ಒಂದು ಘಟನೆ. 1940 ರಲ್ಲಿ ಗಾಂಧೀಜಿ ವೈಯುಕ್ತಿಕ ಸತ್ಯಾಗ್ರಹ ಆರಂಭಿಸಿದ್ದರು. ಕಾಂಗ್ರೆಸ್ನ ಕರ್ನಾಟಕ ಶಾಖೆ ಕಾರ್ಯದರ್ಶಿಯಾಗಿದ್ದ ಶಂಕರ ಕುರ್ತಕೋಟಿಯವರು ರಾಜ್ಯದ ಐದು ನೂರು ಸತ್ಯಾಗ್ರಹಿಗಳ ಪಟ್ಟಿಯೊಂದಿಗೆ ಗಾಂಧೀಜಿಯವರ ಅನುಮತಿ ಪಡೆಯಲು ವಾರ್ಧಾ ಆಶ್ರಮಕ್ಕೆ ತೆರಳಿದ್ದರು. ಹಿಂತಿರುಗುವ ಮುನ್ನ ಗಾಂಧೀಜಿಯವರ ಭೇಟಿ ಸಾಧ್ಯವಾಯಿತು. ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿ ಜೈಲುವಾಸದಲ್ಲಿದ್ದ ರಾಜಕೀಯ ಕೈದಿಗಳು ಹೊರಗಿನಿಂದ ತಿಂಡಿ-ತಿನಿಸು ತರಿಸಿ ತಿನ್ನುವುದು, ಬೀಡಿ ಇತ್ಯಾದಿ ತಂಬಾಕು ಬಳಸುವುದು ಗಾಂಧೀಜಿಯವರಿಗೆ ಹೇಗೋ ತಿಳಿದಿತ್ತು. ಇದನ್ನು ಶಂಕರ ಕುರ್ತಕೋಟಿಯವರೊಡನೆ ಚರ್ಚಿಸುತ್ತ ಹೀಗೆ ನುಡಿದರು. ಜೈಲು ತುಂಬುವುದು ನನಗೆ ಇಂದಿನ ಅಗತ್ಯವಲ್ಲ. ಕಳ್ಳಕಾಕರಿಂದ ಈಗಾಗಲೇ ಜೈಲು ತುಂಬಿವೆ. ಇನ್ನು ಮುಂದೆ ನಿಜವಾದ ಸತ್ಯಾಗ್ರಹಿಗಳು ಮಾತ್ರ ಜೈಲಿನಲ್ಲಿ ಇರಬೇಕು. ಪ್ರತಿಯೊಂದು ಊರಿನಲ್ಲಿ ಹಳ್ಳಿಯಲ್ಲಿ ಓಣಿಯಲ್ಲಿ ಇರುವ ಸದಾಚಾರಿ, ಸಚ್ಚಾರಿತ್ರ್ಯವಂತ, ಜನರ ಪ್ರೀತಿ ಗೌರವ ಆದರಗಳಿಗೆ ಪಾತ್ರನಾದ ವ್ಯಕ್ತಿ ಸರಕಾರದ ನೀತಿಯನ್ನು ಪ್ರತಿಭಟಿಸಿ ಜೈಲಿಗೆ ಹೋಗಬೇಕು. ಮನಸ್ಸು ಮರುಗಬೇಕು, ಕರಗಬೇಕು. ಅದೇ ಒಂದು ಅದ್ಭುತ ಶಕ್ತಿ. ನಿಮ್ಮ ಅಧ್ಯಕ್ಷರಿಗೆ ಸತ್ಯಾಗ್ರಹಿಗಳನ್ನು ಎಚ್ಚರದಿಂದ ಆರಿಸಲು ತಿಳಿಸು. (ಗಾಂಧೀ ಮತ್ತು ಕರ್ನಾಟಕ: ಲೇ: ಶಂಕರ ಕುರ್ತಕೋಟಿ)
