತವೆ ಎಂಬುದನ್ನು ನಿಖರವಾಗಿ ಸಮಾಜ ಕಾರ್ಯಕರ್ತರು ಮಾತ್ರ ಹೇಳುತ್ತಾರೆ. ಅದರ ಜೊತೆಗೆ ಆಯಾ ಸಂಘಟನೆಯಿಂದ ಯಾವ ರೀತಿಯಾಗಿ ಸೇವೆಗಳನ್ನು ಪಡೆದುಕೊಳ್ಳಬೇಕೆಂಬುದರ ಕುರಿತು ಉಪಾಯವನ್ನು ಹೇಳುತ್ತಾರೆ. ಇಂದಿನ ಯಾಂತ್ರಿಕ, ಆಧುನಿಕ ಯುಗದಲ್ಲಿ ಮಾನವ ಜ್ಞಾನ, ವಿಜ್ಞಾನ ಹಾಗೂ ತಾಂತ್ರಿಕವಾಗಿ ಉತ್ತಂಗ ಶಿಖರಕ್ಕೆ ಏರಿದ ಹಾಗೆ ಮಾನಸಿಕವಾಗಿ, ಮೌಲಿಕವಾಗಿ ಅಷ್ಟೇ ಕೆಳಗೆ ಇಳಿಯುತ್ತಿದ್ದಾನೆ. ಮಾನಸಿಕ ತೊಳಲಾಟ ಹೆಚ್ಚಾಗುತ್ತಿದೆ. ಹೆಚ್ಚು ಶ್ರೀಮಂತನಾದಂತೆಲ್ಲ ಮಾನಸಿಕ ನೆಮ್ಮದಿ ಕಡಿಮೆಯಾಗುತ್ತಿದೆ. ಅದಕ್ಕಾಗಿ ಸಮಾಜ ಕಾರ್ಯವು ಮೊದಲು ಮನೋಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮೊದಲ ಆದ್ಯತೆ ಕೊಡುತ್ತದೆ. ಮಾನಸಿಕ ನೆಮ್ಮದಿ ಶಾಂತಿ ಇಲ್ಲದಿದ್ದರೆ ಎಷ್ಟು ಸಾಧಿಸಿದರೂ ಅದು ತೃಣಕ್ಕೆ ಸಮಾನವಾಗುತ್ತದೆ. ಅಂದರೆ ನಾವು ಇಲ್ಲಿ ಅರ್ಥೈಸಿಕೊಳ್ಳುವುದೇನೆಂದರೆ ಸಮಾಜ ಕಾರ್ಯವು ಕೇವಲ ಬಡವರಿಗಾಗಿ ಮಾತ್ರ ಅಲ್ಲ ಸಮಾಜದ ಹಿಂದುಳಿದ, ದುರ್ಬಲ ವರ್ಗದವರಿಗಾಗಿ, ಊನಶಕ್ತರಿಗಾಗಿ, ಅವಲಂಬಿತರಿಗಾಗಿ ಮಾತ್ರ ಅಲ್ಲ ಎನ್ನುವುದು. ಸಮಾಜ ಕಾರ್ಯವು ಎಲ್ಲರಿಗಾಗಿ ಎಲ್ಲದಕ್ಕಾಗಿ. ಆದರೆ ಉಳ್ಳವರಿಗಿಂತ ಉಳ್ಳದವರಿಗೆ ಹೆಚ್ಚಿನ ಆದ್ಯತೆ, ಪ್ರಾಮುಖ್ಯತೆ, ಖಂಡಿತ ಕೊಡಬೇಕು. ಏಕೆಂದರೆ ನಮ್ಮ ಸಮಾಜದಲ್ಲಿ ಬಹುಜನರು ಹಿಂದುಳಿದವರು. ದಲಿತರು ಶತ-ಶತಮಾನಗಳಿಂದ ಯಾವುದೇ ನಾಗರೀಕ, ಸಾಮಾಜಿಕ ಸೌಲತ್ತುಗಳಿಂದ ವಂಚಿತರಾದವರು. ಪೀಡಿತ ಜನರಿದ್ದಾರೆ. ಎರಡು ಹೊತ್ತು ಊಟಕ್ಕೆ ಗತಿಇಲ್ಲದವರು, ನಿರ್ಗತಿಕರು ಇದ್ದಾರೆ. ಅಂಥವರ ಉದ್ಧಾರ, ಕಲ್ಯಾಣ, ಅಭಿವೃದ್ಧಿ ಮೊದಲು ಆಗಬೇಕಾದ್ದೇ. ಅಲ್ಲದೆ ನಮ್ಮ ದೇಶದ ಸಂವಿಧಾನ ಜಾತ್ಯಾತೀತ ರಾಷ್ಟ್ರವನ್ನಾಗಿ ಸ್ಥಾಪಿಸುವ ಬಹುದೊಡ್ಡ ಧ್ಯೇಯ ಧೋರಣೆಗಳನ್ನು ಹೊಂದಲಾಗಿದೆ. ಅವುಗಳನ್ನು ಸಾಕಾರಗೊಳಿಸಲು ಸಂವಿಧಾನದ ನಾಲ್ಕನೇ ಭಾಗದಲ್ಲಿ ರಾಜನೀತಿ ನಿರ್ದೇಶಕ ತತ್ವಗಳನ್ನು ಕೊಡಲಾಗಿದೆ. ಅದರ ಪ್ರಕಾರ ಎಲ್ಲ ಸರಕಾರಗಳು ಕ್ರಮಗಳನ್ನು ತೆಗೆದುಕೊಂಡು ಬಹುಜನರ ಕಲ್ಯಾಣಕ್ಕಾಗಿ ಮಾಡುತ್ತಿವೆ. ಈ ದಿಶೆಯಲ್ಲಿ ಸಮಾಜ ಕಾರ್ಯವು ಸಮಾಜ ಕಲ್ಯಾಣದ ಗುರಿಗಳನ್ನು ಸಾಧಿಸುವ ಮಹತ್ವದ ಸಾಧನವಾಗಿ ತನ್ನ ಕಾರ್ಯವನ್ನು ನಿರ್ವಹಿಸುತ್ತದೆ. ಸಮಾಜ ಕಾರ್ಯವು ವೈಜ್ಞಾನಿಕ ಜ್ಞಾನದ ಆಧಾರದ ಮೇಲೆ ತಾಂತ್ರಿಕ ಕೌಶಲ್ಯಗಳ ಹಾಗು ಮಾನವೀಯ ತತ್ವ ಸಿದ್ಧಾಂತಗಳ ಮೇಲೆ ನೆಲೆಗೊಂಡ ಒಂದು ವಿಜ್ಞಾನ ಅಥವಾ ಶಾಸ್ತ್ರವಾಗಿದೆ. ಸಮಾಜ ಕಾರ್ಯವು ಅತ್ಯಂತ ವೈಜ್ಞಾನಿಕ ಜ್ಞಾನದ ತಳಹದಿಯನ್ನು ಹೊಂದಿದೆ. ಇಲ್ಲಿ ಯಾವುದೇ ರೀತಿಯ ಮೂಢ, ಗೊಡ್ಡು ನಂಬಿಕೆಗಳಿಗೆ ಅವಕಾಶವಿಲ್ಲ. ಜಾತಿ, ಧರ್ಮ, ಮತ ಪಂಥಗಳ ಗೋಡೆ, ಕಂದಕಗಳಿಲ್ಲ. ಸಮಾನತೆ, ಸ್ವಾತಂತ್ರ್ಯ ಹಾಗು ಪ್ರಜಾಸತ್ತತ್ಮಕ ಮೌಲ್ಯಗಳನ್ನು ಸಮಾಜಕಾರ್ಯವು ಅಳವಡಿಸಿಕೊಂಡಿದೆ. ವಿಶಾಲಹೃದಯಿಗಳು ಪ್ರಗತಿಪರರು ಚಿಂತನಾಶೀಲರು ಮಾತ್ರ ಸಮಾಜ ಕಾರ್ಯಕರ್ತರಾಗಬಹುದು. ಅನಿವಾರ್ಯವಾಗಿ ಸಮಾಜ ಕಾರ್ಯ ಪ್ರಶಿಕ್ಷಣ ಪಡೆದುಕೊಂಡು ಅದೇ ಹಳೆಯ ಹೀನಾಯಕವಾದ ವ್ಯವಸ್ಥೆಯನ್ನು ಮುಂದುವರೆಸಿಕೊಂಡು ಹೋಗುವ ಸಂಕುಚಿತ ವ್ಯಕ್ತಿಗಳಿಗೆ, ಸಂಪ್ರದಾಯವಾದಿಗಳಿಗೆ ಇಲ್ಲಿ ಯಾವ ಜಾಗವು