ತಮ್ಮದೇ ಆದ ಭಾಷೆ ಮತ್ತು ಸಂಸ್ಕೃತಿಯನ್ನು ಹೊಂದಿರುವ ಸ್ಥಳೀಯ ಸಮುದಾಯಗಳ ಸಮೂಹವನ್ನು ಬುಡಕಟ್ಟು ಜನಾಂಗ, ಆದಿವಾಸಿ ಸಮಾಜ ಎಂದು ಕರೆಯುತ್ತಾರೆ. ಈ ಸಮುದಾಯಗಳ ಜನರು ತಮ್ಮದೇ ಆದ ಆಚಾರ, ವಿಚಾರ, ಪರಂಪರೆ, ನಂಬಿಕೆಗಳು, ಪದ್ಧತಿಗಳು, ಸಂಪ್ರದಾಯಗಳು, ಸಾಹಿತ್ಯ, ಸಂಗೀತ, ನೃತ್ಯಕಲೆ, ಕುಶಲಕಲೆ ಮುಂತಾದ ಹಲವಾರು ಅಂಶಗಳಿಂದ ಮುಖ್ಯ ಸಾಂಸ್ಕೃತಿಕ ವಾಹಿನಿಯಿಂದ ಭಿನ್ನವಾಗಿರುತ್ತಾರೆ. ಅವರು ಈ ಬುಡಕಟ್ಟು ಜನಾಂಗಗಳಿಗೆ ಅಳವಡಿಸಿಕೊಳ್ಳುವಂತಹ ಅಂತರ ಸಮುದಾಯ ರಚನೆ, ಸಂಸ್ಕಾರಗಳು, ರೀತಿ-ರಿವಾಜು, ವೇಷ-ಭೂಷಣ, ಆಹಾರ-ಪಾನೀಯ ಪದ್ಧತಿಗಳು, ಹವ್ಯಾಸಗಳು, ಅಭ್ಯಾಸಗಳನ್ನು ಹೊಂದಿರುತ್ತಾರೆ. ಈ ಕಾರಣಗಳಿಗಾಗಿ ಅವರು ಇತರೆ ಸಾಂಸ್ಕೃತಿಕ ಸಮುದಾಯಗಳಿಂದ, ಸಮಾಜಗಳಿಂದ ಬೇರೆಯದೇ ಆದ ಜೀವನ ಪದ್ಧತಿಯನ್ನು ಅನುಸರಿಸುತ್ತಾರೆ. ಕರ್ನಾಟಕದಲ್ಲಿ ಇಂತಹ ಅನೇಕ ಸಮುದಾಯಗಳು, ಸಮಾಜಗಳು ಅಲ್ಲಲ್ಲಿ ಕಾಣಸಿಗುತ್ತವೆ. ಅವುಗಳಲ್ಲಿ ಕಾಡುಗೊಲ್ಲರು, ಕೊರಗರು, ಕುರುಬರು, ಜೇನುಕುರುಬರು, ವಡ್ಡರು, ಮ್ಯಾಸನಾಯಕರು ಹೀಗೆ ಅನೇಕ ಬುಡಕಟ್ಟು ಜನಾಂಗಗಳನ್ನು ಗುರುತಿಸಬಹುದಾಗಿದೆ. ಇಂತಹ ಬುಡಕಟ್ಟು ಜನಾಂಗಗಳಲ್ಲಿ ಲಂಬಾಣಿ ಬುಡಕಟ್ಟು ಜನಾಂಗವೂ ಒಂದು. ಲಂಬಾಣಿಗಳು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಕಂಡುಬರುತ್ತಾರಾದರೂ, ಅವರು ಹೆಚ್ಚಾಗಿ ವಿಜಾಪುರ, ಕಲಬುರ್ಗಿ, ರಾಯಚೂರು, ಬಳ್ಳಾರಿ, ಧಾರವಾಡ, ಬೆಳಗಾವಿ, ಶಿವಮೊಗ್ಗ ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ಹೆಚ್ಚಾಗಿದ್ದಾರೆ. ಅವರು ತಮ್ಮನ್ನು ತಾವು ಗೋರಮಾಟಿ ಅಥವಾ ಗೋರ ಬಂಜಾರಾ ಎಂದು ಕರೆದುಕೊಳ್ಳುತ್ತಾರೆ. ಇವರ ಮೂಲದ ಬಗ್ಗೆ ಸಮಾಜ ವಿಜ್ಞಾನಿಗಳಲ್ಲಿ ಭಿನ್ನಾಭಿಪ್ರಾಯವಿದ್ದು, ಹೆಚ್ಚಿನವರು ಇವರು ಪಶ್ಚಿಮೋತ್ತರ ರಾಜ್ಯಗಳಾದ ರಾಜಸ್ಥಾನ ಮತ್ತು ಗುಜರಾತ್ ಮೂಲದವರು ಎಂದು ನಂಬುತ್ತಾರೆ. ಇವರು ಮೂಲತಃ ರಜಪೂತ ಮತ್ತು ಬ್ರಾಹ್ಮಣ ಸಮುದಾಯಗಳ ಮೂಲದವರಾಗಿದ್ದು, ಉತ್ತರ ಭಾರತದಲ್ಲಿ ಲವಣ ಮತ್ತು ಇತರೆ ಖಾದ್ಯ ಪದಾರ್ಥಗಳ ವ್ಯಾಪಾರವನ್ನು ಕೈಕೊಂಡು, ಉತ್ತರದಿಂದ ದಕ್ಷಿಣಕ್ಕೆ ಬಂದರೆಂದು ತಿಳಿಯಲಾಗಿದೆ. ಇವರು ತಾವು ಸಾಕಿದ ನೂರಾರು ಜಾನುವಾರುಗಳ ಮೇಲೆ ಸಂಬಾರು ಪದಾರ್ಥಗಳನ್ನು ಹಾಗೂ ಮುಸ್ಲಿಂ ಆಡಳಿತಗಾರರಿಗೆ ಬೇಕಾದ ಯುದ್ಧ ಸಾಮಗ್ರಿಗಳನ್ನು ಸಾಗಿಸುತ್ತಿದ್ದರೆಂದು ತಿಳಿದುಬರುತ್ತದೆ. ಇವರು ಸಾರಿಗೆ ಸಂಪರ್ಕಕ್ಕಾಗಿ ಉಪಯೋಗಿಸುತ್ತಿದ್ದ ದನಗಳಿಗೆ ಅನುಕೂಲವಾಗಲು ಪ್ರಮುಖ ನದಿಗಳ ಇಕ್ಕೆಡೆಗಳಲ್ಲಿ ತಮ್ಮ ಬೀಡುಗಳನ್ನು ಬಿಡುತ್ತಿದ್ದರೆಂದು ತಿಳಿದುಬರುತ್ತದೆ. ಹಾಗಾಗಿ ಇವರು ಮಹಾರಾಷ್ಟ್ರ, ಉತ್ತರ ಕರ್ನಾಟಕ, ಆಂಧ್ರಪ್ರದೇಶ ಮತ್ತು ಉತ್ತರ ತಮಿಳುನಾಡುಗಳಲ್ಲಿ ಹೆಚ್ಚಾಗಿ ಕಾಣಸಿಗುತ್ತಾರೆ. ಈ ದೇಶದಲ್ಲಿ ರೈಲುಗಾಡಿ ಮತ್ತು ಮೋಟಾರು ಗಾಡಿಗಳು ಪ್ರಾರಂಭಗೊಂಡಂದಿನಿಂದ ಇವರ ವೃತ್ತಿಗೆ ಸಂಚಕಾರ ಬಂತು. ಆ ನಂತರದ ದಿನಗಳಲ್ಲಿ ಲಂಬಾಣಿಗಳು ಅಲ್ಲಲ್ಲೆ ನಿಂತು ಕೃಷಿ, ಕೋಳಿ ಸಾಕಾಣಿಕೆ, ಅರಣ್ಯ ಉತ್ಪನ್ನಗಳ ಮಾರಾಟ, ಮಾದಕ ದ್ರವ್ಯಗಳ ತಯಾರಿಕೆ, ಮುಂತಾದ ಕಸಬುಗಳಲ್ಲಿ ತೊಡಗಿಕೊಂಡಿದ್ದಾರೆ. ಮುಂಬರುವ ದಿನಗಳಲ್ಲಿ ಮಾದಕದ್ರವ್ಯಗಳ ತಯಾರಿಕೆ ಕಾನೂನು ಬಾಹಿರವಾದ್ದರಿಂದ ಅವುಗಳ ತಯಾರಿಯನ್ನು ಅವರಿಂದ ಬಿಡಿಸಲಾಗಿದೆ.
ಲಂಬಾಣಿಗಳು ಒಂದು ಬುಡಕಟ್ಟು ಜನಾಂಗದವರು. ರಾಷ್ಟ್ರಮಟ್ಟದಲ್ಲಿ ಅವರನ್ನು ಬಂಜಾರಿಗಳೆಂದು ಕರೆಯುತ್ತಾರೆ. ಇವರನ್ನು ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆಯಾಗಿಯೇ (ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಬುಡಕಟ್ಟು ಜನಾಂಗ, ಇತ್ಯಾದಿ) ಗುರುತಿಸುತ್ತಾರೆ. ಕರ್ನಾಟಕದಲ್ಲಿ ಇವರನ್ನು ಪರಿಶಿಷ್ಟ ಜಾತಿ ಗುಂಪಿಗೆ ಸೇರಿಸಲಾಗಿದೆ. ಹದಿನೇಳು-ಹದಿನೆಂಟನೇ ಶತಮಾನಗಳಲ್ಲಿ ಇವರ ನದಿ, ಕೆರೆ, ಕಟ್ಟೆ ಮುಂತಾದ ನೀರಿನ ಮೂಲದ ಹತ್ತಿರ ತಮ್ಮದೇ ಆದ ಹಟ್ಟಿಗಳನ್ನು (ತಾಂಡಗಳನ್ನು) ಕಟ್ಟಿಕೊಂಡು ಬದುಕಿದ್ದಾರೆ. ಅರಣ್ಯ ಉತ್ಪಾದನೆಗಳನ್ನು (ಕಟ್ಟಿಗೆ, ಬೀಜ, ಎಲೆ ಇತ್ಯಾದಿ) ಮಾರಾಟ ಮಾಡಿ ಜೀವನ ಸಾಗಿಸಿದ್ದಾರೆ. ಆನಂತರದ ದಿನಗಳಲ್ಲಿ ಕೃಷಿ ಕಲಿತಿದ್ದಾರೆ. ಹೀಗಾಗಿ ಇವರು ಅಭಿವೃದ್ಧಿಯ ಮುಖ್ಯವಾಹಿನಿಯಿಂದ ದೂರ ಉಳಿದಿದ್ದಾರೆ. ಬಡತನ, ಅನಕ್ಷರತೆ, ತಿಳುವಳಿಕೆಯ ಕೊರತೆ, ಸೂಕ್ತ ಮಾರ್ಗದರ್ಶನದ ಕೊರತೆ ಮುಂತಾದ ಕಾರಣಗಳಿಂದ ಇವರು ತುಂಬಾ ಹಿಂದುಳಿದಿದ್ದಾರೆ. ಆರ್ಥಿಕ, ಸಾಮಾಜಿಕ, ಆಡಳಿತ ಮುಂತಾದ ಕ್ಷೇತ್ರಗಳ ನಾಯಕರ ಗಮನದ ಕೊರತೆಯಿಂದ ಅವರಿಗೆ ಪ್ರಗತಿಯು ಒಂದು ಬಿಸಿಲುಗುದುರೆಯಾಗಿದೆ. ಸ್ವಾತಂತ್ರ್ಯಾನಂತರ, ಸಂವಿಧಾನ ಅಸ್ತಿತ್ವಕ್ಕೆ ಬಂದ ನಂತರ, ಸಮಾನತೆ ಇಂದಿನ ಸಮಾಜದ ಮಂತ್ರವಾದ ನಂತರ ಇವರ ಕಡೆಗೂ ಗಮನ ಹರಿಸಲಾಗಿದೆ. ನಾಗರೀಕ ಹಕ್ಕುಗಳನ್ನು ಇವರಿಗೂ ಅನ್ವಯಿಸಲಾಗಿದೆ. ನಿರ್ದೇಶಕ ತತ್ವಗಳ ಅಡಿಯಲ್ಲಿ ಇವರಿಗೆ ಆದ್ಯತೆಯನ್ನು ಕೊಡಲಾಗಿದೆ. ಇತರೆ ಪರಿಶಿಷ್ಟ ಜಾತಿ (ಪ.ಜಾ.), ಪರಿಶಿಷ್ಟ ಪಂಗಡ (ಪ.ಪಂ.) ಅಭಿವೃದ್ಧಿಗೆ ಅನ್ವಯವಾಗುವಂತೆ ಒಂದು ವಿಶೇಷ ಯೋಜನೆಯನ್ನೇ ರೂಪಿಸಲಾಗಿದೆ. ಇದೇ ವಿಶೇಷ ಘಟಕ ಯೋಜನೆ. ಸರಕಾರಗಳ ವಿವಿಧ ಇಲಾಖೆಗಳು ತಮ್ಮ ಕಾರ್ಯಕ್ಷೇತ್ರಕ್ಕೆ ತಕ್ಕಂತೆ ಯೋಜನೆಗಳನ್ನು ರೂಪಿಸಿ ಕಾರ್ಯರೂಪಕ್ಕೆ ತರುತ್ತವೆ. ಆ ಪ್ರಕ್ರಿಯೆಯಲ್ಲಿ ಈ ಹಿಂದುಳಿದ ಜನಾಂಗಗಳಿಗೆ ಆದ್ಯತೆ ಸಿಗಲಿಲ್ಲ. ಹಾಗಾಗಿ ಈ ಜನಾಂಗಗಳನ್ನು ದೃಷ್ಟಿಯಲ್ಲಿಟ್ಟುಕೊಂಡೇ ವಿಶೇಷ ಘಟಕ ಯೋಜನೆಯನ್ನು 1980-81ನೇ ಆರ್ಥಿಕ ವರ್ಷದಿಂದ ಯೋಜಿಸಿ, ಕಾರ್ಯರೂಪಕ್ಕೆ ತರಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸರ್ವತೋಮುಖ ಅಭಿವೃದ್ಧಿಯನ್ನು ದೃಷ್ಟಿಯಲ್ಲಿರಿಸಿಕೊಳ್ಳಲಾಗಿದೆ. ಅವರ ಆರ್ಥಿಕ, ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಪರೋಕ್ಷವಾಗಿ ರಾಜಕೀಯ ಪ್ರಗತಿಯನ್ನು ಗಮನದಲ್ಲಿರಿಸಿಕೊಂಡು ಯೋಜನೆಯನ್ನು ಅಳವಡಿಸಿಕೊಳ್ಳಲಾಗಿದೆ. ಈ ಯೋಜನೆಯ ಅನೇಕ ಕಾರ್ಯಕ್ರಮಗಳು ಪ.ಜಾ., ಪ.ಪಂ.ಗಳ ಜನರ ಮೇಲೆ ಪರಿಣಾಮ ಬೀರಿವೆಯೆಂದು ನಂಬಲಾಗಿದೆ. ಇತರ ಪ.ಜಾ. ಜನರ ಮೇಲೆ ಪ್ರಭಾವ/ಪರಿಣಾಮ ಬೀರಿದಂತೆ ಲಂಬಾಣಿಗಳ ಮೇಲೆಯೂ ಈ ಯೋಜನೆ ಪ್ರಭಾವ/ಪರಿಣಾಮ ಬೀರಿರಬಹುದಾಗಿದೆ. ಸಂಶೋಧನೆಯ ಉದ್ದೇಶಗಳು :- ಇಲ್ಲಿಯವರೆಗೆ ನಡೆಸಿದ ಚರ್ಚೆಯನ್ನು ಹಿನ್ನೆಲೆಯಾಗಿಟ್ಟುಕೊಂಡು ಸಂಶೋಧನೆಯ ಉದ್ದೇಶಗಳನ್ನು ಈ ಕೆಳಕಂಡಂತೆ ರೂಪಿಸಲಾಗಿದೆ.
ಸಂಶೋಧನೆಯ ಜಗತ್ತು ಮತ್ತು ಸಂಶೋಧನಾ ವಿಧಾನ:- ಉತ್ತರ ಕರ್ನಾಟಕದ ಬಳ್ಳಾರಿ ಜಿಲ್ಲೆಯಲ್ಲಿರುವ 104 ತಾಂಡಗಳನ್ನು ಈ ಸಂಶೋಧನಾ ವ್ಯಾಪ್ತಿಗೆ ತರಲಾಗಿದೆ. ಮೊದಲನೇ ಹಂತದಲ್ಲಿ ಈ ತಾಂಡಗಳನ್ನು ತಾಲೂಕುವಾರು ವಿಂಗಡಿಸಲಾಗಿದೆ. ಆ ನಂತರ ಗ್ರಾಮೀಣ ತಾಂಡಗಳು (68), ಒಳನಾಡು ತಾಂಡಗಳು (14) ಮತ್ತು ನಾಗರೀಕ ತಾಂಡಗಳೆಂದು (22) ಬೇರ್ಪಡಿಸಲಾಗಿದೆ. ಆಯಾ ವಿಭಾಗದಲ್ಲಿರುವ ತಾಂಡಗಳ ಸಂಖ್ಯೆಗಳ ಆಧಾರದ ಮೇಲೆ, 10 ಗ್ರಾಮೀಣ, 6 ಒಳನಾಡು ತಾಂಡಗಳು ಮತ್ತು 4 ನಾಗರೀಕ ತಾಂಡಗಳು, ಒಟ್ಟು 16 ತಾಂಡಗಳನ್ನು ಅಭ್ಯಾಸಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ಸಂಶೋಧನೆಗೆ ವಿವರಣಾತ್ಮಕ ಹಾಗೂ ವಿಶ್ಲೇಷಣಾತ್ಮಕ ವಿಧಾನವನ್ನು ಬಳಸಲಾಗಿದೆ. ನಮೂನೆಯನ್ನು ಆರಿಸುವ ಹಂತದಲ್ಲಿ ವಿಭಾಗಿತ ಯದೃಚ್ಛಿಕ ನಮೂನೆ ಪದ್ಧತಿಯನ್ನು ಅಳವಡಿಸಿಕೊಳ್ಳಲಾಗಿದೆ. ಒಟ್ಟು 100 ಜನ ಫಲಾನುಭವಿಗಳನ್ನು, 40 ಜನ ಲಂಬಾಣಿ ನಾಯಕರುಗಳನ್ನು, 40 ಜನ ವಿ.ಘ.