ಬೇಗ ಊಟ ಮಾಡು. ಇಲ್ಲದಿದ್ದರೆ ಪೊಲೀಸ್ ಬರ್ತಾರೆ ನಮ್ಮ ಸುತ್ತಮುತ್ತಲಲ್ಲಿ ಈಗಲೂ ಈ ಮಾತು ಕೇಳಿ ಬರುತ್ತಿರುವುದು ಪೋಷಕತ್ವದ ವಿಪರ್ಯಾಸ. ಇಂತಹ ಹೆದರಿಕೆಯ ಮಾತಿನ ಮಧ್ಯೆಯೇ ಬೆಳೆದು ಬರುವ ನಮಗೆ ಬೆಳೆದಂತೆ ಪೊಲೀಸರೆಂದರೆ ನಡುಕವುಂಟಾಗುವುದು ಬಹಳ ಸಹಜ. ಪೊಲೀಸರೆಂದರೆ ಯಮ ಸ್ವರೂಪಿಗಳು, ಅವರಿಂದ ಜೋಪಾನವಾಗಿರಿ, ಪೊಲೀಸರ ಕೈಗೆ ಸಿಕ್ಕಿಬಿದ್ದಿರೋ ಮುಗಿಯಿತು ಎಂಬಿವೇ ಎಚ್ಚರಿಕೆಗಳೂ ಇಲ್ಲದಿಲ್ಲ. ಪೊಲೀಸರಿಗೆ ದೊಡ್ಡವರೂ ಒಂದೇ, ಮಕ್ಕಳೂ ಒಂದೇ, ಗಂಡಸರೂ ಹೆಂಗಸರೂ ಎಲ್ಲರನ್ನೂ ಒಂದೇ ತರಹ ಅವರು ನೋಡುವುದು ಎಂದೂ ಹೇಳುವವರು ಇಲ್ಲದಿರಲಿಲ್ಲ. ಪೊಲೀಸರು ನ್ಯಾಯವ್ಯವಸ್ಥೆಯ ಆಧಾರ ಸ್ತಂಭಗಳು. ಆದರೆ, ನ್ಯಾಯವ್ಯವಸ್ಥೆಯ ಮುಖ್ಯ ಕೊಂಡಿಯಾಗಿರುವ ಪೊಲೀಸರು ತಮಗೆ ವಿಪರೀತವಾದ ಅಧಿಕಾರವಿದೆ ಎಂಬ ಭ್ರಮೆಯನ್ನು ಇಟ್ಟುಕೊಂಡು ಅದರ ಮೂಲಕ ಇಡೀ ಸಮಾಜವನ್ನೇ ನಿಯಂತ್ರಿಸುವವರಂತೆ ನಡೆದುಕೊಳ್ಳುತ್ತಿರುವುದು ಸರ್ವೇಸಾಮಾನ್ಯ. ಈ ಪೊಲೀಸರೆದುರು ದೊಡ್ಡವರೇ ಹೋಗಲು ಹೆದರುವಂತಹ ವಾತಾವರಣವಿರುವಾಗ, ಮಕ್ಕಳು ಪೊಲೀಸ್ ಠಾಣೆಗೆ ಹೋಗುವ ಅಥವಾ ಪೊಲೀಸರೇ ಮಕ್ಕಳನ್ನು ಪೊಲೀಸ್ ಠಾಣೆಗೆ ಕರೆದೊಯ್ಯುವಂತಹ ಪರಿಸ್ಥಿತಿ ಬಂದಲ್ಲಿ ಏನಾಗುತ್ತದೆ ಎನ್ನುವ ಸಹಜ ಪ್ರಶ್ನೆ ಎಲ್ಲರಿಗೂ ಬರುತ್ತದೆ. ಅಂದರೆ, ಯಾವುದಾದರೂ ಮಗುವಿಗೆ ತೊಂದರೆಯಾದಲ್ಲಿ ದೌರ್ಜನ್ಯ, ಅತ್ಯಾಚಾರ, ಹಿಂಸೆ ಇತ್ಯಾದಿಗೆ ಗುರಿಯಾಗುವುದು, ಅಥವಾ ಮಕ್ಕಳೇ ಕಾನೂನು ವಿರೋಧೀ ಅಥವಾ ಕಾನೂನು ಮುರಿಯುವಂತಹ ಕೃತ್ಯಗಳನ್ನು ಮಾಡಿ ಪೊಲೀಸರ ಕೈಗೆ ಬೀಳುವುದು ಆದಲ್ಲಿ ಅಂತಹವರನ್ನು ಪೊಲೀಸರು ಹೇಗೆ ನಡೆಸಿಕೊಳ್ಳುತ್ತಾರೆ ಎಂಬ ಆತಂಕ ಹಲವರನ್ನು ಕಾಡುತ್ತವೆ.
