10. ಆರೋಗ್ಯ : ಗ್ರಾಮೀಣ ಸಮುದಾಯಗಳಲ್ಲಿರುವ ಪ್ರಚಲಿತ ಪ್ರಮುಖ ಸಮಸ್ಯೆಗಳಲ್ಲಿ ಒಂದು ಅನಾರೋಗ್ಯ. ಮನುಷ್ಯರ ಜೀವನದಲ್ಲಿ ಆರೋಗ್ಯ ಒಂದು ಮಹತ್ವದ ಅಂಶ. ಒಂದು ಸಮುದಾಯ ಪ್ರಗತಿಯನ್ನು ಕಾಣಬೇಕಾದರೆ, ಶಾಂತಿ ಸಮಾಧಾನದಿಂದ ಇರಬೇಕಾದರೆ ಅಂತಹ ಸಮುದಾಯದ ಸದಸ್ಯರು ಆರೋಗ್ಯಪೂರ್ಣವಾಗಿರಬೇಕು. `ಆರೋಗ್ಯ ಶಬ್ದಕ್ಕೆ ಆಯುರ್ವೇದ, ಹೋಮಿಯೋಪತಿ, ಅಲೋಪತಿ, ಯನಾನಿ ಮುಂತಾದ ವೈದ್ಯಪದ್ಧತಿಗಳು ಬೇರೆ ಬೇರೆ ಅರ್ಥಗಳನ್ನು ಕೊಡುತ್ತವೆ. ಆರೋಗ್ಯ ಎಂದರೆ ರೋಗವಿಲ್ಲದಿರುವಿಕೆ ಎಂದು ಸರಳವಾಗಿ ಹೇಳಬಹುದಾದರೂ ಆಯುರ್ವೇದ ವಿಜ್ಞಾನದಲ್ಲಿ ಇದಕ್ಕೆ ಸಮಾನವಾಗಿ `ಸ್ವಾಸ್ಥ್ಯ ಶಬ್ದವನ್ನು ಉಪಯೋಗಿಸುತ್ತಾರೆ. ``ಸ್ವಾಸ್ಥ್ಯವನ್ನು ದೋಷ, ಧಾತು, ಮಲಗಳು ತಮ್ಮ ಪ್ರಾಕೃತಿಕ ಸ್ಥಿತಿಗತಿಗಳಲ್ಲಿ ಹಾಗೂ ಆತ್ಮ, ಮನಸ್ಸು, ಇಂದ್ರಿಯಗಳು ಪ್ರಸನ್ನಸ್ಥಿತಿಯಲ್ಲಿ ಇದ್ದು ತಮ್ಮ ತಮ್ಮ ಕಾರ್ಯಗಳನ್ನು ನಿರ್ವಹಿಸುತ್ತಿರುವ ಸ್ಥಿತಿ ಎಂದು ವ್ಯಾಖ್ಯಾನಿಸಿದ್ದಾರೆ.4 ವಿಶ್ವ ಆರೋಗ್ಯ ಸಂಸ್ಥೆ, ``ಆರೋಗ್ಯವೆಂದರೆ ಮಾನವನು ರೋಗರಹಿತನಾಗಿರುವುದಲ್ಲ, ಸಂಪೂರ್ಣ ದೈಹಿಕ, ಮಾನಸಿಕ ಹಾಗೂ ಸಾಮಾಜಿಕವಾಗಿ ಉತ್ತಮ ಸ್ಥಿತಿಯಲ್ಲಿ ಇರುವುದಾಗಿದೆ5 ಎಂದು ವ್ಯಾಖ್ಯಾನಿಸುತ್ತದೆ. ಆರೋಗ್ಯ ಎಂಬ ಪರಿಕಲ್ಪನೆ ನೈರ್ಮಲ್ಯವನ್ನೂ ಒಳಗೊಂಡಿದೆ. ಹಾಗಾಗಿ ಸಮುದಾಯದ ಪ್ರತಿಯೊಬ್ಬ ಸದಸ್ಯನೂ ತಾನು ದೈಹಿಕ, ಮಾನಸಿಕ ಹಾಗೂ ಸಾಮಾಜಿಕವಾಗಿ ಉತ್ತಮ ಸ್ಥಿತಿಯಲ್ಲಿದ್ದು ತನ್ನ ಕುಟುಂಬದ ಹಾಗೂ ತನ್ನ ಸಮುದಾಯದ ಒಳಿತಿಗೆ ಶ್ರಮಿಸುವಂತಾಗಬೇಕು. ಗ್ರಾಮೀಣ ಸಮುದಾಯದ ಸದಸ್ಯರು ಕಷ್ಟ ಸಹಿಷ್ಣುಗಳು, ಬಡತನ ಇತ್ಯಾದಿ ಕಷ್ಟಗಳು ಬೇರೆ. ಕಾಲಕಾಲಕ್ಕೆ ಸರಿಯಾಗಿ ಊಟ ಮಾಡಲಾಗುವುದಿಲ್ಲ. ಗಾಳಿ, ಮಳೆ, ಬಿಸಿಲು, ಪ್ರವಾಹ, ಬರಗಾಲ ಮುಂತಾದ ಪ್ರಕೃತಿಯ ಸಹಜ ಪ್ರವೃತ್ತಿಗಳಿಗೆ ತಮ್ಮನ್ನು ಒಡ್ಡಿಕೊಳ್ಳುತ್ತಾರೆ. ಹಾಗಾಗಿ ಅವರು ನಿರಂತರವಾಗಿ ಆರೋಗ್ಯದಿಂದ ಇರಲಾಗುವುದಿಲ್ಲ. ಅನೇಕ ರೋಗಗಳಿಗೆ ತುತ್ತಾಗುತ್ತಾರೆ. ಹಾಗಾಗಿ ಅವರಿಗೆ ಆಸ್ಪತ್ರೆಗಳ ಅನುಕೂಲಗಳು ಬೇಕು.
ಆರೋಗ್ಯ ಇಲಾಖೆಯವರು ಹತ್ತಾರು ಹಳ್ಳಿಗಳನ್ನು ಸೇರಿಸಿ, ಕೇಂದ್ರ ಗ್ರಾಮದಲ್ಲಿ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮತ್ತು ಎರಡು-ಮೂರು ಹಳ್ಳಿಗಳನ್ನು ಸೇರಿಸಿ (ಜನಸಂಖ್ಯೆಯ ಆಧಾರದ ಮೇಲೆ) ಒಂದು ಆರೋಗ್ಯ ಘಟಕವನ್ನು ಒದಗಿಸಿದ್ದಾರೆ. ಅಂದರೆ ಇನ್ನೂ ಅನೇಕ ಹಳ್ಳಿಗಳಲ್ಲಿ ಆರೋಗ್ಯ ಘಟಕಗಳಿಲ್ಲ. ಇರುವ ಆರೋಗ್ಯ ಘಟಕಗಳಲ್ಲಿ ತರಬೇತಿ ಪಡೆದ ಆರೋಗ್ಯ ಸಹಾಯಕರ ಕೊರತೆಯಿದೆ. ಆರೋಗ್ಯ ಘಟಕಗಳಲ್ಲಿ ಚುಚ್ಚುಮದ್ದು ಹಾಕಲು ಬೇಕಾದ ಅನುಕೂಲತೆ ಇಲ್ಲ. ಶೀತಲ ಪೆಟ್ಟಿಗೆ ಇಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಚಿಕ್ಕ ಪ್ರಮಾಣದ ಶಸ್ತ್ರಚಿಕಿತ್ಸೆ ಮಾಡಲು, ಸುಖವಾಗಿ ಹೆರಿಗೆ ಮಾಡಿಸಲು, ಸುಸಜ್ಜಿತವಾದ ವ್ಯವಸ್ಥೆ ಇರುವ ಕೋಣೆಗಳಿಲ್ಲ. ಅರ್ಹ, ವಿದ್ಯಾವಂತ ವೈದ್ಯಾಧಿಕಾರಿಗಳ, ದಾದಿಯರ, ತಂತ್ರಜ್ಞರ, ಸಿಬ್ಬಂದಿಯ ಕೊರತೆ ಇದೆ. ಬಂದವರು ಹಳ್ಳಿಗಳಲ್ಲಿ ಬಹಳ ದಿನ ಉಳಿಯುವುದಿಲ್ಲ. ಆಂಬುಲೆನ್ಸ್ಗಳ ಕೊರತೆ ಇದೆ. ಔಷಧಗಳ ಸರಬರಾಜು, ವಿತರಣೆ ಸರಿಯಾಗಿ ಆಗುತ್ತಿಲ್ಲ. ಔಷಧಗಳು ಹೊರಗೆ ಮಾರಾಟವಾಗುತ್ತವೆ ಇತ್ಯಾದಿಗಳ ದೂರು ಬೇರೆ. ಇದೆಲ್ಲಾ ಮೇಲ್ವಿಚಾರಣಾ ವ್ಯವಸ್ಥೆಯ ಕಥೆಯನ್ನು ಹೇಳುತ್ತವೆ. ಹಾಗಾಗಿ ಜನಸಾಮಾನ್ಯರು ತಮ್ಮ ರೋಗ-ರುಜಿನಗಳಿಗಾಗಿ ಖಾಸಗಿ ವೈದ್ಯರ ಮೊರೆಹೋಗಬೇಕಾಗಿದೆ. ಹಳ್ಳಿಗಳಲ್ಲಿಯೂ ಅಳಲೆಕಾಯಿ ವೈದ್ಯರದೇ ಪ್ರಾಬಲ್ಯ. ಯಾವುದೋ ರೋಗಕ್ಕೆ ಇನ್ಯಾವುದೋ ರೋಗದ ಔಷಧಿಗಳನ್ನು ಮಿಶ್ರಮಾಡಿ, ಹಾಕಿ ತೊಂದರೆಗಳನ್ನು ತಂದುಕೊಂಡ ಉದಾಹರಣೆಗಳು ಅನೇಕ ಇವೆ. ಇದಕ್ಕೆ ದೇಶದಾದ್ಯಂತ ಒಂದು ನಿಯಂತ್ರಣ ವ್ಯವಸ್ಥೆ ಹಾಗೂ ಒಂದು ಸರ್ವತೋಮುಖ ಆರೋಗ್ಯ ಸೇವೆಗಳ ನಿರ್ವಹಣಾ ವ್ಯವಸ್ಥೆಯ ಅವಶ್ಯಕತೆಯಿದೆ. ಅಂತಹ ವ್ಯವಸ್ಥೆ ಇದ್ದ ಪಕ್ಷದಲ್ಲಿ ಅದನ್ನು ಇನ್ನೂ ಹೆಚ್ಚು ದಕ್ಷತೆಯಿಂದ ಜಾರಿಗೊಳಿಸಬೇಕಾಗಿದೆ. ಆರೋಗ್ಯದ ಪರಿಕಲ್ಪನೆ ನೈರ್ಮಲ್ಯದ ಅಂಶವನ್ನೂ ಒಳಗೊಂಡಿದೆ. ನೈರ್ಮಲೀಕರಣದ ಅರ್ಥವ್ಯಾಪ್ತಿಯಲ್ಲಿ ಪಾಯಿಖಾನೆ ಸ್ವಚ್ಛತೆ, ತೆರೆದ ಗುಂಡಿಗಳು, ಕಸ ಗುಡಿಸುವುದು, ಚರಂಡಿ ಸ್ವಚ್ಛಗೊಳಿಸುವುದು ಮುಂತಾದ ಅಂಶಗಳನ್ನು ಇಲ್ಲಿಯವರೆಗೆ ಸೇರಿಸಿಕೊಳ್ಳಲಾಗಿತ್ತು. ಆದರೆ ಇಂದಿನ ದಿನಗಳಲ್ಲಿ ಅದರ ಅರ್ಥವ್ಯಾಪ್ತಿಯಲ್ಲಿ, ``ಮಾನವ ಮಲವನ್ನು ಸುರಕ್ಷಿತವಾಗಿ ಹೊರಸಾಗಿಸುವುದು, ದ್ರವ ತ್ಯಾಜ್ಯವನ್ನು ಹೊರಸಾಗಿಸುವುದು, ಘನತ್ಯಾಜ್ಯವನ್ನು ಹೊರ ಸಾಗಿಸುವುದು, ಕುಡಿಯುವ ನೀರಿನ ಸಂಗ್ರಹಣೆ, ಶೇಖರಣೆ ಮತ್ತು ಬಳಕೆ, ಗೃಹ ನೈರ್ಮಲ್ಯ ಮತ್ತು ಆರೋಗ್ಯ, ವೈಯಕ್ತಿಕ ಚೊಕ್ಕಟತನ ಹಾಗೂ ಪರಿಸರ ಆರೋಗ್ಯ, ಮುಂತಾದ ಅಂಶಗಳನ್ನು ಸೇರಿಸಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಮಾನವ ತ್ಯಾಜ್ಯ, ದ್ರವ ತ್ಯಾಜ್ಯ, ಘನ ತ್ಯಾಜ್ಯಗಳ ವಿಲೇವಾರಿ ಕ್ಷೇತ್ರಗಳಲ್ಲಿ ಹೆಚ್ಚಿನ ಪ್ರಗತಿಯನ್ನು ಸಾಧಿಸಲಾಗಿಲ್ಲ. ಹಳ್ಳಿಗಳಲ್ಲಿ ಸಾಮೂಹಿಕ ಪಾಯಿಖಾನೆಗಳನ್ನು ಕಟ್ಟಲಾಗಿದೆ. ಸಮರ್ಪಕ ನೀರಿನ ಬಳಕೆಯಿಲ್ಲದೆ ಅವುಗಳ ಉಪಯೋಗ ಗರಿಷ್ಟ ಮಟ್ಟದಲ್ಲಿ ಆಗುತ್ತಿಲ್ಲ. ಕೆಲವು ಗ್ರಾಮಗಳಲ್ಲಿ ಇನ್ನೂ ಬಯಲು ಶೌಚಾಲಯವನ್ನು ಕಾಣುತ್ತೇವೆ. ಎಲ್ಲರಿಗೂ ಗೊತ್ತಿರುವಂತೆ ಬಯಲು ಶೌಚಾಲಯಗಳಿಂದ ಕಾಲರಾ, ಭೇದಿ, ಟೈಫಾಯ್ಡ್, ಜಂತುಹುಳು ಮತ್ತಿತರ ಅಂಟುಜಾಡ್ಯಗಳು ಪಸರಿಸುತ್ತವೆ. ಮಕ್ಕಳ ಸಾವಿನ ಕಾರಣಗಳಲ್ಲಿ ಐದು ಕಾರಣಗಳು ಈ ತರಹದ ಸೊಂಕಿಗೆ ಸಂಬಂಧಪಟ್ಟಿವೆ. ಮಹಿಳೆಯರಂತೂ ಗ್ರಾಮೀಣ ಪ್ರದೇಶಗಳಲ್ಲಿ ಶೌಚಾಲಯಕ್ಕಾಗಿ ಹಾಗೂ ಮಾಸಿಕ ಋತುಸ್ರಾವ ಸಮಯದಲ್ಲಿ ಎದುರಿಸುವ ಸಮಸ್ಯೆಗಳಿಗೆ ಸಂಬಂಧಪಟ್ಟಂತೆ ತುಂಬಾ ದಯನೀಯ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಕುಡಿಯುವ ನೀರಿನ ಸಂಗ್ರಹಣೆ ಮತ್ತು ವಿತರಣೆ ಸಮರ್ಪಕವಾಗಿಲ್ಲ. ಬಹಳಷ್ಟು ನೀರು ಪೋಲಾಗುತ್ತಿದೆ. ಗ್ರಾಮೀಣ ಜನತೆಗೆ ನೀರನ್ನು ಮಿತವಾಗಿ ಬಳಸುವ ಪದ್ಧತಿಯನ್ನು ತಿಳಿಹೇಳಬೇಕಾಗಿದೆ. ಕಸಗುಡಿಸುವುದು, ಕಸವನ್ನು ವಿಂಗಡಿಸುವುದು, ಕಸವನ್ನು ಸರಿಯಾಗಿ ವಿಲೇವಾರಿ ಮಾಡುವುದು ಆಗುತ್ತಿಲ್ಲ. ಆ ಬಗ್ಗೆಯೂ ಗ್ರಾಮೀಣ ಜನತೆಗೆ ತಿಳುವಳಿಕೆಯನ್ನು ಕೊಡಬೇಕಾಗುತ್ತದೆ. ನೈರ್ಮಲ್ಯದ ಸಮಗ್ರ ಕಲ್ಪನೆಯನ್ನು ಮನದಟ್ಟು ಮಾಡಿಕೊಡುವುದರ ಜೊತೆಗೆ, ನೈರ್ಮಲ್ಯ ಯೋಜನೆಗಳನ್ನು ಸಮಾಧಾನಕರವಾಗುವಂತೆ ಅನುಷ್ಠಾನಗೊಳಿಸಬೇಕಾಗಿದೆ. ಹಳ್ಳಿಗಳಲ್ಲಿ ಬಟ್ಟೆ ಒಗೆಯುವ ಕಟ್ಟೆಗಳಿಲ್ಲ. ಇದ್ದ ಕೆಲವು ಕಡೆ ನೀರಿನ ಅನುಕೂಲವಿಲ್ಲ. ಅಂತಹ ಕಟ್ಟೆಗಳಿಗೆ ನೆರಳಿಲ್ಲ. ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಸಾರ್ವಜನಿಕ ಆರೋಗ್ಯದ ಬಗ್ಗೆ ಇನ್ನೂ ಹೆಚ್ಚಿನ ಆಸಕ್ತಿಯನ್ನು ಸಂಬಂಧಪಟ್ಟವರು ತೋರಿಸಬೇಕಾಗಿದೆ. 11. ವಸತಿ :- ಗ್ರಾಮ ಸಮುದಾಯಗಳ ಜ್ವಲಂತ ಸಮಸ್ಯೆಗಳಲ್ಲಿ ಒಂದು ವಸತಿ ಸಮಸ್ಯೆ. ನಗರ ಸಮುದಾಯಗಳಲ್ಲಿರುವಂತೆ ಗ್ರಾಮ ಸಮುದಾಯಗಳಲ್ಲಿಯೂ ವಸತಿ ಸಮಸ್ಯೆಗೆ ಅನೇಕ ಮುಖಗಳಿವೆ ಹಾಗೂ ಅನೇಕ ಕಾರಣಗಳಿವೆ. ಬಡತನದ ಕಾರಣದಿಂದ ಗ್ರಾಮೀಣ ಜನತೆಗೆ ಮನೆಗಳಿಲ್ಲದೆ ಇರಬಹುದು. ಕೆಲವರಿಗೆ ಮನೆ ಇದೆ ಆದರೆ ಕಳಪೆ ಗುಣಮಟ್ಟದಿಂದ ಕೂಡಿದವು. ನಾಲ್ಕರಿಂದ ಆರಡಿ ಎತ್ತರದ ಗೋಡೆಗಳಿದ್ದು, ಅದಕ್ಕೆ ಗೋಪುರಾಕಾರದಲ್ಲಿ ಹುಲ್ಲಿನ ಮೇಲ್ಛಾವಣಿ ಇರುತ್ತವೆ. ಬೇಸಿಗೆ ಕಾಲದಲ್ಲಿ ಬೆಂಕಿ ಅನಾಹುತ ಆಗುವ ಸಂಭವ ಹೆಚ್ಚು. ಇಂತಹ ಮನೆಗಳಲ್ಲಿ ಗಾಳಿ, ಬೆಳಕಿನ ಕೊರತೆ ಇರುತ್ತದೆ. ಇಡೀ ಮನೆಗೆ ಬಾಗಿಲು ಒಂದೆ. ಕಿಟಕಿಗಳು ಇರುವುದಿಲ್ಲ. ಇದ್ದ ಮನೆಯಲ್ಲೇ ಮೂರು ಭಾಗ ಮಾಡಿಕೊಂಡು, ಒಂದು ಭಾಗದಲ್ಲಿ ಅಡಿಗೆ ಮಾಡಿಕೊಳ್ಳಲು, ಇನ್ನೊಂದು ಭಾಗದಲ್ಲಿ ದನಕರ ಕಟ್ಟಿಕೊಳ್ಳಲು ಹಾಗೂ ಮತ್ತೊಂದು ಭಾಗ ಜೀವಿಸಲು, ಮಲಗಲು ಉಪಯೋಗಿಸುವುದು ಕಂಡುಬರುತ್ತದೆ. ಮನೆಯ ಎಲ್ಲಾ ಸಾಮಗ್ರಿಗಳನ್ನು ಅಡಿಗೆ ಕೋಣೆಯ ಭಾಗದ ಒಂದು ಮೂಲೆಯಲ್ಲಿ ಪೇರಿಸಿಟ್ಟಿರುತ್ತಾರೆ. ದನಕರುಗಳೂ ಜೊತೆಗೇ ಜೀವಿಸುತ್ತವಾದ್ದರಿಂದ, ಅವುಗಳ ಗಂಜಲು, ಸೆಗಣಿ, ಹುಲ್ಲು ಮುಂತಾದವುಗಳಿಂದ ರೋಗರುಜಿನ ಸುಲಭವಾಗಿ ಹರಡಲು ಅವಕಾಶವಿರುತ್ತದೆ. ನೀರಿಗಾಗಿ ಕೊಳವೆಭಾವಿಗೊ, ಓಣೀ ಕೊಳಾಯಕ್ಕೊ ಹೋಗಬೇಕು. ಮನೆಗೆ-ಗುಡುಸಿಲಿಗೆ ನೀರಿನ ಕೊಳಾಯಿ ಅನುಕೂಲ ಇರುವುದಿಲ್ಲ. ದೀಪದ ಬೆಳಕೂ ಹೆಚ್ಚಾಗಿ ಇರುವುದಿಲ್ಲ. ಗುಡಿಸಲಾದರೆ ವಿದ್ಯುಶ್ಛಕ್ತಿ ದೀಪ ಉರಿಸುವುದು ಅಪಾಯ. ಹೆಂಚಿನ ಮನೆ, ಮಣ್ಣಿನ ಮನೆ ಇದ್ದರೆ ಇಂತಹ ದೀಪ ಹಾಕಿಸಬಹುದು. ಸುತ್ತಲಿನ ಪರಿಸರವೂ ಸ್ವಚ್ಛವಾಗಿರುವುದಿಲ್ಲ. ಮನೆ ಹತ್ತಿರವೇ ತಿಪ್ಪೆಗಳು ಹಾಗೂ ಗುಂಡಿಗಳು. ಜನಸಂಖ್ಯೆ ಹೆಚ್ಚಿರುವುದರಿಂದ ನಾಲ್ಕು ಜನ ಜೀವಿಸಬಹುದಾದ ಒಂದು ಮನೆಯಲ್ಲಿ ಎಂಟು-ಹತ್ತು ಜನರಿರುತ್ತಾರೆ. ದಂಪತಿಗಳಿಗೆ ಏಕಾಂತತೆ ಇರುವುದಿಲ್ಲ. ಪ್ರತಿಯೊಂದು ಮನೆಗೂ ಪ್ರತ್ಯೇಕ ಸ್ನಾನದ ಕೋಣೆ, ಪಾಯಿಖಾನೆ ಇರುವುದಿಲ್ಲ. ಸರಕಾರದವರು ಪಾಯಿಖಾನೆ ಕಟ್ಟಿಸಿಕೊಟ್ಟರೂ ಅದನ್ನು ಸರಿಯಾಗಿ ಉಪಯೋಗಿಸುವುದಿಲ್ಲ ಹಾಗೂ ನಿರ್ವಹಣೆ ಮಾಡಿಕೊಳ್ಳುವುದಿಲ್ಲ. ಪಾಯಿಖಾನೆಯನ್ನು ಕಟ್ಟಿಗೆ ಶೇಖರಿಸಿಡಲು, ಅಥವಾ ಬೇರೆ ಕೆಲಸಕ್ಕೆ ಉಪಯೋಗಿಸುತ್ತಾರೆ. ಹೀಗೆ ವಸತಿಸಮಸ್ಯೆ ಬೆಳೆಯುತ್ತಾ ಹೋಗುತ್ತದೆ. ವಸತಿ ಸಮಸ್ಯೆಗೆ ಬಡತನ, ಹೆಚ್ಚಿನ ಜನಸಂಖ್ಯೆ, ಕಳಪೆ ಸಾಮಗ್ರಿಗಳ ಉಪಯೋಗ, ನೀರಿನ ಅಭಾವ, ಜಾಗದ ಕೊರತೆ, ಸಂಯೋಜನೆಯ ಕೊರತೆ ಮುಂತಾದ ಕಾರಣಗಳನ್ನು ಕೊಡಬಹುದಾಗಿದೆ. ಇವುಗಳ ಜೊತೆಗೆ ನಿರಕ್ಷರತೆ, ಅಜ್ಞಾನ, ಸಂಪ್ರದಾಯ ಶರಣತೆ, ಮುಂತಾದ ಕಾರಣಗಳೂ ಸೇರಿ ಸಮಸ್ಯೆಯನ್ನು ಇನ್ನಷ್ಟು ಜಟಿಲಗೊಳಿಸುತ್ತವೆ. ಇವೆಲ್ಲವುಗಳ ಪರಿಣಾಮವಾಗಿ ಗ್ರಾಮೀಣ ವಸತಿ ಸಮಸ್ಯೆ ಜಟಿಲ ಸಮಸ್ಯೆಗಳಲ್ಲಿ ಒಂದಾಗಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು, ಇಂದಿರಾ ಆವಾಸ ಯೋಜನೆಯನ್ನೂ ಒಳಗೊಂಡಂತೆ ಅನೇಕ ನಿವೇಶನ ಹಾಗೂ ವಸತಿ ಯೋಜನೆಗಳನ್ನು ಅನುಷ್ಠಾನಗೊಳಿಸಿವೆ. ಕೆಲವೊಮ್ಮೆ ಅರ್ಹ ಫಲಾನುಭವಿಗಳಿಗೆ ಯೋಜನೆಯಡಿ ಅನುಕೂಲಗಳು ದೊರಕುತ್ತಿಲ್ಲವೆಂಬ ಕೂಗಿದೆ. ಯೋಜನೆಯಡಿ ಅರ್ಹ ಫಲಾನುಭವಿಗಳನ್ನು ಗುರುತಿಸಿ, ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಜವಾಬ್ದಾರಿಯನ್ನು ಸ್ಥಳೀಯ ಶಾಸಕರು ಹಾಗೂ ಪಂಚಾಯತಿ ರಾಜ್ಯದ ಸಂಸ್ಥೆಗಳ ಪ್ರತಿನಿಧಿಗಳಿಗೆ ವಹಿಸಲಾಗಿದೆ. 12. ಬಾಲ ಕಾರ್ಮಿಕರು :- ಜಗತ್ತಿನ ಅನೇಕ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿರುವಂತೆ ಭಾರತದಲ್ಲಿಯೂ ಬಾಲಕಾರ್ಮಿಕರ ಸಮಸ್ಯೆ ಇದೆ. ನಗರ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯ ಬಾಲಕಾರ್ಮಿಕರು ಇದ್ದಾರೆಂದು ವರದಿಗಳು ಹೇಳುತ್ತವೆ. ಭಾರತದ ಸಂವಿಧಾನದ ಭಾಗ ನಾಲ್ಕು, ನಿರ್ದೇಶಕ ತತ್ವಗಳಲ್ಲಿನ ಅನುಚ್ಛೇದ 45ರ ಅನ್ವಯ, ಮಕ್ಕಳಿಗೆ ಹದಿನಾಲ್ಕು ವರ್ಷಗಳ ವಯಸ್ಸು ಪೂರ್ತಿಯಾಗುವವರೆಗೆ, ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಒದಗಿಸಬೇಕು. ಆದರೆ ಇಂದಿಗೂ ಅನೇಕ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಮಕ್ಕಳು ಚಿಕ್ಕ ವಯಸ್ಸಿನಲ್ಲಿ ಆಟ, ಪಾಠ, ಮನರಂಜನೆ ಮುಂತಾದ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರೇ ಚೆನ್ನ. ಆ ವಯಸ್ಸಿನಲ್ಲಿ ಒಳ್ಳೆಯ ತರಬೇತಿಯಿದ್ದರೆ ಮುಂದೆ ಅವರೇ ಉತ್ತಮ ನಾಗರೀಕರಾಗಲು ಸಾಧ್ಯ. ಹಾಗೆ ಆಗಲು ಅವಕಾಶ ಕಲ್ಪಿಸದೆ, ಅನೇಕ ಕಾರಣವೊಡ್ಡಿ, ಅವರ ಸ್ವಾತಂತ್ರ್ಯವನ್ನು ಹರಣಮಾಡಿ, ಅವರ ಶ್ರಮವನ್ನು ತಂದೆ-ತಾಯಿಗಳು ತಮ್ಮ ಆರ್ಥಿಕ ಅನುಕೂಲಕ್ಕೆ ಬಳಸಿಕೊಳ್ಳುವುದು ಅಕ್ಷಮ್ಯ ಅಪರಾಧ. ಬಾಲ ಕಾರ್ಮಿಕರು ಈಗ ಸಂಘಟಿತ ಹಾಗೂ ಅಸಂಘಟಿತ ವಲಯಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಕಾಫಿ, ಟೀ, ರಬ್ಬರ್ ತೋಟಗಳಲ್ಲಿ, ಗ್ರಾಮೀಣ ಕೃಷಿಯಲ್ಲಿ, ಗಣಿಗಳಲ್ಲಿ, ರೈಲ್ವೆ ಯಾರ್ಡ್ ಗಳಲ್ಲಿ, ಬೀಡಿ ಉದ್ಯಮದಲ್ಲಿ, ಗುಡಿ ಕೈಗಾರಿಕೆಗಳಲ್ಲಿ, ಹೋಟಲ್ಲು, ಗ್ಯಾರೇಜ್, ಪೆಟ್ರೋಲ್ ಪಂಪು, ಅಂಗಡಿ, ಮನೆ ಮುಂತಾದ ಕಡೆಗಳಲ್ಲಿ ಬಾಲಕಾರ್ಮಿಕರನ್ನು ಕಾಣಬಹುದಾಗಿದೆ. ಮನೆಗಳಲ್ಲಿ ಹೆಚ್ಚಾಗಿ ಹೆಣ್ಣು ಮಕ್ಕಳನ್ನು ಹೆಚ್ಚಾಗಿ ದುಡಿಸಿಕೊಂಡರೆ ಉಳಿದ ಕಡೆಗಳಲ್ಲಿ ಗಂಡು ಹುಡುಗರನ್ನು ದುಡಿಯಲಿಕ್ಕೆ ಹಚ್ಚುತ್ತಾರೆ. ಉದ್ದಿಮೆಗಳನ್ನು ನಡೆಸುವವರು ಕಾರ್ಮಿಕರಿಗೆ ಕೊಡಬೇಕಾದ ಶಾಸನಬದ್ಧ ವೇತನ, ಕೂಲಿ, ಅವರಿಗೆ ಕೆಲಸ ಮಾಡಲು ಒದಗಿಸಬೇಕಾದ ಅನುಕೂಲಗಳು, ಅವರಿಗೆ ಕೊಡಬೇಕಾದ ಪರಿಕರಗಳು ಮುಂತಾದ ಬಾಬತ್ತುಗಳಲ್ಲಿ ಹಣವನ್ನು ಉಳಿಸಲು ಬಾಲ ಕಾರ್ಮಿಕರನ್ನು ಉಪಯೋಗಿಸುತ್ತಾರೆ. ಅವರು ಸೋವಿಯಾಗಿ ಸಿಗುತ್ತಾರೆ. ಯಾವ ಅನುಕೂಲಕ್ಕಾಗಿಯಾಗಲೀ, ನಿಯತಕಾಲಿಕ ವೇತನ, ಕೂಲಿ ಪರಿಷ್ಕರಣೆಗಾಗಿಯಾಗಲೀ ಮುಷ್ಕರ ಮಾಡುವುದಿಲ್ಲ. ಹೇಳಿದ ಕೆಲಸ ಮಾಡುತ್ತಾರೆ. ಅವರ ಮೇಲೆ ದೌರ್ಜನ್ಯ ಮಾಡಿದರೆ ಸಹಿಸಿಕೊಂಡು ಸುಮ್ಮನಿರುತ್ತಾರೆ. ಬಾಲಕಾರ್ಮಿಕರಿಗೆ ಮನೆಯಲ್ಲಿ ಪೌಷ್ಟಿಕ ಆಹಾರ ಸಿಕ್ಕುವುದಿಲ್ಲ. ಹಾಗಾಗಿ ಅವರು ಅನಾರೋಗ್ಯದಿಂದ ನರಳಬೇಕಾಗುತ್ತದೆ. ಅಂತಹ ಸಂದರ್ಭಗಳಲ್ಲಿ ವಯಸ್ಕರಿಗೆ ಸಿಕ್ಕ ಹಾಗೆ ಇವರಿಗೆ ವೈದ್ಯಕೀಯ ಸೌಲಭ್ಯ ದೊರಕುವುದಿಲ್ಲ. ಮಕ್ಕಳನ್ನು ಉದಾಸೀನದಿಂದ ಕಾಣುತ್ತಾರೆ. ಪಾಲಕರಲ್ಲಿ ಶಿಕ್ಷಣದ ಮಹತ್ವ ತಿಳಿಯದೆ ಇದ್ದುದರಿಂದ ಮಕ್ಕಳಿಗೆ ಸಂವಿಧಾನರೀತ್ಯಾ ಸಿಗಬೇಕಾದ ಶಿಕ್ಷಣ ಸಿಗುವುದಿಲ್ಲ. ಅವರ ಅಭಿಪ್ರಾಯವನ್ನು ಕೇಳದೆ ಅವರನ್ನು ಒತ್ತಾಯದ ದುಡಿತಕ್ಕೆ ಹಚ್ಚುತ್ತಾರೆ. ಮನೆಯಲ್ಲಿ, ವೃತ್ತಿಗಳಲ್ಲಿ ಅವರ ಮೇಲೆ ದಬ್ಬಾಳಿಕೆ ಮಾಡಲಾಗುತ್ತಿದೆ. ಸಮಾಜದಲ್ಲಿ ಅವರನ್ನು ಕ್ರೌರ್ಯದಿಂದ ಕಾಣಲಾಗುತ್ತಿದೆ. ಜೀತದಾಳು ಸಮಸ್ಯೆಯಲ್ಲಿರುವಂತೆ (ಬಾಲಕಾರ್ಮಿಕ ಸಮಸ್ಯೆಯೂ ಜೀತದಾಳು ಸಮಸ್ಯೆಯ ಇನ್ನೊಂದು ಮುಖ), ಬಾಲಕಾರ್ಮಿಕ ಸಮಸ್ಯೆಗೂ ಬಡತನ ಮೂಲಕಾರಣ. ಸಾಮಾಜಿಕ ಜಾಗೃತಿ ಇಲ್ಲದೆ ಇರುವುದು, ಪಾಲಕರಿಗೆ ಶಿಕ್ಷಣದ ಪ್ರಾಮುಖ್ಯತೆ ಗೊತ್ತಿಲ್ಲದಿರುವುದು, ಶಾಸನಗಳ ವೈಫಲ್ಯ ಮುಂತಾದ ಸಾಮಾಜಿಕ ಹಾಗೂ ಆಡಳಿತಾತ್ಮಕ ಕಾರಣಗಳನ್ನೂ ಬಾಲ ಕಾರ್ಮಿಕ ಸಮಸ್ಯೆಗೆ ಆರೋಪಿಸಬಹುದಾಗಿದೆ. ಬಾಲಕಾರ್ಮಿಕ ನಿಷೇಧ ಮತ್ತು ನಿಯಂತ್ರಣ 1986 ಕಾನೂನನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲಾಗಿಲ್ಲ ಎಂಬ ಆರೋಪವಿದೆ. ರಾಜಕಾರಣಿಗಳು, ಆಡಳಿತಾಧಿಕಾರಿಗಳು, ಸಮಾಜದ ಒಳಿತಿನ ಬಗ್ಗೆ ಮಾತನಾಡುವವರು, ಸದ್ರಿ ವಿಷಯದ ಬಗ್ಗೆ ಹೆಚ್ಚಿನ ಅಭಿರುಚಿಯನ್ನು ತೋರಿಸದೆ, ತೋರಿಕೆಯ ಸಹಾನುಭೂತಿಯನ್ನು ವ್ಯಕ್ತಪಡಿಸುತ್ತಿದ್ದಾರೆ ಎಂಬ ಆಪಾದನೆಯೂ ಇದೆ. 13. ಗ್ರಾಮೀಣ ರಸ್ತೆಗಳು :- ಗ್ರಾಮೀಣಾಭಿವೃದ್ಧಿಯಲ್ಲಿ ರಸ್ತೆಗಳ ಪಾತ್ರ ತುಂಬಾ ದೊಡ್ಡದು. ರಸ್ತೆಗಳಲ್ಲಿ ಎಕ್ಸ್ಪ್ರೆಸ್ ರಸ್ತೆಗಳು, ರಾಷ್ಟ್ರೀಯ ಹೆದ್ದಾರಿಗಳು, ರಾಜ್ಯದ ಹೆದ್ದಾರಿಗಳು, ಜಿಲ್ಲಾ ಮುಖ್ಯರಸ್ತೆಗಳು, ಜಿಲ್ಲಾ ಇತರೆ ರಸ್ತೆಗಳು ಹಾಗೂ ಗ್ರಾಮೀಣ ರಸ್ತೆಗಳು ಎಂದು ವಿಭಾಗಿಸುವುದು ವಾಡಿಕೆ. ಇವುಗಳಲ್ಲಿ ಹೆಚ್ಚಾಗಿ ಜಿಲ್ಲಾ ಮುಖ್ಯರಸ್ತೆಗಳು, ಜಿಲ್ಲೆಯ ಇತರೆ ರಸ್ತೆಗಳು ಹಾಗೂ ಗ್ರಾಮೀಣ ರಸ್ತೆಗಳು ಗ್ರಾಮ ಸಮುದಾಯಗಳಿಗೆ ಹೆಚ್ಚಿನ ನೆರವನ್ನು ಒದಗಿಸುತ್ತವೆ. ಇಂತಹ ರಸ್ತೆಗಳಿಂದ ಗ್ರಾಮೀಣ ಜನತೆ ವಂಚಿತರಾಗಿ, ಅವರು ಹೆಚ್ಚಿನ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ರಸ್ತೆ ಇಲ್ಲದಿದ್ದರೆ ಅಥವಾ ಕಳಪೆ ರಸ್ತೆಯಿದ್ದರೆ ವಿದ್ಯಾರ್ಥಿಗಳು ಶಾಲೆಗೆ ಹೋಗಲು ಒದ್ದಾಡಬೇಕಾಗುತ್ತದೆ. ಮಳೆಗಾಲದಲ್ಲಂತೂ ಅವರ ಬವಣೆ ಹೇಳತೀರದು. ಎಲ್ಲಾ ಗ್ರಾಮಗಳಲ್ಲಿ ಆಸ್ಪತ್ರೆಗಳು ಇಲ್ಲವೇ ಆರೋಗ್ಯ ಘಟಕಗಳು ಇರುವುದಿಲ್ಲ. ಅನಾರೋಗ್ಯದ ಸಂದರ್ಭದಲ್ಲಿ ರೋಗಿಗಳು ಔಷಧೋಪಚಾರಕ್ಕೆ ಇನ್ನೊಂದು ಪಕ್ಕದ ದೊಡ್ಡ ಹಳ್ಳಿಗೊ, ಊರಿಗೊ ಹೋಗಬೇಕು. ರಸ್ತೆ ಸರಿಯಾಗಿರದಿದ್ದರೆ ಹಾಗೆ ಹೋಗಲು ತೊಂದರೆಯನ್ನು ಅನುಭವಿಸಬೇಕಾಗುತ್ತದೆ. ಹಾಗೇನೇ ರೈತರು ತಮಗೆ ಬೇಕಾದ ಬೀಜ, ಗೊಬ್ಬರ, ಔಷಧ, ಉಪಕರಣಗಳು, ಇತರೆ ಪರಿಕರಗಳನ್ನು ಬೇರೆಡೆಯಿಂದ ತರಲು ಒಳ್ಳೆಯ ರಸ್ತೆಗಳಿಲ್ಲದೆ ಪರದಾಡುತ್ತಾರೆ. ತಮ್ಮ ಜಾನುವಾರುಗಳಿಗೆ ರೋಗ ಬಂದಾಗಲೂ ಅವುಗಳನ್ನು ಆಸ್ಪತ್ರೆಗೆ ಸಾಗಿಸಲು ಇಲ್ಲವೇ ಪಶು ವೈದ್ಯರನ್ನು ಹಳ್ಳಿಗೆ ಕರೆತರಲು ಒದ್ದಾಡುತ್ತಾರೆ. ರೈತರು ತಮ್ಮ ಕೃಷಿ ಉತ್ಪಾದನೆಯನ್ನು ಮಾರುಕಟ್ಟೆಗೆ ಸಾಗಿಸಲು ಸೂಕ್ತ ರಸ್ತೆಗಳಿಲ್ಲದೆ, ಆಯಾ ಗ್ರಾಮಗಳಿಗೆ ಬಂದು ಖರೀದಿಸುವ ವ್ಯಾಪಾರಸ್ಥರಿಗೆ ಸೋವಿದರದಲ್ಲಿ ಮಾರಬೇಕಾಗುತ್ತದೆ. ಅದರಂತೆಯೇ ಸಣ್ಣ ಉದ್ದಿಮೆದಾರರು, ಗುಡಿ ಕೈಗಾರಿಕೆಗಳನ್ನು ನಡೆಸುವವರು ತಮ್ಮ ಉತ್ಪಾದನೆಯನ್ನು ಮಾರುಕಟ್ಟೆಗಳಿಗೆ ಸಾಗಿಸಲು ರಸ್ತೆಗಳು ಬೇಕೇಬೇಕು. ಅಂಗಡಿ ಸಾಮಾನುಗಳನ್ನು ತಂದುಕೊಳ್ಳಲು, ತತ್ತಿ, ಕೋಳಿ, ಹಾಲು, ಇತ್ಯಾದಿಗಳನ್ನು ತರಲೂ ರಸ್ತೆಗಳು ಅವಶ್ಯ. ಇವುಗಳಲ್ಲದೆ ಗ್ರಾಮೀಣ ಜನತೆಯ ಸಾಮಾಜಿಕ ಜೀವನದಲ್ಲಿ ಬದಲಾವಣೆ ಹಾಗೂ ಸುಧಾರಣೆಗೂ ಗ್ರಾಮೀಣ ರಸ್ತೆ ಅತ್ಯವಶ್ಯ. ಈ ಹಿನ್ನೆಲೆಯಲ್ಲಿ ಸರಕಾರಗಳು ಗ್ರಾಮೀಣ ರಸ್ತೆಗಳನ್ನು ಉತ್ತಮಪಡಿಸಲು ಅನೇಕ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ. ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯೂ ಕೇಂದ್ರ ಸರಕಾರದಿಂದ ಅನುಷ್ಠಾನಗೊಂಡ ಅಂತಹ ಯೋಜನೆಗಳಲ್ಲಿ ಒಂದು. ಇತ್ತೀಚಿಗೆ ಜಾರಿಗೆ ಬಂದ ಭಾರತ್ ನಿರ್ಮಾಣ್ ಯೋಜನೆಯಲ್ಲಿಯೂ ರಸ್ತೆ ಅಭಿವೃದ್ಧಿಯ ಅಂಶವನ್ನು ಸೇರಿಸಲಾಗಿದೆ. ಸಮಗ್ರ ಗ್ರಾಮೀಣಾಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ರೂಪಗೊಂಡ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆ ದೃಷ್ಟಿ (2025) ಯು ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. 14. ಜನಸಂಖ್ಯಾ ಏರಿಕೆ :- ಜನಸಂಖ್ಯಾ ಸಮಸ್ಯೆ ಇಡೀ ಜಗತ್ತನ್ನೇ ಬಾಧಿಸುತ್ತಿದೆ. ಭಾರತ ಇದಕ್ಕೆ ಹೊರತಾಗೇನಿಲ್ಲ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ವರಕವಿ ಬೇಂದ್ರೆ, ಇಪ್ಪತ್ತನೇ ಶತಮಾನದ ನಾಲ್ಕನೇ ದಶಕದಲ್ಲಿ, ``ಮಕ್ಕಳಿವರೇ ನಮ್ಮ ಮೂವತ್ತು ಮೂರು ಕೋಟಿ ಎಂದು ಹಾಡಿದರು. ಆದರೆ ಇಂದಿನ ದಿನಗಳಲ್ಲಿ ನಮ್ಮ ಜನಸಂಖ್ಯೆ ಅದರ ಮೂರುವರೆಪಟ್ಟು ಜಾಸ್ತಿಯಾಗಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು, ಪಂಚಾಯಿತಿ ರಾಜ್ಯ ಸಂಸ್ಥೆಗಳು ಮತ್ತು ಸ್ವಯಂ ಸೇವಾ ಸಂಸ್ಥೆಗಳು ಒಂದಾಗಿ ಅಭಿವೃದ್ಧಿಗೆ ಎಷ್ಟೇ ಪ್ರಯತ್ನಿಸಿದರೂ, ಜನಸಂಖ್ಯೆ ಮಿತಿ ಮೀರಿದರೆ, ಅಂತಹ ಶ್ರಮ ನಿರೀಕ್ಷಿತ ಫಲಕವನ್ನು ಕೊಡುವುದಿಲ್ಲ. ಜನಸಂಖ್ಯೆ ಒಂದು ನಿಯೋಜಿತ ಮಿತಿಯಲ್ಲಿದ್ದರೆ ರಾಜ್ಯಗಳು ಹಾಗೂ ಸ್ವಯಂ ಸೇವಾ ಸಂಸ್ಥೆಗಳು ಅನುಷ್ಠಾನಗೊಳಿಸಿದ ಕಾರ್ಯಯೋಜನೆಗಳು ಕಣ್ಣಿಗೆ ಕಾಣಬಹುದಾದ ಫಲಿತಾಂಶವನ್ನು ತರಬಹುದಾಗಿದೆ. ಇತಿಹಾಸವನ್ನು ನೋಡಿದರೆ 19ನೇ ಶತಮಾನದವರೆಗೆ ಜನಸಂಖ್ಯೆ ನಿಯಂತ್ರಣದಲ್ಲಿರುವುದು ಕಂಡುಬರುತ್ತದೆ. ಇಪ್ಪತ್ತನೇ ಶತಮಾನದಲ್ಲಿ ಎಲ್ಲೆಡೆ ಕೈಗಾರಿಕಾ ಕ್ರಾಂತಿಯಾಯಿತು. ದಿನಬಳಕೆ ವಸ್ತುಗಳು ಮಾರುಕಟ್ಟೆಯಲ್ಲಿ ಸಿಗುವಂತಾಯಿತು. ಜನರು ಕೈಗಾರಿಕೆಗಳಲ್ಲಿ ದುಡಿಯುತ್ತಿದ್ದರಾದ್ದರಿಂದ ಅವರ ಬಳಿ ಹಣ ಸಂಗ್ರಹವಾಗಿ, ಅವರ ಕೊಳ್ಳುವ ಶಕ್ತಿ ಹೆಚ್ಚುತ್ತಾ ಬಂತು. ಪರಿಣಾಮವಾಗಿ ಅವರ ಸಾಮಾಜಿಕ ಸ್ಥಿತಿಗಳು ಪ್ರಗತಿಯನ್ನು ಸಾಧಿಸಿದವು. ಇದರ ಜೊತೆ ಜೊತೆಗೆ ವೈದ್ಯಕೀಯ ಕ್ಷೇತ್ರದಲ್ಲಿ ಅಘಾದವಾದ ಸಂಶೋಧನೆಗಳಾಗಿ ಕಾಲರಾ, ಸಿಡುಬು, ಕ್ಷಯ, ಪ್ಲೇಗು ಮುಂತಾದ ಮಾರಣಾಂತಿಕ ರೋಗಗಳಿಗೆ ಚುಚ್ಚುಮದ್ದನ್ನು ಕಂಡುಹಿಡಿಯಲಾಯಿತು. ಪರಿಣಾಮವಾಗಿ ಅನೇಕ ಪ್ರಮುಖ ರೋಗಗಳಿಂದ ಜನತೆ ಗುಣಮುಖ ಹೊಂದಿ ಇನ್ನೂ ಹೆಚ್ಚು ದಿನ ಬದುಕುಳಿಯುವಂತಾಯಿತು. ಜನಸಾಮಾನ್ಯರ ಆಯುಷ್ಪ್ರಮಾಣ ಇದರಿಂದ ಜಾಸ್ತಿಯಾಯಿತು. ಆದರೆ ಇದಕ್ಕೆ ಸಂವಾದಿಯಾಗಿ, ಕೈಗಾರಿಕಾ ಪ್ರಗತಿ, ಆರ್ಥಿಕ, ಸಾಮಾಜಿಕ ಮುಂತಾದ ಕ್ಷೇತ್ರಗಳಲ್ಲಿ ಕಂಡ ಅಭಿವೃದ್ಧಿಯ ಪರಿಣಾಮವಾಗಿ ಜನಸಾಮಾನ್ಯರಲ್ಲಿ ಜನನ ಪ್ರಮಾಣದಲ್ಲಿ ಏರಿಕೆಯೂ ಆಯಿತು. ಆದರೆ ಮರಣ ಪ್ರಮಾಣದಲ್ಲಿ ಇಳಿಕೆಯಾಯಿತು. ಇದು ಜನಸಂಖ್ಯೆ ಹೆಚ್ಚಾಗಲು ಕಾರಣವಾಯಿತು. ಕೃಷಿ ಕ್ಷೇತ್ರದಲ್ಲಿ, ನಿರಂತರ ಸಂಶೋಧನಗಳ ಪರಿಣಾಮವಾಗಿ ಉತ್ತಮ ಹೆಚ್ಚು ಇಳುವರಿ ತರುವ ಬೀಜ, ಇಳುವರಿ ಹೆಚ್ಚಿಸಲು ರಸಾಯನಿಕ ಗೊಬ್ಬರ, ಬೆಳೆಗಳನ್ನು ರೋಗಗಳಿಂದ-ಕೀಟಗಳಿಂದ ರಕ್ಷಿಸಲು ಔಷಧಗಳ ಆವಿಷ್ಕಾರ, ಕೃಷಿಗೆ ಟ್ರಾಕ್ಟರ್, ಪವರ್ ಟಿಲ್ಲರ್, ಮುಂತಾದ ಯಂತ್ರಗಳ ಬಳಕೆ, ಇವುಗಳು ಉಪಯೋಗಿಸಲ್ಪಟ್ಟವು. ಇವುಗಳಿಂದ ಇಳುವರಿ ಜಾಸ್ತಿಯಾಗಿ ರೈತರಿಗೆ ಆರ್ಥಿಕ ಸಂಪತ್ತು ಹೆಚ್ಚಾಯಿತು. ಇದರಿಂದ ಯುವ ಜನತೆಯ ವಿವಾಹ, ಸಂತತಿ ಬೆಳವಣಿಗೆ ಮುಂತಾದವುಗಳಿಂದ ಪರೋಕ್ಷವಾಗಿ ಜನಸಂಖ್ಯೆ ಬೆಳೆಯುವಂತಾಯಿತು. ಭಾರತೀಯ ಸಮಾಜದಲ್ಲಿ ಬಾಲ್ಯವಿವಾಹ ಹಾಗೂ ಎಲ್ಲರೂ ವಿವಾಹ ಮಾಡಿಕೊಳ್ಳುವ ಪದ್ಧತಿ ರೂಢಿಯಲ್ಲಿದೆ. ಬಾಲ್ಯ ವಿವಾಹ ಇತ್ತೀಚಿನವರೆಗೂ ತುಂಬಾ ಸಾಮಾನ್ಯವಾಗಿತ್ತು. ಇದರ ಜೊತೆಗೆ ವಿವಾಹದ ಸಾರ್ವತ್ರಿಕತೆಯ ಕಲ್ಪನೆ ನಮ್ಮ ಸಮಾಜದಲ್ಲಿದೆ. ಪ್ರತಿಯೊಬ್ಬ ವ್ಯಕ್ತಿಯೂ, ಹೆಣ್ಣಾಗಲಿ ಇಲ್ಲವೇ ಗಂಡಾಗಲಿ, ವಂಶೋದ್ಧಾರಕ್ಕಾಗಿ ಮದುವೆಯಾಗಲೇಬೇಕು. ಮಕ್ಕಳನ್ನು ಪಡೆಯಲೇಬೇಕು. ಇದನ್ನು ಒಂದು ಅಲಿಖಿತ ಕಟ್ಟಳೆ-ಕಟ್ಟುಪಾಡು ಎಂದು ಆಚರಿಸಿಕೊಂಡು ಬಂದಿದ್ದಾರೆ. ಇದು ಎಲ್ಲಾ ಧರ್ಮದವರಿಗೂ, ಜಾತಿ, ಪಂಥದವರಿಗೂ ಅನ್ವಯಿಸುತ್ತದೆ. ಇದರ ಪರಿಣಾಮವಾಗಿ ಜನಸಂಖ್ಯೆಯ ಏರಿಕೆಯಾಯಿತು. ಜನಸಂಖ್ಯಾ ಏರಿಕೆಗೆ ಜನಸಾಮಾನ್ಯರ ಸಾಮಾಜಿಕ ಮನೋಭಾವವೂ ಒಂದು ಕಾರಣವಾಗಿದೆ. ಸಂಪ್ರದಾಯ ಶರಣತೆ, ಮೂಢನಂಬಿಕೆ, ವಿಧಿವಾದ, ದೇವರ ಮೇಲಿನ ಅತಿಯಾದ ಅವಲಂಬನೆ, ಬಡತನ, ನಿರಕ್ಷರತೆ, ಅಜ್ಞಾನ, ಗಂಡುಮಕ್ಕಳ ಬಯಕೆ, ಮಕ್ಕಳು ಮುಪ್ಪಿನಲ್ಲಿ ಆಶ್ರಯವನ್ನು ಕೊಡುತ್ತಾರೆ ಎಂಬ ಕಲ್ಪನೆ ಮುಂತಾದ ಜನಾಂಗೀಯ, ಸಾಮಾಜಿಕ ಅಂಶಗಳೂ ಜನಸಂಖ್ಯಾ ಏರಿಕೆಗೆ ಕಾರಣವಾಗಿವೆ. ಇಪ್ಪತ್ತನೇ ಶತಮಾನದ ಉತ್ತರಾರ್ಧದಲ್ಲಿ ಕುಟುಂಬ ಯೋಜನೆ ವ್ಯಾಪಕವಾಗಿ ಅನುಷ್ಠಾನಕ್ಕೆ ಬಂದರೂ, ಜನರು ಅದರಲ್ಲೂ ಗ್ರಾಮೀಣ ಸಮುದಾಯ ಸದಸ್ಯರು, ಅದನ್ನು ತೆರೆದ ಮನಸ್ಸಿನಿಂದ ಒಪ್ಪಿಕೊಳ್ಳಲಿಲ್ಲ. ಹಾಗಾಗಿ ಜನಸಂಖ್ಯೆಯ ಹೆಚ್ಚಳವನ್ನು ಪ್ರಭಾವಯುತವಾಗಿ ತಡೆಯಲಾಗಲಿಲ್ಲ. ಸ್ವಲ್ಪಮಟ್ಟಿನ ಜನಸಂಖ್ಯಾ ನಿಯಂತ್ರಣ ಆದದ್ದಂತೂ ಅಷ್ಟೇ ನಿಜ. ಗ್ರಾಮೀಣ ಪ್ರದೇಶದಲ್ಲಿ ಮನರಂಜನಾ ಕೊರತೆಯಿದೆ. ಹಾಗಾಗಿ ಗ್ರಾಮೀಣ ಜನತೆ ಲೈಂಗಿಕ ಕ್ರಿಯೆಗಳಲ್ಲಿ ತೊಡಗಿ ಮನರಂಜನೆಯನ್ನು ಕಂಡುಕೊಂಡಿದ್ದಾರೆ. ಇದೂ ಜನಸಂಖ್ಯೆ ಹೆಚ್ಚಾಗುವಲ್ಲಿ ತನ್ನ ಪಾತ್ರವನ್ನು ಬೀರಿದೆ. ಇನ್ನು ಜನಸಂಖ್ಯಾ ಹೆಚ್ಚಳ ಇಡೀ ಸಮಾಜದ ಮೇಲೆ ಅತಿಯಾದ ದುಷ್ಪರಿಣಾಮವನ್ನು ಬೀರಿದೆ. ಜನಸಂಖ್ಯೆ ಹೆಚ್ಚಾಗಿ, ಅದರಲ್ಲೂ ನಗರ ಪ್ರದೇಶಗಳಲ್ಲಿ, ಕೈಗಾರಿಕಾ ಕೇಂದ್ರಗಳಲ್ಲಿ, ಶಿಕ್ಷಣ ಕೇಂದ್ರಗಳಲ್ಲಿ, ಜನಸಾಂಧ್ರತೆ ಹೆಚ್ಚಾಗಿ ಎಲ್ಲಾ ಕ್ಷೇತ್ರಗಳಲ್ಲಿಯೂ ಸ್ಪರ್ಧೆ, ಒತ್ತಡ, ವ್ಯಾಕುಲತೆ, ದ್ವೇಷಾಸೂಯೆಗಳು ಹೆಚ್ಚಾಗಿವೆ. ಜನಸಂಖ್ಯೆಯ ಒತ್ತಡದಿಂದ ಭೂಮಿಯ ಮೇಲಿನ ಒತ್ತಡ ಜಾಸ್ತಿಯಾಗುತ್ತಿದೆಯೆಂದು ಪರಿಸರ ತಜ್ಞರು, ಸಮಾಜವಿಜ್ಞಾನಿಗಳು ಎಚ್ಚರಿಸುತ್ತಿದ್ದಾರೆ. ಜನಸಂಖ್ಯೆ ಜಾಸ್ತಿಯಾದರೆ ಆಹಾರದ ಕೊರತೆ ಉಂಟಾಗುತ್ತದೆ. ನಾವು ಉತ್ಪಾದಿಸಿದ ದವಸಧಾನ್ಯಗಳು ನಮಗೇ ಸಾಕಾಗುವುದಿಲ್ಲ. ನಮ್ಮ ಉತ್ಪಾದನೆಯ ಜೊತೆಗೆ ನಾವು ಆಹಾರ ಪದಾರ್ಥಗಳನ್ನು ಆಮದು ಮಾಡಿಕೊಳ್ಳಬೇಕಾಗುತ್ತದೆ. ಇಪ್ಪತ್ತನೇ ಶತಮಾನದ ಏಳನೇ ದಶಕದಲ್ಲಿ ನಾವು ಅಮೇರಿಕಾ ದೇಶದಿಂದ ಗೋಧಿಯನ್ನು ಆಮದು ಮಾಡಿಕೊಂಡದ್ದು ನಮಗಿನ್ನೂ ನೆನಪಿದೆ. ಅದರಂತೆಯೇ ವಸತಿ ಸಮಸ್ಯೆಯೂ ಭೀಕರರೂಪ ತಾಳಿದೆ. ಈ ಸಮಸ್ಯೆ ಗ್ರಾಮೀಣ ಹಾಗೂ ನಗರ ಪ್ರದೇಶಗಳನ್ನೂ ವ್ಯಾಪಿಸಿಕೊಂಡಿದೆ. ವಿಶೇಷವಾಗಿ ಕೊಳೆಗೇರಿಗಳಲ್ಲಿ 10X10 (ಒಂದು ಚದುರ) ಜಾಗದಲ್ಲಿ ಎರಡೆರಡು ಕುಟುಂಬಗಳು ಜೀವನ ಮಾಡುವ ಪರಿಸ್ಥಿತಿ ಬಂದೊದಗಿದೆ. ಗ್ರಾಮೀಣ ಪ್ರದೇಶಗಳಲ್ಲಿಯೂ ಈ ಸಮಸ್ಯೆಯ ಇನ್ನೊಂದು ಮುಖವನ್ನೂ ಕಾಣಬಹುದಾಗಿದೆ. ಜನಸಂಖ್ಯೆ ಹೆಚ್ಚಾಗಿ ನಿರುದ್ಯೋಗ ಸಮಸ್ಯೆ ಉಲ್ಬಣಗೊಂಡಿದೆ. ಗ್ರಾಮೀಣ ಪ್ರದೇಶಗಳಿಂದ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ನಗರಗಳನ್ನು ಸೇರುತ್ತಿದ್ದಾರೆ. ನಗರಗಳಲ್ಲಿ ಕೈಗಾರಿಕೋದ್ಯಮಗಳು, ಕೈಗಾರಿಕಾ ಕೇಂದ್ರಗಳು ಅಸಂಖ್ಯ ಸಂಖ್ಯೆಯಲ್ಲಿ ಬೆಳೆದರೂ ಎಲ್ಲಾ ನಿರುದ್ಯೋಗಿಗಳಿಗೂ ಕೆಲಸ ಕೊಡಲಾಗುತ್ತಿಲ್ಲ. ಆ ಕೆಲಸಗಳಲ್ಲಿಯೂ ತೀವ್ರ ಸ್ಪರ್ಧೆ ಏರ್ಪಟ್ಟಿದೆ. ಕೆಲಸ ಗಳಿಸಿಕೊಳ್ಳುವುದು, ಮನೆಗಳಿಂದ ಉದ್ಯೋಗದ ಸ್ಥಳಕ್ಕೆ ಹೋಗಿಬರುವುದು, ನಿಯತಕಾಲಿಕವಾಗಿ ಕೆಲಸ ಮಾಡುವುದು, ಬಂದ ಆದಾಯದಲ್ಲೇ ಜೀವನ ಸಾಗಿಸುವುದು, ಹೀಗೆ ಎಲ್ಲಾ ಕಡೆಗೂ ಸಮಸ್ಯೆಗಳು ಹೆಚ್ಚುತ್ತಿವೆ. ಸಾಮಾಜಿಕ ಕ್ಷೇತ್ರದಲ್ಲಿ ನೀರು, ಬೀದಿ ದೀಪ, ಚರಂಡಿ ವ್ಯವಸ್ಥೆ, ಹಾಲು ಸರಬರಾಜು, ದಿನಪತ್ರಿಕೆ ವಿತರಣೆ, ಶಿಕ್ಷಣ, ಸಂಚಾರ ಮುಂತಾದ ಮೂಲಭೂತ ಸೌಲಭ್ಯಗಳು ಸಿಗುವುದೇ ಕಷ್ಟವಾಗುತ್ತಿದೆ. ಸರ್ವರಿಗೂ ಆರೋಗ್ಯ ಮತ್ತು ನೈರ್ಮಲ್ಯ ಸೇವೆಗಳನ್ನು ಒದಗಿಸುವುದೂ ಒಂದು ದೊಡ್ಡ ಕೆಲಸವೇ ಆಗಿ ಪರಿಗಣಿಸಿದೆ. ಹೀಗೆ ಜನಸಂಖ್ಯಾ ಸಮಸ್ಯೆ ವಿವಿಧ ಕ್ಷೇತ್ರಗಳಲ್ಲಿ ಹಲವಾರು ತೊಂದರೆಗಳನ್ನು ಸೃಷ್ಟಿಸಿ ನಾಯಕರನ್ನು, ಯೋಜಕರನ್ನು, ಬುದ್ಧಿಜೀವಿಗಳನ್ನು ಚಿಂತೆಗೆ ಈಡುಮಾಡಿದೆ. ಜನಸಂಖ್ಯಾ ಸಮಸ್ಯೆಯನ್ನು ಪ್ರಭಾವಯುತವಾಗಿ ಎದುರಿಸಬೇಕಾಗಿದೆ. ಮೊದಲನೆಯದಾಗಿ ಈಗಿರುವ ಜನಸಂಖ್ಯೆಯನ್ನು ಉತ್ತಮ ರೀತಿಯಲ್ಲಿ ಸಂರಕ್ಷಿಸಬೇಕಾಗಿದೆ. ಕೃಷಿ, ಕೈಗಾರಿಕೆ ಮುಂತಾದ ಕ್ಷೇತ್ರಗಳಲ್ಲಿ ಉತ್ಪಾದನೆ ಹೆಚ್ಚಿಸಿ, ಅದು ಎಲ್ಲಾ ಜನರಿಗೂ ಯೋಗ್ಯ ಬೆಲೆಯಲ್ಲಿ ಸಿಗುವಂತಾಗಬೇಕು. ಗ್ರಾಮೀಣ ಪ್ರದೇಶಗಳಿಂದ ನಗರಗಳಿಗೆ ವಲಸೆ ಬರುವುದನ್ನೂ ತಡೆಯಬೇಕಾಗಿದೆ. ಕುಟುಂಬ ಯೋಜನೆಯ ಹೊಸ ಹೊಸ ವಿಧಾನಗಳನ್ನು ಆವಿಷ್ಕರಿಸಿ ಅಳವಡಿಸಿಕೊಳ್ಳಬೇಕಾಗಿದೆ. ಇಂತಹ ವಿಧಾನಗಳ ಸಾಧನ ಸಾಮಗ್ರಿಗಳು ನವ ದಂಪತಿಗಳಿಗೆ ಸೋವಿದರದಲ್ಲಿ ಇಲ್ಲವೇ ಉಚಿತವಾಗಿ ಸಿಗುವಂತಾಗಬೇಕಾಗಿದೆ. ವಿವಾಹದ ವಯಸ್ಸು, ಸ್ತ್ರೀಯರ ಸ್ಥಾನಮಾನ, ಕಾನೂನಿನ ಬೆಂಬಲ ಮುಂತಾದ ವಿಷಯಗಳ ಬಗ್ಗೆ ಸೂಕ್ತ ತಿಳುವಳಿಕೆ ಕೊಡಬೇಕಾಗಿದೆ. ಮಾರ್ಗದರ್ಶನ ಮಾಡಬೇಕಾಗಿದೆ. ಸರಕಾರ, ಸಮಾಜ, ವೈದ್ಯರು, ಜನರು ಎಲ್ಲರೂ ಸಹಕರಿಸಿ ದುಡಿದು ಜನಸಂಖ್ಯೆಯನ್ನು ಒಂದು ನಿಯೋಜಿತ ಮಿತಿಯಲ್ಲಿಡಲು ಪ್ರಯತ್ನಿಸಬಹುದಾಗಿದೆ.6 15. ವೃದ್ಧರ ಸಮಸ್ಯೆಗಳು :- ಗ್ರಾಮೀಣ, ನಗರ ಹಾಗೂ ಬುಡಕಟ್ಟುಗಳೆಂಬ ಮೂರೂ ತರಹದ ಸಮುದಾಯಗಳನ್ನು ಚಿಂತೆಗೆ ಈಡುಮಾಡುತ್ತಿರುವ ಇನ್ನೊಂದು ಸಮಸ್ಯೆಯೆಂದರೆ ವೃದ್ಧರ ಸಮಸ್ಯೆಗಳು. ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟು (ಸಂಪುಟ-2), ವೃದ್ಧ ಶಬ್ದಕ್ಕೆ ಪೂರ್ಣವಾಗಿ ಬೆಳೆದ, ವಯಸ್ಸಾದ, ಹಿರಿಯ, ಮುಪ್ಪಾದ, ಹಳೆಯ, ಮುದುಕ ಮುಂತಾದ ಅರ್ಥಗಳನ್ನು ಕೊಟ್ಟಿದೆ. ವೃದ್ಧ ಶಬ್ದದ ಸ್ತ್ರೀ ರೂಪವೇ ವೃದ್ಧೆ. ವೃದ್ಧೆಯೆಂದರೆ ವಯಸ್ಸಾದವಳು. ಮುದುಕಿ ಇತ್ಯಾದಿ ಅರ್ಥಗಳನ್ನು ಕೊಡಲಾಗಿದೆ. ಬೆಕರ್ರವರು ವಿಶಾಲವಾದ ಅರ್ಥದಲ್ಲಿ ವೃದ್ಧಾಪ್ಯವನ್ನು, ``ಕಾಲದ ಅಂತರದಲ್ಲಿ ವ್ಯಕ್ತಿಯಲ್ಲಾಗುವ ಬದಲಾವಣೆ,7 ಎಂದಿದ್ದಾರೆ. ಈ ಬದಲಾವಣೆ ಶಾರೀರಿಕ, ಮಾನಸಿಕ, ಭಾವನಾತ್ಮಕ, ಸಾಮಾಜಿಕ, ಆರ್ಥಿಕ ಮುಂತಾದ ಆಯಾಮಗಳನ್ನು ಹೊಂದಿರುತ್ತದೆ. ಕಾಲದ ಅಂತರದಲ್ಲಿ ವ್ಯಕ್ತಿಯಲ್ಲಾಗುವ ಬದಲಾವಣೆಗಳನ್ನು ಬಹಳ ಸುಲಭವಾಗಿ ಗುರುತಿಸಬಹುದಾಗಿದೆ. ವ್ಯಕ್ತಿಯ ದೇಹದಲ್ಲಾಗುವ ಬದಲಾವಣೆಗಳನ್ನು ವೃದ್ಧಾಪ್ಯದ ಲಕ್ಷಣಗಳೆಂದು ಒಪ್ಪಿಕೊಳ್ಳಲಾಗಿದೆ. ವೃದ್ಧಾಪ್ಯದಲ್ಲಿ ವ್ಯಕ್ತಿಯ ಹಲ್ಲುಗಳು ಉದುರುತ್ತವೆ. ದೃಷ್ಟಿ ಮಂಜಾಗುತ್ತದೆ. ಚರ್ಮ ಸುಕ್ಕುಗಟ್ಟುತ್ತದೆ. ಕೀಲುಗಳು ನೋವಾಗುತ್ತವೆ. ಕೈಕಾಲುಗಳು ನಡುಗಲು ಪ್ರಾರಂಭಿಸುತ್ತವೆ. ಹೆಚ್ಚು ಹೊತ್ತು ನಿಲ್ಲಲಾಗುವುದಿಲ್ಲ. ಅವಯವಗಳು ನಿಶ್ಯಕ್ತವಾಗುತ್ತವೆ. ದೇಹದಲ್ಲಿ ಚೈತನ್ಯ ಕುಂದುತ್ತದೆ. ಕೂದಲು ಬೆಳ್ಳಗಾಗುತ್ತವೆ. ಲೈಂಗಿಕ ಆಸಕ್ತಿ ಕಡಿಮೆಯಾಗುತ್ತದೆ. ಮಹಿಳೆಯರಲ್ಲಿ ಮಾಸಿಕ ಸ್ರಾವ ನಿಂತಿರುತ್ತದೆ. ನೆನಪಿನ ಶಕ್ತಿ ಕುಂದುತ್ತದೆ. ದೀರ್ಘಕಾಲದ ವ್ಯಾಧಿಗಳು ಹೆಚ್ಚಾಗಿ ವೃದ್ಧಾಪ್ಯದಲ್ಲಿ ನಂಟನ್ನು ಬೆಳೆಸುತ್ತವೆ. ವೃದ್ಧಾಪ್ಯದಲ್ಲಿ ವ್ಯಕ್ತಿಯು ನಿಧಾನವಾಗಿ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುತ್ತಾನೆ. ಹೀಗೆ ವೃದ್ಧಾಪ್ಯದ ಲಕ್ಷಣಗಳನ್ನು ಒಂದು ಪಟ್ಟಿ ಮಾಡಬಹುದು. ವೃದ್ಧಾಪ್ಯವನ್ನು ಎರಡು ಪ್ರಕಾರಗಳಲ್ಲಿ ಗುರುತಿಸಲಾಗುತ್ತದೆ. ಒಂದು ಪ್ರಾಥಮಿಕ ವೃದ್ಧಾಪ್ಯ. ಇದು ಶರೀರದ ಜೈವಿಕ ಅರ್ಹತೆಗೆ ಸಂಬಂಧಿಸಿದ್ದು. ಇಂದ್ರಿಯಗಳ ಶಕ್ತಿ ಕುಂದುವುದು ಇದಕ್ಕೆ ಉದಾಹರಣೆ. ಇದರ ಕ್ಷಯಿಸುವಿಕೆಯನ್ನು ತಡೆಯಲಾಗುವುದಿಲ್ಲ. ಅಷ್ಟಾಂಗ ಯೋಗ, ವ್ಯಾಯಾಮ, ಚಂಕ್ರಮಣ, ಮುದ್ರಾ ಮುಂತಾದವುಗಳಿಂದ ಅದರ ವೇಗವನ್ನು ನಿಧಾನಿಸಬಹುದು, ಅಷ್ಟೆ. ಇನ್ನೊಂದು ಮಾಧ್ಯಮಿಕ ವೃದ್ಧಾಪ್ಯ. ಇದು ಹೊರಗಿನ ಕಾರಣಗಳಿಂದ ಉಂಟಾಗುವಂತಹದು. ಕಾಯಿಲೆ, ಬಂಧುಗಳ ಮರಣ, ಬಡತನ, ಮಾನಸಿಕ ಅಸಮತೋಲನ/ಕ್ಲೇಶ ಮುಂತಾದ ಕಾರಣಗಳಿಂದ ಬರುವ ವೃದ್ಧಾಪ್ಯ. ಇದನ್ನು ಉಚಿತ ಕ್ರಮಗಳಿಂದ ಹಾಗೂ ಚಿಕಿತ್ಸೆಯಿಂದ ತಡೆಯಬಹುದು. ವೃದ್ಧಾಪ್ಯದ ವಯಸ್ಸಿಗೆ ಸಂಬಂಧಪಟ್ಟಂತೆ ಅಂತರಾಷ್ಟ್ರೀಯ ಮಟ್ಟದಲ್ಲಿ ಸಹಮತವಿಲ್ಲ. ಒಂದೊಂದು ದೇಶದಲ್ಲಿ ಒಂದೊಂದು ವಯಸ್ಸನ್ನು ನಿವೃತ್ತಿಯ ವಯಸ್ಸೆಂದು ನಿರ್ಣಯಿಸಲಾಗಿದೆ. ಭಾರತದಲ್ಲಿ ನಿವೃತ್ತಿಯ ವಯಸ್ಸು 60 ವರ್ಷಗಳು ಎಂದು ಒಪ್ಪಿಕೊಂಡಿರುವಾಗ, ಅಮೇರಿಕಾ, ಯೂರೋಪ್ನ ರಾಷ್ಟ್ರಗಳು, ಜಗತ್ತಿನ ಇತರ ಮುಂದುವರೆದ ರಾಷ್ಟ್ರಗಳಲ್ಲಿ ಇದನ್ನು 65 ವರ್ಷಗಳು ಎಂದು ತೀರ್ಮಾನಿಸಲಾಗಿದೆ. ಏಷ್ಯಾದ ಕೆಲವು ಮುಂದುವರೆಯುತ್ತಿರುವ ದೇಶಗಳಲ್ಲಿ ನಿವೃತ್ತಿಯ ವಯಸ್ಸನ್ನು 58 ರಿಂದ 60 ಎಂದು ನಿರ್ಣಯಿಸಲಾಗಿದೆ. ಅದರಂತೆಯೇ ಭಾರತದಲ್ಲಿಯೂ ನಿವೃತ್ತಿ ವಯಸ್ಸಿಗೆ ಸಂಬಂಧಪಟ್ಟಂತೆ ಒಮ್ಮತ ಅಭಿಪ್ರಾಯವಿಲ್ಲ. ಕೆಲವು ರಾಜ್ಯಗಳು ನಿವೃತ್ತಿಯ ವಯಸ್ಸನ್ನು 58 ವರ್ಷಗಳು ಎಂದು ಅಳವಡಿಸಿಕೊಂಡರೆ, ಇನ್ನೂ ಕೆಲವು ರಾಜ್ಯಗಳು ಅದನ್ನು 60 ವರ್ಷಗಳು ಎಂದು ಜಾರಿಯಲ್ಲಿ ತಂದಿವೆ. ಒಟ್ಟಾರೆಯಾಗಿ ನಿವೃತ್ತಿಯ ವಯಸ್ಸನ್ನು 60 ವರ್ಷಗಳು ಎಂದು ಒಪ್ಪಿ, ಜಾರಿಗೊಳಿಸುತ್ತಿರುವವರೇ ಹೆಚ್ಚು. ಮಾನವನ ಬದುಕಿನಲ್ಲಿ ಶೈಶವಾವಸ್ಥೆ (Infancy), ಬಾಲ್ಯಾವಸ್ಥೆ (Childhood), ಕಿಶೋರಾವಸ್ಥೆ (adolescence), ಪ್ರೌಢಾವಸ್ಥೆ (adulthood) ಹಾಗೂ ವೃದ್ಧಾವಸ್ಥೆ (Old age) ಎಂದು ಐದು ಹಂತಗಳನ್ನು ಗುರುತಿಸಲಾಗಿದೆ. ಮೊದಲ ಎರಡು ಹಂತಗಳಲ್ಲಿ ಜೀವಿಯು ಪರಾವಲಂಬಿಯಾಗಿ ಕಳೆಯಬೇಕಾಗುತ್ತದೆ. ಕಿಶೋರಾವಸ್ಥೆಯಲ್ಲಿ ಹೆಚ್ಚಾಗಿ ಕಲಿಕೆಯ ಕಡೆಗೆ ಗಮನಹರಿಸಲಾಗುತ್ತದೆ. ನಾಲ್ಕನೇ ಹಂತವಾದ ಪ್ರೌಢಾವಸ್ಥೆಯಲ್ಲಿ ವ್ಯಕ್ತಿ ತನ್ನ ಬದುಕಿನ ಹೆಚ್ಚಿನ ಸವಾಲುಗಳನ್ನು, ಸಮಸ್ಯೆಗಳನ್ನು ಎದುರಿಸುತ್ತಾನೆ. ತಾನು ದುಡಿದು ತನ್ನ ಕುಟುಂಬವನ್ನು ರಕ್ಷಿಸುತ್ತಾನೆ. ತನ್ನ ಜೀವನದ ಉದ್ದೇಶಗಳ ಸಾಧನೆಗೆ ಅವಿರತವಾಗಿ ಶ್ರಮಿಸುತ್ತಾನೆ. ಕೊನೆಯದೇ ವೃದ್ಧಾವಸ್ಥೆ. ಇದರಲ್ಲಿಯೂ ಎರಡು ಹಂತಗಳನ್ನು ಗುರುತಿಸುವುದುಂಟು. ಮೊದಲನೆ ಗುಂಪಿನ ವೃದ್ಧರು ತಮ್ಮ ವೃತ್ತಿಯಿಂದ ಅಥವಾ ಸ್ವಯಂ ಉದ್ಯೋಗದಿಂದ ನಿವೃತ್ತಿ ಹೊಂದಿರುತ್ತಾರೆ. ಆದರೆ ಅವರು ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳಲು ಶಕ್ತರಿರುತ್ತಾರೆ ಮತ್ತು ಅಪೇಕ್ಷೆಯ ಮೇರೆಗೆ ಕಿರಿಯರಿಗೆ ಮಾರ್ಗದರ್ಶನ ಮಾಡುತ್ತಾರೆ. ಸಾಮಾನ್ಯವಾಗಿ ಇವರು 60 ರಿಂದ 75 ವರ್ಷಗಳ ಗುಂಪಿನಲ್ಲಿರುತ್ತಾರೆ. ಇನ್ನೊಂದು ಗುಂಪು 75 ವರ್ಷಕ್ಕಿಂತ ಹೆಚ್ಚಿನ ವಯಸ್ಸಾದವರಿದ್ದು ಅವರು ಹಿರಿಯ ವೃದ್ಧರೆನಿಸಿಕೊಳ್ಳುತ್ತಾರೆ. ಇವರು ತಮ್ಮ ಕೆಲಸ ತಾವು ಮಾಡಿಕೊಳ್ಳದೆ ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಇತರರನ್ನು ಅವಲಂಬಿಸುತ್ತಾರೆ. ಹಾಗಾಗಿ ಈ ಎರಡೂ ಗುಂಪಿನ ವೃದ್ಧರ ಸಮಸ್ಯೆಗಳು ಸ್ವಲ್ಪಮಟ್ಟಿಗೆ ಬೇರೆಬೇರೆಯೇ ಆಗಿರುತ್ತವೆ. ಸನಾತನ ಹಿಂದೂ ಧರ್ಮದಲ್ಲಿಯೂ ಮನುಷ್ಯನ ಜೀವಿತಾವಧಿಯನ್ನು ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಮತ್ತು ಸನ್ಯಾಸ ಎಂದು ಸ್ಥೂಲವಾಗಿ ವಿಭಾಗಿಸಲಾಗಿದೆ. ಬ್ರಹ್ಮಚರ್ಯಾಶ್ರಮದಲ್ಲಿ ಉತ್ತಮ ಬದುಕಿಗೆ ಬೇಕಾದ ಶಿಕ್ಷಣವನ್ನು ಪಡೆಯಬೇಕು. ಶಾರೀರಿಕ ಸಾಮರ್ಥ್ಯ, ಮಾನಸಿಕ ಮತ್ತು ಆಧ್ಯಾತ್ಮಿಕ ಶಕ್ತಿ ಮುಂತಾದವುಗಳನ್ನು ಪ್ರಯತ್ನಪೂರ್ವಕ ಗಳಿಸಿಕೊಳ್ಳಬೇಕು. ಇದು ಬ್ರಹ್ಮಚರ್ಯ ಆಶ್ರಮದ ಮೂಲ ಉದ್ದೇಶ. ಎರಡನೆಯದು ಗೃಹಸ್ಥಾಶ್ರಮ. ಗೃಹಸ್ಥ ಎಂದರೆ ಮನೆ ಇರುವವನು ಎಂದರ್ಥ. ಈ ಆಶ್ರಮದಲ್ಲಿ ಮದುವೆ ಮಾಡಿಕೊಂಡು, ಕುಟುಂಬಕ್ಕೆ, ಸಮಾಜಕ್ಕೆ ಒಳ್ಳೆಯ ಸಂತಾನವನ್ನು ಕೊಡುವುದೇ ಮುಖ್ಯ ಕರ್ತವ್ಯ. ಇವುಗಳ ಜೊತೆಗೆ, ಇಷ್ಟು ದಿನ ತನ್ನ ತಂದೆ ಸಾಕಿ, ಸಲಹಿದ ಕುಟುಂಬವನ್ನು, ಇನ್ನು ಮುಂದೆ ನಡೆಸಿಕೊಂಡು ಹೋಗುವ ಜವಾಬ್ದಾರಿಯನ್ನು ಹೊರುತ್ತಾನೆ. ಬ್ರಹ್ಮಚರ್ಯಾಶ್ರಮ 25 ವರ್ಷಗಳಾದರೆ, ಗೃಹಸ್ಥಾಶ್ರಮ ಇನ್ನು 25 ವರ್ಷಗಳು. ಮುಂದಿನ ಆಶ್ರಮವೇ ವಾನಪ್ರಸ್ಥಾಶ್ರಮ. ಈ ಆಶ್ರಮಕ್ಕೆ ಬರುವ ಹೊತ್ತಿಗೆ ದೈಹಿಕ ಶಕ್ತಿ, ಬೌದ್ಧಿಕ ಚುರುಕುತನ ಕಡಿಮೆ ಆಗಿರುತ್ತದೆ. ಇಂದ್ರಿಯಗಳು ನಿಧಾನವಾಗಿ ತಮ್ಮ ಸಾಮರ್ಥ್ಯವನ್ನು ಕಳೆದುಕೊಳ್ಳಲು ಪ್ರಾರಂಭಿಸುತ್ತವೆ. ಇಲ್ಲಿಗೆ ಬರುವ ಹೊತ್ತಿಗೆ ಲೌಕಿಕ ಜೀವನ, ವಿಷಯ ಸುಖದ ಪರಿಚಯ ಆಗಿರುತ್ತದೆ. ಜೀವನದ ಉದ್ದೇಶವೇನು ಎಂದು ತಿಳಿದಿರುತ್ತದೆ. ಇತಿಮಿತಿಗಳ ಅರಿವು ಮೂಡಿರುತ್ತದೆ. ಜೀವನದ ಲೌಕಿಕ ಸಾಧನೆ ಒಂದು ಹಂತಕ್ಕೆ ಬಂದಿರುತ್ತದೆ. ಈ ಹಂತದಲ್ಲಿ ವಿಶ್ರಾಂತಿ ಬೇಕಾಗುತ್ತದೆ. ಈ ಆಶ್ರಮದಲ್ಲಿ ಕಿರಿಯರಿಗೆ ಮಾರ್ಗದರ್ಶನ ಮತ್ತು ವೈಯಕ್ತಿಕ ಧಾರ್ಮಿಕ ಸಾಧನೆಗಳೇ ಮುಖ್ಯ ಕರ್ತವ್ಯಗಳು. ಕೊನೆಯದು ಸನ್ಯಾಸಾಶ್ರಮ. ಈ ಆಶ್ರಮದಲ್ಲಿ ಐಹಿಕ ಸಂಬಂಧಗಳನ್ನು, ಸುಖಗಳನ್ನು ತೊರೆದು, ಮಿತಾಹಾರಿಯಾಗಿ, ಮೋಕ್ಷಕ್ಕಾಗಿ ಕಠಿಣ ಸಾಧನೆ ಮಾಡುವುದಕ್ಕೇ ಹೆಚ್ಚಿನ ಆದ್ಯತೆ. ಸನ್ಯಾಸಾಶ್ರಮದಲ್ಲಿ ಮಾಡಬೇಕಾದ ಇನ್ನೊಂದು ಕೆಲಸ ಕಿರಿಯರಿಗೆ, ಆಕಾಂಕ್ಷಿಗಳಿಗೆ ಮಾರ್ಗದರ್ಶನ. ವೃದ್ಧಾಪ್ಯ ವಾನಪ್ರಸ್ಥಾಶ್ರಮದಲ್ಲಿ ಪ್ರಾರಂಭಗೊಂಡು ಸನ್ಯಾಸಾಶ್ರಮದಲ್ಲಿ ಕೊನೆಗೊಳ್ಳುತ್ತದೆ.9 ವೃದ್ಧರು ಇತರರಿಗಿಂತ ಹೆಚ್ಚಿನ ಸಮಸ್ಯೆಗಳನ್ನು ಎದುರಿಸುತ್ತಾರೆ. ವೃದ್ಧರನ್ನು ವಯಸ್ಸಿನ ಆಧಾರದ ಮೇಲೆ ವೃದ್ಧರು ಮತ್ತು ಹಿರಿಯ ವೃದ್ಧರು ಎಂಬ ಎರಡು ಗುಂಪುಗಳನ್ನು ಮಾಡುವುದು ರೂಢಿ. ವೃದ್ಧರು ಈಗಾಗಲೇ ನೋಡಿರುವಂತೆ ತಮ್ಮ ಕೆಲಸಗಳನ್ನು ತಾವು ಮಾಡಿಕೊಳ್ಳುತ್ತಾ, ಮನೆಯ ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಾರೆ. ಅಪೇಕ್ಷೆ ಪಟ್ಟರೆ ಕಿರಿಯರಿಗೆ, ಆಕಾಂಕ್ಷಿಗಳಿಗೆ ಮಾರ್ಗದರ್ಶನ ಮಾಡುತ್ತಾರೆ. ಇದಕ್ಕೆ ಅಪವಾದಗಳೂ ಇವೆ. ಆದರೆ ಹಿರಿಯ ವೃದ್ಧರು ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳಲಾಗದ ಸ್ಥಿತಿಗೆ ತಲುಪಿರುತ್ತಾರೆ. ಅವರಿಗೆ ಮನೆಯ ಇನ್ನುಳಿದ ಸದಸ್ಯರ ಹಾಗೂ ಇತರರ ಸಹಾಯ ಬೇಕಾಗುತ್ತದೆ. ವೃದ್ಧರನ್ನು ಸಂಘಟಿತ ಹಾಗೂ ಅಸಂಘಟಿತ ಕ್ಷೇತ್ರಗಳಲ್ಲಿ ಕಾಣಬಹುದಾಗಿದೆ. ಸಂಘಟಿತ ಕ್ಷೇತ್ರದಲ್ಲಿ ತಮ್ಮ ಸ್ವಂತ ಪ್ರಯತ್ನದಿಂದ ಪಿಂಚಿಣಿ, ಆರೋಗ್ಯ ವಿಮೆ, ಆರೋಗ್ಯ ರಕ್ಷಣೆ, ಸಮಯದ ಸದ್ವಿನಿಯೋಗ, ವಿರಾಮಕಾಲದಲ್ಲಿನ ಅಭ್ಯಾಸ, ಮುಂತಾದ ವಿಷಯಗಳ ಬಗ್ಗೆ ಮುಂಚಿತವಾಗಿಯೇ ಯೋಚಿಸಿ, ಯೋಗ್ಯ ರೀತಿಯಲ್ಲಿ ನಿವೃತ್ತಿ ಜೀವನವನ್ನು ರೂಪಿಸಿಕೊಂಡಿರುತ್ತಾರೆ. ಈ ಪ್ರಕ್ರಿಯೆಗೆ ಸರಕಾರ, ಬ್ಯಾಂಕ್, ವಿಮಾ ಸಂಸ್ಥೆಗಳು, ಇನ್ನಿತರ ಸಂಘಸಂಸ್ಥೆಗಳ ಸಹಾಯ ಪಡೆಯುತ್ತಾರೆ. ಅಸಂಘಟಿತ ವಲಯದಲ್ಲಿ ಎಲ್ಲವೂ ಅಸ್ತವ್ಯಸ್ತವಾಗಿರುತ್ತವೆ. ಇದಕ್ಕೆ ಅಸಂಘಟಿತ ವೃತ್ತಿ, ಸ್ವಯಂ ಉದ್ಯೋಗ, ಬಡತನ, ಅನಾರೋಗ್ಯ, ಸಂಘ ಸಂಸ್ಥೆಗಳ ಕೊರತೆ, ನಿರಾಶಾವಾದ, ಅನುಕೂಲಗಳ ಕೊರತೆ, ಬಂಧುಗಳ ತಿರಸ್ಕಾರ ಮುಂತಾದ ಹಲವು ಹತ್ತು ಕಾರಣಗಳನ್ನು ಕೊಡಬಹುದಾಗಿದೆ. ವೃದ್ಧರ ಸಮಸ್ಯೆಗಳನ್ನು ಆರ್ಥಿಕ, ಸಾಮಾಜಿಕ ಹಾಗೂ ವೈದ್ಯಕೀಯ ಎಂದು ವಿಭಾಗಿಸಿದರೆ ಅರ್ಥೈಸಿಕೊಳ್ಳಲು ಸುಲಭವಾಗುತ್ತದೆ. ಆರ್ಥಿಕ ಸಮಸ್ಯೆಗಳು ವೃದ್ಧರ ಸಮಸ್ಯೆಗಳಲ್ಲಿ ಪ್ರಮುಖವಾದುದು ಆರ್ಥಿಕ ಸಮಸ್ಯೆ. ತಮ್ಮ ಜೀವನದಲ್ಲಿ ಒಂದು ನೌಕರಿಯೋ ಅಥವಾ ಸ್ವಯಂ ಉದ್ಯೋಗವೋ ಮಾಡುತ್ತಿರುವುದರ ಪರಿಣಾಮವಾಗಿ, ನಿಯತಕಾಲಿಕವಾಗಿ ಹಣ ಸಂಪಾದನೆ ಆಗುತ್ತಿರುತ್ತದೆ. ಆ ಪರಿಸ್ಥಿತಿಗೆ ಅವನು/ಅವಳು ಮತ್ತು ಆ ಕುಟುಂಬ ಹೊಂದಿಕೊಂಡಿರುತ್ತದೆ. ಆದರೆ ಆ ವ್ಯಕ್ತಿ ನಿವೃತ್ತಿಯಾದಾಗ, ಸ್ವಯಂ ಉದ್ಯೋಗವನ್ನು ಯಾವುದೋ ಕಾರಣದಿಂದ ನಿಲ್ಲಿಸಿದಾಗ, ಇದ್ದಕ್ಕಿದ್ದ ಹಾಗೆ ಸಂಪಾದನೆ ನಿಂತು ಹೋಗುತ್ತದೆ. ಸಂಘಟಿತ ವೃದ್ಧರಾದರೆ ಆದಾಯ ನಿಲ್ಲುವುದರ ಬದಲು ಬಹಳಷ್ಟು ಕಡಿಮೆಯಾಗುತ್ತದೆ. ಸ್ವಯಂ ಉದ್ಯೋಗವಾದರೆ ಸಂಪಾದನೆ ನಿಂತೇಹೋಗುತ್ತದೆ. ಸಂಸಾರವನ್ನು ನಿರ್ವಹಿಸುವ ಜವಾಬ್ದಾರಿ ಧುತ್ತೆಂದು ಎದುರು ನಿಲ್ಲುತ್ತದೆ. ಮನುಷ್ಯ ಅಂತಹ ಸಂದರ್ಭಗಳಲ್ಲಿ ಅಧೀರನಾಗುತ್ತಾನೆ. ವ್ಯಕ್ತಿಯು ತನ್ನ ಜೀವಿತಾವಧಿಯಲ್ಲಿ ತುಂಬಾ ಚಟುವಟಿಕೆಯಿಂದಿದ್ದರೆ, ಹೆಚ್ಚು ಉತ್ಸುಕನಾಗಿದ್ದರೆ, ಅಂತಹ ನಿವೃತ್ತಿ ಒಂದು ಶಾಪವಾಗಿ ಪರಿಣಮಿಸುತ್ತದೆ. ವೃದ್ಧರ ಸ್ವಯಂ ಉದ್ಯೋಗ ನಿಂತುಬಿಟ್ಟರೆ ನಿರುದ್ಯೋಗಿಯಾಗುತ್ತಾನೆ ಮತ್ತು ಅಂತಹವರ ಮನೆಯ ಆರ್ಥಿಕ ಪರಿಸ್ಥಿತಿ ಕೆಡಲು ಪ್ರಾರಂಭಿಸುತ್ತದೆ. ವೃದ್ಧ ಸಂಘಟಿತ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರೆ ಮತ್ತು ಕುಶಾಗ್ರಮತಿಯಾಗಿದ್ದರೆ, ಮುಂಜಾಗ್ರತೆಯಿಂದ ತನ್ನ ಕಡಿಮೆ ಆದಾಯಕ್ಕೆ (ಪಿಂಚಿಣಿ, ಬ್ಯಾಂಕ್ ಡಿಪಾಜಿಟ್ ಮೇಲಿನ ಬಡ್ಡಿ, ಇತರೆ ಆದಾಯ) ತಕ್ಕಂತೆ ಕೆಲವು ಖರ್ಚುಗಳನ್ನು ಕಡಿತಗೊಳಿಸಿ, ಕೆಲವನ್ನು ಬಿಟ್ಟು. ತೀರಾ ಅವಶ್ಯಕತೆ ಇರುವ ಅಂಶಗಳ ಕಡೆಗೆ ಗಮನಕೊಟ್ಟು, ತನ್ನ ವ್ಯಯಪಟ್ಟಿಯನ್ನು ತಯಾರಿಸಿಕೊಳ್ಳುತ್ತಾನೆ ಮತ್ತು ಅದಕ್ಕೆ ಬದ್ಧನಾಗಿರುತ್ತಾನೆ. ಸ್ವಯಂ ಉದ್ಯೋಗದಿಂದ ನಿವೃತ್ತಿ ಹೊಂದಿದವನಾಗಿದ್ದರೆ ಅಥವಾ ವ್ಯಕ್ತಿ ಅಶಿಸ್ತಿನಿಂದ ಕೂಡಿದ್ದರೆ, ನಿಂತುಹೋದ ಅಥವಾ ಕಡಿಮೆಯಾದ ಆದಾಯಕ್ಕೆ ಹೊಂದಿಕೊಳ್ಳದೆ, ಇಲ್ಲವೇ ಆದಾಯ ಬರುವಂತಹ ಹೊಸ ಹೊಸ ಮಾರ್ಗಗಳನ್ನು ಕಂಡುಕೊಳ್ಳದೆ ಪರದಾಡುತ್ತಾನೆ ಮತ್ತು ಸಂಯಮ ಕಳೆದುಕೊಳ್ಳುತ್ತಾನೆ. ಸಾಮಾಜಿಕ ಸಮಸ್ಯೆಗಳು ವೃದ್ಧರು ಆರ್ಥಿಕ ಕ್ಷೇತ್ರವೊಂದಲ್ಲದೆ ಸಾಮಾಜಿಕ ಕ್ಷೇತ್ರದಲ್ಲಿಯೂ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಒಬ್ಬ ವ್ಯಕ್ತಿ ವೃದ್ಧನಾದ ಮೇಲೆ, ಅವನು/ಳು ನಿವೃತ್ತಿಯಾಗಿರುವುದರಿಂದ, ಆದಾಯ ಕಡಿಮೆ ಆಗಿರುವುದರಿಂದ ಇಲ್ಲವೇ ನಿಂತು ಹೋಗಿರುವುದರಿಂದ, ಅವನಿಗೆ ಕುಟುಂಬದಲ್ಲಿ, ಕೇರಿಗಳಲ್ಲಿ, ಸಮುದಾಯಗಳಲ್ಲಿ ಮಾನ್ಯತೆ ಕಡಿಮೆಯಾಗುತ್ತದೆ. ಎಲ್ಲರೂ ವೃದ್ಧರನ್ನೂ ನಿರ್ಲಕ್ಷ್ಯದಿಂದ ನೋಡಲು ಪ್ರಾರಂಭಿಸುತ್ತಾರೆ. ಅವರ ಅಭಿಪ್ರಾಯಗಳಿಗೆ, ಅನಿಸಿಕೆಗಳಿಗೆ ಬೆಲೆ ಕೊಡುವುದಿಲ್ಲ. ಈ ಕಾರಣಕ್ಕಾಗಿ ಕುಟುಂಬದ ಒಳಗೂ ಹಾಗೂ ಹೊರಗೂ ಸಂಬಂಧಗಳ ಮನೋಭೂಮಿಕೆಯಲ್ಲಿ ಬದಲಾವಣೆಗಳಾಗುತ್ತವೆ. ಅವರು ದುಡಿಯುತ್ತಿದ್ದಾಗ ಅವರ ಮಾತನ್ನು ಕುಟುಂಬದ ಉಳಿದ ಸದಸ್ಯರು ಕೇಳುತ್ತಿದ್ದರೆ, ಅವರು ನಿವೃತ್ತಿ ಹೊಂದಿದ ನಂತರ ಅವರು ದುಡಿಯುವ ಮಕ್ಕಳ ಮಾತನ್ನು ಕೇಳುವಂತಾಗುತ್ತದೆ. ಮನೆಯಲ್ಲಿ ವೃದ್ಧರ ಬಗ್ಗೆ ಸ್ತ್ರೀಯರ, ಮಕ್ಕಳ ಸಂಬಂಧಗಳಲ್ಲಿ, ಪ್ರವೃತ್ತಿಗಳಲ್ಲಿ ಬದಲಾವಣೆಯನ್ನು ಕಾಣಲಾಗುತ್ತದೆ. ಮನೆಯಲ್ಲಿ ಅವನೊಬ್ಬ ಅನಿವಾರ್ಯವಾಗಿ ಸಹಿಸಿಕೊಳ್ಳಬೇಕಾದ ವ್ಯಕ್ತಿಯಾಗಿ ಪರಿವರ್ತಿತನಾಗುತ್ತಾನೆ. ವೃದ್ಧರು, ಆರ್ಥಿಕ ಅಂಶವನ್ನು ಹೊರತುಪಡಿಸಿ, ಕುಟುಂಬದ ಸಮಸ್ಯೆಗಳಿಗೆ ಸಹಾಯ ಮಾಡುವ ಕೆಲಸಗಳು ಹೆಚ್ಚಾಗುತ್ತವೆ. ಮನೆಯಲ್ಲಿ ಮಕ್ಕಳು, ಸೊಸೆಯಂದಿರು ನೌಕರಿ ಮಾಡಲು, ಕೆಲಸ ಮಾಡಲು ಕಛೇರಿ, ಹೊಲಗದ್ದೆಗಳು ಮುಂತಾದ ಕಡೆಗೆ ಹೋದರೆ, ವೃದ್ಧರು ಮನೆಯಲ್ಲಿದ್ದು ಮನೆಕೆಲಸಗಳನ್ನು ಮಾಡಬೇಕಾಗುತ್ತದೆ. ಅಡಿಗೆ ಮಾಡುವುದು, ಮಕ್ಕಳ ಆರೈಕೆಯನ್ನು ನೋಡಿಕೊಳ್ಳುವುದು, ಮಕ್ಕಳಿಗೆ ಪಾಠ ಹೇಳುವುದು, ಮಕ್ಕಳನ್ನು ಶಾಲೆಗೆ ಬಿಟ್ಟುಬರುವುದು - ಕರೆದುಕೊಂಡು ಬರುವುದು, ಅಂಗಡಿಯಿಂದ ಕಿರಾಣಿ ಸಾಮಾನುಗಳನ್ನು ತರುವುದು, ಬ್ಯಾಂಕು, ಅಂಚೆ ಕಛೇರಿ, ಗ್ಯಾಸ್ ಏಜನ್ಸಿ ಮುಂತಾದ ಕಡೆಗಳಿಗೆ ಹೋಗಿ ಬರುವುದು, ಸಂಬಂಧಿಕರ ಮದುವೆ ಮುಂಜಿಗಳಗೆ ಹೋಗಿ ಬರುವುದು ಮುಂತಾದ ಕೆಲಸಗಳನ್ನು ಮಾಡುವುದು ವೃದ್ಧರ ಪಾಲಿಗೆ ಬರುತ್ತವೆ. ``ನೀವು ಏನೂ ಕೆಲಸ ಮಾಡುತ್ತಿಲ್ಲ. ಇಂತಹ ಕೆಲಸಗಳನ್ನು ಮಾಡಬಾರದೇ ಎಂಬ ಒತ್ತಾಯ ಮನೆಯವರಿಂದ ಇರುತ್ತದೆ. ಇದು ಒಂದು ಮಿತಿಯಲ್ಲಿದ್ದರೆ ಒಳಿತು. ಅದು ಹಾಗಾಗದೆ, ಕೆಲಸ ಹೆಚ್ಚಾಗಿ ವೃದ್ಧರಿಗೆ ಸಮಸ್ಯೆಯಾಗಿ ಪರಿಣಮಿಸುತ್ತದೆ. ವ್ಯಕ್ತಿ ದುಡಿಯುತ್ತಿದ್ದಾಗ ಸಮಯದ ಅಭಾವವಿರುತ್ತದೆ. ಕಛೇರಿ ಕೆಲಸ, ಮನೆ ಕೆಲಸಗಳು, ಬಂಧುಗಳ ಕೆಲಸಗಳು, ಸಮುದಾಯದ ಕೆಲಸಗಳು, ಇತರೆ ಕೆಲಸಗಳು ಹೀಗೆ ಅನೇಕ ಕೆಲಸಗಳನ್ನು ಮಾಡುತ್ತಾನೆ. ಹಾಗಾಗಿ ಅವನು ಯಾವಾಗಲೂ ಕೆಲಸ ನಿರತನಾಗಿರುತ್ತಾನೆ. ಸಮಯ ಕಳೆದದ್ದೇ, ದಿನಗಳು ಉರುಳಿದ್ದೇ ಗೊತ್ತಾಗುವುದಿಲ್ಲ. ಆದರೆ ಒಮ್ಮೆ ನಿವೃತ್ತಿ ಹೊಂದಿದ ಮೇಲೆ, ಕೆಲವನ್ನು ಮಾತ್ರಾ ಹೊರತುಪಡಿಸಿ, ಈ ಕೆಲಸಗಳನ್ನು ಮಾಡಲಾಗುವುದಿಲ್ಲ. ಅನಾರೋಗ್ಯ ತೊಂದರೆ ಕೊಡುತ್ತಿದ್ದರಂತೂ ಕೇಳುವುದೇ ಬೇಡ. ಇವುಗಳ ಪರಿಣಾಮವಾಗಿ ವೃದ್ಧರಿಗೆ ಸಮೃದ್ಧಿಯಾಗಿ ಸಮಯ ಸಿಗುತ್ತದೆ. ತಮ್ಮ ನಿವೃತ್ತಿ ಜೀವನವನ್ನು ಸರಿಯಾಗಿ ಯೋಜಿಸಿಕೊಳ್ಳದೆ ಹೋದರೆ ಸಮಯ ಕಳೆಯುವುದೇ ಒಂದು ಸಮಸ್ಯೆಯಾಗಿ ಪರಿಣಮಿಸುತ್ತದೆ. ವ್ಯಕ್ತಿ ದುಡಿಯುತ್ತಿದ್ದಾಗ ವೃತ್ತಿಯ, ಕೆಲಸದ ಯಜಮಾನರು, ಒಡೆಯರು, ಮೇಲಧಿಕಾರಿಗಳು, ಸಹೋದ್ಯೋಗಿಗಳು, ಅಧೀನ ಅಧಿಕಾರಿಗಳು, ಅಧೀನ ಉದ್ಯೋಗಿಗಳು, ಗಿರಾಕಿಗಳು, ಫಲಾನುಭವಿಗಳು, ಸರಕಾರಿ ಅಧಿಕಾರಿಗಳು, ಸಾರ್ವಜನಿಕರು ಹೀಗೆ ಹಲವಾರು ಜನರ ನಿರಂತರ ಸಂಪರ್ಕದಲ್ಲಿರುತ್ತಾನೆ. ಆದರೆ ಒಂದು ಸಾರಿ ನಿವೃತ್ತಿ ಹೊಂದಿದ ಮೇಲೆ ಇದ್ದಕ್ಕಿದ್ದಂತೆ ಈ ಜನಸಂಪರ್ಕ ನಿಂತುಹೋಗುತ್ತದೆ ಅಥವಾ ಬಹಳಷ್ಟು ಕಡಿಮೆಯಾಗುತ್ತದೆ. ಈ ರೀತಿಯ ಸಂಪರ್ಕ ಕಡಿತದಿಂದ ಮನೆಯಲ್ಲಿ ಒಬ್ಬರೇ ಉಳಿಯುವಂತಾಗುತ್ತದೆ. ಇದೇ ಮುಂದಿನ ದಿನಗಳಲ್ಲಿ ದೈಹಿಕ, ಸಾಮಾಜಿಕ ಹಾಗೂ ಭಾವನಾತ್ಮಕ ಒಂಟಿತನವಾಗಿ ಮಾರ್ಪಡುತ್ತದೆ ಮತ್ತು ಸದ್ರಿ ಒಂಟಿತನ ಮಾನಸಿಕ ಸ್ವಾಸ್ಥ್ಯವನ್ನು ಕೆಡಿಸಲು ಮುಂದಾಗುತ್ತದೆ. ಈ ಸಂಪರ್ಕಗಳ ಕೊರತೆಯಿಂದಾಗಿ ಆ ವೃದ್ಧನ ಪ್ರಾಮುಖ್ಯತೆ ಕಳೆದುಹೋಗುತ್ತದೆ. ಜನರು ಅವರನ್ನು ಮರೆಯಲು ಪ್ರಾರಂಭಿಸುತ್ತಾರೆ. ``ಆದಾಯದಲ್ಲಿ ಕಡಿತ, ಆರೋಗ್ಯದಲ್ಲಿ ಕುಸಿತ, ವ್ಯವಹಾರದಲ್ಲಿ ಹಿಡಿತ ಇವುಗಳ ಫಲಿತಾಂಶ ಭಯ, ತಾವು ನಿರುಪಯುಕ್ತ ಎಂಬ ಭಾವನೆ ವೃದ್ಧರಲ್ಲಿ ಬೇರೂರುತ್ತದೆ.10 ಜೀವನ ಅರ್ಥಶೂನ್ಯ ಎಂಬ ಭಾವನೆ ಮೂಡುತ್ತದೆ. ತಮ್ಮ ಜೀವನ ಒಂದು ಮುಗಿಯುತ್ತಿರುವ ಅಧ್ಯಾಯ ಎಂಬ ಅನಿಸಿಕೆ ಮನಸ್ಸಿನಲ್ಲಿ ಮೂಡುತ್ತದೆ. ಆರೋಗ್ಯದ ಸಮಸ್ಯೆಗಳು ವೃದ್ಧಾಪ್ಯದಲ್ಲಿ ಆರೋಗ್ಯದ ಸಮಸ್ಯೆಗಳು ವೃದ್ಧರನ್ನು ಹೈರಾಣಗೊಳಿಸುತ್ತವೆ. ಕಣ್ಣು ಸರಿಯಾಗಿ ಕಾಣಿಸುವುದಿಲ್ಲ ಇಲ್ಲವೇ ಪೂರ್ಣವಾಗಿ ದೃಷ್ಟಿ ಹೋಗಬಹುದು. ಅದರಂತೆಯೇ ಕಿವಿ ಸರಿಯಾಗಿ ಕೇಳಿಸುವುದಿಲ್ಲ ಅಥವಾ ಪೂರ್ತಿಯಾಗಿ ಕೇಳಿಸದಿರಬಹುದು. ಸಂಧಿವಾತ, ಮೊಣಕಾಲು ನೋವು, ಬೆನ್ನು ಹುರಿ ನೋವು, ಕುತ್ತಿಗೆ ನೋವು ಮುಂತಾದ ಮೂಳೆಗೆ-ಸ್ನಾಯುವಿಗೆ ಸಂಬಂಧಪಟ್ಟ ರೋಗಗಳು ಕಾಣಿಸಿಕೊಳ್ಳುತ್ತವೆ. ಹಾಗಾಗಿ ಓಡಾಟ ನಿಂತುಹೋಗುತ್ತದೆ. ಜ್ಞಾಪಕ ಶಕ್ತಿ ಕಡಿಮೆಯಾಗುತ್ತದೆ. ಉಸಿರಾಟದ ತೊಂದರೆಗಳು, ಪೊಪ್ಪುಸಗಳ ಕಾಯಿಲೆಗಳು ಗೋಚರಿಸುತ್ತವೆ. ಜೀರ್ಣಾಂಗ ವ್ಯವಸ್ಥೆಯಲ್ಲಿ ಸಮಸ್ಯೆಗಳು ಉದ್ಭವಿಸಬಹುದು. ದೇಹದಲ್ಲಿ ರೋಗ ಪ್ರತಿರೋಧಕ ಶಕ್ತಿಯಲ್ಲಿ ಇಳಿಮುಖವಾಗುತ್ತದೆ. ರಕ್ತದೊತ್ತಡ, ಮಧುಮೇಹ, ಸಂಧಿವಾತ, ಬೆನ್ನು ನೋವು, ಮಂಡಿ ನೋವು ಮುಂತಾದ ದೀರ್ಘಕಾಲದ ಜಾಡ್ಯಗಳು ಅಂಟಿಕೊಳ್ಳುತ್ತವೆ. ದೈಹಿಕ ನಿತ್ರಾಣವಾಗಿ ಏನೂ ಕೆಲಸ ಮಾಡಿಕೊಳ್ಳಲಾರದ ಸ್ಥಿತಿಗೆ ತಲುಪುತ್ತಾರೆ. ತಮ್ಮ ಸ್ವಂತ ಮತ್ತು ದೈನಂದಿನ ತಾವೇ ಮಾಡಿಕೊಳ್ಳಲಾರದ ಸ್ಥಿತಿಗೆ ತಲುಪುತ್ತಾರೆ. ತಮ್ಮ ಪ್ರತಿಯೊಂದು ಕೆಲಸವನ್ನೂ ಮಕ್ಕಳ, ಸೊಸೆಯಂದಿರ, ಮೊಮ್ಮಕ್ಕಳ, ಸಹಾಯಕರ ಹಾಗೂ ಇತರರ ಸಹಾಯವಿಲ್ಲದೇ ಮಾಡಿಕೊಳ್ಳಲಾರರು. ಎಲ್ಲಾ ಚಟುವಟಿಕೆಗಳೂ ಒಂದು ನಿಶ್ಚಲ ಸ್ಥಿತಿಗೆ ಬಂದು ಮುಟ್ಟುತ್ತವೆ. ಈ ಬದಲಾದ ಸ್ಥಿತಿಗೆ ವೃದ್ಧರು ಹೊಂದಿಕೊಳ್ಳಲು ಪರದಾಡಬೇಕಾಗುತ್ತದೆ. ಇದರಿಂದ ವೃದ್ಧರು ಮಾನಸಿಕವಾಗಿ ಕುಗ್ಗಿಹೋಗುತ್ತಾರೆ. ವೃದ್ಧರ ಆರ್ಥಿಕ, ಸಾಮಾಜಿಕ ಮತ್ತು ಆರೋಗ್ಯದ ಸಮಸ್ಯೆಗಳನ್ನು ವ್ಯಕ್ತಿಗತವಾಗಿ, ವೃಂದಗತವಾಗಿ ಹಾಗೂ ಸಾಮೂಹಿಕ ನೆಲೆಯಲ್ಲಿ ಅರ್ಥೈಸಿಕೊಂಡು ಪರಿಹಾರಗಳನ್ನು ಕಂಡುಕೊಳ್ಳಬೇಕಾಗಿದೆ. ಅಡಿಟಿಪ್ಪಣಿಗಳು 4. ಸಂ. ಗಾ.ನಂ. ಶ್ರೀಕಂಠಯ್ಯ, ಆಯುರ್ವೇದ ಜೀವನಶೈಲಿ, ಆಯುಷ್ ಇಲಾಖೆ, ಕರ್ನಾಟಕ ಸರಕಾರ, ಬೆಂಗಳೂರು, 2011-12, ಪು. 2-3. 5. ಅದೇ ಪು. 3. 6. ವಿವರಗಳಿಗೆ ನೋಡಿ-(1) ಚ.ನ. ಶಂಕರರಾವ್, ಸಮಾಜಶಾಸ್ತ್ರ, ಸಂ. 2, ಭಾಗ 6, ಅಧ್ಯಾಯ 4, ಪುಟ 84-117, (2) ಚ.ನ. ಶಂಕರರಾವ್, ಗ್ರಾಮೀಣ ಸಮಾಜಶಾಸ್ತ್ರ, ಪು. 116-120. 7. ಪ್ರೊ. ಜಿ. ಸುಬ್ರಹ್ಮಣ್ಯ, ಸಮಕಾಲೀನ ಸಮಾಜಶಾಸ್ತ್ರ, ಸ್ವಪ್ನ ಬುಕ್ ಹೌಸ್, ಬೆಂಗಳೂರು-9, 2015, ಪು. 815 8. ಪ್ರೊ. ಎಚ್.ಎಂ. ಮರುಳಸಿದ್ಧಯ್ಯ, `ಮಾಕುಂಟಿಯ ಮುದುಕರು, ನಿರುತ ಪಬ್ಲಿಕೇಷನ್ಸ್, ನಿರಾತಂಕ, 326, 1ನೇ ಮಹಡಿ, ಸಿಂಡಿಕೇಟ್ ಬ್ಯಾಂಕ್ ಎದುರು, ಡಾ. ಅಂಬೇಡ್ಕರ್ ಕಾಲೇಜ್ ಹತ್ತಿರ, ಕೆಂಗುಂಟೆ, ಬೆಂಗಳೂರು-56, 2016, ಪು. 92. 9. ವಿವರಗಳಿಗೆ ನೋಡಿ, ಡಾ. ಸಿ.ಆರ್. ಗೋಪಾಲ್, `ಸಮಾಜಕಾರ್ಯದ ತಾತ್ವಿಕ ಸಿದ್ಧಾಂತ-ಶರಣರ ಮತ್ತು ದಾಸರ ಜೀವನ ದೃಷ್ಟಿ-ಒಂದು ತೌಲನಿಕ ಚಿಂತನೆ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಜಗದ್ಗುರು ಶ್ರೀ ಶಿವರಾತ್ರೀಶ್ವರ ವೃತ್ತ, 1ನೇ ಮುಖ್ಯರಸ್ತೆ, 8ನೇ ವಿಭಾಗ, ಜಯನಗರ, ಬೆಂಗಳೂರು-70, 2014, ಪು. 25-208. 10. ವಿವರಗಳಿಗೆ ನೋಡಿ, ಪ್ರಾ. ಚ.ನ. ಶಂಕರರಾವ್, ``ಸಮಾಜಶಾಸ್ತ್ರ ಸಂಪುಟ-2, ಜೈ ಭಾರತ್ ಪ್ರಕಾಶನ, 2008, ಭಾಗ 4, ಪು. 213-214. ಡಾ. ಸಿ.ಆರ್. ಗೋಪಾಲ್ ನಿವೃತ್ತ ಸಹಾಯಕ ಪ್ರಧಾನ ವ್ಯವಸ್ಥಾಪಕರು, ಸ್ಮಯೋರ್ (SMIORE)
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
SITE MAP
SiteTRAININGJOB |
HR SERVICESOTHER SERVICESnIRATHANKA CITIZENS CONNECT |
NIRATHANKAPOSHOUR OTHER WEBSITESSubscribe |
MHR LEARNING ACADEMY
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|