ಯೋ. ಅಧಿಕಾರಿಗಳನ್ನು, 10 ಜನ ಸಾಮಾನ್ಯ ಯೋಜನೆಗಳ ಅಧಿಕಾರಿಗಳನ್ನು ಮತ್ತು 10 ಜನ ಬ್ಯಾಂಕ್ ಅಧಿಕಾರಿಗಳನ್ನು ಸಂದರ್ಶಿಸಿ, ಅವಶ್ಯಕ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಫಲಾನುಭವಿಗಳನ್ನು ಆರಿಸುವಾಗ ಎಲ್ಲಾ ವಯೋಮಾನದವರು ಪ್ರತಿನಿಧಿಸುವಂತೆ ಗಮನಹರಿಸಲಾಗಿದೆ. ಅತಿ ಸಣ್ಣ, ಸಣ್ಣ ಮತ್ತು ದೊಡ್ಡ ರೈತರನ್ನು ಸಂದರ್ಶಿಸಲಾಗಿದೆ. ಮಹಿಳೆಯರಿಗೆ ಆದ್ಯತೆ ಕೊಡಲಾಗಿದೆ. ಅದರಂತೆಯೇ ಲಂಬಾಣಿ ನಾಯಕರನ್ನು ಸಂದರ್ಶನಕ್ಕಾಗಿ ಆರಿಸುವಾಗ ರಾಜಕೀಯ, ಸಾಮಾಜಿಕ, ಧಾರ್ಮಿಕ, ಆರ್ಥಿಕ ಮುಂತಾದ ಕ್ಷೇತ್ರದಲ್ಲಿ ಕೆಲಸ ಮಾಡುವವರನ್ನು ಗಮನದಲ್ಲಿರಿಸಿ ಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ವಿಧಾನ ಸಭೆ ಹಾಗೂ ವಿಧಾನ ಪರಿಷತ್ತು ಸದಸ್ಯರನ್ನು, ಅದರಂತೆಯೇ ತಾಂಡದ ಜನಾಂಗೀಯ ನಾಯಕ, ಯುವಕ ಸಂಘದ ಮುಂದಾಳು, ಸಹಕಾರಿ ಸಂಘದ ನಿರ್ದೇಶಕ ಮುಂತಾದವರನ್ನು ಕಂಡು ಚರ್ಚಿಸಲಾಗಿದೆ. ಹಾಗೆಯೇ ಸರಕಾರಿ ಅಧಿಕಾರಿಗಳನ್ನು ಸಂದರ್ಶಿಸುವಾಗ ಯೋಜಕರನ್ನು, ಆಡಳಿತಗಾರರನ್ನು, ಕ್ಷೇತ್ರಾಧಿಕಾರಿಗಳನ್ನು ಮತ್ತು ಮೇಲ್ವಿಚಾರಕರನ್ನು ಸಂದರ್ಶನ ಪಟ್ಟಿಯಲ್ಲಿ ಸೇರಿಸಿಕೊಳ್ಳಲಾಗಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಯೋಜನೆ ರೂಪಿಸುವಾಗ ಮತ್ತು ಅವುಗಳನ್ನು ಕಾರ್ಯರೂಪಕ್ಕೆ ತರುವಾಗ ತಮ್ಮನ್ನು ತೊಡಗಿಸಿಕೊಂಡ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳನ್ನು ಭೇಟಿ ಮಾಡಲಾಗಿದೆ. ಸಾಮಾನ್ಯ ಯೋಜನೆಗಳ ಅಧಿಕಾರಿಗಳನ್ನು ಸಂದರ್ಶಿಸುವಾಗ ಎಲ್ಲಾ ಹಂತದ, ವಿವಿಧ ಜವಾಬ್ದಾರಿಯುಳ್ಳವರನ್ನು ಕಾಣಲಾಗಿದೆ. ಒಟ್ಟಾರೆ ಪ.ಜಾ., ಪ.ಪಂ. ಜನಾಂಗದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಎಲ್ಲಾ ಸಂಬಂಧಪಟ್ಟವರನ್ನು ಸಂದರ್ಶಿಸಲಾಗಿದೆ. ಫಲಾನುಭವಿಗಳನ್ನು, ಲಂಬಾಣಿ ನಾಯಕರನ್ನು, ವಿ.ಘ. ಯೋಜನೆಯ ಅಧಿಕಾರಗಳನ್ನು, ಸಾಮಾನ್ಯ ಕಾರ್ಯಕ್ರಮಗಳ ಅಧಿಕಾರಿಗಳನ್ನು ಮತ್ತು ಬ್ಯಾಂಕ್ ಅಧಿಕಾರಿಗಳನ್ನು ಸಂದರ್ಶಿಸಲು ಪ್ರತ್ಯೇಕವಾದ ಸಂದರ್ಶನ ನಮೂನೆಗಳನ್ನು ಬಳಸಲಾಗಿದೆ. ಅವಶ್ಯಕತೆಗಳಿಗೆ ತಕ್ಕಂತೆ ಪ್ರಶ್ನೆಗಳನ್ನು ಹಾಕಲಾಗಿದೆ. ವಿ.ಘ. ಯೋಜನೆಯ ಬಗ್ಗೆ ಅವರ ತಿಳುವಳಿಕೆ, ಆ ಕಾರ್ಯಕ್ರಮಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಅವರವರ ಪಾತ್ರ, ಎದುರಿಸಿದ ಸಮಸ್ಯೆಗಳು, ಅವುಗಳನ್ನು ಬಗೆಹರಿಸಲು ಕಂಡುಕೊಂಡ ಮಾರ್ಗ, ಆರ್ಥಿಕ, ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ವಿ.ಘ. ಯೋಜನೆಯಿಂದ ಆದ ಪ್ರಭಾವ, ಬದಲಾವಣೆ ಮತ್ತು ಅಭಿವೃದ್ಧಿ ಮುಂತಾದ ವಿಷಯಗಳ ಮೇಲೆ ಅವರ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿದೆ. ಇವರ ಜೊತೆಗೆ ಈ ಯೋಜನಾ ಕಾರ್ಯಕ್ರಮಗಳಿಂದ ಅವರಿಗೆ ಸಮಾಧಾನ ಆಗಿದೆಯೇ, ಈ ಯೋಜನೆಯನ್ನು ಇನ್ನೂ ಚೆನ್ನಾಗಿ ಕಾರ್ಯರೂಪಕ್ಕೆ ತರಲು ಅವರು ಕೊಡುವ ಸಲಹೆಗಳೇನು, ಹೀಗೆ ಅನೇಕ ವಿಷಯಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಇದರ ಜೊತೆಗೆ ಅವಲೋಕನಾ ನಮೂನೆಯನ್ನೂ ಬಳಸಲಾಗಿದೆ. ಸಂಗ್ರಹಿಸಿದ ಎಲ್ಲಾ ಮಾಹಿತಿಯನ್ನು ಕೋಷ್ಟಕಗಳಲ್ಲಿ ಅಳವಡಿಸಲಾಗಿದೆ. ಮಾಹಿತಿಯನ್ನು ಗುಂಪುಗಳಲ್ಲಿ ವಿಂಗಡಿಸಿ, ಪ್ರತಿಶತಕ್ಕೆ ಅಳವಡಿಸಿ ಚರ್ಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕಂಡುಕೊಂಡ ಮಾಹಿತಿಯ ಆಧಾರದ ಮೇಲೆ ನಿರ್ಣಯಕ್ಕೆ ಬರಲಾಗಿದೆ. ಈ ನಿರ್ಣಯಗಳನ್ನು ಮುಂದಿಟ್ಟುಕೊಂಡು ವಿ.ಘ. ಯೋಜನೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಎಲ್ಲಾ ಸಂಬಂಧಪಟ್ಟವರಿಗೆ ಸಲಹೆ ಸೂಚನೆಯನ್ನು ನೀಡಲಾಗಿದೆ. ಸಂಶೋಧನಾ ಫಲಗಳು/ಸಾರಾಂಶ :- ಸಂಶೋಧನಾ ಫಲಿತಾಂಶವನ್ನು ಸಂಕ್ಷಿಪ್ತವಾಗಿ ಈ ಕೆಳಕಂಡಂತೆ ಚರ್ಚಿಸಲಾಗಿದೆ. ಫಲಾನುಭವಿಗಳು ಮತ್ತು ವಿ.ಘ. ಯೋಜನೆ :-
ಬದಲಾವಣೆ ಕಂಡ ಕ್ಷೇತ್ರಗಳು :- 1. ಆರ್ಥಿಕ ಬದಲಾವಣೆ
2. ಸಾಮಾಜಿಕ ಬದಲಾವಣೆ :
3. ಜಾತಿ ಪಂಚಾಯಿತಿಯ ಕಾರ್ಯವೈಖರಿಯಲ್ಲಿ ಬದಲಾವಣೆ ಲಂಬಾಣಿಗಳು ತಮ್ಮದೇ ಆದ ಜಾತಿ (ಗೋರ್) ಪಂಚಾಯಿತಿಯನ್ನು ಹೊಂದಿರುತ್ತಾರೆ. ಕೌಟುಂಬಿಕ ಜಗಳಗಳು, ತಾಂಡದಲ್ಲಿ ಕಿತ್ತಾಟ, ಕಳವು ಮುಂತಾದ ಸಮಸ್ಯೆಗಳಿಗೆ ಈ ಗೋರ್ ಪಂಚಾಯಿತಿಯಲ್ಲಿ ಪರಿಹಾರ ಕಂಡುಕೊಳ್ಳುತ್ತಾರೆ. ಗೋರ್ ಪಂಚಾಯಿತಿಯಲ್ಲಿ ನಾಯಕ ಕಾರಭಾರಿ (ಕಾರ್ಯದರ್ಶಿ), ದಾಸ ಉಪನಾಯಕ, ದಾಲಿಯ-ಸುದ್ದಿಪ್ರಚಾರಕ, ದಾಡಿ-ವೃತ್ತಿಗಾಯಕ ಮತ್ತು ನಾವಿ-ಸಹಾಯಕ ತಮ್ಮ ತಮ್ಮ ಕಾರ್ಯನಿರ್ವಹಿಸುತ್ತಾರೆ. ಪರಿಶೀಲನಾ ಅವಧಿಯಲ್ಲಿ ಈ ವಿಷಯಗಳಿಗೆ ಸಂಬಂಧಪಟ್ಟಂತೆ ಕಂಡುಕೊಂಡ ಅಂಶಗಳನ್ನು ಇಲ್ಲಿ ಕೊಡಲಾಗಿದೆ.
4. ಧಾರ್ಮಿಕ ಮತ್ತು ಸಾಂಪ್ರದಾಯಿಕ ವಿಷಯಗಳಲ್ಲಿ ಬದಲಾವಣೆ :- ಲಂಬಾಣಿಗಳು ರಾಮ, ಕೃಷ್ಣ, ವೆಂಕಟೇಶ್ವರ, ಶಿವ, ಆಂಜನೇಯ, ಶಕ್ತಿ ಮುಂತಾದ ದೇವರುಗಳ ಜೊತೆಗೆ ತಮ್ಮದೇ ಆದ ಧಾರ್ಮಿಕ ನಾಯಕರನ್ನು (ಸೇವಾಲಾಲ್ ಇತ್ಯಾದಿ) ಪೂಜಿಸುತ್ತಾರೆ. ಅವರು ತಮ್ಮದೇ ಆದ ಸಂಪ್ರದಾಯ ಪದ್ಧತಿಗಳನ್ನು ಅನುಸರಿಸುತ್ತಾರೆ. ಈ ಕ್ಷೇತ್ರದಲ್ಲಿ ಸ್ವಲ್ಪ ಬದಲಾವಣೆಯನ್ನು ಗುರುತಿಸಲಾಗಿದೆ.
5. ಧಾರ್ಮಿಕ ಉತ್ಸವಗಳಲ್ಲಿ ಬದಲಾವಣೆ
6. ರಾಜಕೀಯ ವಿಷಯಗಳಲ್ಲಿ ಬದಲಾವಣೆ
ಬದಲಾವಣೆಯ ಬಗ್ಗೆ ಅಭಿಪ್ರಾಯ
ಲಂಬಾಣಿ ನಾಯಕರು ಮತ್ತು ವಿ.ಘ. ಯೋಜನೆ ಲಂಬಾಣಿಯ ನಾಯಕರಿಗೆ ಫಲಾನುಭವಿಗಳು ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಕ್ಷೇತ್ರಗಳಲ್ಲಿ ಉಪಯೋಗ ಪಡೆದುಕೊಂಡಿರುವುದು ಗೊತ್ತಿದೆ. ಅದರಂತೆ ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಪಡೆದ ಅನುಕೂಲಗಳ ಬಗ್ಗೆ ಸಾಕಷ್ಟು ಮಾಹಿತಿಯಿದೆ. ಹೆಚ್ಚಿನ ನಾಯಕರಿಗೆ ಸೇವೆ ಸಲ್ಲಿಸುವ ಇಲಾಖೆಗಳು, ಅಧಿಕಾರಿಗಳು ಮತ್ತು ಫಲಾನುಭವಿಗಳನ್ನು ಆರಿಸುವಾಗ ಗಮನಿಸುವ ಅಂಶಗಳ ಬಗ್ಗೆ ತಿಳುವಳಿಕೆಯಿದೆ. ಹೆಚ್ಚಿನವರು ಆರಿಸುವ ಪ್ರಕ್ರಿಯೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಾಲ ವಿಲೇವಾರಿ ಮಾಡುವಲ್ಲಿ ವಿಳಂಬ, ಅನರ್ಹ ಫಲಾನುಭವಿಗಳ ಆಯ್ಕೆ, ಗ್ರಾಮ ಸಭೆ ಮಾಡದೆ ಇರುವುದು, ಮುಂತಾದ ಸಮಸ್ಯೆಗಳು ಅವರನ್ನು ಕಾಡಿದ್ದಿವೆ. ಸಮಸ್ಯೆಗಳು ಸಾಲ ವಿತರಣೆ ಮಾಡುವ ಸಮಯಕ್ಕಿಂತ ಹೆಚ್ಚಾಗಿ ಫಲಾನುಭವಿಗಳನ್ನು ಆರಿಸುವಾಗ ಮತ್ತು ಸಾಲ ಮರು ಪಾವತಿ ಮಾಡುವಾಗ ಬಂದಿದ್ದಿವೆ. ಅವರ ಅಭಿಪ್ರಾಯದಲ್ಲಿ ನಾಯಕರಿಗಿಂತ ಮತ್ತು ಫಲಾನುಭವಿಗಳಿಗಿಂತ ಹೆಚ್ಚಾಗಿ ಸರಕಾರಿ ಮತ್ತು ಬ್ಯಾಂಕ್ ಅಧಿಕಾರಿಗಳೇ ಸಮಸ್ಯೆಗಳನ್ನು ತಂದೊಡ್ಡುತ್ತಾರೆ. ಈ ನಾಯಕರನ್ನು ಆಯಾ ಸಮುದಾಯಗಳು ಒಪ್ಪಿಕೊಂಡಿವೆ. ಇವರ ಅಭಿಪ್ರಾಯದಂತೆ ಯೋಜನೆಯಿಂದ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಕ್ಷೇತ್ರಗಳಲ್ಲಿ ಫಲಾನುಭವಿಗಳ ಬದಲಾವಣೆಯಾಗಿದೆ. ತೋಟಗಾರಿಕೆ ಮತ್ತು ರೇಶ್ಮೆ ಕೃಷಿ ಬದಲಾಗಿಲ್ಲ. ಸಾಮಾಜಿಕವಾಗಿಯೂ (ಸಾಮಾಜಿಕ ಸಂಬಂಧಗಳು, ವೇಷಭೂಷಣಗಳು, ಶಿಕ್ಷಣ ಇ) ಲಂಬಾಣಿಗಳು ಪ್ರಗತಿಯಾಗಿದ್ದಾರೆಂದು ನಾಯಕರು ಅಭಿಪ್ರಾಯ ಪಡುತ್ತಾರೆ. ಸರಕಾರಿ ಅನುಕೂಲ ಪಡೆದುಕೊಂಡು ಕೆಲ ಫಲಾನುಭವಿಗಳು ಕೆಟ್ಟ ಅಭ್ಯಾಸಗಳನ್ನು (ಮದ್ಯಪಾನ) ಕಲಿತಿದ್ದಾರೆಂದು ಅಭಿಪ್ರಾಯ ಪಡುತ್ತಾರೆ. ಅವರ ಅಭಿಪ್ರಾಯದಂತೆ ಫಲಾನುಭವಿಗಳು ಯೋಜನೆಯ ಸದುಪಯೋಗ ಮಾಡಿಕೊಳ್ಳಬೇಕು. ಅಧಿಕಾರಿಗಳು ಮತ್ತು ವಿ.