ಸಾರಾಂಶ ಕರ್ನಾಟಕದ ಅವಿಭಜಿತ ದಕ್ಷಿಣ ಕನ್ನಡ ಮತ್ತು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಗಳ ವಾಸ್ತವ್ಯವಿರುವ ಕುಲಾಲರ ಯಾನೆ ಮೂಲ್ಯರ ಬಗೆಗಿನ ಒಂದು ಅಧ್ಯಯನವು ಇದಾಗಿದೆ. ಕುಲಾಲ ಸಮುದಾಯದಲ್ಲಿ ಒಳಜಾತಿಗಳಿದ್ದು ಅವು ಅವುಗಳದೇ ಆದ ವಿಶಿಷ್ಟತೆಯನ್ನು ಹೊಂದಿದೆ. ಅದರಲ್ಲಿ ಶೋಷಣೆಗೊಳಪಟ್ಟ ಉಪ್ಯಾನ್ ಒಳಜಾತಿಯ ಬಗೆಗೆ ನಡೆಸಿದ ಅಧ್ಯಯನವು ಇದಾಗಿದ್ದು, ಕುಲಾಲ ಸಮಾಜದ ತಪ್ಪು ಕಲ್ಪನೆಯನ್ನು ಹೊಡೆದೋಡಿಸುವಲ್ಲಿ ಈ ಅಧ್ಯಯನದ ಪಾತ್ರ ಪ್ರಮುಖವಾದುದೂ, ಕುಲಾಲ ಸಮುದಾಯದ ಹಿರಿಯರಲ್ಲಿ, ಮುಖಂಡರಲ್ಲಿ ಹಾಗೂ ಕುಲಾಲ ಸಮಾಜದ ಉಪ್ಯಾನ್ ಒಳಜಾತಿಯ ಹೆಣ್ಣು ಮಕ್ಕಳಿಂದ ಅಧ್ಯಯನಕ್ಕೆ ಬೇಕಾದ ಮಾಹಿತಿಯನ್ನು ಸಂದರ್ಶಕ ಸ್ನೇಹಿ ಸಂದರ್ಶನದ ಮೂಲಕ ಸಂಗ್ರಹಿಸಲಾಗಿದೆ. ಈ ಅಧ್ಯಯನವು ಮುಂದಿನ ಅಧ್ಯಯನಕ್ಕೆ ಪೂರಕವಾದ ಪ್ರಶ್ನೆ ಮತ್ತು ವೇದಿಕೆಯನ್ನು ಒದಗಿಸಿರುವುದರಿಂದ ಇದರ ಅಧ್ಯಯನ ವ್ಯಾಪ್ತಿ ವಿಶಾಲವಾದುದಾಗಿದೆ. ಮೂಢನಂಬಿಕೆಯನ್ನು ಮೀರಿದ ಕೆಲವು ಕುಲಾಲ ಕುಟುಂಬಗಳು ಈಗಲೂ ಉತ್ತಮ ಜೀವನವನ್ನು ನಡೆಸುತ್ತಿರುವುದರಿಂದ ಮುಂದೆ ಈ ಮೌಢ್ಯತೆಯು ತೆರೆಮರೆಗೆ ಸರಿಯಬಹುದೆಂದು ಲೇಖಕರ ಅಭಿಪ್ರಾಯದಾಗಿದೆ. ಪ್ರಮುಖ ಪದಗಳು:- ಒಳಜಾತಿ, ಉಪ್ಯಾನ್ ಬರಿ, ಉಪ್ಪು, ಸಾಧುಸ್ವಭಾವ, ತುಳು ಪೀಠಿಕೆ
ಪ್ರಾಚೀನ ಕಾಲದಲ್ಲಿ ಸಮಾಜದಲ್ಲಿ ಮೇಲು ಕೀಳುಗಳೆಂಬ ಭಾವನೆ ಬಲವಾಗಿ ಬೇರೂರಿತ್ತು. ಆಗಿನ ಕಾಲದಲ್ಲಿ ಮೇಲುಜಾತಿಯವರೆನಿಸಿದ್ದ ಜೈನರು, ಪೂಜೆ ಮಾಡುವ ಸ್ಥಾನದಲ್ಲಿ ಬ್ರಾಹ್ಮಣರಿಗೂ, ಅಡುಗೆ ಕೆಲಸವನ್ನು ಕುಂಬಾರರಿಗೂ, ಅಂಗಳದ ಕೆಲಸವನ್ನು ಕೊಟ್ಟಾರಿಯರಿಗೂ, ದನದ ಕೊಟ್ಟಿಗೆಯ ಕೆಲಸವನ್ನು ಹರಿಜನರಿಗೂ ಹಂಚಿದರು. ಕಾಲಕ್ರಮೇಣ ಅಡುಗೆ ಮಾಡಲು ಬೇಕಾದ ಮಡಕೆಯನ್ನು ತಯಾರಿಸಲು ತೊಡಗಿದ ಕುಂಬಾರರಿಗೆ ಅದೇ ಕುಲಕಸುಬಾಯಿತು. ಪ್ರಾಚೀನ ಕಾಲದಲ್ಲಿ ಕುಂಬಾರರೆಂದು ಕರೆಸಿಕೊಳ್ಳುತ್ತಿದ್ದರೂ, ಕಾಲಕ್ರಮೇಣ ತುಳುವಿನಲ್ಲಿ ಓಡಾರಿಗಳು, ಮೂಲ್ಯರು ಹಾಗೂ ಇದೀಗ ಅವರು ಕುಲಾಲರೆಂದೂ ಕರೆಯಲ್ಪಡುತ್ತಿದ್ದಾರೆ. ಕುಲಾಲ ಸಮಾಜದಲ್ಲಿ ಪ್ರತಿ ಕುಟುಂಬಗಳಿಗೂ ಒಳಜಾತಿ (ಬರಿ) ಎಂಬ ಕಟ್ಟುಪಾಡಿದೆ. ಕುಲಾಲ ಸಮಾಜದ ಆಡುಭಾಷೆ ತುಳುವಾಗಿರುವುದರಿಂದ ಒಳಜಾತಿಗಳೆಲ್ಲವೂ ತುಳುವಿನಲ್ಲೇ ಪ್ರಚಲಿತವಾಗಿದೆ. ಕೆಲವು ಒಳಜಾತಿಗಳು ಯಾವುದೆಂದರೆ, ಬಂಗೇರ, ಗುಂಡೇರ್, ಗುಜರನ್. ಕರ್ಮರನ್, ಹರಿಕೆನ್ನ, ಬಂಜನ್, ಸಿರಿಯಾನ್, ಕುಂದರನ್, ಸಾಲ್ಯಾನ್, ಅಂಚನ್, ಉಪ್ಯಾನ್ ಬರಿ ಇತ್ಯಾದಿಗಳು (ಚೈತ್ರಾ ವಿಟ್ಲ, 2009). ಶತಶತಮಾನಗಳಿಂದ ಕುಂಬಾರಿಕೆಯನ್ನು ಕುಲವೃತ್ತಿಯಾಗಿ ಬದುಕಿನ ಅವಿಭಾಜ್ಯ ಅಂಗವಾಗಿಸಿಕೊಂಡಿದ್ದ ಕುಲಾಲ ಸಮಾಜ ಕಳೆದೆರಡು ದಶಕಗಳ ಹಿಂದೆ ತೀವ್ರ ಸಂಕಷ್ಟದಲ್ಲಿತ್ತು. ಜಾಗತೀಕರಣ ಮತ್ತು ನಗರೀಕರಣದ ಸುಳಿಗೆ ಸಿಕ್ಕು ಕುಂಬ್ಯೋದ್ಯಮವನ್ನೇ ನೆಚ್ಚಿದ್ದ ಮಂದಿ ಅತಂತ್ರ ಸ್ಥಿತಿಯಲ್ಲಿದ್ದರು. ಇವೆಲ್ಲದರ ಜೊತೆಗೆ ಭೂ ಸುಧಾರಣೆಯ ಕಾನೂನು ಜಾರಿಯಾದ ನಂತರದ ದಿನಗಳ ಭೂವ್ಯಾಜ್ಯಗಳೂ ಕೂಡಾ ಈ ಜನರನ್ನು ಹೈರಾಣಾಗಿಸಿತ್ತು, ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿದ್ದ ನಮ್ಮ ಯುವಕರಲ್ಲಿ ಆತ್ಮಸ್ಥೈರ್ಯ ತುಂಬಿ ಸಮಾಜದ ಮುಖ್ಯವಾಹಿನಿಯಲ್ಲಿ ಸೇರುವಂತೆ ಪ್ರೇರೇಪಿಸಲು ಸಂಘಟನೆಯೊಂದರ ಅವಶ್ಯಕತೆ ಇದೆ. (ರಮಾನಾಥ, ವಿಟ್ಲ, 2009) ಕುಲಾಲ ಸಮುದಾಯದ ಜನರು ಕುಂಬಾರಿಕೆಯ ಮೂಲಕ ಸಮಯಕ್ಕೆ ಸರಿಯಾಗಿ ತಮ್ಮ ಜೀವನವನ್ನು ಬದಲಾಯಿಸುತ್ತಾ ಬರುವಲ್ಲಿ ಎಡವಿದರು. ಹಿಂದಿನ ಜೀವನಕ್ರಮ ಮತ್ತು ಕಟ್ಟುಪಾಡುಗಳ ಆಚರಣೆಯಿಂದ ಕುಲಾಲ ಸಮುದಾಯದ ಮಹಿಳೆಯರು ಆಧುನಿಕ ಶಿಕ್ಷಣ ಮತ್ತು ಉದ್ಯೋಗದಿಂದ ವಂಚಿತರಾದರು, ಈಗಲೂ ಹೆಣ್ಣು ಮಕ್ಕಳು ಋತುಮತಿಯಾದಾಗ ಅವರ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸುವ ಕೆಲವು ಕುಟುಂಬಗಳನ್ನು ನೋಡಬಹುದು (ಕಜೆಕಾರ್, 2001). ಶರ್ಮ, (1986) ಅವರ ಅಭಿಪ್ರಾಯದಂತೆ, ಕುಂಬಾರರ ಬಗೆಗಿನ ಅಧ್ಯಯನವು ತುಂಬಾ ಮೃದು ಧೋರಣೆಯಿಂದ ಕೂಡಿದ್ದರೂ ಕರ್ನಾಟಕ ಅಥವಾ ಬೇರೆ ರಾಜ್ಯಗಳಲ್ಲಿ ಕುಂಬಾರರನ್ನು ಕುಲಾಲ ಸಮುದಾಯವೆಂದು ಒಪ್ಪಿಕೊಳ್ಳುವುದನ್ನು ಕಾಣಬಹುದಾಗಿದೆ. ಕುಲಾಲ ಸಮುದಾಯದವರು ಮೊದಲು ಕುಂಬಾರಿಕೆಯನ್ನು ಸಂಪ್ರದಾಯಬದ್ಧ ವೃತ್ತ್ತಿಯನ್ನಾಗಿ ಸ್ವೀಕರಿಸಿದ್ದರು. ಹಾಗಾಗಿ ಕುಲಾಲ ಸಮುದಾಯದವರು ಕುಂಬಾರರೆಂದು ಕರೆಯಲ್ಪಡುತ್ತಿದ್ದರು. ಕುಂಬಾರ ಎನ್ನುವ ಪದವು ಸಂಸ್ಕೃತ ಭಾಷೆಯ ಕುಂಬಾರ ಪದದಿಂದ ಉಗಮಗೊಂಡಿದೆ. ಕುಂಬಾಕಾರ ಅನ್ನುವ ಪದವು ಮಣ್ಣಿನಿಂದ ಮಡಕೆ ಮಾಡುವವನು ಅನ್ನೋ ಅರ್ಥವನ್ನ ಕೊಡುತ್ತದೆ (ಥರ್ಸ್ಟನ್ 1975). ಕುಂಬಾರ ಮತ್ತು ಕುಶಾವರರು ಮೂಲತಃ ಒಂದೇ ಜಾತಿಯವರಾಗಿದ್ದು ಇದೀಗ ಎರಡು ಮತಗಳಾಗಿ ವಿಭಜನೆಗೊಂಡಿದ್ದಾರೆ. ಈಗ ಅವರನ್ನು ಕುಶಾನರು ಮತ್ತು ಉತ್ತರ ತಮಿಳು ಜನರೆಂದು ಕರೆಯುತ್ತಿದ್ದಾರೆ. ಇವರ ಆಚಾರ-ವಿಚಾರ ಹಾಗೂ ಸಂಪ್ರದಾಯಗಳು ಒಂದೇ ಆಗಿದ್ದರೂ ಇವರ ಮಧ್ಯೆ ವಿವಾಹಗಳು ಮಾತ್ರ ನಿಷಿದ್ದ ಎಂದು ಇತಿಹಾಸಕಾರರಾದ ಸ್ಟುವರ್ಟ್ ಅಭಿಪ್ರಾಯ ಪಡುತ್ತಾರೆ. ಪ್ರಸ್ತುತ ಅಧ್ಯಯನವು ಕುಲಾಲ ಸಮುದಾಯದ ಒಳಜಾತಿಗಳ ಬಗ್ಗೆ, ಅದರಲ್ಲೂ ಉಪ್ಯಾನ್ ಬರಿ ಅನ್ನೋ ಒಳಜಾತಿಯ ಹೆಣ್ಣು ಮಕ್ಕಳ ಬಗೆಗೆ ಸಮುದಾಯವು ಹೊಂದಿರುವ ತಪ್ಪು ಕಲ್ಪನೆ, ಮೂಢನಂಬಿಕೆ ಮತ್ತು ಆ ಒಳಜಾತಿಯ ಪ್ರಸ್ತುತ ಸ್ಥಿತಿಯ ಮೇಲೆ ಬೆಳಕು ಚೆಲ್ಲುತ್ತದೆ. ಅಧ್ಯಯನದ ಮುಖ್ಯ ಉದ್ದೇಶಗಳು:
ಅಧ್ಯಯನದ ಕಾರ್ಯ ವಿಧಾನ ಪ್ರಸ್ತುತ ಅಧ್ಯಯನವು ಭಾರತ ದೇಶದ ಕರ್ನಾಟಕ ರಾಜ್ಯದ ಅವಿಭಜಿತ ದಕ್ಷಿಣ ಕನ್ನಡ ಮತ್ತು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯಲ್ಲಿ ವಾಸಿಸುತ್ತಿರುವ ಕುಲಾಲ ಸಮುದಾಯದ ಒಳಜಾತಿ ಹಾಗೂ ಉಪ್ಯಾನ್ ಬರಿಯ ಮೂಢನಂಬಿಕೆಯ ಮೇಲೆ ಬೆಳಕು ಚೆಲ್ಲುತ್ತದೆ. ಈ ಅಧ್ಯಯನವು ಮಾನವ ಅಭಿವೃದ್ಧಿಯ ಸಿದ್ಧಾಂತದ ಮೇಲೆ ಅವಲಂಭಿತವಾಗಿದ್ದು, ಕುಲಾಲ ಸಮುದಾಯದ ಅಭಿವೃದ್ಧಿಗೆ ಒತ್ತುನೀಡುವಲ್ಲಿ ಸಹಕಾರಿಯಾಗಿದೆ. ಈ ಅಧ್ಯಯನವು ಸೂಕ್ಷ್ಮ ವಿಚಾರಗಳನ್ನು ಒಳಗೊಂಡಿದ್ದು ಸಂದರ್ಶಕ ಸ್ನೇಹಿ (convenient interview) ಸಂದರ್ಶನದ ಮೂಲಕ ಮಾಹಿತಿಯನ್ನು ಕಲೆಹಾಕಲಾಗಿದೆ. ಈ ಅಧ್ಯಯನವು ವಿವರಣಾತ್ಮಕ ಗುಣಸ್ವಾಭಾವವನ್ನು (Descriptive nature) ಹೊಂದಿದ್ದು ಅಧ್ಯಯನದ ವಿಷಯ ವಸ್ತುವಿನ ಮೇಲೆ ಬೆಳಕು ಚೆಲ್ಲುತ್ತದೆ. ಸಂದರ್ಶನಕ್ಕೆ ಕುಲಾಲ ಸಮುದಾಯದ ಹಿರಿಯರನ್ನು ಆಯ್ಕೆ ಮಾಡಲಾಗಿದ್ದು, ಅವರ ಅನುಭವದ ಮಾಹಿತಿಯನ್ನು ಅಧ್ಯಯನದಲ್ಲಿ ಕಲೆಹಾಕಲಾಗಿದೆ. ಅಧ್ಯಯನದ ವಸ್ತು ವಿಷಯ: ಈ ಅಧ್ಯಯನವು ಭಾರತ ದೇಶದ ಕರ್ನಾಟಕ ಮತ್ತು ಕೇರಳ ರಾಜ್ಯಗಳ ಎರಡು ಜಿಲ್ಲೆಗಳಲ್ಲಿ ವಾಸ್ತವ್ಯವಿರುವ ಕುಲಾಲರ ಯಾನೆ ಮೂಲ್ಯರ ಜೀವನ ಕ್ರಮದ ಮೇಲೆ ಬೆಳಕು ಚೆಲ್ಲುತ್ತದೆ. ಕುಲಾಲ ಸಮುದಾಯದವರು ಪ್ರಾಮಾಣಿಕರು ಹಾಗೂ ಸಹನಾ ಶೀಲರು ಎಂಬ ನಂಬಿಕೆಯು ಸಮಾಜದಲ್ಲಿ ಬೇರೂರಿದ್ದೂ, ಆ ಸಮುದಾಯದಲ್ಲಿ ನಡೆಯುವ ಒಳಜಾತಿಯಲ್ಲಿನ ಮೌಢ್ಯತೆಯು ಈ ಅಧ್ಯಯನದಲ್ಲಿ ಚರ್ಚಿತವಾಗಿದೆ. ಹೆಣ್ಣಿಗೆ ಅತೀ ಹೆಚ್ಚು ಗೌರವಯುತವಾದ ಸ್ಥಾನವನ್ನು ಕೊಡುವ ಕುಲಾಲ ಸಮುದಾಯವು ಉಪ್ಯಾನ್ ಒಳಜಾತಿಯ ಹೆಣ್ಣು ಮಕ್ಕಳಿಗೆ ಅನ್ಯಾಯವೆಸಗುತ್ತಿದೆ. ತಂಗಿ, ಅಕ್ಕ, ತಾಯಿ ಸ್ಥಾನಕ್ಕೆ ಮಹತ್ವ ಮತ್ತು ಗೌರವ ಸ್ಥಾನ ನೀಡುವ ಕುಲಾಲ ಸಮುದಾಯವು ಉಪ್ಯಾನ್ ಒಳಜಾತಿಯ (ಬರಿ) ಹೆಣ್ಣುಮಕ್ಕಳನ್ನು ಸಮುದಾಯದಲ್ಲಿ ನೋಡುವ ದೃಷ್ಟಿಯು ವಿಭಿನ್ನವಾಗಿದೆ. ಹಾಗಂತ ಅವರ ಮೇಲೆ ಗೌರವವಿಲ್ಲವೆಂದರ್ಥವಲ್ಲ. ಅವರಿಗೂ ತಾಯಿ, ಅಕ್ಕ, ತಂಗಿಯ ಸ್ಥಾನವನ್ನು ನೀಡಿ ಗೌರವದಿಂದ ನೋಡಿಕೊಳ್ಳುತ್ತಿದ್ದಾರೆ. ಆದರೆ ವಿವಾಹದ ವಿಷಯ ಬಂದಾಗ ಉಪ್ಯಾನ ಬರಿಯ ಹೆಣ್ಣುಮಕ್ಕಳಿಗೆ ಯಾವುದೇ ಪ್ರಾಶಸ್ತ್ಯ ನೀಡುವುದಿಲ್ಲ. ಈಗಲೂ ಸಮಾಜದಲ್ಲಿ ನಡೆಯುವ ಒಂದು ಮೂಢನಂಬಿಕೆಯ ಸೆಲೆ ಉಪ್ಯಾನ್ ಬರಿಯ ಹೆಣ್ಣುಮಕ್ಕಳಿಗೆ ನುಂಗಲಾರದ ತುತ್ತಾಗಿದೆ. ಹಾಗಾಗಿ ಈ ವಿಷಯ ಕುರಿತು ಮತ್ತು ಈಗ ಇರುವ ಸ್ಥಿತಿಗತಿಗಳ ಕುರಿತು ಕುಲಾಲ ಸಮುದಾಯದ ಹಿರಿಯ ವ್ಯಕ್ತಿಗಳನ್ನು ಸಂದರ್ಶನ ಮಾಡುವಾಗ ಸಿಕ್ಕಂತಹ ಮಾಹಿತಿ ಈ ಲೇಖನದ ವಸ್ತು ವಿಷಯವಾಗಿದೆ. ಕುಲಾಲ ಸಮುದಾಯದ ಒಳಜಾತಿ(ಬರಿ)ಗಳು :- ಕುಲಾಲ ಸಮುದಾಯದ ಜನರು ಕರ್ನಾಟಕ ರಾಜ್ಯದ ಅವಿಭಜಿತ ದಕ್ಷಿಣ ಕನ್ನಡ ಮತ್ತು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯಲ್ಲಿ ವಾಸ್ತವ್ಯವಿರುವುದು ಕಂಡುಬರುತ್ತಿದೆ. ಅವರ ಮಾತೃಭಾಷೆ ತುಳುವಾಗಿದ್ದು ಒಳಜಾತಿಗಳು ಕೂಡಾ ತುಳುಭಾಷೆಯಿಂದಲೇ ಕರೆಯಲ್ಪಡುತ್ತವೆ. ಕೆಲವೊಂದು ಒಳಜಾತಿಗಳು ಯಾವುದೆಂದರೆ ಬಂಗೇರ, ಗುಂಡೇರ್, ಗುಜರನ್, ಕರ್ಮೆರನ್, ಹರಿಕೆನ್ನ, ಬಂಜನ್, ಸಿರಿಯನ್, ಕುಂದರನ್, ಸಾಲ್ಯಾನ್, ಅಂಚನ್, ಉಪ್ಯಾನ್ ಬರಿ ಇತ್ಯಾದಿಗಳು (ಚೈತ್ರಾ ವಿಟ್ಲ 2009). ಈ ಒಂದೊಂದು ಹೆಸರು ಬರಲು ಒಂದೊಂದು ಕಥೆಗಳು ಕಾರಣವಾಗಿದ್ದು, ಉದ್ದೇಶಪೂರ್ವಕವಾಗಿ ವಿಂಗಡನೆ ಮಾಡಿದ್ದಲ್ಲ. ಒಂದು ಒಳಜಾತಿಯವರ ಮನೋಭಾವ, ಕಟ್ಟುಪಾಡು, ಮತ್ತು ಅವರ ಆಚಾರ ವಿಚಾರಗಳನ್ನು ಅನುಸರಿಸಿ ಒಳಜಾತಿಯನ್ನು (ಬರಿ) ರೂಪಿಸಲಾಗಿದೆ. ಆದರೆ ಈ ಒಳಜಾತಿಗಳು, ಪ್ರಭಾವ ಬೀರುವುದು ವೈವಾಹಿಕ ಸಂಬಂಧದಲ್ಲಿ ಮಾತ್ರ. ಬರಿ ತಪ್ಪಿ ಮದುವೆ ನಡೆಯದು. ಒಂದೇ ಒಳಜಾತಿಯ ಮಕ್ಕಳು ಅಣ್ಣ, ತಮ್ಮ, ಅಕ್ಕ, ತಂಗಿ ಅನ್ನುವ ಕಲ್ಪನೆಯಿದ್ದು; ಇದಕ್ಕೆ ಪೂರಕವಾಗಿ ಬಹಳಷ್ಟು ಸನ್ನಿವೇಶಗಳು ನಮಗೆ ಕಾಣಸಿಗುತ್ತದೆ, ವೈಜ್ಞಾನಿಕವಾಗಿ ಕುಲಾಲ ಸಮುದಾಯದವರು ಎಷ್ಟು ಮುಂದುವರಿದಿದ್ದಾರೆ ಅನ್ನೋ ವಿಷಯ ಕುಲಾಲ ಪೂರ್ವಕರು ಒಳಜಾತಿಯನ್ನು ವಿಂಗಡಿಸುವಾಗಿನ ರೀತಿಯನ್ನು ನೋಡಬಹುದು. ಒಂದುವೇಳೆ ಒಳಜಾತಿ (ಬರಿ) ಯನ್ನು ಮೀರಿ ಮದುವೆಯಾದಲ್ಲಿ ಅವರ ಮಕ್ಕಳು ಬುದ್ಧಿಮಾಂದ್ಯರಾಗಿ ಹುಟ್ಟುವುದನ್ನು ನಾವು ಸಮಾಜದಲ್ಲಿ ನೋಡಬಹುದು. ಅಂದರೆ ಒಂದೇ ವಂಶವಾಹಿನಿಯಲ್ಲಿ ಮದುವೆಯಾದಲ್ಲಿ ಒಂದೇ ರಕ್ತದ ಗುಣವಿರುವ ದಂಪತಿಯ ಮಗುವಿಗೆ ವಂಶವಾಹಿನಿ ರೋಗ ಅಥವಾ ಮಗುವಿನ ಬೆಳವಣಿಗೆಯಲ್ಲಿ ಕುಂಠಿತವನ್ನು ಕಾಣಬಹುದು. ಇದು ವೈದ್ಯಕೀಯ ಲೋಕದಲ್ಲಿ ದೃಢಪಟ್ಟ ವಿಷಯವೂ ಆಗಿರುವುದರಿಂದ ಕುಲಾಲ ಸಮಾಜದ ಪೂರ್ವಿಕರ ಜ್ಞಾನವೇನು ಎಂಬುದು ಇದರಿಂದ ವೇದ್ಯವಾಗುತ್ತದೆ. ಒಳಜಾತಿಗಳಿಗೆ ಶೋಷಣೆ ಎಂಬುದು ಇಲ್ಲ, ಆದರೆ ವಿವಾಹ ಸಂದರ್ಭದಲ್ಲಿ ಒಳಜಾತಿಗಳಿಗೆ ಬಹಳ ಮಹತ್ವದ ಸ್ಥಾನವನ್ನು ಕೊಡಲಾಗುತ್ತದೆ. ಈ ಸಂದರ್ಭದಲ್ಲಿ ಉಪ್ಯಾನ್ ಒಳಜಾತಿಯ ಹೆಣ್ಣುಮಕ್ಕಳನ್ನು, ಯಾವುದೋ ಮೂಢನಂಬಿಕೆಗೆ ಬಲಿಯಾಗಿ ಅವರನ್ನು ಮದುವೆಯಾಗಲು ತಿರಸ್ಕರಿಸುವ ಸಂಸ್ಕೃತಿಯನ್ನು ನಾವು ನೋಡಬಹುದಾಗಿದೆ, ಹಾಗಾಗಿ ಇದರ ಮರ್ಮವೇನು ಅವರ ಯೋಜನೆಯಲ್ಲಿ ಇರುವ ತಪ್ಪುಗಳೇನು ಎಂಬುದರ ಕುರಿತು ಈ ಅಧ್ಯಯನದಲ್ಲಿ ಪ್ರಮುಖವಾಗಿ ಚರ್ಚಿಸಲಾಗಿದೆ. ಉಪ್ಯಾನ್ ಬರಿಯ ಕುರಿತು ಒಂದು ನೋಟ ಕುಲಾಲ ಸಮುದಾಯದಲ್ಲಿ ಎಲ್ಲಾ ಒಳಜಾತಿಗಳಂತೆ (ಬರಿ) ಉಪ್ಯಾನ್ ಬರಿಯು ಒಂದು. ಈ ಒಳಜಾತಿಗೆ ನಿಷೇಧವಿಲ್ಲ. ಎಲ್ಲಾ ಒಳಜಾತಿಗಳ ಜನರಂತೆ ಇವರಿಗೂ ಸಮಾನ ಹಕ್ಕು, ಅಧಿಕಾರವಿದೆ. ಪ್ರತಿಯೊಂದು ಕುಲಾಲ ಜನರು ಏನೆಲ್ಲಾ ಸವಲತ್ತು, ಸೌಲಭ್ಯ ಸಮಾಜದಿಂದ ಪಡೆಯುತ್ತಾರೋ ಉಪ್ಯಾನ್ ಬರಿಗೂ ಇದು ದೊರೆಯುತ್ತದೆ. ವಿವಾಹ ವಿಷಯದಲ್ಲಿ ಮಾತ್ರ ಎಲ್ಲಾ ಒಳಜಾತಿಗಳಂತೆ ಇವರನ್ನು ನೋಡುವುದಿಲ್ಲ. ಹಾಗಂತ ಈ ಬರಿಗೆ ಯಾವುದೇ ಅಸ್ಪೃಶ್ಯತೆಯ ಗಂಧಗಾಳಿಯೂ ಇಲ್ಲ. ಈ ಒಳಜಾತಿಯ ಬಗೆಗಿರುವ ತಪ್ಪುಕಲ್ಪನೆ ಮಾತ್ರ ಹೆಣ್ಣು ಮಕ್ಕಳಿಗೆ ಶಾಪವಾಗಿದೆ. ಆದರೆ ಉಪ್ಯಾನ್ ಬರಿಯ ಗಂಡುಮಕ್ಕಳಿಗೆ ಈ ರೀತಿಯ ತಾರತಮ್ಯವಿಲ್ಲ. ಅವರಿಗೆ ಉಳಿದ ಬರಿಯವರು ತಮ್ಮ ಹೆಣ್ಣುಮಕ್ಕಳನ್ನು ವಿವಾಹ ಮಾಡಿಕೊಡುತ್ತಾರೆ. ಅಂದರೆ ಒಳಜಾತಿಯಲ್ಲಿ ಯಾವುದೇ ತಪ್ಪು ಕಲ್ಪನೆಗಳಿಲ್ಲ. ಉನ್ನತ ಮಟ್ಟದ, ಉನ್ನತ ವರ್ಗದ ಹೆಣ್ಣುಮಗಳನ್ನು ಉಪ್ಯಾನ್ ಬರಿಯ ಗಂಡುಮಕ್ಕಳಿಗೆ ಕೊಟ್ಟು ವಿವಾಹಮಾಡಿಕೊಡುತ್ತಾರೆ. ಆದರೆ ಉಪ್ಯಾನ್ ಒಳಜಾತಿಯ ಹೆಣ್ಣುಮಗಳನ್ನು ಸೊಸೆ ಮಾಡಿಕೊಳ್ಳಲು ಉಳಿದ ಒಳಜಾತಿಯ ಮನೆಯವರು ಒಪ್ಪಿಕೊಳ್ಳುವುದಿಲ್ಲ ಹಾಗಂತ ಅವರು ಅಶುಭ ಲಕ್ಷಣದವರು ಅಂತ ಅರ್ಥವಲ್ಲ. ಕುಲಾಲ ಸಮಾಜದಲ್ಲಿ ಬಲವಾಗಿ ನೆಲೆಯೂರಿರುವ ಒಂದು ಸಂಗತಿಯೆಂದರೆ ಉಪ್ಯಾನ್ ಬರಿಯ ಹೆಣ್ಣು ಮಕ್ಕಳಿಗೆ ಮನೆಯ ಅಧಿಕಾರವನ್ನ ನೀಡಬೇಕು, ಇಲ್ಲದಿದ್ದಲ್ಲಿ ಮನೆಯ ಎಲ್ಲಾ ಸಂತೋಷ, ಸಂಪತ್ತು, ನೆಮ್ಮದಿ ಉಪ್ಪು ಕರಗಿದಾಗೆ ಕರಗಿ ಬಿಡುತ್ತದೆ ಎಂಬ ನಂಬಿಕೆ. ಈ ನಂಬಿಕೆ ಎಷ್ಟು ಸರಿ ಎಂದು ಕೇಳಿದರೆ ಯಾರೊಬ್ಬರೂ ಉತ್ತರ ನೀಡುವುದಿಲ್ಲ. ಆದರೆ ನಂಬಿಕೆ ತಲೆಮಾರುಗಳಿಂದ ಇವತ್ತಿಗೂ ತನ್ನ ಆಸ್ತಿತ್ವವನ್ನು ಹಾಗೆಯೇ ಉಳಿಸಿಕೊಂಡಿದೆ. ಉಪ್ಯಾನ್ ಬರಿಯ ಹೆಣ್ಣು ಮಗಳನ್ನು ಸೊಸೆಯಾಗಿ ತಂದರೆ, ಜೀವ ಅಪಾಯವೇನೂ ಇಲ್ಲ, ಆದರೆ ಅತ್ತೆ ತನ್ನ ಮನೆಯ ಅಧಿಕಾರವನ್ನು ಸೊಸೆಗೆ ನೀಡಲು ಹಿಂದೆ ಮುಂದೆ ನೋಡುವುದೇ ಈ ಒಳಜಾತಿಯಲ್ಲಿನ ಮರ್ಮ. ಉಪ್ಯಾನ್ ಬರಿಯ ಸೊಸೆಗೆ ಮನೆಯ ಆಡಳಿತ ನೀಡಿದರೆ, ಒಳ್ಳೆಯದಾಗುತ್ತೆ, ಹಾಗೂ ಆ ಮನೆಯ ಎಲ್ಲರೂ ಸಮೃದ್ಧಿ, ಸುಖ ನೆಮ್ಮದಿಯಿಂದ ಬದುಕುತ್ತಾರೆ ಎನ್ನುವುದಕ್ಕೆ ಎಷ್ಟೋ ಉದಾಹರಣೆಗಳನ್ನು ನಾವು ಸಮಾಜದಲ್ಲಿ ಕಾಣಬಹುದು. ಆದರೆ ಉಪ್ಯಾನ್ ಬರಿಯ ಸೊಸೆಗೆ ಮನೆಯ ಆಡಳಿತ ಕೊಡದೆ ಉಪ್ಪು ಕರಗಿದ ಹಾಗೆ, ಮನೆತನವು ಕರಗಿ ಸರ್ವನಾಶವಾದ ಒಂದೇ ಒಂದು ಕುಟುಂಬ ಸಮಾಜದಲ್ಲಿ ಇದುವರೆಗೂ ಕಂಡುಬಂದಿಲ್ಲ. ಎಲ್ಲಾ ನೆಮ್ಮದಿಯಿಂದಲೇ ಜೀವನ ನಡೆಸುತ್ತಿದ್ದಾರೆ. ಹಾಗಾದರೆ ಈ ಒಂದು ಮೂಢನಂಬಿಕೆ ಯಾಕೆ ಅಸ್ತಿತ್ವಕ್ಕೆ ಬಂತು ಅನ್ನುವುದರ ಬಗ್ಗೆ ಸಮಾಜದ ಹಿರಿಯರಲ್ಲಿ ಉತ್ತರವಿಲ್ಲ. ಅವರು ಹೇಳುವುದು ಇಷ್ಟೇ ನಮ್ಮ ಹಿರಿಯರು ನಮಗೆ ಹೇಳ್ತಾ ಇದ್ದರು, ನಾವು ನಮ್ಮ ಮಕ್ಕಳಿಗೆ ಹೇಳ್ತಾ ಇದ್ದೇವೆ ಮತ್ತು ಅದರ ಬಗ್ಗೆ ನಮಗೆ ಎಳ್ಳಷ್ಟೂ ಜ್ಞಾನವಿಲ್ಲ, ಆದರೆ ಹೌದಂತೆ. ಈ ರೀತಿಯ ಅಂತೆ ಕಂತೆಗಳ ವಿಚಾರಗಳು ಕುಲಾಲ ಸಮಾಜದಲ್ಲಿ ಉಪ್ಯಾನ್ ಬರಿಯ ಹೆಣ್ಣುಮಕ್ಕಳಿಗೆ ಕಂಟಕವಾಗಿ ಪರಿಗಣಿಸಲ್ಪಟ್ಟಿರುವುದು ಸುಳ್ಳಲ್ಲ. ಹಾಗಂತ ಬರೀ ಉಪ್ಯಾನ್ ಬರಿ ಮಾತ್ರವೇ ಈ ರೀತಿಯ ಗೊಂದಲವನ್ನು ಇಟ್ಟುಕೊಂಡಿಲ್ಲ. ಬಂದ್ಯಾನ್, ಸಾಲ್ಯಾನ್, ಅಂಚನ್ ಮುಂತಾದ ಒಳಜಾತಿಗಳಲ್ಲಿ ಕೂಡ ಬೇರೆ ಬೇರೆ ರೀತಿಯಲ್ಲಿ ಶಾಪ ಅಂಟಿಕೊಂಡಿತ್ತು. ಆದರೆ ಕೆಲವು ವಿಷಯಗಳಲ್ಲಿ ಈ ವಿಚಾರಗಳು ಅಳಿಸಿಹೋಗಿ ಈ ಒಳಜಾತಿಗಳು ತಮ್ಮ ಸ್ಥಾನವನ್ನು ಕುಲಾಲ ಸಮಾಜದಲ್ಲಿ ಭದ್ರಪಡಿಸಿಕೊಂಡವು. ಹಾಗೆಯೇ ಉಪ್ಯಾನ್ ಬರಿಯು ನೆರೆಯ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯಲ್ಲಿ ತನ್ನ ಸ್ಥಾನವನ್ನು ಬಲಪಡಿಸಿಕೊಂಡು ಉತ್ತಮ ಜೀವನವನ್ನು ನಡೆಸುವುದನ್ನು ನಾವು ಕಾಣಬಹುದು. ಕೇರಳ ರಾಜ್ಯ, ಶಿಕ್ಷಣದಲ್ಲಿ ಮುಂದುವರಿದಿದೆ ಅನ್ನುವುದೇ ಇದಕ್ಕೆ ಕಾರಣ. ಮುಂದೆ ದಕ್ಷಿಣಕನ್ನಡ ಜಿಲ್ಲೆಯೂ ಕೂಡಾ ಈ ನಿಟ್ಟಿನಲ್ಲಿ ಮುಂದುವರಿಯುತ್ತದೆ ಅನ್ನುವ ನಂಬಿಕೆ ಲೇಖಕರದ್ದು. ಕುಲಾಲ ಸಮಾಜದಲ್ಲಿ ತಪ್ಪುಕಲ್ಪನೆ ಉಪ್ಯಾನ್ ಬರಿಯ ಹೆಣ್ಣುಮಕ್ಕಳ ಬಗೆಗೆ ಇರುವ ಕೆಲವೊಂದು ತಪ್ಪುಕಲ್ಪನೆಯನ್ನು ಈ ಕೆಳಗಿನಂತೆ ಪಟ್ಟಿ ಮಾಡಬಹುದು. ಅವುಗಳು ಯಾವುದೆಂದರೆ,
