ವಯಸ್ಸಿಗೆ ಬಂದ ಯುವಜನರು ಕುಟುಂಬ ಜೀವನ ಪ್ರಾರಂಭಿಸಲು ವಂಶಾಭಿವೃದ್ದಿ ಮಾಡಿಕೊಳ್ಳಲು ಗಂಡು ಹೆಣ್ಣು ಪ್ರಕೃತಿ ಸಹಜ ಭಾವನೆಗಳಿಗೆ ಆಸೆಆಕಾಂಕ್ಷೆಗಳಿಗೆ ಸ್ಪಂದಿಸಲು ಕುಟುಂಬದ ಹಿರಿಯರ, ಸಮಾಜದ ಒಪ್ಪಿಗೆ ಪಡೆಯುವ ಪ್ರಕ್ರಿಯೆಯೇ ಮದುವೆ ವಿವಾಹ. ಎರಡು ಮಾನವ ಜೀವಿಗಳು ಪ್ರೀತಿ ವಿಶ್ವಾಸದಿಂದ ಪರಸ್ಪರ ಒಪ್ಪಿ ಗೌರವಯುತ ಬಾಳನ್ನು ಹೊಸ ಕನಸುಗಳೊಂದಿಗೆ ಕಟ್ಟಿಕೊಳ್ಳಲು ಮದುವೆ ಸಹಕಾರಿ. ಇದು ವ್ಯಕ್ತಿ ವ್ಯಕ್ತಿ ನಡುವೆ ನಡೆಯುವ ಒಪ್ಪಂದವಷ್ಟೆ. ವ್ಯವಸ್ಥೆ ವ್ಯವಸ್ಥೆಗಳ ನಡುವಿನ ಒಪ್ಪಂದ ಎಂಬುದೂ ಅಷ್ಟೇಸತ್ಯ. ಮದುವೆ ವೈಯಕ್ತಿಕ ಹಾಗೂ ಕೌಟುಂಬಿಕ ವ್ಯವಹಾರ. ಒಂದೊಂದು ಸಮುದಾಯ ಒಂದೊಂದು ರೀತಿ ಆಚರಿಸುತ್ತದೆ. ಆದರೆ ಇತ್ತೀಚೆಗೆ ಮದುವೆಗಳು ದುಬಾರಿಯಾಗುತ್ತಿವೆ. ವ್ಯಾಪಾರಧಂಧೆಗಳಾಗುತ್ತಿವೆ. ನಗರ ಕೇಂದ್ರೀಕೃತವಾಗುತ್ತಿವೆ. ಪಟ್ಟಣ/ ನಗರದಲ್ಲಿ ಛತ್ರ ಯಾವಾಗ ಖಾಲಿ ಇರುತ್ತೋ ಅಂಥ ದಿನ ನಮಗೂ ಹೊಂದಿಕೊಂಡರೆ ಅಂಥ ದಿನದಲ್ಲಿ ಮದುವೆ ಮಾಡುವ ಪರಿಪಾಠವಾಗಿದೆ. ಮದುವೆ ಈಗ ಊರಿನ, ಕೇರಿಯ, ಹಾಡಿಯ, ಕೊಪ್ಪಲಿನ ಸಂಭ್ರಮವಾಗಿ ಉಳಿದಿಲ್ಲ. ಒಂದು ಮಹತ್ತರ ವ್ಯಾಪಾರವಾಗಿ ಪರಿಣಮಿಸಿದೆ. ತರಕಾರಿ ಬೇಕೆಂದು ತಂದು ಮೂರು-ನಾಲ್ಕು ದಿನ ಇಟ್ಟಲ್ಲಿ ಹಾಳಾಗಿದ್ದರೆ ಬಿಸಾಡುವಂತೆಯೇ ಇಂದು ಮದುವೆಗಳೂ ಕೋರ್ಟು ಮೆಟ್ಟಿಲೇರಿ ಬಿಡುಗಡೆಗೆ ಅರ್ಜಿ ಹಾಕುವವರ ಸಂಖ್ಯೆ ಜಾಸ್ತಿಯಾಗುತ್ತಿದೆ. ನಿಜದಲ್ಲಿ ಮದುವೆ ಹೆಣ್ಣುಗಂಡಿನ ಸಮಾನತೆ, ಘನತೆ, ಗೌರವ, ಮರ್ಯಾದೆ, ವ್ಯಕ್ತಿ ಸ್ವಾತಂತ್ರ್ಯಕ್ಕೆ ಪರಸ್ಪರ ಬದ್ದರಾಗಿ ಮಾಡಿಕೊಂಡ ಒಪ್ಪಂದಗಳಾಗಿರುತ್ತವೆ. ಆದರೆ ಇಲ್ಲಿ ಯಾರೊಬ್ಬರ ಆಗೌರವದ ನಡವಳಿಕೆ ಮದುವೆ ಮುರಿದು ಬೀಳಲು ಕಾರಣವಾಗಬಹುದು. ಪರಸ್ಪರ ಸಹಕಾರ, ಬೆಂಬಲ ಅವರವರ ಶಕ್ತ್ಯನುಸಾರ ಕುಟುಂಬಕ್ಕೆ ಬೆಂಬಲವಾಗಿ ನಿಲ್ಲುವುದು ಮುಖ್ಯವಾಗುತ್ತದೆ. ಮದುವೆಗಳಲ್ಲಿ ತರಾವರಿ ವಿಧಾನಗಳನ್ನು ಜನರು ಅನುಸರಿಸುತ್ತಾರೆ. ಶ್ರೀಮಂತರು, ಚಿತ್ರನಟರು, ಪ್ರಬಲ ರಾಜಕಾರಣಿ, ವ್ಯಾಪಾರಗಾರರು ತಮ್ಮ ವ್ಯವಹಾರಗಳ ಬಲವರ್ಧನೆಗೆ ಮದುವೆ ಸಮಾರಂಭಗಳನ್ನು ಬಳಸಿ ವಿಜೃಂಭಣೆಯಿಂದ ದುಬಾರಿ ಖರ್ಚಿಟ್ಟು ಮದುವೆ ಸಮಾರಂಭ ನಡೆಸುತ್ತಾರೆ. ಇಲ್ಲಿ ಸಂಪ್ರದಾಯ, ಸಂಸ್ಕೃತಿಗೆ ಬೆಲೆ ಕೊಡುವುದಕ್ಕಿಂತ ವೈಯಕ್ತಿಕ ಸ್ಟೇಟಸ್ (ಅಂತಸ್ತು), ಘನತೆಯ ಮೇಲೆ ನಡೆಯುತ್ತದೆ. ಮಧ್ಯಮ ವರ್ಗದ ಜನರು ಸಂಪ್ರದಾಯಕ್ಕೆ ಕಟ್ಟುಬಿದ್ದು ಸಮಾಜದ ಒತ್ತಡಕ್ಕೆ ಕಟ್ಟುಬಿದ್ದು ಮದುವೆಗಳನ್ನು ಸ್ಟೇಟಸ್ ಹೆಚ್ಚಿಸಿಕೊಳ್ಳುವ ಅಸ್ತ್ರಗಳಾಗಿ ಬಳಸಿಕೊಳ್ಳಲು ಸಾಲ ಮಾಡಿಯಾದರೂ ಮದುವೆಗಳನ್ನು ಮಾಡಿ ಆನಂದಿಸುತ್ತಾರೆ. ನಂತರ ಪರಿತಪಿಸುತ್ತಾರೆ. ಪ್ರಾಚೀನ ಸಮುದಾಯಗಳಾದ ಆದಿವಾಸಿಗಳಲ್ಲಿ ಮದುವೆಗಳು ಅವರು ಅರಣ್ಯ ಪರಿಸರದಲ್ಲಿ ಸರಳವೂ ಹೆಣ್ಣು ಗಂಡಿನ ಇಚ್ಛೆಗನುಸಾರವಾಗಿ ಹಿರಿಯರು ಆಶೀರ್ವದಿಸುವ ಸಮಾರಂಭಗಳಾಗಿರುತ್ತವೆ. ಹೆಣ್ಣುಗಂಡು ಪರಸ್ಪರ ಇಷ್ಟಪಡಬೇಕು. ಅನಂತರವೇ ಹಿರಿಯರ ತೀರ್ಮಾನ. ಇಲ್ಲಿ ಬಲವಂತ ಇಲ್ಲ. ವರದಕ್ಷಿಣೆ ಇಲ್ಲ. ದುಬಾರಿ ಖರ್ಚಿಲ್ಲ. ಸರಳ ಊಟ, ಸಂಭ್ರಮಕ್ಕೆ ಒಂದು ಕುಣಿತ. ಇದರಿಂದ ಆಗುವ ಆನಂದದಲ್ಲಿ ಮದುವೆ ಮುಗಿಯುತ್ತದೆ. ಊಟಕ್ಕೆ ಹಣಕಾಸಿಲ್ಲದಿದ್ದರೆ ಜೇನು, ಗೆಣಸು, ಕುಂಬಳಕಾಯಿಗಳೇ ಊಟ. ಎಲೆ ಅಡಿಕೆಯೇ ಹರಸುವ ವಸ್ತುಗಳು. ಮನೆ ಮುಂದೆ 12 ಕಂಬದ ಹಸಿರು ಚಪ್ಪರ, ಬಣ್ಣದ ಹೂವಿನ ಅಲಂಕಾರ, ಇದೂ ಬೇಡವೆಂದರೆ ಇಷ್ಟಪಟ್ಟ ಗಂಡು ಹೆಣ್ಣು 3-4 ದಿನ ಕಾಡಿಗೆ ಜೋಡಿಯಾಗಿ ಹೋಗಿ ಬರುತ್ತಾರೆ. ಹಾಡಿಗೆ ಬಂದು ಹಿರಿಯರ ಆಶೀರ್ವಾದ ಪಡೆಯುತ್ತಾರೆ. ಸ್ವಂತ ಪ್ರತ್ಯೇಕ ಜೀವನ ಪ್ರಾರಂಭಿಸುತ್ತಾರೆ. ಇದು ಮತ್ತೊಂದು ವಿಧಾನ. ಇನ್ನೊಂದು ವಿಧಾನದಲ್ಲಿ ಹೆಣ್ಣಿನ ಮನೆಯಲ್ಲಿ ಗಂಡು ಬಂದು 5-6 ತಿಂಗಳು ಕೆಲಸ ಮಾಡಬೇಕು. ಅವನ ನಡವಳಿಕೆ, ಹೆಣ್ಣುಗಳನ್ನು ಸಾಕುವ, ಗೌರವಿಸುವ ಪ್ರೀತಿಸುವ ಎಲ್ಲಾ ಸಾಮರ್ಥ್ಯಗಳನ್ನು ಈ ಸಮಯದಲ್ಲಿ ಗಮನಿಸುತ್ತಾರೆ. ನಂತರ ಮದುವೆ. ಈ ಎಲ್ಲಾ ವಿಧದ ಮದುವೆಗಳು ಸರಳವೂ, ಗಂಡು ಹೆಣ್ಣಿನ ಇಷ್ಟವನ್ನೇ ಕೇಂದ್ರೀಕರಿಸುತ್ತವೆ. ಬಾಳು ಗಂಭೀರ ಎಂದು ಪರಸ್ಪರ ಪ್ರೀತಿ ಗೌರವದೊಂದಿಗೆ ಜೀವನ ನಡೆಸುತ್ತಾರೆ. ಸಂಬಂಧಗಳು ಸರಿಹೋಗದ ಪರಿಸ್ಥಿತಿ ಏನಾದರೂ ಉದ್ಭವಿಸಿದರೆ ಹಿರಿಯರಿಗೆ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಸುಲಭ ಬಿಡುಗಡೆ ಪಡೆಯುತ್ತಾರೆ. ಹೆಣ್ಣಾಗಲೀ, ಗಂಡಾಗಲೀ, ತಮಗೆ ಬೇಕಾದವರು ಪುನ: ಮದುವೆಯಾಗುತ್ತಾರೆ. ಚಿಕ್ಕ ಮಕ್ಕಳಿದ್ದರೆ ಅವು ತಾಯಿ ಜತೆಗಾದರೂ ಹೋಗಬಹುದು, ಇಲ್ಲಾ ತಂದೆ ಜತೆಗಾದರೂ ಇರಬಹುದು. ಮದುವೆ ಎಂಬುದು ಇಲ್ಲಿ ಗಂಡು ಹೆಣ್ಣಿನ ಜೀವನಾವಶ್ಯಕತೆಗಳಿಗೆ ಒಂದುಗೂಡುವ ಪ್ರಕ್ರಿಯೆಯಾಗಿರುತ್ತದೆ. ಯಾರಿಗೂ ಹೊರೆ ಇಲ್ಲ. ಯಾರ ಮೇಲೂ ಅವಲಂಬನೆ ಇಲ್ಲ. ತುಂಬಾ ಸಹಜವಾದ ನಡವಳಿಕೆ. ಸಮಾಜ ನಿಂತನೀರಲ್ಲ. ತನ್ನಲ್ಲಿ ಚಲನಶೀಲತೆ ಹೊಂದಿರುತ್ತದೆ. ಇಂದಿನ ಆಧುನಿಕ ಸಂದರ್ಭಧಲ್ಲಿ ಎಲ್ಲ ಸಮಾಜಗಳಲ್ಲಿಯೂ ಅತ್ಯಂತ ಸರಳವಾಗಿ ವಿವಾಹ ಆಚರಿಸಿಕೊಳ್ಳುವವರಿದ್ದಾರೆ. ಹಾಗೆಯೇ ಕಣ್ಣಿಗೆ ರಾಚುವಂತೆ ಅತ್ಯಂತ ವೈಭವಯುತವಾಗಿ ದುಬಾರಿ ಖರ್ಚಿನಲ್ಲಿ ಮದುವೆಗಳನ್ನು ಮಾಡುವವರೂ ಇದ್ದಾರೆ. ನಮ್ಮ ಸಮಾಜದಲ್ಲಿ ಸಾಮಾಜಿಕ ಶೈಕ್ಷಣಿಕ ಹಾಗೂ ಸಾಂಸ್ಕೃತಿಕವಾಗಿ ಇನ್ನೂ ಉನ್ನತಿ ಸಾಧಿಸಬೇಕಾಗಿರುವುದರಿಂದ ದುಬಾರಿ ಖರ್ಚಿನ ಮದುವೆಗಳು ಅನಿವಾರ್ಯವೇನಲ್ಲ. ಇಷ್ಟೊಂದು ವೈಭವಯುತವಾಗಿ ದುಬಾರಿಯಾಗಿ ಆಗಿರುವ ಮದುವೆಗಳೆಲ್ಲವೂ ಯಶಸ್ವಿಯಾಗಿ ಮಾದರಿ ಕುಟುಂಬ ಜೀವನ ನಡೆಸುತ್ತಾರೆಂಬ ಭರವಸೆ ಏನೂ ಇಲ್ಲ. ಅಲ್ಲಿಯೂ ಭಿನ್ನಾಭಿಪ್ರಾಯಗಳು, ಸಂಘರ್ಷಗಳು, ವಿಚ್ಚೇದನಗಳು ನಡೆದಿವೆ. ಈಗ ಮದುವೆ ಮುಂಚೆ ಕೂಡಿಬಾಳುವ ಪದ್ದತಿಗಳು ನಗರ ಪ್ರದೇಶದಲ್ಲಿ ನಡೆಯುತ್ತಿವೆ. ಹೀಗೆ ಕೂಡಿ ಬಾಳುವ ಸಂದರ್ಭಗಳನ್ನು ಯಾರೂ ವೈಭವಯುತವಾಗಿ ದುಬಾರಿಯಾಗಿ ಮಾಡಲ್ಲ. ತೀರಾ ವೈಯಕ್ತಿಕ ಎಂಬಂತೆ ವ್ಯವಹರಿಸುತ್ತಾರೆ. ಈಗ ನಡೆಯುತ್ತಿರುವ ಮದುವೆಗಳು ಸಮಾಜದ ಉನ್ನತಿಗೆ ಮಾದರಿಯಾಗುವ ಯಾವ ಗುಣ ಲಕ್ಷಣಗಳನ್ನೂ ಹೊಂದಿಲ್ಲ. ಮಾನವ ಗುಣಕ್ಕೆ ಸಹಜವಾಗಿ ಜಗಳ, ಸಂಘರ್ಷಕ್ಕೆ ಮದುವೆಗಳು ತುತ್ತಾಗಿವೆ. ಆರ್ಯ ಸಮಾಜದ ಮದುವೆಗಳಾಗಲೀ ಕುವೆಂಪುರವರ ಮಂತ್ರ ಮಾಂಗಲ್ಯ ಮದುವೆಗಳಾಗಲೀ, ಪ್ರೇಮ ವಿವಾಹಗಳಾಗಲೀ, ನೋಂದಣಿ ವಿವಾಹಗಳಾಗಲೀ, ಆದಿವಾಸಿಗಳ ಸರಳ ಮದುವೆಗಳಾಗಲೀ, ಮನೆ ಮುಂದೆ ಚಪ್ಪರ ಹಾಕಿ ಖುಷಿಯಿಂದ ಓಲಗ ಊದಿಸಿ ಊರೆಲ್ಲಾ ಸೇರಿ ಸಹಕಾರದಿಂದ ಮಾಡುವ ರೈತರ ಮನೆಯ ಮದುವೆಗಳಾಗಲೀ, ವಿವಿಧ ಸಮಾಜಗಳು ಯಾರ ಹಂಗೂ ಇಲ್ಲದೆ ತಮ್ಮ ಸಂಪ್ರದಾಯದಂತೆ ನಡೆಸುವ ಮದುವೆಗಳಾಗಲೀ, ಮನುಷ್ಯರು ಕಂಡುಕೊಂಡ ಸರಳ ಸಂತೋಷದ ವಿವಾಹ ವಿಧಾನಗಳು. ಇತ್ತೀಚೆಗೆ ದುಬಾರಿ ಮದುವೆಗಳಿಗೆ ನಾಚಿಸುವಂತೆ ಸರಳ ಸಾಮೂಹಿಕ ಮದುವೆಗಳು ಪ್ರಾರಂಭವಾಗಿವೆ. ಆದರೆ ಈ ವಿವಾಹ ಪದ್ದತಿ ಒಂದು ವ್ಯವಸ್ಥೆಯಾಗಿ ಮುಂದೆ ನಿಲ್ಲಬೇಕಿದೆ. ಇಂಥ ಮದುವೆಗಳು ಸರಳ ಮದುವೆಗಳಿಗೆ ಉತ್ತರವಲ್ಲ; ಆದರೂ ಬಡವರು ಸ್ವತಃ ದುಬಾರಿಯಾಗಿ ಮಾಡಲಾಗದವರು ಇಂತಹ ಸಾಮೂಹಿಕ ಮದುವೆಗಳಲ್ಲಿ ಪಾಲ್ಗೊಂಡು ಹಿಗ್ಗುತ್ತಾರೆ. ಮದುವೆಗಳು ವೈಯಕ್ತಿಕ ಹಾಗೂ ಕೌಟುಂಬಿಕ ವ್ಯವಹಾರವಾಗಿರುವುದರಿಂದ ತಮ್ಮ ಸುತ್ತಣ ಸಮಾಜದ ಸಹಭಾಗಿತ್ವದಲ್ಲಿ ನಡೆಯುವುದೇ ಮುಖ್ಯವಾಗಿರುತ್ತದೆ. ವಿವಾಹದಿಂದ ಬಿಡುಗಡೆ, ಮರುಮದುವೆ ಇವುಗಳು ಕೂಡಾ ಕಗ್ಗಂಟ್ಟಾಗಬಾರದು. ಇವು ಚೆಲ್ಲಾಟವೂ ಆಗಬಾರದು. ಸಂತಾನ್ನೋತ್ಪತಿ, ಒಂದು ಪವಿತ್ರ ಕಾರ್ಯ. ಹಡೆಯುವ ಮಗು ಸಮರ್ಥತವಾಗಿರಬೇಕು. ಅದಕ್ಕೆ ಬಾಲ್ಯ ಕೊಡಬೇಕು, ಪ್ರೀತಿ ಕೊಡಬೇಕು, ರಕ್ಷಿಸಿ ಬೆಳೆಸಬೇಕು, ಸಮಾಜದಲ್ಲಿ ಸಮಾನ ಸ್ವಂತ ಘನತೆಯುಳ್ಳ ವ್ಯಕ್ತಿಯಾಗಿ ಬಾಳಲು