ಇರುವುದಿಲ್ಲ. ಅಂಥವರು ಮಾಡುವ ಎಲ್ಲ ಕಾರ್ಯಗಳು ಸಮಾಜ ಕಾರ್ಯಗಳಾಗಿರದೇ ಸಮಾಜ ವಿರೋಧಿ ಕಾರ್ಯಗಳಾಗಿರುತ್ತವೆ. ಸಮಾಜ ಕಾರ್ಯವು ಜನರ ಜೊತೆಯಲ್ಲಿ ಮಾಡುವ ಒಂದು ಕಾರ್ಯವಿಧಾನವಾಗಿದೆ. ಅದು ಕೂಡ ಕೆಲವು ಕಾರ್ಯ ತಂತ್ರ, ಕೌಶಲ್ಯಗಳನ್ನು ಬಳಸಿಕೊಂಡು ಕಾರ್ಯ ನಿರ್ವಹಿಸುವುದಾಗಿದೆ. ಇದೇ ವ್ಯತ್ಯಾಸವನ್ನು ನಾವು ಸಾಮಾನ್ಯ ಸಮಾಜ ಕಾರ್ಯಕರ್ತರಲ್ಲಿ ಹಾಗು ಪರಿಣಿತ, ಪ್ರಶಿಕ್ಷಿತ ಸಮಾಜ ಕಾರ್ಯಕರ್ತರಲ್ಲಿ ಕಾಣುತ್ತೇವೆ. ಸ್ವಯಂಘೋಷಿತ ಸಾಮಾನ್ಯ ಸಮಾಜ ಕಾರ್ಯಕರ್ತರು ಕೇವಲ ಸೇವೆ ಸಲ್ಲಿಸುತ್ತ ಅವರಲ್ಲಿ ಅವಲಂಬನೆಯನ್ನು ಉಂಟು ಮಾಡುತ್ತಾರೆ. ಆದರೆ ಪ್ರಶಿಕ್ಷಿತ ಸಮಾಜ ಕಾರ್ಯಕರ್ತರು ಸೇವೆ ಸಲ್ಲಿಸಿ ಸ್ವಯಂಸಹಾಯಕರನ್ನಾಗಿ ಮಾಡುತ್ತಾರೆ. ಸಮಾಜ ಕಾರ್ಯ ಪ್ರಶಿಕ್ಷಣ ಮತ್ತು ತರಬೇತಿ ಪಡೆದುಕೊಂಡ ಪದವೀಧರ ಸಮಾಜ ಕಾರ್ಯಕರ್ತರು, ಸಮಾಜದಲ್ಲಿ, ಸಮಾಜ ಕಾರ್ಯ ಕ್ಷೇತ್ರಗಳಲ್ಲಿ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಲು ಸಮಾಜವನ್ನು ಮೂರು ಮೌಲ್ಯ ಘಟಕಗಳನ್ನಾಗಿ ವಿಂಗಡಿಸಲಾಗಿದೆ. ಅವುಗಳಲ್ಲಿ ವ್ಯಕ್ತಿ, ವೃಂದ ಮತ್ತು ಸಮುದಾಯ ಪ್ರತಿಯೊಂದು ಘಟಕದ ಜೊತೆಗೆ ಕಾರ್ಯನಿರ್ವಹಿಸಲು ಪ್ರತ್ಯೇಕ್ಷವಾದ ವಿಧಾನಗಳಿವೆ. ತಂತ್ರ ಕೌಶಲ್ಯಗಳಿವೆ, ತತ್ವ ಹಾಗು ಸಿದ್ಧಾಂತಗಳಿವೆ, ಅವೆಲ್ಲವುಗಳನ್ನು ಬಳಸಿಕೊಂಡು ಅತ್ಯಂತ ವ್ಯವಸ್ಥಿತವಾಗಿ, ಹಂತ-ಹಂತವಾಗಿ ಕಾರ್ಯ ನಿರ್ವಹಿಸಬಹುದಾಗಿದೆ. ಭಾರತೀಯ ಸಾಮಾಜಿಕ, ಸಾಂಸ್ಕೃತಿಕ ವ್ಯವಸ್ಥೆಯಲ್ಲಿ ನಾವು ಸಮಾಜ ಕಾರ್ಯವನ್ನು ಎರಡು ಹಂತಗಳಲ್ಲಿ ಗುರುತಿಸಬಹುದು. ಮೊದಲನೆಯದಾಗಿ, ಪ್ರಾಚೀನ ಕಾಲದಿಂದ ನಡೆದುಕೊಂಡು ಬಂದಿರುವ ಸೇವಾಕಾರ್ಯಗಳ ಪರಂಪರೆ ಮತ್ತು ಎರಡನೆಯದಾಗಿ ಇಪ್ಪತ್ತನೇ ಶತಮಾನದಿಂದೀಚೆಗೆ ಆಧುನಿಕ ವೃತ್ತಿ ಸಮಾಜ ಕಾರ್ಯ. ಮೊದಲನೆಯದು, ನಮ್ಮ ದೇಶಿಯ ಮತ್ತು ಸಾಂಪ್ರದಾಯಿಕ ಹಾಗು ಎರಡನೆಯದು, ವಿದೇಶಿಯ ವೃತ್ತಿಪರ ಸಮಾಜ ಕಾರ್ಯ. ಈ ಆಧುನಿಕ ವೃತ್ತಿ ಸಮಾಜ ಕಾರ್ಯದ ಬೇರುಗಳು ನಮ್ಮ ಭಾರತೀಯ ಸಮಾಜ ಸೇವಾ ಪರಂಪರೆಯಲ್ಲಿ ಅತ್ಯಂತ ಹಿಂದಿನ ಕಾಲದಿಂದಲೂ ಇರುವುದನ್ನು ಕಾಣಬಹುದು. ಆದರೆ ಅದಕ್ಕೆ ಒಂದು ವೃತ್ತಿಯ ರೂಪವನ್ನು ಕೊಡಲಿಲ್ಲ. ಸಮಾಜ ಸೇವಾ ಕಾರ್ಯಗಳು ಕಸಬಾಗಿ ನಮ್ಮ ಸಂಸ್ಕೃತಿಯ ಭಾಗವಾಗಿ ನಡೆದುಕೊಂಡು ಬಂದಿವೆ. ಆದರೆ ವೃತ್ತಿಯಾಗಿ ಅಲ್ಲ. ಅಂತರರಾಷ್ಟ್ರೀಯ ಮಟ್ಟದಲ್ಲಿ ಸಮಾಜ ಕಾರ್ಯದ ಉಗಮ ಬೆಳವಣಿಗೆಯನ್ನು ಸಂಯುಕ್ತ ರಾಷ್ಟ್ರಸಂಘವು ಗಮನಿಸಿದ ನಂತರ ಸಮಾಜ ಕಾರ್ಯ ಬೆಳವಣಿಗೆಯ ಮೂರು ಹಂತಗಳನ್ನು ಗುರುತಿಸಿದೆ. ಮೊದಲನೆಯದಾಗಿ, ಸಮಾಜ ಕಾರ್ಯ ವ್ಯಕ್ತಿಗಳಿಂದ ಅನುಕಂಪದ ಉದಾರತೆಯ ಕಾರ್ಯ. ಎರಡನೆಯದಾಗಿ ಸಮಾಜ ಕಾರ್ಯವು ಸರಕಾರದ ಮತ್ತು ಸ್ವಯಂ ಸೇವಾ ಸಂಸ್ಥೆಗಳ ಅಡಿಯಲ್ಲಿ ಜನರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಹಾಗು ಅವರನ್ನು ಆರ್ಥಿಕ ಒತ್ತಡ ಅವಲಂಬನೆಯಿಂದ ಮುಕ್ತಿಗೊಳಿಸಲು ಕೈಗೊಳ್ಳಲಾದ ಸಂಘಟಿತ ಚಟುವಟಿಕೆಗಳು ಮತ್ತು ಮೂರನೆಯದಾಗಿ, ಸಮಾಜ ಕಾರ್ಯವು ಸಮುದಾಯದ ಪ್ರತಿಯೊಬ್ಬ ಸದಸ್ಯನಿಗೂ, ಆತನ ಆರ್ಥಿಕ ಸಾಮರ್ಥ್ಯವನ್ನು ಗಣನೆಗೆ ತೆಗೆದುಕೊಳ್ಳದೆಯೇ ಆತನ ಅಂತಃ ಸತ್ವದ ವಿಕಸನದಿಂದ ಆತನ ಜೀವನವು ಉತ್ಪಾದಕವು, ತೃಪ್ತಿದಾಯಕವು, ಆಗಿರಲು ಸಾಧ್ಯವಾಗುವಂತೆ ಆತನಿಗೆ ನೆರವಾಗುವಂತೆ ಸರಕಾರದಿಂದ ಅಥವಾ ಸ್ವಯಂ ಸೇವಾ ಸಂಸ್ಥೆಯಿಂದ ಕೈಗೊಳ್ಳಲಾದ ವೃತ್ತಿಯಿಂದ ಕೂಡಿದ ಕಾರ್ಯವಾಗಿದೆ. ಅಂದರೆ ಸಮಾಜ ಕಾರ್ಯ ಬೆಳವಣಿಗೆಯ ಮೊದಲ ಹಂತದಲ್ಲಿ ಅದು ವ್ಯಕ್ತಿಗಳ ಅನುಕಂಪದ (Charitable) ಕಾರ್ಯವಾಗಿ ಆರಂಭವಾಯಿತು. ಎರಡನೇ ಹಂತದಲ್ಲಿ ಸರಕಾರ ಮತ್ತು ಖಾಸಗಿ ಸೇವಾ ಸಂಸ್ಥೆಗಳು ಮುಂದೆ ಬಂದು, ಜನರ ಆರ್ಥಿಕ ಅವಲಂಬನೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೋಗಲಾಡಿಸಲು ಸಮಾಜ ಕಾರ್ಯವನ್ನು ಬಳಸಿಕೊಂಡರೆ, ಮೂರನೇ ಹಂತದಲ್ಲಿ ಸಮಾಜ ಕಾರ್ಯವು ಒಂದು ವೃತ್ತಿಪರ ಕಾರ್ಯವಾಗಿ ಜನರ ಸಮುದಾಯದ ಸಮಸ್ಯೆಗಳನ್ನು ವ್ಯವಸ್ಥಿತವಾಗಿ ಪರಿಹರಿಸುವ ಒಂದು ಮಾರ್ಗೋಪಾಯವಾಯಿತು. ಹೀಗೆ ಸಮಾಜ ಕಾರ್ಯವು ಹಂತ-ಹಂತವಾಗಿ ಬೆಳೆದು ವೃತ್ತಿಯ ರೂಪವನ್ನು ತಳೆಯಿತು. ರಮೇಶ ಎಂ. ಸೋನಕಾಂಬಳೆ ರಮೇಶ ಎಂ. ಸೋನಕಾಂಬಳೆ, ಸಹಪ್ರಾಧ್ಯಾಪಕರು, ಸಮಾಜಕಾರ್ಯ ವಿಭಾಗ, ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯ, ಜ್ಞಾನಶಕ್ತಿ ಆವರಣ, ಟೋರ್ವಿ, ಬಿಜಾಪುರ : 586108.
1 Comment
|
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
|
|
|
|
SITE MAP
SiteTRAININGJOB |
HR SERVICESOTHER SERVICESnIRATHANKA CITIZENS CONNECT |
NIRATHANKAPOSHOUR OTHER WEBSITESSubscribe |
MHR LEARNING ACADEMY
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|