ಮನುಷ್ಯನಿಂದು ತನ್ನ ಜೀವನದ ಹೋರಾಟದಲ್ಲಿ ಶಾಂತಿಯನ್ನು ಕಳೆದುಕೊಳ್ಳುತ್ತಿದ್ದಾನೆ. ಸಂಘರ್ಷದ ಲಕ್ಷಣವೇ ಅಶಾಂತಿ, ಅಸಮಾಧಾನ. ನಾವು ಯಾವುದನ್ನು ಪಡೆಯುವುದಕ್ಕೋಸ್ಕರ ಸಂಘರ್ಷ ನಡೆಸುತ್ತೇವೆಯೊ ಅದು ಕೊನೆಗೆ ದಕ್ಕಿದರೂ ಅದನ್ನು ಅನುಭವಿಸುವ ಮನಃಸ್ಥಿತಿಯಲ್ಲಿ ನಾವಿರುವುದಿಲ್ಲ. ಯುದ್ಧದ ವಿಷಯದಲ್ಲಿ ಒಂದು ಮಾತಿದೆ- ಸತ್ತವ ಗೆದ್ದ, ಗೆದ್ದವ ಸೋತ ಎಂಬುದಾಗಿ. ಯುದ್ಧ ಗೆದ್ದ ನಂತರದ ಶಾಂತಿ ಎಂದರೆ ಅದು ಸ್ಮಶಾನಶಾಂತಿಯೇ ವಿನಾ ನೈಜ ಶಾಂತಿ ಅಲ್ಲ. ನಾವು ಸುಖವನ್ನು ಪಡೆಯುವುದಕ್ಕೋಸ್ಕರ ಜೀವನಪೂರ್ತಿ ಹೋರಾಟ ಮಾಡಿದರೂ ಯಾಕೆ ನಮಗೆ ಸುಖ ಎಂಬುದು ಮರೀಚಿಕೆಯಾಗುತ್ತದೆ? ಸುಖ ಇರುವುದು ಅದನ್ನು ಅನುಭವಿಸುವುದರಲ್ಲಲ್ಲ; ಬದಲಿಗೆ ಸುಖವನ್ನು ಬಯಸದೆ ಇರುವುದರಲ್ಲಿದೆ. ಒಬ್ಬನಿಗೆ ಪ್ರಿಯವಾದ ತಿಂಡಿಯನ್ನು ತಿನ್ನುವಾಗ ಕ್ಷಣಿಕ ಸುಖವೇನೊ ಸಿಗಬಹುದು. ಆದರೆ ತಿನ್ನುವ ಪ್ರಕ್ರಿಯೆ ಮತ್ತೂ ಮುಂದುವರಿದರೆ ಅದೇ ತಿಂಡಿ ವಾಕರಿಕೆ ತರಿಸುತ್ತದೆ. ಸುಖವೇ ದುಃಖವಾಗಿ ಪರಿವರ್ತನೆಯಾಗುತ್ತದೆ. ಆದರೆ ಆ ತಿಂಡಿಯ ಬಗ್ಗೆ ವ್ಯಾಮೋಹವೇ ಇಲ್ಲದವನಿಗೆ ಸುಖ-ದುಃಖದ ದ್ವಂದ್ವವೆಲ್ಲಿ?!
ನಮ್ಮ ಮನಸ್ಸಿನಲ್ಲಿ ಯಾವುದಾದರೂ ಅಪೇಕ್ಷೆ ಉಂಟಾದರೆ ಅದನ್ನು ಪಡೆಯಬೇಕೆಂಬ ಇಚ್ಛೆಯುಂಟಾಗುತ್ತದೆ. ಇಚ್ಛೆ ಪ್ರಬಲವಾದಾಗ ಆಕಾಂಕ್ಷೆಯನ್ನು ಈಡೇರಿಸಿಕೊಳ್ಳುವುದಕ್ಕೆ ಹೋರಾಟ ಆರಂಭವಾಗುತ್ತದೆ. ತನ್ನ ಅಪೇಕ್ಷೆಯನ್ನು ಹೇಗಾದರೂ ಮಾಡಿ ಈಡೇರಿಸಿಕೊಳ್ಳಬೇಕೆಂಬ ಮಹತ್ತ್ವಾಕಾಂಕ್ಷೆಯಲ್ಲಿ ಮನುಷ್ಯ ತನ್ನ ಸಹಜತೆಯನ್ನು, ಸರಳತೆಯನ್ನು ಕಳೆದುಕೊಳ್ಳುತ್ತಾನೆ. ಮಹತ್ತ್ವಾಕಾಂಕ್ಷೆ ಎಂದೂ ಸರಳವಾಗಿರಲು ಸಾಧ್ಯವಿಲ್ಲ. ಮಹತ್ತ್ವಾಕಾಂಕ್ಷೆಯೆಂದರೆ ಇದ್ದುದರಲ್ಲಿ ತೃಪ್ತಿ ಪಡೆಯದೆ ಇಲ್ಲದುದರ ಬಗ್ಗೆ ದುರಾಸೆ ಪಡುವುದು. ಆದ್ದರಿಂದಲೇ ಮಹತ್ತ್ವಾಕಾಂಕ್ಷ್ಷಿ ಸದಾ ದುಃಖಿ, ಅತೃಪ್ತ. ನೆಮ್ಮದಿಯ ಮೂಲ: ಸರಳತೆ ಮನುಷ್ಯ ತಾನೊಬ್ಬ ಅಸಾಮಾನ್ಯನಾಗಬೇಕೆಂದಾಗ ತನ್ನ ಸರಳತೆಯನ್ನು ಕಳೆದುಕೊಳ್ಳುತ್ತಾನೆ. ಅಸಾಮಾನ್ಯನಾಗುವುದರಲ್ಲಿ ದುಃಖವಿದೆ, ನೋವಿದೆ. ಯಾರು ತಾನು ಸಾಧಾರಣ ವ್ಯಕ್ತಿಯೆಂಬುದನ್ನು ಮನಗಾಣುತ್ತಾನೋ ಆತ ವಿಶಿಷ್ಟನಾಗುತ್ತಾನೆ ಮತ್ತು ಯಾರು ತಾನು ವಿಶಿಷ್ಟನೆಂದು ಮೆರೆಯುತ್ತಾನೋ ಆತ ಕಳಪೆಯಾಗುತ್ತಾನೆ. ನಿಜವಾದ ಶ್ರೇಷ್ಠತೆ ಇರುವುದು ಸರಳ ಹಾಗೂ ಸಹಜ ಜೀವನದಲ್ಲಿ. ಸಾಮಾನ್ಯರಲ್ಲಿ ಸಾಮಾನ್ಯನಾಗಿ ಬದುಕುವುದರಲ್ಲಿ ಆನಂದವಿದೆ. ಅಸಾಮಾನ್ಯರಾಗಿ ಬದುಕುವುದರಲ್ಲಿ ಆತಂಕವಿದೆ. ಆದರೆ ಹೆಚ್ಚಿನವರು ಇಂತಹ ಆತಂಕದ ಜೀವನವನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಎಲ್ಲರಿಗೂ ಉನ್ನತ ಪೀಠದ ಮೇಲೆಯೇ ಕಣ್ಣು. ಹಲವರು ಉನ್ನತ ಸ್ಥಾನ ಪಡೆಯುವುದಕ್ಕಾಗಿ ಜೀವಮಾನಪೂರ್ತಿ ಪ್ರಯತ್ನಿಸಿದರೆ, ಇನ್ನು ಕೆಲವರು ಉನ್ನತಸ್ಥಾನ ತಾನಾಗಿ ಒಲಿದು ಬಂದಾಗಲೂ ಅದನ್ನು ಬೇಡವೆಂದು ತಿರಸ್ಕರಿಸಿ ಸರಳಜೀವನವನ್ನೇ ಅಪ್ಪಿಕೊಳ್ಳುತ್ತಾರೆ. ಚಿತ್ರದುರ್ಗದ ಬೃಹನ್ಮಠದ ಜಗದ್ಗುರು ಶ್ರೀ ಜಯವಿಭವ ಮಹಾಸ್ವಾಮಿಗಳು ಲಿಂಗೈಕ್ಯರಾಗಿದ್ದರು. ಆ ಪ್ರತಿಷ್ಠಿತ ಮಠದ ಉತ್ತರಾಧಿಕಾರಿ ಯಾರು?- ಎನ್ನುವ ಜಿಜ್ಞಾಸೆ ಆ ಮಠಕ್ಕೆ ಸಂಬಂಧಿಸಿದ, ಸಂಬಂಧಿಸದ ಜನರಲ್ಲಿ ಸಹಜವಾಗಿಯೇ ಉಂಟಾಗಿದ್ದಿತು. ಹಲಕೆಲವು ಸ್ವಾಮಿಗಳ ಹೆಸರುಗಳನ್ನು ಹಿಡಿದುಕೊಂಡು ವಕಾಲತ್ತು ಮಾಡುವ ಕೆಲಸವನ್ನು ಕೆಲವರು ಆಗಲೇ ಆರಂಭಿಸಿದ್ದರು. ಆಗ ಕರ್ನಾಟಕದ ಅನೇಕ ಜನವರ್ಗಗಳಿಗೆ ಪೂಜ್ಯರೆನಿಸಿದ್ದ ಶ್ರೀ ಮೃತ್ಯುಂಜಯ ಮಹಾಸ್ವಾಮಿಗಳು ಧಾರವಾಡದಲ್ಲಿದ್ದರು. ತ್ರಿಕರಣಶುದ್ಧಿಯ ತಮ್ಮ ವ್ಯಕ್ತಿತ್ವದ ಕಾರಣದಿಂದ ಅವರ ಮಾತಿಗೆ ಹೆಚ್ಚಿನ ಬೆಲೆ ಇತ್ತು. ಅವರ ಮರಿದೇವರಾದ ಮಹಾಂತಸ್ವಾಮಿಗಳು ಜಗದ್ಗುರು ಆಗಬೇಕೆನ್ನುವ ಪ್ರಸ್ತಾವ ಬಂದಿತು. ಸಾಮಾನ್ಯವಾಗಿ ಎಲ್ಲ ಸ್ವಾಮಿಗಳು ತಮಗೆ ದೊಡ್ಡ ಪೀಠ, ದೊಡ್ಡ ಮಠ ಬೇಕೆಂದು ಅಪೇಕ್ಷೆ ಪಡುತ್ತಾರೆ. ಹಾಗಾಗಿ ಚಿತ್ರದುರ್ಗದಂಥ ಅಗ್ರಗಣ್ಯ ಪೀಠದ ಬಗ್ಗೆ ಆಸೆ ಹಾಗೂ ಆಸಕ್ತಿ ಇರುವವರು ಅನೇಕರು ಇದ್ದರು. ಆದರೆ ಈ ಮಹಾಂತಸ್ವಾಮಿಗಳು ಸಾದಾ ಸೀದಾ ವ್ಯಕ್ತಿತ್ವದವರು. ಶ್ರೀ ಮೃತ್ಯುಂಜಯ ಮಹಾಸ್ವಾಮಿಗಳ ಸೇವೆಯಲ್ಲಿಯೇ ತಮ್ಮ ಜೀವನದ ಸಾರ್ಥಕತೆ ಇದೆ ಎಂದು ಭಾವಿಸಿಕೊಂಡವರು. ಚಿತ್ರದುರ್ಗದ ಜಗದ್ಗುರು ಪೀಠದ ಪ್ರಸ್ತಾವ ಬಂದೊಡನೆಯೇ ಅವರು ದುಃಖ ತುಂಬಿಕೊಂಡು ಅತ್ತುಬಿಟ್ಟರು. ನನ್ನ ಸೇವೆಯಲ್ಲಿ ನಿಮಗೆ ಏನೋ ಲೋಪ ಕಂಡಿದೆ. ನೀವು ಬೇಡ ಎಂದು ಹೇಳಿದರೆ ನಾನು ದೇಶಾಂತರ ಹೋಗಿಬಿಡುತ್ತೇನೆ. ನನ್ನನ್ನು ನಿಮ್ಮಿಂದ ದೂರ ಮಾಡಬೇಡಿ ಎಂದು ಶ್ರೀ ಮೃತ್ಯುಂಜಯ ಮಹಾಸ್ವಾಮಿಗಳ ಬಳಿ ಬೇಡಿಕೊಂಡರು. ತಮ್ಮನ್ನು ಹುಡುಕಿಕೊಂಡು ಬಂದಿದ್ದ ಬಹು ದೊಡ್ಡ ಮಠದ ಜಗದ್ಗುರು ಪದವಿಯನ್ನು ಧಿಕ್ಕರಿಸಿದ ಮಹಾಂತಸ್ವಾಮಿಗಳು ಸರಳವಾಗಿಯೇ ಉಳಿದು ಗುರುಗಳ ಸೇವೆಯಲ್ಲಿಯೇ ಧನ್ಯತೆಯನ್ನು ಪಡೆದರು. ಸ್ಥಾನೋನ್ನತಿ ಅಶಾಶ್ವತ ದೊಡ್ಡವರ ದೊಡ್ಡತನ ಇರುವುದು ಸರಳತೆಯಲ್ಲಿಯೇ ವಿನಾ ಆಡಂಬರದಲ್ಲಲ್ಲ. ಮನುಷ್ಯ ತಾನು ಪಡೆದ ಸ್ಥಾನದಿಂದ ದೊಡ್ಡವನಾಗುವುದಿಲ್ಲ, ಬದಲಿಗೆ ತನ್ನ ಸರಳ ವ್ಯಕ್ತಿತ್ವದಿಂದ ತಾನು ಪಡೆದ ಸ್ಥಾನಕ್ಕೆ ದೊಡ್ಡತನವನ್ನು ತಂದುಕೊಡುತ್ತಾನೆ. ಗಾಂಧಿಯವರಿಗೆ ಕಾಂಗ್ರೆಸ್ ಪಕ್ಷದಿಂದ ದೊಡ್ಡತನ ಬರಲಿಲ್ಲ. ಬದಲಿಗೆ ಗಾಂಧಿಯವರು ತಮ್ಮ ಸರಳ ವ್ಯಕ್ತಿತ್ವದಿಂದ ಕಾಂಗ್ರೆಸ್ ಪಕ್ಷಕ್ಕೆ ಬೆಲೆ ತಂದುಕೊಟ್ಟರು. ಮೈಸೂರಿನ ದಿವಾನಗಿರಿಯಿಂದ ಸರ್ ಎಂ. ವಿಶ್ವೇಶ್ವರಯ್ಯನವರು ದೊಡ್ಡವರಾಗಲಿಲ್ಲ; ಬದಲಿಗೆ ವಿಶ್ವೇಶ್ವರಯ್ಯನವರ ದಕ್ಷತೆಯಿಂದ, ವ್ಯಕ್ತಿತ್ವದಿಂದ ದಿವಾನಗಿರಿಗೆ ಒಂದು ಬೆಲೆ ಬಂತು. ನಾವು ಎಲ್ಲಿದ್ದೇವೆ ಎನ್ನುವುದಕ್ಕಿಂತ ನಾವು ಏನಾಗಿದ್ದೇವೆ ಎಂಬುದು ಮುಖ್ಯ. ನಾವು ವಾಸಿಸುವ ಬಂಗಲೆ, ನಾವು ಪಡೆದ ಪದವಿ, ನಮಗೆ ದೊರೆತ ಅಧಿಕಾರ ಎಷ್ಟೇ ದೊಡ್ಡದಾಗಿರಬಹುದು. ಆದರೆ ನಮ್ಮ ವ್ಯಕ್ತಿತ್ವ ಅದಕ್ಕಿಂತ ಉನ್ನತವಾದಾಗಲೇ ನಾವು ವಾಸಿಸುವ ಬಂಗಲೆಗೆ, ನಾವು ಪಡೆದ ಪದವಿಗೆ, ಅಧಿಕಾರಕ್ಕೆ ಬೆಲೆ ಬರುವುದು. ನಮ್ಮ ವ್ಯಕ್ತಿತ್ವ ಕ್ಷುದ್ರವಾದಾಗ ಅಧಿಕಾರ, ಬಂಗಲೆ, ಪದವಿ ಇವಾವುವೂ ನಮ್ಮನ್ನು ಮೇಲಕ್ಕೇರಿಸುವುದಿಲ್ಲ. ಕೆಲವರು ಅಧಿಕಾರದಿಂದಲೇ ತಮಗೊಂದು ಬೆಲೆ ಬರುತ್ತದೆಂದು ಅದಕ್ಕೆ ಅಂಟಿಕೊಂಡಿರುತ್ತಾರೆ. ಆದರೆ ಅಧಿಕಾರದ ಅಂಟು, ನಂಟು ನಶ್ವರ ಎಂಬುದನ್ನು ಅವರು ಮರೆತಿರುತ್ತಾರೆ. ಅಧಿಕಾರದಿಂದ ಕೆಳಗಿಳಿದಾಗ ಅವರು ನೀರಿನಿಂದ ಹೊರತೆಗೆದ ಮೀನಿನಂತೆ ಒದ್ದಾಡುತ್ತಾರೆ. ಅವರ ಜೀವ ಅವರ ಹೃದಯದಲ್ಲಿರದೆ ಅಧಿಕಾರದ ಕುರ್ಚಿಯಲ್ಲಿರುತ್ತದೆ. ಆದರೆ ಇದಕ್ಕೆ ಅಪವಾದವೆಂಬಂತೆ ಈ ದೇಶದಲ್ಲಿ ಅನೇಕರು ಸರಳವಾಗಿ ಬಾಳಿ ಬದುಕಿದ್ದಾರೆ. ವಿಶ್ವೇಶ್ವರಯ್ಯನವರು ಮೈಸೂರು ಸಂಸ್ಥಾನದ ದಿವಾನ ಪದವಿಯನ್ನು ಅಲಂಕರಿಸಿ ನಿವೃತ್ತರಾದಾಗ, ಆಗಲೇ ಲೋಕೋತ್ತರ ಕೀರ್ತಿಯನ್ನು ಸಂಪಾದಿಸಿದ್ದರು. ಅಧಿಕಾರದ ತಮ್ಮ ಕೊನೆಯ ದಿನ ಅವರು ಕಛೇರಿಯಲ್ಲಿ ಸಂಜೆಯ ಐದು ಗಂಟೆಯವರೆಗೂ ಇದ್ದು ತಮ್ಮ ಯಾವ ಕೆಲಸವೂ ಬಾಕಿ ಉಳಿಯದಂತೆ ಎಲ್ಲವನ್ನೂ ಮುಗಿಸಿ, ತಮ್ಮ ಮೇಜನ್ನು ಚೊಕ್ಕಟವಾಗಿ ಇರಿಸಿದ್ದರು. ಐದು ಗಂಟೆ ಆದ ಮೇಲೆ ಅವರು ಕುರ್ಚಿ ಬಿಟ್ಟು ಎದ್ದು, ಬೆತ್ತವನ್ನು ಕೈಯಲ್ಲಿ ಹಿಡಿದುಕೊಂಡು ಹೊರಗೆ ಬಂದರು. ದಿವಾನರ ಕಾರು ಪೋರ್ಟಿಕೋದಲ್ಲಿ ನಿಂತಿದ್ದಿತು. ಜವಾನರು ಬಂದು, ಅವರು ಕುಳಿತುಕೊಳ್ಳಲೆಂದು ಕಾರಿನ ಬಾಗಿಲನ್ನು ತೆರೆದ. ಆಗ ವಿಶ್ವೇಶ್ವರಯ್ಯನವರು ಅವನಿಗೆ ಹೇಳಿದರು: ಇದು ದಿವಾನರ ಕಾರು. ಈಗ ನಾನು ದಿವಾನನಲ್ಲ. ನನ್ನ ದಿವಾನ ಕೆಲಸ ಮುಗಿದಿದೆ. ಈಗ ನನಗೆ ಈ ಕಾರು ಹತ್ತುವ ಅಧಿಕಾರವಿಲ್ಲ. ಹೀಗೆ ಹೇಳುತ್ತ ಅವರು ತಮ್ಮ ಮನೆಗೆ ನಡೆದುಕೊಂಡೇ ಹೋದರು. ಅವರು ಸುಮ್ಮನೆ ದೊಡ್ಡವರಾದವರಲ್ಲ. ಇಂತಹ ಘನವಾದ ನಡತೆಯನ್ನು ಇರಿಸಿಕೊಂಡಿದ್ದರೆನ್ನುವ ಕಾರಣದಿಂದಲೇ ಅವರು ದೊಡ್ಡವರಾಗಿದ್ದರು. ಅ-ನಿಕೇತನರು ಡಾ. ರಾಜೇಂದ್ರ ಪ್ರಸಾದರು ನಮ್ಮ ಸ್ವಾತಂತ್ರ್ಯ ಹೋರಾಟದ ದಿಗ್ಗಜರಲ್ಲಿ ಒಬ್ಬರು. ಅವರದು ನಿಷ್ಕಾಮಸೇವೆಗೆ ಹೇಳುವ ಇನ್ನೊಂದು ಹೆಸರು. ಅವರು ಆಗಿನ ಕಾಲದಲ್ಲಿ ತಮ್ಮ ಎಲ್ಲ ಪರೀಕ್ಷೆಗಳಲ್ಲಿಯೂ ಕೊಲ್ಕತಾ ವಿಶ್ವವಿದ್ಯಾಲಯಕ್ಕೆ ಪ್ರಥಮರೆನಿಸಿ ತೇರ್ಗಡೆಯಾಗಿದ್ದರು. ಅವರನ್ನು ದೇಶದ ಸ್ವಾತಂತ್ರ್ಯ ಹೋರಾಟ ತನ್ನೆಡೆಗೆ ಸೆಳೆದುಕೊಂಡಿತು. ಅವರು ಕಾಂಗ್ರೆಸ್ ಅಧ್ಯಕ್ಷರಾಗಿದ್ದರು, ದೇಶ ಸ್ವತಂತ್ರವಾದ ಮೇಲೆ ಸಂವಿಧಾನಸಭೆಯ ಅಧ್ಯಕ್ಷರಾದರು. ಈ ದೇಶ ಗಣರಾಜ್ಯ ಆದಮೇಲೆ ಅವರು ಭಾರತದ ಪ್ರಥಮ ರಾಷ್ಟ್ರಪತಿಯಾಗಿ ಆಯ್ಕೆಯಾದರು. ಆ ಸ್ಥಾನವನ್ನು ಅವರು ಹತ್ತು ವರ್ಷಗಳ ಕಾಲ ಅಲಂಕರಿಸಿದ್ದರು. 1962ನೆಯ ಇಸವಿ ಮೇ ತಿಂಗಳಿನಲ್ಲಿ ನಿವೃತ್ತರಾದ ಅವರು ದಿಲ್ಲಿಯಿಂದ ನಿರ್ಗಮಿಸಿ ಬಿಹಾರಕ್ಕೆ ತೆರಳಿದರು. ಪಾಟ್ನಾದಲ್ಲಿಯೂ ಅವರಿಗೆ ತಮ್ಮದೆನ್ನುವ ಒಂದು ಮನೆ ಇರಲಿಲ್ಲ. ಭಾರತದ ರಾಷ್ಟ್ರಪತಿ ಆಗಿದ್ದವರು ಸ್ವಂತದ್ದಾದ ಒಂದು ಮನೆಯನ್ನೂ ಹೊಂದಿರಲಿಲ್ಲ ಎಂಬುದು ನಂಬಲಾಗದ ಸತ್ಯ ಸಂಗತಿ. ಅವರು ಬಿಹಾರ ಪ್ರದೇಶ ಕಾಂಗ್ರೆಸ್ಸಿನ ಅಧ್ಯಕ್ಷರಾಗಿದ್ದಾಗ, ಪ್ರದೇಶ ಕಾಂಗ್ರೆಸ್ ಕಚೇರಿ ಇದ್ದ ಸದಾಕತ್ ಆಶ್ರಮದಲ್ಲಿಯೇ ವಾಸವಾಗಿರುತ್ತಿದ್ದರು. ರಾಷ್ಟ್ರಪತಿ ಸ್ಥಾನದಿಂದ ನಿರ್ಗಮಿಸಿದ ಅವರಿಗೆ ಸದಾಕತ್ ಆಶ್ರಮವೇ ವಸತಿಯನ್ನು ಕಲ್ಪಿಸಿಕೊಟ್ಟಿತು. ಅವರು ಅಲ್ಲಿ ಇರುವಾಗಲೇ ದೈವಾಧೀನರಾದರು. ಸಂಪೂರ್ಣವಾಗಿ ಸಾರ್ವಜನಿಕ ಜೀವನಕ್ಕೆ ತಮ್ಮನ್ನು ಸಮರ್ಪಿಸಿಕೊಂಡಿದ್ದ ಅವರಿಗೆ ತಮ್ಮ ಸ್ವಂತ ಮನೆಯಲ್ಲಿ ಸಾಯುವ ಯೋಗ ಲಭಿಸಲಿಲ್ಲ. ಸ್ವಂತ ಮನೆಯೇ ಇರಲಿಲ್ಲವೆಂದ ಮೇಲೆ ಅವರಿಗೆ ಆ ಯೋಗ ಎಲ್ಲಿಂದ ಬರಬೇಕು? ಡಾ. ರಾಜೇಂದ್ರ ಪ್ರಸಾದರಂಥ ಜನ ಇದ್ದರೆನ್ನುವುದನ್ನು ಹೇಳಿದರೆ ಬಹುಶಃ ಈಗ ಯಾರೊಬ್ಬರೂ ನಂಬುವುದಿಲ್ಲ. ಏಕೆಂದರೆ ಇಂದು ಸರಳತೆ ಆಡಂಬರದ ಕೆಸರಿನಲ್ಲಿ ಹೂತುಹೋಗಿದೆ. ಗುಲ್ಜಾರಿಲಾಲ ನಂದಾರವರು ಮುಂಬಯಿ ರಾಜ್ಯದಲ್ಲಿ ಹಾಗೂ ಕೇಂದ್ರ ಸರಕಾರದಲ್ಲಿ ಅನೇಕ ವರ್ಷಗಳ ಕಾಲ ಮಹತ್ತ್ವದ ಇಲಾಖೆಗಳನ್ನು ಬಹು ದಕ್ಷತೆಯಿಂದ ನಿರ್ವಹಿಸಿದವರು. ಎರಡು ಸಲ ಈ ದೇಶದ ಹಂಗಾಮಿ ಪ್ರಧಾನಮಂತ್ರಿ ಕೂಡ ಆಗಿದ್ದರು. ಎಲ್ಲ ಬಗೆಯ ಅಧಿಕಾರಸ್ಥಾನಗಳಲ್ಲಿ ಅವರು ಇದ್ದರಾದರೂ ಅವರಿಗೆ ಸ್ವಂತದ ಮಹತ್ತ್ವಾಂಕಾಕ್ಷೆ ಯಾವುದೂ ಇರಲಿಲ್ಲ. ರಾಜ್ಯ ಹಾಗೂ ಕೇಂದ್ರಗಳಲ್ಲಿ 20-30 ವರ್ಷ ಮಂತ್ರಿಯಾಗಿಯೂ ಅವರು ತಮ್ಮ ಸ್ವಂತದ ಒಂದು ಮನೆಯನ್ನು ದಿಲ್ಲಿಯಲ್ಲಾಗಲಿ, ದೇಶದ ಬೇರೆ ಯಾವುದೇ ನಗರದಲ್ಲಿಯೇ ಆಗಲಿ ಮಾಡಿಕೊಳ್ಳಲಿಲ್ಲ. ಕೇಂದ್ರ ಸರಕಾರದ ಸಚಿವ ಸ್ಥಾನದಿಂದ ನಿರ್ಗಮಿಸಿದ ಮೇಲೆ ಅವರು ಎಲ್ಲಿ ಇದ್ದರೆನ್ನುವುದು ಯಾರಿಗೂ ಗೊತ್ತಿರಲಿಲ್ಲ. ಒಂದು ದಿನಪತ್ರಿಕೆಯಲ್ಲಿ ಬಂದ ಸುದ್ದಿ ಅದನ್ನು ಎಲ್ಲರಿಗೂ ತಿಳಿಸಿಕೊಟ್ಟಿತು. ಅವರಿಗೆ ಫ್ಲ್ಯಾಟನ್ನು ಬಾಡಿಗೆಗೆ ಕೊಟ್ಟ ಮನುಷ್ಯ ಅವರ ಸಾಮಾನುಗಳನ್ನೆಲ್ಲ ಕಿತ್ತು ಹೊರಗೆ ಎಸೆದಿದ್ದ. ಆ ಸುದ್ದಿಯನ್ನು ಓದಿದಾಗಲೇ ಜನರಿಗೆ ಅವರು ಒಂದು ಬಾಡಿಗೆ ಮನೆಯಲ್ಲಿ ಇದ್ದರೆನ್ನುವುದು ತಿಳಿಯಿತು. ಇಷ್ಟಾದ ಮೇಲೆ ಕೇಂದ್ರ ಸರಕಾರ ಅವರಿಗೆ ಒಂದು ಮನೆಯನ್ನು ಕೊಡಮಾಡುವ ಸೂಚನೆ ನೀಡಿತು. ಆದರೆ ಅಭಿಮಾನಧನರಾದ ಗುಲ್ಜಾರಿಲಾಲ ನಂದಾ, ಅದನ್ನು ಸ್ವೀಕರಿಸಲು ಒಪ್ಪಲಿಲ್ಲ. ಆಗ ಅವರಿಗೆ 96 ವರ್ಷ ದಾಟಿತ್ತು. ತಮಗೆ ಯಾರಿಂದಾದರೂ ಏನಾದರೂ ಆಗಬೇಕೆಂದು ಬಯಸಿದವರಲ್ಲ. ಮಾಜಿ ಪ್ರಧಾನಿ ಎಂಬ ಅಹಂಭಾವ ಇಲ್ಲದೆ ಸಾಯುವ ತನಕ ಸರಳವಾಗಿ ಜೀವಿಸಿದರು. ಲಾಲಬಹಾದ್ದುರ್ ಶಾಸ್ತ್ರೀಯವರಂಥ ಇನ್ನೊಬ್ಬ ಸರಳ ಸಾದಾ ಆಡಳಿತಗಾರರನ್ನು ನಮ್ಮ ದೇಶ ಕಾಣಲಿಲ್ಲ. ಅವರು ರೈಲ್ವೆ ಮಂತ್ರಿ ಆಗಿದ್ದಾಗ ಅರಿಯಾಲೂರು ಬಳಿ ರೈಲ್ವೆ ಅಪಘಾತ ಸಂಭವಿಸಿತು. ರೈಲ್ವೆಯು ಅನೇಕ ಜನರ ಮೇಲ್ವಿಚಾರಣೆಗೆ ಒಳಪಟ್ಟು ನಡೆಯುವ ಒಂದು ಸಂಕೀರ್ಣ ವ್ಯವಸ್ಥೆ. ಆ ದುರ್ಘಟನೆಯ ಬಗೆಗೆ ಲಾಲಬಹಾದ್ದುರ್ ಶಾಸ್ತ್ರಿಯವರು ರಾಜೀನಾಮೆ ಕೊಡಬೇಕಾಗಿರಲಿಲ್ಲ. ಆದರೆ, ರಾಜೀನಾಮೆ ಕೊಡದೇ ಇರುವುದಕ್ಕೆ ಅವರ ಅಂತರಾತ್ಮ ಸಮ್ಮತಿಸಲಿಲ್ಲ. ಅವರು ರಾಜೀನಾಮೆ ಕೊಟ್ಟು ನೇರವಾಗಿ ಮನೆಗೆ ಬಂದರು. ಆ ದಿನ, ಅವರು ತಮ್ಮ ಹೆಂಡತಿಗೆ ಹೇಳಿದರು- ಲಲಿತಾ, ನನ್ನ ಕೆಲಸಕ್ಕೆ ನಾನು ರಾಜೀನಾಮೆ ಕೊಟ್ಟಿದ್ದೇನೆ. ಈಗ ನಾನು ಮಂತ್ರಿಯಲ್ಲ, ನಮಗೆ ಇನ್ನು ಮೇಲೆ ಒಂದೇ ಪಲ್ಯ. ಖಾತೆರಹಿತ ಮಂತ್ರಿಯಾಗಿ ಪುನಃ ಸಂಪುಟ ಸೇರಿದ ಲಾಲಬಹಾದ್ದುರರು ರಾಜಕಾರ್ಯ ನಿಮಿತ್ತ ಕಾಶ್ಮೀರಕ್ಕೆ ಹೋಗುವುದಿದ್ದಿತು. ಆದರೆ ಅವರ ಬಳಿ, ಕಾಶ್ಮೀರದ ಚಳಿಯನ್ನು ತಡೆಯಬಹುದಾದ ಉಣ್ಣೆಯ ನಿಲುವಂಗಿ ಇರಲಿಲ್ಲ. ಅವರು ಉತ್ತರ ಪ್ರದೇಶದಲ್ಲಿ, ಕೇಂದ್ರದಲ್ಲಿ ಅನೇಕ ವರ್ಷಗಳ ಕಾಲ ಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. ಮಂತ್ರಿಯಾದ ಅನೇಕರ ಮನೆಯಲ್ಲಿ ಒಂದು ವಸ್ತ್ರಾಗಾರವೇ ಇರುತ್ತದೆ. ಆದರೆ ಶಾಸ್ತ್ರಿಯವರ ಮನೆಯ ಸ್ಥಿತಿ ಮಾತ್ರ ಹಾಗೆ ಇರಲಿಲ್ಲ. ಜವಾಹರಲಾಲರ ನಿರೂಪ ತೆಗೆದುಕೊಂಡು ಅವರು ಕಾಶ್ಮೀರಕ್ಕೆ ಹೊರಟು ನಿಂತರು. ನಿಮ್ಮ ಉಣ್ಣೆಯ ನಿಲುವಂಗಿ ಎಲ್ಲಿದೆ? ಎಂದು ಜವಾಹರಲಾಲರು ಅವರನ್ನು ಕೇಳಿದರು. ನನ್ನ ಬಳಿ ಒಂದು ಉಣ್ಣೆಯ ಕೋಟು ಮಾತ್ರ ಇದೆ. ಎಂದರು, ಲಾಲಬಹಾದ್ದುರ್ ಶಾಸ್ತ್ರಿ. ಛೇ, ಅದು ಸಾಕಾಗುವುದಿಲ್ಲ. ಆ ಕೋಟಿನ ಮೇಲೆ ಒಂದು ಓವರ್‍ಕೋಟು ಬೇಕು ಎಂದು ಹೇಳುತ್ತ ಜವಾಹರಲಾಲರು, ತಮ್ಮ ಕೋಣೆಯೊಳಗೆ ಹೋಗಿ ಒಂದು ಓವರ್‍ಕೋಟನ್ನು ತಂದುಕೊಟ್ಟರು. ಇದನ್ನು ತೊಟ್ಟರೆ ಶೀತ ತಮ್ಮ ಸಮೀಪಕ್ಕೆ ಕೂಡ ಸುಳಿಯಲಾರದು. ಲಾಲಬಹಾದ್ದುರ್ ಶಾಸ್ತ್ರಿಯವರು ಪಾಕಿಸ್ತಾನದ ಅಧ್ಯಕ್ಷ ಅಯೂಬ್ಖಾನರೊಂದಿಗೆ ಮಾತುಕತೆ ನಡೆಸಲು ತಾಷ್ಕೆಂಟಿಗೆ ಹೋಗಿದ್ದಾಗ ಹಠಾತ್ತನೆ ಹೃದಯಕ್ರಿಯೆ ನಿಂತು ಸಂಶಯಾಸ್ಪದ ರೀತಿಯಲ್ಲಿ ನಿಧನ ಹೊಂದಿದರು. ಅವರು ಏನು ಗಳಿಸಿದರೆನ್ನುವುದು ಅವರು ಸತ್ತ ಮೇಲೆಯೇ ಗೊತ್ತಾಗಬೇಕಲ್ಲವೇ! ಶೆಟ್ಟಿಯ ಲೆಕ್ಕ, ಶೆಟ್ಟಿ ಸತ್ತಮೇಲೆಯೇ ತಿಳಿಯುತ್ತದೆ. ರಾಜ್ಯದಲ್ಲಿ, ಕೇಂದ್ರದಲ್ಲಿ ಅನೇಕ ವರ್ಷಗಳ ಕಾಲ ಅಧಿಕಾರ ನಿರ್ವಹಿಸಿ, ಕೊನೆಗೆ ಭಾರತ ಸರಕಾರದ ಆಡಳಿತ ಸೂತ್ರ ಹಿಡಿದು, ಮರೆಯಲಾಗದ ಪ್ರಧಾನಮಂತ್ರಿಯೆಂದು ಹೆಸರು ಮಾಡಿದ ಲಾಲಬಹಾದ್ದುರರು, ಅಲಹಾಬಾದಿನಲ್ಲಿ ಇಲ್ಲವೆ ದಿಲ್ಲಿಯಲ್ಲಿ ತಾವಿರುವುದಕ್ಕೆ ಒಂದು ಮನೆಯನ್ನು ಕೂಡ ಮಾಡಿಕೊಂಡಿರಲಿಲ್ಲ. ದೇಶವೇ ಅವರ ಮನೆಯಾಗಿತ್ತು, ಭಾರತೀಯರೆಲ್ಲರೂ ಅವರ ಬಂಧುಗಳಾಗಿದ್ದರು. ಮೌಲ್ಯನಿಷ್ಠ ಹುಚ್ಚರು 1977ರಲ್ಲಿ ಗುಜರಾತಿನಲ್ಲಿ ಬಾಬೂಭಾಯಿ ಪಟೇಲರು ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಅವರು ಬಹು ಸಾದಾ ಜೀವನವನ್ನು ಸಾಗಿಸುತ್ತಿದ್ದರು. ಅಧಿಕಾರಸ್ಥಾನದಲ್ಲಿ ಬಾಬೂಭಾಯಿ ಪಟೇಲರಂಥ ಜನರು ಬಹು ಕ್ವಚಿತ್ತಾಗಿ ಸಿಕ್ಕುತ್ತಾರೆ. ಸರಕಾರದ ಕಾರ್ಯನಿಮಿತ್ತ ಅವರು ದೇಶದ ರಾಜಧಾನಿಯಾದ ದಿಲ್ಲಿಗೆ ಹೋಗುತ್ತಿದ್ದರು. ದಿಲ್ಲಿಯಲ್ಲಿಯ ತಮ್ಮ ಕಾರ್ಯಕ್ರಮವನ್ನು ಅವರು ಅಲ್ಲಿಯ ಗುಜರಾತ್ ಭವನಕ್ಕೆ ತಿಳಿಸುತ್ತಿದ್ದರಾದರೂ, ತಮ್ಮನ್ನು ಕರೆದೊಯ್ಯಲು ರೈಲ್ವೆ ನಿಲ್ದಾಣಕ್ಕೆ ಯಾರೊಬ್ಬರೂ ಬರಕೂಡದೆಂದು ಹೇಳಿರುತ್ತಿದ್ದರು. ರೈಲಿನಿಂದ ಕೆಳಗೆ ಇಳಿದವರೇ ತಮ್ಮ ಹ್ಯಾಂಡ್‍ಬ್ಯಾಗ್ ಕೈಯಲ್ಲಿ ಹಿಡಿದುಕೊಂಡು ಅವರು ಸರಸರನೆ ಆಟೋರಿಕ್ಷಾ ಹಿಡಿಯಲು ಹೊರಗೆ ಹೋಗುತ್ತಿದ್ದರು. ಒಂದು ರಾಜ್ಯದ ಮುಖ್ಯಮಂತ್ರಿ ಆಟೋರಿಕ್ಷಾದಲ್ಲಿ ಹೋಗುತ್ತಾನೆನ್ನುವುದನ್ನು ಈಗ ಊಹಿಸುವುದಕ್ಕೂ ಸಾಧ್ಯವಿಲ್ಲ. ಕೇಂದ್ರದ ವಿವಿಧ ಮಂತ್ರಿಗಳನ್ನು ಕಾಣುವುದಕ್ಕೂ ಕೂಡ ಅವರು ಆಟೋರಿಕ್ಷಾವನ್ನೇ ಉಪಯೋಗಿಸುತ್ತಿದ್ದರು. ಸರಳತೆಯಲ್ಲಿ ಅದ್ದಿ ತೆಗೆದ ಅಪ್ಪಟ ವ್ಯಕ್ತಿ ಅವರು. ಅನ್ಯಾಯ ಅವರ ಸಮೀಪಕ್ಕೂ ಸುಳಿಯುತ್ತಿರಲಿಲ್ಲ. ಅವರು ಯಾರಿಗೂ ಕೆಟ್ಟದ್ದು ಮಾಡಿ ಅರಿಯರು. ಅಧಿಕಾರಸ್ಥಾನ ಆಡಂಬರದ ಆಡುಂಬೊಲ ಎಂದು ತಿಳಿದವರು ಬಾಬೂಭಾಯಿ ಪಟೇಲರಂಥ ಜನರನ್ನು ಲೌಕಿಕವನ್ನು ಅರಿಯದ ಹುಚ್ಚರೆಂದು ಕರೆದಾರು! ಅಂಥ ಹುಚ್ಚರಿಂದಲೇ ಜೀವನ ತನ್ನ ರುಚಿಯನ್ನು ಇನ್ನೂ ಕೂಡ ಉಳಿಸಿಕೊಂಡಿದೆ. ಸರ್ ಎಂ. ವಿಶ್ವೇಶ್ವರಯ್ಯ, ಡಾ. ಬಾಬುರಾಜೇಂದ್ರಪ್ರಸಾದ್, ಗುಲ್ಜಾರಿಲಾಲ ನಂದಾ, ಲಾಲಬಹಾದ್ದುರ್ ಶಾಸ್ತ್ರಿ, ಬಾಬೂಭಾಯಿ ಪಟೇಲ್- ಇವರೆಲ್ಲರೂ ಈ ದೇಶದಲ್ಲಿ ಉನ್ನತ ಅಧಿಕಾರಿದಲ್ಲಿದ್ದೂ ಸರಳತೆಯಿಂದ ಇದ್ದರು ಎಂದು ಹೇಳಿದರೆ ಇಂದಿನವರು ಯಾರೂ ಒಪ್ಪುವ ಸ್ಥಿತಿಯಲ್ಲಿಲ್ಲ. ಯಾಕೆಂದರೆ ಅಧಿಕಾರ ಮನುಷ್ಯನನ್ನು ಕೆಡಿಸುತ್ತದೆ. ನಮ್ಮನ್ನಾಳುವ ವ್ಯವಸ್ಥೆಯೇ ಇಂದು ಕೊಳೆತು ಕುಲಗೆಟ್ಟುಹೊಗಿದೆ. ಅಧಿಕಾರ ಇದ್ದಾಗಲೇ ನಮ್ಮ ಗತ್ತು, ದೌಲತ್ತನ್ನು ಪ್ರದರ್ಶಿಸುವ ಹಪಾಹಪಿ ನಮ್ಮ ಇಂದಿನ ಮಂತ್ರಿಗಳಿಗೆ, ಅಧಿಕಾರಿಗಳಿಗೆ ಭೂತದಂತೆ ಹಿಡಿದುಕೊಂಡಿದೆ. ನಮ್ಮಲ್ಲಿ ಅಪಾರ ಅಧಿಕಾರ ಇದ್ದಾಗಲೂ ನಾವು ಸರಳವಾಗಿಯೇ ಇರಬಹುದು ಎಂಬ ನಮ್ಮ ಹಿರಿಯರ ಆದರ್ಶ ಇವರ ಗಂಟಲೊಳಗೆ ಇಳಿಯುವುದಿಲ್ಲ. ಉನ್ನತ ವಿಚಾರ, ಸರಳ ಆಚಾರ, ಎಂಬುದು ಇಂದು ಕಾಲಬಾಹ್ಯ ಸಂಗತಿಯೇನೊ- ಎಂಬ ಶಂಕೆ ಮೂಡುವಂತಾಗಿದೆ. ಒಬ್ಬ ಮನುಷ್ಯನನ್ನು ಪರೀಕ್ಷಿಸಬೇಕೆಂದರೆ, ಅವನಿಗೆ ಅಧಿಕಾರ ಕೊಟ್ಟು ನೋಡಬೇಕೆಂದು ಹೇಳುತ್ತಾರೆ. ಸಾಮಾನ್ಯವಾಗಿ ಅಧಿಕಾರ ಮತ್ತು ಸರಳತೆ ಎಂದೂ ಕೂಡಿ ಹೋಗುವುದಿಲ್ಲ. ಅಧಿಕಾರವು ತನ್ನ ಡೌಲು ದರ್ಪಗಳನ್ನು ತೋರಿಸಿ ತನ್ನನ್ನು ಪ್ರದರ್ಶನ ಮಾಡಿಕೊಳ್ಳಬೇಕೆನ್ನುತ್ತದೆ, ಮೆರೆಸಬೇಕೆನ್ನುತ್ತದೆ. ಲಾರ್ಡ್ ಆಕ್ಟನ್ ಅಧಿಕಾರ ಹಾಳುಮಾಡುತ್ತದೆ, ಪೂರ್ತಿ ಅಧಿಕಾರ ಪೂರ್ತಿಯಾಗಿ ಹಾಳುಮಾಡುತ್ತದೆ ಎಂಬುದಾಗಿ ಹೇಳಿದ್ದಾನೆ. ಇದು ಪೂರ್ಣ ಸತ್ಯವಾದ ಮಾತಲ್ಲ. ಅಧಿಕಾರ ನಮ್ಮನ್ನು ಹಾಳುಮಾಡುವುದಿಲ್ಲ. ಹಾಳಾಗುವ ಭ್ರಷ್ಟ ಪ್ರವೃತ್ತಿ ನಮ್ಮಲ್ಲಿದ್ದಾಗ, ಅಧಿಕಾರ ನಮ್ಮ ನೀಚತನವನ್ನು ಬಯಲಿಗೆ ತರುತ್ತದಷ್ಟೆ. ಅಧಿಕಾರ ನಮ್ಮ ಭ್ರಷ್ಟತೆಯನ್ನು ಹೊರಹಾಕಲು ಒಂದು ಅವಕಾಶ ಕಲ್ಪಿಸುತ್ತದಷ್ಟೆ. ಕುರೂಪಿ ಬೆಳಕಿಗೆ ಬಂದು, ಬೆಳಕು ತನ್ನನ್ನು ಕುರೂಪಗೊಳಿಸಿತು ಎಂದರೇನರ್ಥ? ಇಲ್ಲಿ ಬೆಳಕು ಕುರೂಪವನ್ನು ಸೃಷ್ಟಿಸಲಿಲ್ಲ. ಬದಲಿಗೆ ಬೆಳಕು ಕುರೂಪವನ್ನು ಜಗತ್ತಿಗೆ ತೋರಿಸಿತಷ್ಟೆ. ಬಹುತೇಕ ಜನರು