ಸಿದ್ದಗೊಳಿಸಬೇಕು. ಮಗು ಚಪಲದ ಸೃಷ್ಟಿಯಲ್ಲ ಇದು ಗಂಭೀರ ಸೃಷ್ಟಿ. ಮದುವೆಗಳಲ್ಲಿ ಬದ್ಧತೆ ಇರಬೇಕು. ಗಂಡು - ಹೆಣ್ಣು ಪರಸ್ಪರ ವಿಶ್ವಾಸದಿಂದ ನಂಬಿಕೆ ಉಳಿಸಿಕೊಂಡು ಘನತೆಯಿಂದ ಬಾಳಬೇಕು. ಈ ಬದ್ಧತೆಯಿಂದ ಮದುವೆಯಾಗಬೇಕು. ಇದಕ್ಕೆ ಮನಸ್ಸುಗಳನ್ನು ಹದಗೊಳಿಸಬೇಕು. ಕೇವಲ ಆಲಂಕಾರಿಕ ದುಬಾರಿ ವೈಭವದ ಮದುವೆಗಳಾದರೆ ಸಾಲದು ಸಮಾಜದಲ್ಲಿ ಸ್ಪರ್ಧೆ ಎಂಬುದು ಇದ್ದೇ ಇರುತ್ತದೆ. ಈ ಸ್ಪರ್ಧೆ ಸಹಕಾರಯುತವಾಗಿ ಏಳಿಗೆಗೆ ಪೂರಕವಾಗಿ ಇರಬೇಕು. ತಾವು ಅವರಂತೆಯೇ ದುಬಾರಿ ಮದುವೆ ಮಾಡಬೇಕೆಂಬ ಸ್ಪರ್ಧೆಗೆ ಇಳಿದರೆ ಸಮಾಜದಲ್ಲಿ ದುಂದು ವೆಚ್ಚಗಳು ಹೆಚ್ಚಾಗುತ್ತವೆ. ಶ್ರೀಮಂತಿಕೆಯ ದುರ್ಬಳಕೆಯಾಗುತ್ತದೆ. ಇಂತಹ ಸ್ಪರ್ಧೆಗೆ ಇಳಿಯಬಾರದು. ಅನೇಕ ತರಹದ ಗಂಭೀರವಾದ ಸರಳ ವಿಧಾನದ ಮದುವೆಗಳು ನಮ್ಮ ಕಣ್ಮುಂದೆ ಇರುವಾಗ ಅವುಗಳು ನಮಗೆ ಮಾದರಿಯಾಗಬೇಕು. ದುಬಾರಿ ಮದುವೆಗಳು ಗಂಡಿಗೂ ಖರ್ಚು ಹೆಣ್ಣಿಗೂ ಖರ್ಚು. ದೇವರ ಊಟ, ಧಾರೆ ಊಟ, ಬೀಗರ ಊಟ, ಹೀಗೆ ಎಲ್ಲಾರಿಗೂ ದುಬಾರಿ ಖರ್ಚು. ಇಂತಹ ಊಟಗಳನ್ನು ತಿಂದು ಅರಗಿಸುವ ಶಕ್ತಿಯೂ ಜನರಿಗಿಲ್ಲ. ಊಟದ ಹಾಳೆ ಮೇಲೆ ಬಿಡುವವರೇ ಹೆಚ್ಚು. ಸಿಹಿ ತಿಂಡಿ, ಮಾಂಸದ ಊಟ ಎಲ್ಲಾ ಮಣಗಟ್ಟಲೆ. ವ್ಯವಹಾರ ಸಂಬಂಧದ ಹೆಸರಿನಲ್ಲಿ ಮಾನವ ದಿನಗಳು ವ್ಯರ್ಥವಾಗುತ್ತವೆ. ಬರುವವರಿಗೂ ಖರ್ಚು ಕರೆಯುವವರಿಗೂ ಖರ್ಚು. ಒಡವೆ ವಸ್ತುಗಳ ಬೆಲೆ ಗಗನಕ್ಕೇರಿದೆ. ಇರುವ ಭೂಮಿ ಮಾರಿ ಸಾಲ ಮಾಡಿ ಮದುವೆಗಳನ್ನು ಮಾಡುವ ಬದಲು ಕುಟುಂಬಗಳ ಹೆಣ್ಣು ಮಗಳ ಶಿಕ್ಷಣಕ್ಕೆ ಆದ್ಯತೆ ನೀಡಲೇಬೇಕೆಂದು ಗಮನ ಹರಿಸುವುದಿಲ್ಲ. ಒಳ್ಳೆಯ ಭೌತಿಕ ಪರಿಸರ, ಶಿಕ್ಷಣ, ಮತ್ತು ಸ್ವಾತಂತ್ರ್ಯ ಪ್ರತಿ ಮಗುವಿಗೆ ಮೂಲಭೂತ ಹಕ್ಕಾಗಿರುವಾಗ ಅದನ್ನು ಈಡೇರಿಸಲು ಪೋಷಕರು ಸಜ್ಜಾಗಬೇಕು. ಮದುವೆಗಳು ಸರಳವಾಗಿರಲಿ, ಮಕ್ಕಳಿಗೆ ಶಿಕ್ಷಣ ಕಡ್ಡಾಯವಾಗಿರಲಿ, ಪರಿಸರ ರಕ್ಷಣೆ ಇರಲಿ, ಸ್ವಂತ ವ್ಯಕ್ತಿತ್ವ ರೂಢಿಸಿಕೊಂಡು, ವೈಜ್ಞಾನಿಕ ದೃಷ್ಟಿಕೊನ ಹೊಂದಿ ಸಮಾಜಮುಖಿ ವ್ಯಕ್ತಿಗಳನ್ನಾಗಿ ಸೃಷ್ಟಿಸುವ ಕಡೆಗೆ ಪೋಷಕರು ಗಮನಹರಿಸಲಿ, ಸಮಾಜದ ಅಭಿವೃದ್ಧಿಗೆ ಶ್ರೀಮಂತರು, ಹಣವಂತರು, ಆಸಕ್ತರು ಪಣತೊಟ್ಟು ನಿಲ್ಲಬೇಕು. ಕೆಲವರು ಬಡವರು, ಕೆಲವರು ಶ್ರೀಮಂತರು ಸಮಾಜದಲ್ಲಿದ್ದರೆ ಅದು ಸ್ವಾಸ್ಥ್ಯ ಸಮಾಜವಲ್ಲ. ಒಬ್ಬ ಗಾಂಧಿಜೀ, ಒಬ್ಬ ಬಾಬಾ ಸಾಹೇಬ ಅಂಬೇಡ್ಕರ್, ಒಬ್ಬ ಸ್ವಾಮಿ ವಿವೇಕನಂದರು ಸುಮ್ಮನೆ ಸೃಷ್ಟಿಯಾಗಲಿಲ್ಲ. ಅಂದರೆ ಉಳ್ಳವರ ಸಮಾಜ ಮುಖಿ ಧಾರಾಳತನ- ನೆರವು, ಸಮಾಜದ ಬೆಳವಣಿಗೆಗೆ ಸದಾ ಅಗತ್ಯವಿರುತ್ತದೆ.
ಎಸ್. ಶ್ರೀಕಾಂತ್ ಡೀಡ್. ಹೆಚ್.ಡಿ.ಕೋಟೆ ರೋಡ್, ಹುಣಸೂರು 571105.
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
SITE MAP
SiteTRAININGJOB |
HR SERVICESOTHER SERVICESnIRATHANKA CITIZENS CONNECT |
NIRATHANKAPOSHOUR OTHER WEBSITESSubscribe |
MHR LEARNING ACADEMY
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|