ಉಪ್ಯಾನ್ ಹೆಣ್ಣು ಮಕ್ಕಳ ಈಗಿನ ಸ್ಥಿತಿಗತಿ: ಕುಲಾಲ ಸಮಾಜದಲ್ಲಿ ಈಗ ಉಪ್ಯಾನ್ ಹೆಣ್ಣು ಮಗಳದೇ ಕಾರುಬಾರು. ಅಂದರೆ ಅಧಿಕಾರ ನಡೆಸಿ ಅದರಲ್ಲಿ ಸೈ ಅನ್ನಿಸಿಕೊಳ್ಳುವುದು ಆಕೆಗೆ ಜನ್ಮದತ್ತ ವರ. ಹಾಗಾಗಿ ಉಪ್ಯಾನ್ ಹೆಣ್ಣು ಮಗಳ ತಂದೆ ತಾಯಿಯರು ಅವಳನ್ನು ಚೆನ್ನಾಗಿ ಓದಿಸಿ ವಿದ್ಯಾವಂತೆಯನ್ನಾಗಿ ರೂಪಿಸಿ, ಸರ್ಕಾರಿ ಉದ್ಯೋಗವನ್ನು ಪಡೆದು ಜೀವನದಲ್ಲಿ ಯಶಸ್ವಿಯಾಗಲು ಅವಕಾಶ ಕೊಡಬೇಕು.
ಅಧ್ಯಯನದಲ್ಲಿ ಕಂಡುಕೊಂಡ ವಿಚಾರ:
ಉಪಸಂಹಾರ ಕುಂಬಾರ ಯಾನೆ ಕುಲಾಲರ ಸಮುದಾಯವು ಬಹಳ ಸಾಧು ಹಾಗೂ ಪ್ರಾಮಾಣಿಕತೆ, ತಾಳ್ಮೆಗೆ ಹೆಸರುವಾಸಿಯಾಗಿದೆ. ಯಾರಿಗೂ ತೊಂದರೆಯನ್ನುಂಟು ಮಾಡದೇ ತಾವಾಯ್ತು, ತಮ್ಮ ಕೆಲಸವಾಯಿತು ಎನ್ನುವ ಮನೋಭಾವ ಕುಲಾಲರದ್ದು. ಸಣ್ಣ ಕೆಲಸವಾದರೂ ಪ್ರಾಮಾಣಿಕತೆಯಿಂದ ಮಾಡಿ ತಮಗೆ ದೊರಕಿದ ಪ್ರತಿಫಲಕ್ಕೆ ತೃಪ್ತಿಪಟ್ಟುಕೊಳ್ಳುವ ಜನ. ತುಳುನಾಡಿನಲ್ಲಿ ಬೇರೆ ಬೇರೆ ಜಾತಿಗಳ ನಡುವೆ ಸಹಿಷ್ಣುತೆಯಿಂದ ಆರಾಮವಾಗಿ ಜೀವನ ಮಾಡುವುದು ಕುಲಾಲ ಸಮುದಾಯದವರ ವೈಷಿಷ್ಟ್ಯ. ರಾಜಕೀಯದಲ್ಲಿ ಅಷ್ಟೇನೂ ಭಾಗವಹಿಸದೆ ತಮಗೆ ದೊರೆತ ಸವಲತ್ತುಗಳಿಂದ ಸಮಾಧಾನ ಹೊಂದಿ ಸಂತೋಷಪಡುವರು. ಈ ಅಧ್ಯಯನದಲ್ಲಿ ಕುಲಾಲ ಸಮಾಜದ ಒಳಜಾತಿಗಳ ವಿಂಗಡನೆ, ಅದರಲ್ಲಿರುವ ಉಪ್ಯಾನ್ ಒಳಜಾತಿಯ ಹೆಣ್ಣುಮಕ್ಕಳ ಬಗೆಗಿರುವ ತಪ್ಪು ಕಲ್ಪನೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಕುಲಾಲ ಸಮಾಜದ ಈ ಮೂಢನಂಬಿಕೆಯು ಕಳಚಿ, ಒಳಜಾತಿಗಳಿಗೆ ಒಂದೇ ರೀತಿಯ ಸಮಾನ ಹಕ್ಕು ಹಾಗೂ ಅವುಗಳ ಬಗೆಗಿನ ತಪ್ಪು ಕಲ್ಪನೆಯನ್ನು ಹೋಗಲಾಡಿಸಿ ಸದೃಢ ಸಮಾಜದ ನಿರ್ಮಾಣವಾಗುತ್ತದೆ ಅನ್ನುವುದು ಲೇಖಕರ ಅಭಿಪ್ರಾಯವಾಗಿದೆ. ಈಗಾಗಲೇ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯಲ್ಲಿ ಆದಂತಹ ಕ್ರಾಂತಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಭವಿಸಿದರೆ ಈ ಸಮಸ್ಯೆಯು ಖಂಡಿತ ಮರೆಯಾಗುತ್ತದೆ. ಆಧಾರ ಗ್ರಂಥಗಳು
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
|
|
|
|
SITE MAP
SitePOSH |
NIRATHANKAOUR OTHER WEBSITESSubscribe |
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |