ಭ್ರಷ್ಟಾಚಾರ ಮತ್ತು ಕಪ್ಪುಹಣದ ವಿರುದ್ಧ ಆಂದೋಲನಗಳು ತಾರಕಕ್ಕೇರುತ್ತಿರುವ ಸಂದರ್ಭದಲ್ಲೇ ಮೈಸೂರು ನಗರಕ್ಕೆ ಆನೆಗಳು ನುಗ್ಗಿ ನಗರದ ನಾಗರಿಕರನ್ನು ಭಯಭೀತಗೊಳಿಸಿವೆ. ಅರೇ, ಇವೆರಡಕ್ಕೂ ಯಾವ ಸಂಬಂಧ ಎಂದು ವಿಚಿತ್ರ ರಾಗದಲ್ಲಿ ಆಶ್ಚರ್ಯದ ಧ್ವನಿ ಎತ್ತುವವರೇ ಹೆಚ್ಚೆಂಬುದು ನನಗೆ ಗೊತ್ತು. ಹೇಗೂ ಮುಖ್ಯಮಂತ್ರಿ ಯಡಿಯೂರಪ್ಪನವರೇ, ಆನೆಗಳ ಹಾವಳಿಯನ್ನು ಇನ್ನು ಮುಂದೆ ಗಂಭೀರ ಸಮಸ್ಯೆಯೆಂದು ಪರಿಗಣಿಸುವುದಾಗಿ ಭರವಸೆ ನೀಡಿದ್ದಾರಲ್ಲಾ? ಇನ್ನು ನಮ್ಮ ಅರಣ್ಯ ಮಂತ್ರಿಯವರು ಆನೆಗಳು ನಗರ ಪ್ರವೇಶಿಸದಂತೆ ತಡೆಯಲು ವಿಶೇಷ ಕಾರ್ಯಪಡೆ ರಚಿಸುವುದಾಗಿಯೂ ಘೋಷಿಸಿದ್ದಾರಲ್ಲಾ?. ಆದರೆ, ಜನರ ವಿಚಿತ್ರ ರೀತಿಯ ಆಶ್ಚರ್ಯದಂತೆಯೇ ಈ ಇಬ್ಬರ ಈ ಭರವಸೆ ಮತ್ತು ಘೋಷಣೆಗಳೂ ಅಸಂಬದ್ಧ, ಹಾಸ್ಯಾಸ್ಪದ ಎನ್ನದೆ ವಿಧಿಯಿಲ್ಲ. ಭಯೋತ್ಪಾದಕರ ವಿರುದ್ಧ ಕಟ್ಟೆಚ್ಚರದ ಮಾತಾಯಿತು, ವಿಶೇಷ ಕಮಾಂಡೋ ಪಡೆಗಳ ರಚನೆಯೂ ಆಯಿತು. ಆದರೆ ಭಯೋತ್ಪಾದನೆಯ ಭಯ ಮತ್ತು ಹಾವಳಿ ನಿಂತಿದೆಯೇ? ಈಗ ಆನೆಗಳ ಹಾವಳಿ ವಿರುದ್ಧ ಕಟ್ಟೆಚ್ಚರದ ಮತ್ತು ವಿಶೇಷ ಕಾರ್ಯಪಡೆಯ ಮಾತು! ಇದರಿಂದ ಕಾರ್ಯತಃ ಏನಾದರೂ ಪ್ರಯೋಜನವಾದೀತೇ? ಎಲ್ಲ ಕಾಡುಗಳ ಅಥವಾ ನಗರಗಳ ಸುತ್ತ ಹಗಲೂ ರಾತ್ರಿ ಕಾವಲು ಪಡೆಗಳನ್ನು ನಿಯೋಜಿಸಲಾಗುವುದೇ? ಅದು ಸಾಧ್ಯವೇ? ಅದೇನೇ ಇರಲಿ, ಜನ ಜೀವನ ಯಾವಾಗಲೂ ಕಟ್ಟೆಚ್ಚರದಲ್ಲೇ, ವಿಶೇಷ ಪಡೆಗಳ ಕಣ್ಗಾವಲಿನಲ್ಲೇ ಇರುವಂತಾಗುವುದು ಯಾವುದೇ ಆರೋಗ್ಯಕರ ಸಮಾಜದ, ಅದೂ ಜಾಗತಿಕ ಶಕ್ತಿಯಾಗುವತ್ತ ಸಮೃದ್ಧವಾಗಿ ಬೆಳೆಯುತ್ತಿದೆಯೆಂದು ಹೇಳಲಾಗುವ ನಮ್ಮ ಸಮಾಜದ ಒಳ್ಳೆಯ ಲಕ್ಷಣವೇ? ಸಮಾಜವಾದಿ ಚಿಂತಕ ಹಾಗೂ ಹೋರಾಟಗಾರ ಡಾ. ರಾಮಮನೋಹರ ಲೋಹಿಯಾ ವಿದೇಶವೊಂದರಲ್ಲಿ ತಮ್ಮ ಸಹವರ್ತಿಗಳೊಂದಿಗೆ ಕಾರಿನಲ್ಲಿ ಪಯಣಿಸುತ್ತಿದ್ದಾಗ ಎಲ್ಲಿಂದಲೋ ಕಣಜವೊಂದು ಹಾರಿ ಬಂದು ಅವರನ್ನೆಲ್ಲ ಕಾಡಿಸುತ್ತಿತ್ತಂತೆ. ಅವರ ಸಹವರ್ತಿಗಳು ಅದನ್ನು ಪ್ರತಿ ಬಾರಿ ಕೈಯಿಂದಲೋ, ಮತ್ತೊಂದರಿಂದಲೋ ಓಡಿಸಲು ಯತ್ನಿಸುತ್ತಿದ್ದರೂ, ಅದು ಪದೇ ಪದೇ ಹಾರಿ ಬಂದು ಕಾಡುವುದನ್ನು ಮುಂದುವರಿಸುತ್ತಿತ್ತಂತೆ. ಆಗ ಲೋಹಿಯಾ, ಕಾರಿನಲ್ಲಿ ಆ ಕಣಜದ ಗೂಡೆಲ್ಲಿದೆ ನೋಡಿ ಅದನ್ನು ಸ್ವಚ್ಛಗೊಳಿಸಿ ಎಂದು ಸೂಚಿಸಿ, ಅವರು ಕಾರ್ಯೋನ್ಮುಖರಾಗುವಂತೆ ಮಾಡಿದ ನಂತರವೇ ಅದರ ಹಾವಳಿ ತಪ್ಪಿತಂತೆ. ಹಾಗೇ, ಇಂದು ಭಯೋತ್ಪಾದನೆ, ವ್ಯಾಪಕ ಭ್ರಷ್ಟಾಚಾರ, ಕಪ್ಪು ಹಣದ ವ್ಯವಹಾರ, ಇವುಗಳ ಸುತ್ತಮುತ್ತ ದಿನನಿತ್ಯ ನಡೆಯುತ್ತಿರುವ ವಿವಿಧ ರೀತಿಯ ಗೂಂಡಾಗಿರಿ, ಕೊಲೆ, ಆತ್ಮಹತ್ಯೆ ಹಾಗೂ ಇನ್ನಿತರ ಅಪರಾಧಗಳು, ರೈತರ ಆತ್ಮಹತ್ಯೆ, ಪ್ರತಿಭಟನೆಗಳು, ನಕ್ಸಲೀಯರ ದಾಳಿಗಳು ಮತ್ತು ಇವೆಲ್ಲಕ್ಕೆ ಸಾಂಕೇತಿಕ ಕಳಶವಿಟ್ಟಂತೆ ಈಗ ಆನೆಗಳ ನಗರ ಪ್ರವೇಶ ಇವೆಲ್ಲ ಪರಸ್ಪರ ಸಂಬಂಧಪಟ್ಟಂತಿದ್ದು, ಇವುಗಳ ಹಿಂದೆ ಒಂದು ಸಾಮಾನ್ಯ ಕಾರಣವಿರುವುದನ್ನು ಗುರುಸಿದ ಹೊರತು, ಇವನ್ನು ನಿವಾರಿಸಲಾಗದು ಎಂಬ ಆಳದ ತಿಳುವಳಿಕೆ ಸಮಾಜದಲ್ಲಿ, ಮುಖ್ಯವಾಗಿ ನಮ್ಮನ್ನು ಆಳುವವರಲ್ಲಿ ತುರ್ತಾಗಿ ಮೂಡಬೇಕಿದೆ. ಅಥವಾ ಮೂಡುವಂತೆ ನಾವು ಸಾಮಾನ್ಯ ಜನ ನಮ್ಮ ಮಧ್ಯೆ ಶುದ್ಧ ಮತ್ತು ಸಮರ್ಥ ನಾಯಕತ್ವವನ್ನು ಬೆಳೆಸಬೇಕಿದೆ. ಹಾಗಾಗಿ ಕಟ್ಟುನಿಟ್ಟಿನ ಕ್ರಮ, ಕಾರ್ಯಪಡೆಯ ರಚನೆ, ಮಸೂದೆ, ಕಾನೂನು ಕ್ರಮ ಇತ್ಯಾದಿಗಳು ಪದೇ ಪದೇ ಕಾಡುವ ಕಣಜವನ್ನು ಕೈಯಿಂದ ಓಡಿಸಿದಂತೆ ತತ್ಕಾಲೀನ ಪರಿಹಾರಗಳಾದಾವೇ ಹೊರತು, ಅವುಗಳ ಮೂಲವನ್ನು ಸ್ವಚ್ಛಗೊಳಿಸುವ ಶಾಶ್ವತ ಪರಿಹಾರವಾಗಲಾರದು.
ಆನೆಗಳು ನಗರವನ್ನು ಏಕೆ ಪ್ರವೇಶಿಸಿ ದಾಂಧಲೆ ನಡೆಸುವಂತಾಯಿತು? ಇದೇನು ಇದ್ದಕ್ಕಿದ್ದಂತೆ ಅಥವಾ ತುಂಬಾ ಅನಿರೀಕ್ಷಿತವಾಗಿ ಸಂಭವಿಸಿದ ಘಟನೆಯೇನಲ್ಲ. ಆನೆಗಳು ಮಾತ್ರವಲ್ಲ, ಅಳಿದುಳಿದಿರುವ ಇತರ ವನ್ಯ ಮೃಗಗಳೂ ಪ್ರಕೃತಿ ಸಹಜವಾದ ತಮ್ಮ ಮೂಲ ನಿವಾಸ ಸ್ಥಾನಗಳನ್ನು ಕಳೆದುಕೊಂಡು ಅಸಾಹಯಕವಾಗಿ ಮತ್ತು ಅನಿವಾರ್ಯವಾಗಿ ಜನವಸತಿ ಕಡೆ ಬರುತ್ತಿರುವ ಅನೇಕ ಪ್ರಕರಣಗಳು ಇತ್ತೀಚಿನ ವರ್ಷಗಳಲ್ಲಿ ಪದೆ ಪದೇ ವರದಿಯಾಗುತ್ತಲೇ ಇವೆ. ನಾವು ಈ ಬೆಳವಣಿಗೆಯನ್ನು ಅವುಗಳ ತಂಟೆಕೋರತನ ಮಾತ್ರವೆಂಬಂತೆ, ಅದರ ಹಿಂದಿನ ಜೈವಿಕ ಒತ್ತಡವನ್ನು ಗಂಭೀರವಾಗಿ ಪರಿಗಣಿಸದೆ, ಹಾಗೆ ಕಾಡು ದಾಟಿ ಬಂದ ಆ ಪ್ರಾಣಿಗಳನ್ನು ಕೊಂದೋ, ಹೊಡೆದೋಡಿಸಿಯೋ ಅಥವಾ ನಾವು ಈಗ ಮಾಡಿರುವಂತೆ ಹಿಡಿದು ಹಾಕಿಯೋ ಸಮಸ್ಯೆಯನ್ನು ತತ್ಕಾಲೀನವಾಗಿ ಪರಿಹರಿಸಿಕೊಳ್ಳುತ್ತಿದ್ದೆವು. ಅದರ ಪರಿಣಾಮವನ್ನು ನಾವಿಂದು ಮೈಸೂರಿನಲ್ಲಿ ನೋಡಿದ್ದೇವೆ. ಹಾಗೇ ಈ ಮೈಸೂರು ಘಟನೆಯ ಮತ್ತು ಅದರ ಭವಿಷ್ಯದ ಸಾಧ್ಯ ರೂಪಗಳ ಕಲ್ಪನೆಯ ಭಯಾನಕತೆ ನಮ್ಮನ್ನು ಒಮ್ಮೆ ಎದ್ದು ಕೂತು ಯೋಚಿಸುವಂತೆ ಮಾಡಿದೆ. ಹಾಗೆ ಯೋಚಿಸಿದಾಗ, ಈ ಸಮಸ್ಯೆಯನ್ನು ಕುರಿತ ನಮ್ಮ ಗ್ರಹಿಕೆಯೇ ಮತ್ತು ಹಾಗಾಗಿ ಅದರ ಪರಿಹಾರವೂ ಎಷ್ಟು ಮೇಲ್ಮೈ ಮಟ್ಟದ್ದಾಗಿತ್ತು ಎಂಬುದು ಗೊತ್ತಾಗುತ್ತದೆ. ಈ ಘಟನೆಯ ಸಂಬಂಧವಾಗಿ ಟಿವಿ ವರದಿಯೊಂದರಲ್ಲಿ ಮೈಸೂರಿನ ಹೊರವಲಯದ ಬಡಾವಣೆಯೊಂದರ ದೊಡ್ಡ ಬಾಯಿಯ ಮಹಿಳೆಯೊಬ್ಬರು ತಮ್ಮ ವಿಶಾಲ ಮಹಡಿ ಮನೆಯ ಮುಂದೆ ತಮ್ಮ ಗೆಳತಿಯರೊಂದಿಗೆ ನಿಂತು, ಈ ಆನೆಗಳು ನಮ್ಮ ಮೈಸೂರಿಗೆ ಬರುತ್ತಿದ್ದಾಗ ಅರಣ್ಯ ಇಲಾಖೆಯವರು ಏನು ಮಾಡುತ್ತಿದ್ದರು? ಎಂದು ಕ್ಯಾಮರಾ ಮುಂದೆ ಅರಚಾಡುತ್ತಿದ್ದುದನ್ನು ನೋಡಿ ನಗು ಬಂದಿತು. ಹೌದು, ಕಾಡಾನೆಗಳನ್ನು ಕಲ್ಲು ಹೊಡೆದು ಓಡಿಸಲು ಯತ್ನಿಸುವ ಮೂರ್ಖ ಜನ ಇನ್ನೆಂತಹ ಮಾತಾಡಿ ಯಾರು, ಅದು ಬೇರೆ ವಿಷಯ! ಆದರೆ ಇವರೇನು, ಕಾಡಾನೆಗಳನ್ನು ಕುರಿಗಳೆಂದೂ, ಅರಣ್ಯ ಇಲಾಖೆಯ ಸಿಬ್ಬಂದಿಯನ್ನು ಈ ಕುರಿಗಳನ್ನು ಕಾಯುವ ಕುರುಬರೆಂದು ಭಾವಿಸಿದ್ದಾರೇನೋ ತಿಳಿಯದು! ಇಲ್ಲಿ ಕೇಳಬೇಕಾದ ಮುಖ್ಯ ಮತ್ತು ದೊಡ್ಡ ಪ್ರಶ್ನೆಯೆಂದರೆ, ಆನೆಗಳು ಮೈಸೂರನ್ನು ಪ್ರವೇಶಿಸುವಂತಾಗುವವರೆಗೂ ಮೈಸೂರಿಗರು ಮತ್ತು ಅವರು ಆರಿಸಿದ ಅಥವಾ ರೂಪಿಸಿದ ನಾಯಕರು ಹಾಗೂ ಆಡಳಿತಗಾರರು ಏನು ಮಾಡುತ್ತಿದ್ದರು ಎಂಬುದೇ ಆಗಿದೆ. ನೀವು ನಿಮ್ಮ ವಾಸ ಮತ್ತು ಜೀವನೋಪಾಯದ ಜಾಗವನ್ನು ಮಿತಿಯಿಲ್ಲದೆ ವಿಸ್ತರಿಸಿಕೊಳ್ಳುತ್ತಾ ಹೋಗಬಹುದು; ಅದರ ಪರಿಣಾಮವಾಗಿಯೇ, ನಿಮ್ಮಂತೆಯೇ ಈ ಭೂಮಿಯ ಮೇಲೆ ಬಾಳಲು ಬಂದ ವನ್ಯಜೀವಿಗಳು ತಮ್ಮ ವಾಸ ಮತ್ತು ಜೀವನೋಪಾಯದ ಜಾಗವನ್ನು ವಿಸ್ತರಿಸಿಕೊಳ್ಳಬಾರದೆ? ಮದ್ದು-ಗುಂಡು-ಬಂದೂಕು-ಬಾಂಬುಗಳೇ ನಿಮ್ಮ ತಳಿ ಶ್ರೇಷ್ಠತೆಯ ಹೆಗ್ಗುರುತುಗಳಾದಲ್ಲಿ, ಅವುಗಳನ್ನು ಬಳಸಿ ಅವನ್ನು ನಿಮ್ಮ ನಾಗರಿಕ ಗೂಂಡಾಗಿರಿಯ ಮೂಲಕ ಹದ್ದುಬಸ್ತಿನಲ್ಲಿಡಲು ಸಾಧ್ಯವೇ ಒಮ್ಮೆ ನೋಡಿ! ಹೇಗೂ ಈ ನಾಗರಿಕ ಗೂಂಡಾಗಿರಿಯನ್ನು ನಾವು ಸಮಾಜ ರಕ್ಷಣೆಯ ಹೆಸರಿನಲ್ಲಿ ಕಾನೂನುಬದ್ಧ ಮಾಡಿಬಿಟ್ಟಿದ್ದೇವಲ್ಲ? ಅರಣ್ಯ ಸಚಿವರು ಪ್ರಸ್ತಾಪಿಸಿರುವ ಕಾರ್ಯಪಡೆಯ ಹಿಂದಿನ ತತ್ತ್ವವೂ ಸರಿ ಸುಮಾರು ಇದೇ- ಮಾನವ ಶ್ರೇಷ್ಠತೆಯೇ-ಅಲ್ಲವೇ? ಇತ್ತೀಚಿನ ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣೆಗಳ ನಂತರ ಯಾರೋ ಪಾಪ, ದುಃಖದಿಂದ ತಮ್ಮ ಸುಂದರ ಬೆಂಗಳೂರು ಈಗ ಬರೀ ಗೂಂಡಾಗಳ ಆಳ್ವಿಕೆಗೆ ಒಳಗಾಗುತ್ತಿದೆ ಎಂದು ಅಲವತ್ತುಕೊಂಡರು. ಅದಕ್ಕೆ ನನ್ನ ಉತ್ತರ ಇದಾಗಿತ್ತು: ನಿಮ್ಮ ಸೌಂದರ್ಯ ಪ್ರಜ್ಞೆಯೇ ವಿಕ್ಷಿಪ್ತಗೊಂಡಂತಿದೆ. ಬೆಂಗಳೂರು ಈಗ ಸುಂದರ ನಗರವಾಗಿ ಉಳಿದಿಲ್ಲ. ಅದನ್ನು ನೀವು ಗೂಂಡಾಗಳು ಮಾತ್ರ ಆಳಬಲ್ಲ ರೀತಿಯಲ್ಲಿ ಕಟ್ಟಿಕೊಂಡಿದ್ದೀರಿ; ಅದಕ್ಕೆ ತಕ್ಕ ಬಾಳನ್ನೂ ಬಾಳುತ್ತಿದ್ದೀರಿ. ಹಾಗಾಗಿ, ನೀವು ಹೀಗೆ ದೂರುವ ಹಕ್ಕನ್ನು ಕಳೆದುಕೊಂಡಿದ್ದೀರಿ. 