ಪೊಲೀಸರಿಗೆ ಮಕ್ಕಳೊಂದಿಗೆ ಹೇಗೆ ವರ್ತಿಸಬೇಕೆಂಬ ಅರಿವು ಇರುತ್ತದೆಯೇನು? ಮಕ್ಕಳ ಮನಸ್ಸು ಮುರಿಯದಂತೆ ವರ್ತಿಸಲು ತರಬೇತಿ ಇರುತ್ತದೇನು? ಮಕ್ಕಳಿಗೆ ಅವರ ಕುಟುಂಬಗಳಿಗೆ ತೊಂದರೆಯಾಗದಂತೆ ಪೊಲೀಸ್ ವ್ಯವಸ್ಥೆ ನೋಡಿಕೊಳ್ಳುತ್ತದೇನು? ಎಂಬಿವೇ ಪ್ರಶ್ನೆಗಳು ಮೂಡುತ್ತಲೇ ಇರುತ್ತದೆ. ಇಂತಹವುಗಳಿಗೆ ಉತ್ತರಿಸಲೋ ಎಂಬಂತೆ, ದೇಶದಲ್ಲಿ ಈಗ ಜಾರಿಯಲ್ಲಿರುವ ಮಕ್ಕಳ ನ್ಯಾಯ, ಮಕ್ಕಳ ಪೋಷಣೆ ಮತ್ತು ರಕ್ಷಣೆ ಕಾಯಿದೆ 2000 (ಮುಂದೆ 2006ರಲ್ಲಿ ಮತ್ತು 2010ರಲ್ಲಿ ಕೆಲವು ತಿದ್ದುಪಡಿಗಳನ್ನು ಕಂಡಿದೆ) ಪೊಲೀಸ್ ಠಾಣೆಗಳು ಮಕ್ಕಳೊಡನೆ ಹೇಗೆ ವರ್ತಿಸಬೇಕು ಎಂದು ಸೂಚಿಸಿದೆ. ಅಷ್ಟೇ ಅಲ್ಲ, ಎಲ್ಲ ಪೊಲೀಸ್ ಠಾಣೆಗಳಲ್ಲಿ ಮಕ್ಕಳ ಸ್ನೇಹೀ ಮನಸ್ಸಿರುವ ಮಕ್ಕಳ ಕಲ್ಯಾಣಾಧಿಕಾರಿ (Child Welfare Officers) ಗಳೆಂದು ಕೆಲವು ಪೊಲೀಸ್ ಅಧಿಕಾರಿಗಳನ್ನು ಗುರುತಿಸುವ ಕೆಲಸ ನಡೆದಿದೆ. ಪ್ರತಿ ಪೊಲೀಸ್ ಠಾಣೆಯ ಇಂತಹ ಮಕ್ಕಳ ಕಲ್ಯಾಣಾಧಿಕಾರಿಗಳನ್ನೊಳಗೊಂಡ ಜಿಲ್ಲಾ ಮಟ್ಟದ ತಂಡವನ್ನು ಮಕ್ಕಳ ವಿಶೇಷ ಪೊಲೀಸ್ ಘಟಕ (Special Juvenile Police Unit-SJPU) ಎಂದು ಗುರುತಿಸುವುದೂ ಉಂಟು. ಜೊತೆಗೆ ದೇಶದ ಎಲ್ಲ ಪೊಲೀಸರಿಗೆ ತರಬೇತಿಗಳನ್ನಿತ್ತು ಅವರು ಮಕ್ಕಳ ಹಕ್ಕುಗಳನ್ನು ಎತ್ತಿಹಿಡಿಯುವ ಕೆಲಸ ಮಾಡಲು ಪ್ರೇರೇಪಣೆ ನೀಡಲಾಗುತ್ತಿದೆ. ಏನು ಮಾಡುತ್ತಾರೆ ಈ ವಿಶೇಷ ಪೊಲೀಸರು? ವಿಶ್ವಸಂಸ್ಥೆಯು ಬೀಜಿಂಗ್ನಲ್ಲಿ 1985ರಲ್ಲಿ ಮಕ್ಕಳ ನ್ಯಾಯ ಪಾಲನೆಗಾಗಿ ನಡೆಸಿದ ಸಮ್ಮೇಳನದಲ್ಲಿ ಮಕ್ಕಳ ಸ್ನೇಹೀ ಪೊಲೀಸ್ ಎಂಬ ಕಲ್ಪನೆಗೆ ಹೆಚ್ಚು ಒತ್ತು ಸಿಕ್ಕಿತ್ತು. ಆ ವಿಚಾರ ಈಗ ಜಾರಿಯಲ್ಲಿರುವ ಮಕ್ಕಳ ನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯಿದೆ 2000ರಲ್ಲಿ ಮಕ್ಕಳ ವಿಶೇಷ ಪೊಲೀಸ್ ಘಟಕದ ರೂಪದಲ್ಲಿ ಜಾರಿಗೆ ಬಂದಿದೆ. ಮಕ್ಕಳನ್ನು ಕುರಿತು ಪೊಲೀಸರ ಮತ್ತು ಸಮಾಜದ ದೃಷ್ಟಿಕೋನದಲ್ಲಿ ಧನಾತ್ಮಕ ಬದಲಾವಣೆಗಳು ಪ್ರಗತಿಗಾಮಿ ಕೆಲಸಗಳನ್ನು ಮಾಡಲು ಪ್ರತಿ ಪೊಲೀಸ್ ಠಾಣೆಯಲ್ಲಿರಬೇಕಿರುವ ಈ ಘಟಕದ ಮಕ್ಕಳ ಕಲ್ಯಾಣಾಧಿಕಾರಿಗಳ ಕೆಲಸ ಬಹಳ ವಿಶಿಷ್ಟವಾದುದು. ಒಂದೆಡೆ ಇವರು ಕಾನೂನಿನೊಡನೆ ಸಂಘರ್ಷಕ್ಕೊಳಗಾದ ಮಕ್ಕಳ (Children in conflict with the law) ಹಕ್ಕುಗಳನ್ನು ಕಾಪಾಡಬೇಕಿದೆ ಮತ್ತು ಆ ಮಕ್ಕಳನ್ನು ಕಾನೂನಿನಲ್ಲಿ ವಿವರಿಸಿರುವಂತೆ ಪ್ರಕ್ರಿಯೆಯಲ್ಲಿ ತೊಡಗಿಸಿ, ಮಕ್ಕಳನ್ನು ಪೋಷಕರೊಂದಿಗೆ ಹೋಗಲು ಬಿಡಬೇಕೋ (probation / release to parents / reprimand), ಮಕ್ಕಳ ನ್ಯಾಯ ಮಂಡಳಿ (Juvenile Justice Board-JJB) ಎದುರು ಹಾಜರು ಮಾಡಬೇಕೋ, ಅವರಿಗೆ ಜಾಮೀನಿನ ಮೇಲೆ ಬಿಡುಗಡೆ ಮಾಡಲು ಅವಕಾಶ ಕೊಡಬೇಕೋ ಎಂಬುದರ ಬಗ್ಗೆ ವಿವರಣೆಗಳನ್ನು ನೀಡಬೇಕು. ಇನ್ನೊಂದು ಪ್ರಮುಖ ಜವಾಬ್ದಾರಿ ಮಕ್ಕಳ ನ್ಯಾಯ ಕಾಯಿದೆಯಲ್ಲಿ ಸೂಚಿಸಿರುವಂತೆ ಯಾವ ಮಕ್ಕಳಿಗೆ ಪೋಷಣೆ ಮತ್ತು ರಕ್ಷಣೆ ಆವಶ್ಯಕತೆ ಇರುವ ಮಕ್ಕಳನ್ನೂ (ಅನಾಥರು, ಕಳೆದು ಹೋದವರು, ಬಾಲಕಾರ್ಮಿಕರು, ಶೋಷಣೆ ಮತ್ತು ಹಿಂಸೆಗೆ ಗುರಿಯಾದವರು, ಭಿಕ್ಷೆಗೆ ದೂಡಲ್ಪಟ್ಟವರು, ದೈಹಿಕ, ಮಾನಸಿಕ ಮತ್ತು ಲೈಂಗಿಕ ಶೋಷಣೆಗೆ ಒಳಗಾದವರು, ತಾರತಮ್ಯ, ನಿರ್ಲಕ್ಷ್ಯಕ್ಕೆ ಗುರಿಯಾದವರು, ಇತ್ಯಾದಿ) ಗುರುತಿಸಿ, ರಕ್ಷಿಸಿ ಅವರಿಗೆ ಯಾವುದೇ ರೀತಿಯ ಅವಮಾನವಾಗದಂತೆ ಗೌರವಯುತವಾಗಿ ನಡೆಸಿಕೊಂಡು ಅಂತಹ ಮಕ್ಕಳಿಗೂ ನ್ಯಾಯ ಒದಗಿಸುವುದಾಗಿದೆ. ಮಕ್ಕಳ ನ್ಯಾಯದ ಚರ್ಚೆ ಮಾಡುವಾಗ ಪ್ರಮುಖವಾಗಿ ಗಮನಿಸಬೇಕಿರುವುದು, ಪೊಲೀಸರ ಸಂಪರ್ಕಕ್ಕೆ ಬರುವ ಯಾವುದೇ ಮಗುವನ್ನು ಏನೋ ತಪ್ಪು ಮಾಡಿರುವವರಂತೆ ನೋಡಲೇಬಾರದು. ಮಕ್ಕಳು ಮಾಡಿರಬಹುದಾದ ಯಾವುದೇ ಕಾನೂನು ಉಲ್ಲಂಘನೆ ಪ್ರಕರಣಗಳಿಗೂ ಕಾನೂನಿನಂತೆ ಯಾವುದೇ ಶಿಕ್ಷೆ ಇಲ್ಲದಿರುವುದರಿಂದ (ಮಕ್ಕಳೆಂದರೆ 18 ವರ್ಷದೊಳಗಿನ ವ್ಯಕ್ತಿಗಳು) ಮಕ್ಕಳು ಮಾಡಿರುವ ಕಾನೂನು ಉಲ್ಲಂಘನೆಗಳನ್ನು ಅಪರಾಧ ಎಂದು ಪರಿಗಣಿಸಲೇಬಾರದು. ಜೊತೆಗೆ ಇಂತಹ ಮಕ್ಕಳನ್ನು ಎಂದಿಗೂ ಬಾಲಾಪರಾಧಿಗಳು ಎಂದು ಸಂಬೋಧಿಸಲೇಬಾರದು. ಮಕ್ಕಳ ವಿಶೇಷ ಪೊಲೀಸ್ ಘಟಕ ಮತ್ತು ಮಕ್ಕಳ ಕಲ್ಯಾಣಾಧಿಕಾರಿಗಳ ಕರ್ತವ್ಯಗಳು
ವಾಸುದೇವ ಶರ್ಮಾ .ಎನ್.ವಿ ನಿರ್ದೇಶಕರು, ಚೈಲ್ಡ್ ರೈಟ್ಸ್ ಟ್ರಸ್ಟ್, ಬೆಂಗಳೂರು.
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
|
|
|
|
SITE MAP
SiteTRAININGJOB |
HR SERVICESOTHER SERVICESnIRATHANKA CITIZENS CONNECT |
NIRATHANKAPOSHOUR OTHER WEBSITESSubscribe |
MHR LEARNING ACADEMY
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|