ಅಧಿಕಾರ ಬಂದೊಡನೆಯೇ ಬದಲಾಗುತ್ತಾರೆ. ತಮ್ಮನ್ನು ತಾವಿರುವಂತೆಯೇ ಕಾಯ್ದುಕೊಂಡು ಉಳಿದವರು ತುಂಬ ಕಡಮೆ ಜನ ಇದ್ದಾರೆ. ನಾವು ಇಲ್ಲಿ ವಿಶ್ವೇಶ್ವರಯ್ಯನವರನ್ನು, ಅಲ್ಲಿ ಒಬ್ಬ ಲಾಲಬಹಾದ್ದುರ್ ಶಾಸ್ತ್ರಿಯವರನ್ನು ತೋರಿಸಬಹುದು. ಅವರು ಅಧಿಕಾರವನ್ನು ಬದಲಿಸಿದರಲ್ಲದೆ, ಅಧಿಕಾರವು ಅವರನ್ನೆಂದೂ ಬದಲಿಸಲಿಲ್ಲ. ದಿವಾನ ಪದವಿಗೆ ಏರಿ ಕುಳಿತರಾದರೂ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು ಸಂಸ್ಕೃತಿ ಸಹಜವಾದ ತಮ್ಮ ಮೂಲಸ್ವಭಾವ ಗುಣಗಳನ್ನು ಕಳೆದುಕೊಳ್ಳಲಿಲ್ಲ. ತಮ್ಮ ಮನೆಗೆ ಯಾರೇ ಬಂದರೂ, ಅವರು ಗೌರವಾನ್ವಿತ ಅತಿಥಿಗಳು. ಅವರನ್ನು ಮೊದಲು ಕುಳ್ಳಿರಿಸಿ, ತಾವು ಅನಂತರ ಕುರ್ಚಿಯ ಮೇಲೆ ಕುಳಿತುಕೊಳ್ಳುತ್ತಿದ್ದರು. ಎಂಥ ಸಣ್ಣವರಿಗೂ ಕೂಡ ಅವರು ಬಹು ದೊಡ್ಡ ಮರ್ಯಾದೆಯನ್ನು ಕೊಡುತ್ತಿದ್ದರು. ತಮ್ಮ ದರ್ಪ ದೌಲತ್ತುಗಳನ್ನು ಅವರೆದುರು ಎಂದೂ ತೋರಿಸುತ್ತಿರಲಿಲ್ಲ. ಸುಸಂಸ್ಕೃತಿಯೇ ಸೌಂದರ್ಯ ಅಧಿಕಾರವನ್ನು ಅಂಟಿಸಿಕೊಂಡು ಕೆಲವರು ದೊಡ್ಡವರಾಗುತ್ತಾರೆ. ಇನ್ನು ಕೆಲವರು ಅಧಿಕಾರವನ್ನು ಮೈಗೆ ಅಂಟಿಸಿಕೊಳ್ಳದೆ ದೊಡ್ಡವರಾಗುತ್ತಾರೆ. ಅಧಿಕಾರವನ್ನು ತಮಗೆ ಅಂಟಿಸಿಕೊಳ್ಳದವರನ್ನು ಜನರು ನೆನೆಯುತ್ತಾರೆ. ಅಂಟಿಸಿಕೊಂಡವರನ್ನು ಅವರು ಮರೆಯುತ್ತಾರೆ. ಇಲ್ಲೊಬ್ಬ ಶ್ರೀಮಂತ ದೇಶದ ನಾಯಕ. ಯಾವ ಹಮ್ಮು-ಬಿಮ್ಮುಗಳಿಲ್ಲದೇ ತನ್ನ ಪಾಡಿಗೆ ತಾನು ತೊಡುವ ಬೂಟಿಗೆ ಪಾಲಿಶ್ ಹಚ್ಚುತಿದ್ದ. ಇದನ್ನು ಕಂಡು ಅವನ ಗೆಳೆಯನೊಬ್ಬ ಅಣಕಿಸುತ್ತಾ ಕೇಳಿದ: ಇದೇನು ನಾಯಕರೇ! ನಿಮ್ಮ ಬೂಟಿಗೆ ನೀವೇ ಪಾಲಿಶ್ ಹಚ್ಚುತ್ತಿದ್ದೀರಿ! ಅದಕ್ಕೆ ನಸುನಕ್ಕ ನಾಯಕ ಉತ್ತರಿಸಿದ: ಹೌದು... ಹೌದು, ನನ್ನ ಬೂಟಿಗೆ ನಾನೇ ಪಾಲಿಶ್ ಮಾಡಿಕೊಳ್ಳುತ್ತೇನೆ. ನೀವು ನಿತ್ಯ ಯಾರ ಬೂಟಿಗೆ ಪಾಲಿಶ್ ಮಾಡುತ್ತೀರಿ? ಕೆಣಕಿದವನ ಬೆನ್ನ ಮೇಲೆ ಕೈ ಹಾಕಿ ಪಾರ್ಲಿಮೆಂಟಿನತ್ತ ಹೊರಟ. ನಾಲ್ಕು ಹೆಜ್ಜೆ ನಡೆದ ನಂತರ ಗೆಳೆಯ ತನ್ನ ತಲೆಹರಟೆತನಕ್ಕೆ ನಾಚಿ, ನಾಯಕನ ಕಡೆ ದೇಶಾವರಿ ನಗೆ ಬೀರಿ ಕಾರು ಹತ್ತಿಸಿ ಬೀಳ್ಕೊಟ್ಟ. ನಾಯಕ ತಾನು ಬರುತ್ತಿದ್ದ ಮಾರ್ಗದಲ್ಲಿ ಕತ್ತೆಯೊಂದು ಮಾರ್ಗ ತಪ್ಪಿ ಚರಂಡಿಯಲ್ಲಿ ಬಿದ್ದು ಸಂಕಟಪಡುತ್ತಿದ್ದುದನ್ನು ಕಂಡ. ಒಡನೆ ಇಳಿದು ಅದನ್ನು ಪಾರುಮಾಡಲು ಧಾವಿಸಿದ. ಹಾದಿಹೋಕರ ಸಹಾಯ ಯಾಚಿಸಿ ಕತ್ತೆಯನ್ನು ಚರಂಡಿಯಿಂದ ಎತ್ತಿ ರಕ್ಷಿಸಿದ. ಪ್ರಥಮೋಪಚಾರದಿಂದ ಕತ್ತೆಯ ಕಾಲಿಗೆ ಬಲಬಂತು. ನಿಂತುಕೊಂಡು, ಒಮ್ಮೆ ಗುಟುರು ಹಾಕಿ ಹೆಜ್ಜೆ ಮುಂದಿಟ್ಟಿತು. ನಾಯಕನಿಗೆ ಸಮಾಧಾನವಾಗಿ ಮತ್ತೆ ಕಾರು ಏರಿ ಪಾರ್ಲಿಮೆಂಟಿನತ್ತ ಹೊರಟ. ಅಧಿವೇಶನದ ವೇಳೆಯಾಗಿದ್ದರಿಂದ ಕತ್ತೆಯನ್ನು ಕಾಪಾಡುವ ಭರದಲ್ಲಿ ಸೂಟು ಕೊಂಚ ಮಲಿನವಾಗಿದ್ದರೂ ಲೆಕ್ಕಿಸದೆ ಸಕಾಲಕ್ಕೆ ಹಾಜರಾದ. ಆದರೂ ಒಳ ಬಂದು ಪ್ರಶ್ನೋತ್ತರ ವೇಳೆಗೆ ಉತ್ತರಿಸುವಲ್ಲಿ ಕೆಲ ನಿಮಿಷ ವಿಳಂಬವಾಯಿತು. ವಿರೋಧ ಪಕ್ಷದವರ ಮುಂದೆ ಸದನದಲ್ಲಿ ತಡವಾದುದಕ್ಕೆ ಕಾರಣ ಹೇಳಿ, ತಾನು ತೊಟ್ಟ ಬಟ್ಟೆ ಮಲಿನವಾಗಿರುವುದಕ್ಕೆ ವಿವರಣೆ ನೀಡಿದ. ಈತನ ಪ್ರಾಮಾಣಿಕತೆಗೆ ಹೋ...! ಎಂದು ಸೆನೆಟರುಗಳು ಲೇವಡಿ ಮಾಡಿ ಕತ್ತೆಭಾರ ಹೊತ್ತ ನಾಯಕನೇ ಎಂದು ಹುಯಿಲೆಬ್ಬಿಸಿದರು. ನೀವು ಈ ಕಾರ್ಯಕ್ಕೇ ಲಾಯಕ್ಕಾದ ದೊರೆ ಎಂದರು. ಕತ್ತೆ ಪ್ರಿಯನೆ ಎಂದರು. ಆಗ ಈ ನಾಯಕ ವಿಚಲಿತನಾಗದೆ ಒಂದು ಮಾತು ಹೇಳಿದ: ನಿಜ... ನಿಜ... ನೀವಾಡುವ ಮಾತೇ ಸತ್ಯ, ಸದನದಲ್ಲಿ ಇಂತಹ ಕೊಳಕು ಮಾತು ಹೇಳುವ ನಿಮ್ಮಂತಹ ಹಂದಿಗಳಿಗಿಂತ, ಕೊಳಕುತನದಿಂದ ಹೊರಬಂದು ಭಾರ ಹೊರುವ ಆ ಕತ್ತೆಯೇ ನನಗೆ ಲೇಸು ಎಂದು ಬಿಟ್ಟ. ಹೀಗೆ ದಿಟ್ಟವಾಗಿ ಉತ್ತರಿಸಿದವನೇ ಅಮೆರಿಕದ ಅಧ್ಯಕ್ಷನಾಗಿದ್ದ ಏಬ್ರಹಂ ಲಿಂಕನ್. ಏಬ್ರಹಾಂ ಲಿಂಕನರು ಅಧಿಕಾರದ ಕೆಸರಿನಲ್ಲಿದ್ದರೂ ಅದನ್ನು ತಮ್ಮ ಮೈಗೆ ಅಂಟಿಸಿಕೊಳ್ಳಲಿಲ್ಲ. ಕೆಸರಿನಲ್ಲಿ ಅರಳಿದ ಕಮಲದಂತೆ ಅಧಿಕಾರದಲ್ಲಿದ್ದೂ ಸರಳವಾಗಿ ಬಾಳಿದರು. ಸರಳ ಹೃದಯದವನಾಗಿರಲು, ಸರಳವಾದ ಹವ್ಯಾಸಗಳನ್ನು ಹೊಂದಿರಲು, ಸರಳವಾದ ಚಾರಿತ್ರ್ಯದಿಂದ ಕೂಡಿರಲು ಅಭ್ಯಾಸ ಮಾಡು ಎಂಬುದಾಗಿ ಝರತುಷ್ಟ್ರ ಹೇಳಿದ್ದಾರೆ. ಕೀರ್ತಿ ಏಕೆ ಬೇಕು? ಮನುಷ್ಯ ನೆಮ್ಮದಿಯಿಂದಿರಲು ಮೊದಲ ಹೆಜ್ಜೆಯೇ ಅಹಂಕಾರವನ್ನು ತೊರೆದು ಸರಳವಾಗಿರುವುದು. ಇಂತಹ ಸುಂದರ, ಅಗಾಧ, ಅಸೀಮ ಪ್ರಪಂಚದಲ್ಲಿ ನಾವು ಅಹಂಕಾರಿಗಳಾಗಿರುವುದಾದರೂ ಹೇಗೆ? ಜಗತ್ತಿನಲ್ಲಿ ಒಂದು ಹುಲ್ಲುಕಡ್ಡಿಯನ್ನಾಗಲಿ, ಕ್ಷುದ್ರಜಂತುವನ್ನಾಗಲಿ ಸೃಷ್ಟಿಸುವ ಸಾಮರ್ಥ್ಯ ನಮಗಿಲ್ಲ. ನಮ್ಮ ಜೀವನಾಧಾರವಾದ ನೀರನ್ನಾಗಲಿ, ಗಾಳಿಯನ್ನಾಗಲಿ ಉತ್ಪಾದಿಸುವ ಶಕ್ತಿಯೂ ನಮ್ಮಲ್ಲಿಲ್ಲ. ಇಂತಹದರಲ್ಲಿ ನಾನು ಅದನ್ನು ಮಾಡಿದ್ದೇನೆ, ನಾನು ಇದನ್ನು ಮಾಡಿದ್ದೇನೆ ಎಂಬುದಾಗಿ ಅಹಂಕಾರ ಪಡುವುದರಲ್ಲಿ ಏನಾದರೂ ಅರ್ಥವಿದೆಯೇ? ಜಗತ್ತಿನಲ್ಲಿ ತಾನೊಬ್ಬ ಪ್ರಸಿದ್ಧ ವ್ಯಕ್ತಿಯಾಗಬೇಕೆಂಬ ಮನುಷ್ಯನ ಅಪೇಕ್ಷೆ ಬಹಳ ಪುರಾತನವಾದದ್ದು. ಸಮಾಜದಲ್ಲಿ ಮನ್ನಣೆ, ಮಾನ್ಯತೆ ಪಡೆಯಬೇಕೆಂಬ ಹಂಬಲ ಮನುಷ್ಯನನ್ನು ಸದಾ ಕಿತ್ತು ತಿನ್ನುತ್ತಿದೆ. ತನ್ನ ಪ್ರಸಿದ್ಧಿಗಾಗಿ ಇಲ್ಲಸಲ್ಲದ ಕೆಲಸವನ್ನು ಆತ ಮಾಡುತ್ತಾನೆ. ಆಗ ಸರಳತೆ ನಾಶವಾಗಿ ಕೃತಕತೆ, ಕಪಟತೆ ಆತನ ಜೀವನದಲ್ಲಿ ನುಸುಳುತ್ತದೆ. ತನ್ನ ಹೆಸರು ನಾಡಿನಾದ್ಯಂತ ಹಬ್ಬಬೇಕೆಂದು ಮನುಷ್ಯ ಹಂಬಲಿಸುತ್ತಾನೆ. ಮನುಷ್ಯನಲ್ಲಿರುವ ಆ ಅದಮ್ಯ ಆಸೆಯನ್ನು ಕವಿ ಷೆಲ್ಲಿ ತನ್ನ ಒಂದು ಪದ್ಯದಲ್ಲಿ ಅಜರಾಮರಗೊಳಿಸಿದ್ದಾನೆ: ನಾನು ಏನು ಪರಿವೀಕ್ಷಣೆ ಮಾಡುತ್ತಿರುವೆನೋ, ಅದೆಲ್ಲದರ ದೊರೆ ನಾನು! ಷೆಲ್ಲಿಯ ಒಝಮಿಯಾಂಡಿಸ್ ಪ್ರತಿಯೊಬ್ಬ ಮನುಷ್ಯನಲ್ಲಿಯೂ ಇದ್ದೇ ಇದ್ದಾನೆ. ತಾನು ಎಷ್ಟೇ ದಿನ ಇರಲಿ, ತನ್ನ ಹೆಸರಿಗೆ ಚಿರಂತನತೆ ಬರಬೇಕೆನ್ನುವ ಆಸೆ-ಆಕಾಂಕ್ಷೆ ಪ್ರತಿಯೊಬ್ಬಲ್ಲಿಯೂ ಇದ್ದೇ ಇದೆ. ತಾನು ಹೆಸರುವಾಸಿಯಾಗಬೇಕೆಂಬ ಹಪಾಹಪಿಯೇ ಆತನನ್ನು ಅಶಾಂತನನ್ನಾಗಿ ಮಾಡುತ್ತದೆ. ಈ ದೇಶದ ಮಾಜಿ ಪ್ರಧಾನಿಯೊಬ್ಬರು ಭವಿಷ್ಯದಲ್ಲಿ ತನ್ನ ಹೆಸರು ಅಜರಾಮರವಾಗಬೇಕೆಂಬ ಉದ್ದೇಶದಿಂದ ತಮ್ಮನ್ನು ತಾವೇ ಸ್ತುತಿಸಿ ಬರೆದು ಅದನ್ನು ನೆಲದಲ್ಲಿ ಹೂತಿಟ್ಟಿದ್ದಾರೆ. ಇಂತಹವರನ್ನು ನೋಡಿಯೇ ಡಿ.ವಿ.ಜಿ.ಯವರು ಹೇಳುತ್ತಾರೆ- ಹೆಸರು ಹೆಸರೆಂದು ನೀಂ ಬಸವಳಿವುದೇಕಯ್ಯ?| ಕಸದೊಳಗೆ ಕಸವಾಗಿ ಹೋಹನಲೆ ನೀನು?|| ಮುಸುಕಲೀ ಧರೆಯ ಮರೆವೆನ್ನನ್ ಎನ್ನುತ ಬೇಡು|| ಮಿಸುಕದಿರು ಮಣ್ಣಿನಲಿ- ಮಂಕುತಿಮ್ಮ ಹೆಸರು ಹೆಸರೆಂದು ಏತಕ್ಕಾಗಿ ನೀನು ಮೈಮರೆತು ಕೊರಗುವೆ? ಒಂದಲ್ಲ ಒಂದು ದಿನ ನೀನು ಈ ಜಗತ್ತಿನ ಕಸದೊಳಗೆ ಕಸವಾಗಿ ನಿನ್ನ ಇರುವಿಕೆಯ ಕುರಹೇ ಇಲ್ಲದಂತೆ ಹೊರಟುಹೋಗುತ್ತೀಯೆ. ಅದರ ಬದಲು ಈ ಜಗತ್ತಿನ ಮರೆವು ನನ್ನನ್ನು ಆವರಿಸಲೆಂದು ಬೇಡಿಕೊ. ಮಣ್ಣಿನಲ್ಲಿ ಕದಲದೇ ಮಲಗಿರು. ಅವರು ಮುಂದುವರಿದು ಹೇಳುತ್ತಾರೆ- ಅಕ್ಕಿಯೊಳಗನ್ನವನು ಮೊದಲಾರು ಕಂಡವರು?| ಅಕ್ಕರದ ಬರಹಕ್ಕೆ ಮೊದಲಿಗನದಾರು?|| ಲೆಕ್ಕವಿರಿಸಿಲ್ಲ ಜಗ ತನ್ನಾದಿ ಬಂಧುಗಳ| ದಕ್ಕುವುದೆ ಜಸ ನಿನಗೆ? -ಮಂಕುತಿಮ್ಮ|| ಅಕ್ಕಿಯಿಂದ ಅನ್ನವನ್ನು ಮಾಡಿ ಉಂಡರೆ ಚೆಂದವೆಂದು ಮೊತ್ತ ಮೊದಲಿಗೆ ಕಂಡುಹಿಡಿದವರು ಯಾರು? ಈ ಅಕ್ಷರಗಳನ್ನು ಹೀಗೆ ಹೀಗೆಯೇ ಬರೆಯಬೇಕೆಂದು ಮೊದಲು ಯಾರು ಗೊತ್ತುಪಡಿಸಿದರು? ಮೊದಲ ಬಾರಿಗೆ ಲೋಕೋಪಕಾರ ಮಾಡಿದ ವ್ಯಕ್ತಿಗಳನ್ನೇ ಜನರು ಪರಿಗಣನೆಗೆ ತೆಗೆದುಕೊಂಡಿಲ್ಲದಿರುವಾಗ ನಿನಗೆ ಕೀರ್ತಿ ದೊರಕುವುದೆಂದು ಹೇಗೆ ಭಾವಿಸುತ್ತೀಯೆ? ಸಾಧನೆಯದೇ ಮಹತ್ತ್ವ ಕೆಲವರು ಏನನ್ನೂ ಮಾಡಿರುವುದಿಲ್ಲ. ಆದರೆ ಎಲ್ಲ ಮಾಡಿದವರಿಗಿಂತಲೂ ತಾವೇ ದೊಡ್ಡವರೆಂದು ಅವರು ತೋರಿಸಕೊಳ್ಳಬೇಕೆನ್ನುತ್ತಾರೆ. ಇನ್ನು ಕೆಲವರು ಇರುತ್ತಾರೆ, ಎಲ್ಲವನ್ನೂ ತಾವೇ ಮಾಡಿದ್ದರೂ ಕೂಡ ತಾವು ಏನೊಂದನ್ನೂ ಮಾಡಲಿಲ್ಲವೆಂಬಂತೆ ಅವರು ತಮ್ಮ ವರ್ತನೆ ಇರಿಸಿಕೊಂಡಿರುತ್ತಾರೆ. ಒಂದು ದೇವಸ್ಥಾನಕ್ಕೆ ಒಂದು ಸಣ್ಣ ಟ್ಯೂಬ್‍ಲೈಟ್ ಕೊಡಿಸಿದವರು, ಅದರ ಮೇಲೆ ತಮ್ಮ ಹೆಸರನ್ನು ಹಾಕಿಸಿಕೊಂಡು, ಕೋಣೆಯನ್ನೆಲ್ಲ ಕತ್ತಲೆಯನ್ನಾಗಿಸಿ ತಾವು ಚಿರಂಜೀವಿಗಳೆನಿಸಿಕೊಳ್ಳಬೇಕೆನ್ನುತ್ತಾರೆ. ಆದರೆ, ಸಾವಿರಾರು ವರ್ಷಗಳಿಂದ ನಾಡಿಗೆಲ್ಲ ಅಭಯವನ್ನು ಹೇಳುತ್ತ ನಿಂತಿರುವ ಗೊಮ್ಮಟೇಶ್ವರ ಮೂರ್ತಿಯನ್ನು ಕಟೆದ ಶಿಲ್ಪಿ ಯಾರು? - ಎನ್ನುವುದು ಇದುವರೆಗೆ ಯಾರೊಬ್ಬರಿಗೂ ಗೊತ್ತಿಲ್ಲ. ಆ ಮೂರ್ತಿಯನ್ನು ಕಟೆದ ಶಿಲ್ಪಿಯನ್ನು ಸಂಮಾನಿಸಬೇಕೆಂದು ದೊರೆ ಅವನನ್ನು ಹುಡುಕಿಸಿದಾಗ ಆ ಮನುಷ್ಯ ತನ್ನ ನಿವಾಸದಲ್ಲಿ ಇರಲೇ ಇಲ್ಲ. ಲೋಕಕ್ಕೇ ಕಾಣುವಂಥ ಕೆಲಸ ಮಾಡಿದ್ದೇನೆ, ನಾನೇಕೆ ಕಾಣಿಸಿಕೊಳ್ಳಬೇಕು ಎಂದು ಹೇಳಿ ಅವನು ಕಣ್ಮರೆಯಾಗಿಹೋಗಿದ್ದ. ಸ್ವಂತವನ್ನು ನಿರಾಕರಿಸಿಕೊಳ್ಳುವ ಇಂಥ ಮಹೋಜ್ಜ್ವಲ ಘಟನೆ ಸರಳತೆಗೊಂದು ಒಳ್ಳೆಯ ಉದಾಹರಣೆ. ದೊಡ್ಡ ದೊಡ್ಡ ಕಲಾಕೃತಿಗಳ ರಚನಕಾರರೇ ತಮ್ಮ ಹೆಸರುಗಳನ್ನು ಎಲ್ಲೂ ನಮೂದಿಸಿಲ್ಲ. ಆದರೆ ನಾವು ಇವತ್ತು ದೊಡ್ಡ ಕಲಾಕೃತಿಗಳ ಮೇಲೆ ನಮ್ಮ ಹೆಸರನ್ನು ಗೀಚಿಕೊಂಡು ಸಣ್ಣವರಾಗುತ್ತೇವೆ. ಸಣ್ಣ ಜನರು ಮಾತ್ರ ಇಂತಹ ಕ್ಷುದ್ರ ಕೆಲಸವನ್ನು ಮಾಡುತ್ತಾರೆ. ಅವರು ಮಾಡಿದರೆ, ಸರಿಯಿರುವುದನ್ನು ಕೆಡಿಸುವಂಥದೊಂದನ್ನೇ ಮಾಡುತ್ತಾರಲ್ಲದೆ, ಸರಿಪಡಿಸುವಂಥದನ್ನೇನೂ ಮಾಡುವುದಿಲ್ಲ. ಮನುಷ್ಯನ ದೊಡ್ಡಸ್ತಿಕೆ ಆತನ ಅಂತಸ್ತಿನಲ್ಲಿಲ್ಲ, ಬದಲಿಗೆ ಆತನ ಸರಳತೆಯಲ್ಲಿದೆ. ನಮ್ಮಲ್ಲಿ ಎಷ್ಟೇ ಸಂಪತ್ತಿದ್ದರೂ, ನಾವು ಎಂತಹ ಉನ್ನತ ಅಧಿಕಾರದಲ್ಲಿದ್ದರೂ, ನಾವು ಎಷ್ಟೇ ಜ್ಞಾನಿಗಳಾಗಿದ್ದರೂ, ನಾವು ಎಷ್ಟೇ ಸ್ಫುರದ್ರೂಪಿಗಳಾಗಿದ್ದರೂ ನಮ್ಮಲ್ಲಿ ಸರಳತೆ ಇಲ್ಲದಿದ್ದರೆ ಎಲ್ಲವೂ ವ್ಯರ್ಥ. ನಿಜವಾಗಿ ನೋಡಿದರೆ ಸಂಪತ್ತಿಗೆ, ಅಧಿಕಾರಕ್ಕೆ, ಜ್ಞಾನಕ್ಕೆ, ಸೌಂದರ್ಯಕ್ಕೆ ಬೆಲೆ ಬರುವುದೇ ಸರಳತೆಯಿಂದ. ಆದ್ದರಿಂದ ಜಗತ್ತಿನಲ್ಲಿ ಶ್ರೀಮಂತರನ್ನು, ಅಧಿಕಾರಿಗಳನ್ನು, ಸ್ಫುರದ್ರೂಪಿಗಳನ್ನು ದ್ವೇಷಿಸುವ ಜನರಿರಬಹುದು. ಆದರೆ ಸರಳ ವ್ಯಕ್ತಿಗಳನ್ನು ದ್ವೇಷಿಸುವವರು ವಿರಳ. ಸರಳ ವ್ಯಕ್ತಿಗಳನ್ನು ಎಲ್ಲರೂ ಮೆಚ್ಚುವವರೇ. ಮನುಷ್ಯ ನಿಜವಾಗಿ ಗೌರವ ಕೊಡುವುದು ಸರಳತೆಗೇ ವಿನಾ ಅಹಂಕಾರಕ್ಕಲ್ಲ. ಅಹಂಕಾರ ಇತರರು ದ್ವೇಷಿಸುವಂತೆ ಮಾಡಿದರೆ ಸರಳತೆ ಇತರರು ಪ್ರೀತಿಸುವಂತೆ ಮಾಡುತ್ತದೆ. ನಮ್ರತೆ ಇರಲಿ ಹಿಂದೀ ಚಲನಚಿತ್ರರಂಗದ ಶ್ರೇಷ್ಠ ನಟ ದಿಲೀಪ್‍ಕುಮಾರ್ ಒಂದಾನೊಂದು ಕಾಲದಲ್ಲಿ ಭಾರತದಾದ್ಯಂತ ಜನಪ್ರಿಯ ಸಿನೆಮಾ ಹೀರೋ. ಅದರಲ್ಲೂ ಯುವಕರ ಆರಾಧ್ಯ ನಟ. ಆ ಬಗ್ಗೆ ಅವರಿಗೇ ಸ್ವತಃ ಅಭಿಮಾನ ಇತ್ತು. ಒಮ್ಮೆ ಅವರು ವಿಮಾನದಲ್ಲಿ ಪ್ರಯಾಣಿಸುವಾಗ ಆ ವಿಮಾನದಲ್ಲಿದ್ದ ಪ್ರತಿಯೊಬ್ಬರೂ ಅವರ ಬಳಿ ಬಂದು ಅಭಿನಂದಿಸಿ, ಆಟೋಗ್ರಾಫ್ ಪಡೆದು ಹೋದರು. ಆದರೆ ಪಕ್ಕದಲ್ಲೇ ಕುಳಿತಿದ್ದ ಹಿರಿಯರೊಬ್ಬರು ಇದಾವುದರ ಪರಿವೆಯೂ ಇಲ್ಲದೆ ತಮ್ಮಷ್ಟಕ್ಕೆ ತಾವು ಶಾಂತಮುದ್ರೆಯಲ್ಲಿ ಇದ್ದರು. ದಿಲೀಪ್‍ಕುಮಾರರಿಗೆ ತಡೆದುಕೊಳ್ಳಲಾಗಲಿಲ್ಲ, ಅವರೊಡನೆ ಮಾತಿಗಿಳಿದರು. ನನ್ನ ಪರಿಚಯವಾಗಲಿಲ್ಲವೇ? ಎಂದು ಆ ಹಿರಿಯರನ್ನು ಕೇಳಿದರು. ಇಲ್ಲವಲ್ಲ ಎಂದರಾತ. ನಾನು ದಿಲೀಪ್‍ಕುಮಾರ್ ಎಂದರು ಇವರು. ಓಹ್ ತುಂಬ, ಸುಂದರ ಹೆಸರು! ಭಾರತದಲ್ಲಿ ಎಲ್ಲರೂ ನನ್ನನ್ನು ಬಲ್ಲರು. ಏಕೆಂದರೆ ನಾನು ಹಿಂದೀ ಸಿನೆಮಾದಲ್ಲಿ ಹೀರೋ. ಸಾರಿ, ಮಗೂ. ನಾನು ಸಿನೆಮಾ ನೋಡುವುದಿಲ್ಲ. ದಿಲೀಪ್‍ಕುಮಾರರಿಗೆ ನಿರಾಸೆಯಾಯಿತು. ಅನಂತರ ನೀವೇನು ಮಾಡುತ್ತಿದ್ದೀರಿ? ಎಂದು ಅವರನ್ನು ಕೇಳಿದರು. ನನ್ನದು ಒಂದು ಸಣ್ಣ ಉದ್ಯಮ ಇದೆ. ತಮ್ಮ ಹೆಸರು? ಜೆ.ಡಿ.ಬಿರ್ಲಾ. ಘನಶ್ಯಾಮ್ ಎಂದು ಕರೆಯುತ್ತಾರೆ. ಈಗ ದಿಲೀಪ್‍ಕುಮಾರರಿಗೆ ಆಕಾಶವೇ ಕಳಚಿ ತಲೆ ಮೇಲೆ ಬಿದ್ದಂತಾಯಿತು. ತಾನು ಎಂಥ ಮಹಾನ್ ಪುರುಷನ ಪಕ್ಕದಲ್ಲಿ ಕುಳಿತಿದ್ದೇನೆ. ಆದರೆ ನನಗೆ ಇವರ ಪರಿಚಯವೇ ಆಗಲಿಲ್ಲವಲ್ಲ. ಎಂಥ ವಿನಮ್ರತೆ, ಸರಳತೆ ಈ ಮಹಾನ್ ವ್ಯಕ್ತಿಯಲ್ಲಿ! ಅವರ ಅಹಮಿಕೆ ಝರ್ರನೆ ಇಳಿಯಿತು. ವಿನಮ್ರತೆಯಿಂದ ಜೆ.ಡಿ. ಬಿರ್ಲಾ ಅವರ ಪಾದ ಮುಟ್ಟಿ ನಮಸ್ಕರಿಸಿ, ಸಾರಿ, ಕ್ಷಮಿಸಿರಿ, ಗೊತ್ತಾಗಲಿಲ್ಲ ಎಂದರು. ಅಯ್ಯೋ, ಕ್ಷಮೆ ಯಾಕೆ? ನೀವೇನೂ ತಪ್ಪೇ ಮಾಡಿಲ್ಲವಲ್ಲ?