26/11 ಎಂದು ನಾವು ಪದೇ ಪದೇ ದೇಶಭಕ್ತಿಯ ಉಮ್ಮಳಿಕೆಯಲ್ಲಿ ಮುಂಬೈ ಮೇಲಿನ ದಾಳಿಯನ್ನು ನೆನಪಿಸಿಕೊಳ್ಳುತ್ತಾ, ಕಸಬ್ನನ್ನು ಇನ್ನೂ ಗಲ್ಲಿಗೇಕೇರಿಸಿಲ್ಲ ಎಂದು ಕ್ರುದ್ಧರಾಗಿ ಕೇಳುತ್ತಾ ಪಾಕಿಸ್ಥಾನದ ಮೇಲೆ ಕಿಡಿ ಕಾರುತ್ತಲೇ ಇರುತ್ತೇವೆ. ಆದರೆ ಆ ದಾಳಿಕೋರರು ನಮ್ಮ ಸುಪರ್ದಿಯಲ್ಲಿರುವ ಸಮುದ್ರದ ಮೇಲೆಯೇ ಮೈಲುಗಟ್ಟಲೆ ದೋಣಿಯಲ್ಲಿ ನಿರಾಳವಾಗಿ ತೇಲಿ ಬಂದು ಸಶಸ್ತ್ರಧಾರಿಗಳಾಗಿಯೇ ಗೇಟ್ ವೇ ಆಫ್ ಇಂಡಿಯಾ ಮೂಲಕ ಮುಂಬೈ ನಗರದ ಬೀದಿಗಳನ್ನು ಪ್ರವೇಶೀಸಿದರಲ್ಲಾ, ಆಗ ಮುಂಬೈನ ನಾಗರೀಕರು ಏನು ಮಾಡುತ್ತಿದ್ದರು? ಅದೂ ಭಯೋತ್ಪಾದನೆಯ ಆತಂಕ ಉತ್ತುಂಗ ಸ್ಥಿತಿಯಲ್ಲಿದ್ದು, ಆ ಬಗ್ಗೆ ಜನಜಾಗೃತಿಯ ಆಂದೋಲನವೇ ನಡೆದಿದ್ದ ದಿನಗಳವು! ಆದರೆ ಅಂದು ಜನ ಮಾತ್ರ ಭಯೋತ್ಪಾದನೆಯ ಸಮಸ್ಯೆಗೂ ತಮಗೂ ಏನೂ ಸಂಬಂಧವಿಲ್ಲದಂತೆ; ಕೆಲವರು ಅವರ ವಿಚಿತ್ರ ವೇಷವನ್ನು ನೋಡಿ ಸ್ವಲ್ಪ ಅನುಮಾನಗೊಂಡರೂ, ತಮಗೇಕೆ ಆ ಗೊಡವೆ ಮತ್ತು ಮುಂದಿನ ಪಡಿಪಾಟಲು ಎಂದೋ ಏನೋ, ತಂತಮ್ಮ ಬದುಕು ಕಟ್ಟಿಕೊಳ್ಳುವ ಮುಖ್ಯ ಕೆಲಸಗಳಲ್ಲಿ ತೊಡಗಿಕೊಂಡರು! ಏಕೆಂದರೆ ಇಂತಹ ತಮ್ಮ ಬದುಕಿನ ಕೆಲಸಗಳನ್ನು ಬಿಟ್ಟು, ಅಂತಹ ಸಾಮಾಜಿಕ ಪಡಿಪಾಟಲುಗಳಲ್ಲಿ ಸಿಕ್ಕಿ ಹಾಕಿಕೊಂಡರೆ, ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಾವು ಹಿಂದೆ ಉಳಿದುಹೋದೇವು ಎಂಬ ಆತಂಕ ಅವರದು! ಇದು ನಾವು ಕಟ್ಟಿಕೊಂಡಿರುವ ನಾಗರೀಕತೆಯ ಸತ್ತ್ವ. ಅದೂ ಮುಂಬೈ ಎಂಬ ಮಹಾನಗರದ ಮಹಾ ನಾಗರಿಕತೆಯ ಸತ್ತ್ವ! ನಾಗರಿಕತೆ ಎಂಬುದು ನಗರ ಎಂಬ ಶಬ್ದದಿಂದ ವ್ಯುತ್ಪತ್ತಿಯಾದುದು ಎಂದು ಕೇಳಿದ್ದೇನೆ. ನಗರ ಎಂಬುದು ನಾಗದಿಂದ ತನ್ನ ವ್ಯುತ್ಪತ್ತಿಯನ್ನು ಪಡೆದಿದೆ. ನಾಗ ಎಂದರೆ ಸರ್ಪ, ಶೀಘ್ರ ಚಲನೆ ಮತ್ತು ವೇಗಕ್ಕೆ ಪ್ರತೀಕ! ಅದರಲ್ಲಿ ವಿಷವೂ ಇದ್ದರೂ ಇಲ್ಲದಂತೆ ಇದೆಯಲ್ಲ? ಆದರೂ ನಗರೀಕರಣವೇ-ವಿಷದ ಹೊಳೆಯೇ-ನಮ್ಮ ಅಭಿವೃದ್ಧಿಯ ಮಂತ್ರವಾಗಿದೆ. 2015ರ ವೇಳೆಗೆ ಭಾರತವನ್ನು ನಗರ ದೇಶವನ್ನಾಗಿ ಮಾಡಬೇಕೆಂಬುದೇ ನಮ್ಮ ಪ್ರಧಾನಿ ಮನಮೋಹನ ಸಿಂಗರಿಗೆ ವಿಶ್ವಬ್ಯಾಂಕ್ ನೀಡಿರುವ ಕಾರ್ಯಕ್ರಮವಂತೆ! ಈ ಕಾರ್ಯಕ್ರಮ ಜನರ ಪ್ರತಿರೋಧದಿಂದಾಗಿ ಸದ್ಯಕ್ಕಂತೂ ಯಶಸ್ವಿಯಾಗುವಂತೆ ಕಾಣುತ್ತಿಲ್ಲವಾದರೂ, ಈ ಕಾರ್ಯಕ್ರಮದ ಹಪಾಹಪಿ ರಾಷ್ಟ್ರಾದ್ಯಂತ ಯಾವುದಾವುದೋ ರೂಪದಲ್ಲಿ ಕಾಣತೊಡಗಿರುವುದಂತೂ ನಿಜ. ಹಾಗಾಗಿಯೇ, ಒಂದು ಸಣ್ಣ ಉದಾಹರಣೆಯಾಗಿ ಹೇಳುವುದಾದರೆ, ಇಂದು ಕಲ್ಲು, ಕಬ್ಬಿಣಗಳ ಗಣಿ ಮತ್ತು ಮರಳಿನ ಮಾಫಿಯಾವನ್ನು ಯಾರೂ ತಡೆಯಲಾಗದಾಗಿದೆ. ತಡೆಯಲು ಹೋದವರು-ಸರ್ಕಾರದಲ್ಲಿರುವವರೂ ಸೇರಿದಂತೆ-ಅದರ ತ್ವರಿತ ಚಲನೆ ಮತ್ತು ವಿಷ ಸ್ಫುರಣೆಗೆ ಬಲಿಯಾಗುತ್ತಿದ್ದಾರೆ. ಇದು ಗಣಿ ಮಾಲೀಕರ ಅಥವಾ ಮರಳು ಗುತ್ತಿಗೆದಾರರ ದುರಾಸೆಗೆ ಸಂಬಂಧಿಸಿದ ವಿಷಯವೇ ಅಲ್ಲ ಎಂಬುದು ಇಲ್ಲಿ ಮುಖ್ಯ. ಅದು ಸಮಸ್ಯೆಯ ಸರಳೀಕರಣ. ಇದು ನಮ್ಮ ಅಭಿವೃದ್ದಿ ಕಲ್ಪನೆಯಲ್ಲೇ ಅಡಗಿರುವ ವಿಷದ ಬುಗ್ಗೆಯ ಪರಿಣಾಮ. ಈಗ ಆಯ್ದ ಕೆಲವು ಜನರ ಕೈಗೆ ಅಲ್ಪಾವಧಿಯಲ್ಲೇ ಸುಲಭ ದುಡಿಮೆಯ ಮೂಲಕ ರಾಶಿ ರಾಶಿ ಹಣ ಸೇರುವಂತಹ ಉದಾರ ಆರ್ಥಿಕ ವ್ಯವಸ್ಥೆಯನ್ನು ಕಾನೂನುಬದ್ಧವಾಗಿಯೇ ಸ್ಥಾಪಿಸಲಾಗಿದೆ. ಹಾಗೇ ಈ ನವ ಶ್ರೀಮಂತರು ಆ ಹಣವನ್ನು ಖರ್ಚು ಮಾಡಲೇ ಬೇಕಾದಂತಹ ಒತ್ತಾಯ ಹಾಗೂ ಆಕರ್ಷಣೆಗಳಿರುವ ಮುಕ್ತ ಮಾರುಕಟ್ಟೆಯನ್ನೂ ನಿರ್ಮಿಸಲಾಗಿದೆ. ಹಾಗಾಗಿ ಈ ಕೆಲವು ಜನ ತಮ್ಮ ಹಣವನ್ನು ಸುಮ್ಮನೆ ಕೊಳೆಯಲು ಬಿಡದೆ, ಸುಖಭೋಗಗಳ ಮೇಲೆ ಎಷ್ಟು ಖರ್ಚು ಮಾಡಿದರೂ ಅದರ ಸಿಬಿರೂ ಸವೆಯದೆ, ಮಾರುಕಟ್ಟೆಯಲ್ಲಿ ಇಂದು ಬಹು ಬೇಡಿಕೆಯಲ್ಲಿರುವ ನೆಲವನ್ನು ಸ್ಪರ್ಧಾತ್ಮಕವಾಗಿ ಕೊಳ್ಳತೊಡಗಿದ್ದಾರೆ. ಒಂದಲ್ಲ ಎರಡಲ್ಲ ಹಲವು ವಿಶಾಲ ಬಂಗಲೆಗಳನ್ನೂ, ಮನೆಗಳ ಮೇಲೆ ಮನೆಗಳನ್ನು ಕಟ್ಟಿಸುತ್ತಿದ್ದಾರೆ. ಇದೊಂದು ವಿಷವ್ಯೂಹ. ಇಂದು ನಗರಗಳ ಮಧ್ಯಮ ವರ್ಗಗಳ ಬಡಾವಣೆಗಳಲ್ಲಿ ಪುನರ್ನವೀಕರಣಗೊಳ್ಳದ ಮನೆಯೇ ಇಲ್ಲವಾಗಿದೆ! ಬೀದಿ ಬೀದಿಯಲ್ಲೂ, ಇಟ್ಟಿಗೆ, ಮರಳು, ಕಬ್ಬಿಣದ ರಾಶಿ ಬಿದ್ದಿದ್ದು ಜನ ಓಡಾಡುವುದೇ ಕಷ್ಟವಾಗತೊಡಗಿದೆ! ಇನ್ನು ನವ ಶ್ರೀಮಂತರು ಬಾಡಿಗೆಗೆ ಮುಗಿಲೆತ್ತರದ ಅಪಾರ್ಟ್‍ಮೆಂಟುಗಳನ್ನೂ, ಭವ್ಯ ಮಾಲ್ಗಳನ್ನೂ, ತೋಟಗಳಲ್ಲಿ ರೆಸಾರ್ಟ್‍ಗಳನ್ನೂ ಕಟ್ಟಿಸುವ ಮೂಲಕ ತಮ್ಮ ದೇಶಭಕ್ತಿಯನ್ನು ಮೆರೆಯುತ್ತಾ ದೇಶದ ಆರ್ಥಿಕತೆ ಎರಡಂಕಿ ದರದಲ್ಲಿ ಬೆಳೆಯಲು ತಮ್ಮ ಪಾಲನ್ನು ಸಲ್ಲಿಸಲು ಹಗಲೂ ರಾತ್ರಿ ದುಡಿಯುತ್ತಿದ್ದಾರೆ. ಇದಕ್ಕೆ ಅತ್ಯಗತ್ಯವಾಗಿ ಬೇಕಾದ ಅಪಾರ ಪ್ರಮಾಣದ ಮಣ್ಣು, ಕಲ್ಲು, ಕಬ್ಬಿಣ, ಮರ, ಮರಳನ್ನು ಒದಗಿಸುವ ಸುಗಮ ವ್ಯವಸ್ಥೆ ಬೇಡವೇ? ಇದಕ್ಕೆ ನಮ್ಮ ಬೆಟ್ಟ ಗುಡ್ಡಗಳನ್ನು ಅಗೆಯದಿರಲು, ಭೂಮಿಯನ್ನು ಬಗೆಯದಿರಲು, ಅರಣ್ಯಗಳನ್ನು ಕಡಿಯದಿರಲು, ನದಿಗಳನ್ನು ಒತ್ತರಿಸಿ ಬತ್ತಿಸದಿರಲು ಆಗುತ್ತದೆಯೇ? ಅಧಿಕ ಸುಖದ ಆಸೆಗಳನ್ನು ಸೃಷ್ಟಿಸುವುದು ಅಭಿವ್ರದ್ಧಿಯಾಗುವುದಾದರೆ, ಆ ಆಸೆಗಳನ್ನು ಪೂರೈಸಿಕೊಳ್ಳಲು ಹವಣಿಸುವುದು ಅಭಿವೃದ್ಧಿ ವಿರೋಧಿ ಹೇಗಾದೀತು? ಅದನ್ನು ತಡೆಯಲು ಯತ್ನಿಸುವುದು ವ್ಯಾವಹಾರಿಕವಾಗಿ ಎಷ್ಟು ನೈತಿಕ? ಇದು ಸರ್ಕಾರಕ್ಕೂ ಗೊತ್ತಿಲ್ಲದಿಲ್ಲ. ಹಾಗಾಗಿಯೇ ಅದು ಈ ನೈತಿಕತೆಯ ಒತ್ತಡದಲ್ಲಿ; ಪ್ರತ್ಯಕ್ಷವಾಗಿ ಪರಿಸರ ರಕ್ಷಣೆಯ ಕಾನೂನನ್ನೂ ಮಾಡುತ್ತದೆ, ಪರೋಕ್ಷವಾಗಿ ಕಾನೂನುಗಳನ್ನು ಉಲ್ಲಂಘಿಸಲೂ ಅವಕಾಶ ಮಾಡಿಕೊಡುತ್ತದೆ! ಅಥವಾ ಉಲ್ಲಂಘನೆಗಳ ಬಗ್ಗೆ ಬಾಯಲ್ಲಿ ಕಟುವಾಗಿ ಮಾತನಾಡುತ್ತಾ ಕಣ್ಣುಗಳನ್ನು ಮುಚ್ಚಿಕೊಂಡಿರುತ್ತದೆ. ಗಣಿ ಸಂಪತ್ತಿನ ಲೂಟಿ, ಅರಣ್ಯ ನಾಶ, ಮರಳು ಸಾಗಣೆಗಳ ಬಗ್ಗೆ ನಮ್ಮ ರಾಜ್ಯ ಸರ್ಕಾರದ ನಿಲುವು ಇದಕ್ಕೊಂದು ಉತ್ತಮ ನಿದರ್ಶನ. ನಮ್ಮ ಲೋಕಾಯುಕ್ತರೇನೋ ಹೋದಲೆಲ್ಲ ರಾಜ್ಯದ ಸಂಪತ್ತು ಲೂಟಿಯಾಗುತ್ತಿದೆ ಎಂದು ಕೂಗಿಕೊಂಡಿದ್ದೇ ಬಂತು; ಯಾವ ಪ್ರಯೋಜನವೂ ಇಲ್ಲದಾಗಿದೆ! ಅದೇನೇ ಇರಲಿ, ಇದನ್ನೆಲ್ಲ ನಾವು-ಈ ಅಧಿಕ ಆಸೆಗಳನ್ನು ನೈತಿಕವಾಗಿ ಕೆಟ್ಟದ್ದು ಎಂದು ಭಾವಿಸುವವರು-ಭ್ರಷ್ಟಾಚಾರ ಮತ್ತು ರಾಜಕೀಯ ಅನಾಚಾರ ಎಂದು ಕರೆಯುತ್ತೇವೆ. ಇದಕ್ಕೆ ವಿರುದ್ಧವಾಗಿ ಅವರು ನಮ್ಮನ್ನು ಅಭಿವೃದ್ಧಿಗೆ ಅಡ್ಡಗಾಲು ಹಾಕುವ ಅಧಿಕಪ್ರಸಂಗಿಗಳು ಎಂದು ಕರೆಯುತ್ತಾರೆ! ಇದರಿಂದ ಗೊಂದಲಗೊಳ್ಳುವ ಸಾಮಾನ್ಯ ಜನ ಈ ಗೊಂದಲವನ್ನು ತಾವು ಭಾಗಿಯಾದ ಭ್ರಷ್ಟಾಚಾರದ (ಉದಾಹರಣೆಗೆ, ತಮಗೆ ನೈತಿಕ ನೆಲೆಯಲ್ಲಿ ಅಥವಾ ಕಾನೂನುಬದ್ಧವಾಗಿ ಸಿಗಲಾರದ ಅನುಕೂಲಗಳನ್ನು ಪಡೆಯಲು ನೀಡುವ ಲಂಚ-ರುಷುವತ್ತುಗಳ) ಮತ್ತು ರಾಜಕೀಯ ಅನಾಚಾರದ (ಚುನಾವಣೆಗಳಲ್ಲಿ ಜಾತಿ-ಹಣ-ಹೆಂಡದ ಆಮಿಷಗಳಿಗೆ ಒಳಗಾಗುವ) ಪ್ರಕರಣಗಳನ್ನು ಜಾಣ ಮರವೆನಲ್ಲಿ ಬದಿಗಿಟ್ಟು ಮಿಕ್ಕೆಲ್ಲ ಭ್ರಷ್ಟಾಚಾರ-ರಾಜಕೀಯ ಅನಾಚಾರಗಳ ವಿರುದ್ಧ ಬೊಬ್ಬೆ ಹಾಕುತ್ತಾ ನಿವಾರಿಸಿಕೊಳ್ಳಲು ಯತ್ನಿಸುತ್ತಲೇ ಇರುತ್ತಾರೆ! ಜನಮನದ ಈ ಮಾನಸಿಕ ಒಡಕಿನ ಮೂಲ ಎಲ್ಲಿದೆ ಮತ್ತು ಇದಕ್ಕೂ ಆಳುವ ವ್ಯವಸ್ಥೆ ಇಂದು ತನ್ನ ಅಭಿವೃದ್ಧಿಯ ಹಪಾಹಪಿಯಲ್ಲಿ ಎದುರಿಸುತ್ತಿರುವ ನೈತಿಕ ಬಿಕ್ಕಟ್ಟಿಗೂ ಎಂತಹ ಸಂಬಂಧವಿದೆ ಎಂಬುದನ್ನು ಗುರುತಿಸದೆ, ಭ್ರಷ್ಟಾಚಾರ ಮತ್ತು ಕಪ್ಪುಹಣದ ವಿರುದ್ಧ ನಾವಾಗಲೀ, ಅಣ್ಣಾ ಹಜಾರೆ ಮತ್ತು ಅವರ ಗೆಳೆಯರಾಗಲೀ ಅಥವಾ ಬಾಬಾ ರಾಂದೇವ್ ಹಾಗೂ ಅವರ ಬೆಂಬಲಿಗರಾಗಲೀ ಹೋರಾಟದ ಮಾತಾಡುವುದು ಆತ್ಮದ್ರೋಹ ಮಾತ್ರವೆನಿಸುತ್ತದೆ. ಅದು ಪ್ರಕೃತಿಯ ಒತ್ತಡಕ್ಕೆ ಸಿಕ್ಕಿ ಮೈಸೂರು ನಗರವನ್ನು ಪ್ರವೇಶಿಸಿದ ಕಾಡಾನೆಗಳ ಭೀತಿಯನ್ನು ಅಂದಿನ ಮಟ್ಟಿಗೆ ತಹಬಂದಿಗೆ ತಂದುಕೊಂಡು ನೆಮ್ಮದಿಯ ನಿಟ್ಟಿಸಿರು ಬಿಡುವ ಮೂರ್ಖತನದಂತೆಯೇ ಸರಿ! ಇನ್ನು ಸಾವಿರ ಕೋಟಿಗಳ ಸರದಾರ ಬಾಬಾ ರಾಂದೇವರಂತಹವರ ಸಂನ್ಯಾಸತ್ವ ಮತ್ತು ಅದರಿಂದ ಸ್ಫೂರ್ತಿ ಪಡೆದ, ಬಹುಪಾಲು ಸೇಠಜಿ-ಸೇಠಾಣಿಗಳೇ ತುಂಬಿರುವ ಅವರ ಅನುಯಾಯಿಗಳ ದೇಶಭಕ್ತಿಯ ಮೊಳಗುಗಳು ಅತಿಭೋಗದಿಂದಲೋ ಅಥವಾ ಅತಿಲೋಭದಿಂದಲೋ ಉಂಟಾಗಿರುವ ಅಜೀರ್ಣದ ತೇಗುಗಳೇ ಸರಿ ಎಂದರೆ ತಪ್ಪಾಗಲಾರದು! ಜಪಾನಿನ ಸುಪ್ರಸಿದ್ಧ ಚಲನಚಿತ್ರ ನಿರ್ದೇಶಕ ಕುರೋಸಾವಾನ ಚಲನಚಿತ್ರವೊಂದರಲ್ಲಿ ನಗರದ ಹುಡುಗರು ಹಳ್ಳಿಯೊಂದಕ್ಕೆ ಭೇಟಿ ನೀಡಿ, ಅದರ ಮುಗ್ಧ ಸೌಂದರ್ಯಕ್ಕೆ ಮಾರು ಹೋಗಿ, ಆ ರಾತ್ರಿ ಅಲ್ಲಿಯೇ ಉಳಿಯಲು ನಿರ್ಧರಿಸುತ್ತಾರೆ. ಆದರೆ ಆ ಹಳ್ಳಿಯಲ್ಲಿ ವಿದ್ಯುತ್ತಿಲ್ಲ ಎಂದು ತಿಳಿದು ಹೌಹಾರಿ, ಬೆಳಕೇ ಇಲ್ಲದೆ ಕಗ್ಗತ್ತಲಲ್ಲಿ ರಾತ್ರಿ ಕಳೆಯುವ ಬಗ್ಗೆ ಆತಂಕಿತರಾಗಿ ಹಳ್ಳಿಯ ವಯೋವೃದ್ಧನನ್ನು ಆ ಬಗ್ಗೆ ಪ್ರಶ್ನಿಸುತ್ತಾರೆ. ಆ ವಯೋವೃದ್ಧ ಇವರ ಪ್ರಶ್ನೆಯಿಂದ ಆಶ್ಚರ್ಯಚಕಿತನಾಗಿ, ಅರೇ, ರಾತ್ರಿ ಎಂದರೆ ಇರಬೇಕಾದುದೇ ಹಾಗಲ್ಲವೇ? ಎಂದು ತಿರುಗಿ ಅವರನ್ನೇ ಪ್ರಶ್ನಿಸುತ್ತಾನೆ! ಈ ವಯೋವೃದ್ಧನ ಈ ಸಹಜ ಮುಗ್ಧತೆಯನ್ನು ಗಾಂಪತನವೆಂದು ನಮ್ಮ ಅಭಿವೃದ್ಧಿತನದ ಹುಸಿ ಹಮ್ಮಿನಲ್ಲಿ ಹೀನಾಯವಾಗಿ ತಿರಸ್ಕರಿಸುವ ನಾವು, ಯಾವುದು ಸಹಜವಾಗಿ ಹೇಗೆ ಇರಬೇಕೋ ಹಾಗೆ ಬಿಲ್ಕುಲ್ ಇರದಂತೆ ಮಾಡುವ ನಮ್ಮ ಸಾಹಸಗಳನ್ನೇ ನಾಗರಿಕತೆ, ಆಧುನಿಕತೆ, ಅಭಿವೃದ್ಧಿ ಎಂದೆಲ್ಲಾ ಕರೆದುಕೊಂಡು ಬೀಗುತ್ತಿದ್ದೇವೆ. ನಮ್ಮ ನಗರಗಳನ್ನು ಅಮೆರಿಕಾದ ನಗರಗಳ ರೋಚಕ ಮತ್ತು ಅಭಿವೃದ್ಧಿಪರವೆಂದು ಹೇಳಲಾಗುವ, ರಾತ್ರಿ ಬದುಕಿಗಾಗಿ ವಿದ್ಯುತ್ ಬೆಳಕಿನಲ್ಲಿ ಜಗಮಗಿಸುವಂತೆ ಮಾಡುವ ಆಸೆಯ ಆವೇಗಕ್ಕೆ ಸಿಕ್ಕಿ, ಅತ್ಯಾಧುನಿಕ ಅಣುವಿದ್ಯುತ್ ಸ್ಥಾವರಗಳನ್ನು ಆಹ್ವಾನಿಸುತ್ತಿದ್ದೇವೆ. ಜೊತೆಗೇ ಫುಕೋಶಿಮಗಳನ್ನೂ ಆಹ್ವಾನಿಸುತ್ತಿದ್ದೇವೆ ಎಂಬುದನ್ನು ಮರೆಯುತ್ತಿದ್ದೇವೆ! ಗಾಂಧೀಜಿ ಒಮ್ಮೆ ಹಡಗಿನಲ್ಲಿ ಪ್ರಯಾಣಿಸುತ್ತಿದ್ದಾಗ, ಹಡಗಿನ ಒಂದು ಬದಿಯಲ್ಲಿ ಜನಸಂದಣಿ ಕಂಡು, ಏನದೆಂದು ವಿಚಾರಿಸಿದರಂತೆ. ಜನ ಸಂದಣಿಯಲ್ಲಿದ್ದ ಒಬ್ಬ, ಇಲ್ಲಿ ಹಡಗಿನ ಮಾಲೀಕರು ಪ್ರಯಾಣಿಕರ ಆಕರ್ಷಣೆಗೆಂದು ದೂರದರ್ಶಕವನ್ನು ಇಟ್ಟಿದ್ದಾರೆ. ಇದರಲ್ಲಿ ಬರಿಗಣ್ಣಿಗೆ ಕಾಣದಂತಹ ದೂರದ ಆಕಾಶಕಾಯಗಳನ್ನು ಕಾಣಬಹುದು ಎಂದು ಅವರನ್ನು ಅದರತ್ತ ಆಹ್ವಾನಿಸಿದನಂತೆ. ಗಾಂಧೀಜಿ ಅದಕ್ಕೆ ನಸುನಕ್ಕು, ನನ್ನ ಕಣ್ಣಿಗೆ ಕಾಣುವಷ್ಟು ಜಗತ್ತು ನನಗೆ ಬೇಕಾದಷ್ಟಾಯಿತು; ಮಿಕ್ಕದ್ದರ ಉಸಾಬರಿ ನನಗೆ ಬೇಡ ಎಂದು ಒಂದಿಷ್ಟೂ ಕುತೂಹಲಿತರಾಗದೆ ಮುಂದೆ ನಡೆದರಂತೆ! ಇದನ್ನು ಸರಳವಾಗಿ, ಸುಲಭವಾಗಿ ಪ್ರಗತಿ ವಿರೋಧಿ ಎಂದು ಕರೆದು