ಭಾರತೀಯರ ಒಂದು ಸಾಮಾನ್ಯ ದೌರ್ಬಲ್ಯವೆಂದರೆ ಆದರ್ಶದ ಆರಾಧನೆಗಿಂತ ಆದರ್ಶ ವ್ಯಕ್ತಿಯನ್ನು ಹಿಂಬಾಲಿಸುವುದು, ವ್ಯಕ್ತಿಪೂಜೆಯಲ್ಲಿ ತೊಡಗುವುದು. ವಾಸ್ತವಕ್ಕಿಂತಲೂ ಭಾವನಾತ್ಮಕ ಜಗತ್ತಿನಲ್ಲಿ ತೇಲುತ್ತ, ಗತಕಾಲದ ಪರಂಪರೆಯನ್ನು ಆಸ್ವಾದಿಸುತ್ತ, ಪುರಾಣ-ಇತಿಹಾಸದ ಆದರ್ಶ ವ್ಯಕ್ತಿಗಳನ್ನು ಅನುಕರಿಸುವ ವ್ಯರ್ಥ ಪ್ರಯತ್ನದಲ್ಲಿ ತೊಡಗುವುದು. ಇಂತಹ ಭ್ರಮಾತ್ಮಕ ಜಗತ್ತಿನಲ್ಲೇ ಮುಳುಗಿ ಏನೋ ಅಸಾಧ್ಯ ಪವಾಡವನ್ನು ನಿರೀಕ್ಷಿಸುತ್ತ ತಮಗೆ ತಾವೇ ಗೊಂದಲಕ್ಕೆ ಒಳಗಾಗುವುದು ತೀರಾ ಸಾಮಾನ್ಯ ಸಂಗತಿ. ನಮಗೆಲ್ಲ ತಿಳಿದಿದೆ ಅಣ್ಣಾ ಹಜಾರೆಯವರು ಗಾಂಧೀಜಿಯವರಾಗಲು ಸಾಧ್ಯವಿಲ್ಲ. ನೈತಿಕ ಶುದ್ಧಿ, ಚಾರಿತ್ರ್ಯ, ಸರಳತೆ, ದೇಶಭಕ್ತಿ, ಸಾಮಾಜಿಕ ತುಡಿತ ಇಂತಹ ವಿಷಯಗಳಲ್ಲಿ ಅಣ್ಣಾ ಹಜಾರೆಯವರು ಪರಿಶುಭ್ರರು ಎಂಬುದರಲ್ಲಿ ಸಂಶಯವಿಲ್ಲ. ಆದರೆ ಗಾಂಧೀಜಿ ಒಬ್ಬ ಚತುರಮತಿ ರಾಜಕಾರಣಿ, ಹಠವಾದಿ, ಅದ್ವಿತೀಯ ಆತ್ಮವಿಶ್ವಾಸದ ವ್ಯಕ್ತಿ, ಒಬ್ಬ ಶ್ರೇಷ್ಠ ಬರಹಗಾರ ಕೂಡ ಎಂಬುದನ್ನು ನಾವು ಮರೆಯಲಾಗದು. ಗಾಂಧೀಜಿ ಮತ್ತು ಅಣ್ಣಾ ಹಜಾರೆ ನಡುವಿರುವ ಕಾಲದ ಅಂತರ, ಪರಿಸರ, ಸಾಮಾಜಿಕ ಬದುಕು, ಆಧುನಿಕ ಮನೋಭಾವದ ವಿಚಾರದಾರೆ, ಜನರ ಗ್ರಹಿಕೆ, ಮಾಧ್ಯಮಗಳು ಇವುಗಳಲ್ಲಿ ಅಗಾಧ ಅಂತರ ಇದೆ. ಭ್ರಷ್ಟಾಚಾರ ವಿರೋಧಿ ಆಂದೋಲನದಲ್ಲಿ ಜನಲೋಕಪಾಲ ವಿಧೇಯಕ ಜಾರಿಗೆ ಆಗ್ರಹಿಸಿ ನಡೆದ ವಾದ, ವಿವಾದ, ಚರ್ಚೆ, ಸತ್ಯಾಗ್ರಹ ಇದರ ರೋಮಾಂಚನವನ್ನು ನಮ್ಮ ಜನ ತೀವ್ರವಾಗಿ ಅನುಭವಿಸಿದರು. ಮತ್ತೊಂದು ಸ್ವಾತಂತ್ಯ ಹೋರಾಟದಂತಹ ಪವಿತ್ರ ಕಾರ್ಯದಲ್ಲಿ ಭಾಗವಹಿಸುತ್ತಿದ್ದೇವೆ ಎಂದು ಧನ್ಯತೆ ತಳೆದರು. ಅಣ್ಣಾ ಅವರಿಂದ ಇದ್ದಕ್ಕಿದ್ದಂತೆ ಯಾವುದೋ ಅಲೌಕಿಕ ಘಟನೆ ನಡೆಯಲಿದೆ ಎಂದು ನಿರೀಕ್ಷಿಸತೊಡಗಿದರು. ಭಾರತದ ಅತಿ ಭ್ರಷ್ಟ ವ್ಯವಸ್ಥೆಯಿಂದ ರೋಸಿ ಹೋದ ಜನ, ವಿಚಿತ್ರ ಮುಗ್ಧತೆಯಲ್ಲಿ ಇಂತಹ ಘಟನೆಗಳನ್ನು ನಿರೀಕ್ಷಿಸಿದ್ದು ಅಸಹಜವೇನೂ ಅಲ್ಲ. ಆದರೆ ಅಣ್ಣಾ ಅವರಲ್ಲಿ ಗಾಂಧೀಜಿಯವರನ್ನು ಹುಡುಕಲೆತ್ನಿಸಿದ್ದು ವಿಚಿತ್ರವಾದ ಮನೋಧರ್ಮವಾಗಿತ್ತು. ಅಣ್ಣಾ ಅವರ ಸತ್ಯಾಗ್ರಹದ ಸಂದರ್ಭದಲ್ಲಿ ದೇಶದಾದ್ಯಂತ ಹರಡಿದ ಅವರ ಜನಪ್ರಿಯತೆ, ಅನುದಿನದ ಘಟನೆಗಳು, ಸರಕಾರದ ವಿಚಿತ್ರ ನಡವಳಿಕೆಗಳು, ಮಾಧ್ಯಮಗಳ ವಿಪರೀತ ವರ್ತನೆ ಇವೆಲ್ಲವುಗಳಿಂದ ಅಣ್ಣಾ ಅವರನ್ನು ಗಾಂಧೀಜಿಯವರಿಗೆ ಸಮೀಕರಿಸುವುದನ್ನು ಹಲವು ಬುದ್ಧಿಜೀವಿಗಳು ಪ್ರಜ್ಞಾಪೂರ್ವಕವಾಗಿಯೇ ಮಾಡಿದರು. ಈ ಭಾರವನ್ನು ಅಣ್ಣಾ ತಾಳಿಕೊಳ್ಳಬಲ್ಲರೇ ಎಂಬುದನ್ನು ಕೂಡ ಯೋಚಿಸಲಿಲ್ಲ. ಅಣ್ಣಾ ಅವರು ಸಮಾಜಸೇವೆಗಾಗಿ ತಮ್ಮ ಬದುಕನ್ನೇ ಮುಡುಪಾಗಿಟ್ಟ ಮಹನೀಯರು. ಗ್ರಾಮೀಣ ಭಾರತದ ಸುಧಾರಣೆ ಮೂಲಕ ಸಮೃದ್ಧ ಭಾರತದ ಕನಸು ಕಂಡವರು. ಅದಕ್ಕಾಗಿ ಜೀವನಪೂರ್ತಿ ಶ್ರಮಿಸುತ್ತಿರುವ ಅಪರೂಪದ ವ್ಯಕ್ತಿ. ಅವರಿಗೆ ಅವರದೇ ಆದ ಅನನ್ಯತೆ ಇದೆ. ತಮ್ಮದೇ ಆದ ವ್ಯಕ್ತಿತ್ವ, ಚಿಂತನೆ, ಪ್ರತ್ಯೇಕ ವಿಚಾರಧಾರೆಗಳಿವೆ. ಅವರನ್ನು ಅಣ್ಣಾ ಆಗಿಯೇ ನಾವು ಪರಿಭಾವಿಸಬೇಕು. ಬೇರೊಬ್ಬರೊಂದಿಗೆ ಹೋಲಿಸಿ, ಅವರಿಗೆ ಸಮೀಕರಿಸಿ, ದೊಡ್ಡವರನ್ನಾಗಿಯೋ, ಚಿಕ್ಕವರನ್ನಾಗಿಯೋ ಮಾಡುವುದು ಬೇಡ. ಭ್ರಷ್ಟಾಚಾರ ವಿರೋಧಿ ಚಳವಳಿಯಲ್ಲಿ ತೊಡಗಿದ್ದ ಈ ಸಂದರ್ಭಕ್ಕೂ ಸ್ವಾತಂತ್ರ್ಯ ಹೋರಾಟದ ಸಂದರ್ಭಕ್ಕೂ ಅಜಗಜಾಂತರವಿದೆ. ಪತ್ರಿಕಾ ಮಾಧ್ಯಮಗಳೂ, ದೃಶ್ಯ ಮಾಧ್ಯಮಗಳೂ ಇದನ್ನು ಅತ್ಯಂತ ವಿರಳವಾಗಿ ಎಳೆ ಎಳೆಯಾಗಿ ಬಿಡಿಸಿ ತೋರಿಸಿದವು ಅಣ್ಣಾ ಅವರ ಸಹಚರರ ಮೇಲೆ ಸರಕಾರ ಅನೇಕ ಆಪಾದನೆಗಳನ್ನು ಹೊರಿಸಿತು. ಜನಲೋಕಪಾಲ ವಿಧೇಯಕದ ಪರವಾಗಿ ಚಳುವಳಿಯಲ್ಲಿ ತೊಡಗಿದ್ದ ಜನರೆಲ್ಲರೂ ಭ್ರಷ್ಟಾಚಾರದಿಂದ ದೂರವಿದ್ದವರಾಗಿರಲಿಲ್ಲ. ಆದರೆ ಭ್ರಷ್ಟಾಚಾರ ರಹಿತ ಸುಂದರ ಸಮಾಜದ ಭವ್ಯ ಕನಸನ್ನು ಕಣ್ಣಲ್ಲಿ ತುಂಬಿಕೊಂಡಿದ್ದಂತೂ ನಿಜ. ವಿದ್ಯಾರ್ಥಿಗಳು, ಯುವಜನತೆ ಹಾಗೂ ಮಹಿಳೆಯರೂ ಪೂರ್ಣಮನಸ್ಸಿನಿಂದ ಚಳವಳಿ ಮಾಡಿದರು. ಇಂತಹವರಿಂದಲೇ ಚಳವಳಿಗೆ ಜೀವ ಬಂದದ್ದು ಸತ್ಯ. ಅಣ್ಣಾ ಅವರು ಕ್ರಮಿಸಬೇಕಾದ ಮಾರ್ಗ ಇನ್ನೂ ತುಂಬಾ ದೀರ್ಘವಿದೆ. ಅವರು ಪ್ರಾರಂಭಿಸಿದ ಕೆಲಸ ಕೈಗೂಡಲು ಇಂತಹ ಅನೇಕ ಚಳುವಳಿಗಳ, ಹೋರಾಟಗಳ ಅಗತ್ಯವಿದೆ. ಸ್ವಾತಂತ್ರ್ಯ ಹೋರಾಟದ ಮುಗ್ಧ ಕಾಲಕ್ಕೂ ಇಂದಿನ ಎಚ್ಚರದ ಕಾಲಕ್ಕೂ ಹೋಲಿಸಲಾರದ ಅಂತರವಿದೆ. ಅತ್ಯಂತ ಸರಳ, ಸ್ವಲ್ಪ ಮುಗ್ಧ, ಶ್ರೇಷ್ಠ ಒಡನಾಡಿಗಳ ಚರ್ಚೆ, ಸಲಹೆಗಳ ಮೂಲಕ ಮುಂದಡಿ ಇಡುತ್ತಿರುವ ಸಾತ್ವಿಕ ಅಣ್ಣಾ ಹಜಾರೆ ಇಂದು ಭಾರತದ ಯುವಜನತೆಯ ರೋಲ್ ಮಾಡೆಲ್ ಆಗಿದ್ದಾರೆ. ಆದರೆ, ನಮ್ಮ ಜನ ಎಷ್ಟು ಸಿನಿಕರಾಗಿದ್ದಾರೆಂದರೆ ಭ್ರಷ್ಟಾಚಾರ ಎಂದರೆ ಕೋಟಿಗಟ್ಟಲೇ ಹಣವನ್ನು ಅಕ್ರಮ ಮಾರ್ಗಗಳಿಂದ ಸಂಪಾದಿಸುವ ರಾಜಕಾರಣಿ, ಅಧಿಕಾರಿ, ಮಧ್ಯವರ್ತಿಗಳು ಮಾತ್ರ ಮಾಡುವ ಕಾರ್ಯ ಎಂದು ಭಾವಿಸುತ್ತಿರುವುದು. ಒಬ್ಬ ನೌಕರ ತನ್ನ ಕಚೇರಿಗೆ ಬಂದವರೊಡನೆ ಸೌಜನ್ಯಯುತವಾಗಿ ವರ್ತಿಸದಿರುವುದು ಕೂಡಾ ಭ್ರಷ್ಟಾಚಾರವಾಗುತ್ತದೆ. ಒಬ್ಬ ಉಪಾಧ್ಯಾಯ ತನ್ನ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡದಿರುವುದೂ ಭ್ರಷ್ಟಾಚಾರವಾಗುತ್ತದೆ ಎಂಬ ಸರಳ ಸಾಮಾನ್ಯ ತತ್ವವನ್ನು ಮರೆತು ಬಿಟ್ಟಿದ್ದಾರೆ. ಸರಳತೆಯ ಬದುಕು ಇಂದಿನ ಸಮಾಜದಲ್ಲಿ ಮಾಯಾಮೃಗವಾಗಿದೆ. ಸೌಲಭ್ಯಗಳಿಂದ ವಂಚಿತರಾದ ಹಳ್ಳಿಗರು, ರೈತರು, ದುರ್ಬಲರು ಮಾತ್ರ ಅನಿವಾರ್ಯ ಸರಳ ಬದುಕನ್ನು ಬಾಳುತ್ತಿದ್ದಾರೆ. ಇಂದಿನ ನಮ್ಮ ಯುವ ಭಾರತ ಸಂಪತ್ತನ್ನು ಗಳಿಸುವುದರೊಂದಿಗೆ ಸರಳ, ಸಾತ್ವಿಕ, ಸಮಾಜಮುಖಿ ಬದುಕನ್ನು ಬಾಳುವ ಸಂದೇಶವನ್ನು ಅಣ್ಣಾ ಅವರಿಂದ ಕಲಿಯುವ ನಿರೀಕ್ಷೆಯನ್ನು ನಾವು ಇಟ್ಟುಕೊಂಡರೆ ಅತಿರೇಕವೇನೂ ಆಗಲಾರದು. ಈ ಲೇಖನದ ಮೊದಲಿಗೆ ಹೇಳಿದ ಘಟನೆಯನ್ನು ಈಗ ಸ್ವಲ್ಪ ನೆನಪಿಸಿಕೊಳ್ಳೋಣ. ಶಂಕರ ಕುರ್ತಕೋಟಿಯವರಿಗೆ ಗಾಂಧೀಜಿ ಹೇಳಿದಂತೆ ಈಗ ಯಾರಾದರೂ ಹೇಳಲು ಸಾಧ್ಯವೇ? ಗುರಿ ಮತ್ತು ಮಾರ್ಗಗಳೆರಡೂ ಮುಖ್ಯ ಎಂದು ಭಾವಿಸದ್ದ ಮಹಾತ್ಮರು ಅದರಿಂದ ಎಂದೂ ದೂರ ಸರಿಯಲಿಲ್ಲ. ಚೌರೀ ಚೌರ ಘಟನೆಯ ನಂತರ ಕಾಂಗ್ರೆಸ್ ಮುಖಂಡರ ಒತ್ತಡವನ್ನು ಮೀರಿ ಅಸಹಕಾರ ಚಳವಳಿಯನ್ನು ಹಿಂದೆ ಪಡೆದರು. ಅಗಾಧ ಆತ್ಮಶಕ್ತಿ, ಆತ್ಮವಿಶ್ವಾಸ ಹೊಂದಿದ್ದ ಗಾಂಧೀಜಿ ಘಟನೆಗಳ ಉಪಸಂಹಾರಕ್ಕೆ ಎಂದೂ ಹಿಂದಡಿ ಇಟ್ಟವರಲ್ಲ. ಭಾರತೀಯ ಮನಸ್ಸು ಎನ್ನುವುದು ಸದಾ ಕಾಮನಬಿಲ್ಲಿನ ಮೇಲೆ ಸಂಚರಿಸಲು ಯತ್ನಿಸುತ್ತದೆ. ಅತಿಮಾನುಷ ಘಟನೆಗಳ ಮೋಡಗಳ ಮೇಲೆ ತೇಲಲು ಯತ್ನಿಸುತ್ತದೆ. ಅಪರೂಪದ ವ್ಯಕ್ತಿ ದೊರೆತೊಡನೆ ಅವನಲ್ಲಿ ಎಲ್ಲ ಪೌರಾಣಿಕ, ಐತಿಹಾಸಿಕ ಆದರ್ಶಗಳನ್ನು ತುಂಬಲು ಯತ್ನಿಸುತ್ತದೆ. ಆದರ್ಶ ಗುಣಗಳ ಗಣಿಯನ್ನಾಗಿ ಮಾಡಿ ದೈವಾಂಶ ಸಂಭೂತನನ್ನಾಗಿ ಕಾಣಲು ಆಸೆ ಪಡುತ್ತದೆ. ಆದರೆ ಆದರ್ಶ ವ್ಯಕ್ತಿಗಳ ಆದರ್ಶ ಅವರ ಬದುಕಿಗಷ್ಟೇ ಸೀಮಿತ ಎಂಬ ಪರಮ ಸತ್ಯ ನಮಗೆ ಅರ್ಥವಾಗುವುದೇ ಇಲ್ಲ. ಅಣ್ಣಾ ಅವರ ಸಿದ್ಧಿ, ಸಾಧನೆ ಗಮನಿಸಿದ ಭಾರತೀಯ ಮನಸ್ಸು ಅವರನ್ನೂ ಇನ್ನೂ ಎತ್ತರಕ್ಕೇರಿಸುವ, ಅವರಲ್ಲಿ ಅದ್ಭುತವಾದುದನ್ನು ನಿರೀಕ್ಷಿಸುವ ಸಾಹಸ ಮಾಡುತ್ತದೆ. ಗಾಂಧೀ ತತ್ತ್ವಗಳಿಗಿಂತ ಅವುಗಳಿಂದ ಹೊರಹೊಮ್ಮುವ ಫಲಿತಾಂಶಗಳು ಸಫಲವಾದಾಗ ತತ್ತ್ವಗಳು ಪೂರ್ಣವಾಗಿ ಸಾಧಿತವಾಗುತ್ತವೆ. ಇಲ್ಲದೇ ಹೋದಾಗ ಭ್ರಮನಿರಸನಕ್ಕೆ ಒಳಗಾಗಬೇಕಾಗುತ್ತದೆ. ಬಾಬಾ ರಾಮದೇವ ಅವರ ಘಟನೆ ಇದಕ್ಕೊಂದು ಉದಾಹರಣೆ. ವಾಸ್ತವಕ್ಕಿಂತ ಕನಸು, ರಂಜನೆ, ಭ್ರಮಾಲೋಕ ಭಾರತೀಯರಿಗೆ ಸುಖ ಕೊಡುತ್ತದೆ. ಹಾಗಾಗಿಯೇ ನಮಗೆ ರಾಮಮನೋಹರ ಲೋಹಿಯಾ ಅವರಿಗಿಂತ ಜವಹರಲಾಲ್ ನೆಹರೂ ಇಷ್ಟವಾಗುತ್ತಾರೆ. ದೇವರಾಜ ಅರಸು ಅವರಿಗಿಂತ ರಾಮಕೃಷ್ಣ ಹೆಗಡೆ ಪ್ರಿಯರಾಗುತ್ತಾರೆ. ಎಂ.ಗೋಪಾಲಕೃಷ್ಣ ಅಡಿಗರಿಗಿಂತ ಕೆ.ಎಸ್.ನರಸಿಂಹಸ್ವಾಮಿ ಪ್ರಿಯರಾಗುತ್ತಾರೆ. ಇಷ್ಟಾಗಿಯೂ ಅಣ್ಣಾ ಇಂದು ನಮಗೆ ಬೆಳಕಿನ ಸೊಡರಾಗಿ ಕಾಣುತ್ತಿದ್ದಾರೆ. ಅವರಿಂದ ಆರಂಭವಾಗಿರುವ ಈ ಆಂದೋಲನ ಸಣ್ಣ ಯಶಸ್ಸನ್ನು ಗಳಿಸಿದರೂ ಇಂದು ಅದಕ್ಕೆ ಬಹುದೊಡ್ಡ ಮಾನ್ಯತೆ ದೊರೆಯಲಿದೆ. ಭಾರತೀಯ ಮನಸ್ಸು ಅವರಿಗೆ ಎಂದೆಂದೂ ಋಣಿಯಾಗಿರುತ್ತದೆ. ಬಿ.ಎಂ. ರಾಜಶೇಖರ (ಕೃಪೆ: ವಿಜಯ ಕರ್ನಾಟಕ, 16-12-11)
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
SITE MAP
SiteTRAININGJOB |
HR SERVICESOTHER SERVICESnIRATHANKA CITIZENS CONNECT |
NIRATHANKAPOSHOUR OTHER WEBSITESSubscribe |
MHR LEARNING ACADEMY
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|