-ಎಂದರು, ಬಿರ್ಲಾ. ಆದರೆ ದಿಲೀಪ್‍ಕುಮಾರರಿಗೆ ತಾನು ಮಾಡಿದ ತಪ್ಪಿನ ಅರಿವಾಗಿತ್ತು. ಮಹಾಪುರುಷರ ಸ್ವಭಾವವೇ ಹಾಗೆ. ಸರಳತೆ, ಸಜ್ಜನಿಕೆ, ನಿರಾಡಂಬರತೆ, ಅಹಂಕಾರಶೂನ್ಯತೆ, ಶಾಂತತೆ, ಮುಗ್ಧತೆ, ವಿನಮ್ರತೆಗಳು ಅವರ ಸಹಜ ಸ್ವಭಾವ. ತುಂಬಿದ ಕೊಡ ತುಳುಕುವುದಿಲ್ಲ ಎನ್ನುವ ಮಾತಿನಂತೆ ಜಗತ್ತಿನ ಕೆಲವು ಶ್ರೀಮಂತರು ಪ್ರದರ್ಶನ, ಆಡಂಬರ ಇಲ್ಲದೆ ಸರಳವಾಗಿ ಬದುಕುತ್ತಿದ್ದಾರೆ. ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಯಾದ ವಾರನ್ ಬಫೆಟ್‍ರ ಜೀವನ ತುಂಬಾ ಸರಳ. ಇಂದಿಗೂ ಮೂರು ಬೆಡ್ರೂಂನ ಒಂದು ಮನೆ ಬಿಟ್ಟರೆ ಬೇರೆ ಬಂಗಲೆಗಳು ಅವರಲ್ಲಿ ಇಲ್ಲ. ಕೈಗೊಬ್ಬ, ಕಾಲಿಗೊಬ್ಬ ಆಳುಗಳಿಲ್ಲ. ಈ ದೇಶದ ಯಶಸ್ವಿ ಉದ್ಯಮಿಯಾಗಿದ್ದ ನಾರಾಯಣಮೂರ್ತಿಯವರು ಇಂದಿಗೂ ತಮ್ಮ ಎರಡು ಬೆಡ್‍ರೂಂನ ಹಳೆಮನೆಯಲ್ಲಿಯೇ ವಾಸಿಸುತ್ತಿದ್ದಾರೆ. ತಮ್ಮ ಮನೆಯ ಟಾಯ್ಲೆಟ್‍ನ್ನು ತಾವೇ ಶುಚಿಗೊಳಿಸುತ್ತಾರೆ. ನಾರಾಯಣಮೂರ್ತಿಯವರಾಗಲಿ, ಬಫೆಟ್‍ರಾಗಲಿ ಹಣದ ಮತ್ತನ್ನು ತಲೆಗೇರಿಸಿಕೊಳ್ಳಲಿಲ್ಲ. ಹಣ ಅವರನ್ನು ಆಳಲಿಲ್ಲ. ಬದಲಿಗೆ ಹಣವನ್ನು ಅವರು ಆಳಿದರು. ಸಹಜತೆಯೇ ಸಮುನ್ನತಿ ಇವತ್ತು ತೋರಿಕೆಯ ನಡತೆಯೇ ನಿಜವಾದ ವ್ಯಕ್ತಿತ್ವ ಎಂದು ಭಾವಿಸುವವರೇ ಜಾಸ್ತಿ. ನಡೆಯಲ್ಲಿ ದಡ್ಡರಾಗಿ ನುಡಿಯಲ್ಲಿ ಜಾಣರೆನಿಸಿದವರು ಅನೇಕರಿದ್ದಾರೆ. ಮಾತಿನಲ್ಲೆ ಮಂಡಿಗೆ ತಿನ್ನಿಸುವವರೂ ಇದ್ದಾರೆ, ಹೊಟ್ಟೆ ತುಂಬಿಸುವವರೂ ಇದ್ದಾರೆ. ನಾವು ಬಾಳಿ ಬದುಕುತ್ತಿರುವ ಇಂದಿನ ಸಮಾಜದಲ್ಲಿ ಸರಳತೆಗಿಂತ ಆಡಂಬರವೇ ಚಲಾವಣೆಯಲ್ಲಿರುವ ನಾಣ್ಯ. ಎಲ್ಲ ಕಡೆ ನಕಲಿ ನೋಟುಗಳೇ ಚಾಲ್ತಿಯಲ್ಲಿರುವಾಗ ಅಸಲಿ ನೋಟುಗಳನ್ನು ಕೇಳುವವರು ಯಾರು? ತೋರಿಕೆಯಲ್ಲಿ ಸತ್ಯ ಇಲ್ಲ ಎನ್ನುವುದನ್ನು ಎಲ್ಲರೂ ಬಲ್ಲರು. ತೋರಿಸಿಕೊಂಡರೆ ನಮ್ಮ ಹುಳುಕು ಮುಚ್ಚಿಹೋಗುವುದೆಂದು ಎಲ್ಲರೂ ತಿಳಿದುಕೊಂಡಿದ್ದಾರೆ. ಆದರೆ ಸತ್ಯವನ್ನು ಶಾಶ್ವತವಾಗಿ ಮುಚ್ಚಿಡುವುದಕ್ಕೆ ಸಾಧ್ಯವೇ? ಅದು ಮುಚ್ಚಿಕೊಂಡಷ್ಟು ತೆರೆದುಕೊಳ್ಳುತ್ತದೆ. ಸೋಗಿನ ಬದುಕಿನಬ್ಬರದಲ್ಲಿ ಸರಳತೆ ಅನಾಥವಾಗಿದೆ. ಎಲ್ಲ ಕಡೆ ಕೃತಕತೆ, ಕಪಟತೆ ವಿಜೃಂಭಿಸುತ್ತಿದೆ. ಎಲ್ಲಿ ಸಹಜತೆ ಇಲ್ಲವೋ ಅಲ್ಲಿ ಕೃತಕತೆ ನುಸುಳುತ್ತದೆ. ಎಲ್ಲಿ ನೈಜತೆ ಇಲ್ಲವೋ ಅಲ್ಲಿ ಅನೃತ ಮೆರೆಯುತ್ತದೆ. ಕುರೂಪಿಗಳಿಗೆ ಮಾತ್ರ ಸುಂದರವಾಗಿ ಕಾಣಲು ಸೌಂದರ್ಯ ಪ್ರಸಾಧನದ ಆವಶ್ಯಕತೆ ಇದೆ. ಕುರೂಪಿಗಳು ಸುಂದರರಂತೆ, ಅಜ್ಞಾನಿಗಳು ಜ್ಞಾನಿಗಳಂತೆ, ಸಣ್ಣವರು ದೊಡ್ಡವರಂತೆ ತೋರಿಸಿಕೊಳ್ಳಲು ಸದಾ ಪ್ರಯತ್ನಿಸುತ್ತಿರುತ್ತಾರೆ. ನಿಜವಾಗಿಯೂ ದೊಡ್ಡವರಲ್ಲದ ಜನರ ತಲೆಯಲ್ಲಿ ದೊಡ್ಡವರಂತೆ ಕಾಣಿಸಿಕೊಳ್ಳುವ ವಿಚಾರಗಳು ತುಂಬಿಕೊಂಡಿರುತ್ತವೆ. ರೋಗಕ್ಕೆ ಔಷಧಿ ಇರಬಹುದು. ಆದರೆ ಇಂತಹ ಸ್ವಭಾವಕ್ಕೆ ಔಷಧಿ ಎಲ್ಲಿ? ತನ್ನದಲ್ಲದ ಬದುಕನ್ನು ತನ್ನದಾಗಿಸಿಕೊಳ್ಳುವ ಗೀಳು ಮನುಷ್ಯನನ್ನು ಸರಳತೆಯಿಂದ ದೂರಕ್ಕೆ ಕೊಂಡೊಯ್ಯುತ್ತದೆ. ನಕಲಿ ಯಾವತ್ತೂ ಅಸಲಿಯಂತೆ ಕಾಣಲು ತಿಣುಕಾಡುತ್ತದೆ. ಚಿನ್ನಕ್ಕೆ ಗಿಲೀಟಿನ ಆವಶ್ಯಕತೆ ಇರುವುದಿಲ್ಲ. ಹಿತ್ತಾಳೆಗೆ ಮಾತ್ರ ಅದು ಬೇಕಾಗಿರುತ್ತದೆ. ಸರಳವಾಗಿ, ಸಹಜವಾಗಿ ಬದುಕಿದರೆ ದೊಡ್ಡವರೇನೂ ಸಣ್ಣವರಾಗುವುದಿಲ್ಲ. ಬದಲಿಗೆ ಅವರ ವ್ಯಕ್ತಿತ್ವಕ್ಕೆ ಅದು ಮೆರುಗನ್ನು ತಂದುಕೊಡುತ್ತದೆ. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕು ಮಲ್ಲಾಡಿಹಳ್ಳಿ ಅನಾಥ ಸೇವಾಶ್ರಮದ ಶ್ರೀ ರಾಘವೇಂದ್ರ ಸ್ವಾಮಿಗಳು ಆಗಾಗ ಹತ್ತಿರದ ಹಳ್ಳಿಗಳಲ್ಲಿ ತಮ್ಮ ಶಿಷ್ಯರೊಂದಿಗೆ ಯೋಗಪ್ರದರ್ಶನ ಕೊಡುತ್ತಿದ್ದರು. ಹೀಗೆಯೇ ಒಮ್ಮೆ ಅಂತಹ ಪ್ರದರ್ಶನ ಚನ್ನಗಿರಿಯ ತಾಲ್ಲೂಕು ಕಛೇರಿಯ ಮುಂಭಾಗದಲ್ಲಿ ನಡೆದಿತ್ತು. ಅದು 1948-49ರಲ್ಲಿ. ಆಗ ಅದನ್ನು ನೋಡಿ ಅಚ್ಚರಿಪಟ್ಟಿದ್ದ ಜಿ. ಗೋವಿಂದರಾಜು ಎಂಬುವರು 1963-64ರ ಸುಮಾರಿನಲ್ಲಿ, ತಾವು ಉಪಾಧ್ಯಾಯರಾಗಿದ್ದ ಅವಧಿಯಲ್ಲಿ, ತಮ್ಮ ಸಹೋದ್ಯೋಗಿಗಳೊಂದಿಗೆ ಮಲ್ಲಾಡಿಹಳ್ಳಿಯ ಆಶ್ರಮಕ್ಕೆ ಭೇಟಿಕೊಟ್ಟರು. ಮಧ್ಯಾಹ್ನ 12 ಗಂಟೆಯ ಸಮಯ. ರಾಘವೇಂದ್ರ ಸ್ವಾಮೀಜಿ ಒಬ್ಬಿಬ್ಬರು ಕೆಲಸಗಾರರೊಂದಿಗೆ ಕಣದಲ್ಲಿ ಹುಲ್ಲು ಎತ್ತಿಹಾಕುತ್ತ, ಎತ್ತುಗಳ ಜೊತೆಗೇ ತಾವೂ ದುಡಿಯುತ್ತಿದ್ದರು. ಪರಸ್ಥಳದಿಂದ ಬಂದ ಅತಿಥಿಗಳನ್ನು ಕಾಣುತ್ತಲೇ ಕೆಲಸದ ಸ್ಥಳದಿಂದ ಜಿಂಕೆಯಂತೆ ಓಡುತ್ತ ಬಂದರು. ಅವರು ಆ ಉರಿಬಿಸಿಲಿನಲ್ಲಿ ಹಾಗೆ ಕೆಲಸ ಮಾಡುತ್ತಿದ್ದುದನ್ನು ಕಂಡು, ಅವರ ಮೈಯಲ್ಲಿ ಬೆವರಿಳಿಯುತ್ತಿದ್ದುದನ್ನು ಕಂಡು ಗೋವಿಂದರಾಜು ಸಹಾನುಭೂತಿಯ ಮಾತು ಹೇಳಬೇಕೆಂದು ಯೋಚಿಸಿದರು: ಸ್ವಾಮೀಜಿ, ವಿಪರೀತ ಬಿಸಿಲು. ತಾವು ಈ ಬಿಸಿಲಲ್ಲೆ ಹೀಗೆ... ಎಂದೇನೋ ಹೇಳಲ ಹೊರಟರು. ತಕ್ಷಣವೇ ಸ್ವಾಮೀಜಿ, ಏನಂದಿರಿ? ನನಗೊಬ್ಬನಿಗೇ ಬಿಸಿಲೇ? ನೋಡಿ, ಆ ಬಸವಣ್ಣಗಳು ಬಿಸಿಲಲ್ಲಿ ದುಡಿಯುತ್ತಿಲ್ಲವೇ? ಎಂದರು. ಒಮ್ಮೆ ಚಿಕಿತ್ಸೆಗಾಗಿ ಸ್ವಾಮೀಜಿ ಶಿವಮೊಗ್ಗೆಯ ಮೆಗ್ಗಾನ್ ಆಸ್ಪತ್ರೆಗೆ ಸೇರಿದ್ದರು. ಗೋವಿಂದರಾಜು ಮತ್ತು ಅವರ ಸ್ನೇಹಿತರು ಸ್ವಾಮಿಗಳನ್ನು ನೋಡಿಹೋಗಲು ಆಸ್ಪತ್ರೆಗೆ ಬಂದರು. ವಿಶೇಷ ವಾರ್ಡಿನಲ್ಲಿರುವುದು ತಿಳಿಯಿತು. ಹೋಗಿ ನೋಡಿದರೆ, ಕೊಠಡಿಯ ತುಂಬ ಅಗರಬತ್ತಿಯ ಕಂಪು ಆವರಿಸಿತ್ತು; ಸ್ವಾಮೀಜಿ ಪದ್ಮಾಸನದಲ್ಲಿ ಕುಳಿತು ಧ್ಯಾನಸ್ಥರಾಗಿದ್ದರು. ಅವರು ಸ್ವಲ್ಪ ಹೊತ್ತಿನ ಮೇಲೆ ಕಣ್ಣು ತೆರೆದು ಬಂದವರೊಂದಿಗೆ ನಗುತ್ತ ಮಾತನಾಡಿದರು. ಆಗ ಗೋವಿಂದರಾಜು ಇದೇನೂ ಸ್ವಾಮೀಜಿ, ತಮಗೆ ತೀವ್ರ ಅನಾರೋಗ್ಯವಾಗಿದ್ದರೂ ಧ್ಯಾನದ ಚಿಂತೆಯೇಕೆ? ಎಂಬುದಾಗಿ ಪ್ರಶ್ನಿಸಿದರು. ಅವರು ಮುಗುಳುನಗತ್ತ, ಹಾಗಲ್ಲ, ಪಕ್ಕದ ಕೊಠಡಿಯಲ್ಲಿ ಒಂದು ಹೆಣ್ಣು ಮಗು ಹೊಟ್ಟೆ ನೋವಿನಿಂದ ತುಂಬ ಒದ್ದಾಡುತ್ತಿದೆ. ಈಗ ತಾನೇ ನೋಡಿಬಂದೆ. ಆ ಮಗುವಿನ ಸಂಕಟ ದೂರವಾಗಲಿ ಎಂಬುದಾಗಿ ಪರಮೇಶ್ವರನನ್ನು ಪ್ರಾರ್ಥಿಸುತ್ತ ಕುಳಿತಿದ್ದೆ ಎಂದರು. ಎನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲ, ನಿಮ್ಮ ಪಾದಸಾಕ್ಷಿ. ಎನ್ನ ಮನಸಾಕ್ಷಿ ಕೂಡಲ ಸಂಗಮದೇವ ಎನಗಿದೇ ದಿವ್ಯ ಎಂಬುದು ಬಸವಣ್ಣನವರ ವಚನ. ಮನೆ ಸಣ್ಣದಿದ್ದರೂ ಮನಸ್ಸು ದೊಡ್ಡದಿರಬೇಕೆಂದು ಬಸವಣ್ಣನವರು ಹೇಳುತ್ತಿದ್ದರು. ಆದ್ದರಿಂದಲೇ ಅವರು ಲೋಕದ ಗುರು ಎನಿಸಿಕೊಂಡರು. ಜಗಜ್ಜ್ಯೋತಿ ಬಸವೇಶ್ವರ ಎಂಬ ಕೀರ್ತಿಗೆ ಪಾತ್ರರಾದವರು. ಮಲ್ಲಾಡಿಹಳ್ಳಿ ಸ್ವಾಮಿಯವರು ಬಸವಣ್ಣನವರ ನುಡಿಯಂತೆ, ನಡೆಯಂತೆ ಸರಳವಾಗಿ ಜೀವಿಸಿದವರು. ಇಂತಹ ಸರಳ ವ್ಯಕ್ತಿಗಳು ಅಲ್ಲಲ್ಲಿ ಇದ್ದುದರಿಂದಲೆ ಉಪ್ಪು ಇನ್ನೂ ತನ್ನ ರುಚಿಯನ್ನು ಉಳಿಸಿಕೊಂಡಿದೆ. ನಸೆನಸೆ-ದುಬಾರಿ ಸರಳ ಜೀವಿಗಳು ತಾವು ಅಸಾಮಾನ್ಯರು ಎಂದು ತೋರಿಸಿಕೊಳ್ಳಲು ಎಂದು ಪ್ರಯತ್ನಿಸುವುದಿಲ್ಲ. ಸಹಜತೆಯಿಂದ, ವಿನಮ್ರತೆಯಿಂದ ಬದುಕುತ್ತಾರೆ. ಕೃತಕತೆ, ಕಪಟತೆ ಅವರಿಗೆ ಒಗ್ಗದ ಸಂಗತಿ. ಸೋಗಿನ ಜೀವನ ಅವರದಲ್ಲ. ಮುಖವಾಡದ ಬದುಕೆಂಬುದೇ ಅವರಿಗೆ ಗೊತ್ತಿಲ್ಲ. ಗಾಂಭೀರ್ಯದ ಮುಸುಕನ್ನು ಅವರೆಂದೂ ಹಾಕಿಕೊಳ್ಳುವುದಿಲ್ಲ. ಅದರ ಆವಶ್ಯಕತೆಯೂ ಅವರಿಗಿಲ್ಲ. ಅದೇನಿದ್ದರೂ ಅವರ ನಡೆ-ನುಡಿ ಸಾದಾ-ಸೀದಾ. ಇಂತಹವರೇ ನಿಜವಾದ ಗೌರವಕ್ಕೆ ಅರ್ಹರು, ಅನುಕರಣೆಗೆ ಯೋಗ್ಯರು. ಏಕೆಂದರೆ ಇಂತಹವರ ಜೀವನದಲ್ಲಿ ತಪ್ಪು ನಡೆಯುವುದಿಲ್ಲ. ಅವರ ನಡತೆ ಎಲ್ಲವೂ ತೆರೆದ ಪುಸ್ತಕದಂತಿರುತ್ತದೆ. ಕೆಲವರು ಸಾತ್ತ್ವಿಕರಾದರೂ ಅವರ ಮಾತಿಗೂ ಕೃತಿಗೂ ಅಜಗಜಾಂತರವಿರುತ್ತದೆ. ವಿ. ಸೀತಾರಾಮಯ್ಯನವರು ಮೈಸೂರು ಮಹಾರಾಜಾ ಕಾಲೇಜು, ಬೆಂಗಳೂರು ಸೆಂಟ್ರಲ್ ಕಾಲೇಜುಗಳಲ್ಲಿ ದಶಕಗಳ ಕಾಲ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ಸಹಸ್ರಾರು ವಿದ್ಯಾರ್ಥಿಗಳ ಪ್ರೀತಿ ಪ್ರಶಂಸೆಗೆ ಪಾತ್ರರಾದವರು. ಒಂದು ಖಾಸಗಿ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸುವುದಕ್ಕೆ ಮೊದಲು ವಿ.ಸೀ. ಬೆಂಗಳೂರು ಆಕಾಶವಾಣಿಯಲ್ಲಿ ಉನ್ನತ ಹುದ್ದೆಯಲ್ಲಿದ್ದು ಶ್ಲಾಘನೀಯವೆಂಬಂತೆ ಕಾರ್ಯನಿರ್ವಹಿಸಿದ್ದೂ ಉಂಟು. ಅಲ್ಲದೇ ವಿ.ಸೀ. ಸಾಹಿತ್ಯದ ನಾನಾ ಪ್ರಕಾರಗಳಲ್ಲಿ ಕೈಯಾಡಿಸಿ ಕೀರ್ತಿ ಪಡೆದವರು. ಕವನ, ನಾಟಕ, ಲಲಿತಪ್ರಬಂಧ, ವಿಮರ್ಶನ ಕೃತಿಗಳನ್ನು ರಚಿಸಿದವರು. ತಮ್ಮ ಕೃತಿಗಳು ಬಲು ಅಚ್ಚುಕಟ್ಟಾಗಿ ಶ್ರೀಮಂತಿಕೆಯಿಂದ ಮುದ್ರಣಗೊಂಡು, ಉಲ್ಲಾಸ ನೀಡುವ ವಿನ್ಯಾಸದಿಂದ ಪ್ರಕಟಗೊಳ್ಳುವಂತೆ ನೋಡಿಕೊಳ್ಳುತ್ತಿದ್ದರು. ಅದರು ಅವರ ಅಭಿರುಚಿಯಾಗಿತ್ತು. ವಿ.ಸೀ. ಅವರ ಕವನಸಂಕಲನವೊಂದನ್ನು ನಿಟ್ಟೂರು ಶ್ರೀನಿವಾಸರಾಯರು ತಮ್ಮ ಸತ್ಯಶೋಧನ ಪ್ರಕಟನಾಲಯದಿಂದ ಹೊರತರುವ ಜವಾಬ್ದಾರಿಯನ್ನು ಹೊತ್ತರು. ಪುಸ್ತಕ ರಚನೆಯಲ್ಲಿ ಇಂಥದೆ ಗಾತ್ರದ ಅಕ್ಷರವನ್ನು ಉಪಯೋಗಿಸಬೇಕು, ಇಂಥದೇ ಕಾಗದವನ್ನು ಬಳಸಬೇಕು, ಮುಖಪುಟದ ವಿನ್ಯಾಸ ಹೀಗೇ ಇರಬೇಕು ಎಂದು ವಿ.ಸೀ. ಆಸೆ ಪಟ್ಟಾಗ ನಿಟ್ಟೂರರು ವಿ.ಸೀ. ಬೆಟ್ಟದಾಸೆಯ ಮಹಾರಸಿಕರಪ್ಪಾ. ಅವರು ಬಯಸಿದಂತೆ ಮುದ್ರಿಸಿ. ಎಷ್ಟೇ ಖರ್ಚಾದರೂ ಚಿಂತೆಯಿಲ್ಲ. ಈ ವಿಚಾರದಲ್ಲಿ ಯಾವ ಕಾರಣದಿಂದಲೂ ಅವರು ಮುಖ ಸಪ್ಪಗೆ ಮಾಡಿಕೊಳ್ಳುವುದು ಕೂಡದು ಎಂದು ಅಚ್ಚುಕೂಟದವರಿಗೆ ಎಚ್ಚರಿಸಿ, ಹೆಚ್ಚಿನ ಖರ್ಚು ವೆಚ್ಚವನ್ನು ಭರಿಸಿ, ಆ ಕವನಸಂಕಲನವನ್ನು ಪ್ರಕಟಿಸಿದರು. ಸಮೃದ್ಧ ಸಿರಿವಂತಿಕೆಯಿಂದ ಸರ್ವಾಂಗಸುಂದರವಾಗಿ ಪ್ರಕಟಗೊಂಡ ಆ ದೀಪಗಳು ಕವನ ಸಂಕಲನ ಕನ್ನಡ ಪುಸ್ತಕಗಳ ಉತ್ಕೃಷ್ಟ ಪರಂಪರೆಗೆ ನಾಂದಿ ಹಾಡಿತು. ಮೊದಲಿನಿಂದಲೂ ಅಷ್ಟೆ. ವಿಪರೀತ ದುಂದುಗಾರಿಕೆಗೆ ಹೆಸರಾದವರು ವಿ.ಸೀ! ಅವರ ಹತ್ತು ಕೈಬೆರಳುಗಳ ನಡುವಣ ಸಂದುಗಳು ಬಲು ದೊಡ್ಡವು. ಬಂದ ಹಣ ಬರುತ್ತಿದ್ದಂತೆಯೇ ಸರಸರನೆ ಸೋರಿಹೋಗುತ್ತಿತ್ತು. ಅರ್ಥಶಾಸ್ತ್ರದಲ್ಲಿ ಪ್ರಕಾಂಡ ಪಾಂಡಿತ್ಯ ಗಳಿಸಿ, ಹಣಪ್ರಪಂಚವೆಂಬ ಅತ್ಯಮೂಲ್ಯ ಗ್ರಂಥವನ್ನು ರಚಿಸಿ, ಲೋಕಕ್ಕೆ ಗಳಿಕೆ ಹಾಗೂ ಉಳಿತಾಯದ ಕುರಿತು ಉಪದೇಶ ನೀಡುತ್ತಿದ್ದ ವಿ.ಸೀ. ತಮ್ಮ ವೈಯಕ್ತಿಕ ಬದುಕಿನುದ್ದಕ್ಕೂ ತಮ್ಮದೇ ತತ್ತ್ವ ಸಿದ್ಧಾಂತಗಳಿಗೆ ಯದ್ವಾತದ್ವಾ ವಿರುದ್ಧವಾಗಿದ್ದುದು ಸೋಜಿಗವೇ ಸರಿ. ಒಂದು ರೂಪಾಯಿ ಕೈ ಸೇರುವ ಮುನ್ನವೇ ಎರಡು ರೂಪಾಯಿ ಖರ್ಚು ಮಾಡುವ ಯೋಚನೆ ಅವರದಾಗಿರುತ್ತಿತ್ತು. ಹಾಗಾಗಿ ಮನೆಯ ಸಂಸಾರವನ್ನು ಸುಗಮವಾಗಿ ಸಾಗಿಸಿ ಸ್ವಲ್ಪ ಸುಖ ಸಲ್ಲಿಸುವುದಕ್ಕೇ ಹಣ ಸಾಕಾಗದೆ ಸಾಕು ಸಾಕಪ್ಪಾ ಎಂದು ನಿಟ್ಟುಸಿರು ಬಿಡುತ್ತಿದ್ದರು. ಆದಾಗ್ಯೂ ಸೀತರಾಮಯ್ಯನವರಿಗೆ ಮನೆಯಲ್ಲಿ ಓದಲು ಇಂಗ್ಲೆಂಡು ಅಮೆರಿಕಗಳಲ್ಲಿ ಪ್ರಕಟವಾಗುತ್ತಿದ್ದ ಮಾಸಪತ್ರಿಕೆಗಳೇ ಬೇಕಿತ್ತು! ಆದಾಯದ ಅರ್ಧದಷ್ಟು ಭಾಗವನ್ನು ಈ ವಿದೇಶೀ ಪತ್ರಿಕೆಗಳಿಗಾಗಿಯೇ ವೆಚ್ಚ ಮಾಡುತ್ತಿದ್ದರು, ಜೀವನಪರ್ಯಂತ. ಒಮ್ಮೆ ವಿ.ಸೀ. ಹರಿದ್ವಾರಕ್ಕೆ ಹೋಗಿದ್ದರಂತೆ. ಹರಿದ್ವಾರ ಬೆತ್ತಕ್ಕೆ, ಅದರಿಂದ ಮಾಡಿದ ವಾಕಿಂಗ್ ಸ್ಟಿಕ್ಗಳಿಗೆ ಬಹು ಪ್ರಸಿದ್ಧ. ಹರಿದ್ವಾರದಲ್ಲಿ ಈ ವಾಕಿಂಗ್ ಸ್ಟಿಕ್‍ಗಳು ವಿ.ಸೀ. ಅವರ ಕಣ್ಣಿಗೆ ಬಿದ್ದವು. ಅರ್ಧಡಜನ್ ವಾಕಿಂಗ್ ಸ್ಟಿಕ್‍ಗಳನ್ನು ಅವರು ಕೊಂಡರು! ಅವರಿಗೆ ಅಷ್ಟು ಬೆತ್ತಗಳು ಏಕೆ ಬೇಕಿತ್ತೂ! ಇಂತಹ ದುಂದುಗಾರಿಕೆಯ ಸ್ವಭಾವದ ವಿ.ಸೀ. ಅವರನ್ನು ಕುರಿತು ಒಬ್ಬರು ಹಾಸ್ಯ ಮಾಡಿದ್ದು ಹೀಗೆ- ಒಬ್ಬರು: ‘Did you hear the joke of the year Mr. Ramaswamy?’ ಎಸ್.ಆರ್.ರಾಮಸ್ವಾಮಿ: ಇಲ್ಲವಲ್ಲಾ, ಏನದು? ಒಬ್ಬರು: ‘V.Si. is delivering a lecture tomorrow. Guess, what is the subject?’ ರಾಮಸ್ವಾಮಿ: ಏನದು? ನೀವೇ ಹೇಳೀಪ್ಪಾ... ಒಬ್ಬರು: ‘Simple Living!’ ಸರಳ ಜೀವನಕ್ಕೆ ಒಂದು ಅತ್ಯುತ್ತಮ ಉದಾಹರಣೆ ಎಂದರೆ ಮಹಾತ್ಮಗಾಂಧಿ. ಋಷಿಮುನಿಗಳಂತೆ ಜೀವನದುದ್ದಕ್ಕೂ ಸರಳವಾಗಿ ಬದುಕಿದವರು ಅವರು. ಮಹಾತ್ಮಗಾಂಧಿಯವರಿಗೆ ವೇಷಭೂಷಣದ ಆವಶ್ಯಕತೆ ಅತ್ಯಂತ ಕಡಮೆಯಿತ್ತು. ಒಂದು ದಿನ ಒರಿಸ್ಸಾದಲ್ಲಿ ರೈಲಿನಲ್ಲಿ ಹೋಗುವಾಗ ಅವರು, ಉಡಲು ಒಂದೇ ಸೀರೆ ಇದ್ದ ಹೆಂಗಸೊಬ್ಬಳನ್ನು ಕಂಡರು. ಆಕೆ, ಅರ್ಧಸೀರೆಯನ್ನು ಒಗೆದು ಬಿಸಿಲಿನಲ್ಲಿ ಒಣ ಹಾಕಿದ್ದಳು. ಇನ್ನುಳಿದ ಅರ್ಧವನ್ನು ತನ್ನ ಮೈಗೆ ಸುತ್ತಿಕೊಂಡಿದ್ದಳು. ಆ ದೃಶ್ಯವನ್ನು ಕಂಡು ಅವರ ಮನಸ್ಸಿಗೆ ತಳಮಳವೆನಿಸಿತು. ಭಾರತೀಯರಿಗೆಲ್ಲ ಮೈತುಂಬ ಬಟ್ಟೆತೊಡುವ ಸ್ಥಿತಿ ಬರುವವರೆಗೆ ತಮಗೆ ಮೈತುಂಬ ಬಟ್ಟೆ ಬೇಡವೆಂದು ಅಂದೇ ನಿರ್ಧರಿಸಿದರು. ಅಲ್ಲಿಂದ ಮುಂದೆ ಅವರಿಗೆ ಉಡಲು ಒಂದು ಪಂಚೆ, ಮೇಲೆ ಹೊದೆಯಲು ಒಂದು ವಸ್ತ್ರ ಸಾಕಾಯಿತು. ಅಂದಿನಿಂದ ಅವರಿಗೆ ಅದೇ ವೇಷಭೂಷಣ. ಚಕ್ರಗೋಷ್ಠಿಯ ಸಭೆಯಲ್ಲಿ ಭಾಗವಹಿಸಲು ಅವರು ಲಂಡನ್ನಿಗೆ ಹೋದರು. ಬಕಿಂಗ್‍ಹಮ್ ಅರಮನೆಗೆ ಬರಬೇಕೆಂದು ಬ್ರಿಟಿಷ್ ಸಾಮ್ರಾಟ ಪಂಚಮ ಜಾರ್ಜನಿಂದ ಅವರಿಗೆ ಆಮಂತ್ರಣ ಬಂದಿತ್ತು. ಅಲ್ಲಿಗೆ ಹೊರಟಾಗಲೂ ಸೂಟು-ಬೂಟು ಧರಿಸಬೇಕೆಂದು ಅವರು ಆಲೋಚಿಸಲೇ ಇಲ್ಲ. ಅವರು ಎಂದಿನ ತಮ್ಮ ಉಡುಪಿನಲ್ಲಿಯೇ ಹೊರಟರು. ಅರಸರನ್ನು ನೋಡಲು ಅರಮನೆಗೆ ಹೋಗುತ್ತಿದ್ದೀರಿ. ನಿಮಗೆ ಇಷ್ಟೇ ಬಟ್ಟೆ ಸಾಕೆ? ಎಂದು ಯಾರೋ ಒಬ್ಬರು ಅವರನ್ನು ಪ್ರಶ್ನಿಸಿದರು. ಆಗ ಗಾಂಧೀಜಿಯವರು ತಮ್ಮನ್ನು ಪ್ರಶ್ನಿಸಿದವರಿಗೆ ಬಹು ಮಾರ್ಮಿಕ ಉತ್ತರ ನೀಡಿದರು: ನಿಮ್ಮ ದೊರೆಗಳು ನಮ್ಮಿಬ್ಬರಿಗೆ ಸಾಕಾಗುವುದಕ್ಕಿಂತಲೂ ಹೆಚ್ಚು ಬಟ್ಟೆಯನ್ನು ತಾವೊಬ್ಬರೇ ಧರಿಸಿದ್ದಾರಲ್ಲ. ಸಹಜತೆಯಿಂದ ಧನ್ಯತೆ ವಿಯೆಟ್ನಾಮ್ ವಿಮೋಚಕ, ತನ್ನ ಜೀವಿತ ಕಾಲದಲ್ಲಿಯೇ ದಂತಕಥೆಯೆನಿಸಿ ಬೆಳೆದಿದ್ದ, ಹೊ ಚಿ ಮಿನ್ ತಾವು ತೊಡುವ ಉಡುಪಿನ ಬಗೆಗೆ ಯಾವ ಬಗೆಯ ಷೋಕೀ ಭಾವನೆಯನ್ನೂ ಇರಿಸಿಕೊಂಡಿರಲಿಲ್ಲ. ಅವರಿಗೆ ತಮ್ಮ ದೇಶದ ಬಗ್ಗೆ ಚಿಂತನೆ ನಡೆಸಲು ಸಮಯವಿತ್ತೇ ವಿನಾ ತಮ್ಮ ಉಡುಪಿನ ಬಗ್ಗೆ ಚಿಂತಿಸಲು ಸಮಯ ಇರಲಿಲ್ಲ. ಅವರು ತಮ್ಮ ದೇಶದ, ತಮ್ಮ ಜನರ ನಿಜವಾದ ಪ್ರತಿನಿಧಿಯೆನಿಸಿದ್ದರು. ತಮ್ಮ ದೇಶದ ಅಧ್ಯಕ್ಷರಾದ ಮೇಲೆ ಅವರು ಸ್ವಾಭಾವಿಕವಾಗಿಯೇ ಹಿಂದಿನ ಗವರ್ನರ್ ಜನರಲ್‍ನ ಶ್ರೀಮಂತ ಸೌಧವನ್ನು ತಮ್ಮ ನಿವಾಸಕ್ಕೆ ಆರಿಸಿಕೊಳ್ಳಬೇಕಾಗಿದ್ದಿತು. ಆದರೆ, ಅವರು ಆಡಂಬರರಾಗಿರಲಿಲ್ಲ. ಅವರು ತಮ್ಮನ್ನು ತಮ್ಮ ದೇಶದ ಬಡಜನರ ಪ್ರಥಮ ಸೇವಕನೆಂದು ಬಗೆದರು. ಶ್ರೀಸಾಮಾನ್ಯರಲ್ಲಿ ಶ್ರೀಸಾಮಾನ್ಯರೆನಿಸಿದ್ದ ಅವರು ತಮಗೆ ಗವರ್ನರ್ ಜನರಲ್‍ನ ಶ್ರೀಮಂತ ಸೌಧವಿದ್ದ ಆ ವಿಶಾಲ ಆವಾರದ ಮೂಲೆಯ ತೋಟಿಗನ ಗುಡಿಸಲೇ ಸಾಕೆಂದು ತಮ್ಮ ವಾಸಕ್ಕೆ ಆರಿಸಿಕೊಂಡರು. ಮನುಷ್ಯನಿಂದ ಮನೆಗೆ ಬೆಲೆ ಬರುವುದಲ್ಲದೆ, ಮನೆಯಿಂದ ಮನುಷ್ಯನಿಗೆ ಬೆಲೆ ಬರುವುದಿಲ್ಲ. ಸರಳ ಜೀವನ ನಡೆಸಿದ್ದ ಹೊ ಚಿ ಮಿನ್, ಬಲಾಢ್ಯ ಶಕ್ತಿಯೆನಿಸಿದ್ದ ಅಮೆರಿಕೆಯನ್ನು ನೆಲಕಚ್ಚುವಂತೆ ಮಾಡಿದ್ದರು. ಅವರು 1956ರಲ್ಲಿ ಭಾರತಕ್ಕೆ ಬಂದಿದ್ದರು. ಆಗ ಅವರು ಕರ್ನಾಟಕಕ್ಕೂ ಭೇಟಿ ಕೊಟ್ಟಿದ್ದರು. ಅವರು ಬೆಂಗಳೂರಿಗೆ ಬಂದಾಗ ಕರ್ನಾಟಕ ರಾಜ್ಯ ಆಗತಾನೇ ಅಸ್ತಿತ್ವಕ್ಕೆ ಬಂದಿತ್ತು. ಹೊ ಚಿ ಮಿನ್ರು ಬೆಂಗಳೂರಿನಲ್ಲಿ ಗವರ್ನರ ನಿವಾಸದಲ್ಲಿ ಉಳಿದುಕೊಂಡಿದ್ದರು. ಆಗ ರಾಜ್ಯಪಾಲರಾಗಿದ್ದ ಮೈಸೂರಿನ ಮಾಜಿ ಮಹಾರಾಜರಾದ ಶ್ರೀ ಜಯಚಾಮರಾಜೇಂದ್ರ ಒಡೆಯರು ಬೆಂಗಳೂರಿನಲ್ಲಿರದೆ ಮೈಸೂರಿನಲ್ಲಿ ತಮ್ಮ ಅರಮನೆಯಲ್ಲಿಯೇ ವಾಸಿಸುತ್ತಿದ್ದರು. ಹೊ ಚಿ ಮಿನ್ರ ಬಳಿ ತಮ್ಮ ಮೈಮೇಲೆ ಇದ್ದ ಒಂದು ಉಡುಪು ಮತ್ತು ತಮ್ಮ ಬ್ಯಾಗಿನಲ್ಲಿದ್ದ ಇನ್ನೊಂದು ಜೊತೆ ಬಟ್ಟೆ ಬಿಟ್ಟರೆ ಬೇರೆ ಸಾಮಾನು-ಸರಂಜಾಮುಗಳಿರಲಿಲ್ಲ. ಅವರು ತಮ್ಮ ಬಟ್ಟೆಯನ್ನು ತಾವೇ ಒಗೆದುಹಾಕಿದ್ದರು. ರಾಜಭವನದ ಸೇವಕರಿಗೆ ಅದನ್ನೆಲ್ಲ ನೋಡಿ ಅಚ್ಚರಿ ಎನಿಸಿತು. ಮಹಾಪುರುಷರೆಲ್ಲರೂ ಸರಳತೆಯಿಂದ ಬದುಕಿದರವರು. ಧರ್ಮರಾಯ ರಾಜಸೂಯಯಾಗ ಮಾಡಿದಾಗ ಬಂದ ಅತಿಥಿಗಳೆಲ್ಲರ ಕಾಲನ್ನು ಶ್ರೀಕೃಷ್ಣ ತೊಳೆದ. ಲಾಸ್ಟ್ ಸಪ್ಪರ್‍ನ ದಿನ ಯೇಸು ಅತಿಥಿಗಳ ಕಾಲನ್ನು ತೊಳೆದ. ಜನಕ ಮಹಾರಾಜ ಸುಖದ ಸುಪ್ಪತ್ತಿಗೆಯಲ್ಲಿದ್ದಾಗಲೂ ಸರ್ವಸಂಗ ಪರಿತ್ಯಾಗಿಯಾಗಿ ಸಂನ್ಯಾಸಿಯಂತೆ ಸರಳವಾಗಿ ಬದುಕಿದ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ ಸಮಯದಲ್ಲಿ ಗಾಂಧೀಯವರು ನವಾಖಲಿಯಲ್ಲಿದ್ದು ದೀನ ದಲಿತರ ಸೇವೆ ಮಾಡುತ್ತಿದ್ದರು. ಸರಳತೆಯಿಂದಲೇ, ವಿನಮ್ರತೆಯಿಂದಲೇ ಇಂತಹವರು ಮಹಾಪುರುಷರಾದರು. ಸರಳತೆ ಎಂಬುದು ಸಜ್ಜನಿಕೆಯ ಲಕ್ಷಣ. ತಮ್ಮದಲ್ಲದ ಜೀವನವನ್ನು ಪ್ರದರ್ಶಿಸಿ ಆಡಂಬರದಿಂದ ಬದುಕುವುದಕ್ಕಿಂತ ತಮ್ಮ ತನದಿಂದ ಸರಳತೆಯಿಂದ ಬದುಕುವುದು ಯಾವತ್ತೂ ಶ್ರೇಷ್ಠ. ಯಾವುದು ನಮ್ಮದಲ್ಲವೋ ಅದನ್ನು ನಮ್ಮದು ಅಂತ ತೋರಿಸುವುದರಲ್ಲಿ ಯಾವುದೇ ಪುರುಷಾರ್ಥವಿಲ್ಲ. ಸರಳ ವ್ಯಕ್ತಿಯ ಮನಸ್ಸು ಮುಗ್ಧವಾಗಿರುತ್ತದೆ, ಶುದ್ಧವಾಗಿರುತ್ತದೆ. ಅವರ ಜೀವನವೂ ಸರಳರೇಖೆಯಂತೆ ನೇರವಾಗಿರುತ್ತದೆ. ಅವರು ಕಾಯಾ, ವಾಚಾ, ಮನಸಾ ತ್ರಿಕರಣಪೂರ್ವಕ ಸ್ವಚ್ಛವಾಗಿರುತ್ತಾರೆ. ಅವರು ಒಳ್ಳೆಯದನ್ನೇ ಯೋಚಿಸುತ್ತಾರೆ, ಯೋಚಿಸಿದ್ದನ್ನೆ ನುಡಿಯುತ್ತಾರೆ, ನುಡಿದಂತೆ ನಡೆಯುತ್ತಾರೆ, ನಡೆದಂತೆ ನುಡಿಯುತ್ತಾರೆ. ಅವರು ಎಲ್ಲ ಸಂಗತಿಗಳಲ್ಲೂ ಸರಳವಾಗಿರುವುದನ್ನು ಪ್ರೀತಿಸುತ್ತಾರೆ. ಮರ್ಯಾದೆಯಿಂದ ಕೂಡಿದ ಸರಳತೆಯೊಂದಿಗೆ ಯಾವಾಗಲೂ ಜೀವನ ನಡೆಸುತ್ತಾರೆ. ಗುರುವಿನ ಅನುಗ್ರಹವಿಲ್ಲದೆ ಮೋಹದ ತೆರೆ ಹರಿಯದು. ಸರಳತೆಯಿಲ್ಲದೆ ಗುರುವಿನ ಅನುಗ್ರಹವಾಗದು. ಆದ್ದರಿಂದ ಸರಳತೆಯನ್ನು ಅಭ್ಯಾಸ ಮಾಡು ಎಂಬುದಾಗಿ ಶ್ರೀಮಾತೆ ಶಾರದಾದೇವಿಯವರು ಹೇಳಿದ್ದಾರೆ. ನಾವು ಸರಳತೆಯಿಂದ ಬದುಕೋಣ. ಸರಳತೆ ನಮ್ಮನ್ನು ನಿರಾಳತೆಯೆಡೆಗೆ ಕೊಂಡೊಯ್ಯುತ್ತದೆ. (ಕೃಪೆ: ಉತ್ಥಾನ, ಅಕ್ಟೋಬರ್ 2011) ಡಾ|| ಕೆ. ಜಗದೀಶ ಪೈ ಅಶ್ವಿನಿ ಕ್ಲಿನಿಕ್, ಮಾರ್ಕೆಟ್ ರಸ್ತೆ, ಕಾರ್ಕಳ-574104. ಉಡುಪಿ
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
SITE MAP
SiteTRAININGJOB |
HR SERVICESOTHER SERVICESnIRATHANKA CITIZENS CONNECT |
NIRATHANKAPOSHOUR OTHER WEBSITESSubscribe |
MHR LEARNING ACADEMY
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|