ಪ್ರಗತಿ ಪಥದಲ್ಲಿ ಮುಂದುವರೆದ ಜನರೇ ಇಂದು ಭಯೋತ್ಪಾದನೆ, ಭ್ರಷ್ಟಾಚಾರ, ಕಪ್ಪುಹಣ, ಗೂಂಡಾಗಳ ಆಳ್ವಿಕೆ, ರೈತರ ಆತ್ಮಹತ್ಯೆ, ಕೊನೆಗೆ ಈಗ ಆನೆಗಳ ನಗರ ಪ್ರವೇಶ ಇತ್ಯಾದಿಗಳಿಂದ ಗಾಬರಿಗೊಂಡು; ಅಣ್ಣಾ ಹಜಾರೆಯವರತ್ತಲೋ, ಬಾಬಾ ರಾಂದೇವ್ರತ್ತಲೋ, ಯಡಿಯೂರಪ್ಪನವರತ್ತಲೋ, ಮನಮೋಹನ ಸಿಂಗರತ್ತಲೋ, ಕೊನೆಗೆ ಓರ್ವ ದಕ್ಷ ಅರಣ್ಯಾಧಿಕಾರಿಯತ್ತಲೋ ಅಥವಾ ಕನಿಷ್ಠ ಸಮರ್ಥ ಮಾವುತನತ್ತಲೋ ಕಣ್ಣು ಹಾಯಿಸುತ್ತಾ, ಅವರಲ್ಲಿ ಯಾರಾದರೊಬ್ಬರಾದರೂ ತಮ್ಮ ರಕ್ಷಣೆಗೆ ಧಾವಿಸಿ ಬರುತ್ತಾರೋ ಇಲ್ಲವೋ ಎಂಬ ಆತಂಕದಲ್ಲಿ, ಬರಲೇ ಬೇಕೆಂಬ ಆಗ್ರಹದಲ್ಲಿ ದೊಡ್ಡ ಗಂಟಲಲ್ಲಿ ಕೂಗಾಡುತ್ತಲೋ, ಜೈಕಾರ ಹಾಕುತ್ತಲೋ, ಭಜನೆಗೆ ತಾಳ ಹಾಕುತ್ತಲೋ, ಹಾಡುತ್ತಾ ನರ್ತಿಸುತ್ತಲೋ, ಹೋಮ ಹವನ ನಡೆಸಿ ಕೃತಾರ್ಥರಾಗುತ್ತಲೋ; ಒಮ್ಮೆ ಹತಾಶೆಯಲ್ಲಿ, ಮತ್ತೊಮ್ಮೆ ಶುಭ ನಿರೀಕ್ಷೆಯಲ್ಲಿ ಮನುಷ್ಯ ಮತ್ತು ಪ್ರಾಣಿ ನಡುವಣ ಅವಸ್ಥೆಯಲ್ಲಿ ಕಾಲ ನೂಕುತ್ತಿದ್ದಾರೆ. ಆದರೆ ಎಲ್ಲಿಯವರೆಗೆ ಈ ದೇಹಕ್ಕೆ, ಈ ಮನಸ್ಸಿಗೆ, ಈ ಭೂಮಿಗೆ, ಅದರೊಳಗಿನ ಸಂಪತ್ತಿಗೆ, ಅದರ ಮೇಲಿನ ಈ ಆಕಾಶಕ್ಕೆ, ಈ ಗಾಳಿಗೆ, ಕಾಡಿಗೆ, ಕಾಡಿನೊಳಗಿನ ಜೀವ ಜಗತ್ತಿಗೆ ಧಾರಣೆಯ, ಸೈರಣೆಯ ಒಂದು ಮಿತಿಯಿದೆ; ಅದನ್ನು, ರಾಶಿ ರಾಶಿ ಹಣ, ಮನೆ, ಒಡವೆ, ವಸ್ತ್ರ, ಮಾಹಿತಿ-ಮನರಂಜನೆಯ ಸುಖಭೋಗಗಳ ಸಾಧನ ಸಲಕರಣೆಗಳನ್ನು ಅಡ್ಡಾದಿಡ್ಡಿ ಬಳಸಿ ದಾಟಿ ಹೊರಟಿರುವ ನಮಗೆ ಎಂದೂ ತೃಪ್ತಿಯಲ್ಲಿ ಕೊನೆಗೊಳ್ಳುವ ನಿಜವಾದ ಸುಖ ಒದಗಿಬರಲಾರದು ಎಂಬ ಆಳದ ಅರಿವು ಉಂಟಾಗುವುದಿಲ್ಲವೋ; ಆ ಅರಿವು ಉಂಟಾಗುವಂತಹ ವ್ಯವಧಾನ-ವಿಶ್ರಾಂತಿಗಳ ಬದುಕಿಗೆ ನಾವು ಮರಳುವುದಿಲ್ಲವೋ, ಅಲ್ಲಿಯವರೆಗೆ ನಾವು ನಮ್ಮ ಹಳ್ಳಿಗಳನ್ನು ಹಾಳುಕೊಂಪೆಗಳೆಂದು ಹಳಿದು ನಾಶ ಮಾಡುತ್ತಾ, ನಗರಗಳನ್ನು ಹುತ್ತಗಳಂತೆ ಕಟ್ಟುತ್ತಾ, ನಮ್ಮ ಈ ಅರ್ಧ ಮೃಗ-ಅರ್ಧ ಮನುಷ್ಯನ ಅವಸ್ಥೆಯಲ್ಲಿ ಮುಂದುವರೆಯುವುದು ನಮ್ಮ ಕರ್ಮವೇ ಆಗಿರುತ್ತದೇ! ಡಿ.ಎಸ್.ನಾಗಭೂಷಣ ಎಚ್.ಐ.ಜಿ.-5, ನುಡಿ, ಕಲ್ಲಳ್ಳಿ ಬಡಾವಣೆ, ವಿನೋಬ ನಗರ, ಶಿವಮೊಗ್ಗ-577 204
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
|
|
|
|
SITE MAP
SiteTRAININGJOB |
HR SERVICESOTHER SERVICESnIRATHANKA CITIZENS CONNECT |
NIRATHANKAPOSHOUR OTHER WEBSITESSubscribe |
MHR LEARNING ACADEMY
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|