ಘ. ಯೋಜನೆ ಅಧಿಕಾರಿಗಳಿಗೆ ಯೋಜನೆಯ ಒಂದಲ್ಲ ಒಂದು ಉದ್ದೇಶಗಳು ಗೊತ್ತಿವೆ. ಎಲ್ಲಾ ಉದ್ದೇಶಗಳನ್ನು ತಿಳಿದಿರುವವರು ಬಹಳ ಸ್ವಲ್ಪ. ಹೆಚ್ಚಿನ ಅಧಿಕಾರಿಗಳಿಗೆ ತಮ್ಮ ಇಲಾಖೆಯಿಂದ ಕೊಡುವ ಫಲಗಳ ಬಗ್ಗೆ ಗೊತ್ತಿದೆ. ಆದರೆ ಅವರಿಗೆ ಇನ್ನೊಂದು ಇಲಾಖೆಯಿಂದ ಕೊಡುವ ಫಲಗಳ ಬಗ್ಗೆ ಗೊತ್ತಿಲ್ಲ ಮತ್ತು ತಿಳಿದುಕೊಳ್ಳುವ ಆಸಕ್ತಿಯಿಲ್ಲ. ಇದಕ್ಕೆ ವಿನಾಯಿತಿ ಎಂಬಂತೆ ಕೆಲವರು ಆ ಬಗ್ಗೆ ತಿಳಿದುಕೊಂಡಿದ್ದಾರೆ. ಹೆಚ್ಚಿನ ಅಧಿಕಾರಿಗಳಿಗೆ ಫಲಾನುಭವಿಗಳನ್ನು ಆರಿಸುವ ವಿಧಾನ ಮತ್ತು ಅರ್ಹತೆಯ ಬಗ್ಗೆ ತಿಳುವಳಿಕೆ ಇದೆ. ವೈಯಕ್ತಿಕ ಮತ್ತು ಗುಂಪು ಫಲಾನುಭವಿಗಳನ್ನು ಗ್ರಾಮ ಸಭೆಯಲ್ಲಿಯೂ ಮತ್ತು ಸಮುದಾಯಗಳನ್ನು ಅಲ್ಲಿನ ಪರಿಶಿಷ್ಟ ಜಾತಿ ಮತ್ತು ಸಾಮಾಜಿಕ ಹಿಂದುಳಿಯುವಿಕೆಯ ಆಧಾರದ ಮೇಲೆ ಆರಿಸುತ್ತಾರೆ. ಸಭೆಗಳು, ಭಿತ್ತಿಪತ್ರಗಳು, ಗೋಡೆ ಪತ್ರಗಳು ಮುಂತಾದ ಮಾಧ್ಯಮಗಳನ್ನು ತಮ್ಮ ಕಾರ್ಯಕ್ರಮಗಳ ಪ್ರಚಾರಕ್ಕಾಗಿ ಬಳಸುತ್ತಾರೆ. ಸರಕಾರಿ ಹಾಗೂ ವಾರ್ತಾ ಮತ್ತು ಪ್ರಚಾರ ಇಲಾಖೆಗಳ ಮಧ್ಯದ ಸಹಕಾರ ಉಲ್ಲೇಖಿಸುವಷ್ಟು ಚೆನ್ನಾಗಿಲ್ಲ. ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮಪಂಚಾಯಿತಿ ಮಟ್ಟದಲ್ಲಿನ ಅಧಿಕಾರಿಗಳು ಬೇರೆ ಬೇರೆ ರೀತಿಯ ಸಮಸ್ಯೆಗಳನ್ನು ಎದುರಿಸಿದ್ದಾರೆ. ಫಲಾನುಭವಿಗಳ ಆಯ್ಕೆ ಮತ್ತು ಸಾಲ ಮರುಪಾವತಿ ಸಮಯದಲ್ಲಿ ಸಮಸ್ಯೆಗಳು ಹೆಚ್ಚು. ಆಡಳಿತ, ಸಹಕಾರ, ಹಣಕಾಸು ಮತ್ತು ತಾಂತ್ರಿಕ ಕ್ಷೇತ್ರಗಳಲ್ಲಿ ಸಮಸ್ಯೆಗಳಿವೆ. ಫಲಾನುಭವಿಗಳ ಆಯ್ಕೆ ಮತ್ತು ಸಾಲ ವಿತರಣೆ ಸಮಯದಲ್ಲಿ ಅಧಿಕಾರಿಗಳು ಮತ್ತು ಸಾಲ ಮರುಪಾವತಿ ಮಾಡುವಾಗ ಫಲಾನುಭವಿಗಳು ಮತ್ತು ನಾಯಕರು ಸಮಸ್ಯೆಗಳನ್ನೊಡ್ಡಿರುತ್ತಾರೆ. ಸಭೆ, ಚರ್ಚೆ ಮುಂತಾದ ಮಾರ್ಗಗಳ ಮೂಲಕ ತಮ್ಮ ಸಮಸ್ಯೆಗಳನ್ನು ಅವರು ಬಗೆಹರಿಸಿಕೊಳ್ಳುತ್ತಾರೆ. ಫಲಾನುಭವಿಗಳು ತಮ್ಮ ಆರ್ಥಿಕ ಮತ್ತು ಸಾಮಾಜಿಕ ಬದುಕಿನಲ್ಲಿ ಪ್ರಗತಿ ಕಂಡಿದ್ದಾರೆಂದು ಅಧಿಕಾರಿಗಳು ಅಭಿಪ್ರಾಯ ಪಡುತ್ತಾರೆ. ಫಲಾನುಭವಿಗಳು ಯೋಜನೆಯ ಉಪಯೋಗ ಪಡೆದುಕೊಂಡು ದುರಭ್ಯಾಸಗಳನ್ನು ಕಲಿತಿರುವ ಬಗ್ಗೆಯೂ ಪ್ರಸ್ತಾಪ ಮಾಡುತ್ತಾರೆ. ಅಧಿಕಾರಿಗಳಿಗೆ ತಮ್ಮ ಪಾತ್ರದ ಬಗ್ಗೆ ತೃಪ್ತಿಯಿದೆ. ಆದರೆ ಅಧಿಕಾರಿಗಳಿಗೆ ವಿ.ಘ. ಯೋಜನೆಯ ಜೊತೆಗೆ ಸಾಮಾನ್ಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಮಾಡಿಕೊಡಬೇಕಾಗುತ್ತದೆ. ಬ್ಯಾಂಕ್ ಅಧಿಕಾರಿಗಳು ಮತ್ತು ವಿ.ಘ. ಯೋಜನೆ ಸರಕಾರಿ ಅಧಿಕಾರಿಗಳಂತೆಯೇ, ಬ್ಯಾಂಕ್ ಅಧಿಕಾರಿಗಳಿಗೂ ಯೋಜನೆಯ ಎಲ್ಲಾ ಉದ್ದೇಶಗಳು ಸರಿಯಾಗಿ ತಿಳಿದಿಲ್ಲ. ಸಮಾಜ ಕಲ್ಯಾಣ ಇಲಾಖೆ ಮತ್ತು ಪ.ಜಾ. ಮತ್ತು ಪ.ಪಂ. ಅಭಿವೃದ್ಧಿ ನಿಗಮ ಮತ್ತು ಅವುಗಳ ಅಧಿಕಾರಿಗಳು ಇವರಿಗೆ ಹೆಚ್ಚು ಪರಿಚಿತರು. ಎಲ್ಲಾ ಅಧಿಕಾರಿಗಳಿಗೆ ಯೋಜನೆಯ ಫಲಾನುಭವಿಗಳ ಆಯ್ಕೆ ವಿಧಾನ ಗೊತ್ತಿದೆ. ಆದರೆ ಅವರು ಗ್ರಾಮಸಭೆಯಲ್ಲಿ ಭಾಗವಹಿಸದೆ ಸರಕಾರಿ ಅಧಿಕಾರಿಗಳು ಕೊಟ್ಟ ಪಟ್ಟಿಯನ್ನು ಒಪ್ಪಿಕೊಳ್ಳುತ್ತಾರೆ. ಕೃಷಿ, ನೀರಾವರಿ ಮತ್ತು ಹೈನುಗಾರಿಕೆಗೆ ಹೆಚ್ಚಿಗೆ ಸಾಲ ಕೊಟ್ಟಿದ್ದಾರೆ. ಬ್ಯಾಂಕ್ ಅಧಿಕಾರಿಗಳು ಫಲಾನುಭವಿಗಳನ್ನು ಆರಿಸುವಾಗ ಮತ್ತು ಸಾಲ ವಸೂಲಾತಿ ಮಾಡುವಾಗ ಸಮಸ್ಯೆಗಳನ್ನು ಎದುರಿಸಿದ್ದಾರೆ. ಸರಕಾರಿ ಅಧಿಕಾರಿಗಳಿಂದ ಸಹಕಾರದ ತೊಂದರೆಯನ್ನು ಅನುಭವಿಸಿದ್ದಾರೆ. ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳದಿದ್ದರೂ ಹೆಚ್ಚಿನವನ್ನು ಚರ್ಚೆ ಮತ್ತು ಸಂಧಾನಗಳ ಮುಖಾಂತರ ಬಗೆಹರಿಸಿಕೊಳ್ಳುತ್ತಾರೆ. ಬ್ಯಾಂಕ್ ಅಧಿಕಾರಿಗಳ ಪ್ರಕಾರ ನಾಯಕರಿಗೆ ಯೋಜನೆಯ ಉದ್ದೇಶಗಳು, ಇಲಾಖೆಗಳು ಮತ್ತು ಅಧಿಕಾರಿಗಳ ತಿಳುವಳಿಕೆಯಿದೆ. ಅದರ ಜೊತೆಗೆ ಅವರ ಸಹಕಾರವೂ ಇದೆ. ಫಲಾನುಭವಿಗಳ ಬಗ್ಗೆ ಅವರು ಇದೇ ಅಭಿಪ್ರಾಯವನ್ನು ತಳೆದಿದ್ದಾರೆ. ಲಂಬಾಣಿಗಳು ಯೋಜನೆಯ ಫಲದಿಂದ ತಮ್ಮ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಯನ್ನು ಕಂಡುಕೊಂಡಿದ್ದಾರೆ. ಅದರ ಜೊತೆಗೆ ದುರಭ್ಯಾಸಗಳನ್ನು ಕಲಿತುಕೊಂಡಿದ್ದಾರೆ. ಬ್ಯಾಂಕ್ ಅಧಿಕಾರಿಗಳಿಗೆ ತಮ್ಮ ಕೆಲಸದ ಬಗ್ಗೆ ತೃಪ್ತಿ ಇದೆ. ಆದರೆ ಅವರಿಗೆ ಯೋಜನೆಯ ತಿಳುವಳಿಕೆಯ ಕೊರತೆ ಇದೆ. ಸಲಹೆಗಳು ಸಂಶೋಧನೆಯಿಂದ ಕಂಡುಕೊಂಡ ಸತ್ಯಾಂಶಗಳ ಆಧಾರದ ಮೇಲೆ ಅಧಿಕಾರಿಗಳಿಗೆ, ನಾಯಕರಿಗೆ, ಫಲಾನುಭವಿಗಳಿಗೆ ಯೋಜನೆಯನ್ನು ಇನ್ನೂ ಹೆಚ್ಚು ಪ್ರಭಾವಯುತವಾಗಿ ಕಾರ್ಯರೂಪಕ್ಕೆ ತರಲು ಈ ಕೆಳಗಿನ ಸಲಹೆಗಳನ್ನು ಕೊಡಲಾಗಿದೆ. ಅಧಿಕಾರಿಗಳಿಗೆ ಮತ್ತು ನಾಯಕರಿಗೆ ಸಲಹೆಗಳು
ಪ್ರಾದೇಶಿಕ ಭಿನ್ನತೆಗೆ ವಿಶೇಷ ಸಲಹೆಗಳು :-
ಬ್ಯಾಂಕ್ ಅಧಿಕಾರಿಗಳಿಗೆ ಸಲಹೆಗಳು :
ಆಕರ ಗ್ರಂಥಗಳು
ಸಿ.ಆರ್. ಗೋಪಾಲ್ ನಿವೃತ್ತ ಸಹಾಯಕ ಪ್ರಧಾನ ವ್ಯವಸ್ಥಾಪಕರು, ಸ್ಮಯೋರ್ (SMIORE)
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
|
|
|
|
SITE MAP
SitePOSH |
NIRATHANKAOUR OTHER WEBSITESSubscribe |
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |