ಹವಾಮಾನದ ಏರುಪೇರಿನಿಂದ ಉಷ್ಣ ಹೆಚ್ಚುತ್ತಿದೆ. ಮಾನವನ ಅದಮ್ಯ ಆಸೆಯಿಂದ ಪ್ರಕೃತಿಯ ಎಲ್ಲ ಪ್ರಕಾರಗಳೂ ವಿನಾಶದ ಕಡೆ ದಾಪುಗಾಲು ಹಾಕುತ್ತಲಿವೆ. ದುರಾಸೆಯು ಘನಿಗೊಂಡಿರುವುದೇ ಭ್ರಷ್ಟಾಚಾರ. ಇದು ಒಂದು ರೀತಿಯ ಮನೋದೌರ್ಬಲ್ಯ, ಮನೋವಿಕಲತೆ. ಇದು ವ್ಯಾಪಕವಾಗುತ್ತಲಿರುವುದರಿಂದ ಜೀವನದ ಎಲ್ಲ ರಂಗಗಳೂ ಸಹಿಸಲಸಾಧ್ಯವಾದ ತಾಪದಿಂದ ಅಗ್ನಿಕುಂಡಗಳಾಗಿವೆ. ಯಾರಾದರೂ ಒಳಿತನ್ನು ಚಿಂತನೆ ಮಾಡುತ್ತಿದ್ದಾರೆ, ನಿರ್ವ್ಯಾಜ ನೆರವು ನೀಡುತ್ತಿದ್ದಾರೆ, ಪ್ರಾಮಾಣಿಕವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಯಾರಾದರೂ ಹೇಳಿದರೆ ನಾವು ನಂಬುವ ಸ್ಥಿತಿಯಲ್ಲಿ ಇಲ್ಲ. ಒಳಿತಿನ ಹಿಂದೆ ಏನೋ ಹುನ್ನಾರವಿದೆ ಎಂದೇ ಭಾವಿಸುತ್ತೇವೆ. ಆದರೂ, ಚಿಕ್ಕ ಪ್ರಮಾಣದಲ್ಲಾದರೂ ಅಲ್ಲಿ ಇಲ್ಲಿ ನೈತಿಕ ನಡವಳಿಕೆಯ, ಪ್ರಾಮಾಣಿಕ ವರ್ತನೆಯ ಉದಾಹರಣೆಗಳು ನಮ್ಮ ಅನುಭವಕ್ಕೆ ಬರುತ್ತವೆ. ಇವು ನಮ್ಮಲ್ಲಿ ಏನೋ ಒಂದು ಭರವಸೆಯನ್ನು ಮೂಡಿಸುತ್ತವೆ. ಆಗೀಗ ಪತ್ರಿಕೆಗಳಲ್ಲಿ ಆಟೋದವರು ಪ್ರಾಮಾಣಿಕವಾಗಿ ನಡೆದುಕೊಂಡಿದ್ದುದನ್ನು ನಾವು ಓದುತ್ತೇವೆ. ಪರೀಕ್ಷೆಯಲ್ಲಿ ನಕಲು ಮಾಡದೆ ಉತ್ತಮ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳ ಬಗ್ಗೆ ಸುದ್ದಿ ಕೇಳುತ್ತೇವೆ. ಯಾವ ಆಮಿಷಕ್ಕೂ ಒಳಗಾಗದೆ, ಯಾವ ಬೆದರಿಕೆಗೂ ಹೆದರದೆ, ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಇರುವುದನ್ನು ಕೇಳುತ್ತೇವೆ. ಮನೆಮನೆಗಳಲ್ಲಿ ಕೆಲಸ ಮಾಡುತ್ತಿರುವ ಆಳುಗಳು ನಿಷ್ಠೆಯಿಂದ ಕಾರ್ಯ ಮಾಡುವುದಲ್ಲದೆ. ಪ್ರಾಮಾಣಿಕತೆಯಿಂದಲೂ ವರ್ತಿಸುತ್ತಾರೆ. ಎಂಬುದನ್ನು ನಾವು ಅನುಭವಿಸುತ್ತಲಿದ್ದೇವೆ. 1. ಲಕ್ಷ್ಮಿಯ ಪ್ರಾಮಾಣಿಕ ಪ್ರಸಾದ
ಇದಕ್ಕೆ ಇಲ್ಲೊಂದು ಉದಾಹರಣೆ: ನಮ್ಮ ಮನೆಯಲ್ಲಿ ಕಸ ಹೊಡೆದು ನೈರ್ಮಲ್ಯ ಕಾರ್ಯದಲ್ಲಿ ತೊಡಗಿರುವ ಲಕ್ಷ್ಮಿ ಒಂದು ದಿನ ಬೆಳಗ್ಗೆ ನನ್ನ ಕಡೆ ಬಂದು, ತಾತಾ, ನೀವು ಎಚ್ಚರಿಕೆಯಿಂದ ಇರಬೇಕು. ಎಲ್ಲೆಂದರೆ ಅಲ್ಲಿ ಕಾಸು ಬೀಳಿಸಿಕೊಳ್ಳಬಾರದು ಅಂದು ನನ್ನ ಕಡೆ ಸುಮಾರು ಇನ್ನೂರು ರೂ. ಚಿಲ್ಲರೆ ನೋಟುಗಳನ್ನು ಕೊಟ್ಟಳು. ನನಗೆ ಆ ಹುಡುಗಿಯ ಬಗ್ಗೆ ಹೆಮ್ಮೆ ಎನ್ನಿಸಿತು. ಸುತ್ತಲೂ ರಾಜಕಾರಣಿಗಳು, ಅಧಿಕಾರಿ ವರ್ಗದವರು ಎಗ್ಗಿಲ್ಲದೆ ಸಾವಿರಾರು ಕೋಟಿಗಳನ್ನು ಭ್ರಷ್ಟತನದಿಂದ ಗಳಿಸುತ್ತಿರುವಾಗ, ಇಂಥವರ ಸಂಖ್ಯೆಯೇ ಮಿತಿಮೀರಿ ಬೆಳೆಯುತ್ತಿರುವಾಗ ಲಕ್ಷ್ಮಿಯಂತಹ ಚಿಕ್ಕವರು ಆಶಾದಾಯಕವಾದ ಬೆಳಕಿನ ದೀಪಗಳಾಗಿರುವುದು ಅಚ್ಚರಿಯನ್ನುಂಟುಮಾಡುತ್ತದೆ. ಇಂಥವರ ಸಂಖ್ಯೆಯು ಸಣ್ಣದಿರಬಹುದು, ವಿರಳವಿರಬಹುದು. ಆದರೆ, ಬಿರುಬಿಸಿಲ ಬೇಗೆಯಲ್ಲಿ ಒಂದೈದು ನಿಮಿಷದ ತಂಗಾಳಿ ತೀಡಿದರೆ, ಸುಡು ನೆಲದಲ್ಲಿ ನಡೆದು ಓಡುವಾಗ ಒಂದು ಚಿಕ್ಕ ಹೊಂಗೆಯ ನೆಳಲಿನ ಆಶ್ರಯ ಸಿಕ್ಕಾಗ ಎಂತಹ ಸುಖಾನುಭವವಾಗುತ್ತದೆಯಲ್ಲವೇ? ಅದೇ ಅನುಭವ ನನಗಾದರೂ ಆಯ್ತು ನಮ್ಮ ಲಕ್ಷ್ಮಿಯ ಈ ಅಪರೂಪದ ನಡತೆಯಿಂದ, ಬೀದಿಯಲ್ಲಿ ಬಿದ್ದ ಬಂಗಾರದ ತುಂಡನ್ನು ಕಸವೆಂದು ಕಡೆಗಣಿಸಿದ ಶರಣರ ನಡೆಯು ನನ್ನ ಕಣ್ಮುಂದೆ ಹಾದು ಹೋಯ್ತು. 2. ಮಂಜುನಾಥನ ಕೃಪೆ ಅದು ಲಕ್ಷ್ಮಿಯ ಪ್ರಾಮಾಣಿಕ ಪ್ರಸಾದವಾದರೆ, ಇದು ಮಂಜುನಾಥನ ಕೃಪೆ. ಒಮ್ಮೆ ನಮ್ಮ ಮನೆಯಲ್ಲಿ ನಮ್ಮಿಬ್ಬರನ್ನು (ನಾನು=ನನ್ನ ಪತ್ನಿ) ಹೊರತು ಯಾರೂ ಇರಲಿಲ್ಲ. ನಮಗೆ ಹಸಿವೆಯಾಯಿತು. ನಮ್ಮ ಮನೆಗೆ ಬಹು ಹತ್ತಿರದಲ್ಲಿಯೇ ಒಂದು ಹೊಟೇಲ್ ಇದೆ. ಅಲ್ಲಿಗೆ ಹೋಗಿ ಉಂಡು ಬರಬಹುದು. ಆದರೆ, ನನ್ನ ಸೊಂಟ ಮತ್ತು ಕಾಲು ನೋವಿನಿಂದ ನಿಂತುಕೊಳ್ಳಲಾಗಲಿ, ನಡೆಯಲಾಗಲಿ ಆಗುತ್ತಿರಲಿಲ್ಲ; ನನ್ನಾಕೆ ಕಷ್ಟಪಟ್ಟು ನಿಧಾನವಾಗಿ ನಡೆದು ಹೋಗಿಬರಬಹುದು. ಯಾರಿಂದಲಾದರೂ ಪಾರ್ಸೆಲ್ ಊಟ ತರಿಸಬಹುದು. ಆದರೆ, ಅಲ್ಲಿ ಯಾರೂ ಅಂಥ ವ್ಯಕ್ತಿ ಕಾಣಿಸಲಿಲ್ಲ. ಹಿಂದೆಯಾದರೆ ದೂರವಾಣಿ ಮಾಡಿ ತಿನ್ನಲಿಕ್ಕೆ ಹೊಟೇಲ್ನಿಂದ ಏನಾದರೂ ತರಿಸಬಹುದಿತ್ತು. ಆದರೆ, ಹೊಟೇಲ್ ವ್ಯವಸ್ಥಾಪಕರು ಬದಲಾಗಿರುವುದರಿಂದ ಪಾರ್ಸೆಲ್ ಕಳಿಸುವ ಏರ್ಪಾಟು ಇಲ್ಲದಿರುವುದರಿಂದ ಇದೂ ಸಾಧ್ಯವಾಗಿಲಿಲ್ಲ. ಆಟೋದಲ್ಲಿ ಹೋಗಿ ಬರೋಣ ಅನ್ನಿಸಿತು. ಆಟೋ ತರಲು ಹೊಟೇಲ್ ಹತ್ತಿರಕ್ಕೇ ಹೋಗಿ ಬರಬೇಕು. ಹೀಗೆ ಆಲೋಚಿಸುತ್ತಿರುವಾಗ ಇದುರಿನ ಕೇಬಲ್ ಅಂಗಡಿಯ ನಮ್ಮ ಪರಿಚಿತ ತರುಣ ಶಿವರಾಜ್ ಬಂದದನ್ನು ನೋಡಿ ಮನಸ್ಸು ಹಗುರವಾಯ್ತು. ಆತನಿಗೆ ಆಟೋ ತರಲು ಹೇಳಿದೆವು. ಅದಕ್ಕೆ ಆತ, ಇಷ್ಟು ಸಮೀಪ ಹೋಗಲು ಯಾವ ಆಟೋದವರೂ ಬರುವುದಿಲ್ಲ ಎಂದು ಬಿಡುವುದೇ? ಹೀಗೆ ಹೇಳಿದ ಆತ ಒಂದೈದು ನಿಮಿಷದೊಳಗೇ ಒಂದು ಡ್ರೈವಿಂಗ್ ಶಾಲೆಯ ವಾಹನವನ್ನು ತಂದು ಮನೆಯ ಮುಂದೆ ನಿಲ್ಲಿಸಿ, ಇವರನ್ನು ಈ ಹೊಟೇಲ್ಗೆ ಬಿಟ್ಟು ಬಿಡು ಎಂದು ಬಿನ್ನವಿಸಿಕೊಂಡ. ವಾಹನದ ಚಾಲಕನೂ ತರುಣ. ನಮ್ಮಿಬ್ಬರನ್ನು ವಾಹನದಲ್ಲಿ ಕೂಡಿಸಿಕೊಂಡು ಹೊಟೇಲ್ ಹತ್ತಿರ ಕರೆದೊಯ್ದು ನನ್ನನ್ನು ತನ್ನ ಹೆಗಲು ಕೊಟ್ಟು ಹೊಟೇಲ್ ಒಳಗೆ ಕರೆದೊಯ್ದು ಕುರ್ಚಿಯ ಮೇಲೆ ಕೂಡಿಸಿದ ನನ್ನಾಕೆ ನಿಧಾನವಾಗಿ ಬಂದು ಇನ್ನೊಂದು ಕುರ್ಚಿಯ ಮೇಲೆ ಕುಳಿತರು. ನೀವು ಊಟ ಮುಗಿಸಿ. ನಾನು ಹೊರಗಡೆ ಟ್ಯಾಕ್ಸಿ ಹತ್ತಿರ ಇರುವೆ. ಆನಂತರ ಬಂದು ನಿಮ್ಮನ್ನು ಮನೆಗೆ ತಲುಪಿಸುವೆ ಎಂದ ಆ ತರುಣ. ನೀನೂ ಇಲ್ಲಿಯೇ ಊಟ ಮಾಡಪ್ಪ ನಮ್ಮ ಜೊತೆಗೆ ಎಂದರು ನನ್ನಾಕೆ. ಇಲ್ಲಮ್ಮಾ. ಇದೇ ಈಗ ತಾನೇ ಊಟ ಮಾಡಿದೆ. ನೀವು ಮಾಡಿ. ನಾನು ಕಾಯುತ್ತಿರುತ್ತೇನೆ ಎಂದ. ನಿನ್ನ ಹೆಸರೇನಪ್ಪಾ? ನನ್ನಾಕೆ ಕೇಳಿದರು. ಮಂಜುನಾಥ ನನ್ನಾಕೆಗೆ ಆನಂದ, ಕೃತಜ್ಞತೆಯ ಕಣ್ಣೀರು, ಆ ಮಂಜುನಾಥನೇ ಬಂದು ಸಹಾಯ ಮಾಡಿದ ಅಂದರು. ಊಟವಾದ ಮೇಲೆ ಮಂಜುನಾಥ ನಮ್ಮ ಮನೆಗೆ ನಮ್ಮನ್ನು ಕರೆದೊಯ್ದು ತಲುಪಿಸಿದ. ನನ್ನಾಕೆ ನೂರು ರೂಪಾಯಿ ಕೊಡಲು ಹೋದಾಗ ತೆಗೆದುಕೊಳ್ಳಲು ನಿರಾಕರಿಸಿದ. ಹೊಟೇಲ್ನಲ್ಲಿಯೇ ಕೊಡಲು ಹೋಗಿದ್ದಾಗ ಹಾಗಾದರೆ ನಿಮ್ಮನ್ನು ಇಲ್ಲೇ ಬಿಟ್ಟು ಹೋಗುತ್ತೇನೆ ಎಂದು ಹೆದರಿಸಿದ್ದ. ಮಂಜುನಾಥ ಕೋಲಾರದ ಹುಡುಗ. ಪದವಿ ಗಳಿಸಲು ಬೆಂಗಳೂರಿಗೆ ಬಂದು ಓದುತ್ತಿರುವಾಗ ಕ್ರಿಕೆಟ್ ಆಡುವಾಗ ಚಂಡು ಬಡಿದು ಬಲಗಣ್ಣು ಕಿತ್ತು ಹೋಯ್ತು. ಕೃತಕ ಕಣ್ಣು ಆತನಿಗೆ ಈಗ. ಪದವಿ ಮುಗಿಸಲಿಲ್ಲ. ಡ್ರೈವಿಂಗ್ ಶಾಲೆಯಲ್ಲಿ ಚಾಲಕನಾಗಿ ದುಡಿಯುತ್ತಿದ್ದಾನೆ. ನಾನು ನನ್ನ ಬಗೆಗಿನ ಕಣಸುಗಾರ ಪುಸ್ತಕವನ್ನು ಕೃತಜ್ಞತೆಯಿಂದ ನೀಡಿದೆ. ನಾನಿಲ್ಲೇ ಹತ್ತಿರದಲ್ಲೇ ಇರುತ್ತೇನೆ; ನಿಮಗೆ ಏನಾದರೂ ಬೇಕಾದರೆ ಒಂದು ಮಿಸ್ ಕಾಲ್ ಕೊಡಿ, ಬಂದು ತಂದು ಕೊಡುತ್ತೇನೆ. ನೀವು ನನ್ನ ಟೀಚರ ಎಂದು ಹೇಳಿ ಹೋದ. ಇದು ಆತನ ಕೃಪೆಯಲ್ಲವೇ? ಡಾ.ಎಚ್.ಎಂ.ಮರುಳಸಿದ್ಧಯ್ಯ
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
|
|
|
|
SITE MAP
SitePOSH |
NIRATHANKAOUR OTHER WEBSITESSubscribe |
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |